ಅಂದು ಆ ಜನರೆಲ್ಲ ಎದೆಮಟ್ಟ ಒಂದೊಂದು ಹೂಗುಚ್ಚ ಹಿಡಿದು ಓಡಾಡುತ್ತಿದ್ದಂತೆ ಕಾಣುತ್ತಿತ್ತು. ಹೂಗುಚ್ಚವೆಂದರೆ ಪೇಟೆ ಬೀದಿಯಲ್ಲಿ ಸಿಗುವ ಗುಲಾಬಿ ಇತ್ಯಾದಿ ಅಪರೂಪದ ಹೂವುಗಳಿಂದ ಮಾರಾಟಕ್ಕಾಗಿ ಮಾಡಿದ್ದಲ್ಲ, ರಸ್ತೆ ಬದಿ ಪೊದೆಯಲ್ಲಿ ಬಿಟ್ಟ ಗಂಟೆ ಹೂವಿನಂಥ ಒಂದು ಗೊಂಚಲು. ಅಂಥದು ಯಾವಾಗಲೂ ತುಂಬ ಸುಂದರ ಎಂದೇ ನನಗನ್ನಿಸಿದೆ. ಯಾಕೆ ತಮ್ಮನ್ನು ತಾವೇ ಅಭಿನಂದಿಸಿಕೊಂಡು ಅವರು ಓಡಾಡುತ್ತಿದ್ದಾರೆ? ಈ ಅಭಿನಂದನೆ ಸುಮ್ಮನೆ ತಮ್ಮೊಳಗಿರುವ ಒಳ್ಳೆಯತನಕ್ಕಾಗಿ. ಬುದ್ಧಿವಂತಿಕೆ, ಪ್ರತಿಭೆಗಾಗಿ ಅಲ್ಲ. ತಾವು ಎಂಥವರೋ-ಲಾಭ ನಷ್ಠದ ಲೆಕ್ಕಾಚಾರದಲ್ಲಿ ಬಿದ್ದವರೋ, ತಮ್ಮ ಪರರೆಂಬ ಗುಂಪುಗಾರಿಕೆಯಲ್ಲಿ ಸಿಕ್ಕವರೋ, ಸದಾ ಹೊರಗೊಂದು ಒಳಗೊಂದಾದ ಚೂರು ಕಪಟಿಗಳೋ-ಆದರೂ ಮನದ ಮೂಲೆಯಲ್ಲೊಂದು ಸಹಜ ಒಳ್ಳೆಯತನ ಹಸಿರಾಗಿರುವಂತಿದೆ. ಅದೊಂದು ಮುಗ್ಧತೆ ಮತ್ತು ಸರಳ ಸಂತೋಷದ ಗುಣ. ಇತರರಿಗಿಂತ ಮೇಲೆನಿಸಬೇಕೆಂದಿಲ್ಲ. ಅವರೊಂದಿಗೆ ಒಂದಾಗಿರಬೇಕೆಂಬ ಸಾಧಾರಣತೆ. ಅದು ಎಂದಿಗೂ ತಮ್ಮೊಳಗೆ ಉಳಿದಿದೆ-ಮಾಯವಾಗದ ಮಗುವಿನಂತೆ, ಬಾಲಕನಂತೆ.

ಅದಕ್ಕಾಗಿ ಇರಬಹುದು ಈ ಸಂಭ್ರಮ, ಸಮಾರಂಭ. ನೆಪ-ರಾಜಣ್ಣನವರ ನಿವೃತ್ತಿ. ರೈಲ್ವೆ ಇಲಾಖೆಯಲ್ಲಿದ್ದು ಈಗ ನಿವೃತ್ತರಾಗುತ್ತಿದ್ದ ತಮ್ಮ ಸಹೋದ್ಯೋಗಿ ರಾಜಣ್ಣ. ಅದಕ್ಕಾಗಿ ನಡೆದಿದ್ದ ಆಹ್ವಾನ ಪತ್ರ, ಪೋಸ್ಟರ್ ಇತ್ಯಾದಿ ಸಿದ್ದತೆ ನೋಡಿದ ಮೇಲೆ ಅವರ ಬಾಮೈದನಾದ ನಾನೂ ಸಭೆಗೆ ಬರುತ್ತೇನೆ, ಅಷ್ಟೇ ಅಲ್ಲ, ಒಂದು ಕವಿತೆಯನ್ನೂ ಬರೆದು ಓದುತ್ತೇನೆ ಎಂದು ಸ್ವಯಂ ಸ್ಫೂರ್ತಿಯಿಂದ ಘೋಷಿಸಿಬಿಟ್ಟೆ.

ನನ್ನ ಮನಸ್ಸಲ್ಲಿದ್ದುದೊಂದು ತಮಾಷೆ. ಕವಿತೆಯನ್ನು ಹಾಗೆಲ್ಲ ಬಳಸುವವನಲ್ಲ ನಾನು. ಆದರೂ ಸಭೆಗೆ ಹೋಗುವ ಹಿಂದಿನ ರಾತ್ರಿ ರಾಜಣ್ಣನವರ ಮನೆಯ ಪಡಸಾಲೆಯಲ್ಲಿ ಮಲಗಿ ಪ್ರಯತ್ನಪೂರ್ವಕವಾಗಿ ಬರೆಯಬಹುದಾದ ಕವಿತೆಯೊಂದನ್ನು ಬರೆದೇ ಬಿಟ್ಟು-ಅಕ್ಕಯ್ಯ, ರಾಜಣ್ಣ, ನನ್ನ ಪತ್ನಿ, ಮಗಳು ಚುಕ್ಕಿಯ ಮುಂದೆ ಓದಿದೆ, ಚಪ್ಪಾಳೆ ಬಂತು. ಮರುದಿನ ಬೆಳಗ್ಗೆ ರೈಲಲ್ಲಿ ಹೋಗುವಾಗ ನೋಡುತ್ತೇನೆ, ಕವಿತೆಯನ್ನೇ ಬಿಟ್ಟು ಬಂದಿದ್ದೆ. ನಂತರ ಅಲ್ಲೇ ಅದನ್ನು ನೆನಪಿಂದ ಬರೆದಾಗ ಅದು ಇನ್ನೂ ಉತ್ತಮವೆನಿಸಿತು. ನಾನು ನೋಡಿದ್ದೀನಿ, ಕವಿತೆಯನ್ನು ಹಾಗೆ ನೆನಪಿನಿಂದ ಬರೆದಾಗ ಮಾತು ಹೆಚ್ಚು ಸರಿಯಾಗಿರುತ್ತದೆ.

ಮುಂದೆ ಬೀರೂರು ನಿಲ್ದಾಣದಲ್ಲೇ ರಾಜಣ್ಣನವರಿಗೆ ಸಣ್ಣ ಸನ್ಮಾನವಾಯಿತು. ನಂತರ ಅರಸೀಕೆರೆಯಲ್ಲಿ ಇಳಿಯುವಾಗ ನೋಡಿದರೆ ಪ್ಲಾಟ್‌ಫಾರಂನಲ್ಲೇ ಯಾವುದೋ ಶಾಲೆಯ ಮಕ್ಕಳ ಬಾಜಭಜಂತ್ರಿ ಸಹ ಮೊಳಗುತ್ತಿತ್ತು. ಒಬ್ಬೊಬ್ಬರ ಕೈಗೂ ಗುಲಾಬಿ ಕೊಟ್ಟು ನಮ್ಮನ್ನೆಲ್ಲ ಇಳಿಸಿಕೊಳ್ಳಲು ತುಸು ಹೊತ್ತು ಹಿಡಿಯಿತು. ಆಗ ರೈಲಲ್ಲಿ ಕೂತವರೆಲ್ಲ ಇದೇನು ಎಂದು ಕೊಕ್ಕರೆ ಕತ್ತಾಗಿ ನೋಡುತ್ತಿದ್ದರು. ದಿಬ್ಬಣದ ಕೈಲಿದ್ದ ಲಗೇಜನ್ನೆಲ್ಲ ಎದುರುಗೊಂಡವರು ಕೇಳಿ ಪಡೆದರು. ಬ್ಯಾಂಡ್ ಮೆರವಣಿಗೆಯಲ್ಲಿ ಪ್ಲಾಟ್‌ಫಾರಂನಲ್ಲಿ ಹಾಕಿದ್ದ ಶಾಮಿಯಾನಕ್ಕೆ ನಡೆದೆವು.

ದಿಬ್ಬಣಕ್ಕೆ ತಿಂಡಿಯಾದ ಮೇಲೆ ಸಭೆ, ಎಂದರೆ ಅದೇನೋ. ವೇದಿಕೆಯಲ್ಲಿ ರಾಜಣ್ಣನೊಂದಿಗೆ ಕೂತವರು ಅದು ಯಾರ್ಯಾರೋ. ಪೈಪೋಟಿಯಿಂದ ಗುಂಪಾಗಿ ಜನ ಬಂತು. ರಾಜಣ್ಣನಿಗೆ ಮಾಲೆ ಹಾಕಿ ತಬ್ಬಿಕೊಂಡು ಫೋಟೋ ತೆಗೆಸಿಕೊಳ್ಳುವುದಷ್ಟೇ, ಶಾಲು ಹೊದಿಸುವುದು, ಪೇಟಾ ತೊಡಿಸುವುದು, ಕಾಣಿಕೆ ನೀಡುವುದು ಅಚ್ಚರಿಯೆನಿಸುವಷ್ಟು ದಾರಾಳವಾಗಿತ್ತು. ಹೆಚ್ಚಾಗಿ ಎಲ್ಲರೂ ರಾಜಣ್ಣನವರಂತೆ ರೈಲ್ವೇ ಟಿಕೇಟು ತಪಾಸಕರೇ. ಅಂದರೆ ಜನರ ಕಣ್ಣಲ್ಲಿ ಒಂದು ರೀತಿಯ ಪೋಲೀಸು. ಆದರೆ ಅಂದು ಅವರೆಲ್ಲರೂ ಬೇರೆಯೇ ಸಡಗರದಲ್ಲಿದ್ದರು.

ನಾನು ಆಮೇಲೆ ತಿಳಿದುಕೊಂಡೆ. ಒಟ್ಟು ೮೦ ಹಾರ, ೮ ಪೇಟ, ೧೬ ಶಾಲು, ಜೊತೆಗೆ ಅಸಂಖ್ಯಾತ ಕಾಣಿಕೆ ಬಂದಿದ್ದವಂತೆ. ಅಲ್ಲಿ ಆಡಿದ ಮಾತುಗಳೂ ಅತಿ ಸರಳವಾಗಿ ಒಳ್ಳೆಯದಿತ್ತು. ರಾಜಣ್ಣ ಎಂದರೆ ವಿಶೇಷ ಬುದ್ಧಿವಂತಿಕೆಯಾಗಲೀ ಪ್ರತಿಭೆಯಾಗಲೀ ಇರುವ ವ್ಯಕ್ತಿ ಅಲ್ಲ. ವೈಯಕ್ತಿಕವಾಗಿ ವರ್ಚಸ್ಸಿಯೂ ಅಲ್ಲ. ಆದರೆ ತಮ್ಮಷ್ಟಕ್ಕೆ ತಾವಿದ್ದು, ಒಳ್ಳೆಯವರು ಎಂಬುದಷ್ಟೇ ಸಾಕಿತ್ತು. ಅದನ್ನೊಂದು ಮಹತ್ವದ ಗುಣ ಎಂದು ಅವರೆಲ್ಲ ಎತ್ತಿ ಮೆರೆಸಿದ್ದರು. ಒಟ್ಟಿನಲ್ಲಿ ಎಲ್ಲರೂ ಸಣ್ಣ ಕಾರಣ ಹುಡುಕಿ ಅಥವಾ ಕಾರಣವೇ ಬೇಕಿಲ್ಲದೆ ರಾಜಣ್ಣನನ್ನು ಹಾಡಿ ಹೊಗಳಿದರು. ನಾನೂ ಉಮೇದಿನಲ್ಲಿ `ರೈಲ್ವೇ ರಾಜಣ್ಣನವರ ನಿವೃತ್ತಿ’ ಎಂಬ ಪದ್ಯವನ್ನು ಪೀಠಿಕೆಯೊಂದಿಗೆ ವಿವರಿಸಿ ಓದಿದೆ. ಊಹಿಸಿ-ರೈಲ್ವೇ ಪ್ಲಾಟ್‌ಫಾರಂನಲ್ಲಿ ತೀರ ಅಸಾಹಿತ್ಯಕ ಜನರಿಗೆ ಪದ್ಯ ಓದಿದ್ದು! ಕವಿತೆ ಹಾಗೆ ಎಲ್ಲೆಡೆ ಹರಿದಾಡಬೇಕು ಎಂಬ `ಜನಕವಿ`ಯ ಅಪೇಕ್ಷೆಗೆ ತಕ್ಕುದಾಗಿತ್ತು ಅದು. ಅಲ್ಲಿ ಸೇರಿದ್ದ ಬಿಹಾರಿ, ತಮಿಳ, ಕನ್ನಡಿಗರೆಲ್ಲರೂ ಬಂದು ನನ್ನ ಕೈಕುಲುಕಿ- `we really enjoyed it` ಎಂದರು! ನನಗೂ ಬಹುಮಾನವಾಗಿ ಒಂದು ಹಾರ ಮತ್ತು ಮುಂದೆ ಅವರ ಕಾರ್ಯಕ್ರಮಗಳಲ್ಲಿ ಕವಿತೆ ಓದಲು ಖಾಯಂ ಆಹ್ವಾನ ಸಿಕ್ಕಿತು!

ಅಂದು ಅವರ ಎಲ್ಲ ಸಂಭ್ರಮದಲ್ಲಿ ಕವಿತೆಯೂ ಸೇರಿ ಹೋಯಿತು. ಅಲ್ಲಿ ಯಾವುದೇ ಆಗಲೀ ಎದ್ದು ಕಾಣುತ್ತಿರಲಿಲ್ಲ ಅಥವಾ ತಿರಸ್ಕೃತವಾಗುತ್ತಿರಲಿಲ್ಲ. ಅತ್ಯಂತ ಮಹಿಮಾನ್ವಿತವಾದುದೂ ಅಲ್ಲಿ ಎಲ್ಲರೊಳಗೊಂದಾಗುವಂತಿತ್ತು. ರಾಜಣ್ಣನವರು ಭಾಷಣ ಮಾಡಲು ಎದ್ದಾಗ ನನಗೆ ಆತಂಕವಾಯಿತು. ಅವರ ತಡವರಿಸುವ ಮಾತುಗಾರಿಕೆಯಿಂದ ಎಲ್ಲರಿಗೂ ನಿರಾಸೆಯಾಗಬಹುದೆಂದು. ಬರೆದು ತಂದ ನಾಲ್ಕು ಇಂಗ್ಲೀಷು ಮಾತನ್ನ ಅವರು ಪ್ರಪಂಚದ ಅಧ್ಯಕ್ಷನ ಅಳುಕಿನ ಗಾಂಭೀರ್ಯದಲ್ಲಿ ಓದಿದರು. ಯಾರೂ ತಪ್ಪು ತಿಳಿಯದೆ ಅದೇ ಹೆಚ್ಚಿನ ಅಚ್ಚುಕಟ್ಟು ಎಂದು ಭಾವಿಸಿದರು. ಅಲ್ಲಿ ಯಾವುದೂ ಮುಖ್ಯವೊ ಆ ಮುಖ್ಯವೂ ಆಗಿರಲಿಲ್ಲ.

ಆಮೇಲೆ ಪ್ರಶಸ್ತವಾದ ಜಾಗವೊಂದರಲ್ಲಿ ಬಾವಣಿಕೆಯೊಂದಿಗಿನ ಅದ್ಭುತವಾದ ಊಟವಿತ್ತು. ಎಷ್ಟು ಹೊತ್ತು ಅಂತಹ ಆನಂದದ ನೆರೆಯನ್ನು ಸೃಷ್ಟಿಮಾಡಿದ್ದರು ಆ ಸರಳ ಜನರು!
ಅದು ನಾನು ಕಂಡ ಅತ್ಯುತ್ತಮ ಸಮಾರಂಭವೊಂದಾಗಿತ್ತು ಮತ್ತು ಮನುಷ್ಯ ತನ್ನ ಅತ್ಯುತ್ತಮ ಮುಖದಲ್ಲಿ ಕಾಣಿಸಿಕೊಂಡುದಾಗಿತ್ತು. ಗೆಳೆಯ ಹೇಳುವಂತೆ ಸ್ವಲ್ಪ ಪೆದ್ದುತನ ಮತ್ತು ಸರಳ ಸಂತೋಷದ ಗುಣ-ಬೇರೇನು ಬೇಕು ಜೀವನದಲ್ಲಿ ಎನ್ನುವಂತಿತ್ತು. ಮತ್ತು ಅಂಥಲ್ಲಿ ನನ್ನ ಕವಿತೆ ಸಲ್ಲುವಂತಾಗಿದ್ದು ಅದಕ್ಕೆ ವಿಶೇಷ ಮರ್ಯಾದೆಯೆನಿಸಿತು.

ಹಾಗೆ ಮೈತಳೆದ ಆ ಕವಿತೆಯನ್ನು ನಿಮ್ಮ ಮುಂದಿಡುತ್ತಿದ್ದೇನೆ.

ರೈಲ್ವೇ ರಾಜಣ್ಣನವರ ನಿವೃತ್ತಿ

ಮತ್ತೂ ಒಮ್ಮೆ ಕೂಗಿತು ರೈಲು
ರಾಜಣ್ಣ ಯಾಕೆ ಬರುವುದಿಲ್ಲವೇ ಇಂದು
ಮೀರಲಾರದೆ ಅದು ತನ್ನ ನಿಯತಿಯನು
ಹೊರಟಿತು ಇನ್ನೂ ಭಾರಗೊಂಡು
ಎಳೆದು ಹಾಕುತ ತನ್ನ ಚಕ್ರಗಳನು

ನಿಂತರು ರಾಜಣ್ಣ ನಿಲ್ದಾಣದಲ್ಲೇ
ಬಿಟ್ಟು ಹೊರಟಿದೆ ರೈಲು ತನ್ನನಲ್ಲೇ
ಕಪ್ಪು ಕೋಟಿಲ್ಲ ತಿಕೀಟು ಬುಕ್ಕಿಲ್ಲ
ಕೈಯ ಜಗ್ಗುತ್ತಿರುವ ಹಾರಗಳ ಹೊರೆ
ಭ್ರಮಿಸುತ್ತಿರುವ ಗಂಧ ಭ್ರಮೆಗೊಳಿಸುತ್ತಿದೆ

ತೆರೆದು ತೋರಿತು ರೈಲು ಏನೆಲ್ಲವನ್ನು
ನಾಕು ಗಳಿಗೆಯ ಪಯಣಿಗರೆ ಎಲ್ಲರೂ
ಗುರಿ ದಾರಿ ನಿಶ್ಚಯಿಸಿ ಸ್ವಸ್ಥ ಕೂತವರು
ರಹದಾರಿಯೇ ಇರದೆ ಅಸ್ವಸ್ಥರಾದವರು
ಆಗಂತುಕನಿಗೂ ನಕ್ಕು ತಾವು ಕೊಟ್ಟವರು
ಅಂಗೈಯಗಲ ಜಾಗಕ್ಕಾಗಿ ಮುಷ್ಟಿ ಬಿಗಿದವರು
ಬೋಗಿಯಲಿ ಜಾತ್ರೆಯನು ತುಂಬಿಸಿದ ಚಿಣ್ಣರು
ಅಡಗಿಸಿದ ದುಗುಡದಲಿ ಕಣ್ಣೊರೆಸಿಕೊಂಡವರು
ಗಾಳಿ ಬೆಳಕಿನ ನೋಟದಲಿ ತೇಲಿ ಹೋದವರು
ಅವರ ಗಂಟು ಹಾರಿಸಲು ಸಮಯ ಕಾದ ಕಳ್ಳರು
ಎಳೆಗೂಸಿಗೆ ಅಲ್ಲೆ ಜೋಲಿ ಕಟ್ಟಿದ ಬಾಣಂತಿ
ಎಲ್ಲರನು ಒಳಗೊಂಡು ತೂಗಿದ ಮಹಾತಾಯಿ
ಕಾಣಿಸಿತು ತನಗೆ ಎಲ್ಲವನ್ನೂ
ಹೊಟ್ಟೆಪಾಡಿಗೆಂದೇ ಈ ಬಂಡಿ ಏರಿದವ ತಾನು

ಹೊಟ್ಟೆ ತುಂಬುವ ಕಾಳನ್ನಷ್ಟೇ ಅಲ್ಲ
ಧರೆ ನೀಡುವುದು ಬೆಳಕಿನ ಬೆಳಸನ್ನೂ
ತೆನೆದೂಗಿದ ಹೊಲದ ನಡುವೆ
ಸಂಜೆ ಸೂರ್ಯನತ್ತ ಪಯಣಿಸಿದ ರೈಲು
ಕಲಿಸಿತ್ತು
ಹಕ್ಕಿ ಸಾಲಿನ ಹಾಗೆ ಬಿಟ್ಟುಕೊಳುವುದನ್ನು

ನಿಂತರು ರಾಜಣ್ಣ ಈ ಅರಿವು ಒಡಗೂಡಿ
ಕೊಂಚ ದೂರದಿ ನೆರೆದಿರುವ ತನ್ನವರ
ಹರಕೆಗಳ ಆಚೆ ದಡದಲ್ಲಿ
ತೆರಳುತ್ತಿರುವ ಗಾಡಿಯ ಮೈನೇವರಿಸಿ ಮನದಲ್ಲಿ
ಬರಮಾಡಿ ಅದನಿನ್ನು ತನ್ನ ಕನಸುಗಳಲ್ಲಿ