ನ್ಯೂಟನ್ ಪ್ರಕಾರ, ಬೆಳಕೆಂದರೆ ಬೆಳಕಿನ ಕಣಗಳ ಸಂಚಾರ. ಅವನು ಹೇಳುವಂತೆ ಸೂಕ್ಷ್ಮಾತಿಸೂಕ್ಷ್ಮ ಮತ್ತು ತೂಕವೇ ಇರದ ಈ ಕಣಗಳು ನೇರವಾಗಿ ಸಂಚರಿಸುತ್ತವೆ. ಈ ಕಣಗಳ ಸಂಚಾರಕ್ಕೆ ಅಡ್ಡವಾಗಿ ಒಂದು ಕಾರ್ಡ್ ಬೋರ್ಡ್ ಹಿಡಿದರೆ, ಅವುಗಳ ಸಂಚಾರ ಅಲ್ಲಿಗೇ ನಿಂತು ಆ ಬೋರ್ಡಿನ ಹಿಂದೆ, ಬೆಳಕು ಇರುವುದಿಲ್ಲ. ಆದರೆ, ಆ ಬೋರ್ಡಿನಲ್ಲಿ, ಸಣ್ಣದೊಂದು ಸೀಳಿನಂತಹ ಕಿಂಡಿಯನ್ನು ನಿರ್ಮಿಸಿದರೆ, ಕೆಲ ಬೆಳಕಿನ ಕಣಗಳು ಅವುಗಳಲ್ಲಿ ತೂರಿ ಹೋಗುತ್ತವೆ.
ಶೇಷಾದ್ರಿ ಗಂಜೂರು ಬರೆಯುವ ಅಂಕಣ
“ಬೆಳಕೆಂದರೆ ಏನು?” ಈ ಪ್ರಶ್ನೆಗೆ ಉತ್ತರಿಸುವುದು ಸುಲಭವಲ್ಲ; ಎಷ್ಟೇ ಡಿಕ್ಷನರಿಗಳಿದ್ದರೂ. ಬೈಬಲ್ಲಿನಲ್ಲಿ ಹೇಳುವಂತೆ, ಈ ವಿಶ್ವದ ಸೃಷ್ಟಿಯ ಆದಿಯಲ್ಲಿಯೇ, ದೇವನು “ಬೆಳಕಿರಲಿ” ಎಂದನಂತೆ. ತತ್ ಕ್ಷಣವೇ ಬೆಳಕಾಯಿತಂತೆ. ಬೆಳಕು ಅವನಿಗೆ ಇಷ್ಟವಾಯಿತಂತೆ. ಅಂದಿನಿಂದ ಬೆಳಕು ಇದ್ದೇ ಇದೆ.
ಕ್ರಿಸ್ತ ಪೂರ್ವದ ಕಾಲದಿಂದಲೂ, ನಾನಾ ದೇಶಗಳ ಪಂಡಿತರು, ತತ್ವ ಶಾಸ್ತ್ರಜ್ಞರು, ಬೆಳಕಿನ ವಿವಿಧ ಗುಣಗಳ ಬಗೆಗೆ ಚರ್ಚಿಸಿದ್ದಾರಾದರೂ, ವೈಜ್ಞಾನಿಕ ತಳಹದಿಯ ಮೇಲೆ – ಎಂದರೆ, ಪ್ರಯೋಗಗಳ ಮೂಲಕ – “ಬೆಳಕೆಂದರೆ ಇದು” ಎಂಬ ಖಚಿತ ಅಭಿಪ್ರಾಯ ವ್ಯಕ್ತಪಡಿಸುವುದಿಲ್ಲ. ಅಂತಹ ಅಭಿಪ್ರಾಯಗಳನ್ನು ಮೊದಲ ಬಾರಿಗೆ ವ್ಯಕ್ತ ಪಡಿಸಿದವರೆಂದರೆ, ನ್ಯೂಟನ್ ಮತ್ತು ಅವನ ಸಮ ಕಾಲೀನನಾದ ಹಯ್ಗೆನ್ಸ್.
ನ್ಯೂಟನ್ ಪ್ರಕಾರ, ಬೆಳಕೆಂದರೆ ಬೆಳಕಿನ ಕಣಗಳ ಸಂಚಾರ. ಅವನು ಹೇಳುವಂತೆ ಸೂಕ್ಷ್ಮಾತಿಸೂಕ್ಷ್ಮ ಮತ್ತು ತೂಕವೇ ಇರದ ಈ ಕಣಗಳು ನೇರವಾಗಿ ಸಂಚರಿಸುತ್ತವೆ. ಈ ಕಣಗಳ ಸಂಚಾರಕ್ಕೆ ಅಡ್ಡವಾಗಿ ಒಂದು ಕಾರ್ಡ್ ಬೋರ್ಡ್ ಹಿಡಿದರೆ, ಅವುಗಳ ಸಂಚಾರ ಅಲ್ಲಿಗೇ ನಿಂತು ಆ ಬೋರ್ಡಿನ ಹಿಂದೆ, ಬೆಳಕು ಇರುವುದಿಲ್ಲ. ಆದರೆ, ಆ ಬೋರ್ಡಿನಲ್ಲಿ, ಸಣ್ಣದೊಂದು ಸೀಳಿನಂತಹ ಕಿಂಡಿಯನ್ನು ನಿರ್ಮಿಸಿದರೆ, ಕೆಲ ಬೆಳಕಿನ ಕಣಗಳು ಅವುಗಳಲ್ಲಿ ತೂರಿ ಹೋಗುತ್ತವೆ. ಆ ಬೋರ್ಡಿನ ಹಿಂದೆ, ಇನ್ನೊಂದು ಬೋರ್ಡ್ ಹಿಡಿದರೆ, ಕಿಂಡಿಯಿಂದ ತೂರಿ ಬಂದ ಕಣಗಳು ಮೂಡಿಸುವ ಬೆಳಕನ್ನೂ ಅದರ ಸುತ್ತಲೂ ಇರುವ ನೆರಳನ್ನೂ ನಾವು ಕಾಣಬಹುದು.
ಆದರೆ, ಹಯ್ಗೆನ್ಸ್, ನ್ಯೂಟನ್ ನ ಮಾತನ್ನು ಒಪ್ಪುವುದಿಲ್ಲ. ಅವನ ಪ್ರಕಾರ, ಬೆಳಕೆಂದರೆ ಕಣಗಳ ನೇರ ಸಂಚಾರವಲ್ಲ. ಬೆಳಕೆಂದರೆ ಒಂದು ಅಲೆ. ಮೇಲೆ ಹೇಳಿದ ಪ್ರಯೋಗದಲ್ಲಿ, ಮೊದಲನೆಯ ಬೋರ್ಡಿನಲ್ಲಿ ಒಂದು ಕಿಂಡಿ ಮಾಡುವುದರ ಬದಲು, ಎರಡು ಕಿಂಡಿಗಳನ್ನು ನಿರ್ಮಿಸಿದರೆ, ನ್ಯೂಟನ್ ನ ಮಾತು ನಿಜವೇ ಇದ್ದರೆ, ಎರಡನೆಯ ಬೋರ್ಡಿನ ಮೇಲೆ ನಾವು ಬೆಳಕಿನ ಎರಡು ಗೆರೆಗಳನ್ನು ಮಾತ್ರ ಕಾಣ ಬೇಕಲ್ಲವೇ?! ಆದರೆ, ನಮಗೆ ಕಾಣಬರುವುದು ಕೇವಲ ಎರಡು ಗೆರೆಗಳಲ್ಲ. ಬದಲಿಗೆ, ನಮಗೆ ಕಾಣುವುದು ಹಲವಾರು ಗೆರೆಗಳು. (ಪಕ್ಕದ ಚಿತ್ರ ನೋಡಿ) ಬೆಳಕು, ಅಲೆಗಳಾಗಿದ್ದರೆ ಮಾತ್ರ ಇದು ಸಾಧ್ಯ. (ಅಂದಹಾಗೆ, ನ್ಯೂಟನ್ ಆಗಲಿ, ಹಯ್ಗೆನ್ಸ್ ಆಗಲಿ ಈ ಪ್ರಯೋಗಗಳನ್ನು ಮಾಡಲಿಲ್ಲ. “ಡಬಲ್ ಸ್ಲಿಟ್ ಎಕ್ಸ್‌ಪೆರಿಮೆಂಟ್” ಎಂದೇ ಪ್ರಖ್ಯಾತವಾದ ಈ ಪ್ರಯೋಗವನ್ನು ಮೊದಲ ಬಾರಿಗೆ ಮಾಡಿದವನು ಥಾಮಸ್ ಯಂಗ್ ಎಂಬ ಹತ್ತೊಂಬತ್ತನೆಯ ಶತಮಾನದ ಬ್ರಿಟಿಷ್ ವಿಜ್ಞಾನಿ)
ನ್ಯೂಟನ್-ಹಯ್ಗೆನ್ಸ್ ರ ಕಾಲದಿಂದಲೂ, “ಬೆಳಕೆಂಬುದು ಕಣವೋ ಅಥವಾ ಅಲೆಯೋ?” ಎಂಬ ಚರ್ಚೆ ನಡೆಯುತ್ತಲೇ ಇದೆ. ಇತ್ತೀಚಿನ ವಿಜ್ಞಾನಿಗಳ ಪ್ರಕಾರ ಬೆಳಕು ಅಲೆಯೂ ಹೌದು, ಕಣವೂ ಹೌದು.
*****
ಸದ್ಯಕ್ಕೆ ಈ “ಅಲೆಯೋ-ಕಣವೋ” ಚರ್ಚೆಯನ್ನು ಪಕ್ಕಕ್ಕಿಡೋಣ. ಜೇಮ್ಸ್ ಕ್ಲಾರ್ಕ್ ಮ್ಯಾಕ್ಸ್ವೆಲ್ ತನ್ನ ಗಣಿತದ ಮೂಲಕ, ಬೆಳಕೆಂಬುದು ಎಲೆಕ್ಟ್ರೋ-ಮ್ಯಾಗ್ನೆಟಿಕ್ ಅಲೆಗಳು ಎಂದು ನಿರ್ಧಾರಕ್ಕೆ ಬಂದದ್ದು ಈಗ ಎಲ್ಲರಿಗೂ ತಿಳಿದ ವಿಚಾರ. (ಈ ಅಂಕಣದ ಹಿಂದಿನ ಲೇಖನಗಳನ್ನು ಓದಿರಿ) ಹೀಗಾಗಿ, ಬೆಳಕೆಂಬುದು ಅಲೆಗಳು ಎಂಬುದಕ್ಕೆ ಗಣಿತದ ಒಂದು ತಳಹದಿ ಇದೆ.
ಬೆಳಕನ್ನು “ಅಲೆಗಳು” ಎಂದು ಒಪ್ಪಿ ಮುಂದುವರೆಯೋಣ. ಹೀಗೆ ಒಪ್ಪಿದ ಕ್ಷಣವೇ ಇನ್ನೊಂದು ಪ್ರಶ್ನೆ ಮೂಡುತ್ತದೆ: “ಯಾವುದರ ಅಲೆಗಳು?” ಉದಾಹರಣೆಗೆ, ನೀರಿನ ಅಲೆಗಳು ಮೂಡುವುದು ನೀರಿನಲ್ಲಿ. ಶಬ್ದದ ಅಲೆಗಳಿಗೆ ಗಾಳಿಯೋ ಅಥವಾ ಮತ್ತೊಂದು ಮಾಧ್ಯಮವೋ ಬೇಕು. ಆದರೆ, ಸೂರ್ಯ-ಭೂಮಿಯ ನಡುವಿನ “ಶೂನ್ಯ”ವನ್ನು ಬೆಳಕಿನ ಅಲೆಗಳು ದಾಟುವುದು ಯಾವ ಮಾಧ್ಯಮದ ಮೂಲಕ?
ಕ್ರಿಶ್ಚಿಯಾನ್ ಹಯ್ಗೆನ್ಸ್ (ಮತ್ತು ಅವನಿಗಿಂತ ಮುನ್ನ ಇನ್ನೊಬ್ಬ ಬ್ರಿಟಿಷ್ ವಿಜ್ಞಾನಿ ರಾಬರ್ಟ್ ಬಾಯ್ಲ್) ಈ ಪ್ರಶ್ನೆಗೆ ಕೊಟ್ಟ ಉತ್ತರ: “ಈಥರ್” ಅಥವಾ “ಲ್ಯೂಮಿನಿಫೆರಸ್ ಈಥರ್” (“ಲ್ಯೂಮಿನಿಫೆರಸ್” ಎಂದರೆ ಬೆಳಕನ್ನು ಕೊಂಡೊಯ್ಯುವ ಎಂದು ಅರ್ಥೈಸಬಹುದು). ಹಯ್ಗೆನ್ಸ್ ಮತ್ತು ಅವನ ಸಂಗಡಿಗರ ಪ್ರಕಾರ, ಈ “ಈಥರ್” ಎಂಬ ವಸ್ತು ವಿಶ್ವದೆಲ್ಲೆಡೆ ಹರಡಿದೆ. ಅದಕ್ಕೆ ಬಣ್ಣವೂ ಇಲ್ಲ ಮತ್ತು ತೂಕವೂ ಇಲ್ಲ. ಬೆಳಕನ್ನು ಅಲೆಗಳಂತೆ ಸಂವಹಿಸುವುದಷ್ಟೇ ಅದರ ಕೆಲಸ.
ಮೊದಲೇ ಹೇಳಿದಂತೆ, ಹಯ್ಗೆನ್ಸ್ ನ ಈ ವಾದವನ್ನು ನ್ಯೂಟನ್ ಒಪ್ಪಿಕೊಳ್ಳದಿದ್ದರೂ, ಹಯ್ಗೆನ್ಸ್-ನ್ಯೂಟನ್ನರ ನಂತರದ ಎರಡು ಶತಮಾನಗಳ ಕಾಲ, ಈ “ಈಥರ್ ವಾದ”ವನ್ನೇ ಸರಿಯೆಂದು ಬಹುಪಾಲು ಮಂದಿ ವಿಜ್ಞಾನಿಗಳು ನಂಬಿದ್ದರು. ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದ ವೇಳೆಗೆ, ಜೇಮ್ಸ್ ಕ್ಲಾರ್ಕ್ ಮ್ಯಾಕ್ಸ್‌ವೆಲ್ “ಬೆಳಕೆನ್ನುವುದು ಎಲೆಕ್ಟ್ರೋ ಮ್ಯಾಗ್ನೆಟಿಕ್ ಅಲೆಗಳು” ಎಂದು ಗಣಿತದ ಮೂಲಕ ತೋರಿಸಿಕೊಟ್ಟ ಮೇಲಂತೂ, ಈ “ಈಥರ್ ವಾದ” ಮತ್ತಷ್ಟು ಗಟ್ಟಿಯಾಯಿತು. ಈಥರ್‌ನ ಗುಣ-ವಿಶೇಷಗಳನ್ನು ಪ್ರಯೋಗಗಳ ಮೂಲಕ ಅರಿಯಲು ಪ್ರಯತ್ನಿಸುವುದು ಹತ್ತೊಂಬತ್ತನೆಯ ಶತಮಾನದ ಹಲವಾರು ಭೌತ ಶಾಸ್ತ್ರಜ್ಞರ ಕಾಯಕವೇ ಆಗಿ ಹೋಯಿತು.
ಭೂಮಿ, ಸೂರ್ಯನ ಸುತ್ತಲೂ ಸೆಕೆಂಡಿಗೆ ಸುಮಾರು ಮೂವತ್ತು ಕಿ.ಮಿ. ವೇಗದಲ್ಲಿ ಸುತ್ತುತ್ತಿದೆ. ಈ ಸುತ್ತಾಟದಲ್ಲಿ, ಅದು ಕೆಲವೊಮ್ಮೆ ಸೂರ್ಯನೆಡೆಗೆ ಸರಿದರೆ, ಇನ್ನೂ ಕೆಲವೊಮ್ಮೆ ಸೂರ್ಯನಿಂದ ದೂರ ಸರಿಯುತ್ತದೆ. ಭೂಮಿಯ ಸುತ್ತಲೂ ಈಥರ್ ಆವರಿಸಿಕೊಂಡಿದ್ದರೆ, ಭೂಮಿ ಸುತ್ತುತ್ತಿರುವಾಗ ತನ್ನ ಸುತ್ತಲಿನ ಈಥರ್ ಅನ್ನೂ ಸಹ ಕೊಂಚ ಮಟ್ಟಿಗೆ ಸೆಳೆಯುತ್ತಲೇ ಇರಬೇಕು. ಮತ್ತು ಸುತ್ತಲಿನ ಈಥರ್ ಗೆ ಸಂಬಂಧಿಸಿದಂತೆ ಭೂಮಿಯ ವೇಗದಲ್ಲಿ ಬದಲಾವಣೆ ಆಗುತ್ತಲೇ ಇರಬೇಕು.
ಭೂಮಿ ಚಲಿಸುವಾಗ, ಬೆಳಕಿನ ವೇಗದಲ್ಲಿ ಆಗಬಹುದಾದ ಬದಲಾವಣೆಯನ್ನು ಮಾಪನ ಮಾಡಿದರೆ, ಈಥರ್ ನ ಗುಣಗಳನ್ನು ಮತ್ತಷ್ಟು ತಿಳಿಯಬಹುದೆಂದು ಆ ಕಾಲದ ಭೌತ ಶಾಸ್ತ್ರಜ್ಞರ ಆಲೋಚನೆಯಾಗಿತ್ತು. ಇಂತಹ ವಿಜ್ಞಾನಿಗಳಲ್ಲಿ, ಅಮೆರಿಕದ ಆಲ್ಬರ್ಟ್ ಆಬ್ರಹಂ ಮಿಷೆಲ್‌ಸನ್ ಸಹ ಒಬ್ಬ. ಮಿಷೆಲ್‌ಸನ್ ಹುಟ್ಟಿದ್ದು ಇಂದಿನ ಪೋಲೆಂಡಿನಲ್ಲಿ. ಅವನ ತಂದೆ ಒಬ್ಬ ವರ್ತಕನಾಗಿದ್ದ. ಯೆಹೂದಿ ಧರ್ಮದವರಾಗಿದ್ದ ಮಿಷೆಲ್‌ಸನ್ ಕುಟುಂಬ, ಆಲ್ಬರ್ಟ್ ಮೂರು ವರ್ಷದವನಿದ್ದಾಗ ಅಮೆರಿಕಕ್ಕೆ ವಲಸೆ ಹೋಯಿತು.
ಬಾಲ್ಯದಿಂದಲೂ ವಿಜ್ಞಾನ, ಅದರಲ್ಲೂ ಬೆಳಕಿನ ಕುರಿತು ಅಪಾರ ಆಸಕ್ತಿ ಹೊಂದಿದ್ದ ಆಲ್ಬರ್ಟ್ ಮಿಷೆಲ್‌ಸನ್ ತನ್ನ ಹೈ ಸ್ಕೂಲು ವಿದ್ಯಾಭ್ಯಾಸ ಮುಗಿಸಿ ಅಮೆರಿಕದ ನೌಕಾ ಪಡೆಗೆ ಸೇರಿದ. ನೌಕಾ ಪಡೆಯಲ್ಲಿ ಕೆಲಸ ಮಾಡುತ್ತಲೇ, ಅವನು ಭೌತ ಶಾಸ್ತ್ರದಲ್ಲಿ ಉನ್ನತ ವ್ಯಾಸಂಗವನ್ನೂ ಮಾಡಿದ. ನೌಕಾ ಪಡೆ ಬಿಟ್ಟ ನಂತರ ಅವನು, ಇಂದು ಅಮೆರಿಕದಲ್ಲಿ “ಕೇಸ್ ವೆಸ್ಟರ್ನ್ ರಿಸರ್ವ್ ಯೂನಿವರ್ಸಿಟಿ” ಎಂದು ಹೆಸರಾಗಿರುವ ವಿಶ್ವವಿದ್ಯಾಲಯದಲ್ಲಿ ಭೌತ ಶಾಸ್ತ್ರದ ಅಧ್ಯಾಪಕನಾಗಿ ಕೆಲಸಕ್ಕೆ ಸೇರಿಕೊಂಡ. ಅಲ್ಲಿ, ಅವನಿಗೆ ಎಡ್ವರ್ಡ್ ಮೋರ್ಲಿ ಎಂಬ ಇನ್ನೊಬ್ಬ ಭೌತ ಶಾಸ್ತ್ರಜ್ಞನ ಪರಿಚಯವಾಯಿತು.
ಶಬ್ದದ ಅಲೆಗಳಿಗೆ ಗಾಳಿಯೋ ಅಥವಾ ಮತ್ತೊಂದು ಮಾಧ್ಯಮವೋ ಬೇಕು. ಆದರೆ, ಸೂರ್ಯ-ಭೂಮಿಯ ನಡುವಿನ “ಶೂನ್ಯ”ವನ್ನು ಬೆಳಕಿನ ಅಲೆಗಳು ದಾಟುವುದು ಯಾವ ಮಾಧ್ಯಮದ ಮೂಲಕ?
ಮಿಷೆಲ್‌ಸನ್ ಮತ್ತು ಮೋರ್ಲಿ ಇಬ್ಬರೂ ಒಟ್ಟುಗೂಡಿ, ಬೆಳಕಿನ ವೇಗವನ್ನು -ಈಥರ್ ಗೆ ಸಂಬಂಧಿಸಿದಂತೆ ವಿವಿಧ ದಿಕ್ಕುಗಳಲ್ಲಿ – ಅಳೆದು ಈಥರ್ ನ ಬಗೆಗೆ ಅಧ್ಯಯನ ನಡೆಸುವ ಆಲೋಚನೆ ಮಾಡಿದರು. ಆ ಕಾಲದಲ್ಲಿ, ಬೆಳಕಿನ ವೇಗವನ್ನು ಅತ್ಯಂತ ನಿಖರತೆಯಿಂದ ಅಳೆಯುವ ಸಲಕರಣೆಗಳನ್ನು ನಿರ್ಮಿಸುವುದು ಸುಲಭದ ಕೆಲಸವಾಗಿರಲಿಲ್ಲ. ಅದಕ್ಕೆ, ವೈಜ್ಞಾನಿಕ ಪಾಂಡಿತ್ಯದೊಂದಿಗೆ, ಎಂಜಿನಿಯರಿಂಗ್ ತಜ್ಞತೆ, ಅವಿಷ್ಕಾರಿ ಮನೋಭಾವ ಬೇಕಿತ್ತು. ಅದಕ್ಕೂ ಮೀರಿದಂತೆ, ಸಾಕಷ್ಟು ಹಣದ ಅಗತ್ಯವೂ ಇತ್ತು. ಈ ಎಲ್ಲಾ ಸವಾಲುಗಳೆನ್ನುದುರಿಸಿ ಮಿಷೆಲ್‌ಸನ್-ಮೋರ್ಲಿ ಹಗಲಿರುಳೆನ್ನದೆ ಕೆಲಸ ಮಾಡಿದರು. ಈ ಪರಿಶ್ರಮದಿಂದಾಗಿ, ಮಿಷೆಲ್‌ಸನ್ “ನರ್ವಸ್ ಬ್ರೇಕ್‌ಡೌನ್” ಸಹ ಅನುಭವಿಸಿ, ಆಸ್ಪತ್ರೆಯನ್ನು ಸೇರಬೇಕಾಯಿತು.
1887ರ ಜುಲೈನಲ್ಲಿ ಮಿಷೆಲ್‌ಸನ್ ಮತ್ತು ಮೋರ್ಲಿ ತಮ್ಮ ಪ್ರಯೋಗವನ್ನು ಕೊನೆಗೂ ಮುಗಿಸಿದರು. ಈಥರ್ ನಿಂದಾಗಿ ಬೆಳಕಿನ ವೇಗದಲ್ಲಿ ಆಗಬೇಕೆಂದಿದ್ದ ಬದಲಾವಣೆಯನ್ನು ಮಾಪನ ಮಾಡುವ ಅವರ ಯತ್ನ ವಿಫಲವಾಗಿತ್ತು. ಬೆಳಕಿನ ವೇಗದಲ್ಲಿ ಅವರು ಲೆಕ್ಕ ಹಾಕಿದ್ದ ಮಾರ್ಪೇ ಇರಲಿಲ್ಲ. ಆ ವರ್ಷದ ಆಗಸ್ಟಿನಲ್ಲಿ, ಮಿಷೆಲ್‌ಸನ್ ತನ್ನ ವಿಜ್ಞಾನಿ ಮಿತ್ರನೊಬ್ಬನಿಗೆ ತನ್ನ ಪ್ರಯೋಗ ಫಲಪ್ರದವಾಗದ್ದನ್ನು ಕುರಿತು ಪತ್ರವೊಂದನ್ನೂ ಬರೆದ. ಮಿಷೆಲ್‌ಸನ್-ಮೋರ್ಲಿ ತಮ್ಮ “ವಿಫಲ ಪ್ರಯೋಗ”ದ ಕುರಿತು ಸೈಂಟಿಫಿಕ್ ಪೇಪರ್ ಒಂದನ್ನೂ ಬರೆದು ಪ್ರಕಟಿಸಿದರು.
ಅದು “ವಿಫಲ ಪ್ರಯೋಗ”ವಾದ್ದರಿಂದ ಅವರ ಈ ಪೇಪರ್ ಅಷ್ಟಾಗಿ ಯಾರ ಗಮನವನ್ನೂ ಸೆಳೆಯಲಿಲ್ಲ. ವಿಜ್ಞಾನದ ಇತಿಹಾಸದಲ್ಲೇ ಇದೊಂದು ಅತ್ಯಂತ ಮಹತ್ವದ “ವಿಫಲ ಪ್ರಯೋಗ” ಈ “ವಿಫಲ” ಪ್ರಯೋಗದ ಇಪ್ಪತ್ತು ವರ್ಷಗಳ ನಂತರ, ಮಿಷೆಲ್‌ಸನ್ ಗೆ ಭೌತಶಾಸ್ತ್ರದ ಪ್ರಯೋಗಗಳಿಗೆ ಬೇಕಿರುವ ನಿಖರ ಉಪಕರಣ-ಸಲಕರಣೆಗಳ ನಿರ್ಮಾಣಕ್ಕಾಗಿ ೧೯೦೭ರಲ್ಲಿ ನೊಬೆಲ್ ಪ್ರಶಸ್ತಿ ನೀಡಲಾಯಿತು. ಇಂದು, ವಿಜ್ಞಾನದ ವಿಷಯದಲ್ಲಿ ಅಮೆರಿಕನ್ನರಷ್ಟು ಇನ್ನಾವ ದೇಶದ ವಿಜ್ಞಾನಿಗಳೂ ನೊಬೆಲ್ ಪ್ರಶಸ್ತಿ ಪಡೆದಿಲ್ಲ. ಆದರೆ, ಮಿಷೆಲ್‌ಸನ್ ನೊಬೆಲ್ ಪ್ರಶಸ್ತಿ ಪಡೆದ ಪ್ರಪ್ರಥಮ ಅಮೆರಿಕನ್ ವಿಜ್ಞಾನಿ ಎಂದರೆ, ಆಲ್ಬರ್ಟ್ ಮಿಷೆಲ್‌ಸನ್.
ಅತ್ತ ಅಮೆರಿಕದಲ್ಲಿ ಒಬ್ಬ ಆಲ್ಬರ್ಟ್ (ಮಿಷೆಲ್‌ಸನ್) ತನ್ನ “ವಿಫಲ ಪ್ರಯೋಗ”ದ ಕುರಿತು ಪತ್ರ ಬರೆಯುತ್ತಿರುವ ಹೊತ್ತಿಗೆ ಇತ್ತ ಜರ್ಮನಿಯ ಮ್ಯೂನಿಕ್ ನಗರದಲ್ಲಿ, ಇನ್ನೊಬ್ಬ ಆಲ್ಬರ್ಟ್ (ಐನ್‌ಸ್ಟೈನ್) ಗೆ ಕೇವಲ ಎಂಟು ವರ್ಷ ವಯಸ್ಸು. ಅವನು ಹುಟ್ಟಿದ್ದು ೧೮೭೯ರ ಮಾರ್ಚ್ ೧೪ರಂದು. ಅವನ ತಂದೆ ಮತ್ತು ಚಿಕ್ಕಪ್ಪ ಎಲೆಕ್ಟ್ರಿಕ್ ಸಲಕರಣೆಗಳನ್ನು ನಿರ್ಮಿಸಿ ಮಾರಾಟ ಮಾಡುತ್ತಿದ್ದರು.
ಐನ್‍ಸ್ಟೈನ್ ಹದಿ ಹರೆಯಕ್ಕೆ ಬರುವ ವೇಳೆಗೆ, ಎಲೆಕ್ಟ್ರಿಕ್ ಉದ್ಯಮದಲ್ಲಿ ಮಹತ್ತರ ಬೆಳವಣಿಗೆಗಳಾಗುತ್ತಿದ್ದವು. ಮುಖ್ಯವಾಗಿ, ಡೈರೆಕ್ಟ್ ಕರೆಂಟ್ ಬಳಕೆ ಕಡಿಮೆಯಾಗಿ ಆಲ್ಟರ್ನೇಟ್ ಕರೆಂಟ್ ಬಳಕೆ ಸಾಮಾನ್ಯವಾಗತೊಡಗಿತ್ತು. ಈ ಬದಲಾವಣೆ, ಐನ್‌ಸ್ಟೈನ್ ನ ತಂದೆಯ ಉದ್ಯಮಕ್ಕೆ ಭಾರೀ ಹೊಡೆತ ನೀಡಿತು. ಅವರು ತಮ್ಮ ಫ್ಯಾಕ್ಟರಿ ಇನ್ನಾರಿಗೋ ಮಾರಬೇಕಾಯಿತು. ಇಡೀ ಕುಟುಂಬ ಜರ್ಮನಿಯನ್ನು ಬಿಟ್ಟು ಇಟಲಿಗೆ ಹೊರಟಿತು – ಆಲ್ಬರ್ಟ್ ಒಬ್ಬನನ್ನು ಬಿಟ್ಟು. ಅವನ್ನು ಆಗಾಗಲೇ ಹೈ-ಸ್ಕೂಲ್ ಮೆಟ್ಟಿಲೇರಿದ್ದರಿಂದ ಅವನ ವಿದ್ಯಾಭ್ಯಾಸದಲ್ಲಿ ಹಠಾತ್ ಬದಲಾವಣೆ ಮಾಡುವುದು ಅವನ ತಂದೆಗೆ ಇಷ್ಟವಿರಲಿಲ್ಲ. ಹೀಗಾಗಿ, ಅವನು ಮ್ಯೂನಿಕ್ ನಲ್ಲೇ ಉಳಿದು ವಿದ್ಯಾಭ್ಯಾಸ ಮುಂದುವರೆಸಬೇಕೆಂದು ನಿಶ್ಚಯವಾಯಿತು.
ಆದರೆ, ಐನ್‌ಸ್ಟೈನ್ ಗೆ ತನ್ನ ಸ್ಕೂಲು ಮತ್ತು ಅಲ್ಲಿನ ಶಿಕ್ಷಣಾ ವಿಧಾನದ ಕುರಿತು ಅಷ್ಟೇನೂ ಒಳ್ಳೆಯ ಅಭಿಪ್ರಾಯವಿರಲಿಲ್ಲ. ಅವನ ಕುಟುಂಬ ಇಟಲಿಗೆ ಹೊರಟ ಕೆಲ ಸಮಯದ ನಂತರ, ಅವನೂ, ಆರೋಗ್ಯದ ನೆಪ ಮಾಡಿ, ಶಾಲೆ ಬಿಟ್ಟು ಇಟಲಿಗೆ ಹೋದ. ಆಗ ಅವನಿಗೆ ವಯಸ್ಸು ಕೇವಲ ಹದಿನೈದಾದರೂ, ಆ ಕಾಲದ ಭೌತ ಶಾಸ್ತ್ರಜ್ಞರಂತೆ, ಅವನ ಮನಸ್ಸೂ “ಈಥರ್” ಕುರಿತು ಆಲೋಚಿಸುತ್ತಿತ್ತು. ಅವನು ಇಟಲಿಯಲ್ಲಿದ್ದಾಗ ಬರೆದ ವೈಜ್ಞಾನಿಕ ಪ್ರಬಂಧದ ಶೀರ್ಷಿಕೆ: “ಮ್ಯಾಗ್ನೆಟಿಕ್ ಫೀಲ್ಡಿನಲ್ಲಿ ಈಥರ್ ನ ಸ್ಥಿತಿಯ ಕುರಿತು ಪರಿಶೀಲನೆ”.
ಹಲವಾರು ಲೇಖನಗಳಲ್ಲಿ ಬಾಲಕ ಐನ್‌ಸ್ಟೈನ್ ನನ್ನು ಅಷ್ಟೇನೂ ಉತ್ತಮ ವಿದ್ಯಾರ್ಥಿಯಲ್ಲವೆಂದು ಬಿಂಬಿಸಲಾಗುತ್ತದೆ. ಆದರೆ, ಅವನು ಬಾಲ್ಯದಿಂದಲೇ, ಗಣಿತ-ವಿಜ್ಞಾನಗಳಲ್ಲಿ ಆಸಕ್ತಿಯುಳ್ಳವನಾಗಿದ್ದ. ಕೇವಲ ಹನ್ನೆರಡರ ವಯಸ್ಸಿಗೆ ಸ್ವಂತ ಪ್ರಯತ್ನದಿಂದ ಕ್ಯಾಲ್ಕುಲಸ್ ಅನ್ನು ಕಲಿತದ್ದಲ್ಲದೆ, ಹದಿನಾಲ್ಕನೆಯ ವಯಸ್ಸಿನ ವೇಳೆಗೆ ಅದರಲ್ಲಿ ನೈಪುಣ್ಯತೆಯನ್ನೂ ಪಡೆದಿದ್ದ. ಅಷ್ಟೇ ಅಲ್ಲ, ತತ್ವಶಾಸ್ತ್ರದಲ್ಲೂ ಆಸಕ್ತಿ ಬೆಳೆಸಿಕೊಂಡಿದ್ದ.
ಅವನು ಕಾಲೇಜು ಶಿಕ್ಷಣ ಪಡೆದದ್ದು ಸ್ವಿಟ್ಜ಼ರ್ಲ್ಯಾಂಡಿನ ಜ಼್ಯೂರಿಕ್ ನಗರದಲ್ಲಿ. ೧೯೦೦ರಲ್ಲಿ ತನ್ನ ಇಪ್ಪತ್ತೊಂದನೆಯ ವಯಸ್ಸಿನಲ್ಲಿ ಗಣಿತ ಮತ್ತು ಭೌತಶಾಸ್ತ್ರ ವಿಚಾರಗಳಲ್ಲಿ ಪದವಿ ಪಡೆದ ಐನ್‌ಸ್ಟೈನನಿಗೆ ಮುಂದಿನ ಎರಡು ವರ್ಷಗಳು ಸುಲಭವಾಗಿರಲಿಲ್ಲ. ವಿಜ್ಞಾನ, ಗಣಿತಗಳಂತಹ ವಿಷಯಗಳಲ್ಲಿ ಕಾಲೇಜು ಶಿಕ್ಷಣ ಪಡೆದಿದ್ದವರಿಗೆ ಆ ಕಾಲದಲ್ಲಿ ಬಹು ಮಟ್ಟಿಗೆ ದೊರಕುತ್ತಿದ್ದ ನೌಕರಿ ಎಂದರೆ ಅಧ್ಯಾಪಕನ ಕೆಲಸ. ಆದರೆ, ಅವನಿಗೆ ಎಷ್ಟೇ ಪ್ರಯತ್ನಿಸಿದರೂ, ಅಧ್ಯಾಪಕ ಹುದ್ದೆಗಳು ದೊರೆಯಲಿಲ್ಲ. ಇಷ್ಟರ ಮಧ್ಯೆ, ಅವನ ಕಾಲೇಜು ಸಹಪಾಠಿ ಮಿಲೇವ ಮರಿಕ್ ಳ ಜೊತೆಗೆ ವಿವಾಹೇತರ ಸಂಬಂಧದಿಂದಾಗಿ ಒಂದು ಹೆಣ್ಣು ಮಗುವೂ ಆಯಿತು. (ಆ ಮಗುವಿಗೆ ಏನಾಯಿತೆಂದು ಇಂದಿಗೂ ಸರಿಯಾಗಿ ತಿಳಿಯದು. ಹಲವರ ಪ್ರಕಾರ ಆ ಮಗು ಸಣ್ಣ ವಯಸ್ಸಿಗೇ ಅನಾರೋಗ್ಯದಿಂದ ತೀರಿ ಹೋಯಿತು. ಇನ್ನೂ ಕೆಲವರು ಐನ್‌ಸ್ಟೈನ್ ಮತ್ತು ಮಿಲೇವ ಆ ಮಗುವನ್ನು ಯಾರಿಗೋ ದತ್ತು ನೀಡಿದರೆನ್ನುತ್ತಾರೆ)
೧೯೦೨ರಲ್ಲಿ ಅವನ ಮಿತ್ರರೊಬ್ಬರ ಶಿಫಾರಿಸಿನಿಂದ, ಬೆರ್ನ್ ನಗರದ ಪೇಟೆಂಟ್ ಆಫೀಸಿನಲ್ಲಿ ವಿಶೇಷ ಸಹಾಯಕನಾಗಿ ಒಂದು ತಾತ್ಕಾಲಿಕ ನೌಕರಿ ದೊರಕಿತು. ಪೇಟೆಂಟು ಅರ್ಜಿಗಳನ್ನು ಪರಿಶೀಲಿಸಿ, ಅವುಗಳಿಗೆ ಪೇಟೆಂಟು ನೀಡುವುದು ಸೂಕ್ತವೇ ಎಂದು ನಿರ್ಧರಿಸುವುದು ಅವನು ಮಾಡಬೇಕಿದ್ದ ಕೆಲಸ. ಇದನ್ನು ಅವನೆಷ್ಟು ದಕ್ಷತೆಯಿಂದ ಮಾಡುತ್ತಿದ್ದನೆಂದರೆ, ಅವನಿಗೆ ಕೆಲಸದ ಸಮಯದ ನಡುವೆಯೇ ವಿಜ್ಞಾನದ ಬಗೆಗೆ ಚಿಂತನೆ/ಅಧ್ಯಯನ ನಡೆಸಲು ಸಮಯ ದೊರೆಯುತ್ತಿತ್ತು. ಅಷ್ಟೇ ಅಲ್ಲ, ನೌಕರಿ ದೊರೆತ ಕೆಲವೇ ತಿಂಗಳುಗಳಲ್ಲಿ, ಸಂಬಳವನ್ನೂ ಹೆಚ್ಚಿಸಲಾಯಿತು.
ಆಫೀಸಿನ ನಂತರದ ಸಮಯವನ್ನು, ಐನ್‌ಸ್ಟೈನ್, ಭೌತಶಾಸ್ತ್ರ ಮತ್ತು ತತ್ವಶಾಸ್ತ್ರದಲ್ಲಿ ಆಸಕ್ತಿ ಇದ್ದ ಗೆಳೆಯರೊಂದಿಗೆ ಕಳೆಯುತ್ತಿದ್ದ. ಆ ವರ್ಷದ ಕೊನೆಯ ವೇಳೆಗೆ, ಇಟಲಿಯಲ್ಲಿದ್ದ ಅವನ ತಂದೆಗೆ ಹೃದಯಾಘಾತವಾದ ಸುದ್ದಿ ಬಂದಿತು. ಮರಣಶಯ್ಯೆಯಲ್ಲಿದ್ದ ತನ್ನ ತಂದೆಯನ್ನು ನೋಡಲು, ಐನ್‌ಸ್ಟೈನ್ ಧಾವಿಸಿದ, ಅಷ್ಟೇ ಅಲ್ಲ, ಮಿಲೇವಳನ್ನು ಮದುವೆಯಾಗಲು ಒಪ್ಪಿಗೆಯನ್ನೂ ಪಡೆದ.
೧೯೦೩ರ ಜನವರಿಯಲ್ಲಿ, ಮಿಲೇವಳೊಂದಿಗೆ ಐನ್‌ಸ್ಟೈನನ ಮದುವೆಯೂ ಆಯಿತು. ೧೯೦೩ ರಿಂದ ೧೯೦೫ ಐನ್‌ಸ್ಟೈನ್ ನ ಜೀವನ ಮಾತ್ರವಲ್ಲ ವಿಜ್ಞಾನದ ಇತಿಹಾಸದಲ್ಲೇ ಅತ್ಯಂತ ಮಹತ್ವದ ವರ್ಷಗಳು. ಅದರಲ್ಲೂ, ೧೯೦೫ ಅನ್ನು ವಿಜ್ಞಾನದ ಇತಿಹಾಸಜ್ಞರು “ಪವಾಡದ ವರ್ಷ”ವೆಂದೇ ಕರೆಯುತ್ತಾರೆ.
೧೯೦೫ರಲ್ಲಿ, ಐನ್‌ಸ್ಟೈನ್, ಭೌತ ವಿಜ್ಞಾನದ ಮೂರು ಅತ್ಯಂತ ಮಹತ್ತರ ಅಧ್ಯಯನಗಳನ್ನು ಪ್ರಕಟಿಸಿದ. ಒಂದು: ಬ್ರೌನಿಯನ್ ಚಲನೆಯ ಬಗೆಗೆ. ಎರಡನೆಯದು, ಕ್ವಾಂಟಂ ಥಿಯರಿಯ ಕುರಿತಾದದ್ದು. ಮೂರನೆಯದು, ಸ್ಪೆಷಲ್ ಥಿಯರಿ ಆಫ್ ರಿಲೆಟಿವಿಟಿ.
(ಮುಂದುವರೆಯುವುದು)
ಶೇಷಾದ್ರಿ ಗಂಜೂರು ಕೆಲ ವರ್ಷಗಳ ಕಾಲ ಬಿಹಾರದ ಕಲ್ಲಿದ್ದಲು ಗಣಿಗಳಲ್ಲಿ ಕೆಲಸಮಾಡಿ, ನಂತರ ದಶಕಗಳ ಕಾಲ ಅಮೆರಿಕದಲ್ಲಿ ನೆಲೆಸಿ, ಈಗ ಸದ್ಯಕ್ಕೆ ಕೆನಡಾದಲ್ಲಿ ಕಾಗ್ನಿಟಿವ್ ಕಾಂಪ್ಯೂಟಿಂಗ್ ವಿಷಯದಲ್ಲಿ ಸಂಶೋಧನೆಯಲ್ಲಿ ತೊಡಗಿರುವ ನ್ಯೂರೋಸೈನ್ಸಿನಲ್ಲಿ ಆಸಕ್ತಿಯುಳ್ಳ ವಿಜ್ಞಾನಿ.