ದಿನಗಳಿಕೆ ಆದಾಯವನ್ನೇ ನೆಚ್ಚಿಕೊಂಡವರಿಗೆ ಇದೆಷ್ಟು ಆತಂಕ ಹುಟ್ಟಿಡುವ ಪರಿಸ್ಥಿತಿ! ಈಗಂತೂ ಆಸ್ಟ್ರೇಲಿಯಾ ದೇಶ ಪೂರ್ತಿ ಹೆಚ್ಚಿನ ಉದ್ಯೋಗ ಸ್ಥಳಗಳಲ್ಲಿ ಚಾಲನೆಯಲ್ಲಿರುವುದು ಅರೆಕಾಲಿಕ ಮತ್ತು ತಾತ್ಕಾಲಿಕ ಕಾಂಟ್ರಾಕ್ಟ್ ಮಾದರಿ. ಅಂದರೆ ವಾರಕ್ಕಿಷ್ಟು ಗಂಟೆಗಳ ಕಾಲ ಕೆಲಸ- ಪ್ರತಿ ಕೆಲ ತಿಂಗಳ ಮಟ್ಟಿಗೆ ಮಾತ್ರ ಅನ್ನೋ ತರಹದ ಕಾಂಟ್ರಾಕ್ಟ್. ಅವರಿಗೆ ರಜೆ, ಬೋನಸ್, ಸಂಸ್ಥೆ ಕೊಡಬೇಕಾದ ಪೆನ್ಷನ್ ಸವಲತ್ತು ಇರಬಹುದು ಅಥವಾ ಇಲ್ಲದಿರಬಹುದು. ಇದ್ದರೂ ಅದು ಅತ್ಯಂತ ಕಡಿಮೆ ಪ್ರಮಾಣದ ಸವಲತ್ತು. ಅವರು ಆರೋಗ್ಯ ಕೆಟ್ಟು ಕೆಲಸಕ್ಕೆ ಹಾಜರಾಗದಿದ್ದರೆ ಆ ದಿನದ ಗಳಿಕೆಯಿಲ್ಲ. ಪರಿಸ್ಥಿತಿ ಬಿಗಡಾಯಿಸಿದರೆ ಏನೇನೆಲ್ಲಾ ಆಗಬಹುದು?
ಡಾ. ವಿನತೆ ಶರ್ಮಾ ಬರೆಯುವ ಆಸ್ಟ್ರೇಲಿಯಾ ಅಂಕಣ
ಕಳೆದೆರಡು ಮೂರು ವಾರಗಳಲ್ಲಿ ಕರೋನ ವೈರಸ್ಸಿನ ಕಥೆಯ ದಾಳಗಳು ಉರುಳಿ, ಹುಳುವೊಂದು ಚಿಟ್ಟೆಯಾಗುವ ಪರಿ ಅದೂ ಕೂಡ ತನ್ನ ರೆಕ್ಕೆಗಳನ್ನ ಬಿಚ್ಚಿಕೊಳ್ಳುತ್ತಾ, ಮಾಗುತ್ತಾ, ಬೇಕಾದಷ್ಟು ಭಯವನ್ನು ಹುಟ್ಟಿಸಿ ತನಗೆ ಬೇಕಾದಲ್ಲಿ ಹಾರಾಡುತ್ತಾ ಹರಡುತ್ತಿದೆ. ಒಂದು ರೋಗಾಣುವಿಗೆ ಇರುವ ಈ ಪರಿ ಅಗಾಧ ಶಕ್ತಿಯನ್ನ ಕಂಡು ಬೆರಗಾಗಲೇಬೇಕು. ಒಂದೆರಡು ತಿಂಗಳಿನಲ್ಲೇ ಈ ವೈರಸ್ಸು ಜಾಗತಿಕ ಮಟ್ಟದ ಹೆಸರು ಗಳಿಸಿ, ಅತ್ಯಂತ ಪ್ರಬಲ, ಸಬಲ ರಾಷ್ಟ್ರಗಳನ್ನು ಅಣಕಿಸಿ ಸೆಡ್ಡುಹೊಡೆದು ನಿಂತುಬಿಟ್ಟಿತು. ಅದನ್ನು ಅಮುಕಿ ನಿರ್ನಾಮ ಮಾಡಲು ಪಣತೊಟ್ಟಿರುವ ಪಾಶ್ಚಾತ್ಯ ದೇಶಗಳ ಶ್ರದ್ಧೆಯನ್ನು ಕಂಡು ಇನ್ನಷ್ಟು ಬೆರಗಾಗಬೇಕು. ಭಾಷೆ, ಬಣ್ಣ, ದುಡ್ಡು, ಮಿಲಿಟರಿ, ಅನಿಲ, ಹತೋಟಿ, ಅಧಿಕಾರ ಇದ್ಯಾವುದೂ ಈಗ ಲಕ್ಷ್ಯದಲ್ಲಿಲ್ಲ. ತಮ್ಮಗಳ ಹತೋಟಿಗೆ ಬಾರದ, ಬಗ್ಗದ ಈ ರೋಗಾಣುವನ್ನು ಕಂಡು ಬಾಗಿಲು ಹಾಕಿಕೊಂಡು ಕುಳಿತಿರುವ ದೇಶಗಳ ಸ್ಥಿತಿಗತಿಗಳ ಬಗ್ಗೆ ಮಾತೋ ಮಾತು. ಶೂರಾಧಿಶೂರ ನಾಯಕರಿಗೆ ಏಳುಕೆರೆ ನೀರು ಕುಡಿಸುತ್ತಿರುವ ಈ ವೈರಸ್ ಯಾವುದೋ ಪರಲೋಕದಿಂದ ಬಂದದ್ದಲ್ಲ. ನಾವೇ ಈ ಅಣುಕುನೋಟದ ಸೃಷ್ಟಿಕರ್ತರು, ಕಾರಣೀಭೂತರು. ಆದರೆ ಸನ್ನಿವೇಶದ ಬಲಿಪಶುಗಳಾಗುತ್ತಿರುವವರು ಸಾಮಾನ್ಯ ಜನರು.
ನಮ್ಮಲ್ಲೂ, ಅಂದರೆ ಡೌನ್ ಅಂಡರ್ ನಲ್ಲೂ, ಎಲ್ಲರೂ ಹಾರಿಹಾರಿ ಬೀಳುವುದು ನಡೆದಿದೆ. ಕರೋನ ವಿಷಯದಲ್ಲಿ ತೀರಾ ಅತಿಶಯೋಕ್ತಿಯಿಲ್ಲ. ಮೊದಮೊದಲು ಜನರು ಕರೋನ ಅನ್ನುವುದು, ಅದು ಇರುವುದು ದಿಟ ಎನ್ನುವ ವಿಷಯವನ್ನೇ ಅರಗಿಸಿಕೊಳ್ಳಲು ಪ್ರಯತ್ನಿಸಿದ್ದರು. ಕೇಂದ್ರ ಸರ್ಕಾರ ‘ನಾವು ಜಾಗ್ರತೆಯಿಂದ ಪರಿಸ್ಥಿತಿಯನ್ನು ಗಮನಿಸುತ್ತಿದ್ದೀವಿ’, ಅಂದಿದ್ದರು. ಯಾವಾಗ ಯುರೋಪಿಯನ್ ದೇಶಗಳಿಗೆ ಅದರಲ್ಲೂ ಮುಖ್ಯವಾಗಿ ಬ್ರಿಟನ್ನಿಗೆ ಕರೋನ ಕಾಲಿಟ್ಟಿತೊ ಆಗ ‘ನಮ್ಮಲ್ಲೂ ಅಂಥದ್ದೇನಾದರೂ ಆದರೆ ಪರಿಸ್ಥಿತಿಯನ್ನು ನಿಭಾಯಿಸಲು ಸಿದ್ಧರಾಗುತ್ತಿದ್ದೀವಿ,’ ಅಂದರು. ಅಮೆರಿಕ ದೇಶ ಎಂತಹ ನಿರ್ಧಾರ ತೆಗೆದುಕೊಳ್ಳುತ್ತದೆ, ಯಾವ್ಯಾವ ಕ್ರಮಗಳನ್ನು ಜಾರಿಗೊಳಿಸುತ್ತದೆ, ಅನ್ನುವುದರ ಕಡೆ ಸರ್ಕಾರಕ್ಕೆ ಹೆಚ್ಚು ಆಸಕ್ತಿಯಿದ್ದಂತಿತ್ತು.
ಪ್ರಾರಂಭದಲ್ಲಿ ನಾವು ಕರೋನ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಪ್ರತಿರಾತ್ರಿಯೊಮ್ಮೆ ಟೀವಿಯಲ್ಲಿ ಸ್ಥಳೀಯ ಸುದ್ದಿಸಮಾಚಾರ ಕೇಳಿ, ಮರುದಿನ ಬೆಳಗ್ಗೆ ಕಾರಿನ ರೇಡಿಯೋದಲ್ಲಿ ಆ ದಿನದ ವರದಿ ಕೇಳಿಕೊಂಡು ಸುಮ್ಮನಾಗುತ್ತಿದ್ದೆವು. ಆಗ ವಿಚಿತ್ರವೆನ್ನಿಸಿದ್ದೆಂದರೆ, ಸಮೂಹಸನ್ನಿಗೊಳಗಾದವರಂತೆ ಇದ್ದಕ್ಕಿದ್ದಂತೆ ಜನರು ಊಹಾಪೋಹಗಳ ವದಂತಿಗಳನ್ನ ಕೇಳಿ ಅಂಗಡಿ ಮಳಿಗೆಗಳಿಗೆ ಮುಗಿಬಿದ್ದು ಟಾಯ್ಲೆಟ್ ಪೇಪರ್ ಪ್ಯಾಕೆಟ್ಟುಗಳನ್ನ ಕೊಳ್ಳುವುದರಲ್ಲಿ ಮಗ್ನರಾಗಿದ್ದಾರೆ ಅನ್ನೋದು. ಎಲಾ ಎಲಾ ಎಂದು ಆಶ್ಚರ್ಯವಾಯ್ತು. ಅಭಿವೃದ್ಧಿ ಹೊಂದಿರುವ ಈ ದೇಶದಲ್ಲಿ ಅದರಲ್ಲೂ ಕೇವಲ ಇಪ್ಪತೈದು ಮಿಲಿಯನ್ ಜನಸಂಖ್ಯೆ ಇರುವ ದೇಶದಲ್ಲಿ ಜನರಿಗೆ ಅಗತ್ಯವಾದ ದಿನನಿತ್ಯದ ಸಾಮಾನು, ಪದಾರ್ಥಗಳು ಸಿಕ್ಕದೇ ಇರುವುದೇ ಎಂಬ ಪ್ರಶ್ನೆ ಮೂಡಿತು.
ದೇಶಪೂರ್ತಿ ಇರುವ ಬೃಹದಾಕಾರ warehouse ಗಳಲ್ಲಿ ಸದಾ ಸರಕು ತುಂಬಿರುತ್ತದೆ. ಇದೇನಿಂತಹ ಅತಿರೇಕ ಅನ್ನಿಸಿತ್ತು. ಅದಾಗ್ಯೂ ಬರುಬರುತ್ತಾ ಜನರು ದೇಶದ ಅತಿ ದೊಡ್ಡ ಸೂಪರ್ ಮಾರ್ಕೆಟ್ಟುಗಳಾದ Woolworths ಮತ್ತು Coles ಮಳಿಗೆಗಳಿಗೆ ನುಗ್ಗಿ ಬೇರೆಲ್ಲ ಪದಾರ್ಥಗಳ ಜೊತೆ ಆಹಾರ ಪದಾರ್ಥಗಳ ಶೇಖರಣೆಯನ್ನೂ ಆರಂಭಿಸಿದರಂತೆ. ಮೂರು ವಾರಗಳ ಹಿಂದೆ ವಾರಾಂತ್ಯದ ಶಾಪಿಂಗಿನಲ್ಲಿ ನಾವು ಕೊಳ್ಳಬೇಕಿದ್ದ ಅರ್ಧಕ್ಕೂ ಹೆಚ್ಚು ಸಾಮಾನುಗಳು ಸಿಕ್ಕಲಿಲ್ಲ, ಎಲ್ಲವೂ ಖಾಲಿಯಾಗಿತ್ತು. ಎಲ್ಲರಲ್ಲೂ ಕರೋನ ಪರಿಸ್ಥಿತಿ ನಿಜವಾಗಿಯೂ ಭಯ ಹುಟ್ಟಿಸಿರುವುದು ಅರಿವಿಗೆ ಬಂತು. ಮಗರಾಯ ಓದುತ್ತಿರುವ ಸಂಸ್ಥೆಯಲ್ಲಿ ಲಂಚ್ ಸಮಯಕ್ಕೂ ಮುನ್ನವೇ ಕೈತೊಳೆಯುವ ಸೋಪು ಖಾಲಿಯಾಗುತ್ತಿತ್ತಂತೆ. ಹೌದಾ, ಸರಿ ನಾವೇ ಹೋಗಿ hand sanitiser ಕೊಳ್ಳೋಣ ಅಂತ ಹತ್ತಿರದ ಫಾರ್ಮಸಿಗೆ ಹೋದರೆ ‘ಹೋದವಾರವೇ ಎಲ್ಲಾ ಖಾಲಿಯಾಯ್ತು. ಹೊಸ ಸರಕು ಬರಬೇಕು,’ ಅಂದರು. ಆಗ ಸುಮಾರು ಕಡೆ ಹುಡುಕಿ ಅದನ್ನು ಕೊಂಡಿದ್ದಾಯ್ತು. ಇಷ್ಟು ದಿನ ಚಿಂತೆ ಮಾಡದೆ ಉದಾಸೀನದಿಂದ ಇದ್ದದ್ದಕ್ಕೆ ತಲೆ ಮೇಲೆ ಮೊಟಕಿದಂತಾಯ್ತು.
ಆಸ್ಟ್ರೇಲಿಯಾ ಮತ್ತು ಚೀನಾ ದೇಶಗಳ ನಡುವಿನ ವ್ಯಾಪಾರ ಬಹುದೊಡ್ಡ ಪ್ರಮಾಣದ್ದು. ಆಸ್ಟ್ರೇಲಿಯಾಗೆ ಬರುವ ಹೆಚ್ಚಿನ ಸರಕು ಚೀನಾದಿಂದ ಆಮದಾಗಿ ಬರುತ್ತದೆ. ಈ ಕರೋನ ವೈರಸ್ಸು ಹುಟ್ಟಿ ಬೆಳೆದಿದ್ದೆ ಚೀನಾದಲ್ಲಿ. ಹಾಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಆಮದು ವಿಷಯವನ್ನು ಸರ್ಕಾರ ಹೇಗೆ ನಿಭಾಯಿಸುತ್ತಿದೆ ಅನ್ನೋ ಪ್ರಶ್ನೆ ಹುಟ್ಟಿತು. ಭಾರತೀಯ ಆಹಾರ ಪದಾರ್ಥಗಳು ಬೇಕಿದ್ದವು ಅಂತ ಇಂಡಿಯನ್ ಸ್ಟೋರ್ ಗೆ ಹೋದರೆ ಅಲ್ಲೂ ಕೂಡ ಅರ್ಧಂಬರ್ಧ ಖಾಲಿ ಖಾಲಿ ಶೆಲ್ಫ್ ಸ್ವಾಗತಿಸಿದವು. ಅಂಗಡಿಯಾತ ಬೇಸರ ಪಟ್ಟುಕೊಂಡು, ‘ನೋಡಿ, ನಾವು ಮೆಲ್ಬೋರ್ನ್ ನಗರದಿಂದ ಇಲ್ಲಿಗೆ ಪದಾರ್ಥಗಳನ್ನ ತರಿಸೋದು. ಅಲ್ಲಂತೂ ಕೇಳಲೇಬೇಡಿ, ಸುಮಾರು ಖಾಲಿಯಾಗಿದೆಯಂತೆ. ಅಲ್ಲಿಂದ ಸರಕು ಬಂದಿಲ್ಲವೆಂದರೆ ನಾನು ಅಂಗಡಿ ಬಾಗಿಲು ಮುಚ್ಚಬೇಕಾಗುತ್ತದೆ,’ ಅಂದ. ಅಯ್ಯೋ ಪಾಪ ಎನಿಸಿತು.
ಆಗ ನಮ್ಮ ಕುಟುಂಬ ಸ್ನೇಹಿತರೊಬ್ಬರ ನೆನಪು ಬಂತು. ಅವರ ಇಡೀ ಕುಟುಂಬ ಸೇರಿ ಒಂದು ನಟನಾ ತರಬೇತಿ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಶಾಲೆ, ಕೆಲಸ ಮುಗಿದ ನಂತರ ಮತ್ತು ವಾರಾಂತ್ಯದಲ್ಲಿ ಮಕ್ಕಳಿಗೆ ಮತ್ತು ದೊಡ್ಡವರಿಗೆ ನಟನಾ ತರಬೇತಿ ತರಗತಿಗಳು ನಡೆಯುತ್ತವೆ. ಪ್ರತಿವಾರವೂ ಪ್ರತಿ ತರಗತಿಗೂ ಬರಲೇಬೇಕು, ಮುಂಚೆಯೇ ಪೂರ್ತಿ ಹಣ ಕಟ್ಟಬೇಕು ಎನ್ನುವ ನಿಬಂಧನೆಗಳಿಲ್ಲ. ಕೆಲವರು ತಾವು ಹಾಜರಾಗುವ ತರಗತಿಗೆ ಮಾತ್ರ ಸ್ಥಳದಲ್ಲೇ ಹಣಸಂದಾಯ ಮಾಡುತ್ತಾರೆ. ಹೋದ ತಿಂಗಳು ಫೆಬ್ರವರಿಯಿಂದ ಹಾಜರಾತಿ ಕಡಿಮೆಯಾಗಿದೆ, ಹೀಗೆ ಮುಂದುವರೆದರೆ ತಮ್ಮ ಆದಾಯಕ್ಕೆ ಬಹು ದೊಡ್ಡ ಪೆಟ್ಟು ಎಂದು ಅವರು ಪೇಚಾಡಿದ್ದು ನೆನಪಿಗೆ ಬಂತು. ಇದಕ್ಕೆ ತದ್ವಿರುದ್ಧವಾಗಿ ಮಗನ ಫುಟ್ಬಾಲ್ ಕ್ಲಬ್ ಫೆಬ್ರವರಿಯಲ್ಲಿ ಸತತ ಮಳೆಯೆಂದು ನಂತರ ಮಾರ್ಚಿನಲ್ಲಿ ಕರೋನ ಸಂಬಂಧಿತ ‘social distancing’ ನಿಯಮವನ್ನು ಅನುಸರಿಸುವ ಕಾರಣವಾಗಿ ತರಬೇತಿಯನ್ನು ರದ್ದು ಮಾಡುತ್ತಲೇ ಬಂದಿದೆ. ತರಬೇತಿಯಿಲ್ಲದೆ ಅವನಿಗೆ ಬೇಸರ, ವರ್ಷದಾರಂಭದಲ್ಲೇ ಇಡೀ ವರ್ಷದ ಕ್ಲಬ್ ಮತ್ತು ತರಬೇತಿ ಫೀಸ್ ಕಟ್ಟಿರುವ ನನಗೆ ಸಂಕಟ.
ಯಾವಾಗ ಯುರೋಪಿಯನ್ ದೇಶಗಳಿಗೆ ಅದರಲ್ಲೂ ಮುಖ್ಯವಾಗಿ ಬ್ರಿಟನ್ನಿಗೆ ಕರೋನ ಕಾಲಿಟ್ಟಿತೊ ಆಗ ‘ನಮ್ಮಲ್ಲೂ ಅಂಥದ್ದೇನಾದರೂ ಆದರೆ ಪರಿಸ್ಥಿತಿಯನ್ನು ನಿಭಾಯಿಸಲು ಸಿದ್ಧರಾಗುತ್ತಿದ್ದೀವಿ,’ ಅಂದರು. ಅಮೆರಿಕ ದೇಶ ಎಂತಹ ನಿರ್ಧಾರ ತೆಗೆದುಕೊಳ್ಳುತ್ತದೆ, ಯಾವ್ಯಾವ ಕ್ರಮಗಳನ್ನು ಜಾರಿಗೊಳಿಸುತ್ತದೆ, ಅನ್ನುವುದರ ಕಡೆ ಸರ್ಕಾರಕ್ಕೆ ಹೆಚ್ಚು ಆಸಕ್ತಿಯಿದ್ದಂತಿತ್ತು.
ಹೌದಲ್ಲ, ದಿನಗಳಿಕೆ ಆದಾಯವನ್ನೇ ನೆಚ್ಚಿಕೊಂಡವರಿಗೆ ಇದೆಷ್ಟು ಆತಂಕ ಹುಟ್ಟಿಡುವ ಪರಿಸ್ಥಿತಿ! ಈಗಂತೂ ಆಸ್ಟ್ರೇಲಿಯಾ ದೇಶ ಪೂರ್ತಿ ಹೆಚ್ಚಿನ ಉದ್ಯೋಗ ಸ್ಥಳಗಳಲ್ಲಿ ಚಾಲನೆಯಲ್ಲಿರುವುದು ಅರೆಕಾಲಿಕ ಮತ್ತು ತಾತ್ಕಾಲಿಕ ಕಾಂಟ್ರಾಕ್ಟ್ ಮಾದರಿ. ಅಂದರೆ ವಾರಕ್ಕಿಷ್ಟು ಗಂಟೆಗಳ ಕಾಲ ಕೆಲಸ- ಪ್ರತಿ ಕೆಲ ತಿಂಗಳ ಮಟ್ಟಿಗೆ ಮಾತ್ರ ಅನ್ನೋ ತರಹದ ಕಾಂಟ್ರಾಕ್ಟ್. ಅವರಿಗೆ ರಜೆ, ಬೋನಸ್, ಸಂಸ್ಥೆ ಕೊಡಬೇಕಾದ ಪೆನ್ಷನ್ ಸವಲತ್ತು ಇರಬಹುದು ಅಥವಾ ಇಲ್ಲದಿರಬಹುದು. ಇದ್ದರೂ ಅದು ಅತ್ಯಂತ ಕಡಿಮೆ ಪ್ರಮಾಣದ ಸವಲತ್ತು. ಅವರು ಆರೋಗ್ಯ ಕೆಟ್ಟು ಕೆಲಸಕ್ಕೆ ಹಾಜರಾಗದಿದ್ದರೆ ಆ ದಿನದ ಗಳಿಕೆಯಿಲ್ಲ. ಪರಿಸ್ಥಿತಿ ಬಿಗಡಾಯಿಸಿದರೆ ಏನೇನೆಲ್ಲಾ ಆಗಬಹುದು? ಅದೆಷ್ಟು ಜನರಿಗೆ ತೊಂದರೆ, ಅದರಿಂದ ಉಂಟಾಗುವ ಪರಿಣಾಮಗಳು ಒಂದಲ್ಲ ಎರಡಲ್ಲ, ಒಂದರಿಂದ ಇನ್ನೊಂದು ಹುಟ್ಟಿಕೊಳ್ಳುವ ಸಮಸ್ಯೆಗಳ ಕೂಪವೇ ಬಾಯ್ತೆರೆಯುತ್ತದೆ.
ಹೋದ ತಿಂಗಳು ಬ್ರಿಸ್ಬನ್ ನಗರದ ಕೆಳಗಡೆ ಇರುವ ಗೋಲ್ಡ್ ಕೋಸ್ಟ್ ಪ್ರದೇಶದಲ್ಲಿ ಚಿತ್ರೀಕರಣಕ್ಕೆಂದು ಬಂದ ಹೆಸರಾಂತ ಹಾಲಿವುಡ್ ನಟ ಟಾಮ್ ಹ್ಯಾಂಕ್ಸ್ ಮತ್ತು ಅವರ ಹೆಂಡತಿಗೆ ಕರೋನ ವೈರಸ್ ಸೋಂಕು ತಟ್ಟಿದೆ ಅನ್ನುವುದೇ ಮೊದಲ ದೊಡ್ಡ ಸುದ್ದಿ. ಜನರೆಲ್ಲಾ ಮರುಕಪಟ್ಟುಕೊಂಡು ಲೊಚ್ ಲೊಚ್ ಅಂದರು. ಪ್ರಸಿದ್ಧ ನಟನಾದ್ದರಿಂದ ಸಾಕಷ್ಟು ಫೋಟೋಗಳ-ಸಮೇತ ಪ್ರಚಾರವೂ ಸಿಕ್ಕಿತು. ಆ ನಂತರ ದೇಶದ ಇಮಿಗ್ರೇಷನ್ ಮಂತ್ರಿಗೆ ಸೋಂಕು ತಗಲಿದೆ ಎನ್ನುವ ಸುದ್ದಿಯಾಯ್ತು. ಪತ್ರಿಕೆಗಳಲ್ಲಿ ತಮ್ಮ ನಾಯಿಮರಿ ಜೊತೆ ಕೂತು ಮುಗುಳ್ನಗುತ್ತಿರುವ ಮಂತ್ರಿಯ ಫೋಟೋ ಪ್ರಚಾರವಾದಾಗ ಒಂದಷ್ಟು ಜನ ಛೀಮಾರಿ ಹಾಕಿದರು. ಸೋಂಕು ತಗುಲಿದ ಆ ಮಂತ್ರಿ ತಮ್ಮನ್ನು ತಾವೇ ಸ್ವತಃ ಗಡೀಪಾರು ಮಾಡಿಕೊಳ್ಳಲಿ, ಎನ್ನುವ ಉಪದೇಶವೂ ಬಂತು. ಏಕೆಂದರೆ ತಮ್ಮ ದೇಶಗಳನ್ನು ಯುದ್ಧಗಳ ಕಾರಣದಿಂದ ತೊರೆದು ರಕ್ಷಣೆ ಕೋರಿ ಆಸ್ಟ್ರೇಲಿಯಾಗೆ ಬರುವ ನಿರಾಶ್ರಿತರು ಮತ್ತು ಆಶ್ರಯ ಕೋರುವವರನ್ನು ಈ ಮಂತ್ರಿ ಇಷ್ಟಪಡುವುದಿಲ್ಲವಂತೆ. ಪರವಾನಗಿಯಿಲ್ಲದೆ ದೇಶದೊಳಗೆ ಕಾಲಿಡುವವರಿಗೆ ಆತ ದುಃಸ್ವಪ್ನವಂತೆ. ಇನ್ನೂ ಒಂದಷ್ಟು ಜನರು ಮುಂದುವರೆದು ಪತ್ರಿಕೆಗಳನ್ನೇ ಬಯ್ದರು. ‘ಮಂತ್ರಿಮಹೋದಯರ ಫೋಟೋ ಹಾಕಲು ನಿಮಗೆ ನಾಚಿಕೆಯಾಗಬೇಕು. ಸಾಮಾನ್ಯ ಜನರ ಭಾವನೆಗಳನ್ನ, ಅವರು ಪಡುತ್ತಿರುವ ಬವಣೆಯತ್ತ ನಿಮ್ಮ ಗಮನವಿರಲಿ,’ ಎಂದು ಎಚ್ಚರಿಸಿದರು.
ಇತ್ತೀಚಿನ ಸುದ್ದಿಯೆಂದರೆ ಅನೇಕಾನೇಕ ಸಾವಿರ ಸಂಖ್ಯೆಯಲ್ಲಿರುವ ಹಿರಿಯ ವಯಸ್ಸಿನ ಪ್ರಜೆಗಳನ್ನು ಸಂರಕ್ಷಿಸುವುದು. ಸದ್ಯಕ್ಕೆ ಇಲ್ಲಿ ಶರತ್ಕಾಲ, ನಿಧಾನವಾಗಿ ಬಿಸಿಲಿನ ಶಾಖ ಕಡಿಮೆಯಾಗುತ್ತಿದೆ, ಬೇಗ ಸಂಜೆಯಾಗುತ್ತಿದೆ, ಬೆಳಗಿನ ಜಾವ ರವೆಯಷ್ಟು ಚಳಿಯೆನ್ನಿಸುತ್ತಿದೆ. ಆರು ತಿಂಗಳ ಕಡುಬಿಸಿಲಿನ ತಾಪದ ನಂತರ ಈಗ ಮೈಮೇಲೆ ಹೊದಿಕೆ ಎಳೆದುಕೊಂಡರೆ ಆಗುವ ಮುದವನ್ನ ನೆನೆದೇ ಮನ ಬೆಚ್ಚಗಾಗುತ್ತದೆ. ಆದರೆ, ಕೆಟ್ಟ ಸುದ್ದಿಯೆಂದರೆ ಕರೋನ ವೈರಸ್ಸಿಗೂ ಚಳಿಯೆಂದರೆ ಇಷ್ಟವಂತೆ. ಚಳಿಯಿದ್ದ ಕಡೆ ಬಂದು ತಳವೂರಿ ಮೈಕೈ ಹರಡಿಕೊಳ್ಳಲಾ ಎಂದು ನೋಡುತ್ತದೆಯಂತೆ. ಇದನ್ನು ಕೇಳಿ ಹಿರಿಯ ಪ್ರಜೆಗಳು ಬೆಚ್ಚಿದ್ದಾರೆ. ಅವರಿಗೆಲ್ಲಾ ಸೋಂಕು ತಗುಲಿದರೆ ಆಗುವ ಜೀವಹಾನಿ, ಆರ್ಥಿಕ ಸಂಕಷ್ಟಗಳನ್ನು ಲೆಕ್ಕ ಹಾಕಿ ಸರ್ಕಾರ ಕೂಡ ಚಿಂತೆಗೊಳಗಾಗಿದೆ. ಪ್ರಪಂಚದ ದೊಡ್ಡಪ್ಪಗಳು ಹೇಳಿದಂತೆ ಇಲ್ಲೂ ಕೂಡ ‘ದೇಶ ಬಿಟ್ಟು ಹೊರಗಡೆ ಹೋಗಬೇಡಿ, ಹೊರಗಿನಿಂದ ಇಲ್ಲಿಗೆ ಬಂದರೆ ಹದಿನಾಲ್ಕು ದಿನ ಕಡ್ಡಾಯವಾಗಿ ಸ್ವ-ನಿರ್ಬಂಧಿತರಾಗಿದ್ದು ಸಹಕರಿಸಿ,’ ಎಂದೆಲ್ಲಾ ಸೂಚನೆಗಳಿವೆ.
ನಮ್ಮ ನಗರದ ಎರಡು ಯೂನಿವರ್ಸಿಟಿಗಳಲ್ಲಿ ಎಲ್ಲಾ ಲೆಕ್ಚರ್ ಮತ್ತು ಟ್ಯುಟೋರಿಯಲ್ ತರಗತಿಗಳನ್ನ ಆನ್ ಲೈನ್ ಮಾದರಿಗೆ ಅಳವಡಿಸಿ ವಿದ್ಯಾರ್ಥಿಗಳು ತರಗತಿಗಳಿಗೆ ಬರುವುದು ಬೇಡ ಎಂದಿದ್ದಾರೆ. ಈ ಮುಂದುವರೆದ ದೇಶದಲ್ಲಿ ಓದಲೆಂದು ಬಂದಿರುವ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಪಾಡೇನು ಎಂದು ಚಿಂತೆಯಾಗುತ್ತದೆ. ಈ ಪರಿಸ್ಥಿತಿ ಕನಿಷ್ಠ ಆರು ತಿಂಗಳ ಮಟ್ಟಿಗಾದರೂ ಇರುತ್ತದೆ ಎಂದಿದ್ದಾರೆ.
ಇಲ್ಲಿಯವರೆಗೂ ಐದನೂರು ಸೋಂಕುಪೀಡಿತರನ್ನು ಗುರುತಿಸಲಾಗಿದೆ. ಇನ್ನೂ ಹೆಚ್ಚಿನ ಸಂಖ್ಯೆ ಇರಬಹುದು. ಆರ್ಥಿಕವಾಗಿ ಮತ್ತಷ್ಟು ಕಂಗೆಡುವುದು ಬೇಡವೆಂದು ಇಲ್ಲಿ ವ್ಯಾಪಾರ ವಹಿವಾಟುಗಳನ್ನ ನಿರ್ಬಂಧಿಸಿಲ್ಲ. ಯಾವುದೇ ಶಿಕ್ಷಣ ಸಂಸ್ಥೆಗಳನ್ನು, ಉದ್ಯೋಗ ಸ್ಥಳಗಳನ್ನ ಮುಚ್ಚಿಲ್ಲ. ಆದರೆ ಹೆಚ್ಚಿನಂಶ ಎಲ್ಲಾ ಸಾರ್ವಜನಿಕ ಸಭೆಗಳನ್ನ, ಸಮಾರಂಭಗಳನ್ನ, ನೂರಕ್ಕೂ ಹೆಚ್ಚಿನ ಜನರು ಸೇರುವುದನ್ನ ಸರ್ಕಾರದ ಸೂಚನೆಯಂತೆ ಮತ್ತು ಸ್ವಯಂಪ್ರೇರಿತರಾಗಿ ರದ್ದುಮಾಡಲಾಗಿದೆ. ಎಲ್ಲಾ ನಿಟ್ಟಿನಲ್ಲೂ ಪ್ರತಿದಿನವೂ ಪರಿಸ್ಥಿತಿಯ ಕೂಲಂಕುಶ ವಿಶ್ಲೇಷಣೆ ನಡೆಯುತ್ತಿದೆ. ಶಾಲೆಗಳನ್ನ ಮುಚ್ಚುವುದಿಲ್ಲ ಎಂದಿದ್ದಾರೆ. ಕೆಲವು ಪೋಷಕರು ಕಳವಳ ವ್ಯಕ್ತಪಡಿಸಿದರೆ ಹೆಚ್ಚಿನವರು ಶಾಲೆ ಮುಚ್ಚಿದರೆ ಸಮಾಜಕ್ಕೆ ಆಗುವ ತೊಂದರೆಗಳ ಸರಮಾಲೆಯನ್ನು ಸೈರಿಸಲಾಗುವುದಿಲ್ಲ ಎನ್ನುತ್ತಿದ್ದಾರೆ. ಶಾಲೆ ಮುಚ್ಚಿದರೆ ಮನೆಯಲ್ಲಿ ಉಳಿಯುವ ಮಕ್ಕಳನ್ನು ನೋಡಿಕೊಳ್ಳಲು ಹಿರಿಯರೂ ಮನೆಯಲ್ಲಿರಬೇಕು. ಆಗ ಉದ್ಯೋಗಗಳನ್ನೂ ನಿಲ್ಲಿಸಬೇಕು. ಎಷ್ಟೋ ಪೋಷಕರಲ್ಲಿ ಸಿಂಗಲ್ ಪೇರೆಂಟ್ ಆದವರು, ಆರ್ಥಿಕ ಬಡತನವಿರುವವರು ಇದ್ದಾರೆ. ಅವರ ಸಂಕಷ್ಟಗಳನ್ನು ಯಾರು ನಿವಾರಿಸುತ್ತಾರೆ?
ಭಾರಿಪೆಟ್ಟು ಬಿದ್ದಿರುವುದು airlines ಕಂಪನಿಗಳಿಗೆ ಎಂದು ಕಾಣುತ್ತದೆ. ಆಸ್ಟ್ರೇಲಿಯನ್ airlines ಕಂಪನಿ Qantas ತೊಂಭತ್ತು ಭಾಗ ತನ್ನ ಕೆಲಸವನ್ನು ನಿಲ್ಲಿಸಿದೆ. ಕಂಪನಿಯ ಮೂವತ್ತು ಸಾವಿರ ಸಿಬ್ಬಂದಿವರ್ಗದಲ್ಲಿ ಇಪ್ಪತ್ತು ಸಾವಿರ ನೌಕರರ ಭವಿಷ್ಯ ಅಯೋಮಯವಾಗಿದೆಯಂತೆ. ಸರ್ಕಾರ ಒಂದು ಹೆಜ್ಜೆ ಮುಂದೆ ಹೋಗಿ ಪ್ರಜೆಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೆಚ್ಚಿನ ಕ್ರಮಗಳನ್ನು ಇನ್ನೂ ತೆಗೆದುಕೊಂಡಿಲ್ಲ. ಯೂರೋಪಿನ ಹಲವೆಡೆ ದೇಶದ ಪ್ರಜೆಗಳ ಆದಾಯ ರಕ್ಷಣೆ, ಮನೆಸಾಲ ಪಾವತಿಯನ್ನು ತಾತ್ಕಾಲಿಕವಾಗಿ ತಡೆಹಿಡಿದಿರುವುದು, ವಾರದ ಖರ್ಚುಗಳನ್ನ ತಡೆಹಿಡಿದಿರುವುದು ನಡೆದಿದೆಯಂತೆ. ನಮ್ಮಲ್ಲಿ ಅಂಥದ್ದೊಂದು ದೊಡ್ಡ ಮನಸ್ಸು ಇಲ್ಲ ಎಂದು ಜನ ಗೊಣಗುತ್ತಿದ್ದಾರೆ. ಆದರೆ ಅಲ್ಲಿನ ಪರಿಸ್ಥಿತಿಗಳ ಸೂಕ್ಷ್ಮತೆಯೇನೋ, ಯಾರಿಗೆ ಗೊತ್ತು?
ಆಯಾ ದೇಶಗಳ ಬಗ್ಗೆ ಯೋಚಿಸಿದರೆ ಚಿಕ್ಕಪುಟ್ಟ ದೇಶಗಳು ಮತ್ತು ಆರ್ಥಿಕವಾಗಿ ಬಡತನವಿರುವ, ಅಸಮಾನತೆಯಿರುವ ಸಮಾಜಗಳು ಈ ಅನಿರೀಕ್ಷಿತ ಪರಸ್ಥಿತಿಯನ್ನು ಹೇಗೆ ಎದುರಿಸುತ್ತಿವೆಯೋ ಎಂದು ಚಿಂತೆಯಾಗುತ್ತದೆ. ಒಂದು ರೋಗಾಣುವಿನಿಂದ ಇಡೀ ವಿಶ್ವದ ಆತ್ಮವಿಶ್ವಾಸ ಪಲ್ಲಟವಾಗಿರುವುದು ಮಾನವಕುಲದ ದೊಡ್ಡ ವಿಡಂಬನೆಯೇನೋ ಅನಿಸುತ್ತಿದೆ.
Social Distancing ಎಂಬ ನಿಯಮವನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕು ಎಂದಾಗಿದೆ. ಆದರೆ ಇದರಿಂದ ಮಾನಸಿಕ ಆರೋಗ್ಯಕ್ಕೆ ಹಾನಿ ತಟ್ಟಬಹುದು. ಅದರಲ್ಲೂ ಈಗಾಗಲೇ ಒಬ್ಬಂಟಿತನವನ್ನು ಅನುಭವಿಸುತ್ತಿರುವ ಹಿರಿಯ ವಯಸ್ಕರು, ಮಾನಸಿಕ ರೋಗಿಗಳು, ನಿರುದ್ಯೋಗಿಗಳು ಇನ್ನಷ್ಟು ತಲ್ಲಣಕ್ಕೊಳಗಾಗಬಹುದು. ಎಷ್ಟೇ ಆಧುನಿಕ IT ಸಾಧನಗಳಿದ್ದರೂ, ಸಾಮಾಜಿಕ ತಾಣಗಳಿದ್ದರೂ, Zoom, Skype ಇತ್ಯಾದಿಗಳಿದ್ದರೂ ಪರಸ್ಪರ ಭೇಟಿಯಾಗಿ ಮುಖಾಮುಖಿ ಮಾತನಾಡಿ ನಮ್ಮನಮ್ಮ ಕಥೆಗಳನ್ನ ಹಂಚಿಕೊಂಡರೆ ಅದೆಷ್ಟೋ ಸಮಾಧಾನವಾಗುತ್ತದೆ.
ಒಂದಂತೂ ನಿಜವಾಗಿಯೂ ನಡೆಯುತ್ತಿದೆ. ಅದೇನೆಂದರೆ ಸಮುದಾಯ ಪ್ರಜ್ಞೆ ಇನ್ನಷ್ಟು ಜಾಗೃತವಾಗಿದೆ. ನಮ್ಮ ಪ್ರದೇಶದಲ್ಲಿರುವ ಒಂದೆರೆಡು ಸಮುದಾಯ ಗುಂಪುಗಳು ಈಗಾಗಲೇ ಸಾಮಾಜಿಕ ತಾಣಗಳಲ್ಲಿ ಪರಸ್ಪರ ಸಹಾಯ ಮಾಡುವ, ಒಬ್ಬರಿಗೊಬ್ಬರು ಆತುಕೊಳ್ಳುವ ಸಂದೇಶಗಳನ್ನ ಹಾಕಿವೆ. ಯಾರಾದರೂ ಹದಿನಾಲ್ಕು ದಿನ ಸ್ವಯಂಪ್ರೇರಿತ ಪ್ರತ್ಯೇಕಿತರಾಗಿ ಮನೆಯಲ್ಲಿದ್ದರೆ ಹೇಳಿ, ನಿಮ್ಮ ವಾರದ ಶಾಪಿಂಗ್ ನಾವು ಮಾಡುತ್ತೇವೆ, ಎಂದಿದ್ದಾರೆ. ಯಾರಲ್ಲಾದರೂ ದಿನನಿತ್ಯ ಬಳಕೆಯ (ಆಹಾರ ಹೊರತುಪಡಿಸಿ) ವಸ್ತುಗಳಿದ್ದರೆ, ಸಾಮಾನುಗಳಿದ್ದರೆ ಅಗತ್ಯವಿರುವ ಇತರರಿಗೆ ನೀಡಿ ಎಂದು ಹೇಳುತ್ತ ಒಬ್ಬರಿಗೊಒಬ್ಬರು ಸಹಾಯಹಸ್ತ ಹಸ್ತ ಚಾಚಲು ಮುಂದಾಗುತ್ತಿದ್ದಾರೆ.
ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.