ಕವಿ ಇಲ್ಲಿನ ಕವಿತೆಗಳನ್ನು ದೀರ್ಘವಾಗಿ ಬೆಳೆಸುತ್ತಾ ಹೋಗಿದ್ದಾರೆ ಎನ್ನುವುದಕ್ಕಿಂತ ಕವಿಯ ಧ್ಯಾನಸ್ಥ ಸ್ಥಿತಿ ಕವಿಯ ಪ್ರಜ್ಞಾಪೂರ್ವಕತೆಯನ್ನು ಮೀರಿ ಕವಿತೆಗಳನ್ನು ವಿಸ್ತಾರಗೊಳಿಸಿದೆ. ಸುಮಾರು ಮೂರು ಪುಟಗಳವರೆಗೂ ಚಾಚಿಕೊಂಡಿರುವ ಕವಿತೆಗಳ ಭಾವದೊನಲು ಎಲ್ಲೂ ಏಕತಾನತೆಗೆ ಎಡತಾಕುವುದಿಲ್ಲ. ತಾಜಾತನದ ರೂಪಕಗಳು, ಪ್ರತಿಮೆಗಳು ಕವಿತೆಗಳಿಗೆ ಗಟ್ಟಿತನ ತುಂಬಿ ಆಪ್ತತೆ ಕಾಯ್ದುಕೊಂಡಿವೆ. ಓದಿನ ಪ್ರೀತಿ ಗುಕ್ಕಿಗೂ ಬೇರೆ ಬೇರೆಯದೆ ಅರ್ಥ ಧ್ವನಿಸುವ ಕವಿತೆಗಳು ಚಿರಾಯುವಾಗಲು ಪ್ರಯತ್ನಿಸುತ್ತವೆ.
ಜಿ.ಆರ್. ರೇವಣಸಿದ್ದಪ್ಪನವರ ‘ಬಾಳನೌಕೆಗೆ ಬೆಳಕಿನ ದೀಪ’ ಕವನ ಸಂಕಲನದ ಕುರಿತು ಅನುಸೂಯ ಯತೀಶ್‌ ಬರಹ

ಕಾವ್ಯ ರಚನೆಗಾರ ಸಮಾಜದ ಕನ್ನಡಿಯಾಗಿ ಕಾರ್ಯನಿರ್ವಹಿಸಬೇಕು. ಸಮಾಜದ ಸಂವೇದನೆಗಳಿಗೆ ಸ್ಪಂದಿಸಬೇಕು. ಸತ್ಯ ಮತ್ತು ಮಿಥ್ಯ ಪ್ರತಿಬಿಂಬಗಳ ಅರಿವು ಮೂಡಿಸಬೇಕು. ಸುಂದರವಾದದ್ದು ಕಂಡಾಗ ಸಂತೋಷಿಸುವ ಬರಹಗಾರ ವಿಕೃತಿ ಮೆರೆಯುವವರನ್ನು ಕಂಡಾಗ ಪ್ರತಿಭಟಿಸಬೇಕು. ತನ್ನ ಕಾವ್ಯ ಶಕ್ತಿಯನ್ನು ಸಮಾಜದ ಸ್ವಾಸ್ಥ್ಯಕ್ಕಾಗಿ, ಜನಪರ ಕಲ್ಯಾಣ ಕಾರ್ಯಗಳಿಗಾಗಿ ವಿನಿಯೋಗಿಸಬೇಕು. ಅಂತಹ ಕಾವ್ಯ ಮತ್ತು ಕವಿಯು ಓದುಗ ವಲಯದಲ್ಲಿ ತನ್ನದೇ ಕ್ಯಾನ್ವಾಸ್ ಸೃಷ್ಟಿಸಿಕೊಂಡು ಜನಮಾನಸದಲ್ಲಿ ಬಹುಕಾಲ ಉಳಿಯುತ್ತಾರೆ.

ಅಂತಹ ಕವಿಗಳ ಪೈಕಿ ದಾವಣಗೆರೆ ಜಿಲ್ಲೆಯ ರೇವಣಸಿದ್ದಪ್ಪ ಜಿ. ಆರ್ ಕೂಡ ಒಬ್ಬರು. ಅವರು ‘ಬಾಳ ನೌಕೆಗೆ ಬೆಳಕಿನ ದೀಪ’ ಎಂಬ ತಮ್ಮ ಚೊಚ್ಚಲ ಕವನ ಸಂಕಲನವನ್ನು ಪ್ರಕಟಿಸಿದ್ದಾರೆ.

ಇದು 44 ಕವಿತೆಗಳಿರುವ ಸಂಕಲನವಾಗಿದೆ. ಈ ಕೃತಿಗೆ ರಾಜ್ಯ ಮಟ್ಟದ ಅಡ್ವೈಸರ್ ‘ಪುಸ್ತಕ ಸಾಹಿತ್ಯ ಪ್ರಶಸ್ತಿ’ ಲಭಿಸಿದೆ. ಡಾ. ಲೋಕೇಶ್ ಅಗಸನಕಟ್ಟೆ ಅವರ ಮುನ್ನುಡಿ, ಬಿದರಹಳ್ಳಿ ನರಸಿಂಹಮೂರ್ತಿಯವರ ಬೆನ್ನುಡಿಗಳು ಕವನ ಸಂಕಲನದ ಸೂಕ್ಷ್ಮ ಒಳನೋಟಗಳನ್ನ ಓದುಗರಿಗೆ ಪರಿಚಯಿಸುತ್ತವೆ.

‘ಈಗೀಗ ಹೃದಯ ತುಂಬಿ ಬರಮಾಡಿಕೊಳ್ಳುವುದು ಅಸಹಜವಾಗಿದೆ’ ಎನ್ನುತ್ತಲೇ ಸಹಜ ಬದುಕು ಮಾಯವಾಗಿ ಕೃತಕತೆ, ಯಾಂತ್ರಿಕತೆಗಳು ಪಾರುಪತ್ಯ ಮೆರೆಯುತ್ತಿರುವುದನ್ನು ತಿವಿಯುತ್ತಾರೆ. ಮಾನವೀಯತೆ ಮತ್ತು ಅಂತಃಕರಣ ಭಾವಗಳ ಅಧಃಪತನಕ್ಕೆ ಬಿಕ್ಕುವ ಕವಿಯ ಮನೋಗತ ಮತ್ತು ಭಾವಾಭಿವ್ಯಕ್ತಿ ಇಡೀ ಸಂಕಲನದುದ್ದಕ್ಕೂ ವಿವಿಧ ಆಯಾಮಗಳಲ್ಲಿ ತೆರೆದುಕೊಳ್ಳುತ್ತ ಕವಿಯ ಕರುಣಾ ರಸವನ್ನು ಬಹುಮುಖಿಯಾಗಿ ಚರ್ಚಿಸುತ್ತದೆ. ಬಾಳ ನೌಕೆಯ ಜಂಜಡಗಳು, ತಾಕಲಾಟಗಳು, ತಾಪತ್ರಯಗಳು, ತಲ್ಲಣಗಳಿಂದ ಬಿಡುಗಡೆ ಪಡೆಯಲು ಕವಿಯು ಹಂಬಲಿಸುತ್ತಾ, ಪರಿಹಾರವೆಂಬ ಬೆಳಕಿನ ದೀಪ ಹಿಡಿಯ ಹೊರಟಿದ್ದಾರೆ. ತನ್ನನ್ನು ಕಾಡಿದ ಕಾವ್ಯ ವಸ್ತುಗಳ ಬಗೆಗಿನ ಕವಿಯ ನಿಲುವು ದೃಢವಾಗಿ ಗೋಚರಿಸುತ್ತದೆ. ವಾಸ್ತವಿಕ ಸತ್ಯಗಳನ್ನು ಮುಚ್ಚುಮರೆ ಇಲ್ಲದೆ ಮೊನಚಾದ ಪದ ಭಾವಗಳಲ್ಲಿ ಪ್ರಕಟಿಸುತ್ತಲೇ ಕ್ರಿಯೆಗಳಿಗೆ ಸೂಕ್ತ ಪ್ರತಿಸ್ಪಂದನೆಗಳನ್ನು ನೀಡಿದ್ದಾರೆ. ಸಂವೇದನೆಗಳಿಗೆ ಸೂಕ್ಷ್ಮಜ್ಞತೆಯಿಂದ ಕವಿಯು ಮುಖಾಮುಖಿಯಾಗಿರುವುದನ್ನು ಇಲ್ಲಿನ ಕವಿತೆಗಳು ಮಾತನಾಡುತ್ತವೆ. ವೈಯಕ್ತಿಕ ಮತ್ತು ಸಾಮಾಜಿಕ ಸಂವೇದನೆಗಳನ್ನು ಸೃಜನಾತ್ಮಕವಾಗಿ ಅಭಿವ್ಯಕ್ತಪಡಿಸುವಲ್ಲಿ ಕವಿಯ ಕಲಾತ್ಮಕತೆ ಬಹುವಾಗಿ ಕುಶಲತೆ ತೋರಿದೆ.

(ಜಿ.ಆರ್. ರೇವಣಸಿದ್ದಪ್ಪ)

ರೇವಣಸಿದ್ದಪ್ಪ ಅವರ ಅಧ್ಯಾಪನ ವೃತ್ತಿಯ ಪ್ರಭಾವ ಅವರ ಬರಹಗಳಲ್ಲಿ ಕಾಣುತ್ತದೆ. ಇವರು ವೃತ್ತಿಯಲ್ಲಿ ಇಂಗ್ಲೀಷ್ ಉಪನ್ಯಾಸಕರಾಗಿದ್ದು ಇಂಗ್ಲೀಷ್ ಸಾಹಿತ್ಯದ ಅರಿವು ಇರುವುದರಿಂದ ಅವುಗಳ ಪ್ರಭಾವವು ಇವರ ಕವಿತೆಗಳಲ್ಲಿ ಗಾಢವಾಗಿ ಎದ್ದು ಕಾಣುತ್ತದೆ. ಇಂದಿನ ಕಾಲಘಟ್ಟದಲ್ಲಿನ ಜಗತ್ತನ್ನು ಹಿಂದಿನ ತಲೆಮಾರುಗಳ ಬದುಕಿನ ಶೈಲಿಯೊಂದಿಗೆ ಸಮೀಕರಿಸುತ್ತಾ ಬದುಕಿನೊಂದಿಗಿನ ಸಂಘರ್ಷಗಳನ್ನ ಅರ್ಥೈಸಿದ್ದಾರೆ.

ಏಕಾಂತ ಮತ್ತು ಲೋಕಾಂತಗಳೆರಡನ್ನು ಎದುರುಗೊಂಡ ಕವಿ ಭಿನ್ನ ನೆಲೆಗಳಲ್ಲಿ ಅವುಗಳನ್ನು ಚಿತ್ರಿಸಿದ್ದಾರೆ.
ಸಾಮಾಜಿಕ ಕಳಕಳಿ ಹಾಗೂ ಸುಧಾರಣೆಯೇ ಈ ಕವಿತೆಗಳ ಜೀವಾಳವಾಗಿದ್ದು ಸಾಮಾಜಿಕ ಬದುಕಿನ ನಕಾರಾತ್ಮಕ ಸೀಳುಗಳನ್ನು ಮುಚ್ಚಿ ಸದೃಢ ಸಾಮಾಜಿಕ ಗೋಡೆಯನ್ನ ಕಟ್ಟಬಯಸಿದ್ದಾರೆ‌. ಆ ಮೂಲಕ ಮಾನವ ಸಂಬಂಧಗಳನ್ನು ಬಾಂಧವ್ಯಗಳನ್ನು ಒಗ್ಗೂಡಿಸುವ ಪ್ರಯತ್ನ ಸಾಗಿದೆ.

ಸಮಷ್ಠಿ ಪ್ರಜ್ಞೆಯನ್ನು ಜಾಗೃತಗೊಳಿಸುವ ಕವಿತೆಗಳು ಸಮ ಸಮಾಜದ ನಿರ್ಮಾಣಕ್ಕೆ ಬೆಂಬಲಿಸುತ್ತವೆ. ನಿಷ್ಠುರತೆಗೆ ಹೆದರದ ಕವಿ ಪ್ರಾಮಾಣಿಕವಾಗಿ ಸಹೃದಯನ ಎದೆ ಬಾಗಿಲು ತಟ್ಟಿದ್ದಾರೆ. ತಪ್ಪು ಕಂಡಾಗ ಎಚ್ಚರಿಕೆಯ ಗಂಟಾನಾದ ಮೊಳಗಿಸುತ್ತಲೇ ಸಮಾಜದ ಆಗು ಹೋಗುಗಳನ್ನು ತೆರೆದಿಡುತ್ತ ಅಂಕುಡೊಂಕುಗಳ ಸರಿಪಡಿಸಲು ಆಶಿಸುತ್ತಾರೆ. ಮುಕ್ತ ಮುಕ್ತ ಅಭಿವ್ಯಕ್ತಿ ಕವಿಯನ್ನು ವಿಭಿನ್ನ ನೆಲೆಯಲ್ಲಿ ನಿಲ್ಲಿಸುತ್ತದೆ. ಇಲ್ಲಿ ಕವಿ ಯಾವುದನ್ನು ಮುಚ್ಚಿಟ್ಟು ಕಾವ್ಯ ರಚಿಸಿದೆ ಷಡ್ಯಂತ್ರಗಳನ್ನು ಬಟಾ ಬಯಲು ಮಾಡುತ್ತಾರೆ.

ಬದುಕಿನ ವಿವಿಧ ಸ್ತರಗಳಲ್ಲಿ ಕಂಡುಂಡ ಸಿಹಿಕಹಿ ಸಂವೇದನೆಗಳು, ಪ್ರೀತಿ, ಪ್ರೇಮ, ಸಂಕಟ, ನೋವು, ವಿರಹ, ಹತಾಶೆ, ಸಾವು, ಸಮಾಧಾನ, ಸಮಚಿತ್ತತೆ, ಯಾಂತ್ರಿಕ ಬದುಕು, ಅಸಮಾನತೆಯ ವಿರುದ್ಧ ದನಿ, ಮಹನೀಯರ ಸಾಮಾಜಿಕ ಕಳಕಳಿಯ ಸ್ಮರಣೆ, ಜನರ ಕಲ್ಯಾಣ, ಮಗುವಿನ ಮುಗ್ಧತೆ, ಪಲಾಯನವಾದಿಗಳ ಅವಕಾಶವಾದಿತನ, ಬಡತನ, ಹಸಿವು, ಅಗಲಿಕೆಯ ದುಃಖ, ಬದುಕಿನೊಂದಿಗೆ ರೈಲು ಬಂಡಿಯ ಹೋಲಿಕೆ, ಪ್ರಕೃತಿ ಸಂವೇದನೆಗಳು, ಕಾಡುವ ನೆನಪುಗಳು, ಕಾನನದ ವಿಸ್ಮಯ ಸಂಗತಿಗಳು, ಬದುಕಿನ ಸಾರ್ಥಕತೆ, ಬಿಟ್ಟು ಬಂದ ಊರಿನ ಕನವರಿಕೆಗಳು, ಒಲವಿನ ಆರಾಧನೆ, ಪಯಣದ ಅನುಭವಗಳು, ಸಾಂತ್ವನಗಳು, ಬಾಳ ನೌಕೆಗೆ ಬೆಳಕಿನ ದೀಪ ಹಿಡಿದು ವಿಜೃಂಭಿಸಿವೆ.

ಈ ಸಂಕಲನದ ಕವಿತೆಗಳು ಕವಿಯ ಕಾವ್ಯದ ನಿಲುವುಗಳನ್ನ ಸ್ಪಷ್ಟವಾಗಿ ಓದುಗರ ಮುಂದೆ ಇಡುತ್ತವೆ. ಸಮಾಜದ ಒಳಿತಿಗಾಗಿ ಕವಿ ಆರೋಗ್ಯಕರ ಆಶಯಗಳನ್ನು, ಸಕಾರಾತ್ಮಕ ಆಶಾಭಾವವನ್ನು ತಮ್ಮ ಕವಿತೆಗಳಲ್ಲಿ ವಿಸ್ತರಿಸಿದ್ದಾರೆ. ಬಹುತೇಕ ಕವಿತೆಗಳಲ್ಲಿ ಕಂಡುಬರುವ ಸಾಮಾನ್ಯ ಲಕ್ಷಣ ಪದ ಮತ್ತು ಅರ್ಥಗಳ ಸಂಯೋಜನೆ ಹಾಗೂ ಕವಿತೆಗಳ ಬಂಧ. ಇವು ಅರ್ಥಪೂರ್ಣವಾಗಿ ಮೂಡಿಬಂದಿದ್ದು ಕಥನ ಕಾವ್ಯ ಶೈಲಿಯನ್ನು ಅಲ್ಲಲ್ಲಿ ಬಳಸಿಕೊಂಡಿದ್ದಾರೆ.

ಸಮಾಜ ಸುಧಾರಣೆಗೆ ಪೂರಕವಾದ ಪ್ರಶ್ನೆಗಳನ್ನು ಎತ್ತುತ್ತಾ ಓದುಗರನ್ನು ಆತ್ಮಾವಲೋಕನಕ್ಕೆ ಹಚ್ಚುವ ಕವಿತೆಗಳು ಮೂಢನಂಬಿಕೆ, ಸಾಮಾಜಿಕ ಜಾಢ್ಯಗಳನ್ನು ಗುಡಿಸಿ ಹೊಸದೊಂದು ಚಿಂತನಾಶೀಲ ಜಗತ್ತನ್ನು ಸೃಷ್ಟಿಸಲು ಹಪಹಪಿಸುತ್ತವೆ.

ಸಿದ್ಧ ಮಾದರಿಯ ಸಿದ್ಧಾಂತಗಳನ್ನು ಒಡೆಯಲು, ಸಾಮಾಜಿಕ ನಿರ್ಬಂಧಗಳನ್ನು ದಾಟಲು ಹಿಂಜರಿಯದ ಕವಿ ಭಾವ ತೀವ್ರತೆಯಲ್ಲಿ ಕವಿತೆಗಳನ್ನು ಹೆಣೆದಿದ್ದಾರೆ. ಆದರೂ ಕಾವ್ಯದ ನವಿರು ಭಾವಕ್ಕೆ ಮುಕ್ಕಾಗದಂತೆ ಎಚ್ಚರವಹಿಸಿದ್ದಾರೆ. ಔಚಿತ್ಯಪೂರ್ಣ ಕಾವ್ಯಾಭಿವ್ಯಕ್ತಿ ಸಹೃದಯನನ್ನು ಓದಿನೆಡೆಗೆ ಧಾವಿಸಿ ಬರಲು ಪ್ರೇರೇಪಿಸುತ್ತವೆ.

ಕೆಲವೊಂದು ಕವಿತೆಗಳಲ್ಲಿ ಕವಿ ತಾತ್ವಿಕತೆ ಮೆರೆದಿದ್ದಾರೆ. ಮನುಷ್ಯ ಸಾರ್ಥಕ ಬದುಕಿಗೆ ಬೇಕಾಗಿದ್ದನ್ನು ಬಿಟ್ಟು ನಿರರ್ಥಕ ಕಾರ್ಯಗಳಲ್ಲಿ ತೊಡಗುವುದಕ್ಕೆ ಬೇಸರಿಸುತ್ತಾರೆ. ಅಪಾರ ತುಡಿತ, ನೋವಿಗೆ ಮಿಡಿತ, ಗಾಢವಾದ ನಿರೀಕ್ಷೆಗಳು, ಸೂಕ್ಷ್ಮಗ್ರಾಹಿತನ ಸಂಕಲನದ ಹೈಲೈಟ್ಸ್ ಆಗಿದೆ‌. ಸ್ವಾನುಭವ ಮತ್ತು ಸ್ವಾನುಭಾವ ಕವಿ ಹಾಗೂ ಕವಿತೆಯನ್ನು ವಿಶೇಷವಾಗಿ ನೋಡುವಂತೆ ಮಾಡುತ್ತವೆ‌.

ಪ್ರಾಕೃತಿಕ ಅಂಶಗಳನ್ನು ಮಾನವನ ನಡೆಯೊಂದಿಗೆ ಹೋಲಿಸಿ, ನಿಸರ್ಗಕ್ಕಿರುವ ಸಾಮರಸ್ಯದ ಒಂದು ಅಂಶವು ಮನುಷ್ಯನಿಗೆ ಇಲ್ಲದಿರುವುದಕ್ಕೆ ಕವಿ ದುಃಖಿಸುತ್ತಾರೆ.

ಕವಿತಾ ರಚನೆಯ ಆಕಾರ, ವಿನ್ಯಾಸ, ಬಂಧ, ಪರಿಕಲ್ಪನೆಗಳ ಸೊಗಡು ಸೊಗಸಾಗಿ ನಿರೂಪಿತವಾಗಿದೆ. ಸಹೃದಯನೆದೆ ಸ್ಪರ್ಶಿಸುವ ಭಾಷೆಯ ಸುಲಲಿತ ಪ್ರಯೋಗ ಇವರದಾಗಿದ್ದು ಭಾಷಾ ಹಿಡಿತ ಗಮನ ಸೆಳೆಯುತ್ತದೆ. ಕಲ್ಪನಾ ರಹಿತವಾಗಿ ಅಥವಾ ಅಲ್ಪಸ್ವಲ್ಪ ಕಲ್ಪನೆಯೊಂದಿಗೆ ವಾಸ್ತವದ ಲೋಕಾನುಭವಗಳನ್ನು ಕವಿತೆಗಳಾಗಿಸುತ್ತ ಸಾಗಿರುವ ಪರಿ ಕವಿಯ ಅನುಭವ ಸಾಂದ್ರತೆಯ ಚಹರೆಗಳನ್ನು ದಾಖಲಿಸುತ್ತದೆ.

ಸುದೀರ್ಘತೆಯ ಲಕ್ಷಣದ ಕವಿತೆಗಳು

ಕವಿ ಇಲ್ಲಿನ ಕವಿತೆಗಳನ್ನು ದೀರ್ಘವಾಗಿ ಬೆಳೆಸುತ್ತಾ ಹೋಗಿದ್ದಾರೆ ಎನ್ನುವುದಕ್ಕಿಂತ ಕವಿಯ ಧ್ಯಾನಸ್ಥ ಸ್ಥಿತಿ ಕವಿಯ ಪ್ರಜ್ಞಾಪೂರ್ವಕತೆಯನ್ನು ಮೀರಿ ಕವಿತೆಗಳನ್ನು ವಿಸ್ತಾರಗೊಳಿಸಿದೆ. ಸುಮಾರು ಮೂರು ಪುಟಗಳವರೆಗೂ ಚಾಚಿಕೊಂಡಿರುವ ಕವಿತೆಗಳ ಭಾವದೊನಲು ಎಲ್ಲೂ ಏಕತಾನತೆಗೆ ಎಡತಾಕುವುದಿಲ್ಲ. ತಾಜಾತನದ ರೂಪಕಗಳು, ಪ್ರತಿಮೆಗಳು ಕವಿತೆಗಳಿಗೆ ಗಟ್ಟಿತನ ತುಂಬಿ ಆಪ್ತತೆ ಕಾಯ್ದುಕೊಂಡಿವೆ. ಓದಿನ ಪ್ರೀತಿ ಗುಕ್ಕಿಗೂ ಬೇರೆ ಬೇರೆಯದೆ ಅರ್ಥ ಧ್ವನಿಸುವ ಕವಿತೆಗಳು ಚಿರಾಯುವಾಗಲು ಪ್ರಯತ್ನಿಸುತ್ತವೆ.

ಬುದ್ಧ ಬಸವ ಅಂಬೇಡ್ಕರ್ ಗಾಂಧಿ
ನಮಗೆ ದಕ್ಕಿದ್ದೆಷ್ಟು?
ಅವರ ಓದು ಅರಿವು
ಬಾಳ ಹರಹು
ನಮಗೆ ಹೊಕ್ಕಿದೆಷ್ಟು?
ಅವರ ಅಪಾರ ಕರುಣೆಯ ಕಡಲು
ನಮಗೆ ರಕ್ತಗತ ಆಗಿದ್ದೆಷ್ಟು?
– ಬುದ್ಧ ಬಸವ ಅಂಬೇಡ್ಕರ್ ಗಾಂಧಿ ಮತ್ತು ನಾವು

ಈ ಕವಿತೆ ಜನಹಿತಕ್ಕಾಗಿ, ಸಮ ಸಮಾಜ ನಿರ್ಮಾಣಕ್ಕಾಗಿ ದುಡಿದ ಮಹನೀಯರುಗಳನ್ನು ಉದಾಹರಿಸುತ್ತ ಮನುಷ್ಯನನ್ನು ಆತ್ಮ ವಿಮರ್ಶೆಗೆ ಒಳಪಡಿಸುತ್ತದೆ. ಈ ಮಹಾನ್ ಸಾಧಕರ ಸಾಧನೆ, ಸೇವೆ, ತ್ಯಾಗ, ಪ್ರೀತಿ, ಕಾಳಜಿಯನ್ನು ಕೇವಲ ಯಾಂತ್ರಿಕವಾಗಿ ಮಂತ್ರದಂತೆ ನಿತ್ಯಪಠಿಸುವ ಆ ಮುಖವಾಡಿತ ಜನರ ನಡೆಯನ್ನು ಖಂಡಿಸುತ್ತಾರೆ. ಮಹನೀಯರ ಗುಣಗಾನ ಮಾಡಿದರೆ ಸಾಲದು, ಅವರ ದಾರಿಯಲ್ಲಿ ಸಾಗಿ ಅವರ ಕನಸುಗಳನ್ನು ನನಸು ಮಾಡಬೇಕು. ನಾವು ಬುದ್ಧ ಬಸವ ಅಂಬೇಡ್ಕರ್ ಗಾಂಧಿಯನ್ನ, ಅವರ ಚಿಂತನೆಗಳನ್ನ, ಅವರ ಜ್ಞಾನ, ಆಲೋಚನೆ, ಯೋಚನೆಗಳ ಒಂದಂಶವಾದರೂ ನಾವು ದಕ್ಕಿಸಿಕೊಂಡಿಲ್ಲ ಎಂದು ವಿಷಾದಿಸುತ್ತಾರೆ.

ಕುಂಡದ ಗಿಡಕ್ಕಿಲ್ಲ
ಬಟಾ ಬಯಲಲಿ
ಸೆಟೆದು ನಿಂತ ಹೆಮ್ಮರದ ಗತ್ತು
ಇರುವಷ್ಟು ಕಾಲ ಇದ್ದುದ್ದನ್ನು ಸೇವಿಸಿ
ಬದುಕುತ್ತದೆ
ಬೆಳಕಿನತ್ತ ಚಿತ್ತವಿಟ್ಟು
– ಎರಡು ಗಿಡಗಳು

ಬಯಲಲ್ಲಿ ಬೆಳೆದ ಮರ ಮತ್ತು ಕುಂಡದ ಗಿಡಗಳ ರೂಪಕಗಳ ಮೂಲಕ ಕವಿ ಸಂಕುಚಿತ ಮನೋಭಾವ ಮತ್ತು ವಿಶಾಲ ದೃಷ್ಟಿಕೋನ ಹೊಂದಿರುವ ಜನಗಳ ಮನಸ್ಥಿತಿ, ಗುಣ ಸ್ವಭಾವಗಳನ್ನ ಚಿತ್ರಿಸಿದ್ದಾರೆ. ಮತ್ತೊಂದು ಆಯಾಮದಲ್ಲಿ ನೋಡುವುದಾದರೆ ಬುದ್ದಿಹೀನ ಮತ್ತು ಬುದ್ಧಿವಂತನ ರೂಪದಲ್ಲೂ ಕಾಣುತ್ತದೆ. ಕುಂಡದ ಗಿಡ ಪರಿಮಿತಿಯನ್ನು ಸೂಚಿಸಿದರೆ, ಬಯಲಲ್ಲಿ ಬೆಳೆದ ಮರ ಅಗಾಧತೆ ಹರವನ್ನ ಸಂಕೇತಿಸುತ್ತದೆ. ವಿಶಾಲ ಮನೋಭಾವ ಮತ್ತು ಬುದ್ಧಿವಂತಿಕೆ ಎಂದಿಗೂ ಈ ಜಗತ್ತಿನಲ್ಲಿ ಮಾನ್ಯವಾಗುವುದು ಎಂಬ ಅರ್ಥವಿಲ್ಲಿದೆ.

ಅನಿವಾರ್ಯವಲ್ಲ
ಹಠಯೋಗಿಯಂತೆ ಅದುಮಿಡಬಹುದು
ಆದರೂ ಬಸುಗುಡುವ ನಾಗನ
ಮಣಿಸುವ ದರ್ದು
ಯಾರಿಗುಂಟು?
– ಬೆದೆ

ಈ ಕವಿತೆ ಸಕಲ ಜೀವರಾಶಿಗಳಲ್ಲೂ ಕಾಣುವ ಸಹಜ ಕ್ರಿಯೆಯಾದ ಲೈಂಗಿಕತೆ ಕುರಿತು ಚರ್ಚಿಸುತ್ತದೆ. ಅರಿಷಡ್ವರ್ಗಗಳನ್ನು ಗೆಲ್ಲುವುದು ಸುಲಭವಲ್ಲ, ಅದು ಸಹಜವೂ ಅಲ್ಲ. ಕಾಮವನ್ನು ನೈತಿಕ ಪರಿಮಿತಿ ಒಳಗೆ ಆರೋಗ್ಯಕರವಾಗಿ ಪಡೆಯಬೇಕು. ಅದರ ನಿಯಂತ್ರಣ ಸಲ್ಲದು. ನಿಯಂತ್ರಿಸುವುದು ಅಸಹಜತೆಯ ಪ್ರತೀಕವಾಗುತ್ತದೆ. ಎನ್ನುವ ಕವಿ ಹಠಯೋಗಿಯ ಉದಾಹರಣೆ ಕೊಡುತ್ತಾರೆ. ಅದು ಅನಿವಾರ್ಯತೆಯ ನಡೆಯೇ ಹೊರತು, ಸ್ವಯಂ ನಿಯಂತ್ರಣವಲ್ಲ. ಮನುಜನ ಇತರ ಅಗತ್ಯಗಳಂತೆ ಕಾಮವು ದೈಹಿಕ ಅಗತ್ಯ. ಅದನ್ನು ಕಾಲಕಾಲಕ್ಕೆ ಪೂರೈಸಿಕೊಳ್ಳಬೇಕೆಂಬುದು ಕವಿಯ ಮನೋಗತ. ಇಲ್ಲಿ ಅಶ್ಲೀಲತೆಗೆ ಜಾಗ ನೀಡದೆ ಕಾಮವನ್ನು ಅರ್ಥೈಸುವಲ್ಲಿ ಕವಿಯ ರಚನೆ ಗಮನ ಸೆಳೆಯುತ್ತದೆ. ಕವಿಯಿಲ್ಲಿ ಹೇಳುವ ಮಾತು ಘರ್ಷಣೆಯಲ್ಲಿ ಕಾವಿದೆ, ಕಾವಿನಲ್ಲಿ ಬೆಳಕು ಇದೆ ಎನ್ನುವಲ್ಲಿ ಕಾಮದ ಉನ್ಮತ್ತತೆಯಲ್ಲೂ ಖುಷಿಯಿದೆ ಎಂಬರ್ಥವಿಲ್ಲಿ ವ್ಯಕ್ತವಾಗಿದೆ.

ಈ ಲೆಕ್ಕ
ಕೆಲವರಿಗೆ ಸರಳ
ಇನ್ನು ಕೆಲವರಿಗೆ ಸರಾಸರಿ
ಹಲವರಿಗೆ ಕಠಿಣಾತಿಕಠಿಣ
ಸಹವಾಸ ಸಾಕೆಂದು
ಕೈ ಚೆಲ್ಲುವಂತಿಲ್ಲ
ಯಾರದೋ ಕಣ್ ಪಾಯಿಂಟ್‌ನಲ್ಲಿ ಪರೀಕ್ಷೆ ಬರೆಯುತ್ತಿದ್ದೇವೆ ನಾವೆಲ್ಲ
– ಲೆಕ್ಕ

ಈ ಲೆಕ್ಕ ಕವಿತೆಯು ಕವಿ ಬದುಕನ್ನು ಅಂಕ ಗಣಿತಕ್ಕೆ ಹೋಲಿಸುತ್ತಾ ಶೂನ್ಯದಿಂದ ಪ್ರಾರಂಭವಾಗುವ ಬದುಕು ಕೊನೆಗೆ ಶೂನ್ಯವಾಗುವ ಸತ್ಯವನ್ನ ಬದುಕಿನ ಫಿಲಾಸಫಿಯಾಗಿ ರಚಿಸಿದ್ದಾರೆ. ಯಾವುದನ್ನು ಯಾವ ಕ್ರಿಯೆಗೆ ಒಳಪಡಿಸಬೇಕೆಂಬ ಅರಿವು ಮನುಜರಿಗೆ ಇರಬೇಕಾಗುತ್ತದೆ. ಅವರವರ ಶಕ್ತ್ಯಾನುಸಾರ ಬದುಕಿನ ಲೆಕ್ಕಗಳನ್ನು ಬಿಡಿಸುತ್ತಾರೆ ಎನ್ನುವರು. ಕವಿ ಅಂತಿಮವಾಗಿ ಯಾರದೋ ಕಣ್ ಪಾಯಿಂಟ್‌ನಲ್ಲಿ ಪರೀಕ್ಷೆ ಬರೆಯುತ್ತಿದ್ದೇನೆ ಎಂಬ ತಾತ್ವಿಕ ಹಾಗೂ ಆಧ್ಯಾತ್ಮಿಕ ಚಿಂತನೆಯಲ್ಲಿ ಸೇರಿಸುವುದನ್ನು ಮರೆಯುವುದಿಲ್ಲ. ಇಲ್ಲಿ ಮನುಷ್ಯನ ಶಕ್ತಿಯನ್ನು ಮೀರಿದ ಮತ್ತೊಂದು ಶಕ್ತಿ ಇದೆ ಎಂಬುದು ಕವಿಯ ಭಾವವಾಗಿದೆ.

ಲೋಕದ ಮೋಟಾರು
ಯಾರೊಬ್ಬರ ಉಸಿರು
ಹೋದಾಗಲೂ
ಪಂಚರ್ ಆಗುವುದಿಲ್ಲ
ಗತಿಸಿದವರಿಗೆ ಬದುಕಿದವರು
ಸಾಥ್ ಕೊಡುವಂತಿದ್ದರೆ
ಪಂಚಭೂತಗಳು ಗುದ್ದು ಸೇರುತ್ತಿದ್ದವು
– ಇನ್ನಿಲ್ಲವಾದಾಗ

ಇನ್ನಿಲ್ಲವಾದಾಗ ಎಂಬ ಪದವೇ ತತ್ವಜ್ಞಾನವನ್ನ ಬೋಧಿಸುತ್ತದೆ. ಇಲ್ಲಿ ಪಂಚಭೂತಗಳ ಹೊರತಾಗಿ ಈ ಜಗತ್ತು ಯಾರನ್ನು ಅವಲಂಬಿಸಿಲ್ಲ. ಅದು ಈ ಪ್ರಕೃತಿಗೆ ಅನಿವಾರ್ಯವೂ ಅಲ್ಲ. ಈ ಲೋಕದ ಮೋಟಾರ್ ಅಂದರೆ ಕಾಲಚಕ್ರ ನಿರಂತರ ಚಲಿಸುತ್ತಿರುತ್ತದೆ. ಇಲ್ಲಿ ಹಲವರು ಈ ಮೋಟಾರು ಹತ್ತಿದರೆ ಕೆಲವರು ಇಳಿಯುತ್ತಾರೆ. ಈ ಏರು ಇಳಿಗಳ ನಡುವಿನ ಸಮತ್ವವೇ ಜೀವನವಾಗಿದೆ. ಮರಣ ಸೃಷ್ಟಿಯ ಸಹಜಕ್ರಿಯೆ. ಅವರವರ ನಿಲ್ದಾಣ ಬಂದಾಗ ಇಳಿಯುತ್ತಾರೆಯೇ ಹೊರತು ಪರರ ಜೊತೆಗಾಗಿ ತನ್ನದಲ್ಲದ ನಿಲ್ದಾಣದಲ್ಲಿ ಇಳಿಯಲಾರರು ಎಂಬ ಸೂಚ್ಯ ಅರ್ಥದಲ್ಲಿ ಕವಿ ಬದುಕಿನ ಪರಮ ಸತ್ಯವನ್ನು ಬೋಧಿಸುತ್ತಾರೆ.

ಹೇಳಿದವನಿಗೂ ಹೇಳಿಸಿಕೊಂಡವನಿಗೂ
ಗೊತ್ತಿರುತ್ತದೆ ಯಾರೋ ಹೇಳಿದ ಮಾತ್ರಕ್ಕೆ
ನಿರ್ಗಮಿತ ಜೀವ
ದೇಹ ಸೇರುವುದಿಲ್ಲ ಸಮಾಧಾನವಾಗುವುದಿಲ್ಲ
– ಸಮಾಧಾನ ಮಾಡಿಕೊಳ್ಳಿ

ಸಮಾಧಾನ ಮಾಡಿಕೊಳ್ಳಿ ಎಂಬ ಶೀರ್ಷಿಕೆಯೇ ಏನನ್ನೋ ಕಳೆದುಕೊಂಡಿದ್ದೇವೆ ಎಂಬ ಕುರುಹು ನೀಡುತ್ತದೆ. ಸಾವಿನ ಮನೆಯ ಸಾಂತ್ವನದ ಸಾಲುಗಳು ಮನಕಲಕುತ್ತವೆ. ಬದುಕು ಕ್ಷಣಿಕ ಜೀವದ ತೊಟ್ಟು ಕಳಚಿ ಯಾವಾಗ ಹೋಗುತ್ತೇವೆ ಎಂಬ ಸಂಗತಿ ಯಾರಿಗೂ ತಿಳಿಯದು. ಸಮಾಧಾನ ಮಾಡಿಕೊಳ್ಳಿ ಎನ್ನುವ ಮಾತಿಗೆ ಕೊನೆಯಿಲ್ಲ. ಸಾವು ಮತ್ತು ಮರು ಹುಟ್ಟು ಕಾಲ ಚಕ್ರದಲ್ಲಿ ನಿರಂತರ ಪ್ರಕ್ರಿಯೆಗಳು. ಸಾವಿನ ಮನೆಯಲ್ಲಿ ಸಾಂತ್ವನ ಹೇಳುವುದು, ಅವರ ದುಃಖಕ್ಕೆ ಮಿಡಿಯುವುದು ಸಹಜ ಮಾನವ ಗುಣವಾದರೂ ಅವರ ದುಃಖದ ಕಡಲಿನ ಅಲೆಗಳಿಗೆ ತಡೆಯೊಡ್ಡುವುದು ಅಸಾಧ್ಯ. ಸಂತೈಸುವುದು ಮಾನವೀಯತೆಯ ಸಂಕೇತವಾದರೂ ಅದರಿಂದ ಹೋದ ಜೀವ ತರುವುದಾಗಲಿ, ಸಮಾಧಾನ ಮಾಡಿಕೊಳ್ಳುವುದಾಗಲಿ ಸುಲಭವಲ್ಲ. ಅದನ್ನು ಅನುಭವಿಸುವವರಿಗೆ ಮಾತ್ರ ಅದರ ನೋವು ಗೊತ್ತು ಎಂದು ಸಾವಿನ ಮನೆಯ ಅಪಾರ ದುಃಖವನ್ನ ವರ್ಣಿಸುತ್ತಾರೆ.
ಭಾವನೆಗಳನ್ನು ಬಿಂಬಿಸಬೇಕಾದ
ಮುಖ ಪರದೆಗೆ ಗರ ಬಡಿದು
ಬ್ಲರ್ ಆಗಿ ಕಾಣುತ್ತದೆ
– ಕೃತಕ ಬದುಕು

ಪ್ರೀತಿ, ಪ್ರೇಮ, ನೋವು, ದುಃಖ, ಕಷ್ಟ, ಸುಖ ಮುಂತಾದ ಯಾವ ಭಾವಕ್ಕೂ ಮಿಡಿಯದ ಮನುಷ್ಯನ ನಿರ್ಭಾವುಕ ಮನಸ್ಥಿತಿಯನ್ನ ಈ ಕವಿತೆ ಅನಾವರಣ ಮಾಡುತ್ತದೆ. ಮಾನವ ಸಂಬಂಧಗಳು ಯಾಂತ್ರಿಕವಾಗಿ ನೈಜತೆ ಮರೆಯಾಗುತ್ತಿರುವುದಕ್ಕೆ ದುಃಖಿಸುತ್ತದೆ. ಈ ಕವಿತೆಯಲ್ಲಿ ಗಂಭೀರವಾದ ಚಿಂತನೆಗಳನ್ನು ಕವಿ ಓದುಗರ ಮುಂದಿಡುತ್ತಾರೆ. ಜಾಲತಾಣಗಳಲ್ಲಿ ತಮ್ಮೆಲ್ಲ ಭಾವನೆಗಳನ್ನು ತೆರೆದಿಡುವ ಜನರು ಎದುರು ಬದುರು ಕೂತವರನ್ನು ಅಪರಿಚಿತರಾಗಿ ಕಾಣುವುದನ್ನು ವಿಡಂಬಿಸುತ್ತ ಕೃತಕ ಬದುಕನ್ನ ತೆರೆದಿಡುತ್ತಾರೆ.

ಎಳೆಗಾಯಿ
ಬಿರುಗಾಳಿಗೆ ಸಿಲುಕಿ
ನೆಲಕ್ಕುರುಳುವೊಲು
ಈ ಕಂದ
ಕಾಲನ ಕೈವಶವಾದರೆ
ನೀ ಕಂಗೆಟ್ಟು ಕಂಬನಿ ಗರೆಯಬೇಡ ತಾಯೇ
ಇನ್ನೊಮ್ಮೆ ನಿನ್ನ ಮಗುವಾಗಿ
ಹುಟ್ಟಿ ಬರುತ್ತೇನೆ
– ಎಳೆಗಾಯಿ

ಈ ಕವಿತೆ ನಾವು ಮಗುವನ್ನ ಮಗುವಿನ ಪ್ರತಿರೂಪವನ್ನ ಪ್ರತಿಯೊಂದರಲ್ಲೂ ಕಾಣಬಹುದು ಎಂದು ಅರ್ಥೈಸುತ್ತದೆ. ತಾಯಿ ಗರ್ಭದಿಂದ ಈ ಜಗತ್ತನ್ನು ಕಾಣುವ ಮೊದಲೇ ಮೀರಿಸುವ ಮಗು ತಾಯಿಗೆ ಹರಕೆ ಮಾಡಿಕೊಳ್ಳುವ ಮಗುವಿನ ಸ್ವಗತವಿದಾಗಿದೆ. ದೈಹಿಕವಾಗಿ ಇಲ್ಲದಿದ್ದರೂ ಪ್ರಕೃತಿಯ ಅಂಶಗಳಲ್ಲಿ ತಾನು ಜೀವಂತವಾಗಿ ಉಸಿರಾಡುತ್ತಿರುವುದಾಗಿ ಹೇಳುವ ಮಗುವಿನ ಮನದಾಳದ ಮಾತುಗಳು ಮನವನ್ನ ಆರ್ದ್ರಗೊಳಿಸುತ್ತವೆ. ತನ್ನ ತಾಯಿಯನ್ನು ಸಂತೈಸುತ್ತ ಮಗು ನಿನ್ನ ಒಡಲಲ್ಲಿ ಮತ್ತೊಮ್ಮೆ ಹುಟ್ಟಿ ಬರುವೆ ತಾಯಿ ದುಃಖಿಸದಿರು ಎಂದು ಸಮಾಧಾನಿಸುವ ಪರಿ ಹೆತ್ತವರ ನೋವಿನ ಕಟ್ಟೆ ಹೊಡಿಸುತ್ತದೆ.

ಅದೃಷ್ಟ ಒಲಿದಿದ್ದರೆ ಈ ನಾಯಿ
ಶೋಕಿಲಾಲನ ಮನೆಯ
ಉತ್ಸವ ಮೂರ್ತಿಯಾಗುತ್ತಿತ್ತು
ಸರ್ಕಸು ಕಂಪನಿಗಳಲ್ಲಿ ಚಮತ್ಕಾರ ತೋರುತ್ತಿತ್ತು ದೇಶಕ್ಕಾಗಿ ಮಡಿದು
ರಾಷ್ಟ್ರಧ್ವಜವ ಹೊತ್ತು ಮಲಗಿರುತ್ತಿತ್ತು
– ನಾಯಿ ಪಾಡು

ನಾಯಿ ಪಾಡು ಎಂಬ ನುಡಿಗಟ್ಟೇ ನಾಯಿಯ ಬೀದಿ ಬದುಕಿನ ಕಷ್ಟವನ್ನು ದ್ವನಿಸುತ್ತದೆ. ಬೀದಿ ನಾಯಿಯ ಅಸಹಜ ಸಾವನ್ನು ಕಂಡು ಕವಿ ಮನದಿಂದುದಿಸಿದ ಕವಿತೆ ಇದು. ದೇವರ ಕುಲುಮೆಯಲ್ಲಿ ಸೃಜಿಸಿದ ಅಗಣಿತ ಜೀವಿಗಳಲ್ಲಿ ನಾಯಿಯು ಒಂದು, ಮನುಷ್ಯನೂ ಹೌದು ಎನ್ನುತ್ತಲೇ ನಾಯಿ ಮತ್ತು ಮನುಷ್ಯರ ಬದುಕಿನ ವ್ಯತ್ಯಾಸಗಳನ್ನ ಹೇಳುತ್ತಾರೆ. ಶ್ರೀಮಂತ ಕುಟುಂಬದ ಜನರ ಶೋಕಿಗಾಗಿ ನಾಯಿ ಸಾಕುವ ಪರಿಯನ್ನು ವ್ಯಂಗ್ಯಭಾವದಲ್ಲಿ ವ್ಯಕ್ತಪಡಿಸುತ್ತಾರೆ. ಸರ್ಕಸ್ ಕಂಪನಿ ಸೇರಿದ್ದರೆ ಜನರನ್ನ ತನ್ನ ಚಮತ್ಕಾರದಿಂದ ನಗಿಸಿ ಚಪ್ಪಾಳೆಯನ್ನಾದರೂ ಗಿಟ್ಟಿಸುತ್ತಿತ್ತು. ಇನ್ನು ಸೈನ್ಯದಲ್ಲಿ ಮರಣ ಹೊಂದಿದ್ದರೆ ಗೌರವದ ಸಂಸ್ಕಾರವಾದರೂ ಸಿಗುತ್ತಿತ್ತು. ಆದರೆ ಇಲ್ಲಿ ಬೀದಿ ಹೆಣವಾಗಿ ಬಿದ್ದಿರುವ ನಾಯಿಯನ್ನು ನೋಡುವವರು ಯಾರು ಇಲ್ಲ ಎಂದು ಕವಿ ದುಃಖಿಸುತ್ತಾರೆ.

ಇದು ನಾಯಿಗಷ್ಟೇ ಅನ್ವಯವಾಗದೆ ಅನಾಥರು, ಅಸಹಾಯಕರು, ಬಡವರ ಪರಿಸ್ಥಿತಿಯನ್ನು ಕೂಡ ಮಾರ್ಮಿಕವಾಗಿ ಬಿಂಬಿಸುತ್ತದೆ.

ಹತ್ತುವವರು ಹತ್ತುತ್ತಾರೆ
ಇಳಿವವರು ಇಳಿಯುತ್ತಾರೆ
ಹಳಬರ ಜಾಗದಲ್ಲಿ
ಹೊಸಬರು ಬರುತ್ತಾರೆ
ಹೊಸಬರು ಹಳಬರರಾಗುವ ಹೊತ್ತಿಗೆ ಇನ್ಯಾರೋ ಇರುತ್ತಾರೆ
– ಯಂತ್ರಜೀವಿ

ಈ ಕವಿತೆಯಲ್ಲಿ ರೈಲು ಎಂಬುದು ಬದುಕಿನ ವಿವಿಧ ಸ್ತರಗಳ ರೂಪಕದಲ್ಲಿ ನಿರೂಪಿತವಾಗಿದೆ. ಬದುಕಿನ ನೈಜ ಹುಡುಕಾಟವಿಲ್ಲದೆ ನಮ್ಮಿಂದ ನಿರೀಕ್ಷಿಸಲಾಗದ ತಿರುವುಗಳು ಅನಿರೀಕ್ಷಿತವಾಗಿ ಎದುರಾಗುತ್ತವೆ. ಅವುಗಳನ್ನು ನಾವು ಒಪ್ಪಿಕೊಳ್ಳದೆ ಬೇರೆ ದಾರಿ ಇಲ್ಲ. ಇದೇ ಬದುಕು ಎಂದು ಕವಿತೆ ಹೇಳುತ್ತದೆ. ಬದುಕಿನಲ್ಲಿ ಸಂಧಿಸುವ ಜನಗಳು, ಸ್ಥಳ, ಸನ್ನಿವೇಶ, ವಸ್ತು, ಅವಕಾಶಗಳೆಲ್ಲವನ್ನು ರೈಲಿನ ಕಾರ್ಯಗಳಿಗೆ ಹೋಲಿಸುತ್ತ ತುಂಬಾ ಆಪ್ತ ಭಾವದಲ್ಲಿ ಯಂತ್ರ ಮತ್ತು ಜೀವಿಯನ್ನು ಯಂತ್ರಜೀವಿಯಾಗಿಸಿದ್ದಾರೆ.

ಪರರ ಪಾತ್ರಗಳಲ್ಲಿ
ಪರಕಾಯ ಪ್ರವೇಶ ಮಾಡಲು
ಲಘುಗುರುಗಳನೊರೆವ
ಕವಿಯಾಗಬೇಕೆ? ಪಾತ್ರ ಕಥಾವಸ್ತು ಸನ್ನಿವೇಶಗಳ ಕಟ್ಟುವ
ಕಥೆಗಾರ ಕಾದಂಬರಿ ಕಾರನಾಗಬೇಕೆ? ಅಳಿಸುತ್ತಾ ಮುಗಿಸುವ
ನಗಿಸುತ್ತ ಮಂಗಳ ಹಾಡುವ ನಾಟಕಕಾರನಾಗಬೇಕೆ? ಮನುಷ್ಯನಾದರೆ ಸಾಲದೆ? ಮಗುವಾದರೂ ಆಗದೆ? -ಮಗುವಾದರೂ ಆಗದೆ?

ನಾವು ಹೇಗಿದ್ದೇವೆ ಅಥವಾ ಹೇಗೆಲ್ಲ ಆಗಬಹುದು ಎಂಬುದನ್ನ ವಿಶ್ಲೇಷಿಸುವ ಕವಿಯು ಅದರ ಸಾಧಕ ಬಾಧಕಗಳನ್ನು ಕಾವ್ಯಾತ್ಮಕವಾಗಿ ಹೇಳುತ್ತಾರೆ. ನಾವು ಸಾಹಿತ್ಯವನ್ನು ಓದಲು ಸದಾ ಕವಿಯಾಗಬೇಕೆ? ಮನುಷ್ಯರಾದರೆ, ಮನುಷ್ಯತ್ವ ಇದ್ದರೆ ಸಾಲದೇ ಎಂದು ಕವಿ ಪ್ರಶ್ನಿಸುತ್ತಾರೆ. ಹೌದು ಇವು ಯೋಚಿಸಬೇಕಾದ ಸಾಲುಗಳು. ಮಿಡಿಯುವ ಹೃದಯ, ತುಡಿವ ಮನಸ್ಸು, ನೆರವಾಗುವ ಮತ್ತು ಕಣ್ಣೀರು ಒರೆಸುವ ಕೈಗಳಿದ್ದರೂ ಸಾಕು. ಇವೆಲ್ಲ ತಿಳಿಯಲು ನಾವು ಕವಿ, ಕಾದಂಬರಿ ಕಾರ, ನಾಟಕಕಾರರಾಗುವುದಕ್ಕಿಂತ ಮುಗ್ಧ ಹಾಗೂ ನಿಷ್ಕಲ್ಮಶ ಮನಸ್ಸಿನ ಮಗುವಾದರೂ ಸಾಲದೇ? ಮಾನವೀಯತೆ ಮೆರೆವ ಮನುಷ್ಯನಾದರೂ ಸಾಲದೇ ಎಂದು ಪ್ರಶ್ನಿಸುತ್ತಾ ಮಗುವಿನಂತೆ ಲೋಕದ ಜಂಜಡಗಳ ಅರಿವಿಲ್ಲದೆ ಬದುಕಿ ಬಿಡಬೇಕೆಂದು ಕವಿತೆ ಹಂಬಲಿಸುತ್ತದೆ.

ಇವಳು ಮುಖಾಮುಖಿಯಾದಾಗ
ಮಾತು ಹೊರಡುವುದಿಲ್ಲ
ಮನವು ಕದಲುವುದಿಲ್ಲ
ಮೌನದಾನಂದದನುಭವ
– ಇವಳು ಸುಳಿದಾಗ

ಇವಳು ಎಂದು ಮುಖಾಮುಖಿಯಾಗುವ ಕವಿತೆಯಲ್ಲಿ ಯಾರಿವಳು ಎಂದರೆ ಕವಿಯ ಕಾವ್ಯ ಕನ್ಯಿಕೆ, ಮಡದಿ, ಪ್ರೇಯಸಿ ಯಾರಾದರೂ ಆಗಿರಬಹುದು. ಇವಳೆಂಬ ರೂಪಕವಿಲ್ಲಿ ಹೆಣ್ಣು, ಸ್ತ್ರೀ ಎಂಬರ್ಥದಲ್ಲಿ ಬಿಂಬಿತವಾಗಿದೆ. ಹೌದು ಈ ಕವಿತೆಯಲ್ಲಿ ಹೆಣ್ಣಿನ ಅಗಾಧ ಶಕ್ತಿ, ಪ್ರೇಮ, ಬರಹದ ಸಾಮರ್ಥ್ಯವನ್ನು ಪ್ರಚಾರಪಡಿಸುತ್ತಾ ಅವಳಿದ್ದರೆ ಎಲ್ಲ ಸವಾಲುಗಳನ್ನು ಎದುರಿಸಬಹುದು, ಕಷ್ಟದಲ್ಲೂ ನಗಬಹುದು, ಮೌನದಲ್ಲೂ ಮಾತನಾಡಬಹುದು ಎನ್ನುತ್ತಲೇ ಕವಿ ಮಹಿಳೆಯರನ್ನು ಅತ್ಯಂತ ಗೌರವ ಭಾವದಲ್ಲಿ ಕಟ್ಟಿಕೊಡುತ್ತಾರೆ. ಇವರು ಎದುರಾದರೆ ಮಾತು ಹೊರಡುವುದಿಲ್ಲ ಮತ್ತು ಮನಕಲಕುವುದಿಲ್ಲ ಎನ್ನುವಲ್ಲಿ ಅವಳಿಗೆ ಇರುವ ಸೂಜಿಕಾಂತದ ಸೆಳೆತವನ್ನು, ಧನಾತ್ಮಕವಾಗಿ ಚಿತ್ರಿಸಿದ್ದಾರೆ.

ನೆನಪಿನ ಬುತ್ತಿಯ
ಕಟ್ಟಿಕೊಂಡು ಬಂದಿರಲು
ಅದು ಅಕ್ಷಯ ಪಾತ್ರೆಯಾಗಿ
ನೆನಪಿನ ಸವಿಯ ನುಣಿಸುತ್ತಿರಲು
ಬಿಟ್ಟು ಬಂದ ಊರು
ಬಿಟ್ಟು ಕೊಡುವುದಿಲ್ಲ
– ಬಿಟ್ಟು ಬಂದ ಊರು

ಬಹುತೇಕ ಕವನ ಸಂಕಲನಗಳಲ್ಲಿ ಅವರ ಊರಿನ ನೆನಪುಗಳ ಕವಿತೆಯೊಂದು ಓದುಗರನ್ನ ಎದುರುಗೊಂಡು ಅವರ ಊರಿನ ಅನುಭವಗಳನ್ನ ಮರು ಸೃಷ್ಟಿಸುತ್ತದೆ. ಈ ಕವಿಯೂ ಅದರ ಹೊರತಾಗಿಲ್ಲ. ತನ್ನೂರಿನಲ್ಲಿ ಅಪರೂಪಕ್ಕೆ ಬರುತ್ತಿದ್ದ ಬಸ್ಸಿನಲ್ಲಿ ಸೀಟು ಹಿಡಿಯುವ ಸಾಹಸ, ದಾರಿಗುಂಟ ಇದ್ದ ಸಾಲುಮರಗಳು, ಹಕ್ಕಿಪಿಕ್ಕಿಗಳು, ಖಗಮೃಗಗಳು, ಊರುಕೇರಿ, ಮನೆ ಮಠಗಳು, ತಮ್ಮ ಬಾಲ್ಯದಲ್ಲಿ ನೀಡುತ್ತಿದ್ದ ಖುಷಿಯ ಕ್ಷಣಗಳನ್ನು ಕವಿ ಮೇಲುಕು ಹಾಕುತ್ತಾರೆ. ಅಲ್ಲಿ ಇರುವ ಸಾಮ್ಯತೆಗಳನ್ನು, ಭಿನ್ನತೆಗಳನ್ನು ಕವಿ ಇಲ್ಲಿ ಚರ್ಚಿಸುತ್ತಾರೆ.

ಮೂಲದಲ್ಲಿ
ಎಲ್ಲರೂ ಎಲ್ಲರೂ ಒಂದೇ ಆದರೂ
ಮನುಷ್ಯನೆಂಬ ಪ್ರಾಣಿ
ಒಂದಾಗಿ ಹೋಗುವುದಿಲ್ಲ
ಜಾತಿ ಧರ್ಮ ಜನಾಂಗ
ಬಣ್ಣ ಲಿಂಗ ದೇಶ ಭಾಷೆಗಳ
ಗೋಡೆಗಳ ಕೆಡವಿ ಸಾಗುವುದಿಲ್ಲ
– ಪರಿವಾರ

ಈ ಕವಿತೆಯಲ್ಲಿ ಕವಿ ಕುವೆಂಪು ಕನಸಿನಂತೆ ಸರ್ವ ಜನಾಂಗದ ಶಾಂತಿಯ ತೋಟವಾಗಿ ಭಾರತವನ್ನು ನೋಡ ಬಯಸಿದ್ದಾರೆ. ಸೂರ್ಯ, ಗ್ರಹಗಳು, ನಕ್ಷತ್ರಗಳು, ಭೂಮಿ ಇವೆಲ್ಲವೂ ತಮ್ಮ ತಮ್ಮ ಪರಿವಾರಗಳೊಂದಿಗೆ ಪ್ರೀತಿಯಿಂದ ಸಾಮರಸ್ಯದಿಂದ ಒಂದಾಗಿ ಬಾಳುತ್ತವೆ. ಆದರೆ ಧರೆಯ ಮೇಲಿನ ಬುದ್ಧಿವಂತ ಪ್ರಾಣಿ ಎನಿಸಿಕೊಂಡು ಮನುಷ್ಯ ಮಾತ್ರ ಜ್ಞಾನಿಯಂತೆ ವರ್ತಿಸುತ್ತಾ ವೈವಿಧ್ಯಮಯವಾಗಿ ಭೇದಭಾವ ತೋರುವನು. ಮನುಷ್ಯನ ಸಂಕೋಚಿತ ಮನೋಭಾವಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಮಗುವನ್ನು ಕೊಂದ ತಾಯಿ
ಶೀರ್ಷಿಕೆಯಡಿ ಬರೆದಿದ್ದು
ಓದಿದೆ ತಾಯಿ
ನಿನಗಿಂದು ಜಗತ್ತೇ ಛೀಮಾರಿ ಹಾಕಬಹುದು
ಆದರೆ ನಾನೆಣಿಸಿದ ಆ ಕೋನದಲ್ಲಿ
ನೀನೆಸಗಿದ್ದು ಭಾರಿ ಅಪರಾಧವಲ್ಲ
– ಮಗುವನ್ನು ಕೊಂದ ತಾಯಿಗೆ

ಈ ಕವಿತೆ ಸಮಕಾಲೀನ ನೈಜ ಘಟನೆಯೊಂದಕ್ಕೆ ಸ್ಪಂದಿಸಿದ್ದರಿಂದ ಒಡಮೂಡಿದೆ. ಪತ್ರಿಕೆಯಲ್ಲಿ ಬಂದ ಸುದ್ದಿ ಆಧರಿಸಿ ಬರೆದಿದ್ದಾದರೂ ಹೆತ್ತವರು ಮಕ್ಕಳನ್ನು ನಿರ್ಲಕ್ಷಿಸುವವುದನ್ನ ಕಾವ್ಯವಾಗಿಸಿದ್ದಾರೆ. ಮಕ್ಕಳಿಗೆ ಜೀವ ನೀಡುವಷ್ಟು ಪ್ರೀತಿ ತೋರುವ ತಾಯಿಯೇ, ನಮ್ಮ ಸ್ವಾರ್ಥಕ್ಕಾಗಿ ಮಕ್ಕಳನ್ನು ವಿವಿಧ ರೂಪಗಳಲ್ಲಿ ಶೋಷಿಸುತ್ತಾರೆ. ಹಿಂಸಿಸುವ, ಎತ್ತವರ ಅಪರಾಧಗಳನ್ನು ಬಯಲು ಮಾಡಿದ್ದಾರೆ. ಮಕ್ಕಳು ದಾರಿ ತಪ್ಪದಂತೆ ನೋಡಿಕೊಳ್ಳುವುದು ತಂದೆ ತಾಯಿಯ ಸಾಮಾಜಿಕ ಹೊಣೆಯಾದರೂ ಕ್ರೌರ್ಯ, ಹಿಂಸೆ, ರಕ್ತಪಾತಗಳಂತಹ ದುಷ್ಕೃತ್ಯದಲ್ಲಿ ತೊಡಗುವ ಮಕ್ಕಳನ್ನು, ಸಮಾಜಘಾತಕರಾಗುವ ರೀತಿಗೆ ಕ್ರೋಧ ತೋರುತ್ತಾರೆ. ಮಕ್ಕಳನ್ನು ತಾಯಿಯು ಸರಿಯಾಗಿ ಬೆಳೆಸುವಲ್ಲಿ ಎಡವಿದ್ದಕ್ಕಾಗಿ ಎಚ್ಚೆತ್ತಾಗ ತಾಯಿ ಸುಶಿಕ್ಷಿತ ಮಾರ್ಗದಲ್ಲಿ ಸಮಾಜವನ್ನು ರಕ್ಷಿಸುವ ತಾಯ ಕನಸನ್ನ ಈ ಕವಿತೆ ಬೆಂಬಲಿಸುತ್ತದೆ.

ಕೊನೆಯಿಲ್ಲದ
ಈ ದಾರಿಯಲ್ಲಿ ಚಲಿಸುತ್ತಿದ್ದೇನೆ
ಈ ದಾರಿಗೆ ಮೊದಲಿಗನು ನಾನಲ್ಲ
ಕಡೆಯವನೂ ಅಲ್ಲ
ಇಲ್ಲಿ ಮೂಡಿದ
ಹೆಜ್ಜೆ ಗುರುತುಗಳಿಗೆ ಲೆಕ್ಕವಿಲ್ಲ
– ಎಲ್ಲಿಂದಲೋ ಬಂದವನು

ಈ ಕವಿತೆ ತತ್ವಜ್ಞಾನವನ್ನು ಬೋಧಿಸುತ್ತದೆ. ಅಸಂಖ್ಯಾತ ಜೀವಕೋಶಗಳ ಆಗರವಾದ ಈ ಜಗತ್ತಿಗೆ ಕೊನೆ ಮೊದಲಿಲ್ಲ. ಕೆಲವರು ಬರುತ್ತಿರುತ್ತಾರೆ. ಮತ್ತಷ್ಟು ಮಂದಿ ಹೋಗುತ್ತಿರುತ್ತಾರೆ. ಬಿಡುವಿಲ್ಲದ, ದಣಿವರಿಯದ, ಅಂತ್ಯ ಕಾಣದ ದಾರಿಯ ಪಯಣಿಗರು ನಾವೆಂಬ ನಿತ್ಯ ಸತ್ಯ ಅರ್ಥೈಸುತ್ತದೆ. ಇಲ್ಲಿ ಮೂಡಿದ ಹೆಜ್ಜೆ ಗುರುತುಗಳಿಗೆ ಲೆಕ್ಕವಿಲ್ಲ ಎಂಬಲ್ಲಿ ಅಶಾಶ್ವತೆಯನ್ನು ಸೂಚಿಸುತ್ತದೆ.

ಬಣ್ಣದ ಚಿತ್ರವ ಧೇನಿಸುವುದ ಮತ್ತೆ
ಶುರುವಿಟ್ಟುಕೊಂಡಿದ್ದೇನೆ
ದೊಡ್ಡದಲ್ಲದಿದ್ದರೂ ಚಿತ್ರ
ಚಿಕ್ಕದಾದರೂ ಬಿಡಿಸುವೆ
ನಿನ್ನ ಪ್ರತಿಫಲನವಂತೂ
ಅಲ್ಲಿ ಇದ್ದೇ ಇರುತ್ತದೆ
– ಕನಸಿನ ಚಿತ್ರ

ಇಲ್ಲಿ ಕವಿ ತನ್ನ ಗೆಳತಿಯ ನೆನಪಿಗಾಗಿ ಚಿತ್ರ ಬರೆಯುತ್ತಿದ್ದಾರೆ. ಗೆಳತಿಯನ್ನು ಕಾಮನಬಿಲ್ಲಿನ ಬಣ್ಣಗಳಿಗೆ ಚಿತ್ರಿಸ ಹೊರಟಿರುವ ಕವಿ ಇಲ್ಲಿ ಬಣ್ಣಗಳಿಗೆ ಮೂಲ ಧಾತುವಾದ ಬಿಳಿ ಬಣ್ಣ ಅವಳು ಎನ್ನುತ್ತಾರೆ. ಈ ಸೃಷ್ಟಿಕ್ರಿಯೆ ಆಧಾರ ಸ್ತಂಭ ಅವಳೆಂದು ನುಡಿದಿದ್ದಾರೆ. ಅವಳು ಬಿಡಿಸುವ ಚಿತ್ರದಲ್ಲಿ ಅವಳಿಲ್ಲದಿದ್ದರೂ ಅವಳ ಪ್ರತಿಫಲನವಂತೂ ಇರುತ್ತದೆ. ಅವಳಿಲ್ಲದಿದ್ದರೂ ಅವಳ ನೆನಪುಗಳು ಸದಾ ಜೊತೆಯಾಗಿ ಕಾಡುತ್ತವೆ. ಬದುಕಿಗೊಂದು ಅರ್ಥ ತುಂಬುತ್ತವೆ ಎಂಬುದು ಕವಿತೆಯ ಇಂಗಿತ.

ಒಟ್ಟಿನಲ್ಲಿ ರೇವಣಸಿದ್ದಪ್ಪ ಅವರ ಕವಿತೆಗಳು ಫಿಲಾಸಫಿ ಬೋಧಿಸುತ್ತವೆ. ಅದರ ಆಚೆಗೆ ಸಾಗುವ ಅವರು ದೈನಿಕ ಬದುಕನ್ನು, ನಿತ್ಯ ಜೀವನದ ಅನುಭವಗಳನ್ನು, ಸುತ್ತ ಮುತ್ತಲಿನ ಘಟನೆಗಳನ್ನು ಭಾವ ತೀವ್ರತೆಯಲ್ಲಿ ಕವಿತೆಗಳಾಗಿಸಿದ್ದಾರೆ. ಸಮಕಾಲೀನ ಸಂವೇದನೆಗಳಿಗೆ ಸೂಕ್ಷ್ಮವಾಗಿ ಸ್ಪಂದಿಸುವ ಗುಣವಿರುವ ಇಲ್ಲಿನ ಕವಿತೆಗಳು ಮನುಷ್ಯನ ಗುಣ, ಸ್ವಭಾವ, ಎಚ್ಚರಿಕೆ, ಅನುಭವದಾಳಗಳನ್ನು ಗರ್ಭೀಕರಿಸಿಕೊಂಡಿದ್ದು ಶುದ್ಧ ಕಾವ್ಯ ರಚನೆಗೆ ಪ್ರೇರಣೆಯಾಗಿವೆ. ಇವರ ಕಾವ್ಯದ ಬನಿ ಹದವಾಗುತ್ತಿದೆ. ಆಕಾರ ವಿನ್ಯಾಸ ಬಂಧಗಳ ಬಗ್ಗೆ ಹಿಡಿತವು ಸಿದ್ಧಿಸಿದ್ದು ಮತ್ತಷ್ಟು ಕವಿತೆಗಳು ಇವರಿಂದ ಕನ್ನಡ ಸಾಹಿತ್ಯ ಲೋಕಕ್ಕೆ ಸೇರಲಿ ಎಂದು ಆಶಿಸುವೆ.