ಜಗತ್ತು ಕಾಲದ ಜೊತೆ ಹೇಗೆ ದಾಪುಗಾಲು ಇಟ್ಟುಕೊಂಡು ಓಡುತ್ತದೆ! ನಾನು ಮಾತ್ರ ಯಾಕೆ ಹೀಗೆ? ಈ ಪ್ರಶ್ನೆ ನನಗೆ ಎದುರಾಗಿರೋದು ಇದು ಎಷ್ಟನೆಯ ಸಲ?! ಉತ್ತರವಿಲ್ಲವಂತ ಗೊತ್ತಿದ್ರೂ ಪ್ರಶ್ನೆ ಹಾಕಿಕೊಳ್ಳೋ ಅಭ್ಯಾಸ ಮಾತ್ರ ಹೋಗೇ ಇಲ್ಲ… ನನಗೆ ಎಷ್ಟೊಂದು ವರ್ಷಗಳ ಕೆಳಗೆ… ಅಂದರೆ ಸುಮಾರು ೩೦-೩೫ ವರ್ಷಗಳ ಕೆಳಗೆ ನಡೆದಿದ್ದೆಲ್ಲ ನೆನ್ನೆ ಮೊನ್ನೆ ನಡೆದ ಹಾಗೆ ಪರಿಮಳ ಬೀರುವ ನೆನಪುಗಳು. ಅವುಗಳು ಎದೆಯಲ್ಲಿ ಎಷ್ಟೊಂದು ಮಧುರವಾಗಿ ಕಂಪು ಬೀರುತ್ತಾ ಇರುತ್ತವೆ ಅಂದರೆ ನಾನು ಮತ್ತೆ ಮತ್ತೆ ಹಳೆಯದನ್ನ ಹುಡುಕಿಕೊಂಡು ಹೋಗ್ತಾನೇ ಇರ್ತೀನಿ.
ನೆನ್ನೆ ನೋಡಿದ ಜಗತ್ತು ಇವತ್ತು ಬದಲಾಗಿರತ್ತೆ. ನೆನ್ನೆ ಆಪ್ತರಾದವರು ಇವತ್ತು ಬರೀ ಕಹಿ ನೆನಪಾಗಿರುತ್ತಾರೆ. ನೆನ್ನೆ ಯಾರಿಲ್ಲದೇ ಬದುಕೋದು ಅಸಾಧ್ಯ ಅಂತ ಅನ್ನಿಸ್ತಿರತ್ತೋ ಇವತ್ತು ಅವರ ನೆನಪು ಡೈನೋಸಾರ್ ಸಂತತಿಯ ಹಾಗೆ ನಿರ್ನಾಮವಾಗಿ ಹೋಗಿರತ್ತೆ. ಅಂತಾದ್ರಲ್ಲಿ ನಾನು ಎಂದೋ ನೋಡಿದ ಊರುಗಳನ್ನ ಮತ್ತೆ ಮತ್ತೆ ನೆನಪಿನಲ್ಲಿ ತಂದುಕೊಂಡು ಅಲ್ಲೇನೋ ಹೂತಿಟ್ಟ ನಿಧಿಯ ಹಾಗೆ ನನ್ನ ಬರುವಿಕೆಗೆ ಕಾಯ್ತಾ ಇರುವ ನೆನಪುಗಳು ಇವೆಯೇನೋ… ನಾನು ಕಂಡ ಕೂಡಲೆ (ನಿಧಿ ಯಾರಿಗೆ ಸೇರಬೇಕೋ ಅವನ ಕಣ್ಣಿಗೆ ಮಾತ್ರ ಕಾಣತ್ತಂತೆ ಅನ್ನುವ ಮೂಢನಂಬಿಕೆಯ ಹಾಗೆ) ಅಂದಿನ ದಿನಗಳು ಹಾಗೆ ನನ್ನೆದುರಿಗೆ ಪ್ರತ್ಯಕ್ಷ ಆಗುತ್ತವೇನೋ ಅಂದುಕೊಂಡು ಹೋಗ್ತೀನಿ… ನಿರಾಶೆಯೇ ಎದುರಾಗೋದು ಅಂತ ಪ್ರತ್ಯೇಕವಾಗಿ ಹೇಳಬೇಕಿಲ್ಲ ಅಲ್ಲವೇ?!
ಮೈಸೂರಿನ ಸುತ್ತಮುತ್ತಲೂ ಇರೋ ಸರಗೂರು, ಕಬಿನಿ, ಕೆ.ಆರ್.ಎಸ್ ಎಲ್ಲ ಕಡೆ ಇದ್ದವರು ನಾವು. ಅಪ್ಪ ಪಿ.ಡಬ್ಯ್ಲು.ಡಿಯಲ್ಲಿ ಇಂಜಿನಿಯರ್. ಹಾಗಾಗಿ ಬರೀ ಹಳ್ಳಿ ವಾಸ ನನಗೆ ೧೪ ವರ್ಷ ಆಗೋವರೆಗೂ. ಆಮೇಲೆ ಈ ಬೆಂಗಳೂರೆಂಬ ಮಾಯಾವಿನಿಯ ತೆಕ್ಕೆಗೆ ಬಿದ್ದದ್ದು. ಈಗ ನಾಲ್ಕು ವರ್ಷದ ಕೆಳಗೆ ಇದ್ದಕ್ಕಿದ್ದ ಹಾಗೆ ಆ ಊರನ್ನ, ಅಲ್ಲಿದ್ದ ನಮ್ಮ ಮನೆಯನ್ನ ನೋಡ್ಬೇಕು ಅನ್ನೋ ಹುಚ್ಚು ಹತ್ತಿಬಿಟ್ಟಿತು. ಒಂದೇ ಒಂದು ಸಲ ಅಲ್ಲೆಲ್ಲ ನಡೆದಾಡಿ ಬಂದು ಬಿಡ್ಬೇಕು… ನನ್ನ ಮಗನಿಗೆ ಅವನ್ನೆಲ್ಲ ತೋರಿಸಬೇಕು… ಅಲ್ಲೆಲ್ಲ ಮತ್ತೊಂದು ಸಲ ಸಣ್ಣ ಹುಡುಗಿಯ ಹಾಗೆ ಕಾಲಾಡಿಸಿ ಬರಬೇಕು ಅಂತ ಹಪಹಪಿ ಶುರು ಆಗಿಹೋಯ್ತು.
ರಜೆ ಶುರು ಆಯ್ತು… ನನ್ನ ನೆನಪಿನ ಯಾತ್ರೆಗೆ ಹೊರಟೇಬಿಟ್ಟೆವು. ಹೊರಟು ನಿಂತ ಕ್ಷಣದಲ್ಲಿ ಮೊದಲ ಸಲ ನಲ್ಲನ ಸ್ಪರ್ಶವಾಗುವಾಗಿನ ರೋಮಾಂಚನ ನನಗೆ! ಮೊದಲು ಹೋಗಿದ್ದು ಸರಗೂರಿಗೆ. ಅಲ್ಲಿ ಇದ್ದಿದ್ದೇ ಎರಡು ಮುಖ್ಯ ರಸ್ತೆ. ಅದರಲ್ಲಿ ಒಂದು ರಸ್ತೆಯಲ್ಲಿ ನಮ್ಮ ಕಾಲೋನಿ ಇದ್ದಿದ್ದು. ಈಗ ಬಂತು ನೋಡು… ಇದೀಗ ಬಂತು ನೋಡು ಅಂತ ಹೇಳ್ತಾನೆ ಇದ್ದೆ. ಹಾಗೆ ಮುಂದೆ ಬಂದು ದೊಡ್ಡಮನೆ ಅಂತ ಕರೀತಿದ್ದ ಮನೆ ಸಿಕ್ಕಿದ ಮೇಲೆ ಗೊತ್ತಾಯ್ತು ನಾವಿದ್ದ ಕಾಲೋನಿ… ನನ್ನ ಸ್ವಪ್ನದಲ್ಲೂ ಸ್ವರ್ಗದ ಹಾಗೆ ಕಾಣೋ ಸ್ಥಳವನ್ನ ದಾಟಿ ಮುಂದೆ ಬಂದು ಬಿಟ್ಟಿದೀವಿ ಅಂತ! ಮತ್ತೆ ವಾಪಸ್ ತಿರುಗಿಸಿ ಈ ಸಲ ಹೆಚ್ಚು ಗಮನ ಕೊಟ್ಟು ನೋಡ್ತಾ ಬಂದ ಮೇಲೆ ನಮ್ಮ ಕಾಲೋನಿಯ ಮುಖ್ಯ ದ್ವಾರ ದರ್ಶನವಾಯ್ತು. ಸಣ್ಣ ಚೀತ್ಕಾರವೊಂದು ನನ್ನ ಗಂಟಲಿನಿಂದ ಹೊರಟಿತೇ? ಆ ಕಾಲೋನಿಯನ್ನು ದಾಟಿ ಯಾಕೆ ಮುಂದಕ್ಕೆ ಹೋಗಿಬಿಟ್ಟಿದ್ವಿ ಅಂತ ಆಗ ಅರ್ಥ ಆಯ್ತು ನನಗೆ… ಎಲ್ಲ ಕಡೆ ಬರೀ ಮುಳ್ಳು ಕಂಟಿ… ಆಳೆತ್ತರದ ಕಾಡು ಗಿಡಗಳು ಯಾವ ರೀತಿ ಬೆಳೆದಿದ್ದವು ಅಂದರೆ ನನ್ನ ಕನಸಿನ ಅರಮನೆಗೆ ಅಲ್ಲಿ ದಾರಿಯೇ ಮುಚ್ಚಿಹೋಗಿತ್ತು. ಎದೆಯಲ್ಲಿ ಸಣ್ಣ ಛಳುಕು… ಹಾಗೇ ದಾರಿ ಮಾಡಿಕೊಂಡು ಒಳನುಗ್ಗಿದ್ದಾಯಿತು.
ಹಿಂದೆ ಸಂಜೆಯ ಹೊತ್ತು ದೊಡ್ಡವರು, ಸಣ್ಣವರೆನ್ನದೆ ಎಲ್ಲರೂ ಕೂಡಿ ಶಟಲ್ ಆಡುತ್ತಿದ್ದ ಶಟಲ್ ಕೋರ್ಟ್ ಇದ್ದ ಜಾಗ ಈಗ ಮಿನಿ ಕಾಡಿನ ಹಾಗಿತ್ತು. ನಾವು ಬೆಳದಿಂಗಳಲ್ಲಿ ಮಕ್ಕಳೆಲ್ಲ ಸೇರಿಕೊಂಡು ರಾತ್ರಿ ಎಲ್ಲ ಹಗಲೇನೋ ಅನ್ನೋ ಹಾಗೆ ಅಬ್ಬರ ನಗು, ಮಾತಿಂದ ತುಂಬಿಸುತ್ತ ಓಡಾಡ್ತಿದ್ದ ಜಾಗ ಈಗ ಸ್ಮಶಾನದ ಹಾಗೆ ಇತ್ತು! ಇಡೀ ಕಾಲೋನಿಯಲ್ಲಿ ಒಂದೇ ಒಂದು ಮನುಷ್ಯ ಪ್ರಾಣಿಯ ಸುಳಿವು ಕೂಡಾ ಇಲ್ಲ. ಮೆಲ್ಲಗೆ ಮಗನ ಮುಖ ನೋಡಿದೆ. ಅವನ ಮುಖದಲ್ಲಿ ಸ್ವಲ್ಪ ಛೇಡಿಕೆಯ ನಗು. ಗಂಡ ಆಗಲೇ ಮೆಲ್ಲಗೆ “ನೋಡಪ್ಪ ನಿಮ್ಮಮ್ಮನ ಸ್ವರ್ಗಾನ” ಅಂತ ಹಾಸ್ಯವೂ ಶುರು ಮಾಡಿದ್ದ. ನನಗೆ ಮೈ ಪರಚಿಕೊಂಡು ಬಿಡಲಾ ಅನ್ನಿಸೋದಿಕ್ಕೆ ಶುರು ಆಗಿತ್ತು. ಅಯ್ಯೋ… ಅಂಗೈ ತೋರಿಸಿ ಅವಲಕ್ಷಣ ಅನ್ನಿಸಿಕೊಳ್ಳೋದು ಅಂದರೆ ಇದೇನಾ?
ನಾವಿದ್ದ ಮನೆ ಕಡೆ ಹೊರಟೆ. ಮನಸಲ್ಲಿ ಅಮ್ಮ ಪುಟ್ಟ ಪುಟ್ಟ ಪಾತಿ ಮಾಡಿ ಬಣ್ಣ ಬಣ್ಣದ ಹೂ ಬಿಡೋ ಗಿಡಗಳನ್ನ ಹಾಕಿದ್ದ ತೋಟ ಅಚ್ಚೊತ್ತಿತ್ತು. ಮಲ್ಲಿಗೆ, ಎಷ್ಟೊಂದು ಬಣ್ಣದ ಸ್ಫಟಿಕ, ಕನಕಾಂಬರ, ದಾಸವಾಳ ಹಾಕಿದ್ದಳು. ಜೊತೆಗೊಂದು ಹತ್ತಿಯ ಮರ ಬೇರೆ! ಆ ಮರದಲ್ಲಿ ಅದೆಷ್ಟೊಂದು ಹತ್ತಿ ಬಿಟ್ಟಿತ್ತು ಅಂದರೆ ಅಮ್ಮ ಬೆಂಗಳೂರಿಗೆ ಬಂದು ಅದೆಷ್ಟೋ ವರ್ಷಗಳ ನಂತರವೂ ಎಮರ್ಜೆನ್ಸಿಗೆ… ಅಂದರೆ ಬತ್ತಿ ಖಾಲಿ ಆದಾಗ ಅದೇ ಹತ್ತಿಯಿಂದ ದೇವರಿಗೆ ಬತ್ತಿ ಮಾಡಿ ಹಾಕ್ತಿದ್ದಳು.
ಕಾಲೋನಿ ನೋಡಿದ ಕೂಡಲೇ ಭ್ರಮೆ ಹೆಚ್ಚು ಕಡಿಮೆ ಹರಿದಿದ್ದರಿಂದ ಹೆಚ್ಚು ಅದ್ಭುತದ ನಿರೀಕ್ಷೆ ಮಾಡದೆ ಗೇಟ್ ತೆಗೆದು ಒಳ ಕಾಲಿಟ್ಟೆ. ಅಲ್ಲೆಲ್ಲ ಕರಿಯ, ಕೊಳೆತ ನೀರು ಬೀಡುಬಿಟ್ಟು ನಿಂತಿತ್ತು. ಅದರ ವಾಸನೆಗೆ ಹೊಟ್ಟೆಯೆಲ್ಲ ತೊಳಸು. ಮುಖ ಹಿಂಡುತ್ತಾ ಮೂಗು ಹಿಡಿದು ಮನೆ ಬಾಗಿಲು ತಟ್ಟಿದೆ…
ಸದ್ಯ ಬಾಗಿಲು ತೆಗೆದವರು ಮನುಷ್ಯರೇ!
ಹಳೆಯ ಕತೆ ಹೇಳಿದೆ. ಬನ್ನಿ ಬನ್ನಿ ಅಂತ ಸಂಭ್ರಮಿಸಿದರು. ನಾನು, ಅಕ್ಕ ಮಲಗುತ್ತಿದ್ದ ರೂಮು, ರಾತ್ರಿಯಲ್ಲಿ ದೆವ್ವದ ಭಯಕ್ಕೆ ಮೆಲ್ಲನೆ ಅಪ್ಪ, ಅಮ್ಮನ ಮಧ್ಯೆ ನುಸುಳುತ್ತಿದ್ದ ಅವರ ರೂಮು ಎಲ್ಲವೂ ಬಣ್ಣಗೆಟ್ಟು ನಿಂತಿದ್ದವು. ಸುಣ್ಣ ನಾವು ಬಿಟ್ಟ ಮೇಲೆ ಹೊಡೆದೇ ಇರಲಿಲ್ಲವಂತ ಕಾಣಿಸುತ್ತೆ. ಬಾಲ್ಯದಲ್ಲಿ ಎಷ್ಟೊಂದು ದೊಡ್ಡದಾಗಿ ಕಾಣ್ತಿದ್ದ ಆ ಮನೆ ಈಗ ಒಂದು ಕೋಳಿ ಗೂಡಿನ ಹಾಗೆ ಕಾಣ್ತಿತ್ತು. ಜೊತೆಗೆ ಅಸಾಧಾರಣ ಗಲೀಜು. ಹಿತ್ತಲಲ್ಲಿ ಕೊತ್ತಂಬರಿ ಸೊಪ್ಪು, ಟೊಮೆಟೋ, ಮೆಣಸಿನಕಾಯಿ ಎಲ್ಲ ಬೆಳೆಸಿದ್ದಳು ಅಮ್ಮ. ಅದರಲ್ಲೂ ಕೊತ್ತಂಬರಿ ಮೊಳಕೆಯೊಡೆಯುವಾಗಿನ ನನ್ನ ಸಂಭ್ರಮ ನನಗೆ ಈಗಲೂ ನೆನಪಿದೆ. ಮಗುವಿನ ಮುಖದಲ್ಲಿ ಮುಂದಿನ ಎರಡು ಹಲ್ಲು ಮೊಳೆತಾಗ ಅಮ್ಮನ ಖುಷಿ ಇರುತ್ತದಲ್ಲಾ ಅದೇ ರೀತಿ ನನ್ನದೂ. ಅಲ್ಲೇ ಮನೆಯ ಹಿತ್ತಲಲ್ಲಿ ಕೆಲಸದವಳ ಜೊತೆ ಒಗೆಯುವ ಕಲ್ಲಿನ ಮೇಲೆ ಕಾಲಾಡಿಸುತ್ತಾ ಕೂತು ಹರಟುತ್ತಿದ್ದೆ ಹಿಂದೆ. ಈಗ ಅಲ್ಲಿ ಕಾಲಿಟ್ಟರೆ ಬಚ್ಚಲೆಲ್ಲ ಮುಚ್ಚಿ ಹೋಗಿದ್ದಕ್ಕೋ ಏನೋ ದೊಡ್ಡ ಕೊಚ್ಚೆ ಗುಂಡಿ.
ಮನಸನ್ನು ಒಂಥರಾ ವಿಷಾದ ಆವರಿಸಿತು. ಮನಸ್ಸು ಅಲ್ಲಿಂದ ಆಚೆ ಓಡಿ ಹೋಗಲು ತುಡಿಯುತ್ತಿತ್ತು.
‘ಕಾಫಿ ಕೊಡ್ತೀನಿ ಇರಮ್ಮಾ’ ಅಂದ್ರು. ನನಗೆ ಗಾಬರಿ ಆಗಿಹೋಯ್ತು. ಪಾಪ ಆತ್ಮೀಯತೆಯಿಂದ ಕರೆದಿದ್ದರು, ಮನೆಯೊಳಗೆ ಓಡಾಡಲು ಬಿಟ್ಟರು. ಎಲ್ಲ ಸರಿ… ಆದರೆ ಆ ಕೊಳಕಲ್ಲಿ ಕಾಫಿ ಕುಡಿಯಲು ಮನಸ್ಸು ನಿರಾಕರಿಸಿಬಿಟ್ಟಿತು. ಅಲ್ಲಿಯವರೆಗೆ ಇಲ್ಲದ ಗಡಿಬಿಡಿಯನ್ನೆಲ್ಲ ಆರೋಪಿಸಿಕೊಂಡು, ಇಲ್ಲದ ಕೆಲಸಗಳ ಪಟ್ಟಿಯನ್ನೆಲ್ಲ ಹೇಳುತ್ತಾ ಅಲ್ಲಿಂದ ಎದ್ದು ಹೊರಟೆ.
ಸರಿ… ಮನೆಯ ಒಳಗೆ, ಸುತ್ತ ಮುತ್ತ ಹೀಗಾಗತ್ತೆ… ಪ್ರಕೃತಿಯಂತೂ ನನ್ನ ಕೈ ಬಿಡೋದಿಲ್ಲ ಅನ್ನಿಸಿ ಮನೆಯ ಹತ್ತಿರವೇ ಇದ್ದ ಕಪಿಲಾ ನದಿಗೆ ಹೋಗುವ ಸಂಭ್ರಮದ ತಯಾರಿ ನಡೆಸಿದೆ. ಕಾಲೋನಿಯ ಹಿಂಭಾಗದ ಸಣ್ಣ ರಸ್ತೆಯಲ್ಲಿ ನಮ್ಮ ಪ್ರಯಾಣ ಮುಂದುವರೆಯಿತು. ಅಲ್ಲೊಂದು ಪುಟ್ಟ ಹಳ್ಳಿ… ನನಗೆ ಅದು ಹಿಂದೆ ಇದ್ದ ನೆನಪೇ ಇಲ್ಲ. ಹೊಸದಾಗಿ ಹುಟ್ಟಿಕೊಂಡಿದ್ದೋ ಅಥವಾ ಆಗಲೂ ಅಲ್ಲೇ ಇತ್ತೋ?
ಮನೆಯ ಮುಂದೆ, ಕಟ್ಟೆಯ ಮೇಲೆ ಅಲ್ಲಲ್ಲಿ ಹರಟುತ್ತಾ ಕೂತ ಜನ. ಸಮಯ ಕಾಲು ಮುರಿದು ಬಿದ್ದಿದ್ದ ಹಳ್ಳಿ. ಯಾರಿಗೂ, ಯಾವುದಕ್ಕೂ ಆತುರವಿದ್ದಂತೆ ತೋರಲಿಲ್ಲ. ಒಂದಿಷ್ಟು ಮಕ್ಕಳು ನಮ್ಮ ಕಾರಿನ ಸುತ್ತ ಜಮಾಯಿಸಿದವು. ಹಿಂದೆಲ್ಲ ನಾವು ಕೂಡಾ ಯಾವುದಾದರೂ ಕಾರು ಬಂದರೆ ಹಾಗೇ ನಿಲ್ಲುತ್ತಿದ್ದ ನೆನಪಾಯ್ತು.
‘ಇಲ್ಲಿಂದ ನದಿ ಎಷ್ಟು ದೂರ?’ ನನ್ನ ಪ್ರಶ್ನೆಗೆ ಅಲ್ಲಿದ್ದವರೆಲ್ಲ ಮುಖ ಮುಖ ನೋಡಿಕೊಂಡರು. ನನಗೆ ವಿಚಿತ್ರವೆನ್ನಿಸಿತು. ‘ಯಾವ ನದಿ? ಇಲ್ಲಿ ಯಾವ ನದಿಯೂ ಇರಲಿಲ್ಲವಲ್ಲಾ?’ ಅಂದರು.
ನನ್ನ ಜೀವನದಲ್ಲಿ ಆಶ್ಚರ್ಯಾಘಾತ ಅಂತೇನಾದ್ರೂ ಆಗಿದ್ರೆ ಅದು ಅವತ್ತೇ! ನದಿ ಇರಲಿಲ್ಲ!! ಹಾಗಾದರೆ ನಮ್ಮ ಕೆಲಸದವಳು ಬುಟ್ಟಿಯಲ್ಲಿ ಬಟ್ಟೆ ಹೊತ್ತುಕೊಂಡು ಹೋಗಿ ಒಗೆಯುತ್ತಿದ್ದುದು ಎಲ್ಲಿ? ನಾವೆಲ್ಲ ಅವಳನ್ನು ಹಿಂಬಾಲಿಸಿ ಅಲ್ಲಿದ್ದ ಬೇಲದ ಮರದಿಂದ ಹಣ್ಣು ಕಿತ್ತು ಅದೇ ನದಿಯ ನೀರಲ್ಲಿ ಪಾನಕ ಮಾಡಿ ಕುಡಿಯುತ್ತಿದ್ದುದು ಸುಳ್ಳಾ? ಸ್ನಾನ ಮಾಡ್ತಿದ್ದಿದ್ದು ಸುಳ್ಳಾ?
ಇವರಿಗೆಲ್ಲ ಏನೋ ಆಗಿದೆ ಅಂದುಕೊಂಡು ಮತ್ತಷ್ಟು ದೂರ ಅದೇ ದಾರಿಯಲ್ಲಿ ಮುಂದುವರೆದಿದ್ದೂ ಆಯ್ತು. ನದಿ ಮಾತ್ರ ಸಿಗಲೆ ಇಲ್ಲ. ಅಲ್ಲಿದ್ದ ಸಣ್ಣ ನಾಲೆಯೊಂದನ್ನ ತೋರಿಸಿ ಯಾರೋ ಒಬ್ಬ ‘ಇದ್ನೇ ನೀವು ನದಿ ಅಂದ್ಕೊಂಡಿದ್ರೋ ಏನೋ’ ಅಂದ. ನನಗೆ ನಖಶಿಖಾಂತ ಉರಿ ಎದ್ದಿತು. ‘ನಾಲೆಯೊಂದನ್ನ ನದಿ ಎಂದುಕೊಳ್ಳುವಷ್ಟು ಮೂರ್ಖಳ ಹಾಗೆ ಕಾಣ್ತಿದೀನಾ’ ಅಂತ ಕೇಳಿದೆ. “ರೀ ನಂಗೆ ಗೊತ್ತಿಲ್ರೀ’ ಅಂದ! ಅವನು ನದಿಯ ವಿಷಯಕ್ಕೆ ಹಾಗೆ ಹೇಳಿದನೋ ಅಥವಾ ನಾನು ಮೂರ್ಖಳ ಹಾಗೆ ಕಾಣ್ತಿದೀನಾ ಅಂದಿದ್ದಕ್ಕೆ ಕೊಟ್ಟ ಉತ್ತರವೋ ಅದು ತಿಳಿಯಲಿಲ್ಲ!
ಕೊನೆಗೂ ನಿಜಕ್ಕೂ ನದಿ ಸಿಗಲೇ ಇಲ್ಲ. ನನಗೇ ಭ್ರಮೆಯೇನೋ ಅನ್ನಿಸುವ ಹಾಗೆ ಆಗಿಹೋಯ್ತು. ಅಲ್ಲಿಗೆ ನದಿಯ ಹುಡುಕಾಟ ಬಿಟ್ಟು ವಾಪಸ್ ಹೊರಟೆವು. ಅಲ್ಲಿದ್ದ ನದಿ ಏನಾಯಿತೆಂಬ ನನ್ನ ಪ್ರಶ್ನೆಗೆ ಇದುವರೆಗೂ ಉತ್ತರ ಸಿಕ್ಕಿಲ್ಲ. ನಾನು ಓದಿದ್ದ ಶಾಲೆಯೊಂದೇ ನನಗೆ ಸಮಾಧಾನಕರ ಬಹುಮಾನ ಸಿಕ್ಕಿದ ಹಾಗೆ ಕಂಡಿತು. ಅಲ್ಲೆಲ್ಲ ಸುತ್ತಾಡಿದೆ. ಒಂದಿಷ್ಟು ಹೂ ಗಿಡಗಳಿದ್ದವು. ಸುಣ್ಣ ಬಣ್ಣ ಕಂಡು ಓರಣವಾಗಿತ್ತು. ನಿಧಿ ಸಿಕ್ಕಿದ ಹಾಗೆ ಆಯ್ತು. ರಜೆ ಇದ್ದುದರಿಂದ ಬಾಗಿಲು ಹಾಕಿದ್ದರೂ ಕಿಟಕಿಗಳನ್ನೇ ತೆಗೆದು ನಾನು ಕೂತುಕೊಳ್ತಿದ್ದ ರೂಮುಗಳನ್ನೆಲ್ಲ ನೋಡಿದೆ. ಇದ್ದುದರಲ್ಲೇ ಚೊಕ್ಕವಾಗಿತ್ತು. ನನ್ನ ಕನಸಿನ ಪಳಿಯುಳಿಕೆ ಅಲ್ಲಿ ಮಾತ್ರ ಸಿಕ್ಕಿದ್ದು ನನಗೆ.
ಮುಂದೆ ಬದುಕು ಇನ್ನಷ್ಟು ಚೆನ್ನಾಗಿರಬಹುದು ಅಂದ್ಕೊಂಡು ಬದುಕ್ತೀವಲ್ಲ ಹಾಗೆ ಮುಂದಿನ ನನ್ನ ಹುಡುಕಾಟ ಇನ್ನೂ ಚೆಂದವಿರುತ್ತದೆ ಅನ್ನೋ ನಂಬಿಕೆಯಲ್ಲಿ ಪ್ರಯಾಣ ಮುಂದುವರೆಸಿದೆವು. ಅಲ್ಲಿಂದ ೧೦-೧೨ ಕಿಲೋಮೀಟರ್ ದೂರದಲ್ಲಿ ನುಗು ಜಲಾಶಯ. ಆಗಿನ ಕಾಲಕ್ಕೆ ಎಷ್ಟೊಂದು ಸಿನೆಮಾ ಶೂಟಿಂಗ್ ನಡೆಯುತ್ತಿತ್ತು ಅಲ್ಲಿ.
ಒಮ್ಮೆಯಂತೂ ‘ಭಾವತರಂಗ’ ಅನ್ನೋ ಸಿನೆಮಾ ಶೂಟಿಂಗ್‌ಗೆಂದು ಬಂದಿದ್ದ ನಟರು ಬೆಳಗ್ಗಿನಿಂದ ಸಂಜೆಯವರೆಗೆ ಒಂದು ಹಾಡಿನ ಒಂದೇ ಸಾಲಿಗೆ ನಟಿಸಿದ್ದರು! ಅದೂ ಇಳಿಜಾರಿದ್ದ ಸ್ಥಳದಲ್ಲಿ ಹೀರೋಯಿನ್ ಓಡಿ ಬರೋದು ಕೆಳಗೆ ನಿಂತಿದ್ದ ಹೀರೋ ಕಡೆಗೆ. ಅಷ್ಟೇ ಸೀನ್! ಅದಿನ್ನು ಹೇಗೆ ಓಡಿ ಬರಬೇಕಿತ್ತೋ ಭಗವಂತನೇ ಬಲ್ಲ.. ಪಾಪ ಆ ನಟಿ ಓಡಿ, ಓಡಿದ್ದೇ ಬಂತು. ಆ ನಿರ್ದೇಶಕ ಮಹಾಶಯನಿಗೆ ಒಪ್ಪಿಗೆಯೇ ಆಗಿರಲಿಲ್ಲ. ಮುಂದಿನ ಸೀನ್ ನೋಡೋದಿರಲಿ ಆ ಸೀನ್ ಮುಗಿದರೆ ಸಾಕು ಅನ್ನೋ ಅಷ್ಟು ಬೇಜಾರಾಗಿ ಕೊನೆಗೂ ಮುಗಿಯದೆ ಸಾಕಾಗಿ ಹೊರಟು ಬಂದಿದ್ದೆವು. ಹಳ್ಳಿಯ ಬದುಕಿನಲ್ಲಿ ನಮಗೆ ಶೂಟಿಂಗ್ ಅನ್ನೋದೇ ಒಂದು ರೋಮಾಂಚಕರ ವಿಷಯ. ಶೂಟಿಂಗ್ ನೋಡಲು ಹೋಗಿ ಅಲ್ಲಿದ್ದ ಏಕೈಕ ಪಿ.ಡಬ್ಲ್ಯು.ಡಿ ಅತಿಥಿಗೃಹದಲ್ಲಿ ರಾಜಮರ್ಯಾದೆ ಸ್ವೀಕರಿಸಿ ವಾಪಸ್ಸಾಗುತ್ತಿದ್ದ ದಿನಗಳ ನೆನಪಿನಲ್ಲಿ ಅಲ್ಲಿಗೆ ಹೊರಟೆವು.
ಸ್ಥಳ ಮಾತ್ರ ಸದ್ಯ ಮೋಸ ಮಾಡಲಿಲ್ಲ. ನದಿಯಿತ್ತು, ಗಾಳಿಯಿತ್ತು, ಮೌನವಿತ್ತು… ಸುತ್ತ ನದಿ… ಮಧ್ಯೆ ಭೂಮಿ. ಅಲ್ಲಿದ್ದ ಗೆಸ್ಟ್ ಹೌಸ್. ಹಿಂದೆ ಎಷ್ಟೊ ಸಲ ಅಲ್ಲಿ ಬಂದು ಉಳಿಯುತ್ತಿದ್ದೆವು ಕೂಡಾ. ಈಗಲೂ ಯಾಕೆ ಉಳಿಯಬಾರದು ಅನ್ನಿಸಿ ಮೇಟಿಯನ್ನ ಹುಡುಕಲು ಹೊರಟೆವು. ಸಂಜೆಯಾಗಿ ಕತ್ತಲು ಕೂಡ ಇಣುಕುತ್ತಿತ್ತು. ಆತ ನಾಪತ್ತೆ. ಕಾಲ ಅನಂತವೆಂಬ ಭ್ರಮೆ ಹುಟ್ಟಿಸುವಷ್ಟು ಕಾದ ನಂತರ ಅವನು ಪ್ರತ್ಯಕ್ಷನಾದ. ನಾವಲ್ಲಿ ಉಳಿಯಲು ಇಷ್ಟ ಪಡುತ್ತೇವೆ ಅಂದ ಕೂಡಲೆ ನಮ್ಮನ್ನ ಒಂಥರಾ ನೋಡಿದ. ‘ಇಲ್ಲಿ ಊಟ ಗೀಟ ಏನೂ ಸಿಗಲ್ಲ ಸಾ’ ಅಂದ. ‘ಬೇಡ ಬಿಡಪ್ಪಾ ನಾವೇನೋ ತಂದಿರೋದನ್ನೇ ತಿಂದುಕೊಳ್ತೀವಿ’ ಅಂದ್ವಿ.
ಆ ನಂತರ ಕೀ ತಂದು ಬಾಗಿಲು ತೆರೆದ! ಭಗವಂತಾ… ಸತ್ಯಕ್ಕೂ ಹೇಳ್ತೀನಿ ಆ ಮಂಚದ ಮೇಲೆ ಹಾಕಿದ್ದ ಬೆಡ್‌ಶೀಟ್ ನಾವು ಆ ಊರು ಬಿಟ್ಟಾಗ ಕಡೆಯ ಸಲ ಬದಲಿಸಿದ್ದು ಎಂದು ಕಾಣುತ್ತೆ. ಅಷ್ಟು ಹೊಲಸು. ಬಾತ್‌ರೂಮ್‌ನಲ್ಲಿ ಒಡಕಲು ವಾಷ್ ಬೇಸಿನ್, ಕಮೋಡ್, ಟೈಲ್ಸ್ ಮಧ್ಯೆ ದಪ್ಪಗೆ ಕರ್ರನೆಯ ಕೊಳೆ. ನೇತು ಬಿದ್ದ ಜೇಡರ ಬಲೆ, ಮುರಿದುಬಿದ್ದ ಕಿಟಕಿಯ ಗಾಜುಗಳು…
‘ನೋಡಿ ಸಾ ಆ ಕಿಟಕಿ ಒಳಗಿಂದ ಒಂದೊಂದ್ಸಲ ಆವು ಒಳಕ್ಕೆ ಬಂದ್ಬಿಡ್ತದೆ. ಗಾಜು ಆಕ್ಸಿ ಅಂದ್ರೂ ಕೇಳೊರಿಲ್ಲ…’ ಅಂದ.
ನಾನು ಬಿಟ್ಟ ಬಾಣದ ಹಾಗೆ ಓಡಿ ಬಂದು ಕಾರಿನಲ್ಲಿ ಕೂತಿದ್ದೆ!!
ಆದರೆ ಕಬಿನಿಯಲ್ಲಿ ಒಳ್ಳೆಯ ಗೆಸ್ಟ್ ಹೌಸ್ ಇದೆ… ಅಲ್ಲಿ ಉಳಿಯೋದಿಕ್ಕೆ ತೊಂದ್ರೆ ಆಗಲ್ಲ ಅಂದೆ ಭಂಡತನದಿಂದ. ಅದೂ ೧೩-೧೪ ಕಿಲೋಮೀಟರ್ ಅಷ್ಟೆ. ಕತ್ತಲಾಗುತ್ತಾ ಇದ್ದರಿಂದ ಮೊದಲು ಉಳಿಯುವ ವ್ಯವಸ್ಥೆ ಮಾಡಿ ನಂತರ ನನ್ನ ಮನೆಯನ್ನ ನೋಡಲು ಹೋಗೋಣ ಅಂತ ನಿರ್ಧರಿಸಿದ್ದೂ ಆಯ್ತು. ನಾನು ಹೇಳಿದ ಮಾತು ಸುಳ್ಳಾಗಿರಲಿಲ್ಲ. ಒಳ್ಳೆಯ ಗೆಸ್ಟ್ ಹೌಸ್ ಏನೋ ಇತ್ತು. ಆದರೆ ಮಂತ್ರಿ ಮಹಾಶಯರು ಸಂಸಾರ ಸಮೇತ ಬರುವವರಿದ್ದರಿಂದ ರೂಮ್ ಇಲ್ಲ ಅಂತ ಕೈ ಆಡಿಸಿದ. ದುಡ್ಡಿನ ಆಸೆ ತೋರಿಸಿದರೂ ಆಸಾಮಿ ಬಗ್ಗಲೇ ಇಲ್ಲ.
ಅಲ್ಲಿಗೆ ನಮ್ಮ ಹತಾಶೆ ಮುಗಿಲು ಮುಟ್ಟಿತ್ತು. ಸರಿ ನಾವಿದ್ದ ಮನೆಯನ್ನು ನೋಡಿ ಮೈಸೂರಿಗೆ ಹಿಂತಿರುಗೋಣ ಅಂತ ಹೊರಟೆವು. ಅಮ್ಮ ಇಲ್ಲಿದ್ದಾಗ ಮನೆಯ ನಾಲ್ಕೂ ಭಾಗದಲ್ಲಿ ಗೋಡೆಗೆ ಅಂಟಿದ ಹಾಗೆ ಮರುಗ ಗಿಡ ಹಾಕಿದ್ದಳು. ರಾತ್ರಿ ಗಾಳಿಯ ಜೊತೆ ನಮ್ಮ ಮನೆಯ ಒಳಗೆಲ್ಲ ಅದರ ಮತ್ತೇರಿಸುವ ವಾಸನೆ. ಕನಸಿನಲ್ಲೆಲ್ಲ ಆ ಪರಿಮಳ ಕೂಡಾ ಸುಳಿಯುವಂತೆ ಭ್ರಮೆಯಾಗುತ್ತಿತ್ತು ನನಗೆ!!
‘ಹಿಂದೆ ತಾತನ ಬೈಕಿನ ಸೈಲೆನ್ಸರ್ ಪೈಪಿನೊಳಗೆ ಹಾವು ಸೇರಿ ಅದರ ಕಥೆ ಯಾಕೆ ಹೇಳ್ತೀ… ಹಾವು ಹಿಡಿಯೋ ಆಸಾಮಿನ ಕರೆಸಿ ಅದನ್ನ ಈಚೆ ತೆಗೆಯೋ ಅಷ್ಟರಲ್ಲಿ ರಾತ್ರಿ ಹನ್ನೆರಡಾಗಿತ್ತು. ನಮಗೆ ಅದು ಕೂಡ ಒಂದು ಹಬ್ಬವೇನೋ ಅನ್ನೋ ಹಾಗೆ ಅರ್ಧ ಗಾಬರಿ, ಅರ್ಧ ಬೆರಗಿನಲ್ಲಿ ಎದ್ದು ಕೂತು ಹಾವು ಹಿಡಿಯೋ ಮನುಷ್ಯನ್ನ ಹೀರೊ ಥರ ನೋಡ್ತಾ ಕೂತಿದ್ವಿ ಕಣೋ…’ ಮಗನಿಗೆ ಒಂದಿಷ್ಟು ಕೊರೆದೆ.
ತಿರುವಿನ ಮೊದಲ ಮನೆಯೇ ನಮ್ಮ ಮನೆ. ಅಲ್ಲಿ ಇಳಿದ ಕೂಡಲೆ ನಿಜಕ್ಕೂ ಸರಗೂರಿನ ಮನೆ ಅರಮನೆ ಎನ್ನಿಸಿಬಿಟ್ಟಿತು ಈ ಮನೆಯ ವೈಭವದ ಮುಂದೆ! ಮನೆಗೆ ಬಾಗಿಲೂ ಇರಲಿಲ್ಲ. ಮೀಟರ್ ಬಾಕ್ಸ್ ಕಿತ್ತು ವಯರ್‌ಗಳು ಜೋತಾಡುತ್ತಿದ್ದವು. ಕತ್ತಲು ಬೇರೆ. ಸಿನೆಮಾದಲ್ಲಿ ತೋರಿಸುವ ದೆವ್ವದ ಮನೆಯ ಕಳೆ! ಮನೆಯ ಒಳಗೆ ಕಾಲಿಡಲೂ ಧೈರ್ಯ ಬರಲಿಲ್ಲ. ಅಬ್ಬಾ ಅದೆಂತಾ ಹಿಂಸೆಯಾಗಿಹೋಯ್ತು ನನಗೆ.. ದಿನಾ ರಾತ್ರಿ ಎಂಟಕ್ಕೆ ಎದುರಿಗಿದ್ದ ರಾಮಮಂದಿರದಲ್ಲಿ ಕೊಡುವ ಚರಪಿಗಾಗಿ ಓಡುತ್ತಿದ್ದುದು, ನಾನು-ನನ್ನ ಗೆಳತಿ ಜಾರುಬಂಡೆಯ ಕೆಳಗೆ ಮನೆ ಆಟ ಆಡುತ್ತಿದ್ದ ಸ್ಥಳ, ನನ್ನ ಗೆಳೆಯನೊಬ್ಬ ಸಾಕಿದ್ದ ಗಿಣಿ ಮಾತಾಡುತ್ತದೆ ಅಂತ ಅದನ್ನ ನೋಡಲು ಓದು ಬಿಟ್ಟು ಮನೆಯಿಂದ ಆಚೆ ನುಸುಳಿ ಕತ್ತಲಲ್ಲಿ ಜೀವ ಕೈಲಿ ಹಿಡಿದು ಓಡುತ್ತಿದ್ದ ಹಾದಿ… ಎಲ್ಲವೂ ಅಸಹನೀಯ ಅನ್ನಿಸತೊಡಗಿದವು. ನಾವು ಅಲ್ಲಿದ್ದಾಗ ಮನೆಯ ರಸ್ತೆಯ ಅಂಚಿನಲ್ಲಿ ಇದ್ದ ಹುಣಿಸೆಮರದಲ್ಲಿ ದೆವ್ವ ಇದೆ ಅಂತ ಯಾರೋ ಹೇಳಿ ಬಿಟ್ಟಿದ್ದರು. ನಮ್ಮ ಕೆಲಸದವಳ ಮನೆಗೆ ಹೋಗಬೇಕಾದರೆ ಅದನ್ನು ದಾಟಿಯೇ ಹೋಗಬೇಕಿತ್ತು. ಅಮ್ಮ ಕೆಲಸದವಳನ್ನು ಕರೆದು ತಾ ಅಂದರೆ ಆ ಹುಣಿಸೆಮರ ಹತ್ತಿರ ಆಗ್ತಿದ್ದ ಹಾಗೆ ತಾರಕಕ್ಕೇರುತ್ತಿದ್ದ ಎದೆಬಡಿತ, ಎಲ್ಲ ನೆರಳುಗಳೂ ದೆವ್ವದಂತೆ ಕಂಡು ಹಿಂತಿರುಗಿ ನೋಡಲೂ ಧೈರ್ಯವಿಲ್ಲದೆ ಒಂದೇ ಓಟಕ್ಕೆ ಜೀವ ಕೈಲಿ ಹಿಡಿದು ಓಡುತ್ತಿದ್ದೆ. ವಾಪಸ್ ಬರುವಾಗ ಮಾತ್ರ ಕೆಲಸದವಳು ಜೊತೆಗಿರೋ ಧೈರ್ಯದಲ್ಲಿ, ಗತ್ತಿನಲ್ಲಿ ನಿಧಾನಕ್ಕೆ ಹಿಂತಿರುಗುತ್ತಿದ್ದೆ. ನೆನಪುಗಳು ಎಷ್ಟು ಸುಂದರ!
ಈಗ ಇಡೀ ಕಾಲೋನಿಯೇ ದೆವ್ವ ನರ್ತಿಸುವ ಜಾಗದ ಹಾಗೆ ಇತ್ತು. ಹೃದಯ ಭಾರ, ಭಾರ. ಅಪ್ಪ ಅಲ್ಲಿದ್ದ ಕಾಲದಲ್ಲಿ ಅರೆಬರೆ ಮುಗಿದಿದ್ದ ಡ್ಯಾಮ್ ಮಾತ್ರ ಈಗ ಪೂರ್ತಿಯಾಗಿತ್ತು. ದೀಪ ಹಾಕಿದ್ದರು ಸಾಲಾಗಿ ಏರಿಯ ಮೇಲೆ. ಚೆನ್ನಾಗಿತ್ತು. ಈ ಊರಿಗೆ ಬಂದಿದ್ದಕ್ಕೆ ಅದೊಂದು ಸಮಾಧಾನಕರ ಬಹುಮಾನ!
ಇಲ್ಲಿಗೆ ನನ್ನ ಹುಡುಕಾಟ ಮುಗಿದಿತ್ತು. ಬೆಳಗಿನಿಂದ ಸಂಜೆಯವರೆಗಿನ ನೆನಪಿನ ಉತ್ಖನನದಲ್ಲಿ ಏನೂ ಸಿಕ್ಕಿರಲೇ ಇಲ್ಲ. ಬರೀ ಅಗೆದಿದ್ದೇ ಆಯ್ತು. ಮೈಸೂರಲ್ಲಿ ಉಳಿದು ಮರುದಿನ ಬೆಂಗಳೂರಿಗೆ….
ಬದುಕಿನ ಹಾದಿಯಲ್ಲಿ ನಾವು ನಿಂತಲ್ಲಿ ನಿಂತೇ ಹಿಂತಿರುಗಿ ಹಿಂದಿನ ದಾರಿಯನ್ನ ಕಣ್ಣು ಕಿರಿದಾಗಿಸಿ ನೋಡಬೇಕು ಅಷ್ಟೇ. ಆ ದಾರಿಯಲ್ಲಿ ಹಿಮ್ಮುಖ ಪ್ರಯಾಣ ಎಂದೂ ಕೈಗೊಳ್ಳಬಾರದು. ಈಗ ನೋಡಿ ನನಗೆ ಆ ಮಧುರವಾದ ನೆನಪುಗಳೇ ಇಲ್ಲ. ಮನಸಿನಲ್ಲಿ ನಾನು ನೆನಪುಗಳನ್ನು ಮೆಲುಕು ಹಾಕುವಾಗಲೆಲ್ಲ ಆ ದಿನಗಳ ಸುಂದರ ಜಾಗದಲ್ಲಿ ಮತ್ತೆ ಮತ್ತೆ ಓಡಾಡುತ್ತ ಇರುತ್ತಿದ್ದೆ. ಯಾವುದಾದ್ರೂ ಕಥೆ ಓದ್ತಿರಬೇಕಾದ್ರೆ ಆ ಪಾತ್ರಗಳು ಅಲ್ಲೆಲ್ಲ ಓಡಾಡುತ್ತಿದ್ದವು. ನದಿ ಎಂದರೆ ಕಪಿಲೆ ಮನಸ್ಸಿಗೆ ಬರ್ತಿದ್ದಳು. ಪುಟ್ಟ, ಸುಂದರ ಮನೆ ಅಂದ ಕೂಡಲೆ ನನ್ನಮ್ಮ ಪುಟ್ಟ ತೋಟ ಮಾಡಿದ್ದ ಆ ಮನೆ ಕಲ್ಪಿಸಿ ಕೊಳ್ತಿದ್ದೆ. ಈಗ ಆ ಸುಖವೂ ಇಲ್ಲ. ಛೇ! ನೆನಪಿನ ಓಣಿ ಏಕಮುಖ ರಸ್ತೆಯಾಗಿರಬೇಕಿತ್ತು… ಹಿಂತಿರುಗಿ ಹೋಗಲು ಆಗದ ಹಾಗೆ…
ಹುಟ್ಟಿದ್ದು ಕೊಳ್ಳೇಗಾಲದಲ್ಲಿ. ಬೆಂಗಳೂರಿನಲ್ಲಿ ವಾಸ. ಕವನ, ಪ್ರಬಂಧ, ಪ್ರವಾಸ ಕಥನ, ನಾಟಕ ಇವುಗಳನ್ನು ಬರೆಯಲು ಆಸಕ್ತಿ. ಕವನಗಳ ಅನುವಾದ ಇತ್ತೀಚೆಗೆ ಹಿಡಿದಿರುವ ಹುಚ್ಚು. ನಾಟಕ ನೋಡುವುದು ಊರೂರು ಸುತ್ತುವುದು ಅತ್ಯಂತ ಪ್ರೀತಿಯ ಹವ್ಯಾಸಗಳು.`ಜಸ್ಟ್ ಮಾತ್ ಮಾತಲ್ಲಿ’ ಮತ್ತು ‘ಕಿಚನ್ ಕವಿತೆಗಳು’ ಇವರ ಇತ್ತೀಚೆಗಿನ ಪುಸ್ತಕಗಳು