ಸಿನೆಮಾವೊಂದು ಹೇಗಿರಬೇಕು? ಅದರ ಆರಂಭ ಕಥೆಯ ಓಟ ಯಾವ ತರಹ ಇರಬೇಕು ಅಂತ್ಯ ಏನಿರಬೇಕು? ಎಷ್ಟುಹಾಡುಗಳು ಫೈಟ್ ಗಳು ಪ್ರಣಯಗಳು ಇತ್ಯಾದಿ ಇತ್ಯಾದಿ ಸವಕಲು ಫಾರ್ಮುಲಾಗಳನ್ನು ಗಾಳಿಗೆ ತೂರಿ  ದಿಟ್ಟವಾಗಿ ಎದ್ದು ನಿಂತ ಇತ್ತೀಚಿನ ಹಲವು ಚಿತ್ರಗಳಲ್ಲಿ “ಜೀರ್ಜಿಂಬೆ”  ಕೂಡ ಒಂದು.  ಬ್ರಿಟನ್ನಿನಲ್ಲಿ ಈ ಹಿಂದೆ ಪ್ರದರ್ಶನ ಕಂಡ ತಿಥಿ , ದೇವರ ನಾಡಲ್ಲಿ, ರಿಸರ್ವೇಶನ್ ಕೂಡ ವಾಸ್ತವವನ್ನು ವಿಮರ್ಶಿಸುತ್ತಾ ಇಲ್ಲಿನ ಕನ್ನಡಿಗರ ಪ್ರೀತಿಗೆ ಪಾತ್ರವಾಗಿದ್ದವು.
ಕನ್ನಡ ಚಿತ್ರವೊಂದನ್ನು ಇಂಗ್ಲೆಂಡಿನಲ್ಲಿ ಕಂಡ ಯೋಗೀಂದ್ರ ಬರೆದದ್ದು ಇಲ್ಲಿದೆ
.

 

ಸಿನಿಮಾ ಜಗತ್ತಿನಲ್ಲಿ ಹಾಗೊಂದು  ಕಾಲ ಇತ್ತು. ಒಂದು ಊರಿನ ಎರಡು ಚಿತ್ರಮಂದಿರಗಳಲ್ಲಿ ಒಂದರ ನಂತರ ಇನ್ನೊಂದು ಪ್ರದರ್ಶನಗಳಿರುವಾಗ  ಒಂದು ಚಿತ್ರಮಂದಿರದಲ್ಲಿ ಮುಗಿದ ರೀಲನ್ನು ಸೈಕಲ್ ನಲ್ಲಿ ಕಟ್ಟಿಕೊಂಡು ಇನ್ನೊಂದು ಚಿತ್ರ ಮಂದಿರಕ್ಕೆ ಮುಟ್ಟಿಸುವ ಪದ್ಧತಿ ಹಾಗು ಅನಿವಾರ್ಯತೆಗಳೆರಡೂ. ಮತ್ತೆ  ಆ ಸಿನೆಮಾದ  ರೀಲುಗಳ   ಸುರುಳಿಯಲ್ಲಿ ಅಥವಾ ಇನ್ಯಾವುದೋ  ಚಿತ್ರದ ರೀಲುಗಳಲ್ಲಿ  ಅದೇ ಅದೇ  ಕಥೆ, ಅವೇ ಅವೇ ನಟರು ಅಂತಹದೇ ಹಾಡುಗಳು ಸನ್ನಿವೇಶಗಳು  ಮತ್ತೆ ಮತ್ತೆ ಬಂದು ಹೋಗುತ್ತಿದ್ದವು.   ಇಂತಹ ನಟ ನಟಿಯರ ಇಂತಹ ನಿರ್ದೇಶಕರ ಇಂತಹ ಬ್ಯಾನರಿನ ಸಿನಿಮಾ ಹೀಗೆಯೇ  ಇರುತ್ತದೆ ಎಂದು ಮೊದಲೇ  ಹೇಳಬಹುದಿತ್ತು ಊಹಿಸಬಹುದಿತ್ತು. ವರ್ಷ ಇಡೀ ಅಂತಹುದೇ ಕಥೆಯ ಅಂತಹದೇ ಆರಂಭದ  ಅದೇ  ಅಂತ್ಯದ ನೂರಾರು   ಚಿತ್ರಗಳು  ಬರುತ್ತಿದ್ದವು.

ಇದು ಶತಮಾದ ಹಿಂದಿನ ಅಥವಾ ಎಲ್ಲೋ ಯಾರೋ ಬರೆದಿಟ್ಟ ಇತಿಹಾಸದ ಕಥೆಯಲ್ಲ, ನಾವೇ ನಮ್ಮ ಬಾಲ್ಯದಲ್ಲಿ ನೋಡಿದ ಕೇಳಿದ ಅನುಭವ. ಜಾಗತೀಕರಣ ಮತ್ತು ತಂತ್ರಜ್ಞಾನಗಳು ಜೊತೆ ಜೊತೆಯಾಗಿ ಬದುಕಿನ ಬೇರೆ ಘಟ್ಟಗಳನ್ನು ಘಳಿಗೆಗಳನ್ನು ಬದಲಿಸಿದ ಹಾಗೆ ಈಗ ಸಿನೆಮಾ ಜಗತ್ತನ್ನೂ  ಪೂರ್ಣವಾಗಿ ಬದಲಿಸಿವೆ. ಸಿನಿಮಾಗಳು ಇಂದು ಎಲ್ಲೇ ಹುಟ್ಟಲಿ ಜಗತ್ತಿನ ಎಲ್ಲ ಮೂಲೆಗಳನ್ನು ಏಕಕಾಲದಲ್ಲಿ ಮುಟ್ಟುವ ಸಾಧ್ಯತೆ ಇದೆ.  ಗಾಂಧಿನಗರದಲ್ಲಿ ಹುಟ್ಟಿದ ಚಲನಚಿತ್ರವೊಂದು ಅದೇ ವಾರ ಅಮೇರಿಕ, ಇಂಗ್ಲೆಂಡ್, ಆಸ್ಟ್ರೇಲಿಯಾ, ಕೆನಡಾ ಅಂತಲೂ ಸುತ್ತು ಹೊಡೆಯುತ್ತದೆ. ನಾವು “ಈ ಕಾಲ” ಎಂದು ಆಶ್ಚರ್ಯ ಪಡುವ ಈ ಕಾಲದಲ್ಲಿ  ಬದಲಾವಣೆ ಬರಿಯ ಪ್ರದರ್ಶನಗಳ ಮಟ್ಟಿಗೆ ಮಾತ್ರವಲ್ಲ, ಸಿನೆಮಾ ನಿರ್ಮಿಸುವ ರೀತಿ, ಬಂಡವಾಳ ಒಟ್ಟುಮಾಡುವ ಬಗೆ, ಚಲನಚಿತ್ರ ಆಧರಿಸಿದ ವಸ್ತು ಇವೆಲ್ಲ ಬದಲಾಗಿವೆ. ಅತ್ಯುಕೃಷ್ಟ ಅಲ್ಲದಿದ್ದರೂ ನೋಡಬಹುದಾದ   ಸಿನೆಮಾವೊಂದನ್ನು ನಿರ್ಮಿಸಲು ಬೇಕಾಗುವ ಸಾಧನ ಪರಿಕರ  ಸಲಕರಣೆಗಳು ಕೈಗೆಟುಕುವ ಬೆಲೆಯಲ್ಲಿ ಸಿಗುವಂತಾಗಿದೆ. ಗಾಂಧಿನಗರದಿಂದ ದೂರದಲ್ಲೆಲ್ಲೋ, ಸ್ಥಳೀಯ ಭಾಷೆಯಲ್ಲೋ ಆಡುಮಾತಿನಲ್ಲೋ ತೆಗೆದ ಸಿನೆಮಾವು ಚಿತ್ರಮಂದಿರದಲ್ಲಿ ನೂರು ದಿನ ಓಡಿದ ದಾಖಲೆ ಇದೆ.  ಹೊಸ ಕಥೆಗಳು, ಹೊಸ ವಿಚಾರಗಳು, ಹೊಸ ನೋಟಗಳು ಒಟ್ಟಾಗಿ ಕೆಲಸ ಮಾಡುವುದು ಸಾಮಾನ್ಯ ಆಗುತ್ತಿದೆ. ಮುಖ್ಯ ಉದ್ಯೋಗ  ಯಾವುದೇ ಕ್ಷೇತ್ರದಲ್ಲಿ  ಇದ್ದರೂ ಹವ್ಯಾಸಿಯಾಗಿಯೇ ಸಿನೆಮಾ ನಿರ್ಮಿಸುತ್ತಾ ಮುಂದೊಂದು ದಿನ ಪೂರ್ಣಕಾಲಿಕ ಚಿತ್ರಕಲಾವಿದರೋ ನಿರ್ದೇಶಕರೋ ತಂತ್ರಜ್ಞರೊ  ಆದ ಕತೆಗಳಿವೆ. ಇವೆಲ್ಲ ಒಟ್ಟಾಗಿ… “ಈ ಕಾಲ ಕನ್ನಡ ಸಿನೆಮಾಗಳ ಮಟ್ಟಿಗೆ  ಸೃಜನಶೀಲ ಮಾತ್ರವಲ್ಲ ಪ್ರಯೋಗಶೀಲವೂ ಹೌದು” ಎಂಬಂತಾಗಿದೆ . ಗಾಂಧಿನಗರಕ್ಕೆ ಕಾಲಿಡದವರೂ, ಸಿನೆಮಾ ಹಿನ್ನೆಲೆಯೇ ಇಲ್ಲದವರೂ,  “ಬಿಗ್ ಬ್ಯಾನರ್” ಗಳ ಕೃಪಾಕಟಾಕ್ಷ  ದೊರೆಯದವರೂ ಕನ್ನಡ ಸಿನೆಮಾಲೋಕದಲ್ಲಿ ಚರ್ಚೆಗೊಳಗಾಗುವ, ನೋಡಿದವರ ಮನಸ್ಸನ್ನು ಹಿಡಿದಿಡುವ ಚಿತ್ರ ನೀಡುತ್ತಿದ್ದಾರೆ. ಚಿತ್ರದ ಬಂಡವಾಳ  ಕಡಿಮೆ ಇದ್ದರೂ,  ಚಿತ್ರದ  ಹೆಸರು ಹಿರಿದಾಗುವ  ಸಾಧ್ಯತೆ ಇದೆ.  ಬಜೆಟ್  ಸಣ್ಣದಾದರೂ ಕೀರ್ತಿ ದೊಡ್ಡದಾದ  ಉದಾಹರಣೆಗಳಿವೆ.

ಸಿನಿಮಾಗಳು ಇಂದು ಎಲ್ಲೇ ಹುಟ್ಟಲಿ ಜಗತ್ತಿನ ಎಲ್ಲ ಮೂಲೆಗಳನ್ನು ಏಕಕಾಲದಲ್ಲಿ ಮುಟ್ಟುವ ಸಾಧ್ಯತೆ ಇದೆ.  ಗಾಂಧಿನಗರದಲ್ಲಿ ಹುಟ್ಟಿದ ಚಲನಚಿತ್ರವೊಂದು ಅದೇ ವಾರ ಅಮೇರಿಕ, ಇಂಗ್ಲೆಂಡ್, ಆಸ್ಟ್ರೇಲಿಯಾ, ಕೆನಡಾ ಅಂತಲೂ ಸುತ್ತು ಹೊಡೆಯುತ್ತದೆ. ನಾವು “ಈ ಕಾಲ” ಎಂದು ಆಶ್ಚರ್ಯ ಪಡುವ ಈ ಕಾಲದಲ್ಲಿ  ಬದಲಾವಣೆ ಬರಿಯ ಪ್ರದರ್ಶನಗಳ ಮಟ್ಟಿಗೆ ಮಾತ್ರವಲ್ಲ, ಸಿನೆಮಾ ನಿರ್ಮಿಸುವ ರೀತಿ, ಬಂಡವಾಳ ಒಟ್ಟುಮಾಡುವ ಬಗೆ, ಚಲನಚಿತ್ರ ಆಧರಿಸಿದ ವಸ್ತು ಇವೆಲ್ಲ ಬದಲಾಗಿವೆ.

ಇಂತಹದೊಂದು ಸಾಧ್ಯತೆಗೆ, ಉದಾಹರಣೆಗೆ ಮತ್ತೆ ಸಾಕ್ಷಿಯಾದದ್ದು  ಮೊನ್ನೆ ಆದಿತ್ಯವಾರ ಬ್ರಿಸ್ಟಲ್ ಅಲ್ಲಿ  ಕಂಡ “ಜೀರ್ಜಿಂಬೆ” ಚಲನಚಿತ್ರ. ಸಿನೆಮಾವೊಂದು ಹೇಗಿರಬೇಕು? ಅದರ ಆರಂಭ ಕಥೆಯ ಓಟ ಯಾವ ತರಹ ಇರಬೇಕು ಅಂತ್ಯ ಏನಿರಬೇಕು? ಎಷ್ಟುಹಾಡುಗಳು ಫೈಟ್ ಗಳು ಪ್ರಣಯಗಳು ಇತ್ಯಾದಿ ಇತ್ಯಾದಿ ಸವಕಲು ಫಾರ್ಮುಲಾಗಳನ್ನು ಗಾಳಿಗೆ ತೂರಿ  ದಿಟ್ಟವಾಗಿ ಎದ್ದು ನಿಂತ ಇತ್ತೀಚಿನ ಹಲವು ಚಿತ್ರಗಳಲ್ಲಿ “ಜೀರ್ಜಿಂಬೆ”  ಕೂಡ ಒಂದು.  ಬ್ರಿಟನ್ನಿನಲ್ಲಿ ಈ ಹಿಂದೆ ಪ್ರದರ್ಶನ ಕಂಡ ತಿಥಿ , ದೇವರ ನಾಡಲ್ಲಿ, ರಿಸರ್ವೇಶನ್ ಕೂಡ ವಾಸ್ತವವನ್ನು ವಿಮರ್ಶಿಸುತ್ತಾ ಇದೇ  ಸಾಲಿನಲ್ಲಿ ನಿಲ್ಲುವ ಚಲನಚಿತ್ರಗಳಾಗಿ ಇಲ್ಲಿನ ಕನ್ನಡಿಗರ ಪ್ರೀತಿಗೆ ಪಾತ್ರವಾಗಿದ್ದವು.  “ಜೀರ್ಜಿಂಬೆ” ಬೆಂಗಳೂರಿನಿಂದ ೭೫ ಕಿಲೋಮೀಟರು ದೂರದ ದೇವಘಟ್ಟ ತಾಲೂಕಿನ ತಿಪ್ಪಸಂದ್ರದ ಬ್ಯಾಕಲಳ್ಳಿಯಲ್ಲಿ ನಡೆಯುವ ಕಥೆ.  ಭಾರತದಲ್ಲಿ  ಅನಿಷ್ಟ ಆಚರಣೆಗಳು, ಸಾಮಾಜಿಕ ಅನ್ಯಾಯಗಳು  ಉತ್ತರ ಭಾರತದಲ್ಲೆಲ್ಲೋ, “ಬಿಮಾರು ” ರಾಜ್ಯಗಳಲ್ಲೆಲ್ಲೋ  ಅಥವಾ ನಮ್ಮ ಕಣ್ಣಿಂದ ಬಹುದೂರದಲ್ಲೆಲ್ಲೋ  ನಡೆಯುತ್ತದೆ ಎನ್ನುವ ಭ್ರಮೆಯಲ್ಲಿ  ಇರುವವರು  ಅವಾಕ್ಕಾಗುವಂತೆ ಕರ್ನಾಟಕದ ಕೆಲ ಹಳ್ಳಿಗಳಲ್ಲಿ ಇಂದೂ  ನಡೆಯುವ  ಬಾಲ್ಯವಿವಾಹದ ಕಥೆಯನ್ನು ಹೇಳುವ ಚಿತ್ರವಿದು.

ಭಾರತದಲ್ಲಿ ಅತಿ ಹೆಚ್ಚು ಬಾಲ್ಯವಿವಾಹ ನಡೆಯುವ ಕುಖ್ಯಾತಿಯ  ಜಾರ್ಖಂಡ್ ರಾಜ್ಯದಲ್ಲಿ ನಡೆದ ಸತ್ಯ ಕಥೆಯನ್ನಾಧರಿಸಿ ತೆಗೆದಿರುವ ಈ ಸಿನಿಮಾವನ್ನು,  ಅದೇ ವಿಷಯದ ಕುಖ್ಯಾತಿಯಲ್ಲಿ ಎರಡನೆಯ ಸ್ಥಾನದಲ್ಲಿ ಇರುವ ಕರ್ನಾಟಕದ ಹಳ್ಳಿಯ ಪರಿಸರಕ್ಕೆ  ಹೊಂದಿಸಿಕೊಂಡು ಹೆಣೆಯಲಾಗಿದೆ.  ಎಂಟನೆಯ ತರಗತಿಗೆ ಹೋಗುವ ಬ್ಯಾಕಾಲಹಳ್ಳಿಯ ರುದ್ರಿ ಈ ಕಥೆಯ ಹೋರಾಟಗಾರ್ತಿ  ನಾಯಕಿ; ” ಕನಸು ಯಾರಪ್ಪನ ಸೊತ್ತಲ್ಲ..” ಎಂದು ಸಡ್ಡು ಹೊಡೆದು ಹೇಳುವ  ಛಲಗಾತಿ. ನಮ್ಮನ್ನು ಹೊರಗಿನಿಂದ ದಾಳಿಗೈದು ನಾಶ ಮಾಡಬಲ್ಲ ಯಾವುದೊ ದೇಶದ ಕ್ಷಿಪಣಿಗಳು, ಇನ್ಯಾರೋ ದೂರದವರು  ಹೊಡೆಯುವ ಗುಂಡುಗಳು, ಮಸೆಯುವ ಕತ್ತಿಗಳು ಇವೆಲ್ಲಕ್ಕಿಂತ ಹೆಚ್ಚು  ಭೀಕರವಾದದ್ದು  ಮತ್ತು ನಿತ್ಯವಾಸ್ತವವಾದುದು ನಮ್ಮ ಆಸುಪಾಸಿನನಲ್ಲೆ ಇದ್ದುಕೊಂಡು ನಮ್ಮನ್ನು ಹಿಡಿದು ಹಿಂಸಿಸುವ  ನಮ್ಮ ಸಮಾಜದ ಸ್ವಾರ್ಥ ಅಸೂಯೆ ಮೂಢನಂಬಿಕೆಗಳು ಎಂದು ಮತ್ತೆ ನೆನಪು ಮಾಡಿಸುತ್ತದೆ ಈ ಚಿತ್ರ. ಹೆಣ್ಣುಮಕ್ಕಳು ಬಲಿಯಾಗುವ ವಿಹ್ವಲ ಸುದ್ದಿಗಳು ಹೆಚ್ಚು ಹೆಚ್ಚು ಸಾಮಾನ್ಯವಾಗುತ್ತಿರುವ ಈ ಹೊತ್ತಿನಲ್ಲಿ, ಮತ್ತೆ ಅಂತಹ ಸುದ್ದಿಗಳಿಗೆ ಸಬೂಬುಗಳನ್ನು ಕಂಡುಹಿಡಿದು  ಬಾಯಿಮುಚ್ಚಿಸುವ ಹುನ್ನಾರದ ಈ ಕಾಲದಲ್ಲಿ  ನಮ್ಮ ನಿಜಶತ್ರುಗಳು ನಮ್ಮೊಳಗೇ ಇದ್ದಾರೆ, ನಮ್ಮ ಆಚೀಚೆಯೇ ಇದ್ದಾರೆ ಎಂದು ಈ ಚಿತ್ರ ಹೇಳುತ್ತದೆ. ಸಾಮಾನ್ಯ ಮತ್ತು ಸಹಜ  ಎನಿಸುವ ಕತೆ, ನಿರೂಪಣೆ, ನಟನೆ “ಜೀರ್ಜಿಂಬೆ”ಯ ಜೀವಾಳ.

ಕರ್ನಾಟಕದ ಚಿತ್ರಮಂದಿರಗಳಲ್ಲಿ ಇನ್ನೂ ತೆರೆಕಾಣದ ಈ ಚಿತ್ರ ಅಮೇರಿಕ ಮತ್ತು ಇಂಗ್ಲೆಂಡ್ ನಲ್ಲಿನ  ಕೆಲವು ಊರುಗಳಲ್ಲಿ ಪ್ರದರ್ಶನ ಕಂಡಿದೆ. ಇದೇ  ವರ್ಷದ ಜುಲೈ ಆಗಸ್ಟ್ ಮಾಸದಲ್ಲಿ ಕರ್ನಾಟಕದಲ್ಲಿ ಚಿತ್ರ ಮಂದಿರಗಳಲ್ಲಿ ಬಿಡುಗಡೆಗೊಳಿಸುವ, ನಂತರ ಶಾಲೆ ಕಾಲೇಜುಗಳಲ್ಲಿ ಹಳ್ಳಿ ಹಳ್ಳಿಗಳಲ್ಲಿ ತೋರಿಸುವ  ಯೋಜನೆಯೂ ಇದೆ. ತೆರೆ ಕಂಡಲ್ಲೆಲ್ಲ “ಜೀರ್ಜಿಂಬೆ”, ಬ್ಯಾಕಾಲಹಳ್ಳಿಯ ರುದ್ರಿ, ಅವಳ ಸೈಕಲ್ ಸವಾರಿ ಮನಸೂರೆಗೊಂಡಿವೆ. ಚಿತ್ರ ನೋಡಿ ಹೊರಬರುವವರೆಲ್ಲರೂ  ಇದು ಬರಿಯ ನೋಡಬಹುದಾದ ಚಿತ್ರ ಮಾತ್ರ ಅಲ್ಲ; ನೋಡಲೇಬೇಕಾದ ಚಿತ್ರವೂ ಹೌದು ಎಂದೂ  ಹೇಳುವಂತಿದೆ. ನಮ್ಮ ಸಮಾಜದ ಒಂದು  ಛೇಧನೋಟವನ್ನು ನಿರ್ಭಿಡೆಯಿಂದ ಮನಸ್ಸು  ಕಲಕುವಂತೆ  ಹೇಳುವ ಕೆಲಸ, ಆ ಕೆಲಸದ ಹಿಂದಿನ ನಾಜೂಕಾದ ತಯಾರಿ  ಕನ್ನಡ  ನಾಡಿನ  ಚಿತ್ರ ತಯಾರಕರಾದ ಕಾರ್ತಿಕ್  ಸರಗೂರರಿಂದ  ಆಗಿರುವುದು ಸಿನೆಮಾಲೋಕದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ.

ನಮ್ಮನ್ನು ಹೊರಗಿನಿಂದ ದಾಳಿಗೈದು ನಾಶ ಮಾಡಬಲ್ಲ ಯಾವುದೊ ದೇಶದ ಕ್ಷಿಪಣಿಗಳು, ಇನ್ಯಾರೋ ದೂರದವರು  ಹೊಡೆಯುವ ಗುಂಡುಗಳು, ಮಸೆಯುವ ಕತ್ತಿಗಳು ಇವೆಲ್ಲಕ್ಕಿಂತ ಹೆಚ್ಚು  ಭೀಕರವಾದದ್ದು  ಮತ್ತು ನಿತ್ಯವಾಸ್ತವವಾದುದು ನಮ್ಮ ಆಸುಪಾಸಿನನಲ್ಲೆ ಇದ್ದುಕೊಂಡು ನಮ್ಮನ್ನು ಹಿಡಿದು ಹಿಂಸಿಸುವ  ನಮ್ಮ ಸಮಾಜದ ಸ್ವಾರ್ಥ ಅಸೂಯೆ ಮೂಢನಂಬಿಕೆಗಳು ಎಂದು ಮತ್ತೆ ನೆನಪು ಮಾಡಿಸುತ್ತದೆ ಈ ಚಿತ್ರ. ಹೆಣ್ಣುಮಕ್ಕಳು ಬಲಿಯಾಗುವ ವಿಹ್ವಲ ಸುದ್ದಿಗಳು ಹೆಚ್ಚು ಹೆಚ್ಚು ಸಾಮಾನ್ಯವಾಗುತ್ತಿರುವ ಈ ಹೊತ್ತಿನಲ್ಲಿ, ಮತ್ತೆ ಅಂತಹ ಸುದ್ದಿಗಳಿಗೆ ಸಬೂಬುಗಳನ್ನು ಕಂಡುಹಿಡಿದು  ಬಾಯಿಮುಚ್ಚಿಸುವ ಹುನ್ನಾರದ ಈ ಕಾಲದಲ್ಲಿ  ನಮ್ಮ ನಿಜಶತ್ರುಗಳು ನಮ್ಮೊಳಗೇ ಇದ್ದಾರೆ, ನಮ್ಮ ಆಚೀಚೆಯೇ ಇದ್ದಾರೆ ಎಂದು ಈ ಚಿತ್ರ ಹೇಳುತ್ತದೆ.

ಹಾಗಂತ “ಬಾಲ್ಯವಿವಾಹ ” ಎನ್ನುವ ವಿಷಯ  ಬರಿಯ ಭಾರತಕ್ಕೆ ಸೀಮಿತವಾದ ಸಮಸ್ಯೆ ಅಲ್ಲ, ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ಮಟ್ಟದಲ್ಲಿ ಇದೆ. ಸಣ್ಣ ಪ್ರಮಾಣದಲ್ಲಿ ಬ್ರಿಟನ್ನಿನಲ್ಲಿ ಕೂಡ ಇದೆ. ಇಂಗ್ಲೆಂಡ್ ನಲ್ಲಿ ಮದುವೆಯ ಕನಿಷ್ಠ ಪ್ರಾಯ ೧೮ ಎಂದೂ, ನಮ್ಮ ನೆರೆಯ ಸ್ಕಾಟ್ಲೆಂಡ್ ನಲ್ಲಿ ೧೬ ವರುಷ ಎಂದೂ ಕಾನೂನು ಪುಸ್ತಕಗಳಲ್ಲಿ ಬರೆಯಲ್ಪಟ್ಟಿದೆ. ಪ್ರತಿವರ್ಷವೂ  ಇಲ್ಲಿನ ಕೆಲವು ಸಮೂಹಗಳಲ್ಲಿ  ಐದರಿಂದ ಎಂಟು ಸಾವಿರ ಹೆಣ್ಣು ಮಕ್ಕಳು ಒತ್ತಾಯಪೂರ್ವಕ ತಮ್ಮ ಹದಿನಾರೋ  ಹದಿನೆಂಟನೆಯದೋ   ವಯಸ್ಸಿನ ಒಳಗೇ  ಮದುವೆಗೆ ತಳ್ಳಲ್ಪಡುತ್ತಾರೆ. ಇಲ್ಲಿನ ಕಾನೂನಿನೊಳಗಿನ  ಸಣ್ಣ ಸಣ್ಣ ಚಡಿಗಳನ್ನು ದುರುಪಯೋಗಪಡಿಸಿಕೊಂಡು ಹೆತ್ತವರು ಮಕ್ಕಳನ್ನು ಅಪ್ರಾಪ್ತ ವಯಸ್ಸಿಗೆ ಮದುವೆ ಮಾಡಿಸುವುದು ಇಲ್ಲಿನ ಕೆಲ ವರ್ಗಗಳಲ್ಲಿ ನಡೆಯುತ್ತದೆ. ಅಂತಹ ಮದುವೆಗಳು ಸಂಖ್ಯೆಯಲ್ಲಿ ಕಡಿಮೆ ಎನಿಸಿದರೂ,   ಒತ್ತಾಯದಿಂದ ಮಾಡಿಸುವ ಮದುವೆಗಳಾದ್ದರಿಂದ   ಕಾನೂನು ಬಾಹಿರ ಮತ್ತು  ಅಪರಾಧ ಎಂದೇ ಇಲ್ಲಿಯೂ  ಪರಿಗಣಿಸಲ್ಪಡುತ್ತವೆ.  ಸಮಸ್ಯೆಯ ಗಾತ್ರ, ಸಿಗುವ  ದೃಷ್ಟಾಂತಗಳ ಅಂಕೆ ಸಂಖ್ಯೆಗಳು ಭಾರತದಷ್ಟು ಅಲ್ಲದ್ದರಿಂದ ಹೆಚ್ಚು ಸುದ್ದಿಯಾಗದೆಯೇ ಅಥವಾ ಜಾಗತಿಕ ಮಟ್ಟದಲ್ಲಿ ಸುದ್ದಿ ಆಗದೆಯೇ ಆಗೊಮ್ಮೆ ಈಗೊಮ್ಮೆ ಬ್ರಿಟನ್ನಿನ ಸಂಸತ್ತಿನಲ್ಲಿ ಸುದ್ದಿಯಾಗಿ ತಣ್ಣಗಾಗುತ್ತವೆ.

ಜಗತ್ತಿನಲ್ಲಿ ಸಾಮಾಜಿಕ ಸಮಸ್ಯೆಗಳ ವಿಷಯ ಬಂದಾಗ ಬೇಕೆಂದರೂ ಬೇಡ ಎಂದರೂ ಹೊರಗಿನವರಿಗೆ ಭಾರತ  ಉದಾಹರಣೆಯಾಗಿ ,”ಸಬ್ಜೆಕ್ಟ್” ಆಗಿ ಕಾಣುತ್ತದೆ. ವೈವಿದ್ಯಮಯ  ದೇಶ, ಅಪಾರ ಜನಸಂಖ್ಯೆ, ಸಾಮಾಜಿಕ ಅಸಮತೋಲನ, ಮೂಢನಂಬಿಕೆಗಳು,  ಹೆಜ್ಜೆ ಹೆಜ್ಜೆಗೂ ಭ್ರಷ್ಟಾಚಾರ, ಸ್ವಾರ್ಥ  ವ್ಯವಸ್ಥೆಗಳ  ಅವ್ಯವಸ್ಥೆಗಳ   ಅವಲೋಕನ ಮಾಡಲು ಮಾಡಿಸಲು ಬ್ರಿಟನ್, ಅಮೆರಿಕಗಳಿಂದ ಕ್ಯಾಮೆರಾ ಹಿಡಿದು ಬಂದು ಸಾಕ್ಷ್ಯಚಿತ್ರ ನಿರ್ಮಿಸುತ್ತಾರೆ. ಅಂತಹ ಹಲವು ಚಿತ್ರಗಳು ದೂರದಲ್ಲೆಲ್ಲೋ ಇರುವವರಿಗೆ    ಟಿವಿಯ ಮುಂದೆ ಕುಳಿತು ವಿಮರ್ಶೆ ಮಾಡಲು  ಅನುಕೂಲ  ಆಗಿವೆ. ಆದರೆ ಸಮಸ್ಯೆಯ ಆಸುಪಾಸಿನಲ್ಲಿ ಸರಿಯಾದ  ಪರಿಣಾಮ ಬೀರುವಲ್ಲಿ  ವಿಫಲ ಆಗಿವೆ. ಇನ್ನು ಕೆಲವು ಸಾಕ್ಷ್ಯಚಿತ್ರಗಳು “ಹೊರಗಿನವರಿಗ್ಯಾಕೆ ನಮ್ಮ ದೇಶದ ಉಸಾಬರಿ” ಎಂಬ ವಾದದಲ್ಲಿ    ತೀವ್ರ ಟೀಕೆಗೂ ಪ್ರತಿಭಟನೆಗೂ  ಗುರಿಯಾಗಿವೆ.  ಭಾರತದ ಸಾಮಾಜಿಕ ಸ್ಥಿತಿಗತಿಯ  ಬಗ್ಗೆ ದೂರದ ಬ್ರಿಟನ್ನಿನ ಬಿಬಿಸಿ ಮಾಧ್ಯಮ ಸಾಕ್ಷ್ಯಚಿತ್ರಗಳನ್ನು ಮಾಡಿದ ಉದ್ದದ  ಪಟ್ಟಿಯೇ ಇದೆ. ಸಾಕ್ಷ್ಯಚಿತ್ರವೊಂದನ್ನು ಹೇಗೆ ನಿರ್ಮಿಸಬೇಕು ಎನ್ನುವ ಬಗ್ಗೆ   ಬಿಬಿಸಿ, ನ್ಯಾಷನಲ್ ಜಿಯಾಗ್ರಫಿಯಂತಹ ಮಾಧ್ಯಮ ಸಂಸ್ಥೆಗಳಿಂದ ಕಲಿಯಬೇಕಾದದ್ದು ಬಹಳ ಇದ್ದರೂ, ಆ ಸಂಸ್ಥೆಗಳು ನಮ್ಮ ನಾಡಿನಲ್ಲಿ ಬಂದು ಎತ್ತಿ ತೋರಿಸಿದ ಸಮಸ್ಯೆಗಳ ಬಗ್ಗೆ ಯೋಚಿಸಬೇಕಾದದ್ದು ಅವಶ್ಯಕ;  ಆದರೂ, ನಮ್ಮ ಸಮಸ್ಯೆಗಳಿಗೆ, ಜಿಜ್ಞಾಸೆಗಳಿಗೆ  ನಾವೇ ಕನ್ನಡಿ ಹಿಡಿಯುವ ಕೆಲಸ ಭಾರತದಲ್ಲಿ   ಇನ್ನೂ ಹೆಚ್ಚಾಗಬೇಕಾದದ್ದು ಇವತ್ತಿನ ತುರ್ತು ಅಗತ್ಯವಾಗಿದೆ. ವಾಸ್ತವದ ಚಿತ್ರ ಬರೆಯುವ ಸತ್ವಯುತ  ಚಲನಚಿತ್ರಗಳು ಮತ್ತು  ನಾವು ಕಂಡೂ ಕಾಣದಂತಹ ವಿಷಯಗಳ ಬಗ್ಗೆ ಮುಕ್ತವಾಗಿ  ಮಾತಾಡುವ ಸಾಕ್ಷ್ಯಚಿತ್ರಗಳು ನಮ್ಮಲ್ಲೇ ತಯಾರಾಗುವಂತಾಗಬೇಕು ಎನ್ನುವ ಆಸೆ ಬ್ರಿಸ್ಟಲ್ ನಲ್ಲಿ ಸಿನೆಮಾ ನೋಡಿ ಬಂದವರದ್ದು. ಇಂತಹ  ಚಿತ್ರಗಳು ಶಾಲೆ ಕಾಲೇಜುಗಳಲ್ಲಿ ಅಲ್ಲದೇ ಸರಕಾರೀ ಖಾಸಗೀ ಕಚೇರಿಗಳಲ್ಲೂ ಪೇಟೆ ಹಳ್ಳಿಗಳಲ್ಲೂ   ಪ್ರದರ್ಶನಗೊಳ್ಳಬೇಕು.  ದೂರದರ್ಶನಗಳಲ್ಲೂ ಪ್ರಸಾರಗೊಳ್ಳಬೇಕು. ಮತ್ತು ಮುಂದೆ ತಯಾರಾಗುವ  ಚಿತ್ರಗಳಿಗೆ  “ಜೀರ್ಜಿಂಬೆ” ಸ್ಪೂರ್ತಿ ಆಗಬೇಕು. ಮತ್ತೆ ಈ  ಚಿತ್ರವನ್ನು  ನೋಡಿದವರಿಗೆ ರುದ್ರಿಯಂತಹ ಪಾತ್ರ  ಹಗಲಲ್ಲೂ  ಕನಸಲ್ಲೂ ಕಾಡಬೇಕು. ಚಲನಚಿತ್ರದೊಳಗೆ ಬ್ಯಾಕಾಲಹಳ್ಳಿಯ ಪೋರಿಗೆ ಸಿಕ್ಕ ಜಯ ಹೊರಗೂ  ಪ್ರತಿಧ್ವನಿಸಬೇಕು.

(ಚಿತ್ರಗಳು : ಗಣಪತಿ ಭಟ್ ಹಾಗು ಗುರುದೇವ್ ನಾಗರಾಜ್ )