ನಮ್ಮದು ಅನಗತ್ಯ ಭಯ, ಆತಂಕ. ನಮ್ಮದೆಲ್ಲವೂ ಕಲ್ಪಿತ ಭಯ ಎಂಬ ಅರಿವು ಕೂಡ ಕೆಲವು ಪೋಷಕರಲ್ಲಿ ಕಂಡು ಬಂತು. ನಮ್ಮ ಆತಂಕ, ಭಯಗಳು ಮಕ್ಕಳ ಭವಿಷ್ಯದ ಜೀವನಕ್ಕೆ ಅಡ್ಡಿಯಾಗಬಾರದು, ನಾವಿಲ್ಲದ ನಾಳಿನ ಬದುಕಿನಲ್ಲಿ ಅವರು ಹೇಗಿರಬೇಕು, ಹೇಗೆ ಬಾಳಬೇಕು ಎಂಬುದನ್ನು ನಿರ್ಧರಿಸುವ ಹಕ್ಕೂ ನಮಗಿಲ್ಲ ಅಲ್ಲವೇ ಎಂದು ಪೋಷಕರು ಅವರವರಲ್ಲೇ ಪರಸ್ಪರ ಚರ್ಚಿಸಿಕೊಂಡು ಸಮಾಧಾನ ಮಾಡಿಕೊಳ್ಳುತ್ತಾರೆ. ಈ ಯಾವ ಆತಂಕಗಳೂ ಮಕ್ಕಳಿಗಿಲ್ಲ ಎಂಬ ಅರಿವು ಕೂಡ ಈ ಸಮಾಧಾನದ ಹಿಂದಿದೆ.
ಕೆ. ಸತ್ಯನಾರಾಯಣ ಬರೆಯುವ ಪ್ರವಾಸ ಪ್ರಬಂಧಗಳ “ನೆದರ್‌ಲ್ಯಾಂಡ್ಸ್ ಬಾಣಂತನ” ಸರಣಿಯ ಹನ್ನೊಂದನೆಯ ಬರಹ

ಇಲ್ಲಿ ಎಲ್ಲವೂ ಮಕ್ಕಳ ಮೂಲಕವೇ ಜರುಗುತ್ತದೆ ಸಾರ್ ಎಂದು ಒಬ್ಬ ಭಾರತೀಯ ಪೋಷಕರು ಹೇಳಿದರು. ಹೀಗೆ ಹೇಳುವಾಗ ಅವರ ಮಾತಿನಲ್ಲಿ ಸಂತೋಷ, ಹೆಮ್ಮೆ, ಅಸಹಾಯಕತೆ, ವಿಷಾದ ಎಲ್ಲವೂ ಒಟ್ಟಿಗೇ ಇಣುಕುತ್ತಿತ್ತು. ಅಥವಾ ಹಾಗೆಂದು ನಾನು ಭಾವಿಸಿದೆನೇ? ಹಾಗೆ ಭಾವಿಸುತ್ತಾ ಅವರ ಮಾತು ಕೇಳಿಸಿಕೊಂಡು ನನ್ನ ಮನಸ್ಸಿನಲ್ಲಿರುವ ಆತಂಕಕ್ಕೆ, ಗೊಂದಲಕ್ಕೆ ಒಂದು ಅಭಿವ್ಯಕ್ತಿ ಹುಡುಕಾಡುತ್ತಿದ್ದೆನೇ?

ಮಾನ್ಯರು ಮುಂದುವರೆಸಿ ಹೇಳಿದರು, ಇಲ್ಲಿ ನೆರೆಹೊರೆಯವರು ವಲಸಿಗರ ಜೊತೆ ಸುಲಭವಾಗಿ ಬೆರೆಯುವುದೇ ಇಲ್ಲ. ಕೆಲಸದಲ್ಲಿ ನಾವು ಎಷ್ಟು ಮುಳುಗಿಹೋಗಿರುತ್ತೇವೆಂದರೆ, ನಮ್ಮ ಕೆಲಸದ ತಂಡದಿಂದಾಚೆಗೆ ಹೊರಗಿನವರು ಪರಿಚಯವೇ ಇರುವುದಿಲ್ಲ, ಸಮಯವೂ ಇರುವುದಿಲ್ಲ. ಹಾಗಾಗಿ, ಮಕ್ಕಳ ಸ್ಕೂಲಿನ ಮೂಲಕ ಅಲ್ಲಿಯ ಭಾರತೀಯ-ವಿದೇಶಿ ಪೋಷಕರು ನಮ್ಮ ಸಂಪರ್ಕಕ್ಕೆ, ಒಡನಾಟಕ್ಕೆ ಬರುತ್ತಾರೆ. ನಮ್ಮ ನಮ್ಮ ಒಲವು, ಆದ್ಯತೆಗಳಿಗನುಗುಣವಾಗಿ ಸ್ನೇಹವಲಯ ನಿರ್ಮಾಣವಾಗುತ್ತದೆ. ಮಕ್ಕಳನ್ನು ಕರೆದುಕೊಂಡು ಹೋಗಿ ಇನ್ನೊಬ್ಬ ಭಾರತೀಯರ ಮನೆಯಲ್ಲಿ ಬಿಡುತ್ತೇವೆ, ಆಟ ಆಡಿಕೊಳ್ಳಲು. ಅವರ ಮನೆಯ ಮಕ್ಕಳು ನಮ್ಮ ಮನೆಗೆ ಬರುತ್ತಾರೆ. ವಲಸಿಗರ ಪೋಷಕರು ಭಾರತದಿಂದ ಇಲ್ಲಿಗೆ ಬಂದಾಗ ನಮ್ಮ ಮನೆಗೆ ಕರೆದುಕೊಂಡು ಬರುತ್ತಾರೆ. ಸ್ಕೂಲು ಬಿಡುವ ಸಮಯದಲ್ಲಿ ನಾನು ಸ್ಕೂಲ್ ಗೇಟಿನ ಹತ್ತಿರ ನಿಂತು ಗಮನಿಸುತ್ತಿದ್ದೆ. ಪೋಷಕರು ತಮ್ಮ ಕೌಟುಂಬಿಕ ಭಾವನಾತ್ಮಕ ಟಿಪ್ಪಣಿಗಳನ್ನು ಪರಸ್ಪರ ಹಂಚಿಕೊಳ್ಳುವ ಸಮಯವದು. ಬಿಳಿಯರು, ಕಂದು ಬಣ್ಣದವರು, ಏಷ್ಯಾದವರು, ಕೆರೀಬಿಯನ್‌ರು ಎಂಬ ಬೇಧಭಾವವಿಲ್ಲದೆ ಬೆರೆಯುತ್ತಾರೆ. ಅಷ್ಟರ ಮಟ್ಟಿಗೆ ಮಕ್ಕಳ ಮೂಲಕ ವಲಸಿಗರು ಅಂತರರಾಷ್ಟ್ರೀಯ ಪ್ರಜೆಗಳಾಗುತ್ತಾರೆ. ಓದುವಾಗ, ಬರೆಯುವಾಗ ಕಲ್ಪನಾ ಪ್ರಪಂಚದಲ್ಲಿ ವಿಶ್ವಮಾನವರಾಗುವುದು ಸುಲಭ. ದಿನನಿತ್ಯದ ಬದುಕಿನ ಒತ್ತಡದ ಒಡನಾಟದಲ್ಲಿ ವಿಶ್ವಮಾನವರಾಗುವುದು, ಕೊನೆಯ ಪಕ್ಷ ವಿಶ್ವಮಾನವರಾಗಲು ನಮ್ಮನ್ನು ನಾವೇ ತೆರೆದುಕೊಳ್ಳುವುದು ಬಲು ಕಷ್ಟ. ಅಗ್ನಿದಿವ್ಯ ಪ್ರಾರಂಭವಾಗುವುದು ಯಾವಾಗಲೂ ಕುಟುಂಬದಲ್ಲೇ, ಅದರ ಅಂಚಿನಲ್ಲೇ.

ಮಕ್ಕಳು ಭವಿಷ್ಯವನ್ನು ಯಾವ ರೀತಿ ರೂಪಿಸಿಕೊಳ್ಳಬೇಕು, ರೂಪಿಸಿಕೊಳ್ಳಬಹುದು ಎಂಬ ಬಗ್ಗೆ ಪೋಷಕರು ವಿಶೇಷವಾಗಿ ಭಾರತೀಯ, ಏಷ್ಯಾದ ಪೋಷಕರು ಸದಾ ಆತಂಕಿತರು, ಸಕಾರಣವಾಗಿ. ಶಿಕ್ಷಣ ವ್ಯವಸ್ಥೆ ಸಂವೇದನಾಶೀಲವಾಗಿದೆ. ಡಚ್ ಮಾಧ್ಯಮದ ಶಾಲೆಗಳಲ್ಲಿ ಶಿಕ್ಷಣ ಉಚಿತ. ಕಾಸು ಕೊಟ್ಟು ಅಂತರರಾಷ್ಟ್ರೀಯ ಶಾಲೆಗಳಲ್ಲಿ ಓದಿಸಿದರೂ ಕೆಲವು ಅನುಕೂಲಗಳಿರುತ್ತವೆ. ಎರಡೂ ರೀತಿಯ ಶಾಲೆಗಳಲ್ಲೂ ಮಕ್ಕಳು ಸಂತೋಷದಿಂದ ಓದುತ್ತಾರೆ. ಉತ್ತಮ ನಾಗರಿಕರಾಗಲು ಬೇಕಾದ ಜೀವನ ಕೌಶಲ್ಯಗಳನ್ನು ರೂಢಿಸಿಕೊಳ್ಳುತ್ತಾರೆ. ಸಾಮಾಜಿಕ ಪ್ರಜ್ಞೆ ವಿಸ್ತಾರಗೊಳ್ಳುತ್ತದೆ. ಎಲ್ಲ ಭಾಷೆಗಳಲ್ಲೂ ಸಮಾನವಾದ ಆಸಕ್ತಿಯಿಂದ ಕಲಿಯುತ್ತಾರೆ. ನಮ್ಮೆದುರಿಗೇ ನಮ್ಮ ಮನೆಯ ಹಕ್ಕಿ ರೆಕ್ಕೆ ಪಡೆದು, ದೂರ ದೂರ ಹಾರಲು ತಯಾರಾಗುತ್ತದೆ.

ಆದರೆ ಪೋಷಕರಿಗೇ ಮಕ್ಕಳ ಭವಿಷ್ಯದ ಬಗ್ಗೆ ಸ್ಪಷ್ಟತೆಯಿಲ್ಲ, ಖಾತರಿಯಿಲ್ಲ. ಮಕ್ಕಳು ಮುಂದೆ ಎಲ್ಲಿರುತ್ತಾರೆ, ಇಲ್ಲೇ ಓದಬೇಕಾದರೆ, ಉದ್ಯೋಗ ಮಾಡಬೇಕಾದರೆ, ಬದುಕು ಕಟ್ಟಿಕೊಳ್ಳಬೇಕಾದರೆ, ಒಂದಲ್ಲ ಒಂದು ದಿನ ಪೌರತ್ವ ಪಡೆಯುವುದು ಅನಿವಾರ್ಯ. ಮೊದಲು ಸೀಮಿತ ಪೌರತ್ವ, ನಂತರ ಪೂರ್ಣಪ್ರಮಾಣದ್ದು. ಅಮೆರಿಕ, ಇಂಗ್ಲೆಂಡ್‌ಗೆ ಹೋಲಿಸಿದರೆ, ಎರಡೂ ಸ್ತರದ ಪೌರತ್ವ ಇಲ್ಲಿ ಸ್ವಲ್ಪ ಸುಲಭವಾಗಿ ಸಿಗುತ್ತದೆ. ಮೇಲಾಗಿ, ಇಲ್ಲಿ ವಲಸಿಗರ ಶ್ರಮ, ಪ್ರತಿಭೆ, ಕೌಶಲ್ಯಗಳ ಅಗತ್ಯವೂ ಇದೆ. ಇಲ್ಲಿಯ ಪೌರತ್ವ ಪಡೆಯಬೇಕಾದರೆ ಭಾರತದ ಪೌರತ್ವವನ್ನು ತ್ಯಜಿಸಬೇಕು. ಅದು ಅಷ್ಟು ಸುಲಭದ ನಿರ್ಧಾರವಲ್ಲ. ಕೇವಲ ಮಕ್ಕಳ ವಿದ್ಯಾಭ್ಯಾಸ, ಉದ್ಯೋಗದ ಪ್ರಶ್ನೆ ಮಾತ್ರವಲ್ಲ, ಅದೊಂದು ಗಂಭಿರವಾದ, ಸಾಂಸ್ಕೃತಿಕ ಬೇರುಗಳನ್ನು ಅಲ್ಲಾಡಿಸುವ ಭಾವನಾತ್ಮಕ ಪ್ರಶ್ನೆಯೂ ಹೌದು. ಅಂದರೆ, ಇದುವರೆಗೆ (ನೀವು) ಹುಟ್ಟಿದ, ಬೆಳೆದ, ಭಾವಿಸಿದ, ಅನುಭವಿಸಿದ ದೇಶವನ್ನು, ಆ ದೇಶದ ಸ್ಮೃತಿಯನ್ನು ಅಧಿಕೃತವಾಗಿ ಬಿಟ್ಟುಕೊಡುವುದು. ಮಕ್ಕಳಿಗೆ ಇದು ಭಾವನಾತ್ಮಕ ನಿರ್ಧಾರವಲ್ಲ. ಕಠಿಣವೂ ಅಲ್ಲ, ಸಮಸ್ಯಾತ್ಮಕವೂ ಅಲ್ಲ. ಏಕೆಂದರೆ, ಅವರ ಬಾಲ್ಯ, ಯೌವ್ವನ ಕಳೆದಿರುವುದೇ ಇಲ್ಲಿ. ನೆನಪಿನ ಖಜಾನೆ ಪ್ರಾರಂಭವಾಗುವುದು, ರೂಪುಗೊಳ್ಳುವುದು ಕೂಡ ಇಲ್ಲೇ. ಭಾರತವು ಏನಿದ್ದರೂ ಅವರಿಗೆ ರಜಾ ದಿನಗಳಲ್ಲಿ ಹೋಗುವ ಅಜ್ಜಿ-ತಾತಂದಿರ ದೇಶ, ಒಂದೇ ಸಂಸ್ಕೃತಿ, ಒಂದೇ ಜೀವನಶೈಲಿಯ ಪರಿಚಯವಿದ್ದಾಗ ಯಾವುದೇ ರೀತಿಯ ದ್ವಂದ್ವವೂ, ತಾಕಲಾಟವೂ ಇರುವುದಿಲ್ಲ.

ಇಂದು ಇಲ್ಲಿರುವ ಮಕ್ಕಳು ನಾಳೆ ಯುರೋಪಿನ ಬೇರೆ ದೇಶಗಳಿಗೋ, ಅಮೆರಿಕಕ್ಕೋ, ಆಫ್ರಿಕಕ್ಕೋ ಹೋದರೂ ಅಷ್ಟೇ. ಜೀವನಶೈಲಿಯ ವಿವರಗಳಲ್ಲಿ ಸ್ವಲ್ಪ ಬದಲಾವಣೆಯಾಗಬಹುದು. ಆದರೆ ಸ್ಮೃತಿ ಕೋಶಕ್ಕೆ ಪೆಟ್ಟಾಗುವುದಿಲ್ಲ. ಸಂಸ್ಕೃತಿ ಆಯಾಮಕ್ಕೆ ಧಕ್ಕೆ ಬರುವುದಿಲ್ಲ. ಪೋಷಕರಿಗೆ ಆಘಾತವಾಗುತ್ತದೆ. ತಲೆಮಾರುಗಳಿಂದ ಪಡೆದುಕೊಂಡಿದ್ದ ಒಂದು ಸಂಸ್ಕೃತಿಯನ್ನು ಮುಂದುವರೆಸಿಕೊಂಡು ಹೋಗುವ ಹಕ್ಕನ್ನು ಮಕ್ಕಳಿಂದ ಕಸಿದುಕೊಳ್ಳುತ್ತಿದ್ದೇವೆಯೇ? ಇಲ್ಲಿಗೆ ನಾವು ಬಂದದ್ದು ಉದ್ಯೋಗಕ್ಕಾಗಿ, ಅನ್ನ ಸಂಪಾದಿಸುವುದಕ್ಕಾಗಿ. ಇದೊಂದೇ ಆಯ್ಕೆ ನಮ್ಮ ಬೇರುಗಳನ್ನು ಕಡಿದುಕೊಳ್ಳುವ ನಿರ್ಧಾರದ ತನಕವೂ ನಮ್ಮನ್ನು ದೂಡಬಹುದು ಎಂಬುದನ್ನು ನಾವು ಯೋಚಿಸರಲೇ ಇಲ್ಲವಲ್ಲ ಎಂಬುದು ಇನ್ನೊಂದು ಕೊರಗಿನ ಅಂಶ.

ಅಮೆರಿಕ, ಇಂಗ್ಲೆಂಡ್‌ಗಳಲ್ಲಿ ಮಾದರಿಗಳಿವೆ. ಏಕೆಂದರೆ, ನಾಲ್ಕಾರು ತಲೆಮಾರುಗಳಿಂದ ಭಾರತೀಯರು ಹೋಗಿ ಅಲ್ಲಿ ನೆಲೆಸಿದ್ದಾರೆ. ಪೌರತ್ವ ಪಡೆದಿದ್ದಾರೆ. ವಿವಾಹ, ಮತಾಂತರಗಳ ಮೂಲಕವೂ ಆ ಸಮಾಜದೊಡನೆ ಬೆರೆತಿದ್ದಾರೆ. ಇವುಗಳ ಪೈಕಿ ಯಾವುದಾದರೂ ಒಂದು ಮಾದರಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಯಾವುದೋ ಒಂದು ಸ್ತರದಲ್ಲಿ ಅಲ್ಲಿಯ ಜನಜೀವನದೊಡನೆ ಸುಲಭವಾಗಿ ಬೆರೆತುಹೋಗಬಹುದು.

ನಮ್ಮದು ಅನಗತ್ಯ ಭಯ, ಆತಂಕ. ನಮ್ಮದೆಲ್ಲವೂ ಕಲ್ಪಿತ ಭಯ ಎಂಬ ಅರಿವು ಕೂಡ ಕೆಲವು ಪೋಷಕರಲ್ಲಿ ಕಂಡು ಬಂತು. ನಮ್ಮ ಆತಂಕ, ಭಯಗಳು ಮಕ್ಕಳ ಭವಿಷ್ಯದ ಜೀವನಕ್ಕೆ ಅಡ್ಡಿಯಾಗಬಾರದು, ನಾವಿಲ್ಲದ ನಾಳಿನ ಬದುಕಿನಲ್ಲಿ ಅವರು ಹೇಗಿರಬೇಕು, ಹೇಗೆ ಬಾಳಬೇಕು ಎಂಬುದನ್ನು ನಿರ್ಧರಿಸುವ ಹಕ್ಕೂ ನಮಗಿಲ್ಲ ಅಲ್ಲವೇ ಎಂದು ಪೋಷಕರು ಅವರವರಲ್ಲೇ ಪರಸ್ಪರ ಚರ್ಚಿಸಿಕೊಂಡು ಸಮಾಧಾನ ಮಾಡಿಕೊಳ್ಳುತ್ತಾರೆ. ಈ ಯಾವ ಆತಂಕಗಳೂ ಮಕ್ಕಳಿಗಿಲ್ಲ ಎಂಬ ಅರಿವು ಕೂಡ ಈ ಸಮಾಧಾನದ ಹಿಂದಿದೆ.

ಆದರೆ ಈ ನಿರ್ಧಾರ ತೆಗೆದುಕೊಳ್ಳುವುದು ಕಠಿಣ. ಅಂತಹ ಕಠಿಣ ಕ್ಷಣವನ್ನು ಎದುರಿಸಲು ಪ್ರತಿಯೊಬ್ಬರೂ ಹೆದರುತ್ತಾರೆ. ಇದನ್ನು ಮೊದಲನೆ ತಲೆಮಾರಿನಲ್ಲೇ ಸ್ವಲ್ಪ ಬೇಗ ಅಮೆರಿಕದ ಪೌರತ್ವವನ್ನು ಪಡೆದಿರುವ ಬಂಧುವೊಬ್ಬರು ತುಂಬಾ ಮನ ಕಲಕುವ ರೀತಿಯಲ್ಲಿ ಹೇಳಿದರು: “ಪ್ರತಿಯೊಬ್ಬ ವಲಸಿಗನ ಜೀವನದಲ್ಲೂ ಒಂದು ಕ್ಷಣ ಬರುತ್ತದೆ. ಭಾರತವೂ ಈಗ ಮತ್ತು ಇನ್ನೆಂದಿಗೂ ನಾವು ಬಿಟ್ಟು ಬಂದ, ತೊರೆದು ಬಂದ ದೇಶ. ಅದು ಇನ್ನು ಮುಂದೆ ನಮ್ಮಲ್ಲಿ ಉಳಿಯುವುದು ನೆನಪಿನಲ್ಲಿ ಮಾತ್ರ. ಇಂತಹ ನಿರ್ಧಾರ ತೆಗೆದುಕೊಳ್ಳಬೇಕಾದ ಕ್ಷಣ ಬಂದೇ ಬರುತ್ತದೆ ಎಂಬುದು ಎಲ್ಲರಿಗೂ ಗೊತ್ತು. ಆದರೆ ಆ ಕ್ಷಣ ಬಂದಾಗ, ಅದನ್ನು ಎದುರಿಸುವಾಗ ಎಲ್ಲರೂ ಕಂಗಾಲಾಗುತ್ತಾರೆ.”

ಮಕ್ಕಳು ಮತ್ತು ಮೊಮ್ಮಕ್ಕಳು, ಪೋಷಕರು, ಇನ್ನೊಂದು ಪ್ರಶ್ನೆಯನ್ನು ಬೇರೆ ಬೇರೆ ಸ್ತರದಲ್ಲೂ ಎದುರಿಸಬೇಕಾಗುತ್ತದೆ. ಮಕ್ಕಳು ಮುಂದೆ ಎಲ್ಲಿ ಓದಬೇಕು, ಹೇಗೆ ಓದಬೇಕು ಎಂಬುದು ಯಾರೂ ಪರಿಹರಿಸಲಾಗದ ಪ್ರಶ್ನೆ. ಯುರೋಪಿನ ಶಿಕ್ಷಣ ವ್ಯವಸ್ಥೆ ಚೆನ್ನಾಗಿದೆ. ವ್ಯಕ್ತಿ ವೈಶಿಷ್ಟ್ಯವನ್ನು ಚೆನ್ನಾಗಿ ಪ್ರೋತ್ಸಾಹಿಸುತ್ತದೆ. ಆದರೆ ಮಕ್ಕಳನ್ನು ಸ್ಪರ್ಧಾತ್ಮಕ ಜಗತ್ತಿಗೆ ತಯಾರು ಮಾಡುವುದಿಲ್ಲ. ನಾಳೆ ಭಾರತಕ್ಕೆ ವಾಪಸ್ ಹೋಗುವ ಸಂದರ್ಭ ಬಂದರೆ, ಅಲ್ಲಿಯ ಶಿಕ್ಷಣ ವ್ಯವಸ್ಥೆಗೆ ಹೊಂದಿಕೊಳ್ಳಲು ತುಂಬಾ ಕಷ್ಟ ಪಡುತ್ತಾರೆ. ಇಂತಹ ಒಂದು ದೂರದ ಸಾಧ್ಯತೆಯೂ ಇರುವುದರಿಂದ ಮಕ್ಕಳಿಗೆ ಅಲ್ಲಿಯ ಶಿಕ್ಷಣ, ಸ್ಪರ್ಧೆ, ಪರೀಕ್ಷೆಗಳನ್ನು ಕುರಿತು ಕೂಡ ಇಲ್ಲಿಂದಲೇ, ಈಗಿನಿಂದಲೇ ಪರಿಚಯಿಸಬೇಕು ಎಂಬ ಉಮೇದಿನಲ್ಲಿ ಮಕ್ಕಳಿಗೆ “ಭಾರತವೆಂಬ ಜಗತ್ತಿನ” ಕೋಚಿಂಗ್, ಮನೆಪಾಠಗಳ ಮೂಲಕ, ಆನ್‌ಲೈನ್ ತರಗತಿಗಳ ಮೂಲಕ ಶುರುವಾಗುತ್ತದೆ. ಇಲ್ಲಿರುವ ಭಾರತೀಯ ಮಹಿಳೆಯರೇ ಶಿಕ್ಷಕಿಯರಾಗಿ, ಸಮಾಲೋಚಕರಾಗಿ ತರಗತಿಗಳನ್ನು ಪ್ರಾರಂಭಿಸುತ್ತಾರೆ. ಯುರೋಪಿನ ಶಿಕ್ಷಣ ಕ್ರಮದಲ್ಲಿ ನೀವು ಕಲಿಯುವಾಗ ವಿರಾಮಕ್ಕೆ, ಕ್ರೀಡೆಗೆ, ಮನರಂಜನೆಗೆ ಸಾಕಷ್ಟು ರಜಾ, ಅವಕಾಶಗಳಿರುತ್ತವೆ. ಆದರೆ ಇದೆಲ್ಲವನ್ನೂ ಭಾರತೀಯ ಮಕ್ಕಳು ಕಳೆದುಕೊಳ್ಳುತ್ತಾರೆ. ಏಕೆಂದರೆ, ಅವರು ಎರಡು ಶಿಕ್ಷಣ ಕ್ರಮದ ವಿದ್ಯಾರ್ಥಿಗಳಾಗಬೇಕಲ್ಲ. ಇದು ಒಂದು ರೀತಿಯಲ್ಲಿ ಹಿಂಸೆ ಮತ್ತು ಇನ್ನೊಂದು ರೀತಿಯಲ್ಲಿ ಪ್ರತಿಯೊಂದು ಮಗು ಮತ್ತು ಕುಟುಂಬ ಎದುರಿಸಬೇಕಾದ ಸವಾಲು. ಇದು ಭಾರತೀಯ ಮಕ್ಕಳ ಹಣೆಬರಹ ಮಾತ್ರವೇನಲ್ಲ, ಜಪಾನ್‌ನಿಂದ ಈಚೆಗೆ ಬಂದ ಕುಟುಂಬವೊಂದು ಮಗುವಿಗೆ ಜಪಾನ್ ಶಿಕ್ಷಣ ಕ್ರಮದ ಜೊತೆ ಒಡನಾಟ ಮುಂದುವರಿಯಲೆಂದು ವಾರಾಂತ್ಯದಲ್ಲಿ ಎರಡು ದಿನಗಳಲ್ಲೂ ಮಗುವನ್ನು “ವಿಶೇಷ ಕೋಚಿಂಗ್”ಗೆ ಆಮ್‌ಸ್ಟರ್‌ಡ್ಯಾಂಗೆ ಕರೆದುಕೊಂಡು ಹೋಗುತ್ತಿದ್ದರು. ಇದು ತಪ್ಪು, ಮಗುವಿಗೆ ಅನಗತ್ಯ ಹಿಂಸೆ ಎಂದು ನಮಗೂ ಗೊತ್ತು. ಆದರೆ ವೈಯಕ್ತಿಕವಾಗಿ ನಾವೇನು ಮಾಡಬೇಕು? ಇದೆಲ್ಲ ಈವತ್ತಿನ ಜಗತ್ತಿನಲ್ಲಿ ಅನಿವಾರ್ಯವಲ್ಲವೇ ಎಂದು ತಮ್ಮನ್ನು ತಾವೇ ಸಮರ್ಥಿಸಿಕೊಂಡರು.

ಬಿಟ್ಟು ಬಂದ ದೇಶ ಅಥವಾ ಮಾತೃಭೂಮಿಯ ಪರಿಕಲ್ಪನೆ ಇನ್ನೊಂದು ದಿಕ್ಕಿನಿಂದ ಕೂಡ ನಮ್ಮ ಚಿಂತನೆಯನ್ನು ರೂಪಿಸುತ್ತದೆ. ಹೊರದೇಶಗಳಿಗೆ ನಾವು, ನಮ್ಮವರು ಹೋಗುವುದೇ ಉತ್ತಮ ಉದ್ಯೋಗ, ಸಂಪಾದನೆ, ಜೀವನಾವಕಾಶಕ್ಕಾಗಿ. ದುಡಿಯುವ ವರ್ಷಗಳ ಬಹುಪಾಲನ್ನು ಕೂಡ ನಾವು ಅಲ್ಲೇ ಕಳೆಯಬಹುದು. ಅಂದರೆ ಆ ಸಮಾಜ ನಮ್ಮನ್ನು ಸಾಕುತ್ತದೆ, ಸಂಪನ್ನಗೊಳಿಸುತ್ತದೆ. ಹೀಗೆಲ್ಲ ಇರುವಾಗ, ಆ ದೇಶವನ್ನು, ಸಮಾಜವನ್ನು ನಾವು ಮಲತಾಯಿ ಧೋರಣೆಯಿಂದ ನೋಡುವುದು ಎಷ್ಟು ಸರಿಯಾದದ್ದು. ಮಾತೃಭೂಮಿಯ ಒಂದು ಆಯಾಮವೆಂದರೆ, ಅದು ನಮ್ಮನ್ನು ಪೋಷಿಸುತ್ತದೆ, ಪೊರೆಯುತ್ತದೆ. ಈ ಕೆಲಸವನ್ನು ಇನ್ನೊಂದು ದೇಶ, ಸಮಾಜ ಮಾಡಿದರೆ, ನಾವು ಆ ದೇಶವನ್ನು ಕೂಡ ಮಾತೃಭೂಮಿಯ ಭಾಗವೆಂದೇ ಪರಿಗಣಿಸಬೇಕಾಗುತ್ತದೆ. ಹಾಗೆ ಪರಿಗಣಿಸುವುದಕ್ಕೆ ಮನಸ್ಸು ಒಪ್ಪುವುದಿಲ್ಲ. ಆದರೆ ನಮ್ಮ ಮನಸ್ಸಿನ ಮಿತಿಯನ್ನಾದರೂ ನಾವು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವುದು ನಮ್ಮ ಮಾತೃಭೂಮಿಗೂ, ವಲಸೆ ಹೋಗಿ ಬದುಕುತ್ತಿರುವ ದೇಶಕ್ಕೂ ಸಲ್ಲಿಸಬಹುದಾದ ಗೌರವ.

ಈ ಪ್ರಶ್ನೆ, ಸಂಗತಿಗಳನ್ನೆಲ್ಲ ನಾವು ಯಾವ ತಲೆಮಾರಿನವರೊಡನೆ ಚರ್ಚಿಸುತ್ತಿದ್ದೇವೆ ಎಂಬುದರ ಮೇಲೆ ನಿಲುವು, ಉತ್ತರ ರೂಪುಗೊಳ್ಳುತ್ತದೆ. ನಮ್ಮ ಮಕ್ಕಳ ತಲೆಮಾರಿನವರೊಡನೆ ನಾನು ಚರ್ಚಿಸುವಾಗ ಮಕ್ಕಳು ಏನೇ ಆದರೂ ಮಾತೃಭೂಮಿಗೆ, ನಮ್ಮ ಸಂಸ್ಕೃತಿಗೆ ಹತ್ತಿರವಾಗಿರಬೇಕೆಂಬ ವಿಚಾರ ಸರಣಿಯೇ ನನ್ನ ಮನಸ್ಸಿನಲ್ಲಿ ಕೆಲಸ ಮಾಡುತ್ತಿರುತ್ತದೆ. ನನ್ನ ಮಕ್ಕಳ ಎಲ್ಲ ನಿಲುವು ವಿಚಾರಗಳನ್ನು ನಾನು ಈ ಮಾನದಂಡದಿಂದಲೇ ಪರಿಶೀಲಿಸುತ್ತೇನೆ.

ಮಕ್ಕಳದು ದ್ವಿಪಾತ್ರ. ನನ್ನ ಜೊತೆ ಮಾತನಾಡುವಾಗ, ವಾದ ಮಾಡುವಾಗ, ಅವರು ಇಂಡಿಯಾದಲ್ಲಿ ಬದುಕಲು, ಉದ್ಯೋಗ ಮಾಡಲು ಸಿಗದ ಅಥವಾ ಕಳೆದುಹೋದ ಅವಕಾಶಗಳ ಬಗ್ಗೆ ಮಾತನಾಡುತ್ತಾರೆ. ಪ್ರಶ್ನೆಗಳನ್ನು ಕೇಳುತ್ತಾರೆ. ನನ್ನನ್ನು, ನನ್ನ ತಲೆಮಾರಿನವರನ್ನು ಅಪರಾಧೀ ಸ್ಥಾನದಲ್ಲಿ ನಿಲ್ಲಿಸುತ್ತಾರೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಅವರು ಕೇಳುವ ಪ್ರಶ್ನೆಗಳಿಗೆ ನನ್ನಲ್ಲಿ ಮಾತ್ರವಲ್ಲ, ಭಾರತದ ಪ್ರಧಾನ ಮಂತ್ರಿ ಕೂಡ ಉತ್ತರ ಕೊಡಲಾರರು. ನಾವು ಬದುಕುತ್ತಿರುವ ಚರಿತ್ರೆಯ ಸಂದರ್ಭವನ್ನು ವಿವರಿಸಬಹುದು. ಮನಸ್ಸಿಗೆ ನೋವು ಮಾಡಿಕೊಳ್ಳಲು ಎಲ್ಲರಿಗೂ ಹಕ್ಕಿರುತ್ತದೆ ಎನ್ನುವುದನ್ನು ಒಪ್ಪಬಹುದಾದರೂ, ಎಂದೂ ವಾಸಿಯಾಗದ ಗಾಯಗಳನ್ನು ನಾವೇ ಮಾಡಿಕೊಳ್ಳಬಾರದು. ನಾವು ಎದುರಿಸಿದ ಒತ್ತಡ, ಸಮಸ್ಯೆಗಳನ್ನು ನಮ್ಮ ಮಕ್ಕಳು ಎದುರಿಸಬಾರದು ಅನ್ನುವ ಕಾರಣಕ್ಕೇ ನಾವು ವಲಸೆ ಬಂದಿರುವುದು ಎಂಬುದು ಮಕ್ಕಳ ವಾದ. ಹೀಗೆಲ್ಲ ವಾದ ಮಾಡುವ ಮಕ್ಕಳೇ ಸ್ವತಃ ಅವರ ಮಕ್ಕಳು ಕೂಡ ಭಾರತದ ಸಂಸ್ಕೃತಿಯ ಬೇರುಗಳನ್ನು ಶಾಶ್ವತವಾಗಿ ಕಳೆದುಕೊಳ್ಳಬಾರದೆಂದು ಒಳಗೊಳಗೇ ಹಂಬಲಿಸುತ್ತಿರುತ್ತಾರೆ.

ಸಮಕಾಲೀನ ಬದುಕಿನ ಎಳೆಗಳನ್ನು ವಸ್ತುನಿಷ್ಠವಾಗಿ ಗ್ರಹಿಸಲು ಯಾರಿಗಾದರೂ ಕಷ್ಟವೇ! ಏಕೆಂದರೆ, ಇದು ಬರೇ ಚಿಂತನೆಯಲ್ಲ, ಎಲ್ಲರೂ ಅವರವರ ಬದುಕನ್ನು ಅವರೇ ಬದುಕಬೇಕಲ್ಲ.

ನಾಳೆ, ನಾಳಿದ್ದು, ಭವಿಷ್ಯ ಎಂಬ ದೂರದಲ್ಲಿ ಮಕ್ಕಳು, ಮೊಮ್ಮಕ್ಕಳು ಇದನ್ನೆಲ್ಲ ಕುರಿತು ಸಿಂಹಾವಲೋಕನದ ತಂಪಿನಲ್ಲಿ ಯೋಚಿಸಿದಾಗ, ಎಲ್ಲವೂ ಎಷ್ಟು ಸಲೀಸು, ಸಾಧಾರಣ ಎಂದೂ ಅನಿಸಬಹುದು. ಹಾಗೆ ಅನಿಸುತ್ತದೆ ಎನ್ನುವ ಕಾರಣಕ್ಕೇ ಇಂದಿನ ತಳಮಳವನ್ನು ನಗಣ್ಯವಾಗಿ ಕಾಣಬಾರದು.