ಕೆಲವು ಮನೆಗಳಿಗೆ ಹೋದಾಗ ಜನ ತಮ್ಮ ಮಕ್ಕಳ ಪ್ರತಿಭಾ ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಂಡು ಬಿಟ್ಟಿರುತ್ತಾರೆ. ಹಾಡಿನದೋ, ನರ್ತನದ್ದೋ, ಓದಿನದ್ದೋ ಅಥವಾ ಚಿತ್ರ ಬರೆಯುವುದೋ.. ಹೀಗೆ ಯಾವುದೋ ಒಂದು. ಅದೇನೂ ಅಂತಹ ಅಪರೂಪದ ಪ್ರತಿಭೆ ಅಂತ ಇರುವುದಿಲ್ಲ. ಸುಮ್ಮನೆ ಬಂದವರಿಗೆ ತೊರಿಸುವುದಕ್ಕೆ “ಡೆಮೋ ಪರ್ಪಸ್” ಒಂದಷ್ಟು ಕಲಿತದ್ದು. ಇದು ಮನೆಗೆ ಬಂದವರಿಗೆ ಮಾತ್ರವಲ್ಲ ಮಕ್ಕಳಿಗೂ ಹಿಂಸೆ. ಅವು ತಮ್ಮ ಪಾಡಿಗೆ ತಮ್ಮ ಲೋಕದಲ್ಲಿ ಚಂದಗೆ ಆಡಿಕೊಂಡಿರುತ್ತವೆ. ಅತಿಥಿಗಳ ಮಕ್ಕಳೂ ಆತಿಥೇಯರ ಮಕ್ಕಳೂ ಗೆಳೆತನವಾಡಿಕೊಂಡು ಹೊಸ ಆಟಗಳನ್ನೋ ಪದಗಳನ್ನೋ ಕೌಶಲ್ಯವನ್ನೋ ಕಲಿಯುತ್ತಾ ಜೊತೆಗೆ ಹೊಸ ಜಗತ್ತಿನ ಪರಿಚಯ ಮಾಡಿಕೊಂಡಿರುತ್ತವೆ.
ಶ್ರೀಹರ್ಷ ಸಾಲಿಮಠ ಅಂಕಣ

 

ನಮ್ಮ ಅತ್ತೆಯ ಮನೆಯ ಬಳಿ ಒಬ್ಬಳು ಮಂಗಳಿ ಅಂತ ಇದ್ದಳು. ಅವಳಿಗೆ ಎಲ್ಲರೂ “ಮಂಗಳಿ.. ಮಂಗಳಿ” ಎಂದು ಕರೆಯುತ್ತಿದ್ದರು. ಮಂಗಳಿಗೆ ಓದುವುದು ಬರೆಯುವುದು ಕಷ್ಟವಿತ್ತು. ನಾನು ಆಗ ಎರಡನೆಯ ತರಗತಿ. ಮಂಗಳಿ ಎಂಟನೆಯ ತರಗತಿ. ನಾನು ಒಮ್ಮೆ ರಜೆಗೆ ಅತ್ತೆಯ ಮನೆಗೆ ಹೋದಾಗ ನನ್ನನ್ನು ಆಕೆಯ ಬಳಿ ಕರೆದುಕೊಂಡು ಹೋದರು. ಆಕೆಗೆ ನಾನು ಹೇಗೆ ಓದುತ್ತೇನೆ ಅಂತ ತೋರಿಸಬೇಕಿತ್ತಂತೆ. ನನಗೆ ನಾಲ್ಕನೆಯ ತರಗತಿಯ ಪುಸ್ತಕ ಓದಲು ಕೊಟ್ಟರು. ನಾನು ಲೀಲಾಜಾಲವಾಗಿ ಓದಿದೆ. ಆ ನಾಲ್ಕನೆಯ ತರಗತಿಯ ಪುಸ್ತಕಗಳು ವಾಸ್ತವವಾಗಿ ಮಂಗಳಿಯವು. ಎಂಟನೆಯ ತರಗತಿಗೆ ಬಂದರೂ ಆಕೆ ನಾಲ್ಕನೆಯ ತರಗತಿಯ ಪುಸ್ತಕವನ್ನು ಓದಲು ತಿಣುಕುತ್ತಿದ್ದಳು. ನಾನು ಹಿಂದೆ ಪ್ರಾತ್ಯಕ್ಷಿಕೆ ಕೊಟ್ಟು ವಾಪಸು ಬಂದ ಮೇಲೆ ಮಂಗಳಿಯ ಗತಿ ಏನಾಯಿತೋ ಗೊತ್ತಿಲ್ಲ. ನನಗೆ ಮಂಗಳಿ ಮೊದಲು ಪರಿಚಯವಾದದ್ದು ಹೀಗೆ.

ಆಗ ಈ ರೀತಿ ನಾನು ಊರವರಿಗೆಲ್ಲ ಡೆಮೋ ಕೊಟ್ಟು ಅವರಲ್ಲಿ ಕೀಳರಿಮೆ ಹುಟ್ಟುವಂತ ಕ್ಷುದ್ರ ಕೆಲಸ ಮಾಡುತ್ತಿದ್ದುದು ಹೊಸದೇನಲ್ಲ. ಜೊತೆಗಾರ ಹುಡುಗರೊಂದಿಗೆ ಆಟವಾಡುವಾಗ ನನಗಿಂತ ದೊಡ್ಡ ಹುಡುಗರೂ ಸಹ ನನಗೆ ಹೆದರುತ್ತಿದ್ದುದು ಇದೇ ಕಾರಣಕ್ಕಾಗಿ. ಯಾರಾದರೊಡನೆ ಜಗಳವಾದರೆ ಶಾಲೆಯಲ್ಲಿ ಆ ತಿಂಗಳ ಟೆಸ್ಟ್ ಮಾರ್ಕ್ಸ್ ಕಾರ್ಡ್ ಬಂದ ಕೂಡಲೇ ಅದನ್ನು ಹಿಡಿದು ನನ್ನೊಡನೆ ಜಗಳವಾಡಿದವರ ಮನೆಗೆ ಓಡುತ್ತಿದ್ದೆ. ಅವರ ತಾಯ್ತಂದೆಯರಿಗೆ ನನ್ನ ಮಾರ್ಕ್ಸ್ ಕಾರ್ಡ್ ತೋರಿಸಿದರೆ ಸಾಕು ಅವರ ಮಗನನ್ನು ಕರೆದು ನನ್ನ ಅಂಕಗಳನ್ನು ಅವನ ಅಂಕಗಳೊಂದಿಗೆ ಹೋಲಿಕೆ ಮಾಡಿ ಅವರಿಗೆ ನಾಲ್ಕು ತದುಕುತ್ತಿದ್ದರು. ನನ್ನ ಸೇಡು ಗಮ್ಯ ತಲುಪುತ್ತಿತ್ತು. ವಿದ್ಯೆ ಎಂಬುದು ಎಂತಹ ಪ್ರಬಲ ಅಸ್ತ್ರ ಎಂಬುದನ್ನು ನಾನು ಅಷ್ಟು ಚಿಕ್ಕ ವಯಸ್ಸಿನಲ್ಲೇ ತಿಳಿದುಕೊಂಡಿದ್ದೆ.

ನಮ್ಮ ಬೀದಿಯ ಬಹುತೇಕ ಮನೆಗಳ ಒಡೆಯರುಗಳು ಬಾಡಿಗೆದಾರರು ತಿಂಗಳ ಕೊನೆಯ ಖರ್ಚಿಗೆ ಎಡತಾಕುವ ಮಿಡಲ್ ಕ್ಲಾಸ್ ನೌಕರರಾದ್ದರಿಂದ ಅವರಿಗೂ ವಿದ್ಯೆಯ ಮಹತ್ವ ಅರಿವಿತ್ತು. ಹೀಗಾಗಿ ನನ್ನ ಕಡ್ಡಿ ಚುಚ್ಚುವ ಕೆಲಸ ಸುಲಭದ್ದಾಗಿತ್ತು. ವಿದ್ಯೆಯ ಬಗ್ಗೆ ಗೌರವದ ಪ್ರಜ್ಞೆ ಇರದವರ ಮುಂದೆ ನನ್ನ ಈ ಆಟ ನಡೆಯುತ್ತಿರಲಿಲ್ಲ. ಇವೆಲ್ಲ ಕಾರಣಗಳಿಂದ ಮಂಗಳಿಯೂ ನನಗೆ ಹತ್ತರಲ್ಲಿ ಹನ್ನೊಂದಾಗುವ ಸಾಧ್ಯತೆಯಿತ್ತು.

ಆದರೆ ಮಂಗಳಿಯ ಬಳಿ ಒಂದು ವಿಶೇಷ ವಿದ್ಯೆಯಿತ್ತು. ಅದೇನೆಂದರೆ ಜಾತ್ರೆಯಲ್ಲಿ ಸೇಬಿನಾಕಾರದಲ್ಲಿ ಬಲೂನು ಕಟ್ಟಿಕೊಡುತ್ತಾರಲ್ಲ ಆ ರೀತಿ ಅಷ್ಟೇ ವೃತ್ತಿಪರವಾಗಿ ಕಟ್ಟಲು ಮಂಗಳಿಗೆ ಬರುತ್ತಿತ್ತು. ನಾವಾರಾದರೂ ಆ ರೀತಿ ಕಟ್ಟಲು ಹೋಗುತ್ತಿದ್ದರೆ ಒಂದೋ ಬಲೂನು ಒಡೆದು ಹೋಗುತ್ತಿತ್ತು ಅಥವಾ ಒಳಗೆ ತಳ್ಳಿದರೂ ಅದನ್ನು ಸೇರಿಸಿ ಕಟ್ಟಲು ಆಗುತ್ತಿರಲಿಲ್ಲ. ಇದಲ್ಲದೇ ಬಲೂನಿನ ಒಳಗೆ ಮತ್ತೊಂದು ಬಲೂನು ಹಾಕಿ ಈ ರೀತಿ ಸೇಬು ಮಾಡುವ ಕಲೆಯೂ ಆಕೆಗೆ ಗೊತ್ತಿತ್ತು. ಹೃದಯದ ಆಕಾರದ ಬೆಲೂನನ್ನು ಸೇಬಿನಾಕಾರದ ಬಲೂನಿನ ಒಳಗೆ ತೇಲುವಂತೆ ಕಟ್ಟುತ್ತಿದ್ದಳು. ಈ ಕುಶಲತೆ ಮಂಗಳಿಗೆ ಮಕ್ಕಳ ನಡುವೆ ಬಹಳ ಜನಪ್ರಿಯತೆಯನ್ನು ತಂದುಕೊಟ್ಟಿತ್ತು.

ರಬ್ಬರ್ ಅಲ್ಲದೇ ಪ್ಲಾಸ್ಟಿಕ್ ಚೀಲಗಳನ್ನೂ ಸಹ ಆಕೆ ಈ ರೀತಿ ಕಟ್ಟಬಲ್ಲವಳಾಗಿದ್ದಳು. ಇದನ್ನು ನಾನು ಆಕೆಯ ಬಳಿ ನೂರಾರು ಬಾರಿ ಈ ಕೌಶಲ್ಯವನ್ನು ಕಲಿಯಲು ಪ್ರಯತ್ನಿಸಿ ಸೋತೆ. ಕಡೆಗೂ ನನಗೆ ಅದನ್ನು ಕಲಿಯಲು ಆಗಲೇ ಇಲ್ಲ. ಬಲೂನು ಕಟ್ಟುವ ಕಲೆ ಮತ್ತು ಸಾಫ್ಟ್ ವೇರ್ ಕೋಡಿಂಗ್ ವೃತ್ತಿಗಳೇನಾದರೂ ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಯಲ್ಲಿ ತಮ್ಮ ಸ್ಥಾನವನ್ನು ಅದಲುಬದಲುಗೊಳಿಸಿದರೆ ನಾನು ಕಡುಬಡವನಾಗಿಯೂ ಮಂಗಳಿ ಕೋಟ್ಯಧೀಶೆಯಾಗಿಯೂ ಇರುತ್ತಿದ್ದೆವು! ಅದೃಷ್ಟವೆಂದರೆ ಯಾರೂ ನನಗೆ ಮಂಗಳಿಗೆ ಅಕ್ಷರ ಹೇಳಿಕೊಡು ಅಂತ ದುಂಬಾಲು ಬೀಳಲಿಲ್ಲ.

ಅದಾಗಲೇ ಊರುಕೇರಿಯ ಜನರೆಲ್ಲರಿಂದ ಅಕ್ಷರಕಲಿಕೆಯ ಒತ್ತಡದ ಚಕ್ಕುಲಿ ಒರಳಲ್ಲಿ ಬಳಲಿದ್ದ ಮಂಗಳಿಗೆ ನನ್ನ ಕಡೆಯಿಂದ ಅನುಕಂಪದ ಹೊರತಾಗಿ ಬೇರೇನೂ ಬೀರಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಒಟ್ಟಿನಲ್ಲಿ ಮಂಗಳಿಗೆ ನಾನು ಅತ್ಯಂತ ನಾಲಾಯಕ ಶಿಷ್ಯನಾಗಿ ಹೋದೆ!

ನಮ್ಮ ಬೀದಿಯ ಬಹುತೇಕ ಮನೆಗಳ ಒಡೆಯರುಗಳು ಬಾಡಿಗೆದಾರರು ತಿಂಗಳ ಕೊನೆಯ ಖರ್ಚಿಗೆ ಎಡತಾಕುವ ಮಿಡಲ್ ಕ್ಲಾಸ್ ನೌಕರರಾದ್ದರಿಂದ ಅವರಿಗೂ ವಿದ್ಯೆಯ ಮಹತ್ವ ಅರಿವಿತ್ತು. ಹೀಗಾಗಿ ನನ್ನ ಕಡ್ಡಿ ಚುಚ್ಚುವ ಕೆಲಸ ಸುಲಭದ್ದಾಗಿತ್ತು. ವಿದ್ಯೆಯ ಬಗ್ಗೆ ಗೌರವದ ಪ್ರಜ್ಞೆ ಇರದವರ ಮುಂದೆ ನನ್ನ ಈ ಆಟ ನಡೆಯುತ್ತಿರಲಿಲ್ಲ.

ಅಷ್ಟಕ್ಕೂ ಮಂಗಳಿ ಇಂತಹ “ಕೆಲಸಕ್ಕೆ ಬಾರದ” ಕರಕುಶಲತೆಯಲ್ಲಿ ಪಳಗಿ ಜೀವನದಲ್ಲಿ ಮಾಡುವುದಾದರೂ ಏನನ್ನು? ಗಂಡನೊಡನೆ ಜಗಳವಾದರೆ ಟೀಚರೋ ಮತ್ಯಾವುದೋ ಓದು ಬರಹದ ಹಿನ್ನೆಲೆ ಬೇಕಾದ ಕೆಲಸವಿದ್ದರೆ ಬೇರೆ ಬಂದು ಬದುಕಿಕೋಬಹುದು. ಈ ಬಲೂನು ಕಟ್ಟಿ ಜಾತ್ರೆಯಲ್ಲಿ ಮಾರಿ ಬದುಕುವುದು ಮಂಗಳಿಯಂತಹ ಮಧ್ಯಮವರ್ಗದಿಂದ ಬಂದ ಹೆಣ್ಣುಮಕ್ಕಳಿಗೆ ಸಾಧ್ಯವೇ? ಮಧ್ಯಮ ವರ್ಗದ ಅಭದ್ರತೆಗಳೋ, ಸಾಮಾಜಿಕ ವರ್ಗಶ್ರೇಣಿಗಳೋ ಮಾರುಕಟ್ಟೆಯ ಬೇಡಿಕೆಗಳೋ ಯಾವುದೋ ಒಂದು ಕಾರಣದಿಂದ ಒಟ್ಟಿನಲ್ಲಿ ಕೆಲವು ಕುಶಲ ಕಲೆಗಳನ್ನು ಅಸಂಬದ್ಧ ಅಥವಾ ಅಸಭ್ಯ ಎಂದು ಪಟ್ಟಿಮಾಡಲಾಗಿದೆ. ಯಾಕೆಂದರೆ ಒಮ್ಮೊಮ್ಮೆ ಈ ರೀತಿ ಬಲೂನು ಕಟ್ಟಿದ ಕಾರಣಕ್ಕಾಗಿಯೇ ಆಕೆಗೆ ಒದೆ ಬಿದ್ದದ್ದಿದೆ. ಅದು ಕೀಳು ಜಾತಿಯ ಜನ ಮಾತ್ರ ಮಾಡಬೇಕಾದ ಕೆಲಸ ಅಂತ ಅವರ ಅಭಿಪ್ರಾಯವಾಗಿತ್ತು. ಆದರೆ ಇದೇ ಮೇಲ್ಜಾತಿಯ ಮಧ್ಯಮ ವರ್ಗದ ಜನದ ಮಕ್ಕಳು ಬೇರೆ ದೇಶಗಳಿಗರ ಓದಲು ಬಂದಾಗ ಪಾರ್ಟ್ ಟೈಮ್ ಕೆಲಸವಾಗಿ ತಮ್ಮ ತವರು ಸಮಾಜದಲ್ಲಿ “ಕೀಳು ಕೆಲಸ” ಎಂದು ವರ್ಗಿಕರಿಸಲಾಗಿರುವ ಪಾಯಖಾನೆ ಸ್ವಚ್ಛಗೊಳಿಸುವ ಕೆಲಸಕ್ಕೆ ಸೇರಿ ದುಡಿಯುತ್ತಾರೆ. ಕೆಲಸ ಅಥವಾ ಕಾಯಕ ಎನ್ನುವುದು ಹಣದ ಆಧಾರದ ಮೇಲೆ ಸಾಮಾಜಿಕ ವರ್ಗೀಕರಣಕ್ಕೊಳಪಡುವುದಿಲ್ಲ ಬದಲಾಗಿ ಅದಕ್ಕಿರುವ ಸಾಮಾಜಿಕ ವರ್ಗೀಕರಣದ ಆಧಾರದ ಮೇಲೆ ಹಣವನ್ನು ಗಳಿಸುತ್ತದೆ.

ಮಂಗಳಿಯದು ಸಹಜವಾಗಿ ಮರ್ಯಾದೆ ದಕ್ಕಬೇಕಾದ ಪ್ರತಿಭೆ ಅಂತ ನನ್ನ ಅನಿಸಿಕೆ. ಕೆಲವು ಮನೆಗಳಿಗೆ ಹೋದಾಗ ಜನ ತಮ್ಮ ಮಕ್ಕಳ ಪ್ರತಿಭಾ ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಂಡು ಬಿಟ್ಟಿರುತ್ತಾರೆ. ಹಾಡಿನದೋ, ನರ್ತನದ್ದೋ, ಓದಿನದ್ದೋ ಅಥವಾ ಚಿತ್ರ ಬರೆಯುವುದೋ.. ಹೀಗೆ ಯಾವುದೋ ಒಂದು. ಅದೇನೂ ಅಂತಹ ಅಪರೂಪದ ಪ್ರತಿಭೆ ಅಂತ ಇರುವುದಿಲ್ಲ. ಸುಮ್ಮನೆ ಬಂದವರಿಗೆ ತೊರಿಸುವುದಕ್ಕೆ “ಡೆಮೋ ಪರ್ಪಸ್” ಒಂದಷ್ಟು ಕಲಿತದ್ದು. ಇದು ಮನೆಗೆ ಬಂದವರಿಗೆ ಮಾತ್ರವಲ್ಲ ಮಕ್ಕಳಿಗೂ ಹಿಂಸೆ. ಅವು ತಮ್ಮ ಪಾಡಿಗೆ ತಮ್ಮ ಲೋಕದಲ್ಲಿ ಚಂದಗೆ ಆಡಿಕೊಂಡಿರುತ್ತವೆ. ಅತಿಥಿಗಳ ಮಕ್ಕಳೂ ಆತಿಥೇಯರ ಮಕ್ಕಳೂ ಗೆಳೆತನವಾಡಿಕೊಂಡು ಹೊಸ ಆಟಗಳನ್ನೋ ಪದಗಳನ್ನೋ ಕೌಶಲ್ಯವನ್ನೋ ಕಲಿಯುತ್ತಾ ಜೊತೆಗೆ ಹೊಸ ಜಗತ್ತಿನ ಪರಿಚಯ ಮಾಡಿಕೊಂಡಿರುತ್ತವೆ. ಆದರೆ ಈ ಹಿರಿಯರು ಸುಮ್ಮನೆ ಬಂದಿರುವ ಕೆಲಸ ಮುಗಿಸುವುದನ್ನೋ ಅಥವಾ ಹಳೆಯ ನೆನಪುಗಳನ್ನೋ ಮೆಲುಕು ಹಾಕುವುದನ್ನು ಬಿಟ್ಟು ತಮ್ಮ ತೆವಲಿಗೆ ಮಕ್ಕಳ ಕೂಟದ ನಲಿವಿಗೆ ರಸಭಂಗವನ್ನು ತಂದೊಡ್ಡುತ್ತಾರೆ.

ಒಂದು ವರ್ಷದ್ದಾಗಿದ್ದರೆ ಮೂಗು ಎಲ್ಲಿದೆ ತೋರಿಸು, ತಲೆ ಎಲ್ಲಿದೆ ತೋರಿಸು, ನಾಲಿಗೆ ಎಲ್ಲಿದೆ ತೋರಿಸು ಇತ್ಯಾದಿ. ಎರಡರಿಂದ ಐದಾದರೆ ಡ್ಯಾನ್ಸ್ ಮಾಡು ರೈಮ್ ಹಾಡು, ಐದರ ಮೇಲೆ ಸಲ್ಪ ಕಷ್ಟದ ಸಿನಿಮಾ ಹಾಡು ಅಥವಾ ಕಲಿಯುತ್ತಿರುವ ಶಾಸ್ತ್ರೀಯ ಸಂಗೀತದ ತುಣುಕು… ಕೆಲವೊಮ್ಮೆ “ನಿನ್ನ ಗರ್ಲ್ ಫ್ರೆಂಡ್ ಗಳ ಹೆಸರು ಹೇಳು ಮರಿ..!” ಎಂಬಂತಹ ಸೆಕ್ಸಿಸ್ಟ್ ಮಿಸೋಜಿನಿಕ್ ಬೇಡಿಕೆಗಳೂ ಇರುತ್ತವೆ. ಹದಿನಾಲ್ಕಕ್ಕಿಂತ ಮೇಲ್ಪಟ್ಟ ಮಕ್ಕಳು ನಮ್ಮ ಪೀಳಿಗೆ ಮತ್ತು ತಮ್ಮ ಪೀಳಿಗೆ ಬೇರೆ ಬೇರೆ ಗ್ರಹಗಳಿಗೆ ಸೇರಿದವರು ಎಂಬುದನ್ನು ಸೂಚ್ಯವಾಗಿ ಹೇಳಲು ಮೂಲೆಯಲ್ಲಿ ಸುಮ್ಮನೆ ಮುಗುಮ್ಮಾಗಿ ಕೂತಿರುತ್ತವೆ. ಅವನ್ನು ಮಾತನಾಡಿಸುವ ಧೈರ್ಯ ಅವರ ತಾಯ್ತಂದೆಯರಿಗೂ ಇರುವುದಿಲ್ಲ!

ಮಕ್ಕಳು ತಮ್ಮ ಪ್ರತಿಭೆಯ ಬಗ್ಗೆ ಸಾಕಷ್ಟು ವಸ್ತುನಿಷ್ಟವಾಗಿರುತ್ತಾರೆ ಎಂದು ತೋರುತ್ತದೆ. ಹಾಗಾಗಿಯೇ ಸೂಕ್ತ ಪ್ರತಿಭೆಯಿದ್ದರೆ ಮಾತ್ರ ಮಕ್ಕಳು ಎಲ್ಲರೆದುರು ತೆರೆದುಕೊಳ್ಳುತ್ತವೆ, ಇಲ್ಲವೆನಿಸಿದರೆ ಎಷ್ಟೇ ಒತ್ತಾಯ ಮಾಡಿದರೂ ಹೊಸಬರ ಎದುರಿಗೆ ಪ್ರತಿಭಾ ಪ್ರದರ್ಶನಕ್ಕೆ ಮುಂದಾಗುವುದಿಲ್ಲ. ಇಷ್ಟಕ್ಕೆ ನಾವು ದೊಡ್ಡವರೆನಿಸಿಕೊಂಡವರು ಸುಮ್ಮನಾದರೆ ತೊಂದರೆ ಇರುವುದಿಲ್ಲ. ಅವುಗಳ ಹಿಂಜರಿಕೆ, ನಾಚಿಕೆ, ತಪ್ಪಿಸಿಕೊಂಡು ಓಡುವುದು… ಅವುಗಳ ಹಿಂದೆ ತಾಯ್ತಂದೆಯರು ಓಡುವುದು, ಒತ್ತಾಯ ಮಾಡುವುದು, ಪ್ರೇರೇಪಿಸಲು ಹೆಣಗುವುದು… ಇವನ್ನೆಲ್ಲ ಅನುಭವಿಸುವುದರಲ್ಲೇ ನಮ್ಮ ಮೆದುಳು ಹೈರಾಣಾಗಿ ಹೋಗಿರುತ್ತದೆ.

ಇದು ಸಾಲದ್ದೆಂಬಂತೆ ಮಕ್ಕಳನ್ನು ಪ್ರತಿಭಾ ಪ್ರದರ್ಶನಕ್ಕೆ ಪ್ರಚೋದಿಸಲು ತಾವೇ ಹಾಡಲು ಅಥವಾ ಕುಣಿಯಲು ತೊಡಗುತ್ತಾರೆ. ಅದು ನೋಡಲು ಇನ್ನೂ ಮುಜುಗರ. ಇಷ್ಟೆಲ್ಲಾ ಆಗಿಯೂ ಮಕ್ಕಳು ಕೇಳದಿದ್ದರೆ ತಾವು ಇಲ್ಲಿಯವರೆಗೆ ಜಂಬ ಕೊಚ್ಚಿಕೊಂಡಿದ್ದರ ಸಾಕ್ಷಿಯಾಗಿ ಹಿಂದೆ ಹಾಡಿದ್ದರ ಕುಣಿದಿದ್ದರ ವಿಡಿಯೋ ತೋರಿಸತೊಡಗುತ್ತಾರೆ. ಇವೆಲ್ಲ ವಿಘ್ನಗಳನ್ನು ದಾಟಿಕೊಂಡು ವಾಪಸು ಮನೆಗೆ ಹೊರಟೆವೆಂದುಕೊಳ್ಳಿ ಅಷ್ಟರಲ್ಲೇ ಅಷ್ಟೊತ್ತು ಅಲ್ಲಿ ಕೂತಿದ್ದಕ್ಕೇನೋ ನಮ್ಮ ಬಗ್ಗೆ ಒಳಗೊಳ್ಳುವಿಕೆಯ ಭಾವನೆ ಬಂದು ಅವರ ಮಗುವಿಗೆ ಪ್ರತಿಭಾ ಪ್ರದರ್ಶನದ ಪ್ರವೃತ್ತಿ ಜಾಗೃತಗೊಳ್ಳುತ್ತದೆ. ಮತ್ತೆ ನಾವು ವಾಪಸು ಕೂರಬೇಕು.

ಪ್ರದರ್ಶನ ಮಗಿದ ಮೇಲೆ ನಮ್ಮಿಂದ ತಾಯ್ತಂದೆಯರು ಮೆಚ್ಚುಗೆಯ ಮಾತುಗಳನ್ನು ಬಯಸುತ್ತಾರೆ. ನಾವು ಪ್ಯಾಲಿನಗೆ ನಗುತ್ತಾ “ಮಕ್ಕಳು ಏನ್ ಮಾಡಿದರೂ ಚಂದ!” ಎನ್ನುತ್ತೇವೆ. ಇದರ ಗೂಢಾರ್ಥವನ್ನು ಅರಿಯಲೂ ಪ್ರಯತ್ನಿಸದೇ ಅವರು ಹೆಮ್ಮೆ ಪಡುತ್ತಾರೆ. ಆದರೆ ಈ ಪ್ರತಿಭಾ ಪ್ರದರ್ಶನದ ಪಟ್ಟಿಯಲ್ಲಿ ನೆಲ ಒರೆಸುವ, ಪಾತ್ರೆ ತೊಳೆಯುವ, ಬಟ್ಟೆ ಒಗೆಯುವ, ಗಾಜು ಒರೆಸುವ ಪ್ರತಿಭೆಗಳಿರುವುದಿಲ್ಲ. ಬಲೂನು ತಯಾರಿಸುವ ಕಲೆ “ಪ್ರತಿಭೆ”ಯ ಈ ಪಟ್ಟಿಯಲ್ಲಿ ಇದ್ದಿದ್ದರೆ ಮಂಗಳಿ ಅದೆಷ್ಟು ಮೆಚ್ಚುಗೆ ಗಳಿಸುತ್ತಿದ್ದಳೋ! ಏಕೆಂದರೆ ಮನೆಯೊಳಗಿನ ಪ್ರತಿಭಾ ಪ್ರದರ್ಶನದಲ್ಲಿ ಪ್ರದರ್ಶಿಸಿದ ಕಲೆಗಳೂ ಸಹ ಬಲೂನು ತುಂಬುವ ಕಲೆಯಷ್ಟೇ ಆ ಮಕ್ಕಳಿಗೆ ನಿಷ್ಪ್ರಯೋಜಕ!