ಅವಳ ಗಂಡನ ಮನೆಯವರು, ಸೊಸೆ ತಮ್ಮ ಮನೆಯನ್ನು ಬಿಟ್ಟು ಹೋದದ್ದು ದೊಡ್ಡ ವಿಷಯವೇನಲ್ಲ ಎಂಬಂತೆ ಇನ್ನೊಂದು ಹುಡುಗಿಯನ್ನು ಸೊಸೆಯಾಗಿ ತಂದುಕೊಳ್ಳುತ್ತಾರೆ! ಸಿನಿಮಾ ಕೊನೆಯಾಗುವ ಹೊತ್ತಿನಲ್ಲಿ ಈ ಹೊಸಹುಡುಗಿಯ ಮೂಕದುಡಿಮೆ ಪ್ರಾರಂಭವಾಗಿರುತ್ತದೆ! ಅಲ್ಲಿಗೆ `ಒಬ್ಬ ಸೊಸೆಯ `ಪ್ರತಿಭಟನೆ’ಯಿಂದ ಅಸೂಕ್ಷ್ಮ, ಪುರಾತನ, ಹಾಗೂ ಕೋಣನ ಚರ್ಮದ ಗಂಡಾಳಿಕೆಯ ವ್ಯವಸ್ಥೆಗೆ ಏನೂ ಪರಿಣಾಮವಾಗುವುದಿಲ್ಲ, ಅದರ ಕೂದಲು ಸಹ ಕೊಂಕುವುದಿಲ್ಲ, ಅದು ಮಾಡಿಟ್ಟಿರುವ `ಮನೆ’ಗಳಲ್ಲಿ ಮನೆವಾಳ್ತೆ ದುಡಿತ ಮಾಡಲು ಒಬ್ಬ ಮೂಗಬಸವಿ ಹೋದರೆ ಇನ್ನೊಬ್ಬ ಮೂಗಬಸವಿ ಬರುತ್ತಾಳೆ, ಮೂಗಬಸವಿಯರಿಗೇನೂ ಕೊರತೆ ಇಲ್ಲ ನಮ್ಮ ಸಮಾಜದಲ್ಲಿ’ ಎಂಬ ನಿರ್ದಯಿ ಸಂದೇಶ ಸಿಗುತ್ತದೆ ನೋಡುಗರಿಗೆ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಹದಿನಾಲ್ಕನೆಯ ಬರಹ
ನನ್ನ ಅನುಭವದಲ್ಲಿ ಮಧ್ಯಮ ಹಾಗೂ ಮೇಲ್ಮಧ್ಯಮ ವರ್ಗದ ಗೃಹಿಣಿಯರಲ್ಲಿ, ಅವರು ಉದ್ಯೋಗಿನಿಯರಾಗಿರಲಿ, ಇಲ್ಲದಿರಲಿ ಎರಡು ಬಗೆಯವರಿರುತ್ತಾರೆ. ಮೊದಲನೆಯ ಬಗೆಯವರು ಅಂದರೆ `ಏನೇ ಆದರೂ ತಮ್ಮ ಮನೆಕೆಲಸವನ್ನು ತಾವೇ ಮಾಡಬೇಕು, ಕೆಲಸದವರನ್ನು ನಂಬಲಾಗದು, ಏನೇ ಆದರೂ ಹೊರಗಿನಿಂದ ಬರುವ, ಸಂಬಳಕ್ಕಾಗಿ ದುಡಿಯುವ ಕೆಲಸದವರು ನಮ್ಮಷ್ಟು ಶುಚಿಯಾಗಿ, ಅಚ್ಚುಕಟ್ಟಾಗಿ ಎಲ್ಲಿ ಕೆಲಸ ಮಾಡ್ತಾರೆ? ಅವರ ಕೈಯಡಿಗೆಯ ರುಚಿ ನಮಗೆ ಸರಿಹೋಗಲ್ಲಪ್ಪ, ಅದಕ್ಕೇ ನಮ್ಮನೆ ಕೆಲಸ ನಾವೇ ಮಾಡ್ಕೋತೀವಿ’ ಅನ್ನುವವರು. ಇವರಲ್ಲಿ ಇಡೀ ದಿನ ಅಡಿಗೆಮನೆಯಲ್ಲೇ ಇದ್ದು `ಅಯ್ಯೋ, ಕೆಲಸವೇ ಆಗಲ್ಲಪ್ಪ, ಸಮಯವೇ ಸಾಲಲ್ಲ’ ಎಂದು ಗೋಳಾಡುವವರೂ ಇರುತ್ತಾರೆ. ಅದು ಹೇಗೋ ಚಕಚಕನೆ ಕೆಲಸ ಮುಗಿಸಿ ತಮ್ಮ, ಉದ್ಯೋಗ, ಸ್ವಉದ್ಯಮ, ಓಡಾಟಗಳನ್ನು ಮಾಡಿಕೊಳ್ಳುವವರೂ ಇರುತ್ತಾರೆ. (ಆದರೆ ಈ `ಸರ್ವಶಕ್ತಿ ಮಹಿಳೆ’ಯ ಬಿಂಬವು ಹೆಣ್ಣುಮಕ್ಕಳ ಮನೋಲೋಕದ ಮೇಲೆ ಬೀರುವ ಪರಿಣಾಮವು ಅತ್ಯಂತ ಅಪಾಯಕಾರಿಯಾದದ್ದು. ಇದು ಬೇರೆಯೇ ಒಂದು ಸ್ವತಂತ್ರ ಪ್ರಬಂಧಕ್ಕೆ ವಸ್ತುವಾಗುವಷ್ಟು ಗಹನ ವಿಷಯ.)
ಇನ್ನು ಗೃಹಿಣಿಯರಲ್ಲಿ ಎರಡನೆಯ ಬಗೆಯವರೆಂದರೆ ಮನೆ ಕೆಲಸಕ್ಕಾಗಿ ಸಹಾಯಕರನ್ನು ಇಟ್ಟುಕೊಳ್ಳಲು ತುಸುವೂ ಹಿಂದೆಮುಂದೆ ನೋಡದವರು. ಮನೆಯ ಶುಚಿತ್ವಕ್ಕಾಗಲಿ, ಮಕ್ಕಳ ದೇಖರೇಖಿಗಾಗಲಿ, ಅಡಿಗೆಗಾಗಲಿ, ತೋಟದ ಕೆಲಸಕ್ಕಾಗಲಿ ಅಗತ್ಯ ಇದ್ದಾಗ ಕೆಲಸದವರನ್ನು ಇಟ್ಟುಕೊಂಡು ಅವರಿಗೆ ಕೊಡಬೇಕಾದ ಸಂಬಳ ಕೊಟ್ಟು ತಮಗೋಸ್ಕರ ಒಂದಿಷ್ಟು ಸಮಯ ಉಳಿಸಿಕೊಳ್ಳುವವರು. ಹೀಗೆ ಉಳಿದ ಸಮಯವನ್ನು ತಮ್ಮ ವಿಶ್ರಾಂತಿಗೋ, ಓಡಾಟಗಳಿಗೋ ಅಥವಾ ತಮ್ಮ ಅತ್ಯಾಸಕ್ತಿ(ಪ್ಯಾಷನ್) ಅಥವಾ ಹವ್ಯಾಸಗಳ ಬೆಳವಣಿಗೆಗಾಗಿ ಬಳಸಿಕೊಳ್ಳುವವರು ಇವರು.
ಗಮನಿಸಬೇಕಾದ ಇನ್ನೊಂದು ವಿಷಯ ಅಂದರೆ ಗೃಹಿಣಿಯರು ಅಥವಾ ಮನೆಯೊಡತಿಯರು ಮತ್ತು ಮನೆಕೆಲಸ ಮಾಡುವ ಹೆಂಗಸರ ನಡುವೆ ಒಂದು ರೀತಿಯ ಪರಸ್ಪರಾವಲಂಬಿ ಸಂಬಂಧ ಬೆಳೆದಿರುತ್ತದೆ. ಒಬ್ಬರಿಗೆ ಸಮಯ ಉಳಿದರೆ ಇನ್ನೊಬ್ಬರಿಗೆ ಒಂದಷ್ಟು ಹಣ ಸಂಪಾದನೆ ಆಗುತ್ತದೆ. ಭಾರತ ದೇಶದಲ್ಲಂತೂ ಸದ್ಯಕ್ಕೆ ಈ ಪರಸ್ಪರಾವಲಂಬಿ ಸಂಬಂಧವು ನಮ್ಮ ಸಮಾಜದ ಕಟ್ಟೋಣದ ತಳಮಟ್ಟದ ಆಧಾರವಾಗಿದೆ ಎಂದರೆ ಉತ್ಪ್ರೇಕ್ಷೆಯಲ್ಲ.
ಮನೆಕೆಲಸದ ಬಗ್ಗೆ ಮಾತಾಡುವಾಗ ನಾವು ಒಂದು ವಿಷಯವನ್ನು ನಿರ್ಲಕ್ಷಿಸಲಾಗದು. ಅದೇನೆಂದರೆ ಅದಕ್ಕೆ `ಎಂದೂ ಮುಗಿಯದ’ ಗುಣ ಇದೆ! ಅಂಗಳ ತೊಳೆದು ರಂಗೋಲಿ ಹಾಕುವುದು, ಗುಡಿಸುವುದು, ಒರೆಸುವುದು, ಧೂಳು ತೆಗೆಯುವುದು, ಪಾತ್ರೆ ತೊಳೆಯುವುದು, ಬಟ್ಟೆ ಒಗೆಯುವುದು, ಅಡಿಗೆ ಮಾಡುವುದು, ಇನ್ನೂ ಹಲವು ಕೆಲಸಗಳನ್ನು ಒಳಗೊಂಡ ಮನೆವಾಳ್ತೆ ಅಥವಾ ಗೃಹವಾಳ್ತೆಗೆ ಭಾನುವಾರ ರಜೆ ಎಂಬುದಿರುವುದಿಲ್ಲ. ಹಾಗೆ ನೋಡಿದರೆ ಭಾನುವಾರಗಳಂದು ಮನೆವಾಳ್ತೆಯ ಕೆಲಸ ಇನ್ನೂ ಹೆಚ್ಚಾಗುತ್ತದೆಯೇ ಹೊರತು ಕಡಿಮೆ ಆಗುವುದಿಲ್ಲ. ಎಲ್ಲಿಯ ತನಕ ಮನುಷ್ಯನಿಗೆ ಹೊಟ್ಟೆಯ ಹಸಿವು ಎಂಬುದು ಇರುತ್ತದೋ ಅಲ್ಲಿಯವರೆಗೆ ಅಡಿಗೆ ಮನೆಗೆ ರಜೆ ಇಲ್ಲ. ನಿಜ, ಇಪ್ಪತ್ತೊಂದನೆ ಶತಮಾನದ ಇಂದಿನ ದಿನಮಾನದಲ್ಲಿ ಮನೆ ಕೆಲಸಕ್ಕೆ ಬಹಳಷ್ಟು ಯಂತ್ರಗಳು ಲಭ್ಯ ಇವೆ. ಯಂತ್ರಮಾನವಯುತ ಪೊರಕೆಗಳು, ಪಾತ್ರೆ ತೊಳೆಯಲು ಹಾಗೂ ಬಟ್ಟೆ ಒಗೆಯಲು ಅತ್ಯಾಧುನಿಕ ಶೈಲಿಯ ಯಂತ್ರಗಳು, `ಜಾಣ’ ಕುಕ್ಕರ್‌ಗಳು, ತರಕಾರಿ ಹೆಚ್ಚುವ ಯಂತ್ರಗಳು, ಚಪಾತಿ ಮಾಡುವ ಯಂತ್ರಗಳು, ಎಐ(ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ – ಮಾನವ ನಿರ್ಮಿರ ಬುದ್ಧಿಮತ್ತೆ) ಆಧಾರಿತ ಅಡಿಗೆ ಯಂತ್ರಗಳು… ಒಂದೇ, ಎರಡೇ ಅದೆಂತೆಂತಹ ಸೌಲಭ್ಯಗಳು ಬಂದಿವೆ ಅಂದರೆ ಮೂಗಿನ ಮೇಲೆ ಬೆರಳಿಡುವಂತಾಗುತ್ತದೆ!
ಇನ್ನು ಊಟಕ್ಕೆ ಹೊರಗೆ ಹೋಗುವುದು ಮತ್ತು ಸರಬರಾಜು ಸೇವೆ(ಕೇಟರಿಂಗ್)ಯ ಮೇಲೆ ಅವಲಂಬನೆ ಅನ್ನುವುದು ಇನ್ನೊಂದೇ ಲೋಕ. ಮಹಾನಗರಗಳಲ್ಲಿನ ಜನನಿಬಿಡ ಪ್ರದೇಶಗಳಲ್ಲಿ ಬೀದಿಗೆ ಹತ್ತು ಹೋಟಲ್ಲುಗಳು, ಆಹಾರದ ಗಾಡಿಗಳು ಸಿಗುತ್ತವೆ. ದಿನದ ಇಪ್ಪತ್ನಾಲ್ಕು ಗಂಟೆಯೂ ಆಹಾರ ಮಾಡಿಕೊಡುವ ಅಥವಾ ತಂದುಕೊಡುವ ವ್ಯವಸ್ಥೆಗಳಿವೆ. ಸ್ವಿಗ್ಗಿ, ಝೊಮ್ಯಾಟೊಗಳಂತಹ ಆಹಾರವನ್ನು ಬಹಳ ಬೇಗ ನಾವಿದ್ದಲ್ಲಿಗೆ ತಂದುಕೊಡುವ ವ್ಯವಸ್ಥೆಗಳಂತೂ ಇಂದು ಕೋಟ್ಯಂತರ ರೂಪಾಯಿಗಳ ಉದ್ಯಮಗಳಾಗಿ ಬೆಳೆದುಬಿಟ್ಟಿವೆ! ಮನೆಗೆ ಒಂದು ಹೊತ್ತು ಅಥವಾ ಎರಡು ಹೊತ್ತು ಪ್ರತಿದಿನ ಸರಬರಾಜು ಸೇವೆಯ ಮೂಲಕ ಆಹಾರ ತರಿಸಿಕೊಳ್ಳುವ ಕುಟುಂಬಗಳಿವೆ.
ಅಂದರೆ ಮನೆಕೆಲಸದವರನ್ನು ನೇಮಿಸಿಕೊಳ್ಳುವುದರಿಂದ ಹಿಡಿದು ಆಹಾರ ತರಿಸಿಕೊಳ್ಳುವ ತನಕ, ವಿವಿಧ ಮನೆಯಂತ್ರಗಳ ಬಳಕೆಯಿಂದ ಹಿಡಿದು ದೂರನಿಯಂತ್ರಣದ ಅಡುಗೆ ತಯಾರಿಕೆಯ ತನಕ ಅದೆಷ್ಟು ರೀತಿಯ ವ್ಯವಸ್ಥೆಗಳನ್ನು ಈ ಕಾಲವು ನಮಗೆ ನೀಡಿದೆ ಅಂದರೆ ನಾವು ಹಾಳಾಗಿಹೋಗುವಷ್ಟರ ಮಟ್ಟಿಗೆ ಆಯ್ಕೆಗಳ ಐಷಾರಾಮವನ್ನು ಅನುಭವಿಸುತ್ತಿದ್ದೇವೆ(ಸ್ಪಾಯಿಲ್ಟ್ ಫಾರ್ ಚಾಯ್ಸಸ್)!
ಇದು ಹೌದು ಅನ್ನುವುದಾದರೆ ನಮ್ಮ ಕುಟುಂಬಗಳು ಏಕೆ ಅಶಾಂತವಾಗಿವೆ? ವಿಚ್ಛೇದನಗಳು, ಏಕ ಪೋಷಕರುಳ್ಳ ಕುಟುಂಬಗಳು ಏಕೆ ಹೆಚ್ಚುತ್ತಿವೆ? ಸಂತಾನಹೀನತೆಯನ್ನು ಸರಿಪಡಿಸುವೆವೆಂದು ಹೇಳಿಕೊಳ್ಳುವ ಚಿಕಿತ್ಸಾ ಕೇಂದ್ರಗಳ ಸಂಖ್ಯೆಯು ದಿನೇದಿನೇ ಏಕೆ ಹೆಚ್ಚುತ್ತಿದೆ? ಮಕ್ಕಳು ಬೇಡ ಎಂಬ ಒಪ್ಪಂದವುಳ್ಳ ಮದುವೆಗಳು, ಸಹ ಜೀವನ, ವಿಚ್ಛೇದನ, ಮುಕ್ತ ಮದುವೆಯ ಪ್ರಯೋಗಗಳು, ಇರುವ ಒಂದು ಮಗುವನ್ನೇ ಚಿಕ್ಕ ವಯಸ್ಸಿನಲ್ಲೇ ವಸತಿಶಾಲೆಗಾಗಿ ಮುನ್ನೂರು-ನಾನೂರು ಕಿಲೋಮೀಟರುಗಳಷ್ಟು ದೂರ ಕಳಿಸುವುದು … ಇವೆಲ್ಲ ಏಕೆ ಹೆಚ್ಚುತ್ತಿವೆ?
ತಂತ್ರಜ್ಞಾನದಲ್ಲಿ ನಾವು ಬಹಳ ಮುಂದೆ ಹೋಗಿದ್ದರೂ ನಮ್ಮ ಹಳೆಯ ಮನಸ್ಥಿತಿಗಳು ಇನ್ನೂ ಬದಲಾಗಿಲ್ಲವೆ? ನಾವು ತಪ್ಪಿದ್ದು ಅಥವಾ ತಪ್ಪುತ್ತಿರುವುದು ಎಲ್ಲಿ? ಈ ಪ್ರಶ್ನೆ ಮೂಡುತ್ತದಲ್ಲವೆ? ನನಗೆ ತೋರುತ್ತಿರುವ ಒಂದು ಉತ್ತರ ಅಂದರೆ, ಪಿತೃಪ್ರಧಾನ ವ್ಯವಸ್ಥೆಯಲ್ಲಿ ಮನೆವಾಳ್ತೆಯ ವಿಷಯದಲ್ಲಿ ಗಂಡು ಹೆಣ್ಣಿನ ನಡುವೆ ಇರುವ ತಾರತಮ್ಯ ಹಾಗೂ ಶತಶತಮಾನಗಳಿಂದ ಗಾಳಿಯಲ್ಲೆಂಬಂತೆ ಈ ತಾರತಮ್ಯ- ಪಕ್ಷಪಾತದ ಮೌಲ್ಯಗಳು ಉಳಿದುಕೊಂಡು ಬಂದು ಈಗ ಬಲವಾಗಿ ಪ್ರಶ್ನಿಸಲ್ಪಡುತ್ತಿವೆ. ಅದೇ ಕಾರಣವಿರಬೇಕು ನಮ್ಮ ಸಮಾಜದಲ್ಲಿ ಉಂಟಾಗಿರುವ ಒಂದು ರೀತಿಯ ವಿಪ್ಲವಕ್ಕೆ. ಸಿನಿಮಾವೊಂದರ ಉದಾಹರಣೆಯೊಂದರ ಮೂಲಕ ಇದನ್ನು ವಿವರಿಸುತ್ತೇನೆ.
ಕೆಲವು ತಿಂಗಳುಗಳ ಹಿಂದೆ ನಾನು `ದಿ ಗ್ರೇಟ್ ಇಂಡಿಯನ್ ಕಿಚನ್’ ಎಂಬ ಒಂದು ಮಲಯಾಳಿ ಸಿನಿಮಾವನ್ನು ನೋಡಿದೆ. 2021ರಲ್ಲಿ ಬಿಡುಗಡೆಯಾದ ಸಿನಿಮಾ ಇದು. ಜಿಯೊ ಬೇಬಿ ಅನ್ನುವವರು ಇದರ ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಇದರ ಹಿಂದಿ ಅವತರಣಿಕೆಯು `ಮಿಸೆಸ್’ ಎಂಬ ಹೆಸರಿನಿಂದ ಈಚೆಗೆ ಅಂದರೆ 2025ರಲ್ಲಿ ಬಿಡುಗಡೆಯಾಗಿದೆ. ನಾಟ್ಯಕಲೆಯಲ್ಲಿ ಆಸಕ್ತಳಾಗಿದ್ದ ಯುವತಿಯೊಬ್ಬಳು ತುಂಬ ಸಾಂಪ್ರದಾಯಿಕ (ಪಿತೃಪ್ರಧಾನ ಮೌಲ್ಯಗಳಿಂದ ತುಂಬಿದ ಎಂದು ಅರ್ಥ ಮಾಡಿಕೊಳ್ಳಬೇಕು) ಮನೆಯೊಂದಕ್ಕೆ ಮದುವೆಯಾಗಿ ಹೋಗುತ್ತಾಳೆ. ಹಿರಿಯರು ಒಪ್ಪಿ ಮಾಡಿದ ಮದುವೆಯದು. ಅವಳ ಅತ್ತೆಮನೆ ಎಂತಹದ್ದು ಅಂದರೆ, `ಹೆಂಗಸರೆಂದರೆ ಮನೆಯ ಗಂಡಸರಿಗೆ ಹೊತ್ತುಹೊತ್ತಿಗೆ ರುಚಿರುಚಿಯಾಗಿ, ಬಗೆಬಗೆಯಾಗಿ ಅಡಿಗೆ ಮಾಡಿ ಹಾಕಿ, ಕೈಕಾಲಿಗೆ ಸೇವೆ ಮಾಡಿ, ದಾಸಿಯು ಯಜಮಾನನನ್ನು ಸೇವಿಸುವಂತೆ, ಪೂಜಿಸುವಂತೆ ಬಾಳುವೆ ಮಾಡಬೇಕಾದವರು’ ಎಂಬ ಮನಸ್ಥಿತಿ ಇದ್ದ ಮನೆ. ಹೆಂಗಸಿನ ಪ್ರತಿಭೆ, ವಿದ್ಯೆ, ಇಚ್ಛೆ ಯಾವುದಕ್ಕೂ ಆ ಮನೆಯಲ್ಲಿ ಬೆಲೆ ಇಲ್ಲ. `ಗಂಡನಿಗೆ ಹಲ್ಲುಜ್ಜುವ ಬ್ರಶ್ಶಿಗೆ ಪೇಸ್ಟನ್ನು ಸಹಿತ ಹೆಂಡತಿಯೇ ಹಾಕಿಕೊಡಬೇಕು, ಚಟ್ನಿಯನ್ನು ಒರಳಿನಲ್ಲಿ ತಿರುವಿದರೇ ರುಚಿ – ಮಿಕ್ಸಿಯಲ್ಲಿ ತಿರುವಿದರೆ ರುಚಿಯಿಲ್ಲ, ಪ್ರತಿಯೊಂದು ಚಪಾತಿ ಅಥವಾ ಪುಲ್ಕಾವನ್ನೂ ಆಗಷ್ಟೇ ಕಾವಲಿಯಿಂದ ಎತ್ತಿ ಬಿಸಿಬಿಸಿಯಾಗಿ ಗಂಡಸರ ತಟ್ಟೆಗೆ ಹಾಕಬೇಕು. ಗಂಡನು ಕೆಲಸಕ್ಕೆ ಹೋಗುತ್ತಾನೆಂದರೆ ಹೆಂಡತಿಯಾದವಳು ಅವನ ಬಟ್ಟೆ, ಶೂಸು, ಕಾಲುಚೀಲ, ಕರವಸ್ತç ಪ್ರತಿಯೊಂದನ್ನೂ ಸಿದ್ಧ ಮಾಡಿಡಬೇಕು. ಗಂಡನ ಬಟ್ಟೆಯನ್ನು ಹೆಂಡತಿಯೇ ತನ್ನ ಕೈಯಾರೆ `ಪ್ರೀತಿಯಿಂದ’ ಒಗೆಯಬೇಕು’ ….. ಇಂತಹ ನಿಯಮಗಳಿಂದ ತುಂಬಿ ಹೋದ ಮನೆ ಅದು. ಅಲ್ಲಿ ಹೆಂಗಸರ ಕೆಲಸ ಎಂದೂ ಮುಗಿಯುವುದಿಲ್ಲ ಮತ್ತು ಅದನ್ನು ಅವಳು ಮಾಡುತ್ತಿದ್ದಾಳೆಂದು ಯಾರೂ ಕೂಡ ಒಂದು ಮೆಚ್ಚುಮಾತನ್ನು ಹೇಳುವುದಿಲ್ಲ. `ಅದರಲ್ಲೇನಿದೆ ಮಹಾ, ಅದು ಅವಳ ಕರ್ತವ್ಯ ತಾನೇ’ ಎಂಬ ಭಾವ ಮನೆಮಂದಿಯಲ್ಲಿ!
ಇಂತಹ ಮನೆಗೆ ಸೊಸೆಯಾಗಿ ಹೋದ ಕಥಾನಾಯಕಿ ಬೆಳಗಿನಿಂದ ರಾತ್ರಿಯ ತನಕ ತರಕಾರಿ, ಮಸಾಲೆಗಳು, ಕಸದ ಬುಟ್ಟಿ, ತೊಳೆಯಲೆಂದು ಬಿದ್ದ ಎಂಜಲು ತಟ್ಟೆಗಳು, ಮುಸುರೆ ಪಾತ್ರೆಗಳು, ಧೂಳುಮಯ ಕಿಟಕಿಗಾಜುಗಳು, ಅಡಿಗೆಮನೆಯ ಬತ್ತುಕುಳಿಯ(ಸಿಂಕ್) ಹಾಳಾದ ಕೊಳವೆಯಿಂದ ತೊಟ್ಟುತೊಟ್ಟಾಗಿ ನಿರಂತರವಾಗಿ ಸೋರುವ ಗಲೀಜುನೀರು……. ಇದನ್ನೇ ನೋಡುತ್ತಿರುತ್ತಾಳೆ. ಇದೆಷ್ಟು ಸುದೀರ್ಘ ಮತ್ತು ನಿರಂತರ ಅಂದರೆ, ನೋಡಿ ನೋಡಿ ನೋಡಿ ಅವಳ ಮನಸ್ಸು ಕುಂದಿ ಹೋಗುತ್ತದೆ. ಅವಳು ಎಷ್ಟು ಕೆಲಸ ಮಾಡಿದರೂ ಯಾರಿಗೂ ತೃಪ್ತಿ ಇಲ್ಲ. ಅವಳ ವೃತ್ತಿ, ಪ್ರವೃತ್ತಿ, ಆಸಕ್ತಿಗಳಂತೂ ಆ ಮನೆಯ ಸದಸ್ಯರ ಮಟ್ಟಿಗೆ ಮಾತಾಡಬೇಕಾದ ಒಂದು ವಿಷಯವೇ ಅಲ್ಲ! ಪಾಪದ ಹುಡುಗಿ ಅತ್ತೆ, ಮಾವ, ಗಂಡ, ಅತಿಥಿಗಳು ಇವರನ್ನೆಲ್ಲ ಮೆಚ್ಚಿಸಬೇಕೆಂದು ತನ್ನ ಎಲ್ಲ ಇಷ್ಟಾನಿಷ್ಟಗಳನ್ನು ಬದಿಗಿಟ್ಟು, ಒಂದೇ ಸಮನೆ ಬೆಳಗಿನಿಂದ ರಾತ್ರಿಯ ತನಕ ಕೆಲಸ ಮಾಡುತ್ತಲೇ ಹೋಗುತ್ತಾಳೆ. ಆದರೆ ಮನೆಯವರ ಮುಖದಲ್ಲಿ ನಗು ಎಂಬುದು ಅರಳುವುದೇ ಇಲ್ಲ, ಮತ್ತು ಇವಳ ಮನಸ್ಸಿನಲ್ಲಿ ಏನಾಗುತ್ತಿದೆ, ನಾಟ್ಯದಿಂದ ದೂರವಾಗಿ ಅವಳ ಹೃದಯ ಎಂತಹ ವೇದನೆ ಅನುಭವಿಸುತ್ತಿದೆ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುವುದೂ ಇಲ್ಲ. ಇರುವ ಇಷ್ಟು ಕಷ್ಟ-ನೋವು ಸಾಲದೆಂಬಂತೆ ಅವಳ ಗಂಡನು, ರಾತ್ರಿಗಳಲ್ಲಿ `ಹೆಂಡತಿ ಅಂದರೆ ಪ್ರತಿ ರಾತ್ರಿಯೂ ತನ್ನ ಕಾಮೇಚ್ಛೆಯನ್ನು ತೀರಿಸಬೇಕಾದ ದೇಹಯಂತ್ರಮಾತ್ರ’ ಎಂಬ ಭಾವನೆಯಿಂದ, ಅವಳನ್ನು ಮತ್ತಷ್ಟು ಮಗದಷ್ಟು ನೋಯಿಸುತ್ತಾನೆ.
ಪಾಪದ ಈ ಹುಡುಗಿ ತನ್ನ ನಾಟ್ಯಾಭ್ಯಾಸವನ್ನು ಮುಂದುವರಿಸುವ ಮತ್ತು ಮನೆಗೆ ಸಹಾಯಕ್ಕಾಗಿ ಕೆಲಸದವರನ್ನು ಇಟ್ಟುಕೊಳ್ಳುವ ಪ್ರಸ್ತಾಪಗಳನ್ನು ಗಂಡನ ಮುಂದೆ ಎರಡು ಮೂರು ಬಾರಿ ಇಟ್ಟರೂ ಅವನಿಂದ ಪ್ರೋತ್ಸಾಹದಾಯಕ ಪ್ರತಿಕ್ರಿಯೆ ಬರುವುದಿಲ್ಲ. ತಾನೇ ಸ್ವತಃ ಮೂಕದುಡಿಮೆ ಯಂತ್ರವಾಗಿದ್ದ, ಆದರೂ ಮನೆಯಲ್ಲಿ ಒಂದು ಹೆಣ್ಣುಜೀವ ಎಂದು ಹೆಸರಿಗಾದರೂ ಇದ್ದ ಅವಳ ಅತ್ತೆಯು ತನ್ನ ಮಗಳ ಮನೆಗೆ ಹೋಗಿದ್ದರಿಂದ (ಹೇಗೂ ಸೊಸೆ ಬಂದಿದ್ದಾಳಲ್ಲ, ಮನೆಯನ್ನು `ನಿರ್ವಹಿಸುತ್ತಾಳೆ’ ಎಂಬ `ಭರವಸೆ’ಯಿಂದ), ಕಥಾನಾಯಕಿ ಒಟ್ರಾಶಿಯಾಗಿ ಒಂಟಿದುಡಿಮೆಯ ಯಂತ್ರಮಾನವಿಯಾಗಿಬಿಟ್ಟು ಹೈರಾಣಾಗಿ ಹೋಗುತ್ತಾಳೆ. ತನ್ನ ತವರು ಮನೆಯವರಿಗೆ ಅವಳು, ದೂರವಾಣಿ ಕರೆಯಲ್ಲಿ `ಕೆಲಸ ಎಂದೂ ಮುಗಿಯದ’ ತನ್ನ ಜೀವನಶೈಲಿಯ ಬಗ್ಗೆ ಹೇಳಿಕೊಂಡರೂ, ಅವರೂ ಸಹ ಇದನ್ನು ಒಂದು ದೊಡ್ಡ ವಿಷಯ ಎಂದು ಪರಿಗಣಿಸದೆ `ಇವೆಲ್ಲ ಹೆಣ್ಣುಮಕ್ಕಳು ಕಲಿಯಬೇಕಾದದ್ದು ಬಿಡು’ ಎಂದು ಲೋಕಾರೂಢಿಯಾಗಿ ಪ್ರತಿಕ್ರಿಯಿಸಿಬಿಡುತ್ತಾರೆ. ಒಂದಷ್ಟು ತಿಂಗಳು ಹೀಗೇ ಮೂಗೆತ್ತಿನಂತೆ ದುಡಿದು ದುಡಿದು ದುಡಿದು ………. ಇನ್ನಾಗದು ಎಂಬಷ್ಟು ರೋಸಿ ಹೋದ ಹುಡುಗಿ, ಒಂದು ದಿನ ಮನೆಗೆ ತನ್ನ ಮಾವನ ಸ್ನೇಹಿತರು ಆಗಮಿಸಿ ಒಬ್ಬೊಬ್ಬರು ಒಂದೊಂದು ತರಹದ ನಿಂಬೆಪಾನಕ ಕುಡಿಯುವ `ಇಚ್ಛೆ’ಯನ್ನು ವ್ಯಕ್ತಪಡಿಸಿದಾಗ, ಬಾಲ್ದಿ(ಬಕೀಟು)ಯಲ್ಲಿ ಸಂಗ್ರಹವಾಗಿದ್ದ ಅಡಿಗೆಮನೆ ಬತ್ತುಕುಳಿಯ ಗಲೀಜುನೀರನ್ನೇ ಲೋಟಗಳಿಗೆ ತುಂಬಿಕೊಟ್ಟು, ಏನೋ ಪ್ರಶ್ನೆ ಮಾಡಲು ಬಂದ ಗಂಡನ ಮೇಲೆ ಅದೇ ಗಲೀಜುನೀರನ್ನು ಝಿಲ್ಲನೆ ಎರಚಿ, ಇನ್ನೆಂದೂ ಇಲ್ಲಿಗೆ ಮರಳಿ ಬಾರೆನೆಂದು ನಿರ್ಧರಿಸಿ ದಾಪುಗಾಲಿಡುತ್ತಾ ತಲೆಬಾಗಿಲನ್ನು ದಢಾರನೆ ತೆಗೆದು ಮನೆಯಿಂದ ಹೊರಟುಬಿಡುತ್ತಾಳೆ!! ನಂತರ, ತನ್ನ ತಂದೆತಾಯಂದಿರಿಗೆ ತಾನು ತೆಗೆದುಕೊಂಡ ದಿಟ್ಟ ನಿರ್ಧಾರವನ್ನು ತಿಳಿಸಿ, ಮದುವೆಗೆ ವಿಚ್ಛೇದನ ನೀಡಿ ತನ್ನ ನಾಟ್ಯಕಲಾಭ್ಯಾಸದಲ್ಲಿ ತೊಡಗಿ, ನಾಟ್ಯಪ್ರದರ್ಶನಗಳಲ್ಲಿ ಯಶಸ್ಸನ್ನು ಕಾಣುತ್ತಾ ಸ್ವಲ್ಪ ಮಟ್ಟಿಗಿನ ನೆಮ್ಮದಿ ಅನುಭವಿಸುತ್ತಾಳೆ.
ಈ ಕಡೆ ಅವಳ ಗಂಡನ ಮನೆಯವರು, ಸೊಸೆ ತಮ್ಮ ಮನೆಯನ್ನು ಬಿಟ್ಟು ಹೋದದ್ದು ದೊಡ್ಡ ವಿಷಯವೇನಲ್ಲ ಎಂಬಂತೆ ಇನ್ನೊಂದು ಹುಡುಗಿಯನ್ನು ಸೊಸೆಯಾಗಿ ತಂದುಕೊಳ್ಳುತ್ತಾರೆ! ಸಿನಿಮಾ ಕೊನೆಯಾಗುವ ಹೊತ್ತಿನಲ್ಲಿ ಈ ಹೊಸಹುಡುಗಿಯ(ಹೊಸ ಸೊಸೆಯ) ಮೂಕದುಡಿಮೆ ಪ್ರಾರಂಭವಾಗಿರುತ್ತದೆ! ಅಲ್ಲಿಗೆ `ಒಬ್ಬ ಸೊಸೆಯ `ಪ್ರತಿಭಟನೆ’ಯಿಂದ ಅಸೂಕ್ಷ್ಮ, ಪುರಾತನ, ಹಾಗೂ ಕೋಣನ ಚರ್ಮದ(ಎಮ್ಮೆ ಚರ್ಮ ಎಂದು ಸಾಮಾನ್ಯವಾಗಿ ಬಳಸುವ ಕಡೆ ಬೇಕೆಂದೇ ಕೋಣನ ಚರ್ಮ ಎಂಬ ಪದ ಬಳಸಿದ್ದೇನೆ) ಗಂಡಾಳಿಕೆಯ ವ್ಯವಸ್ಥೆಗೆ ಏನೂ ಪರಿಣಾಮವಾಗುವುದಿಲ್ಲ, ಅದರ ಕೂದಲು ಸಹ ಕೊಂಕುವುದಿಲ್ಲ, ಅದು ಮಾಡಿಟ್ಟಿರುವ `ಮನೆ’ಗಳಲ್ಲಿ ಮನೆವಾಳ್ತೆ ದುಡಿತ ಮಾಡಲು ಒಬ್ಬ ಮೂಗಬಸವಿ ಹೋದರೆ ಇನ್ನೊಬ್ಬ ಮೂಗಬಸವಿ ಬರುತ್ತಾಳೆ, ಮೂಗಬಸವಿಯರಿಗೇನೂ ಕೊರತೆ ಇಲ್ಲ ನಮ್ಮ ಸಮಾಜದಲ್ಲಿ’ ಎಂಬ ನಿರ್ದಯಿ ಸಂದೇಶ ಸಿಗುತ್ತದೆ ನೋಡುಗರಿಗೆ. ಈ ಸಿನಿಮಾ ನೋಡುಗರನ್ನು ಬಹಳ ಕಾಡುತ್ತದೆ, ಕೂತ ಕುರ್ಚಿಯಲ್ಲಿ ಮಿಸುಕಾಡುವಂತೆ ಮಾಡುತ್ತದೆ. ಮನೆವಾಳ್ತೆ ಎಂಬ ಕೊನೆಯಿಲ್ಲದ ಮತ್ತು ಯಾರೂ ಧನ್ಯವಾದ ಹೇಳದ(ಥ್ಯಾಂಕ್‌ಲೆಸ್ ಎನ್ನುವ ಅರ್ಥ) ಕೆಲಸವನ್ನು ಮಾಡಿ ಅಭ್ಯಾಸ ಇರುವವರಿಗಂತೂ `ಈ ಸಿನಿಮಾದಲ್ಲಿರುವುದು ನನ್ನದೇ ಕಥೆ’ ಅನ್ನಿಸಿದರೆ ಏನೂ ಆಶ್ಚರ್ಯ ಇಲ್ಲ.
`ದಿ ಗ್ರೇಟ್ ಇಂಡಿಯನ್ ಕಿಚನ್’ ಎಂಬ ಈ ಸಿನಿಮಾವು ಲಕ್ಷಾಂತರ ನೋಡುಗರ ಮತ್ತು ಅನೇಕ ವಿಮರ್ಶಕರ ಮನ ಗೆದ್ದದ್ದು ಹಾಗೂ ಕೇರಳದ ಸರ್ಕಾರವು ಈ ಸಿನಿಮಾಕ್ಕೆ ವರ್ಷದ ಅತ್ಯುತ್ತಮ ಸಿನಿಮಾ ಎಂಬ ರಾಜ್ಯಪ್ರಶಸ್ತಿ ಕೊಟ್ಟದ್ದು ಸ್ವಾಗತಾರ್ಹ ವಿಷಯ. ಶತಶತಮಾನಗಳಿಂದ ಗಂಡಾಳಿಕೆಯ ರೋಗದಿಂದ ನರಳುತ್ತಾ ಇದ್ದರೂ ತನಗೆ ರೋಗವಿದೆ ಎಂದು ಸಹ ಗೊತ್ತಿರದ ಗಂಡಾಳಿಕೆಯ ಜಡ್ಡುಬುದ್ಧಿಗೆ ಇಂತಹ ಸ್ತ್ರೀದೃಷ್ಟಿಯ ಕಹಿಕಷಾಯದ ಔಷಧವನ್ನು ಆಗಾಗ ಕೊಡಬೇಕಾಗುತ್ತದೆ.
ಇದೇ ಹೊತ್ತಿನಲ್ಲಿ ಪಕ್ಕಾ ಗಂಡಾಳಿಕೆಯ ದೃಷ್ಟಿಕೋನದ ಕುಟುಂಬವೊಂದಕ್ಕೆ ಸೊಸೆಯಾಗಿ ಹೋಗಿ, `ಮನೆಯಲ್ಲಿ ಮಾಡಿದ್ದನ್ನು ಮಾತ್ರ ತಿನ್ನುವುದು, ಹೊರಗಡೆ ಏನೂ ತಿನ್ನುವುದಿಲ್ಲ’ ಎಂಬ ನಿಯಮ ಇಟ್ಟುಕೊಂಡಿದ್ದ ತನ್ನ ಗಂಡ ಮತ್ತು ಅವನ ಮನೆಯವರಿಗಾಗಿ ದಿನಕ್ಕೆ ನಾಲ್ಕು ಬಾರಿ `ಬಿಸಿಬಿಸಿ ರುಚಿರುಚಿ’ ಅಡಿಗೆ-ತಿಂಡಿಯನ್ನು ತನ್ನ ಕೈಯಾರೆ ಮಾಡಿ ಮಾಡಿ ಮಾಡಿ ರೋಸಿ ಹೋದ ಮಹಿಳೆಯೊಬ್ಬಳು, ಮದುವೆಯಾಗಿ 35 ವರ್ಷದ ನಂತರ, ತನ್ನ ಮಕ್ಕಳ ಮದುವೆಯಾಗಿ ಅವರು ನೆಲೆ ನಿಂತ ಮೇಲೆ, ತಾನು ವಕೀಲರ ಬಳಿ ಹೋಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು ನೆನಪಾಗುತ್ತಿದೆ.
ಬಹುಶಃ ಸ್ತ್ರೀವಾದಿ ಚಳುವಳಿಗಳು ಮತ್ತು ಸ್ವತಃ ಮಹಿಳೆಯರು ಹೆಣ್ಣಿನ ಸಾರ್ವಜನಿಕ ಕ್ಷೇತ್ರದ ದುಡಿಮೆ-ಸಂಬಳ-ಬಿಡುವಿನ ಹಕ್ಕುಗಳಿಗಾಗಿ ಮಾಡಿದ `ಅರಿವುಳ್ಳ ಹೋರಾಟ’ವನ್ನು ಹೆಣ್ಣಿನ ಖಾಸಗಿ ಕ್ಷೇತ್ರ ಅಂದರೆ ಮನೆಯೊಳಗಿನ ದುಡಿಮೆ-`ಸಂಬಳ’-ಬಿಡುವಿನ ಹಕ್ಕುಗಳಿಗಾಗಿ ಮಾಡಿಲ್ಲ. ಅದಕ್ಕಾಗಿಯೇ ಈ ಪರಿಸ್ಥಿತಿ ಉಂಟಾಗಿದೆ, ಮತ್ತು ಈಗ ಇಂತಹ ಸಿನಿಮಾಗಳು-ಪ್ರಕರಣಗಳು ಉದ್ಭವವಾಗುತ್ತಿವೆ ಅನ್ನಿಸುತ್ತದೆ.
ನಾವೆಲ್ಲರೂ ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕಲ್ಲವೆ?

ಡಾ.ಎಲ್.ಜಿ.ಮೀರಾ ಮೂಲತಃ ಕೊಡಗಿನವರು. ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮಿಳ್ ಕಾವ್ಯ ಮೀಮಾಂಸೆ, ಮಾನುಷಿಯ ಮಾತು (1996), ಬಹುಮುಖ (1998), ಸ್ತ್ರೀ ಸಂವೇದನೆಯಲ್ಲಿ ಕನ್ನಡ ಕಥನ ಸಂಶೋಧನೆ (ಮಹಾಪ್ರಬಂಧ) (2004), ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ (ಸಂಪಾದನೆ) (2006), ಆಕಾಶಮಲ್ಲಿಗೆಯ ಘಮ ಎಂಬ ಸಣ್ಣಕತೆಯನ್ನು, ರಂಗಶಾಲೆ ಎಂಬ ಮಕ್ಕಳ ನಾಟಕವನ್ನು, ಕೆಂಪು ಬಲೂನು ಇತರೆ ಶಿಶುಗೀತೆಗಳು, ಕಲೇಸಂ ಪ್ರಕಟಣೆಯ ನಮ್ಮ ಬದುಕು ನಮ್ಮ ಬರಹದಲ್ಲಿ ಆತ್ಮಕತೆ ರಚಿಸಿದ್ದಾರೆ.