ವ್ಯಭಿಚಾರಿ ಹೂವು ಕವನ ಸಂಕಲನದ ಕವನಗಳನ್ನು ಓದಿದಂತೆ, ಓದಿಯಾಯಿತು ಎಂದು ಪೂರ್ಣವಿರಾಮ ಹಾಕಲು ಆಗುವುದೇ ಇಲ್ಲ. ಇನ್ನೊಮ್ಮೆ ಓದೋಣ, ಮತ್ತೊಮ್ಮೆ ಓದೋಣ ಎಂದೆನಿಸುತ್ತಲೇ ಇರುತ್ತದೆ. ಅರ್ಜುನನಿಗೆ ಶ್ರೀಕೃಷ್ಣನಂದು ಗೀತೆ ಬೋಧಿಸಿದ. ಕವಿ ಮನು ಗುರುಸ್ವಾಮಿಯವರು ‘ಕವಿತೆ’ ಬೋಧಿಸುತ್ತಿದ್ದಾರೆ. ಹಾಗಾಗಿ ನನ್ನ ದೃಷ್ಟಿಯಲ್ಲಿ ಈ ಕವನ ಸಂಕಲನ ‘ಆತ್ಮಗೀತೆ!’ ಮಾನವ ಬದುಕಿಗೆ ಸ್ವಾರ್ಥ, ಮೋಸ, ವಂಚನೆ, ತಲ್ಲಣ, ತಳಮಳ….ಗಳೆಲ್ಲವೂ‌ ಬಿತ್ತರವಾಗಿವೆ. ಮನದ ಅಸಹನೆಯನ್ನು ‘ಸತ್ಯನುಡಿ’ಗಳ ಮೋಹಕತೆಯಲ್ಲಿ ರಂಗೇರಿಸುತ್ತದೆ. ಒಂದಂತೂ ನಿಜ, ನಾವು ‘ನಿಜಸತ್ಯ’ದ ಅರಿವು ಹೊಂದಿದಂತೆ ಮಾತ್ರ ಬದುಕು ಶ್ರೀಮಂತವಾಗುತ್ತದೆ.
ಮನು ಗುರುಸ್ವಾಮಿ ಕವನ ಸಂಕಲನ “ವ್ಯಭಿಚಾರಿ ಹೂವು”ಕ್ಕೆ ಪ್ರದೀಪ್ ಕುಮಾರ್ ಹೆಬ್ರಿ ಬರೆದ ಮುನ್ನುಡಿ

ಮನು ಗುರುಸ್ವಾಮಿ ನನಗೆ ಅವರೀ ಕವನ ಸಂಕಲನದ ಹಸ್ತಪ್ರತಿಯ ಮೂಲಕವೇ ಪರಿಚಿತರಾದವರು. ಪರಿಚಯ ಮಾಡಿಕೊಟ್ಟವರು ಯುವಮಿತ್ರ, ಸಂಘಟನಕಾರ ಸಿ ಎಸ್ ಕ್ರಾಂತಿಸಿಂಹ. ಈ ಕೆಲವು ನಿಮಿಷಗಳ ಪರಿಚಯವೇ ಅವರ ಚೊಚ್ಚಲ ಕವನ ಸಂಕಲನದ ‘ಮುನ್ನುಡಿ’ಗೆ ಅಸ್ತಿಭಾರ ಹಾಕುತ್ತದೆಂದು ಎಣಿಸಿರಲಿಲ್ಲ. ಇರಲಿ, ಅವರ ಪ್ರೀತಿಗೆ ಶರಣು. ಆದರೆ ಅವರಾಸೆಯ ಹೂವಿಗೆ ನಾನೆಷ್ಟು ನ್ಯಾಯ ಒದಗಿಸಬಲ್ಲೆ ಎಂಬ ನಂಬಿಕೆ ನನಗಿಲ್ಲ. ಆದರೆ ಈ ಸಂಕಲನ ಓದಿ ಮುಗಿಸಿದಂತೆ, ಅವರ ‘ಗೆಜ್ಜೆ ಕಟ್ಟಿತು ಕಾಲ’ ಕವನದ “ಶವವಾಗುವುದು ಇದ್ದೇ ಇದೆ | ಬದುಕಿ ಸಾಯುತ್ತೇನೆ | ಈಗೊಂದು ಆಗೊಂದು ಹೆಜ್ಜೆ ಇಟ್ಟು ನಡೆದು ಬಿಡುತ್ತೇನೆ” ಸಾಲುಗಳನ್ನೇ ನನ್ನ ಮುನ್ನುಡಿಗೆ ಆದರ್ಶವಾಗಿಟ್ಟುಕೊಂಡಿರುವೆ.

(ಮನು ಗುರುಸ್ವಾಮಿ)

ಮನು ಗುರುಸ್ವಾಮಿ ನನಗೆ ಮೊದಲ ಭೇಟಿಯಲ್ಲಿ ತುಂಬ ಸೌಮ್ಯ ಹಾಗೂ ಮುಗ್ಧತೆಯ ಪ್ರತಿರೂಪವಾಗಿ ಕಂಡಿದ್ದರು. ಆದರೆ ಅವರ ಕವನಗಳನ್ನು ಓದಿ ಮುಗಿಸಿದಂತೆ ಅವರು ತಮ್ಮ ಸುತ್ತಲಿನ ಸಮಾಜವನ್ನು, ಸಮಾಜದ ಆಗುಹೋಗುಗಳನ್ನು ಪರಿಭಾವಿಸುವ ರೀತಿ ನೋಡಿದಾಗ ‘ಬೂದಿ ಮುಚ್ಚಿದ ಕೆಂಡ’ವಾಗಿ ಗೋಚರಿಸಿದ್ದಾರೆ. ಅದೆಂತಹ ತಲ್ಲಣ! ತಳಮಳ! ಅಸಹಾಯಕತೆ! ಅದರೊಡನೆ ಗಟ್ಟಿದನಿಯ ದಿಟ್ಟಹೆಜ್ಜೆ ನೆನಪಾದ ಮಾತು.” ಇದ್ದರಿರಬೇಕು ಮನು ಗುರುಸ್ವಾಮಿಯಂಥವರು, ದಿಟದ ಹೆಜ್ಜೆಯಲ್ಲಿ ಮುನ್ನಡೆಯುವವರು! ಈ ಸಂಕಲನದ ಸೋಸಿರುವ ಸಾಸಿವೆಯ ಕವಿತೆಗಳು, ‘ಬೆಳವಣಿಗೆಯ ಸತ್ವ ಮತ್ತು ತತ್ತ್ವ’ ಎಂದುಕೊಂಡಿರುವೆ. ನೆನಪಿರಲಿ ನಿಜದೆದೆಯ ಉಸಿರ ಕಾವ್ಯ ಸುಮ್ಮನೆ ಬರುವುದಿಲ್ಲ. ಅದಕ್ಕೊಂದು ಹಿನ್ನೆಲೆಬೇಕು. ಅದು ಹೂಮಳೆಯೂ ಆಗಬೇಕು. ಒಪ್ಪುವವರು, ಒಪ್ಪದಿರುವವರು ಸಾವಿರದ ಸಂಖ್ಯೆಯಲ್ಲಿ ಇದ್ದಾರೆಂಬುದೇನೋ ನಿಜ! ಆದರೆ ‘ಕವಿತೆ’ ಎಂಬ ಬೆಳದಿಂಗಳನ್ನು ಬೆಲೆ ಕೊಟ್ಟು ತರಲು ಸಾಧ್ಯವೇ ಇಲ್ಲ ಎಂಬ ಅರಿವೂ ಇರಬೇಕು.

ಮನು ಗುರುಸ್ವಾಮಿ ಅವರ ನುಡಿ ಇದು: ಕಳೆದ ಹತ್ತು ವರ್ಷಗಳಲ್ಲಿ ನಾನು ಬರೆದಿರುವ ಕವಿತೆಗಳಿಗೆ ಲೆಕ್ಕವೇ ಇಲ್ಲ. ಆದರೆ ಅದಾವುದು ನನಗೆ ಪರಿಪಕ್ವಕವಾಗಿ ಕಾಣಲೇ ಇಲ್ಲ. ಅಂದಿನಿಂದ ಇಂದಿನವರೆಗೆ ಬರೆದ ಸಾವಿರಗಳ ಸಾಲಿನಲ್ಲಿ ಸಾಸಿವೆಯಷ್ಟು ಕವಿತೆಗಳನ್ನು ಸೋಸಿ ಈ ಸಂಕಲನ ತರುತ್ತಿರುವೆ. ಇಲ್ಲಿ ಎಳೆಯ ಕವಿತೆಯಿಂದ ಹಿಡಿದು ಮಾಗುವ ಹಂತಕ್ಕೆ ಬಂದಿರುವ ಕವಿತೆಗಳವರೆಗಿನ ಎಲ್ಲಾ ಕವಿತೆಗಳ ಸಮಾಗಮನವಾಗಿದೆ. ನನ್ನ ಕವಿತೆಗಳಲ್ಲಿ ವಿಷಾದನೀಯ ಕವಿತೆಗಳೇ ಹೆಚ್ಚು. ನಾನು ವಿದ್ಯಾರ್ಥಿಯಾಗಿದ್ದಾಗಿನಿಂದ ಹಿಡಿದು ಅಧ್ಯಾಪಕನಾಗುವವರೆಗೂ ನನ್ನ ಮನದಲ್ಲಿ ಮೂಡಿದ ಭಾವನೆಗಳಿಗೆ, ಕಂಡುಂಡ ಅನುಭವಗಳಿಗೆ ಅಕ್ಷರರೂಪ ಕೊಟ್ಟು, ಕವಿತೆಗಳೆಂಬ ಹೆಸರಿಟ್ಟು ನಿಮ್ಮ ಮುಂದೆ ತೆರೆದಿಡುತ್ತಿದ್ದೇನೆ.

ಈ ಸಂಕಲನದಲ್ಲಿ ಒಟ್ಟು 60 ಕವಿತೆಗಳಿವೆ.. ಇವುಗಳನ್ನೆಲ್ಲ ಓದಿ ಮುಗಿಸಿದಂತೆ ಕಣ್ಣೆದುರು ಕಾಣದ, ಆದರೆ ‘ನಿತ್ಯಗೀತ’ ಎಂದಾಗಿರುವ ಹಲವಾರು ವಿಷಯಗಳು ಗೋಚರಿಸಿದವು. ಬದುಕು ಕಂಡಿದ್ದಕ್ಕೂ ನಾವಂದುಕೊಂಡಂತೆ ಇಲ್ಲ. ಉದ್ದುದ್ದ ಅಬ್ಬರದ ಬೊಬ್ಬೆಗಳನ್ನು ಕೇಳುತ್ತಲೇ ಇರುತ್ತೇವೆ. ಆದರೆ ಎದೆತಂತಿ ಮಿಡಿತ ಯಾರ ಗಮನವನ್ನೂ ಸೆಳೆಯುವುದಿಲ್ಲ. ಮನು ಗುರುಸ್ವಾಮಿಯವರಂತಹ ಒಂದಷ್ಟು ಮಂದಿಯ ನಿತ್ಯ ಗಮನ ಇದೇ ಆಗಿರಬಹುದೇನೋ? ಆದರಿದು ಸೂಕ್ಷ್ಮಗ್ರಾಹಿತ್ಯಕ್ಕೆ ಮಾತ್ರ ಅನುಭಾವವೆನಿಸುವಂಥದ್ದು!

ಸಿನಿಮಾ, ಸರ್ಕಾರಿ ಕೆಲಸ, ಲಂಚ, ಮೊಬೈಲ್, ಹಬ್ಬ-ಜಾತ್ರೆ, ಕ್ರಿಕೆಟ್, ರಾಜಕಾರಣ, ಸುತ್ತಾಟ, ಅನಾರೋಗ್ಯ, ಆಡಂಬರ ಹೀಗೆ ಬದುಕನ್ನು ಸಾಗಿಸುವ ನಮಗೆ ಅಸಹಾಯಕರ, ಪೀಡಿತರ, ದುರ್ಬಲರ, ಶೋಷಿತರ, ತುಳಿಯಲ್ಪಡುವವರ ನೋವು ರೋದನೆ ಕೇಳಿಸುವುದಾದರೂ ಹೇಗೆ? ಅರಿವೇ ಇರದಿರುವ ನಮಗಿದರ ಅರಿಯುವಿಕೆ ಎಂದರೆ “ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತಿಂದೆತ್ತಣ ಸಂಬಂಧ” ಎಂದೇ ಆಗುತ್ತದೆ.

ನನಗೆ ಈ ‘ವ್ಯಭಿಚಾರಿಯ ಹೂವು’ ಶೀರ್ಷಿಕೆ ಓದುವಾಗ ತಟ್ಟನೆ ಹೊಳೆದ ವಚನವೇ ವಚನಕಾರ್ತಿ ಲಿಂಗಮ್ಮನದ್ದು. ಏಕೆ ಎಂಬರಿವು ನನಗೂ ಇಲ್ಲ. ಆದರೂ ಆ ವಚನವನ್ನು ಉದ್ಧರಿಸುವೆ “ಬೊಂಬೆಯ ಮಾಡಿ, ಕಂಗಳಿಗೆ ಕಾಮನ ಬಾಣವ ಹೂಡಿ| ನಡೆ-ನುಡಿಯೊಳಗೆ ರಂಜಕದ ತೊಡಗೆಯನೇ ತೊಡಿಸಿ | ಮುಂದುಗಾಣಿಸದೆ, ಹಿಂದನರಸದೆ, ಲಿಂಗವ ಮರಡಿಸಿ | ಜಂಗಮವ ಕೊರೆಯಿಸಿ | ಸಂದೇಹದಲಿ ಸತ್ತು ಹುಟ್ಟುವ| ಈ ಭವಬಂಧನಿಗಳೆತ್ತ ಬಲ್ಲರೋ ಈ ಶರಣರ ನೆಲೆಯ?” ಈ ಸಂಕಲನವನ್ನು ಓದಿ ಮುಗಿಸಿದಂತೆ ಮನ ಮತ್ತೆ ಮತ್ತೆ ಅದನ್ನೇ ಗನುಗುತ್ತಿತ್ತು. ಈ ಕವನ ಸಂಕಲನವನ್ನು ಓದಿದಂತೆ ನಿಮ್ಮ ಅಭಿಪ್ರಾಯವೇನಿರಬಹುದೆಂಬುದನ್ನರಿಯುವ ಕಾತುರ ನನಗೂ ಇದೆ.

ವ್ಯಭಿಚಾರಿ ಎಂದರೆ ಹಾದರಿಗ, ತಾರ, ನೀತಿಗೆಟ್ಟ ಎಂದರ್ಥ. ಇದು ಪುಲ್ಲಿಂಗ. ಸ್ತ್ರೀಲಿಂಗಕ್ಕೆ ಬಂದಾಗ ವ್ಯಭಿಚಾರಿಣಿ, ಹಾದರಗಿತ್ತಿ, ತಾರೆ ಎಂದರ್ಥ ಬರುತ್ತದೆ. ಕವಿ ವ್ಯಭಿಚಾರಿ ಪದವನ್ನು ಸ್ತ್ರೀಲಿಂಗದಲ್ಲಿ ಕಂಡರೋ? ಎಂಬ ಅನುಮಾನ ನನಗೆ! ಮುಂದಿನ ಸಾಲುಗಳಲ್ಲಿ ‘ಅಲೆದವಳು’, ‘ಹಿಂಜರಿದವಳು’, ‘ಅಪ್ಪನಿಲ್ಲದ ಹಸುಗೂಸ ಆರೈಕೆಗಾಗಿ’, ‘ಇನ್ನೊಬ್ಬನ ಮೈ ಅಪ್ಪಿ’, ‘ಹೆತ್ತೊಡಲ ಹೊರೆಯೊತ್ತು’, ‘ಕಾಂಚಾಣಗಿತ್ತಿ’ ಎಂಬೆಲ್ಲ ಪದಗಳನ್ನು ಓದುವಾಗ ಕವಿಯ ಆಂತರ್ಯದ ಅರಿವಾಗುತ್ತದೆ. ಅರ್ಥಗಾರಿಕೆಗೆ ಮನಸೋಲಲೊಪ್ಪುತ್ತದೆ. ಇದೇ ಕವಿತೆಯಲ್ಲಿ ಬಿತ್ತರವಾಗಿರುವ ವಿಷಾದತೆ ಗಾಢವಾಗಿ ಮನ ತಟ್ಟುತ್ತದೆ.

ತಾಯಿಯೇ ಮೊದಲ ಗುರು. ತಾಯಿಗಿಂತ ಮಿಗಿಲಾದ ದೇವರಿಲ್ಲ ಎಂಬ ಮಾತುಗಳನ್ನು ಕೇಳುತ್ತ ಬೆಳೆದವರು ನಾವು. ಕವಿಯೂ ಕೇಳಿದ್ದಾರೆ. ಆದರೆ ಬೆಳೆದಂತೆ ತಾಯಿ ಹೇಳಿದ ಸಕಾರಾತ್ಮಕ ನಿಲುವಿಗೆ ಮನ ಒಪ್ಪಿಸಲು ಹಿಂಜರಿದ್ದಾರೆ. ಅವರ ನುಡಿಗಳಿವು: “ಅರ್ಜುನ ಅಂಬರದಿಂದ ಶ್ವೇತಗಜವ ಕರೆತಂದ ಕತೆ ಹೇಳಿ ಅವ್ವ ಹೊಟ್ಟೆ ತುಂಬಿಸುತ್ತಿದ್ದಳು; ಸ್ಫೂರ್ತಿ ತುಂಬುವ ಕಥೆಗಳೂ ಸಪ್ಪೆಯೆನಿಸುತ್ತಿದ್ದವು ಉಪ್ಪಿಲ್ಲದ ಗಂಜಿ ಕಣ್ಣೆದುರಿದ್ದಾಗ; ಹರಿದ ಪುಸ್ತಕಕ್ಕೆ ಹಿಟ್ಟೇ ಅಂಟಾಗಬೇಕಿತ್ತು, ಹರಿದ ಬಟ್ಟೆಗೆ ಸೂಜಿಯೇ ನಂಟಾಗಬೇಕಿತ್ತು, ಕಲ್ಲು ಬಗರೆಗಳ ಆಯುವ ಹೊತ್ತಲ್ಲಿ ಕೈಗಳು ಹೊಂಗೆ ಬೇವಿನ ಹರಳುಗಳ ಹೆಕ್ಕುತ್ತಿದ್ದವು, ಚಿಲ್ಲರೆ ಕಾಸಿಗೆ ಕಿಸೆ ತೆರೆದುಕೊಳ್ಳುತ್ತಿತ್ತು”.

ಮುಂದಿನ ಕವಿತೆ ‘ಉಪ್ಪಿಟ್ಟು’ ಕವಿ ತನ್ನ ವಿದ್ಯಾರ್ಥಿ ಬದುಕನ್ನು ತನ್ನ ಮಗನಿಗೆ ಹೇಳಿದ ಪರಿ ಉಪ್ಪಿಟ್ಟಿಗೆ ಕಾತರಿಸುತ್ತಿದ್ದ ಗಳಿಗೆಯ ನೆನಪು ರುದ್ರ ರಮಣೀಯ. ಆದರೆ ಮಸಣದಲ್ಲೂ ಘಮ ಬೀರುವ ಕುಸುಮ ಲಾಸ್ಯವಾಡುತ್ತದೆ. ಮಾತಿನನುಸಾರ ಕವಿಯ ನುಡಿಗಳಿವು: “ಉಪ್ಪಿಟ್ಟಿಗಾಗಿ ಕಾಯುತ್ತಿದ್ದೆ ಕಾದು ತರುತ್ತಿದ್ದೆ! ಆದಾಗ್ಯೂ ನನ್ನೊಳಗೆ ಪಂಪ ಪದವಾಡುತ್ತಿದ್ದ, ರನ್ನ ಗಧೆ ಬೀಸಿ ನಿಂತಿದ್ದ, ಕುಮಾರವ್ಯಾಸ ಕುಣಿದಾಡುತ್ತಿದ್ದ!”

ಅಂದಿನ ಮಕ್ಕಳಿಗೆ ಬೇಕಾದದ್ದು ಯಾವುದು ಸಿಗುತ್ತಿರಲಿಲ್ಲ. ಆದರೆ ಬೇಕಾದುದರ ಬಗ್ಗೆ ನಿತ್ಯ ಹಂಬಲಿಸುತ್ತಿದ್ದರು. ಇಂದಿನ ಮಕ್ಕಳಿಗೆ ಎಲ್ಲವೂ ಇದೆ. ಆದರೆ ಮೊಬೈಲ್ ಬಿಟ್ಟು ಬೇರೇನೂ ಬೇಕಾಗಿಲ್ಲ. ಅಂಕಗಳ ಬಿಂಕತನ ಹೊರತುಪಡಿಸಿ ಮತ್ತೇನನ್ನೂ ಆಲಿಸಲು ಮನವಿಲ್ಲ!

ಇಲ್ಲಿ ಎಳೆಯ ಕವಿತೆಯಿಂದ ಹಿಡಿದು ಮಾಗುವ ಹಂತಕ್ಕೆ ಬಂದಿರುವ ಕವಿತೆಗಳವರೆಗಿನ ಎಲ್ಲಾ ಕವಿತೆಗಳ ಸಮಾಗಮನವಾಗಿದೆ. ನನ್ನ ಕವಿತೆಗಳಲ್ಲಿ ವಿಷಾದನೀಯ ಕವಿತೆಗಳೇ ಹೆಚ್ಚು. ನಾನು ವಿದ್ಯಾರ್ಥಿಯಾಗಿದ್ದಾಗಿನಿಂದ ಹಿಡಿದು ಅಧ್ಯಾಪಕನಾಗುವವರೆಗೂ ನನ್ನ ಮನದಲ್ಲಿ ಮೂಡಿದ ಭಾವನೆಗಳಿಗೆ, ಕಂಡುಂಡ ಅನುಭವಗಳಿಗೆ ಅಕ್ಷರರೂಪ ಕೊಟ್ಟು, ಕವಿತೆಗಳೆಂಬ ಹೆಸರಿಟ್ಟು ನಿಮ್ಮ ಮುಂದೆ ತೆರೆದಿಡುತ್ತಿದ್ದೇನೆ.

ಈ ಸಂಕಲನದ ಕವಿತೆಗಳಲ್ಲಿನ ಒಂದಷ್ಟು ಸಾಲುಗಳನ್ನು ಮಾತ್ರ ಹೆಕ್ಕಿ ತೋರುವೆ‌:
• ಅಪ್ಪ ಕೊಡಿಸಿದ ಬಣ್ಣದ ಬಟ್ಟೆ ಹೇಳುತ್ತಿತ್ತು, ಮೈಕೊಡವಿ ದುಡಿದ ಅವನ ಶ್ರಮದ ಫಲ, ನನ್ನ ಮೈಯಪ್ಪಿ ಕುಳಿತ ಬಗೆಯ
• ಮತ್ತೇನಾಗಲಿ ನಾನು ಜಗದೊಳಗೆ ನಾನು ನಾನಾದರೆ ಸಾಕಪ್ಪ ಈ ಘಳಿಗೆ
• ನಿಂತ ಸ್ಥಳವು ಮನಸ್ಥಿತಿಯಂತದು, ಎಚ್ಚರ ತಪ್ಪಿದರೆ ಅವನತಿ ಅನತಿ ದೂರದಲ್ಲಿ
• ನಾನು ಕೇವಲ ಹೆಣ್ಣಲ್ಲ, ಕಣ್ಣಲ್ಲ, ಸುಡಿಗಾಡಿನಿಂದೆದ್ದು ಬಂದ ಮುಕ್ಕಣ್ಣನ ಅರ್ಧನಾರಿಯಲ್ಲ
ಜಗ ಹೇಳುವಂತೆ ಕಲ್ಲಲ್ಲ, ಕಪಟಿಯಲ್ಲ ನಾನು ಮನುಷ್ಯಳು!
• ಹೊಲಸು ತುಂಬಿದೆ ನಮ್ಮೊಳಗೂ, ಕೊಚ್ಚೆ ಹರಿಯುತ್ತಿದೆ, ಅಸಹ್ಯವಾಗಿದೆ ಅಸೂಯೆ ನಾವೇನು ಪರಿಶುದ್ಧರಲ್ಲ. ಇರುವಷ್ಟು ದಿನ ಒಲವನ್ನೇ ಹಂಚುವ ದ್ವೇಷ, ರೋಷ, ಆವೇಶಗಳು ನಿದ್ರೆಗೆ ಜಾರಲಿ ಮತ್ತೆ ಎಚ್ಚರವಾಗುವುದೇ ಬೇಡ
• ಒಳಿತಿದ್ದ ಕಡೆ ಛಲವಿದ್ದರೆ ಬಲ; ಕೆಡಕಿದ್ದ ಕಡೆ ಎಲ್ಲವೂ ಶೂನ್ಯ!
• ನುಡಿಯುವವರಿದ್ದಾರೆ ಒಳಿತು ಕೆಡುಕುಗಳ ವಾಸ್ತವ ಬದುಕು ಹೆಣೆದು ಕೊಡುವ ಕಲೆಯಿಹುದೆ ಹೇಳಿ ?
• ಹಾರುವ ಹಕ್ಕಿಯ ಕೂಗೋ ದನಿಯದು, ಹಾಡಿನಂತಿರ ಕರ್ಣಕ್ಕೆ; ನೋವೋ? ವ್ಯಥೆಯೋ? ಏನು ಕಥೆಯೋ? ಸರಿಯೇ ಅರಿಯಲಾರದೆ ವರ್ಣಿಕೆ
• ಮೋಹದ ಸೆಳೆತಕೆ ನಡುಗಿತು ಮಿಡತೆ ದೀಪವ ಹೊಕ್ಕಿದೊಡೆ ನೊಂದಿತು, ಬೆಂದಿತು, ಅತ್ತಿತು, ಸತ್ತಿತು ಉರಿವ ದೀಪದೊಳೆ
• ಪದ ಪಾದಗಳ ಹಂಗಿಲ್ಲ ಇಲ್ಲಿ, ಪ್ರಾಸ ಲಯ ಕ್ರಯವಿಲ್ಲ. ಇದು ಹೊಸದೊಂದು ಧಾಟಿ, ಬರೆದೆ ಎಲ್ಲೆಗಳ ದಾಟಿ; ನನ್ನೆದೆ ಕವಿತೆ ನಿನ್ನದೇ ಓದಿಗೆ
• ದಿಕ್ಕೆಡುವುದು ಹಾದಿ; ಸುಳ್ಳಲ್ಲ. ಏಕೆಂದರೆ ನೀನು ತಿಳಿದು ಕ್ರಮಿಸಿದ ದಾರಿಯೂ ತಪ್ಪು, ಇಟ್ಟ ಹೆಜ್ಜೆಯೂ ತಪ್ಪು
• ಜಾಣನಾಗುವುದೆಂದರೆ ಇಲ್ಲಸಲ್ಲದ ಜಾತಕ ಜಾಲಾಡುವುದಲ್ಲ ನಮ್ಮೊಳಗಿನ ನಮ್ಮನ್ನು ಅರಿತು ನಿಲ್ಲುವುದು ಜಾಣ್ಮೆ
ಮೊನ್ನೆ ಮೊನ್ನೆ ನಮ್ಮ ದೇಶದ ಸ್ವಾತಂತ್ರ್ಯದ ಅಮೃತೋತ್ಸವ ಆಚರಿಸಿದವು. ಆದರೆ ವಾಸ್ತುವೇನು? ‘ಸ್ವತಂತ್ರ ಭಾರತಿ’ಯ ನುಡಿಗಳಲ್ಲಿ ಕೇಳೋಣ : ನನಗೇಕೋ ಅನುಮಾನ; ನಾನಿನ್ನೂ ಸ್ವತಂತ್ರಳಾಗಿಲ್ಲವೆ ?! ಬೂಟುಗಳ ಸದ್ದಿಲ್ಲ; ಕಣ ರಂಗೇರಿದೆ ! ಬೇಟೆಯ ಹದ್ದಿಲ್ಲ; ಇಲ್ಲಿ ಹೆಣ ಬಿದ್ದಿದೆ ! ಕೊಲೆ, ರಕ್ತಪಾತ; ಪಂಥ – ಧರ್ಮ ತಪ್ಪೋ ಒಪ್ಪೋ, ಪಾಪ – ಕರ್ಮ, ಮುಕ್ಕಟ್ಟಿನ ರಾಜಕೀಯ, ದಾಳ; ಸತ್ತವನಾರೋ? ಉಳಿದವ ನಿರಾಳ! ಏನಿದು ಮಕ್ಕಳೆ? ಏತಕೀ ರಗಳೆ? ಕೋಟೆ ಕಟ್ಟುವುದ ಬಿಡಿ ಕೋಟಿಗಳ ಲೆಕ್ಕ ಬಿಡಿ, ಎದ್ದ ಗೋಡೆಗಳ, ಇದ್ದ ಬೇಲಿಗಳ ಕಿತ್ತು, ಕೆಡವಿ ಮುಕ್ತಿ ಕೊಟ್ಟು ಬಿಡಿ ನಾನೂ ಸ್ವತಂತ್ರಳಾಗುವೆ! ಮೀಲಾಯಿಸಿ ಕೈಗಳ; ಸಲಿಗೆ ಇರಲಿ, ಎದುರಿಗಿರುವವನ ಎದೆಗಪ್ಪಿಕೊಳ್ಳಿ, ಗೋರಿ ಕಟ್ಟಿ ಮನಸ್ತಾಪಗಳಿಗೆ, ಕಿವಿ ನಿಮಿರಲಿ; ನಲ್ಮೆಯ ಮಾತುಗಳಿಗೆ ನಾನಾಗ ಸ್ವತಂತ್ರಳಾಗುವೆ! ಅಮೃತ ಮಹೋತ್ಸವ ನನಗಲ್ಲ, ನೆಪ ಮಾತ್ರ ನಾನು! ಮದ್ದು ಸಿಡಿಸಿ; ಸಿಹಿ ಉಂಡು, ಮತ್ತೆ ಕೇಡು ಬಗೆಯುವಿರಾದರೆ; ನನಗದೆಲ್ಲಿಯ ಮುಕ್ತಿ? ತೋರಿಕೆ – ದೇಶಭಕ್ತಿ!

ಈ ಸಂಕಲನದ ಕವನಗಳಲ್ಲೆಲ್ಲ ನಾನು ತುಂಬಾ ಮೆಚ್ಚಿಕೊಂಡ ಕವನವಿದೆ. ಬಹುಶಃ ನಾವು ಪಡೆಯುವ ಅಂಕ, ನಮಗೆ ದೊರೆಯುವ ಕೆಲಸ, ನಮ್ಮ ಹಾರಾಟ, ಓಡಾಟ, ಪ್ರಶಸ್ತಿ-ಪುರಸ್ಕಾರ, ಸಾವು-ಪ್ರತಿಮೆಗಳು ಇವೆಲ್ಲವನ್ನು ಪ್ರಶ್ನಿಸುವ ಕವನವಿದು. ಸ್ವಲ್ಪ ಕವನದ ಒಳಗಡೆ ಹೋಗುವ ಪ್ರಯತ್ನಬೇಕು ಅಷ್ಟೆ. ಪ್ರಜಾಪ್ರಭುತ್ವದ ಹೆಸರಿನಲ್ಲಿ ರಾಜಕಾರಣಿಗಳ ಅನಾಚಾರ ಬಹುಶಃ ನಮ್ಮ ಸ್ವಾತಂತ್ರ್ಯಕ್ಕೆ ಭಂಗ ತಂದಿರುವಾಗ ಇಂತಹವರಿಂದಲೇ ಮಾರ್ಪಡುವ ದೇಶದ ಪರಿತಾಪ ಎಂತಿದ್ದೀತು?!

(ಪ್ರದೀಪ್ ಕುಮಾರ್ ಹೆಬ್ರಿ)

‘ಅವನು ಮತ್ತು ಮುಟ್ಟು’ ಹಾಗೂ ‘ಅವಳಿರಬೇಕು!’ ಸತಿ ಮಹತ್ವವನ್ನರಹುವ ಕವಿತೆಗಳು. ಮೊದಲಿನ ಕವಿತೆಯಲ್ಲಿ ‘ಮುಟ್ಟಿನಿಂದ ದೂರವೇ ಇರಬಯಸಿದವನ ವರ್ತನೆಗೆ ರೋಸಿದ ಸತಿ “ನೋವಿನ ಕ್ಷಣದಲ್ಲೂ ನನ್ನ ಮುಟ್ಟಲು ಹಿಂಜರಿದವನು ಮುಂದೆಯೂ….” ಪ್ರಶ್ನಿಸಿದವಳಿಗೆ ಉತ್ತರವೆಂಬಂತೆ ‘ಅವಳಿರಬೇಕು’ ಕವನ ಪತಿಯ ಪ್ರತಿಯೊಂದು ಕ್ಷಣವೂ ಅವಳಿರಬೇಕು ಎಂದೇ ಬಯಸುವುದಕ್ಕೆ ಸಕಾರವನ್ನರುಹಿದೆ. ಹಾಗಾಗಿಯೇ ನಮ್ಮ ಹಿರಿಯರು ಹೇಳಿದ್ದು “ಸರಸ, ವಿರಸ, ಸಮರಸವೇ ಜೀವನ” ಎಂದು. ಪತಿ-ಸತಿ ಕೂಡಿ ಬಾಳಿದರೆ ನಿಜಕ್ಕೂ ಸಂಸಾರವೆಂಬುದೊಂದು ಸ್ವರ್ಗ!

ವ್ಯಭಿಚಾರಿ ಹೂವು ಕವನ ಸಂಕಲನದ ಕವನಗಳನ್ನು ಓದಿದಂತೆ, ಓದಿಯಾಯಿತು ಎಂದು ಪೂರ್ಣವಿರಾಮ ಹಾಕಲು ಆಗುವುದೇ ಇಲ್ಲ. ಇನ್ನೊಮ್ಮೆ ಓದೋಣ, ಮತ್ತೊಮ್ಮೆ ಓದೋಣ ಎಂದೆನಿಸುತ್ತಲೇ ಇರುತ್ತದೆ. ಅರ್ಜುನನಿಗೆ ಶ್ರೀಕೃಷ್ಣನಂದು ಗೀತೆ ಬೋಧಿಸಿದ. ಕವಿ ಮನು ಗುರುಸ್ವಾಮಿಯವರು ‘ಕವಿತೆ’ ಬೋಧಿಸುತ್ತಿದ್ದಾರೆ. ಹಾಗಾಗಿ ನನ್ನ ದೃಷ್ಟಿಯಲ್ಲಿ ಈ ಕವನ ಸಂಕಲನ ‘ಆತ್ಮಗೀತೆ!’ ಮಾನವ ಬದುಕಿಗೆ ಸ್ವಾರ್ಥ, ಮೋಸ, ವಂಚನೆ, ತಲ್ಲಣ, ತಳಮಳ….ಗಳೆಲ್ಲವೂ‌ ಬಿತ್ತರವಾಗಿವೆ. ಮನದ ಅಸಹನೆಯನ್ನು ‘ಸತ್ಯನುಡಿ’ಗಳ ಮೋಹಕತೆಯಲ್ಲಿ ರಂಗೇರಿಸುತ್ತದೆ. ಒಂದಂತೂ ನಿಜ, ನಾವು ‘ನಿಜಸತ್ಯ’ದ ಅರಿವು ಹೊಂದಿದಂತೆ ಮಾತ್ರ ಬದುಕು ಶ್ರೀಮಂತವಾಗುತ್ತದೆ. ಕವಿತೆಗಳಲ್ಲೆಲ್ಲ ‘ನೋವಿನ ಎಳೆ’ಗಳೇ ತುಂಬಿಕೊಂಡಿದ್ದರೂ ಈ ಸಂಕಲನ ನಿಜಬದುಕಿಗೊಂದು ದಾರಿದೀಪ!

ಕವಿ ಮನು ಗುರುಸ್ವಾಮಿಯವರು ತಮ್ಮ ಕವಿತೆಗಳಲ್ಲೆಲ್ಲ ತಾವು ಕಂಡ, ಕಾಣುತ್ತಿರುವ ಜಗದ ನೋವು-ನರಳಿಕೆಗಳಿಗೆಲ್ಲ ಹೊಸ ರಂಗು ತುಂಬಿದ್ದಾರೆ. ‘ನಿನ್ನೆ’ ಎಂದರೇನು? ‘ನಾಳೆ’ ಎಂದರೆ ಹೇಗೆ‌? ಎಂಬುದನ್ನು ತೋರಿದ್ದಾರೆ. ಅವರ ನೋವಿನೆದೆಯ ಚರಿತೆ ಹಾಗೂ ಚಿಂತನೆ ಓದುವ ನಮಗೆ‌ ಚಿಂತಿಸುವಲ್ಲಿ ಪ್ರೇರೇಪಿಸುತ್ತದೆ. ಕಾವ್ಯಪ್ರಿಯರ ಮನವನ್ನು ಗೆಲ್ಲುತ್ತದೆ. ಬಹುಶಃ ಇದೇ ಅಧ್ಯಾತ್ಮ!

ಓದುಗರ ಮನದ ದನಿಯಾಗಿ ಬದುಕನ್ನು ಅವಲೋಕಿಸಿ, ಬಿತ್ತರಿಸಿದ ಕವಿ ಮನು ಗುರುಸ್ವಾಮಿರವರಿಗೆ ಹಾರ್ದಿಕವಾಗಿ ಅಭಿನಂದಿಸುವೆ. ಚೊಚ್ಚಲ ಕವನ ಸಂಕಲನ ಎಂಬ ರಿಯಾಯಿತಿ ಬೇಡದಂತೆ ಹೊರಬಂದಿದೆ. ಸಾವಿರಗಳ ಸಾಲಿನಿಂದ ಹೊರಬಂದ ‘ಸಾವಿರದ’ ಕವನಗಳಾಗಿವೆ.