Advertisement
“ಭುಜಂಗ”: ಡಾ. ಎಸ್.ವಿ. ನರಸಿಂಹನ್‌‌ ಸರಣಿ

“ಭುಜಂಗ”: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ಕಾಜಾಣ ಹಕ್ಕಿಗಳು ಒಂದು ರೀತಿಯಲ್ಲಿ ಕಾಡಿನ ಕಾವಲುಗಾರರೆಂದೇ ಹೇಳಬಹುದು. ಹಿಂದಿ ಭಾಷೆಯಲ್ಲಿ ಈ ಹಕ್ಕಿಗಳನ್ನು ಕೋತ್ವಾಲ್ ಅಂದರೆ ಪೊಲೀಸ್ ಎಂದೇ ಕರೆಯುತ್ತಾರೆ! ಅಂತೆಯೇ ಭುಜಂಗ ಒಂದು ನಿರ್ಭಯ ಹಕ್ಕಿ; ಎಷ್ಟೋ ಸಾರಿ ಇತರ ಹಕ್ಕಿಗಳು ಹಿಡಿದ ಬೇಟೆಯನ್ನು ಬೆದರಿಸಿ ದರೋಡೆ ಮಾಡುತ್ತವೆ. ಅಲ್ಲದೆ ತಮ್ಮ ತಂಟೆಗೆ ಬಂದ ಯಾವುದೇ ಜೀವಿಯನ್ನೂ ಅಟ್ಟಿಸಿಕೊಂಡು ಹೋಗಿ, ಹೊಡೆದೋಡಿಸುವುದರಲ್ಲಿ ಬಹಳ ನಿಷ್ಣಾತ! ಭುಜಂಗನಲ್ಲಿ ಈ ಎದೆಗಾರಿಕೆ ಮತ್ತು ನಿರ್ಭೀತಿಯ ಗುಣವನ್ನು ಮನಗಂಡಿರುವ, ಎಷ್ಟೋ ಸಣ್ಣಪುಟ್ಟ ದುರ್ಬಲ ಹಕ್ಕಿಗಳು ಅದೇ ಮರದಲ್ಲಿ ತಮ್ಮ ಗೂಡನ್ನು ಕಟ್ಟಿಕೊಂಡು ರಕ್ಷಣೆ ಪಡೆಯುತ್ತವೆ.
ಡಾ. ಎಸ್.ವಿ. ನರಸಿಂಹನ್‌ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿಯಲ್ಲಿ ಭುಜಂಗ ಹಕ್ಕಿಯ ಕುರಿತ ಬರಹ ಇಲ್ಲಿದೆ

 

ಓದುಗರೇ, ನಾವು ಈವತ್ತು ತಿಳಿದುಕೊಳ್ಳಲು ಹೊರಟಿರುವುದು ಕಾಜಾಣಗಳ ಕುಟುಂಬಕ್ಕೆ ಸೇರಿದ ಒಂದು ಪಕ್ಷಿಯಾದ ಭುಜಂಗ ಎಂಬ ಹಕ್ಕಿಯ ವಿಚಾರ. ಭುಜಂಗನನ್ನು ಇಂಗ್ಲೀಷಿನಲ್ಲಿ ಬ್ಲ್ಯಾಕ್ ಡ್ರೋಂಗೋ Black Drongo ಎಂದು ಕರೆಯುತ್ತಾರೆ ಮತ್ತು ವೈಜ್ಞಾನಿಕವಾಗಿ ಡೈಕ್ರೂರಸ್ ಮ್ಯಾಕ್ರೋಸೆರ್ಸಸ್ (Dicrurus macrocercus) ಎನ್ನುತ್ತಾರೆ. ಇವು ಭೀಮರಾಜ ಮುಂತಾದ ಇತರ ಕಾಜಾಣಗಳಿರುವ, ಡೈಕ್ರೂರಿಡೆ (Dicruridae) ಎಂಬ ಕುಟುಂಬಕ್ಕೆ ಸೇರಿವೆ. ಭುಜಂಗ ಹಕ್ಕಿಗಳು ಭಾರತವಲ್ಲದೆ, ದಕ್ಷಿಣ ಏಶಿಯಾ ಖಂಡದ ಇರಾನ್, ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶ, ಚೀನಾ ಮುಂತಾದ ದೇಶಗಳಲ್ಲಿ ಕಂಡುಬರುತ್ತವೆ.

ಭುಜಂಗ ಸುಮಾರು ಒಂದು ಅಡಿ ಅಂದರೆ, 30 ಸೆಂಟಿಮೀಟರ್ ನೀಳವಾದ, ಸಪೂರವಾದ, ಅಚ್ಚಗಪ್ಪು ದೇಹದ ಪಕ್ಷಿ. ದಪ್ಪನಾದ ಕೊಕ್ಕೆಯಂತಿರುವ ಕೊಕ್ಕು; ಕಡುಗಂದು ಬಣ್ಣದ ಕಣ್ಣುಗಳು; ಉದ್ದವಾದ ಧೃಢವಾದ ರೆಕ್ಕೆಗಳು; ಬಲಿಷ್ಟ ಕಾಲುಗಳು, ಅವುಗಳಲ್ಲಿ ಚೂಪಾದ ಕಾಲುಗುರುಗಳು, ಇವು ಭುಜಂಗ ಹಕ್ಕಿಯ ಒಟ್ಟಾರೆ ರೂಪುರೇಷೆ. ಇವೆಲ್ಲಕ್ಕಿಂತ ಮುಖ್ಯವಾಗಿ ಅವುಗಳ ವಿಶೇಷವಾದ ಉದ್ದನಾದ ಬಾಲ ಈ ಹಕ್ಕಿಗಳನ್ನು ಗುರುತು ಹಿಡಿಯಲು ಸಹಕಾರಿ. ಏಕೆಂದರೆ ಆ ಬಾಲ ಉದ್ದವಾಗಿದ್ದು ಮಧ್ಯೆ ಕವಲೊಡೆದು ಸೀಳಿದಂತಿರುತ್ತದೆ. ಬಾಲದ ಕವಲು ಸೇರುವಲ್ಲಿ ಒಂದು ಬಿಳಿ ಮಚ್ಚೆಯನ್ನು ಕಾಣಬಹುದು. ಹೆಣ್ಣು-ಗಂಡು ಭುಜಂಗಗಳು ನೋಡಲು ಒಂದೇ ರೀತಿಯಿರುತ್ತವೆ.

ಭುಜಂಗಗಳದ್ದು ಲೀಲಾಜಾಲವಾದ, ಅಷ್ಟೇ ಶಕ್ತಿಯುತ ಹಾರಾಟ. ಸಣ್ಣ ಗುಂಪಿನಲ್ಲಿ, ಸದಾಹಸಿರು, ಕುರುಚಲು ಹಾಗೂ ವಿರಳವಾದ ಗಾಡುಗಳಲ್ಲಿ, ಕೃಷಿ ಪ್ರದೇಶ, ಎಸ್ಟೇಟುಗಳಲ್ಲಿ ಮರಗಳ ಮೇಲೆ ವಾಸಿಸುತ್ತವೆ. ಬೇಟೆಯಾಡುವಾಗ, ಒಣರೆಂಬೆಯ ಮೇಲೋ, ತಂತಿಯ ಮೇಲೋ ಕುಳಿತು ಹೊಂಚುಹಾಕುತ್ತವೆ ಅಥವಾ ಗೋವುಗಳ ಮೇಲೆ ಕುಳಿತು, ಅವು ಮೇಯುತ್ತಿರುವಾಗ ಅಲುಗಾಟಕ್ಕೆ ಮೇಲೆದ್ದ ಕೀಟಗಳ ಮೇಲೆಗರಿ, ಭಕ್ಷಿಸುತ್ತವೆ. ಸಣ್ಣ ಜೀವಿಗಳು, ಕೀಟಗಳು, ಹೂ ಮಕರಂದವೇ ಆಹಾರ. ಮಿಡತೆ, ಸಿಕಾಡಾ, ಗೆದ್ದಲುಹುಳ, ಕಣಜ, ದುಂಬಿ, ಕೆಂಜಿರುವೆ, ಜೀರುಂಡೆ, ಮುಂತಾದ ರೈತರು ಬೆಳೆದ ಬೆಳೆಗಳನ್ನು ನಾಶ ಮಾಡುವ ಕೀಟಗಳ ಭಕ್ಷಕ, ಆದ್ದರಿಂದ ರೈತನ ಆಪ್ತಮಿತ್ರ.

ಕಾಜಾಣ ಹಕ್ಕಿಗಳು ಒಂದು ರೀತಿಯಲ್ಲಿ ಕಾಡಿನ ಕಾವಲುಗಾರರೆಂದೇ ಹೇಳಬಹುದು. ಹಿಂದಿ ಭಾಷೆಯಲ್ಲಿ ಈ ಹಕ್ಕಿಗಳನ್ನು ಕೋತ್ವಾಲ್ ಅಂದರೆ ಪೊಲೀಸ್ ಎಂದೇ ಕರೆಯುತ್ತಾರೆ! ಅಂತೆಯೇ ಭುಜಂಗ ಒಂದು ನಿರ್ಭಯ ಹಕ್ಕಿ; ಎಷ್ಟೋ ಸಾರಿ ಇತರ ಹಕ್ಕಿಗಳು ಹಿಡಿದ ಬೇಟೆಯನ್ನು ಬೆದರಿಸಿ ದರೋಡೆ ಮಾಡುತ್ತವೆ. ಅಲ್ಲದೆ ತಮ್ಮ ತಂಟೆಗೆ ಬಂದ ಯಾವುದೇ ಜೀವಿಯನ್ನೂ ಅಟ್ಟಿಸಿಕೊಂಡು ಹೋಗಿ, ಹೊಡೆದೋಡಿಸುವುದರಲ್ಲಿ ಬಹಳ ನಿಷ್ಣಾತ! ಭುಜಂಗನಲ್ಲಿ ಈ ಎದೆಗಾರಿಕೆ ಮತ್ತು ನಿರ್ಭೀತಿಯ ಗುಣವನ್ನು ಮನಗಂಡಿರುವ, ಎಷ್ಟೋ ಸಣ್ಣಪುಟ್ಟ ದುರ್ಬಲ ಹಕ್ಕಿಗಳು ಅದೇ ಮರದಲ್ಲಿ ತಮ್ಮ ಗೂಡನ್ನು ಕಟ್ಟಿಕೊಂಡು ರಕ್ಷಣೆ ಪಡೆಯುತ್ತವೆ.

ಭುಜಂಗ ಹಾಡುವುದರಲ್ಲಿ ಎತ್ತಿದ ಕೈ. ಹಲವಾರು ಪಕ್ಷಿಗಳ ಅಣಕುಗಾರ. ಎಷ್ಟೋ ಬಾರಿ ಹೆಣ್ಣು ಹಕ್ಕಿಯನ್ನು ಆಕರ್ಷಿಸಲು, ವಿವಿಧ ಹಕ್ಕಿಗಳು ಹಾಡುವ ವಿವಿಧ ಹಾಡುಗಳನ್ನು ಭುಜಂಗನೇ ಅನುಸರಿಸಿ ಹೇಳುತ್ತಿರುವಾಗ, ನುರಿತ ಪಕ್ಷಿವೀಕ್ಷರೂ ಒಂದು ಕ್ಷಣ ತಬ್ಬಿಬ್ಬಾಗಿಬಿಡುತ್ತಾರೆ! ಉಳಿದ ಸಮಯದಲ್ಲಿ ಕರ್ಕಶ, ಬೈಗುಳದ ಕೊನೆಯಲ್ಲಿ ಒಂದು ರೀತಿ ಎಲೆಕ್ಟ್ರಾನಿಕ್ ವಾದ್ಯದ ಕೂಗು.

ಭುಜಂಗ ಪಕ್ಷಿಯ ಸಂತಾನಋತು ಏಪ್ರಿಲ್‌ನಿಂದ ಆಗಸ್ಟ್‌ವರೆಗೆ. ಗಂಡು-ಹೆಣ್ಣು ಎರಡೂ ಭುಜಂಗಗಳು ಸೇರಿ, ಸುಮಾರು 14ರಿಂದ 30 ಅಡಿ ಎತ್ತರದ ಮರದ ತುದಿಕವೆಯಲ್ಲಿ, ಎಲ್ಲರಿಗೂ ಕಾಣುವ ಹಾಗೆ, ಹುಲ್ಲು, ಜೇಡರ ಬಲೆ, ನಾರುಗಳಿಂದ ನೇಯ್ದ ಗೂಡು ಕಟ್ಟುತ್ತವೆ. ಇದರಲ್ಲಿ ಮೂರರಿಂದ ಐದು ಕೆಂಪು ಚುಕ್ಕೆಗಳಿರುವ ಬಿಳಿ ಮೊಟ್ಟೆಗಳು. ಮರಿಹಕ್ಕಿಗಳಿಗೆ ಸುಮಾರು ಒಂದು ತಿಂಗಳ ಪೋಷಣೆ ಅಗತ್ಯ.

(ಕಲೆ: ಡಾ. ಎಸ್.ವಿ. ನರಸಿಂಹನ್‌‌)

About The Author

ಡಾ. ಎಸ್‌. ವಿ. ನರಸಿಂಹನ್

ಡಾ. ಎಸ್‌.ವಿ. ನರಸಿಂಹನ್ ವೈದ್ಯರು. ಕೊಡಗಿನ ವಿರಾಜಪೇಟೆಯಲ್ಲಿ ನೆಲೆಸಿದ್ದಾರೆ. ಆರೋಗ್ಯ ರಕ್ಷಣೆಯೊಂದಿಗೆ ಪರಿಸರ ರಕ್ಷಣೆಯ ಬಗೆಗೂ ಅಪಾರ ಕಾಳಜಿ ಹೊಂದಿದ್ದಾರೆ. ಕಳೆದ ನಲವತ್ತೊಂದು ವರ್ಷಗಳಿಂದ ಡಾ. ನರಸಿಂಹನ್‌ರವರು ಕೈಯಿಂದ ಕುಂಚಿಸಿದ ಸುಮಾರು ಎಂಭತ್ತೆರಡು  ಸಾವಿರ ‘ವನ್ಯಜೀವಿ ಸಂದೇಶ ಪತ್ರ’ಗಳು ಪ್ರಪಂಚದಾದ್ಯಂತ ತಲುಪಿವೆ. ಇದೊಂದು ಲಿಮ್ಕಾ ದಾಖಲೆ. ವಿಜ್ಞಾನ ಬರವಣಿಗೆಯಲ್ಲೂ ಆಸಕ್ತಿ ಹೊಂದಿರುವ ಇವರು, ಕನ್ನಡ ಭಾಷೆ, ಸಂಗೀತ-ಸಾಹಿತ್ಯ, ಖಗೋಳ, ಪರಿಸರ ಮುಂತಾದ ವಿಷಯಗಳಲ್ಲಿ ಶಾಲಾ-ಕಾಲೇಜುಗಳಲ್ಲಿ, ರೇಡಿಯೋ, ಟಿವಿ ಮತ್ತು ಪತ್ರಿಕಾ ಮಾಧ್ಯಮಗಳ ಮೂಲಕ ವಿದ್ಯಾರ್ಥಿಗಳಲ್ಲಿ ಆಸಕ್ತಿ ಬೆಳೆಸಿದ್ದಾರೆ. ಕೊಡಗಿನ ಸಂಪೂರ್ಣ ಪಕ್ಷಿಸಂಕುಲದ ನಿಖರ ಮಾಹಿತಿಯುಳ್ಳ ‘ಕೊಡಗಿನ ಖಗರತ್ನಗಳು’ ಪುಸ್ತಕದಲ್ಲಿ ತಾವೇ ಎಲ್ಲ ಹಕ್ಕಿಗಳ ಚಿತ್ರಗಳನ್ನೂ ಬರೆದದ್ದು ಮತ್ತೊಂದು ಲಿಮ್ಕಾ ದಾಖಲೆ.  ‘2013ರ ಕೊಡಗಿನ ವರ್ಷದ ವ್ಯಕ್ತಿ’ಪುರಸ್ಕೃತರು

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ