ನಾನು ತುಂಬಾ ಸ್ವಾಭಿಮಾನಿಯಾದ್ದರಿಂದ ನನ್ ಮಾಮ ‘ಖರ್ಚಿಗೆಂದು ದುಡ್ಡು ಕೇಳಲು ನಾಚಿಕೆಪಟ್ಟುಕೊಳ್ಳಬೇಡ’ ಎಂದರೂ ನಾನು ಮಾತ್ರ ಹಾಗೆ ಕೇಳುತ್ತಿರಲಿಲ್ಲ. ಮನೆಯವರಿಂದಲೂ ಅಷ್ಟೇನೂ ಆರ್ಥಿಕ ಸಹಕಾರ ಇರಲಿಲ್ಲ. ಮೊದಲೇ ಬೆಂಗಳೂರಿಗೆ ಹೊಸಬ. ಮೊದಲು ಒಂದೆರಡು ದಿನ ನನ್ನ ಮಾಮನೇ ನನ್ನನ್ನು ಕಾಲೇಜಿಗೆ ಡ್ರಾಪ್ ಕೊಟ್ಟ. ಮೂರನೇ ದಿನದಿಂದ ನನಗೇ ಬರಲು ತಿಳಿಸಿದ. ನಾನು ಬಿಎಂಟಿಸಿ ಬಸ್ಸಿನಲ್ಲಿ ಓಡಾಡಿದರೆ ಎಲ್ಲಿ ಬಸ್ ಚಾರ್ಜ್ ಖರ್ಚಾಗುತ್ತದೆ ಎಂದುಕೊಂಡು, ಬಸ್ ಹೋಗುವ ಮಾರ್ಗದಲ್ಲೇ ನಡೆದುಕೊಂಡು ಹೋಗುತ್ತಿದ್ದೆ!
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಇಪ್ಪತ್ನಾಲ್ಕನೆಯ ಕಂತು ನಿಮ್ಮ ಓದಿಗೆ

ರಜೆಯೆಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ? ದೊಡ್ಡ ದೊಡ್ಡ ಕಂಪೆನಿಗಳಲ್ಲಿ ದೊಡ್ಡ ಹುದ್ದೆಯಲ್ಲಿರುವವರಿಂದ ಹಿಡಿದು, ಚಿಕ್ಕ ಪುಟ್ಟ ನೌಕ್ರಿ ಮಾಡೋರಿಗೂ ರಜೆ ಅಂದ್ರೆ ಏನೋ ಒಂಥರಾ ಖುಷಿ, ವರ್ಣಿಸಲಸದಳ ಆನಂದ. ಅದರಲ್ಲೂ ರಜೆಯೆಂದರೆ ಮಕ್ಕಳಿಗಂತೂ ತುಂಬಾನೆ ಖುಷಿ.ಈಗ ತಾನೆ ದಸರಾ ರಜೆ ಶುರುವಾಗಿದೆ. ನನ್ನ ಪರಿಚಿತರ ಮಕ್ಕಳ ಮುಂದೆ ರಜಾದ ವಿಷಯ ಎತ್ತಿದಾಗ ‘ಯಾಕಾದ್ರೂ ಈ ರಜೆ ಬರುತ್ತೇನೋ?!’ ಅಂತಾ ಬೇಸರ ವ್ಯಕ್ತಪಡಿಸಿದ್ರು! ನಂಗೆ ಅಚ್ಚರಿಯಾಗಿ ‘ಯಾಕ್ರೋ?’ ಅಂತಾ ಕೇಳಿದ್ದಕ್ಕೆ ‘ಅಂಕಲ್, ರಜೆಯಲ್ಲಿ ನಮ್ಮ ಶಾಲೆಯಲ್ಲಿ ಕೊಟ್ಟ ಹೋಮ್ ವರ್ಕ್ ಬರೆದೂ ಬರೆದೂ ಸಾಕಾಗಿ ಹೋಗುತ್ತೆ. ಇಡೀ ದಿನಾ ಕೂತು ಬರೆದ್ರೂ ಅದು ಮುಗಿಯೋಲ್ಲ. ಇದಕ್ಕಿಂತ ಶಾಲೆ ಇರೋದೇ ವಾಸಿʼ ಎಂದು ಹೇಳಿದಾಗ ನಂಗೆ ನನ್ನ ಶಾಲಾ ದಿನಗಳ ನೆನಪಿಸಿಕೊಂಡು, ಇಂದಿನ ಮಕ್ಕಳ ಸ್ಥಿತಿ ಕಂಡು ಮರುಕ ಉಂಟಾಯಿತು. ನಾವು ಓದುವಾಗ ದಸರಾ ರಜೆ ಅಂತಾ ಇಡೀ ಅಕ್ಟೋಬರ್ ತಿಂಗಳು ಕೊಡಲಾಗುತ್ತಿತ್ತು. ಗಾಂಧೀ ಜಯಂತಿ ಮುಗಿಸ್ಕೊಂಡು ಮತ್ತೆ ಶಾಲೆಗೆ ಬರುತ್ತಿದ್ದುದೇ ಮುಂದಿನ ನವೆಂಬರ್ ಒಂದನೇ ತಾರೀಖಿಗೆ. ಮನೆಗೆಲಸವಾಗಿ ನಮಗೆ ಅರ್ಧ ವಾರ್ಷಿಕ ಪರೀಕ್ಷೆಯ ಪ್ರಶ್ನೆಪತ್ರಿಕೆಗಳನ್ನು ಬರೆದುಕೊಂಡು ಬರಲು ಹೇಳುತ್ತಿದ್ದರು. ಇದರ ಹೊರತಾಗಿ ನಮಗೆ ಅಷ್ಟು ಒತ್ತಡ ಇರುತ್ತಿರಲಿಲ್ಲ. ಆದರೆ ಈಗ ಪೋಷಕರು, ಶಿಕ್ಷಕರಾದಿಯಾಗಿಯೂ ಮಕ್ಕಳಿಗೆ ‘ಓದು… ಓದು…. ‘ ಎಂದು ಒತ್ತಡ ಹಾಕುತ್ತಾರೆ. ‘ಶಾಲೆಯಲ್ಲಿ ಕಲಿತಿದ್ದು ಮಾತ್ರ ಶಿಕ್ಷಣ’ ಎಂದು ಭಾವಿಸಿರುವ ಪ್ರಭಾವವೋ ಏನೋ? ಕೆಲವರಂತೂ ಇರೋ ರಜೆಗಳಲ್ಲೂ ವಿಶೇಷ ತರಗತಿ ಮಾಡುವ ಮೂಲಕ ಮಕ್ಕಳ ಮನೋರಂಜನೆಗೆ ಅಡ್ಡಿಯನ್ನುಂಟು ಮಾಡುತ್ತಾರೆ. ನಾವು ಹಿಂದೆ ರಜಾ ದಿನಗಳಲ್ಲಿ ಅಜ್ಜಿಯ ಮನೆಗೋ, ಸಂಬಂಧಿಕರ ಮನೆಗೋ ಹೋಗುತ್ತಿದ್ದೆವು. ಇದರಿಂದ ನಮಗೆ ಸಂಬಂಧದ ಮಹತ್ವ ಗೊತ್ತಾಗುತ್ತಿತ್ತು. ಬೇರೆ ಬೇರೆ ಪ್ರದೇಶದ ಬಗ್ಗೆ ತಿಳಿಯಲು ಅನುಕೂಲವಾತ್ತಿತ್ತಲ್ಲದೇ ನಾವು ಓಣಿಯ ಮಕ್ಕಳೊಂದಿಗೆ ಆಟವಾಡುತ್ತಿದ್ದುದರಿಂದ ನಾವು ಸಾಮಾಜೀಕರಣಗೊಳ್ಳಲು ಸಹಕಾರಿಯಾಗುತ್ತಿತ್ತು.

“ಆಡಿ ಬಾ ನನ ಕಂದ ಅಂಗಾಲ ತೊಳೆದೇನ
ತೆಂಗಿನಕಾಯಿ ತಿಳಿನೀರ ತಕ್ಕೊಂಡು
ಬಂಗಾರ ಮೋರೆ ತೊಳೆದೇನಾ”

ಎಂಬಂತೆ ಪೋಷಕರೂ ಮಕ್ಕಳ ಆಟಕ್ಕೆ ಅಡ್ಡಿಯನ್ನುಂಟು ಮಾಡುತ್ತಿರಲಿಲ್ಲ. ಆದರೆ ಈಗ ರಜೆ ಬಂದಾಗ ಆ ಕ್ಲಾಸು.. ಈ ಕ್ಲಾಸು.. ಎಂಬಂತೆ ಮಕ್ಕಳಿಗೆ ತಮ್ಮಿಷ್ಟವಾದುದ್ದನ್ನು ಕಲಿಯಲು ಕಳಿಸುತ್ತಾರೆಯೇ ವಿನಃ ಮಕ್ಕಳ ಇಷ್ಟ ಕಷ್ಟದ ಬಗ್ಗೆ ಗಮನ ಹರಿಸುವವರು ಕಮ್ಮಿ ಎಂದು ಹೇಳಬಹುದು. ಮಕ್ಕಳನ್ನು ಮಕ್ಕಳಂತಿರಲು ಬಿಡುತ್ತಿಲ್ಲ! ಇನ್ನು ನೀಟ್ ಪರೀಕ್ಷೆ ಬಂದ ಮೇಲಂತೂ ಬಹುತೇಕ ಪೋಷಕರು ಮಕ್ಕಳನ್ನು ಎಳವೆಯಿಂದಲೂ ಬರೀ ಇದರ ಬಗ್ಗೆ ನಿಗಾವಹಿಸುತ್ತಾರೆ. ತೀರಾ ಇತ್ತೀಚೆಗೆ ನನ್ನ ಪರಿಚಿತರೊಬ್ಬರು ಅವರ ಮಕ್ಕಳ ಶಾಲೆ ಬದಲಿಸಿದಾಗ ನಾನು ‘ಶಾಲೆ ಬದಲಾಯಿಸಿದ್ದು ಯಾಕೆ?’ ಎಂದು ಕೇಳಿದೆ. ಆಗವರ ಉತ್ತರ ಹೀಗಿತ್ತು; ಸರ್ ಆ ಶಾಲೆಯಲ್ಲಿ ಪ್ರೈಮರಿಯಿಂದಲೇ ನೀಟ್ ತರಬೇತಿ ಕೊಡುತ್ತಾರೆ ಎಂದು!! ಆಡಿಕೊಂಡು ಕುಣಿದುಕೊಂಡು ಬೆಳೆಯುವ ಪ್ರಾಥಮಿಕ ಶಾಲೆಯನ್ನು ಓದುವ ವಯಸ್ಸಿನಲ್ಲಿ ಮಕ್ಕಳಿಗೆ ಈ ರೀತಿ ಒತ್ತಡ ನೀಡುವುದು ಸರಿಯೇ ಎನಿಸಿತು. ಸದ್ಯ ನಾವು ಓದುತ್ತಿದ್ದಾಗ ಈ ಪರೀಕ್ಷೆ ಇರದಿದ್ದುದು ನಮ್ಮ‌ ಪುಣ್ಯ!! ಪೋಷಕರ ‘ನೀಟ್’ ಆಸೆಯನ್ನು ಬಂಡವಾಳವಾಗಿಸಿಕೊಂಡಿರುವ ಅನೇಕ ಖಾಸಗಿ ಶಾಲೆಗಳು ಇದರ ನೆಪದಲ್ಲಿ ಹೆಚ್ಚಿನ ಶುಲ್ಕ ವಸೂಲು ಮಾಡುತ್ತಿವೆ. ಸದ್ಯ ಮಠದ ಶಾಲೆಯಾಗಿದ್ದ ನಮ್ಮ ಶಾಲೆಯಲ್ಲಿ ಆಗಾಗ್ಗೆ ಕಾರ್ಯಕ್ರಮಗಳು ನಡೆಯುತ್ತಿದ್ದವು. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುವಂತೆ ಸಹಪಠ್ಯ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ಕೊಡಲಾಗುತ್ತಿತ್ತು. ನಮ್ಮ ಪೋಷಕರೂ ಸಹ ಅಂಕಗಳ ಬಗ್ಗೆ ಎಂದೂ ಇಷ್ಟೇ ತೆಗೆಯಬೇಕು ಎಂದು ಒತ್ತಡ ಹಾಕುತ್ತಿರಲಿಲ್ಲ. ಇದೇ ಹುದ್ದೆ ಪಡೆಯಬೇಕು ಎಂಬ ಗುರಿಯೂ ನಮಗೆ ಪ್ರೌಢಶಾಲೆ ಮುಗಿಯುವವರೆಗೂ ಇರಲಿಲ್ಲ. ಆಗ ನಮ್ಮ ಮಲ್ಲಾಡಿಹಳ್ಳಿಯ ಶಾಲೆಯಲ್ಲಿ ಓದಿದವರಿಗೆ ಎಂತಹ ಕಷ್ಟ ಬಂದ್ರೂ ಅದನ್ನು ಎದುರಿಸುವ ಸಾಮರ್ಥ್ಯ ಇದೆ ಎಂದು ಹೆಮ್ಮೆಯಿಂದ ಹೇಳಬಹುದು! ಇದರಲ್ಲಿ ಯಾವುದೇ ಉತ್ಪ್ರೇಕ್ಷೆ ಇಲ್ಲ. ಯಾಕೆಂದರೆ ನಮ್ಮಲ್ಲಿ ಮಾನಸಿಕ ಸದೃಢತೆಗಾಗಿ ಯೋಗ, ಭಜನೆ ಮಾಡಿಸುತ್ತಿದ್ದರು. ಹಾಸ್ಟೆಲ್ಲಿನಲ್ಲಿ ನಮಗೆ ತುಂಬಾ ಶಿಸ್ತಿನ ವಾತಾವರಣವಿತ್ತು. ಇದಕ್ಕೆಂದೇ ರಾಜ್ಯದ ಮೂಲೆ ಮೂಲೆಗಳಿಂದಲೂ ನಮ್ಮ ಶಾಲೆಗೆ ಸೇರಿದ ಮಕ್ಕಳಿದ್ದರು. ಇಲ್ಲಿ ಓದಿದವರು ಒಂದೊಮ್ಮೆ ಶಾಲಾ ಪರೀಕ್ಷೆಯಲ್ಲಿ ಫೇಲಾಗಿದ್ದವರು ಜೀವನ ಪರೀಕ್ಷೆಯಲ್ಲಿ ಖಂಡಿತಾ ಫೇಲಾದವರು ತುಂಬಾ ಕಮ್ಮಿ ಎಂಬುದು ನನ್ನನಿಸಿಕೆ.


ನಾವು ಓದಿದ್ದು ಇಂಗ್ಲೀಷ್ ಮೀಡಿಯಂ ಆದರೂ ನಾವು ಇಂಗ್ಲೀಷಿನಲ್ಲಿ ತೀರಾ ಪಂಟರಾಗೇನೋ ಇರಲಿಲ್ಲ. ಒಮ್ಮೆ ಗಣಿತ ಮೇಷ್ಟ್ರು ಪಾಠ ಮಾಡುವಾಗ ನಮ್ಮ ಕ್ಲಾಸ್ ಮೇಟ್ ಇಂದ್ರಜಿತುವಿಗೆ ಪ್ರೊಟ್ರಾಕ್ಟರ್ ತರಲು ಹೇಳಿದಾಗ ಅವನಿಗೆ ಹಾಗೆಂದರೇನು ಅಂತಾ ತಿಳಿಯದೇ ಹಾಗೆಯೇ ವಾಪಾಸ್ಸು ಬಂದಿದ್ದ! ಒಮ್ಮೆ ಇದೇ ಮೇಷ್ಟ್ರು ನನಗೆ ಎನ್.ಸಿ. ಸಿ ರೂಮಿನ ಬೀಗ ಹಾಕಿಕೊಂಡು ಬರಲು ತಿಳಿಸಿದಾಗ ಸರಿಸುಮಾರು ಹದಿನೈದು ಕೀಗಳಿದ್ದ ಕೀ ಬಂಚಿನಲ್ಲಿ ಅದನ್ನು ಹುಡುಕಾಡಿ, ಹುಡುಕಾಡಿ ಹಾಕಲು ಸಮಯ ತೆಗೆದುಕೊಂಡಿದ್ದೆ. ಆಗ ಅವರು ‘ಗೌಡಂಗೆ ಕೀ ಹಾಕೋಕೆ ಬರೋಲ್ಲ’ ಅಂತಾ ನನಗೆ ಅವರದೇ ಶೈಲಿಯಲ್ಲಿ ಹೇಳಿ (ಹೆಬ್ಬೆರಳನ್ನು ತಲೆಕೆಳಗೆ ಮಾಡಿ ಪೆಂಡುಲಂ ರೀತಿ ತಿರುಗಿಸುವುದು) ನಾನು ನಗೆಪಾಟಲಿಗೆ ಈಡಾಗುವಂತೆ ಮಾಡಿದ್ದರು!

ನಾವು ಹತ್ತನೇ ತರಗತಿಯಲ್ಲಿ ಓದುವಾಗ ವಿಜ್ಞಾನ ಮೇಷ್ಟ್ರಾಗಿದ್ದ ಸತೀಶ್ ಸರ್‌ಗೆ ಕಾಲೇಜಿಗೆ ಪ್ರಮೋಷನ್ ಆದಾಗ ನಮಗೆ ಆ ವಿಷಯ ಮುಗಿದಿರಲಿಲ್ಲ ಅದನ್ನು ನಮಗೆ ಆರ್ ಬಿ ಹೆಚ್ (ಆರ್.ಬಿ.ಹಾರೋಮಠ್) ತೆಗೆದುಕೊಂಡಿದ್ರು. ಅವರು ತರಗತಿಗೆ ಬರುವಾಗ ಬರೀ ಒಂದು ಡಸ್ಟರ್ ಚಾಕ್ ಪೀಸ್ ಹಿಡಿದುಕೊಂಡು ಬರ್ತಿದ್ರು. ತುಂಬಾ ಚೆನ್ನಾಗಿ ಪಾಠ ಮಾಡ್ತಿದ್ರು. ಆದರೆ ಅವರ ಭಾಷೆ ಧಾರವಾಡದ ಭಾಷೆಯಾಗಿದ್ದರಿಂದ ಮೊದಲೆರಡು ದಿನ ಸ್ವಲ್ಪ ತ್ರಾಸಾಗಿತ್ತು. ಆಮೇಲಾಮೇಲೆ ಇಷ್ಟವಾಗ್ತಾ ಹೋಯಿತು. ಒಮ್ಮೆ ಅವರ ಅವಧಿಯಲ್ಲಿ ವಿನಯ್ ಎಂಬಾತ ಮಲಗಿಬಿಟ್ಟಿದ್ದ. ಕ್ಲಾಸ್ ಮುಗಿಯೋವರೆಗೂ ಸುಮ್ನಿದ್ದು ಅವರು ವಾಪಾಸ್ಸು ಹೋಗುವಾಗ ‘ಅವ ಬದುಕಿದ್ದಾನೋ? ಸತ್ತಿದ್ದಾನೋ? ನೋಡ್ರಲಾ’ ಎಂದಾಗ ಕ್ಲಾಸ್‌ನವರೆಲ್ಲರೂ ಜೋರಾಗಿ ನಕ್ಕಿದ್ದರು. ನಾನು ವಿಜ್ಞಾನ ಶಿಕ್ಷಕನಾಗಿ ಇಂದು ತರಗತಿಗೆ ಹೋಗೋ ಸಮಯದಲ್ಲಿ ಇವರ ನೆನಪು ತುಂಬಾ ಆಗುತ್ತದೆ.

ಇನ್ನು ನಮ್ಮ ಆಶ್ರಮಕ್ಕೆ ವಿದೇಶಗಳಿಂದಲೂ ಕೆಲವರು ಬಂದು ಅಲ್ಲಿದ್ದ ಗೆಸ್ಟ್ ಹೌಸ್ ನಲ್ಲಿ 15 ದಿನಗಳವರೆಗೆ ಉಳಿದುಕೊಳ್ಳುತ್ತಿದ್ದರು. ಹೀಗೆ ಬಂದ ಒಬ್ಬ ಲೇಡಿಗೆ ನಾವು ಮಾತನಾಡಿಸಲು ಹೋಗಿ ‘ನೀವ್ಯಾಕೆ ಇಲ್ಲಿಗೆ ಬಂದಿದ್ದೀರಿ?’ ಎಂದು ಪ್ರಶ್ನಿಸಿದಾಗ ಅವರು ‘ಭಾರತೀಯ ಸಂಸ್ಕೃತಿ, ಯೋಗ ಕಲಿಯಲು’ ಎಂದಿದ್ದರು. ವಿದೇಶದವರಾಗಿದ್ರೂ ಅವರು ಭಾರತೀಯ ನಾರಿಯಂತೆ ಸೀರೆ ಉಟ್ಟಿದ್ದನ್ನು ನೋಡಿ ನಮಗೆ ಆಶ್ಚರ್ಯವಾಗಿತ್ತು. ಅವರು ನಮ್ಮ ಭಜನೆಗೂ ಬರುತ್ತಿದ್ದರು!

ನಾನು ಎನ್.ಸಿ. ಸಿ ಕ್ಯಾಡೆಟ್ ಆಗಿದ್ದರಿಂದ ನಮಗೆ ಒಂದು ದಿನ ರೈಫಲ್ ಟ್ರೈನಿಂಗ್ ಕ್ಯಾಂಪ್ ಹಾಕಿದ್ದರು. ನಮ್ಮನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ, ನಮ್ಮಿಂದ ಅನತಿ ದೂರದಲ್ಲಿ ಏಕಕೇಂದ್ರೀಯ ವೃತ್ತಗಳನ್ನು ಬರೆದಿಟ್ಟ ಒಂದು ಬೋರ್ಡ್ ಇಟ್ಟಿದ್ದರು. ರೈಫಲ್ ಬಳಸುವ ಬಗ್ಗೆ ತಾವೇ ಪ್ರಾಯೋಗಿಕವಾಗಿ ಮಾಡಿ ತಿಳಿಸಿ, ರೈಫಲ್ ಕೊಟ್ಟು ಶೂಟ್ ಮಾಡಲು ತಿಳಿಸಿದರು. ಅವರು ಕಾಶನ್ ಕೊಟ್ಟಾಗ ಮಿಲಿಟರಿಯವರಂತೆ ಹೋಗಿ ಅಂಗಾತವಾಗಿ ನೆಲದ ಮೇಲೆ ಬಿದ್ದು, ಅಲ್ಲಿಟ್ಟಿದ್ದ ಮರಳ ಚೀಲದ ಮೇಲೆ ಇಟ್ಟಿದ್ದ ರೈಫಲ್‌ಅನ್ನು ಮೊಣಕೈಯನ್ನು ನೆಲಕ್ಕೆ ಊರಿ ಅಂಗೈನಲ್ಲಿ ಉದ್ದನೆಯ ಭಾರದ ರೈಫಲ್ ಎತ್ತಿಕೊಂಡು ಅದನ್ನು ಕಂಕುಳಿಗೆ ಜೋರಾಗಿ ಒತ್ತಿಕೊಂಡು ನಂತರ ಇಟ್ಟ ಗುರಿಗೆ ಹೊಡೆಯಬೇಕಾಗಿತ್ತು. ಆಗ ನ್ಯೂಟನ್ನಿನ ಮೂರನೇ ನಿಯಮಾನುಸಾರವಾಗಿ ನಮಗೆ ವಾಪಾಸ್ ಎದೆಗೆ ಹೊಡೆಯುತ್ತಿತ್ತು. ಹೊಡೆಯುವುದು ಮುಗಿದರೆ ಸಾಕು ಎಂದು ಕಷ್ಟಪಟ್ಟು ಅವರು ಕೊಟ್ಟ 5 ಬುಲೆಟ್‌ಗಳನ್ನು ಹೊಡೆದೆ. ಆದರೆ ನನ್ನ ಗ್ರಹಚಾರ, ಹೊಡೆದ ಅಷ್ಟೂ ಬುಲೆಟ್‌ಗಳಲ್ಲಿ ಕಡೇ ಪಕ್ಷ ಒಂದಾದರೂ ಗುರಿಗೆ ಮುಟ್ಟಿರಲಿಲ್ಲ. ಆಗ ಬಂದ ಆಫೀಸರ್ ಸಿಟ್ಟಿನಿಂದ ನನಗೆ ‘ಉಪ್ಪರ್ ಸೇ ಕದಂತಾಲ್ ಶುರು ಕರ್ʼ ಎಂಬ ಕಾಶನ್ ಕೊಟ್ಟು( ನಮ್ಮ ಕೈಗಳನ್ನು ಎದೆಗೆ ನೇರಕ್ಕೆ ಹಿಡಿದುಕೊಂಡು ನಮ್ಮ ಮೊಣಕಾಲುಗಳನ್ನು ಅವಕ್ಕೆ ಟಚ್ ಮಾಡುವಂತೆ ನೆಗೆಯುವ ಶಿಕ್ಷೆ) ನಾನು ಹಾಗೆ ಮಾಡಲು ಶುರು ಮಾಡಿದಾಗ, ಕನ್ನಡ ಬಾರದ ಆಫೀಸರ್ ಹಿಂದಿಯಲ್ಲಿ ಬೈಯುತ್ತಾ ಕೋಲಿನಿಂದ ಬಾರಿಸಿದರು. ನಾನೆಷ್ಟೇ ಬೇಡಿಕೊಂಡರೂ ಅವರು ಹೊಡೆಯುವುದನ್ನು ನಿಲ್ಲಿಸಲಿಲ್ಲ. ಆಗ ನನ್ನ ದಯನೀಯ ಸ್ಥಿತಿ ನೋಡಿ ಎ.ವಿ. ಸರ್ ಬಂದು ನನ್ನ ಪರವಾಗಿ ಮಾತನಾಡಿ ನನಗೆ ಶಿಕ್ಷೆ ತಪ್ಪಿಸಿದರು. ಇದೇ ವರ್ಷದ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಕ್ಯಾಡೆಟ್‌ಗಳಿಗೆ ಕೊಡಮಾಡುವ ವಿವಿಧ ಪ್ರಶಸ್ತಿಗಳಲ್ಲಿ ನನಗೆ ಬೆಸ್ಟ್ ಕ್ಯಾಡೆಟ್ ಪ್ರಶಸ್ತಿ ಕೊಟ್ಟು ಗೌರವಿಸಿದ್ದರು..

ಇದೇ ವರ್ಷ ನಡೆದ ಎನ್.ಸಿ.ಸಿ ‘ಎ’ ಸರ್ಟಿಫಿಕೇಟ್ ಗೆ ನಡೆದ ಪರೀಕ್ಷೆಯಲ್ಲಿ ನಾನು ಪಾಸ್ ಆದೆನು. ಆದರೆ ಎಸ್.ಎಸ್.ಎಲ್.ಸಿ ಯ ಪಬ್ಲಿಕ್ ಪರೀಕ್ಷೆಯಲ್ಲಿ ಬಂದ ಫಲಿತಾಂಶ ನನಗೆ ಅಷ್ಟು ಸಮಾಧಾನ ಕೊಡಲಿಲ್ಲ. ನಾನು ಇತರೆಯವರಿಗಿಂತ ಕಡಿಮೆ ಅಂಕ ಪಡೆದಿದ್ದೆ. ಈ ಕೊರತೆಯನ್ನು ಪಿಯೂಸಿ ಯಲ್ಲಿ ನೀಗಿಸಿಕೊಳ್ಳಬೇಕೆಂದುಕಂಡು ಅಲ್ಲಿಯೇ ಇದ್ದ ಪಿಯೂಸಿ ಕಾಲೇಜಿಗೆ ಸೇರಲು ನಿರ್ಧರಿಸಿದೆ. ‘ನಾವು ಬಯಸುವುದೊಂದು, ಆದರೆ ಆಗುವುದೇ ಮತ್ತೊಂದು’ ಎನ್ನುವಂತೆ ಇನ್ನೇನು ಕಾಲೇಜಿಗೆ ಸೇರಬೇಕು ಎನ್ನುವಷ್ಟರಲ್ಲಿ ಬೆಂಗಳೂರಿನಲ್ಲಿದ್ದ ನಮ್ಮ ಮಾವ ಹಾಗೂ ನಮ್ಮ ಪೋಷಕರ ಅಭಿಲಾಷೆಯಂತೆ ಅಲ್ಲಿನ ಕಾಲೇಜೊಂದರ ಅರ್ಜಿ ಕಳಿಸಿಕೊಟ್ಟಿದ್ದ. ಈಗ ನನಗೆ ಕಾಲೇಜಿಗೆ ಎಲ್ಲಿ ದಾಖಲಾಗಬೇಕು ಎಂಬುದರ ಬಗ್ಗೆ ದ್ವಂದ್ವ ನನ್ನಲ್ಲಿ ಶುರುವಾಯ್ತು. ಆದರೆ ಬಹುತೇಕರ ಅಭಿಪ್ರಾಯದಂತೆ ಬೆಂಗಳೂರಿನ ಕಾಲೇಜಿಗೆ ಸೇರಬೇಕೆಂದು ನಿರ್ಧರಿಸಿದ್ದು ನಾನು ತೆಗೆದುಕೊಂಡ ನನ್ನ ಜೀವನದ ಕೆಟ್ಟ ನಿರ್ಧಾರವಾಗಿತ್ತು.

ಬೆಂಗಳೂರಿನ ಕಾಲೇಜಿಗೆ ಸೇರಿದ ನನಗೆ ಉಚಿತ ಹಾಸ್ಟೆಲ್ಲಿನ ವ್ಯವಸ್ಥೆಯನ್ನು ನಮ್ಮ ಮಾವ ಮಾಡಬೇಕೆಂದುಕೊಂಡಿದ್ದ. ಆದರೆ ಅದು ಆರಂಭವಾಗೋದು ಸೆಪ್ಟಂಬರ್ ನಂತರ ಎಂದು ತಿಳಿದು ನನ್ನನ್ನು ಅವರ ಗೆಳೆಯರೊಬ್ಬರ ರೂಮಿನಲ್ಲಿ ಬಿಡಲು ತೀರ್ಮಾನಿಸಲಾಯ್ತು. ಅವರ ರೂಮು ಕಂಠೀರವ ಸ್ಟುಡಿಯೋ ಹತ್ತಿರ ಇತ್ತು. ಕಾಲೇಜು ರಾಜಾಜಿನಗರದ ಇಸ್ಕಾನ್ ಟೆಂಪಲ್ ಹತ್ತಿರ ಇತ್ತು. ನಾನು ತುಂಬಾ ಸ್ವಾಭಿಮಾನಿಯಾದ್ದರಿಂದ ನನ್ ಮಾಮ ‘ಖರ್ಚಿಗೆಂದು ದುಡ್ಡು ಕೇಳಲು ನಾಚಿಕೆಪಟ್ಟುಕೊಳ್ಳಬೇಡ’ ಎಂದರೂ ನಾನು ಮಾತ್ರ ಹಾಗೆ ಕೇಳುತ್ತಿರಲಿಲ್ಲ. ಮನೆಯವರಿಂದಲೂ ಅಷ್ಟೇನೂ ಆರ್ಥಿಕ ಸಹಕಾರ ಇರಲಿಲ್ಲ. ಮೊದಲೇ ಬೆಂಗಳೂರಿಗೆ ಹೊಸಬ. ಮೊದಲು ಒಂದೆರಡು ದಿನ ನನ್ನ ಮಾಮನೇ ನನ್ನನ್ನು ಕಾಲೇಜಿಗೆ ಡ್ರಾಪ್ ಕೊಟ್ಟ. ಮೂರನೇ ದಿನದಿಂದ ನನಗೇ ಬರಲು ತಿಳಿಸಿದ. ನಾನು ಬಿಎಂಟಿಸಿ ಬಸ್ಸಿನಲ್ಲಿ ಓಡಾಡಿದರೆ ಎಲ್ಲಿ ಬಸ್ ಚಾರ್ಜ್ ಖರ್ಚಾಗುತ್ತದೆ ಎಂದುಕೊಂಡು, ಬಸ್ ಹೋಗುವ ಮಾರ್ಗದಲ್ಲೇ ನಡೆದುಕೊಂಡು ಹೋಗುತ್ತಿದ್ದೆ! ಮೊದಲೇ ಬ್ಯಾಚುಲರ್‌ಗಳು ಇದ್ದ ರೂಮಿನಿಂದ ಕಾಲೇಜಿಗೆ ಹೋಗಬೇಕಾಗಿದ್ದುದರಿಂದ ನನಗೆ ಬೆಳಗಿನ ತಿಂಡಿಗೂ ಅಷ್ಟಕ್ಕಷ್ಟೇ ಅನ್ನುವಂತಿರುತ್ತಿತ್ತು. ಮಧ್ಯಾಹ್ನವೂ ಉಪವಾಸವಿರಬೇಕಾದ ಸ್ಥಿತಿ. ಬೇರೆ ಹುಡುಗರು ಬಾಕ್ಸ್ ತಂದು ತಿನ್ನುವಾಗ ಹೊಟ್ಟೆ ತುಂಬಾ ಹಸಿವಿದ್ದಾಗಲೂ ನೀರು ಕುಡಿದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೆ. ತೀರಾ ಹಸಿವು ತಡೆದುಕೊಳ್ಳಲು ಸಾಧ್ಯವಾಗದಿದ್ದಾಗ ಬೇಕರಿಗೆ ಹೋಗಿ ಆಗ 3 ರೂಪಾಯಿ ಇದ್ದ ಕ್ರೀಮ್ ಬನ್ ತಿನ್ನುತ್ತಿದ್ದೆ! ಇಲ್ಲಿ ನಾನು ಅನುಭವಿಸಿದ ಕಷ್ಟಗಳು ತುಂಬಾ. ಅವನ್ನು ಮುಂದೆ ತಿಳಿಸುತ್ತೇನೆ.

‘ಹಿತ್ತಲ ಗಿಡ ಮದ್ದಲ್ಲ’ ಎಂಬಂತೆ ನಾವು ಹಲವು ಸಲ ನಮ್ಮ ಸಮಸ್ಯೆಗೆ ಹತ್ತಿರದಲ್ಲೇ ಪರಿಹಾರವಿದ್ದರೂ ಅದನ್ನು ಬಳಸಿಕೊಳ್ಳುವುದಿಲ್ಲ. ಬದಲಿಗೆ ‘ದೂರದ ಗುಡ್ಡ ಕಣ್ಣಿಗೆ ನುಣ್ಣಗೆ’ ಎಂಬಂತೆ ದೂರದ ಪರಿಹಾರ ಬಳಸಿಕೊಳ್ಳಲು ಮುಂದಾಗುತ್ತೇವೆ. ಈ ರೀತಿ ಮಾಡಬಾರದು. ಅಲ್ಲದೇ ನಾವು ಯಾವತ್ತೂ ಒಂದು ತೀರ್ಮಾನ ಕೈಗೊಳ್ಳುವಾಗ ನೂರೆಂಟು ಸಲ ಯೋಚನೆ ಮಾಡಬೇಕು. ಇಲ್ಲದಿದ್ದರೆ ಜೀವನಪರ್ಯಂತ ಯೋಚನೆ ಮಾಡಬೇಕಾಗುತ್ತದೆ ಎಂಬ ಮಾತನ್ನು ನಾವು ತಿಳಿದಿರಬೇಕು.