ಮದುವೆ ಆದ ಮೇಲೆ ನನ್ನಾಕೆಗೆ ಈ ಕೇಸರಿಬಾತ್ ಕತೆ ಹೇಳಿದ್ದೆ. ನಂತರ ನಾನೂ ಅವಳೂ ಬೆಳಿಗ್ಗೆ, ನನಗೆ ಸೆಕೆಂಡ್ ಶಿಫ್ಟ್ ಇದ್ದಾಗ ಕೇಸರಿ ಭಾತ್‌ಗೆ ಲಗ್ಗೆ ಹಾಕ್ತಾ ಇದ್ದೆವು. ಆಗ ತಿಂದ ಡಬರಿ ಗಟ್ಟಲೆ ಕೆಸರಿಭಾತಿನ ರುಚಿ ನನಗೆ ಈಗಲೂ ಬಾಯಿ ಸಮುದ್ರ ಮಾಡುತ್ತೆ. ಸಣ್ಣ ವಯಸ್ಸು, ಕಲ್ಲು ತಿಂದು ಅರಗಿಸಿಕೊಳ್ಳುವ ಯೌವ್ವನ ಹಾಗೂ ಸಕ್ಕರೆ ಖಾಯಿಲೆ ಅಂಟುವ ವಯಸ್ಸಲ್ಲ, ಅದರಿಂದ ಅದೆಷ್ಟೋ ಕ್ವಿಂಟಾಲ್ ಕೇಸರಿಬಾತ್‌ಗೆ ಮುಕ್ತಿ ಕಾಣಿಸಿದ್ದೆವು. ಇದು ಸುಮಾರು 83ನೇ ಇಸವಿಯವರೆಗೆ ಅನೂಚಾನವಾಗಿ ನಡೆದುಕೊಂಡು ಬಂತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಹನ್ನೆರಡನೆಯ ಕಂತು ನಿಮ್ಮ ಓದಿಗೆ
ಕಳೆದ ಸಂಚಿಕೆಯಲ್ಲಿ ರಾಜಾಜಿನಗರದಲ್ಲಿ ಆಗ ದೇವಸ್ಥಾನಗಳು ಸಾಂದ್ರತೆಯಲ್ಲಿ ಕಮ್ಮಿ ಅಂತ ಅದಕ್ಕೆ ಕಾರಣ ನಾನು ತಿಳಿದ ರೀತಿ ಹೇಳಿದ್ದೆ. ನಮ್ಮ ನಾಡಹಬ್ಬದ ಆಚರಣೆ ಬಗ್ಗೆಯೂ ತಿಳಿಸಿದೆ. ನರಸಿಂಹ ಜಯಂತಿ ಅಂಗವಾಗಿ ನಮ್ಮಲ್ಲಿ ಶ್ರೀ ಗುರುರಾಜಾಚಾರ್ ಅವರು ಶಾಮಿಯಾನ, ಚಪ್ಪರ ಹಾಕಿ ನಡೆಸುತ್ತಿದ್ದ ಉತ್ಸವ, ಅಲ್ಲಿನ ಹರಿಕತೆ, ಸಂಗೀತ ಕಚೇರಿಗಳು ಹಾಗೂ ಅವು ನಾವು ಬೆಳೆಯಲು ಪೂರಕ ವಾತಾವರಣ ಸೃಷ್ಟಿಸಿದ್ದರ ಕುರಿತೂ ಬರೆದಿದ್ದೆ. ಮುಂದೆ ಸರಿದು ನಮ್ಮ ಕನ್ನಡ ಮೇಷ್ಟರು, ಕಂಬಾರರ ನಾಟಕ ಬಂತು. ನಮ್ಮ ಮೊಟ್ಟ ಮೊದಲ ಸ್ಟ್ರೈಕ್ ಬಗ್ಗೆ ತಿಳಿಸಿ ಅದು ಹೇಗೆ ಠುಸ್ ಪಟಾಕಿ ಆಯಿತು ಎಂದು ವಿವರಿಸಿದೆ.
ಈಗ ಮುಂದೆ….
ರಾಜಾಜಿನಗರದಲ್ಲಿ ಆಗ ಅಂದರೆ ನಮ್ಮ ಎಂಟ್ರಿ ಆದಾಗ ಹೋಟಲ್ಲುಗಳು ತುಂಬಾ ಕಡಿಮೆ ಅಂದರೆ ಕಡಿಮೆ. ನಿಧಾನಕ್ಕೆ ಕೆಲವು ಹೋಟೆಲ್ಲುಗಳ ಶುರು ಆಯಿತು. ಅವುಗಳಲ್ಲಿ ಕೆಲವು ಬೇರು ಬಿಟ್ಟರೆ ಮಿಕ್ಕವು ಹಾಗೇ ಹಾರಿದವು. ರಾಮಮಂದಿರದ ಹತ್ತಿರದ ಕೆನರಾ ಬ್ಯಾಂಕ್ ಹತ್ತಿರ ಒಂದು ಹೊಟೇಲು, ಭಾಷ್ಯಂ ಸರ್ಕಲ್‌ನಿಂದ ಈ ಎಸ್ ಐ ದಾರಿಯಲ್ಲಿ ಎರಡು, ಹಳೇ ಪೊಲೀಸ್ ಸ್ಟೇಷನ್ ಮೂಲೆಯಲ್ಲಿ ಒಂದು, ಮೊದಲನೇ ಬ್ಲಾಕ್‌ನಲ್ಲಿ ಒಂದೆರೆಡು, ಭಾಷ್ಯಂ ಸರ್ಕಲ್‌ನಲ್ಲಿ ಒಂದು… ಹೀಗೆ ಚದುರಿದ್ದವು. ಈಗಿನ ಹಾಗೆ ದೊಡ್ಡ ಸಂಖ್ಯೆಯಲ್ಲಿ ಇರಲಿಲ್ಲ.
ಹಳೇ ಪೊಲೀಸ್ ಸ್ಟೇಷನ್ ಮೂಲೆಯ ಹೋಟೆಲ್‌ಗೆ ಭೇಟಿ ಹೆಚ್ಚು. ಆಗ ಈಗಿನ ಹಾಗೆ ಧೂಮಪಾನಕ್ಕೆ ರೆಸ್ಟ್ರಿಕ್ಷನ್ ಇರಲಿಲ್ಲ. ಎಲ್ಲಿ ಬೇಕಾದರೆ ಅಲ್ಲಿ ಬೀಡಿ ಸಿಗರೇಟು ಚುಟ್ಟಾ ಹತ್ತಿಸಿ ಹೊಗೆ ಬಿಡುವ ಬಿಡು ಬೀಸು ಸ್ವಾತಂತ್ರ್ಯ ಇತ್ತು! ರಸ್ತೆ ಉದ್ದಕ್ಕೂ ರೈಲಿನ ಹೊಗೆ ಹೊಮ್ಮುವ ಸಿಗರೇಟು ಸೇದುತ್ತಾ ಹೋಗುವ ನಾಗರಿಕರು ಸರ್ವೇ ಸಾಮಾನ್ಯ. ಸಿಗರೇಟು ಕೈಯಲ್ಲಿ ಇಲ್ಲದೆ ಇರುವ ಗಂಡಸು ಅಪರೂಪದ ವಸ್ತು ಆಗ. ಹಾಗೆ ಧೂಮಪಾನ ನಿರ್ಬಂಧ ಆದ ಮೇಲೆ ಅಲ್ಲಿ ಒಂದು ರೂಮು ಪಡ್ಡೆಗಳಿಗೆ ಅಂತಲೇ. ಅಲ್ಲಿ ಕಾಫಿ, ತಿಂಡಿ ಬೇಕಾದವರಿಗೆ ಧೂಮಪಾನ ಇವಕ್ಕೆ ಅವಕಾಶ ಕಲ್ಪಿಸಿಕೊಂಡಿದ್ದರು!
ಒಂದು ರೀತಿ ನಮ್ಮ ಅಡ್ಡ ಅದು. ಅದರ ಹೆಸರು ರಾಘವೇಂದ್ರ ಭವನ ಅಂತಲೋ ಏನೋ. ನಾನು ಎಪ್ಪತ್ತರಲ್ಲಿ ಫ್ಯಾಕ್ಟರಿ ಸೇರಿದಾಗ ಬೆಳಿಗ್ಗೆ ಐದೂವರೆಗೆ ಇಲ್ಲಿ ಎರಡನೇ ಕಾಫಿ ಕುಡೀತಿದ್ದೆ. ಫ್ಯಾಕ್ಟರಿ ಬಸ್ಸು ಹೋಟೆಲ್ ಎದುರೇ ನಿಲ್ಲುತ್ತಿತ್ತು. ಆರರ ಸುಮಾರಿಗೆ ಅದು ಹೊರಡಬೇಕು. ಅರ್ಧ ಗಂಟೆ ಪೂರ್ತಿ ನಮ್ಮದೇ ಸಾಮ್ರಾಜ್ಯ ಅಲ್ಲಿ.
ಬೆಳಿಗ್ಗೆ ನಾಲ್ಕೂ ಮುಕ್ಕಾಲಿಗೆ ಕೆಳಗಿನಿಂದ ನಮ್ಮಪ್ಪ ಗೋಪಿ ಗೋಪೀ ಎಂದು ಫುಲ್ ವಾಲ್ಯೂಮ್‌ನಲ್ಲಿ ಕೂಗುತ್ತಿದ್ದರು. ಮಹಡಿ ಮೇಲೆ ನಾನು ಮಲಗುತ್ತಿದುದು. ಒಂದು ಕೂಗಿಗೆ ಎದ್ದರೆ ಸರಿ, ಇಲ್ಲ ಅಂದರೆ ಬರೀ ಒಂದೊಂದು ನಿಮಿಷಕ್ಕೂ ಈ ಕೂಗು ಹೆಚ್ಚಾಗುತ್ತಿತ್ತು . ನಮ್ಮಪ್ಪನ ಗಂಟಲು ಅಂದರೆ ಒಂದು ಮೈಲಿ ದೂರಕ್ಕೆ ಕೇಳುವಷ್ಟು ಜೋರು. ನಮ್ಮ ಮನೇಲಿ ಸಾಧಾರಣ ಮಾತು ಕತೆ ಆಡಬೇಕಾದರೂ ಸಹ ಯಾವುದೋ ದೊಡ್ಡ ಜಗಳ ಆಗುತ್ತಿದೆ ಅನಿಸುವ ಹಾಗೇ ಜೋರು ದನಿಗಳು. ಕೆಲವು ಸಲ ಮಾತು ಆಡುತ್ತಾ ಆಡುತ್ತಾ ಆಚೆ ಬಂದರೆ ಮನೆ ಸುತ್ತಾ ಅಕ್ಕ ಪಕ್ಕದವರ ಕುತೂಹಲ ಮಿಶ್ರಿತ ಗುಂಪು ಕಾಣೋದು. ನಮ್ಮನ್ನು ನೋಡಿದ ಕೂಡಲೇ ಗಲಿಬಿಲಿಯಿಂದ ಅವರು ಚದರುತ್ತಿದ್ದರು. ಹಾಗಿತ್ತು, ನಮ್ಮ ಮನೆಯವರೆಲ್ಲರ ಗಂಟಲ ಶಕ್ತಿ! ನಮ್ಮ ಅಕ್ಕ ಅಂತೂ ಸ್ಕೂಲಿನಲ್ಲಿ ಮೇಡಂ ಆಗಿದ್ದೋಳು, ಇಡೀ ಸ್ಟೇಡಿಯಂ ಕೇಳಿಸುವ ಗಂಟಲು ಅವಳದ್ದು. ಅವಳು ಎಂಬತ್ತು ಪ್ಲಸ್ ಆಗಿದ್ದಾಗ ಸಹ ಅವಳ ಧ್ವನಿಗೆ ನಿದ್ದೆ ಮಾಡುತ್ತಿದ್ದ ಪುಟ್ಟ ಮಕ್ಕಳು ಬೆದರಿ ಬೆಚ್ಚಿ ಬೀಳೋವು! ಜತೆಗೆ ಅಕ್ಕನಿಗೆ ಮೇಡಮ್ಮುಗಳಿಗೆ ವಿಶಿಷ್ಟವಾದ ಇಲ್ಲಿ ನೋಡು, ಇಲ್ಲಿ ಕೇಳು ಎನ್ನುವ ಪ್ರತ್ಯಯ ಬೇರೆ ಪ್ರತೀ ವಾಕ್ಯದ ಅಂಚಿಗೆ ಸೇರಿಸುತ್ತಿದ್ದಳು. ನನ್ನ ಮಗನ ಗಂಟಲು ಸಹ ಹಾಗೇ. ಅವನು ಕ್ರಿಕೆಟ್‌ನವನು. ಬೌಂಡರಿ ಲೈನ್‌ನಲ್ಲಿ ನಿಂತು ಕೂಗಿದರೆ ಸ್ಟೇಡಿಯಂ ದಾಟಿ ಒಂದು ಮೈಲಿ ಕೇಳಿಸಬೇಕು, ಹಾಗೆ. ಬೆಳಿಗ್ಗೆ ಅಪ್ಪ ಕೂಗುತ್ತಿದ್ದ ಈ ಕೂಗಿನ ಎಫೆಕ್ಟ್ ಅಂದರೆ ಇಡೀ ರಸ್ತೆಯ ಕಾರ್ಮಿಕರು ಎದ್ದು ಕೆಲಸಕ್ಕೆ ಹೊರಡಲು ತಯಾರಾಗುತ್ತಿದ್ದರು. ಹೇಳಿ ಕೇಳಿ ನಮ್ಮ ಏರಿಯಾ ಪೂರ್ತಿ ಕಾರ್ಖಾನೆ, ಮಿಲ್ ಕೆಲಸಗಾರರಿಂದ ತುಂಬಿ ತುಳುಕುತ್ತಿತ್ತು. ಅಪ್ಪ ಇರುವವರೆಗೆ ಎಷ್ಟೋ ಮನೆಯಲ್ಲಿ ಅಲಾರಂ ಗಡಿಯಾರ ಇರಲೇ ಇಲ್ಲ ಅಂತ ನಾನು ತಮಾಷೆ ಮಾಡುತ್ತಿದ್ದೆ. ಹಾಗೆ ನೋಡಿದರೆ ನಮ್ಮಪ್ಪ ಸತ್ತ ನಂತರವೆ ನಾನು ಮನೆಗೆ ಅಲಾರಂ ಗಡಿಯಾರ ತಂದಿದ್ದು. ಮಿಲಿಟರಿ ಕ್ಯಾಂಟೀನ್‌ನಲ್ಲಿ ಗೆಳೆಯರೊಬ್ಬರು ಅಂಗಡಿಗಿಂತಲೂ ಕಡಿಮೆ ದುಡ್ಡಿಗೆ ತಂದುಕೊಟ್ಟರು. ರೇಡಿಯಂ ಡಯಲು, ಹೊರಮೈ ಕೆಂಪು ಆಕರ್ಷಕ ಬಣ್ಣ, ಪ್ಲಾಸ್ಟಿಕ್ ಬಾಡಿ ಆಗ ಅದಕ್ಕೆ ಇಪ್ಪತ್ತೆಂಟು ರೂಪಾಯಿ ಕೊಟ್ಟಿದ್ದೆ. ಮೂವತ್ತು ನಲವತ್ತು ವರ್ಷ ಅದು ನಮ್ಮ ಸೇವೆ ಸಲ್ಲಿಸಿತು. ಅದರ ಅವಶೇಷ ಇನ್ನೂ ನನ್ನ ಮನೆಯಲ್ಲಿ ಇದೆ ಹಾಗೂ ಮೊಮ್ಮಕ್ಕಳು ಆಗಾಗ ಅದನ್ನು ಇಟ್ಟುಕೊಂಡು ಆಟ ಆಡುತ್ತಾರೆ!
ಮೊದಲನೆಯ ಕಾಫಿ, ನಮ್ಮಪ್ಪ ಮಾಡಿ ಕೊಡುತ್ತಿದ್ದುದು ಮನೆಯಲ್ಲಿ ಆಗ್ತಾ ಇತ್ತು. ಬಸ್ ಸ್ಟಾಪಿಗೆ ಬಂದರೆ ಹೋಟೆಲಿನಿಂದ ಕೇಸರಿ ಭಾತ್ ಬಿಸಿಬಿಸಿಯಾಗಿ ಘಂ ಅಂತ ವಾಸನೆ ಹರಡುತ್ತಾ tempt ಮಾಡ್ತಾ ಇತ್ತು. temptation ತಡೆಯಲು ನಾವೇನು ಯತಿಗಳೇ? ಇಬ್ಬರು ಸ್ನೇಹಿತರು ನನ್ನ ಜತೆ ಸುಭಾಕರ ಹೆಸರಿನ ಮಂಗಳೂರು ಹುಡುಗ ಮತ್ತು ಪ್ರಕಾಶ ನಗರದ ಕೃಷ್ಣ ಎದುರು ಬದುರು ಕೂತು ಒಂದು ಡಬರಿ ಕೇಸರಿ ಭಾತ್ ಅದೆಷ್ಟು ಸಲ ಖಾಲಿ ಮಾಡಿದ್ದೀವಿ ಅಂತ ಲೆಕ್ಕ ಇಲ್ಲ. ಮದುವೆ ಆದ ಮೇಲೆ ನನ್ನಾಕೆಗೆ ಈ ಕೇಸರಿಬಾತ್ ಕತೆ ಹೇಳಿದ್ದೆ. ನಂತರ ನಾನೂ ಅವಳೂ ಬೆಳಿಗ್ಗೆ, ನನಗೆ ಸೆಕೆಂಡ್ ಶಿಫ್ಟ್ ಇದ್ದಾಗ ಕೇಸರಿ ಭಾತ್‌ಗೆ ಲಗ್ಗೆ ಹಾಕ್ತಾ ಇದ್ದೆವು. ಆಗ ತಿಂದ ಡಬರಿ ಗಟ್ಟಲೆ ಕೆಸರಿಭಾತಿನ ರುಚಿ ನನಗೆ ಈಗಲೂ ಬಾಯಿ ಸಮುದ್ರ ಮಾಡುತ್ತೆ. ಸಣ್ಣ ವಯಸ್ಸು, ಕಲ್ಲು ತಿಂದು ಅರಗಿಸಿಕೊಳ್ಳುವ ಯೌವ್ವನ ಹಾಗೂ ಸಕ್ಕರೆ ಖಾಯಿಲೆ ಅಂಟುವ ವಯಸ್ಸಲ್ಲ, ಅದರಿಂದ ಅದೆಷ್ಟೋ ಕ್ವಿಂಟಾಲ್ ಕೇಸರಿಬಾತ್‌ಗೆ ಮುಕ್ತಿ ಕಾಣಿಸಿದ್ದೆವು. ಇದು ಸುಮಾರು 83ನೇ ಇಸವಿಯವರೆಗೆ ಅನೂಚಾನವಾಗಿ ನಡೆದುಕೊಂಡು ಬಂತು. ಅದರ ನೆನಪು ಸಂಪೂರ್ಣ ಮಾಸಿದೆ ಅನ್ನಬೇಕಾದರೆ ಮೂರು ವರ್ಷ ಹಿಂದೆ ಮತ್ತೆ ರೀಲು ಹಿಂದಕ್ಕೆ ಓಡಿತು. ಅದು ಹೇಗೆ ಅಂದರೆ ಮಲ್ಲೇಶ್ವರದ ವೀಣಾ ಸ್ಟೋರ್ಸ್ ಹೋಟೆಲ್‌ಗೆ ಹೋದೆವು, ಮೂರು ಜನ ಗೆಳೆಯರು, ಕೃಷ್ಣ ಸುಬ್ಬರಾವ್, ಗೌತಮ ಹಾಗೂ ನಾನು. ದುಡ್ಡುಕೊಟ್ಟು ಕೂಪನ್ ತಗೊಂಡೆ. ತಟ್ಟೆಯಲ್ಲಿ ತಿಂಡಿ ತಗೊಂಡು ಮೂಲೆಯಲ್ಲಿ ನಿಂತು ಮೂರೂ ಜನ ತಿನ್ನುತ್ತಾ ಇದೀವಿ. ಸಾರ್ ಸಾಹೇಬ್ರು ಕೂಗ್ತಾ ಇದ್ದಾರೆ ನೋಡಿ ಅಂತ ಟೇಬಲ್ ಒರೆಸೋ ಹುಡುಗ ಹೇಳಿದ. ತಿಂಡಿ ದುಡ್ಡು ಕೊಡೋದು ಮರೆತೆನಾ ಅಂತ ಅಂದುಕೊಂಡು ಸಾಹೇಬರ ಹತ್ತಿರ ಹೋದೆ. ಆಗಾಗ್ಗೆ ಹೋಟೆಲ್‌ನಲ್ಲಿ ಕಂಠ ಪೂರ್ತಿ ತಿಂದು ಬಿಲ್ ಕೊಡೋದು ಮರೆತು ರಸ್ತೆಗೆ ಇಳಿಯೋದೂ, ಹೋಟಲ್ಲಿಂದ ಟೇಬಲ್ ಒರೆಸೋ ಹುಡುಗ ಸಾರ್ ಸಾರ್ ಅಂತ ಕೂಗುತ್ತಾ ಹಿಂದೆ ಬರೋದು ಅಭ್ಯಾಸ ಆಗಿಬಿಟ್ಟಿತ್ತು.
ಒಮ್ಮೆ ಅಂತೂ ನಾನು ನನ್ನ ಗೆಳೆಯ ರಾಘವನ್ ಹೋಟೆಲ್ಲಿಗೆ ಹೋದೆವು. ದೋಸೆ ವಡೆ ಕಾಫಿ ಆಯ್ತು. ಬಿಲ್ ಬಂದಾಗ ನಾನು ಕೊಡ್ತೀನಿ ಅಂತ ಅವನು, ಅವನು ಕೊಡ್ತಾನೆ ಅಂತ ನಾನು! ಕೊನೆಗೆ ಇಬ್ಬರ ಜೇಬಲ್ಲಿ ದುಡ್ಡು ಇಲ್ಲ ಅಂತ ಗೊತ್ತಾಯ್ತು. ರಾಘವನ್ನ ಅಲ್ಲೇ ಕೂಡಿಸಿ ನಾನು ಆಚೆ ಹೋಗಿ ಅದು ಹೇಗೋ ದುಡ್ಡು ತಂದು ಕೊಟ್ಟು ಋಣ ತೀರಿಸಿ ಹೊರಗೆ ಬಂದಿದ್ದೆವು..
ಹೆಂಡತಿ ಜತೆ ಹೋದಾಗಲೂ ಒಂದೆರೆಡು ಸಲ ಬಿಲ್ ಮರೆಯುವ ಈ ಪ್ರಸಂಗ ನಡೆದ ಮೇಲೆ ಬಿಲ್ ಬಂದ ಕೂಡಲೇ ಅವಳೇ ತಗೊಂಡು ಗಲ್ಲಾ ಪೆಟ್ಟಿಗೆ ಹತ್ತಿರ ನನ್ನ ನಿಲ್ಲಿಸಿ ಬಿಲ್ ಕೊಡಿ ಅಂತ ಬಿಲ್ ಕೊಡಿಸುತ್ತಿದ್ದಳು. ನನಗೇನು ಮೋಸ ಮಾಡುವ ಉದ್ದೇಶ ಖಂಡಿತ ಇರೋಲ್ಲ..
ನನ್ನ ಕೂಗಿದ ಅವರು ಆಗಿನ ನಮ್ಮ ರಾಘವೇಂದ್ರ ಭವನದ ಓನರ್ ತಮ್ಮ. ಅಣ್ಣ ಕೆಲ ವರ್ಷಗಳ ಹಿಂದೆ ಕಾಲ ಆದರಂತೆ. ಅವರನ್ನು ನೋಡಿ ಖುಷಿ ಆಯ್ತು, ಒಂದು ಗಂಟೆ ಹಳೇದು ನೆನೆದು ಮನಸು ಅರಳಿಸಿಕೊಂಡೆ! ಭಾಷ್ಯಂ ಸರ್ಕಲ್‌ನಿಂದಾ ಈ ಎಸ್ ಐ ದಾರಿಯಲ್ಲಿ ಎರಡು ಹೋಟೆಲ್ ಇತ್ತಲ್ಲಾ ಅದರಲ್ಲಿ ಒಂದು ರಾಮಪ್ರಕಾಶ್ ಎಂದೋ ರಾಮ ಪ್ರಸಾದ್ ಹೋಟೆಲ್ ಎಂದೋ ಹೆಸರು. ಅಲ್ಲಿ ಖಾಲಿ ದೋಸೆ ತುಂಬಾ ಚೆನ್ನಾಗಿ ಇರ್ತಿತ್ತು. ಚಟ್ನಿ ಸಹ ಒಳ್ಳೆ ರುಚಿ. ಅದೆಷ್ಟು ದೋಸೆ, ಚಟ್ನಿ ಖಾಲಿ ಮಾಡಿದ್ದೀವಿ ಅಂತ ಲೆಕ್ಕ ಇಲ್ಲ.
ಕೆಲವು ಸಲ ಮಾತು ಆಡುತ್ತಾ ಆಡುತ್ತಾ ಆಚೆ ಬಂದರೆ ಮನೆ ಸುತ್ತಾ ಅಕ್ಕ ಪಕ್ಕದವರ ಕುತೂಹಲ ಮಿಶ್ರಿತ ಗುಂಪು ಕಾಣೋದು. ನಮ್ಮನ್ನು ನೋಡಿದ ಕೂಡಲೇ ಗಲಿಬಿಲಿಯಿಂದ ಅವರು ಚದರುತ್ತಿದ್ದರು. ಹಾಗಿತ್ತು, ನಮ್ಮ ಮನೆಯವರೆಲ್ಲರ ಗಂಟಲ ಶಕ್ತಿ! ನಮ್ಮ ಅಕ್ಕ ಅಂತೂ ಸ್ಕೂಲಿನಲ್ಲಿ ಮೇಡಂ ಆಗಿದ್ದೋಳು, ಇಡೀ ಸ್ಟೇಡಿಯಂ ಕೇಳಿಸುವ ಗಂಟಲು ಅವಳದ್ದು. ಅವಳು ಎಂಬತ್ತು ಪ್ಲಸ್ ಆಗಿದ್ದಾಗ ಸಹ ಅವಳ ಧ್ವನಿಗೆ ನಿದ್ದೆ ಮಾಡುತ್ತಿದ್ದ ಪುಟ್ಟ ಮಕ್ಕಳು ಬೆದರಿ ಬೆಚ್ಚಿ ಬೀಳೋವು!
ಎಪ್ಪತ್ತರ ದಶಕದ ನಡುಭಾಗದಲ್ಲಿ ನಮ್ಮ ಮನೆಯ ಹಿಂಭಾಗದಲ್ಲಿ ಇದ್ದ ಕರಿಗಿರಿ ನರಸಿಂಹ ಮೂರ್ತಿ ಇಡ್ಲಿ ವ್ಯಾಪಾರ ಶುರು ಮಾಡಿದರು. ಅವರು hmt ಯಲಿ ಕೆಲಸ ಮಾಡ್ತಿದ್ದರು. ದೇವರಾಯನ ದುರ್ಗದಲ್ಲಿ ರಥೋತ್ಸವ ಆದಾಗ ಅಲ್ಲಿ ಇವರೂ ಸೇವೆ ಸಲ್ಲಿಸುತ್ತಿದ್ದರು. ಅಲ್ಲಿ ನಾವು ಭಾಗವಹಿಸಿದ ನೆನಪು. ನಮ್ಮ ಮನೆಯವರೆಲ್ಲರಿಗೂ ಗೊತ್ತಿದ್ದೋರು. ಇವರ ಇಡ್ಲಿಗೆ ನಾವು ಅದು ಹೇಗೆ ಅಡಿಕ್ಟ್ ಆದೆವು ಅಂದರೆ ಬೆಳಿಗ್ಗೆ ಮನೇಲಿ ತಿಂಡಿ ಆದಮೇಲೆ ಸಹ ಅಲ್ಲಿ ಹೋಗಿ ಇಡ್ಲಿ ತಿಂದು ಬರ್ತಾ ಇದ್ದೋ. ನಮ್ಮ ಎರಡನೇ ಅಣ್ಣನ ಮಗ ಮಧು ಅಂತೂ ಇಲ್ಲಿಯ ಇಡ್ಲಿಯಿಂದಲೇ ಬೆಳೆದವನು. ತಾತನ ಜತೆ ಹೋಗಿ ಅಲ್ಲಿ ಇಡ್ಲಿ ತಿಂದು ಬರೋದನ್ನ ಎರಡು ಮೂರನೇ ವಯಸ್ಸಿನಲ್ಲೇ ಶುರು ಮಾಡಿಕೊಂಡ ಅವನಿಗೆ ಬೆಂಗಳೂರು ಒಂದೇ ಅಲ್ಲ, ಇಡೀ ಪ್ರಪಂಚದಲ್ಲಿ ಎಲ್ಲಿ ಇಡ್ಲಿ ಚೆನ್ನಾಗಿರುತ್ತೆ, ಅದಕ್ಕೆ ಚಟ್ನಿ ಎಲ್ಲಿ ಸಖತ್ ಆಗಿರುತ್ತೆ ಅಂತ ಗೊತ್ತು…. ಇಡೀ ಪ್ರಪಂಚ ಸುತ್ತಿರುವ ಇನ್ನೊಬ್ಬ ಅಂದರೆ ಇವನ ಅಣ್ಣ ರಘು. ಇಡ್ಲಿ, ಈ ವಿವರದ ಎನ್ಸೈಕ್ಲೋಪೀಡಿಯಾ ಅಂದರೆ ಮಧು! ಈಗ ಕರಿಗಿರಿ ಇಲ್ಲ, ಅವರು ಅಂದು ಶುರು ಮಾಡಿದ ಪುಟ್ಟ ಹೋಟೆಲ್ ಇಂದು ದೊಡ್ಡದಾಗಿ ಬೆಳೆದಿದೆ. ಎಲ್ಲಾ ರೀತಿಯ ಕುರುಕಲು, ಪೇರಿಸಿರುವ ಸಿಹಿ ತಿನಿಸುಗಳು ಬಾಯಲ್ಲಿ ನೀರೂರಿಸುವ ಹಾಗಿದೆ. ಕರಿಗಿರಿ ಅವರ ಮನೆಯವರು ಈಗ ನವೀಕರಿಸಿದ ತಾಣದಲ್ಲಿ ವಹಿವಾಟು ಮುಂದುವರೆಸಿಕೊಂಡು ಬಂದಿದ್ದಾರೆ. ಈಗಲೂ ಅಲ್ಲಿಗೆ ಆಗಾಗ ಹೋಗುವ ಇರಾದೆ ಹುಟ್ಟುತ್ತದೆ. ಹೋದಾಗ ಹಳೇ ನೆನಪಿನ ಸಂಗಡ ತಾಜಾ ತಿನಿಸು ಹೊಟ್ಟೆ ಸೇರುತ್ತದೆ.
ರಾಜಾಜಿನಗರದ ಮತ್ತೊಂದು ವಿಶೇಷ ಅಂದರೆ ಸಂಜೆ ಆಗುತ್ತಿದ್ದ ಹಾಗೆ ರಸ್ತೆ ಬದಿಯಲ್ಲಿ ತೆರೆದುಕೊಳ್ಳುತ್ತಿದ್ದ ಬೋಂಡಾ ಅಂಗಡಿಗಳು. ಒಂದು ಒಂದೂವರೆ ಕಿಮೀ ರಸ್ತೆಯಲ್ಲಿ ಹತ್ತೋ ಹದಿನೈದು ಅಂಗಡಿಗಳು. ಸೀಮೆ ಎಣ್ಣೆ ಒಲೆ, ಅದರ ಮೇಲೆ ಬಾಂಡಲಿ, ಅದರಲ್ಲಿ ಕುದಿಯುತ್ತಿರುವ ಎಣ್ಣೆ. ಅದರ ಹಿಂದೆ ಬನಿನು ಪಂಚೆ ಧರಿಸಿದ ಸ್ಟೂಲಿನ ಮೇಲೆ ಕೂತ ಓನರ್. ಇನ್ನೊಂದು ಪಕ್ಕದಲ್ಲಿ ಒಂದು ಗಾಜಿನ ಪೆಟ್ಟಿಗೆ, ಅವರ ಮುಂದೆ ಹಿಟ್ಟು ಕಲಿಸಿದ ಪಾತ್ರೆಗಳು. ಕೆಲವೊಮ್ಮೆ ಅವರ ಹೆಂಡತಿ ಅಥವಾ ಮಗಳು ನೆರವಿಗೆ. ಆಲೂ ಬೋಂಡಾ, ಈರುಳ್ಳಿ ಪಕೋಡ, ಮಸಾಲೆ ವಡೆ ಹಾಗೂ ಬಜ್ಜಿ ತುಂಬಾ ಸಾಮಾನ್ಯ ಕರಿದ ತಿಂಡಿ ಆಗ. ಸುಮಾರು ದಿವಸ ಆದಮೇಲೆ ಮೆಣಸಿನಕಾಯಿ ಬಜ್ಜಿ ಪ್ರವೇಶ ಪಡೆಯಿತು. ನಂತರ ಕೆಲವರು ಪುಟ್ಟ ಆಕಾರದ ಉದ್ದಿನ ವಡೆ ಶುರು ಮಾಡಿದರು. ಸಂಜೆ ಶುರುವಾದ ಅಂಗಡಿ ಒಂಬತ್ತಕ್ಕೆ ಕ್ಲೋಸ್. ಅಷ್ಟರಲ್ಲೇ ಜೇಬಿನ ತುಂಬಾ ವ್ಯಾಪಾರದ ಝಣ ಝಣ ದುಡ್ಡು. ಎಲ್ಲಾ ಅಂಗಡಿಗಳಲ್ಲೂ ಜನರ ರಶ್ ಅಂದರೆ ರಶ್. ಗಿರಾಕಿಗೆ ಯಾವುದೋ ಅಂಗಡಿ ರುಚಿ ಹಿಡಿಸಿತು ಅಂದರೆ ಆತ ಅಲ್ಲಿ ಖಾಯಂ! ಎರಡು ರೂಪಾಯಿಗೆ ಮನೆಯವರೆಲ್ಲ ತಿನ್ನುವಷ್ಟು ಬೋಂಡಾ, ವಡೆ, ಬಜ್ಜಿ! ಇದು ಆಗ ಹೆಚ್ಚೂ ಕಡಿಮೆ ಎಲ್ಲಾ ಮನೆಗಳ ಪ್ರತಿದಿನದ ಒಂದು ಅವಿಭಾಜ್ಯ ಅಂಗ. ಆಗ ಇನ್ನೂ ಕೊಲೆಸ್ಟರಾಲ್ ಹೆಸರು ಗೊತ್ತಿರಲಿಲ್ಲ ಮತ್ತು ಹಾರ್ಟ್ ಅಟ್ಯಾಕ್ ಆಗಿ ಹೆಚ್ಚು ಜನ ಸಾಯ್ತಾ ಇರಲಿಲ್ಲ. ಅದರ ಜತೆ ಇನ್ನೊಂದು ಆಕರ್ಷಣೆ ಎಂದರೆ ಈ ಕರಿದ ತಿಂಡಿಗಳು ಎಣ್ಣೆಯಿಂದ ತೆಗೆದಾಗ ಪುಡಿ ಪುಡಿ ಸಹ ಬರುತ್ತಿತ್ತು. ಅದು ಗಿರಾಕಿಗಳಿಗೆ ಮಾರಾಟ ಆಗುತ್ತಿರಲಿಲ್ಲ. ಪುಟ್ಟ ಮಕ್ಕಳು ಬಂದು ಪುಡಿ ಕೊಡಿ ಅಂತ ಕೇಳಿದರೆ ಒಂದು ಪೇಪರ್‌ನಲ್ಲಿ ಈ ಪುಡಿ ಹಾಕಿ ಪೊಟ್ಟಣ ಕಟ್ಟಿ ಕೊಡೋರು. ಈ ನೆನಪು ಮತ್ತೆ ಮರುಕಳಿಸಿದ್ದು ಕಳೆದ ವರ್ಷ. ನಮ್ಮ ದೊಡ್ಡಣ್ಣನ ಮಗಳು ಶಶಿ “ನಮಗೆ ಪುಡಿ ಇಸ್ಕೊಂಡ್ ಬಾ ಅಂತ ಕಳಿಸುತ್ತ ಇದ್ಯಲ್ಲ, ನಾವು ಚಿಕ್ಕವರಿದ್ದಾಗ…” ಅಂತ ಜ್ಞಾಪಿಸಿದಾಗ! ಇದು ನನಗೆ ಮರೆತೇ ಹೋಗಿತ್ತು.
ರಸ್ತೆ ಬದಿ ಫುಟ್ ಪಾತ್‌ನಲ್ಲಿ ನಾನ್ ವೆಜ್ ಅಂಗಡಿಗಳು ಶುರು ಆಗಿದ್ದು ಇನ್ನೂ ತಡವಾಗಿ. ಅದಕ್ಕೆ ಮೊದಲು ಪಾನಿಪುರಿ ತಳ್ಳು ಗಾಡಿಗಳು ಬಂದವು. ರಾಮಚಂದ್ರಪುರ ಮತ್ತು ಚಾಮರಾಜಪೇಟೆಯಲ್ಲಿ ಒಬ್ಬ ಸೇ ಟು ಐವತ್ತು ಅರವತ್ತು ತಳ್ಳುಗಾಡಿ ಇಟ್ಟುಕೊಂಡು ಕೆಲಸದವರ ನೆರವಿನಿಂದ ಪಾನಿಪುರಿ ಸಾಮ್ರಾಜ್ಯ ನಡೆಸುತ್ತಿದ್ದ. ದೇವನಾಥಾಚಾರ್ ರಸ್ತೆಯಲ್ಲಿನ ಒಂದು ಕಾಂಪೌಂಡ್‌ನಲ್ಲಿ ಸಾಲಾಗಿ ನಿಲ್ಲಿಸಿದ್ದ ಪಾನಿ ಪೂರಿ ಗಾಡಿಗಳನ್ನು ನೋಡಿ ಆಶ್ಚರ್ಯಪಟ್ಟಿದ್ದೆ, ಅದು ಹೇಗೆ ಇಷ್ಟೊಂದು ಗಾಡಿಯನ್ನ ಒಬ್ಬರೇ ಮ್ಯಾನೇಜ್ ಮಾಡುತ್ತಾರೆ ಅಂತ! ನಾನ್ ವೆಜ್ ಅಂಗಡಿ ಶುರು ಆದ ನಂತರ ಗೋಬಿ ಮಂಚೂರಿ ಅಂಗಡಿಗಳೂ ಬಂದವು. ನಂತರ ಅಮೆರಿಕನ್ ಕಾರ್ನ್, ಮೋಮೋಸ್ ಕೂಡ ಬಂದಿವೆ.
ನಾನು ನನ್ನ ಸಂಸಾರ ಶುರು ಮಾಡಿದಾಗ ನಮ್ಮ ಹೊಸಾ ಏರಿಯಾದಲ್ಲಿ ಒಂದು ಬೋಂಡಾ ಅಂಗಡಿ ಇಡುವ ಮಹದಾಸೆ ಇತ್ತು. ನನ್ನ ಈಡೇರದ ಹಲವು ಸಾವಿರ ಆಸೆಗಳಲ್ಲಿ ಈ ಬೋಂಡಾ ಅಂಗಡಿ ಇಡುವ ಆಸೆ ಸಹಾ ಒಂದು. ಪುನರ್ಜನ್ಮ ಎನ್ನುವುದು ಇದ್ದು ನಾನು ಮತ್ತೆ ಮತ್ತೆ ಹುಟ್ಟುತ್ತೇನೆ ಎಂದಾದರೆ ಮುಂದಿನ ಯಾವುದೋ ಜನ್ಮದಲ್ಲಿ ಒಂದು ಬೋಂಡಾ ಅಂಗಡಿ ಇಡುವುದು ಶತಸಿದ್ಧ!
ಐಸ್ ಕ್ರೀಮ್ ಅಂಗಡಿಗಳು ಆಗ ಇನ್ನೂ ಶುರು ಆಗಿರಲಿಲ್ಲ. ಅಲ್ಲೇ ಹೊಟೇಲಿನಲ್ಲಿ ಕೂತು ತಿಂದ ಹಾಗೆ ತಿನ್ನುವ ಐಸ್ ಕ್ರೀಮ್ ಅಂಗಡಿ ಇನ್ನೂ ಹುಟ್ಟಿರಲಿಲ್ಲ. ಎಂ ಜಿ ರಸ್ತೆಯಲ್ಲಿ ಒಂದು ಐಸ್ ಕ್ರೀಮ್ ಅಂಗಡಿ ತುಂಬಾ ಪ್ರಸಿದ್ಧವಾಗಿತ್ತು. ಅದು ಇನ್ನೂ ಈ ಕಡೆ ವಿಸ್ತಾರ ಆಗಿರಲಿಲ್ಲ. ಎಪ್ಪತ್ತರ ದಶಕದ ನಡುವಿನಲ್ಲಿ ಜಾಯ್ ಐಸ್ ಕ್ರೀಮ್ ತುಂಬಿಕೊಂಡು ಗಾಡಿ ಬರುತ್ತಿತ್ತು. ಅದಕ್ಕೆ ಮೊದಲು ಐಸ್ ಕ್ಯಾಂಡಿ ಗಾಡಿಗಳು ತುಂಬಾ ಓಡಾಡುತ್ತಿತ್ತು. ಶ್ರಿರಾಮಪುರ, ರಾಮಚಂದ್ರ ಪುರದಲ್ಲಿ ಐಸ್ ಕ್ಯಾಂಡಿ ಫ್ಯಾಕ್ಟರಿ ಇತ್ತು. ಅಲ್ಲಿ ತಯಾರಾದ ಐಸ್ ಕ್ಯಾಂಡಿಗಳನ್ನು ಐಸ್ ತುಂಬಿದ ಪೆಟ್ಟಿಗೆಯಲ್ಲಿಟ್ಟು ಮಾರಲು ತರುತ್ತಿದ್ದರು. ಯಾವುದೋ ನೀರಿನಲ್ಲಿ ಮಾಡ್ತಾರೆ ಕೆಮ್ಮು ಬರುತ್ತೆ, ನೆಗಡಿ ಬರುತ್ತೆ ಅಂತ ಮನೇಲಿ ದೊಡ್ಡವರು ಹೆದರಿಸುವುದು ಸಾಮಾನ್ಯ. ಆದರೂ ಹಠ ಮಾಡಿ ಮೊಂಡು ಹಿಡಿದು ಅದನ್ನು ತೆಗೆಸಿಕೊಂಡು ಚೀಪುವುದು ಅದೇನೋ ಆನಂದ ಕೊಡುತ್ತಿತ್ತು. ಒಂದೆರೆಡು ದಿನ ಆದಮೇಲೆ ಕೊಕ್ ಕೋಕ್ ಕೆಮ್ಮುವುದು, ಬೈಸಿಕೊಳ್ಳುವುದು.. ಇದೂ ಸಹ ಮಾಮೂಲು. ಕೆಲವು ಸಲ ಈ ಐಸ್ ಕ್ಯಾಂಡಿಗೆ ಕರೀ ದ್ರಾಕ್ಷಿ ಹುದುಗಿಸಿ ಮಾರಾಟ ಮಾಡುತ್ತಿದ್ದರು. ದ್ರಾಕ್ಷಿ ಅದು ಹೇಗೆ ಒಳಗಡೆ ಇಡ್ತಾರೆ ಅಂತ ಆಶ್ಚರ್ಯ ಆಗೋದು. ಈಗ ಅಂತಹ ಐಸ್ ಕ್ಯಾಂಡಿ ನಾನು ಎಲ್ಲೂ ನೋಡಿಲ್ಲ.
ಜಾಯ್ ಐಸ್ ಗ್ರಾಹಕರನ್ನು ಸೆಳೆಯಲು ಹಲವಾರು ಪ್ರಯೋಗ ಮಾಡುತ್ತಿದ್ದರು. ಪೇಪರ್ ಕಪ್‌ನಲ್ಲಿ ಮೊದಲಿಗೆ ಐಸ್ ಕ್ರೀಮ್ ಮಾರುಕಟ್ಟೆಗೆ ಬಿಟ್ಟರು ಎಂದು ನೆನಪು. ಐಸ್ ಕ್ರೀಮ್ ತಿನ್ನಲು ಪುಟ್ಟ ಪ್ಲಾಸ್ಟಿಕ್ ಚಮಚ ಇರುತ್ತಿತ್ತು. ಈಗ ಅದು ಮರದ ಸ್ಪೂನ್.
ಪೇಪರ್ ಕಪ್ ನಂತರ ಅವರ ಪ್ರಯೋಗ ಕಡ್ಡಿ ಸಿಕ್ಕಿಸಿ ಕ್ಯಾಂಡಿ ತಯಾರಿ, ಕ್ಯಾಂಡಿ ಸುತ್ತಲೂ ಚಾಕೊಲೇಟ್ ಲೇಪನ, ನಂತರ ಬಾಲ್ ಐಸ್. ಪ್ಲಾಸ್ಟಿಕ್ ಚೆಂಡಿನಲ್ಲಿ ಐಸ್ ತುಂಬಿ ಅದಕ್ಕೆ ಮುಚ್ಚಳ ಹಾಕಿ ಮಾರುವುದು. ಇದೂ ಸಹ ತುಂಬಾ ಪಾಪ್ಯುಲರ್ ಆಗಿತ್ತು. “ಬಾಲ್ ಐಸ್ ತಂದು ತಿಂತಾ ಇದ್ವೆಲ್ಲಾ, ಆ ಬಾಲುಗಳು ಇಟ್ಕೊಂಡು ಆಟ ಆಡ್ತಾ ಇದ್ದೆವು. ಸುಮಾರು ವರ್ಷ ಆ ಬಾಲ್ ನಮ್ಮ ಹತ್ತಿರ ಇತ್ತು” ಎಂದು ಗೆಳೆಯ ಶಶಿ ಇದನ್ನು ನೆನೆಸಿಕೊಳ್ಳುತ್ತಾರೆ.
(ಮುಂದುವರೆಯುತ್ತದೆ…)
ಎಚ್. ಗೋಪಾಲಕೃಷ್ಣ ಬೆಂಗಳೂರಿನ BEL ಸಂಸ್ಥೆಯಲ್ಲಿ ಸ್ಪೋರ್ಟ್ಸ್ ಆಫೀಸರ್ ಜೊತೆಗೆ ಹಲವು ಹುದ್ದೆಗಳನ್ನು ನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ. ರಾಜಕೀಯ ವಿಡಂಬನೆ ಮತ್ತು ಹಾಸ್ಯ ಬರಹಗಳತ್ತ ಒಲವು ಹೆಚ್ಚು.
I LIKE YOUR PAPER VERY MUCH,LET ME KNOW YOUR NUMBER -I AM THE BROTHER OF GOPALAKRISHNA, I THANK YOU GOPI,I TRIED TO CONTACT YOU AND YOUR FAMILY MEMBERS. I HEARD SUBBU HAS COMMITED SUICIDE WITH THEIR FAMILY.SEE YOU SOME TIME,.
ಶ್ರೀ ಗೌತಮ್,can you post this comment in my name.ನನ್ನ ಪೋಸ್ಟ್ ತೆಗೆದು ಕೊಳ್ತಾ ಇಲ್ಲ.Sorry for the trouble
Anil kumar,
You are misinformed.Subbu had a natural death.I dont know how these ideas comes to some ones head.I am pained.
Please send your number.How is your brother Gopalakrishna and sisters?I remember Prasanna who was at Sardar patels..
Above msg is on the behalf of sri. H. Gopalakrishna(author of this article)
ಶ್ರೀ ಅನಿಲ್, ಸುಬ್ಬುದು ಸಹಜ ಸಾವು. ಯಾರೋ ಕಿಡಿಗೇಡಿಗಳು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ, ಅಷ್ಟೇ. ನಿಮ್ಮ ನಂಬರು ರವಾನಿಸಿ. ನಿಮ್ಮ ಸಂಗಡ ಮಾತಾಡಲು ನನಗೂ ಕುತೂಹಲ
ಅನಿಲ್, ನೀವು ಶಾಮರಾವ್ ಮನೆ ಹಿಂದೆ ಇದ್ದಿರಾ
Anil kumar,
You are misinformed.Subbu had a natural death.I dont know how these ideas comes to some ones head.I am pained.
Please send your number.How is your brother Gopalakrishna and sisters?I remember Prasanna who was at Sardar patels..