2011ರ ನವೆಂಬರ್ ತಿಂಗಳ 5 ನೆಯ ತಾರೀಕಿನಂದು ತಮ್ಮ 85ನೆಯ ವಯಸ್ಸಿನಲ್ಲಿ ಮುಂಬೈನಲ್ಲಿ ತೀರಿಕೊಂಡ ಭುಪೇನ್ ಅವರ ಕಳೇಬರವನ್ನು ಗೌಹಾಟಿಯ ವಿಶ್ವವಿದ್ಯಾಲಯದ ಬಳಿಯ ಸ್ಥಳದಲ್ಲಿ ಸಮಾಧಿ ಮಾಡಲಾಗಿದೆ. 200 ಎಕರೆಗಳ ಜಾಗದಲ್ಲಿ ಸ್ಮಾರಕವೊಂದು ನಿರ್ಮಾಣವಾಗುತ್ತಿದೆ. ಅಲ್ಲಿ ಸಂಗ್ರಹಾಲಯದ ಜೊತೆಗೆ ಅಧ್ಯಯನ ಪೀಠ ಸ್ಥಾಪಿಸುವುದರ ಮೂಲಕ ಅಸ್ಸಾಮಿ ಶೈಲಿಯ ಸಂಗೀತ ಕಲಿಕೆಗೆ, ಪ್ರಸ್ತುತಿಗೆ ಒತ್ತು ಕೊಡುವ ಉದ್ದೇಶವಿದೆ. ಕಂಡಷ್ಟು ಪ್ರಪಂಚ ಅಂಕಣದಲ್ಲಿ ಅಂಜಲಿ ರಾಮಣ್ಣ  ಅವರು ಭುಪೇನ್ ಹಝಾರಿಕ ಅವರ ಕುರಿತು  ಬರೆದ ಬರಹ. 

 

ಇವತ್ತು ಅರುಣಾಚಲ ಪ್ರವಾಸದ ಕೊನೆಯ ದಿನ. ಕಾಯುತ್ತಿರುವ ಕುಟುಂಬವನ್ನು ಸೇರಿಕೊಳ್ಳುತ್ತೇನೆ ಎನ್ನುವ ಆಸೆ ಇತ್ತು. ಆದರೆ ಬೆಳಗ್ಗೆ ಎದ್ದಾಗಿನಿಂದ ಉತ್ಸಾಹವೇ ಇಲ್ಲದಂತಾಗಿತ್ತು. ಈ ನೆಲದಲ್ಲಿ ಏನೋ ಬಿಟ್ಟು ಹೋಗುತ್ತಿದ್ದೇನೆ ಎನ್ನುವ ಸಣ್ಣ ನೋವು. ಇಷ್ಟು ಬೇಗ ಇಲ್ಲಿನ ಋಣ ಮುಗಿಯಬಾರದಿತ್ತು ಎನ್ನುವಂತಹಾ ಭಾವ. “ಕರಾಗ್ರೇ ವಸತೇ ಲಕ್ಷ್ಮಿ ಕರಮಧ್ಯೆ ಸರಸ್ವತಿ ಕರ ಮೂಲೇ ಸ್ಥಿತೇ ಗೌರಿ ಪ್ರಭಾತೇ ಕರ ದರ್ಶನಂ” ಎಂದು ಹೇಳಿಕೊಂಡು ಎದ್ದೇಳಬೇಕಿದ್ದ ಮನಸ್ಸು, ಅದು ಯಾಕೋ ಗೊತ್ತಿಲ್ಲ ಹಿಂದಿಯ ರುಡಾಲಿ ಸಿನೆಮಾದಲ್ಲಿ ಗುಲ್ಜಾರ್ ಬರೆದಿರುವ ಗೀತೆ “ದಿಲ್ ಹೂಂ ಹೂಂ ಕರೆ ಘಬ್‌ರಾಯೆ . . . ಘನ್ ಧಮ್ ಧಮ್ ಕರೇ ಡರ್ ಜಾಯೆ . . .” ಅಂತ ಹಾಡಿಕೊಳ್ಳುತ್ತಿತ್ತು.

ಈ ಹಾಡನ್ನು ಲತಾ ಮಂಗೇಶ್ಕರ್ ಹಾಗೂ ಭುಪೇನ್ ಹಝಾರಿಕ ಇಬ್ಬರೂ ಹಾಡಿದ್ದರೂ ನನ್ನನ್ನು ಮೊದಲಿನಿಂದಲೂ ಸೆಳೆದದ್ದು ಹಝಾರಿಕ ಅವರ ಧ್ವನಿ. ಅದರಲ್ಲೂ “ಜಿಸ್ ತನ್ಕೋ ಛೂವಾ ತೂನೆ… ಉಸ್ ತನ್ ಕೋ ಛುಪಾವೂ…. ಜಿಸ್ ಮನ್ಕೋ ಲಾಗೆ ನೈನಾ ವೋ ಕಿಸ್ಕೊ ದಿಖಾವೂ….” ಎನ್ನುವ ಸಾಲುಗಳನ್ನು ಹಾಡುವಾಗ ಹಝಾರಿಕ ಅವರ ಧ್ವನಿಯಲ್ಲಿನ ಆರ್ದ್ರತೆ ಇನ್ನಿಲ್ಲದಂತೆ ಸೆಳೆಯುತ್ತದೆ. ಯಾವುದೋ ಜನುಮದ ಪಳಿಯುಳಿಕೆಯೊಂದರಂತೆ ಕಾಡುತ್ತೆ.

ಈ ಹಾಡಿನ ಮೊದಲೆರಡು ಸಾಲುಗಳು ಧ್ವನಿಪೆಟ್ಟಿಗೆಗಳಿಗೆ ಮೆತ್ತಿಕೊಂಡು ಬಿಟ್ಟಿತ್ತು. ಹಾಡಿಕೊಳ್ಳುತ್ತಲೇ ಪ್ಯಾಕಿಂಗ್ ಮುಗಿಸಿ ಡ್ರೈವರ್ ರಾಧಾಕೃಷ್ಣನಿಗಾಗಿ ಕಾಯುತ್ತಾ ನಿಂತೆ. ಆಗಲೂ ಹಾಡುತ್ತಲೇ ಇದ್ದೆ. ಕೇಳರಿಯದ ಹಕ್ಕಿಗಳ ಚಿಲಿಪಿಲಿ, ಕೆಳಗೆ ಬಿದ್ದ ಎಲೆಗಳಿಂದ ಬೆಳಕಿನ ವಾಸನೆ, ಮರದ ಮೇಲಿನ ಹಸಿರಿನಲ್ಲಿ ಹೂ ನಗು, ನಕ್ಷತ್ರದಂತೆ ಹೊಳೆಯುತ್ತಿದ್ದ ನಿಶಬ್ಧ, ನೀಲಿ ನೀಲಿ ಆಕಾಶ ಮತ್ತು ದಿಲ್ ಹೂಂ ಹೂಂ ಕರೇ ಹಾಡಿನ ಸಾಲುಗಳು -ಇವುಗಳೊಂದಿಗೆ, ಇಟಾನಗರದಿಂದ ಒಂಬತ್ತು ಕಿಲೋಮೀಟರ್‌ಗಳಷ್ಟು ಹಿಂದೆಯೇ ಇರುವ ನಹಾರ್ಲಗುನ್ ಹೆಲಿಪ್ಯಾಡ್‌ಗೆ ಬಂದಿಳಿದೆ.

ರಸ್ತೆ ಪ್ರಯಾಣದಲ್ಲಿ ಗೌಹಾಟಿ ತಲುಪಲು 11 ರಿಂದ 12 ಗಂಟೆಗಳ ಸಮಯವಾಗುತ್ತದೆ. ಆದರೆ ಹೆಲಿಕ್ಯಾಪ್ಟರ್‌ನಲ್ಲಿ ಕೇವಲ 1 ಗಂಟೆ 10 ನಿಮಿಷಗಳ ಅವಧಿ ಸಾಕು. ಮತ್ತೆ ಮತ್ತೆ ಅದೇ ಹಾಡನ್ನು ಮೌನದಲ್ಲೇ ಹಾಡಿಕೊಳ್ಳುತ್ತಾ ಗೌಹಾಟಿ ವಿಮಾನ ನಿಲ್ದಾಣ ತಲುಪಿದೆ. ಅದೇ ಹಾಡನ್ನು ಹಾಡುತ್ತಿದ್ದೆ.

ಗಡಿಯಾರ 9.30 ಬೆಳಗು ಎಂದು ಹೇಳುತ್ತಿತ್ತು. ಬೆಂಗಳೂರಿನ ಪ್ರಯಾಣಕ್ಕೆ ವಿಮಾನವಿದ್ದದ್ದು ಸಂಜೆ 7.30 ಕ್ಕೆ. ಚಕ್ರವಿರುವ ಕಾಲುಗಳು ಸುಮ್ಮನೆ ಕೊಡುತ್ತವೆಯೇನು?! ಯಾವುದೇ ಯೋಜನೆ ಹಾಕಿಕೊಳ್ಳದೆ, ಯಾವುದೇ ಜಾಗವನ್ನು ನೋಡಲೇಬೇಕೆಂದು ಪಟ್ಟಿ ಮಾಡಿಕೊಳ್ಳದೆ, ಹಾಗೇ ಸುಮ್ಮನೆ ಗೊತ್ತು ಗುರಿಯಿಲ್ಲದೆ ಒಂದಷ್ಟು ಗಂಟೆಗಳ ಕಾಲ ಗೌಹಾಟಿಯನ್ನು ಸುತ್ತಿ ಬರೋಣ ಎಂದು ಟ್ಯಾಕ್ಸಿ ಗೊತ್ತು ಮಾಡಿಕೊಂಡೆ.

ಧನಂಜೋಯ್ ಎನ್ನುವ ಹೆಸರಿನ ಚಾಲಕನ ಗಾಡಿ ಹತ್ತುವಾಗಲೂ ಎತ್ತರದ ಧ್ವನಿಯಲ್ಲಿಯೇ ಹಾಡುತ್ತಿದ್ದೆ “ದಿಲ್ ಹೂಂ ಹೂಂ ಕರೇ…” ಒಂದು ಹತ್ತು ನಿಮಿಷಗಳ ಪಯಣದ ನಂತರ ನಾನು ಹಾಡುತ್ತಿದ್ದ ಹಾಡನ್ನು ಕೇಳಿಸಿಕೊಂಡೋ ಏನೋ ಧನಂಜೋಯ್ ಕೇಳಿದ “ದೀದಿ ಭುಪೇನ್ ಹಝಾರಿಕ ಅವರ ಸಮಾಧಿ ಇಲ್ಲೇ ಹತ್ತಿರದಲ್ಲೇ ಇದೆ. ಕರೆದುಕೊಂಡು ಹೋಗಲಾ?” ಓಹ್, ನನಗಂತೂ ಪರಮಾಶ್ಚರ್ಯ. ಬೆಳಗಿನಿಂದ ನಾಲಿಗೆಯಲ್ಲಿ ಅರಿವಿಲ್ಲದೆಯೇ ಕುಣಿಯುತ್ತಿದ್ದ ಹಾಡಿಗೂ ಚಾಲಕನ ಮಾತಿಗೂ ಈಗ ಸಂಬಂಧ ಹೊಳೆಯಿತು.

ಈ ವಿಶ್ವವು ತನ್ನಂತೆಯೇ ನಮ್ಮನ್ನು ನಡೆಸಿಕೊಳ್ಳಲು ಏನೆಲ್ಲಾ ಉಪಾಯ ಹೂಡುತ್ತದೆ. ಸೂಚನೆಗಳನ್ನೂ ನೀಡುತ್ತಿರುತ್ತದೆ. ಗುರುತಿಸುವ ಸೂಕ್ಷ್ಮತೆ ನಮಗಿರಬೇಕಷ್ಟೆ. ಇಷ್ಟೊಂದು ಅದೃಷ್ಟವನ್ನು ತುಂಬಿಕೊಟ್ಟಿರುವ ಆ ಕಾಣದ ಕೈಗಳಿಗೆ ನಮಿಸುತ್ತಾ “ಆಗಲಿ ಊರೆಲ್ಲಾ ಸುತ್ತಿ ವಾಪಸ್ಸು ಬರೋವಾಗ ಕರೆದುಕೊಂಡು ಹೋಗಪ್ಪ” ಎಂದೆ.

ನೀಲಕಂಠ ಮತ್ತು ಶಾಂತಿಪ್ರಿಯ ಎನ್ನುವ ಮಧ್ಯಮ ವರ್ಗದ ಅಸ್ಸಾಮಿ ದಂಪತಿಗಳ ಹತ್ತು ಜನ ಮಕ್ಕಳಲ್ಲಿ ಹಿರಿಯ ಮಗನಾಗಿ 1926 ರ ಸೆಪ್ಟೆಂಬರ್ 8 ನೆಯ ದಿನಾಂಕದಂದು ಹುಟ್ಟಿದ್ದು ಭುಪೇನ್ ಹಝಾರಿಕ. ಬಾಲ್ಯದಿಂದಲೇ ತಾಯಿ ಹಾಡುತ್ತಿದ್ದ ಜೋಗುಳ ಮತ್ತು ಬೋರ್ಗೀತ್ (ಅಸ್ಸಾಮಿ ಶೈಲಿಯ ದೇವರ ನಾಮಗಳು) ಗಳ ಬಗ್ಗೆ ಭುಪೇನ್‌ಗೆ ಎಲ್ಲಿಲ್ಲದ ಆಸಕ್ತಿ. ಶ್ರದ್ಧೆಯಿಟ್ಟು ತಾಯಿಯಿಂದ ಕಲಿತುಕೊಳ್ಳುತ್ತಿದ್ದ ಬಾಲಕ.

ಇಷ್ಟು ಬೇಗ ಇಲ್ಲಿನ ಋಣ ಮುಗಿಯಬಾರದಿತ್ತು ಎನ್ನುವಂತಹಾ ಭಾವ. “ಕರಾಗ್ರೇ ವಸತೇ ಲಕ್ಷ್ಮಿ ಕರಮಧ್ಯೆ ಸರಸ್ವತಿ ಕರ ಮೂಲೆ ಗೌರಿ ಪ್ರಭಾತೇ ಕರ ದರ್ಶನಂ” ಎಂದು ಹೇಳಿಕೊಂಡು ಎದ್ದೇಳಬೇಕಿದ್ದ ಮನಸ್ಸು ಅದು ಯಾಕೋ ಗೊತ್ತಿಲ್ಲ ಹಿಂದಿಯ ರುಡಾಲಿ ಸಿನೆಮಾದಲ್ಲಿ ಗುಲ್ಜಾರ್ ಬರೆದಿರುವ ಗೀತೆ “ದಿಲ್ ಹೂಂ ಹೂಂ ಕರೆ ಘಬ್‌ರಾಯೆ . . . ಘನ್ ಧಮ್ ಧಮ್ ಕರೇ ಡರ್ ಜಾಯೆ . . .” ಅಂತ ಹಾಡಿಕೊಳ್ಳುತ್ತಿತ್ತು.

1935 ರಲ್ಲಿ ಹೆಚ್ಚಿನ ಉದ್ಯೋಗಾಕಾಂಕ್ಷೆಯಿಂದ ಅರುಣಾಚಲ ಪ್ರದೇಶದ ತೇಜ಼್ಪುರ್‍ಗೆ ಬಂದಿಳಿಯಿತು ಹಝಾರಿಕಾ ಕುಟುಂಬ. 9 ವರ್ಷದ ಬಾಲಕ ಯಾವುದೋ ಸಾರ್ವಜನಿಕ ಸಮಾರಂಭದಲ್ಲಿ ಬೋರ್ಗೀತ್ ಒಂದನ್ನು ಹಾಡುವಾಗ ಅವನ ಧ್ವನಿಯಲ್ಲಿದ್ದ ಮಾಂತ್ರಿಕತೆಗೆ ಮುಗ್ಧರಾದವರು ಆಗಿನ ದಿನಗಳಲ್ಲಿ ಖ್ಯಾತ ಸಿನೆಮಾ ಸಾಹಿತಿಗಳಾದ ಜ್ಯೋತಿ ಪ್ರಸಾದ ಅಗರ್ವಾಲ್ ಮತ್ತು ಬಿಷ್ಣು ಪ್ರಸಾದ. ಇವರುಗಳ ಸಲಹೆಯ ಮೇರೆಗೆ ಅಸ್ಸಾಮಿಗೆ ಹಿಂದಿರುಗಿ ಕವಿರಾಜ್ ಪಂಡಿತ್ ನರೇಂದ್ರ ಶರ್ಮಾ ಅವರಲ್ಲಿ ಸಂಗೀತಾಭ್ಯಾಸ ಶುರುವಿಟ್ಟುಕೊಂಡ ಬಾಲಕ ಭುಪೇನ್ ಮೊದಲ ಬಾರಿಗೆ ಇಂದ್ರಮಾಲತಿ ಎನ್ನುವ ಸಿನೆಮಾದಲ್ಲಿ ಹಾಡಿದಾಗ 13 ವರ್ಷಗಳ ಹುಡುಗ. ಅಂದಿನಿಂದ ನೂರಾರು ದೇಶ ವಿದೇಶೀ ಪ್ರಶಸ್ತಿಗಳ ಜೊತೆಗೆ, ಪದ್ಮಶ್ರೀ, ಪದ್ಮಭೂಷಣ, ಪದ್ಮ ವಿಭೂಷಣ ಮಾತ್ರವಲ್ಲ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯೂ ಅವರನ್ನು ಹುಡುಕಿಕೊಂಡು ಹೋಗಿದ್ದನ್ನು ಗೂಗಲ್ ತಿಳಿಸತ್ತೆ.

ಪ್ರಿಯಂವದಾ ಎನ್ನುವವರನ್ನು ಮದುವೆಯಾಗಿದ್ದ ಭುಪೇನ್ ಹಝಾರಿಕ ಅವರಿಗೆ ತೇಜ್ ಭುಪೇನ್ ಎನ್ನುವ ಒಬ್ಬನೇ ಪುತ್ರ ಇದ್ದಾರೆ. ಈಗ ಆತ ಅಮೇರಿಕಾ ದೇಶದ ನ್ಯೂಯಾರ್ಕ್‌ನಲ್ಲಿ ಇದ್ದು ತಂದೆಯ ಹೆಸರಿನಲ್ಲಿ ಸಂಗ್ರಹಾಲಯವೊಂದನ್ನು ತೆರೆಯುವ ದಿಕ್ಕಿನಲ್ಲಿ ಕೆಲಸ ಮಾಡುತ್ತಿದ್ದಾರೆ.

2011ರ ನವೆಂಬರ್ ತಿಂಗಳ 5 ನೆಯ ತಾರೀಕಿನಂದು ತಮ್ಮ 85ನೆಯ ವಯಸ್ಸಿನಲ್ಲಿ ಮುಂಬೈನಲ್ಲಿ ತೀರಿಕೊಂಡ ಭುಪೇನ್ ಅವರ ಕಳೇಬರವನ್ನು ಗೌಹಾಟಿಯ ವಿಶ್ವವಿದ್ಯಾಲಯದಲ್ಲಿ ಸಂಬಂಧಪಟ್ಟ ಸ್ಥಳದಲ್ಲಿ ಸಮಾಧಿ ಮಾಡಲಾಗಿದೆ. 200 ಎಕರೆಗಳ ಜಾಗದಲ್ಲಿ ಸ್ಮಾರಕವೊಂದು ನಿರ್ಮಾಣವಾಗುತ್ತಿದೆ. ಅಲ್ಲಿ ಸಂಗ್ರಹಾಲಯದ ಜೊತೆಗೆ ಅಧ್ಯಯನ ಪೀಠ ಸ್ಥಾಪಿಸುವುದರ ಮೂಲಕ ಅಸ್ಸಾಮಿ ಶೈಲಿಯ ಸಂಗೀತ ಕಲಿಕೆಗೆ, ಪ್ರಸ್ತುತಿಗೆ ಒತ್ತು ಕೊಡುವ ಉದ್ದೇಶವಿದೆ.

ಬಿಳಿ ಶಿಲೆಯಲ್ಲಿ ವಜ್ರಾಕೃತಿಗಳಲ್ಲಿ ಮೇಲೆಳಲಿರುವ ಕಟ್ಟದ ನೀಲನಕ್ಷೆಯನ್ನು ಅಲ್ಲಿ ತೂಗು ಬಿಡಲಾಗಿದೆ. ಹಝಾರಿಕ ಅವರ ಸಮಾಧಿಯ ಬಳಿ ದೀಪವೊಂದು ಎಡೆಬಿಡದೆ ಉರಿಯುತ್ತಿದೆ. ಆಳೆತ್ತೆರದ ಅವರ ಫೋಟೊ ಸಂಗೀತವನ್ನು ಉಸಿರಾಡುತ್ತಾ ಜೀವಂತವಾಗಿರುವಂತೆ ತೋರುತ್ತದೆ. ಶಾಲಾ ಮಕ್ಕಳು ಕಾಲೇಜು ಯುವಕರು ಅಲ್ಲಿ ಆಗಾಗ್ಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿರುತ್ತಾರೆ. ಸದ್ಯಕ್ಕಂತೂ ಆ ಜಾಗ ಸಿಮೆಂಟಿನ ಧೂಳು, ಜಲ್ಲಿ ಕಲ್ಲಿನ ಘಾಟಿನಿಂದ ತುಂಬಿ ಹೋಗಿದೆ.

ಆದರೂ ಅಲ್ಲೊಂದು ಹಿತವಾದ ನೀರವತೆ ಮನೆ ಮಾಡಿದೆ. ಸಮಾಧಿಯ ಮೆಟ್ಟಿಲುಗಳ ಮೇಲೆ ಅವರದ್ದೇ ಹಾಡುಗಳನ್ನು ನೆನೆಯುತ್ತಾ ಸ್ವಲ್ಪ ಹೊತ್ತು ಸುಮ್ಮನೆ ಕುಳಿತಿದ್ದೆ. ಹಗುರಾಗಿದ್ದೆ. ಭುಪೇನ್ ಅವರ ಎರಡನೆಯ ತಮ್ಮ ಅಲ್ಲಿಯೇ ಇರುವುದಾಗಿ ತಿಳಿದು ಬಂತು. ಮಾತನಾಡಿಸಿ ಬರೋಣ ಅಂತ ತ್ರಾಸಿನಿಂದ ಅವರ ಫೋನ್ ನಂಬರ್ ಪಡೆದುಕೊಂಡು ಕರೆ ಮಾಡಿದೆ. ಆದರೆ ಅವರು ಊರಿನಲ್ಲಿ ಇರಲಿಲ್ಲ. ನಾಳೆಯವರೆಗೂ ಸಮಯ ನನ್ನಲಿರಲಿಲ್ಲ. ಅನಿವಾರ್ಯವಾಗಿ ಸುಮ್ಮನಾದೆ.

ಹಿಂತಿರುಗುವಾಗ ಧನಂಜೋಯ್‌ ಹೇಳಿದ “ದೀದಿ ನಿಮಗೆ ಗೊತ್ತಾ ಹಝಾರಿಕಾ ಅವರ ದೇಹವನ್ನು ಗಂಧದ ಮರಗಳಿಂದ ಸುಡಲಾಯ್ತು. ದೊಡ್ದ ಮನುಷ್ಯರಿಗೆ ಮಾತ್ರ ಹೀಗೆ ಮಾಡಲಾಗುತ್ತದೆ”. ಅವನ ಸರಳತೆ, ನೇರ ಮಾತುಗಳು ಸೀದಾ ನನ್ನೊಳಗೆ ಇಳಿಯುತ್ತಿದ್ದಾಗ ಕೇಳಿದೆ “ನೀನು ಗಂಧದ ಮರವನ್ನು ನೋಡಿದ್ದೀಯಾ? ಅದರ ಪರಿಮಳ ಹೇಗಿರುತ್ತೆ ನಿನಗೆ ಗೊತ್ತಾ?” ಎಂದು. ಮುಗ್ಧವಾಗಿ, ಖಚಿತವಾಗಿ ಇಲ್ಲಾ ಅಂದ ಅವನು.
ಟ್ಯಾಕ್ಸಿಯ ಬಿಲ್ ಹಣವನ್ನು ಕೊಟ್ಟು ಒಂದು ನಿಮಿಷ ನಿಲ್ಲಲು ಹೇಳಿ ಬ್ಯಾಗ್‌ನಿಂದ ಎರಡು ಮೈಸೂರು ಸ್ಯಾಂಡಲ್ ಸೋಪುಗಳನ್ನು, ಅಗರಬತ್ತಿ ಕಟ್ಟುಗಳನ್ನು ಅವನಿಗೆ ಕೊಟ್ಟೆ. ಆ ಕ್ಷಣದಲ್ಲಿ ಅವನ ಕಣ್ಣಲ್ಲಿ ತನ್ನದೇ ಅಸ್ತಿತ್ವ ಗುರುತಿಸಿಕೊಂಡಂತಹ ಹೆಮ್ಮೆ, ಸಂತೋಷವಿದ್ದದ್ದು ಕಾಣುತ್ತಿತ್ತು. ಆ ನಿಮಿಷದಲ್ಲಿ ಭುಪೇನ್ ಹಝಾರಿಕ ಎರಡು ಮನುಷ್ಯ ಹೃದಯಗಳನ್ನು ಬೆಸೆದ ಕಣ್ಣ ಹಾಡಾಗಿದ್ದರು. ನಾನು ಮತ್ತೆ ಹಾಡಿಕೊಳ್ಳುತ್ತಿದ್ದೆ “ಏಕ್ ಬೂಂದ್ ಕಭೀ ಪಾನಿ ಕೀ ಮೊರೆ ಅಖಿಯೋಂಸೆ ಬರ್ಸಾಯೇ….”