ಒದ್ದೆಯಾಗಿರುತ್ತಿದ್ದ ಯೂನಿಫಾರ್ಮು ಎಲ್ಲರ ಮಾತುಗಳನ್ನು ಆಲಿಸುತ್ತಲೇ ಮರದ ಮಣೆಯ ಮೇಲೆ ಕುಳಿತು ಇಂಚಿಂಚಾಗಿ ಒಣಗುತ್ತ ಮರುದಿನದ ಕ್ಲಾಸಿಗೆ ರೆಡಿಯಾಗುತ್ತಿತ್ತು. ಬಣ್ಣಬಣ್ಣದ ಕರ್ಟನ್ನುಗಳನ್ನು ಆಗೊಮ್ಮೆ ಈಗೊಮ್ಮೆ ಒದ್ದೆಯಾಗಿಸುವ ಮಳೆಹನಿಗಳನ್ನು ನೋಡುತ್ತ ಸೋಫಾದ ಮೇಲೆ ಕುಳಿತು ಟೀ ಕುಡಿಯುವಾಗಲೆಲ್ಲ, ಬಚ್ಚಲೊಲೆಯ ಬಿಸಿಬೂದಿಯಲ್ಲಿ ಸಿಡಿಯುತ್ತ ಬಾಯಲ್ಲಿ ನೀರೂರಿಸುತ್ತಿದ್ದ ಹಲಸಿನಬೀಜವನ್ನು ನೆನಪಿಸಿಕೊಂಡು ಬಾಲ್ಯದ ನೆನಪಿನ ಮಳೆಗೆ ಮುಖವೊಡ್ಡುತ್ತೇನೆ.
ಅಂಜನಾ ಹೆಗಡೆ ಬರೆದ ಬಾಲ್ಯಕಾಲದ ಲಹರಿ

 

ಬಾಲ್ಯ ಎನ್ನುವುದು ಎಷ್ಟು ಸಲ ಕೇಳಿದರೂ ಬೇಸರವಾಗದ ಮಧುರವಾದ ಭಾವಗೀತೆ; ಎಷ್ಟು ಸಾಲು ಬರೆದರೂ ಸುಸ್ತಾಗದ ಸುಂದರವಾದ ಕವಿತೆ! ಬಾಲ್ಯದಲ್ಲಿ ಏನೆಲ್ಲ ಇದ್ದವು! ಬಣ್ಣದ ಮಣಿಗಳಿಗೆ ಜೀವಬಂದಂತೆ ಬೆಟ್ಟ-ಗುಡ್ಡಗಳ ಮೇಲೆ ಹೊಳೆಯುತ್ತಿದ್ದ ಬೆಟ್ಟದ ದಾಸವಾಳ-ಮುಳ್ಳೇಹಣ್ಣುಗಳು, ಗದ್ದೆಯಂಚಿನ ಹೊಳೆಯ ಹರಿವಿನಲ್ಲಿ ಕಣ್ಣರಳಿಸುತ್ತಿದ್ದ ಪುಟ್ಟಪುಟ್ಟ ಮೀನಿನ ಮರಿಗಳು, ಹಳೆಯ ಫೋಟೋಗಳ ಹಿಂದೆ ಗೂಡುಕಟ್ಟಿ ಮೊಟ್ಟೆಯಿಡುತ್ತಿದ್ದ ಮುದ್ದಾದ ಗುಬ್ಬಚ್ಚಿಗಳು, ಕೈಗೆಟುಕುವ ಅಂತರದಲ್ಲಿ ಗರಿಬಿಚ್ಚಿ ಕುಣಿಯುತ್ತಿದ್ದ ನವಿಲು, ಅಜ್ಜಿಯ ಬಾಳೆಹಣ್ಣಿನ ರೊಟ್ಟಿ-ಗಟ್ಟಿತುಪ್ಪದಲ್ಲಿ ಪ್ರೀತಿಯ ಹೊಳಹು, ಅಜ್ಜನ ಕಥೆಯಲ್ಲೊಂದು ಮಹಾ ಬಲಶಾಲಿ ಚಿರತೆ, ಕೊಟ್ಟಿಗೆಯಲ್ಲಿ ಸಾಮರಸ್ಯದಿಂದ ಸಂಸಾರ ನಡೆಸುತ್ತಿದ್ದ ಹಸು-ಎಮ್ಮೆಗಳು ಎಲ್ಲ ಇದ್ದವು.

ಮನೆತುಂಬ ಹೆಣ್ಣುಮಕ್ಕಳ ಕಾಲ್ಗೆಜ್ಜೆಯ ಸದ್ದು, ಬೆಳಗಾದರೆ ಅಂಗಳ ತುಂಬಿಕೊಳ್ಳುತ್ತಿದ್ದ ರಂಗೋಲಿ, ಸಂಜೆಯಾದರೆ ಅಂಗಳದಂಚಿಗೆ ಅರಳುತ್ತಿದ್ದ ಮಲ್ಲಿಗೆ-ಜಾಜಿ, ರಾತ್ರಿಯಾಗುತ್ತಿದ್ದಂತೆ ಅದೆಲ್ಲಿಂದಲೋ ಸದ್ದುಮಾಡದೆ ಬಂದು ಮನೆ ತುಂಬಿಕೊಳ್ಳುತ್ತಿದ್ದ ರಾತ್ರಿರಾಣಿಯ ಪರಿಮಳ, ಆ ಪರಿಮಳದೊಂದಿಗೆ ಪೈಪೋಟಿ ನಡೆಸುತ್ತಿದ್ದ ಧೂಪದಾರತಿಯ ಘಮ ಈ ಎಲ್ಲ ಇದ್ದಾಗ ಬಾಲ್ಯವೆನ್ನುವುದು ಬೆರಗಾಗದೇ ಇದ್ದೀತೇ!

ಬಾಲ್ಯದ ಬೆಳಗುಗಳಿಗೆ ಬೆರಗಿನ ಬಣ್ಣ ಸಿಂಪಡಿಸಿದವ ದೊಡ್ಡಪ್ಪ. ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲಿಯೂ ರಂಗೋಲಿ ಹಾಕುವ ಕೆಲಸ ಹೆಣ್ಣುಮಕ್ಕಳದಾದರೆ ದೊಡ್ಡಪ್ಪ ಮಾತ್ರ ತನ್ನ ರಂಗೋಲಿ ತಟ್ಟೆಯೊಂದಿಗೆ ತಪ್ಪದೇ ಅಂಗಳಕ್ಕೆ ಹಾಜರಾಗುತ್ತಿದ್ದ. ಕೊಟ್ಟಿಗೆಯಿಂದ ಹಸುವಿನ ಸಗಣಿಯನ್ನು ತಂದು, ಅಂಗಳ ತೊಳೆಯಲೆಂದೇ ಮೀಸಲಾಗಿದ್ದ ಅಲ್ಯೂಮಿನಿಯಂ ಬಕೆಟಿನಲ್ಲಿ ನೀರಿನೊಂದಿಗೆ ಸಗಣಿಯನ್ನು ಹದವಾಗಿ ಬೆರೆಸಿ, ಒಂದೂ ಕಸವಿಲ್ಲದಂತೆ ಸಗಣಿನೀರಿನಿಂದ ಅಂಗಳವನ್ನು ತೊಳೆದು ರಂಗೋಲಿ ಬಿಡಿಸಲು ರೆಡಿಯಾಗುತ್ತಿದ್ದ. ಕೇರಿಯ ಮಕ್ಕಳೆಲ್ಲ ಅತ್ತ ಹಸಿರೂ ಅಲ್ಲದ ಪೂರ್ತಿ ಕಪ್ಪೂ ಅಲ್ಲದ ಉದ್ದಿನಕಾಳಿನ ದೋಸೆಯನ್ನೋ, ಮಗೆಕಾಯಿಯ ಗರಿಗರಿಯಾದ ತೆಳ್ಳೇವನ್ನೋ ಬೆಲ್ಲ-ತುಪ್ಪದೊಂದಿಗೆ ತಿಂದು ದೊಡ್ಡಪ್ಪನ ಕೈಚಳಕ ನೋಡಲೆಂದು ಅಂಗಳದ ಕಟ್ಟೆಯ ಮೇಲೆ ಹಾಜರಾಗುತ್ತಿದ್ದೆವು.

ಯಾವುದೋ ಒಂದು ಮೂಲೆಯಿಂದ ಒಂದು ಎಳೆಯನ್ನು ಎಳೆಯಲು ಆರಂಭಿಸುತ್ತಿದ್ದ ದೊಡ್ಡಪ್ಪ ನೋಡುನೋಡುತ್ತಿದ್ದಂತೆಯೇ ಒಂದು ಸುಂದರವಾದ ನವಿಲನ್ನೋ, ಅರಳುತ್ತಿರುವ ಗುಲಾಬಿಹೂವನ್ನೋ, ಕೊಳಲನೂದುತ್ತಿರುವ ಕೃಷ್ಣನನ್ನೋ ರಂಗೋಲಿಯೊಳಗೆ ತಂದು ಕೂರಿಸಿ ಅಂಗಳಕ್ಕೆ ಜೀವ ತುಂಬುತ್ತಿದ್ದ. ಶಾಲೆಯ ಮೆಟ್ಟಿಲನ್ನೇ ಹತ್ತದ ದೊಡ್ಡಪ್ಪನಿಗೆ ಪ್ರಕೃತಿಯೇ ಗುರು; ಬತ್ತದ ಜೀವನೋತ್ಸಾಹವೇ ಕಲಿಕೆ! ಚಿಕ್ಕಪುಟ್ಟ ಸಂಗತಿಗಳಲ್ಲಿ ಸಂತೋಷ ಕಂಡುಕೊಳ್ಳುವ, ಎಲ್ಲ ಅಲವರಿಕೆಗಳನ್ನು ಬದಿಗಿಟ್ಟು ಬದುಕನ್ನು ಸ್ವೀಕರಿಸುವ ಪಾಠಗಳನ್ನು ಕಲಿಸಲು ಯಾವ ಯೂನಿವರ್ಸಿಟಿಯ ಅಗತ್ಯವೂ ಇಲ್ಲ ಎನ್ನುವ ಸರಳ ಸತ್ಯವೊಂದನ್ನು ನಾನು ದೊಡ್ಡಪ್ಪನಿಂದಲೇ ಕಲಿತೆ.

ಮಲೆನಾಡಿನ ಹಳ್ಳಿಗಳಲ್ಲಿ ಶಾಲೆಗೆ ಹೋಗುವುದು ಸಸಾರದ ಸಂಗತಿಯೇನಾಗಿರಲಿಲ್ಲ. ಪ್ರತಿವರ್ಷ ಶಾಲೆ ಶುರುವಾಗುತ್ತಿದ್ದಂತೆಯೇ ಸಮಯ ತಪ್ಪದೇ ಮಳೆಯೂ ಹಾಜರಿ ಹಾಕುತ್ತಿತ್ತು. ಕರೆಂಟಿಲ್ಲದ ರಾತ್ರಿಗಳು, ಒಣಗದ ಯೂನಿಫಾರ್ಮುಗಳು, ಔಷಧಿ-ಗುಳಿಗೆಗಳಿಗೂ ಬಗ್ಗದ ಜ್ವರ-ಕೆಮ್ಮು ಎಲ್ಲವನ್ನೂ ಸಲಹುತ್ತಿದ್ದದ್ದು ಬಚ್ಚಲುಮನೆಯ ಬೆಂಕಿ. ನೀರು ಕಾಯಿಸಲಷ್ಟೇ ಅಲ್ಲದೆ ಒದ್ದೆಯಾದ ಕಂಬಳಿಯನ್ನೋ, ಗೋಣಿಚೀಲಗಳನ್ನೋ ಒಣಗಿಸಲೆಂದು ಮಳೆಗಾಲಕ್ಕೆಂದೇ ಸಿದ್ಧವಾದ ಹಂಗಾಮಿ ಬೆಂಕಿಗೆ ಹೊಡತಲು ಎನ್ನುವ ವಿಚಿತ್ರವಾದ ಹೆಸರು! ಈ ಹೊಡತಲಿನ ಮುಂದೆ ಹಗಲು-ರಾತ್ರಿಯೆನ್ನದೇ ಮಳೆಗಾಲದ ಮೀಟಿಂಗುಗಳು ನಡೆಯುತ್ತಿದ್ದವು.

ಮಳೆಗಾಲಕ್ಕೆಂದೇ ವಿಶೇಷವಾದ ಅಕ್ಕರೆಯಿಂದ ಒಣಗಿಸಿ ಚೀಲ ತುಂಬಿಟ್ಟಿರುತ್ತಿದ್ದ ಹಲಸಿನಬೀಜ-ಗೇರುಬೀಜಗಳು, ಅಟ್ಟದಿಂದ ನಿಧಾನವಾಗಿ ಕೆಳಗಿಳಿಯುತ್ತಿದ್ದ ಹಲಸಿನ ಹಪ್ಪಳದ ಡಬ್ಬಿ ಎಲ್ಲವೂ ಆ ಮೀಟಿಂಗುಗಳ ಸ್ನ್ಯಾಕ್ಸುಗಳಾಗುತ್ತಿದ್ದವು. ಪಕ್ಕದಮನೆಯ ಬೆಕ್ಕು ಮರಿಹಾಕಿದ್ದು, ದೇವಸ್ಥಾನದ ಹತ್ತಿರ ಇದ್ದ ಕರೆಂಟ್ ಕಂಬ ಬಿದ್ದುಹೋಗಿದ್ದು, ಬಸ್ಸುಹೋಗುವ ರಸ್ತೆಯ ಬದಿಯಲ್ಲಿದ್ದ ಮರ ಬಿದ್ದು ಬಸ್ಸು ಕ್ಯಾನ್ಸಲ್ ಆಗಿದ್ದು ಎಲ್ಲ ಆ ಮೀಟಿಂಗುಗಳ ವಿಷಯವಸ್ತುಗಳಾಗುತ್ತಿದ್ದವು. ಅವುಗಳ ಮಧ್ಯದಲ್ಲಿಯೇ ಆವತ್ತಿನ ಹೋಂವರ್ಕುಗಳು, ಕಿರುಪರೀಕ್ಷೆಯ ತಯಾರಿಗಳು ಎಲ್ಲ ನಡೆಯುತ್ತಿದ್ದವು.

ಒದ್ದೆಯಾಗಿರುತ್ತಿದ್ದ ಯೂನಿಫಾರ್ಮು ಎಲ್ಲರ ಮಾತುಗಳನ್ನು ಆಲಿಸುತ್ತಲೇ ಮರದ ಮಣೆಯ ಮೇಲೆ ಕುಳಿತು ಇಂಚಿಂಚಾಗಿ ಒಣಗುತ್ತ ಮರುದಿನದ ಕ್ಲಾಸಿಗೆ ರೆಡಿಯಾಗುತ್ತಿತ್ತು. ಬಣ್ಣಬಣ್ಣದ ಕರ್ಟನ್ನುಗಳನ್ನು ಆಗೊಮ್ಮೆ ಈಗೊಮ್ಮೆ ಒದ್ದೆಯಾಗಿಸುವ ಮಳೆಹನಿಗಳನ್ನು ನೋಡುತ್ತ ಸೋಫಾದ ಮೇಲೆ ಕುಳಿತು ಟೀ ಕುಡಿಯುವಾಗಲೆಲ್ಲ, ಬಚ್ಚಲೊಲೆಯ ಬಿಸಿಬೂದಿಯಲ್ಲಿ ಸಿಡಿಯುತ್ತ ಬಾಯಲ್ಲಿ ನೀರೂರಿಸುತ್ತಿದ್ದ ಹಲಸಿನಬೀಜವನ್ನು ನೆನಪಿಸಿಕೊಂಡು ಬಾಲ್ಯದ ನೆನಪಿನ ಮಳೆಗೆ ಮುಖವೊಡ್ಡುತ್ತೇನೆ.

ಆ ನೆನಪುಗಳಲ್ಲಿ ಕಂಬಳಿಗಳಿಗೊಂದು ವಿಶಿಷ್ಟವಾದ ಸ್ಥಾನ! ಬೇಸಿಗೆಯ ಸಮಯದಲ್ಲಿ ಯಾವಾಗಲೋ ಒಮ್ಮೆ ಹಬ್ಬ-ಹರಿದಿನಗಳಲ್ಲೋ, ಇಸ್ಪೀಟು ಮಂಡಲಗಳಿಗೋ ಉಪಯೋಗಿಸಲ್ಪಡುತ್ತಿದ್ದ ಕಂಬಳಿಗೆ ಮಳೆಗಾಲ-ಚಳಿಗಾಲಗಳಲ್ಲಿ ಮಾತ್ರ ಎಲ್ಲಿಲ್ಲದ ಡಿಮ್ಯಾಂಡ್ ಹುಟ್ಟಿಕೊಳ್ಳುತ್ತಿತ್ತು. ಹಳೆಯ ಕಾಟನ್ ಸೀರೆಗಳನ್ನು ಸೇರಿಸಿ ಹೊಲಿಯುತ್ತಿದ್ದ ದುಪ್ಪಟಿಯ ಮೇಲೆ ಒಂದಾದ ಮೇಲೊಂದರಂತೆ ಕಂಬಳಿ ಹೊದ್ದು ಮಲಗುವ ಕಾರ್ಯಕ್ರಮದಿಂದಾಗಿ ರಾತ್ರೋರಾತ್ರಿ ಕಂಬಳಿಗಳೆಲ್ಲ ಇದ್ದ ಜಾಗದಿಂದ ಮಾಯವಾಗಿಬಿಡುತ್ತಿದ್ದವು. ಮನೆಗೆ ನೆಂಟರಿಷ್ಟರು ಬಂದ ದಿನಗಳಲ್ಲಂತೂ ಎಲ್ಲರಿಗಿಂತ ಬೇಗ ಮಲಗಿಬಿಡುವ ಜಾಣ್ಮೆಯೂ ಮಕ್ಕಳಿಗೆಲ್ಲ ಅದು ಹೇಗೋ ಸಿದ್ಧಿಸಿರುತ್ತಿತ್ತು. ಮಳೆಯ ಆರ್ಭಟವೂ, ಚಳಿಯ ಅಬ್ಬರವೂ ಮುಗಿಯುತ್ತಿದ್ದಂತೆಯೇ ಯಥಾಪ್ರಕಾರ ಕಂಬಳಿಗಳೆಲ್ಲವೂ ಸದ್ದುಗದ್ದಲವಿಲ್ಲದೇ ಸ್ವಸ್ಥಾನ ಸೇರುತ್ತಿದ್ದವು.

ಬಚ್ಚಲುಮನೆಯ ಬೆಂಕಿಯ ಶಾಖಕ್ಕೆ ಒಣಗಿರುತ್ತಿದ್ದ ಕಂಬಳಿಗಳಿಗಂತೂ ಹೊಗೆಯ ಒಂದು ವಿಶಿಷ್ಟವಾದ ಪರಿಮಳ ಅಂಟಿಕೊಂಡಿರುತ್ತಿತ್ತು. ಡ್ರೈ ಕ್ಲೀನಾಗಿ ವಾಪಸ್ಸು ಮನೆಸೇರುವ ಬ್ರ್ಯಾಂಡೆಡ್ ಕ್ವಿಲ್ಟುಗಳನ್ನು ಕಪಾಟಿನೊಳಗೆ ಜೋಡಿಸಿಡುವಾಗಲೆಲ್ಲ, ಕಂಬಳಿಗೆಂದು ಹೊಡೆದಾಡುತ್ತಿದ್ದ ಅವೇ ಬಾಲ್ಯದ ದಿನಗಳು ನೆನಪಾಗಿ ಸುಖದ ಪರಿಕಲ್ಪನೆಯನ್ನು ಪ್ರಶ್ನಿಸುತ್ತಿರುವಂತೆ ಭಾಸವಾಗುತ್ತದೆ. ಉಪಯೋಗಿಸುವವರೇ ಇಲ್ಲದೆ ಇಟ್ಟಲ್ಲಿಯೇ ತೂತುಬಿದ್ದಿರುವ ಕಂಬಳಿಗಳೆಲ್ಲ ಗೌಜು-ಗದ್ದಲಗಳಿಲ್ಲದೆ ಒಬ್ಬಂಟಿಗಳಾದಂತೆನ್ನಿಸಿ ಕಳವಳಗೊಳ್ಳುತ್ತೇನೆ.

ಕೇರಿಯ ಮಕ್ಕಳೆಲ್ಲ ಅತ್ತ ಹಸಿರೂ ಅಲ್ಲದ ಪೂರ್ತಿ ಕಪ್ಪೂ ಅಲ್ಲದ ಉದ್ದಿನಕಾಳಿನ ದೋಸೆಯನ್ನೋ, ಮಗೆಕಾಯಿಯ ಗರಿಗರಿಯಾದ ತೆಳ್ಳೇವನ್ನೋ ಬೆಲ್ಲ-ತುಪ್ಪದೊಂದಿಗೆ ತಿಂದು ದೊಡ್ಡಪ್ಪನ ಕೈಚಳಕ ನೋಡಲೆಂದು ಅಂಗಳದ ಕಟ್ಟೆಯ ಮೇಲೆ ಹಾಜರಾಗುತ್ತಿದ್ದೆವು.

ಬಾಲ್ಯದಲ್ಲೊಂದು ಚಾಪ ಇತ್ತು; ಅದೆಲ್ಲಿಂದಲೋ ಬರುತ್ತಿತ್ತು! ಮನೆಯಿಂದ ಹೊರಗೆ ಬಚ್ಚಲುಮನೆಯಲ್ಲೋ, ಕಟ್ಟಿಗೆಮನೆಯಲ್ಲೋ ಇಟ್ಟಿರುತ್ತಿದ್ದ ಉಪ್ಪಿನಚೀಲವನ್ನು ಹುಡುಕಿಕೊಂಡು ಬರುತ್ತಿತ್ತು ಎಂದೇ ಎಲ್ಲರೂ ಹೇಳುತ್ತಿದ್ದರು. ಉಡದ ಜಾತಿಗೆ ಸೇರಿದ್ದಿರಬಹುದಾದ ಆ ಜೀವಿಗೆ ಚಾಪ ಎಂದು ಯಾವ ಕಾರಣಕ್ಕೆ ಕರೆಯುತ್ತಿದ್ದರೋ ಗೊತ್ತಿಲ್ಲ. ಉಪ್ಪಿನ ಆಸೆಗೆ ಬಂದ ಚಾಪ ಮನೆಯೊಳಗೆ ಯಾವ ಕಾರಣಕ್ಕಾಗಿ ಬರುತ್ತಿತ್ತು ಎನ್ನುವುದೂ ಗೊತ್ತಿಲ್ಲ. ಯಾರ ಕಣ್ಣಿಗೂ ಬೀಳದೆ ಮನೆಯೊಳಗೆ ಪ್ರವೇಶಿಸಿ ದೇವರಮನೆಯ ಮೂಲೆಯಲ್ಲೋ, ಮಾಳಿಗೆಯಲ್ಲೋ ಅಡಗಿ ಕುಳಿತಿರುತ್ತಿತ್ತು. ಹಾವಿಗಿಂತಲೂ ದೊಡ್ಡದಾಗಿ ನೋಡಲು ಭಯಾನಕವಾಗಿರುತ್ತಿದ್ದ ಅದನ್ನು ಮನೆಯಿಂದ ಹೊರಗೆ ಓಡಿಸುವುದೊಂದು ಸಾಹಸದ ಕೆಲಸವೇ ಆಗಿತ್ತು.

ಬಚ್ಚಲುಮನೆಯ ಕಟ್ಟಿಗೆರಾಶಿಯಿಂದ ದಪ್ಪದಪ್ಪ ಕಟ್ಟಿಗೆಗಳನ್ನು ಆರಿಸಿಕೊಂಡು ಚಾಪವನ್ನು ಓಡಿಸಲು ರೆಡಿಯಾಗುತ್ತಿದ್ದ ಗಂಡಸರೆಲ್ಲ ಯಾವುದೋ ಯುದ್ಧವೊಂದಕ್ಕೆ ಹೊರಟ ಸೈನಿಕರಂತೆ ಕಾಣಿಸುತ್ತಿದ್ದರು. ಸಣ್ಣಪುಟ್ಟ ಏಟಿಗೆ ಬಗ್ಗದ ರಬ್ಬರಿನಂಥ ಚರ್ಮದ ಚಾಪವನ್ನು ಕಷ್ಟಪಟ್ಟು ಮನೆಯಿಂದ ಓಡಿಸಿದ ಮೇಲೆಯೂ ನಾಲ್ಕಾರು ದಿನಗಳವರೆಗೂ ಭಯ ಮಾತ್ರ ಹಾಗೆಯೇ ಉಳಿದಿರುತ್ತಿತ್ತು. ಚಾಪ ಓಡಿಸುವ ಕಾರ್ಯಕ್ರಮ ನಡೆದು ತಿಂಗಳಾದರೂ ಮನೆಗೆ ಯಾರಾದರೂ ಬಂದಾಗ ಅದರ ಕುರಿತಾಗಿಯೇ ಚರ್ಚೆಗಳು ನಡೆಯುತ್ತಿದ್ದವು. ಆ ಸಮಯದಲ್ಲಿ ಸಂಬಂಧಿಕರಿಗೋ, ಸ್ನೇಹಿತೆಯರಿಗೋ ಪತ್ರ ಬರೆದರೂ ಚಾಪದ ಪ್ರಸ್ತಾಪ ಇದ್ದೇ ಇರುತ್ತಿತ್ತು. ಸೂಪರ್ ಮಾರ್ಕೆಟಿನಿಂದ ತಂದ ಉಪ್ಪಿನ ಪ್ಯಾಕೆಟ್ಟುಗಳನ್ನು ಕತ್ತರಿಸುವಾಗಲೆಲ್ಲ ಕಂದುಬಣ್ಣದ ಉಪ್ಪಿನಚೀಲದಲ್ಲಿ ತುಂಬಿರುತ್ತಿದ್ದ ಕಂದುಬಣ್ಣದ ಉಪ್ಪು, ಚಾಪದ ಕುರಿತಾದ ಚರ್ಚೆ ಎಲ್ಲವೂ ತಪ್ಪದೇ ನೆನಪಾಗುತ್ತವೆ.

ಉಪ್ಪಿನೊಂದಿಗೆ ಹದವಾಗಿ ಬೆರೆತಿರುವ ಮತ್ತೊಂದು ನೆನಪೆಂದರೆ ಉಪ್ಪುನೆಲ್ಲಿಕಾಯಿಗಳದ್ದು. ನೆಲ್ಲಿಕಾಯಿಯ ಸೀಸನ್ನೆಂದರೆ ಅದು ಹಬ್ಬ! ರವಿವಾರ ಬಂತೆಂದರೆ ಬೆಟ್ಟದಲ್ಲೊಂದು ಸುತ್ತು ಹಾಕಿ ನೆಲ್ಲಿಕಾಯಿ ಬಲಿತಿದೆಯೋ ಇಲ್ಲವೋ ಎಂದು ಪರೀಕ್ಷಿಸಿ, ಪ್ಲಾಸ್ಟಿಕ್ ಕೊಟ್ಟೆಯ ತುಂಬ ಬಲಿತ ನೆಲ್ಲಿಕಾಯಿಗಳನ್ನಷ್ಟೇ ಕೊಯ್ದುತಂದು ಒಂದೂ ಹಾಳಾಗದಂತೆ ತಿಂದು ಮುಗಿಸುವುದು ಆ ವಾರದ ಕೆಲಸ! ಇನ್ನೇನು ಸೀಸನ್ನು ಮುಗಿದೇಹೋಗುತ್ತಿದೆ ಎನ್ನುವಾಗ ಮರದಲ್ಲಿದ್ದ ನೆಲ್ಲಿಕಾಯಿಗಳನ್ನೆಲ್ಲ ಮನೆಗೆ ತಂದು, ನೆಲ್ಲಿಕಾಯಿಯನ್ನು ಉಪ್ಪಿನಲ್ಲಿ ನೆನೆಸಲೆಂದೇ ಮೀಸಲಾಗಿರುತ್ತಿದ್ದ ಭರಣಿಯಲ್ಲಿ ಉಪ್ಪು-ನೀರಿನೊಂದಿಗೆ ಹಿತ್ತಲಿನಲ್ಲಿ ಬೆಳೆದಿರುತ್ತಿದ್ದ ಸಣ್ಣಮೆಣಸಿನಕಾಯಿಗಳನ್ನು ಅರೆದು ಬೆರೆಸಿ ನೆಲ್ಲಿಕಾಯಿಗಳನ್ನು ನೆನೆಸಿಟ್ಟರೆ ವರ್ಷವಿಡೀ ಬೇಕೆಂದಾಗಲೆಲ್ಲ ಉಪ್ಪುನೆಲ್ಲಿಕಾಯಿ ಕೈಗೆ ಸಿಗುತ್ತಿತ್ತು.

ಪಾಟಿಚೀಲದ ಪುಟ್ಟ ಪ್ಲಾಸ್ಟಿಕ್ ಕೊಟ್ಟೆಯೊಂದರಲ್ಲಿ ಸದಾಕಾಲ ತಣ್ಣಗಿರುತ್ತಿದ್ದ ಉಪ್ಪುನೆಲ್ಲಿಕಾಯಿ ದೂರದ ಶಾಲೆಗೆ ನಡೆದುಕೊಂಡು ಹೋಗುವಾಗಲೋ, ಟೀಚರಿನ ಗಮನ ಬೇರೆ ಕ್ಲಾಸಿನ ಮಕ್ಕಳಮೇಲೆ ಇದ್ದಾಗಲೋ ಬೆಚ್ಚಗೆ ಹೊಟ್ಟೆ ಸೇರುತ್ತಿತ್ತು. ಭರಣಿಯಲ್ಲಿದ್ದ ನೆಲ್ಲಿಕಾಯಿಗಳೆಲ್ಲ ಖಾಲಿಯಾದ ಮೇಲೆ ಅದರಲ್ಲಿ ಉಳಿದಿರುತ್ತಿದ್ದ ಉಪ್ಪಿನ ನೀರನ್ನು ತೆಂಗಿನಮರಕ್ಕೇ ಹಾಕು ಎಂದು ಅಮ್ಮ ಹೇಳಿದಾಗಲೆಲ್ಲ ಕಷ್ಟಪಟ್ಟು ಭರಣಿಯನ್ನು ಅಂಗಳಕ್ಕೆ ಹೊತ್ತುತಂದು ಅದರಲ್ಲಿದ್ದ ನೀರನ್ನು ತೆಂಗಿನಮರದ ಬುಡಕ್ಕೆ ಸುರಿಯುತ್ತಿದ್ದೆ. ಅಮ್ಮ ಯಾವ ಕಾರಣಕ್ಕೆ ಹಾಗೆ ಹೇಳುತ್ತಿದ್ದಳು ಎನ್ನುವುದು ಆಗ ತಿಳಿಯದೇ ಇದ್ದರೂ, ನಮಗೆ ನಿರುಪಯುಕ್ತವಾಗಿದ್ದೆಲ್ಲ ತ್ಯಾಜ್ಯವೇ ಆಗಬೇಕಾಗಿಲ್ಲ ಎನ್ನುವ ಪಾಠವನ್ನು ಸರಳವಾಗಿ ಕಲಿಸಿಕೊಟ್ಟ ಅಮ್ಮನ ನಿಸರ್ಗದೆಡೆಗಿನ ಪ್ರೀತಿಯನ್ನು ನೆನೆಯುತ್ತ ಚಹಾದ ಪಾತ್ರೆಯಲ್ಲುಳಿದ ಟೀ ಪೌಡರನ್ನು ಬಾಲ್ಕನಿಯ ಗುಲಾಬಿಗಿಡದ ಬುಡಕ್ಕೆ ತಪ್ಪದೇ ಹಾಕುತ್ತೇನೆ.

ಬಾಲ್ಯವೆಂದರೆ ಜಾತ್ರೆಯನ್ನು ಮರೆಯಲಾದೀತೇ! ಬಣ್ಣಬಣ್ಣದ ಬಳೆ-ಹೇರ್ ಕ್ಲಿಪ್ಪುಗಳು, ಬೆಂಡು ಬತ್ತಾಸು, ತೊಟ್ಟಿಲು-ಸರ್ಕಸ್ಸು ಒಂದೇ ಎರಡೇ ಜಾತ್ರೆಯ ಆಕರ್ಷಣೆ! ಜಾತ್ರೆ ಬಂತೆಂದರೆ ಮನೆಯ ಯಜಮಾನನಿಗೆ ಸೊಸೈಟಿಯಲ್ಲಿ ದುಡ್ಡು ಕೇಳಬೇಕೆಂಬ ಸಂಕೋಚವಾದರೆ, ಮಕ್ಕಳಿಗೆ ಕೈ ಕೈ ಹಿಡಿದು ಪೇಟೆ ಸುತ್ತುವ ಮೋಜು! ಅಜ್ಜನ ಕಥೆಯಲ್ಲಷ್ಟೇ ಬರುತ್ತಿದ್ದ ಆನೆ-ಕರಡಿ-ಸಿಂಹಗಳೆಲ್ಲ ಪೇಟೆಯಲ್ಲಿ ಕಾಣಸಿಗುವ ಸಂಭ್ರಮ! ಒಳಪೆಡಲ್ ತುಳಿಯುತ್ತ ಆಗಷ್ಟೇ ಸೈಕಲ್ಲು ಬ್ಯಾಲನ್ಸ್ ಮಾಡಲು ಕಲಿತವರಿಗೆ ಬಾವಿಯಲ್ಲಿ ಮೋಟರ್ ಸೈಕಲ್ ಓಡಿಸುವುದನ್ನು ನೋಡುವುದೆಂದರೆ ಅದೊಂದು ರೋಮಾಂಚಕಾರಿ ಅನುಭವ. ನನ್ನದೇ ವಯಸ್ಸಿನ ಹುಡುಗಿಯೊಬ್ಬಳು ಹಗ್ಗದ ಮೇಲೆ ನಡೆಯುವುದನ್ನು ನೋಡುವಾಗಲೆಲ್ಲ ನನ್ನ ಕಲ್ಪನೆಗೂ ನಿಲುಕದ ಕೆಲಸವನ್ನು ಅವಳು ಮಾಡುತ್ತಿರುವುದು ಅದ್ಭುತವೆನ್ನಿಸಿ, ಜಾತ್ರೆಬಯಲೆನ್ನುವುದು ಕನಸಿನಲ್ಲಿ ಮಾತ್ರ ಘಟಿಸಬಹುದಾದ ಜಾಗದಂತೆ ಕಾಣಿಸುತ್ತಿತ್ತು.

ಜಾತ್ರೆ ಮುಗಿಸಿ ಲಾಸ್ಟ್ ಬಸ್ಸು ಹತ್ತಿ ಮನೆಗೆ ಬರುವಾಗ ಕಿಟಕಿಯಿಂದ ತಲೆಯನ್ನು ಹೊರಗೆ ಹಾಕಿ, ಒಳಗೆ ಕುಳಿತವರನ್ನು ಆಕಾಶದೆತ್ತರಕ್ಕೆ ಕೊಂಡೊಯ್ಯುತ್ತಿದ್ದ ತೊಟ್ಟಿಲನ್ನು ಮರೆಯಾಗುವವರೆಗೂ ನೋಡುತ್ತ ಜಾತ್ರೆ ಮುಗಿದುಹೋದ ಬೇಸರದಲ್ಲಿ ಮನೆ ತಲುಪುತ್ತಿದ್ದೆ. ತೊಟ್ಟಿಲೊಳಗೆ ತೂಗಾಡುವ ಕನಸುಗಳೆಲ್ಲವೂ ಒಮ್ಮೆ ಮೇಲಕ್ಕೆ ಜಿಗಿದು, ಮತ್ತೆ ಕೆಳಕ್ಕಿಳಿಯುವುದು ಸ್ವಾಭಾವಿಕ ಕ್ರಿಯೆಯೆನ್ನುವುದನ್ನು ಜಾತ್ರೆಯ ತೊಟ್ಟಿಲು ಬಾಲ್ಯದಲ್ಲಿಯೇ ಕಲಿಸಿಕೊಟ್ಟಿತ್ತು ಎನ್ನುವುದು ಈಗ ಅರಿವಾಗುತ್ತಿದೆ.

ಅಜ್ಜನಮನೆಯನ್ನು ಮರೆತರೆ ಬಾಲ್ಯವನ್ನೂ ಮರೆತುಹೋದಂತೆ! ಅದೊಂದು ಹದಿನೈದು-ಇಪ್ಪತ್ತು ಜನರ ಕೂಡುಕುಟುಂಬವಾಗಿತ್ತು. ರಜೆ ಬಂತೆಂದರೆ ಸಾಕು ಎರಡೆರಡು ಬಸ್ಸು ಹತ್ತಿ ಅಜ್ಜನಮನೆಯ ಸ್ಟಾಪಿನಲ್ಲಿ ಇಳಿದು ಮೂರ್ನಾಲ್ಕು ಕಿಲೋಮೀಟರು ಕಾಲ್ನಡಿಗೆಯ ಮೂಲಕ ಅಜ್ಜನಮನೆ ತಲುಪಿದರೆ ತಣ್ಣನೆಯ ಮಜ್ಜಿಗೆ ನಮಗಾಗಿ ಕಾದಿರುತ್ತಿತ್ತು. ಸ್ಟೀಲಿನ ದೊಡ್ಡ ಪಾತ್ರೆಯಲ್ಲಿ ಮರದ ಕಡೆಗೋಲಿನಿಂದ ಕಡೆದ ಎಮ್ಮೆಯ ಮಜ್ಜಿಗೆಗೆ ಹದವಾಗಿ ನೀರು, ಲಿಂಬೆಹುಳಿ ಬೆರೆಸಿ ಅಜ್ಜಿ ಮಾಡಿಕೊಡುತ್ತಿದ್ದ ಮಜ್ಜಿಗೆಯಿಂದ ಬೆಟ್ಟ ಹತ್ತಿ, ತೋಟ ಇಳಿದು, ಹೊಳೆ ದಾಟಿ ಬಂದ ಆಯಾಸವೆಲ್ಲ ಕಾಣೆಯಾಗುತ್ತಿತ್ತು. ಮಣ್ಣಿನ ಗೋಡೆ-ನೆಲಗಳಿದ್ದ ಪುಟ್ಟ ಮನೆ, ಮನೆಯ ಸುತ್ತ ತರಕಾರಿ-ಹೂವಿನ ಗಿಡಗಳು, ನಾಲ್ಕಾರು ಮೆಟ್ಟಿಲಿಳಿದರೆ ಸುಂದರವಾದ ದೇವಸ್ಥಾನ, ಹತ್ತಿಪ್ಪತ್ತು ಮೆಟ್ಟಿಲುಗಳನ್ನು ಹತ್ತಿದರೆ ಅಲ್ಲೊಂದು ಪುಟ್ಟ ಕನ್ನಡಶಾಲೆ, ಶಾಲೆಯ ಸುತ್ತ ಮಣ್ಣಿನ ಹಾದಿ, ಹಾದಿಯುದ್ದಕ್ಕೂ ಬೆಳೆದಿರುತ್ತಿದ್ದ ಗೇರು-ಮಾವಿನಮರಗಳು ಹೀಗೇ ಸ್ವರ್ಗವನ್ನೇ ಕಣ್ಣೆದುರು ತಂದು ನಿಲ್ಲಿಸುತ್ತಿದ್ದ ಅಜ್ಜನಮನೆ ಬದುಕಿನುದ್ದಕ್ಕೂ ರೋಮಾಂಚನ ಹುಟ್ಟಿಸುವ ಮೊದಲಪ್ರೇಮ!

ಅಜ್ಜಿಯ ಬಾಳೆಹಣ್ಣಿನ ರೊಟ್ಟಿ, ಎಮ್ಮೆತುಪ್ಪ, ಮಾವಿನಮಿಡಿಯ ಉಪ್ಪಿನಕಾಯಿ, ಅಜ್ಜನ ಓಸಿಪಟ್ಟಿ, ಅತ್ತೆ-ಮಾವಂದಿರ ಮಮತೆ, ಅತ್ತಿಗೆ-ಭಾವಂದಿರೊಂದಿಗೆ ಕಂಬಕಂಬಾಟ ಎಲ್ಲವೂ ಬೇಕೆಂದಾಗಲೆಲ್ಲ ಹತ್ತಿರಬಂದು ಖುಷಿಕೊಡುವ ಸುಂದರ ನೆನಪುಗಳು. ಗಂಡ-ಮನೆ-ಮಕ್ಕಳಾಚೆಗೆ ಬದುಕೇ ಇಲ್ಲವೆಂದು ಭಾವಿಸಿ ಬದುಕುವವರೆಲ್ಲರಿಗೂ ನನಗೆ ಸಿಕ್ಕಂತಹ ಅಜ್ಜನಮನೆಯೇ ಸಿಕ್ಕಿ ಸಹಬಾಳ್ವೆಯ ಸುಮಧುರ ಅನುಭವ ದೊರಕುವಂತಾಗಿದ್ದರೆ ಬದುಕಿನೆಡೆಗಿನ ಅವರ ನೋಟ ಬೇರೆಯದೇ ಆಗುತ್ತಿತ್ತೇನೋ ಎಂದು ಆಗಾಗ ಅಂದುಕೊಳ್ಳುತ್ತೇನೆ.

ಅಷ್ಟಕ್ಕೂ ಬಾಲ್ಯದ ಅನುಭವಗಳೆಲ್ಲವನ್ನೂ ಅಕ್ಷರಕ್ಕೆ ಇಳಿಸಿ ಮುಗಿಸಲಾಗದು. ಬಡತನದ ಬದುಕು ಅಂದುಕೊಂಡಷ್ಟು ಕಷ್ಟಸಾಧ್ಯವೇನಲ್ಲ ಎನ್ನುವ ಪಾಠ ಕಲಿಸಿಕೊಟ್ಟಿದ್ದು ಬಾಲ್ಯ; ಫ್ರಿಜ್ಜಿಲ್ಲದೆಯೂ ತಣ್ಣನೆಯ ಮಜ್ಜಿಗೆ ಕುಡಿದು ತಣ್ಣಗೆ ಬದುಕಬಹುದೆಂದು ತಿಳಿಸಿಕೊಟ್ಟಿದ್ದು ಬಾಲ್ಯ; ವಾಷಿಂಗ್ ಮಷಿನ್ ಇಲ್ಲದೆಯೂ ದುಪ್ಪಟಿಯನ್ನು ಹೊದ್ದು ಬೆಚ್ಚಗೆ ಮಲಗಿ ನೆಮ್ಮದಿಯಿಂದ ನಿದ್ರಿಸಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದು ಬಾಲ್ಯ; ಮೊಬೈಲುಗಳಿಲ್ಲದೆಯೂ ಜನರೊಂದಿಗೆ ಸಂವಹನ ಸಾಧ್ಯವೆನ್ನುವ ಸಹಜೀವನದ ತಿಳಿವಳಿಕೆಯನ್ನು ಕೊಟ್ಟಿದ್ದು ಬಾಲ್ಯ! ಬದುಕೆನ್ನುವುದು ಅಲ್ಲಿಯೇ ಉಳಿದುಹೋಗಿದೆ, ಈಗಿರುವುದು ಕೇವಲ ಅಹಂಭಾವ-ಆಧುನಿಕತೆಯ ಮನಸ್ಥಿತಿ ಮಾತ್ರ ಎನ್ನುವ ತಲ್ಲಣವೊಂದು ತಣ್ಣಗೆ ಕೊರೆಯುವಾಗಲೆಲ್ಲ ಬಾಲ್ಯದ ನೆನಪಿನ ಕಂಬಳಿಯನ್ನು ಹೊದ್ದು ನಿರಾಳವಾಗಿ ಮಲಗುವ ಆಸೆಯೊಂದು ಆವರಿಸಿಕೊಳ್ಳುತ್ತದೆ.

ಆತ್ಮಪ್ರಶಂಸೆಯ ಮಾತುಗಳನ್ನು ಮತ್ತೆಮತ್ತೆ ಕೇಳಿಸಿಕೊಳ್ಳುವ ಸಂದರ್ಭ ಬಂದಾಗಲೆಲ್ಲ, ಬೇಸರವಿಲ್ಲದೇ ಹತ್ತಿಪ್ಪತ್ತು ಜನರಿಗೆ ರೊಟ್ಟಿ ಮಾಡಿ ಬಿಸಿಬಿಸಿಯಾಗಿ ಬಡಿಸುತ್ತಿದ್ದ ಅಜ್ಜಿ ನೆನಪಾಗುತ್ತಾಳೆ; ಕೈಕಾಲಿಗಂಟಿಕೊಂಡಿರುತ್ತಿದ್ದ ಸಗಣಿಯನ್ನು ಲೆಕ್ಕಿಸದೇ ನಗುನಗುತ್ತ ರಂಗೋಲಿಯ ಎಳೆಗಳನ್ನೆಳೆಯುತ್ತಿದ್ದ ದೊಡ್ಡಪ್ಪ ನೆನಪಾಗುತ್ತಾನೆ. ಬದುಕನ್ನು ಪ್ರೀತಿಸುವವರು ಬಾಲ್ಯವನ್ನು ಪ್ರೀತಿಸದೇ ಇರಲಾದೀತೇ! ರಾತ್ರಿರಾಣಿಯ ಪರಿಮಳದಂಥ ಬಾಲ್ಯದ ನೆನಪು ಸದ್ದಿಲ್ಲದೆ ತೇಲಿಬಂದಾಗಲೆಲ್ಲ ಹೃದಯದ ಬಾಗಿಲುಗಳನ್ನು ತೆರೆದಿಟ್ಟು ಅದರೊಂದಿಗೆ ಒಂದಾಗಿಹೋಗುತ್ತೇನೆ.