ಅಂದಿನ ಸಾಮಾನ್ಯಜನರ ಸಾವಯವ ಜೀವನ ಈಗ ಒಂದು ಸಮುದಾಯ ಸಮಷ್ಠಿಪ್ರಜ್ಞೆಯಾಗಿ ಮೂಡಿದೆ. ಮಾದರಿಯಾಗಿ ಮೂಡುತ್ತಿದೆ. ನಮ್ಮದೇ ಸ್ವಾಯತ್ತತೆಯಿಂದ ಮನೆಮಟ್ಟಿಗೆ ನಾವು ಆಹಾರವನ್ನು ಬೆಳೆಸುವ ನಿರ್ಧಾರದಿಂದ ಹಿಡಿದು ನಮ್ಮ ನೆಲದ, ನಾಡಿನ, ಮೂಲಜರ ಆಹಾರವೇನಾಗಿತ್ತು, ಅದರ ಬಗ್ಗೆ ನಮಗೆಷ್ಟು ತಿಳಿದಿದೆ, ಆ ಆಹಾರ ಬೆಳೆಗಳ ವಿಧಗಳನ್ನು ಪುನರುಜ್ಜೀವಿಸಬಹುದೆ ಎನ್ನುವ ಮಾತುಕತೆಗಳು ಸಮುದಾಯ ಅಭಿವೃದ್ಧಿಯ ಸಂಕೇತ. ಇಂತಹ ಮಾತುಕತೆಗಳಿಂದ ನಮ್ಮ ನಂಬಿಕೆಗಳು, ಮನೋಭಾವ, ಚರ್ಯೆಗಳಲ್ಲಿ ಬದಲಾವಣೆ ಬರುತ್ತದೆ. ಇದರಿಂದ ಪರಿಸರಕ್ಕೆ, ನಮಗೆ ಒಳ್ಳೆಯದು. ಆಸ್ಟ್ರೇಲಿಯಾದಲ್ಲಿ ಎಡಿಬಿಲ್ ಗಾರ್ಡನರ್ಸ್ – ಕೈತೋಟಿಗರು ಇದನ್ನು ಮಾಡುತ್ತಿದ್ದಾರೆ. ಇದು ಹೆಮ್ಮೆಯ ವಿಷಯ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ
ಪ್ರಿಯ ಓದುಗರೆ,
ಈ ‘ಆಸ್ಟ್ರೇಲಿಯಾ ಪತ್ರ’ ದ ಹಿಂದಿನ ಅಂಕಣದಲ್ಲಿ ಸದ್ಯ ನಾವೆಲ್ಲಾ ಅನುಭವಿಸುತ್ತಿರುವ ಇಂಧನ ಪೂರೈಕೆಯಲ್ಲಿನ ಅಭಾವ ಮತ್ತದರ ಬಹುಮುಖ ಪರಿಣಾಮಗಳ ಕುರಿತು ಪ್ರಸ್ತಾವಿಸಿದ್ದೆ. ಆಸ್ಟ್ರೇಲಿಯಾದಲ್ಲಿ ನಮ್ಮ ದಿನನಿತ್ಯ ಜೀವನದ ಆಗುಹೋಗುಗಳಲ್ಲಿ ನಾವು ಮಾಡಿಕೊಳ್ಳುತ್ತಿರುವ ಅಲ್ಪಸ್ವಲ್ಪ ಮಾರ್ಪಾಡುಗಳ ಬಗ್ಗೆ ಹೇಳಿದ್ದೆ. ಉದಾಹರಣೆಗೆ ಪೆಟ್ರೋಲ್, ಡೀಸೆಲ್ ಅಭಾವ ಮತ್ತು ಬೆಲೆಯೇರಿಕೆ ಕಾರಣದಿಂದ ಈಸ್ಟರ್ ಹಬ್ಬ ಮತ್ತು ಶಾಲಾ ರಜೆಯ ಎರಡು ವಾರಗಳಲ್ಲಿ ದೂರ ಪ್ರಯಾಣಕ್ಕೆ ಕೊಕ್ ಬಿದ್ದದ್ದು.
ಇವೆಲ್ಲಾ ಸಾಕಾಗಿದೆ. ಅಮೆರಿಕಾ-ಇಸ್ರೇಲ್-ಇರಾನ್ ಯುದ್ಧ, ಹೊರ್ಮುಜ್ ಜಲಸಂಧಿಯನ್ನು ಮುಚ್ಚುವ-ತೆರೆಯುವ ಮಾತುಕತೆ, ಕದನವಿರಾಮ ಕಥನ, ಟ್ರಂಪಣ್ಣನ/ ಅವರ ಬಾಲಗಳ ಬಾಯಿಂದ ಉದುರುವ ಅಸಹ್ಯ ಬೆದರಿಕೆ, ಟ್ರಂಪಣ್ಣನಿಗೆ ಡೋಂಟ್ ಕೇರ್ ಹೇಳಿ ಕೊಲ್ಲುವುದೇ ತನ್ನ ಜೀವನದ ಪರಮಧ್ಯೇಯ ಎನ್ನುತ್ತಾ ದಿನಕಳೆಯುತ್ತಿರುವ ಆ ಇಸ್ರೇಲ್ ದೇಶದ ನಾಯಕ, ಇವೆಲ್ಲವನ್ನೂ ನೋಡುತ್ತಾ ವೀಕ್ಷಕರಾಗಿರುವ ಸಮಯಸಾಧಕ ಯುರೋಪಿಯನ್ ಯೂನಿಯನ್ ದೇಶಗಳು … ಇವೆಲ್ಲವೂ ಮರೆಯಾಗಲಿ, ನಮ್ಮ ಇವತ್ತಿನ ದಿನ ಹಿಂಸೆ-ಯುದ್ಧ ಇಲ್ಲದ ನೆಮ್ಮದಿಯ ದಿನವಾಗಲಿ.
ಆಶಾಭಾವ, ಹಾರೈಕೆ ಇರುವುದು ಮನುಷ್ಯರ ಸಹಜಗುಣ. ನೆಮ್ಮದಿ ಇರಲಿ ಎಂದು ಹಾರೈಸುತ್ತಲೇ ನಾವೆಲ್ಲಾ ಪೆಟ್ರೋಲ್-ಡೀಸೆಲ್ ಇದೆಯೇ, ಎಲ್ಲಿದೆ, ಎಷ್ಟು ಸಿಗುತ್ತದೆ, ಉದ್ದದ ಕ್ಯೂ ಇದೆಯೇ ಎಂದೆಲ್ಲಾ ಮಾತನಾಡುತ್ತಿದ್ದೀವಿ. ನಿನ್ನೆ ತಾನೆ ನಮ್ಮ ಪ್ರಧಾನಮಂತ್ರಿ ಆಂತೋನಿ ಆಲ್ಬಾನೀಸಿ ಸಿಂಗಾಪುರದ ಪ್ರಧಾನಮಂತ್ರಿಯನ್ನು ಭೇಟಿಯಾಗಿ, ಮಾತುಕತೆ ನಡೆಸಿ, ಇಂಧನಪೂರೈಕೆ ವಿಷಯದಲ್ಲಿ ಪರಸ್ಪರ ಸಹಾಯ, ಸಹಕಾರ ಕೊಡುವ ಆಶಾದಾಯಕ ಒಪ್ಪಂದಕ್ಕೆ ಬಂದಿದ್ದಾರೆ. ಇದೆ ರೀತಿ ಅವರು ಆಸ್ಟ್ರೇಲಿಯಾ ಇರುವ ಏಷ್ಯಾ-ಪೆಸಿಫಿಕ್ ಭೂವಲಯದಲ್ಲಿರುವ ಇತರ ದೇಶಗಳ ನಾಯಕರ ಜೊತೆ ಮಾತನಾಡುತ್ತಾ ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವ ಮಂತ್ರವನ್ನು ಜಪಿಸುತ್ತಿದ್ದಾರೆ. ಪ್ರಧಾನಿ ಆಲ್ಬಾನೀಸಿ ಅವರು ಆಸ್ಟ್ರೇಲಿಯಾವು ಎಲ್ಲದಕ್ಕೂ ದೂರದ ಬ್ರಿಟನ್, ಅಮೆರಿಕಾ ಮತ್ತು ಯೂರೋಪ್ ರಾಷ್ಟ್ರಗಳನ್ನು ಅವಲಂಬಿಸಬೇಕು ಎನ್ನುವ ನಂಬಿಕೆಯಿಂದ ದೂರ ಸರಿದಿರುವುದು ಉತ್ತಮ ಬೆಳವಣಿಗೆ. ಅದರ ಜೊತೆಗೆ ಏಷ್ಯಾ-ಪೆಸಿಫಿಕ್ ವಲಯದ ನೆರೆರಾಷ್ಟ್ರಗಳ ಜೊತೆ ಆಸ್ಟ್ರೇಲಿಯಾದ ಸಂಬಂಧವನ್ನು ಬಲಪಡಿಸುತ್ತಿರುವುದು ಶ್ಲಾಘನೀಯ.
ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವುದು ಚಿಕ್ಕಚಿಕ್ಕ ಕಾರ್ಯಗಳಿಂದ, ನಂಬಿಕೆಗಳಿಂದ ಸಾಬೀತಾಗುತ್ತದೆ. ಉದಾಹರಣೆಗೆ, ಸರಬರಾಜು ಕುಸಿತದಿಂದ ಏರುತ್ತಿರುವ ತರಕಾರಿ-ಹಣ್ಣುಗಳ ಬೆಲೆಯಿಂದ ಚಿಂತಿತರಾಗಿ ಜನರು ಮನೆಯಲ್ಲೆ ಒಂದಷ್ಟು herbs, ಸಾಲಾಡ್ ಸೊಪ್ಪು, ಸಣ್ಣಪುಟ್ಟ ಕಾಯಿಪಲ್ಲೆಗಳನ್ನು ಬೆಳೆಯುವ ನಿರ್ಧಾರ ಮಾಡಿರುವುದು. ಈ ನಿರ್ಧಾರಕ್ಕೆ ಪುಷ್ಟಿ ಕೊಡುತ್ತಿರುವುದು ಸಮುದಾಯ- ಆಧಾರಿತ edible gardeners. ನಾನು ಇವರನ್ನು ಕೈತೋಟಿಗರು ಎಂದು ಕರೆಯುತ್ತೀನಿ. ತಂತಮ್ಮ ಮನೆಗಳ ಅಂಗಳದಲ್ಲಿ, ಬಾಲ್ಕನಿಯಲ್ಲಿ ಇವರು ಸಣ್ಣಪುಟ್ಟದಾಗಿ ಆಹಾರವನ್ನು ಬೆಳೆಯುತ್ತಾರೆ. ಇದೇನೂ ಹೊಸ ವಿಷಯವಲ್ಲ. ಮನುಷ್ಯರ ನಾಗರಿಕತೆಗಳ ವಿಕಾಸ, ಅಭಿವೃದ್ಧಿಯ ಹಂತಗಳಲ್ಲಿ ಆಹಾರವನ್ನು ಬೆಳೆಯುವ ಪರಿ, ವಿಧಾನಗಳು, ಆಸಕ್ತಿ, ಮುಂತಾದವು ಇದ್ದೇಇದೆ. ಆದರೆ ಇವೆಲ್ಲಾ ಸ್ಥಳಪಲ್ಲಟವಾಗುವುದು, ಅವಕ್ಕೆ ಧಕ್ಕೆಯಾಗುವುದು, ಆಹಾರ ಬೆಳೆಯುವಿಕೆಯ ಮೇಲೆ ಅತಿಕ್ರಮಣವಾಗುವುದು, ಸ್ವಾಯತ್ತತೆ ಎನ್ನುವುದು ಮಾಯವಾಗುವುದು ಅವ್ಯಾಹತವಾಗಿ ನಡೆದಿದೆ.

ಹಿಂದೊಮ್ಮೆ ಒಂದುಕಾಲದಲ್ಲಿ industrialisation ಬರುವ ಅವಧಿಯಲ್ಲಿ ಯೂರೋಪಿನ ರಾಷ್ಟ್ರಗಳು ಮತ್ತು ಬ್ರಿಟನ್ನಿನಲ್ಲಿ ಸಾಮಾನ್ಯರು ಆಹಾರ ಬೆಳೆಯುವ ಸಂಸ್ಕೃತಿ ಧಾರಾಳವಾಗಿತ್ತು. ಸಾಮಾಜಿಕ ಚಿಂತಕರು ಹೇಳುವಂತೆ ಯಂತ್ರೀಕರಣ ಯುಗದ ಬೆಳವಣಿಗೆಯಿಂದ ಸಮಾಜದಲ್ಲಿ ಹಲವಾರು ವಿಭಜನೆಗಳಾದವು. ಉಳ್ಳವರು, ಶ್ರೀಮಂತರು, ಬಲಾಢ್ಯರು, ಅಧಿಕಾರಸ್ಥರು ತಮ್ಮ ಹತೋಟಿ ಸ್ಥಾಪಿಸುವ ಹಂತಗಳಲ್ಲಿ ಸ್ವಾಯತ್ತ ಆಹಾರ ಬೆಳೆಯುವಿಕೆಗೆ ನಿರ್ಬಂಧ ಒಡ್ಡಿ ಅದನ್ನು ನಿಯಂತ್ರಿಸಲಾರಂಭಿಸಿದರು. ನಮಗೆಲ್ಲಾ ತಿಳಿದಿರುವಂತೆ ಹಲವಾರು ಪಶ್ಚಿಮ ದೇಶಗಳು ವಸಾಹತುಶಾಹಿಗಳಾದವು. ತಾವು ಆಕ್ರಮಿಸಿದ, ವಸಾಹತು ಹೂಡಿದ ದೇಶಗಳಲ್ಲಿ, ಸಮಾಜಗಳಲ್ಲಿ ಬೇರೂರಿದ್ದ ಆಹಾರ ಪದ್ಧತಿಗಳನ್ನು ಬದಲಾಯಿಸುವ ಪ್ರಯತ್ನಗಳನ್ನು ಮಾಡಿದ್ದೂ ಅಲ್ಲದೆ ಸ್ವಾಯತ್ತ ಆಹಾರ ಬೆಳೆಯುವಿಕೆಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡರು. ಆಹಾರ ಬೆಳೆಗಳ ಅಸ್ಮಿತೆ ಅಗೋಚರವಾಯ್ತು. ಅವು ಖಂಡಾಂತರ ಪ್ರಯಾಣಗಳನ್ನು ಮಾಡಿ ಸ್ಥಳಾಂತರಗೊಂಡವು. ಯಾವ ಸಮಾಜದಲ್ಲಿ ಯಾವ್ಯಾವುದು ಅಲ್ಲಿನ ಸ್ವದೇಶೀ ಮೂಲ-ಆಹಾರ ಎನಿಸಿಕೊಳ್ಳುತ್ತವೆ ಅನ್ನುವ ಜ್ಞಾನ ಮಸುಕಾಯ್ತು.
ಆಹಾರ ಬೆಳೆಯುವ ಪದ್ಧತಿಗಳಲ್ಲಿ ಮತ್ತು ಮೂಲ ಆಹಾರಗಳಿಗೆ ಈ ಖಂಡಾಂತರ, ಸ್ಥಳಾಂತರ, ವಸಾಹತುಶಾಹಿ ಕಾಲಘಟ್ಟಗಳಲ್ಲಿ ಆದ ಪಲ್ಲಟಗಳ ಹಾವಳಿಯ ನಂತರ ಬಂದದ್ದು ರಾಸಾಯನಿಕಗಳ ಬಳಕೆ. ರಾಸಾಯನಿಕಗಳ ಬಳಕೆ ಅನೇಕ ದೇಶಗಳಲ್ಲಿ ವಸಾಹತುಶಾಹಿಗಳ ಕಾರಣದಿಂದ ಅಲ್ಲದೇ ಅವರು ಉಂಟುಮಾಡಿದ ಅವಲಂಬನೆ ಕಾರಣದಿಂದಲೂ ಜನಪ್ರಿಯವಾಯ್ತು. ಯಂತ್ರೀಕರಣ ಯುಗದಿಂದ ಮತ್ತು ವಸಾಹತುಶಾಹಿ ಸಿರಿತನದಿಂದ ಅಭಿವೃದ್ಧಿಯಾದ ಶ್ರೀಮಂತ ಪಾಶ್ಚಿಮಾತ್ಯ ದೇಶಗಳು ತಾವು ಕಂಡುಹಿಡಿದ ವಿಷಪೂರಕ ರಾಸಾಯನಿಕಗಳನ್ನು ಕಡಿಮೆಬೆಲೆಯಲ್ಲಿ ಪೂರ್ವಾತ್ಯ ದೇಶಗಳಿಗೆ ಒದಗಿಸಿದವು. ಇದರಲ್ಲಿ ಬಲವಂತ ನಿಯಂತ್ರಣವೂ ಇತ್ತು. ಅಂದರೆ ಹಲವಾರು ಹಿಂದುಳಿದ ದೇಶಗಳು ತಮ್ಮ ಸ್ವಾಯತ್ತತೆಯನ್ನು ಬದಿಗೊತ್ತಿ ಕಡ್ಡಾಯವಾಗಿ ಆ ರಾಸಾಯನಿಕಗಳನ್ನು ಖರೀದಿಸಿ ಬಳಸಬೇಕಿತ್ತು. ಕ್ರಮೇಣ ಜನರಿಗೆ ಈ ರಾಸಾಯನಿಕಗಳು ಇಷ್ಟವಾದವು. ಅವರು ಆಹಾರ ಬೆಳೆಗಳನ್ನು ಉತ್ತಮವಾಗಿ ಬೆಳೆಯುವುದಕ್ಕೆ ಅಂದರೆ ಅವುಗಳ ಗಾತ್ರ, ಶೀಘ್ರಗತಿಯಲ್ಲಿ ಬೆಳೆಯುವುದು, ಕೀಟ-ರೋಗ ಬಾಧೆಯ ತಡೆಗಟ್ಟುವಿಕೆ ಇತ್ಯಾದಿಗಳಿಗೆ ಮತ್ತು ಆಹಾರಕ್ಕಾಗಿ ಬೆಳೆಸುವ ಪ್ರಾಣಿಗಳ ಬೆಳವಣಿಗೆಯನ್ನು ಉತ್ತಮಪಡಿಸುವುದಕ್ಕೆ ರಾಸಾಯನಿಕಗಳನ್ನು ಬಳಸಲಾರಂಭಿಸಿದ್ದು. ಆದರೆ ಇದೆಲ್ಲದರ ದುಷ್ಪರಿಣಾಮ ಗೊತ್ತಾಗುವುದಕ್ಕೆ ದಶಕಗಳೇ ಹಿಡಿದವು. ಈ ಜ್ಞಾನೋದಯವನ್ನು ಆರಂಭಿಸಿದ್ದು ಅಮೆರಿಕೆಯ ರೇಚಲ್ ಕಾರ್ಸನ್. ಅಮೆರಿಕೆಯ ಜನರ ಆರೋಗ್ಯದ ಮೇಲೆ ಆಗುತ್ತಿದ್ದ ಡಿಡಿಟಿ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಈಕೆ ನಡೆಸಿದ ಅಧ್ಯಯನವು ಸೈಲೆಂಟ್ ಸ್ಪ್ರಿಂಗ್ ಅನ್ನುವ ಪುಸ್ತಕವಾಗಿ ೧೯೬೨ರಲ್ಲಿ ಪ್ರಕಟವಾಯ್ತು. ಈ ಪುಸ್ತಕವು ಹೊಸ ಕ್ರಾಂತಿಯನ್ನೇ ಹುಟ್ಟುಹಾಕಿತು. ಅಲ್ಲಿಂದಾಚೆಗೆ ಪಶ್ಚಿಮ ದೇಶಗಳಲ್ಲಿ ಸಾವಯವ ಆಹಾರ ಬೆಳೆಯುವ ಅರಿವು ಹುಟ್ಟಿತು. ಬ್ರಿಟನ್, ಯೂರೋಪ್ ದೇಶಗಳಲ್ಲಿ ಸಮುದಾಯ ಕೈತೋಟಗಳ ಚಳವಳಿ ಹುಟ್ಟಿ ಅದು ಆಸ್ಟ್ರೇಲಿಯಾಕ್ಕೂ ಬಂತು. ಕೈತೋಟಿಗರು ಸಾವಯವ ಕೃಷಿಯನ್ನು ಪೋಷಿಸಿದರು.
ನಿಮಗೆ ಇದೆಲ್ಲಾ ಕತೆ ಗೊತ್ತಿದ್ದೇ, ಈಗ ಯಾಕಿಲ್ಲಿ ಮತ್ತೆ, ಎಂದೆನಿಸಬಹುದು. ಯಾಕೆಂದರೆ ಈಗಲೂ ಇಲ್ಲಿ ಆಸ್ಟ್ರೇಲಿಯಾದಲ್ಲಿ ಎಷ್ಟೋ ಜನರಿಗೆ ನಮ್ಮ ಆಹಾರದಲ್ಲಿ ರಾಸಾಯನಿಕ ಬಳಕೆ ಎಷ್ಟು, ಯಾಕೆ, ಅದರ ಪರಿಣಾಮ ಏನು, ಅದರ ಬಗ್ಗೆ ನಾವೇನು ಮಾಡಬಹುದು ಎನ್ನುವುದರ ಅರಿವು ಇಲ್ಲ. ಅರಿವು ಇದ್ದರೂ ತಾವು ಅದರ ವಿರುದ್ಧ ಹೇಗೆ, ಯಾವ ರೀತಿ ಕ್ರಮ ತೆಗೆದುಕೊಳ್ಳಬಹುದು ಎನ್ನುವುದರ ಬಗ್ಗೆ ಅಳುಕು ಇದೆ.
ಆಸ್ಟ್ರೇಲಿಯಾದಲ್ಲಿ ಅನೇಕ ಸಮುದಾಯ-ಆಧಾರಿತ ಕೈ-ತೋಟಿಗರ ಗುಂಪುಗಳಲ್ಲಿ ಇಂತಹ ಅರಿವು ಮತ್ತು ಕ್ರಮ ತೆಗೆದುಕೊಳ್ಳುವ ಧೈರ್ಯ, ದೃಢತೆ ಇದೆ ಎನ್ನುವುದು ನನಗೆ ಬಹಳ ಸಂತೋಷ ಕೊಡುವ ವಿಷಯ. ಕ್ರಮ ತೆಗೆದುಕೊಳ್ಳುವುದು ಅಂದರೆ ಅದೇನೂ ಭಯಪಡುವಂತಹ ಆತಂಕ ಹುಟ್ಟಿಸುವ ವಿಷಯವಲ್ಲ. ನಮ್ಮ ಗಾರ್ಡನಿಂಗ್ ಗುಂಪುಗಳಲ್ಲಿ ಮತ್ತು ಎಡಿಬಿಲ್ ಎಕ್ಸ್ಚೇಂಜ್ ಗುಂಪುಗಳಲ್ಲಿ ಕಡ್ಡಾಯ ನಿಯಮವಿದೆ. ನಮ್ಮನಮ್ಮ ಮನೆಗಳಲ್ಲಿ ಬೆಳೆಯುವ ಆಹಾರವು ರಾಸಾಯನಿಕ-ಮುಕ್ತವಾಗಿರಬೇಕು. ಇಂತಹ ಆಹಾರಬೆಳೆಯನ್ನು ಮಾತ್ರ ನಾವು ಪರಸ್ಪರ ಹಂಚಿಕೊಳ್ಳಬಹುದು. ಎಡಿಬಿಲ್ ಎಕ್ಸ್ಚೇಂಜ್ ಹಟ್ ಅಲ್ಲಿ ಒಬ್ಬರು ಹಂಚಿದ ತರಕಾರಿ ನಮಗೆ ಬೇಕೆಂದರೆ ಅದಕ್ಕೆ ಬದಲಾಗಿ ನಾವು ರಾಸಾಯನಿಕ-ಮುಕ್ತ ಬೆಳೆಯನ್ನು ನೀಡಬೇಕು. ಅಂಗಡಿಯಿಂದ ಕೊಂಡುತಂದ ತರಕಾರಿ ಇಲ್ಲಿ ಸಲ್ಲುವುದಿಲ್ಲ. ಪ್ಲಾಸ್ಟಿಕ್ ಉಪಯೋಗ ಅತ್ಯಂತ ಕಡಿಮೆ. ಬದಲಿಗೆ ಕೈ-ತೋಟಿಗರು ಹೇಳುವುದು ಅಂಗಡಿಗಳಲ್ಲಿ ಸಿಂಗಲ್-ಯೂಸ್ ಪ್ಲಾಸ್ಟಿಕ್ ಕವಚ ಹೊಂದಿರುವ ತರಕಾರಿ-ಹಣ್ಣುಗಳನ್ನು ಕೊಳ್ಳಬೇಡಿ. ಇದರಿಂದ ಪರಿಸರಕ್ಕೆ ಆಗುವ ಹಾನಿಯ ಬಗ್ಗೆ ಮಾತನಾಡಿ ಎಂದು.
ಅಡುಗೆಮನೆಯಲ್ಲಿ, ಅಡುಗೆಯಲ್ಲಿ ಪ್ಲಾಸ್ಟಿಕ್ ಉಪಯೋಗದ ಬಗ್ಗೆ ಮತ್ತಷ್ಟು ಅರಿವು ಉಂಟುಮಾಡಲು ನಮ್ಮ ಕೈ-ತೋಟಿಗರು ಪ್ರಯತ್ನಿಸುತ್ತಿದ್ದಾರೆ. ಅದೇನೆಂದರೆ, ಮೈಕ್ರೋ-ಪ್ಲಾಸ್ಟಿಕ್ ಹಾವಳಿ ಮತ್ತು ನಮ್ಮ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮ. ಮೈಕ್ರೋ-ಪ್ಲಾಸ್ಟಿಕ್ ಉಪಯೋಗ ಎಲ್ಲೆಲ್ಲೂ ಇದೆ. ನಮ್ಮೆಲ್ಲರ ಮನೆಗಳಲ್ಲೂ ಈ ಪ್ಲಾಸ್ಟಿಕ್ ಎನ್ನುವ ವಸ್ತು ಸರ್ವಾಂತರ ಮತ್ತು ಖಾಯಂ ಆಗಿದೆ. ನಾವು ಬಳಸುವ ಅಡುಗೆ ವಸ್ತುಗಳಲ್ಲಿ ಕೆಲವು ಪ್ಲಾಸ್ಟಿಕ್ ಇಂದ ತಯಾರಾದದ್ದು. ಆಹಾರವನ್ನು ಬಿಸಿಮಾಡಲು ಬಳಸುವ microwave ತಾನೇ ಅಪಾಯಕಾರಿಯಾಗಿದ್ದು ಅಲ್ಲದೆ, ಅದರೊಳಗೆ ಇಡುವ ಪ್ಲಾಸ್ಟಿಕ್, ಪಿಂಗಾಣಿ ವಸ್ತುಗಳಿಂದ ಆಹಾರವು ಮತ್ತಷ್ಟು ವಿಷಮಯವಾಗುವ ಸಾಧ್ಯತೆಯಿದೆ. ಆಹಾರವನ್ನು ಸುತ್ತಿಡಲು ಬೇಕು ಪ್ಲಾಸ್ಟಿಕ್ wrapping. ಕುಡಿಯುವ ನೀರಿಗೆ ಬೇಕು ಪ್ಲಾಸ್ಟಿಕ್ ಬಾಟಲಿ. ಇಂತಹ ಅನೇಕ ರೀತಿಗಳ ಬಳಕೆಯಿಂದ ಪ್ಲಾಸ್ಟಿಕ್ ಕಣಗಳು ನಾವು ತಿನ್ನುವ ಆಹಾರಕ್ಕೆ ಸೇರಿಕೊಂಡು, ಪ್ಲಾಸ್ಟಿಕ್ ನಮ್ಮ ದೇಹದೊಳಗೆ ಹೋಗಿ, ಮುಂದೆ ರೋಗಗಳು ಉಂಟಾಗುವ ಸಂಭವವಿದೆ.
ನನಗೆ ಇನ್ನೂ ಚೆನ್ನಾಗಿ ನೆನಪಿದೆ. ಮೂವತ್ತು ವರ್ಷಗಳ ಹಿಂದೆ ಬೆಂಗಳೂರಿನ ನಮ್ಮ ಜೀವನದಲ್ಲಿ ಅಷ್ಟೇನೂ ಪ್ಲಾಸ್ಟಿಕ್ ಇರಲಿಲ್ಲ. ಆಗಷ್ಟೇ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಬ್ಯಾಗ್ ಬಳಸಲು ಆರಂಭಿಸಿದ್ದರು. ಅದನ್ನು ನೋಡಿ ನಮ್ಮಮ್ಮ ಚಕಿತರಾಗಿದ್ದರು. ಅಮ್ಮ ಅದಾಗಲೇ ತಮ್ಮ ಸ್ನೇಹಿತರೊಡನೆ, ಕುಟುಂಬಗಳ ಸದಸ್ಯರೊಡನೆ ಅನೇಕ ಪುಣ್ಯಕ್ಷೇತ್ರಗಳಿಗೆ ಹೋಗಿಬರುತ್ತಾ ಪ್ರತಿವರ್ಷವೂ ದೂರಪ್ರಯಾಣ ಸಂಚಾರವನ್ನು ಕೈಗೊಳ್ಳುತ್ತಿದ್ದರು. ಅವರ ಸಂಚಾರದಲ್ಲಿ ಪ್ಲಾಸ್ಟಿಕ್ ಎನ್ನುವ ವಸ್ತು ಇಲ್ಲವೇ ಇರಲಿಲ್ಲ. ಹತ್ತಿಬಟ್ಟೆಯ ದಿರಿಸು ಮತ್ತು ಚೀಲಗಳು, ಸ್ಟೀಲ್/ತಾಮ್ರ/ಹಿತ್ತಾಳೆ ಗಳ ಸಾಮಗ್ರಿಗಳು, ಇತ್ಯಾದಿ ಎಲ್ಲವೂ ಸಾವಯವ. ಈಗ ನೆನೆಸಿಕೊಂಡರೆ ನನಗೆ ಆಗುವ ಆಶ್ಚರ್ಯದ ಜೊತೆ ಪ್ಲಾಸ್ಟಿಕ್-ರಹಿತ ಜೀವನ ಸಾಧ್ಯ ಎನ್ನುವ ನಂಬಿಕೆ ಗಟ್ಟಿಯಾಗುತ್ತದೆ.
ಅಂದಿನ ಸಾಮಾನ್ಯಜನರ ಸಾವಯವ ಜೀವನ ಈಗ ಒಂದು ಸಮುದಾಯ ಸಮಷ್ಠಿಪ್ರಜ್ಞೆಯಾಗಿ ಮೂಡಿದೆ. ಮಾದರಿಯಾಗಿ ಮೂಡುತ್ತಿದೆ. ನಮ್ಮದೇ ಸ್ವಾಯತ್ತತೆಯಿಂದ ಮನೆಮಟ್ಟಿಗೆ ನಾವು ಆಹಾರವನ್ನು ಬೆಳೆಸುವ ನಿರ್ಧಾರದಿಂದ ಹಿಡಿದು ನಮ್ಮ ನೆಲದ, ನಾಡಿನ, ಮೂಲಜರ ಆಹಾರವೇನಾಗಿತ್ತು, ಅದರ ಬಗ್ಗೆ ನಮಗೆಷ್ಟು ತಿಳಿದಿದೆ, ಆ ಆಹಾರ ಬೆಳೆಗಳ ವಿಧಗಳನ್ನು ಪುನರುಜ್ಜೀವಿಸಬಹುದೆ ಎನ್ನುವ ಮಾತುಕತೆಗಳು ಸಮುದಾಯ ಅಭಿವೃದ್ಧಿಯ ಸಂಕೇತ. ಇಂತಹ ಮಾತುಕತೆಗಳಿಂದ ನಮ್ಮ ನಂಬಿಕೆಗಳು, ಮನೋಭಾವ, ಚರ್ಯೆಗಳಲ್ಲಿ ಬದಲಾವಣೆ ಬರುತ್ತದೆ. ಇದರಿಂದ ಪರಿಸರಕ್ಕೆ, ನಮಗೆ ಒಳ್ಳೆಯದು. ಆಸ್ಟ್ರೇಲಿಯಾದಲ್ಲಿ ಎಡಿಬಿಲ್ ಗಾರ್ಡನರ್ಸ್ – ಕೈತೋಟಿಗರು ಇದನ್ನು ಮಾಡುತ್ತಿದ್ದಾರೆ. ಇದು ಹೆಮ್ಮೆಯ ವಿಷಯ.

ಮನೆಯಂಗಳದಲ್ಲಿ ಬೆಳೆದ ದಂಟುಸೊಪ್ಪು, ಕರಿಬೇವು, ಇತ್ಯಾದಿಗಳನ್ನು ನೋಡಿದರೆ ಸೌಖ್ಯ ಭಾವ ಮೂಡುತ್ತದೆ. ಮನಸ್ಸು ಶಾಂತವಾಗುತ್ತದೆ. ನಮ್ಮ ಕೈ-ತೋಟಿಗರು ತರಕಾರಿ-ಹಣ್ಣು-ಸಸಿಗಳನ್ನು ಹಂಚಿಕೊಳ್ಳುವ ಪರಿಯನ್ನು ಗಮನಿಸಿದರೆ ಅಲ್ಲಿರುವ ಸಂಘಟನೆ, ಒಗ್ಗಟ್ಟು, ಗೌರವ, ಪರಿಸರಪ್ರಜ್ಞೆ ಮೆಚ್ಚುಗೆಯಾಗುತ್ತದೆ. ಈಗಿನ ಕಾಲದಲ್ಲಿ ಸಮಾಜಗಳನ್ನು, ಸಮುದಾಯಗಳನ್ನು ಬೆಸೆಯುವುದು ಆರೋಗ್ಯಕರ ಆಹಾರ ಚಳವಳಿ. ಹಿಂಸಾತ್ಮಕ ಮನೋಭಾವವಲ್ಲ. ಅಧಿಕಾರ, ಬಲಾಢ್ಯತೆ, ಹತೋಟಿಯಲ್ಲ.

ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.

