ಬೆಂಗಳೂರಿನ ಹೃದಯಭಾಗದಲ್ಲಿರುವ ಅವೆನ್ಯೂ ರಸ್ತೆಯಲ್ಲಿ ತಿರುಗಾಡಿದಾಗ ಪ್ರಿಯವಾದದ್ದು ಹಾಗೇ ಇರುವ ಪೇಟೆ ಬೀದಿಗಳು ಮತ್ತು ಅವುಗಳದ್ದೇ ಆದ ಒಂದು ಛಾಪು. ಇಲ್ಲಿ ಕಾಣುವುದು ಹಳತೊಂದು ಸಮಾಜದ ಹೆಗ್ಗುರುತಾದ ಕಸುಬುಗಾರಿಕೆಗಳ ಮುಂದುವರಿಕೆ. ಇಪ್ಪತ್ತೊಂದನೇ ಶತಮಾನದ ಮಾಲ್, ಸೂಪರ್ ಮಾರ್ಕೆಟ್ ಮತ್ತು ಮೆಟ್ರೋಗಳ ಪ್ರಪಂಚದಲ್ಲಿ ಐಟಿ ಮತ್ತು ಗ್ಲೋಬಲ್ ಕಾರ್ಪೊರೇಟ್ ಪೈಪೋಟಿಗಳ ನಡುವೆ ಬದುಕುತ್ತಾ ಇನ್ನೂ ಕಂಗೊಳಿಸುತ್ತಿರುವ ಅಂಕುಡೊಂಕು ಪೇಟೆ ಬೀದಿಗಳಲ್ಲಿ ಕಾರ್ಯತತ್ಪರರಾಗಿರುವ ಸಾವಿರಾರು ಕಸುಬುದಾರರನ್ನು ನೋಡಿದರೆ ಕ್ಯಾಪಿಟಲಿಸ್ಟ್ ಪ್ರಪಂಚದ ಟೊಳ್ಳು, ಭ್ರಮೆ ಮನಸ್ಸಿಗೆ ತಟ್ಟುತ್ತದೆ.
ಡಾ. ವಿನತೆ ಶರ್ಮ ಬರೆಯುವ ಆಸ್ಟ್ರೇಲಿಯಾ ಪತ್ರ

ಸಂಗೀತದ ವಾದ್ಯಮೇಳವೆಂದರೆ ಅದಕ್ಕೇನೊ ಒಂದು ರೀತಿಯ ವಿಶೇಷ ಸ್ಥಾನವಿದೆ. ತಬಲಾ, ಶಹನಾಯಿ, ನಾದಸ್ವರ, ಮೃದಂಗ, ಘಟಂ, ಕೊಳಲು, ಹಾರ್ಮೋನಿಯಂ, ತಮಟೆ, ಡೋಲು ಮುಂತಾದ ವಾದ್ಯಗಳ ಮೇಲೆ ಮನುಷ್ಯರ ಬೆರಳುಗಳು, ಕೈಗಳು ಹರಿದಾಡುತ್ತಿದ್ದು, ಅವು ಹುಟ್ಟಿಸುವ ನಾನಾ ವಿಧಗಳ ಮಧುರ ನಾದವನ್ನು ಕೇಳುತ್ತಿದ್ದರೆ ಆಹಾ ಆಹಾ… ಕಂಗಳು ತಮ್ಮಂತೆ ತಾವೇ ಮುಚ್ಚಿಕೊಳ್ಳುತ್ತವೆ. ಆ ಕೆಲ ಕ್ಷಣಗಳು ನಮ್ಮದಾಗಿಬಿಡುವ ಸಮಯವಿದೆ ನೋಡಿ ಅದು ಬೇರೆಯದೇ ಲೋಕದ ಅನುಭೂತಿ. ಒಂದಕ್ಕೊಂದು ಸಂಬಂಧವೇ ಇರದಿದ್ದರೂ, ಇದು ಹೇಗೆಂದರೆ ಆಸ್ಟ್ರೇಲಿಯಾದ ರಾಣಿರಾಜ್ಯದಲ್ಲಿನ ಸಮಶೀತೋಷ್ಣ ವಲಯದ ಸಮುದ್ರದ ನೀರಿನಲ್ಲಿ ಕಣ್ಣುಮುಚ್ಚಿಕೊಂಡು ಅಲೆಗಳ ಮೇಲೆ ತೂಗುಯ್ಯಾಲೆಯಾಡುತ್ತಾ ತೇಲಾಡುವ ಸುಖದಂತೆ!

ಬೆಂಗಳೂರಿನ ಅಪ್ಪನ ಮನೆಯಲ್ಲಿ ಕೂತಿದ್ದಾಗ ಎದುರಿನ ಆಚೆಕಡೆ ದೊಡ್ಡ ದೇವಸ್ಥಾನದಲ್ಲಿ ಮದುವೆ ಮೇಳ ಕೇಳುತ್ತಿತ್ತು. ನನ್ನ ಕಿವಿಗಳು ಶಹನಾಯಿ, ನಾದಸ್ವರ, ತಬಲಾಗಳ ಸಂಗೀತವನ್ನು ಗುರುತಿಸಿದ್ದವು. ಮಾತನಾಡುವುದನ್ನು ಬಿಟ್ಟು ಸುಮ್ಮನಾದೆ. ಈ ವಾರವಷ್ಟೇ ತೊಂಭತ್ತು ವರ್ಷ ತುಂಬಿರುವ ಹಿರಿಯರಾದ ಅಪ್ಪ, ‘ನಾನು ಹೇಳಿದ್ದು ಕೇಳಸ್ತಾ’ ಎಂದಾಗ ಅವರನ್ನು ಮಿಕಿಮಿಕಿ ನೋಡಿ ‘ಇಲ್ಲ, ಮದುವೆ ಮೇಳ ಕೇಳಿಸ್ತು’ ಎಂದೆ. ದಿನವೂ ಅದೆಲ್ಲಾ ಇದ್ದದ್ದೇ ಬಿಡು ಎಂದ ಅಪ್ಪನಿಗೆ ದೇವಸ್ಥಾನದಲ್ಲಿ ನಡೆಯುವ ಎಲ್ಲಾ ಶುಭಕಾರ್ಯಗಳೂ ಕೇಳಿಸುತ್ತವೆ, ಕಾಣಿಸುತ್ತವೆ. ಹಾಗೇ ಮಧ್ಯದಲ್ಲಿ ‘ಅದು ಗಟ್ಟಿಮೇಳ’ ಎಂದು ಅಪ್ಪ ಗೊಣಗಿದಾಗ ಅವರಿಟ್ಟಿದ್ದ ನಿಗಾ ನೋಡಿ ಆಶ್ಚರ್ಯವಾಗಿ ಹೋಯಿತು. ಅಂದರೆ ಅವರ ಗಮನ ಮಾತನಾಡುತ್ತಲೇ ಅತ್ತ ಕಡೆ ವಾದ್ಯಮೇಳದ ಕಡೆಯೂ ಇತ್ತು. ಮಲ್ಟಿ-ಟಾಸ್ಕಿಂಗ್‌ ತಲೆ! ಹಿರಿಜೀವಿಗಳ ಇಂಥಾ ಬುದ್ಧಿಯನ್ನು ಅಪರೂಪಕ್ಕೆ ನಮ್ಮದಾಗಿಸಿಕೊಳ್ಳುವ ನನ್ನಂಥ ‘ಪರದೇಶಿ’ಗಳಿಗೆ ಅದು ನಿಜವಾಗಿಯೂ ಎಷ್ಟು ಘನತೆಯ ವಿಷಯ ಎನ್ನಿಸಿಬಿಟ್ಟಿತು. ಜೀವನದ ಸಣ್ಣಸಣ್ಣ ಘಳಿಗೆಗಳಲ್ಲೂ ಇರುವ ಜೀವನಪ್ರೀತಿ, ಅವಕ್ಕೆ ಸಲ್ಲುವ ನಿಗಾ ಬಗ್ಗೆ, ಆ ಘಳಿಗೆಗಳ ಬಗ್ಗೆ ಮತ್ತು ಅವುಗಳಿಗೆ ಜೀವ ಕೊಡುವವರ ಬಗ್ಗೆ ಹೆಮ್ಮೆಯಾಯಿತು.

ಬೆಂಗಳೂರಿಗೆ ಬರುವ ಮುನ್ನಾ ವಾರಾಂತ್ಯ ಇದ್ದಕ್ಕಿದ್ದಂತೆ ನಮ್ಮ ಕನ್ನಡ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಸಣ್ಣ ಕತೆಯನ್ನು ಮರು ಭೇಟಿ ಮಾಡುವ ಅವಕಾಶ ಬಂದಿತ್ತು. ತೇಜಸ್ವಿ ಅವರ ಪ್ರಿಯ ಓದುಗರು ಮತ್ತು ಅಭಿಮಾನಿಗಳು ಸೇರಿ ತಯಾರಿಸಿದ್ದ ‘ಡೇರ್ ಡೆವಿಲ್ ಮುಸ್ತಾಫಾ’ ಚಲನಚಿತ್ರವು ಜೂನ್ ೮ರಂದು ಆಸ್ಟ್ರೇಲಿಯಾದಲ್ಲಿ ಬಿಡುಗಡೆಯಾಗಿತ್ತು. ಅವರ ಬರಹದ ಓದುಗಳೂ, ಅವರ ಅಭಿಮಾನಿಯೂ ಆದ ನಾನು, ಗಂಡ ಮತ್ತು ಮಕ್ಕಳನ್ನು ಜೊತೆಗೂಡಿಸಿಕೊಂಡು ಹೋಗಿ ಚಿತ್ರವನ್ನು ನೋಡಿ ಆನಂದಿಸಿದೆ. ಸೊಗಸಾದ ಕನ್ನಡ ಭಾಷೆಯನ್ನು ಪ್ರತಿಧ್ವನಿಸಿದ ಚಿತ್ರದ ಸ್ಕ್ರಿಪ್ಟ್ ಮತ್ತು ನಟನೆ ಬಹಳ ಇಷ್ಟವಾಯ್ತು. ಕಡಿಮೆ ಬಜೆಟ್ಟಿನಲ್ಲಿ ಒಂದು ಮನಃಪೂರ್ವಕ ಪ್ರಾಮಾಣಿಕ ಪ್ರಯತ್ನವನ್ನು ಮಾಡಿ ಕನ್ನಡಿಗರಿಗೆ ಇಷ್ಟು ಒಳ್ಳೆಯ ಸಿನಿಮಾ ತೋರಿಸಿದ ಇಡೀ ತಂಡಕ್ಕೆ ಸಿಕ್ಸರ್ ವಿಜಯವೇ ಸರಿ! ಇಂತಹ ಹೊಸ ಪ್ರಯೋಗಗಳು ಮತ್ತಷ್ಟು ಬರಲಿ.

ತೇಜಸ್ವಿಯವರು ಅವರ ಕೃತಿಗಳಲ್ಲಿ ಬಳಸಿದ್ದ ಬೈಗುಳ ಎಂದರೆ ನನಗೆ ಅದು ಪ್ರಿಯವಾದದ್ದು. ಕಿರಗೂರಿನ ಗಯ್ಯಾಳಿಗಳ ಬೈಗುಳೇ ಬೇರೆ; ಈ ‘ಡೇರ್ ಡೆವಿಲ್ ಮುಸ್ತಾಫಾ’ ಚಲನಚಿತ್ರದಲ್ಲಿ ಯಥೇಚ್ಛವಾಗಿದ್ದ ಬೈಗುಳೇ ಬೇರೆ. ಒಮ್ಮೊಮ್ಮೆ ಸ್ವಲ್ಪ ಅಧಿಕವಾಗಿಯೇ ‘ಭಾಷಾ ಸ್ವಚ್ಛತೆ’ ಯ ಕಡೆ ಗಮನ ಕೊಟ್ಟಿದ್ದಾರೆ, ಅದು ಬೇಕಿರಲಿಲ್ಲ ಎನ್ನಿಸಿತು. ಆದರೂವೆ, ಅಂತಹ ಅಧಿಕ ಸ್ವಚ್ಛತೆಯಲ್ಲೂ ರಾಮಾನುಜ ಅಯ್ಯಂಗಾರಿ ಪಾತ್ರವು ಹೇಳುವ ಡೈಲಾಗುಗಳು, ಅವನ ಬೈಗುಳ ಮತ್ತು ನಟ ಆದಿತ್ಯ ಅವರ ಅದ್ಭುತ ನಟನೆ ತುಂಬಾ ಹಿಡಿಸಿತು. ಅದೆಲ್ಲದರ ಪ್ರಭಾವ ಎಷ್ಟರಮಟ್ಟಿಗೆ ಆಯ್ತು ಎಂದರೆ ಆಗಲೇ ಬೆಂಗಳೂರಿಗೆ ಧಾವಿಸಿ ಅಪ್ಪಟ ಕನ್ನಡದಲ್ಲಿ ಬಾಯ್ತುಂಬ ಆ ಡೈಲಾಗ್‌ಗಳನ್ನ ಹೊಡೆಯಬೇಕು ಎನ್ನಿಸುವಷ್ಟು! ಬೆಂಗಳೂರಿಗೆ ಬಂದು ನೋಡಿದರೆ ಯಥಾಪ್ರಕಾರ ನಿತ್ಯಜೀವನದಲ್ಲಿ ಕನ್ನಡಿಗರು ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳ ಜೊತೆ ಏಗುತ್ತಾ, ಅಡ್ಜಸ್ಟ್ ಮಾಡಿಕೊಂಡು ಹೋಗುತ್ತಿದ್ದಾರೆ.

ಧಾವಿಸಿ ಬಂದು ಎಂದಾಗ ನೆನಪಿಗೆ ನುಗ್ಗಿದ್ದು ಎರಡು ವಾರಗಳ ಹಿಂದೆ ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ರಾಜ್ಯದಲ್ಲಿ ನಡೆದ ಬಸ್ ಅಪಘಾತ. ರಾಜ್ಯದ ಬಹು ಹೆಸರುವಾಸಿ ವೈನ್ ತಯಾರಿಕೆ ಮತ್ತು ವೈನ್ ದ್ರಾಕ್ಷಿತೋಟಗಳಿಗೆ ಹೆಸರಾದ ಹಂಟರ್ ವ್ಯಾಲಿ ಪ್ರಾಂತ್ಯದಲ್ಲಿ ನಡೆದ ಮದುವೆಯನ್ನು ಮುಗಿಸಿಕೊಂಡು ಆಹ್ವಾನಿತರು ದೊಡ್ಡ ಮದುವೆ ಬಸ್ಸಿನಲ್ಲಿ ವಾಪಸ್ ಆಗುತ್ತಿದ್ದರು. ಚಳಿಗಾಲದ ಮಧ್ಯರಾತ್ರಿ ಸಮೀಪದ ಸಮಯ, ಮಂಜು ಕವಿದಿದ್ದ ವಾತಾವರಣ. ವೇಗವಾಗಿ ಚಲಿಸುತ್ತಿದ್ದ ಬಸ್ ಚಿಕ್ಕದೊಂದು ವೃತ್ತವನ್ನು ಸಮೀಪಿಸಿದಾಗ ಚಾಲಕನಿಗೆ ವಾಹನದ ನಿಯಂತ್ರಣ ತಪ್ಪಿ ಬಸ್ ಪಕ್ಕಕ್ಕೆ ಉರುಳಿಕೊಂಡು ಹತ್ತು ಜನರು ಸತ್ತರು. ಕೆಲಮಂದಿ ಆಸ್ಪತ್ರೆ ಸೇರಿದರು. ನಂತರ ಚಾಲಕನಿಗೆ ಬೇಲ್ ಸಿಕ್ಕಿದೆ.

ಇಪ್ಪತೈದು ಮಿಲಿಯನ್ ಜನಸಂಖ್ಯೆ ಇರುವ ಇಂದಿನ ಆಸ್ಟ್ರೇಲಿಯಾದ ಮಟ್ಟಿಗೆ ಒಂದು ಬಸ್ ಅಪಘಾತದಲ್ಲಿ ಹತ್ತು ಜನರು ಸಾಯುವುದು ಅಪರೂಪದ ಘಟನೆ ಮತ್ತು ಆಘಾತದ ಸುದ್ದಿ. ಇದಕ್ಕೂ ಮುಂಚೆ ಭಾರತದ ಬಲಸೂರ್‌ನಲ್ಲಿ ನಡೆದ ಅತ್ಯಂತ ನೋವಿನ ರೈಲ್ವೆ ಅಪಘಾತವನ್ನು ಕುರಿತು ಆಸ್ಟ್ರೇಲಿಯಾದ ಸುದ್ದಿವಾಹಿನಿಗಳಲ್ಲಿ ವಿವರವಾಗಿ ಪ್ರಸಾರ ಮಾಡಿದ್ದರು. ಆ ದುರ್ಘಟನೆಯಲ್ಲಿ ಸುಮಾರು ಮುನ್ನೂರು ಜನರು ಸತ್ತ ಬಗ್ಗೆ ಆಸ್ಟ್ರೇಲಿಯಾದ ಸಾಮಾನ್ಯ ಜನರಲ್ಲೂ ಕರುಣೆ ಮತ್ತು ವಿಷಾದವುಂಟಾಗಿತ್ತು. ನಾನೊಂದು ಮೀಟಿಂಗಿನಲ್ಲಿ ಪಾಲ್ಗೊಂಡಾಗ ಯೂನಿವರ್ಸಿಟಿಯ ದೊಡ್ಡವರು ಭಾರತದ ರೈಲ್ವೆ ಅಪಘಾತವನ್ನು ಪ್ರಸ್ತಾವಿಸಿ ಮಡಿದ ಪ್ರಯಾಣಿಕರಿಗೆ ಗೌರವ ಸಲ್ಲಿಸಿದರು. ಕೇಂದ್ರ ಸರಕಾರವು ಭಾರತ ಸರಕಾರಕ್ಕೆ ಸಹಕಾರ, ಸಹಾಯ ನೀಡುವುದಾಗಿ ಮಾತು ಕೊಟ್ಟಿದೆ ಎನ್ನುವುದನ್ನು ಹೇಳಿದರು. ಸಭೆಯ ನಂತರ ಒಂದಿಬ್ಬರು ನನ್ನ ಕಡೆ ತಿರುಗಿನೋಡಿ ಅಯ್ಯೋ ಪಾಪವೆ ಎಂಬಂತಹ ನೋಟ ಚೆಲ್ಲಿದ್ದರು.

ಭಾರತದ ಭೂಪಟವನ್ನು ಸುಮಾರು ಎರಡೂವರೆ ಪಟ್ಟು ಹಿಗ್ಗಿಸಿದರೆ ಅದು ಆಸ್ಟ್ರೇಲಿಯಾದಷ್ಟು ಆಗುತ್ತದೆ ಎಂದು ಒಂದು ಅಂದಾಜು. ಅಂದರೆ ಆಸ್ಟ್ರೇಲಿಯಾಕ್ಕಿಂತಲೂ ಗಾತ್ರದಲ್ಲಿ ಭಾರತವು ಸುಮಾರು ಎರಡೂವರೆ ಪಟ್ಟು ಚಿಕ್ಕದು. ಆದರೆ ಇರುವ ಜನಸಂಖ್ಯೆ ೧.೩ ಬಿಲಿಯನ್! ಇಷ್ಟೊಂದು ಜನರು ತಮಗೆಲ್ಲಾ ಇರುವ ವೈವಿಧ್ಯತೆಗಳೊಡನೆ, ವೈರುಧ್ಯಗಳನ್ನಿಟ್ಟುಕೊಂಡೇ ಕಚ್ಚಾಡುತ್ತಲೇ ಇದ್ದುಕೊಂಡು ಆದರೂ ಜೊತೆಜೊತೆಯಾಗಿ ಮೈಕೈ ತಾಕಿಸಿಕೊಂಡೇ ಬದುಕುತ್ತಿರುವುದು ಪ್ರಪಂಚದ ದೊಡ್ಡದೊಂದು ಅಚ್ಚರಿ!

ಬೆಂಗಳೂರಿನ ಹೃದಯಭಾಗದಲ್ಲಿರುವ ಅವೆನ್ಯೂ ರಸ್ತೆಯಲ್ಲಿ ತಿರುಗಾಡಿದಾಗ ಪ್ರಿಯವಾದದ್ದು ಹಾಗೇ ಇರುವ ಪೇಟೆ ಬೀದಿಗಳು ಮತ್ತು ಅವುಗಳದ್ದೇ ಆದ ಒಂದು ಛಾಪು. ಇಲ್ಲಿ ಕಾಣುವುದು ಹಳತೊಂದು ಸಮಾಜದ ಹೆಗ್ಗುರುತಾದ ಕಸುಬುಗಾರಿಕೆಗಳ ಮುಂದುವರಿಕೆ. ಇಪ್ಪತ್ತೊಂದನೇ ಶತಮಾನದ ಮಾಲ್, ಸೂಪರ್ ಮಾರ್ಕೆಟ್ ಮತ್ತು ಮೆಟ್ರೋಗಳ ಪ್ರಪಂಚದಲ್ಲಿ ಐಟಿ ಮತ್ತು ಗ್ಲೋಬಲ್ ಕಾರ್ಪೊರೇಟ್ ಪೈಪೋಟಿಗಳ ನಡುವೆ ಬದುಕುತ್ತಾ ಇನ್ನೂ ಕಂಗೊಳಿಸುತ್ತಿರುವ ಅಂಕುಡೊಂಕು ಪೇಟೆ ಬೀದಿಗಳಲ್ಲಿ ಕಾರ್ಯತತ್ಪರರಾಗಿರುವ ಸಾವಿರಾರು ಕಸುಬುದಾರರನ್ನು ನೋಡಿದರೆ ಕ್ಯಾಪಿಟಲಿಸ್ಟ್ ಪ್ರಪಂಚದ ಟೊಳ್ಳು, ಭ್ರಮೆ ಮನಸ್ಸಿಗೆ ತಟ್ಟುತ್ತದೆ. ಯಾವುದೇ ತಂಟೆತಕರಾರಿಲ್ಲದೆ, ಕೋಪತಾಪಗಳಿಲ್ಲದೆ, ದೋಷಾರೋಪಗಳಿಲ್ಲದೆ ಆ ಬೀದಿಗಳಲ್ಲಿ ಪಟಪಟನೆ ಬದುಕಿನ ಗಾಲಿಗಳು ಉರುಳುತ್ತವೆ. ಇನ್ನೂ ತನ್ನ ದೇಹಶಕ್ತಿಯಿಂದಲೇ ಗಾಡಿಯೆಳೆಯುವ ಆಸಾಮಿ, dragon fruit ಕೊಳ್ಳಿರೆಂದು ಹೇಳುವ ಹೆಂಗಸು, ಕಣ್ಣು ಸೆಳೆಯುವ ನೇರಳೆಹಣ್ಣು, ಸೆಕೆಂಡ್ ಹ್ಯಾಂಡ್ ಪುಸ್ತಕಗಳ ರಾಶಿ, ತನ್ನ ಕಾಲ್ಬೆರಳುಗಳ ಮಧ್ಯೆ ಚೆಂದನೆ ಹಾರಗಳನ್ನು ಪೋಣಿಸುವ ಹುಡುಗ, ರಾಜಾ ಮಾರ್ಕೆಟ್ ನೋಡಿ ಭಾವುಕಳಾಗುವ ನಾನು… ಯಾವ ಮಾಲ್ ಅಥವಾ ಸೂಪರ್ ಮಾರ್ಕೆಟ್ ಅಲ್ಲಿಯೂ ಸಿಕ್ಕದ ಅನುಭೂತಿ.


ಆಚೆಕಡೆ ಮೈಸೂರು ಬ್ಯಾಂಕ್ ವೃತ್ತದಲ್ಲಿ ಏನೆಲ್ಲಾ ಬದಲಾವಣೆಗಳಾಗಿದ್ದರೂ ಈಚೆಕಡೆ ಈ ಅವೆನ್ಯೂ ರಸ್ತೆ ಹಾಗೇ ಇರುವುದು ಅದು ಬೆಂಗಳೂರಿನ ಅಸ್ಮಿತೆಯ ಊರುಗೋಲು ಎಂದೆನಿಸಿತು. ದೂರದೂರಿನಿಂದ ಬಂದಿರುವವಳಿಗೆ ತನ್ನೂರು ತಾನಿದ್ದಾಗ ಹೇಗಿತ್ತೋ ಹಾಗೇ ಇರಬೇಕು ಎಂದೆನಿಸುವುದು ಸ್ವಾರ್ಥವೋ ಏನೋ, ಇರಲಿ. ಆದರೆ, ಹಳೆಯೂರಿನ ಎಲ್ಲವೂ ಹೊಸತಾಗದೇ, ಮಿರಿಮಿರಿ ಮಿರುಗುವ ಬಂಡವಾಳಶಾಹಿಗಳ ಮಲ್ಟಿ ಸ್ಟೋರಿ ಕಟ್ಟಡಗಳಾಗದೆ, ಅವುಗಳಲ್ಲಿ ಕಳೆದುಹೋಗುವ ನೌಕರರಾಗದೆ ಇರಲಿ. ಇವೇ ಪೇಟೆ ಬೀದಿಗಳು ಮತ್ತು ಅವಲ್ಲಿನ ಕಸುಬುದಾರರು ಹೀಗೆಯೇ ಚಿರನೂತನವಾಗಿರಲಿ.