ಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್‌ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ ಪತ್ರವಿದೆಯಲ್ಲ ಅದು ಒಬ್ಬ ಆದರ್ಶ ತಂದೆ ತನ್ನ ಮಗಳ ಕುರಿತ ಅಪರಿಮಿತ ಅಪ್ಯಾಯತೆ ಮತ್ತು ಕಾಳಜಿಯಿಂದ ಮಾಡಿದ ಕೆಲಸವೆಂದೇ ನನ್ನ ದೃಢಭಾವನೆ. ಈ ಪತ್ರಗಳು ಒಮ್ಮೊಮ್ಮೆ ಖಂಡಕಾವ್ಯದಂತೆಯೂ ಭಾಸವಾಗಿದ್ದು ನನಗೆ ಆಶ್ಚರ್ಯ ಹುಟ್ಟಿಸಿದೆ.
ಎಂಕೆ ಗಾಂಧಿ ರಚಿತ “ಪ್ರಿಯ ಮೀರಾ” ಬಾಪು ಮಗಳಿಗೆ ಬರೆದ ಪ್ರೇಮ ಪತ್ರಗಳನ್ನು ಮಂಜುನಾಥ್‌ ಚಾಂದ್‌ ಕನ್ನಡಕ್ಕೆ ತಂದಿದ್ದು ಈ ಕೃತಿಯ ಕುರಿತು ದೀಪಾ ಗೋನಾಳ ಬರಹ

ಗಾಂಧಿ ಹೆಸರಿಟ್ಟು ಚಹಾ ಮಾರಿದರೂ ಭರ್ಪೂರ ವ್ಯಾಪಾರ ಆಗುತ್ತೆ. ಅಲ್ಲಿ ಚಹಾಗಿಂತ ಅಂಗಡಿ ಹೆಸರನಲ್ಲಿರೊ ಗಾಂಧಿ ಎಲ್ಲರಿಗೂ ಚಿರಪರಿಚಿತ ಹೆಸರು. ದೇಸಿಯರಿಗೆಷ್ಟು ಪರಿಚಿತವೋ ಅಷ್ಟೆ ವಿದೇಶಿಗರಿಗೂ. ಗಾಂಧಿಯನ್ನ ಬೆಂಬಲಿಸಿ ಅನುಸರಿಸಿ ಅವರ ದಾರಿಯಲ್ಲಿ ನಡೆದ ಭಾರತೀಯರಷ್ಟೆ ವಿದೇಶಿಗರು ಇದ್ದಾರೆಂಬುದು ಬಹುತೇಕ ಬಹಳಷ್ಟು ಜನರಿಗೆ ತಿಳಿಯದು.

‌‌‌‌ ಗಾಂಧಿಜಿಯವರನ್ನ ಬಲುಬೇಗ ಅನುಸರಿಸಿ ನಡೆದುಬಿಡಬಹುದು ಅಂತ ಯೋಚಸ್ತಿವಿ, ಗಾಂಧೀಜಿ ಅಂದ್ರೇನೆ ಸರಳ ಅಂತ.‌ ಆ ಸರಳದ ಒಳಗೆ ಕಡಿಮೆ‌ ಮಾತು, ಕಡಿಮೆ ಊಟ, ಕಡಿಮೆ ಉಡುಪು, ದೀರ್ಘ ನಡಿಗೆ, ಉದಾತ್ತ ವಿಚಾರ, ಅಹಿಂಸೆ, ಅನುಕ್ಷಣವೂ ಸತ್ಯದ ಸಾಂಗತ್ಯ. ಇದೆಲ್ಲ ಒಂದು ಎರಡು ದಿನಕ್ಕೆಲ್ಲ ನಮಗೆ ವಿಪರೀತ ಸುಸ್ತು ಮಾಡುವ ಸಗಟು. ಗಾಂಧಿ ಸಹವಾಸ ಸಾಕು ಫೋಟೊ ಇಟ್ಟು ಹೂ ಏರಿಸಿ ಮಹಾತ್ಮಾ ಕೀ ಜೈ ಅಂದು ಎದ್ದಬಿಡೋದೆ. ಆದರೆ ಮೆಡಲಿನ್ ಸ್ಲೇಡ್ ನಮ್ಮ ಹಾಗೆ ಸುಸ್ತಾದ್ರು ತನ್ನ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ.

ಮೆಡಲಿನ್ ಮೀರಾ ಆದದ್ದು, ಗಾಂಧೀಜಿಯವರ ಮಾನಸ ಪುತ್ರಿಯಾದದ್ದು ಆ ಮೂಲಕ ಗಾಂಧೀಜಿ ಅವರ ಬದುಕಿನಲ್ಲಿ, ಅವರ ನಮ್ರ ಹೋರಾಟಗಳಲ್ಲಿ ಎಂದೂ ತೆಗೆದು ಹಾಕದ ಒಂದು ಮುಖ್ಯ ಪಾತ್ರವಾಗಿದ್ದು ಈಗ ಇತಿಹಾಸ.

ಈ ಇತಿಹಾಸವನ್ನು ಪಠ್ಯಗಳಲ್ಲಿ ಓದೋದು ಗದ್ಯಗಳಾಗಿ ಒಳಗಿಳಿಸೋದು ನನಗಂತು ಹಾಗಲಕಾಯಿಯಷ್ಟು ಕಹಿ. ಆದರೆ ಪತ್ರಗಳಾಗಿ ಕೊಟ್ಟಾಗ ಮೈತುಂಬ ಕೌತುಕ ತುಂಬಿಕೊಂಡು ಕೂತು ಓದಿದಿನಿ. ಇದು ಯಾವತ್ತು ಬರೆದದ್ದು, ಇಲ್ಲಿ ನಮೂದಿಸಿರುವ ಘಟನೆ+ದಿನಾಂಕ ಓ ಇಂತದ್ದು ಅಂತೆಲ್ಲ ಪತ್ರದಲ್ಲಿ ನಮೂದಿಸಿದ ಇಸವಿಗಳನ್ನ ಪಾತ್ರಗಳನ್ನ ಇಟ್ಕೊಂಡು ನನ್ನದೇ ಲೆಕ್ಕಾಚಾರದಲ್ಲಿ ಓದುತ್ತಾ ಹೋಗಿದ್ದಿನಿ.

ಒಂದಷ್ಟು ಪ್ರಶ್ನೆಗಳು ಉದ್ಭವಿಸಿದಾಗ ಅನುವಾದಕರ ತಲೆ ತಿಂದಿದಿನಿ. ಒಬ್ಬ ಮನುಷ್ಯ ತನ್ನ ಖಾಸಗಿ ಪತ್ರಗಳನ್ನ ‘ಇದನ್ನ ಆಶ್ರಮದ ಎಲ್ಲರಿಗೂ ಓದಲು ಕೊಡು’ ಎನ್ನಲು ಸಾಧ್ಯವಿದ್ದರೆ ಅದು ಮಹಾತ್ಮ ಗಾಂಧಿಯವರು ಮಾತ್ರ. ಮೀರಾಗೆ ಬರೆದ ಪತ್ರಗಳು ಆಕೆಗಾಗಿ ಬರೆದ ಖಾಸಗಿ ಪತ್ರಗಳೇ ಆಗಿದ್ದರೂ ಅದನ್ನ ಆಕೆ ಎಲ್ಲರೊಂದಿಗೆ ಹಂಚುವಷ್ಟು ಉದಾರವಾಗಿ ಮಗಳನ್ನ ಬೆಳೆಸುತ್ತಾ ಬಂದದ್ದು ಮಹಾತ್ಮರು. ಕಡೆಗೆ ಆಕೆ ಗಾಂಧಿ ತನಗೆ ಬರೆದ ಪತ್ರಗಳನ್ನ ಪ್ರಕಟಿಸುವಷ್ಟು ಉದಾತ್ತವಾದದ್ದು ಗಾಂಧಿಯವರೊಂದಿಗೆ ಕಾಲು ಶತಮಾನಗಳ ಸಹವಾಸದಿಂದ ಮಾತ್ರ.

(ಬಾಪೂ ಮತ್ತು ಮೀರಾ)

ಮೊದಮೊದಲು ಈ ಪತ್ರಗಳನ್ನ‌ ಓದುತ್ತಿದ್ದಾಗ ನನ್ನಲ್ಲಿ ಹೊರಟ ಉಲ್ಲಾಸದ ಬುಗ್ಗೆಗೆ ಎಣೆಯೆ ಇಲ್ಲ. ಅವತ್ತೆ ನಾಲಕ್ಕು ಅಂತರ್ದೇಶಿ ತಂದು ನಾಲ್ಕು ಜನ ಆಪ್ತರಿಗೆ ಹಸ್ತಾಕ್ಷರದಲ್ಲಿ ಪತ್ರ ಬರೆದು ಕೆಂಪುಡಬ್ಬಿ ಬಾಯಿಗೆ ಹಾಕೆ ಬಿಟ್ಟೆ. ಎಷ್ಟು ಚೆಂದ ಅಲಾ…

ಪ್ರಿಯ,
ಸೋ ಆ್ಯಂಡ್ ಸೋ ನಾನು ಇಲ್ಲಿ ಕ್ಷೇಮ.. ಅಲ್ಲಿ ನೀನು ಕ್ಷೇಮವೆಂದು ಭಾವಿಸುತ್ತೇನೆ. ಇಲ್ಲಿ ಹೀಗಿಗೆ ಆಯಿತು. ನಾನು ಅದಕ್ಕೆ ಹೀಗೆಗೆ ಪ್ರತಿಕ್ರಿಯಿಸಿದೆ. ಮಳೆ ಇಷ್ಟಿಷ್ಟು. ಬಿಸಿಲು ಇಷ್ಟಿಷ್ಟು. ಗುಡ್ಡ ಉರಳಿದ್ದು ದಿನಪತ್ರಿಯಲ್ಲಿ ಓದಿ ಹೃದಯವೇ ಒಡೆದಂತಾಯ್ತು. ಕೇರಳದಲ್ಲಿ ವಿಪರೀತ ಮಳೆ. ನೋಡಿದ್ಯಾ ವಾರ್ತೆ? ಅಷ್ಟು ಚೆಂದದ ನಾಡು. ಮಧುಚಂದ್ರಕ್ಕೆ ಹೇಳಿ ಮಾಡಿಸಿದ ಬೀಡು. ಈಗ ಎಷ್ಟು ರಣರಣ ಅಂತಿದೆ ನೋಡು. ಬದುಕು ಎಷ್ಟು ಅಸ್ತಿರ‌ ಆದರೂ ಅತ್ತೆ ಆಸ್ತಿ ವಿಷಯವಾಗಿ ತುಂಬ ಕಹಿಯಾಗಿ ನಡೆದುಕೊಂಡರು ಇಲ್ಲಿಂದ ಯಾವ್ಯಾವುದನ್ನ ಹೊತ್ತುಕೊಂಡು ಹೋಗುವುದು ಹಾಗಾದರೆ!? ಕೊನೆಗೆ ಅಕ್ಕ ಬಾರದು ಬಪ್ಪುದು ಬಪ್ಪುದು ತಪ್ಪುದು ಎಂದು ಗಟ್ಟಿ ನಿರ್ಧಾರ ಮಾಡಿದಳು. ಸಾರಾ ಶಗುಫ್ತಾಳ ಜೀವನ ಮತ್ತು ಕಾವ್ಯ ಓದಿದೆ ಎದೆಯೊಳಗೆ ನಟ್ಟ ಮುಳ್ಳೊಂದು ಹಾಗೆ ಉಳಿದಂತಾಗಿದೆ.

ಶಿವಿಗೆ ಗಂಡು ಮಗುವಾಯಿತು. ಮದುವೆನೆ ಆಗ್ತಾಳಿಲ್ಲೊ ಈ ನಮ್ಮ ಶಿವಿ ಅನ್ಕೊಂಡಿದ್ದೆ. ಈಗ ಮಡಿಲಲ್ಲಿ ಮಗ ಪಕ್ಕದಲ್ಲಿ ಗಂಡ ನೋಡಬೇಕು ಅವಳ ಹಿಗ್ಗನ್ನ. ಕೆಂಪು ದಾಸಾವಾಳ ಮೊನ್ನೆ ಮಳೆಗೆ ಮೊಣಕಾಲ ತನಕ‌ ಬೆಳದಿದೆ ಮೊಗ್ಗು ಹಿಡಿದಿದೆ ಹೂವಿಗಾಗಿ ಕಾಯುತ್ತಿರುವೆ.

ಇನ್ನು ಎಷ್ಟೊಂದು ಹೇಳುವುದಿದೆ. ಸಿಕ್ಕಾಗ ಮಾತನಾಡುವ. ಪತ್ರ ಮುಟ್ಟಿದ ಕೂಡಲೇ ಉತ್ತರವಾಗಿ ಒಂದು ಪತ್ರ ಬರೆಯುತ್ತಿ ಎಂದು ಕಾಯುವೆ.

ಇಂತಿ‌ ನಿನ್ನ
ದೀ…

ಈ ಪತ್ರಗಳ ಓದಿನ ದೆಸೆಯಿಂದ ನನ್ನ ಹುಚ್ಚಾಟಗಳು ಹೆಚ್ಚಾದವು. ಅವು ಪ್ರೀತಿ ಹಂಚುವ ಹುಚ್ಚಾಟಗಳು. ನಿರುಪದ್ರವಿ ಹುಚ್ಚಾಟಗಳು. ಹೀಗೆ ಬಾಪು ಮೀರಾಗೆ ಬರೆದ ಪತ್ರಗಳು ಒಮ್ಮೊಮ್ಮೆ ದೀರ್ಘ, ಒಮ್ಮೆಮ್ಮೆ ಸಂಕ್ಷಿಪ್ತ, ಒಮ್ಮೊಮ್ಮೆ ಕರುಳು ಹಿಂಡುವಷ್ಟು ನೋವಿನ ಸಂಗತಿ ತುಂಬಿದ ಪತ್ರಗಳು. ಒಮ್ಮೊಮ್ಮೆ ಜೈಲಿನಲ್ಲಿ ಕೂತು ಬರೆದ ಪತ್ರಗಳು, ಉಪವಾಸದ ದಿನ, ಖಾದಿ ನೇಯ್ದು ನೇಯ್ದು ಮೊಣಕೈ ನೋವು ಬಂದು ವೈದ್ಯರು ಸಂಪೂರ್ಣ ಕೈಗೆ ವಿಶ್ರಾಂತಿ ಹೇಳಿ ಮತ್ತೊಬ್ಬರ ಹತ್ತಿರ ಹೇಳಿ ಬರೆಸಿದ ಪತ್ರಗಳು. ಹಡಗಿನಲ್ಲಿ ಕೂತು ಬರೆದ ಪತ್ರಗಳು, ಸಾವಿನ‌ ಸುದ್ದಿಯ ಪತ್ರಗಳು, ಬೆಕ್ಕು ಮರಿ ಹಾಕಿದ ಪತ್ರಗಳು, ಗುಬ್ಬಿ ಗೂಡು ಕಟ್ಟಿ ಸಂಸಾರ ಬೆಳೆಸಿದ ಪತ್ರಗಳು. ಜೈಲಿನಿಂದ ಜೈಲಿಗೆ ಪತ್ರಗಳು. ಮಲೇರಿಯಾ ಪಿಡೀತ ಮಗಳಿಗೆ ಧೈರ್ಯವಾಗಿರುವಂತೆ ಮಾಡುವ ಪತ್ರಗಳು. ಮೀರಾ ತನ್ನ ಸುತ್ತಲಿರುವ ಜನರಿಗೆ ಹೇಗೆ ಮಾರ್ಗದರ್ಶನ ಮಾಡಬೇಕೆಂಬ ಪತ್ರಗಳು. ಮೌನದ ದಿನ ಬರೆದ ಪತ್ರಗಳು, ಉಪನಿಷದ್‌ಗಳನ್ನು ಭಾಷಾಂತರಿಸಿ ಬರೆದು ಕಳಿಸಿದ ಪತ್ರಗಳು. ಮಣ್ಣಿನ ಕಾಟೇಜ್‌ಗಳನ್ನು ನಿರ್ಮಿಸಲು ಮಾರ್ಗದರ್ಶನದ ಪತ್ರಗಳು. ಆಡಿನ ಹಾಲು ಕುಡಿದು ಮಗಳು ಗಟ್ಟಿಯಾಗಲಿ‌ ಎಂಬ ಆಶಯದ ಪತ್ರ, ಕುದುರೆ ಸಾಕಿ ಅದನ್ನ ತನ್ನ ಆಧುನಿಕ ಸ್ಕೂಟಿತರ ಬಳಸಿಕೊಳ್ಳಿತ್ತಿರುವ ಮಗಳ ಕುರಿತಾಗಿ ಹೆಮ್ಮೆಯ ಪತ್ರ. ಎಷ್ಟೊಂದು ಬಗೆಯ ಪತ್ರಗಳು.

ಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್‌ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ ಪತ್ರವಿದೆಯಲ್ಲ ಅದು ಒಬ್ಬ ಆದರ್ಶ ತಂದೆ ತನ್ನ ಮಗಳ ಕುರಿತ ಅಪರಿಮಿತ ಅಪ್ಯಾಯತೆ ಮತ್ತು ಕಾಳಜಿಯಿಂದ ಮಾಡಿದ ಕೆಲಸವೆಂದೇ ನನ್ನ ದೃಢಭಾವನೆ. ಈ ಪತ್ರಗಳು ಒಮ್ಮೊಮ್ಮೆ ಖಂಡಕಾವ್ಯದಂತೆಯೂ ಭಾಸವಾಗಿದ್ದು ನನಗೆ ಆಶ್ಚರ್ಯ ಹುಟ್ಟಿಸಿದೆ.

(ಮಂಜುನಾಥ್‌ ಚಾಂದ್‌)

ಭಾರತದಲ್ಲಿ ವಿಪರೀತ ಬಡತನ, ದಾಸ್ಯ, ಅನಾರೋಗ್ಯ ಜೊತೆಗೆ ಸ್ವಾತಂತ್ರ್ಯ ಹೊರಾಟ ನಡೆದ ಸಂದರ್ಭದಲ್ಲಿ ಅಪ್ಪ ಮಗಳು ತಮ್ಮ ಜೀವಿತವನ್ನೆ ದೇಶಕ್ಕೆ ಮುಡಿಪಿಟ್ಟು ಬದುಕುತ್ತ ಇದ್ದ ದಿನಗಳ ಪತ್ರಗಳಿವು. ಇವುಗಳನ್ನ ಓದುವ ಯಾರಾದರೂ ಮಾನವೀಯತೆಯ, ಶಾಂತಿಯ, ಸತ್ಯದ, ರಾಷ್ಟ್ರಪ್ರೇಮದ ಹಾದಿಯಲ್ಲಿ ಹೊರಡಲು ಅಣಿಯಾಗುತ್ತಾರೆ. ಅಷ್ಟರ ಮಟ್ಟಿಗೆ ಈ‌ ಪತ್ರಗಳು ಓದುಗನ ಮನಸ್ಪರ್ಷಿಸುತ್ತವೆ.

ಎರಡೇ ಸಾಲಿನ ಪತ್ರಗಳಿಂದ ಹಿಡಿದು ಪುಟಪುಟಗಳನ್ನು ದಾಟುವಷ್ಟು ದೀರ್ಘ ಪತ್ರಗಳು ಇವೆ. ಆದರೆ ಎಂತ ಸಂದರ್ಭದಲ್ಲೂ ಪತ್ರ ಬರೆಯಲೇಕೆಂಬ ಬದ್ಧತೆ ಇದೆಯಲ್ಲ ಅದು ಯಾವತ್ತಿಗೂ ಮಾನವ ಸಂಬಂಧಗಳಿಗೆ ಅದರ ಉಳಿವಿಗೆ ಆದರ್ಶಪ್ರಾಯವೆನ್ನಿಸುವಂತದು. ತ್ವರಿತ ನಿರ್ಧಾರಗಳನ್ನ ತಿಳಿಸಬೇಕು ಅನ್ನಿಸಿದ ಸಂದರ್ಭದಲ್ಲಿ ಟೆಲಿಗ್ರಾಂ ಸಹ ಕಳುಹಿಸಿದ್ದಾರೆ ಬಾಪು, ಕೆಲವು ಟಿಲಿಗ್ರಾಂಗಳು ಇಲ್ಲಿವೆ.

ಇದೆಲ್ಲವನ್ನ ಮೂಲ ಪತ್ರಗಳಿಗೆ ಚೂರು ಚ್ಯುತಿಬಾರದಂತೆ ಅತೀವ ಜಾಗರೂಕತೆಯಿಂದ ಎಂಟು ಹತ್ತು ತಿಂಗಳು ಈ ಪತ್ರಗಳನ್ನೆ ಧ್ಯಾನಿಸುತ್ತ ಅನುವಾದಕ್ಕೆ ಕುಳಿತ ಚಾಂದ್ ಸರ್‌ಗೆ ಧನ್ಯವಾದ ಹೇಳಬೇಕು. ಅವೆಲ್ಲ ಲ್ಯಾಟಿನ್ ಇಂಗ್ಲಿಷಿನಿಂದ ಕನ್ನಡಕ್ಕೆ ಬಂದ ದಾರಿ ಎಷ್ಟೊಂದು ಸಮಯ ಸಂಯಮ ಬೇಡಿತ್ತು ಅನ್ನುವುದು ಅವರಿಗೆ ಮಾತ್ರ ತಿಳಿದ ವಿಷಯ.

ಈ ಪತ್ರಗಳಿಗೆ ಯಾರಿಂದಲೂ ಕೃತಿ ಪರಿಚಯದ ಅಗತ್ಯವಿಲ್ಲ. ಇವೆಲ್ಲ ಕಳೆದ ಎಪ್ಪತ್ತು ಎಂಬತ್ತು ವರ್ಷಗಳಷ್ಟು ಹಳೆಯವು. ಮೊದಲ ಸಲ ಕನ್ನಡದ ಅಕ್ಷರಗಳಾಗಿ ಮಗ್ಗಲು ಬದಲಿಸಿವೆ. ಇವುಗಳನ್ನ ಓದುವುದು ನಮ್ಮ ಜೀವಮಾನದ ಖುಷಿಗಳಲ್ಲಿ ಒಂದು ಎಂದೇ ನಾನು ಭಾವಿಸುವೆ. ನಮ್ಮ ಖಾಸಗಿ ಪುಸ್ತಕ ಸಂಗ್ರಹದಲ್ಲಿ ಈ ಪತ್ರಗಳಿಗೆ ಜಾಗ ಕೊಡುವುದು ಒಂದು ಹೆಮ್ಮೆ. ಅಪ್ಪನಾಗಿ/ಅಮ್ಮನಾಗಿ/ಪೋಷಕರಾಗಿ ನಾವು ಬದುಕಿನಲ್ಲಿ ಮಾಡಿದ ಪ್ರಯೋಗಗಳನ್ನ ಅವುಗಳ ಪರಿಣಾಮಗಳನ್ನ ಮಕ್ಕಳಿಗೆ ದಾಟಿಸಿದರೆ ನಮ್ಮ ಮಕ್ಕಳ ಬದುಕಿನ ಅಷ್ಟು ಸಮಯವನ್ನ ಉಳಿಸಿಕೊಟ್ಟಂತೆ. ಅದನ್ನ ದಾಟಿಸುವುದು ಹೇಗೆ ಎಂಬ ಪ್ರಶ್ನೆಗೆ ಈ ಪತ್ರಗಳು ಉತ್ತರವಾಗಬಲ್ಲವು. ಗಾಂಧಿ‌ ಅದಕ್ಕೊಂದು ಸಿದ್ಧಮಾದರಿ ಹಾಕಿಕೊಟ್ಟಿದ್ದಾರೆ.

ಮತ್ತದೆ ಮಾತು ಗಾಂಧಿ ಹೆಸರಿನಲ್ಲಿ ಸಾಕಷ್ಟು ಸ್ಮಾರಕಗಳು, ಭವನಗಳು, ಪಾರ್ಕು, ಕಟ್ಟಡ ಇತ್ಯಾದಿ ಏನೆಲ್ಲ ಇವೆ. ಗಾಂಧಿ ಅನ್ನೊ ಒಂದೇ ಪದದ ಆಕರ್ಷಣೆಯಿಂದ‌. ಈ ಪುಸ್ತಕ ಆ ಆಕರ್ಷಣೆ ಅದೆಲ್ಲವನ್ನ ಮೀರುವಂತಾಗಲಿ. ಕನ್ನಡಿಗರ ಮನೆ ಮನ ತಲುಪಲಿ.

(ಕೃತಿ: ಪ್ರಿಯ ಮೀರಾ (ಬಾಪೂ  ಮಗಳಿಗೆ ಬರೆದ ಪ್ರೇಮ ಪತ್ರಗಳು), ಮೂಲ: ಎಂ.ಕೆ. ಗಾಂಧಿ, ಕನ್ನಡಕ್ಕೆ: ಮಂಜುನಾಥ್‌ ಚಾಂದ್‌, ಪ್ರಕಾಶಕರು: ವೀರಲೋಕ ಪುಸ್ತಕ, ಬೆಲೆ: 425/-)