ಎಸ್.ಎಸ್.ಎಲ್.ಸಿ ಪರೀಕ್ಷೆಯ‌ ನನ್ನ ನಾಲ್ಕನೇ ವರ್ಷದ ಪರೀಕ್ಷೆಗಳು ಆರಂಭವಾಗಿದ್ದವು. ನಾನು ಹೋಗುವ ಸಮಯ ಬರುವ ಸಮಯದ ಅರಿವು ಅವರಿಗಿರಲಿಲ್ಲ. ಒಂದು ಭಾನುವಾರ ಪರೀಕ್ಷೆಗಳಿಗೆ ರಜೆ ಇತ್ತು. ನಮ್ ಇಡೀ ಓಣಿಯಲ್ಲಿಯೇ ಗುಸು‌ ಗುಸು ಆರಂಭವಾಗಿತ್ತು. ರಾತ್ರಿ ಎರಡರ ಸುಮಾರಿಗೆ ಗೇಟಿನ ಸದ್ದಾಯಿತೆಂದೂ… ಯಾರೋ ಕಾಂಪೌಂಡಿನಲ್ಲಿ ಓಡಾಡುತ್ತಿದ್ದುದನ್ನು ನೋಡಿರುವುದಾಗಿ ಅವರು ಮನೆಯ ಸದಸ್ಯರೆಲ್ಲರೂ ಕಣ್ಣಾರೆ ನೋಡಿರುವುದಾಗಿ ಮನೆ ಮನೆಯಲ್ಲೂ ಈ ಸುದ್ದಿ ಹಬ್ಬಿ ಇಡೀ ವಠಾರವೇ ಹೆದರಲಾರಂಭಿಸಿತು.
ಮಹಮ್ಮದ್‌ ರಫೀಕ್‌ ಕೊಟ್ಟೂರು ಬರಹ ನಿಮ್ಮ ಓದಿಗೆ

ಅದು ಆಗಸ್ಟ್ ತಿಂಗಳು. ನಾನು ಕೊಪ್ಪಳದ ಶಿಕ್ಷಣ ಇಲಾಖೆಯ ಕಛೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೆ. ಅನಿವಾರ್ಯ ಕಾರಣಗಳಿಂದ ನಾನು ಬಳ್ಳಾರಿ ಜಿಲ್ಲೆಯ ಕೊಟ್ಟೂರಿನಿಂದ ಕೊಪ್ಪಳಕ್ಕೆ ಓಡಾಡುತ್ತಿದ್ದೆ. ಸುಮಾರು 100. ಕಿ.ಮೀ ಅಂತರವಿರುವ ಈ ಸ್ಥಳಕ್ಕೆ ಬಸ್ಸಿನಲ್ಲಿ ಓಡಾಡಬೇಕೆಂದರೆ ಕನಿಷ್ಠ ಅಂದರೂ 3 ಗಂಟೆಗಳು ಬೇಕಾಗುತ್ತದೆ. ಕಚೇರಿ ೧೦ ಗಂಟೆಗೆ ಆರಂಭವಾಗುತ್ತದೆ ಹೇಗಾದರೂ ಮಾಡಿ ಮನೆ ಅನ್ನ ಉಂಡು ಮಕ್ಕಳು ಮರಿ ಜೊತೆ ಇದ್ದರಾಯಿತು ಎಂದು ಇಲ್ಲಿಂದಲೇ ಓಡಾಡುತ್ತಿದ್ದೆ. ಹೀಗಾಗಿ ಊರ ಜನ ಇನ್ನೂ ಹಾಸಿಗೆಯಲ್ಲಿರುವ ಸಮಯದಲ್ಲಿ ನಾನು ಊಟ ಮುಗಿಸಿ ಬಸ್ಸಿನಲ್ಲಿರುತ್ತಿದ್ದೆ. ಇನ್ನು ರಾತ್ರಿ ನಾ ಊರು ತಲುಪುವ ಹೊತ್ತಿಗೆ ಪುನಹ ಊರು ಹಾಸಿಗೆಯಲ್ಲಿರುತ್ತಿತ್ತು. ಎಂದಾದರೂ ಅಪರೂಪಕ್ಕೊಮ್ಮೆ ರಜೆಯಲ್ಲಿದ್ದಾಗ ಊರ ಜನರ ಕಣ್ಣಿಗೆ ಬಿದ್ದರೆ ಯಾವಾಗ ಬಂದಿರಿ ಊರಿನಿಂದ ಎಂದೇ ಪ್ರಶ್ನಿಸುತ್ತಿದ್ದರು. ಕಂಡವರಿಗೆಲ್ಲರಿಗೂ ಕೇಳಿದವರಿಗೂ ಪ್ರತಿ ಬಾರಿ ವಿವರಿಸಿ ಹೇಳಲು ಸಮಯವಿಲ್ಲದೆ ನಾನು ನಿನ್ನೆ ರಾತ್ರಿ ಎಂದು ಚುಟುಕಾಗಿಯೇ ಉತ್ತರಿಸಿ ಮಂಗಳೂರಿನವರಂತೆ ಸ್ವಲ್ಪ ಹುಲ್ಲು ಕಿರಿದು ಮುಂದೆ ಹೋಗುತ್ತಿದ್ದೆ.

ಸರ್ಕಾರದ ಎಲ್ಲಾ ಇಲಾಖೆಗಳಿಗೆ ಹೋಲಿಸಿದರೆ ಅತಿ ದೊಡ್ಡ ಇಲಾಖೆಯೆಂದರೆ ಶಿಕ್ಷಣ ಇಲಾಖೆ, ಅದರಲ್ಲೂ ಅನುತ್ಪಾದಕ, ಸರ್ಕಾರಕ್ಕೆ ಹೊರೆಯೆಂದೇ ಭಾವಿಸುವ ಇಲಾಖೆ. ಈ ಇಲಾಖೆಯನ್ನು ನಿಯಂತ್ರಿಸಲಿಕ್ಕೆಂದೇ ಪ್ರತಿಯೊಂದರಲ್ಲೂ ಈ ಇಲಾಖೆಗೆ ಮಾತ್ರ ಅನ್ವಯವಾಗುವಂತೆ ವಿಶೇಷ ಕಾನೂನುಗಳನ್ನು ಸರಕಾರ ಜಾರಿಗೊಳಿಸುತ್ತದೆ. ಉದಾಹರಣೆಗೆ ಹೇಳಬೇಕೆಂದರೆ ಶಿಕ್ಷಕರ ವರ್ಗಾವಣೆಯೆಂಬ ಮಹಾಯಜ್ಙ. ಈ ಮಹಾಯಜ್ಞ ಪ್ರತಿವರ್ಷ ಆಗಬೇಕೆಂದು ನಿಯಮವಿದ್ದರೂ ಇದರ ಕಾಲಾವಧಿ ೨ ರಿಂದ ೩ ವರ್ಷಗಳಿಗೆ ಹಿಗ್ಗಿದ್ದಿದೆ.

ಇಂತಿಪ್ಪ ಇಲಾಖೆಯ ನೌಕರನಾದ ನಾನು ಸರಿಸುಮಾರು ದಿನದ ಅರ್ಧ ಭಾಗವನ್ನು ಬಸ್ಸಿನಲ್ಲಿ ಕಳೆದರೆ, ಉಳಿದರ್ಧ ಕಛೇರಿ ಕೆಲಸದಲ್ಲಿ ವ್ಯಯವಾಗುತ್ತಿತ್ತು. ಆದರೂ ಕಛೇರಿ ಸಮಯಕ್ಕೆ ಎಂದೂ ತಡವಾಗಿ ಹೋಗುತ್ತಿರಲಿಲ್ಲ. ಕಛೇರಿ ಸಿಬ್ಬಂದಿಯೂ ನನ್ನ ಸಮಯ ಪಾಲನೆಗೆ ಮೆಚ್ಚುಗೆ ಸೂಚಿಸುತ್ತಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕಛೇರಿಯ ಸಿಬ್ಬಂದಿಯವರು ನನ್ನ ಸಮಯ ಪಾಲನೆಯನ್ನು ಸ್ಥಳೀಯ ಉದ್ಯೋಗಿಗಳಿಗೆ ಉದಾಹರಿಸಿ ಹೇಳುತ್ತಿದ್ದರು.

ಡಿಸೆಂಬರ್ ತಿಂಗಳಿನಲ್ಲಿ ಪ್ರತಿ ವರ್ಷ ಕಛೇರಿಯ ಯೋಜನೆಗಳು ತಯಾರಾಗುತ್ತಿದ್ದವು. ಹೊಸ ಶಾಲೆಗಳ ಬೇಡಿಕೆ, ಇರುವ ಶಾಲೆಗಳಿಗೆ ಅವಶ್ಯಕವಾದ ಕೋಣೆಗಳು, ದುರಸ್ಥಿಗೊಳಿಸಬೇಕಾದ ಕೊಠಡಿಗಳು, ನೆಲಸಮ ಮಾಡಬೇಕಾದ ಕೊಠಡಿಗಳು, ಹೀಗೇ ನಾನಾ ರೀತಿಯ ಬೇಡಿಕೆಗಳನ್ನು ಸಕಾರಣವಾಗಿ ಮಾಹಿತಿ ಸಿದ್ಧಪಡಿಸಬೇಕಾಗುತ್ತಿತ್ತು. ಈ ಅವಧಿಯಲ್ಲಿ ಮಾತ್ರ ನನ್ನ ಪರಿಸ್ಥಿತಿ ದೇವರಿಗೇ ಪ್ರೀತಿ. ಈ ತಿಂಗಳುಗಳಲ್ಲಿ ಮನೆ ಮುಟ್ಟುವುದು ರಾತ್ರಿಯ ಒಂದು ಗಂಟೆ, ಎರಡು ಗಂಟೆಯೂ ಆಗುತ್ತಿತ್ತು. ಹಾಗೆಂದು ಕಚೇರಿಗೆ ಹೋಗುವ ವೇಳೆಯಲ್ಲಿ ಯಾವುದೇ ರಿಯಾಯಿತಿ ಇರುತ್ತಿರಲಿಲ್ಲ.

ಇನ್ನು ಎಸ್.ಎಸ್.ಎಲ್.ಸಿ ಪರೀಕ್ಷೆಗಳ ಸಂದರ್ಭದಲ್ಲಿ ಇದಕ್ಕೆ ವ್ಯತಿರಿಕ್ತ ಪರಿಸ್ಥಿತಿ. ರಾತ್ರಿ ೭-೮ ರ ಸುಮಾರಿಗೆ ಮನೆ ತಲುಲಪುತ್ತಿದ್ದೆ. ಮಾರ್ಗಾಧಿಕಾರಿಯಾಗಿ ಪ್ರಶ್ನೆ ಪತ್ರಿಕೆಗಳನ್ನು ಪರೀಕ್ಷಾ ಕೇಂದ್ರಗಳಿಗೆ ಮುಟ್ಟಿಸುವುದು ಈ ಸಂದರ್ಭದಲ್ಲಿ ನನಗೆ ವಹಿಸಿದ ಕೆಲಸ. ಈ ಪ್ರಕ್ರಿಯೆ ಸ್ವಲ್ಪ ದೀರ್ಘ. ಬೆಳಿಗ್ಗೆ ಜಿಲ್ಲಾ ಟ್ರಿಸರಿಯಲ್ಲಿ ಸೇಫ್ ಲಾಕರಿನಲ್ಲಿ ಇರುವ ಪತ್ರಿಕೆ ಬಂಡಲುಗಳನ್ನು ಜಿಲ್ಲಾ ಕೋಶಾಧಿಕಾರಿಗಳ ಸಮ್ಮುಖದಲ್ಲಿ ಪರೀಕ್ಷೆ ಆರಂಭವಾಗುವ ಒಂದು ಗಂಟೆ ಮುಂಚೆ ನಮ್ಮ ಕಚೇರಿಯ ಕ್ಷೇತ್ರಶಿಕ್ಷಣಾಧಿಕಾರಿಗಳು ಪಡೆದು ನಮಗೆ ಹಸ್ತಾಂತರಿಸುತ್ತಿದ್ದರು. ಈ ರೀತಿ ಒಂದು ಗಂಟೆ ಮುಂಚೆ ಪಡೆದ ಪ್ರಶ್ನೆ ಪತ್ರಿಕೆಗಳನ್ನು ಪರೀಕ್ಷಾ ಕೇಂದ್ರಗಳಿಗೆ ಪರೀಕ್ಷೆ ಆರಂಭವಾಗುವ ಅರ್ಧ ಗಂಟೆ ಮುಂಚಿತವಾಗಿ ಕೇಂದ್ರದ ಮುಖ್ಯಸ್ಥರಿಗೆ ಹಸ್ತಾಂತರಿಸಬೇಕು. ನನ್ನ ಜೊತೆ ಬೇರೆ ಬೇರೆ ಮಾರ್ಗಗಳಲ್ಲಿ ಸ್ಥಳೀಯರೂ ಇದ್ದರು. ಆದರೆ ಇವರಿಗೆ ಕಿಂಚಿತ್ತೂ ತೊಂದರೆ ಇರಲಿಲ್ಲ. ಸಮಯ ಪಾಲನೆಯನ್ನು ಮಾಡುವೆನೆಂಬ ಅತಿಯಾದ ನಂಬಿಕೆಯಿಂದ ನನ್ನ ತೊಂದರೆಗಳನ್ನು ಎಷ್ಟೇ ಅಧಿಕಾರಿಗಳ ಮುಂಚೆ ಹೇಳಿಕೊಂಡರೂ ಕೇಳದೆ ನನಗೆ ಈ ಕಾರ್ಯಕ್ಕೆ ಪ್ರತಿ ವರ್ಷ ನಿಯೋಜಿಸುತ್ತಿದ್ದರು. ನೂರು ಕಿ.ಮೀ ದೂರದ ಕೊಟ್ಟೂರಿನಿಂದ ಬೆಳಿಗ್ಗೆ ಕೊಪ್ಪಳಕ್ಕೆ ಆರಕ್ಕೇ ಟ್ರಿಜರಿಯಲ್ಲಿ ಪ್ರಶ್ನೆಪತ್ರಿಕೆಗಳನ್ನು ವಿಂಗಡಿಸಿಕೊಂಡು ನಮ್ಮ ವಾಹನಗಳಿಗೆ ತುಂಬಿಸಿಕೊಂಡು ೯ ಕ್ಕೆ ಹೊರಡಲು ಸಿದ್ಧತೆಯಲ್ಲಿರಬೇಕಾದರೆ ನಾವು ಆರಕ್ಕೆ ಟ್ರಿಜರಿಯಲ್ಲಿರಬೇಕಾಗುತ್ತಿತ್ತು. ಪೇಪರ್ ಹೀಗಾಗಿ ನಾನು ಕೊಟ್ಟೂರಿನಿಂದ ಬೆಳಗಿನ ಮೂರರ ಮೈಸೂರು- ಹೊಸಪೇಟೆ ಬಸ್ಸನ್ನು ಹಿಡಿಯಲೇಬೇಕಾಗುತ್ತಿತ್ತು. ಎರಡು ಗಂಟೆಗೇ ಎದ್ದು ಸ್ನಾನ ಮಾಡಿ ಸರಿಯಾಗಿ ಮೂರಕ್ಕೆ ಬಸ್ ನಿಲ್ದಾಣ ತಲುಪಬೇಕಾಗಿತ್ತು. ಇದನ್ನು ಚಾಚೂ ತಪ್ಪದೇ ನಾಲ್ಕು ವರ್ಷಗಳ ಕಾಲ ಯಶಸ್ವಿಯಾಗಿ ಪೂರೈಸಿದೆ.

ನನ್ನ ಕೊಪ್ಪಳದ ದಂಡಯಾತ್ರೆಯ ನಾಲ್ಕನೇ ವರ್ಷದ ಸಂದರ್ಭದಲ್ಲಿ ನಮ್ಮ ಪಕ್ಕದ ಮನೆಗೆ ಮೂರು ಸಂಸಾರಗಳ ದೊಡ್ಡ ಕುಟುಂಬವೊಂದು ಬಾಡಿಗೆಗೆ ಬಂದಿತು. ಅದಕ್ಕೂ ಮುಂಚೆ ಒಂದು ವರುಷ ಆ ಮನೆ ಪಾಳು ಬಿದ್ದಿತ್ತು. ಕಾರಣವೇನೆಂದರೆ ಆ ಮನೆಯಲ್ಲಿ ವಯಸ್ಕ ಹೆಣ್ಣೊಬ್ಬಳು ನೇಣು ಹಾಕಿಕೊಂಡಿದ್ದಳು. ಈ ವಿಷಯ ಅವರಿಗೂ ಗೊತ್ತಿತ್ತು. ನಮಗೂ ಗೊತ್ತಿತ್ತು. ನಮಗೆ ಪಕ್ಕದಲ್ಲಿದ್ದರೂ ಇದು ಸಮಸ್ಯೆಯಾಗಿರಲಿಲ್ಲವಾದ್ದರಿಂದ ಇದರ ಕುರಿತಾಗಿ ಅವರು ನಮ್ಮನ್ನು ವಿಚಾರಿಸಲಾಗಿ ಸಮಸ್ಯೆ ಏನೂ ಇಲ್ಲ ಎಂದೆವು.

ಆದರೂ ಅವರ ಮನೆಯ ಕೆಲವು ಸದಸ್ಯರಿಗೆ ವಿಶೇಷವಾಗಿ ಸ್ತ್ರೀಯರಿಗೆ ಅನುಮಾನಗಳು ಇದ್ದೇ ಇದ್ದವು. ಕೆಲವು ತಿಂಗಳುಗಳ ನಂತರ ನನ್ನ ಮನೆಯವರ ಮುಂದೆ ಚಿತ್ರ ವಿಚಿತ್ರ ಅನುಭವಗಳಾಗುತ್ತಿರುವ ಬಗ್ಗೆ ಹೇಳಲಾರಂಭಿಸಿದರು. ಮಧ್ಯರಾತ್ರಿ ಯಾರೋ ಓಡಾಡಿದ ಹಾಗೇ.. ಗೆಜ್ಜೆ ಸದ್ದು ಕೇಳಿದ ಹಾಗೇ… ಮಾತನಾಡಿದ ಹಾಗೇ… ಆಗುತ್ತಿದೆ ಎನ್ನುತ್ತಿದ್ದರು.

ಎಸ್.ಎಸ್.ಎಲ್.ಸಿ ಪರೀಕ್ಷೆಯ‌ ನನ್ನ ನಾಲ್ಕನೇ ವರ್ಷದ ಪರೀಕ್ಷೆಗಳು ಆರಂಭವಾಗಿದ್ದವು. ನಾನು ಹೋಗುವ ಸಮಯ ಬರುವ ಸಮಯದ ಅರಿವು ಅವರಿಗಿರಲಿಲ್ಲ. ಒಂದು ಭಾನುವಾರ ಪರೀಕ್ಷೆಗಳಿಗೆ ರಜೆ ಇತ್ತು. ನಮ್ ಇಡೀ ಓಣಿಯಲ್ಲಿಯೇ ಗುಸು‌ ಗುಸು ಆರಂಭವಾಗಿತ್ತು. ರಾತ್ರಿ ಎರಡರ ಸುಮಾರಿಗೆ ಗೇಟಿನ ಸದ್ದಾಯಿತೆಂದೂ… ಯಾರೋ ಕಾಂಪೌಂಡಿನಲ್ಲಿ ಓಡಾಡುತ್ತಿದ್ದುದನ್ನು ನೋಡಿರುವುದಾಗಿ ಅವರು ಮನೆಯ ಸದಸ್ಯರೆಲ್ಲರೂ ಕಣ್ಣಾರೆ ನೋಡಿರುವುದಾಗಿ ಮನೆ ಮನೆಯಲ್ಲೂ ಈ ಸುದ್ದಿ ಹಬ್ಬಿ ಇಡೀ ವಠಾರವೇ ಹೆದರಲಾರಂಭಿಸಿತು. ಕೇವಲ ಸ್ತ್ರೀಯರು ಮಾತ್ರ ಹೇಳುತ್ತಿದ್ದ ಈ ಘಟನೆಗಳಿಗೆ ಪುರುಷರೂ ಸಾಕ್ಷಿಯಾದದ್ದರಿಂದ ಎಲ್ಲರಿಗೂ ನಂಬಿಕೆ ಬಂದು ರೆಕ್ಕೆ ಪುಕ್ಕದೊಂದಿಗೆ ಪಕ್ಕದ ರಸ್ತೆ ಅದರ ಪಕ್ಕ ಸುದ್ದಿ ಹೋಗಲಾರಂಭಿಸಿತ್ತು. ಇದು ನನ್ನ ಗಮನಕ್ಕೆ ಬಂದೇ ಇರಲಿಲ್ಲ.


ನಾನು ಪಕ್ಕದ ಮನೆಯ ಶಿಕ್ಷಕರನ್ನು ವಿಷಯವೇನೆಂದು ಕೇಳಲಾಗಿ ಇನ್ನೂ ಸ್ವಲ್ಪ ಉಪ್ಪು ಖಾರಗಳೊಂದಿಗೆ ಕಥೆಯನ್ನು ಸ್ವಾರಸ್ಯಕರವಾಗಿ ಹೇಳಿದರು. ನಾನು ಬಿದ್ದು ಬಿದ್ದೂ ನಗಲಾರಂಭಿಸಿದೆ. ಅವರಿಗೆ ನನ್ನ ದಂಡ‌ಯಾತ್ರೆಯ ಕತೆ ಹೇಳಿ ಆ ಗೇಟ್ ನ ಸದ್ದು ನಾನೇ ಮಾಡಿದ್ದು… ಇನ್ನೂ ದೆವ್ವ ಬೇರಾರೂ ಅಲ್ಲ ನಾನೇ ಎಂದಾಗ ಅವರೂ ನಗತೊಡಗಿದರು.