ಅಂಕಣ ಬರೆಯುವುದೆಂದರೆ, ಒಂದು ವಿಶಾಲಾರ್ಥವನ್ನು ನೀಡುವ ವಸ್ತುವನ್ನು ಕೆಲವೇ ಮಾತುಗಳಲ್ಲಿ ಹುದುಗಿಡುವಂತಹುದು. ಅಂದರೆ ಸಮುದ್ರವನ್ನು ಸಾಸಿವೆ ಕಾಳಲ್ಲಿ ತುಂಬಿದಂತೆ. ಏಕೆಂದರೆ ಒಂದೊಂದೂ ವಸ್ತುಗಳೂ ಸಹ ಕಾದಂಬರಿ ಬರೆಯುವಷ್ಟು ವಿಷಯಗಳನ್ನು ಹೊಂದಿರುತ್ತದೆ. ಉದಾಹರಣೆಗೆ ‘ಕಾಶ್ಮೀರದ ಕರಾಳತೆಯ ಹುದುಲಿನಲ್ಲಿ……’ ನಿಜಕ್ಕೂ ಇಂದಿನ ಕಾಶ್ಮೀರದ ಸ್ಥಿತಿಗೆ ಹಿಡಿದ ಕೈಗನ್ನಡಿ. ಅಲ್ಲಿನ ಜನ ಸಮಾಜ ಮುಖಿಗಳಾಗ ಬಯಸಿದರೂ ಸಹ ಅವರನ್ನು ನಿಯಂತ್ರಿಸುವ ಒಂದು ಶಕ್ತಿ ಅಲ್ಲಿ ಅಡಗಿರುವುದು. ಎಲ್ಲರನ್ನೂ ಅನುಮಾನದ ದೃಷ್ಟಿಯಲ್ಲಿ ನೋಡುತ್ತಾ, ಎಷ್ಟೋ ಅಮಾಯಕರ ಜೀವ ಹಾನಿಯಾದುದನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ.
ಮಂಜುಳ ಡಿ ಬರೆದ ‘ನಿನಾದವೊಂದು’ ಅಂಕಣ ಬರಹಗಳ ಪುಸ್ತಕದ ಕುರಿತು ಎಂ.ಎನ್.ಸುಂದರ್ ರಾಜ್ ಲೇಖನ

 

ನಾನೊಬ್ಬ ಸಾಧಾರಣ ಅಂಕಣ ಬರಹಗಾರನಾದುದರಿಂದ ನನ್ನ ವಿದ್ಯಾರ್ಥಿನಿ ಡಿ.ಮಂಜುಳಾ ಪ್ರೀತಿಯಿಂದ ಕಳುಹಿಸಿದ ಮೂರು ಪುಸ್ತಕಗಳಲ್ಲಿ ಮೊದಲು ಓದಿದ್ದು ‘ನಿನಾದವೊಂದು’ – ಅಂಕಣ ಬರಹಗಳ ಸಂಕಲನ.

ಇಂದಿನ ದಿನಗಳಲ್ಲಿ ಅಂಕಣ ಬರಹ ವಿಶಾಲವಾಗಿ ಬೆಳೆದಿದೆ. ಅನೇಕ ಸಾಹಿತಿಗಳೂ ಸಹ ಅಂಕಣಬರಹದ ಆಕರ್ಷಣೆಯಿಂದ ದೂರವಾಗಿಲ್ಲ. ಅದರಲ್ಲಿಯೂ ನಮ್ಮ ಯುವಕರು, ಉದಯೋನ್ಮುಖ ಸಾಹಿತಿಗಳು ತಮ್ಮ ಬರಹವನ್ನು ಪ್ರಾರಂಭಿಸುವುದೇ ಅಂಕಣ ಬರಹಗಳಿಂದ. ಈ ದೃಷ್ಟಿಯಲ್ಲಿ ಮಂಜುಳಾ ಅವರ ಈ ಕೃತಿ ನನ್ನ ಮೊದಲ ಗಮನ ಸೆಳೆದಿದ್ದು.

(ಮಂಜುಳ ಡಿ)

ಈ ಪುಟ್ಟ ಕೃತಿಯನ್ನು ಓದುತ್ತಾ ಹೋದಂತೆ ಒಂದು ರೀತಿಯ ಅವ್ಯಕ್ತ ಅನುಭವ ನಮ್ಮ ಮನಸ್ಸಿಗಾಗುತ್ತದೆ. ಚಿಂತನೆಗೆ ಹಚ್ಚುತ್ತದೆ ಮತ್ತು ವಿಶ್ಲೇಷಣೆಯ ಹಂತಕ್ಕೆ ತಂದು ನಿಲ್ಲಿಸುತ್ತದೆ. ಇದರಲ್ಲಿರುವ ಹದಿನಾಲ್ಕು ಲೇಖನಗಳೂ ವೈವಿದ್ಯಮಯವಾಗಿದೆ. ವಿಷಯದ ಆಳಕ್ಕಿಳಿದು ಅಂತರಾತ್ಮವನ್ನು ಚುಚ್ಚಿದ ಅನುಭವ ನೀಡುತ್ತದೆ. ಇಲ್ಲಿ ಪ್ರಕಟಿಸಿರುವ ಎಲ್ಲ ಲೇಖನಗಳ ಅವುಗಳ ವ್ಯಾಪ್ತಿಯಲ್ಲಿ ಯಶಸ್ವಿಯಾದರೂ ನನ್ನ ಮನ ಸೆಳೆದ ಕೆಲವು ಲೇಖನಗಳ ಬಗ್ಗೆ ಮಾತ್ರ ಇಲ್ಲಿ ಪ್ರಸ್ತಾಪಿಸಿದ್ದೇನೆ.

ಅಂಕಣ ಬರೆಯುವುದೆಂದರೆ, ಒಂದು ವಿಶಾಲಾರ್ಥವನ್ನು ನೀಡುವ ವಸ್ತುವನ್ನು ಕೆಲವೇ ಮಾತುಗಳಲ್ಲಿ ಹುದುಗಿಡುವಂತಹುದು. ಅಂದರೆ ಸಮುದ್ರವನ್ನು ಸಾಸಿವೆ ಕಾಳಲ್ಲಿ ತುಂಬಿದಂತೆ. ಏಕೆಂದರೆ ಒಂದೊಂದೂ ವಸ್ತುಗಳೂ ಸಹ ಕಾದಂಬರಿ ಬರೆಯುವಷ್ಟು ವಿಷಯಗಳನ್ನು ಹೊಂದಿರುತ್ತದೆ. ಉದಾಹರಣೆಗೆ ‘ಕಾಶ್ಮೀರದ ಕರಾಳತೆಯ ಹುದುಲಿನಲ್ಲಿ……’ ನಿಜಕ್ಕೂ ಇಂದಿನ ಕಾಶ್ಮೀರದ ಸ್ಥಿತಿಗೆ ಹಿಡಿದ ಕೈಗನ್ನಡಿ. ಅಲ್ಲಿನ ಜನ ಸಮಾಜ ಮುಖಿಗಳಾಗ ಬಯಸಿದರೂ ಸಹ ಅವರನ್ನು ನಿಯಂತ್ರಿಸುವ ಒಂದು ಶಕ್ತಿ ಅಲ್ಲಿ ಅಡಗಿರುವುದು. ಎಲ್ಲರನ್ನೂ ಅನುಮಾನದ ದೃಷ್ಟಿಯಲ್ಲಿ ನೋಡುತ್ತಾ, ಎಷ್ಟೋ ಅಮಾಯಕರ ಜೀವ ಹಾನಿಯಾದುದನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ. ಅಮಾಯಕ ಫರೀದ್ ಗುಂಡಿಗೆ ಬಲಿಯಾದದ್ದು, ಫಲಕ್ ಳ ಅಸ್ಪಷ್ಟ ಭವಿಷ್ಯ ಮನಕಲಕುತ್ತದೆ. ಇಲ್ಲಿ ಪ್ರಸ್ತಾಪಿಸಿದ ವಿಷಯಗಳ ಬಗ್ಗೆ ಸಾವಿರ ಪುಟಗಳಷ್ಟು ಬರೆಯಬಹುದಾದರೂ, ಒಂದೇ ಒಂದು ಘಟನೆಯನ್ನು ತೆಗೆದುಕೊಂಡು ಅಲ್ಲಿನ ಕರಾಳ ಪರಿಸ್ಥಿತಿಯನ್ನು ಬಿಂಬಿಸುವ ಪರಿ ನಿಜಕ್ಕೂ ಶ್ಲಾಘನೀಯವಾದದ್ದು. ಈ ಲೇಖನದ ಇನ್ನೊಂದು ಮಜಲನ್ನು “ಪ್ರಕೃತಿ ಮಡಿಲಲ್ಲಿ ಬಿದ್ದರೆ……….” ಲೇಖನದಲ್ಲಿ ಕಾಣಬಹುದು.

‘ವಿಷಮದ ಪ್ರತಿ ನಿಮಿಷದಿ’ ಲೇಖನ ನನ್ನ ಮನಸ್ಸನ್ನು ತಟ್ಟಿದ ಒಂದು ಸುಂದರ ಬರಹ. ಇಂದಿನ ದಿನಗಳಲ್ಲಿ ಸಾಹಿತಿಗಳನ್ನು ಯಾವುದಾದರೊಂದು ಪಂಥಕ್ಕೆ ಸೇರಿಸುವ ಹುನ್ನಾರ ನಡೆಯುತ್ತಲೇ ಇದೆ. ಎಡ-ಬಲ, ಮಧ್ಯಮ ಹೀಗೆ. ಆದರೆ ಸಾಹಿತಿಯಾದವನ್ನು, ಕಲಾವಿದರನ್ನು ರಾಜಕೀಯ ವ್ಯಕ್ತಿಗಳಂತೆ ಬಿಂಬಿಸುವುದು ಅದೆಷ್ಟು ಸಮಂಜಸ ಎಂಬುದನ್ನು ಲೇಖಕಿಯೇ ಒಪ್ಪಿಕೊಂಡಿದ್ದಾರೆ. ಸಾಹಿತ್ಯವೆನ್ನುವುದೇ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬಿಂಬಿಸುವುದಕ್ಕೆ. ವೈಚಾರಿಕ ಪ್ರಜ್ಞೆ ಇದ್ದವನಿಗೂ, ಯಾವುದೋ ಇಸಂ ಗೆ ಜೋತುಬಿದ್ದವನಿಗೂ ಅಜಗಜಾಂತರ ವ್ಯತ್ಯಾಸವಿದೆ. ಹಿಮಾಳ ಮನಸ್ಥಿತಿಯ ಬಗ್ಗೆ ಸುಂದರ ಚಿತ್ರಣ ಇಲ್ಲಿದೆ. ಸ್ವತಃ ಅನುಭವಿಸಿ ಬರೆದಂತಿದೆ. ಹತ್ತುವರುಷದ ಹಿಂದಿನ ಡೈರಿ ಆಕೆಯ ಭಾವತೀವ್ರತೆಯನ್ನು ತೋರಿಸಿದ್ದಲ್ಲದೆ, ಆಕೆಯ ಬಗೆಗಿದ್ದ ಎಲ್ಲ ಅನುಮಾನಗಳಿಗೂ ಇತಿಶ್ರೀ ಹಾಡಿದ್ದನ್ನು ಲೇಖಕಿ ಸುಂದರವಾಗಿ ಮೂಡಿಸಿದ್ದಾರೆ.

(ಎಂ.ಎನ್.ಸುಂದರ್ ರಾಜ್)

‘ಬಲವಾದ ಒಂದು ಬೇಕೊಂದೇ ಬದುಕಿಗೆ ಬೇಕಾಗಿರುವುದು’ ಲೇಖನ ನಿಜಕ್ಕೂ ಮನದಾಳಕ್ಕಿಳಿದು, ಚಿಂತನೆಯ ಕೊಕ್ಕೆಯನ್ನಿಳಿಸಿ, ಭಾವನೆಗಳನ್ನೆಳೆಯಲು ಪ್ರಯತ್ನಿಸುತ್ತದೆ. ಓದಿದ ಕೆಲ ಸಮಯದವರೆಗೆ ಕೊರೆಯುತ್ತಿರುತ್ತದೆ. ಬದುಕಿನ ಬಗ್ಗೆ ಇವರ ಅಭಿಪ್ರಾಯ ನೋಡಿ, ‘ಬದುಕು ನಾವಂದುಕೊಂಡಂತಿರುವುದಿಲ್ಲ. ಕೆಲವೊಮ್ಮೆ ಎಲ್ಲ ಸಂಭ್ರಮಗಳೂ ಒಂದಾದ ಸಂದರ್ಭವೇ ಬದುಕೆನಿಸಿದರೆ ನಂತರದ ಒಂದೆರಡು ದಿನಗಳಲ್ಲಿ ಏನೂ ಇರದ ಮರುಭೂಮಿ ಅನಿಸಿಬಿಡುತ್ತದೆ.’ ಎಂಬ ಮಾತುಗಳಲ್ಲಿ ಬದುಕಿನ ಕರಾಳ ಮುಖವನ್ನು ಎತ್ತಿ ತೋರಿಸುವ ಪ್ರಯತ್ನ ಕಾಣಬಹುದಾಗಿದೆ.

ನನಗೆ ಆಶ್ಚರ್ಯವಾಗಿರುವುದೆಂದರೆ, ಇಷ್ಟು ಚಿಕ್ಕ ವಯಸ್ಸಿನಲ್ಲಿ ಅದೆಷ್ಟು ಪುಸ್ತಕಗಳನ್ನು ಈ ಲೇಖಕಿ ಅಧ್ಯಯನ ಮಾಡಿದ್ದಾರೆ ಎಂಬುದು. ಸತತ ಅಧ್ಯಯನದಿಂದ ಮಾತ್ರವೇ ಇಂತಹ ಮೌಲಿಕ ಲೇಖನಗಳು ಹೊರಬರಲು ಸಾಧ್ಯ. ಇವರ ಲೇಖನ ವೈವಿಧ್ಯ, ವಿಶ್ಲೇಷಣೆ, ವಿಷಯ ಮಂಡನೆ ಎಲ್ಲವೂ ಈ ಕೃತಿಯ ಮೌಲ್ಯವನ್ನು ಹೆಚ್ಚಿಸಿದೆ. ಲೇಖಕಿಗೆ ಉತ್ತಮ ಭವಿಷ್ಯವಿದೆ. ಒಳಿತಾಗಲಿ.