ಜು಼ರಾವ್ಲೊಫ್‌ಗೆ ಸೆರ್ಗಿಯನ್ನು ಕಂಡರೆ ವಿಶೇಷ ಬಗೆಯ ಪ್ರೀತಿ. ಸಹಜ ಹಾಗೂ ಸಾಮಾನ್ಯ ಮನುಷ್ಯನಾಗಿ ಯಾವ ಬಗೆಯ ಹಿಂಸೆ ಕೊಡದೆ ನಡೆದುಕೊಳ್ಳುವ ಅವನ ಸ್ವಭಾವ ಇಷ್ಟವಾಗುತ್ತದೆ. ಹಾಗಾಗಿಯೇ ಅವನು ತನ್ನ ಬಳಿ ಇರುವ ಅಗಾಧ ಬೆಲೆಯ ಕಲಾಕೃತಿಯನ್ನು ಗಿಫ್ಟ್ ಕೊಡುವುದಾಗಿ ಹೇಳಿ ಬರೆದುಕೊಡುತ್ತಾನೆ. ಅದನ್ನು ಮಾರಿದರೆ ಉತ್ತಮವಾದ ಫ್ಲಾಟ್‌ ಕೊಂಡುಕೊಳ್ಳಬಹುದು ಎನ್ನುತ್ತಾನೆ. ಆದರೆ ಅದಕ್ಕೆ ಪ್ರತಿಕ್ರಿಯೆಯಾಗಿ ಸೆರ್ಗಿ ಜು಼ರಾವ್ಲೊಫ್‌ ತನ್ನ ಆರ್ಥಿಕ ಪರಿಸ್ಥಿತಿಯನ್ನು ಲೇವಡಿ ಮಾಡುತ್ತಿದ್ದಾನೆ ಎಂದು ಉದ್ವಿಗ್ನಗೊಂಡು ಅಬ್ಬರಿಸುತ್ತಾನೆ.
ಎ.ಎನ್. ಪ್ರಸನ್ನ ಬರೆಯುವ ‘ಲೋಕ ಸಿನಿಮಾ ಟಾಕೀಸ್‌’ನಲ್ಲಿ ರಷ್ಯಾದ ʻಸಿಂಪಲ್‌ ಥಿಂಗ್ಸ್ʼ ಸಿನಿಮಾದ ವಿಶ್ಲೇಷಣೆ

ಅದು ರಷ್ಯಾದ ಪೀಟರ್ಸ್ಬರ್ಗ್‌ ನಗರ. ಆ ನಗರದಲ್ಲಿ ವಾಸಿಸುವ ಮಧ್ಯಮ ವರ್ಗದ ಮಧ್ಯ ವಯಸ್ಸಿನ ಸೆರ್ಗಿ ಮಾಸ್ಲೋವ್‌ಗೆ ದೊಡ್ಡ ಆಸ್ಪತ್ರೆಯೊಂದರಲ್ಲಿ ರೋಗಿಗಳಿಗೆ ಅಗತ್ಯವೆನಿಸಿದಾಗ ಅನಸ್ತೀಷಿಯಾ ಕೊಡುವ ಕೆಲಸ. ಅವನದು ಸಣ್ಣ ಕುಟುಂಬ. ಹೆಂಡತಿ ಮತ್ತು ಯುವ ವಯಸ್ಸಿನ ಮಗಳು. ಸಾಂಸಾರಿಕ ಒದ್ದಾಟ, ಆರ್ಥಿಕ ನೆಲೆ ಸಂಕೋಚದ ಸ್ವಭಾವ ಇತ್ಯಾದಿಗಳು ತುಂಬಿದ ಅವನಿಗೆ ತನ್ನ ಸದ್ಯದ ಜೀವನವನ್ನು ಕುರಿತು ಇನ್ನಿಲ್ಲದಷ್ಟು ಅಸಮಾಧಾನ. ಇವುಗಳ ಜೊತೆಗೆ ಅವನ ತಲೆಯಲ್ಲಿ ಭವಿಷ್ಯದ ಬಗ್ಗೆ ಚಿಂತನೆ. ಆದರೆ ಆತ್ಮಗೌರವ ಹಾಗೂ ಸ್ವಾಭಿಮಾನಗಳ ವಿಷಯದಲ್ಲಿ ಮನಬಂದಂತೆ ರಾಜಿ ಮಾಡಿಕೊಳ್ಳುವ ಪ್ರವೃತ್ತಿಯವನಲ್ಲ. ಹೆಂಡತಿಯ ಜೊತೆ ಮತ್ತು ವೃತ್ತಿಯಲ್ಲಿ ಅಥವ ಇತರ ಸಂಪರ್ಕದವರ ಜೊತೆ ನಡೆದುಕೊಳ್ಳುವ ಬಗೆ ಇತ್ಯಾದಿಯನ್ನು ಕುರಿತು ಅವನಿಗೆ ಸ್ಪಷ್ಟ ಕಲ್ಪನೆ ಇರುತ್ತದೆ. ತನಗೆ ಬರುವ ವರಮಾನದ ಬಗ್ಗೆ ಅತೃಪ್ತಿ, ಅದನ್ನು ನಿವಾರಿಸುವುದಕ್ಕೆ ಭ್ರಷ್ಟ ಮಾರ್ಗವನ್ನು ಹಿಡಿಯುವುದಕ್ಕೆ ಹಿಂಜರಿಯುವುದಿಲ್ಲ. ಅನಿವಾರ್ಯವೆಂಬಂತೆ ಹೀಗೆ ಮಾಡಿದರೂ ಮುಜುಗರ ತುಂಬಿದ ವ್ಯಕ್ತಿ. ಎಂಥ ಸಂದರ್ಭದಲ್ಲಿಯೂ ಸಣ್ಣವನಾಗಲಾರೆ ಎಂಬ ಭರವಸೆ ಅವನ ಅಂತರಾಳದಲ್ಲಿ. ಸಮಕಾಲೀನ ರಷ್ಯಾದಲ್ಲಿ ನಗರದಲ್ಲಿ ವಾಸಿಸುವ ವ್ಯಕ್ತಿಯೊಬ್ಬನ ಜೀವನವನ್ನು ಒಟ್ಟಾರೆಯಾಗಿ ಪರಿಕಲ್ಪಿಸಿ ಅವನ ಜೀವನದ ವಿವಿಧ ಅಂಶಗಳನ್ನು ೨೦೦೮ರ ಚಿತ್ರ ʻಸಿಂಪಲ್ ಥಿಂಗ್ಸ್ʼ ಮೂಲಕ ನಿರ್ದೇಶಕ ಅಲೆಕ್ಸಿ ಒಪ್ಪೋಗ್ರೆಬ್ರಿಸ್ಕಿ ಪ್ರಸ್ತುತಪಡಿಸುತ್ತಾರೆ. ನಿರೂಪಣೆಯಲ್ಲಿ ಅವರದು ಸರಳ ಮಾರ್ಗ. ಯಾವ ವಿಧವಾದ ಪ್ರತ್ಯೇಕ ಶೈಲಿ ರೂಢಿಸಿಕೊಂಡಿರುವುದು ಕಾಣುವುದಿಲ್ಲ. ಚಿತ್ರದಲ್ಲಿ ಸಮೀಪ ಚಿತ್ರಿಕೆಗಳಿಗಿಂತ ಮಧ್ಯಮ ಚಿತ್ರಿಕೆಗಳನ್ನು ಹೆಚ್ಚು ಬಳಸಿರುವುದು ಅವುಗಳ ಅಗತ್ಯದ ದೃಷ್ಟಿಯಿಂದ.

(ಅಲೆಕ್ಸಿ ಪೋಪೋಗ್ರೆಸ್ಕಿ)

ಅಲೆಕ್ಸಿ ಪೋಪೋಗ್ರೆಸ್ಕಿ ಮಾಸ್ಕೋ ವಿದ್ಯಾಲಯದ ಪದವಿ ಪಡೆದದ್ದು ಮನೋವಿಜ್ಞಾನದಲ್ಲಿ. ಆದರೆ ವೃತ್ತಿ ಆರಂಭಿಸಿದ್ದು ದೃಶ್ಯ ಮಾಧ್ಯಮದಲ್ಲಿ. ಇದರ ಫಲವಾಗಿ 2003ರಲ್ಲಿ ನಿರ್ಮಿಸಿದ ʻಕಾಟ್ಕೊಬೆಲ್‌ʼ ಅಂತರರಾಷ್ಟ್ರೀಯ ಖ್ಯಾತಿ ಗಳಿಸಿತು. 2010ರ ʻಹೌ ಐ ಎಂಡೆಡ್‌ ಮೈ ಸಮ್ಮರ್‌ʼ ಅನೇಕ ಅಂತರರಾಷ್ಟ್ರೀಯ ಪ್ರಶಸ್ತಿ ಗಳಿಸಿದ ಚಿತ್ರ. ಅವನು ೩ಡಿ ಚಿತ್ರಗಳಲ್ಲಿಯೂ ಪ್ರಯೋಗ ನಡೆಸಿದ್ದಾನೆ.

ʻಸಿಂಪಲ್‌ ಥಿಂಗ್ಸ್ʼ ಚಿತ್ರದ ಕಥಾ ಚೌಕಟ್ಟು ಸರಳ. ಸೆರ್ಗಿ ಮಸ್ಲೋವ್‌ ಅಪಾರ್ಟ್ಮೆಂಟಿನಲ್ಲಿ ಹೆಂಡತಿಯೊಡನೆ ವಾಸ. ಇಕ್ಕಟ್ಟಾಗಿ ಸ್ಥಳಾವಕಾಶ ಕಡಿಮೆ ಇರುವ ಮನೆ. ಹೀಗಿದ್ದರೂ ಅಲ್ಲಲ್ಲಿ ಹರಡಿ ಬಿದ್ದಿರುವ ವಸ್ತುಗಳು. ಅವುಗಳನ್ನು ಸರಿಯಾಗಿ ಜೋಡಿಸಿ ಇಟ್ಟಿರುವುದಿಲ್ಲ. ಅವನಿಗೂ ಅವನ ಹೆಂಡತಿಗೂ ಆ ಬಗ್ಗೆ ಗಮನವೇ ಇರುವುದಿಲ್ಲ. ಇರುವ ಮನೆಯ ಬಗ್ಗೆಯೇ ತೀವ್ರ ಅಸಮಾಧಾನ. ಅದನ್ನು ಬದಲಿಸಿ ಅನುಕೂಲವೆನಿಸುವ ಕಡೆ ಹೋಗಲು ಆರ್ಥಿಕ ಮುಗ್ಗಟ್ಟು. ಇದಕ್ಕೆ ಹೊಂದಿಕೊಂಡಂತೆ ಸೋಮಾರಿತನ ಮತ್ತು ಶಿಸ್ತಿಲ್ಲದ ಮನಸ್ಸು. ಇವೆಲ್ಲವೂ ವಿವಿಧ ಬಗೆಯ ಒತ್ತಡದಲ್ಲಿರುವ ಪರಿಸ್ಥಿತಿಯನ್ನು ಸೂಚಿಸುತ್ತದೆ. ಇದೇನಿದ್ದರೂ ನಗುಮೊಗದಿಂದ ಹೆಂಡತಿಯ ಜೊತೆ ಮಾತನಾಡುವ, ನಡೆದುಕೊಳ್ಳವ ಅಭಿಲಾಷೆ ಕಾಣಿಸುವುದಿಲ್ಲ. ಇಷ್ಟವಿಲ್ಲದಿದ್ದರೂ ಬಲವಂತವಾಗಿ ಸುಮ್ಮನೆ ಕಾಲ ಉರುಳುವುದಕ್ಕೆ ಹೊಂದಿಕೊಂಡ ಪರಿಸ್ಥಿತಿ ಅವನದು.

ಆಸ್ಪತ್ರೆಯ ಕೆಲಸಕ್ಕೆ ಬೇಕಾದ ಪದಾರ್ಥಗಳನ್ನು ಬ್ರೀಫ್‌ ಕೇಸಿನಲ್ಲಿ ತುಂಬಿಕೊಂಡು ಸರಬರನೆ ಹೊರಡುವ ಅವಸರ. ಹೆಂಡತಿಯ ಜೊತೆ ಅಗತ್ಯಕ್ಕಿಂತ ಕಡಿಮೆ ಮಾತನಾಡಿ ಹೊರಡುವ ಅಭ್ಯಾಸ. ಇದು ಅವರ ಆರ್ಥಿಕ ಪರಿಸ್ಥಿತಿ ಮತ್ತು ಬದುಕಿನ ನೆಲೆಗೆ ಸೂಚನೆ ಕೊಡುತ್ತದೆ. ಜೊತೆಗೆ ಉತ್ತಮ ಸ್ಥಿತಿಯಲ್ಲಿ ಇಟ್ಟುಕೊಂಡಿರದೆ ದಡಬಡ ಶಬ್ದಮಾಡುವ ಅವನ ಹಳೆಯ ಕಾರು ಇದನ್ನು ಧೃಡಪಡಿಸುತ್ತದೆ. ಆಸ್ಪತ್ರೆಯಲ್ಲಿಯೂ ಕೂಡ ಯುವ ವಯಸ್ಸಿನ ಗೆಲುವು ಸೂಸುವ ಸ್ವಾಗತಕಾರಿಣಿಯೊಂದಿಗೆ ಉಲ್ಲಾಸದಿಂದ ಹಿತವೆನಿಸಿ ನಡೆದುಕೊಳ್ಳುತ್ತಾನೆ, ನಿಜ. ಅದಕ್ಕೆ ಅವಳ ಪ್ರತಿಕ್ರಿಯೆಯೂ ಸಮಂಜಸ. ಆ ದೊಡ್ಡದಾದ ಆಸ್ಪತ್ರೆಯಲ್ಲಿ ಸಾಮಾನ್ಯ ಮೈಕಟ್ಟಿನ ಚೌಕು ಮುಖದ ಅವನು ಉದ್ದುದ್ದ ಕಾರಿಡಾರುಗಳಲ್ಲಿ ಅತ್ತಿತ್ತ ಓಡಾಡುವಾಗ ಅವನ ದೊಡ್ಡ ಕಣ್ಣುಗಳು ಎಡಬಲ ಹರಿದಾಡುತ್ತವೆ. ಪರಿಚಿತರಿಗೆ ನಸುನಗುವಿನಿಂದ ʻವಿಶ್‌ʼ ಮಾಡುವುದಷ್ಟೆ. ಅವನ ಚಲನೆ ಮತ್ತು ಮುಖಚಹರೆಯಿಂದ ಹಗುರವಾದ ಮನಸ್ಥಿತಿಯಲ್ಲಿ ಇರುವನಂತೆ ತೋರುವುದಿಲ್ಲ. ಅದೇನೋ ವಿವಿಧ ಬಗೆಯ ಒತ್ತಡ ಮೈಯೊಳಗೆ ಮನೆ ಮಾಡಿಕೊಂಡ ಹಾಗೆ.

ಅವನು ಆಸ್ಪತ್ರೆಯಲ್ಲಿ ವ್ಯಕ್ತಿಯೊಬ್ಬರಿಗೆ ಸಾಮಾನ್ಯವಾದದ್ದಕ್ಕಿಂತ ಉತ್ತಮ ಮಟ್ಟದ ಔಷಧಿ ಕೊಟ್ಟು ಪ್ರತಿಯಾಗಿ ಭ್ರಷ್ಟಮಾರ್ಗ ಹಿಡಿದು ಹಣ ಗಳಿಸುತ್ತಾನೆ. ಆದರೆ ಹಾಗೆ ಪಡೆದದ್ದು ಹೆಚ್ಚು ಎಂದು ಅವನಿಗೆ ತೋರುತ್ತದೆ. ಆ ಹಣದಲ್ಲಿ ಹೆಚ್ಚಿನಿಸಿದ ಭಾಗವನ್ನು ವಾಪಸು ಕೊಡುತ್ತಾನೆ. ಇದೊಂದು ರೀತಿ ಭ್ರಷ್ಟತನದಲ್ಲೂ ವಿಚಿತ್ರವಾದ ನ್ಯಾಯ ಮಾರ್ಗ!

ಸೆರ್ಗಿಯನ್ನು ಸಂಪರ್ಕಿಸಿದ ಆ ವ್ಯಕ್ತಿ ಡಾಕ್ಟರುಗಳನ್ನು ಅಗತ್ಯವಿರುವವರಿಗೆ ವಿತರಿಸುವ ಏಜೆಂಟ್. ಭ್ರಷ್ಟಮಾರ್ಗದಲ್ಲಿದ್ದರೂ ಪರಸ್ಪರ ಹಿತವೆನಿಸುವ ಹಾಗೆ ವ್ಯವಹರಿಸಿದ ಆ ವ್ಯಕ್ತಿಗೆ ಸೆರ್ಗಿಯ ನಡವಳಿಕೆ ಮೆಚ್ಚುಗೆಯಾಗುತ್ತದೆ. ಆದರೆ ಸೆರ್ಗಿಗೆ ಆಸ್ಪತ್ರೆಯಲ್ಲಿ ಹೆಚ್ಚಿನ ಹಣಕ್ಕಾಗಿ ಹೀಗೆ ಮಾಡುತ್ತಲೇ ಇರುವುದರಿಂದ ಇದು ವಿಶೇಷನೆನಿಸುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಈ ಭ್ರಷ್ಟ ವ್ಯವಹಾರ ಗುಟ್ಟಾಗಿ ನಡೆಯುವುದಿಲ್ಲ. ಆಸ್ಪತ್ರೆಯಲ್ಲಿ ಇತರ ಚಟುವಟಿಕೆ ಮತ್ತು ಇತರ ವೈದ್ಯರು, ನರ್ಸುಗಳು ಮತ್ತು ಸಾರ್ವಜನಿಕರ ಎದುರಿಗೇ ನಡೆಯುತ್ತದೆ. ಇಡೀ ದೃಶ್ಯದಲ್ಲಿ ಆಸ್ಪತ್ರೆಯ ಎಲ್ಲ ಮಟ್ಟದಲ್ಲಿ ಸಾಮಾನ್ಯವಾಗಿರುವ ಮತ್ತು ವೈದ್ಯರು ಮತ್ತು ಇತರರು ಇದರಿಂದ ವ್ಯಗ್ರರಾಗದೆ ಇದು ಸಹಜ ನಡವಳಿಕೆ ಎನ್ನುವಂತೆ ಸ್ವೀಕರಿಸಿರುವುದು ಸ್ಪಷ್ಟವಾಗಿ ತೋರುತ್ತದೆ. ನಿರ್ದೇಶಕ ಕಟು ವಾಸ್ತವವೆನಿಸುವ ಈ ದೃಶ್ಯವನ್ನು ಅತಿ ಕಡಿಮೆ ಅವಧಿಯಲ್ಲಿ ಅಗತ್ಯವಾದ ಎಲ್ಲ ರೀತಿಯ ಚಿತ್ರಿಕೆಗಳಿಂದ ನಮ್ಮೆದುರು ಪ್ರಸ್ತುತಪಡಿಸುತ್ತಾನೆ. ಪ್ರಮುಖವಾದ ಈ ದೃಶ್ಯದಲ್ಲಿ ಅತ್ಯಂತ ಕಡಿಮೆಯಾದ ಮಾತುಗಳಿವೆ ಮತ್ತು ಸೂಕ್ಷ್ಮ ಸ್ವರೂಪದ ಅಭಿನಯವನ್ನು ಕಾಣುತ್ತೇವೆ. ಸೆರ್ಗಿಯಾನ ಈ ವಿಚಿತ್ರ ನ್ಯಾಯವಂತಿಕೆಯಿಂದ ಪ್ರಚೋದಿತನಾದ ಆ ವ್ಯಕ್ತಿ ಹಿಂದೊಮ್ಮೆ ಸೋವಿಯತ್ ಚಿತ್ರಪ್ರಪಂಚದಲ್ಲಿ ಪ್ರಖ್ಯಾತನಾದ ನಟ ಜು಼ರಾವ್ಲೊಫ್‌ ಸಾಯುವ ಸ್ಥಿತಿಯಲ್ಲಿದ್ದಾನೆ. ಅವನಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಸಹಾಯ ಮಾಡು ಎಂದು ಗಂಭೀರ ಮುಖಮುದ್ರೆಯಿಂದ ಹೇಳುತ್ತಾನೆ. ಹೀಗೆ ಮಾಡುವುದಕ್ಕೆ ಅವನು ದಿನವೊಂದಕ್ಕೆ ಐವತ್ತು ಡಾಲರ್ ಕೊಡುತ್ತಾನೆ ಎಂದು ಹೇಳಿ ಆಶ್ಚರ್ಯ ಹುಟ್ಟಿಸಿ ಸೆರ್ಗಿಗೆ ಆ ನಟನ ವಿಳಾಸ ಕೊಡುತ್ತಾನೆ.

ಅವನು ಆಸ್ಪತ್ರೆಯಲ್ಲಿ ವ್ಯಕ್ತಿಯೊಬ್ಬರಿಗೆ ಸಾಮಾನ್ಯವಾದದ್ದಕ್ಕಿಂತ ಉತ್ತಮ ಮಟ್ಟದ ಔಷಧಿ ಕೊಟ್ಟು ಪ್ರತಿಯಾಗಿ ಭ್ರಷ್ಟಮಾರ್ಗ ಹಿಡಿದು ಹಣ ಗಳಿಸುತ್ತಾನೆ. ಆದರೆ ಹಾಗೆ ಪಡೆದದ್ದು ಹೆಚ್ಚು ಎಂದು ಅವನಿಗೆ ತೋರುತ್ತದೆ. ಆ ಹಣದಲ್ಲಿ ಹೆಚ್ಚಿನಿಸಿದ ಭಾಗವನ್ನು ವಾಪಸು ಕೊಡುತ್ತಾನೆ. ಇದೊಂದು ರೀತಿ ಭ್ರಷ್ಟತನದಲ್ಲೂ ವಿಚಿತ್ರವಾದ ನ್ಯಾಯ ಮಾರ್ಗ!

ತನ್ನ ಬದುಕಿಗೇ ಹೊಸ ಬಾಗಿಲು ತೆರೆಯುವುದೆನ್ನುವ ನಿರೀಕ್ಷೆಯಿಂದ ಜು಼ರಾವ್ಲೊಫ್‌ನನ್ನು ಭೇಟಿಯಾಗಲು ಹೋಗುತ್ತಾನೆ. ಆರೋಗ್ಯವಿಲ್ಲದ ವ್ಯಕ್ತಿ ಎಂದು ಎತ್ತರದ ದನಿಯಲ್ಲಿ ಸೆರ್ಗಿ ಮಾತನಾಡಿದ ಕೂಡಲೆ ತಾನೇನು ಕಿವುಡನಲ್ಲ ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿ ಸೆರ್ಗಿಗೆ ಬೆರಗು ಮೂಡಿಸುತ್ತಾನೆ. ಅನಂತರದ ವರ್ತನೆಯಲ್ಲಿ ಆ ಏಜೆಂಟ್‌ ಹೇಳಿದ್ದಕ್ಕಿಂತ ನಟ ಸೆರ್ಗಿಗೆ ಬೇರೆಯಾಗಿಯೇ ಕಾಣಿಸುತ್ತಾನೆ. ವಿವರಗಳನ್ನು ಸರಿಯಾಗಿ ಕೊಡದೆ ಮಾತಿಗೆ ತೊಡಲು ನೋಡುವ ಸೆರ್ಗಿಗೆ ಮೊದಲು ಸರಿಯಾಗಿ ಪರಿಚಯಿಸಿಕೋ ಎಂದು ಹೇಳಿ ರೇಗುತ್ತಾನೆ. ಇವುಗಳಿಂದ ಮತ್ತು ಅನಂತರ ಪರಿಚಯವಾಗುವ ಸ್ವಭಾವ ಮತ್ತು ಧೋರಣೆಗಳಿಂದ ಅವನು ವಿಶೇಷವಾಗಿ ಕಾಣುತ್ತಾನೆ. ಮಾತು, ಆಲೋಚನೆ ಎಲ್ಲವೂ ಸ್ಪಷ್ಟ ಮತ್ತು ಪ್ರತಿಯೊಂದಕ್ಕೂ ಶಿಸ್ತಿನ ಲೇಪ ಗೋಚರಿಸುತ್ತದೆ. ವಯಸ್ಸಾದ ಮನುಷ್ಯನೊಬ್ಬನ ಜೊತೆ ವ್ಯವಹರಿಸುತ್ತಿದ್ದೇನೆ ಎಂದು ಹಗುರವಾಗಿ ಭಾವಿಸಿದ ಸೆರ್ಜಿಗೆ ಹಿಮ್ಮೆಟ್ಟಿದ ಅನುಭವವಾಗುತ್ತದೆ. ಕಣ್ಣರಳಿಸುತ್ತ ತನ್ನನ್ನು ತಾನೇ ನಿಭಾಯಿಸಿಕೊಂಡು ಜು಼ರಾವ್ಲೊಫ್‌ನೊಂದಿಗೆ ನಡೆದುಕೊಳ್ಳುತ್ತಾನೆ. ಆ ನಟನಿಗೆ ಬೇರೆಲ್ಲ ದೈಹಿಕ ಅಂಗಗಳು ತೀಕ್ಷ್ಣವಾಗಿರುತ್ತವೆ.

ಸೆರ್ಗಿಗೆ ತನ್ನ ಜೊತೆ ನಟ ವ್ಯವಹರಿಸುವ ರೀತಿಯಿಂದ ಅವನಿಗೆ ಇರುವ ಕಾಯಿಲೆ ಏನು ಎನ್ನುವುದು ಸ್ಪಷ್ಟವಾಗುವುದಿಲ್ಲ. ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬ ಅವನ ಅಪೇಕ್ಷೆಯ ತೀವ್ರತೆಗೆ ಕಾರಣಗಳೇನಿರಬಹುದು ಸೆರ್ಗಿಗೆ ತಿಳಿಯುವುದಿಲ್ಲ. ಎಲ್ಲ ರೀತಿಯಲ್ಲಿಯೂ ಅವನು ಸುಸ್ಥಿರವಾಗಿರುವಂತೆ ಕಾಣುತ್ತದೆ. ಬಹುಶಃ ತಡೆದುಕೊಳ್ಳಲಾಗದ ಒಂಟಿತನ ಅವನಿಗೆ ಕಾಡುತ್ತಿರಬೇಕು ಎಂದುಕೊಳ್ಳುತ್ತಾನೆ. ಅವನಿಗೆ ಕೇವಲ ತನ್ನ ಸ್ವಭಾವ, ಧೋರಣೆ ಮುಂತಾದವುಗಳಿಗೆ ಸಾಧ್ಯವಾದಷ್ಟೂ ಹತ್ತಿರವೆನಿಸುವ ಮನುಷ್ಯನೊಬ್ಬನ ಸಾಂಗತ್ಯದ ಅಗತ್ಯವಿದೆ ಎನ್ನುವುದು ಅವನ ಮಾತು, ಆಯೋಚನೆ ಮತ್ತು ವರ್ತಿಸುವ ರೀತಿಗಳಿಂದ ಸೂಚಿತವಾಗುತ್ತದೆ. ಒಟ್ಟಾರೆಯಾಗಿ ಉಳಿದಿರುವ ಆಯಸ್ಸನ್ನು ಸಮಾಧಾನದಿಂದ ಕಳೆಯುವ ರೀತಿಯಲ್ಲಿರಬೇಕು ಎನ್ನುವ ಅಪೇಕ್ಷೆ ವ್ಯಕ್ತವಾಗುತ್ತದೆ.

ಸೆರ್ಗಿಯ ಹೆಂಡತಿ ಕಾತ್ಯಾ ಅವನಲ್ಲಿ ಅಚ್ಚರಿಯಯೊಂದನ್ನು ಹುಟ್ಟಿಸುತ್ತಾಳೆ. ಅವನಿಗೆ ಗಂಡು ಮಗು ಬೇಕೆಂಬ ಹಂಬಲ ಇರುವುದನ್ನು ನೆನಪಿಸುತ್ತ ತಾನೀಗ ಮೂರು ತಿಂಗಳ ಗರ್ಭಿಣಿಯಾಗಿರುವ ಸುದ್ದಿ ತಿಳಿಸುತ್ತಾಳೆ. ಆದರೆ ಅವನಿಗದು ತೀವ್ರ ಅಪ್ರಿಯವಾದ ಸುದ್ದಿ. ಸದ್ಯದ ಆರ್ಥಿಕ ಪರಿಸ್ಥಿತಿಯಿಂದ ಸಂಸಾರ ಬೆಳೆಯುವುದನ್ನು ಇಚ್ಚಿಸುವುದಿಲ್ಲ. ಮುಖ ಬಿಗಿಯಾಗಿಸಿ ಹೊಟ್ಟೆಯಲ್ಲಿರುವುದನ್ನು ತೆಗೆಸಿ ಬಿಡೋಣ ಎನ್ನುತ್ತಾನೆ. ಅವಳಿಗದು ಒಪ್ಪಿಗೆಯಾಗುವುದಿಲ್ಲ

ಸೆರ್ಗಿ, ಕಾತ್ಯಾಳ ಒಬ್ಬಳೇ ಮಗಳು ಲೆನಾ ತನ್ನ ಪ್ರಿಯಕರನೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿರುತ್ತಾಳೆ. ಆ ದಿನ ತನ್ನ ಸ್ನೇಹಿತನೊಬ್ಬನ ಜೊತೆ ಸರ್ಗಿ ಹೋಟೆಲೊಂದರಲ್ಲಿ ಕುಳಿತಾಗ ಕಿಟಕಿಯ ಮೂಲಕ ಮಗಳು ಒಂದಿಬ್ಬರು ಹುಡುಗರೊಡನೆ ಇರುವುದನ್ನು ಕಂಡು ದಿಢೀರನೆ ಅಲ್ಲಿಗೆ ಧಾವಿಸಿ ಗಲಾಟೆ ಮಾಡುತ್ತಾನೆ. ಆದರೆ ಅವರಿಂದ ಹೊಡೆಸಿಕೊಂಡು ತೆಪ್ಪಗಾಗಬೇಕಾಗುತ್ತದೆ.

ಜು಼ರಾವ್ಲೊಫ್‌ಗೆ ಸೆರ್ಗಿಯನ್ನು ಕಂಡರೆ ವಿಶೇಷ ಬಗೆಯ ಪ್ರೀತಿ. ಸಹಜ ಹಾಗೂ ಸಾಮಾನ್ಯ ಮನುಷ್ಯನಾಗಿ ಯಾವ ಬಗೆಯ ಹಿಂಸೆ ಕೊಡದೆ ನಡೆದುಕೊಳ್ಳುವ ಅವನ ಸ್ವಭಾವ ಇಷ್ಟವಾಗುತ್ತದೆ. ಹಾಗಾಗಿಯೇ ಅವನು ತನ್ನ ಬಳಿ ಇರುವ ಅಗಾಧ ಬೆಲೆಯ ಕಲಾಕೃತಿಯನ್ನು ಗಿಫ್ಟ್ ಕೊಡುವುದಾಗಿ ಹೇಳಿ ಬರೆದುಕೊಡುತ್ತಾನೆ. ಅದನ್ನು ಮಾರಿದರೆ ಉತ್ತಮವಾದ ಫ್ಲಾಟ್‌ ಕೊಂಡುಕೊಳ್ಳಬಹುದು ಎನ್ನುತ್ತಾನೆ. ಆದರೆ ಅದಕ್ಕೆ ಪ್ರತಿಕ್ರಿಯೆಯಾಗಿ ಸೆರ್ಗಿ ಜು಼ರಾವ್ಲೊಫ್‌ ತನ್ನ ಆರ್ಥಿಕ ಪರಿಸ್ಥಿತಿಯನ್ನು ಲೇವಡಿ ಮಾಡುತ್ತಿದ್ದಾನೆ ಎಂದು ಉದ್ವಿಗ್ನಗೊಂಡು ಅಬ್ಬರಿಸುತ್ತಾನೆ.

ಜು಼ರಾವ್ಲೊಫ್‌ ಬಳಿ ಹೀಗೆ ವರ್ತಿಸಿದರೂ ಸೆರ್ಗಿಗೆ ಆ ಕಲಾಕೃತಿಯನ್ನು ಮಾರಿದರೆ ನಿಜವಾಗಿಯೂ ತನ್ನ ಸಮಸ್ಯೆಗಳೆಲ್ಲಾ ಮಾಯವಾಗುತ್ತವೆ ಎಂಬ ಆಲೋಚನೆ ಉಂಟಾಗುತ್ತದೆ. ಆದರೆ ಒಮ್ಮೆ ಬೇಡವೆಂದು ಜಗಳವಾಡಿದ್ದನ್ನು, ಈಗ ಒಪ್ಪಿಕೊಂಡಿದ್ದೇನೆ ಕೊಡು ಎಂದು ಕೇಳುವುದು ನಾಚಿಕೆಗೇಡಿನ ವಿಷಯ ಅನಿಸುತ್ತದೆ. ಆದರೆ ಬೇಕು-ಬೇಡಗಳ ಹೊಯ್ದಾಟದಲ್ಲಿ ಆಸ್ಪತ್ರೆಯಿಂದ ಕದ್ದುಕೊಂಡು ಹೋದ ಅನಿಸ್ತೀಷಿಯಾ ಟ್ಯೂಬ್‌ ಉಪಯೋಗಿಸಿ ಆ ನಟನಿಗೆ ಇಂಜೆಕ್ಷನ್ ಕೊಡುತ್ತಾನೆ. ಅನಂತರ ಆ ವರ್ಣಚಿತ್ರವನ್ನು ಮಾರಲು ಹೋದಾಗ ಅದು ಮೂಲರೂಪ ಎನ್ನುವುದರ ಬಗ್ಗೆ ಬಗೆಹರಿಯದೆ ಕೊಳ್ಳಬೇಕಾದವರು ಹಿಂಜರಿಯುತ್ತಾರೆ ಮತ್ತು ಅವನನ್ನು ಕಳ್ಳನೆಂದು ಸಂದೇಹಗೊಳ್ಳುತ್ತಾರೆ. ಸೆರ್ಗಿ ಹೇಳಿದ್ದನ್ನು ಒಪ್ಪದೆ ನಟನ ಬಳಿಗೆ ಪೊಲೀಸರೊಂದಿಗೆ ಬರುತ್ತಾರೆ. ಆದರೆ ಸೆರ್ಗಿಯ ಅಂತರಂಗವನ್ನು ಸಾಕಷ್ಟು ಬಲ್ಲ ಜು಼ರಾವ್ಲೊಫ್‌ ಕಲಾಕೃತಿಯನ್ನು ಅವನು ಕದ್ದಿದ್ದಲ್ಲ ನಾನೇ ಕೊಟ್ಟಿದ್ದು ಎಂದು ರಕ್ಷಣೆ ಮಾಡುತ್ತಾನೆ. ಪೊಲೀಸರು ಹೊರಟ ಮೇಲೆ ಈಗಲಾದರೂ ಕಲಾಕೃತಿಯನ್ನು ತೆಗೆದುಕೊಂಡು ಹೋಗು ಎಂದು ಹೇಳಿದ ನಟನ ಮಾತಿಗೆ ಸೆರ್ಗಿಗೆ ಉತ್ತರಿಸಲು ಮಾತುಗಳಿಲ್ಲದೆ ಕುಗ್ಗಿ ಹೋಗುತ್ತಾನೆ. ನಾಚಿಕೆ, ಮುಜುಗರ, ಆತ್ಮವಿಶ್ವಾಸದ ಕೊರತೆ ಇವುಗಳಿಂದ ಸೆರ್ಗಿಗೆ ಏನು ಮಾಡಲೂ ಸಾಧ್ಯವಾಗುವುದಿಲ್ಲ.

ಜು಼ರಾವ್ಲೊಫ್‌ ಜೊತೆ ಮತ್ತೊಮ್ಮೆ ಮಾತನಾಡುವಾಗ ಅವನು ನಾವು ನಮ್ಮ ಬಗ್ಗೆ ಯೋಚಿಸುತ್ತಾ ಅವುಗಳ ಸುತ್ತಲೆ ಗಿರಿಗಿಟ್ಟಲೆ ಸುತ್ತುವುದು ಬಿಟ್ಟು, ಸದ್ಯದ ಸ್ಥಿತಿ ಮತ್ತು ಎಲ್ಲ ಬಗೆಯ ಮಿತಿಗಳನ್ನು ಅರಿತು, ಎಲ್ಲ ಆಸೆ ಅಭಿಲಾಷೆಗಳನ್ನು ಮುಂದಿನ ತಲೆಮಾರಿಗೆ ಬಿಟ್ಟು ನಿರಾಳವಾಗಿರುವುದು ಅತ್ಯಂತ ಒಳ್ಳೆಯದು ಮತ್ತು ಕ್ಷೇಮ ಎನ್ನುತ್ತಾನೆ. ಸೆರ್ಗಿ ಅದನ್ನು ಹಗುರ ಮಸ್ಸಿನಿಂದ ನಸು ನಗುತ್ತ ಒಪ್ಪಿದ ನಂತರ ಇಬ್ಬರೂ ಸಾಕೆನಿಸುವಷ್ಟು ವೋಡ್ಕಾ ಕುಡಿಯುತ್ತಾರೆ. ಸೆರ್ಗಿಗೆ ತನ್ನೆಲ್ಲ ವಿವಿಧ ರೂಪದ ಒತ್ತಡದ ಮನಸ್ಥಿತಿ ಅರ್ಥವಿಲ್ಲದ್ದು ಎನ್ನುವುದು ಅರ್ಥವಾಗುತ್ತದೆ.

ಮೊದಲಿಗಿಂತ ಹೆಚ್ಚು ಸಂಯಮ ಸ್ಥಿತಿಯಲ್ಲಿರುವ ಅವನಿಗೆ ಅದೊಂದು ದಿನ ಮಗಳು ಲೆನಾ ಭೇಟಿಯಾಗುತ್ತಾಳೆ. ತಾನು ಪ್ರೀತಿಸುತ್ತಿರುವವನು ಯೋಗ್ಯನೆಂದು ಹೇಳುವುದರ ಜೊತೆಗೆ ತಾನೀಗ ಗರ್ಭಿಣಿ ಎಂದು ಕೂಡ ತಿಳಿಸುತ್ತಾಳೆ. ಸೆರ್ಗಿಗೆ ಬೇರೆ ರೀತಿಯ ಪ್ರಪಂಚವೇ ಎದುರಾದ ಹಾಗೆ ಭಾಸವಾಗುತ್ತದೆ.

ಚಿತ್ರದಲ್ಲಿ ನಿರ್ದೇಶಕ ಅಲೆಕ್ಸಿ ಪೋಪೋಗ್ರೆಸ್ಕಿ ಅತ್ಯಂತ ವಸ್ತುನಿಷ್ಠವಾಗಿ, ಪ್ರಾಮಾಣಿಕವಾಗಿ ಸಮಕಾಲೀನ ರಷ್ಯಾದ ಸ್ಥಿತಿಯನ್ನು ತೆರೆದಿಟ್ಟಿರುವುದು ಕಾಣುತ್ತದೆ. ಚಿತ್ರ ಸೆರ್ಗಿಯ ದೃಷ್ಟಿಕೋನದಲ್ಲಿ ನಿರೂಪಿತವಾಗಿದೆ. ಅವನ ಅಭಿನಯ ಅತ್ಯಂತ ಸಮರ್ಥನೀಯ. ಎಲ್ಲಕ್ಕಿಂತ ಹೆಚ್ಚಾಗಿ ಅಭಿನಯದಲ್ಲಿ ಮುಖದ ಸ್ನಾಯುಗಳಿಗಿಂತ ಪರಿಣಾಮಕಾರಿಯಾಗಿ ಅವನ ಕಣ್ಣುಗಳು ಕೆಲಸ ಮಾಡುತ್ತವೆ. ಯಾವ ಬಗೆಯ ಉತ್ಪ್ರೇಕ್ಷೆ ಇಲ್ಲದ ಅವನ ನಿಯಂತ್ರಿತ ಅಭಿನಯ ಯಾರಿಗಾದರೂ ಪ್ರಿಯವಾಗುತ್ತದೆ. ಪ್ರಧಾನವಾಗಿ ಕಾಣುವ ಈ ಅಂಶವು ಚಿತ್ರ ಯಶಸ್ವಿಯಾಗಲು ಕಾರಣ.