ಆಸೆಗಣ್ಣುಗಳಿಂದ ನೋಡುತ್ತಿರುವ ಹೆಣ್ಮಕ್ಕಳಿಗೂ ಗಂಡಸರ ಅಂಗಿಯನ್ನು ತೊಟ್ಟು ಬರುವುದಾದರೆ ಮಣ್ಣು ಹೊರುವ ಕೆಲಸ ನೀಡುವ ಆಮಿಷವೊಡ್ಡಲಾಯಿತು. ಏನಾದರಾಗಲಿ, ಕೈತುಂಬಾ ದುಡ್ಡು ಸಿಗುವುದಲ್ಲ ಎಂಬ ಆಸೆಯಿಂದ ಕೆಲವು ಹೆಣ್ಣು ಮಕ್ಕಳು ಮನೆಯವರ ಮಾತಿಗೆಲ್ಲ ತಲೆಕೆಡಿಸಿಕೊಳ್ಳದೇ ಅಣ್ಣಂದಿರ ಅಂಗಿಯನ್ನು ತಮ್ಮ ಲಂಗ ಬ್ಲೌಸಿನ ಮೇಲೆ ಹಾಕಿಕೊಂಡು ಸಿದ್ಧರಾಗಿಯೇಬಿಟ್ಟರು. ಹುಡುಗರು, ಹುಡುಗಿಯರೆಲ್ಲ ಒಟ್ಟೊಟ್ಟಿಗೆ ಮಾತನಾಡುತ್ತ, ಛೇಡಿಸುತ್ತ, ಹಾಡುತ್ತ, ತಮಾಷೆ ಮಾಡುತ್ತ ಕೆಲಸ ಮಾಡುವ ಹೊಸಪರಿ ಅವರಿಗೆಲ್ಲ ರೋಮಾಂಚಕ ಅನುಭವವಾಗಿತ್ತು.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ಹನ್ನೊಂದನೆಯ ಕಂತು ನಿಮ್ಮ ಓದಿಗೆ

ಊರ ಹಲಸಿನ ಮರಗಳೆಲ್ಲ ಬಯಲಾದ ಮೇಲೆ ಹೊಳೆಸಾಲು ಒಂದಿಷ್ಟು ಬರಡಾದಂತೆ ಕಾಣುತ್ತಿತ್ತು. ಮೇವೆಲ್ಲ ಬತ್ತಿಹೋಗುವ ಗಡಿಗಾಲದಲ್ಲಿ ಪ್ರತಿವರ್ಷದ ಅಭ್ಯಾಸದಂತೆ ಮರದಿಂದ ಹಣ್ಣಾಗಿ ಬೀಳುವ ಹಲಸನ್ನು ಹುಡುಕಿ ಹೋದ ದನಕರುಗಳು ನಿರಾಸೆಗೊಂಡು ಹಿಂದಿರುಗಿದವು. ಏನೊಂದು ಆಹಾರವೂ ಸಿಗದ ಕನ್ನೆ ತಿಂಗಳಿನಲ್ಲಿ ಹಲಸಿನ ಹಣ್ಣನ್ನು ಕಿತ್ತಾಡಿ ತಿನ್ನುವ ನಾಯಿಗಳು ಕುಯ್ಯೋ ಎನ್ನುತ್ತಾ ಹಸಿವಿನಿಂದ ನೆಲಕ್ಕೊರಗಿದವು. ಸುರಿಯುವ ಮಳೆಯ ನಡುವಲ್ಲಿ ಕೆಂಡದಲ್ಲಿ ಸುಟ್ಟ ಹಲಸಿನ ಬಿತ್ತ ತಿನ್ನುವ ಆಸೆಯ ನಾಲಿಗೆಗಳು ಬಾಯಿತುಂಬಾ ಹೊರಳಾಡಿದವು. ಇವೆಲ್ಲದರ ನಡುವೆ ಮರ ಖರೀದಿಸಲು ಬಂದ ಬಿಳಿಯಂಗಿಯವರೊಂದಿಗೆ ಒಂದಿಷ್ಟು ಹೊಸಮುಖಗಳು ಹೊಳೆಸಾಲಿನಲ್ಲಿ ಕಾಣಿಸತೊಡಗಿದವು.

ಅಂದು ನೀಲಿ ಶಾಲೆಯಿಂದ ಮನೆಗೆ ಮರಳುವಾಗ ಗದ್ದೆ ಬಯಲಿನ ತುಂಬೆಲ್ಲಾ ಈ ಹೊಸಮುಖಗಳು ನಿಂತು, ತಾವೇ ಕರೆತಂದಿದ್ದ ಜನರ ಕೈಗೊಂದಿಷ್ಟು ಅಳೆಯುವ ಟೇಪನ್ನು ಕೊಟ್ಟು ಅಳತೆ ಮಾಡಿಸುತ್ತಿದ್ದರು. ಓಡೋಡುತ್ತಾ ಮನೆಗೆ ಬಂದು ಅಮ್ಮನಲ್ಲಿ ವಿಚಾರಿಸಿದಾಗ ಅಮ್ಮ ಅವರೆಲ್ಲ ಹಂಚಿನ ಫಾಕ್ಟರಿಯ ಮಾಲೀಕರೆಂದು ತಿಳಿಸಿದಳು. ಹೊಳೆಸಾಲಿನಿಂದ ಮೂವತ್ತು ಕಿ. ಮೀ. ದೂರದಲ್ಲಿರುವ ಅರೆಪೇಟೆಯಂತಹ ಊರಿನಲ್ಲಿ ನಾಲ್ಕಾರು ಹಂಚಿನ ಫಾಕ್ಟರಿಗಳು ತಮ್ಮ ಚಿಮಣಿಯ ಮೂಲಕ ಹೊಗೆ ಸೂಸುವುದನ್ನು ನೀಲಿ ನೋಡಿದ್ದಳು. ಈ ಸಲದ ಪ್ರವಾಸಕ್ಕೆ ಅಲ್ಲಿಗೆ ಹೋಗಿ ಮಣ್ಣಿನಿಂದ ಹಂಚನ್ನು ತಯಾರಿಸುವುದನ್ನು ನೋಡಿ ಬರೋಣವೆಂದು ಗೌಡ ಮಾಸ್ತರ್ ಅವರೆಲ್ಲರಿಗೆ ಹೇಳಿದ್ದರು. ಜತೆಯಲ್ಲಿ ಅಲ್ಲೆಲ್ಲ ದೊಡ್ಡ, ದೊಡ್ಡ ಮೆಶೀನುಗಳು ಕೆಲಸ ಮಾಡುತ್ತಿರುವುದರಿಂದ ಹುಡುಗರೆಲ್ಲ ವಹಿಸಬೇಕಾದ ಮುಂಜಾಗ್ರತೆಯ ಬಗೆಗೂ ತಿಳಿಸಿದ್ದರು. ಎಲ್ಲಿಯಾದರೂ ಎಚ್ಚರ ತಪ್ಪಿದರೆ ನೀವೂ ಮೆಶೀನಿನೊಳಗೆ ಬಿದ್ದು ಹೊಗೆಯಾಗಿ ಹೊರಗೆ ಬರುತ್ತೀರಿ ಎಂದೂ ಹೆದರಿಸಿದ್ದರು. ಆದರೆ ಅಲ್ಲಿಗೆ ತಮ್ಮ ಊರಿನ ಗದ್ದೆಯ ಮಣ್ಣು ಹೋಗುವ ಕಾಲ ಬರುವುದೆಂದು ಅವಳಿಗೆ ತಿಳಿದಿರಲಿಲ್ಲ.

ಊರನಡುವಿನ ಗದ್ದೆಯನ್ನು ಸೀಳಿ ಹರಿಯುತ್ತದೆ ಹೊಳೆಸಾಲಿನ ಹೊಳೆ. ಮಳೆಗಾಲ ಕಳೆದು ಬೇಸಿಗೆ ಕಾಲಿಡುವಾಗಲೇ ಹೊಳೆಯು ಬಸವಳಿಯುತ್ತದೆ. ಹೊಳೆಯ ನೀರು ಗದ್ದೆಯ ಬೇಸಾಯಕ್ಕೆ ಆಧಾರವಾದ್ದರಿಂದ ನೀರನ್ನು ಹಿಡಿದಿಟ್ಟುಕೊಳ್ಳಲು ಹೊಳೆಗೆ ಕಟ್ಟ ಹಾಕುವುದು ಅನಿವಾರ್ಯ. ಆದರೆ ಆ ಕೆಲಸ ಸುಲಭದ್ದೇನೂ ಅಲ್ಲ. ನಿಗದಿಪಡಿಸಿದ ದಿನಕ್ಕಿಂತ ಮೊದಲೇ ಕಾಡಿನಿಂದ ಕುಕ್ಕುಸದ ಸೊಪ್ಪಿನ ರಾಶಿಯನ್ನು, ಒಂದಿಷ್ಟು ಮರಗಳ ಗೆಲ್ಲುಗಳನ್ನು ತಂದು ರಾಶಿಯೊಟ್ಟಿರಬೇಕು. ಕಟ್ಟು ಹಾಕುವ ದಿನ ಹೊಳೆಗೆ ಅಡ್ಡವಾಗಿ ಸೊಪ್ಪು ಮತ್ತು ಮರದ ಗೆಲ್ಲುಗಳನ್ನು ಜೋಡಿಸುತ್ತ ಅದರ ಮೇಲೆ ಮಣ್ಣಿನ ರಾಶಿಯನ್ನು ಹಾಕಿ ನೀರನ್ನು ಅಡ್ಡಗಟ್ಟಬೇಕು. ಹೆಚ್ಚಾದ ನೀರು ಜಾರಿಹೋಗುವಂತೆ ನಡುವೆ ಒಂದು ಕಿಂಡಿಯನ್ನು ಇಡಬೇಕು. ಕಿಂಡಿಯಲ್ಲಿ ನೀರು ಜಾರುತ್ತಿರುವಂತೆಯೇ ಹೊಳೆಗಡ್ಡವಾಗಿ ಒಂದೇ ದಿನದಲ್ಲಿ ತಡೆಯೊಂದು ನಿರ್ಮಾಣವಾಗಬೇಕು. ಸಂಗ್ರಹವಾದ ನೀರು ಗದ್ದೆಗಳಿಗೆ ಹರಿಯಲು ಮಾಡಿದ ಕಾಲುವೆಯನ್ನು ಸರಿಪಡಿಸಬೇಕು. ಕಟ್ಟದಲ್ಲಿ ನೀರು ತುಂಬಿ ಕಾಲುವೆಗುಂಟ ಹರಿದು ಮನೆಮನೆಯ ಗದ್ದೆಗಳಲ್ಲಿ ತುಂಬಿದ ದಿನ ಊರಿನ ಜನರೆಲ್ಲ ಪಾಯಸದೂಟ ಉಣ್ಣಬೇಕು. ವಾರ ಕಳೆದು ಹೊಳೆಸಾಲನ್ನು ನೋಡಿದರೆ ಎಲ್ಲೆಲ್ಲೂ ಹಸಿರುಕ್ಕಿ ಸ್ವರ್ಗ ಧರೆಗಿಳಿದಂತೆ ಭಾಸವಾಗುವುದು. ಹೀಗೆ ಹರಿವ ಹೊಳೆಗೆ ಅಲ್ಲಲ್ಲಿ ಕಟ್ಟು ಕಟ್ಟುತ್ತಾ, ಮೇಲಿನವರು ಕೆಳಗಿನವರಿಗೆ ಬೇಕಾದಷ್ಟು ನೀರು ಬಿಡುತ್ತಾ, ತಮ್ಮ ಗದ್ದೆಗಳಿಗೂ ನೀರನ್ನು ಹನಿಸುತ್ತಾ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿತ್ತಂತೆ. ಆದರೆ ಇತ್ತೀಚೆಗೆ ಹಾಗಿಲ್ಲ. ಹೊಳೆಗೆ ಅಡ್ಡಹಾಕುವಷ್ಟು ಸೊಪ್ಪನ್ನು, ಗೆಲ್ಲುಗಳನ್ನು ತರಲು ಹರೆಯದ ತುಡುಗು ಬುದ್ಧಿಗಳಿಗೆ ಮನಸ್ಸಿಲ್ಲ. ಕಟ್ಟು ಹಾಕುವ ದಿನ ಮೈಮುರಿದ ದುಡಿಯಲು ಬೇಸರ. ಹೆಚ್ಚು ಗದ್ದೆಯಿದ್ದವರು ಹೆಚ್ಚು ಜನ ಬರಬೇಕಲ್ಲ ಎಂಬ ಸಮಾನತೆಯ ಲೆಕ್ಕಾಚಾರ. ಕೆಳಗಿನವರಿಗೆ ನೀರು ಬಿಡಲಿ ನಕಾರ, ಅವರು ಇವರ ಕಣ್ಣು ತಪ್ಪಿಸಿ ಕಟ್ಟಿನ ಕಿಂಡಿ ತೆರೆಯುತ್ತಿದ್ದರು ಯಥಾಪ್ರಕಾರ. ಹೀಗೆಲ್ಲ ಆಗಿ ಗದ್ದೆ ಬೇಸಾಯವೊಂದು ಬಿಳಸೊಪ್ಪು (ಒತ್ತಾಯದ ಹೇರಿಕೆ) ಎಂದು ಹೊಸತಲೆಮಾರಿಗೆ ಅನಿಸತೊಡಗಿತ್ತು. ಅದೇ ಸಮಯಕ್ಕೆ ಬಂದ ಹೆಂಚಿನ ಫಾಕ್ಟರಿಯ ಮಾಲಿಕರು ಹೊಳೆಸಾಲಿನ ಗದ್ದೆಯಿಂದ ಮಣ್ಣೆತ್ತುವ ಮಾತುಕತೆಯನ್ನು ನಡೆಸುತ್ತಿದ್ದರು. ಬೇಸಾಯದ ಚಟಕ್ಕೆ ಬಿದ್ದ ಹಳೆಯ ತಲೆಮಾರಿನವರು ಇದನ್ನು ಮೊದಮೊದಲು ವಿರೋಧಿಸಿದರಾದರೂ ಗರಿಗರಿ ನೋಟಿನ ಎದುರು ಅವರ ತಣ್ಣನೆಯ ಮಾತುಗಳು ಗಾಳಿಯಲ್ಲಿ ಹಾರಿಹೋದವು.

ಹೆಂಚಿನ ಫಾಕ್ಟರಿಗೆ ಮಣ್ಣು ತೆಗೆದರೆ ಗದ್ದೆಯೆಲ್ಲ ಬರಡಾಗುವುದಂತೆ. ಮತ್ತೆ ಅದರಲ್ಲಿ ಎಂದಿಗೂ ಬೇಸಾಯ ಮಾಡಲು ಸಾಧ್ಯವೇ ಇಲ್ಲವಂತೆ ಎಂಬೆಲ್ಲ ಸಂಗತಿಗಳು ಊರತುಂಬಾ ಹರಿದಾಡಿದವು. ನೆಟ್ಟಿಯ ಮಾಡುತ್ತ ಸೋಬಾನೆ ಹಾಡುವ ಹೆಣ್ಣುಮಕ್ಕಳ ಗುಂಪು ಗದ್ದೆ ಅಳೆಯುವವರ ಮುಂದೆನಿಂತು ಇವೆಲ್ಲವನ್ನೂ ಕೇಳಿಯೇಬಿಟ್ಟಿತು. ಮಾಲೀಕರ ದಲಾಲಿಯೊಬ್ಬ ಮೆಲುದನಿಯಲ್ಲಿ ಹೆಣ್ಮಕ್ಕಳಿಗೆ ತಿಳಿಹೇಳತೊಡಗಿದ, “ನೋಡಿ ಅಮ್ಮಾ, ನೀವು ಹೇಳೂದು ಸರಿಯದೆ. ಯಾವುದೇ ಗದ್ದೆಯಿರಲಿ, ಮೇಲಿನ ಮಣ್ಣು ಹೆರೆಸಿಬಿಟ್ಟರೆ ಅಡಿಮಣ್ಣಿನಲ್ಲಿ ಸತ್ವವಿರುವುದಿಲ್ಲ ಅನ್ನುವದೇನೋ ಸತ್ಯ. ಆದರೆ ನಾವು ಮಾತ್ರ ಹಾಗೆಲ್ಲ ಮಾಡುವವರಲ್ಲ. ನಿಮ್ಮ ಹೊಲದ ಮೇಲಿನ ಮಣ್ಣನ್ನು ಇಲ್ಲಿಯೇ ಪಕ್ಕದಲ್ಲಿ ರಾಶಿ ಹಾಕಿ ಇಡುತ್ತೇವೆ. ನಮಗೆ ಬೇಕಾದ್ದು ಬೆಳೆ ಬೆಳೆಯುವ ಸಾರವತ್ತಾದ ಮಣ್ಣಲ್ಲ. ಅದರ ಅಡಿಯಲ್ಲಿರುವ ಅಂಟುಮಣ್ಣು. ಅದನ್ನಷ್ಟೇ ನಾವು ಸಾಗಿಸುತ್ತೇವೆ. ಮಣ್ಣು ತೆಗೆದಾದ ಮೇಲೆ ಮತ್ತೆ ನಿಮ್ಮ ಗದ್ದೆಗೆ ಇಲ್ಲಿ ಪೇರಿಸಿಟ್ಟ ಫಲವತ್ತಾದ ಮಣ್ಣನ್ನು ಹರಡಿಕೊಡುತ್ತೇವೆ.” ಹೆಂಗಸರಿಗೆ ಅವನ ಮಾತುಗಳು ಸತ್ಯವೆಂದು ಅನಿಸಿದರೂ ಅವರ ನಾಯಕಿ ಗಣಪಿ ಹಾಗೆಲ್ಲ ಸುಮ್ಮನೆ ಒಪ್ಪಿಕೊಳ್ಳುವವಳಲ್ಲ. “ನೀವು ನಮ್ಮ ಗದ್ದೆಯಲ್ಲಿ ಒಂದಾಳು ಹೊಂಡ ತೋಡಿ ಮತ್ತೆ ಮೇಲಿಂದ ಉಪ್ಪು ಬೀರಿದ ಹಾಗೆ ಹೆರೆಸಿಟ್ಟ ಮಣ್ಣನ್ನು ಹಾಕಿ ಹೋದರೆ ಅದರಲ್ಲೆಂತ ಬೆಳೆ ಬೆಳೂಕಾಯ್ತದೆ? ಸುಮ್ನೆ ಮಳೆಗಾಲದಾಗೆ ಬಂದು ಈಜುಕಾಗೂದು ಅಷ್ಟೆಯಾ” ಎಂದು ಮಾತಿನ ಚಾಟಿಯೇಟು ನೀಡಿಯೇಬಿಟ್ಟಳು. ಅವಳ ಮಾತಿಗೆ ಒಂದಿನಿತೂ ಬೇಸರಿಸದ ದಲಾಲಿ, “ಅಲ್ವಾ ಮತ್ತೆ? ಹೊಂಡ ಆದೆ ಭತ್ತ ಬೆಳೂಕಾಗುದಿಲ್ಲ ಅಂತ ನಮ್ಮ ದಣಿಗಳಿಗೆ ಗೊತ್ತಿಲ್ಲ ಅಂದಕಂಡ್ರಾ? ಇಲ್ಲೇ ಗುಡ್ಡದಲ್ಲಿರೋ ಕೆಂಪು ಮಣ್ಣನ್ನ ತಂದು ಮೊದಲಿದ್ದಷ್ಟೇ ಎತ್ತರ ಮಾಡೋದು ನಮ್ಮ ಜವಾಬ್ದಾರಿ ತಿಳೀತಾ? ಭೂಮಿತಾಯಿಗೆ ಯಾವತ್ತಿದ್ದರೂ ನಾವು ಅನ್ಯಾಯ ಮಾಡೂದಿಲ್ಲ.” ಎಂದು ಹೇಳಿ ಅವಳ ಬಾಯಿ ಮುಚ್ಚಿಸಿದ.

“ಎಷ್ಟು ವರ್ಷ ಆಯ್ತು ನೋಡಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ. ನಿಮ್ಮ ಊರಿಗೆ ಇನ್ನೂ ಒಂದ್ ರಸ್ತೆ ಇಲ್ಲ, ಕರೆಂಟ್ ಇಲ್ಲ, ಎಂಥದ್ದೂ ಇಲ್ಲ. ನೀವು ಹಂಚಿನ ಫಾಕ್ಟರಿಗೆ ಮಣ್ಣು ಕೊಟ್ರೆ ಅವ್ರೇ ಇಲ್ಲಿ ರಸ್ತೆ ಮಾಡಸ್ತ್ರು. ರಸ್ತೆ ಆಯ್ತು ಅಂದ್ರೆ ಕರೆಂಟ್ ಕಂಬ ಬಂದೇ ಬರ್ತದೆ. ಮತ್ತೆ ನಮ್ಮ ಗಣಪಿ ಮುಖ ಕತ್ತಲೇಲೂ ಚಂದ್ರನಾಂಗೆ ಹೊಳೀತದೆ.” ಎನ್ನುತ್ತಾ ಗಣಪಿಯ ಮೋರೆಯನ್ನು ಕೆಂಪೇರಿಸಿದ. ಅಂತೂ, ಇಂತೂ ಮಾತುಕತೆಯಾಗಿ ಹೊಳೆಸಾಲಿನ ಎಲ್ಲರೂ ತಮ್ಮ ಗದ್ದೆಗಳನ್ನು ಒಂದು ವರ್ಷದ ಮಟ್ಟಿಗೆ ಹಂಚಿನ ಫ್ಯಾಕ್ಟರಿಯ ಮಾಲೀಕರಿಗೆ ಬಿಟ್ಟುಕೊಡುವ ಮಾತುಕತೆಯಾಗಿಯೇ ಹೋಯ್ತು. ರಸ್ತೆಯ ಕೆಲಸ ಶುರುವಾದ ದಿನ ಊರಿನ ಹೈಕಳಿಗೆಲ್ಲಾ ರೆಕ್ಕೆ ಹುಟ್ಟಿಬಿಟ್ಟಿತು. ಅವರೆಲ್ಲರನ್ನೂ ಮಣ್ಣು ಅಗೆಯುವ ಕೆಲಸಕ್ಕೆ ಒಂದು ವರ್ಷದ ಕರಾರಿನೊಂದಿಗೆ ಸೇರಿಸಿಕೊಳ್ಳಲಾಯಿತು. ಆಸೆಗಣ್ಣುಗಳಿಂದ ನೋಡುತ್ತಿರುವ ಹೆಣ್ಮಕ್ಕಳಿಗೂ ಗಂಡಸರ ಅಂಗಿಯನ್ನು ತೊಟ್ಟು ಬರುವುದಾದರೆ ಮಣ್ಣು ಹೊರುವ ಕೆಲಸ ನೀಡುವ ಆಮಿಷವೊಡ್ಡಲಾಯಿತು. ಏನಾದರಾಗಲಿ, ಕೈತುಂಬಾ ದುಡ್ಡು ಸಿಗುವುದಲ್ಲ ಎಂಬ ಆಸೆಯಿಂದ ಕೆಲವು ಹೆಣ್ಣು ಮಕ್ಕಳು ಮನೆಯವರ ಮಾತಿಗೆಲ್ಲ ತಲೆಕೆಡಿಸಿಕೊಳ್ಳದೇ ಅಣ್ಣಂದಿರ ಅಂಗಿಯನ್ನು ತಮ್ಮ ಲಂಗ ಬ್ಲೌಸಿನ ಮೇಲೆ ಹಾಕಿಕೊಂಡು ಸಿದ್ಧರಾಗಿಯೇಬಿಟ್ಟರು. ಹುಡುಗರು, ಹುಡುಗಿಯರೆಲ್ಲ ಒಟ್ಟೊಟ್ಟಿಗೆ ಮಾತನಾಡುತ್ತ, ಛೇಡಿಸುತ್ತ, ಹಾಡುತ್ತ, ತಮಾಷೆ ಮಾಡುತ್ತ ಕೆಲಸ ಮಾಡುವ ಹೊಸಪರಿ ಅವರಿಗೆಲ್ಲ ರೋಮಾಂಚಕ ಅನುಭವವಾಗಿತ್ತು. ಬಿಡುವಿನ ವೇಳೆಯಲ್ಲಿ ಒಬ್ಬರ ಮೇಲೊಬ್ಬರು ಮಣ್ಣಿನ ಹೆಂಟೆಯನ್ನು ಎಸೆದುಕೊಳ್ಳುತ್ತ, ಮಣ್ಣು ತಲೆಗೇರಿಸುವ ನೆಪದಲ್ಲಿ ಉಸಿರು ತಾಗುವಷ್ಟು ಸನಿಹಕ್ಕೆ ಸಾರುತ್ತ ಹೊಸಕೆಲಸವನ್ನವರು ಮನಸಾರೆ ಅನುಭವಿಸತೊಡಗಿದರು. ಅಂತೂ ತಿಂಗಳೊಳಗೆ ಊರ ಗದ್ದೆಗೆ ಇಳಿಯಲು ಎರಡೂ ಬದಿಗಳಿಂದ ಮಣ್ಣಿನ ಕಚ್ಚಾ ರಸ್ತೆಯೊಂದು ನಿರ್ಮಾಣವಾಗಿಯೇಬಿಟ್ಟಿತು. ನಿಗದಿಪಡಿಸಿದ ದಿನದಂದು ಕೆಂಪು ಮತ್ತು ನೀಲಿ ಬಣ್ಣದ ಲಾರಿಗಳು ಊರಿನ ತುಂಬಾ ಧೂಳೆಬ್ಬಿಸುತ್ತಾ ಹೊಳೆಸಾಲಿನ ಗದ್ದೆಗೆ ಬಂದಿಳಿದೇಬಿಟ್ಟವು.

ಅಲ್ಲಿಂದ ಊರ ತುಂಬೆಲ್ಲ ಲಾರಿಯ ಶಬ್ದಗಳದೇ ಭರಾಟೆ. ಬೆಳಿಗ್ಗೆ ನಾಲ್ಕಕ್ಕೆಲ್ಲ ಮೊದಲ ಶಿಫ್ಟಿನ ಕೆಲಸಗಾರರು ಗದ್ದೆಗಿಳಿಯಬೇಕು. ಫಾಕ್ಟರಿಯವರು ಸ್ಥಾಪಿಸಿದ ಟಾರ್ಚ್‌ ಲೈಟಿನ ಬೆಳಕಲ್ಲಿ ಗದ್ದೆಯ ಮಣ್ಣನ್ನು ಅಗೆದು ಲಾರಿಗೆ ತುಂಬಿಸಬೇಕು. ಅದನ್ನು ಫ್ಯಾಕ್ಟರಿಯಲ್ಲಿ ಇಳಿಸಲು ನಾಲ್ಕಾರು ಜನರು ಮಣ್ಣಿನ ಗುಡ್ಡೆಯ ಮೇಲೆ ಕುಳಿತು ಲಾರಿಯಲ್ಲಿ ಪ್ರಯಾಣಿಸಬೇಕು. ಅಷ್ಟರಲ್ಲಿ ಬರುವ ಇನ್ನೊಂದು ಲಾರಿಗೆ ಉಳಿದವರು ಮಣ್ಣನ್ನು ತುಂಬಿಸಬೇಕು. ಅವರು ಹೊರಡುವ ವೇಳೆಗೆ ಗಂಟೆ ಹತ್ತಾಗುವುದು. ಅದಾಗಲೇ ಎರಡನೇ ಶಿಫ್ಟಿನ ಕೆಲಸಗಾರರು ಗದ್ದೆಗಿಳಿಯುತ್ತಾರೆ. ಹೀಗೆಯೆ ರಾತ್ರಿ ಹತ್ತರವರೆಗೂ ಸತತವಾಗಿ ಲಾರಿಯ ತಿರುಗಾಟ ನಡೆಯುತ್ತಲೇ ಇರುವುದು. ನೂರು ಗಾವುದವಾದರೂ ಸರಿಯೆ, ನಡೆದೇ ಹೋಗುವ ಹೊಳೆಸಾಲಿನವರಿಗೀಗ ವಾಹನ ಸೌಕರ್ಯದ ಸುಖ. ದೂರದಿಂದ ಲಾರಿಯ ಶಬ್ದ ಕೇಳಿಯೇ ಅದು ಗದ್ದೆಗೆ ಬಂದಿಳಿಯಿತೋ ಅಥವಾ ಗದ್ದೆಯಿಂದ ಹೊರಟಿತೋ ಎಂದು ಊಹಿಸುವಷ್ಟು ಅವರೀಗ ಶಬ್ದಪ್ರವೀಣರು. ಲಾರಿ ಗದ್ದೆಗಿಳಿದ ತಾಸಿನೊಳಗೆ ಮತ್ತೆ ಹೊರಡುವುದೆಂದು ಈಗವರಿಗೆ ಗೊತ್ತು. ಅಷ್ಟು ಹೊತ್ತಿಗೆ ಸಿದ್ದರಾಗಿ ರಸ್ತೆಯಲ್ಲಿ ನಿಂತು ಕೈ ಅಡ್ಡ ಹಾಕುತ್ತಾರೆ. ಲಾರಿಯ ಡ್ರೈವರ್ ತುಂಬಿದ ಲಾರಿಯನ್ನು ನಿಧಾನಗೊಳಿಸಿ ನಿಲ್ಲಿಸುತ್ತಾನೆ. ಡ್ರೈವರನ ಹಿಂದಿರುವ ಮರದ ಹಲಗೆಯ ಮೇಲೆ ಹತ್ತಾರು ಜನರು ಕುಳಿತು ಪೇಟೆಯನ್ನು ಸೇರುತ್ತಾರೆ. ನಡುವೆಯೆಲ್ಲ ಊರಿನ ಪ್ರವರಗಳ ವರದಿಯನ್ನು ಡ್ರೈವರನಿಗೆ ಒಪ್ಪಿಸುತ್ತಾರೆ. ನಡುವೆಯೆಲ್ಲಾದರೂ ಏರಿಯನ್ನು ಏರಲು ಲಾರಿ ತಿಣುಕಾಡಿದರೆ ಇಳಿದು ಅದರ ಚಕ್ರಕ್ಕೆ ಕಲ್ಲಿನ ಊತು ಕೊಟ್ಟು ಹಿಂದೆ ಜಾರದಂತೆ ಕಾಪಾಡುತ್ತಾರೆ. ಒಟ್ಟಾರೆಯಾಗಿ ಲಾರಿಯ ಪ್ರಯಾಣವೆಂದರೆ ಅದರು ಪರಸ್ಪರ ಸಹಕಾರಿ ಸಂಘವಿದ್ದಂತೆ. ಇಳಿಯುವ ಜಾಗ ಬಂದಾಗ ಡ್ರೈವರನ ಕೈಗೊಂದು ಹಳೆಯ ನೋಟನ್ನು ತುರುಕಿ ಹೋದರೆ ಮುಗಿಯಿತು. ಎಷ್ಟಿದೆಯೆಂದು ಅವನೂ ಕೇಳುವುದಿಲ್ಲ, ಇಷ್ಟೇ ಎಂದು ಇವರೂ ಹೇಳುವುದಿಲ್ಲ.

ಗದ್ದೆ, ಬೇಸಾಯ, ನಟ್ಟಿ ಎಂದೆಲ್ಲಾ ಇಲ್ಲದೇ ಹೊಳೆಸಾಲಿನ ಹಿರಿಯ ಜೀವಗಳು ಮಿಡುಕಾಡುತ್ತವೆ. ನೊಗ ಕಟ್ಟಿ ಗದ್ದೆಗಿಳಿಯಬೇಕಾದ ಎತ್ತುಗಳು ಸುಮ್ಮನೆ ಮಲಗಿ ಮೆಲುಕಾಡುತ್ತವೆ. ಬೇಸಿಗೆಯಲ್ಲಿಯೂ ಕಟ್ಟುಗಳ ಮೂಲಕ ಒಡಲು ತುಂಬಿಕೊಳ್ಳುವ ಹೊಳೆ ಬಡವಾಗಿದೆ. ಊರಿನಲ್ಲಿ ಹರಿದಾಡುವ ಕಾಂಚಾಣದ ಸದ್ದಿಗೆ ಮೂಲೆಯಲ್ಲಿ ಮೆಲ್ಲನೆ ಕೆಲವು ಗಡಂಗುಗಳು ಎದ್ದಿವೆ. ಮನೆಗಳಲ್ಲಿ ತಯಾರಿಸುತ್ತಿದ್ದ ಕಂಟ್ರಿ ಸಾರಾಯಿಯು ಸಪ್ಪೆಯೆನಿಸಿ ಗಡಂಗಿನ ಮೀಟರ್ ಸಾರಾಯಿಗೆ ಗಂಡುಸಂಕುಲ ವಲಸೆ ಹೋಗಿದೆ. ಹಳ್ಳಿಯ ಹೆಂಗಸರ ಕೈಗಳಿಗೀಗ ಸ್ಪ್ರಿಂಗ್ ಬಳೆಗಳ ಅಲಂಕಾರವಾಗಿದೆ. ಕೂದಲು ಕಟ್ಟುವ ರಿಬ್ಬನ್ ಹಳೆಯದೆನಿಸಿ ಡಿಸ್ಕೋ ರಬ್ಬರ ಜಡೆಯನ್ನು ಸುತ್ತಿಕೊಂಡಿದೆ. ಹೊಸಲಂಗ, ಪರಕಾರ, ಮಿಡಿಬ್ಲೌಸ್ ಹೀಗೆ ಥಹೇವಾರಿ ಡ್ರೆಸ್ಸುಗಳು ಹೊಳೆಸಾಲಿಗೆ ಕಾಲಿಟ್ಟಿವೆ. ಲಾರಿಯಿಂದ ಹಾರಿದ ಧೂಳು ಎಲ್ಲ ಎಲೆಗಳ ಮೇಲೆ ಕುಳಿತು ಇಡಿಯ ಊರು ಕೆಂಡದುಂಡೆಯಂತೆ ಕೆಂಪಾಗಿ ಕಾಣುತ್ತಿದೆ. ಕಡುಬೇಸಿಗೆಯ ದಿನಗಳಲ್ಲಿ ಕುಡಿಯುವ ನೀರಿಗೂ ಪರಿತಪಿಸುವಂತಾಗಿ ಡಿಸೇಲ್ ಮಶೀನುಗಳು ಹೊಳೆಯುದ್ದಕ್ಕೂ ಸಾಲಾಗಿ ಕುಳಿತು ನೀರನ್ನು ಎಳೆಯುತ್ತಿವೆ. ಹೀಗಿರುವ ಸಮಯದಲ್ಲಿಯೇ ಕರೆಂಟು ಕೊಡುವ ಪಂಡಿತರು ಊರಿನೊಳಗೆ ಕಾಲಿಟ್ಟಿದ್ದಾರೆ. ಇನ್ನೆನಿದ್ದರೂ ಹೊಳೆಯುವ ದೀಪಗಳದೇ ಕಾರುಬಾರು ಎಂದು ಹರಿವ ಹೊಳೆ ನಿಟ್ಟುಸಿರಿಟ್ಟಿದೆ.