ಇಂಥ ಮಳೆಯಲ್ಲಿ ಶಾಲೆಗೆ ಹೋಗುವುದೇ ದೊಡ್ಡ ಸಮಸ್ಯೆ. ಎಂಥ ಚಿಕ್ಕ ಹೊಂಡವಿದ್ದರೂ ಸರಿ ಪೇಪರಿನ ದೋಣಿಗಳನ್ನು ತೇಲಿಬಿಡುವ ನಗರದ ಹುಡುಗರ ಆಟ ಒಂದೆಡೆಯಾದರೆ ಬೆಟ್ಟ ಗುಡ್ಡಗಳ ತಪ್ಪಲಲ್ಲಿ ಹಳ್ಳ ತೋಡಿನ ಪಕ್ಕದಲ್ಲಿ ತೋಟದ ಮನೆಗಳವರ ಕಷ್ಟ ಹೇಳತೀರದು. ರಭಸದ ಮಳೆ ಬಂದರೆ ಒಂದೋ ಗುಡ್ಡ ಕುಸಿಯುವ ಭೀತಿ. ಇಲ್ಲವೇ ಮಳೆ ನೀರು ಮನೆಗೆ ನುಗ್ಗುವ ಭೀತಿ ಸ್ವಲ್ಪ ಮಳೆ ಬಂದರೂ ಸೇತುವೆಗಳು ತೇಲುವ ಹಾಗಾಗುತ್ತಿತ್ತು. ಇಂಥಹುದರಲ್ಲಿ ಮನೆಯಲ್ಲಿ ದಿನವಾದ ಗರ್ಭಿಣಿಯರು ಬಾಣಂತಿಯರು ವಯಸ್ಸಾದ ವೃದ್ಧರು ಇದ್ದರಂತೂ ಬಹಳ ಕಷ್ಟವಾಗುತ್ತಿತ್ತು.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿಯ ಕೊನೆಯ ಕಂತು ನಿಮ್ಮ ಓದಿಗೆ

‘ಮಳೆ’ ಅಂದರೆ ಸುರಿಯುವ ನೀರಲ್ಲ ಜೀವಯಾನದ ಸಂಪತ್ತು. ಸಖರಿಗೆ ಸಖಿಯಾಗಿ ಸಖಿಯರಿಗೆ ಸಖನಾಗಿ ನಡೆಸುವ ಭಾವಯಾನದ ಕಾರಂಜಿ., ಮೋಡಕಟ್ಟಿ ಗುಡುಗು ಗುಡಿಗಿ ಮಿಂಚು ಮಿಂಚಿ ಮಾಯವಾಗುವಾಗ ಅನ್ನಿಸುವ ಅನಿಸಿಕೆಗೂ ಎಡೆಬಿಡದೆ ಧೋ ಎಂದು ಸುರಿಯುವ ಮಳೆ ಕುರಿತಾದ ಮಾತುಗಳೆ ಬೇರೆ. ಎಲ್ಲಾ ಸನ್ನಿವೇಶಗಳಿಗೂ ಮಳೆ ಮಾತಾಗುತ್ತದೆ! ಹಾಡಾಗುತ್ತದೆ!

‘ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ’ ಎಂಬ ಸಾಲುಗಳಿಗೆ ತಲೆದೂಗದವರು ಯಾರೂ ಇಲ್ಲ!

ಇಳೆವೆಣ್ಣು ಮೈದೊಳೆದು ಮಕರಂದದರಿಶಿಣದಿ
ಹೂ ಮುಡಿದು ಮದುಮಗಳ ಹೋಲುತ್ತಿತ್ತು
ಮೂಡಣದಿ ನೇಸರನ ನಗೆ ಮೊಗದ ಶ್ರೀಕಾಂತಿ……..
ಹುಲ್ಲೆಸಳು ಹೂಪಕಳೆ ಮತ್ತು ಹನಿಗಳ ಮಿಂಚು
ಸೊಡರಿನ ಆರತಿಯಲಿ ಬೆಳಗುತ್ತಿತ್ತು
ಕೊರಲುಕ್ಕಿ ಹಾಡುತಿಹ ಚಿಕ್ಕಪಕ್ಕಿಯ ಬಳಗ
ಶುಭಮಸ್ತು ಶುಭಮಸ್ತು ಎನ್ನುತ್ತಿತ್ತು

ಎನ್ನುವ ಕಣವಿಯವರ ಸಾಲುಗಳಿಗೆ ಮರುಬರಹವೆ ಇಲ್ಲ. ಮುಂಗಾರು ಮಳೆಯಲ್ಲಿ ತೊಯ್ದ ಭುವಿಯನ್ನು ಮದುಮಗಳಿಗೆ ಹೋಲಿಸುವ ಸಚರಾಚರವನ್ನೂ ಮಧುಮಂಟಪವನ್ನಾಗಿ ನೋಡುವ ಕವಿಯ ಸಾಲುಗಳನ್ನು ಶ್ರುತಿಹಿಡಿದು ಒಳಗಣ್ಣಿನಿಂದ ಸವಿಯಬೇಕು.

‘ಮಳೆ’ ಎಂದರೆ ‘ಭಾನು- ಭುವಿಯ’ ಸಂಸರ್ಗ ಅದು ಹಿತವಾದ ಅನುಭವ ಸಂಪರ್ಕ ತೊಂದರೆ ಇಲ್ಲ ಆದರೆ ಸಂಘರ್ಷವಾದರೆ ಕುವೆಂಪುರವರ ಕದ್ದಿಂಗಳು ಕಗ್ಗತ್ತಲು ಕಾರ್ಗಾಲದ ರಾತ್ರಿ ಸಾಲುಗಳನ್ನು ಹೇಳಿದಂತಾಗುತ್ತದೆ.

ಸಿಡಿಲ್ಮಿಂಚಿಗೆ ನಡುಗುತ್ತಿದೆ
ಪರ್ವತ ವನಧಾತ್ರಿ
ತುದಿಯಿಲ್ಲದೆ ಮೊದಲಿಲ್ಲದೆ
ಹಿಡಿದಂಬರವನು ತಬ್ಬಿದೆ ಎಂದು ಹೇಳಿದ್ದಾರೆ
ಹಾವ್ನಾಲಗೆಯ ಮಿಂಚು
ನೆಕ್ಕುತಲಿದೆ ಕತ್ತಲೆಯನು
ಮೈದೋರಲು ಮರೆಯಾಗಿವೆ
ಭಯದಿ ಶಶಿ ತಾರೆ ‘ಮಳೆ ಎಂಬುದು ಬರಿ ಸುಳ್ಳಿದು
ಮಳೆಯಲ್ಲಿದು ಮಳೆಯಲ್ಲಿದು
ಪ್ರಲಯದ ಆವೇಶ
ಲಯಭೀಷಣ ಮಳೆ ಭೈರವ ಎಂದು ಬರೆಯುತ್ತಾ ಮಳೆಯನ್ನು ರುದ್ರನಿಗೆ ಹೋಲಿಸಿದ್ದಾರೆ, ಮಿಂಚನ್ನು ಹಾವ್ನಾಲಗೆಯ ಮಿಂಚು ‘ವರ್ಷಭೈರವ’ ಕವಿತೆಯಲ್ಲಿ ಎಂದಿದ್ದಾರೆ.. ಕದ್ದಿಂಗಳು ಕಗ್ಗತ್ತಲು ಕಾರ್ಗಾಲದ ರಾತ್ರಿ ಎಂದು ಲಯಬದ್ಧವಾಗಿ ಹೇಳುತ್ತಲೆ ಕಾಳರಾತ್ರಿಯ ಭಯಾನಕತೆಯನ್ನು ಪ್ರಳಯದಾವೇಶವನ್ನು ಕಣ್ಮುಂದೆ ತಂದು ನಿಲ್ಲಿಸುತ್ತಾರೆ.

“ಹುಯ್ಯೋ ಹುಯ್ಯೋ ಮಳೆರಾಯ ಬಾಳೆಯ ತೋಟಕೆ ನೀರಿಲ್ಲ’’ ಎಂದು ಹಾಡಿದ ಬಗೆ ಬೇರೆ ಆದರೆ ಮಡಿಕೇರಿಯ ಅಂದಿನ ಮಳೆ ಕಂಡು “ನಿಲ್ಲೋ ನಿಲ್ಲೋ ಮಳೆರಾಯ ಓಡಾಡಲೆಡೆಯಿಲ್ಲ ನೀನೂ.. ಸುಧಾರಿಸಿಕೋ ನಮಗೂ ಬಿಡುವು ಕೊಡು” ಎನ್ನುವ ಹಾಗೆ ಇರುತ್ತಿತ್ತು. ಇಂಥ ಮಳೆಯಲ್ಲಿ ಶಾಲೆಗೆ ಹೋಗುವುದೇ ದೊಡ್ಡ ಸಮಸ್ಯೆ. ಎಂಥ ಚಿಕ್ಕ ಹೊಂಡವಿದ್ದರೂ ಸರಿ ಪೇಪರಿನ ದೋಣಿಗಳನ್ನು ತೇಲಿಬಿಡುವ ನಗರದ ಹುಡುಗರ ಆಟ ಒಂದೆಡೆಯಾದರೆ ಬೆಟ್ಟ ಗುಡ್ಡಗಳ ತಪ್ಪಲಲ್ಲಿ ಹಳ್ಳ ತೋಡಿನ ಪಕ್ಕದಲ್ಲಿ ತೋಟದ ಮನೆಗಳವರ ಕಷ್ಟ ಹೇಳತೀರದು. ರಭಸದ ಮಳೆ ಬಂದರೆ ಒಂದೋ ಗುಡ್ಡ ಕುಸಿಯುವ ಭೀತಿ. ಇಲ್ಲವೇ ಮಳೆ ನೀರು ಮನೆಗೆ ನುಗ್ಗುವ ಭೀತಿ ಸ್ವಲ್ಪ ಮಳೆ ಬಂದರೂ ಸೇತುವೆಗಳು ತೇಲುವ ಹಾಗಾಗುತ್ತಿತ್ತು. ಇಂಥಹುದರಲ್ಲಿ ಮನೆಯಲ್ಲಿ ದಿನವಾದ ಗರ್ಭಿಣಿಯರು ಬಾಣಂತಿಯರು ವಯಸ್ಸಾದ ವೃದ್ಧರು ಇದ್ದರಂತೂ ಬಹಳ ಕಷ್ಟವಾಗುತ್ತಿತ್ತು. ಸಾವುಗಳು ಸಂಭವಿಸಿದರಂತೂ ಆ ನೋವನ್ನು ಅನುಭವಿಸದವರಿಗೆ ವಿವರಿಸಲಾಗದಂಥದ್ದು ಕೊಡಗಿನ ಸಂಪ್ರದಾಯದಲ್ಲಿ ಅಂತ್ಯಸಂಸ್ಕಾರಗಳು ಅಗ್ನಿಸ್ಪರ್ಶದ ಮೂಲಕ ಆಗುತ್ತದೆ ಮಳೆಗಾಲದಲ್ಲಿ ಆ ಸನ್ನಿವೇಶ ಹೇಗಿರಬಹುದು ನೀವೇ ಯೋಚಿಸಿ. ಕುಶಾಲನಗರದಿಂದ ಮಡಿಕೇರಿಗೆ ಬರುವಾಗೊಮ್ಮೆ ಹೀಗೆ ಮಳೆಗಾಲ ನಾವು ಪ್ರಯಾಣದಲ್ಲಿದ್ದೆವು. ಜೋರು ಮಳೆ ಬರುತ್ತಿತ್ತು. ಆ ಬದಿಯಿಂದ ಶವಯಾತ್ರೆಯೂ ಸಾಗುತ್ತಿತ್ತು. ಶವವನ್ನು ಹೊತ್ತವರು ಮಳೆಯಲ್ಲಿಯೇ ಮುಂದೆ ಹೋಗುತ್ತಿದ್ದರು. ಮೃತರ ಪತ್ನಿ ಇನ್ನೂ ಮೂವತ್ತು ಧಾಟಿರಲಿಲ್ಲ. ಬಿಳಿಧಿರಿಸು ಧರಿಸಿದ ಇಬ್ಬರು ಮಕ್ಕಳನ್ನು ಹಿಡಿದು ತಾನೂ ಬಿಳಿ ಸೀರೆಯನ್ನು ತೊಟ್ಟು ಮುಂದೆ ಸಾಗುತ್ತಿದ್ದರು. ಮಳೆಯ ನೀರು ಮುಖಕ್ಕೆ ರಾಚುತ್ತಿತ್ತು. ಅದನ್ನು ಹಾಗೆ ಒರೆಸಿಕೊಳ್ಳುವಷ್ಟರಲ್ಲಿ ಹಿಂದಿನಿಂದ ಯಾರೋ ಕೊಡೆ ಹಿಡಿದರು. ಅಷ್ಟರಲ್ಲಿ ನಮ್ಮ ಬಸ್ ಮುಂದೆ ಸಾಗಿತು. ಆ ದೃಶ್ಯ ಇಂದಿಗೂ ಕಣ್ಮುಂದೆ ಹಾಗೆ ಉಳಿದಿದೆ. ಕುಶಾಲನಗರ ಕೆಎಸ್ ಆರ್ಟಿಸಿ ಬಸ್ ಸ್ಟ್ಯಾಂಡ್ ಸಮೀಪಿಸಿದರೆ ಅಂದಿನ ದೃಶ್ಯ ನೆನಪಾಗುತ್ತದೆ. ಹಾಗಾಗಿಯೇ ಇದು ಕೇವಲ ಮಳೆಗಾಲವಲ್ಲ ಮಳೆನೀರಿನಲ್ಲಿ ನೆನೆಯುವಂತೆ ನೆನಪುಗಳಲ್ಲಿ ನೆನೆಯುವ ನೆನೆಗಾಲವೂ ಹೌದು!


ನಾಗರೀಕತೆ ಇಷ್ಟು ಮುಂದುವರಿ ದಿನಮಾನಗಳಲ್ಲಿ ಮಾಡಿದ ಸೇತುವೆಗಳಲ್ಲ ಅವು ಕಡಿಮೆ ಜನಸಂಖ್ಯೆ ಮತ್ತು ಕಡಿಮೆ ವಾಹನ ಓಡಾಟಕ್ಕೆ ಹೇಳಿ ಮಾಡಿಸಿದಂತೆ ಇದ್ದವು. ಈಗ ಪ್ರವಾಸೋದ್ಯಮ ಅತೀ ಅನ್ನುವ ಮಟ್ಟಿಗೆ ಬೆಳೆದಿದೆ ಹೊಸ ಮಾದರಿಯ ವಾಹನಗಳು ಬಂದಂತೆ ಕೊಳ್ಳುವವರ ಸಂಖ್ಯೆಯೂ ಹೆಚ್ಚಿದೆ. ಈ ಆಧುನಿಕತೆಯ ಭಾರವನ್ನು ಹಾಗು ವಾಹನಗಳ ಭಾರವನ್ನು ಸಹಿಸಲಾರದೆ ಹಳೆಯ ರಸ್ತೆಗಳು, ಸೇತುವೆಗಳು ತಿಣುಕುತ್ತಿವೆಯೇನೋ ಅನ್ನಿಸುತ್ತದೆ. ಕಳೆದ ವರ್ಷ ಉಡೋತ್ ಮೊಟ್ಟೆಯಲ್ಲಿ ಗ್ಲಾಸ್ ಸೇತುವೆ ನಿರ್ಮಾಣವಾದ ನಂತರ ಈ ವರ್ಷ ಕೆ.ನಿಡುಗಣೆ ಗ್ರಾಮದಲ್ಲಿ ಗ್ಲಾಸ್ ಸೇತುವೆ ನಿರ್ಮಾಣವಾಗಿತ್ತು. ಆದರೆ ಅವೈಜ್ಞಾನಿಕ ಕ್ರಮದಿಂದ ನಿರ್ಮಿಸಲಾಗಿದೆಯೆಂದು ಅದಕ್ಕಾಗಿ ನಿರ್ಮಿಸಿರುವ ಪಿಲ್ಲರ್‌ಗಳು ಮಳೆಗೆ ಜಾರಬಹುದು ಎಂದು ಜಿಲ್ಲಾಡಳಿತ ಅದನ್ನು ನಿರ್ಭಂದಿಸಿದೆ. ಇಂಥದ್ದೆ ಅಪಾಯಗಳನ್ನು ತಂದೊಡ್ಡಬಲ್ಲ ಅನೇಕ ಅನಧಿಕೃತ ಕಟ್ಟಡಗಳು ನಿರ್ಮಾಣವಾಗಿರುವುದು ಕೊಡಗಿನಲ್ಲಿ ಲ್ಯಾಂಡ್ ಸ್ಲೈಡಿಂಗ್ ಹೆಚ್ಚಾಗಲು ಒಂದು ಕಾರಣವಾಗಿದೆ. ಎವರೆಸ್ಟ್‌ನಲ್ಲಿ ಚಾರಣಿಗರ ಸಂಖ್ಯೆ ಹೆಚ್ಚಾಗಿ ಪ್ಲಾಸ್ಟಿಕ್ ತ್ಯಾಜ್ಯ, ಮನುಷ್ಯನ ತ್ಯಾಜ್ಯವನ್ನು ವಿಲೇವಾರಿ ಮಾಡಲು ಸ್ಥಳಿಯ ಆಡಳಿತ ಹೆಣಗಾಡುತ್ತಿರುವಂತೆ ಮುಂದೊಮ್ಮೆ ಕೊಡಗಿನಲ್ಲಿಯೂ ಆಗಬಹುದು.

ಇತ್ತೀಚೆಗೆ ಪ್ರಥಮ ಮಳೆ ಬಂದ ಸಂದರ್ಭದಲ್ಲಿ ಪ್ರವಾಸಿಗರು ಅಲ್ಲಲ್ಲಿ ಒಗೆದ ಅಪಾರ ಪ್ರಮಾಣದ ಪ್ಲಾಸ್ಟಿಕ್ ತ್ಯಾಜ್ಯ ದಂಡಿಯಾಗಿ ಹರಿದು ಬರುತ್ತಿರುವ ವಿಡಿಯೋವೊಂದನ್ನು ನೋಡಿ ಈ ಮಾತನ್ನು ವಿಷಾದದಿಂದ ಹೇಳುತ್ತಿರುವೆ. ಅನೇಕ ನಿರುದ್ಯೋಗಿ ಯುವಕರನ್ನು ಬಳಸಿಕೊಂಡು ಆಯಕಟ್ಟಿನ ಸ್ಥಳದಲ್ಲಿರಿಸಿ ಪ್ಲಾಸ್ಟಿಕ್ ತ್ಯಾಜ್ಯ ಹಾಕುವವರನ್ನು ಗಮನಿಸಿ ದಂಡ ಇಲ್ಲವೆ ಅಧಿಕೃತವಾಗಿ ಒಂದೆಡೆ ಸಂಗ್ರಹಿಸಿದರೆ ಸೂಕ್ತವೆನಿಸುತ್ತದೆ ಹೇಳುವುದು ಸುಲಭ ಆದರೆ ಪರಿಸರ ಕಾಳಜಿಯುಳ್ಳವರು, ಜಿಲ್ಲಾಡಳಿತ, ವಿಚಾರವಂತರು ಈ ಕಡೆ ಗಮನ ಹರಿಸಿದರೆ ಚೆನ್ನಾಗಿರುತ್ತದೆ.

ಮಳೆ ಬಂದರೆ ಅದರ ಸದ್ದೇ ಇದು ಸಾಧಾರಣವೋ ಭಯಂಕರವೋ ಎಂದು ಹೇಳುತ್ತಿತ್ತು. ಜಡಿ ಮಳೆಯಲ್ಲಿ ಜೌಗು ಮಣ್ಣಿನ ಜರುಗಿಗೆ ಜಾರಿ ಕಿಸಕ್ಕನೆ ಬೀಳುವವರ ಸಂಖ್ಯೆ ಹೆಚ್ಚೆ ಇತ್ತು ಅನ್ನಿ! ಅದನ್ನು ನೋಡಿ ಸಂಭ್ರಮಿಸುವವರ ಸಂಖ್ಯೆಗೇನು ಕಡಿಮೆಯಿರಲಿಲ್ಲ. ಅದರ ನಡುವೆ ಶಾಲೆಗಳಿಗೆ ಕರೆ ಮಾಡಿ “ಶಾಲೆ ಉಂಟಾ !ಉಂಟಾ …!” ಎಂದು ಕೇಳುವ ಮಕ್ಕಳ ಸಂಖ್ಯೆ ಹೆಚ್ಚು. ಮಕ್ಕಳಲ್ಲದೆ ಇದ್ದರು ಪೋಷಕರೆ ಹಾಗೆ ಕರೆ ಮಾಡಿಸುತ್ತಿದ್ದರೇನೋ ಯಾರಿಗೆ ಗೊತ್ತು! ಈ ನಡುವೆ ನಕಲಿ ಸುದ್ದಿವೀರರ ಹಾವಳಿಯೂ ಇತ್ತು. ರಜೆ ಇಲ್ಲದಿದ್ದರೂ ರಜೆ ಇದೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದರು. ಈಗ ತಂತ್ರಜ್ಞಾನ ಮುಂದುವರೆದಿದೆ. ಯಾರೆಂದು ಕಂಡು ಹಿಡಿಯಬಹುದು ಆದರೆ ಹಿಂದೆ ನಕಲಿವೀರರೆ ನಲಿಯುತ್ತಿದ್ದರು.

ಗುಡ್ಡ ಕುಸಿತದಿಂದಲೋ, ಇಲ್ಲವೆ ರಸ್ತೆ ಹಾಳಾಗಿದೆ ಎನ್ನುವ ಕಾರಣಕ್ಕೋ, ಬಿದ್ದ ಮಳೆಯ ನೀರಿನ ರಭಸಕ್ಕೋ ವಾಹನ ಅಪಘಾತಗಳು ಆಗುವುದು ಸಾಮಾನ್ಯ. ಅದರಲ್ಲೂ ಆಟೋಗಳು ಅಪ್ಸೆಟ್ ಅದವು ಎನ್ನುವ ಸುದ್ದಿಯೇ ಹೆಚ್ಚು ಕೇಳಿಬರುತ್ತಿತ್ತು. ರಣಭೀಕರ ಮಳೆಯ ಅವಾಂತರಗಳನ್ನು ತಪ್ಪಿಸಲೋಸುಗ ಪೋಲಿಸ್ ಇಲಾಖೆ, ವಿದ್ಯುತ್ ಇಲಾಖೆ, ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗ ಸರ್ವ ಸನ್ನದ್ಧರಾಗಿ ಇರಬೇಕಿತ್ತು! ಈಗಲೂ ಇದ್ದಾರೆ! ಅವರ ಸೇವೆ ಎಂದೆಂದಿಗೂ ಸ್ಮರಣೀಯ.

ಮಳೆಯ ಕೆಸರಿನ ಪರಿಣಾಮ “ಪಟ ಪಟ ಹಾರು ಗಾಳಿಪಟ… ಅಲ್ಲ, ಪಟ ಪಟ ಹಾರು ಕೆಸರು ರಪ ರಪ…” ಎಂದು ಬದಲಾಯಿಸಬೇಕಷ್ಟೆ. ನಡೆಯುವಾಗ ಚಪ್ಪಲಿಗಳಿಂದ ಸಿಡಿದ ಕೆಸರು ನಮ್ಮ ಯೂನಿಫಾರ್ಮ್ ಸ್ಕೂಲ್ ಬ್ಯಾಗಿನ ಮೇಲೆ ಚಿತ್ತಾರವನ್ನೇ ಬಿಡಿಸುತ್ತಿತ್ತು. ಮಳೆಗಾಲದಲ್ಲಿ ಸ್ವಲ್ಪ ಸವೆದ ಚಪ್ಪಲ್‌ಗಳನ್ನೂ ಹಾಕುವಂತಿರಲಿಲ್ಲ. ಇನ್ನು ಹವಾಯಿ ಚಪ್ಪಲ್‌ಗಳು ಕಡ್ಡಾಯವಾಗಿ ನಿಷಿದ್ಧ ಎಂದು ಪ್ರತ್ಯೇಕ ಹೇಳಬೇಕಿಲ್ಲ ಅಲ್ವೆ! ಬೀಳುವ ಭಯದಿಂದ ಹೊಸ ಚಪ್ಪಲಿಗಳನ್ನು ಹಾಕಿಕೊಂಡು ಹೋಗುತ್ತಿದ್ದೆವು. ಮಳೆಗಾಲದಿಂದ ಮಳೆಗಾಲಕ್ಕೆ ಹೊಸ ವಿನ್ಯಾಸದ ಚಪ್ಪಲಿಗಳು ಬರುತ್ತಿದ್ದವು. ಶಾಲೆಯಿಂದ ಒಟ್ಟಿಗೆ ಬರುವಾಗ ಗೆಳತಿ ಅಶ್ವಿನಿ ನಾನು ಚಪ್ಪಲ್‌ಗಳನ್ನು ಅದಲು ಬದಲು ಮಾಡಿಕೊಂಡು ಬರುತ್ತಿದ್ದೆವು. ಮನೆ ಹತ್ತಿರವಾದೊಡನೆ ಅದಲು ಬದಲು ಮಾಡಿಕೊಳ್ಳುತ್ತಿದ್ದೆವು. ಒಮ್ಮೆ ಮರೆತು ಹೋಗಿ ಪಜೀತಿ ಪಟ್ಟಿದ್ದೂ ಇದೆ. ಹೊಸ ಚಪ್ಪಲಿಗಳು ಕಾಲಿಗೆ ಕಚ್ಚುತ್ತಿದ್ದವು. ಅವು ಕಚ್ಚದ ಹಾಗೆ ಕೊಬ್ಬರಿ ಎಣ್ಣೆ ಇತ್ಯಾದಿ ಹಾಕಿ ಹೋಗುತ್ತಿದ್ದೆವು. ಮಳೆಗಾಲದ ಪ್ರಾರಂಭದ ಸಮಸ್ಯೆಗಳಲ್ಲಿ ಚಪ್ಪಲಿ ಸಮಸ್ಯೆಯೂ ಒಂದಾಗಿತ್ತು. ನಮ್ಮ ಪಕ್ಕದ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ರೋಹಿಣಿ ಮತ್ತು ಸುಗಂಧಿ (ರೋಹಿಣಿ ಹೋದ ನಂತರ ಸುಗಂಧಿ ಬಂದಿದ್ದಳು) ಎಂಬ ಹುಡುಗಿಯರ ಬಗ್ಗೆ ಹೇಳಲೇಬೇಕು ಇವತ್ತಿಗೆ. ಅವರು ಬಾಲಕಾರ್ಮಿಕರಾಗಿದ್ದರಲ್ವ ಅನ್ನಿಸುತ್ತದೆ. ಸಂಪೂರ್ಣ ಮನೆಯ ಜವಾಬ್ದಾರಿ ಇದ್ದರೂ ಪರಕೀಯರಂತೆ ಅವರು ಅನುಭವಿಸುತ್ತಿದ್ದ ಕಷ್ಟ ಇವತ್ತಿಗೂ ನೆನಪಾಗುತ್ತದೆ. ಒಂದೇ ವಯಸ್ಸಿನವರಾದರೂ ನಾನು ಶಾಲೆಗೆ ಹೋಗುತ್ತಿದ್ದೆ ರೋಹಿಣಿ ಮನೆಕೆಲಸಕ್ಕಿದ್ದಳು. ನನಗಿಂತ ಚಿಕ್ಕವಳು ಸುಗಂಧಿಯೂ ಹಾಗೆಯೇ…. ತಪ್ಪು ಮಾಡಿ ಮನೆಯೊಡೆಯರಿಂದ ಬೈಗುಳ ತಿನ್ನುತ್ತಿದ್ದರು. ಈಗ ಎಲ್ಲಿದ್ದಾರೋ ತಿಳಿಯದು. ಇದ್ದಲ್ಲೆ ಚೆನ್ನಾಗಿರಲಿ ಎಂದು ಬಯಸುವೆ. ಒಮ್ಮೊಮ್ಮೆ ಅನ್ನಿಸುತ್ತೆ… ಇದು ಮಳೆಗಾಲವಲ್ಲ ನೆನೆಗಾಲ ಹಳೆಯ ನೆನಪುಗಳನ್ನು ಮೆಲುಕು ಹಾಕುವ ಕಾಲ ಎಷ್ಟು ಹಿತವಾಗಿದೆ ಅನ್ನಿಸುತ್ತದೆ. ಚಿಕ್ಕಂದಿನಲ್ಲಿ ಕಸಿನ್ಸ್ ಜೊತೆಯಲ್ಲಿ ಶಾಲೆಗೆ ಹೋಗುತ್ತಿದ್ದವರು ಪ್ರಾಯಕ್ಕೆ ಬಂದಂತೆ ಬಾಳ ಸಂಗಾತಿಯಾಗುವವರೊಡನೆ ಕಾಲೇಜಿಗೆ ಹೋಗುತ್ತಿದ್ದ ಅನೇಕ ಉದಾಹರಣೆಗಳಿವೆ. ಅಂದರೆ ಬಾಲ್ಯದಿಂದ ಯೌವ್ವನದವರೆಗೂ ಮಳೆಯೊಡನೆ ಮಿಂದೆದ್ದ ನೆನಪುಗಳು ಅತೀ ಮಧುರವಾದವು.

ಮಡಿಕೇರಿ ಹೇಳಿಕೇಳಿ ಶೂಟಿಂಗ್ ಸ್ಪಾಟ್, ಪುಟಾಣಿ ರೈಲು, ಗಾಲ್ಫ್ ಗ್ರೌಂಡ್ ಕಡೆಗೆ ಹೋಗಬೇಕೆಂದರೆ ನಮ್ಮ ಮನೆ ಎದುರೇ ಹೋಗಬೇಕಿತ್ತು. ನಿತ್ಯ ಸಂಚರಿಸುವ ವಾಹನಗಳಿಗು ಶೂಟಿಂಗ್ ವಾಹನಗಳಿಗೂ ವ್ಯತ್ಯಾಸ ಇರುತ್ತಿದ್ದ ಕಾರಣ ಶೂಟಿಂಗ್ ಅಲ್ಲ ಶೂಟಿಂಗ್ ವಾಹನಗಳನ್ನೇ ನೋಡಿರುವುದೇ ಹೆಚ್ಚು. 1986ರಲ್ಲಿ ಈಗಿರುವ ಸಾಯಿ ಹಾಕಿಗ್ರೌಂಡಿನಲ್ಲಿ ನಟ ದ್ವಾರಕೀಶ್ ಅವರ ಫೈಟಿಂಗ್ ಸೀನ್ ಚತ್ರೀಕರಣವಾಗುತ್ತಿತ್ತು. ಶಾಲೆಯ ಸಮಯವಾದ್ದರಿಂದ ನೋಡಲಾಗಲಿಲ್ಲ. ಆದರೆ ನಮ್ಮ ಪಕ್ಕದ ಮನೆ ಕವಿತಾ ಆಂಟಿ ರೋಸ್ ತೆಗೆದುಕೊಂಡು ಹೋಗಿ ನಾಯಕಿಗೆ ಕೊಟ್ಟಿದ್ದನ್ನು ತುಂಬಾ ವರ್ಷದವರೆಗೆ ಹೇಳುತ್ತಿದ್ದರು. ಈಗಾದ್ರೆ ಎಷ್ಟು ಸೆಲ್ಫಿಗಳು ಇರುತ್ತಿದ್ದವು ಅಲ್ವ!

ಆರನೆಯ ತರಗತಿಯಲ್ಲಿ ರಾಷ್ಟ್ರಗೀತೆ ಹಾಡಿದ್ದಕ್ಕೆ ಗುಂಪಿನಲ್ಲಿ ಬಹುಮಾನ ಬಂದಿತ್ತು. ಅದುವೆ ನಟರಾಜ ಪೆನ್ಸಿಲ್ ಮತ್ತು ಇಂಕ್ ಎರೆಸರ್. ಅಲ್ಲಿಂದ ಬಹುಮಾನಗಳು ಬರುತ್ತಾ ಇದ್ದವು. ಕಾಲೇಜಿಗೆ ಬಂದ ನಂತರ ರಾಜ್ಯ ಮಟ್ಟದ ರಾಷ್ಟ್ರ ಮಟ್ಟದ ಪ್ರಬಂಧ ಬರೆಯುವುದರಲ್ಲಿ ಗುರುತಿಸಿಕೊಂಡಿದ್ದೂ ಆಯಿತು. ಕೊಡಗಿನ ಸ್ಥಳಿಯ ಪತ್ರಿಕೆಗಳಲ್ಲಿ ಫೋಟೊ ಸಹಿತ ಸುದ್ದಿ ಬಂದಾಗ ಖುಷಿ ಆಗುತ್ತಿತ್ತು. ಆದರೆ ಹೇಳಿಕೊಳ್ಳಲು ಮುಜುಗರವಾಗುತ್ತಿತ್ತು. ಪೇಪರಿನಲ್ಲಿ ಸುದ್ದಿ ಪ್ರಕಟವಾದ ಆ ದಿನ ಫೀಲ್ಡ್‌ಮಾರ್ಷಲ್ ಕಾಲೇಜಿನ ಮುಖ್ಯದ್ವಾರದ ಹತ್ತಿರ ಬಿಕಾಂ ಹುಡುಗರ ದಂಡು ಇನ್ಯಾವುದೋಕಾರಣಕ್ಕೆ ಸೇರಿತ್ತು. ನನ್ನನ್ನು ನೋಡುತ್ತಿದ್ದಂತೆ “ಓ ಇದೆ ಫೇಸ್ ಅಲ್ಲ ಕಾಣೆಯಾಗಿದ್ದಾರೆ ಅಂತ ಶಕ್ತಿಲಿ ಫೊಟೊ ಹಾಕಿರದು” ಎನ್ನುತ್ತಿದ್ದಂತೆ ಕೆಲವರು ನಕ್ಕರು ಕೆಲವರು ಕಂಗ್ರಾಟ್ಸ್ ಹೇಳಿದರು. ಆದರೆ ನಮ್ಮ ತರಗತಿಯ ಹುಡುಗಿಯರಿಗೆ ಅಸಮಾಧಾನವಿತ್ತು. ನನಗೆ ತುಂಬಾ ಹೆಮ್ಮೆಯೆನಿಸುತ್ತಿತ್ತು. ಮುಂದೆ ಎಂ.ಎ ತರಗತಿಗೆ ಸೇರಿಕೊಂಡಾಗ ಮೈಸೂರು ವಿಶ್ವವಿದ್ಯಾಲಯದ ಪ್ರಬುದ್ಧ ಕರ್ನಾಟಕದ ಪತ್ರಿಕೆಯಲ್ಲಿ ಬರಹಗಳು ಪ್ರಕಟವಾದವು. ಅದರ ಎಲ್ಲಾ ಕ್ರೆಡಿಟ್ಸ್ ಮಡಿಕೇರಿಗೆ ಸಲ್ಲಬೇಕು. ಈ ದಿನದವರೆಗೂ ಒಡನಾಟದಲ್ಲಿರುವ ನನ್ನ ಒಂದನೆ ತರಗತಿ ಟೀಚರ್ ಫಿಲೋಮಿನಾ ಟೀಚರ್, ಎಂಟನೆ ತರಗತಿ ಕ್ಲಾಸ್ ಟೀಚರ್ ಗ್ರೇಸಿ ಟೀಚರ್ ಹತ್ತನೆ ತರಗತಿ ಕ್ಲಾಸ್ ಟೀಚರ್ ಜಯಶೀಲ ಟೀಚರ್ ಇವರುಗಳನ್ನು ಮನಸ್ಸಾರೆ ನೆನಪಿಸಿಕೊಳ್ಳುವೆ. ನಾನು ಓದಿದ ಸಂತಜೋಸೆಫರ ಶಾಲೆ ಮತ್ತು ಎಫ್ ಎಂಸಿ ಕಾಲೇಜು ನೆನಪುಗಳ ತವನಿಧಿ ಎಂದರೂ ತಪ್ಪಿಲ್ಲ. ಶಿಸ್ತು ಮತ್ತು ಸಮಯಪರಿಪಾಲನೆ ನಾನು ಕಲಿತ ದೊಡ್ಡ ಪಾಠಗಳು.

ಕೊಡಗಿನ ವರ್ಷಕಾಲದ ಸರಣಿ ಒಂದು ವರ್ಷ ಪೂರೈಸಿದೆ! ಮಳೆ ಸುರಿಸಿ ಸುರಿಸಿ ಹಗುರಾದ ಮುಗಿಲಿನಂತೆ ಮಳೆಗಾಲದ ನೆನಹುಗಳನ್ನು ಹಂಚಿಕೊಂಡು ಮನಸ್ಸು ಹಗುರಾಗಿದೆ. ನಮ್ಮ ಅಂತರಂಗದ ಭಾವನೆಗಳು ಮೋಡಗಳ ರೂಪ ತಾಳಬೇಕು ಮೋಡ ಮತ್ತೆ ಹನಿಯಾಗಿ ಸುರಿವಂತೆ ನಮ್ಮ ಭಾವಗಳು ಹಾಡಾಗಿ ಹೊನಲಾಗಿ ಹರಿದು ನವ ಚೈತನ್ಯವನ್ನು ತರಬೇಕು. ಮಳೆ ಕಷ್ಮಲವನ್ನು ಕಳೆದು ಭೂಮಿಯನ್ನು ನಳನಳಿಸುವಂತೆ ಮಾಡುತ್ತದೆ. ಅಂತೆಯೇ ನಮ್ಮ ಮನದಲ್ಲಿ ಘನೀಕೃತವಾಗಿರುವ ಅನಗತ್ಯ ಕ್ಲೇಷಗಳನ್ನು ಈ ನೆನಪಿನ ಕಳೆದು ಒಲವನ್ನು ಹರಿಸಬೇಕು, ಉಲ್ಲಾಸದ ಭಿತ್ತಿಯನ್ನಾಗಿಸಬೇಕು. ಮಳೆಯಿಂದ ಮಳೆಗೆ ಎಂಬಂತೆ ನೆನಪುಗಳಿಂದ ಮತ್ತೆ ನೆನಪುಗಳು ಸುರುಳಿಯಾಗಿ ತೆರೆದಕೊಳ್ಳುತ್ತವೆ. ಕಹಿ ನೆನಪುಗಳು ಅಲ್ಲಿಯೇ ಕುಗುರುತ್ತವೆ ಸಿಹಿ ನೆನಪುಗಳು ಉತ್ಸಾಹ ಮೂಡಿಸುತ್ತವೆ. ಮಳೆಯಿಂದ ಮಳೆಗೆ ಎಂಬಂತೆ ನೆನಪು ಮೆದು ಮಳೆಯಂತೆ ಇಲ್ಲಿಯವರೆಗೆ ಸಾಗಿಬಂತು. ನೆನಪುಗಳು ಒಂದರ ಮೇಲೊಂದು ಮೆಲುವಾಗಿ ಸಾಗಿಬರುತ್ತಲೇ ಇರುತ್ತವೆ. ನನ್ನ ಸ್ವಂತಕ್ಕೇ ಇನ್ನೂ ಒಂದಷ್ಟು ಮಳೆಯ ಕಹಿ ನೆನಪುಗಳನ್ನು ಉಳಿಸಿಕೊಂಡು ಅಂಕಣ ಬರಹದ ಈ ಸರಣಿಗೆ ವಿರಾಮವಿಡುತ್ತೇನೆ.

(ಸರಣಿ ಮುಕ್ತಾಯ)