ಆ ಹುಡುಗನನ್ನು ಹತ್ತಿರ ಕರೆದು ನಿನಗೆ ಅಮ್ಮ ಇಲ್ಲದಿದ್ದರೇನು ನಾನು ನಿನ್ನ ಅಮ್ಮನಂತೆ, ನಾನು ನಿನ್ನನ್ನು ಪ್ರೀತಿಸುವುದಿಲ್ಲವೇ? ಎಂದು ಸಮಾಧಾನ ಮಾಡಿದೆ. “ನಾನು ಮರೆತರು ಇವರೆಲ್ಲ ನನ್ನನ್ನು ಮರೆಯಲು ಬಿಡುವುದಿಲ್ಲ ಮಿಸ್. ದಿನ ದಿನ ನೆನೆಸಿ ನೆನೆಸಿ ನನ್ನನ್ನು ಅಳಿಸುತ್ತಾರೆ ಎಂದ. ಈಗ ನಿನ್ನ ಗೆಳೆಯರು ಒಳ್ಳೆಯವರಾಗಿದ್ದಾರೆ. ಇನ್ಮೇಲೆ ಅವರು ನಿನ್ನ ಹೀಗೆಲ್ಲ ಅಳಿಸುವುದಿಲ್ಲ ಇನ್ನು ಮುಂದೆ ನಿನ್ನ ಜೊತೆ ಇರುತ್ತಾರೆ. ನೀವೆಲ್ಲ ಖುಷಿಯಾಗಿರಿ ಎಂದು ಸಮಾಧಾನ ಮಾಡಿ ಕೂಡಿಸಿದೆ.
ಅನುಸೂಯ ಯತೀಶ್ “ಬೆಳೆಯುವ ಮೊಳಕೆ” ಸರಣಿ ನಿಮ್ಮ ಓದಿಗೆ

ಅದು ಊಟದ ವಿರಾಮ. ಮಕ್ಕಳೆಲ್ಲ ಮಧ್ಯಾಹ್ನದ ಬಿಸಿಯೂಟ ಮುಗಿಸಿ ಮರದ ನೆರಳಿನಲ್ಲಿ ಆಟ ಆಡುತ್ತಿದ್ದರು. ನಾನು ಆಗ ತಾನೇ ಊಟ ಮುಗಿಸಿ ಹೊರಗೆ ಬಂದೆ. ಒಬ್ಬ ವಿದ್ಯಾರ್ಥಿ ದೂರದಲ್ಲಿದ್ದ ಮರದ ಕೆಳಗೆ ಒಂಟಿಯಾಗಿ ಕುಳಿತಿದ್ದ. ಎಲ್ಲ ಮಕ್ಕಳು ಹೀಗೆ ಖುಷಿ ಖುಷಿಯಾಗಿ ಆಡುತ್ತಿರುವಾಗ ಇವನೇಕೆ ಒಂಟಿಯಾಗಿ ಕುಳಿತಿರುವ ಎಂಬ ಕುತೂಹಲ ಮೂಡಿತು. ಹಾಗೆ ಸ್ವಲ್ಪ ಹೊತ್ತು ಅವನನ್ನೆ ಸೂಕ್ಷ್ಮವಾಗಿ ಗಮನಿಸುತ್ತಾ ನಿಂತೆನು. ಕೆಲ ನಿಮಿಷಗಳ ನಂತರ ಆ ಹುಡುಗ ಈ ಕಡೆ ತಿರುಗಿದ. ಅವನು ಮನದೊಳಗೆ ದುಃಖಿಸುತ್ತಿದ್ದ. ಕಂಗಳೆಲ್ಲ ಕೆಂಡದುಂಡೆಗಳಂತೆ ಕೆಂಪಾಗಿದ್ದವು. ಎರಡು ಕೈಗಳಿಂದ ಕಣ್ಣುಗಳಲ್ಲಿ ಜಿನುಗುತ್ತಿದ್ದ ಕಣ್ಣೀರ ಧಾರೆಯನ್ನು ಒರೆಸಿಕೊಳ್ಳುತ್ತಿದ್ದ. ಆದರೂ ಅವನ ನಿಯಂತ್ರಣಕ್ಕೆ ನಿಲುಕದ ಹನಿಗಳು ಭೂತಾಯನ್ನೂ ತೋಯಿಸುತ್ತಿರುವಂತೆ ಕಾಣಿಸಿತು. ಆ ಸಮಯಕ್ಕೆ ಮತ್ತೊಬ್ಬ ಹುಡುಗ ಅಲ್ಲಿಗೆ ಬಂದ “ಬಾರೋ ಆಡೋಣ, ಬೇಸರ ಮಾಡಿಕೊಳ್ಳಬೇಡ. ಈಗ ನನ್ನನ್ನೇ ನೋಡು ಎಷ್ಟು ಧೈರ್ಯವಾಗಿ ಇರುವೆ‌. ನಾನು ನಿನ್ನದೇ ಪರಿಸ್ಥಿತಿಯಲ್ಲಿರುವೆ. ಆದರೆ ನಿನ್ನಂತೆ ಅಳುತ್ತಾ ಕೂರುವುದಿಲ್ಲ. ಯಾರ ಮಾತಿಗೂ ಮನಸ್ಸು ಕೆಡಿಸಿಕೊಳ್ಳುವುದಿಲ್ಲ‌. ಅವರಿಗೆ ದೇವರು ಎಲ್ಲಾ ಕೊಟ್ಟಿದ್ದಾನೆ ಹಾಗೆ ವರ್ತಿಸುತ್ತಾರೆ. ನಾವು ಅದಕ್ಕೆಲ್ಲ ಅಳಬಾರದು. ನಿನ್ನ ನೋವಿಗೆ ನಾನು ಜೊತೆಯಾಗುವೆ. ನಾವಿಬ್ಬರೂ ಸಮಾನ ದುಃಖಿಗಳು” ಎಂದು ಅವನ ಶರ್ಟಿನ ತುದಿಯಿಂದ ಅಳುತ್ತಿದ್ದ ಗೆಳೆಯನ ಕಣ್ಣೀರು ಒರೆಸಿದ. ಅದುವರೆಗೂ ಹತೋಟಿಗೆ ಬಾರದಿದ್ದ ಆ ಹುಡುಗನ ಕಣ್ಣ ಹನಿಗಳು ಗೆಳೆಯನ ಪ್ರೋತ್ಸಾಹದಾಯಿ ಮಾತುಗಳಿಂದ ಕಂಗಳೊಳಗೆ ಉಳಿದವು. ಮುಖ ಹೂವಿನಂತೆ ಅರಳಿತು. ಉತ್ಸಾಹ ಚಿಮ್ಮಿತು. ಉಲ್ಲಾಸದಿಂದ ಮೇಲೆದ್ದ. ಆ ಹುಡುಗನ ಕೈ ಹಿಡಿದು ಆಟವಾಡಲು ನಡೆದನು. ನನ್ನ ಕುತೂಹಲ ಈಗ ಮತ್ತಷ್ಟು ಇಮ್ಮಡಿಯಾಯಿತು. ಅವನಿಗೆ ಏನು ಸಮಸ್ಯೆ ಇದೆ, ಇವನಿಗೂ ಅದೇ ಸಮಸ್ಯೆ ಅನ್ನುವುದಾದರೆ ಇವರಿಬ್ಬರು ಇಷ್ಟು ಚಿಕ್ಕ ವಯಸ್ಸಿನಲ್ಲಿ ಅದೆಷ್ಟು ಗಂಭೀರ ಸಮಸ್ಯೆಯಲ್ಲಿ ಸಿಲುಕಿರಬಹುದು ಎಂಬ ಅನುಮಾನ ಮೂಡಿತು. ಅದಕ್ಕೆ ಉತ್ತರ ತಿಳಿಯಲು ಮನಸ್ಸು ಹಾತೊರೆಯುತ್ತಿತ್ತು. ಆದರೆ ಶಾಲಾ ಬೆಲ್ ಬಾರಿಸಿದ್ದರಿಂದ ಅನಿವಾರ್ಯವಾಗಿ ನಾನು ಬೇರೆ ತರಗತಿಗೆ ಹೋಗಲೇಬೇಕಾಯಿತು.

ಅಳುವ ಮಕ್ಕಳನ್ನು ಸಮಾಧಾನಪಡಿಸಲು ಒಮ್ಮೊಮ್ಮೆ ಶಿಕ್ಷಕರಾದ ನಾವೇ ಹರ ಸಾಹಸ ಪಡಬೇಕು. ಹಾಗಿರುವಾಗ ಒಬ್ಬ ಪುಟ್ಟ ಬಾಲಕ ಅದೆಷ್ಟು ಸರಳವಾಗಿ ತನ್ನ ಗೆಳೆಯನಿಗೆ ಸಮಾಧಾನ ಮಾಡಿದ ಎಂಬ ಬೆರಗು ಮೂಡಿತು. ಅಂದಿನ ಶಾಲಾ ಅವಧಿ ಮುಗಿಯಿತು. ಮನೆಗೆ ಬಂದೆ. ಅದರ ಗುಂಗಿನಿಂದ ಹೊರಬರುವುದು ಅನಿವಾರ್ಯವಾಗಿತ್ತು. ಹೇಗಿದ್ದರೂ ನಾಳೆ ಬೆಳಗ್ಗೆ ಮೊದಲ ಅವಧಿ ಅದೇ ತರಗತಿ ಇದೆ. ಕೇಳಿ ವಿಚಾರ ಮಾಡಿದರಾಯಿತು ಎಂದು ನನಗೆ ನಾನೇ ಸಮಾಧಾನ ಮಾಡಿಕೊಂಡು ತುಸು ನಿದ್ದೆಗೆ ಜಾರಿದೆ.

ನಿತ್ಯವೂ ಬೇರೆ ಬೇರೆ ಜಾಗಗಳಲ್ಲಿ ಕೂರುತ್ತಿದ್ದ ಆ ಇಬ್ಬರು ಹುಡುಗರು ಅಂದು ಜೊತೆಯಾಗಿ ಕುಳಿತಿದ್ದರು. ಮನಸ್ಸು ಮತ್ತಷ್ಟು ತುಂಬಿ ಬಂತು. ಆ ಮಕ್ಕಳ ಅಂತಃಕರಣ, ಪರಸ್ಪರ ಸಾಮರಸ್ಯ ನೋಡಿ ದೊಡ್ಡವರೆಂದು ಬೀಗುವ ನಮಗೆ ನಾಚಿಕೆಯಾಗಬೇಕು ಎನಿಸಿತು. ಎಂದಿನಂತೆ ಹಾಜರಾತಿ ತೆಗೆದುಕೊಂಡೆನು. ನೆನ್ನೆ ಅಳುತ್ತಿದ್ದ ಹುಡುಗ ಇಂದು ಕುಳಿತು ಪಾಠ ಕೇಳಲು ಸಿದ್ದನಾಗಿದ್ದ. ಮೊದಲ ಅವಧಿಯಲ್ಲಿ ನಿನ್ನೆಯ ವಿಚಾರವನ್ನು ತೆಗೆದು ಶಾಂತ ಸಾಗರದಂತಿರುವ ಅವನ ಮನವನ್ನ ಕದಡಿ ಕೆಸರಾಗಿಸುವುದು ಬೇಡವೆನಿಸಿ, ಪಾಠ ಶುರು ಮಾಡಿದೆ. ಪದ್ಯ ಪಾಠ ಅಮ್ಮ ಪದ್ಯ. ಇದನ್ನು ಎರಡು ಮೂರು ಬಾರಿ ಹಾಡಿದೆ. ಮಕ್ಕಳೆಲ್ಲ ಖುಷಿಯಿಂದ ಜೊತೆ ಸೇರಿ ಹಾಡಿದರು. ಅಮ್ಮ ಎನ್ನುವ ಪದಕ್ಕೆ ಅಂತ ಅದ್ಭುತ ಸೆಳೆತವಿದೆ. ಪ್ರೈಮರಿ ಶಾಲೆಯ ಮಕ್ಕಳಿಗೆ ಅಮ್ಮನ ಜೊತೆ ಇನ್ನೂ ಹೆಚ್ಚಿನ ಅಟ್ಯಾಚ್ಮೆಂಟ್ ಇರುತ್ತದೆ. ನಾನು ಪದ್ಯದ ಸಾರಾಂಶ ಹೇಳುತ್ತಾ ಅಮ್ಮನ ಬಗ್ಗೆ ಮಕ್ಕಳ ಮಾತುಗಳನ್ನು ಬಯಸಿದೆ. ನಿಮಗೆ ಅಮ್ಮ ಏಕೆ ಇಷ್ಟ? ಎಂದೆನು.

‘ಅಮ್ಮ ನನ್ನನ್ನು ಪ್ರೀತಿ ಮಾಡುತ್ತಾಳೆ’
“ಅಮ್ಮ ನನ್ನನ್ನು ಮುದ್ದಿಸುತ್ತಾಳೆ”
“ಅಮ್ಮ ನನಗೆ ಇಷ್ಟದ ಅಡುಗೆ ಮಾಡಿಕೊಡುತ್ತಾಳೆ”
“ಅಮ್ಮ ನನಗೆ ಹುಷಾರಿಲ್ಲದಿದ್ದರೆ ತುಂಬಾ ದುಃಖ ಪಡುತ್ತಾಳೆ, ಸುಧಾರಿಸುತ್ತಾಳೆ”
“ಅಮ್ಮ ನನಗೆ ಪಾಠ ಹೇಳಿಕೊಡುತ್ತಾಳೆ”
“ಅಮ್ಮ ನನಗೆ ಕೇಳಿದ್ದನ್ನೆಲ್ಲ ಕೊಡಿಸುತ್ತಾಳೆ”

“ಅಮ್ಮ ನನ್ನ ಆಟ ಆಡಿಸುತ್ತಾಳೆ” ಇಂತಹ ಹತ್ತಾರು ಉತ್ತರಗಳು ಮಕ್ಕಳಿಂದ ಪುಂಖಾನುಪುಂಖವಾಗಿ ಬಂದವು. ನನಗೆ ಇವೆಲ್ಲವನ್ನೂ ನೋಡಿ ಖುಷಿಯಾಯಿತು. ಮಧ್ಯದಲ್ಲಿ ಎದ್ದು ನಿಂತ ಹುಡುಗನೊಬ್ಬ “ಮಿಸ್ ನೋಡಿ, ನಾವೆಲ್ಲ ಎಷ್ಟೊಂದು ಉತ್ತರ ಕೊಟ್ಟಿದ್ದೇವೆ. ಈ ಇಬ್ಬರು ಹುಡುಗರು ಗೂಬೆಗಳಂತೆ ಕೂತಿದ್ದಾರೆ” ಎಂದ. ಮತ್ತೊಬ್ಬ ಹುಡುಗ ಇದಕ್ಕೆ ಧ್ವನಿ ಸೇರಿಸಿ “ಮಿಸ್, ಅವರಿಬ್ಬರಿಗೂ ಅಮ್ಮ ಅಪ್ಪ ಇಲ್ಲ. ಅವರಿಗೆ ಅವರ ಪ್ರೀತಿನೆ ಗೊತ್ತಿಲ್ಲ. ಅದಕ್ಕೆ ಅವರೇನು ಉತ್ತರ ಕೊಡುತ್ತಾರೆ ಬಿಡಿ ಮಿಸ್” ಅಂದಾಗ ಇಡೀ ತರಗತಿ ಚಪ್ಪಾಳೆ ತಟ್ಟಿ ನಕ್ಕಿತು. ನನಗೆ ಈ ಮಕ್ಕಳ ಮನಸ್ಥಿತಿ ಕಂಡು ಆಘಾತವಾಯಿತು. ಒಂದು ಮಗುವಿನ ಮನಸ್ಸನ್ನು ನೋಯಿಸಲು ಎಲ್ಲರೂ ಒಂದಾಗಿ ಸಂಭ್ರಮಿಸಿದ್ದು ನನಗೆ ಕೋಪ ನೆತ್ತಿಗೇರಿಸಿತು. ಇದು ಅಪಹಾಸ್ಯ ಮಾಡುವ ವಿಚಾರವೇ! ಇಷ್ಟು ಚಿಕ್ಕವಯಸ್ಸಿನಲ್ಲಿ ಈ ಮಕ್ಕಳ ಮನಸ್ಸು ಇನ್ನೊಬ್ಬರ ನೋವಿಗೆ ಸ್ಪಂದಿಸದಷ್ಟು ಕಠೋರವಾಗಿರುವುದು ಹೇಗೆ? ಎಂದು ಬೇಸರವಾಯಿತು. ನನ್ನ ಅಮ್ಮ ಹೇಳಿದರೂ ಈ ಹುಡುಗ ಪಾಪ ಮಾಡಿದ್ದಾನಂತೆ, ಯಾಕೆಂದರೆ ಹುಟ್ಟಿದಾಗಲೇ ಇವನು ಅಮ್ಮನನ್ನು ತಿಂದುಕೊಂಡಿದ್ದಾನಂತೆ ಎಂದು ಒಬ್ಬ ಹುಡುಗ ಹೇಳಿದಾಗ ತುಸು ದುಃಖವಾಯಿತು.

ಮಕ್ಕಳ ಮನಸ್ಸು ನಿಷ್ಕಲ್ಮಶವಾಗಿಯೆ ಇರುತ್ತದೆ. ಅದರೊಳಗೆ ಕಹಿಯನ್ನು ಬಿತ್ತುವುದು ಹಿರಿಯರಾದ ನಾವೇ ಎಂದು ನಮ್ಮ ಬಗ್ಗೆ ಅಸಹ್ಯವೆನಿಸಿತು. ಸ್ವಲ್ಪ ಸಾವರಿಸಿಕೊಂಡು ಮಕ್ಕಳೇ ಹಾಗೆಲ್ಲ ಹೇಳಬಾರದು. ಪಾಪ ಪುಣ್ಯ ಅಂತ ಏನು ಇರುವುದಿಲ್ಲ.. ಆರೋಗ್ಯ ಸಮಸ್ಯೆಯಿಂದ ಅವರ ತಾಯಿ ತೀರಿಕೊಂಡಿದ್ದಾರೆ ಅಷ್ಟೇ ಎಂದು ಒಂದಷ್ಟು ವೈಚಾರಿಕ ಅಂಶಗಳನ್ನು ವಿವರಿಸಿದೆ. ಅವರಿಗೆ ಅಪ್ಪ ಅಮ್ಮ ಇಲ್ಲ ಎಂದು ಈಗಾಗಲೇ ನೊಂದಿದ್ದಾರೆ. ನೀವು ಅವರಿಗೆ ಸಮಾಧಾನ ಮಾಡಬೇಕು. ಅವರ ನೋವಿನಲ್ಲಿ ನೀವು ಪಾಲು ಪಡೆಯಬೇಕಲ್ಲವೇ? ಅದನ್ನು ಬಿಟ್ಟು ಹೀಗೆ ಚುಚ್ಚಿ ಚುಚ್ಚಿ ಅವರನ್ನು ನೋಯಿಸಿ ಅವರ ದುಃಖವನ್ನು ಮತ್ತಷ್ಟು ಹೆಚ್ಚಿಸಬಾರದು ಮಕ್ಕಳೇ ಎಂದಾಗ ಅದರೊಳಗೊಬ್ಬ ಹುಡುಗ ಎದ್ದು ನಿಂತನು. ಆ ಹುಡುಗನಿಗೆ ಎಲ್ಲ ಮಕ್ಕಳು ಸೇರಿ “ನಿಮ್ಮ ಅಮ್ಮ ಸತ್ತೋದ್ಲು, ನಿಂಗ್ ಅಮ್ಮ ಇಲ್ಲ, ನಿಮ್ಮಮ್ಮ ಸತ್ತು ಹೋಗಿದ್ದಾಳೆ, ನೀನು ಭಿಕಾರಿ, ನಿನಗೆ ಯಾರು ಇಲ್ಲ” ಎಂದು ಎಲ್ಲರೂ ಆಡಿಕೊಂಡು ನಕ್ಕರು. ಅದಕ್ಕೆ ನೆನ್ನೆಯೂ ಅವನು ಹೀಗೆ ಅಳುತ್ತಿದ್ದ ಮಿಸ್ ಎಂದನು.

ಓ ನೆನ್ನೆಯ ಘಟನೆಗೆ ನಿಜವಾದ ಕಾರಣ ಈಗ ನನಗೆ ತಿಳಿಯಿತು. ಆಗ ಆ ಹುಡುಗನನ್ನು ಹತ್ತಿರ ಕರೆದು ನಿನಗೆ ಅಮ್ಮ ಇಲ್ಲದಿದ್ದರೇನು ನಾನು ನಿನ್ನ ಅಮ್ಮನಂತೆ, ನಾನು ನಿನ್ನನ್ನು ಪ್ರೀತಿಸುವುದಿಲ್ಲವೇ? ಎಂದು ಸಮಾಧಾನ ಮಾಡಿದೆ. “ನಾನು ಮರೆತರು ಇವರೆಲ್ಲ ನನ್ನನ್ನು ಮರೆಯಲು ಬಿಡುವುದಿಲ್ಲ ಮಿಸ್. ದಿನ ದಿನ ನೆನೆಸಿ ನೆನೆಸಿ ನನ್ನನ್ನು ಅಳಿಸುತ್ತಾರೆ ಎಂದ. ಈಗ ನಿನ್ನ ಗೆಳೆಯರು ಒಳ್ಳೆಯವರಾಗಿದ್ದಾರೆ. ಇನ್ಮೇಲೆ ಅವರು ನಿನ್ನ ಹೀಗೆಲ್ಲ ಅಳಿಸುವುದಿಲ್ಲ ಇನ್ನು ಮುಂದೆ ನಿನ್ನ ಜೊತೆ ಇರುತ್ತಾರೆ. ನೀವೆಲ್ಲ ಖುಷಿಯಾಗಿರಿ ಎಂದು ಸಮಾಧಾನ ಮಾಡಿ ಕೂಡಿಸಿದೆ. ನಂತರ ಮಕ್ಕಳಿಗೂ ಒಂದಷ್ಟು ಉಪದೇಶವನ್ನು ನೀಡಿದೆ. ಒಂದು ವಿಶೇಷ ಎಂದರೆ ನಮ್ಮ ಪ್ರಾಥಮಿಕ ಶಾಲಾ ಮಕ್ಕಳು ಅದೆಷ್ಟೆ ತುಂಟತನ ಮಾಡಿದರೂ, ಅದೆಷ್ಟು ಚೇಷ್ಟೆ ಮಾಡಿದರೂ ಕೂಡ ಗುರುಗಳು ಹೇಳಿದ ಮಾತನ್ನು ಯಥಾವತ್ತಾಗಿ ಪಾಲಿಸುತ್ತಾರೆ. ಗುರುಗಳಿಗೆ ಒಂದಷ್ಟು ಗೌರವವನ್ನು ಕೊಡುವುದು ಈ ಮಕ್ಕಳ ವಿಶೇಷ ಗುಣ. ಅದರಂತೆ ಈ ಇಬ್ಬರು ಮಕ್ಕಳನ್ನು ಎಲ್ಲರೂ ಪ್ರೀತಿಯಿಂದ ನೋಡಿಕೊಳ್ಳುವುದಾಗಿ ಹೇಳಿದರು. ಆಗ ಆ ಹುಡುಗನ ಮನಸ್ಸು ನಿರಾಳವಾಯಿತು. ಇದನ್ನು ಕಂಡು ನನ್ನ ಮನಸ್ಸು ಒಂದಿಷ್ಟು ನೆಮ್ಮದಿ ಹಾಗೂ ಹೆಮ್ಮೆಯಿಂದ ಬೀಗಿತು.

ಶಿಕ್ಷಕರಿಗೆ ಸಂಬಂಧಗಳು ಮತ್ತು ಬಾಂಧವ್ಯಕ್ಕೆ ಸಂಬಂಧಿಸಿದಂತಹ ಕೌಟುಂಬಿಕ ಪಾಠಗಳನ್ನು ಮಾಡುವುದು ಒಂದು ದೊಡ್ಡ ಸವಾಲೇ ಸರಿ. ಕಾರಣ ನಮ್ಮ ಶಾಲೆಗೆ ಬರುವ ಮಕ್ಕಳ ಕೌಟುಂಬಿಕ ವಾತಾವರಣ, ಮನೆಯ ಪರಿಸ್ಥಿತಿ, ಸಂಬಂಧಗಳ ನಡುವಿನ ಅನ್ಯೋನ್ಯತೆ ಒಂದೇ ತೆರನಾಗಿರುವುದಿಲ್ಲ. ನಾವು ಅಂತಹ ವೈವಿಧ್ಯಮಯ ಸ್ಥಳಗಳಿಂದ ಬಂದ ಮಕ್ಕಳನ್ನು ಒಗ್ಗೂಡಿಸಿ ಒಂದು ವಿಷಯವನ್ನು ಕಲಿಸಬೇಕಾದರೆ ಅವರುಗಳನ್ನು ಮೊದಲು ಮಾನಸಿಕವಾಗಿ ಅಣಿಗೊಳಿಸಬೇಕು. ಈಗ ತಂದೆ ತಾಯಿಗೆ ಸಂಬಂಧಿಸಿದ ಪಾಠಗಳನ್ನು ಮಾಡಲು ಹೋದರೆ ಯಾವ ಮಕ್ಕಳಿಗೆ ತಂದೆ ತಾಯಿ ಇರುವುದಿಲ್ಲವೋ ಅಂತಹ ಮಕ್ಕಳು ಒಂದಿಷ್ಟು ಮಾನಸಿಕವಾಗಿ ಕುಗ್ಗುತ್ತಾರೆ. ಅಜ್ಜಿ ತಾತನ ಪ್ರೀತಿಯೆ ದೊರೆಯದ ಮಕ್ಕಳಿಗೆ ಅವರ ಬಗ್ಗೆ ಹೇಳಿದಾಗ ತಮಗೆ ಅಂತಹ ಅಜ್ಜಿ ತಾತನ ಪ್ರೀತಿ ದಕ್ಕದಿರುವುದಕ್ಕೆ ದುಃಖಿಸುತ್ತಾರೆ.

ಅಣ್ಣ, ತಮ್ಮ, ತಂಗಿ ಇವರುಗಳ ಬಗ್ಗೆ ಹೇಳುವಾಗ ಅಥವಾ ಅಕ್ಕ ಪಕ್ಕದ ಮನೆಯವರ ಬಗ್ಗೆ ಹೇಳುವಾಗ ಮಕ್ಕಳ ಸೂಕ್ಷ್ಮ ಮನಸ್ಸನ್ನು ಅರಿತು ಅದಕ್ಕೆ ಯಾವುದೇ ಗಾಸಿಯಾಗದಂತೆ ನಾವು ಪಾಠ ಬೋಧನೆ ಮಾಡಬೇಕಾಗುತ್ತದೆ. ಹಾಗಂತ ಅಂತಹ ವಿಚಾರಗಳನ್ನ ಮುಚ್ಚುಮರೆ ಮಾಡುವುದಾಗಲಿ ಅಥವಾ ನಿರ್ಲಕ್ಷ್ಯ ಮಾಡುವುದಾಗಲಿ ಸಲ್ಲದು. ಯಾಕೆಂದರೆ ಆ ಮಕ್ಕಳ ದೃಷ್ಟಿಯಿಂದ ಅದು ಸರಿ ಎನಿಸಿದರೂ ಇತರ ಮಕ್ಕಳಿಗೆ ಅದರ ಮಾಹಿತಿ ನೀಡದೆ ಇದ್ದಾಗ ಒಂದು ರೀತಿಯ ಅನ್ಯಾಯವಾಗುತ್ತದೆ. ಇಂತಹ ಎಲ್ಲ ವಿಚಾರಗಳನ್ನು ಬ್ಯಾಲೆನ್ಸ್ ಮಾಡುವುದು ಶಿಕ್ಷಕರ ಒಂದು ನೈತಿಕ ಹಾಗೂ ಶೈಕ್ಷಣಿಕ ಜವಾಬ್ದಾರಿಯಾಗಿರುತ್ತದೆ.

ಈ ಪುಟ್ಟ ಮಕ್ಕಳು ತಮ್ಮ ಪರಿಸರದಲ್ಲಿ ಅನೇಕ ವಿಚಾರಗಳನ್ನ ಕಲಿತಿರುತ್ತಾರೆ. ಅವುಗಳನ್ನು ಶಾಲೆಯಲ್ಲಿ ಪ್ರತಿಫಲಿಸುತ್ತಾರೆ. ಇವರ ಈ ಸಂಬಂಧದ ಕುರಿತಾದ ಮಾತುಗಳು ದಿನನಿತ್ಯದ ಸ್ತೋತ್ರಗಳಾಗಿರುತ್ತವೆ. ಇವನ್ನೆಲ್ಲ ಎಲ್ಲಿ ಕಲಿಯುತ್ತವೇ ಎಂಬುದೇ ನಿಗೂಢವಾದ ಪ್ರಶ್ನೆ. ಇವು ಸಕಾರಾತ್ಮಕವಾಗಿದ್ದರೇ ಎಲ್ಲರಿಗೂ ಒಳಿತು. ಆದರೇ ನಕಾರಾತ್ಮಕ ಭಾವದಲ್ಲಿ ವ್ಯಕ್ತವಾದಾಗ ಅದು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ.
ಮಕ್ಕಳ ಬೈಗುಳಗಳು ಈ ಕುಟುಂಬಕ್ಕೆ ಸಂಬಂಧಪಟ್ಟಿರುತ್ತವೆ.

ನೋಡಿ ಮಿಸ್, “ನಿಮ್ಮಪ್ಪ ಸತ್ತು ಹೋಗಲಿ” ಅಂದ ಅಂತ ಒಬ್ಬ ಹೇಳಿದ್ರೆ, ಮತ್ತೊಬ್ಬ “ನಿಮ್ಮಮ್ಮಂಗೆ ಗುಂಡಿ ತೋಡ ಮುಚ್ಚಾ” ಅಂತ ಮಗದೊಂದು ಮಗು ಹೇಳುತ್ತೆ, ಮತ್ತೆ ಕೆಲವೊಮ್ಮೆ “ಅಪ್ಪ ಅಮ್ಮ ಒಂದೇ ಗುಂಡಿ” ಅಂತ ಬೇರೆ ಬೈತಾರೆ. ಮೊದ ಮೊದಲು ನನಗೆ ಇವೆಲ್ಲ ಹೊಸದು ಇವ್ರ್ ಏನ್ ಮಾತಾಡ್ತಿದ್ದಾರೆ ಅಂತಾನೆ ತಿಳಿತಾ ಇರಲಿಲ್ಲ. ಆಮೇಲೆ ಗೊತ್ತಾಯ್ತು. ಇವೆಲ್ಲ ಬೈಗುಳಗಳು ಅಂತ. ಈ ಮಕ್ಕಳು ವಯಸ್ಸಿನಲ್ಲಿ ಚಿಕ್ಕವಾದರೂ ಬಾಂಧವ್ಯ ಸಂಬಂಧಗಳ ವಿಚಾರ ಬಂದಾಗ ತುಂಬಾ ಪ್ರಬುದ್ಧವಾಗಿ ಯೋಚಿಸುತ್ತಾರೆ. ಈ ಮೇಲಿನಂತೆ ಯಾರಾದರೂ ಬೈದರೆ ಸಾಕು ಮಕ್ಕಳು ಅಳಲು ಶುರು ಮಾಡಿಬಿಡುತ್ತಾರೆ. ಅಥವಾ ಕೋಪಗೊಂಡು ಏನಾದರೂ ಕಿರಿಕಿರಿ ಮಾಡುತ್ತಾರೆ. ಇದಕ್ಕೆಲ್ಲ ಕಾರಣ ಕುಟುಂಬದ ಮೇಲಿನ ಕಾಳಜಿ ಮತ್ತು ಪ್ರೀತಿ. ನೋಡಿ ಮಿಸ್, “ಅಪ್ಪ ಅಮ್ಮ ಒಂದೇ ಗುಂಡಿಗೆ ಹೋದರೆ ನಮ್ಮನ್ನು ಯಾರು ಸಾಕ್ತಾರೆ. ಆಗ ನಮ್ಮಮ್ಮ ದುಡಿದು ನಮ್ಮನ್ನೆಲ್ಲಾ ಸಾಕಬೇಕಾಗುತ್ತದೆ. ನಮ್ಮಪ್ಪಂಗೆ ಮತ್ತು ನಮಗೆಲ್ಲ ಯಾರು ಅಡುಗೆ ಮಾಡಿಕೊಡುತ್ತಾರೆ” ಎಂದು ರೋಧಿಸುತ್ತಾರೆ. ಆ ಮಕ್ಕಳನ್ನೆಲ್ಲ ಸಮಾಧಾನ ಮಾಡಿ ಬೈಯ್ಯುವ ಮಕ್ಕಳಿಗೊಂದು ಬುದ್ಧಿ ಹೇಳಿ ನಿರಾಳವಾಗಿ ಉಸಿರು ಬಿಡುವಷ್ಟರಲ್ಲಿ ನಿಮ್ಮಪ್ಪ ಅಮ್ಮ ಒಂದೇ ಗುಂಡಿ ಎಂದಿದ್ದ ಅವನಿಂದ ಬಿಡ್ತು ಅನ್ನಿಸಿ ಮಿಸ್ ಇಲ್ಲ ಅಂದ್ರೇ ಅವರು ಸುತ್ತು ಹೋಗುತ್ತಾರೆ ಅಂತಾ ಶುರು ಮಾಡ್ತಾರೆ. ಏನಾಗಲ್ಲ ಬಿಡ್ರೋ ಯಾರಾದ್ರೂ ಹೇಳಿದ್ದು ಹೇಳಿದಂಗೆ ಆಗುತ್ತಾ ಅಂದ್ರೇ ಇಲ್ಲ ಮಿಸ್ ಆಗೇ ಆಗುತ್ತೆ ಅದಕ್ಕೆ ಬಿಡ್ತು ಅನ್ಸಿ ಮಿಸ್ ಅಂತ ಹಠ ಹಿಡಿಯುತ್ತಾರೆ. ಮಕ್ಕಳಿಂದ ಬಿಡ್ತು ಎಂದು ಹೇಳಿಸುವವರೆಗೂ ಜಟಾಪಟಿ ಮಾಡುತ್ತಾರೆ. ಈ ಘಟನೆ ಏನೇ ಇರಲಿ ಮಕ್ಕಳಿಗೆ ತನ್ನ ಕುಟುಂಬದ ಮೇಲಿನ ಪ್ರೀತಿ ಮತ್ತು ಕಾಳಜಿ ಇಲ್ಲಿ ಎದ್ದು ಕಾಣುತ್ತದೆ.

ಇದು ನನ್ನೊಬ್ಬಳ ಅನುಭವ ಮಾತ್ರವಲ್ಲಾ, ಬಹುಸಂಖ್ಯಾತ ಶಿಕ್ಷಕರ ಅನುಭವವು ಇದೇ ಆಗಿರುತ್ತದೆ. ಶಾಲೆ ಬೇರೆ ಬೇರೆ ಆಗಿರಬಹುದು. ಆದರೇ ಮಕ್ಕಳ ಮನಸ್ಥಿತಿ ಹಾಗೂ ಆಲೋಚನೆಗಳು ಮಕ್ಕಳವೇ ಆಗಿರುತ್ತವೆ.