ಚಿಕ್ಕ ಪಟ್ಟಣದಲ್ಲಿ ಆಗಾಗ ಸಿಕ್ಕುವ ತಾತ್ಕಾಲಿಕ ಕೆಲಸಗಳನ್ನು ಮಾಡುತ್ತಾ ಒಂದಷ್ಟು ಸಂಪಾದಿಸಿದರೂ ಒಂದೊಂದೇ ತನ್ನ ಕನಸುಗಳು ನೆಲವನ್ನಪ್ಪುವುದನ್ನು ಸಹಿಸಲಾರದ ತಾಯಿ ಗಂಡನನ್ನು ಸದಾ ಕಾಲ ಮೂದಲಿಸುವುದು, ಅವನಿಂದ ಹೊಡೆತ ತಿನ್ನುವುದು ದಿನನಿತ್ಯದ ಕಥೆಯಾಗಿತ್ತು. ಎಳೆತನದಿಂದಲೂ ತಾನೂ ಕೂಡ ಹೊಡೆತ ತಿನ್ನುವುದು, ಎಲ್ಲರ ಮನೆಯ ಕಥೆಯೂ ಹಾಗೆ ಇರುತ್ತದೆ ಎಂದು ಹುಡುಗ ಗ್ರೆಗೊರಿ ನಂಬಿದ್ದ. ಹೊರಗಿನ ಪ್ರಪಂಚಕ್ಕೆ ತಮ್ಮ ಕುಟುಂಬವನ್ನು ಒಂದು ಆನಂದ ತುಂಬಿದ ಸಂಸಾರ ಎಂದು ತೋರಿಸಲು ತಾಯಿ ಬಹಳ ಪ್ರಯತ್ನಿಸುತ್ತಿದ್ದಳು. ಆದರೂ ಮನೆಯ ಪರಿಸರ ಹುಡುಗನ ಮೇಲೆ ಆಳವಾದ ಪ್ರಭಾವವನ್ನ ಬೀರಿತ್ತು. ಅವನು ಮನೆ ಬಿಟ್ಟು ಓಡಿಹೋಗುತ್ತಿದ್ದ.
ಡಾ. ವಿನತೆ ಶರ್ಮ ಬರೆಯುವ ಆಸ್ಟ್ರೇಲಿಯಾ ಅಂಕಣ
೨೦೧೬ನೇ ಇಸವಿ. ಲಿಸ್ಮೋರ್ ಪಟ್ಟಣದ ಸದರ್ನ್ ಕ್ರಾಸ್ ವಿಶ್ವವಿದ್ಯಾನಿಲಯದಲ್ಲಿ ಆ ದಿನ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಗ್ರೆಗೊರಿ ಪೀಲ್ ಸ್ಮಿತ್ ಎಂಬಾತ ತನ್ನ ಪಿ ಎಚ್ ಡಿ ಪದವಿಯನ್ನು ಸ್ವೀಕರಿಸಿ ಡಾಕ್ಟರ್ ಸ್ಮಿತ್ ಎಂದು ಕರೆಸಿಕೊಂಡು ಆ ನಂತರ ನಡೆದ ಭೋಜನಕೂಟ, ಪ್ರೆಸ್ ಸಂದರ್ಶನ ಎಲ್ಲವನ್ನೂ ಮುಗಿಸಿ ಮನೆಗೆ ಮರಳಿದ್ದರು. ಇದಕ್ಕೂ ಹಲವಾರು ವಾರಗಳ ಮುಂಚೆ ಅವರಿಗೆ ಅಂಚೆಯಲ್ಲಿ ಚಿಕ್ಕದೊಂದು ಪೊಟ್ಟಣ ಬಂದಿತ್ತು. ತನ್ನ ಸಹೋದರಿಯಿಂದ ಬಂದಿದ್ದ ಅಂಚೆಯನ್ನು ಬಿಚ್ಚಿ ನೋಡಿದ ಗ್ರೆಗೊರಿ ಸಂತೃಪ್ತಿಯಿಂದ ಬೀಗಿದ್ದರು.
ಪೊಟ್ಟಣದಿಂದ ಹೊರಬಂದಿದ್ದು Oxley ಹೈಸ್ಕೂಲ್ ಟೈ. ಆ ಹೈಸ್ಕೂಲ್ ಇದ್ದದ್ದು ಗ್ರೆಗೊರಿಯವರ ಹುಟ್ಟೂರಾದ Tamworth ಎಂಬ ಚಿಕ್ಕ ಪಟ್ಟಣದಲ್ಲಿ. ಬೇರೆಲ್ಲರಂತೆ ಹದಿನಾರು ವರ್ಷಕ್ಕೆ ಹೈಸ್ಕೂಲ್ ವಿದ್ಯಾಭ್ಯಾಸವನ್ನು ಮುಗಿಸಿ ಪಾಸಾದ ಸಂತೋಷ ಗ್ರೆಗರಿಗೆ ದಕ್ಕಲಿಲ್ಲ. ಹದಿನಾಲ್ಕನೇ ವಯಸ್ಸಿನಲ್ಲಿ ಹುಡುಗನ ಅಪ್ಪ ಬಲವಂತದಿಂದ ಅವನನ್ನು ಶಾಲೆಯಿಂದ ಬಿಡಿಸಿದ್ದರು. ಹೈಸ್ಕೂಲ್ ಮುಗಿಸಲಾಗದಿದ್ದ ಗ್ರೆಗೊರಿ ಮನಸ್ಸಿನಲ್ಲಿ ಪಾಸಾದವರಿಗೆ ಮಾತ್ರ ಲಭಿಸುತ್ತಿದ್ದ ಆ ಹೈಸ್ಕೂಲಿನ ಟೈ ಅಚ್ಚೊತ್ತಿತ್ತು. ತಾನು ಅದನ್ನು ಪಡೆಯಲಾಗಲಿಲ್ಲವೆಂಬ ಕೊರಗಿತ್ತು. ಡಾಕ್ಟರೇಟ್ ಪಡೆದ ದಿನ ಮನೆಗೆ ಮರಳಿದವರೆ ಅವರು ಮೇಜಿನ ಡ್ರಾ ಎಳೆದು ಟೈ ಕೈಗೆತ್ತಿಕೊಂಡರು. ಅದನ್ನು ಕೊರಳ ಸುತ್ತ ಹಾಕಿಕೊಂಡು ಟೈ ಗಂಟನ್ನು ಕಟ್ಟಿದರು. ನಿಧಾನವಾಗಿ ಕನ್ನಡಿಯತ್ತ ತಿರುಗಿ ತಮ್ಮನ್ನು ತಾವು ನೋಡಿಕೊಂಡು ದೀರ್ಘವಾದ ಉಸಿರನ್ನೆಳೆದುಕೊಂಡರು. ಪಿ ಎಚ್ ಡಿ ಡಿಗ್ರಿ ಪಡೆದ ದಿನವೇ ಅವರು ಹೈಸ್ಕೂಲ್ ಕೂಡ ಪಾಸಾಗಿದ್ದರು.
ಗ್ರೆಗೊರಿ ಸ್ಮಿತ್ ರವರ Out of the Forest ಆತ್ಮಕಥನ ಸುಲಭವಾಗಿ ಓದಿಸಿಕೊಂಡು ಹೋಗುವ ಪುಸ್ತಕವಲ್ಲ. ಕೆಲವು ಆತ್ಮಕಥೆಗಳೆ ಹಾಗೆ. ಅವುಗಳ ಒಳಗೆ ಹೊಕ್ಕು ಅವರ ಆತ್ಮಕ್ಕೆ ಹಲೋ ಹೇಳಿ ಒಂದಷ್ಟು ಪರಿಚಯವನ್ನಾದರೂ ಮಾಡಿಕೊಳ್ಳುವುದಾದರೆ ಓದುಗರಾಗಿ ನಾವು ಗೆದ್ದಂತೆ. ಆತ್ಮಕಥನಕ್ಕೂ ಒಂದಷ್ಟು ಸಮಾಧಾನವಿರುತ್ತದೇನೋ! ಅದರಲ್ಲೂ, ಸರಿಯಾಗಿ ೩೩೪ ಪುಟಗಳಿರುವ ‘The true story of a recluse’ ಗ್ರೆಗೊರಿಯವರ ಜೀವನಕಥೆ ಅರ್ಥವಾಗುವುದಿದ್ದರೆ ಅದಕ್ಕೆ ನಾವು ಸ್ವಲ್ಪ ಹೆಣಗಾಡ ಬೇಕಾಗುತ್ತದೆ. ಬೇರೆ ಹಲವಾರು ವಿಷಯಗಳನ್ನು ಮತ್ತಷ್ಟು ಓದಿ ತಿಳಿದುಕೊಳ್ಳಬೇಕಾಗುತ್ತದೆ. ಏಕೆಂದರೆ ಈ ಪುಸ್ತಕದ ಗ್ರೆಗೊರಿಯ ಕಥನದಲ್ಲಿರುವುದು ೧೯೫೦ನೇ ದಶಕದಿಂದ ಆರಂಭವಾಗಿ ೨೦೧೭ ನೇ ಇಸವಿಗೆ ಕೊನೆಯಾಗುವ ಆಸ್ಟ್ರೇಲಿಯಾ ದೇಶದ ಕರಾಳ ಮುಖಗಳು. ಆ ಕರಾಳ ಚರಿತ್ರೆಯಲ್ಲಿ ಅಡಗಿದ ಒಂದು ಮುಖ ಈ ದೇಶದ ಮೂಲನಿವಾಸಿಗಳ ನೋವು; ಮತ್ತೊಂದು, ಈ ‘Forgotten Australians’. ಹುಡುಕುತ್ತಾ ಹೋದರೆ ಇನ್ನೆಷ್ಟಿವೆಯೋ!!
ಆಸ್ಟ್ರೇಲಿಯಾದ ವಲಸಿಗಳಾಗಿರುವ ನನಗೆ ಈ ಪುಸ್ತಕದ ಒಳಾರ್ಥ ಮತ್ತು ಅದರ ಆಳವನ್ನು ತಲುಪಲು ಸ್ವಲ್ಪ ಹೆಚ್ಚಿನ ಮಾಹಿತಿಗಳನ್ನು ಕಲೆಹಾಕುತ್ತಾ ಅವುಗಳ ಬಗ್ಗೆ ತಿಳಿದುಕೊಳ್ಳುವ ಪ್ರಸಂಗ ಬಂದಿತ್ತು. ಆಸ್ಟ್ರೇಲಿಯಾದ ಸಂಬಂಧ ಮತ್ತಷ್ಟು ಗಟ್ಟಿಯಾಯ್ತು.
ಗ್ರೆಗೊರಿ ಡಾಕ್ಟರೇಟ್ ಪದವಿ ಪಡೆದಾಗ Lismore ನಗರದಲ್ಲಿ ಅದೊಂದು ದೊಡ್ಡ ಸುದ್ದಿಯಾಗಿತ್ತು. ಒಂದೊಮ್ಮೆ ಅದೇ ನಗರದ ಬೀದಿಗಳಲ್ಲಿ, ಅಷ್ಟೇಕೆ ದೇಶದ ಪೂರ್ವ ದಿಕ್ಕಿನ ಸಾವಿರಾರು ಮೈಲಿ ಸಮುದ್ರ ತೀರಗುಂಟ ಮತ್ತು ಒಳನಾಡಿನ ಪಟ್ಟಣಗಳಲ್ಲಿ ಅಲೆದಾಡಿದ್ದ ವ್ಯಕ್ತಿ. ಅನಾಮಧೇಯನಾಗಿ, ಏಕಾಂತವಾಸಿಯಾಗಿ, ಕೊಳೆಯುತ್ತಾ, ನಾರುತ್ತಾ homeless ವ್ಯಕ್ತಿಯಾಗಿ ಬದುಕಿದ್ದ ಒಬ್ಬಾತ ತನಗೆ ಅರವತ್ತು ತುಂಬಿದ ಮೇಲೆ ಡಾ. ಸ್ಮಿತ್ ಆಗಿದ್ದು ಎಲ್ಲರಿಗೂ ಪವಾಡವೆನ್ನಿಸಿತ್ತು. ಪ್ರೆಸ್ಸಿನವರು ಸಂದರ್ಶನ ಕೋರುತ್ತಲೇ ಹೋದರು.
ಆಸ್ಟ್ರೇಲಿಯಾದ ಪ್ರಮುಖ ಎಬಿಸಿ ಟಿವಿ ಚಾನೆಲ್ Australian Story ಕಾರ್ಯಕ್ರಮಕ್ಕೆಂದು ಅವರನ್ನು ಮಾತನಾಡಿಸಿ ಸಂದರ್ಶಿಸಿದ್ದರು. ಅದು ಪ್ರಸಾರವಾದ ಕೂಡಲೇ ಅವರ ಆತ್ಮಕಥನವನ್ನು ಪ್ರಕಟಿಸಲು ಪ್ರಕಾಶಕರು ಮುಂದಾಗಿದ್ದರು. ಗ್ರೆಗೊರಿ ಅದಕ್ಕೆ ನಕಾರ ಸೂಚಿಸಿದ್ದರು. ಪೆಂಗ್ವಿನ್ ರಾಂಡಮ್ ಹೌಸ್ ಸಂಸ್ಥೆಯ ಸೋಫಿ ಆಂಬ್ರೋಸ್ ಎಂಬಾಕೆ ಮಾತ್ರ ಪಟ್ಟುಬಿಡದೆ ನಿರಂತರವಾಗಿ ಗ್ರೆಗೊರಿಯೊಡನೆ ಸಂಪರ್ಕದಲ್ಲಿದ್ದು ನಿಧಾನವಾಗಿ ಅವರಿಗೆ ಧೈರ್ಯ ಹೇಳಿ ಪುಸ್ತಕದ ಆಲೋಚನೆಗೆ ಸಮ್ಮತಿ ಪಡೆದರು. ಗ್ರೆಗೊರಿ ಹೇಳಿದ ಕಥೆಯನ್ನು ಬರೆದು ಪುಸ್ತಕವನ್ನಾಗಿ ಮಾರ್ಪಡಿಸಲು ನೆರವಾಗಿ ಬಂದದ್ದು ಕ್ರೇಗ್ ಹೆಂಡರ್ಸನ್. ಗ್ರೆಗೊರಿಯೊಡನೆ ವಿಶ್ವಾಸದಿಂದ ಒಬ್ಬ ಸ್ನೇಹಿತನಾಗಿ ನಡೆದುಕೊಂಡ ಕ್ರೇಗ್ ಪುಸ್ತಕ ಹೊರಬರಲು ಕಾರಣಕರ್ತೃವಾದರು.
೧೯೫೦ನೇ ದಶಕದಲ್ಲಿ Tamworth ಪಟ್ಟಣದಲ್ಲಿ ಹುಟ್ಟಿದ ಗ್ರೆಗೊರಿ ನಂತರ ಸಾಲಾಗಿ ನಾಲ್ಕು ಸೋದರಿಯರು ಹುಟ್ಟಿದ್ದರು. ಸ್ವಲ್ಪ ಕಾಲದ ನಂತರ ಮತ್ತೊಂದು ಸೋದರಿ ಸೇರ್ಪಡೆಯಾಗಿದ್ದಳು. ಆಗಿನ ಕಾಲದ ಮಧ್ಯಮವರ್ಗ ಕುಟುಂಬವದು. ತನಗೆ ನೆನಪಿರುವಂತೆ ತನ್ನ ತಂದೆ ದುಡಿದು ತಂದುಹಾಕಿ ಕುಟುಂಬವನ್ನು ಪೋಷಿಸುತ್ತಿದ್ದರೂ ಅವನೊಬ್ಬ ಮಹಾನ್ ಕುಡುಕನಾಗಿದ್ದ ಎಂದು ಗ್ರೆಗೊರಿ ಹೇಳುತ್ತಾರೆ. ಚಿಕ್ಕ ಪಟ್ಟಣದಲ್ಲಿ ಆಗಾಗ ಸಿಕ್ಕುವ ತಾತ್ಕಾಲಿಕ ಕೆಲಸಗಳನ್ನು ಮಾಡುತ್ತಾ ಒಂದಷ್ಟು ಸಂಪಾದಿಸಿದರೂ ಒಂದೊಂದೇ ತನ್ನ ಕನಸುಗಳು ನೆಲವನ್ನಪ್ಪುವುದನ್ನು ಸಹಿಸಲಾರದ ತಾಯಿ ಗಂಡನನ್ನು ಸದಾ ಕಾಲ ಮೂದಲಿಸುವುದು, ಅವನಿಂದ ಹೊಡೆತ ತಿನ್ನುವುದು ದಿನನಿತ್ಯದ ಕಥೆಯಾಗಿತ್ತು. ಎಳೆತನದಿಂದಲೂ ತಾನೂ ಕೂಡ ಹೊಡೆತ ತಿನ್ನುವುದು, ಎಲ್ಲರ ಮನೆಯ ಕಥೆಯೂ ಹಾಗೆ ಇರುತ್ತದೆ ಎಂದು ಹುಡುಗ ಗ್ರೆಗೊರಿ ನಂಬಿದ್ದ. ಹೊರಗಿನ ಪ್ರಪಂಚಕ್ಕೆ ತಮ್ಮ ಕುಟುಂಬವನ್ನು ಒಂದು ಆನಂದ ತುಂಬಿದ ಸಂಸಾರ ಎಂದು ತೋರಿಸಲು ತಾಯಿ ಬಹಳ ಪ್ರಯತ್ನಿಸುತ್ತಿದ್ದಳು. ಒಂದೇ ಸೂರಿನಡಿ ಅವರೆಲ್ಲರೂ ಪ್ರತಿದಿನದ ಬದುಕನ್ನು ಸವೆಸಲು ಅವಳು ಕಷ್ಟಪಡುತ್ತಿದ್ದಳು. ಆದರೂ ಮನೆಯ ಪರಿಸರ ಹುಡುಗನ ಮೇಲೆ ಆಳವಾದ ಪ್ರಭಾವವನ್ನ ಬೀರಿತ್ತು. ಅವನು ಮನೆ ಬಿಟ್ಟು ಓಡಿಹೋಗುತ್ತಿದ್ದ. ಓಡಿಹೋದ ದಿನವೇ ಪೊಲೀಸರು ಅವನನ್ನು ಹುಡುಕಿ ಹಿಡಿದು ವಾಪಸ್ ಮನೆಗೆ ಸೇರಿಸುತ್ತಿದ್ದರು. ತಂದೆ ಮತ್ತಷ್ಟು ಹೊಡೆಯುತ್ತಿದ್ದ. ತಾಯಿ ಇನ್ನಷ್ಟು ಕೂಗಾಡುತ್ತಿದ್ದಳು.
ಗ್ರೆಗೊರಿಗೆ ಹತ್ತು ವರ್ಷ ನಡೆಯುತ್ತಿದ್ದಾಗ ಒಂದು ದಿನ ಹುಡುಗ ಮತ್ತು ಅವನ ಮೊದಲ ನಾಲ್ಕು ಸೋದರಿಯರನ್ನು ತಾಯಿ ತನ್ನ ಕಾರಿನಲ್ಲಿ ತುಂಬಿಕೊಂಡು ಮತ್ತೊಂದು ಪಟ್ಟಣವಾದ Armidale ನಲ್ಲಿದ್ದ ಒಂದು ಹೆಸರಾಂತ ಕ್ಯಾಥೊಲಿಕ್ ಚರ್ಚ್ ನಡೆಸುತ್ತಿದ್ದ ಅನಾಥಾಲಯದಲ್ಲಿ ಬಿಟ್ಟು ನಡೆಯುತ್ತಾಳೆ. ಅನಾಥಾಲಯದಲ್ಲಿ ಕಳೆದ ಒಂದೂವರೆ ವರ್ಷ ತನ್ನ ಪಾಲಿಗೆ ‘breaking a child’s spirit’ ಅನುಭವವಾಯ್ತು ಎಂದು ಗ್ರೆಗೊರಿ ವಿಷಾದಿಸಿದ್ದಾರೆ. ಅಲ್ಲಿನ ಕರಾಳ ಅನುಭವಗಳು ಗ್ರೆಗೊರಿಯ ಬಾಲ್ಯವನ್ನು, ಎಳೆತನವನ್ನು, ಮುಗ್ಧತೆಯನ್ನು, ಮಾನಸಿಕ ಸ್ವಾಸ್ಥ್ಯವನ್ನು ಸಂಪೂರ್ಣವಾಗಿ ನಾಶ ಮಾಡಿ ಕೊಂದುಬಿಟ್ಟವು. ಹುಡುಗನಲ್ಲಾದ ಮಾರ್ಪಾಡುಗಳು ಮುಂದಿನ ಜೀವನದಲ್ಲಿ ಅವನನ್ನು ಎಡಬಿಡದೆ ಶಾಶ್ವತವಾಗಿ ಕಾಡಿ ತಿಂದುಬಿಟ್ಟವು.
ಒಂದೂವರೆ ವರ್ಷದ ನಂತರ ತಾಯಿ ಬಂದು ಮಕ್ಕಳನ್ನು ವಾಪಸ್ ಮನೆಗೆ ಕೊಂಡೊಯ್ಯುತ್ತಾಳೆ. ಗ್ರೆಗೊರಿ ಹೇಳುವಂತೆ ಅಷ್ಟರಲ್ಲಿ ಹುಡುಗನ ಮನಸ್ಸು ಒಡೆದುಹೋಗಿತ್ತು. ಶಾಲೆ ಜೀವನಕ್ಕೆ ಹೊಂದಿಕೊಳ್ಳಲು ಅವನಿಗೆ ಕಷ್ಟವಾಯಿತು. ಬೇರೆ ಹುಡುಗರು ಮತ್ತು ಶಾಲೆಯ ಶಿಕ್ಷಕರು ಅವನಿಗೆ ಕಾಟ ಕೊಟ್ಟರು. ಅವನೊಬ್ಬ ಕಲಿಯಲಾರದ ಮಂದಮತಿ, ಪುಂಡ, ಪದೇ ಪದೇ ಮನೆ ಮತ್ತು ಶಾಲೆ ಬಿಟ್ಟು ಓಡಿಹೋಗುವ ತಲೆಕೆಟ್ಟವನು ಎಂದೆಲ್ಲಾ ಹೆಸರುಬಂತು. ಅದನ್ನು ವಿರೋಧಿಸುತ್ತಾ ಹುಡುಗ ಮತ್ತಷ್ಟು ಕೋಪಿಷ್ಠನಾದ. ಸಮಾಜವಿರೋಧಿ ನಡವಳಿಕೆಯನ್ನು ಬೆಳೆಸಿಕೊಂಡ. ಸಮಾಜವನ್ನು, ತನ್ನಪ್ಪನನ್ನು, ತನ್ನನ್ನು ಮತ್ತು ತನ್ನ ವಾಸ್ತವವನ್ನು ತೀವ್ರವಾಗಿ ದ್ವೇಷಿಸಿದ. ಕ್ಯಾಥೋಲಿಕ್ ಚರ್ಚ್, ಅನಾಥಾಲಯದ ಸಿಸ್ಟರ್ ಗಳು, ಅಲ್ಲಿನ ಶಾಲೆ ಬಲವಂತವಾಗಿ ತನ್ನ ಎಳೆ ಮನಸ್ಸಿನೊಳಗೆ ತುರುಕಿದ್ದ shame, guilt, sin ಪದಗಳೊಡನೆ ಹೋರಾಡುವುದೇ ಅವನ ಜೀವನವಾಯ್ತು. ಕ್ರಮೇಣ ಆ ಪದಗಳೇ ಅವರ ನಂಬಿಕೆಗಳಾದವು.
ಆ ಅಗೋಚರ ಹಿರೀಕರು ಮತ್ಯಾರೂ ಅಲ್ಲ, ಅವುಗಳು ತಾನೇ ಆಗಿದ್ದೆ; ತನ್ನ ತಂದೆತಾಯಿಗಳು, ತನ್ನ ತಾತಮುತ್ತಾತಂದಿರ ಕಾಲದವರು ಎಲ್ಲರೂ ಅವರಾಗಿದ್ದರು. ಒಟ್ಟಿನಲ್ಲಿ ಅವರೆಲ್ಲಾ ಹೇಳಿದ ಮಾತಿನಲ್ಲಿದ್ದದ್ದು ಏನೆಂದರೆ ಒಂದು ಜೀವನದೃಷ್ಟಿ. ಕಾಡಿನಲ್ಲಿ ಎಲ್ಲದರೊಂದಿಗೆ ಮಿಳಿತವಾಗಿ ಬದುಕುವಂತೆ ಸಮಾಜದಲ್ಲೂ ಎಲ್ಲರೊಡನೆ ಒಟ್ಟಾಗಿ ಬದುಕಲು ಬೇಕಿದ್ದ ಜೀವನದೃಷ್ಟಿ.
ಬಾಲ್ಯ ಕಳೆದು ಪ್ರೌಢಾವಸ್ಥೆಗೆ ಬರುವಷ್ಟರಲ್ಲಿ ಅವನಲ್ಲಿ ಅಚ್ಚೊತ್ತಿದ್ದು “ಹೌದು, ತಾನೊಬ್ಬ ಪಾಪಿಷ್ಟ, ನಾಚಿಕೆ ಮತ್ತು ಅವಮಾನದಿಂದಲೇ ತಾನು ಬದುಕಬೇಕು, ಬೇರೆ ದಾರಿಯೇ ಇಲ್ಲ. ಅಪರಾಧ ಪ್ರಜ್ಞೆಯೇ ತನ್ನ ಅಸ್ಮಿತೆ. ಈ ಪ್ರಪಂಚದಲ್ಲಿ ಹುಟ್ಟಿದ್ದೇ ತಪ್ಪು. ಇನ್ನೂ ಜೀವಂತವಾಗಿರುವುದೇ ತಪ್ಪು. ತನ್ನನ್ನು ಸಲಹಲಾರದ ಕುಟುಂಬಕ್ಕೆ ತಾನು ಹೊರೆಯಾದೆ. ತನ್ನ ಸಮಾಜಕ್ಕೆ ಹೊರೆಯಾಗಿರುವುದು ಮತ್ತೊಂದು ಅಪರಾಧ. ಒಟ್ಟಿನಲ್ಲಿ ತಾನೊಬ್ಬ ಯಾರೂ ಕ್ಷಮಿಸಲಾರದ ಕಡು ಅಪರಾಧಿ.”
ಗ್ರೆಗೊರಿ ತನ್ನ ಹದಿನಾಲ್ಕನೇ ವಯಸ್ಸಿನಲ್ಲಿ ದುಡಿಯಲಾರಂಭಿಸಿದ. ಬಹುಬೇಗನೆ ಮದ್ಯ ಸೇವಿಸಲಾರಂಭಿಸಿದ. ತಂದೆಯನ್ನು ಎದುರಿಸಿ ಅವನನ್ನು ಹೊಡೆಯಲು, ಕೊಲ್ಲಲೂ ಕೂಡ ತಯಾರಾದ. ಪುಣ್ಯಕ್ಕೆ ಅವನ ತಾಯಿಯ ಮಧ್ಯಪ್ರವೇಶದಿಂದ ಆ ಘಟನೆಗಳು ಸಂಭವಿಸಲಿಲ್ಲ. ಮನೆಯಲ್ಲಿರಲಾರದೆ ಪುನಃ ಪುನಃ ಮನೆಬಿಟ್ಟು ಓಡಿಹೋಗಲಾರಂಭಿಸಿದ. ಎಲ್ಲಿಗೆ ಹೋಗಬೇಕೆಂದು ಹೊಳೆಯದೆ ಕಂಗಾಲಾಗುತ್ತಿದ್ದ. ಮದ್ಯ ಕೊಳ್ಳಲು ಹೆಚ್ಚು ಹಣ ಬೇಕೆಂದು ಸಮುದಾಯದಲ್ಲಿ ಸಣ್ಣಪುಟ್ಟ ಕಳ್ಳತನಗಳನ್ನೂ ಮಾಡಿದ. ಪೊಲೀಸರು ಪದೇ ಪದೇ ಅವನಿಗೆ ಎಚ್ಚರಿಕೆ ನೀಡಿ ಸುಮ್ಮನಾಗುತ್ತಿದ್ದರು.
ಕಷ್ಟಪಟ್ಟು ದೈಹಿಕ ಶ್ರಮದಿಂದ ದುಡಿಯುವ ಒಂದು ನೌಕರಿಯಲ್ಲಿದ್ದಾಗ ಗ್ರೆಗೊರಿಯ ಜೀವನದಲ್ಲಿ ಹುಡುಗಿಯ ಪ್ರವೇಶವಾಯ್ತು. ಶ್ರಮದ ದುಡಿಮೆ, ನಿಯಮಿತ ಸಂಬಳ, ಜೊತೆಗಾರ್ತಿ, ಒಳ್ಳೆಯ ಕಾರು, ಅವಳೊಡನೆ ಮದುವೆ, ಬಾಡಿಗೆ ಮನೆಯೂ ಆಯ್ತು. ಕೆಲತಿಂಗಳಿನಲ್ಲೇ ತನ್ನ ಮೇಲೆ ಕೈ ಮಾಡಿದ ಗ್ರೆಗೊರಿಯನ್ನು ಹೆಂಡತಿ ಬಿಟ್ಟು ಹೋದಳು. ಗ್ರೆಗೊರಿ ಪೊಲೀಸ್ ಲಾಕ್ ಅಪ್, ಕೆಲಕಾಲ ಜೈಲು ಸೇರಿದ. ಜೈಲಿಂದ ಹೊರಬಂದ ಮೇಲೆ, ಹೆಂಡತಿಯ ಜೊತೆ ಡೈವೋರ್ಸ್ ಆಗಿ ಗ್ರೆಗೊರಿ ಬೇರೆ ಬೇರೆ ಊರು ತಿರುಗುತ್ತಾ, ಸಿಕ್ಕ ಕೆಲಸಗಳನ್ನು ಮಾಡುತ್ತಾ ಕ್ರಮೇಣ ಕುಡುಕ ಮತ್ತು ಡ್ರಗ್ಸ್ ವ್ಯಸನಿಯಾದರು. ಬೇರೆಯವರೊಡನೆ ವಾಗ್ವಾದ, ಕಾಲುಕೆರೆದುಕೊಂಡು ಜಗಳವಾಡುವುದು, ಹೊಡೆದಾಟ, ಸಮಾಜವಿರೋಧಿ ಚಟುವಟಿಕೆಗಳು ಮುಂದುವರೆದವು.
ಈ ಮಧ್ಯೆ ಮತ್ತೊಂದು ಯುವತಿಯೊಡನೆ ಸಂಬಂಧವಾಯ್ತು. ಮಗಳು ಹುಟ್ಟಿದಳು. ಅವಳು ಹುಟ್ಟಿದ ಕ್ಷಣದಲ್ಲಿ ‘ತಾನು ಅಪ್ಪನಾದೆ, ಇನ್ನು ಬದಲಾಗುವ ಸಮಯ ಬಂತು, ಜವಾಬ್ದಾರಿಯಿಂದ ಬದುಕಬೇಕು,’ ಎಂದು ಆಲೋಚಿಸಿದರು. ಹತ್ತು ದಿನಗಳ ನಂತರ ತಾಯಿ ಮಗುವನ್ನೆತ್ತಿಕೊಂಡು ಹೊರಬಿದ್ದಿದ್ದಳು. ಲಾಯರನ್ನು ನೇಮಿಸಿ ಕಾನೂನಿನ ಪ್ರಕಾರ ಮಗಳ ಕಸ್ಟಡಿಗಾಗಿ ಗ್ರೆಗೊರಿ ಇನ್ನಿಲ್ಲದಷ್ಟು ಪ್ರಯತ್ನಿಸಿದರೂ ಅವರ ಸಮಾಜವಿರೋಧಿ ನಡವಳಿಕೆಯನ್ನು ಕಾರಣವಾಗಿಟ್ಟುಕೊಂಡು ನ್ಯಾಯಾಲಯ ಅವರ ಅಹವಾಲನ್ನು ತಿರಸ್ಕರಿಸಿತು. ಅನೇಕ ವರ್ಷಗಳ ನಂತರ ಆ ತಾಯಿ ಆತ್ಮಹತ್ಯೆ ಮಾಡಿಕೊಂಡಳು. ಮಗಳು ಒಂದಷ್ಟು ಕಾಲ ಇಂಗ್ಲೆಂಡಿನಲ್ಲಿ ನಂತರ ಆಸ್ಟ್ರೇಲಿಯಾದಲ್ಲಿ ಬೆಳೆದಳು ಎಂಬ ವಿಷಯ ತಿಳಿಯಿತು.
ನ್ಯಾಯಾಲಯದಲ್ಲಿ ತನ್ನ ಕೇಸಿನಲ್ಲಿ ಸೋತ ಗ್ರೆಗೊರಿ ಮತ್ತೆ ಊರಿಂದ ಊರಿಗೆ ಅಲೆಯುತ್ತ, ಸಿಕ್ಕ ಕೆಲಸಗಳನ್ನು ಮಾಡುತ್ತಾ, ಜನರನ್ನು ದ್ವೇಷಿಸುತ್ತಾ ಎಲ್ಲೂ ನಿಲ್ಲದೆ ತನ್ನದೇ ಒಂದು ಊರಿಲ್ಲದೆ, ಸೂರಿಲ್ಲದೆ, ನೆಲೆಯಿಲ್ಲದೆ ಕಳೆದುಹೋದ ಆತ್ಮವಾಗುತ್ತಾರೆ. ಒಂದೆರೆಡು ಬಾರಿ ಜೈಲು ಸೇರುತ್ತಾರೆ. ಆಹಾರಕ್ಕಾಗಿ ಕಸದ ಬುಟ್ಟಿಗಳನ್ನು ಕೆದಕುತ್ತಾ ಸಿಕ್ಕ ಕಡೆ ತಿನ್ನುವುದು, ಬೀದಿಬದಿ ಮೋರಿಗಳಲ್ಲಿ, ಪಾರ್ಕಿನಲ್ಲಿ, ಎಲ್ಲೆಂದರಲ್ಲಿ ಬಿದ್ದುಕೊಂಡು ಅತಂತ್ರವಾಗಿ ಬದುಕುತ್ತಾರೆ. ಗೊತ್ತುಗುರಿಯಿಲ್ಲದ ಅಂತಹ homeless ಜೀವನಶೈಲಿಯಿಂದ ಬಳಲುತ್ತಾರೆ. ನಲವತ್ತು ಸಮೀಪಿಸಿದಾಗ ಒಂದೊಮ್ಮೆ Byron Bay ಪಟ್ಟಣದಲ್ಲಿದ್ದಾಗ ದೂರದಲ್ಲಿ ಕಾಣಿಸುತ್ತಿದ್ದ ಬೆಟ್ಟವನ್ನೇ ದೃಷ್ಟಿಸುತ್ತಾ ಬೆಟ್ಟದ ಮೇಲೆ ಏನಿರಬಹುದು ಎಂದುಕೊಂಡು ಅದರೆಡೆಗೆ ನಡೆಯಲಾರಂಭಿಸುತ್ತಾರೆ. ಕ್ರಮೇಣ ಬೆಟ್ಟದೊಳಗಿನ ಕಾಡನ್ನು ಸೇರಿ ಬದುಕುತ್ತಾರೆ. ಬಾವಲಿ, ಹಲ್ಲಿ, ಉಡ, ಒಂದೊಮ್ಮೆ ಹೆಬ್ಬಾವು, ಮಗದೊಮ್ಮೆ ಕಾಂಗರೂವನ್ನು ಕೊಂದು ತಿಂದು ಜೀವ ಉಳಿಸಿಕೊಳ್ಳುತ್ತಾರೆ. ಹಾಗೆ ಕೊಂದಿದ್ದಕ್ಕೆ ತನ್ನನ್ನು ತಾನೇ ಖಂಡಿಸಿಕೊಂಡು ಪಶ್ಚಾತ್ತಾಪ ಪಟ್ಟು ಮಾಂಸವನ್ನೇ ತ್ಯಜಿಸುತ್ತಾರೆ.
ಆಗಾಗ ತಾನು ಕೊಂದ ಪ್ರಾಣಿಗಳ ಚರ್ಮವನ್ನು ಬೆಟ್ಟದ ಬುಡದ ಪಟ್ಟಣಗಳಲ್ಲಿ ಮಾರಿ ಬಂದ ಹಣದಲ್ಲಿ ಮದ್ಯ, ಡ್ರಗ್ಸ್, ಒಂದಷ್ಟು ಆಹಾರ ಕೊಂಡು ಬದುಕುತ್ತಾರೆ. ಒಂದೊಮ್ಮೆ ತಾನೇ marijuana ಗಿಡಗಳ ಬೀಜವನ್ನು ಸಂಗ್ರಹಿಸಿ ಬೆಟ್ಟದ ಮೇಲೆ ಅದನ್ನು ಬೆಳೆಯುತ್ತಾರೆ. ಇದನ್ನೇ ಮುಂದುವರೆಸಿಕೊಂಡು ಹೋಗಿ ತನ್ನ ಬೆಳೆಯನ್ನು ಬೇರೆ ಬೇರೆ ಊರುಗಳಲ್ಲಿ, ನಗರಗಳಲ್ಲಿ ಮಾರುತ್ತಾ ಮತ್ತಷ್ಟು ತಲೆಕೆಟ್ಟು ಬದುಕುತ್ತಾರೆ. ಪುನಃ ಜೈಲು ಸೇರುತ್ತಾರೆ. ವಾಪಸ್ ಕಾಡಿಗೆ ಮರಳುತ್ತಾರೆ. ಹೀಗೆ ಹತ್ತು ವರ್ಷ ಬದುಕಿದ ಗ್ರೆಗೊರಿ ಕ್ರಮೇಣ ಸಾಯುವ ಸ್ಥಿತಿಯನ್ನು ತಲುಪುತ್ತಾರೆ.
ಗ್ರೆಗೊರಿ ತಮ್ಮ ಕಥನವನ್ನು ಹೇಳುತ್ತಲೇ ‘ಮರೆತುಹೋದ ಆಸ್ಟ್ರೇಲಿಯನ್ನರ’ ವಿವಿಧ ಕಾಲಘಟ್ಟಗಳನ್ನು, ಆ ಕಾಲಗಳಲ್ಲಿ ಇದ್ದ ಸಾಮಾಜಿಕ, ಸಾಂಸ್ಥಿಕ, ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಗಳು, ಕಾನೂನು ಕಟ್ಟುಪಾಡುಗಳನ್ನು, ಸಾರ್ವಜನಿಕ ಕಾರ್ಯನೀತಿಗಳನ್ನು ಬಯಲಿಗೆಳೆಯುತ್ತಾರೆ. ಮತ್ತು ಜನಜೀವನ ಕುರಿತು ವಿವಿಧ ದೃಷ್ಟಿಕೋನಗಳನ್ನು ಒದಗಿಸುತ್ತಾರೆ. ಆದರೊಂದು ವಿಷಯವನ್ನು ಪದೇ ಪದೇ ಹೇಳುತ್ತಾರೆ. ಬಾಲ್ಯದಿಂದ ತಾನು ಅನುಭವಿಸಿದ ಮಾನಸಿಕ ಕ್ಷೋಭೆ, ವೇದನೆ, ಹಲವಾರು ಮಾನಸಿಕ ಮತ್ತು ದೈಹಿಕ ಹಿಂಸೆಗಳು ತಮ್ಮನ್ನು ಒಬ್ಬ ಸಮಾಜವಿಮುಖನನ್ನಾಗಿ ರೂಪಿಸಿದವು. ಸಮಾಜ ತನಗೆ ಕೊಟ್ಟ ಹಣೆಪಟ್ಟಿ, ಶಿಕ್ಷೆ, ಅದು ತನ್ನನ್ನು ಹೊರದೂಡಿದ ಬಗೆಗಳು, ಅಥವಾ ತನ್ನನ್ನು ವ್ಯವಸ್ಥೆಯೊಳಗೇ ಬದುಕಲು ಮಾಡಿದ ಬಲವಂತದ ನಡೆಗಳು ಇವೆಲ್ಲದರಿಂದ ತಾನೊಬ್ಬ ಕುಡುಕನಾಗಿ, ಮಾದಕವಸ್ತು ವ್ಯಸನಿಯಾಗಿ, ಕಳ್ಳನಾಗಿ ಪರಿವರ್ತಿಸಿದರು.
ಅವರು ಸುಮಾರು ಹತ್ತು ವರ್ಷಗಳ ಬಹುಭಾಗವನ್ನು ಕಾಡಿನಲ್ಲೇ ಕಳೆದರೂ ನಾಡಿನ ಸಂಪರ್ಕವನ್ನು ಬಿಡದೆ ಕುಡುಕ, ಮಾದಕವಸ್ತು ವ್ಯಸನಿಯಾಗಿಯೇ ಮುಂದುವರೆದಿದ್ದರು. ಕಟ್ಟಕಡೆಗೆ ಅವರ ದೇಹ ಮತ್ತು ಮನಸ್ಸು ನಶಿಸಿ, ಕೃಶಿಸಿ, ಕಂಗೆಟ್ಟು ಕಾಡಿನೊಳಗೆ ಕದಲುವುದಕ್ಕೇ ಆಗುವುದಿಲ್ಲ ಎನ್ನುವಂತೆ ಸಾಯುವ ಸ್ಥಿತಿ ತಲುಪಿ ಕೈಚೆಲ್ಲಿದಾಗ ‘ಇಲ್ಲ, ನೀನು ಕಾಡಿಗೆ ಬಂದದ್ದು ಸಾಯುವುದಕ್ಕಲ್ಲ. ನೀನಿಲ್ಲಿದ್ದದ್ದು ಸಾಕಾಯ್ತು. ಇನ್ನು ನಡೆ. ಕಾಡು ಬಿಟ್ಟು ನಾಡಿಗೆ ಹೋಗಿ ಹೊಸ ಜೀವನವನ್ನು ಬದುಕು’ ಎಂದು ಅಗೋಚರ ಹಿರೀಕರು ಹೇಳಿದರಂತೆ. ‘ನೀನು ಸಮಾಜದಿಂದ ಓಡಿಹೋಗುವುದು ಸಾಕು. ಜನರೊಡನೆ ಬದುಕಿಬಾಳುವುದನ್ನು ಕಲಿಯುವ ಕಾಲ ಬಂದಿದೆ. ಅದನ್ನೇ ನೀನೀಗ ಮಾಡಬೇಕಿರುವುದು,’ ಎಂದು ಆದೇಶಿಸಿದರಂತೆ. ಇದನ್ನು ಪುಸ್ತಕದಲ್ಲಿನ ಅಧ್ಯಾಯ ೨೭ರಲ್ಲಿ ಹೇಳುತ್ತಾ ಗ್ರೆಗೊರಿ ಅದನ್ನು ವಿಶ್ಲೇಷಿಸುತ್ತಾರೆ. ಆ ಅಗೋಚರ ಹಿರೀಕರು ಮತ್ಯಾರೂ ಅಲ್ಲ, ಅವುಗಳು ತಾನೇ ಆಗಿದ್ದೆ; ತನ್ನ ತಂದೆತಾಯಿಗಳು, ತನ್ನ ತಾತಮುತ್ತಾತಂದಿರ ಕಾಲದವರು ಎಲ್ಲರೂ ಅವರಾಗಿದ್ದರು. ಒಟ್ಟಿನಲ್ಲಿ ಅವರೆಲ್ಲಾ ಹೇಳಿದ ಮಾತಿನಲ್ಲಿದ್ದದ್ದು ಏನೆಂದರೆ ಒಂದು ಜೀವನದೃಷ್ಟಿ. ಕಾಡಿನಲ್ಲಿ ಎಲ್ಲದರೊಂದಿಗೆ ಮಿಳಿತವಾಗಿ ಬದುಕುವಂತೆ ಸಮಾಜದಲ್ಲೂ ಎಲ್ಲರೊಡನೆ ಒಟ್ಟಾಗಿ ಬದುಕಲು ಬೇಕಿದ್ದ ಜೀವನದೃಷ್ಟಿ. ಅದನ್ನು ಒಪ್ಪಿಕೊಂಡು ಅವರು ಕಾಡನ್ನು ತ್ಯಜಿಸಿ, ಸಾಯಲು ಸಿದ್ಧವಾಗಿದ್ದ ದೇಹವನ್ನೆಳೆದುಕೊಂಡು ಊರು ಸೇರಿದರು. ಅಲ್ಲಿಂದ ಮುಂದೆ ಪ್ರತಿ ದಿನ, ವಾರ, ತಿಂಗಳು, ವರ್ಷ ಎನ್ನುವಂತೆ ಬಿಡದೆ ಛಲದಿಂದ ಸಮಾಜದಲ್ಲಿ ಬದುಕಲು ಕಲಿತರು.
ಅನಾಥಾಲಯದಲ್ಲಿ ಹೇಳಿಕೊಟ್ಟಂತೆ ತಾನೊಬ್ಬ ಪಾಪಿಷ್ಟ, ಎಲ್ಲರಂತೆ ಬದುಕಲು ಅರ್ಹನಲ್ಲ, ಹಿಂದಿನ ಜನ್ಮಗಳಲ್ಲಿ ಮಾಡಿದ ಘೋರ ಪಾಪಗಳಿಂದ ಮುಕ್ತನಾಗುವುದಿಲ್ಲ. ಈ ಆಲೋಚನೆಗಳು ಗ್ರೆಗೊರಿಯನ್ನು ಬಿಡದೆ ಕಾಡಿಸಿದವು. ತನ್ನ ಅರವತ್ತರಲ್ಲೂ, ತಾನು ಡಾಕ್ಟರೇಟ್ ಪದವಿಗಾಗಿ Forgotten Australians ವಿಷಯದಲ್ಲಿ ಅಧ್ಯಯನ ಮಾಡುತ್ತಿದ್ದಾಗಲೂ ಅದೇ ಆಲೋಚನೆಗಳು ಮರುಕಳಿಸುತ್ತಿದ್ದವಂತೆ. ಕಾಡನ್ನು ತೊರೆದು ಹೊಸ ಜೀವನ ಆರಂಭಿಸಲು ಬಹಳ ಹೆಣಗಾಡಿದ ಗ್ರೆಗೊರಿ ತನ್ನದೇ ಕೆಲ ಮಾನಸಿಕ ತಂತ್ರಗಳನ್ನು ರೂಪಿಸಿಕೊಂಡು, ಒಬ್ಬ ಮಾನಸಿಕ ತಜ್ಞರ ಬಳಿ ಚಿಕಿತ್ಸೆ ಪಡೆಯುತ್ತ ಮತ್ತು ಇನ್ನೂ ಹಲವಾರು ಪ್ರಯತ್ನಗಳಿಂದ ಹೊಸ ಮನುಷ್ಯರಾಗುತ್ತಾರೆ. ತಮ್ಮ ತಂಗಿಯರೊಡನೆ, ಮಗಳೊಂದಿಗೆ ಸಂಪರ್ಕ ಬೆಳೆಸಿ ಸಂಬಂಧಗಳನ್ನು ಗಟ್ಟಿಗೊಳಿಸುವ ಪ್ರಯತ್ನ ಮಾಡಿದ್ದಾರೆ.
ವಿಶ್ವವಿದ್ಯಾಲಯದಲ್ಲಿ ಪೂರ್ಣಾವಧಿ ಅಧ್ಯಾಪಕನಾಗಿ, ಸಂಶೋಧಕನಾಗಿರುವ ಗ್ರೆಗೊರಿ ಸಮಾಜಮುಖಿಯಾಗಿ homeless ಜನರಿಗಾಗಿ ಅನೇಕ ಕೆಲಸಗಳನ್ನು ಮಾಡುತ್ತಿದ್ದಾರೆ. ಅದನ್ನು ಬರೆದರೆ ಉದ್ದನೆ ಪಟ್ಟಿಯಾಗುತ್ತದೆ. ಸಾರ್ವಜನಿಕರ ಅರಿವಿಗಾಗಿ ತನ್ನ ಖಾಸಗಿ ಜೀವನಕಥೆಯನ್ನು ಮುಚ್ಚುಮರೆಯಿಲ್ಲದೆ ಹೇಳಿರುವ ಅವರು ಕಟ್ಟಕಡೆಗೆ ಗುರುತಿಸುವುದು ಪರಸ್ಪರ ನಂಬಿಕೆ, ವಿಶ್ವಾಸ, ಅನುಭೂತಿ, ನಮ್ಮನಮ್ಮ ಪೂರ್ವಾಗ್ರಹಗಳನ್ನು ಬಿಟ್ಟು ಬೇರೊಬ್ಬರನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಇತ್ಯಾದಿ.
ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.