ಹೊಸ ತಲೆಮಾರಿನವರೇ ಇನ್ನೂ ಗೊಂದಲದಲ್ಲಿರುವಾಗ ಹಿಂದಿನ ತಲೆಮಾರಿನವರೇ ಈ ರೀತಿಯ ಮನೋಧರ್ಮ ತೋರುವುದು, ಹಾಗೆ ತೋರುವ ಮುನ್ನ ಮನುಷ್ಯ ಸಹಜವಾದ ಎಲ್ಲ ಗೊಂದಲ, ಹಿಂಜರಿಕೆಗಳನ್ನು ಅನುಭವಿಸುವುದನ್ನು ಕೂಡ ಕತೆ ತೆರೆದು ತೋರಿಸುತ್ತದೆ. ಈ ಗೊಂದಲ, ಹಿಂಜರಿಕೆಗಳನ್ನು ಹೇಳದೆ ಹೋಗಿದ್ದರೆ ಕತೆ ಕೇವಲ ಆಶಯಪ್ರಧಾನವಾಗಿರುತಿತ್ತು. ಯಾರದೋ, ಯಾವುದೋ ಕತೆಯೆಂದು ಪ್ರಾರಂಭವಾಗಿ, ಇನ್ಯಾವುದೋ, ಯಾರದೋ ಕತೆಯಾಗುವುದು. ಕೊನೆಗೆ ಎಲ್ಲರ ಕತೆಯೂ ಒಂದೇ ಆಗಿರುವುದು- ಈ ಮಾದರಿಯನ್ನು ಮತ್ತೆ ಮತ್ತೆ ಆನಂದ್ ಎಲ್ಲ ಕತೆಗಳಲ್ಲೂ ಬಳಸುತ್ತಾರೆ.
ಆನಂದ್ ಗೋಪಾಲ್ ಹೊಸ ಕಥಾಸಂಕಲನ “ಆಟಗಾಯಿ”ಗೆ ಕೆ. ಸತ್ಯನಾರಾಯಣ ಬರೆದ ಮುನ್ನುಡಿ
ಆನಂದ್ ಗೋಪಾಲ್ ರಂತಹ ಪ್ರತಿಭಾವಂತ ಕತೆಗಾರರ ಮೊದಲ ಕಥಾ ಸಂಕಲನಕ್ಕೆ ಮುನ್ನುಡಿ ಬರೆಯುವಂತಹ ಸಾಹಿತ್ಯ ಲೋಕದ ಕೇಂದ್ರ ಅಥವಾ ಪ್ರಭಾವಿ ಸ್ಥಾನದಲ್ಲಿ ನಾನಿಲ್ಲ. ಇದು ಆನಂದರಿಗೆ ಖಂಡಿತ ಗೊತ್ತಿರುತ್ತದೆ. ಆನಂದ್ ನನ್ನ ಒಟ್ಟು ಸಾಹಿತ್ಯದ ಬಗ್ಗೆ ಸಂಶೋಧನೆ ಮಾಡಿ ಮೈಸೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪಡೆದವರು. ೧೯೭೨-೭೪ ರಲ್ಲಿ ಮಾನಸ ಗಂಗೋತ್ರಿಯಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ನನಗೂ ಆ ಕಾಲಕ್ಕೆ ಡಾಕ್ಟರೇಟ್ ಪಡೆಯುವ, ಅರ್ಥಶಾಸ್ತ್ರಜ್ಞನಾಗುವ ಆಸೆ ಇತ್ತು. ಕೌಟುಂಬಿಕ ಹಿನ್ನೆಲೆ, ಔದ್ಯೋಗಿಕ ವಾತಾವರಣ ಈ ಆಸೆಯ ಪರವಾಗಿರಲಿಲ್ಲ. ಆದರೆ ಈಗ ನನ್ನ ಬರವಣಿಗೆ ಕುರಿತು ಆನಂದ್ ನಾನು ಓದಿದ ವಿಶ್ವವಿದ್ಯಾನಿಲಯದಿಂದಲೇ ಡಾಕ್ಟರೇಟ್ ಪಡೆದಿದ್ದಾರೆ. ಇದು ನನಗೆ ಸಂತೋಷದ ಮತ್ತು ಹೆಮ್ಮೆಯ ಸಂಗತಿ. ಇದಕ್ಕೆ ಕಾರಣ ಕೇವಲ ವೈಯಕ್ತಿಕವಲ್ಲ. ಆನಂದರಲ್ಲದೆ ಇನ್ನೂ ಮೂರು-ನಾಲ್ಕು ಸಂಶೋಧಕರು ಎಂ.ಫಿಲ್ ಸ್ತರದ ಸಂಶೋಧನಾ ಪ್ರಬಂಧಗಳನ್ನು ನನ್ನ ಸಾಹಿತ್ಯದ ಬಗ್ಗೆ ರಚಿಸಿದ್ದಾರೆ. ಇದೆಲ್ಲವಕ್ಕೂ ಹೋಲಿಸಿದರೆ ಆನಂದರ ಪ್ರಬಂಧ ಗುಣಮಟ್ಟ, ಒಳನೋಟ, ಬದ್ಧತೆಗಳ ದೃಷ್ಟಿಯಿಂದ ಉತ್ತಮವಾದದ್ದು.
ಯಾವುದೇ, ಯಾರದೇ ಪ್ರಭಾವ, ಶಿಫಾರಸ್ಸು ಇಲ್ಲದೆ ಆನಂದ್ ಕಥನ ಪ್ರಕಾರದ ಬಗ್ಗೆ ತಮಗಿರುವ ಕುತೂಹಲ ಕಾಳಜಿಯಿಂದಾಗಿಯೆ ನನ್ನ ಕಥನ ಸಾಹಿತ್ಯವನ್ನು ಸಂಶೋಧನೆಗೆ ಆಯ್ಕೆ ಮಾಡಿಕೊಂಡಿದ್ದರು.
ಕತೆ, ಕಾದಂಬರಿ, ಕಿರುಗತೆ, ಪ್ರಬಂಧ,ಪ್ರವಾಸ ಸಾಹಿತ್ಯ, ಆತ್ಮಚರಿತ್ರೆ ಎಲ್ಲವನ್ನೂ ಕೂಡ ಕಥನವೆಂದೇ ಪರಿಗಣಿಸಿ ಸಂಶೋಧನೆಯ ವ್ಯಾಪ್ತಿಗೆ ತಂದದ್ದು ನನಗೆ ಖುಷಿಯಾಯಿತು.
ಸಾಮಾನ್ಯವಾಗಿ ವಿಮರ್ಶೆ, ಸಮೀಕ್ಷೆ ಬರೆಯುವವರು ಕತೆಯೊಳಗಿನ ಅನುಭವ, ಆಶಯದ ಬಗ್ಗೆಯೇ ಹೆಚ್ಚಾಗಿ ಬರೆದು, ಪ್ರಕಾರ ಮೀಮಾಂಸೆಯ ಬಗ್ಗೆ ತಮಗೆ ತಿಳುವಳಿಕೆಯಿದೆಯೆಂದು ಪ್ರದರ್ಶಿಸಲು ಕತೆಯ ಸ್ವರೂಪದ ಬಗ್ಗೆ ಕೂಡ ಪ್ರಾಸಂಗಿಕವಾಗಿ ಕೆಲವು ಮಾತುಗಳನ್ನು ಬರೆಯುತ್ತಾರೆ. ಕಥನ ಕ್ರಿಯೆಯ ಸ್ವರೂಪದ ಬಗ್ಗೆ ಆನಂದ್ ಗೆ ಇರುವ ಆಸಕ್ತಿ ಕೇವಲ ಸಂಶೋಧನೆಗೆ ಮಾತ್ರ ಸೀಮಿತವಾದುದಲ್ಲ. ಅವರ ಸೃಜನಶೀಲ ಬರವಣಿಗೆಗೂ ಅದು ಹಬ್ಬಿಕೊಂಡಿದೆ. ಕಥನ ಪ್ರಕಾರದ ಬಗ್ಗೆ ಅವರಿಗಿರುವ ಆಸಕ್ತಿ, ಈ ಆಸಕ್ತಿಯಿಂದ ಮಾಡಿದ ಪ್ರಯೋಗಶೀಲತೆಯೇ ಇವರ ಸಂಕಲನವನ್ನು ಈಗ ದಿನವೂ ಹೊರಬರುತ್ತಿರುವ ಕತೆ-ಕಾದಂಬರಿಗಳ ಪ್ರವಾಹದಿಂದ ಬೇರ್ಪಡಿಸುತ್ತದೆ.
ಆನಂದರ ಕತೆಗಳ ಬಗ್ಗೆ ಒಟ್ಟು ಮಾತುಗಳನ್ನು ಹೇಳಿ ನಂತರ ಕೆಲವು ಕತೆಗಳನ್ನು ವಿಶ್ಲೇಷಿಸುವುದು ಉಚಿತವಾದ ಕ್ರಮವಾಗುತ್ತದೆ ಎಂಬುದು ನನ್ನ ನಂಬಿಕೆ.
( ೧) ಲೇಖಕರಿಗೆ ಬದುಕಿನ ನಾಡಿಮಿಡಿತ ಚೆನ್ನಾಗಿ ಗೊತ್ತಿದೆ. ಈ ತಿಳಿವಳಿಕೆ ಕೇವಲ ಬೌದ್ಧಿಕವಾದದ್ದಲ್ಲ. ಒಳನೋಟ ಮತ್ತು ಅಂತಃಸ್ಫೂರ್ತಿಯ ನೆಲೆಗಳಲ್ಲಿ ಇವರ ಸೃಜನಶೀಲತೆ ಹೆಚ್ಚು ಕ್ರಿಯಾಶೀಲವಾಗಿದೆ.
(೨) ಪ್ರತಿನಿತ್ಯವೂ ಪ್ರತಿಕ್ಷಣವೂ ಜಗತ್ತು ಬದಲಾಯಿಸುತ್ತಿರುತ್ತದೆ. ಈ ಬದಲಾವಣೆಯನ್ನು ಗ್ರಹಿಸುವುದಕ್ಕೆ, ಅಭಿವ್ಯಕ್ತಿಗೊಳಿಸುವುದಕ್ಕೆ ಯಾವುದೇ ಸಿದ್ಧಮಾದರಿಗಳಿಲ್ಲ. ಹಾಗಾಗಿ ತೆರೆದ ಮನಸ್ಸಿನಿಂದ ಹೊರಡುವುದೇ ಬರಹಗಾರನಿಗಿರುವ ಶ್ರೀರಕ್ಷೆ. ತೆರೆದ ಮನಸ್ಸಿನಿಂದ ಹೊರಡುವುದೆಂದರೆ, ನೋಡುವುದು; ಹೊರಜಗತ್ತನ್ನು ಮಾತ್ರ ನೋಡುವುದಲ್ಲ; ತನ್ನನ್ನು ತಾನೆ ಪ್ರಶ್ನಿಸಿಕೊಳ್ಳುವುದು. ಯಾವುದೇ ನಿಲುವು, ವಿಚಾರಗಳಿಗೆ ಜಡವಾಗಿ ಅಂಟಿಕೊಳ್ಳದೆ ಇರುವುದು. ಆನಂದರ ಈ ಸ್ವಭಾವ ಕತೆಯೊಳಗೆ ಇರುವ ಚಲನಶೀಲತೆಯಲ್ಲಿ, ಕತೆ- ಪಾತ್ರಗಳು ಬೇರೆ ಬೇರೆ ದಿಕ್ಕಿಗೆ ಹೊರಳಿಕೊಳ್ಳುತ್ತಲೇ ಇರುವುದರಲ್ಲಿ ಓದುಗರ ಅನುಭವಕ್ಕೆ ಬರುತ್ತದೆ. ಮನುಷ್ಯರ ಬಗ್ಗೆ, ವಿಚಾರಗಳ ಬಗ್ಗೆ ‘ಇದಮಿತ್ಥಂ’ ಎಂಬ ನಿಲುವು ಇವರದಲ್ಲ.
(೩) ಸಣ್ಣ ಕತೆಗಳನ್ನು ಬರೆಯುವವರು ಸಾಮಾನ್ಯವಾಗಿ ಕೇಂದ್ರ ಅಥವಾ Focus ಗೆ ಪ್ರಯತ್ನಿಸುತ್ತಾರೆ. ಆನಂದರದು ವಿಸ್ತಾರವನ್ನು ಹರಿಬಿಟ್ಟು, ವಿಸ್ತಾರದ ನೆಲೆ ಸ್ಥಾಪಿಸಿ ನಂತರ Focus ನೀಡುವ ಕ್ರಮ. ಹಾಗಾಗಿಯೇ ಒಂದು ಕತೆ, ಒಂದು ಪಾತ್ರ ಇನ್ನೊಂದು ಕತೆಗೆ, ಉಪಕತೆಗೆ ಅಥವಾ ಅನುಭವದ ಬೇರೆ ಸ್ತರಗಳಿಗೆ ಹೊರಡುವುದು; ಕತೆಗಳ ಪರಸ್ಪರ ನೋಡುವಿಕೆ ಕೂಡ ಕತೆಯ ಚೌಕಟ್ಟಿನೊಳಗೇ ನಡೆಯುತ್ತದೆ. ಇದರಿಂದಾಗಿ ಕೆಲವು ತೊಡಕುಗಳು ಆಗುತ್ತವೆ. ಪಾತ್ರ, ಘಟನೆಗಳು ಇಡಿಕಿರಿದು, ಎಲ್ಲ ಎಳೆಗಳನ್ನು ಜೋಡಿಸಿಕೊಳ್ಳುವುದು ಓದುಗರಿಗೆ ಕಷ್ಟವಾಗಬಹುದು ಅಥವಾ ಇಷ್ಟೆಲ್ಲಾ ಎಳೆಗಳು ಒಂದೇ ಕತೆಯ ವ್ಯಾಪ್ತಿಗೆ ಅನಗತ್ಯವಾಗಿರಬಹುದು. ‘ರಂಕುರಾಟ್ನ’, ‘ವ್ರಣ’ ಕತೆಗಳ ವಿನ್ಯಾಸವನ್ನು ಈ ಮಾತುಗಳ ಹಿನ್ನೆಲೆಯಲ್ಲಿ ನೋಡಬೇಕೆನೋ!
(೪) ಬದುಕನ್ನು ಚಲನಶೀಲತೆಯಲ್ಲಿ ಗಮನಿಸುವುದರಿಂದ ಆನಂದರ ಕತೆಗಳನ್ನು ಒಂದೇ ಹಣೆಪಟ್ಟಿಗೆ ಗಂಟು ಹಾಕುವುದು ಕಷ್ಟ. ಗ್ರಾಮ, ಸಣ್ಣ ಪಟ್ಟಣ, ಮಹಾನಗರ, ಬೇರೆ ಬೇರೆ ಜಾತಿಗಳವರ ಅನುಭವ ನೋಡುವಿಕೆ ಎಲ್ಲವೂ ಇವರ ಮನಸ್ಸಿನ ಪ್ರಾಂತ್ಯದಲ್ಲಿದೆ. ಹೀಗಾಗಿ ಮುಂದೆ ಇವರು ನೀಳ್ಗತೆ, ಕಾದಂಬರಿ ರಚನೆಯ ಕಡೆ ಹೊರಳಿಕೊಳ್ಳುವ ಸಾಧ್ಯತೆಯ ಸೂಚನೆಗಳಾಗಿಯೂ ಈ ಕತೆಗಳನ್ನು ಗಮನಿಸಬಹುದು.
(೫) ಬದಲಾವಣೆಯ ಒತ್ತಡಕ್ಕೆ ಒಳಗಾಗುತ್ತಿರುವ ದಾಂಪತ್ಯ ಪ್ರಪಂಚ, ಗಂಡು – ಹೆಣ್ಣಿನ ಸಂಬಂಧದ ಸ್ವರೂಪದ ವಿಶ್ಲೇಷಣೆ ಇವರ ಕತೆಗಳಲ್ಲಿ ಮತ್ತೆ ಮತ್ತೆ ಎದುರಾಗುತ್ತದೆ. ಈ ಬದಲಾವಣೆಗಳಿಂದ ಹೆಂಗಸು ಕಂಗಾಲಾಗುವುದರ ಜೊತೆಗೆ ಬಿಡುಗಡೆಯನ್ನು ಕೂಡ ಪಡೆಯುತ್ತಿರುತ್ತಾಳೆ. ಪಿತೃಪ್ರಧಾನ ವ್ಯವಸ್ಥೆಯಲ್ಲಿ ಗಂಡಿಗೆ ಹೆಚ್ಚು ಅನುಕೂಲ, ಅವಕಾಶಗಳಿರುವುದು ಸಹಜವಾದರೂ ಅವನು ಕೂಡ ತನ್ನ ಪ್ರೀತಿಸುವ ಶಕ್ತಿಯನ್ನು ಕಳೆದುಕೊಳ್ಳುತ್ತಾನೆ. ಸ್ವಾತಂತ್ರ್ಯವನ್ನು, ಬಿಡುಗಡೆಯನ್ನು ಪಡೆದ ಹೆಣ್ಣು ನೀಡುವ ಪ್ರೀತಿಯನ್ನು ಗಂಡು ಸ್ವೀಕರಿಸಿಸುವುದರಲ್ಲೂ ಇರುವ ತೊಡಕುಗಳನ್ನು ಕೂಡ ಆನಂದರ ಕತೆಗಳು ಗುರುತಿಸುತ್ತವೆ.
(೬) ಸಮಕಾಲೀನ ಬದುಕಿನಲ್ಲಿ ಅಂತರ್ಗತವಾಗಿರುವ ಹಿಂಸೆಯ ಬೇರೆ ಬೇರೆ ಸ್ತರಗಳನ್ನು ಇವರ ಕತೆಗಳು ಗಮನಿಸುತ್ತವೆ. ಹೀಗೆಂದು ಎಲ್ಲೂ ಹೇಳದೆ ಗಮನಿಸುವುದು ಇವರ ಕತೆಗಳ ವೈಶಿಷ್ಟ್ಯ. ಇದನ್ನು ಕತೆಯ ಶಾರೀರದೊಳಗೆ ಹೇಗೆ ನಿರ್ವಹಿಸುತ್ತಾರೆ, ದೃಷ್ಟಿಕೋನ ಯಾವ ಸ್ವರೂಪದ್ದು ಎಂಬುದರ ಬಗ್ಗೆ ಇನ್ನೂ ಖಚಿತವಾಗಬೇಕಾಗಿದೆ. ‘ಬೇಬಿ’ ಕತೆಯಲ್ಲಿ ಕತೆಗಾರರು ಹಿನ್ನೆಲೆಗೆ ಸರಿದು ಸುಮ್ಮನೆ ಕೈ ಚೆಲ್ಲಿದ್ದಾರೆ ಅನಿಸುತ್ತದೆ. ಕತೆಗಾರ ಬಹುಪಾಲು ಕತೆಗಳಲ್ಲಿ ವೀಕ್ಷಕನ ಪಾತ್ರವನ್ನು ಮಾತ್ರ ಹೆಚ್ಚಾಗಿ ನಿರ್ವಹಿಸುವುದು ಕೂಡ ಕತೆಗಳಲ್ಲಿ ತೀವ್ರತೆಯನ್ನು ಕಡಿಮೆ ಮಾಡಬಹುದು. ವಸ್ತುನಿಷ್ಠತೆ, ಸಂಯಮ,ತೀವ್ರತೆ ಮತ್ತು ಸ್ಪಷ್ಟತೆಗಳ ನಡುವೆ ಕತೆಗಾರ ಆಯ್ಕೆ ಮಾಡಲೇಬೇಕಾಗುತ್ತದೆ.
ಕಥನ ಕ್ರಿಯೆಯ ಸ್ವರೂಪದ ಬಗ್ಗೆ ಆನಂದ್ ಗೆ ಇರುವ ಆಸಕ್ತಿ ಕೇವಲ ಸಂಶೋಧನೆಗೆ ಮಾತ್ರ ಸೀಮಿತವಾದುದಲ್ಲ. ಅವರ ಸೃಜನಶೀಲ ಬರವಣಿಗೆಗೂ ಅದು ಹಬ್ಬಿಕೊಂಡಿದೆ. ಕಥನ ಪ್ರಕಾರದ ಬಗ್ಗೆ ಅವರಿಗಿರುವ ಆಸಕ್ತಿ, ಈ ಆಸಕ್ತಿಯಿಂದ ಮಾಡಿದ ಪ್ರಯೋಗಶೀಲತೆಯೇ ಇವರ ಸಂಕಲನವನ್ನು ಈಗ ದಿನವೂ ಹೊರಬರುತ್ತಿರುವ ಕತೆ-ಕಾದಂಬರಿಗಳ ಪ್ರವಾಹದಿಂದ ಬೇರ್ಪಡಿಸುತ್ತದೆ.
‘ರೂಪರೂಪಗಳನು ದಾಟಿ’ – ಆನಂದರ ಕತೆಗಾರಿಕೆಯ ಬಗ್ಗೆ ಹೇಳಬಹುದಾದ್ದನ್ನೆಲ್ಲ ಒಳಗೊಂಡಿದೆ. ಎರಡು ಮೂರು ತಲೆಮಾರುಗಳ ಅಂತರದಲ್ಲಿ ಆಗುವ ಬದಲಾವಣೆಯ ದಿಕ್ಕು, ಜಾತಿ ಸಡಿಲವಾಗುವಿಕೆ ಮತ್ತು ಪಾತ್ರಗಳಲ್ಲಿರುವ ಆತ್ಮಪರೀಕ್ಷೆಯ ಗುಣ, ಕತೆಯನ್ನು ನಿರೂಪಿಸುವ ತಂತ್ರ ಕೂಡ ಚೆನ್ನಾಗಿದೆ. ನಾಟಕವೊಂದನ್ನು ನೋಡಲು ಹೋದಾಗ, ನಿರೂಪಕ ತನ್ನ ಮನಸ್ಸಿನಲ್ಲಿ ಆಗುತ್ತಿರುವ ವಿಪ್ಲವವನ್ನು ಅಲ್ಲಿ ರಂಗಭೂಮಿಯ ಮೇಲೆ ನೋಡುತ್ತಾನೆ (ಅಂತರಂಗದ ರಂಗಭೂಮಿ).
ಕತೆಯಲ್ಲಿ ಎರಡು ಎಳೆಗಳಿವೆ. ಎರಡು ಎಳೆಗಳಲ್ಲೂ ಹಿಂದಿನ ತಲೆಮಾರಿಗೆ ಸೇರಿದವರೇ ಸಕಾರಾತ್ಮಕವಾದ, ಜವಾಬ್ದಾರಿಯುತವಾದ ನಿಲುವುಗಳನ್ನು ತಳೆಯುತ್ತಾರೆ. (ಬಿಟ್ಟು ಹೋಗಿದ್ದ ಹೆಂಡತಿಯನ್ನು ಸ್ವೀಕರಿಸುವುದು, ಜಾತಿಯಿಂದ ಹೊರಗೆ ಮದುವೆಯಾಗಿರುವ ಮಗಳ ಸಂಸಾರದ ಬೆಳವಣಿಗೆಯನ್ನು ಒಪ್ಪಿಕೊಳ್ಳುವುದು). ಹೊಸ ತಲೆಮಾರಿನವರೇ ಇನ್ನೂ ಗೊಂದಲದಲ್ಲಿರುವಾಗ ಹಿಂದಿನ ತಲೆಮಾರಿನವರೇ ಈ ರೀತಿಯ ಮನೋಧರ್ಮ ತೋರುವುದು, ಹಾಗೆ ತೋರುವ ಮುನ್ನ ಮನುಷ್ಯ ಸಹಜವಾದ ಎಲ್ಲ ಗೊಂದಲ, ಹಿಂಜರಿಕೆಗಳನ್ನು ಅನುಭವಿಸುವುದನ್ನು ಕೂಡ ಕತೆ ತೆರೆದು ತೋರಿಸುತ್ತದೆ. ಈ ಗೊಂದಲ, ಹಿಂಜರಿಕೆಗಳನ್ನು ಹೇಳದೆ ಹೋಗಿದ್ದರೆ ಕತೆ ಕೇವಲ ಆಶಯಪ್ರಧಾನವಾಗಿರುತಿತ್ತು. ಯಾರದೋ, ಯಾವುದೋ ಕತೆಯೆಂದು ಪ್ರಾರಂಭವಾಗಿ, ಇನ್ಯಾವುದೋ, ಯಾರದೋ ಕತೆಯಾಗುವುದು. ಕೊನೆಗೆ ಎಲ್ಲರ ಕತೆಯೂ ಒಂದೇ ಆಗಿರುವುದು- ಈ ಮಾದರಿಯನ್ನು ಮತ್ತೆ ಮತ್ತೆ ಆನಂದ್ ಎಲ್ಲ ಕತೆಗಳಲ್ಲೂ ಬಳಸುತ್ತಾರೆ. ‘ಒಳತೋಟಿ’ – ಈ ಕತೆ ನೇರವಾಗಿ ಹೇಳುತ್ತದೆ. ಆದರೆ ಜೀವನ ನಿಷ್ಠುರವಾಗಿರುತ್ತದೆ ಎಂಬುದು ಕೂಡ ಕತೆಗಾರರಿಗೆ ಗೊತ್ತಿದೆ. ‘ಧರೆಗಿಳಿದ ನಕ್ಷತ್ರ’ದ ಸೌಭಾಗ್ಯ ಟೀಚರ್ ಬದುಕಿನಲ್ಲಿ ಎಲ್ಲ ಸಕಾರಾತ್ಮಕವಾದ ಆಯ್ಕೆಗಳನ್ನು ಮಾಡಿದ್ದರೂ ಬದುಕು ವಿನಾಕಾರಣ ಅವಳಿಗೆ ಕೈ ಕೊಡುತ್ತದೆ. ಇದೆಲ್ಲ ಬೇರೆ ಬೇರೆ ಕತೆಗಳೆಂದು ಓದುವ ಬದಲು ಬದುಕಿನ ಎಲ್ಲ ಸಂದರ್ಭ, ಸಾಧ್ಯತೆಗಳು ಕತೆಗಾರನಿಗೆ ತಿಳಿದಿದೆ ಎಂಬ ರೀತಿಯಲ್ಲಿ ಗಮನಿಸುವುದೇ ಹೆಚ್ಚು ಸೂಕ್ತ. ಆದರೆ ‘ಬೇಬಿ’ ಕತೆಯಲ್ಲಿ ಪಾತ್ರಗಳು ಮಾತ್ರವಲ್ಲ, ಕತೆಗಾರ ಕೂಡ ಸಂಕೀರ್ಣತೆಯನ್ನು ಎದುರಿಸಲು ಹಿಂಜರಿಯುತ್ತಾನೆ. ನಿರ್ವಹಣೆಗಿಂತ ಹೆಚ್ಚಾಗಿ ಕೈ ಚೆಲ್ಲುವ ಪ್ರವೃತ್ತಿಯೇ ಮುನ್ನೆಲೆಗೆ ಬರುತ್ತದೆ. ಹೀಗೆ ಬದುಕಿನ ಎಲ್ಲ ಸ್ತರಗಳನ್ನು ಗಮನಿಸುವ ಪ್ರಾಮಾಣಿಕತೆ ಕತೆಗಾರನಿಗಿದೆ ಎನ್ನುವುದು ಮುಖ್ಯ. ತಾನು ಒಂದು ನಿಲುವಿನ, ಸಾಧ್ಯತೆಯ ಪರ ಎಂದು ತೋರಿಸಿಕೊಳ್ಳುವ ಲೇಖಕ, ತನ್ನನ್ನು ತೆರೆದುಕೊಳ್ಳುವುದಿಲ್ಲ. ವಾಸ್ತವದ ಸಾಧ್ಯತೆಗಳನ್ನು ಕೂಡ ತೆರೆದು ತೋರಿಸುವುದಿಲ್ಲ.
‘ಉಸುಬು’ ಕತೆಯನ್ನು ಗಮನವಿಟ್ಟು ಓದಬೇಕು. ಇಲ್ಲಿ ಹಲವು ಕತೆಗಳಿವೆ. ಹಲವು ಪಾತ್ರಗಳಿವೆ. ಸ್ವಾರಸ್ಯವೆಂದರೆ ಯಾರದೋ ಕತೆ ಇನ್ಯಾರದೋ ಕತೆ ಬೇಕಾದರೂ ಆಗಬಹುದು ಅಥವಾ ಕತೆಯ ಒಂದು ಭಾಗ ಒಂದು ಪಾತ್ರದಲ್ಲಿದ್ದು; ಇನ್ನೊಂದು ಭಾಗ ಮತ್ತೊಬ್ಬರಲ್ಲಿ ಮುಂದುವರಿಯಬಹುದು. ಒಂದು ಕಾಲಮಾನದಲ್ಲಿ ಬದುಕುವವರ ಎಲ್ಲರ ಕತೆಯೂ ಒಂದೇ ಆಗಿರುತ್ತದೆ ಅಥವಾ ಒಂದೇ ಕತೆಯ ಬೇರೆ ಬೇರೆ ಭಾಗಗಳು ಬೇರೆ ಬೇರೆ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತದೆ. ಜೀವನದ ಗತಿ ಇರುವುದು ಹೀಗೆಯೇ! ಇಂತಹ ಒಂದು ಮಹತ್ವದ ಗುಟ್ಟನ್ನು ಪ್ರಥಮ ಸಂಕಲನದಲ್ಲೇ, ಮಧ್ಯವಯಸ್ಸನ್ನು ತಲುಪುವ ಮುಂಚೆಯೇ ಕಂಡುಕೊಂಡ ಆನಂದರಿಗೆ ಅಭಿನಂದನೆಗಳು. ಈ ಕತೆಯಲ್ಲಿರುವ ಎಲ್ಲ ಪಾತ್ರಗಳು ಒಟ್ಟಿಗೆ ಒಂದು ಮುಸ್ಸಂಜೆ ನಿಮ್ಮ ಮನೆಗೆ ಬಂದರೆ ಏನು ಮಾಡುತ್ತೀರಿ?
ಏಕೋ ಈ ಕತೆಗಾರರಿಗೆ ದಾಂಪತ್ಯ-ಕೌಟುಂಬಿಕ ಜೀವನದ ಸಫಲತೆಯ ಬಗ್ಗೆ ಅಷ್ಟು ವಿಶ್ವಾಸವಿಲ್ಲ. ಇದು ಅವರ ಗ್ರಹಿಕೆಯೋ, ಇಲ್ಲ ನಮ್ಮ ಕಾಲದಲ್ಲಿ ದಾಂಪತ್ಯ-ಕೌಟುಂಬಿಕ ಸಂಸ್ಥೆಗಳು ಶಿಥಿಲಗೊಂಡು ಆನಂದರು ಸೂಚಿಸಿತ್ತಿರುವ ಹಾದಿಯನ್ನು ಹಿಡಿದಿವಿಯೋ?
ನನಗಿಂತ ಮೂರು ನಾಲ್ಕು ತಲೆಮಾರು ಕಿರಿಯರಾದ ಕತೆಗಾರರ ಗ್ರಹಿಕೆಯೇ ಸರಿಯಿರಬೇಕು; ಸಮಕಾಲೀನವಾಗಿರಬೇಕು. ಇಲ್ಲ ನನ್ನ ಗ್ರಹಿಕೆ ಕೂಡ ಅದೇ ಆಗಿದ್ದು; ಅದನ್ನು ಒಪ್ಪಲು ನನಗೆ ಹಿಂಜರಿಕೆಯಿರಬೇಕು. ಒಂದು ಆಶಯವಾಗಿ, ಸಾಧ್ಯತೆಯಾಗಿ, ಕನಸಾಗಿ ಕೂಡ ದಾಂಪತ್ಯ-ಕೌಟುಂಬಿಕ ಜೀವನದ ಸಫಲತೆ ನಮಗೆ ಕಾಣಲಾರದೇ? ಈ ವಿನ್ಯಾಸ ಇವರ ಬಹುಪಾಲು ಕತೆಗಳಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ ‘ದೀಪದ ಬುಡ’ ಕತೆಯಲ್ಲಿ ಹೊಸ ತಲೆಮಾರಿನ ಈ ಹೆಣ್ಣುಮಕ್ಕಳು ಇದನ್ನೆಲ್ಲ ಅರ್ಥಪೂರ್ಣವಾಗಿ ನಿರ್ವಹಿಸಬಲ್ಲರು ಎಂಬ ಸೂಚನೆಯಿದೆ. ‘ಗಣ್ಯಶ್ರೀ’ ಯಂತಹ ಹೆಣ್ಣು ಮಕ್ಕಳು ಎಲ್ಲರ ಮನೆಯಲ್ಲೂ ಇರಲಿ ಎಂದು ಆಸೆಯಾಗುತ್ತದೆ.
‘ಛದ್ಮ’ ಕತೆ, ಕತೆಯನ್ನು ಮೀರಿದ ಒಂದು ಪ್ರಶ್ನೆಯನ್ನು ಎತ್ತಿಕೊಳ್ಳುತ್ತದೆ. ಕತೆ – ನಾವು ಕೇಳುವುದರಿಂದ ತಿಳಿಯುತ್ತದೋ,ಇಲ್ಲ ನೋಡುವುದರಿಂದ ತಿಳಿಯುತ್ತದೋ, ಇಲ್ಲ ನಮ್ಮ ನೋಟದಲ್ಲಿರುವ ಪಾರ್ಶ್ವದೃಷ್ಟಿಕೋನದಿಂದ ತಿಳಿಯುತ್ತದೋ? ಸರಿ, ನಾವು ನೋಡಿದ ನೋಟವಷ್ಟೇ ಕತೆ; ಅದು ಮಾತ್ರ ನಿಜವೆಂದು ಜಗತ್ತಿಗೆ ಒಪ್ಪಿಸಲು ನಾವೆಲ್ಲಾ ಯಾಕೆ ಹವಣಿಸುತ್ತೇವೆ! ಮನುಷ್ಯರಾಗಿ ನಾವೆಲ್ಲರೂ ಹೀಗೆಯೇ ಇರುವುದರಿಂದ ಕತೆಗಾರರಿಗೆ ಒಂದು ಅನಿವಾರ್ಯತೆ ಮೂಡುತ್ತದೆ. ನಿರ್ಮಮವಾಗಿರಲು ಅವನಿಗಿರುವುದು ಒಂದೇ ಹಾದಿ – ಹಲವು ದೃಷ್ಟಿಕೋನಗಳಿಂದ, ಹಲವು ನೆಲೆಗಳಿಂದ ಒಂದು ಅನುಭವವನ್ನು, ಒಬ್ಬ ಮನುಷ್ಯನನ್ನು ನೋಡುವುದು, ನೋಡುತ್ತಲೇ ಇರುವುದು.
ಕತೆಗಳ ಸಾರಾಂಶ ಹೇಳಿ ಮುನ್ನುಡಿ ಬರೆಯುವುದು ಸಾಮಾನ್ಯವಾದ ರೂಢಿ. ಇವರ ಕತೆಗಳಲ್ಲೂ ಸಾರಾಂಶವನ್ನು ಬಯಸುವ ಕತೆ, ಕತೆಯ ತಿರುವು ಎಲ್ಲ ಇದೆ. ಆದರೆ ಇವರ ಮುಖ್ಯ ಉದ್ದೇಶ ಕತೆ ಹೇಳುವುದಲ್ಲ. ಕತೆಯ ಮತ್ತು ಬದುಕಿನ ವಿನ್ಯಾಸಗಳ ಬಗ್ಗೆ ಓದುಗರನ್ನು ಒಪ್ಪಿಸುವುದು. ಇಂತಹ ಮಾದರಿಯ ಕತೆಗಳನ್ನು ಬರೆಯುತ್ತಿರುವವರು ಇವತ್ತು ವಿರಳ. ಆದರೆ ಇದು ಸುಲಭ ಯಶಸ್ಸಿನ ಜನಪ್ರಿಯ ಹಾದಿಯಲ್ಲ ಎಂಬುದನ್ನು ಹೇಳಬೇಕು.
ಸಾಮಾನ್ಯವಾಗಿ ಮೊದಲ ಒಂದೆರೆಡು ಸಂಕಲನಗಳಲ್ಲಿ ಒಂದೋ ಎರಡೋ ಕತೆಗಳು ಚೆನ್ನಾಗಿದ್ದು, ಉಳಿದ ಕತೆಗಳು ತಯಾರಿ, ಪೂರ್ವಭಾವಿ ಬರಹಗಳಂತೆ ಇರುತ್ತವೆ. ಈ ಸಂಕಲನದಲ್ಲಿ ಹಾಗಲ್ಲ. ಎರಡು ಮೂರು ಕತೆಗಳನ್ನು ಬಿಟ್ಟರೆ ಉಳಿದ ಎಲ್ಲ ಕತೆಗಳು ಒಂದೇ ಮಟ್ಟದವು. ಸಂಶೋಧನೆ – ವಿಮರ್ಶೆ ಬರೆದ ನಂತರ ಕತೆಗಳನ್ನು ಬರೆಯುತ್ತಿರುವುದರಿಂದ ಹೀಗಾಗಿರಬಹುದು. ದೃಷ್ಟಿಕೋನದಲ್ಲಿ ಒಂದು ಮಟ್ಟದ ಪ್ರಬುದ್ಧತೆ ತಲುಪುವ ತನಕ ಕಾದು ಬರವಣಿಗೆಗೆ ಹೊರಟಿರುವುದರಿಂದಲೂ ಹೀಗಾಗಿರಬಹುದು.
ಕಾರಣ ಏನೇ ಇರಲಿ ಲಾಭ ಮಾತ್ರ ಓದುಗನಿಗೇ.
ಕತೆ ಹೇಳುವುದಕ್ಕಿಂತ ಹೆಚ್ಚಿನ ಉದ್ದೇಶವನ್ನುಳ್ಳ ಆನಂದರ ಕಥಾಕ್ರಮಕ್ಕೆ ಅವರ ಜೊತೆ ಕತೆಗಾರರು, ಓದುಗರು ಕುಮ್ಮಕ್ಕು ಕೊಡುವರೆಂದು ಆಶಿಸುತ್ತೇನೆ.
(ಕೃತಿ: ಆಟಗಾಯಿ (ಕಥಾ ಸಂಕಲನ), ಲೇಖಕರು: ಆನಂದ್ ಗೋಪಾಲ್, ಪ್ರಕಾಶಕರು: ಸಂಕಥನ ಪುಸ್ತಕ. ಬೆಲೆ: 165/-)
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ