ಮೂರು ವರ್ಷ ಮುಗಿಯುತ್ತಿದ್ದಂತೆ ಮಂತ್ರಿಗಳು ಅವನ ಬಳಿ ಬಂದು “ನಾಳೆ ನಿಮ್ಮನ್ನು ಕಾಡಿಗೆ ಒಯ್ದು ಬಿಡುತ್ತೇವೆ, ತಯಾರಾಗಿರಿ” ಎಂದಾಗ ಅವನು ಸ್ವಲ್ಪವೂ ವಿಚಲಿತನಾಗದೆ ಒಪ್ಪಿಕೊಳ್ಳುತ್ತಾನೆ. ಮಾರನೆಯ ದಿನ ಅವನಿಗೆ ಇಷ್ಟವಾದ ಊಟತಿಂಡಿಗಳನ್ನು ಕೊಟ್ಟು ಊರಿನ ಪಕ್ಕದಲ್ಲಿದ್ದ ನದಿಯನ್ನು ದೋಣಿಯಲ್ಲಿ ದಾಟಿಸಿ ಅವನನ್ನು ಕಾಡಿಗೆ ಬಿಡಲು ಹೋದವರಿಗೆ ಒಂದು ಅಚ್ಚರಿ ಕಾದಿರುತ್ತದೆ. ಕೆಲವೇ ವರ್ಷಗಳ ಹಿಂದೆ ಗೊಂಡಾರಣ್ಯವಾಗಿದ್ದದ್ದು ಈಗ ನಾಡಾಗಿರುತ್ತದೆ! ಆಗ ರಾಜನು ತಾನು ರಾಜನಾದ ದಿನದಿಂದಲೇ ಮೂರು ವರ್ಷದ ನಂತರದ ತನಗೆ ಉಂಟಾಗಬಹುದಾದ ಪರಿಸ್ಥಿತಿಯ ಘೋರತೆಯನ್ನು ನೆನೆದು ತನಗಾಗಿ ಒಂದು ನಾಡನ್ನು ರಚಿಸಿಕೊಂಡದ್ದಾಗಿ ಹೇಳುತ್ತಾನೆ!
ವೃದ್ಧಾಪ್ಯದ ದಿನಗಳ ಕುರಿತು ಡಾ. ಎಲ್.ಜಿ. ಮೀರಾ ಲಲಿತ ಪ್ರಬಂಧ

ಈ ಶೀರ್ಷಿಕೆ ಓದಿದ ಕನ್ನಡ ಸಾಹಿತ್ಯಪ್ರೇಮಿಗಳಿಗೆ ಎ.ಎನ್.ಮೂರ್ತಿರಾಯರ ಆತ್ಮಚರಿತ್ರೆ `ಸಂಜೆಗಣ್ಣಿನ ಹಿನ್ನೋಟ’ ನೆನಪಾಗಿರಬೇಕು. ವೃದ್ಧಾಪ್ಯವನ್ನು ಅಥವಾ ಮುಪ್ಪನ್ನು ಈ ನಮ್ಮ ಹಿರಿಯ ಸಾಹಿತಿ ಸಂಜೆಗಣ್ಣು ಅಂತ ಎಷ್ಟು ಚೆನ್ನಾಗಿ ಕರೆದಿದ್ದಾರೆ ಅಲ್ವಾ? ಈ ಪ್ರಬಂಧದ – ಅಥವಾ ಲಲಿತ ಪ್ರಬಂಧದ ಅಂತಾದರೂ ಅನ್ನಿ- ವಸ್ತು ಮುಪ್ಪಿನ ಸುತ್ತಲೇ ಸುತ್ತಲಿದೆ, ಪುಟ್ಟ ಮೊಮ್ಮಕ್ಕಳು ಅಜ್ಜ ಅಜ್ಜಿಯರ ಸುತ್ತಲೂ ಸುತ್ತುವಂತೆ. “ಅಜ್ಜನ ಕೋಲಿದು ನನ್ನಯ ಕುದುರೆ ಹೆಜ್ಜೆಗೆ ಹೆಜ್ಜೆಗೆ ಕುಣಿಯುವ ಕುದುರೆ”……

ಹೌದು … ಮುದುಕರು, ಮುಪ್ಪು ಅಂದರೆ ತಕ್ಷಣ ಏನು ನೆನಪಾಗುತ್ತೆ ಹೇಳಿ ಮತ್ತೆ? ಮಠಗಳಲ್ಲಿ ಅಥವಾ ದೇವಸ್ಥಾನಗಳಲ್ಲಿ ಕುಳಿತು ಕಾಲಯಾಪನೆ ಮಾಡುವ ಹಿರಿಯ ನಾಗರಿಕರು ನೆನಪಾಗ್ತಾರಾ? ಅಥವಾ ಬೆಳಗಿನ ಜಾವ ಅಥವಾ ಸಂಜೆಹೊತ್ತಲ್ಲಿ ನಗರ ಅಥವಾ ಪಟ್ಟಣಗಳ ಉದ್ಯಾನವನಗಳಲ್ಲಿ ಕೂತು, ಬರುವವರು-ಹೋಗುವವರನ್ನು ನೋಡುತ್ತಾ ಕುಳಿತ ಹಿರಿಯ ಜೀವಗಳು ನೆನಪಾಗ್ತಾರಾ? ಇಲ್ಲವೇ ಹಳ್ಳಿಗಳ ಜಗಲಿಗಳು, ಅರಳಿಕಟ್ಟೆಗಳಲ್ಲಿ ಕಂಬಳಿ ಹೊದ್ದು ಬಿಸಿಲು ಕಾಯಿಸುತ್ತಾ ಕುಳಿತ ಹಣ್ಣು ಹಣ್ಣು ಮುದುಕರು ನಿಮ್ಮ ಕಣ್ಣ ಮುಂದೆ ಬರ್ತಾರಾ? ಅಥವಾ ವೃದ್ಧಾಶ್ರಮಗಳಲ್ಲಿ ಶೂನ್ಯದೃಷ್ಟಿಯಿಂದ ಕಾಲ ದೂಡುತ್ತಿರುವವರು? ರಸ್ತೆಗಳು ಕೂಡುವ ಕಡೆಗಳಲ್ಲಿ ಕೆಂಪು ದೀಪ ಬಂತೆಂದು ವಾಹನಗಳು ನಿಂತಾಗ ನಡುನಡುವೆ ಬಂದು ಭಿಕ್ಷೆ ಬೇಡುವ ಬೆನ್ನು ಬಾಗಿದ ದಯನೀಯ ವ್ಯಕ್ತಿಗಳಾ? ಅಥವಾ ಹೊರಲಾರದ ಹೊರೆ ಹೊತ್ತು ಇಲ್ಲವೇ ಕಷ್ಟದಿಂದ ಗಾಡಿ ನೂಕುತ್ತಾ ಸೊಪ್ಪನ್ನೋ, ಹೂವನ್ನೋ, ಕಡಲೆಕಾಯಿಯನ್ನೋ ಮಾರುತ್ತಿರುವವರೋ(ಬಸವರಾಜ ಕಟ್ಟೀಮನಿ ಅವರ `ಗಿರಿಜಾ ಕಂಡ ಸಿನಿಮಾ’ ಕಥೆಯಲ್ಲಿನ ಮುದುಕ ನೆನಪಾಗುತ್ತಾನಲ್ಲ)…

ಮೇಲೆ ವಿವರಿಸಿದಂತೆ ಮುಪ್ಪೆಂಬುದು ನಿಷ್ಕರುಣವಾಗಿ ತಮ್ಮಲ್ಲಿ ಮೈದಳೆದವರನ್ನು ನೋಡೋದು ಒಂದು ಮನಕಲಕುವ ಅನುಭವ ಅಲ್ವಾ? ಸಮಾಜದಿಂದ ನಿರ್ಲಕ್ಷ್ಯಕ್ಕೊಳಗಾದ ಹಣ್ಣೆಲೆಗಳವು. ಚಿಗುರೆಲೆಗಳು ಥರಾವರಿ ವಾಕಿಂಗ್ ಗಿಯರ್, ಶೂಸುಗಳನ್ನು ಹಾಕಿಕೊಂಡು ಚಟಪಟ ಚಟಪಟ ಅಂತ ನಡೆಯೋದನ್ನ, ಉದ್ಯೋಗ ಅಥವಾ ವಿಹಾರಕ್ಕಾಗಿ ಕಾರು-ಸ್ಕೂಟರುಗಳಲ್ಲಿ ಸರ್‌ಭರ್ ಎಂದು ಠೀವಿಯಿಂದ ಒಡಾಡುವುದನ್ನು ನೋಡ್ತಾ ಸುಮ್ಮನೆ ಕುಳಿತ ಆ ಹಿರಿಯ ಜೀವಗಳ ಮನಸ್ಸಿನಲ್ಲಿ ಯಾವ ಭಾವನೆಗಳು ಬರಬಹುದು?

ಅಂದ ಹಾಗೆ ಮುಪ್ಪು ಎಂದರೆ ಕೇವಲ ಸೋತು ಸೊರಗಿದ ಹಣ್ಣೆಲೆಗಳ ಬಣ್ಣದಲ್ಲಿ ಮಾತ್ರ ಇರುವ ಜೀವನಾವಸ್ಥೆಯಲ್ಲ, ಕೆಲವು ಯಶಸ್ವೀ ಹಿರಿಯರೂ ನೆನಪಾಗಬಹುದು ನಮಗೆ. ಉದ್ಯಮಗಳ ಒಡೆಯರು, ಶಾಲೆಗಳ, ಸಂಸ್ಥೆಗಳ ವಿಶ್ವಸ್ತರು(ಟ್ರಸ್ಟಿಗಳು), ಸಮವಸ್ತ್ರ ಧರಿಸಿದ ಚಾಲಕರು ಓಡಿಸುವ ದುಬಾರಿ ಕಾರುಗಳಲ್ಲಿ ಓಡಾಡುವವರು, ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಗೌರವ ಪಡೆಯುವವರು, ಅನುಭವೀ ವೈದ್ಯರು, ವಿಮಾನಗಳಲ್ಲಿ ದೇಶ ದೇಶ ತಿರುಗುವವರು, ಪ್ರವಾಸ ಹೋಗುವವರು ….. ಹೀಗೆ …. ಕಾಮನಬಿಲ್ಲಿನಂತೆ ಕಾಣುತ್ತಲ್ಲ ಇವರ ಜೀವನ! ಹೀಗೂ ಇರಬಹುದು ನೋಡಿ ವೃದ್ಧಾಪ್ಯ. ನಗೆಮೊಗದ ಇಳಿಸಂಜೆ ಇದು.

ಇನ್ನೊಂದು ರೀತಿಯ ವೃದ್ಧಪೀಳಿಗೆ ನಮ್ಮ ಕಣ್ಣಿಗೆ ಬೀಳುತ್ತೆ. ಮಧ್ಯಮ, ಮೇಲ್ಮಧ್ಯಮ ವರ್ಗಕ್ಕೆ ಸೇರಿದಂತಹ ಪೀಳಿಗೆ. ತಮ್ಮ ಮಕ್ಕಳು, ಮೊಮ್ಮಕ್ಕಳ ಪ್ರೀತಿ-ಆದರಗಳನ್ನು ಮನಸಾರೆ ಅನುಭವಿಸುವ ಅದೃಷ್ಟವಂತ ಹಿರಿಯರ ಪೀಳಿಗೆ ಇದು. ಒಳ್ಳೆಯ ಟೀಶರ್ಟು, ಪ್ಯಾಂಟು, ಮಂಡಿ ತನಕದ ಪ್ಯಾಂಟು, ಅಥವಾ ಬೆಲೆ ಬಾಳುವ ಸೀರೆ, ಚೂಡಿದಾರಗಳನ್ನು ಧರಿಸಿ ಬೆಳಿಗ್ಗೆಯಾದರೆ ಸಾಕು, ವಾಯುಸಂಚಾರ, ನಗೆಕೂಟ ಎಂದು ಓಡಾಡುವವರು, ಮುದ್ದು ಮೊಮ್ಮಕ್ಕಳನ್ನು ಶಾಲಾಬಸ್ಸಿಗೆ ಹತ್ತಿಸಿ ಟಾಟಾ ಮಾಡುತ್ತಿರುವವರು, ಸಿರಿವಂತರ ಕ್ಲಬ್ಬುಗಳು, ಗಾಲ್ಫ್ ಆಟದ ಮೈದಾನಗಳು, ಕಿಟ್ಟಿ ಪಾರ್ಟಿಗಳು, ಒಂದೇ ಬಣ್ಣದ ಸೀರೆ ಉಟ್ಟ ಭಜನಾಮಂಡಳಿ ಕಾರ್ಯಕ್ರಮಗಳು ಇಂತಹ ಕಡೆಗಳಲ್ಲಿ ಕಾಣಿಸುವವರು. ತಮ್ಮ ಹುಟ್ಟುಹಬ್ಬಕ್ಕೆ ಮಕ್ಕಳೋ, ಸೊಸೆಯಂದಿರೋ, ಅಳಿಯಂದಿರೋ ಕೊಡಿಸಿದ ಸೀರೆಯನ್ನೋ, ಕಾರನ್ನೋ, ಕೈಗಡಿಯಾರವನ್ನೋ ತಮ್ಮೊಂದಿಗಿರುವವರಿಗೆ ತೋರಿಸಿ ಸಂಭ್ರಮಿಸುವವರು ….. ಬಹುಶಃ ಇವರು ತುಂಬ ಅದೃಷ್ಟವಂತ ಮಂದಿ ಎಂದು ಮೇಲ್ನೋಟಕ್ಕೆ ಅನ್ನಿಸುತ್ತದೆ. ಕಡೇಪಕ್ಷ ಲೌಕಿಕ ದೃಷ್ಟಿಯಿಂದಲಾದರೂ ಬದುಕು ಇವರನ್ನು ಆರಾಮದ ಸ್ಥಿತಿಯಲ್ಲಿ ಇಟ್ಟಿರುತ್ತದೆ. ತಮ್ಮ ಮಂಡಿನೋವು, ಸಕ್ಕರೆ ಕಾಯಿಲೆ, ರಕ್ತದೊತ್ತಡಗಳ ಬಗ್ಗೆ ಆಗೀಗ ಇವರು ಗೊಣಗುತ್ತಿರುವುದು ಹೌದಾದರೂ ಒಟ್ಟಾರೆ ಇವರು ಸುಖಿಗಳಾಗಿ ತೋರಿಬರುತ್ತಾರೆ ಎನ್ನಲು ಅಡ್ಡಿಯಿಲ್ಲ.

*****

ಇದೆಲ್ಲ ಈಗಿನ ಕಾಲದ ಮಾತಾಯಿತು. ಐವತ್ತು-ನೂರು ವರ್ಷಗಳ ಹಿಂದೆ ನಮ್ಮ ನಾಡಿನಲ್ಲಿ ವೃದ್ಧರ ಸ್ಥಿತಿಗತಿ ಹೇಗಿತ್ತು ಎಂದು ಯೋಚಿಸಿದ್ರೆ ಏನನ್ನಿಸುತ್ತೆ? ಮಾಹಿತಿ ತಂತ್ರಜ್ಞಾನ, ಯಂತ್ರಗಳ ಧಾವಂತ ಇನ್ನೂ ಮನುಕುಲವನ್ನು ಆವರಿಸದ ದಿನಗಳಲ್ಲಿ ಗ್ರಾಮಜೀವನ, ಒಟ್ಟು ಕುಟುಂಬಗಳ ವ್ಯವಸ್ಥೆ ಇದ್ದಾಗ ಅಜ್ಜ ಅಜ್ಜಿಯರಿಗೆ ಬಹುತೇಕ ಮನೆಗಳಲ್ಲಿ ಮತ್ತು ಸಮಾಜದಲ್ಲಿ ವಿಶೇಷ ಗೌರವದ ಸ್ಥಾನ ಇರುತ್ತಿತ್ತು. ಹಿರಿಯರು, ಹಿರಿತಲೆ, ದೊಡ್ಡವರು, ಸಾವಿರ ಗಾದೆ ಬಲ್ಲವರು, ತುಂಬ ಜೀವನಾನುಭವ ಇರುವವರು, ಬಾಳನ್ನು ಎದುರಿಸಲು ಮಕ್ಕಳು, ಯುವ ಪೀಳಿಗೆಗೆ ಮಾರ್ಗದರ್ಶನ ಮಾಡುವ ಮಾದರಿಗಳೆಂಬ ಪಟ್ಟ ಇರುತ್ತಿತ್ತು. ಮನೆಯಲ್ಲಿ ರುಚಿಯಾಗಿ ಅಡಿಗೆ ಮಾಡುವ ಅಜ್ಜಿಯರು, ಮಕ್ಕಳಿಗೆ ಕಥೆ ಹೇಳುವ ಅಜ್ಜ ಅಜ್ಜಿಯರು, ಸೊಸೆಯರಿಗೆ ಅಡಿಗೆ- ಮನೆವಾಳ್ತೆ ಹೇಳಿಕೊಡುವ ಅತ್ತೆಯರು …. ಇವೆಲ್ಲ ನಮ್ಮ ಸಾಂಸ್ಕೃತಿಕ ನೆನಪುಗಳಲ್ಲವೇ? ಈಗ ಐವತ್ತು- ಐವತ್ತೈದು ವರ್ಷ ವಯಸ್ಸಾಗಿರುವ ನಮ್ಮ ಪೀಳಿಗೆಯ ಅಂದರೆ ಐವತ್ತು ವರ್ಷದ ಹಿಂದೆ ಹುಟ್ಟಿದವರ ಬಾಲ್ಯದ ಸಂದರ್ಭದಲ್ಲಿ ಪಟ್ಟಣ, ನಗರಗಳಲ್ಲಿರುವ ಮಕ್ಕಳು ಶಾಲೆಯ ಬೇಸಿಗೆ ರಜೆಯಲ್ಲಿ ಅಜ್ಜಿಮನೆಗೆ ಹೋಗುವುದು ಅನ್ನುವುದೇ ಒಂದು ಸಂಭ್ರಮದ ವಿಷಯವಾಗಿರುತ್ತಿತ್ತಲ್ಲ!

ಈಗ ನೆನಪಿಸಿಕೊಂಡ ಸ್ವರ್ಗಕ್ಕೆ ವಿರುದ್ಧವಾದ ಒಂದು ನರಕವೂ ಇತ್ತು ಅನ್ನಿ. `ಅಜ್ಜ ನೆಟ್ಟ ಆಲದ ಮರ ಅಂತ ನೇಣು ಹಾಕ್ಕೊಳಕ್ಕೆ ಅಗುತ್ತಾ’ ಅಂತ ಒಂದು ನಾಣ್ಣುಡಿಯೇ ಇದೆಯಲ್ಲಾ? `ಚೋಮನ ದುಡಿ’ ಕಾದಂಬರಿಯ ಸಂಕಪ್ಪಯ್ಯನ ತಾಯಿ, ಟಿಪಿ.ಕೈಲಾಸಂರ `ಟೊಳ್ಳುಗಟ್ಟಿ’ ನಾಟಕದ ನಾಗತ್ತೆ, ನಮ್ಮ ಸ್ವಾತಂತ್ರ್ಯಪೂರ್ವ ನವೋದಯ ಸಾಹಿತ್ಯವಂತೂ ಇಂತಹ ಹಿರಿಯ ಪಾತ್ರಗಳಿಂದ ತುಂಬಿಹೋಗಿದೆ. ನಂತರದ ಕಾಲದಲ್ಲೂ ಅಷ್ಟೇ. ಗ್ರಾಮೀಣ ಬದುಕನ್ನು, ಒಟ್ಟುಕುಟುಂಬಗಳನ್ನು ಚಿತ್ರಿಸುವ ಲೇಖಕ ಲೇಖಕಿಯರಲ್ಲಿ ಯಜಮಾನೀ ಸ್ಥಾನದಲ್ಲಿರುವ ಅನೇಕ ಅಜ್ಜ ಅಜ್ಜಿಯರು ಚಿತ್ರಿತರಾಗಿದ್ದಾರೆ. ವೈದೇಹಿಯವರ `ಚಿಪ್ಪು’ ಕಥೆಯ ರಂಗಜ್ಜಿಯನ್ನು ನೆನಪಿಸಿಕೊಳ್ಳಿ. ತನ್ನ ಮೊಮ್ಮಗಳು ಯಶುವಿನ ಮೇಲೆ ಇವಳ ಚಿಂತನಾಕ್ರಮದ ಯಜಮಾನಿಕೆ ಎಷ್ಟಿರುತ್ತೆ ಅಂದರೆ ತನ್ನ ಬದುಕಿನ ಪ್ರತಿ ವಿಷಯದಲ್ಲೂ ಅಜ್ಜಿಯ ಇರವಿನಿಂದ ಬೇಸತ್ತ ಯಶು `ಒಮ್ಮೆ ಸಾಯುತ್ತೀಯ ರಂಗಜ್ಜಿ…’ ಎಂದು ಯೋಚನೆ ಮಾಡುವ ಪರಿಸ್ಥಿತಿ ಬಂದಿರುತ್ತದೆ. ಅನಂತಮೂರ್ತಿಯವರ ಕಥೆ-ಕಾದಂಬರಿಗಳಲ್ಲೂ ಇಂತಹ ಯಜಮಾನೀ ಹಿರಿತಲೆಗಳು, ಅವರು ತಮ್ಮ ಮೇಲೆ ಹಾಕುವ ವಿಪರೀತ ನಿರ್ಬಂಧಗಳಿಂದ ರೋಸಿಹೋದ ಯುವಕ ಯುವತಿಯರು ಕಾಣಸಿಗುತ್ತಾರೆ (`ಪ್ರಶ್ನೆ’ ಕಥೆ ನೆನಪಾಗುತ್ತೆ ಅಲ್ಲವಾ). ಇನ್ನು ತನ್ನ ಕೋಳಿಗಾಗಿ ಊರೆಲ್ಲ ಹುಡುಕುವ, ದೇವನೂರು ಮಹಾದೇವರ `ಒಡಲಾಳ’ದ ಸಾಕವ್ವನನ್ನು ಮರೆಯಲಾಗುವುದೇ? ತನ್ನ ಮನೆಮಂದಿಯನ್ನು ಅವಳು ಹೇಗೆ ಆಳ್ತಾಳಲ್ಲ! ಅಂದ ಹಾಗೆ ಹಳ್ಳಿ ಕಡೆಯ ಪಂಚಾಯತಿಯ ನ್ಯಾಯತೀರ್ಮಾನದ ಸಂದರ್ಭಗಳಲ್ಲೂ ವಯಸ್ಸಾದವರಿಗೆ ಅವರ ಹಿರಿತನ, ಜೀವನಾನುಭವಗಳ ಕಾರಣದಿಂದ ತುಂಬ ಗೌರವದ ಸ್ಥಾನಮಾನ ಇರುತ್ತಿತ್ತು. ಗೌಡ ಎಂಬ ಪದ ಬಂದಿರುವುದೇ ಗ್ರಾಮವೃದ್ಧ ಎಂಬ ಪದದಿಂದ ಎಂಬುದನ್ನು ನಾವು ನೆನೆದಾಗ ಹಿರಿಯರ ಬಗ್ಗೆ ಹಳ್ಳಿಗಳಲ್ಲಿ ಎಂತಹ ಆದರದ ಮತ್ತು ಯಜಮಾನಿಕೆಯ ಸ್ಥಾನಮಾನ ಇತ್ತು ಅಂತ ಅರ್ಥ ಆಗುತ್ತೆ.

ತಮ್ಮ ಹುಟ್ಟುಹಬ್ಬಕ್ಕೆ ಮಕ್ಕಳೋ, ಸೊಸೆಯಂದಿರೋ, ಅಳಿಯಂದಿರೋ ಕೊಡಿಸಿದ ಸೀರೆಯನ್ನೋ, ಕಾರನ್ನೋ, ಕೈಗಡಿಯಾರವನ್ನೋ ತಮ್ಮೊಂದಿಗಿರುವವರಿಗೆ ತೋರಿಸಿ ಸಂಭ್ರಮಿಸುವವರು ….. ಬಹುಶಃ ಇವರು ತುಂಬ ಅದೃಷ್ಟವಂತ ಮಂದಿ ಎಂದು ಮೇಲ್ನೋಟಕ್ಕೆ ಅನ್ನಿಸುತ್ತದೆ.

ಹಾಂ, ಮುಪ್ಪಿನ ಬಗೆಗೆ ಜೀವಶಾಸ್ತ್ರ ಏನು ಹೇಳುತ್ತೆ ಅಂತ ನೋಡಿದರೆ ಕೆಲವು ಸ್ವಾರಸ್ಯಕರ ವಿಷಯಗಳು ಗೊತ್ತಾಗ್ತವೆ. ಅತ್ಯಂತ ಸಂಕೀರ್ಣ ಹಾಗೂ ಜಟಿಲವಾದ ನಮ್ಮ ದೇಹಯಂತ್ರದ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆಗಳು, ತಪ್ಪುಗಳು ಆಗ್ತವಲ್ಲ, ಅವುಗಳಿಗೆ ಹೊಂದಿಕೊಳ್ಳುವ ಅಥವಾ ಅವುಗಳನ್ನ ಸರಿಪಡಿಸಿಕೊಳ್ಳುವ ಶಕ್ತಿ ವೃದ್ಧಾಪ್ಯದಲ್ಲಿ ಕಡಿಮೆಯಾಗುತ್ತಾ ಹೋಗುತ್ತಂತೆ. ನಮ್ಮ ಜೀವಕೋಶಗಳು, ಅಂಗಾಂಶಗಳಿಗೆ ಬಳಕೆ ಮತ್ತು ಹಾನಿಯಿಂದ(ವೇರ್ ಅಂಡ್ ಟೇರ್) ಆಗುವ ನಷ್ಟಗಳನ್ನ ತುಂಬಿಕೊಳ್ಳುವ ಶಕ್ತಿ ಬಾಲ್ಯ, ಯೌವನದಲ್ಲಿ ಇರುವಂತೆ ವೃದ್ಧಾಪ್ಯದಲ್ಲಿ ಇರಲ್ಲವಂತೆ. ವೃದ್ಧಾಪ್ಯದ ಬಾಹ್ಯ ಲಕ್ಷಣಗಳು ನಮಗೆ ಗೊತ್ತೇ ಇವೆ. ಕೂದಲು ಬಿಳಿಯಾಗೋದು, ಚರ್ಮದಲ್ಲಿ ಸುಕ್ಕುಗಳಾಗೋದು, ಬೆನ್ನು ಬಾಗೋದು, ಹಲ್ಲು ಬೀಳೋದು ಇತ್ಯಾದಿ. ಬಹಳ ಆಶ್ಚರ್ಯದ ವಿಷಯ ಅಂದರೆ ಜೀವಶಾಸ್ತ್ರಜ್ಞರ ಪ್ರಕಾರ ನಮ್ಮ ಜೈವಿಕ ವಯಸ್ಸು ಮತ್ತು ಮಾನಸಿಕ ವಯಸ್ಸು ಬೇರೆ ಬೇರೆಯಂತೆ! ಯಾರು ತಮ್ಮ ಆರೋಗ್ಯವನ್ನು ಹಿತಮಿತ ಆಹಾರ ಹಾಗೂ ವ್ಯಾಯಾಮದಿಂದ ಮತ್ತು ಮನಸ್ಸನ್ನು ಉತ್ತಮ ಚಟುವಟಿಕೆ ಮತ್ತು ಸಕಾರಾತ್ಮಕ ಚಿಂತನೆಗಳಿಂದ ಆರೋಗ್ಯವಾಗಿ ಇಟ್ಟುಕೊಂಡಿರುತ್ತಾರೋ ಅವರಲ್ಲಿ ವಯಸ್ಸಾಗುವ ಬಾಹ್ಯ ಲಕ್ಷಣಗಳು ಹೆಚ್ಚಾಗಿ ಕಾಣಿಸುವುದಿಲ್ಲವಂತೆ! `ಇಟ್ ಈಸ್ ಮೈಂಡ್ ಓವರ್ ಬಾಡಿ ಕಣ್ರೀ, ಏಜ್ ಈಸ್ ಜಸ್ಟ್ ಎ ನಂಬರ್’ ಅಂತ ನಮ್ಮ ಬೇರೆ ಬೇರೆ ಕ್ಷೇತ್ರದ ಬುದ್ಧಿಜೀವಿಗಳು ಹೇಳೋದು ನಾವೆಲ್ಲ ಕೇಳಿದೀವಲ್ಲ.

*****

ಇದೆಲ್ಲ ಸರಿ. ಆದರೆ ಜಾಗತೀಕರಣದ ನಂತರ ನಮ್ಮ ಬದುಕು ತೀರಾ ಬದಲಾಗಿರುವುದಂತೂ ನಿಜ ತಾನೇ. ನಗರಗಳಿಗೆ ಅತಿಯಾಗಿ ಉಂಟಾಗುತ್ತಿರುವ ವಲಸೆ, ವೃದ್ಧಾಶ್ರಮಗಳಾಗುತ್ತಿರುವ ಹಳ್ಳಿಗಳು, ಎಚ್ಚರವಾಗಿರುವ ಸಮಯದಲ್ಲೆಲ್ಲಾ ತಮ್ಮ ಗಣಕ ಯಂತ್ರಕ್ಕೋ, ಕೈದೂರವಾಣಿಗೋ ಕಣ್ಣು ಕೀಲಿಸಿ ಕೂತ ಯುವಜನತೆ, ಕುಟುಂಬ ವ್ಯವಸ್ಥೆಯಲ್ಲಿ ಆಗಿರುವ ಅನೇಕ ಬದಲಾವಣೆಗಳು, ಕೂಡುಕುಟುಂಬ ಹೋಗಿ ಒಂಟಿಕುಟುಂಬಗಳು ಅಸ್ತಿತ್ವಕ್ಕೆ ಬಂದಿರುವುದು, ಮಕ್ಕಳೇ ಬೇಡ ಅನ್ನುವ ಗಂಡ ಹೆಂಡತಿಯರ `ಬೀಜಕೇಂದ್ರ'(ವೆರಿ ಮಚ್ ನ್ಯೂಕ್ಲಿಯರ್!) ಕುಟುಂಬ, ಹೆಚ್ಚುತ್ತಿರುವ ವಿಚ್ಛೇದನಗಳು, ಮದುವೆಯೇ ಬೇಡ ಎನ್ನುವ ಲಿವ್ ಇನ್, ಲಿವಿಂಗ್ ಟುಗೆದರ್ ವ್ಯವಸ್ಥೆಗಳು, ಸಮಾನ ಲಿಂಗಿಗಳ ಮದುವೆಗಳು, ಕಂಡು ಕೇಳರಿಯದ ಬದಲಾವಣೆಗಳು! …. ಅಬ್ಬ!

ಇನ್ನು ಊಟ ತಿಂಡಿ, ಅಡಿಗೆ ವಿಷಯದಲ್ಲಾಗಿರುವ ಬದಲಾವಣೆಗಳಂತೂ ಹೇಳತೀರವು ಬಿಡಿ. ಟೋಸ್ಟು, ಬರ್ಗರು, ಪಿಝ್ಝಾ, ನೂಡಲ್, ಟಾರ್ಟಿಲಾ, ವ್ಯಾಫಲ್, ಫ್ರೆಂಚ್ ಫ್ರೈಸ್, ಮ್ಯಾಕ್ ಅಂಡ್ ಚೀಸ್, ಸುಶಿ, ಹಮ್ಮಸ್ …… ಅಯ್ಯೋ ಒಂದೇ ಎರಡೇ, ಇಡೀ ಪ್ರಪಂಚವೇ ನಮ್ಮ ಊಟದ ಮೇಜಿಗೆ ಬಂದು ಕೂತಿದೆ. ಕೈಯಲ್ಲಿರುವ ಚಲನವಾಣಿಯ ಮೇಲೆ ಬೆರಳೊತ್ತಿದರೆ ಸಾಕು ಸ್ವಿಗ್ಗಿ ಉದ್ಯೋಗಿಯೋ, ಝೊಮ್ಯಾಟೋ ಹುಡುಗನೋ ಈ ಥರಾವರೀ ತಿಂಡಿ ತೀರ್ಥಗಳನ್ನು `ಇದೋ ತಂದೆ’ ಎಂದು ನಿಮ್ಮ ಮನೆ ಬಾಗಿಲಿಗೆ ತಂದೇಬಿಡುತ್ತಾನೆ. ಇಂತಹ ಕಾಲದಲ್ಲಿ ನಮ್ಮ ಅಜ್ಜಿಯರು ಮಾಡುತ್ತಿದ್ದ ಉಂಡೆ, ಚಕ್ಕುಲಿ, ಬಿಸಿಬೇಳೆಬಾತು, ಕೋಡುಬಳೆ, ಗೊಜ್ಜವಲಕ್ಕಿ, ಬಸ್ಸಾರು, ಅಕ್ಕಿರೊಟ್ಟಿ, ಉಂಡಲಕ, ಮುಳ್ಕಗಳು ಬೆದರಿ, ನಾಚಿ ಮುಖಮುಚ್ಚಿಕೊಂಡಿವೆ. ಇಂತಹ ಸನ್ನಿವೇಶದಲ್ಲಿ ವೃದ್ಧರಿಗಿರಲಿ, ಮಧ್ಯವಯಸ್ಸಿನವರಿಗೂ ಈ ದೊಡ್ಡ ಬದಲಾವಣೆಯನ್ನು ಅರಗಿಸಿಕೊಳ್ಳುವುದು ಕಷ್ಟವಿದೆ. ಕಾಲಡಿಯ ನೆಲವೇ ಕುಸಿಯುವ ಪರಿಸ್ಥಿತಿ ಇದು.

ವಿಷಯ ಹೀಗಿರುವಾಗ ನಮ್ಮ ವೃದ್ಧರ ಮುಂದೆ ಅಥವಾ ನಾವು ಮುಂದೆ ವೃದ್ಧರಾದಾಗ ಕಣ್ಣೆದುರಿಗೆ ಇರುವ ಆಯ್ಕೆಗಳೇನು? ವೃದ್ಧಾಪ್ಯವನ್ನು ಮೂರು ರೀತಿಗಳಲ್ಲಿ ಎದುರಿಸುವವರನ್ನು ನಮ್ಮ ಸುತ್ತಮುತ್ತ ನೋಡಬಹುದು ಅನ್ನಿಸುತ್ತೆ.

1. ಬದುಕಿನ ಯುದ್ಧದಲ್ಲಿ ಸೋತು ಆಯ್ತಪ್ಪ ಮುಗೀತು ನಂದು, ಇನ್ನೇನಿದ್ರೂ ಸಾವಿಗೆ ಕಾಯೋದಷ್ಟೇ ಎಂಬ ಮನಸ್ಥಿತಿಯವರು. ವೃದ್ಧಾಪ್ಯದ ದೈಹಿಕ ಚಿಹ್ನೆಗಳು ಇವರಲ್ಲಿ ಢಾಳಾಗಿ ಕಾಣುತ್ತವೆ. ಇವರೇನಾದರೂ ಬಡತನದಲ್ಲಿ ನರಳುವವರು, ನಮ್ಮವರು ತಮ್ಮವರು ಎಂದು ಯಾರೂ ಇಲ್ಲದವರಾಗಿಬಟ್ಟರಂತೂ ಇವರು ಬದುಕಿನ ಹೆದ್ದಾರಿಯ ಬದಿಯಲ್ಲಿ ಅಸಹಾಯಕರಾಗಿ ನಿಂತ ಭಿಕ್ಷುಕರಾಗಿಬಿಡುತ್ತಾರೆ.

2. ಇನ್ನೊಂದು ರೀತಿಯ ಮನಸ್ಥಿತಿಯ ವೃದ್ಧರಿರುತ್ತಾರೆ `ಇಲ್ಲ, ನಂಗೆ ವಯಸ್ಸಾಗಲ್ಲ, ನನ್ನಲ್ಲಿ ಇನ್ನೂ ಯೌವನ, ಸೌಂದರ್ಯ ಇವೆ, ನಾ ಚಿರಯುವಕ, ಚಿರಯುವತಿ’ ಎಂಬ ಮನೋಭಾವನೆಯವರು. ಮಹಾಭಾರತದಲ್ಲಿ ಬರುವ ಯಯಾತಿಯ ಮನಸ್ಥಿತಿ ಇದು. – ಹಠಕ್ಕೆ ಬಿದ್ದು ಯೌವನಿಗರಂತೆ ಕಾಣುವ ನಗೆಪಾಟಲಾಗುವ ಪರಿಸ್ಥಿತಿ ತಂದುಕೊಳ್ಳುವವರು ಇವರು.

ಈ ಹಪಹಪಿಯ ಮನಸ್ಥಿತಿ ಇನ್ನೊಂದು ರೀತಿಯಲ್ಲೂ ಕಾಣಿಸಿಕೊಳ್ಳುತ್ತೆ. ತಾವು ಆ ಸಂದರ್ಭಕ್ಕೆ ಪ್ರಸ್ತುತರಿರಲಿ ಬಿಡಲಿ, ಹೇಳದೆಯೂ ಹಾಜರಾಗುವ, ಆಹ್ವಾನವಿಲ್ಲದೆಯೂ ಹೋಗುವ, ಅಗತ್ಯ ಇಲ್ಲದಿದ್ದರೂ ಸಭೆಗಳಲ್ಲಿ ಎದ್ದು ನಿಂತು ಮಾತಾಡುವ ವ್ಯಕ್ತಿಗಳು. ಶಾಲೆ, ಕಾಲೇಜುಗಳ, ಕಛೇರಿಗಳ ಸಭೆ, ಸಮಾರಂಭಗಳಿಗೆ ಆಹ್ವಾನ ಇಲ್ಲದಿದ್ದರೂ ಬಂದು ತಾನು ನಿವೃತ್ತ ಇಂಜಿನಿಯರ್, ನಿವೃತ್ತ ಅಧಿಕಾರಿ, ಅಲ್ಲಿಗೆ ಹೋಗಿದ್ದೆ, ಇಲ್ಲಿಗೆ ಹೋಗಿದ್ದೆ ಎಂದು ಹೇಳಿಕೊಳ್ಳುವ ವೃದ್ಧರನ್ನು ನಾವು ಗಮನಿಸುತ್ತೇವಲ್ಲ…. ಇದು ಕೂಡ ಒಂದು ರೀತಿಯ ದಯನೀಯ ಸ್ಥಿತಿಯಲ್ಲವೇ? ಜರಿಬಟ್ಟೆ ಉಟ್ಟ ಭಿಕ್ಷುಕರು ಇವರು ಅಷ್ಟೇ. ಇವರು ಬೇಡುವುದು ಅನ್ನ, ಹಣ ಅಲ್ಲ, ಬದಲಾಗಿ ಮನ್ನಣೆ, ಗೌರವ. ಏನೇ ಆದರೂ ಹಿರಿಯರೆಂಬೋ ಹಿರಿಯರು ಕಾಣಿಸಿಕೊಳ್ಳಬಾರದ ಸ್ಥಿತಿ ಇದು.

3. ಇನ್ನೊಂದು ರೀತಿಯ ವೃದ್ಧರೆಂದರೆ ವೃದ್ಧಾಪ್ಯವನ್ನು ತುಂಬ ಘನತೆಯಿಂದ ಸ್ವೀಕರಿಸಿ ಇದ್ದುದ್ದನ್ನು ಇದ್ದ ಹಾಗೆ ಎದುರಿಸುವ ಮತ್ತು ತಮ್ಮನ್ನು ತಾವು ಅರ್ಥಪೂರ್ಣ, ಪ್ರಸ್ತುತ ಹಾಗೂ ಉತ್ಪಾದಕರನ್ನಾಗಿ ಇಟ್ಟುಕೊಳ್ಳುವ ಮನಸ್ಥಿತಿಯವರು. ಬಾಲ್ಯ, ಯೌವನ, ಹಾಗೂ ನಡುಹರೆಯದಲ್ಲಿ ಕಾಣದ ಸಮತೋಲನ, ಸಮಚಿತ್ತ ಹೊಂದಿದ ಇವರು ನಮ್ಮ ಗೌರವಕ್ಕೆ ಅರ್ಹರು. ತಮ್ಮ ಬಿಳಿಕೂದಲ ಬಗ್ಗೆ ಆಗಲೀ, ಸುಕ್ಕುಗಟ್ಟಿದ ಚರ್ಮದ ಬಗ್ಗೆಯಾಗಲೀ ಯಾವುದೇ ಅಳುಕು, ಹಿಂಜರಿಕೆ ಇಲ್ಲದೆ ತಾವು ಹೇಗೆ ಇದ್ದೇವೋ ಹಾಗೆಯೇ ತಮ್ಮನ್ನು ಮತ್ತು ಬದುಕನ್ನು ಸ್ವೀಕರಿಸುವ ಸ್ವಸ್ಥ ಮನಸ್ಥಿತಿಯವರು. ಇವರು ಮಾನ್ಯತೆ, ಗೌರವಗಳನ್ನು ಬಯಸಿ ಹೋಗುವವರಲ್ಲ, ಅವೇ ಇವರ ಬಳಿ ಅಯಾಚಿತವಾಗಿ ಬರುತ್ತವೆ.

ಇವುಗಳಲ್ಲಿ ಅತ್ಯುತ್ತಮ ಆಯ್ಕೆ ಯಾವುದು ಎಂಬುದನ್ನು ವಿವರಿಸಬೇಕಿಲ್ಲ. ಆದರೆ ಘನತೆಯುಳ್ಳ ವೃದ್ಧಾಪ್ಯವು ಇದ್ದಕ್ಕಿದ್ದಂತೆ ಒಂದು ದಿನ ಉದ್ಭವವಾಗುವುದಿಲ್ಲ. ಅದಕ್ಕೆ ಕೆಲವು ರೀತಿಯ ಸಿದ್ಧತೆ, ಮನಸ್ಥಿತಿಗಳು ಬೇಕಲ್ಲವೇ?

ವಿವೇಕಿಗಳು ಹಾಗೂ ವೃದ್ಧಾಪ್ಯದ ಬಗ್ಗೆ ಅಧ್ಯಯನ ಮಾಡಿದವರು ಬಾಳಸಂಜೆಯ ಬಗೆಗೆ ಕೆಲವು ಉತ್ತಮ ವಿಷಯಗಳನ್ನು ಹೇಳಿದ್ದಾರೆ!
1. ಮುಪ್ಪಿನಲ್ಲಿ ಬದುಕು ಸಮಯ ಶ್ರೀಮಂತವಾಗಿರುತ್ತದೆ! ಯೌವನ, ಮಧ್ಯವಯಸ್ಸುಗಳಲ್ಲಿ ದುಡಿಮೆಯ ಕಾರಣದಿಂದಾಗಿ ಸಮಯ ತೀರಾ ಕಡಿಮೆ ಇರುತ್ತದೆ. ಆದರೆ ಮುಪ್ಪಿನಲ್ಲಿ ಸಮಯ ನಮಗಾಗಿ ಕಾಯುತ್ತದಂತೆ! ಎಷ್ಟು ಒಳ್ಳೆಯ ವಿಷಯ ಅಲ್ವಾ? ಆರೋಗ್ಯ ಮತ್ತು ಹಣಕಾಸಿನ ಸ್ಥಿತಿಗಳು ತಕ್ಕ ಮಟ್ಟಿಗೆ ಚೆನ್ನಾಗಿದ್ದರೆ ವೃದ್ಧಾಪ್ಯವು ನಮಗೆ ಬೇಕಾದ್ದನ್ನು ಬೇಕಾದಾಗ ಮಾಡುವ ಅವಕಾಶ ಕೊಡುವ ಜೀವನದ ಹಂತವಾಗಿರುತ್ತೆ ಅನ್ನಿಸುತ್ತೆ.
2. ಬಕೆಟ್ ಲಿಸ್ಟ್ ಅಂದರೆ ಇಂಗ್ಲಿಷ್‌ನಲ್ಲಿ ಸಾಯುವ ಮುನ್ನ ಮಾಡಿ ಮುಗಿಸಬೇಕಾದ ಕೆಲಸಗಳು ಎಂದು ಅರ್ಥವಲ್ಲವೇ? ವೃದ್ಧಾಪ್ಯವನ್ನು ಬಿಟ್ಟು ಇನ್ನು ಯಾವ ಸಮಯದಲ್ಲಿ ನಾವು ಜೀವನದಲ್ಲಿ ಆಸೆ ಪಟ್ಟು ಮಾಡುವ ಕೆಲಸಗಳನ್ನು ಮಾಡುವ ಅವಕಾಶ ಸಿಗುತ್ತದೆ!? ಈ ದೃಷ್ಟಿಯಿಂದ ಬಹುಶಃ ಮುಪ್ಪು ಜೀವನದ ಅತ್ಯುತ್ತಮ ಕಾಲವೋ ಏನೋ! ವೃದ್ಧರಾದ ಮೇಲೆ ಅಂದರೆ ತಮ್ಮ ಕೆಲಸದ ಜವಾಬ್ದಾರಿಗಳೆಲ್ಲ ತೀರಿದ ಮೇಲೆ ಸಂಗೀತ ಕಲಿತವರಿದ್ದಾರೆ, ಪುಸ್ತಕ ಬರೆದವರಿದ್ದಾರೆ, ನಟನೆ ಮಾಡಿದವರಿದ್ದಾರೆ, ಪ್ರಪಂಚ ಪ್ರವಾಸ ಹೋದವರಿದ್ದಾರೆ!

3. ಬದುಕು ನಿಧಾನವಾಗಿ ತನ್ನ ಗುಟ್ಟುಗಳನ್ನು ಬಿಟ್ಟುಕೊಡುವ ಕಾಲವಲ್ಲವೇ ಮುಪ್ಪು? ಯಾವುದು ಬೇಕು, ಯಾವುದು ಬೇಡ, ಎಷ್ಟು ಬೇಕು, ಎಷ್ಟು ಬೇಡ ಎಂಬುದರ ರಹಸ್ಯ ಗೊತ್ತಾಗುತ್ತದೆ ಅನ್ನಿಸುತ್ತೆ. ಯೌವನ, ಮಧ್ಯವಯಸ್ಸಿನಲ್ಲಿ ಜೀವನದಲ್ಲಿ ನಿಜವಾಗಿ ಮಾಡಲೇಬೇಕಿಲ್ಲದ ಕೆಲಸಗಳನ್ನು ಮಾಡಿ, ನಂತರ `ಅಯ್ಯೋ, ಇದನ್ನು ಮಾಡುವ ಅಗತ್ಯವೇ ಇರಲಿಲ್ಲವಲ್ಲ’ ಎಂದು ಪೇಚಾಡುತ್ತೇವೆ. ಈ ಬಗ್ಗೆ ನಾವು ತುಸು ಯೋಚಿಸಿ ಮನಸ್ಸನ್ನು ಸಿದ್ಧಪಡಿಸಿಕೊಂಡೆವು ಅಂದರೆ ಮುಪ್ಪಾಗುವ ಹೊತ್ತಿಗೆ ತಕ್ಕ ಔಚಿತ್ಯ ಪ್ರಜ್ಞೆ ಬಹುಶಃ ಬಂದಿರುತ್ತದೆ.

*****

ನಮ್ಮ ಸಮಾಜ, ಸಂಸ್ಕೃತಿಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ಅದನ್ನು ತೋರಿಸುವುದರಲ್ಲಿ, ಚಿತ್ರಿಸುವುದರಲ್ಲಿ ಬಾಲ್ಯ, ಯೌವನಗಳಿಗೆ ಕೊಡುವಷ್ಟು ಪ್ರಾಮುಖ್ಯವನ್ನು ಬಾಳಿನ ಸಂಧ್ಯಾಕಾಲಕ್ಕೆ ಕೊಡುವುದಿಲ್ಲ. ಆದರೆ ಈ ನಿಯಮಕ್ಕೆ ಕೆಲವು ಅಪವಾದಗಳಿವೆ ಅನ್ನಿ. ವೃದ್ಧಾಪ್ಯದಲ್ಲಿ ಸಂಗಾತಿಯ ಅಗತ್ಯವನ್ನು ಹೃದ್ಯವಾಗಿ ತೋರಿಸುವ `ಪ್ರೀತಿ ಪ್ರೇಮ ಪ್ರಣಯ’ ಸಿನಿಮಾ, ವೃದ್ಧಾಶ್ರಮದಲ್ಲಿದ್ದರೂ ಖುಷಿಯಿಂದ ಇರುವ ವೃದ್ಧರನ್ನು ತೋರುವ `ಲಗೇ ರಹೋ ಮುನ್ನಾ ಭಾಯಿ’ ಸಿನಿಮಾ, ವೃದ್ಧರು ಪರ್ವತಾರೋಹಣ ಮಾಡುವ ಸನ್ನಿವೇಶವನ್ನು ತೋರುವ `ಊಂಭಾಯಿ’ ಸಿನಿಮಾ ನೆನಪಾಗುತ್ತವೆ. ಇಂತಹ ಸಿನಿಮಾಗಳು ಮುಪ್ಪನ್ನು ಬದುಕಿನ ಸೆಕೆಂಡ್ ಇನ್ನಿಂಗ್ಸ್ ಅನ್ನುತ್ತವೆ!

*****

ಆದರೂ ಕೆಲವು ಪ್ರಶ್ನೆಗಳು ಉಳಿಯುತ್ತವೆ ಅಲ್ಲವೇ?

1. ಮುಪ್ಪಿನಲ್ಲಿ ನಾವು ಮಾನವ ಸಂಬಂಧಗಳಿಂದ ಮುಖ್ಯವಾಗಿ ನಮ್ಮ ಮಕ್ಕಳಿಂದ ಆಸರೆ, ಪ್ರೀತಿಗಳನ್ನು ನಿರೀಕ್ಷೆ ಮಾಡಬಹುದೇ, ಮಾಡಬಾರದೇ(ಅಮಿತಾಭ್ ಬಚ್ಚನ್‌ರ ಬಾಗ್‌ಬನ್ ಸಿನಿಮಾ ನೆನಪಾಯಿತೇ!)?
2. ಹೆಂಡತಿ/ಗಂಡನಿಂದ ಮುಪ್ಪಿನಲ್ಲಿ ನಾವು ಏನನ್ನು ನಿರೀಕ್ಷಿಸಬಹುದು?
3. ವೃತ್ತಿಬಾಂಧವರು, ಸ್ನೇಹಿತರು, ನೆರೆಹೊರೆಯ ಒಡನಾಡಿಗಳು – ಇವರಲ್ಲಿ ಯಾರು ಹಿತವರು ನಮಗೆ?
4. ಪೀಳಿಗೆಗಳ ಅಂತರ – ಇದನ್ನು ನಾವು ನಿಜಕ್ಕೂ ದಾಟಲು ಸಾಧ್ಯವೇ?
5. ವಿಧಿಯಾಟದ ಬಲಿಪಶುಗಳು ನಾವು ಎನ್ನುವುದು ಹೌದಾದರೆ ನಮ್ಮ ಬದುಕು ನಿಜಕ್ಕೂ ನಮ್ಮದೇ? ಅಲ್ಲವೇ? ಎಷ್ಟರ ಮಟ್ಟಿಗೆ ನಾವು ಅದನ್ನು ನಿಯಂತ್ರಿಸಬಹುದು?

*****

ಬಹುಶಃ ನಾವು ಮುಪ್ಪನ್ನು, ಬಾಳಿನ ಸಂಜೆಯನ್ನು ಹೊಸ ಕಣ್ಣುಗಳಿಂದ ನೋಡಬೇಕೇನೋ. ಇಲ್ಲಿ ಒಂದು ಮಾತು. ನಾವು ಕೆಲಸ ಮಾಡುವ ಹಂತದಲ್ಲಿರುವವರು, ಶಾಲೆ, ಕಾಲೇಜಿಗೆ ಹೋಗುವವರು ಪ್ರತಿ ದಿವಸವೂ ದಿನದ ಅಂತ್ಯಕ್ಕಾಗಿ ಅಂದರೆ ಸಂಜೆಗಾಗಿ ಕಾಯುತ್ತೇವೆ, ಅಲ್ವೇ? ಬಜ್ಜಿ, ಬೋಂಡ, ಕಾಫಿ, ಪಾನಿಪೂರಿ, ಮನೆಯವರ ಜೊತೆ ಅಥವಾ ಸ್ನೇಹಿತರ ಜೊತೆ ಹರಟೆ … ಇಂಥವಕ್ಕೆ ಕಾಯುತ್ತೇವೆಲ್ಲವೇ ನಾವು? ಔಪಚಾರಿಕವಲ್ಲದ ಉಡುಪು, ಔಪಚಾರಿಕವಲ್ಲದ ವಾತಾವರಣ, ಆರಾಮದ ಚಟುವಟಿಕೆಗಳನ್ನು ದಯಪಾಲಿಸುವ ದಿನಾಂತ್ಯಕ್ಕಾಗಿ ಹಾಗೂ ವಾರಾಂತ್ಯಕ್ಕಾಗಿ ಕಾಯುವ ನಾವು ಬಾಳಿನ ಸಂಜೆಯನ್ನು ಮಾತ್ರ ಇಷ್ಟ ಪಡದಿರುವುದು ಏಕೆ?

ಮಾಗುವುದೇ ಮುಖ್ಯ – ರೈಪನಿಂಗ್ ಈಸ್ ಆಲ್ ಅಂತಾರೆ. ಬಹುಶಃ ಬಾಳು ತನ್ನ ಅತ್ಯಂತ ಸಿಹಿಯಾದ ಗುಟ್ಟುಗಳನ್ನು ಹೇಳುವುದೇ ನಮಗೆ ಮುಪ್ಪಿನಲ್ಲಾ!? ತಮ್ಮ ಪಾಡಿಗೆ ತಾವು ಆರಾಮವಾಗಿ, ಸಮಯ ಶ್ರೀಮಂತಿಕೆಯಿಂದ ಅದೆಷ್ಟು ಜೀವಗಳು ಈ ಬದುಕಿನ ರಸವನ್ನು ಸವಿಯುತ್ತಿದ್ದಾರಲ್ಲ! ಬದುಕಿನ ನಿಧಾನಶ್ರುತಿಯ ಮಾಧುರ್ಯವನ್ನು ಆನಂದಿಸುತ್ತಿದ್ದಾರಲ್ಲ! ಇವರು ಬದುಕನ್ನು ಕುರಿತು ಗೊಣಗುವುದೂ ಇಲ್ಲ, ತಮ್ಮ ನಡೆನುಡಿ-ಜೀವನಕ್ಕೆ ಬೇರೆಯವರ ಒಪ್ಪಿಗೆ ಮುದ್ರೆ ಬೇಕು ಎಂದು ಹಪಹಪಿಸುವುದೂ ಇಲ್ಲ.

*****

ಅಂದ ಹಾಗೆ `ದೇರ್ ಈಸ್ ನೋ ಗುಡ್ ಲೈಫ್ ವಿದೌಟ್ ಗುಡ್ ಪ್ಲ್ಯಾನಿಂಗ್’ ಎಂಬ ಮಾತಿದೆ. ಅಂದರೆ ಮುಪ್ಪಿನಲ್ಲಿ ಜೀವನ ಚೆನ್ನಾಗಿರಬೇಕೆಂದರೆ ನಾವು ಮಧ್ಯವಯಸ್ಸಿನಿಂದಲೇ ಒಂದಿಷ್ಟು ಯೋಜನೆ ಮಾಡಬೇಕು ಎಂದಾಯಿತಲ್ಲ.

ಸರ್ಕಾರಿ ಕಛೇರಿಗಳಲ್ಲಿ ಅಥವಾ ಬೇರೆ ಯಾವುದೇ ಕಡೆಗಳಲ್ಲಿ ಕೆಲಸ ಮಾಡುವವರಿಗೆ ನಿವೃತ್ತಿಯ ನಂತರ ಕಾಡುವ ಒಂಟಿತನ ಸಾಕಷ್ಟು ದುರ್ಭರವಾಗಿರುತ್ತದೆ ಎನ್ನುತ್ತಾರೆ. ಬೆಳಿಗ್ಗೆ ಎದ್ದರೆ `ನಾನೇನು ಮಾಡಲಪ್ಪಾ, ಮಾಡಲು ನನಗೇನೂ ಕೆಲಸವೇ ಇಲ್ಲವಲ್ಲಾ, ನಾನು ಯಾರಿಗೂ ಬೇಡದ ವ್ಯಕ್ತಿಯಾಗಿಬಿಟ್ಟೆನೇ?! ಎಂದು ಮನುಷ್ಯನಿಗೆ ಅನ್ನಿಸಿಬಿಟ್ಟರೆ ಇದಕ್ಕಿಂತ ದುರಂತ ಇನ್ನೊಂದುಂಟೇ?

ಕಾಲೇಜುಗಳಲ್ಲಿ ಅಧ್ಯಾಪಕರು ಮೊದಲನೆಯ ವರ್ಷದ ಪದವಿಗೆ ಕಾಲಿಟ್ಟ ವಿದ್ಯಾರ್ಥಿಗಳಿಗೆ ಮೊದಲ ದಿನ ಒಂದು ಕಥೆ ಹೇಳುತ್ತಾರೆ. ಒಬ್ಬ ರಾಜನ ಕಥೆ ಅದು. ರಾಜನೊಬ್ಬನಿಗೆ ಮಕ್ಕಳಿರಲಿಲ್ಲ. ತಾನು ತೀರಾ ಮುದುಕನಾದಾಗ ಮುಂದೆ ತನ್ನ ರಾಜ್ಯದ ಗತಿ ಏನು? ಯಾರು ಇದನ್ನು ಆಳುವವರು ಎಂದು ಚಿಂತಿಸಿ ತನ್ನ ಬುದ್ಧಿವಂತ ಮಂತ್ರಿಯೊಬ್ಬನಿಗೆ ತನಗೊಬ್ಬ ಸಮರ್ಥ ವಾರಸುದಾರನನ್ನು ಹುಡುಕುವಂತೆ ಹೇಳುತ್ತಾನೆ. ಆಗ ಆ ಮಂತ್ರಿಯು ಊರಿನಲ್ಲಿ ಡಂಗುರ ಹೊಡೆಸಿ ರಾಜರಾಗಲು ಇಚ್ಛಿಸುವವರನ್ನೆಲ್ಲ ಕರೆಸುತ್ತಾನೆ. ಅವರೆಲ್ಲ ಬಂದಾಗ ರಾಜರಾಗಬಯಸುವವರು ಎದುರಿಸಬೇಕಾದ ಒಂದು ಷರತ್ತಿನ ಬಗ್ಗೆ ತಿಳಿಸುತ್ತಾನೆ; ಅದೇನೆಂದರೆ ಯಾರು ರಾಜರಾಗುತ್ತಾರೋ ಅವರನ್ನು ಮೂರು ವರ್ಷ ಕಳೆದ ಕೂಡಲೇ ಆ ನಾಡಿನ ಪಕ್ಕದಲ್ಲಿರುವ ಘನಘೋರ ಕಾಡಿಗೆ ಬಿಡಲಾಗುತ್ತದೆ ಅನ್ನುವ ಷರತ್ತು! ಇದನ್ನು ಕೇಳಿದ ಬಹುತೇಕ ಮಂದಿ ಹೆದರಿ ಮನೆಗೆ ಹೋಗಿಬಿಡುತ್ತಾರೆ. ಆದರೆ ಒಬ್ಬ ಯುವಕ ಮಾತ್ರ ಷರತ್ತಿಗೆ ಒಪ್ಪಿ ಉಳಿದುಕೊಳ್ಳುತ್ತಾನೆ ಮತ್ತು ಸಂತೋಷದಿಂದ ಸಮರ್ಥವಾಗಿ ರಾಜ್ಯ ಆಳುತ್ತಾನೆ. ಮೂರು ವರ್ಷ ಮುಗಿಯುತ್ತಿದ್ದಂತೆ ಮಂತ್ರಿಗಳು ಅವನ ಬಳಿ ಬಂದು “ನಾಳೆ ನಿಮ್ಮನ್ನು ಕಾಡಿಗೆ ಒಯ್ದು ಬಿಡುತ್ತೇವೆ, ತಯಾರಾಗಿರಿ” ಎಂದಾಗ ಅವನು ಸ್ವಲ್ಪವೂ ವಿಚಲಿತನಾಗದೆ ಒಪ್ಪಿಕೊಳ್ಳುತ್ತಾನೆ. ಮಾರನೆಯ ದಿನ ಅವನಿಗೆ ಇಷ್ಟವಾದ ಊಟತಿಂಡಿಗಳನ್ನು ಕೊಟ್ಟು ಊರಿನ ಪಕ್ಕದಲ್ಲಿದ್ದ ನದಿಯನ್ನು ದೋಣಿಯಲ್ಲಿ ದಾಟಿಸಿ ಅವನನ್ನು ಕಾಡಿಗೆ ಬಿಡಲು ಹೋದವರಿಗೆ ಒಂದು ಅಚ್ಚರಿ ಕಾದಿರುತ್ತದೆ. ಕೆಲವೇ ವರ್ಷಗಳ ಹಿಂದೆ ಗೊಂಡಾರಣ್ಯವಾಗಿದ್ದದ್ದು ಈಗ ನಾಡಾಗಿರುತ್ತದೆ! ಆಗ ರಾಜನು ತಾನು ರಾಜನಾದ ದಿನದಿಂದಲೇ ಮೂರು ವರ್ಷದ ನಂತರದ ತನಗೆ ಉಂಟಾಗಬಹುದಾದ ಪರಿಸ್ಥಿತಿಯ ಘೋರತೆಯನ್ನು ನೆನೆದು ತನಗಾಗಿ ಒಂದು ನಾಡನ್ನು ರಚಿಸಿಕೊಂಡದ್ದಾಗಿ ಹೇಳುತ್ತಾನೆ! ಅಲ್ಲಿದ್ದವರೆಲ್ಲರೂ ಅವನ ಯೋಜನೆಯ ಸಾಮರ್ಥ್ಯ, ಪೂರ್ವಸಿದ್ಧತೆಗಳನ್ನು ನೋಡಿ ಮೂಗಿನ ಮೇಲೆ ಬೆರಳಿಡುತ್ತಾರೆ. ಮೂರು ವರ್ಷಗಳ ಅವಧಿಯಲ್ಲಿ ಕಾಡನ್ನು ನಾಡನ್ನಾಗಿ ಪರಿವರ್ತಿಸಿಕೊಂಡ ಕ್ರಮ ಇದು. `ಪದವಿ ಎಂಬ ಮೂರು ವರ್ಷದ ಸುರಕ್ಷಿತ ಲೋಕವು ಕೈತಪ್ಪಿ, ಘೋರ ಕಾಡಿನಂತಹ ನಿಜ ಜೀವನಕ್ಕೆ ಕಾಲಿಟ್ಟಾಗ ಅದನ್ನು ಎದುರಿಸಲು ವಿದ್ಯಾರ್ಥಿಗಳು ಮಾನಸಿಕ ಸಿದ್ಧತೆ ಹೊಂದಿರಲಿ’ ಎಂಬ ಉದ್ದೇಶದಿಂದ ಅಧ್ಯಾಪಕರು ಈ ಕಥೆ ಹೇಳುವುದು. ಆಶ್ಚರ್ಯ ಅಂದರೆ ಈ ಕಥೆ ಹೇಳುವ ಅಧ್ಯಾಪಕರೇ ಮುಂದೆ ತಮ್ಮ ಮಟ್ಟಿಗಿನ ಘೋರ ಕಾಡಾಗಬಹುದಾದ ನಿವೃತ್ತಿ ಜೀವನಕ್ಕೆ ಸಿದ್ಧರಾಗುತ್ತಾರೆ ಎಂದು ಖಚಿತವಾಗಿ ಹೇಳಲಾಗದು!

ಅಧ್ಯಾಪಕರೂ ಸೇರಿದಂತೆ ಎಲ್ಲ ವೃತ್ತಿಯವರೂ ಬಹುಶಃ ತಾವು ಕೆಲಸದಲ್ಲಿದ್ದಾಗಲೇ ನಿವೃತ್ತಿಗೆ ತುಸು ಯೋಜನೆ ಮಾಡಿಕೊಳ್ಳಬಹುದೇನೋ. ಅರೆ, ಹೌದಲ್ಲ … ಮನಸ್ಸು ಸಕಾರಾತ್ಮಕವಾಗಿ, ಆರಾಮಾಗಿದ್ರೆ ಮುಪ್ಪು ಹೊರೆಯಾಗಬೇಕಿಲ್ಲ! ಸಂಜೆಗಣ್ಣಿನ ನೋಟಕ್ಕೂ ಒಂದು ಚೆಲುವಿದೆ. ಆಸ್ವಾದಿಸುವ ಮನಸ್ಸು ನಮಗಿರಬೇಕು ಅಷ್ಟೇ. ಏನಂತೀರಿ? ಕಾಲವನ್ನು ಕುರಿತು ಮಾಡುವ ಜೀವವೊಂದು ಮಾಡುವ ಪ್ರಾರ್ಥನೆಯೊಂದರಿಂದ ನಿಮ್ಮೊಂದಿಗಿನ ಈ ಪ್ರಬಂಧರೂಪೀ ಮಾತುಕತೆಯನ್ನು ಕೊನೆ ಮಾಡಲೇ?

ಕಾಲದಲ್ಲಿ ಒಂದು ಮನವಿ
****
ಕಾಲವೇ ನಿನ್ನ ಮೇಲೆ ನನಗೆ ಕೋಪವಿಲ್ಲ
ಚಿಟ್ಟೆಯ ಹಿಂದೋಡುತ್ತಿದ್ದ ಬಾಲ್ಯವನ್ನು
ಚಿಕ್ಕಪುಟ್ಟದ್ದಕ್ಕೂ ನಗುತ್ತಿದ್ದ ಹದಿಹರೆಯವನ್ನು
ಕಾಮನಬಿಲ್ಲನ್ನು ಸೆರಗಲ್ಲಿ ಕಟ್ಟಿದ್ದ ತಾರುಣ್ಯವನ್ನು
ನಿನ್ನನ್ನೇ ಹೆದರಿಸುತ್ತಿದ್ದ ಕೂದಲ ಕಪ್ಪನ್ನು
ಕಿತ್ತುಕೊಂಡೆಯೆಂದು ಬೇಸರವಿಲ್ಲ

ನಿನ್ನಲ್ಲಿ ಒಂದೇ ಪ್ರಾರ್ಥನೆ
ಕೊಡು ನನಗೆ ನಗುಮೊಗದ ಇಳಿವಯಸ್ಸನ್ನು
ಒಳ್ಳೆಬಾಳಿನ ಕಥೆ ಹೇಳುವ ಬಿಳಿಗೂದಲನ್ನು

ಆಗ ಕಣ್ಣು ಮುದಿಯಾದರೂ ನೋಟ ಮುದಿಯಾಗದಿರಲಿ
ದೇಹ ಮೃದುವಾದಂತೆ ಮನಸ್ಸೂ ಮೃದುವಾಗಲಿ
ಆಗಲಾದರೂ ಬದುಕು ಹೃದಯ ಬಯಸಿದ ರಾಗ ಹಾಡಲಿ
ಸಾವೆಂಬುದು ಸರಿಯಾದ ಹೊತ್ತಿಗೆ ಬಂದ ಮಿತ್ರನಾಗಲಿ

ಕಿತ್ತುಕೊಂಡದಕ್ಕೆ ಬದಲು ಇಷ್ಟಾದರೂ ಕೊಡು ಕಾಲವೇ
ಹಾಗೆ ಪುಕ್ಕಟೆ ತೆಗೆದುಕೊಳ್ಳುವುದು ಚಂದವಲ್ಲ ಅಲ್ಲವೇ?