ದೇವಾಲಯದ ನವರಂಗದ ಕಂಬಗಳ ಮೇಲೆ ಇರುವ ನಾಲ್ಕು ಮದನಿಕೆಯರಲ್ಲಿ ಆಗ್ನೇಯ ಕಂಬದವಳೇ ಶುಖಸಖಿ. ಎಡತೋಳ ಮೇಲೆ ಕೂಳಿತಗಿಳಿ ಅವಳ ಕಂಠೀಹಾರವನ್ನು ಹಿಡಿದಿದೆ. ಹಣ್ಣೊಂದರ ಆಸೆ ತೋರಿಸಿ ತನ್ನಾಭರಣ ಬಿಡಿಸಿಕೊಳ್ಳುತ್ತಿರುವ ಈಕೆಯ ಸೊಗಸು ಕೇಳಬಾರದು ನೋಡಲೇಬೇಕು. ಇವಳ ಬಲಗೈ ಬಳೆ ಹಿಂದೆ-ಮುಂದೆ ಸರಿಸಬಹುದಾಗಿದೆ. ಹೆಣ್ಣಿನ ಮನದಾಸೆಯ ಸ್ಪಷ್ಟತೆಯನ್ನು ಮಂಗಳಕರ ಒಳೆಯ ಮೂಲಕ ತಣಿಸುವಂತಿದೆ.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿಯ ಇಪ್ಪತ್ನಾಲ್ಕನೆಯ ಕಂತು ನಿಮ್ಮ ಓದಿಗೆ

ಭಾರತೀಯ ಶಿಲ್ಪ ಕಲೆಗೆ ಕಳಸವಿಟ್ಟಂತೆ ಇರುವ ದೇವಾಲಯಗಳ ಪೈಕಿ ಹೊಯ್ಸಳರಿಂದ ನಿರ್ಮಿತ ದೇವಾಲಯಗಳಿಗೆ ಅಗ್ರ ಸ್ಥಾನ ಸಲ್ಲುತ್ತದೆ. ಹೊಯ್ಸಳ ವಂಶ ಸ್ಥಾಪಕ ಸಳನ ನಾಲ್ಕನೆಯ ತಲೆಮಾರಿನವನು ಹೊಯ್ಸಳ ದೊರೆ ವಿಷ್ಣುವರ್ಧನ. ಕ್ರಿ.ಶ.1117ರಲ್ಲಿ ಹೊಯ್ಸಳ ವಿಷ್ಣುವರ್ಧನ ಈ ದೇವಾಲಯವನ್ನು ನಿರ್ಮಿಸಿದ್ದಾನೆ. ಈತ ಕನ್ನಡದ ಅರಸ, ಈತನ ಪತ್ನಿ ನಾಟ್ಯರಾಣಿ ಶಾಂತಲೆ ಕನ್ನಡದವಳು, ದೇವಾಲಯ ಕನ್ನಡ ನೆಲದ್ದು, ಕವಿ ಕನ್ನಡಿಗ ಕನ್ನಡಿಗರಿಗೆ ಇದಕ್ಕಿಂತ ಹೆಮ್ಮೆ ಬೇಕೇ?

ಚನ್ನಕೇಶವನನ್ನು ‘ವಿಜಯ ನಾರಾಯಣ’ ಎಂದೂ ಕರೆಯುವುದಿದೆ. ವಿಷ್ಣುವರ್ಧನ ದಿಗ್ವಿಜಯದ ನೆನಪಿಗಾಗಿ ಈ ದೇವಾಲಯ ನಿರ್ಮಾಣವಾಗಿದೆ ಎನ್ನುತ್ತದೆ ಇತಿಹಾಸ. ಹೊಯ್ಸಳರು ಹಾಸನ ಜಿಲ್ಲೆಯಾದ್ಯಂತ ಹಾಗು ಕರ್ನಾಟಕದ ಉದ್ದಗಲಕ್ಕೂ 100 ಕ್ಕೂ ಹೆಚ್ಚು ದೇವಾಲುಗಳನ್ನು ನಿರ್ಮಿಸಿದ್ದಾರೆ.

ಈ ದೇವಾಲಯದಲ್ಲಿ ಕೆತ್ತಲ್ಪಟ್ಟಿರುವ ಶಿಲ್ಪಗಳಿಗೆ ಗಟ್ಟಿ ಬಳಪದ ಕಲ್ಲುಗಳನ್ನು ಬಳಸಲಾಗಿದೆ. “ಕೈ ಮುಗಿದು ಒಳಗೆ ಬಾ ಓ ಯಾತ್ರಿಕನೆ” ಎಂದಿರುವ ಕುವೆಂಪುರವರ ಮಾತು ದೇವಾಲಯದ ಸೌಂದರ್ಯ ದಖನಿಯನ್ನು ಅಕ್ಷರಗಳಲ್ಲಿ ಹಿಡಿದಿಟ್ಟಿದೆ ಎಂದರೆ ತಪ್ಪಿಲ್ಲ.

(ದಿವ್ಯ ಗೋಪುರ)

ದೇವಾಲಯ ಆಕರ್ಷಿಸುವುದೇ ಅದರ ಮಹಾದ್ವಾರದಿಂದ ಬೇಲೂರಿನ ಕೆ.ಎಸ್. ಆರ್.ಟಿ.ಸಿ ಬಸ್ ನಿಲ್ದಾಣದಿಂದ ಪಶ್ಚಿಮಕ್ಕೆ ಅಭಿಮುಖವಾಗಿ ನಡೆದರೆ ದಿವ್ಯ ಗೋಪುರವೇ ಪ್ರವಾಸಿಗರನ್ನು ಕಲೆಯ ಆಲಯ ಕೇಶವನಾಲಯಕ್ಕೆ ಸ್ವಾಗತಿಸುತ್ತದೆ. ಗೋಪುರದ ಗೋಡೆಯ ಅಡಿಯಲ್ಲಿ ಬಲಿಷ್ಠತೆ ಹಾಗು ಭದ್ರತೆಯ ಸಂಕೇತವಾಗಿರುವ ಆನೆಗಳ ಸಾಲು, ಅದರ ಮೇಲೆ ಸಾಹಸವನ್ನು ಸಂಕೇತಿಸುವ ಸಿಂಹಗಳ ಸಾಲು, ಅದರ ಮೇಲೆ ರಾಮಾಯಣ –ಮಹಾಭಾರತದ ದೃಶ್ಯದ ಸಾಲುಗಳಿವೆ. ಈ ನಡುವೆ ಹಂಸಗಳ, ಬಳ್ಳಿಗಳ, ಆಕರ್ಷಕ ಚಿಕ್ಕ ಚಿಕ್ಕ ವಿಗ್ರಹಗಳ ಸಾಲುಗಳಿವೆ.

ಗುರುತ್ವಾಕರ್ಷಣ ಕಂಬ: ಈ ಕಂಬವು 42 ಅಡಿ ಎತ್ತರದ ಏಕ ಶಿಲೆ ತನ್ನ ಭಾರವನ್ನು ತಾನೇ ಹೊತ್ತಿದೆ.
ದೇವಾಲಯದ ಭಿತ್ತಿ

ಇಲ್ಲಿ ಕುಸುರಿ ಕೆತ್ತನೆಗಳಿಂದ ಸಾಲಂಕೃತವಾದ ಶಿಲ್ಪ ಪಟ್ಟಿಕೆಗಳಿವೆ. ಕೆಳಗಿನ ಪಟ್ಟಿಕೆಯಲ್ಲಿ ಆನೆ, ಅದರ ಮೇಲೆ ಸಿಂಹ, ಕುದುರೆ, ಬಳ್ಳಿಗಳ ಕೆತ್ತನೆ. ರಾಮಾಯಣ-ಮಹಾಭಾರತದ, ಭಾಗವತದ ಸನ್ನಿವೇಶಗಳ ಪಟ್ಟಿಕೆಗಳನ್ನು ಕಾಣಬಹುದು. ಆನೆಗಳು ಅದರ ಮೇಲೆ ಶಿಖರ ರೂಪದ ಉಬ್ಬು ಶಿಲ್ಪಗಳನ್ನು ನೋಡಬಹುದು.

(ಗರುಢಗಂಬ)

ನವರಂಗ: ಕೇಶವ ದೇವಾಲುದ ಮುಖ್ಯ ಆಕರ್ಷಣೆ ಸುಂದರವಾದ ನವರಂಗ. ಕಲ್ಲಿನಲ್ಲೇ ಕೊರೆದು ಜಾಲಂಧ್ರದ ವ್ಯವಸ್ಥೆಯನ್ನು ಮಾಡುವ ಮೂಲಕ ದೇವಾಲಯದ ಒಳಗೆ ಬೆಳಕು ಬರುವ ವ್ಯವಸ್ಥೆ ಮಾಡಲಾಗಿದೆ. ಇಲ್ಲಿನ 42 ಕಂಬಗಳಲ್ಲಿ ಸುಂದರ ಶಿಲ್ಪರೂಪಿ ಮದನಿಕೆಯರು ಇರುವುದು ವಿಶೇಷ. ನವರಂಗದ ಮಾಡುಗಳನ್ನು ಭುವನೇಶ್ವರಗಳೆಂದು ಕರೆಯುತ್ತಾರೆ. 13 ಅಡಿ ಚೌಕ ಮತ್ತು 20 ಅಡಿ ಎತ್ತರವಿರುವ ಭುವನೇಶ್ವರ ಶಿಲ್ಪಿಗಳ ಪ್ರತಿಭೆಯನ್ನು ಅನಾವರಣಗೊಳಿಸುತ್ತದೆ.

ಗರ್ಭಗುಡಿಯ ಎದಿರು ಇರುವ ದ್ವಾರಪಾಲಕರ ಶಿಲ್ಪಗಳು: ನವರಂಗ ಮತ್ತು ಗರ್ಭಗುಡಿಯ ನಡುವಿನ ಭಾಗವೇ ಸುಕನಾಸಿ. ಇದರ ಮೇಲೆ ಹೊಯ್ಸಳರ ಲಾಂಛನ ಹುಲಿಯನ್ನು ಕೊಲ್ಲುತ್ತಿರುವ ವೀರ ಸಳನ ಶಿಲ್ಪವಿದೆ.

ಗರ್ಭಗುಡಿಯಲ್ಲಿ ಇರುವ ಚನ್ನಕೇಶವನ ವಿಗ್ರಹವಂತೂ ಮನಮೋಹಕವಾಗಿದೆ. ಇಲ್ಲಿನ ವಿಗ್ರಹ 6 ಅಡಿ ಎತ್ತರವಾಗಿದೆ. ನಾಲ್ಕು ಕೈಗಳನ್ನು ಹೊಂದಿರುವ ಈ ಕೇಶವನ ಕೈಯಲ್ಲಿ ಶಂಖ, ಚಕ್ರ, ಗದಾ, ಮತ್ತು ಪದ್ಮಗಳಿವೆ. ವಿಷ್ಣು ಮೋಹಿನಿಯ ಅವತಾರ ತಳೆಯುವುದೇ ಭಸ್ಮಾಸುರನನ್ನು ಸಂಹಾರ ಮಾಡಲು. ಬೇಲೂರಿನ ಶ್ರೀ ಚನ್ನಕೇಶವನ ದೇವಾಲಯದ ಪ್ರವೇಶದ್ವಾರದ ಎಡಕ್ಕೆ ಅಂದರೆ ಆನೆಬಾಗಿಲಿನ ಪಕ್ಕಕ್ಕೆ ಇರುವ ಮೂಲೆಯನ್ನು ಭಸ್ಮಾಸುರ ಮೂಲೆ ಎಂದು ಕರೆಯುವುದಿದೆ. ರಥೋತ್ಸವದ ಸಂದರ್ಭದಲ್ಲಿ ಇಂದಿಗೂ ಗಳಿಗೆತೇರು, ಮಡಿತೇರು ಎಂದು ಕರೆಯಲ್ಪಡುವ ರಥವನ್ನು ಭಸ್ಮಾಸುರ ಮೂಲೆಗೆ ತಂದು ನಿಲ್ಲಿಸಲಾಗುತ್ತದೆ. ಒಂದು ಇರುಳು, ರಥ ಅಲ್ಲಿದ್ದ ಬಳಿಕ ಮರುದಿನ ನಾಡರಥ ಅಥವಾ ದೊಡ್ಡರಥ ಎಳೆಯಲ್ಪಡುತ್ತದೆ. ಈ ಚನ್ನಕೇಶವನ ಅಲಂಕಾರದ ವಿಶೇಷತೆ ಎಂದರೆ ಮುಖಭಾಗ ಹೆಣ್ಣಿನ ಅಲಂಕಾರ ಶರೀರ ಭಾಗ ಗಂಡಿನ ಅಲಂಕಾರ ಸುರಸುಂದರವಿಷ್ಣು ಅನ್ನುವ ಕಾರಣಕ್ಕೆ ಚನ್ನಕೇಶವ ಎಂಬ ಹೆಸರು ಬಂದಿರುವುದು.

ಗರ್ಭಗುಡಿಯಲ್ಲಿ ಇರುವ ಕೇಶವನ ಮೂಲ ವಿಗ್ರಹ, ಶಿಲಾಬಾಲಿಕೆಯರು ಮತ್ತು ಶಿಲ್ಪಗಳು

ದೇವಾಲಯದ ಹೊರಗೆ ಹೊರಟ ಕೂಡಲೆ ನಮಗೆ ಸಿಗುವುದು ವಿಷ್ಣುವರ್ಧನನ ದರ್ಬಾರಿನ ಚಿತ್ರಣ. ಹಾಗು ಕಂಬಗಳ ಮೇಲೆ ರಾರಾಜಿಸುವ ಇವತ್ತಿಗೂ ಜೀವಕಳೆ ಇದೆಯೋ ಏನೋ ಎಂಬಂತೆ ಇರುವ ಮೂವತ್ತೆಂಟು ಮದನಿಕೆಯರು. ಅರ್ಥಾತ್ ಶಿಲಾಬಾಲಿಕೆಯರು.

ಆಧುನಿಕ ಸರ್ವಜ್ಞ ಎಂದೇ ಕರೆಸಿಕೊಂಡಿರುವ ಡಿ.ವಿ.ಜಿಯವರು ‘ಅಂತಃಪುರ ಗೀತೆಗಳು’ ಎಂಬ ಕೃತಿಯನ್ನು ಈ ಶಿಲಾಬಾಲಿಕೆಯರನ್ನು ನೋಡಿಯೇ ರಚಿಸಿದ್ದಾರೆ. 54 ಬಿಡಿ ಕವಿತೆಗಳು ಇರುವ ಕೃತಿ ಇದು. ಬೇರೆ ಕಾವ್ಯಗಳಲ್ಲಿ ಇರುವಂತೆ ನಾಂದಿ, ಪ್ರಾರ್ಥನಾ ಪದ್ಯಗಳು, ಮುಕ್ತಾಯ ಹೊಂದಿದೆ. ದೇವಾಲಯವನ್ನು ಆಶ್ರಯಿಸಿ ಅದರಲ್ಲಿ ಇರುವ ಶಿಲ್ಪಗಳನ್ನು ಆಶ್ರಯಿಸಿ ಬರೆದಿರುವ ಏಕೈಕ ಕೃತಿ ಎಂದರೆ ಅದು ನಮ್ಮ ಕರ್ನಾಟಕ ದೇವಾಲಯದ ಬಗೆಗಿರುವ ಕನ್ನಡ ಕೃತಿ ‘ಅಂತಃಪುರ ಗೀತೆಗಳು’ ಎಂದು ಹೆಮ್ಮೆಯಿಂದ ಹೇಳಬಹುದು.

ದರ್ಪಣ ಸುಂದರಿ: ಎಡಗೈಯಲ್ಲಿ ಕನ್ನಡಿ ಹಿಡಿದು ಬಲಗೈಯ್ಯಲ್ಲಿ ಕುಂಕುಮವನ್ನು ಹಣೆಗಿಟ್ಟುಕೊಳ್ಳಲು ಅಣಿಯಾಗಿ ತನ್ನ ಸೌಂದರ್ಯವನ್ನು ಈಕ್ಷಿಸುತ್ತಿರುವ ಸುಂದರಿ.

ಶುಕಭಾಷಿಣಿ ಎಡಗೈಯ ಮೇಲೆ ಕುಳಿತ ಗಿಳಿಯೊಂದಿಗೆ ಸಂಭಾಷಣೆ ನಡೆಸುತ್ತಿರುವ ಸುಂದರಿ “ಏನೇ ಶುಕಭಷಿಣಿ ಸುದ್ದಿಯೇನೇ ಮನೋಲ್ಲಾಸಿನಿ” ಎಂಬ ಸಾಲುಗಳು ಈ ಶಿಲ್ಪವನ್ನು ಕುರಿತು ಅಂತಃಪುರಗೀತೆಯಲ್ಲಿದೆ.

ಕಪಿಕುಪಿತೆ: ಕೋತಿಯೊಂದು ಸುಂದರಿಯ ಸೀರೆಯ ಸೆರಗನ್ನು ಎಳೆಯಲೆತ್ನಿಸುತ್ತಿರುವುದು ಅದಕ್ಕೆ ಕೋಪಗೊಂಡ ಸುಂದರಿ ಅದನ್ನೋಡಿಸಲು ಬಳ್ಳಿಯೊಂದನ್ನು ಹಿಡಿದಿರುವುದು.

ಕೊಳಲು ವಾದಕಿ, ನಾಟ್ಯ ಮೋಹಿನಿ, ಸಂಗೀತಗಾರ್ತಿಯರ ಶಿಲ್ಪಗಳು: ಪ್ರಭಾವಳಿಯ ಅಂಚಿನಲ್ಲಿ ಕಿರುನಗೆಯನ್ನು ಬೀರುತ್ತಾ ಅವಾಭರಣಗಳಿಂದ ಅಲಂಕೃತಳಾಗಿ ನಿಂತಿರುವ ಶಿಲ್ಪ. ಬಳ್ಳಿಯ ಮೇಲೆ ಹಲಸಿನ ಹಣ್ಣು ಅದರ ಮೇಲೆ ನೊಣ ಅದರ ಮೀಸೆ ರೆಕ್ಕೆಗಳು ಇಲ್ಲಿ ಗೋಚರವಾಗುತ್ತವೆ. ಅದಕ್ಕಿಂತಲೂ ವಿಶೇಷವಾಗಿರುವುದು ನೊಣವನ್ನು ತಿನ್ನಲು ಹೊಂಚುಹಾಕುತ್ತಿರುವ ಹಲ್ಲಿ.

ಶಿಲಾಬಾಲಿಕೆಯರು ಅಂದಕೂಡಲೆ ನಮ್ಮ ನೆನಪಿಗೆ ಬರುವ ಶಿಲ್ಪ ಇದು. ಕೇಳುಗರು ಕೇಳಿಸಿಕೊಳ್ಳುವುದಲ್ಲ, ಓದುಗರು ಓದುವುದಲ್ಲ ಈ ನೃತ್ಯ ಚಾಪಲೆಯರನ್ನು ಕೇಶವನ ಸಖಿಯರನ್ನು ಮತ್ತೊಮ್ಮೆ ನೋಡಿ ಕೈಕುಲುಕಿ ಬರಲೇಬೇಕು. ಮೋಹಿನಿಶಿಲಾಬಾಲಿಕೆಯರು ಅಂದಕೂಡಲೆ ನಮ್ಮ ನೆನಪಿಗೆ ಬರುವ ಶಿಲ್ಪ ಇದು. ಕೇಳುಗರು ಕೇಳಿಸಿಕೊಳ್ಳುವುದಲ್ಲ, ಓದುಗರು ಓದುವುದಲ್ಲ ಈ ನೃತ್ಯ ಚಾಪಲೆಯರನ್ನು ಕೇಶವನ ಸಖಿಯರನ್ನು ಮತ್ತೊಮ್ಮೆ ನೋಡಿ ಕೈಕುಲುಕಿ ಬರಲೇಬೇಕು.

ಬೇಟೆಗಾರ್ತಿ, ಮಾವಿನ ಹಣ್ಣಗಳನ್ನು ಬಲಗೈಯಿಂದ ಕೀಳುತ್ತಿರುವ ಸುಂದರಿ…. ಹೀಗೆ 18 ಮದನಿಕೆಯರನ್ನು ಕಂಡ ನಂತರ ಶಿವಿಜಲಂಧರ, ಪೂತನಿ, ಮಹಾಬಲಿ ಸಹಿತ ವಾಮನ, ರಾವಣ ಕೈಲಾಸ ಪರ್ವತವನ್ನು ಎತ್ತುತ್ತಿರುವ ಶಿಲ್ಪ, ಚಾಮುಂಡಿ, ಬ್ರಹ್ಮನ ಶಿಲ್ಪ, ಸೂರ್ಯ ದೇವಸಪ್ತಾಶ್ವಗಳ ಕುದುರೆಯ ಮೇಲೆ ಇರುವುದು, ಅರ್ಜುನ ಬಿಲ್ಲು ಹೊಡೆಯುತ್ತ ಇರುವ ಶಿಲ್ಪವನ್ನು ನೋಡಬಹುದು. ಇವೆಲ್ಲಕ್ಕಿಂತ ಮುಖ್ಯವಾಗಿ ಸಂಜೆ ವಿಹಾರಕ್ಕೆಂದು ಸರಪಳಿ ಸಹಿತ ನಾಯಿಯನ್ನು ಹಿಡಿದುಕೊಂಡಿರುವ ಕೂದಲನ್ನು ರಿಬ್ಬನ್ನಿನಿಂದ ಕಟ್ಟಿಕೊಂಡಿರುವ ಆಧುನಿಕ ಶಿಲ್ಪ.

ಹತ್ತೊಂಬತ್ತನೆಯ ಶಿಲ್ಪದಿಂದ ನಾಟ್ಯ ಸುಂದರಿಯರು, ಸಂಗೀತ ಪರಿಕರಗಳನ್ನು ನುಡಿಸುತ್ತಿರುವ ವಿವಿಧ ಭಂಗಿಯ ಶಿಲ್ಪಗಳನ್ನು ನೋಡಬಹುದು. ಇವುಗಳನ್ನು ನೋಡಿದ ನಂತರ ನೋಡಬಹುದಾದ ಶಿಲ್ಪಗಳು.

ಸುಂದರಿ ಮತ್ತು ಗಿಳಿ: ದೇವಾಲಯದ ನವರಂಗದ ಕಂಬಗಳ ಮೇಲೆ ಇರುವ ನಾಲ್ಕು ಮದನಿಕೆಯರಲ್ಲಿ ಆಗ್ನೇಯ ಕಂಬದವಳೇ ಶುಖಸಖಿ. ಎಡತೋಳ ಮೇಲೆ ಕೂಳಿತಗಿಳಿ ಅವಳ ಕಂಠೀಹಾರವನ್ನು ಹಿಡಿದಿದೆ. ಹಣ್ಣೊಂದರ ಆಸೆ ತೋರಿಸಿ ತನ್ನಾಭರಣ ಬಿಡಿಸಿಕೊಳ್ಳುತ್ತಿರುವ ಈಕೆಯ ಸೊಗಸು ಕೇಳಬಾರದು ನೋಡಲೇಬೇಕು. ಇವಳ ಬಲಗೈ ಬಳೆ ಹಿಂದೆ-ಮುಂದೆ ಸರಿಸಬಹುದಾಗಿದೆ. ಹೆಣ್ಣಿನ ಮನದಾಸೆಯ ಸ್ಪಷ್ಟತೆಯನ್ನು ಮಂಗಳಕರ ಒಳೆಯ ಮೂಲಕ ತಣಿಸುವಂತಿದೆ.

ಗಂಧರ್ವ ನೃತ್ಯ, ಕೇಶಾಲಂಕಾರ ಮಾಡಿಕೊಳ್ಳುತ್ತಿರುವ ಶಿಲ್ಪ: ಹೆಣ್ಣಿನ ಅಂದವನ್ನು ಇಮ್ಮಡಿಗೊಳಿಸುವುದು ಕೇಶರಾಶಿ. ಅಂತಹ ನೀಳಕೇಶರಾಶಿಯನ್ನು ಹೊಂದಿದ ಶಿಲ್ಪ ಇದು. ಕಾಶ್ಮೀರಾಗರು ತೈಲ ವಾಸನೆಗಳನ್ನು ಹೊಂದಿ, ಕೇಶರಾಶಿಯ ನಾಗಪಾಶವ ಸುತ್ತಿ ದೋಷವಿಲ್ಲದೆ ಚನ್ನಕೇಶವನನ್ನು ಅದರಲ್ಲಿ ಬಂಧಿಸಿಡುವ ಪ್ರಯತ್ನ ಮಾಡಿದ್ದಾಳೆ. ಅಂತಹ ಕೇಶಕ್ಕೆ ಕಾಳಿರುಳಿನ ಕಪ್ಪು ಇದೆಯಂತೆ. ನೋಳ್ವರ ಕಣ್ಮನ ಕಹುದು ಮೋಹದ ಕಪ್ಪು ಎಂದು ಕೇಶವನಡಿಗಳು ನೀನಪ್ಪ ಎಂದು ಕವಿ ವರ್ಣಿಸಿದ್ದಾನೆ.

(ದೇವಾಲಯದ ಎಡ ಬದಿಗೆ ಇರುವ ಪುಷ್ಕರಿಣಿ)

ಶಿಲ್ಪ ಭೂಷಣ ಹೆಣ್ಣು ಮಕ್ಕಳ ಸ್ವತ್ತೇ, ಸೌಂದರ್ಯ ವಿಶ್ವತತ್ತ್ವ ಆ ಪರತತ್ತ್ವ ಭಾಸವೇ ಸೌಂದರ್ಯ ಅದನ್ನು ಹೆಚ್ಚಿಸುವುದು ಆಕೆಯ ಅಭರಣಗಳು ತನ್ನ ಕೈಗಳಿಗೆ ತೊಡಲು ಹಿಡಿದ ಬಳೆ ಆಕೆಯ ಅತೀ ಸಹಜ ಭಂಗಿ ರಸಿಕರನ್ನು ಮಂತ್ರಮುಗ್ಧಗೊಳಿಸುತ್ತದೆ. ಇವಳೇ ಭೂಷಣಪ್ರಿಯೆ ತರಣಿಗೇ ದೀಪೋತ್ಸವವೇ ಎಂದು ವಿಮರ್ಶಕರು ಹೇಳಿದ್ದಾರೆ.

ಈ ಮುಖ್ಯ ದೇವಾಲಯವನ್ನು ನೋಡಿ ಮುಂದಕ್ಕೆ ಹೋದರೆ, ಸೌಮ್ಯ ನಾಯಕಿ ಅಮ್ಮನವರ ದೇವಾಲಯವನ್ನು ಕಾಣಬಹುದು. ಇಲ್ಲಿಯೂ ಗರ್ಭಗೃಹ, ತೆರೆದ ಅಂತರಾಳ, ನವರಂಗ ಮತ್ತಯ ಕಂಬಗಳುಳ್ಳ ತೆರೆದ ಸಭಾಂಗಣ ಮತ್ತು ಪಾತಾಳ ಅಂಕಣ ಹೊಂದಿದೆ.

ವೀರನಾರಾಯಣ ದೇವಾಲಯ

ಹೊಯ್ಸಳರ ಶಿಲ್ಪಕೆಗಳ ತವನಿಧಿಯಲ್ಲಿ ವೈಷ್ಣವ, ಶೈವ ಎಂಬ ಮಡಿವಂತಿಕೆಯಿಲ್ಲ. ಇದು ಹೊಯ್ಸಳರ ಧರ್ಮ ಸಮನ್ವಯತೆಗೆ ಸಾಕ್ಷಿಯಾಗಿದೆ. ಇಲ್ಲಿ ಕೆತ್ತಲ್ಪಟ್ಟಿರುವ ಶಿಲ್ಪಗಳು ಪ್ರಭಾವಳಿಗಳಿಂದ ಕಳೆಗಟ್ಟಿವೆ. ಹೂವಿನಿಂದ ನಾರು ಸ್ವರ್ಗಕ್ಕೆ ಎಂಬ ಗಾದೆಗೆ ಅಪವಾದವೆಂಬಂತೆ ಸಹಶಿಲ್ಪಗಳಿಂದ ಮುಖ್ಯಶಿಲ್ಪಗಳ ಗಾಂಭೀರ್ಯ ಮತ್ತಷ್ಟು ಕಳೆಗಟ್ಟಿದೆ. ಜಕಣಾಚಾರ್ಯ, ಚಿಕ್ಕಹಂಪ, ಬಳ್ಳಿಗಾವೆಯ ದಾಸೋಜ, ಚಾವಣ ಇಲ್ಲಿಯ ಪ್ರಮುಖ ಶಿಲ್ಪಿಗಳು. ಇವರು ತಮ್ಮ ಕಾರ್ಯದಲ್ಲಿ ಭೇದತೋರದೆ ಮುಖ್ಯ ಶಿಲ್ಪಗಳಂತೆ ಸಹಶಿಲ್ಪಗಳಿಗೂ ಸಮಾನ ಆಸ್ಥೆ ತೋರಿಸಿದ್ದಾರೆ.

“ಇಂಪಿಲ್ಲದ ಕೇದಗೆಯಂ ಕಂಪಿಲ್ಲದ, ಪೆಂಪಿಲ್ಲದ ಕುಲವಧುವನು ಒಪ್ಪಗುವೇಂ?” ಎಂಬ ರನ್ನನ ಮಾತಿನಂತೆ ಈ ಎಲ್ಲಾ ಪರಿಭಾಷೆ ಶಿಲಾಕನ್ನಿಕೆಯರಲ್ಲಿದೆ. ಪ್ರಪಂಚದ ಪಾಪ ವಿಮೋಚನೆಗೆ ಸೌಂದರ್ಯ ಸಿದ್ಧ ಔಷಧ ಎನ್ನುತ್ತಾರೆ ಎಂದರೆ ಅತಿಯೋಕ್ತಿಯಲ್ಲ. ತನ್ನ ರಾಣಿಯರ ಮೂಲಕ ಜಗತ್ತಿನ ವಿಹಾರಕ ಎಷ್ಟು ಸೌಂದರ್ಯಸಾಗರವನ್ನು ಬೇಲೂರಿನಲ್ಲಿ ತಂದಿರಿಸಿಕೊಂಡಿದ್ದಾನೆ. ದಿವ್ಯ ಕಲೆಯ ಭವ್ಯತೆಯನ್ನು ರಸಿಕರಾಗಿ ನೋಡುಗರು ಆಸ್ವಾದಿಸಬೇಕು.