ಬೇಲೂರಿನ ಚನ್ನಕೇಶವನಿಗಾಗಿ ಕಾಂಚೀಪುರದಿಂದ ಗರುಡನ ಕಾಷ್ಠಮೂರ್ತಿಯನ್ನು ನಿರ್ಮಿಸಿ ತರುತ್ತಿದ್ದ ಪರಿಜನರು ಬೇಲೂರಿಗೆ ತೆರಳುವ ಮಾರ್ಗದಲ್ಲಿ ಬಿಂಡಿಗನವಿಲೆ ಗ್ರಾಮದ ದೇಗುಲದಲ್ಲಿ ತಂಗಿದ್ದರಂತೆ. ಮಾರನೆಯ ಬೆಳಗ್ಗೆ ಪ್ರಯಾಣ ಮುಂದುವರೆಸಲು ಗರುಡನನ್ನು ಹೊರಡಿಸಲೆತ್ನಿಸಿದರೆ ಅಲುಗಾಡಿಸಲೂ ಸಾಧ್ಯವಾಗಲಿಲ್ಲವಂತೆ. ಹಿಂದಿನ ರಾತ್ರಿ ಈ ಬಗ್ಗೆ ಕನಸುಕಂಡು ಧಾವಿಸಿ ಬಂದ ಪಾಳೇಗಾರನು ಗರುಡದೇವರನ್ನು ಇಲ್ಲೇ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲು ವ್ಯವಸ್ಥೆ ಮಾಡಿದನೆಂದು ಐತಿಹ್ಯವಿದೆ. ಕಾಲಾನಂತರದಲ್ಲಿ ಕಾಷ್ಠಶಿಲ್ಪಕ್ಕೆ ಗೆದ್ದಲುಹತ್ತಿ ಹುತ್ತ ಬೆಳೆಯಿತು. ಗರುಡಶಿಲ್ಪವನ್ನು ಹಾವುಗಳು ಆಶ್ರಯಿಸಿಕೊಂಡವು.
ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿಯ ಐವತ್ತೆರಡನೆಯ ಕಂತು

 

ದಿಂಡಿಗ ಎನ್ನುವುದು ಗಟ್ಟಿಮುಟ್ಟಾದ ಕಾಡುಮರಗಳಲ್ಲೊಂದು. ಈ ಮರಗಳು ಅಧಿಕವಾಗಿ ಬೆಳೆಯುತ್ತಿದ್ದ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನವಿಲುಗಳೂ ಇದ್ದುದರಿಂದ ಈ ಸ್ಥಳಕ್ಕೆ ದಿಂಡಿಗನವಿಲೆ ಎಂಬ ಹೆಸರು ಬಂದಿರಬೇಕೆಂದು ಒಂದು ಊಹೆ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಈ ಊರಿನ ಹೆಸರು ಕಾಲಾಂತರದಲ್ಲಿ ಬದಲಾಗಿ ಬಿಂಡಿಗನವಿಲೆಯಾಗಿ ಪ್ರಸಿದ್ಧವಾಗಿದೆ. ತಾಲ್ಲೂಕು ಕೇಂದ್ರವಾದ ನಾಗಮಂಗಲದಲ್ಲೂ ಸುತ್ತಲಿನ ಆರಣಿ, ಬೆಳ್ಳೂರು, ದಡಗ ಮೊದಲಾದ ಹಳ್ಳಿಗಳಲ್ಲೂ ಹೊಯ್ಸಳರ ಆಳ್ವಿಕೆಯ ಕಾಲದ ದೇವಾಲಯಗಳು ಕಂಡುಬರುವಂತೆ ಬಿಂಡಿಗನವಿಲೆಯಲ್ಲೂ ಚೆನ್ನಕೇಶವ ದೇವಾಲಯವನ್ನು ಕಾಣಬಹುದು. ಹೊಯ್ಸಳರ ಕಾಲದ ನಂತರದ ಶತಮಾನಗಳಲ್ಲಿ ವಿಜಯನಗರದ ಅರಸರಿಂದಲೂ ಸ್ಥಳೀಯ ಆಡಳಿತಗಾರರಿಂದಲೂ ಮಾರ್ಪಾಡಿಗೆ ಒಳಪಟ್ಟು ಈ ದೇವಾಲಯ ಸುಸ್ಥಿತಿಯಲ್ಲಿ ಮುಂದುವರೆದುಕೊಂಡು ಬಂದಿದೆ.

ಬೆಂಗಳೂರು-ಹಾಸನ ಹೆದ್ದಾರಿಯಲ್ಲಿ ಬೆಳ್ಳೂರಿನ ಸಮೀಪ ಕೋಡಿಹಳ್ಳಿಗೆ ಎಡಗಡೆ ಹೊರಳುವ ರಸ್ತೆಯಲ್ಲಿ ಹದಿನೈದು ಕಿಲೋಮೀಟರ್ ಸಾಗಿದರೆ ಬಿಂಡಿಗನವಿಲೆ ತಲುಪಬಹುದು. ಮಂಡ್ಯದ ಕಡೆಯಿಂದ ನಾಗಮಂಗಲ ಮಾರ್ಗವಾಗಿಯೂ ಇಲ್ಲಿಗೆ ರಸ್ತೆಯಿದೆ. ಇತ್ತೀಚೆಗೆ ನವೀಕರಿಸಿರುವ ಹೊಂಬಣ್ಣದ ರಾಜಗೋಪುರ ನಿಮ್ಮನ್ನು ದೂರದಿಂದಲೇ ಸ್ವಾಗತಿಸುತ್ತದೆ. ದೇವಾಲಯದ ವಿಶಾಲವಾದ ಆವರಣ, ಪ್ರಾಕಾರ, ಧ್ವಜಸ್ತಂಭ, ಉತ್ಸವಾದಿಗಳಿಗಾಗಿ ಅಚ್ಚುಕಟ್ಟಾಗಿ ನಿರ್ಮಿಸಲಾಗಿರುವ ವಾಹನಗಳು-ಮನಸ್ಸಿಗೆ ಮುದನೀಡುತ್ತವೆ. ಒಳಗುಡಿಯಲ್ಲಿ ಮೂರು ಕೋಣೆಗಳಿದ್ದು ನಡುವಣ ಗರ್ಭಗುಡಿಯಲ್ಲಿ ಚನ್ನಕೇಶವನ ಪುರಾತನ ವಿಗ್ರಹವಿದೆ. ಶಂಖ, ಚಕ್ರ, ಗದಾಧಾರಿಯಾಗಿ ವರದಹಸ್ತನಾಗಿರುವ ಕೇಶವನ ಮೂರ್ತಿ ಮನೋಹರವಾಗಿದೆ. ಬಲಭಾಗದ ಗುಡಿಯಲ್ಲಿ ಸೌಮ್ಯನಾಯಕಿ ಅಮ್ಮನವರ ಗುಡಿ. ಎಡಭಾಗದ ಗುಡಿಯನ್ನು ಸಮೀಪಿಸುತ್ತಿರುವಂತೆಯೇ ಗಂಧದ ಪರಿಮಳ ನಿಮ್ಮನ್ನು ಸೆಳೆಯುತ್ತದೆ. ಇಲ್ಲಿರುವುದು ಶ್ರೀಗಂಧದಿಂದ ನಿರ್ಮಿಸಲಾಗಿರುವ ವೈನತೇಯನ ಕಾಷ್ಠಶಿಲ್ಪ.

ಸಾಮಾನ್ಯವಾಗಿ ವಿಷ್ಣುವಿನ ವಾಹನವಾದ ಗರುಡನನ್ನು ನೀವು ದೇವಾಲಯದ ಬಾಗಿಲಿಗೆದುರಿನ ಧ್ವಜಸ್ತಂಭದಲ್ಲೋ ಉತ್ಸವಮೂರ್ತಿಯನ್ನು ಹೊರುವ ವಾಹನರೂಪದಲ್ಲೋ ನೋಡಿರುತ್ತೀರಿ. ಕೋಲಾರಜಿಲ್ಲೆ ಆವನಿಯ ಸಮೀಪದ ಹಳ್ಳಿಯೊಂದರಲ್ಲಿ ಗರುಡನೇ ಮುಖ್ಯಶಿಲ್ಪವಾಗಿ ಪೂಜಿತನಾಗುವ ದೇವಾಲಯವೊಂದಿದೆ. ಇದೇ ಮಂಡ್ಯಜಿಲ್ಲೆಯಲ್ಲೇ ಬೆಳ್ಳೂರಿನ ಸಮೀಪ ಹಟ್ನ ಎಂಬ ಗ್ರಾಮದಲ್ಲೂ ಗರುಡನನ್ನು ಪೂಜಿಸುವ ದೇವಾಲಯವಿದೆ. ವೈನತೇಯನಿಗೂ ಲಕ್ಷ್ಮೀನಾರಾಯಣರಂತೆಯೇ ಪೂಜಾಮೂರ್ತಿಯಾಗಿ ಗುಡಿಯಲ್ಲಿ ಅರ್ಚಿತನಾಗುವ ಭಾಗ್ಯ ಬಿಂಡಿಗನವಿಲೆಯಲ್ಲಿ ಒದಗಿಬಂದಿದೆ.

ಬೇಲೂರಿನ ಚನ್ನಕೇಶವನಿಗಾಗಿ ಕಾಂಚೀಪುರದಿಂದ ಗರುಡನ ಕಾಷ್ಠಮೂರ್ತಿಯನ್ನು ನಿರ್ಮಿಸಿ ತರುತ್ತಿದ್ದ ಪರಿಜನರು ಬೇಲೂರಿಗೆ ತೆರಳುವ ಮಾರ್ಗದಲ್ಲಿ ಬಿಂಡಿಗನವಿಲೆ ಗ್ರಾಮದ ದೇಗುಲದಲ್ಲಿ ತಂಗಿದ್ದರಂತೆ. ಮಾರನೆಯ ಬೆಳಗ್ಗೆ ಪ್ರಯಾಣ ಮುಂದುವರೆಸಲು ಗರುಡನನ್ನು ಹೊರಡಿಸಲೆತ್ನಿಸಿದರೆ ಅಲುಗಾಡಿಸಲೂ ಸಾಧ್ಯವಾಗಲಿಲ್ಲವಂತೆ. ಹಿಂದಿನ ರಾತ್ರಿ ಈ ಬಗ್ಗೆ ಕನಸುಕಂಡು ಧಾವಿಸಿ ಬಂದ ಪಾಳೇಗಾರನು ಗರುಡದೇವರನ್ನು ಇಲ್ಲೇ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲು ವ್ಯವಸ್ಥೆ ಮಾಡಿದನೆಂದು ಐತಿಹ್ಯವಿದೆ. ಕಾಲಾನಂತರದಲ್ಲಿ ಕಾಷ್ಠಶಿಲ್ಪಕ್ಕೆ ಗೆದ್ದಲುಹತ್ತಿ ಹುತ್ತ ಬೆಳೆಯಿತು. ಗರುಡಶಿಲ್ಪವನ್ನು ಹಾವುಗಳು ಆಶ್ರಯಿಸಿಕೊಂಡವು. ಮುಂದೆ, ಸ್ಥಳೀಯರೂ ಕಳೆದ ಶತಮಾನದ ರಾಜಪ್ರಮುಖರಲ್ಲೊಬ್ಬರೂ ಆಗಿದ್ದ ರಾವಬಹದ್ದೂರ್ ಬಿ.ಕೆ. ಗರುಡಾಚಾರ್ಯರೆಂಬ ಮಹನೀಯರು 1931ರಲ್ಲಿ ಗರುಡನ ಶ್ರೀಗಂಧಕಾಷ್ಠಶಿಲ್ಪವನ್ನು ನಿರ್ಮಿಸಿ ಪ್ರತಿಷ್ಠಾಪಿಸಲು ಕಾರಣರಾದರು.

(ಫೋಟೋಗಳು: ಲೇಖಕರವು)

ಗರುಡನೊಂದಿಗೆ ಕೈಮುಗಿದು ನಿಂತ ಹನುಮಂತನ ವಿಗ್ರಹವೂ ಇರುವುದು ಇನ್ನೊಂದು ವಿಶೇಷ. ಮೂಲದೇವರು ಚನ್ನಕೇಶವನಿಗೆ ಗರುಡೋತ್ಸವ ನೆರವೇರುವುದರ ಜೊತೆಗೆ ವೈನತೇಯನಿಗೂ ಆತನ ಪತ್ನಿಯರಾದ ರುದ್ರಾ ಮತ್ತು ಸುಕೀರ್ತಿಯರೊಂದಿಗೆ ಉತ್ಸವವೇರ್ಪಡುವುದು ಈ ದೇಗುಲದ ಇನ್ನೊಂದು ವಿಶೇಷ. ಕಾಷ್ಠಶಿಲ್ಪದ ಬದಿಯಲ್ಲಿರುವ ಗರುತ್ಮಂತನ ಲೋಹದ ಮೂರ್ತಿ ಶಂಖಚಕ್ರಧಾರಿಯಾಗಿ ಅಮೃತದ ಕಲಶವನ್ನು ಹಿಡಿದಿರುವುದೂ ಸ್ವಾರಸ್ಯಕರವಾಗಿದೆ. ವಾರ್ಷಿಕ ಉತ್ಸವಗಳಲ್ಲಿ ಫೆಬ್ರವರಿ ತಿಂಗಳಲ್ಲಿ

ಚನ್ನಕೇಶವದೇವರ ಬ್ರಹ್ಮೋತ್ಸವವು ವಿಜೃಂಭಣೆಯಿಂದ ಜರುಗುವ ಹಾಗೆಯೇ ನವೆಂಬರ್ ತಿಂಗಳ ಮಕರಮಾಸದ ಅಮಾವಾಸ್ಯೆಯ ದಿನದಂದು ವೈನತೇಯನ ಕಲ್ಯಾಣೋತ್ಸವವೂ ನೆರವೇರುತ್ತದೆ.

ಮೇಲುಕೋಟೆಯಿಂದ ಬೇಲೂರಿಗೆ ಹೋಗುವ ಮಾರ್ಗದಲ್ಲಿ ಶ್ರೀರಾಮಾನುಜರು ಬಿಂಡಿಗನವಿಲೆಗೆ ಬಂದು ತಂಗುತ್ತಿದ್ದರೆಂದು ಪ್ರತೀತಿ. ಹಾಗಾಗಿಯೇ ಈ ಸ್ಥಳವು ಶ್ರೀವೈಷ್ಣವ ಕ್ಷೇತ್ರವಾಗಿ ಪ್ರಸಿದ್ಧಿ ಪಡೆಯಿತೆಂದು ಹೇಳಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ದೇವಾಲಯದ ಆವರಣದಲ್ಲಿ ಶ್ರೀರಾಮಾನುಜರೂ ಸೇರಿದಂತೆ ವಿವಿಧ ಶ್ರೀವೈಷ್ಣವ ಆಚಾರ್ಯರ ಹಾಗೂ ಆಳ್ವಾರರ ಪ್ರತಿಮೆಗಳನ್ನೂ ಸ್ಥಾಪಿಸಲಾಗಿದೆ. ಧಾರ್ಮಿಕಸಾಂಸ್ಕೃತಿಕ ಶ್ರದ್ಧಾಪೂರ್ವಕವಾಗಿ ಪುರಾತನ ದೇವಾಲಯವೊಂದನ್ನು ಶತಶತಮಾನಗಳ ಕಾಲದವರೆಗೆ ಸಂರಕ್ಷಿಸಿಕೊಂಡು ಬಂದಿರುವ ಪರಿ ಅನನ್ಯವಾಗಿದೆ. ಬಿಂಡಿಗನವಿಲೆಯ ಸ್ಥಳೀಯರ ಈ ಶ್ರದ್ಧಾಸಕ್ತಿಗಳು ನಾಡಿನ ಇತರ ದೇಗುಲಗಳ ಸಂರಕ್ಷಣೆಗೆ ಆಯಾ ಪ್ರದೇಶದ ಸ್ಥಳೀಯ ಜನರಿಗೆ ಮಾದರಿಯಾಗಲಿ ಎಂದು ಆಶಿಸೋಣ.