ಮಾತಾಜಿಯವರು ಸ್ಪಷ್ಟವಾದ ಧ್ವನಿಯಲ್ಲಿ ಹೇಳುತ್ತಿದ್ದರು. ಆಗ ಅವರು ಮಾತನಾಡುತ್ತಿದ್ದುದು ಮಹಿಳಾ ಜಗದ್ಗುರುಗಳ ವಿಚಾರವಾಗಿತ್ತು. ಅವರು ಹೇಳುವ ಶೈಲಿ ವೀರೋಚಿತವಾಗಿತ್ತು. ಯೌವನದ ಉತ್ಸಾಹದಿಂದ ಕೂಡಿದ ಸಾತ್ವಿಕ ಸೌಂದರ್ಯ ಮತ್ತು ಅಧ್ಯಾತ್ಮದ ಮೆರಗು ಮೇಳೈಸಿದ ಅವರ ಮಾತು, ಮಹಿಳೆಯ ಅಸ್ಮಿತೆಯ ಬಗೆಗಿನ ದೃಢನಿರ್ಧಾರದ ಧ್ವನಿಯಾಗಿತ್ತು. ಅವರ ಮಾತಿನಿಂದ ಸಭೆಯಲ್ಲಿ ವಿದ್ಯುತ್ ಸಂಚಾರವಾದಂತಾಯಿತು. ಮಹಿಳೆ ಜಗದ್ಗುರುವಾಗುವುದೆಂದರೇನು? ಅದು ಹೇಗೆ ಸಾಧ್ಯ? ಲಿಂಗಾನಂದರ ಕ್ರಾಂತಿಕಾರಿ ನಿಲವು ಕಾರ್ಯರೂಪಕ್ಕೆ ಬರಲು ಸಾಧ್ಯವೆ ಎಂದು ಮುಂತಾಗಿ ಜನ ಆ ಗೋಷ್ಠಿ ಮುಗಿದ ನಂತರ ಆಡಿಕೊಳ್ಳಲು ಶುರು ಮಾಡಿದರು.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 82ನೇ ಕಂತು ನಿಮ್ಮ ಓದಿಗೆ

ಕೂಡಲಸಂಗಮದಲ್ಲಿ 1968ರಲ್ಲಿ ಅಷ್ಟಶತಮಾನೋತ್ಸವ ಆಚರಿಸುವ ಸಂದರ್ಭದಲ್ಲಿ ನಮ್ಮ ಎಸ್.ಎಸ್.ಎಲ್.ಸಿ. ಪರೀಕ್ಷೆಗಳು ಹತ್ತಿರವಾಗುತ್ತಿದ್ದವು. ಆದರೂ ಆ ಸಮಾರಂಭಕ್ಕೆ ಹೋಗುವ ತೀವ್ರತೆ ಹೆಚ್ಚಿತು. ನಾಲ್ಕೈದು ಗೆಳೆಯರು ಕೂಡಿ ಚಿಂತಿಸಿದೆವು. ಆದರೆ ಯಾರ ಹತ್ತಿರವೂ ಕೂಡಲಸಂಗಮಕ್ಕೆ ಹೋಗಿ ಬರುವಷ್ಟು ಹಣ ಇರಲಿಲ್ಲ. ನಾವು ಬಹಳವಾದರೆ ನಾಲ್ಕಾರು ರೂಪಾಯಿಗಳನ್ನು ಕೂಡಿಸಲು ಸಾಧ್ಯವಾಗಿತ್ತು. ಆದರೂ ಎದೆಗುಂದದೆ ಹೊರಟೇ ಬಿಟ್ಟೆವು.

ವಿಜಯಪುರದಿಂದ ರಾತ್ರಿಯ ಪ್ಯಾಸೆಂಜರ್ ಗಾಡಿ ಹಿಡಿದು ನಸುಕಿನಲ್ಲಿ ಸೀತಿಮನಿ ಸ್ಟೇಷನ್‌ನಲ್ಲಿ ಇಳಿದೆವು. ಕೃಷ್ಣಾನದಿಯಲ್ಲಿ ಸ್ನಾನ ಮಾಡಿ ಕೂಡಲಸಂಗಮದ ಕಡೆಗೆ ಹೊರಟೆವು. ಅಲ್ಲಿನ ಒಳದಾರಿಯಿಂದ ಕೂಡಲಸಂಗಮಕ್ಕೆ ಹೋಗಲು 21 ಮೈಲಿ ನಡೆಯಬೇಕಿತ್ತು. ಓಡುತ್ತ, ನಡೆಯುತ್ತ, ಸ್ವಲ್ಪ ಕೂಡುತ್ತ ಏಳುತ್ತ ಅಂತೂ ಕೂಡಲಸಂಗಮ ಮುಟ್ಟಿದೆವು. ಆಗ ಮಾತಾಜಿ ಅವರ ಅವರ ಭಾಷಣ ನಡೆದಿತ್ತು. ರಾಜ್ಯ ಮತ್ತು ರಾಷ್ಟ್ರಮಟ್ಟದ ನಾಯಕರು ಅಲ್ಲಿ ಸೇರಿದ್ದರು.

ಮಾತಾಜಿಯವರು ಸ್ಪಷ್ಟವಾದ ಧ್ವನಿಯಲ್ಲಿ ಹೇಳುತ್ತಿದ್ದರು. ಆಗ ಅವರು ಮಾತನಾಡುತ್ತಿದ್ದುದು ಮಹಿಳಾ ಜಗದ್ಗುರುಗಳ ವಿಚಾರವಾಗಿತ್ತು. ಅವರು ಹೇಳುವ ಶೈಲಿ ವೀರೋಚಿತವಾಗಿತ್ತು. ಯೌವನದ ಉತ್ಸಾಹದಿಂದ ಕೂಡಿದ ಸಾತ್ವಿಕ ಸೌಂದರ್ಯ ಮತ್ತು ಅಧ್ಯಾತ್ಮದ ಮೆರಗು ಮೇಳೈಸಿದ ಅವರ ಮಾತು, ಮಹಿಳೆಯ ಅಸ್ಮಿತೆಯ ಬಗೆಗಿನ ದೃಢನಿರ್ಧಾರದ ಧ್ವನಿಯಾಗಿತ್ತು. ಅವರ ಮಾತಿನಿಂದ ಸಭೆಯಲ್ಲಿ ವಿದ್ಯುತ್ ಸಂಚಾರವಾದಂತಾಯಿತು. ಮಹಿಳೆ ಜಗದ್ಗುರುವಾಗುವುದೆಂದರೇನು? ಅದು ಹೇಗೆ ಸಾಧ್ಯ? ಲಿಂಗಾನಂದರ ಕ್ರಾಂತಿಕಾರಿ ನಿಲವು ಕಾರ್ಯರೂಪಕ್ಕೆ ಬರಲು ಸಾಧ್ಯವೆ ಎಂದು ಮುಂತಾಗಿ ಜನ ಆ ಗೋಷ್ಠಿ ಮುಗಿದ ನಂತರ ಆಡಿಕೊಳ್ಳಲು ಶುರು ಮಾಡಿದರು. ಪ್ರಸಾದ ಸೇವನೆಯ ಸಂದರ್ಭದಲ್ಲೂ ಜನರ ಬಾಯಲ್ಲಿ ಅದೇ ಮಾತು.

ಅವರು ಜಗದ್ಗುರು ಆಗುವುದರ ಮಹತ್ವ ನನಗೆ ಗೊತ್ತಿರದಿದ್ದರೂ ಬಹಳ ಸಂತೋಷ ಪಟ್ಟಿದ್ದೆ. ಹೆಂಡಂದಿರು ಗಂಡಂದಿರ ಜೊತೆ ಭಯಭೀತಿಯಿಂದ ನಡೆದುಕೊಳ್ಳುವ, ಬೈಸಿಕೊಳ್ಳುವ ಮತ್ತು ಚಿಕ್ಕಪುಟ್ಟ ತಪ್ಪುಗಳಿಗೆ ಗಂಡಂದಿರಿಂದ ಬಡಿಸಿಕೊಳ್ಳುವಂಥ ಅನೇಕ ಘಟನೆಗಳನ್ನು ನೋಡಿದ ನನಗೆ ಒಬ್ಬ ಹೆಣ್ಣುಮಗಳು ಇಷ್ಟೊಂದು ಧೈರ್ಯದಿಂದ ಮಾತನಾಡುವುದು ಕೇಳಿ ಮನಸ್ಸು ಉಲ್ಲಾಸಭರಿತವಾಗಿತ್ತು. ಮುಂದೆ ಅವರು ಜಗದ್ಗುರುಗಳೂ ಆದರು.

ಕೂಡಲಸಂಗಮವನ್ನು ತಮ್ಮ ಧಾರ್ಮಿಕ ಕಾರ್ಯಕ್ಷೇತ್ರವನ್ನಾಗಿಯೂ ಮಾಡಿಕೊಂಡರು. ಶರಣಮೇಳವನ್ನು ಆರಂಭಿಸಿದರು. ಆರಂಭದ ಘಟ್ಟದಲ್ಲೇ, ಅಂದರೆ ಕಾಲು ಶತಮಾನದ ನಂತರ ಲಿಂಗಾನಂದ ಸ್ವಾಮಿಗಳು ಮತ್ತು ಮಾತಾಜಿ ಅವರು ಸೇರಿ ನನ್ನನ್ನು ಶರಣಮೇಳಕ್ಕೆ ಆಹ್ವಾನಿಸಿದರು. ಅಲ್ಲಿನ ಶಿಸ್ತು ಮರೆಯಲಾರದಂಥದ್ದು. ಹತ್ತಾರು ಸಹಸ್ರ ಜನ ತದೇಕ ಚಿತ್ತದಿಂದ ನನ್ನ ಮಾತುಗಳನ್ನು ಆಲಿಸಿದ್ದು ಇಂದಿಗೂ ನೆನಪಾಗುತ್ತದೆ. ನನಗೆ ಅಲ್ಲಿ ಸಮಯದ ಮಿತಿ ಇರಲಿಲ್ಲ. ಕೆಲವೊಂದು ಸಲ ಪ್ರಸಾದ ಸಮಯ ಮೀರಿದರೂ ಜನ ಕದಲುತ್ತಿರಲಿಲ್ಲ. ಒಂದು ಸಲ ರಾತ್ರಿ 11 ಗಂಟೆಯವರೆಗೆ ಮಾತನಾಡಿದ್ದಿದೆ. ನಂತರ ಜನ ಪ್ರಸಾದಕ್ಕೆ ಹೋದರು. ನನ್ನನ್ನು ಮೂರು ವರ್ಷ ತಪ್ಪದೆ ಕರೆಸಿದರು.

ವೇದಿಕೆಯಲ್ಲಿ ನನಗೆ ಮಾತಾಜಿ ಅವರ ಪಕ್ಕದ ಸ್ಥಾನ ಇರುತ್ತಿತ್ತು. ನಾನು ಮಾತನಾಡುವಾಗ ಅಪ್ಪಾಜಿ (ಲಿಂಗಾನಂದ ಸ್ವಾಮಿಗಳು) ಎರಡೂ ಕೈ ಮೇಲೆತ್ತಿ ವ್ಹಾ ವ್ಹಾ ಎಂದು ಉದ್ಗಾರ ತೆಗೆಯುತ್ತಿದ್ದರು. ಮಾತಾಜಿ ಮೌನವಾಗಿದ್ದು ಅವರ ಕಣ್ಣುಗಳಿಂದ ಅಶ್ರುಧಾರೆ ಹರಿಯುತ್ತಿತ್ತು. ರಾಷ್ಟ್ರೀಯ ಬಸವ ದಳದ ಕಾರ್ಯಕರ್ತರು ಮತ್ತು ಅವರ ಅನುಯಾಯಿಗಳು ಪ್ರತಿ ಸಲ ನನ್ನನ್ನು ಕರೆಸಲು ಬಯಸುವುದಾಗಿ ಮಾತಾಜಿ ನನಗೆ ಪತ್ರ ಬರೆಯುತ್ತಿದ್ದರು. ನಾನೂ ಖುಷಿಯಿಂದ ಹೋಗುತ್ತಿದ್ದೆ.

ಮೂರನೇ ಬಾರಿ ಕೂಡಲಸಂಗಮಕ್ಕೆ ಹೋದಾಗ ಮೂರು ವಿಚಿತ್ರ ಘಟನೆಗಳು ನಡೆದವು. ಪಂಚಾಚಾರ್ಯರ ಅಡ್ಡಪಲ್ಲಕ್ಕಿ ಹೋಗುವಾಗ ಶರಣಮೇಳದ ಕಾರ್ಯಕರ್ತರು ರಸ್ತೆಗೆ ಅಡ್ಡಲಾಗಿ ಕಟ್ಟಿದ ಬಿದರಿನ ಕಮಾನಿನ ಕೆಳಗೆ ಹೋಗಬೇಕಿತ್ತು. ಆದರೆ ಪಂಚಾಚಾರ್ಯರು ತಮ್ಮ ಪಲ್ಲಕ್ಕಿ ಆ ಕಮಾನಿನ ಕೆಳಗೆ ಹೋಗುವುದಕ್ಕೆ ಸಮ್ಮತಿಸಲಿಲ್ಲ. ಏಕೆಂದರೆ ಮೇಲೆ ಬಸವಣ್ಣವರ ಭಾವಚಿತ್ರವನ್ನು ತೂಗುಬಿಡಲಾಗಿತ್ತು. ಅವರ ಕಡೆಯವರು ಕಮಾನನ್ನು ಬೀಳಿಸಿದರು. ಆಗ ಅಡ್ಡಪಲ್ಲಕ್ಕಿ ಮುಂದೆ ಹೋಯಿತು. ಈ ಅಸಹ್ಯಕರ ಘಟನೆಗೆ ನಾನೂ ಸಾಕ್ಷಿಯಾದೆ. ಬೇಸರವಾಯಿತು. ಬಸವದಳದ ಕಾರ್ಯಕರ್ತರು ಉದ್ವೇಗಕ್ಕೆ ಒಳಗಾದರು. ಸಭಿಕರು ಆತಂಕಕ್ಕೊಳಗಾದರು. ನಂತರ ನಡೆದ ಶರಣ ಮೇಳ ಸಭೆಯಲ್ಲಿ ನಾನು ಬಸವಣ್ಣ ಮತ್ತು ಪೈಗಂಬರರ ಕುರಿತು ಮಾತನಾಡಬೇಕಿತ್ತು. ಅದೇ ಸಂದರ್ಭದಲಿ ಪುನರ್ಜನ್ಮದ ಬಗ್ಗೆ ಅವರ‘ಕಲ್ಯಾಣ ಕಿರಣ’ದಲ್ಲಿ ಲೇಖನವೊಂದು ಪ್ರಕಟವಾಗಿತ್ತು. ಯಾರು ಬರೆದದ್ದು ನೆನಪಾಗುತ್ತಿಲ್ಲ. ಇದು ನನಗೆ ಬೇಸರ ತರಿಸಿತ್ತು. ಲಿಂಗೈಕ್ಯದ ನಂತರ ಪುನರ್ಜನ್ಮ ಇಲ್ಲ ಎಂಬುದು ನನ್ನ ವಾದವಾಗಿತ್ತು. ‘ಈ ಜನ್ಮ ಬಳಿಕಿಲ್ಲ’ ಎಂದು ಅಕ್ಕ ಹೇಳಿದ್ದಾಳೆ. ‘ಪುಣ್ಯ ಪಾಪ ಎಂಬ ಉಭಯಕರ್ಮವನಾರು ಬಲ್ಲರು? ದೇಹ ತಾನುಂಬಡೆ ದೇಹ ತಾ ಮಣ್ಣು, ಜೀವ ತಾನುಂಬಡೆ ಜೀವ ತಾ ಬಯಲು’ ಎಂದು ಬಸವಣ್ಣನವರು ಪುನರ್ಜನ್ಮವನ್ನು ಅಲ್ಲಗಳೆದಿದ್ದಾರೆ. ‘ಮೆಲ್ಲ ಮೆಲ್ಲನೆ ಷಟ್‌ಸ್ಥಲವ ಮೀರಿ ನಿರವಯಸ್ಥಲವನೈದುವೆನಯ್ಯಾ’ ಎಂದು ಬಸವಣ್ಣನವರು ಹೇಳುವ ಮೂಲಕ ಬಯಲು ತತ್ತ್ವವವನ್ನು ಪ್ರತಿಪಾದಿಸಿದ್ದಾರೆ. ಶರಣರು ಪುನರ್ಜನ್ಮವನ್ನು ಪ್ರತಿಪಾದಿಸಿಲ್ಲ. ವಚನಗಳು ಕಾವ್ಯ, ಶಾಸ್ತ್ರ, ದರ್ಶನ ಮತ್ತು ಸಾಮಾಜಿಕವೂ ಆಗಿರುವುದರಿಂದ ಬಹಳ ಎಚ್ಚರಿಕೆಯಿಂದ ಅಧ್ಯಯನ ಮಾಡಬೇಕಾಗುತ್ತದೆ. ಗುರು ಕಾರುಣ್ಯವೆಂಬ ಇಷ್ಟಲಿಂಗ ದೀಕ್ಷೆಯೆ ಇಲ್ಲಿ ಪುನರ್ಜನ್ಮ. ಬೇರೆ ಪುನರ್ಜನ್ಮ ಇಲ್ಲ. ಹಿಂದಣ ಜನ್ಮ ಎಂದರೆ ಗುರು ಕಾರುಣ್ಯ ಪಡೆಯುವ ಮೊದಲಿನ ಜನ್ಮ ಮತ್ತು ಅಮಿಬಾದಿಂದ ಇಷ್ಟಲಿಂಗ ದೀಕ್ಷೆ ಪಡೆಯುವವರೆಗಿನ ಜನ್ಮ. ಹೀಗೆ ಯೋಚಿಸುವಾಗ ನನ್ನ ದಾರಿ ಬೇರೆ ಎನಿಸಿತು.
ಇನ್ನು ಬಸವಣ್ಣ ಮತ್ತು ಪೈಗಂಬರರ ಕುರಿತು ಮಾತನಾಡುವಾಗ ಕೆಲ ಸಭಿಕರು ಗುಸು ಗುಸು ಪ್ರಾರಂಭಿಸಿದರು. ಹಿಂದಣ ಸಭೆಗಳಲ್ಲಿನ ಏಕಾಗ್ರತೆ ಇರಲಿಲ್ಲ. ಇದಕ್ಕೆ ಕಾರಣ ಅವರ ತಪ್ಪಲ್ಲ. ಜನಸಮುದಾಯಕ್ಕೆ ಎಲ್ಲ ಧರ್ಮಗಳ ಅರಿವು ಮೂಡಿಸುವ ಕಾರ್ಯದಲ್ಲಿ ಜವಾಬ್ದಾರಿಯುತ ಜನ ತೋರಿಸಿದ ಉದಾಸೀನ ಭಾವವೇ ಸಭಿಕರ ಈ ಮನಸ್ಥಿತಿಗೆ ಕಾರಣ. ಆ ಸಲ ನನಗೆ ಈ ಎಲ್ಲ ಕಾರಣಗಳಿಂದ ಬೇಸರ ಎನಿಸಿತು. ಅಂದು ಲಿಂಗಾನಂದ ಸ್ವಾಮಿಗಳು ಪೀಠಾರೋಹಣ ಮಾಡಿ 25 ವರ್ಷಗಳಾಗಿದ್ದರಿಂದ ರಜತ ಮಹೋತ್ಸವ ಆಚರಿಸಿದ ನೆನಪು. ಆದರೆ ಪಂಚಾಚಾರ್ಯ ಮಂದಿಯ ಗದ್ದಲದಿಂದ ಎಲ್ಲ ಗಲಿಬಿಲಿಯಾಗಿತ್ತು. ಆ ಸಂದರ್ಭದಲ್ಲಿ ಅಪ್ಪಾಜಿ, ಮಾತಾಜಿ ಮತ್ತು ರಾಷ್ಟ್ರೀಯ ಬಸವದಳದ ಕಾರ್ಯಕರ್ತರು ತೋರಿದ ಸಂಯಮ ಮೆಚ್ಚುವಂಥದ್ದು.

ಸಭೆ ಮುಗಿದ ನಂತರ ನಾನು ಬಾಗಲಕೋಟೆಗೆ ಬಂದು ಉಳಿದೆ. ತದನಂತರ ಮತ್ತೆ ಹೋಗುವ ಪ್ರಸಂಗ ಬಂದರೂ ಹೋಗಲಿಕ್ಕಾಗಲಿಲ್ಲ. ಆದರೆ ಮಾತಾಜಿ ಅವರ ಜೊತೆ ಸಂಪರ್ಕದಲ್ಲಿದ್ದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದೆ. ಅದೇನೇ ಇದ್ದರೂ ಬಸವಣ್ಣನವರ ಕುರಿತು ಬೃಹತ್ ಸಭೆಯಲ್ಲಿ ನನಗೆ ಮೊದಲಿಗೆ ಮಾತನಾಡಲು ಹಚ್ಚಿದವರು ಅಪ್ಪಾಜಿ ಮತ್ತು ಮಾತಾಜಿ ಅವರು. ತದನಂತರ ನಾನು ಬಸವಾದಿ ಶರಣರ ಕುರಿತು ಸಹಸ್ರಾರು ಕಡೆಗಳಲ್ಲಿ ಮಾತನಾಡಿದೆ. ಮಾತನಾಡುತ್ತಲೇ ಇರುವೆ.

ನನಗೆ ಬಸವಾದಿ ಶರಣರ ಕುರಿತು ಬರೆಯಲು ಕೂಡ ಹಚ್ಚಿದವರು ಮಾತಾಜಿಯವರೇ ಆಗಿದ್ದಾರೆ. ಮುಂಬೈ ಕಾರ್ಯಕ್ರಮವೊಂದಕ್ಕೆ ಸಂಬಂಧಿಸಿದಂತೆ ಬಹುಭಾಷಾ ಸ್ಮರಣ ಸಂಚಿಕೆಯೊಂದಕ್ಕೆ ಲೇಖನ ಬರೆಯಲು ತಿಳಿಸಿದರು. ‘ಬಸವಣ್ಣನವರ ಮೂಲ ವಚನಾಂಕಿತವನ್ನು ಉಳಿಸಿಕೊಳ್ಳಲು ಅನುಮತಿ ಕೊಟ್ಟರೆ ಬರೆಯುವೆ’ ಎಂದು ತಿಳಿಸಿದೆ. ಅವರು ಒಪ್ಪಿದರು. ಮೊದಲ ಬಾರಿಗೆ ‘ಜಡ ಸಂಸ್ಕೃತಿಯ ವಿರುದ್ಧ ಚೈತನ್ಯ ಸಂಸ್ಕೃತಿ’ ಎಂಬ ದೀರ್ಘ ಲೇಖನ ಬರೆದು ಕಳಿಸಿದೆ. ಅವರು ಹಾಗೇ ಪ್ರಕಟಿಸಿದರು. ಆದರೆ ನನ್ನ ಲೇಖನ ಮುಗಿದ ನಂತರದ ಪುಟದಲ್ಲಿ ಅವರು ಒಂದು ಪುಟದ ಟಿಪ್ಪಣಿ ಬರೆದು ಲಿಂಗದೇವ ವಚನಾಂಕಿತ ಕುರಿತು ವಿವರಿಸಿದ್ದರು! ನನ್ನ ಆ ಲೇಖನ ನಂತರ ಹತ್ತಾರು ಕಡೆಗಳಲ್ಲಿ ಪ್ರಕಟವಾಯಿತು. ಗುಲಬರ್ಗಾ ವಿಶ್ವವಿದ್ಯಾಲಯದವರು ಪಠ್ಯದಲ್ಲಿ ಸೇರಿಸಿದರು. ಆ ಮೊದಲ ಲೇಖನ ನನಗೆ ಬಹಳ ಕೀರ್ತಿಯನ್ನು ತಂದುಕೊಟ್ಟಿತು.

ತದನಂತರ ನನ್ನ ಮತ್ತು ಅವರ ಮಧ್ಯೆ ಅನೇಕ ಸಲ ವಚನಾಂಕಿತ ವಿಚಾರದ ಬಗ್ಗೆ ಆಪ್ತ ಸಮಾಲೋಚನೆ ನಡೆದವು. ‘ಕೂಡಲಸಂಗಮದೇವ’ ಕೊನೆಗೆ ಪಂಚಾಚಾರ್ಯರನ್ನು ತಲುಪುತ್ತದೆ ಎಂಬುದು ಅವರ ಕಾಳಜಿಯಾಗಿತ್ತು. ‘ಕೂಡಲಸಂಗಮದೇವ’ ಎಂಬ ಸ್ಥಾವರಲಿಂಗವಾಗಲೀ ಮಂದಿರವಾಗಲಿ ಎಲ್ಲಿಯೂ ಇಲ್ಲ. ಕೂಡಲಸಂಗಮ ಎಂಬ ಊರಿನಲ್ಲಿ ಇರುವುದು ಸಂಗಮನಾಥನ ಮಂದಿರ. ಅದು ನಾಥಪಂಥದ ಸ್ಥಾವರಲಿಂಗ. ಬಸವಣ್ಣನವರು ಸ್ಥಾವರಲಿಂಗಕ್ಕೆ ಪರ್ಯಾಯವಾಗಿ ಇಷ್ಟಲಿಂಗವನ್ನು ಪೂಜಾಸಾಧನವಾಗಿ ಬಳಸಿದರು. ಖಂಡಿತವಾಗಿಯೂ ಲಿಂಗಾಯತ ಧರ್ಮದಲ್ಲಿ ದೇವರ ಹೆಸರು ಲಿಂಗದೇವ. ಆದರೆ ಇದರರ್ಥ ವಚನಾಂಕಿತ ತಿದ್ದಬೇಕೆಂದಲ್ಲ ಎಂಬದು ನನ್ನ ವಾದವಾಗಿತ್ತು.

ಬಸವಣ್ಣನವರ ಕೂಡಲಸಂಗಮದೇವ ನಿಜವಾದ ಅರ್ಥದಲ್ಲಿ ಲಿಂಗದೇವನೇ ಆಗಿದ್ದಾನೆ. ಅಷ್ಟೇ ಅಲ್ಲ ಎಲ್ಲ ವಚನಕಾರರ ವಚನಾಂಕಿತಗಳೆಂಬ ನದಿಗಳು ಕೊನೆಯಲ್ಲಿ ಲಿಂಗದೇವ ಎಂಬ ಮಹಾಸಾಗರವನ್ನೇ ಸೇರುತ್ತವೆ. ಬಸವಣ್ಣನವರು ಸಂಗಮನಾಥನ ಸ್ಥಾನದಲ್ಲಿ ಲಿಂಗದೇವ ಎಂಬ ಕೂಡಲಸಂಗಮದೇವನನ್ನು ವಚನಾಂಕಿತ ರೂಪದಲ್ಲಿ ತಂದರು. ಆ ಕುರಿತು ವಚನ ರಚನೆಯನ್ನೂ ಮಾಡಿದರು. “ತೋರಬಾರದ ಸಿಂಹಾಸನದ ಮೇಲೆ ಹೇಳಬಾರದ ಘನವು ಬಂದೆರಗಿದಾಗ ತೋರಿ ಮೆರೆವ ಸಂಗಮನಾಥನು ಎದ್ದು ಹೋದನು.” ಎಂದು ಬಸವಣ್ಣನವರು ಸ್ಪಷ್ಟಪಡಿಸಿದ್ದಾರೆ. ಅಂದಿಗೆ ಜಡ ಸ್ಥಾವರಲಿಂಗ ತನ್ನ ಅಸ್ತಿತ್ವವನ್ನು ಕಳೆದುಕೊಂಡು ಇಷ್ಟಲಿಂಗ ಚಲನಶೀಲವಾಯಿತು ಎಂದು ಬಸವಣ್ಣನವರು ಆ ವಚನದಲ್ಲಿ ಸೂಚಿಸಿದ್ದಾರೆ.

ಅವರು ಜಗದ್ಗುರು ಆಗುವುದರ ಮಹತ್ವ ನನಗೆ ಗೊತ್ತಿರದಿದ್ದರೂ ಬಹಳ ಸಂತೋಷ ಪಟ್ಟಿದ್ದೆ. ಹೆಂಡಂದಿರು ಗಂಡಂದಿರ ಜೊತೆ ಭಯಭೀತಿಯಿಂದ ನಡೆದುಕೊಳ್ಳುವ, ಬೈಸಿಕೊಳ್ಳುವ ಮತ್ತು ಚಿಕ್ಕಪುಟ್ಟ ತಪ್ಪುಗಳಿಗೆ ಗಂಡಂದಿರಿಂದ ಬಡಿಸಿಕೊಳ್ಳುವಂಥ ಅನೇಕ ಘಟನೆಗಳನ್ನು ನೋಡಿದ ನನಗೆ ಒಬ್ಬ ಹೆಣ್ಣುಮಗಳು ಇಷ್ಟೊಂದು ಧೈರ್ಯದಿಂದ ಮಾತನಾಡುವುದು ಕೇಳಿ ಮನಸ್ಸು ಉಲ್ಲಾಸಭರಿತವಾಗಿತ್ತು. ಮುಂದೆ ಅವರು ಜಗದ್ಗುರುಗಳೂ ಆದರು.

ಮಾತಾಜಿ ಅವರು ನನ್ನ ವಿಚಾರಗಳನ್ನು ಮೆಚ್ಚಿಕೊಂಡರು. ಅದರೆ ಅವರು ಬಹಳ ಮುಂದುವರಿದಿದ್ದರು. ಅವರ ಅನುಯಾಯಿಗಳು ಆ ವಚನ ತಿದ್ದುಪಡಿ ವಿಚಾರಕ್ಕೆ ಬಹಳ ನಿಷ್ಠರಾಗಿದ್ದರು. ಆ ಕಾಲದಲ್ಲಿ ಅವರನ್ನು ಎದುರಿಸುವ ಯಾವ ಶಕ್ತಿಯೂ ಹುಟ್ಟಿರಲಿಲ್ಲ. ಆದರೆ ಅವರ ವಚನಾಂಕಿತ ನಿರ್ಧಾರವೇ ಅವರಿಗೆ ತೊಡರಾಯಿತು. ಆದರೂ ಅವರು ಎದೆಗುಂದದೆ ಮುಂದುವರಿದಿದ್ದು ಮಹಾಸಾಹಸವಾಗಿದೆ.

ಚುನಾವಣೆಗೆ ನಿಲ್ಲುವ ಅವರ ನಿರ್ಧಾರವನ್ನು ನಾನು ಸ್ವಾಗತಿಸಿದ್ದೆ. ಆದರೆ ಕೋಮುವಾದಿ ಪಕ್ಷವನ್ನು ಅವರು ಬೆಂಬಲಿಸಿದ್ದರಿಂದ ಅವರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದೆ. ಅವರು ಪ್ರಖರ ಧರ್ಮಾಭಿಮಾನಿಯಾಗಿದ್ದ ರೀತಿಯಲ್ಲೇ ದೇಶಾಭಿಮಾನಿಯೂ ಆಗಿದ್ದರು. ಮೊದಮೊದಲು ಕೋಮುವಾದಿಗಳು ಮತ್ತು ದೇಶಾಭಿಮಾನಿಗಳು ಒಂದೇ ಎಂದು ಅವರು ಭಾವಿಸಿದ್ದರು. ‘ಓಂ ಎನ್ನುವವರೆಲ್ಲ ಹಿಂದುಗಳು’ ಮತ್ತು ‘ಹಿಂದು ಧರ್ಮ ಎಂಬುದು ವಿಶ್ವವಿದ್ಯಾಲಯ ಹಾಗೂ ಲಿಂಗಾಯತ ಎನ್ನುವುದು ಡಿಪಾರ್ಟ್ಮೆಂಟ್’ ಎಂದು ಲಿಂಗಾನಂದ ಸ್ವಾಮಿಗಳು ಕೂಡ ಮೊದಲಿಗೆ ಭಾವಿಸಿದ್ದರು. ಕೆಲ ವರ್ಷಗಳ ಹಿಂದೆ ಕೂಡ ‘ಕಲ್ಯಾಣ ಕಿರಣ’ದಲ್ಲಿ ‘ಹಿಂದುಗಳು ಹೆಚ್ಚು ಮಕ್ಕಳನ್ನು ಹಡೆಯಬೇಕು’ ಎಂದು ಸಂಪಾದಕೀಯ ಪ್ರಕಟವಾಗಿತ್ತು. ಆರಂಭದ ಕಾಲ ಘಟ್ಟದಲ್ಲಿ ‘ಹಿಂದು, ವೀರಶೈವ, ಲಿಂಗಾಯತ ಒಂದೇ’ ಎಂಬ ಹಾಡನ್ನೂ ಹಾಡುತ್ತಿದ್ದರು. ನಂತರ ಲಿಂಗಾಯತ ಸ್ವತಂತ್ರ ಧರ್ಮದ ವಿಚಾರ ಬಂದಾಗ ಕೋಮುವಾದಿಗಳು ಅಡ್ಡ ಬಂದದ್ದರಿಂದ ಅವರು ಕೋಮುವಾದದ ನಿಜಸ್ವರೂಪವನ್ನು ಅರಿತುಕೊಂಡು ವಿರೋಧಿಸಿದರು.

ಲಿಂಗಾಯತ ಸ್ವತಂತ್ರ ಧರ್ಮವಾಗಿದ್ದು ಸಂವಿಧಾನದ ಮಾನ್ಯತೆ ಬಗ್ಗೆ ಒತ್ತಾಯಿಸಿ ರ‍್ಯಾಲಿಗಳು ನಡೆದಾಗ ಮಾತಾಜಿ ಮತ್ತು ಅವರ ಅನುಯಾಯಿಗಳು ತೋರಿದ ಧೈರ್ಯ ಮತ್ತು ಕ್ರಿಯಾಶೀಲತೆ ಮೆಚ್ಚುವಂಥದ್ದು. ಬೆಳಗಾವಿಯಲ್ಲಿ ರ‍್ಯಾಲಿ ನಡೆಯುವ ಕೆಲ ದಿನಗಳ ಮೊದಲು ಬಸವ ಟಿ.ವಿ.ಯ ಈ. ಕೃಷ್ಣಪ್ಪ ಅವರನ್ನು ಕರೆದುಕೊಂಡು ಮಾತಾಜಿ ಅವರನ್ನು ಭೇಟಿಯಾಗಲು ಬೆಂಗಳೂರಿನ ಬಸವ ಮಂಟಪಕ್ಕೆ ಹೋದೆ. ಬೆಳಗಾವಿ ರ‍್ಯಾಲಿಯಲ್ಲಿ ಐದು ಲಕ್ಷದಷ್ಟು ಜನ ಸೇರುವರು; ತಾವು ಲಿಂಗದೇವ ವಚನಾಂಕಿತವನ್ನು ಹಿಂದೆ ಪಡೆದಿರುವುದಾಗಿ ಘೋಷಿಸಬೇಕು. ನೀವೇ ಈ ಚಳವಳಿಯ ನಾಯಕಿಯಾಗುವಿರಿ. ಜನರಿಗೆ ನಿಮ್ಮ ಕ್ರಿಯಾಶೀಲತೆ ಬಗ್ಗೆ ಬಹಳ ನಂಬಿಕೆ ಇದೆ. ಸ್ವತಂತ್ರ ಧರ್ಮದ ಮಾನ್ಯತೆ ಪ್ರಮುಖವಾದುದು ಅದರ ಮುಂದೆ ಉಳಿದುದೆಲ್ಲ ಗೌಣ. ಉಳಿದ ವಿಚಾರಗಳು ಆಂತರಿಕವಾಗಿರುವುದರಿಂದ ಸಮಾಜದೊಳಗೇ ಬಗೆಹರಿಸಿಕೊಳ್ಳುವಂಥವು ಎಂದು ಮುಂತಾಗಿ ತಿಳಿಸಿದೆ. ಅವರು ಮೌನವಾಗಿದ್ದರು. ಮೌನವು ಸಮ್ಮತಿಯ ಲಕ್ಷಣ ಎಂಬಂತೆ ಭಾಸವಾಯಿತು. ಬೆಳಗಾವಿ ರ‍್ಯಾಲಿಯಲ್ಲಿ ಅವರು ಮಾತನಾಡಿದರು. ಆದರೆ ಲಿಂಗದೇವ ವಚನಾಂಕಿತ ಹಿಂಪಡೆಯುವ ಬಗ್ಗೆ ತಿಳಿಸಲಿಲ್ಲ. ನಂತರ ಕೆಲವೇ ದಿನಗಳಲ್ಲಿ ವಚನಾಂಕಿತ ತಿದ್ದುವ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಪ್ರತಿಕೂಲ ತೀರ್ಪು ನೀಡಿತು. ತದನಂತರ ಹುಬ್ಬಳ್ಳಿಯಲ್ಲಿ ನಡೆದ ರ‍್ಯಾಲಿಯಲ್ಲಿ ಮಾತಾಜಿ ಲಿಂಗದೇವ ವಚನಾಂಕಿತ ಹಿಂಪಡೆದಿರುವುದಾಗಿ ಘೋಷಿಸಿದರೂ ಯಾರೂ ಕಿವಿಗೊಡಲಿಲ್ಲ. ಮುಂದೆ ಅವರು ದೆಹಲಿಯಲ್ಲಿ ಸಂಯೋಜಿಸಿದ ಕಾರ್ಯಕ್ರಮ ಐತಿಹಾಸಿಕವಾಗಿತ್ತು.

ಅವರ ಮತ್ತು ನನ್ನ ಮಧ್ಯದ ಸಂಬಂಧ ತಾಯಿ ಮಗನ ಸಂಬಂಧವಾಗಿತ್ತು. ಅಂಥ ಅದಮ್ಯ ಪ್ರೀತಿಯನ್ನು ಅವರಿಂದ ಪಡೆದೆ. ಆಶ್ಚರ್ಯವೆಂದರೆ ಅವರು ನನ್ನೊಂದಿಗೆ ಎಂದೂ ವಾದ ಮಾಡಲೇ ಇಲ್ಲ. ಕೇಳುತ್ತಲೇ ಇದ್ದರು. ನಾನು ಎಷ್ಟೋ ಸಲ ವಾದ ಮಾಡುತ್ತಿರುವಾಗ, ತಾಯಿ ಮಗನನ್ನು ಪ್ರೀತಿಯಿಂದ ನೋಡುವ ಹಾಗೆ ನೋಡುತ್ತಿದ್ದುದನ್ನು ಮರೆಯಲಿಕ್ಕಾಗುತ್ತಿಲ್ಲ.

ಅವರ ಪಾರ್ಥಿವ ಶರೀರದ ದರ್ಶನಕ್ಕಾಗಿ ಕೂಡಲಸಂಗಮಕ್ಕೆ ಹೋದಾಗ 50 ವರ್ಷಗಳ ಹಿಂದೆ ಅದೇ ಕೂಡಲಸಂಗಮದಲ್ಲಿ ಮಾತಾಜಿ ವೀರ ಶರಣೆ ಅಕ್ಕನಾಗಮ್ಮನವರ ಹಾಗೆ ಮಾತನಾಡಿದ್ದು ಧ್ವನಿಸುತ್ತಿತ್ತು.

50 ವರ್ಷಗಳಲ್ಲಿ ಏನೆಲ್ಲ ಆಗಿ ಹೋಯಿತು. ಆದರೆ ಅವರ ಬದುಕು ಸಾರ್ಥಕವಾಯಿತು. ಬಸವನೆಂಬ ಬಳ್ಳಿ ವಿಶ್ವದ ವಿವಿಧೆಡೆ ವ್ಯಾಪಿಸುವಲ್ಲಿ ಅವರ ಸಮರ್ಪಣಾಭಾವದ ನಿರಂತರ ಪ್ರಯತ್ನವೂ ಇದೆ ಎಂಬುದನ್ನು ಯಾರೂ ಮರೆಯಲು ಸಾಧ್ಯವಿಲ್ಲ. “ಬಸವ ದರ್ಶನವೆಂದರೆ ವಿಶ್ವದರ್ಶನ” ಎಂಬುದನ್ನು ಲೋಕಕ್ಕೆ ತೋರಿಸಿಕೊಡುವಲ್ಲಿ ನಾವೆಲ್ಲ ಕಾರ್ಯೋನ್ಮುಖವಾಗುವುದೇ ಅವರಿಗೆ ತೋರಿಸುವ ಗೌರವ.