ಊಟ ಸೇರ್ದಿದ್ರೆ, ಉಸಾರು ತಪ್ಪೀರೆ ದಿಷ್ಟಿ ಮಂತ್ರ ಹಾಕೋರು. ಇದ್ರಾಗೆ ನಾಕು ತರ. ಸೆರಗು ನಿವಾಳ್ಸಿಕಂತಾ ಮಂತ್ರ ಹಾಕೋದು ಒಂದು ರಕಮಾದ್ರೆ, ಇಬೂತಿ(ವಿಭೂತಿ), ಸಕ್ಕರೆ, ಉಪ್ಪು ಮಂತ್ರಿಸಿ ಕೊಡೋದು ಬ್ಯಾರೆ ರಕಮುಗ್ಳು. ಅವ್ರೇ ಬಂದ್ರೆ ಸೆರಗು ನಿವಾಳ್ಸಿ ಮಂತ್ರ ಹಾಕೋರು. ಅವುರ್ ಬದ್ಲಿ ಬ್ಯಾರೆಯೋರ್ ಬಂದ್ರೆ ಉಪ್ಪೋ ಸಕ್ಕರೇನೋ ಮಂತ್ರಿಸಿ ಊಟದಾಗೆ ಕಲ್ಸಿ ಕೊಡೋಕೆ ಹೇಳೋರು. ಇಬೂತಿ ಆದ್ರೆ ಹಣೆ ಮ್ಯಾಗೆ ಹಚ್ಚೋಕೆ ಹೇಳೋರು. ಮಂತ್ರ ಬಿದ್ದ ಮ್ಯಾಕೆ ಊಟ ತಿಂಡಿ ಸರ್ಯಾಗಿ ಸೇರೋದು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ಲೇಖಕರ ಅಜ್ಜಿ-ಅಜ್ಜಂದಿರು ಹಾಕುತ್ತಿದ್ದ ಅಂತ್ರ-ಮಂತ್ರಗಳ ಕುರಿತ ಬರಹ ನಿಮ್ಮ ಓದಿಗೆ
ನಮ್ಮಜ್ಜಿ(ಅಮ್ಮಮ್ಮ) ರಕರಕಮು ಮಂತ್ರ ಆಕ್ತಿದ್ರು. ತಾತ ತಾಮ್ರದ ತೆಳ್ಳುಕಿರಾ ರೇಕಿನ ಮ್ಯಾಗೆ ಅಂತ್ರ(ಯಂತ್ರ- ತಾಯಿತ) ಬರ್ಯಾರು. ಒಟ್ನಾಗೆ ಗಂಡ ಹೆಂಡ್ರು ಜೋಡಿ ಊರ್ನಾಗೆಲ್ಲಾ ಫ಼್ರೇಮಸ್ಸು(ಫ಼ೇಮಸ್). ಯಾರ್ಗೇ ಉಸಾರು ತಪ್ಪೀರೂ ಮನೆ ತಾವ್ಕೆ ಇವ್ರುನ್ನ ಹುಡೀಕ್ಕಂಡು ಬರಾರು. ನಮ್ಮ ಲಕ್ಸ್ಮಿದೇವಮ್ಮಜ್ಜೀನೂ(ಅಪ್ಪಮ್ಮ)ಮಂತ್ರ ಹಾಕ್ತಿದ್ರು. ನಮ್ ದೊಡ್ಡತ್ತೇನೂ ಕಲ್ತಿದ್ರು. ಆವಾಗೆಲ್ಲಾ ಇಂಗೇಯಾ ಮನ್ಯಾಗೆ ಒಬ್ರಾನಾ ಹಿರೇರು ಮಂತ್ರ ಹಾಕಾದ್ನ ಕಲ್ತೌರೆ ಅಂದ್ರೆ ಮನೆ ಮಂದೀಗೆ ಮಾತ್ರಾ ಅಲ್ಲ ಊರೂರ್ಗೇ ಉಪ್ಯೋಗ ಆಗ್ತಿತ್ತು. ಬೆಳಗು ಬೈಗೂ ಅಂಬ್ದೆ ಯಾರಾನಾ ಯಾವಾಗಾನಾ ಬರ್ಲಿ, ಬಂದೇಟ್ಗೇ ನಾಷ್ಟಾ ಊಟ ಉಣ್ಣುತಿರ್ಲಿ, ಯಾವ್ ಟೇಮ್ಗಾನಾ ಆಗ್ಲಿ, ಅರ್ಧ ಉಂಡಿದ್ರೂ ಸುತಾನಾ ಸರಕ್ ಅಂಬ್ತ ಎದ್ದು ಬಂದು ಮಂತ್ರ ಆಕೋರು. ಅದ್ರಾಗೂ ಸಣ್ಣ ಕೂಸುಗೇನಾರಾ ಆದ್ರಂತೂ ಸೈಯ್ಯೇ ಸೈಯ್ಯ. ಮಂತ್ರುದ್ ಜತ್ಗೆ ಮನ್ಯಾಗಿರಾ ಔಸ್ದಿ ಪೌಸ್ದಿ ಕೊಡಾದೇನು? ಮುತುವರ್ಜಿ ತೋರ್ಸಾದೇನು? ಮನ್ಸತ್ವ ಅಂಬೋದು ಅಲ್ಲಿ ಮನ್ ಮನ್ಯಾಗೂ ಕಾಲ್ ಮುರ್ಕೊಂಡು ಬಿದ್ದಿತ್ತು ಕಣೇಳಿ. ಸ್ಯಾನೆ ಹಿಂದ್ಲ ಮಾತೇನಲ್ಲ ಇದು. ನಲವತ್ತು ವರ್ಸದ ಹಿಂದ್ಲುದು ಆಟೇಯಾ. ಈಗ ಅಂಗಿಲ್ಲ ಬುಡಿ. ಪಟ್ಣದ ಸಾವಾಸ ಅಲ್ಲೂವೇ ಜನಗೋಳ್ನ, ಅವ್ರ ಮನ್ಸತ್ವಾನಾ ಕುಲಗೆಡಿಸೈತೆ.
ಬುಡಿ ಅತ್ಲಾಗೆ. ಅವತ್ತಿನ್ ಮಂತ್ರಗ್ಳ ಇಸ್ಯಾ ಯೋನ್ ಕೇಳೀರಿ. ನಮ್ಮಜ್ಜೀಗೂ ಒಂಬತ್ತು ಮಕ್ಳು. ಮನ್ ತುಂಬಾ ಇದ್ವು. ಅಂಗಾಗಿ ಕಷ್ಟ ಸುಖ ಅಂಬಾದು ಎದ್ಯಾಗೆ ಕುಂತಿತ್ತು. ಜನಗೋಳೆಲ್ಲಾ ಬಂದು ಮಂತ್ರ ಹಾಕುಸ್ಕಣಾರು. ನಮ್ಮಜ್ಜಿ ಕಾಲದಾಗೇನೇ ಆದಿನಾರಾಯಣಪ್ಪನ ಅಮ್ಮ ದೆಕ್ಲೂ ಮಂತ್ರ ಹಾಕೋರು. ಜನ ಅಲ್ಗೂ ಹೋಗೋರು. ಆವಾಗೆಲ್ಲಾ ನಮ್ಮ ಶೆಟ್ರು ಮನೇಗ್ಳಲ್ಲೇ ಈ ಮಂತ್ರ ಅಂತ್ರ ಔಸ್ದಿ ಮಾಡಾದ್ನ ಕಲ್ತಿದ್ರು. ಬಿಡಿಗಾಸಿಲ್ದೆ ಜನುಕ್ಕೆ ಕಷ್ಟ ಸುಖುಕ್ಕೆ ಆಗಾರು. ಮನೇಗ್ಳಾಗಿರಾ ಬೆಣ್ಣೆ ತುಪ್ಪ ಹಾಲೂ ಮಸ್ರೂ ಉಪ್ಪುನ್ ಕಾಯಿ ಕೊಟ್ಟು ಕಳ್ಸಾರು. ನಮ್ ಮನ್ಯಾಗ್ಳ ಹೆಣ್ಣೈಕ್ಳು ವಸಿ ಓದೂ ಬರ ಕಲ್ತಿದ್ದುದ್ದು ಇವುನ್ನ ಕಲ್ಯಾಕೆ ದಾರಿ ಆಯ್ತೋ ಏನೋ. ಆದ್ರೆ ನಮ್ ಊರಾಗ್ಳ ಬ್ರಾಂಬ್ರು ಹೆಣ್ಣು ಐಕ್ಳು ಇವುನ್ನೆಲ್ಲಾ ಕಲ್ತಿರ್ಲಿಲ್ಲ. ಊರ್ ಜನಾ ಸುತ ಯಾತುಕ್ಕಾನಾ ಆಗ್ಲಿ ಅವುರ್ ಮನೆ ಬಾಗ್ಲಿಗೆ ಓಯ್ತಾಲೂ ಇರನಿಲ್ಲ. ನಮ್ಮಜ್ಜಿ ಕಾಲ ಮುಗುದ್ ಮ್ಯಾಗೆ ಗೋವಿಂದಪ್ಪ ಮಂತ್ರ ಹಾಕ್ತಿದ್ದ. ಮಂತ್ರ ಕಲ್ತಿದ್ದ ನಮ್ ಅತ್ತೆದೀರೆಲ್ಲಾ ಮದ್ವೆ ಮಾಡ್ಕಂಡು ಬ್ಯಾರೆ ಊರು ಸೇರ್ಕಂಡಾಗಿತ್ತು.
ಹಾವು ಕಡಿದ್ರೆ, ಚೇಳು ಕಚ್ಚಿದ್ರೆ ಮಂತ್ರುಕ್ಕೇ ಬಗ್ಗಿಸ್ತಾರೆ!!
ಈಗ್ಲೂ ಊರಾಗೆ ಮಂತ್ರದ ಮಾತ್ಮೆ ಮಾಯ್ವಾಗಿಲ್ಲ. ಡಾಕುಟ್ರಿಗೆ ಎಲ್ಡು ದಿನ ಟೇಮ್ ಕೊಡ್ತಾರೆ. ಅವುರ್ ತಾವ ಬ್ಯಾಗ್ನೇ ಮೇಲಾಗ್ಲಿಲ್ಲ (ಉಸಾರಾಗ್ಲಿಲ್ಲ) ಅಂದ್ರೆ ತಕೋ ಮಂತ್ರ ಹಾಕೋರ್ ತಾವ್ಕೆ ವಾಗೋದೇ ಸೈಯ್ಯ. ಅಳ್ಳಾಪುರದಾಗೆ(ಹರಳಾಪುರ), ದೊಡ್ಡಮಾಲೂರಾಗೆ ಮಂತ್ರ ಹಾಕೋರು ಅವ್ರೆ. ಗೊಂದಿಹಳ್ಳಿಯಾಗೆ ಇರೋರು ಸ್ಯಾನೆ ಹೆಸ್ರುವಾಸಿ. ಹಳೇಗಾಯ, ಮಂಡಿಗೆ(ಹಠಕ್ಕೆ) ಬಿದ್ದಿರಾ ಹಳೆ ನೋವು, ಹಾವಿನ್ ಕಡ್ತ, ಚೇಳು ಕುಟುಕೀರೆ… ಎಲ್ಲಾದ್ಕೂ ಮಂತ್ರಾನೇ ಸೈ. ಮಂತ್ರುಕ್ಕೆ ಮಾವುನ್ ಕಾಯ್ನೂ ಉದುರ್ಸೋ ಅಂತಾ ಸಕ್ತಿ ಇರೋರು ಇವ್ರೆಲ್ಲಾ. ಎಂತಾ ವಿಸುದ್ ಹಾವಾನಾ ಆಗ್ಲಿ, ಸೀರಿಯಸ್ ಆಗಿದ್ರೂ ಸುತ ಅವುರ್ ತಾವ ಹೋಗಿ ಮಂತ್ರ ಹಾಕುಸ್ದೇಟ್ಗೆ ರಿಪೇರಿ ಆಗೋಗ್ತೈತೆ ಅಂಬ್ತ ಈಗ್ಲೂ ಸೈತ ನಂಬ್ತಾರೆ. ಮಂತ್ರ ಹಾಕೋರ್ಗೆ ದುಡ್ಡಿನಾಸೆ ಇರ್ಬಾರ್ದಂತೆ. ಕಾಸಿನ್ ರುಚಿ ತಗುಲ್ತೋ ಮಂತ್ರಕ್ಕಿರಾ ಸಕ್ತಿ ಕಮ್ಮಿ ಆಗ್ತೈತೆ ಅಂಬ್ತಾರೆ. ಅಂಗೇಯಾ ಇವ್ರಾಗೆ ಒಬ್ರು ಮದ್ಲು ಹಸ್ತಗುಣಕ್ಕೆ ಹೆಸ್ರಾಗಿರೋರು. ಇವಾಗ ಕಾಸು ವಸೂಲಿ ಸುರು ಮಾಡ್ಕಂಡಿ, ಸಕ್ತಿ ಕಮ್ಮಿ ಆಗಿ ಮೇಲಾಗೋದೇ ಇಲ್ಲ ಅಂಬ್ತ ನಮ್ ಜನ ಗೊಣಗ್ತಾರೆ. ಅದ್ರಾಗೂ ಅಡ್ರೆಸ್ಸು ಬರುಸ್ಕಂಡು ಮಂತ್ರ ಹಾಕ್ತಾರಂತಪ್ಪ. ಆ ಮಂತ್ರ ಅಡ್ರೆಸ್ ಹುಡೀಕ್ಕಂಡು ಹೋಗಿ ಹಾವಿನ್ ವಿಸ್ವಾ(ವಿಷ) ಕಿತ್ತಾಗ್ತದೇನೋ? ಅದ್ಕೇ ಬರುಸ್ಕಂತಾರೋ ಇಲ್ಲ ಆಮ್ಯಾಕೆ ಕಾಸು ಕೊಡ್ದೆ ಪೇರಿ ಕಿತ್ರೆ ಯಾವ್ದುಕ್ಕಾನಾ ದಾಖಲೆ ಇರ್ಲಿ ಅಂತಾಲೋ? ಗೊತ್ತಿಲ್ಲ. ಡಾಕುಟ್ರು ಓದಾಕೆ ಮಣ್ಣು ಹೊತ್ತೋರ್ಗೂ ಜಗ್ದೇ ಇದ್ದಿದ್ದು ಬಡ್ಡಿಮಗುಂದು ಕಾಯ್ಲೇಗ್ಳು ಈ ನಾಕಕ್ಸರ ಕಲೀದಿದ್ ಮಂತ್ರವಾದಿಗ್ಳ (ಮಂತ್ರ ಹಾಕೋರು) ಮಂತ್ರುಕ್ಕೆ ಮಾಯ್ವಾಗೋದು ಸೋಜಿಗ್ವೇ.
ನಮ್ಮ ತಾತುನ್ ಅಂತ್ರದ ಮಾತ್ಮೆ
ಅದು ಚಿತ್ರಲಿಪಿ. ಒಂದೀಸು ಆಕಾರ್ಗೋಳು ಶ್ರೀಚಕ್ರ, ಐಂ ಹ್ರೀಂ ಮಂತ್ರ ಇನ್ನಾ ಯಾತ್ ಯಾತುರ್ದೋ ಬರ್ಯಾರಾ. ನಂಗಂತೂ ಕಣ್ ಕಿಸ್ದು ನೋಡೀರೂ ಅರ್ಥ ಆಗ್ತಿರ್ಲಿಲ್ಲ. ನೀನ್ ದೊಡ್ಡೋಳಾದ್ ಮ್ಯಾಕೆ ಅರ್ಥ ಆಗ್ತೈತೆ ಕಣಮ್ಮಿ ಅಂಬಾರು. ಮದ್ಲು ದೊಡ್ಡ ತಾಮ್ರದ ಡಬ್ಬಾ ರೇಕು ತಕಂತಿದ್ರು. ಅದುನ್ನ ಅಂಗೈ ಅಗ್ಲ ಕತ್ತರ್ಸಿ ಇಟ್ಕಣಾರು. ಅದು ಸೊಲ್ಪ ಉಬ್ಕಂಡು ಇರ್ತಿತ್ತು. ಅದ್ನ ವಸಿ ದೀಪುದ್ ಬೆಂಕೀನಾಗೆ ಸುಟ್ಟು ತಟ್ಟಿ ಚಪ್ಪಟೆ ಮಾಡಿ ಇಕ್ಕಂತಿದ್ರು.
ಒಂದಿನ್ವಿಡೀ ಅದೇ ಕೆಲ್ಸ. ಆಮ್ಯಾಕೆ ಇನ್ನೊಂದು ದಿಸ ಅದ್ರಾಗೆ ಅಂತ್ರವೋ ಮಂತ್ರವೋ ಬರ್ಯಾದು. ಬರ್ಯಾಕೆ ಒಂದು ಸಣ್ಣ ದಬ್ಬಳ ತರ ಮಡಿಕ್ಕಂಡಿದ್ರು. ಅದ್ರಾಗೆ ಕೊರೀತಿದ್ರು. ಹಳೇ ಕಾಲ್ದಾಗೆ ತಾಮ್ರ ಪತ್ರಾವಾ ಇಂಗೇ ಬರೀತಿದ್ರೋ ಏನೋಪ್ಪ. ಒಂದು ಇಪ್ಪತ್ತು ಮುವ್ವತ್ತು ಇಂಗೇ ಬರ್ದು ಇಕ್ಕಣಾರು. ಆಮ್ಯಾಕೆ ಅದ್ಕೆ ತಾಯ್ತುದ್ ರೂಪಾ ಕೊಡ್ಬೇಕಲ್ವುರಾ? ತಾಮ್ರುದ್ ರೇಕು ಸಣ್ಣುಕೆ ಸುರುಳೀ ಸುತ್ತಿದ್ರೆ ಪುಟಾಣಿ ಆಗ್ತಿತ್ತು. ಅದ್ನ ಮೂನೂಲು (ಬಿಳೇ ದಾರ. ಮೂರೆಳೇದು.) ತಕಂಡಿ ಚೆಂದಾಗಿ ಸುತ್ತೋರು. ರೇಕು ಮಾಯ್ವಾಗಿ ಬರೇ ದಾರದ ಅಂತ್ರ ಕಾಣ್ತಿತ್ತು. ಅದ್ನ ಕತ್ತಿಗೆ ಕಟ್ಟಬೇಕಲ್ಲ. ಅದುಕ್ಕೆ ಒಂದಿಷ್ಟು ಉದ್ದ ದಾರ ಕಟ್ಟಾರು. ಯಾರಾನಾ ಬಂದು ಕ್ಯೋಳೀರೂ ಕೊಡಾರು. ಊರೂರ್ನಾಗೆಲ್ಲಾ ನಮ್ ತಾತುನ್ ಕೈಗುಣ ಹೆಸ್ರುವಾಸಿ ಆಗಿತ್ತು. ವಸಿ ಜನ ಮನೇ ತಾವ್ಕೇ ಬಂದು ತಾತುನ್ ಕೈಯಾಗೇ ಕಟ್ಟಿಸಿಕಂತಿದ್ರು. ಒಂದು ಊದುಗಡ್ಡಿ ತಕಂಡು ಮಂತ್ರ ಆಕಿ, ಅದ್ರ ಹೊಗೇನಾಗೆ ಅಂತ್ರಾವಾ ಇಕ್ಕಿ ಅದ್ನ ಕಟ್ಟೋರು. ಹೆಣ್ ಕೂಸಿಗಾದ್ರೆ ಕೊಳ್ಳಿಗೆ (ಕೊರಳು), ಗಂಡು ಹೈಕುಳ್ಗೆ ರಟ್ಟೆಗೆ ಇಲ್ಲಾಂದ್ರೆ ಉಡುದಾರುಕ್ಕೆ ಕಟ್ಟಾರು. ಬಿಟ್ಟಿ ಕೊಟ್ರೆ ಕಾಯ್ಲೆ ವಾಸಿ ಆಗಾಕಿಲ್ಲ ಅಂಬ್ತಾವ ಒಂದಾಣೆ ಎರಡಾಣೆ ತಕಂಬಾರು. ಅದ್ನ ಮಾಡಾಕೆ ಅವುರ್ಗೆ ಇನ್ನಾ ಸ್ಯಾನೆ ಕಾಸು ಆಗ್ತಿತ್ತು. ಸೇವೆ ಅಂಬ್ತಾಲೇ ಮಾಡಾರು. ಪೈಸಾ ಕಾಲ್ದಾಗೆ ಹತ್ತು ಇಪ್ಪತ್ತು ಪೈಸಾ ಆಯ್ತು. ಆಮ್ಯಾಕೆ ನಾಕಾಣೆ ಎಂಟಾಣೆ ಆಯ್ತು. ಅದ್ನೂ ಸುತ ಕೊಡಾ ಸಕ್ತಿ ಇಲ್ದೋರ್ಗೆ ಅಂಗೇ ತಕಂಡೋಗಿ ಅನ್ನೋರು. ಜತ್ಗೇ ತಾನೇ ಇನ್ನಾ ವಸಿ ಚಿಲ್ರೆಯೂ ಕೊಡಾರು. ಮಗೀಗೆ ಡಾಕುಟ್ರ ತಾವ ಕರ್ಕೋ ಹೋಗು ಅಂಬಾರು. ಅಂತ್ರದಾಗೆ ಬಂದಿದ್ದ ಕಾಸ್ನ ಒಂದು ಡಬ್ಬ ಮಡಿಕ್ಕಂಡಿ ಅದ್ರಾಗೆ ಹಾಕಾರು. ಕೊನೇಗೆ ಅದ್ನ ಮನೆ ದೇವ್ರ ತಾವ ತಕಂಡೋಗಿ ಹುಂಡೀಗೆ ಹಾಕ್ ಬುಡ್ತಿದ್ರು. ಈ ಅಂತ್ರದಾಗೆ ಎಲ್ಡು ರಕಮು. ಮಾಮೂಲಿ ಅಂತ್ರ ಒಂದಾದ್ರೆ ಇನ್ನೊಂದು ಬಾಲಗ್ರಹ ಅಂತ್ರ. ಮಾಮೂಲಿ ಅಂತ್ರಾವಾ ಜರ ಬಂದ್ರೆ, ಎದುರ್ಕಂಡಿದ್ರೆ, ರಾತ್ರಿ ಹಾಸ್ಗೇನಾಗೆ ಉಚ್ಚೆ ಹೊಯ್ಕಂತಿದ್ರೆ, ಸುಕ್ರವಾರ ಮಂಗುಳ್ವಾರ ಆಡಾವಾಗ ಎದ್ದು ಬಿದ್ದೂ ಬಂದ್ರೆ, ದಿಷ್ಟಿ ಆಗಿದ್ರೆ ಕಟ್ಸೋರು. ಸ್ಯಾನೆ ದಿನ್ವಾದ್ರೂ ಉಸಾರು ತಪ್ಪಿದ್ರೆ, ನವುಸ್ಕಂಡು(ಸಿಕ್ಕಾಪಟ್ಟೆ ಸಣ್ಣುಕಾಗಿದ್ರೆ) ಹೋಗಿದ್ರೆ, ಡಾಕುಟ್ರಿಗೂ ಕಾಯಿಲೆ ಕುದುರ್ದಿದ್ರೆ(ಜಗ್ಗದಿದ್ರೆ), ರಾವು ಬಡ್ದಂಗೆ ಕುಂತಿದ್ರೆ(ಮಂಕಾಗಿ) ಬಾಲಗ್ರಹ ಆಗೈತೆ ಅಂಬ್ತಾ ಲೆಕ್ಕ. ಸಾಮಾನ್ಯುಕ್ಕೆ ಸಣ್ಣ ಮಕ್ಳೀಗೆ ಸ್ಯಾನೆ ಆಗ್ತಿತ್ತು. ದೊಡ್ಡ ಮಕ್ಳೀಗೂ ಕಮ್ಮಿ ಆಗ್ತಿತ್ತು. ಸ್ಯಾನೆ ಅಪ್ರೂಪುಕ್ಕೆ ದೊಡ್ಡೋರ್ಗೂ ಬಾಲಗ್ರಹ ಆಗ್ತಿತ್ತು. ಆಗ ಈ ಬಾಲಗ್ರಹ ಅಂತ್ರ ತಕಂಡೋಗೋರು. ಮನ್ಯಾಗೆ ದ್ಯಾವ್ರ ಮುಂದ್ಕೆ ಅವುರ್ನ ಕುಂಡ್ರಿಸಿ, ಅಂತ್ರುಕ್ಕೆ ಸೆಂದಾಗಿ ಅರಿಸಿನ ಬಳ್ದು, ಊದುಗಡ್ಡಿ ಹೊಗೆ ಇಕ್ಕಿ ಕೊಳ್ಳಾಗೆ ಕಟ್ಟುತಿದ್ರು.
ನಮ್ ಕೊಳ್ಳಾಗೂ ವರ್ಸವಿಡೀ ಅಂತ್ರ ನ್ಯಾತಾಡ್ತಿತ್ತು
ತಾತಾನೇ ಅಂತ್ರ ಬರೀತಿತ್ತು ಅಂದ್ ಮ್ಯಾಗೆ ಮೊಮ್ಮಕ್ಕಳ ಕೊಳ್ಳಾಗೆ ಯಾವಾಗ್ಲೂ ನೇತಾಡ್ತಾಲೇ ಇರ್ಬೈಕು ಅಲ್ವುರಾ? ನಮ್ ಕೊಳ್ಳಾಗೆ ಯಾವಾಗ್ಲೂ ಕಾಶೀದಾರ(ಕರೇದಾರ) ಇರ್ತಿತ್ತು. ಅದುಕ್ಕೇ ಅಂತ್ರಾನೂ ಸಿಗಾಕ್ಸತಿದ್ರು. ಜರಾ ಗಿರಾ ಬಂದೇಟ್ಗೆ, ಸುಕ್ರವಾರ ಮಂಗುಳ್ವಾರ ಬಿದ್ದು ಗಿದ್ದು ಮೈ ಕೈ ಗಾಯಾ ಗೀಯಾ ಮಾಡ್ಕಂಡು ಬಂದ್ರೆ, ನಿದ್ದೇನಾಗೆ ಹಲ್ಲು ಗಿಲ್ಲು ಕಡುದ್ರೆ, ಮಂಕು ಸಾಂಬ್ರಾಣಿ ತರ ಒಂದೇ ಕಡೆ ಕುಂತಿದ್ರೆ… ಹೊಸ ಅಂತ್ರ ಕೊಳ್ಳಾಗ್ ಬೀಳೋದು ಗ್ಯಾರಂಟಿ ಆಗ್ತಿತ್ತು. ಆಗ ಹಳೆ ಅಂತ್ರಾವಾ ತೆಗ್ದು ಯಾವ್ದಾನಾ ಗಿಡುದ್ ಬುಡದಾಗೆ ಹಾಕ್ತಿದ್ವು. ಯಾರೂ ತುಳೀದಿದ್ ಜಾಗ ಅಂತಾವಾ.
ರಕರಕಮು ಮಂತ್ರಗ್ಳು
ಎಲ್ಲಾದ್ಕೂವೇ ಒಂದೇ ತರುದ್ ಮಂತ್ರಾ ಅಲ್ಲ. ಮಂತ್ರುಕ್ಕೆ ಉಪ್ಯೋಗ್ಸೋ ಸಾಮಾನೂ ಬ್ಯಾರೇನೇಯಾ.
ಕಣ್ಣು ಪೋಟು ಬಂದ್ರೆ
ಕಣ್ಣಾಗೆ ಒಂತರುಕ್ಕೆ ಹುವ್ವ ಬತ್ತದೆ. ಕೆಂಪು ಚುಕ್ಕಿ ಕಾಣುಸ್ಕಂಡ್ರೆ ಕೆಂಪು ಹುವ್ವಿನಾಗೆ ಮಂತ್ರಿಸಬೇಕು. ಕೆಂಪು ಕಣಗಿಲೆ ಹುವ್ವ ತಕಂಡು ಮಂತ್ರಿಸ್ತಿದ್ರು.
ಬಿಳೇ ಚುಕ್ಕಿ ಬಂದ್ರೆ ಬಿಳೇ ಬಣ್ಣುದ್ ಹುವ್ವಾನೇ ಬೇಕು. ಬಿಳೇದು ಮಲ್ಲಿಗೇನೋ, ಕಾಕಡಾನೋ, ಬಿಳೇ ಪಟಿಕಾ(ಸ್ಫಟಿಕ)ನೋ ಯಾವ್ದೋ ಒಂದ್ರಾಗೆ ಹಾಕ್ತಿದ್ರು. ಈ ಬಣ್ಣುದ್ ಮೂರು ಹುವ್ವ ಕೈಯಾಗಿಟ್ಕಂಡು ಮೂರು ಮಂತ್ರ ಹಾಕ್ತಿದ್ರು. ಒನ್ನೊಂದು ಮಂತ್ರುಕ್ಕೆ ಒನ್ನೊಂದು ಹುವ್ವ. ಕಣ್ಣು ಪೋಟು ಮೂರು ದಿನದಾಗೆ ಇಳಿದೋಗ್ತಿತ್ತು.
ದಿಷ್ಟಿ ಮಂತ್ರ
ಊಟ ಸೇರ್ದಿದ್ರೆ, ಉಸಾರು ತಪ್ಪೀರೆ ದಿಷ್ಟಿ ಮಂತ್ರ ಹಾಕೋರು. ಇದ್ರಾಗೆ ನಾಕು ತರ. ಸೆರಗು ನಿವಾಳ್ಸಿಕಂತಾ ಮಂತ್ರ ಹಾಕೋದು ಒಂದು ರಕಮಾದ್ರೆ, ಇಬೂತಿ(ವಿಭೂತಿ), ಸಕ್ಕರೆ, ಉಪ್ಪು ಮಂತ್ರಿಸಿ ಕೊಡೋದು ಬ್ಯಾರೆ ರಕಮುಗ್ಳು. ಅವ್ರೇ ಬಂದ್ರೆ ಸೆರಗು ನಿವಾಳ್ಸಿ ಮಂತ್ರ ಹಾಕೋರು. ಅವುರ್ ಬದ್ಲಿ ಬ್ಯಾರೆಯೋರ್ ಬಂದ್ರೆ ಉಪ್ಪೋ ಸಕ್ಕರೇನೋ ಮಂತ್ರಿಸಿ ಊಟದಾಗೆ ಕಲ್ಸಿ ಕೊಡೋಕೆ ಹೇಳೋರು. ಇಬೂತಿ ಆದ್ರೆ ಹಣೆ ಮ್ಯಾಗೆ ಹಚ್ಚೋಕೆ ಹೇಳೋರು. ಮಂತ್ರ ಬಿದ್ದ ಮ್ಯಾಕೆ ಊಟ ತಿಂಡಿ ಸರ್ಯಾಗಿ ಸೇರೋದು. ಮಂತ್ರ ಆಕಾವಾಗ ಆಕುಳಿಕೆ ಬಂದ್ರೆ ದಿಷ್ಟಿ ಆಗೈತೆ ಅಂಬೋ ಲೆಕ್ಕ. ಕಣ್ಣಾಗೆ ನೀರು ಬರಾತಕ ಒಂದೇ ಸಮ್ಕೆ ಆಕುಳಿಕೆ ಬಂದೋದ್ರೆ ಸಿಕ್ಕಾಪಟ್ಟೆ ಆಗೈತೆ ಅಂತ. ಏಟು ದಿಟ್ಟಿ ಆಗೈತೆ ಅಂಬೋದುಕ್ಕೆ ಒನ್ನೊಂದ್ರಾಗೂ ಬ್ಯಾರೆ ಬ್ಯಾರೆ ಅಳತೆ ಐತೆ.
ಕಿಸುರು ಮಂತ್ರ ಮತ್ತೀಗ(ಮತ್ತು) ಕೈಮುಸುಕು ಮಂತ್ರ
ಕಿಸುರು ಆಗೈತೆ ಅಂದ್ರೆ ಸ್ಯಾನೆ ರಚ್ಚೆ ಹಿಡಿಯೋದು. ಹೊಡ್ತ ಬಡ್ತ, ಬೈಗ್ಳ ಯಾವ್ದುಕ್ಕೂ ಜಗ್ಗದಿದ್ರೆ, ಅಂಗೇ ನವುಕೊಂಡು ಹೋಗ್ತಿದ್ರೆ ಕಿಸುರು ಆಗೈತೆ ಅಂತ. ಅದುಕ್ಕೂ ಊದುಗಡ್ಡಿ ಹೊಗೇನಾಗೆ ಮಂತ್ರಿಸೋರು.
ಇನ್ನಾ ಕೈಮುಸುಗು, ಮುಸುಕು, ಮಂದೂಡಿ ಇವೆಲ್ಲಾ ಹೆಸ್ರು ಒಂದುಕ್ಕೇಯಾ. ಆಗಿನ್ ಕಾಲದಾಗೆ ಒಂದು ನಂಬ್ಕೆ ಇತ್ತು. ಕೆಲುವ್ರು ಊಟದಾಗೆ ಔಸ್ದಿ ಬೆರ್ಸಿ ಕೊಡಾದ್ನ ಕಲಿತಿರ್ತಾರೆ. ಅದೂ ಎಂಗೇ ಅಂದ್ರೆ ಕೆಲುವ್ರಿಗೆ ಹಿರೇಕ್ರಿಂದ ಬಂದಿರ್ತೈತೆ. ಅದ್ನ ಬಿಡಾಂಗಿಲ್ಲ. ವಂಸುಕ್ಕೆ ಅಂಟಿರಾದು. ಕಲಿತು ಸುಮ್ಕಾಗಂಗಿಲ್ಲ. ಅದ್ನ ಬ್ಯಾರೆಯೋರ್ಗೆ ಆಗಾಗ ಮಾಡಿ, ಅವುರ್ ಕಾಯಿಲೆ ಬೀಳೋಂಗೆ ಮಾಡ್ಲೇಬೇಕು. ಕೆಲುವ್ರು ಬೇಕೂಂತ್ಲೇ ಇಂತಾದ್ನೆಲ್ಲಾ ಕಲ್ತು ಹೊಟ್ಟುರೀಗೆ ಮಾಡ್ತಾರೆ. ಕೆಲುವ್ರು ಪಾಪ ಇಷ್ಟ ಇಲ್ಲ್ದೀರೂ ಕಷ್ಟ ಪಟ್ಟು ಮನೆತನುದ್ ಇದ್ಯೆ(ವಿದ್ಯೆ) ಅಂಬ್ತಾಲೇ ಕಲ್ತು ಅಪ್ರೂಪುಕ್ಕೆ ಒನ್ನೊಂದ್ ಕಿತ ಪ್ರಯೋಗ ಮಾಡ್ತಾರೆ. ನಮ್ಮಜ್ಜಿ ಯೋಳೋರು ಸ್ಯಾನೆ ದಿನ ಸುಮ್ಕಿದ್ರೆ ಅಂತೋರ್ಗೆ ಕೈ ಕಡ್ತ ಬತ್ತದಂತೆ. ಅದೇನೋ ಯೋಳ್ತಾರಲ್ಲ. ಕಲ್ತಿದ್ ಬಿಡೆ ಕಳ್ ಮುಂಡೆ ಅಂದ್ರೆ ನಡು ನೀರಾಗ್ ಬಿಟ್ಟು ಮಣ್ಣು ಹೊಯ್ಕೊಳ್ಳೆ ಅಂದಂಗೆ ಬ್ಯಾರೆ ಯಾರೂ ಸಿಗದಿದ್ರೆ ಕೊನೀಗೆ ತಮ್ಮ ಮನ್ಯಾಗೇ ಯಾರ್ಗಾನಾ ಔಸ್ದಿ ಮಡಗಿ ಕೈ ತುರುಸು ತೀರಿಸ್ಕಂತಾರಂತೆ. ಆಮ್ಯಾಕೆ ಔಸ್ದೀನೂ ಮಾಡುಸ್ತಾರಂತೆ. ಈ ಇದ್ಯೆ ಕಲ್ತೋರು ಸಾಯಾಕೆ ಮುಂಚೆ ಅದ್ನ ಇನ್ನೊಬ್ರಿಗೆ ದಾಟಿಸೇ ಓಯ್ಬೇಕಂತೆ. ಸಿವಾ! ಸಾಯಾ ಟೇಮಿನಾಗೂ ಕೆಟ್ಟದ್ದೇ ಯೋಸ್ನೆ ಇವುರ್ಗೆ.
ಕೈಮುಸುಗು ಕಂಡು ಹಿಡಿಯೋದೆಂಗೆ
ಯಾರ್ಗಾನಾ ಕೈಮುಸುಗಾಗೈತೆ ಅಂತ ಕಂಡು ಹಿಡಿಯಾಕೆ ಘನವಾದ ದಾರಿ ಐತೆ. ರಾತ್ರೇಲಿ ಒಂದು ಹಳೆ ಪಾತ್ರೇನಾಗೆ ಉಚ್ಚೆ ಹೊಯ್ದು ಅದ್ರಾಗೆ ಒಂದು ಹಿಡಿ ಉಳ್ಳೀಕಾಳು(ಹುರುಳೀಕಾಳು) ಹಾಕುದ್ರೆ ಆತು. ಬೆಳಗಾನಾ ನೋಡೋತ್ಗೆ ಕರ್ರಗೆ ಆಗಿರ್ತೈತೆ. ಆಗ ಕೈಮುಸುಗು ಆಗಿರಾದು ಗ್ಯಾರಂಟಿ. ಮುಂದ್ಕೆ ಏಟು ದಿನ ಆಗೈತೆ ಔಸ್ದಿ ಇಕ್ಕಿ ಅಂಬ್ತ ತಿಳ್ಕಂಬಾದು. ಅದೆಂಗಪ್ಪ ಅಂದ್ರೆ ಅಂಗೈನ ಹಳ್ಳ ಮಾಡ್ಕಂಡು ಗುಂಡಿ ಮಾಡಿ ಅದ್ರಾಗೆ ನೀರು ಹಾಕ್ಕಣಾದು. ಒಂದು ಪರಕೆ ಕಡ್ಡಿ ತಕಂಡು ಅಳ್ಳೆಣ್ಣೆ(ಹರಳೆಣ್ಣೆ) ಅದ್ದಿ ಒನ್ನೊಂದೇ ತೊಟ್ಟು ಆ ನೀರಾಗೆ ಬುಡಬೇಕು. ಏಸು ತೊಟ್ಟು ಮುಣುಗಿರತೈತೆ ಆಟು ತಿಂಗಳಾಗೈತೆ ಅಂಬ್ತ ಲೆಕ್ಕ. ಆಮ್ಯಾಕೆ ಅದುಕ್ಕೆ ತಕ್ಕಂಗೆ ಯಂತ್ರ ಮಂತ್ರ, ಹೊಟ್ಯಾಗಿರಾ ಔಸ್ದಿ ತೆಗೆಯಾಕೆ ಬ್ಯಾರೆ ಔಸ್ದಿ ಮಾಡ್ಬೇಕು. ನಮ್ ಅಗಸರ ಚಿಕ್ಕಲಿಂಗಪ್ಪ ಯಾವುದೋ ಸೊಪ್ಪು ಅರೆದು ಕೊಡ್ತಿದ್ದ, ವಾಂತಿ ಮಾಡ್ಸಾಕೆ. ಒನ್ನೊಂದು ಕಿತ ವಾಂತೀನಾಗೂ ಕರ್ರಗೆ ಕೂದ್ಲು ತರುಕ್ಕೆ ಬತ್ತಿತ್ತಂತೆ. ಆಗ ಔಸ್ದಿ ಕೊಟ್ಟು ಸ್ಯಾನೆ ದಿನ ಆಗಿ ಕೂರ್ಲು ಸುತ ಬೆಳಕಂಡೈತೆ ಅಂಬೋರು. ದೊಡ್ಡೋರು ಮನೆ ಮುಂದ್ಲ ಕುಂತು ಇಂತ ಮಾತಾಡ್ತಿದ್ರೆ ನಮ್ಗೆ ಇದೆಲ್ಲ ಬೋ ಸೋಜಿಗ ಆಗ್ತಿತ್ತು.
ನಮ್ಮಜ್ಜೀ ಇದ್ಕೂ ಮಂತ್ರ ಆಕೋರು. ಜತ್ಗೆ ಒಂದು ಔಸ್ದಿ ಕೊಡಾರು. ಆಗ ಪಥ್ಯ ಇರ್ಬೇಕು. ಯಾತುರ್ದೂ ತಿನ್ನಂಗಿಲ್ಲ. ರಾಗಿ ರೊಟ್ಟಿ ಮಾಡಿಕೊಡಾರು. ರಾಗಿಹಿಟ್ಟು ಉಪ್ಪಿಲ್ಲದೆ ಕಾರಿಲ್ಲದೆ ಕಲ್ಸಿ, ರಾಗಿ ಎಲೇ ಮ್ಯಾಗೆ( ಆ ರಾಗಿ ಎಲೇಯಾ ಮುತ್ತುಗದೆಲೆ ತರ ಒಣಗಿಸಿ ಇಟ್ಕಂತಿದ್ರು) ರೊಟ್ಟಿ ತಟ್ಟಿ ಹೆಂಚಿನ್ ಮ್ಯಾಗಾಕಿ ಎಣ್ಣಿಲ್ಲದೆ ಕಾಸಿ, ಅದ್ಕೆ ತುಪ್ಪ ಸಕ್ಕರೆ ಹಾಕಿ ಕೊಟ್ರೆ ಉಸುರೆತ್ತದಂಗೆ ಆ ಒಣಕಲು ರೊಟ್ಟಿ ತಿನ್ನ ಬೇಕು. ಆಗ್ಲೇ ಮೇಲಾಗೋದು ಅಂತ ಎದುರ್ಸೋರು.
ಕಾಮಾಲೆ ಮಂತ್ರ
ಕಾಮಾಲೆ ಆದ್ರೆ ತಾಮ್ರದ ಪಂಚಾತ್ರೇಲಿ(ಪಂಚಪಾತ್ರೆ) ನೀರು ತಕಂಡು ಮೂರು ಸೂಜಿ ಕೈಯಾಗಿಟ್ಕಳಾರು. ಒಂದು ಮಂತ್ರುಕ್ಕೆ ಒಂದು ಸೂಜಿ ನೀರ್ನಾಗೆ ಹಾಕೋರು. ಮೂರು ಮಂತ್ರಕ್ಕೆ ಮೂರು ಸೂಜಿ ನೀರಾಗೆ ಹಾಕಿ ಅಂಗೇ ಬುಡ್ತಿದ್ರು. ಬೆಳಗ್ಗೆದ್ದು ನೋಡೀರೆ ಆ ನೀರೆಲ್ಲಾ ಹೊಂಡು ಹೊಂಡಾಗಿರ್ತಿತ್ತು(ಗಲೀಜು). ಕಾಮಾಲೆ ಆದ್ರೆ ತಿನ್ನಾಕೆ ಬತ್ತದ ಅರಳು ಕೊಡ್ತಿದ್ರು.
ಇಳುಕುಮಂತ್ರ
ಉಳುಕು ಮಂತ್ರ ಅಂತ್ಲೂ ಅಂತಿದ್ರು. ಕೈಯೋ ಕಾಲೋ ಸೊಂಟವೋ ಕತ್ತೋ ಉಳುಕಿದ್ರೆ ಒಂದು ಕಬ್ಬಿಣದ ಮೊಳೆಯೋ, ದಬ್ಬಣಾನೋ, ಚಿಲಕಕ್ಕೆ ಸಿಗಾಕ್ಸೋ ಉದ್ದನೆ ಕಂಬೀನೋ ತಕಂಡು ಮಂತ್ರಿಸೋರು. ಮೂರು ಮಂತ್ರುಕ್ಕೇ ಉಳುಕು ಇಳಿದೋಗೋದು.
ಚೇಳು ಕಚ್ಚೀರೂ, ಗದ್ವಾಲಮ್ಮ, ಚಿಕ್ಕಮ್ಮ, ದೊಡ್ಡಮ್ಮ, ಮಂಡಮ್ಮಂದ್ರಿಗೂ ಊದುಗಡ್ಡೀಲೆ ಮಂತ್ರ. ಮನ್ಯಾಗೆ ಚೇಳೋ ಮಂಡರಗಪ್ಪೇನೋ(ಕರ್ರಗೆ ಮಿರ ಮಿರ ಮಿಂಚ್ಕಂಡು ಚೇಳಿನ್ ನಾಕರಷ್ಟು ದಪ್ಪುಗಿರ್ತೈತೆ) ಕಾಣುಸ್ಕಂಡ್ರೆ ಮುಟ್ಟು ಚಟ್ಟು ಆಗೈತೆ, ಮುಟ್ಟು ಅಂಟು ಆಗೈತೆ ಅಂಬ್ತಾವಾ ಹಸುವಿನ್ ಗಂಜ್ಲ ತಕಾ ಬಂದು ಮನೆ ತುಂಬಾ ಚೆಲ್ಲಿ, ಮನೆ ದ್ಯಾವ್ರಿಗೆ ಮುಡುಪು ಕಟ್ಟೋರು.
ಚುಟಿಕೆ ಹಾಕೋರು
ಯಪ್ಪಾ ಇದಂತೂ ಬಲ್ ಬಯಂಕರ. ಜರಾ ಬಂದಾಗ ಕಣ್ ರೆಪ್ಪೆ ಸೆಟಕಂಡಿದ್ರೆ,(ಸೇಂಡ್ರಿಸಿಕಂಡಿದ್ರೆ), ಸಣ್ ಐಕ್ಳು ರಚ್ಚೆ ಹಿಡಿದಾಗ ತಲ್ಯಾಗಿರಾ ಸುಳಿ ನೋಡೋದು. ಸುಳಿ ಏನಾರಾ ನಿಗುರ್ಕಂಡು ನಿಂತಿದ್ರೆ ಮುಗೀತು. ದೀಪ ಹಚ್ಚಿ ಕರೆ ಬಳೆ ತಕಂಡು ತುಂಡು ಮಾಡಿ, ಅದ್ನ ದೀಪದಾಗೆ ಕಾಸಿ, ಆ ಬಳೇ ಚೂರ್ನಾ ನೆತ್ತೀ ಮ್ಯಾಗೆ, ಕುತ್ತಿಗೆ ಹಿಂದೆ, ಅಂಗಾಲಿನ್ ಮ್ಯಾಲೆ ಚುರುಕ್ ಅಂತ ಮಡಗೋರು. ಏಸೊಂದು ಕಿತ ಬಳೆ ಕಾಸಿದ್ದು ಜಾಸ್ತಿ ಆಗಿ ಬೊಬ್ಬೆ ಬಂದು ಗಾಯ್ವೂ ಆಗ್ತಿತ್ತು. ಈಗ್ಲೂ ನನ್ ಅಂಗಾಲಿನ್ ಮೇಗೆ ಈ ಚುಟಿಕೆ ಹಾಕಿರಾ ಗುರುತು ಅವ್ವೆ. ಪುಣ್ಯುಕ್ಕೆ ನಂಗೆ ಗಾಯಾ ಯಾವತ್ಗೂ ಆಗಿಲ್ಲ. ಆದ್ರೂ ಸುತ ಮಚ್ಚೆಗ್ಳು ಅಂಗೇ ಉಳ್ಕಂಡವೆ ಅಂದ್ರೆ ಚುಟಿಕೆ ಮಾತ್ಮ್ಯೆ ಇನ್ನೆಂಗಿದ್ದಾತು. ನಾವಂತೂ ದೀಪ ಹಚ್ಚಿದೇಟ್ಗೆ ಓಡೋಗೋದು. ಬುಟ್ಟಾರೆ! ಒಬ್ರು ಕಾಲಾಗಾಕಿ ಅದುಮಿ ಇಟ್ಕಣಾರು. ಇನ್ನೊಬ್ರು ಚುಟಿಕೆ ಹಾಕೋರು. ನಾವೂ ಅತ್ತೂ ಕರ್ದೂ ಸುಮ್ಕಾಗೀವಿ. ಇದ್ರ ಜತೇಗೆ ಉಪ್ಪು, ಮೂರು ಕೆಂಪು ಮೆಣಸಿನಕಾಯಿ, ಸಾಸಿವೆ ನಿವಾಳಿಸ್ತಿದ್ರು. ಒಂದು ಎಕ್ಕದ ಎಲೇ ಮ್ಯಾಗೆ ಪಿಡಚೆ ಅನ್ನ, ಮಸ್ರು ಹಾಕಿ ಈರುಳ್ಳಿ ಚುಚ್ಚಿ ಅದುಕ್ಕೆ ಅರಿಸಿಣ ಕುಂಕುಮ ಹಾಕಿ ನಡು ರಾತ್ರೀನಾಗೆ ಯಾರೂ ಕಾಣ್ದಂತಾ ಹೊತ್ತು ನೋಡ್ಕಂಡು ಗಿಡದಡೀನಾಗೆ ಇಕ್ಕಿ ಬರೋರು.
ಮಂತ್ರ ಕಲ್ಸಾಕೂ ಮೂರ್ತ
ಇಂಗೇ ರಕರಕಮು ಮಂತ್ರಗ್ಳು, ಅಂತ್ರಗ್ಳು ಇದ್ವಾ. ಇವುನ್ನ ಬ್ಯಾರೆಯೋರ್ಗೆ ಸುಲುಬುಕ್ಕೆ ಕಲ್ಸಾ ಅಂಗಿಲ್ಲ. ಅಮಾಸೆ ದಿನ, ಹುಣ್ಣಿಮೇ ದಿನ, ಗ್ರಾಣ(ಗ್ರಹಣ) ಹಿಡ್ಕಂಡಾಗ ಈ ಮಂತ್ರುಕ್ಕೆ ದಿವಿನಾಗಿ ಸಕ್ತಿ ಬತ್ತದಂತೆ. ಆ ಟೇಮು ನೋಡ್ಕಂಡೇ ಮಂತ್ರಾವಾ ಉಪ್ದೇಸ ಮಾಡೋರು. ಅಂಗೇ ಕಷ್ಟ ಪಟ್ಟು ಕಲ್ತು ಜನುರ್ಗೆ ಉಪಕಾರ ಮಾಡಾ ಮನಸು ಏಸೊಂದು ಜನುಕ್ಕಿತ್ತು. ಅಂಗೇ ಇಡೀ ಊರಾಗೆ ನಾಕೋ ಐದೋ ಜನ ಮಂತ್ರ ಹಾಕೋರು, ಒಬ್ರೋ ಇಬ್ರೋ ಅಂತ್ರ ಬರ್ಯಾರು, ಮೂರೋ ನಾಕೋ ಮಂದಿ ಔಸ್ದಿ ಕೊಡಾರು ಇದ್ರೆ ಸಾಕಿತ್ತು, ಊರೂರ್ಗೇ ಡಾಕುಟ್ರುಗಳಿದ್ದಂಗೆ. ಅಕ್ಕಪಕ್ಕದೂರಿಗೆಲ್ಲಾ ಇವ್ರೇ ದಿಕ್ಕು.
ಇಂಗೇ ಇವೆಲ್ಲಾ ಆಗಿನ್ ಕಾಲ್ದಾಗೆ ಬೋ ಬಯ ಬಕ್ತಿ ಉಟ್ಟಿಸುದ್ರೆ ಈಗ ನೆಗಾಡಂಗೆ ಆಗ್ತೈತೆ.

ಸುಮಾ ಸತೀಶ್ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಚಿಕ್ಕಮಾಲೂರು ಗ್ರಾಮದವರು. ಬರವಣಿಗೆಯ ಜೊತೆಗೆ ಸಾಹಿತ್ಯ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕಿರುನಾಟಕಗಳ ರಚನೆ, ನಿರ್ದೇಶನ ಮತ್ತು ಅಭಿನಯ ಜೊತೆಗೆ ಏಕಪಾತ್ರಾಭಿನಯ ಇವರ ಹವ್ಯಾಸ. ಮಿರ್ಚಿ ಮಸಾಲೆ ಮತ್ತು ಇತರೆ ನಗೆ ನಾಟಕಗಳು , ಅವನಿ ( ಕವನ ಸಂಕಲನ), ವಚನ ಸಿರಿ (ಆಧುನಿಕ ವಚನಗಳು), ಹಾದಿಯಲ್ಲಿನ ಮುಳ್ಳುಗಳು ( ವೈಚಾರಿಕ ಲೇಖನ ಸಂಕಲನ), ಬಳಗ ಬಳ್ಳಿಯ ಸುತ್ತ (ಸಂ. ಕೃತಿ), ಶೂನ್ಯದಿಂದ ಸಿಂಹಾಸನದವರೆಗೆ ( ವ್ಯಕ್ತಿ ಚಿತ್ರಣ), ಭಾವಯಾನ ( ಸಂ. ಕೃತಿ), ಮನನ – ಮಂಥನ ( ವಿಮರ್ಶಾ ಬರೆಹಗಳು), ವಿಹಾರ (ಆಧುನಿಕ ವಚನಗಳು), ಕರ್ನಾಟಕದ ಅನನ್ಯ ಸಾಧಕಿಯರು ಭಾಗ 6 (ಡಾ. ಎಚ್. ಗಿರಿಜಮ್ಮನವರ ಬದುಕು – ಬರೆಹ) ಇವರ ಪ್ರಕಟಿತ ಕೃತಿಗಳು.