ಕಳೆದ ಇಡೀ ಬೇಸಿಗೆಯಲ್ಲಿ ನಮ್ಮ ರಾಣಿರಾಜ್ಯದಲ್ಲಿ ಮಳೆ ಎಂಬುದು ಮರೀಚಿಕೆಯಾಗಿತ್ತು. ಬೇಸಿಗೆ ಬರುವುದಕ್ಕೂ ಮುನ್ನ ಸರ್ಕಾರವು ಬರಲಿರುವ ಚಂಡಮಾರುತಗಳ ಬಗ್ಗೆ, ಮಳೆಪ್ರವಾಹಗಳ ಬಗ್ಗೆ ಅದೇನೆಲ್ಲಾ ಎಚ್ಚರಿಕೆ ಕೊಟ್ಟಿತ್ತು ಎಂದರೆ ದೂರಪ್ರವಾಸಕ್ಕೇನಾದರೂ ಹೋದರೆ ಮನೆಕಡೆ ಪರಿಸ್ಥಿತಿ ಏನಪ್ಪಾ ಎಂದೆಲ್ಲ ಚಿಂತೆಯಾಗಿತ್ತು. ಹಾಗೇನೂ ಆಗದೆ ಕಡೆಗೆ ನೆಟ್ಟಗೊಂದು ಸರಿಯಾದ ಮಳೆಯೂ ಬೀಳದೆ, ಬೇರೊಂದು ತರಹದ ಚಿಂತೆಯಾಗಿತ್ತು. ಬಿಸಿಲು ಹೆಚ್ಚಾಗಿ, ಮಳೆನೀರು ಕೊಯ್ಲಿನ ಟ್ಯಾಂಕ್ ಪೂರಾ ಖಾಲಿಯಾಗಿ, ಏನೊಂದೂ ತರಕಾರಿ ಬೆಳೆಯಲಿಲ್ಲ. ತರಕಾರಿಯ ಮಾತಿರಲಿ, ನಮ್ಮ ನೆಚ್ಚಿನ ನಿಂಬೆಮರ ಕೂಡ ಭಣಗುಟ್ಟಿಕೊಂಡು ಕಷ್ಟಪಟ್ಟು ಒಂದಷ್ಟು ನಿಂಬೆಹಣ್ಣು ಪ್ರಸಾದಿಸಿತು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ಅಂಕಣ
ಹಿಂದಿನ ಕಾಲದಲ್ಲಿ ಪರಸ್ಪರರ ಭೇಟಿಯಾದಾಗ ‘ನಿಮ್ಮ ಕಡೆ ಮಳೆ, ಬೆಳೆ ಹೇಗಿದೆ’ ಎಂದು ಕೇಳುವುದಿತ್ತು ಅಂತ ನಮ್ಮ ತಂದೆತಾಯಿಯರ ತಲೆಮಾರಿನವರು ಹೇಳುತ್ತಿದ್ದರು. ಹಾಗೆ ಕೇಳುವುದು, ಮಳೆಬೆಳೆ ಕುರಿತು ಹಂಚಿಕೊಳ್ಳುವುದು ನಿಂತುಹೋಗಲಿಲ್ಲ ಎನ್ನುವುದೇ ಸಮಾಧಾನದ ಸಂಗತಿ. ಸರಿಯಾಗಿ ಮಳೆ ಬಿದ್ದರೆ ಚೆನ್ನಾಗಿ ಆಹಾರ ಬೆಳೆಗಳ ಫಸಲು, ಹಣ್ಣು-ತರಕಾರಿಗಳು ಸಿಗುತ್ತವೆ. ಆಗ ಕಿಂಚಿತ್ತಾದರೂ ಸಂತೋಷ, ನೆಮ್ಮದಿ ಎಂಬುದು ಇರುತ್ತದೆ. ಯಾವ ದೇಶದಲ್ಲಿದ್ದರೇನು ಯಾವ ಕಾಲದಲ್ಲಿದ್ದರೇನು ಇದು ಎಲ್ಲರಿಗೂ ಎಲ್ಲಾ ಕಾಲಕ್ಕೂ ಸಲ್ಲುವ ಮಾತು ಎನ್ನುವುದು ಅನುಭವಕ್ಕೆ ಬರುವುದು ಮಳೆ ಬಿದ್ದಾಗ, ಊರಲ್ಲೆಲ್ಲಾ ಹಸಿರೆಂಬುದು ಹರಡಿ ಹಬ್ಬಿಕೊಂಡಾಗ.
ಕಳೆದ ಇಡೀ ಬೇಸಿಗೆಯಲ್ಲಿ ನಮ್ಮ ರಾಣಿರಾಜ್ಯದಲ್ಲಿ ಮಳೆ ಎಂಬುದು ಮರೀಚಿಕೆಯಾಗಿತ್ತು. ಬೇಸಿಗೆ ಬರುವುದಕ್ಕೂ ಮುನ್ನ ಸರ್ಕಾರವು ಬರಲಿರುವ ಚಂಡಮಾರುತಗಳ ಬಗ್ಗೆ, ಮಳೆಪ್ರವಾಹಗಳ ಬಗ್ಗೆ ಅದೇನೆಲ್ಲಾ ಎಚ್ಚರಿಕೆ ಕೊಟ್ಟಿತ್ತು ಎಂದರೆ ದೂರಪ್ರವಾಸಕ್ಕೇನಾದರೂ ಹೋದರೆ ಮನೆಕಡೆ ಪರಿಸ್ಥಿತಿ ಏನಪ್ಪಾ ಎಂದೆಲ್ಲ ಚಿಂತೆಯಾಗಿತ್ತು. ಹಾಗೇನೂ ಆಗದೆ ಕಡೆಗೆ ನೆಟ್ಟಗೊಂದು ಸರಿಯಾದ ಮಳೆಯೂ ಬೀಳದೆ, ಬೇರೊಂದು ತರಹದ ಚಿಂತೆಯಾಗಿತ್ತು. ಬಿಸಿಲು ಹೆಚ್ಚಾಗಿ, ಮಳೆನೀರು ಕೊಯ್ಲಿನ ಟ್ಯಾಂಕ್ ಪೂರಾ ಖಾಲಿಯಾಗಿ, ಏನೊಂದೂ ತರಕಾರಿ ಬೆಳೆಯಲಿಲ್ಲ. ತರಕಾರಿಯ ಮಾತಿರಲಿ, ನಮ್ಮ ನೆಚ್ಚಿನ ನಿಂಬೆಮರ ಕೂಡ ಭಣಗುಟ್ಟಿಕೊಂಡು ಕಷ್ಟಪಟ್ಟು ಒಂದಷ್ಟು ನಿಂಬೆಹಣ್ಣು ಪ್ರಸಾದಿಸಿತು. ನುಗ್ಗೆಮರವೂ ಹಾಗೆಯೇ ಅತ್ತುಕೊಂಡು ಕೆಲವು ಕಾಯಿ ಕೊಟ್ಟು ಲೊಟಕ್ ಎಂದು ಕೊಂಬೆ ಮುರಿದುಕೊಂಡದ್ದು ಬೇಸರವಾಗಿತ್ತು.
ಎರಡು ವಾರಗಳ ಹಿಂದೆ ಒಳ್ಳೆ ಮಳೆಯಾಗಿದ್ದೆ ತಡ ಪ್ರಕೃತಿಯಲ್ಲಿ ಅದೇನು ಲವಲವಿಕೆ, ಉತ್ಸಾಹ. ಬಡಬಡನೆ ಇದ್ದಬಿದ್ದ, ಇಲ್ಲದಿದ್ದ ಗಿಡಬಳ್ಳಿಗಳೆಲ್ಲ ಮೈಕೈ ಕೊಡವಿಕೊಂಡು ನಿಂತವಲ್ಲಾ! ಇದ್ದಕ್ಕಿದ್ದಂತೆ ದೊಡ್ಡಮೆಣಸಿನಕಾಯೊಂದು ಕಾಣಿಸಿದಾಗ ಹಿ ಹಿ ಹಿ ಎಂದು ನಗುಬಂತು. ಮೂರು ವರ್ಷಗಳಿಂದ ತಟಸ್ಥವಾಗಿದ್ದ ರಾಸ್ಬೆರ್ರಿ ಗಿಡದಲ್ಲಿ ಹೂ ಅರಳಿ, ಚಿಕ್ಕಚಿಕ್ಕ ಕಾಯಿಗಳು ಹುಟ್ಟಿದ್ದು ನೋಡಿ ಸಖೇದಾಶ್ಚರ್ಯವಾಯಿತು. ಅದನ್ನು ನೋಡಿ ಮತ್ಸರವೇನೋ, ಬೇಡಬೇಡವೆಂದರೂ ಅವರೆಕಾಯಿ ಬಳ್ಳಿ ತಾನೂ ಕೂಡ ಹೂವೇರಿಸಿಕೊಳ್ಳಲು ಸಜ್ಜಾಗಿದೆ. ಇತ್ತ ಕಡೆ ಮಲ್ಬೆರ್ರಿ ಮರದಲ್ಲೂ ಚಿಗುರಾಗಿ ಕಾಯಿ ಕಾಣಿಸಿದೆ. ನುಗ್ಗೆಮರದ ಅಪಘಾತದಿಂದ ಬೇಸತ್ತಿದ್ದ ನನ್ನನ್ನು ನೋಡಿ ಮರುಗಿ ನಿಂಬೆಮರವು ಮಳೆ ಬಂತಲ್ಲಾ, ಇನ್ನೇನು ಬೇಸರ, ನಾನು ಕೆಲಸಕ್ಕೆ ಹಾಜರ್ ಎನ್ನುತ್ತಾ ತನ್ನ ಮೈಯನ್ನು ಅಲಂಕರಿಸಲು ಹೂಗಳಿಗೆ ಆಹ್ವಾನವಿತ್ತಿದೆ. ತಡವೇಕೆ ಎನ್ನುವ ಜೇನ್ನೊಣಗಳ ಹಾಜರಾತಿ ಹೆಚ್ಚಿದೆ. ನೀರಿಲ್ಲದೆ ಬಡವಾಗಿದ್ದ ಬಾಳೆಗೊನೆ ತೃಪ್ತಿಯಾಗುವ ತನಕವೂ ಮಳೆನೀರು ಕುಡಿದು ಮೈ ತುಂಬಿಕೊಂಡಿದೆ.
ಇನ್ನು ಹೂಗಿಡಗಳ ಸಂಭ್ರಮವಂತೂ ಹೇಳತೀರದು. ಕೆಂಪು, ನೀಲಿ, ನೇರಳೆ, ಗುಲಾಬಿ, ಬಿಳಿ, ಹಳದಿ ಬಣ್ಣಗಳ, ಹಲವಾರು ಛಾಯೆಗಳ ರಂಗುರಂಗಿನ ಹೂಗಳು ಕಂಗೊಳಿಸುತ್ತಿವೆ.
‘ನಿಮ್ಮ ಕೈತೋಟದಲ್ಲಿ ಏನೆಲ್ಲಾ ಬೆಳೆಯುತ್ತಿದ್ದೀರಿ’ ಎಂದು ನಮ್ಮ ಕೈತೋಟಿಗರ ಗುಂಪು ಫೇಸ್ ಬುಕ್ಕಿನಲ್ಲಿ ಕೇಳುತ್ತಿದೆ. ಆಸ್ಟ್ರೇಲಿಯಾದಲ್ಲೀಗ ಶರತ್ಕಾಲ. ಆದರೇನು ದೇಶದ ದಕ್ಷಿಣ ರಾಜ್ಯಗಳಂತೆ ನಮ್ಮ ರಾಣಿರಾಜ್ಯದಲ್ಲಿ ಎಲೆ ಉದುರುವುದೂ, ಮರಗಳು ಬೋಳಾಗುವುದೂ ಏನೂ ಇಲ್ಲ. ಬಿದ್ದ ಒಂದು ದೊಡ್ಡ ಮಳೆಗೆ ಇಡೀ ನಿಸರ್ಗವೇ ವರ್ಣಮಾಲೆ ಧರಿಸಿಕೊಂಡು ಹಬ್ಬ ಮಾಡಿಕೊಳ್ಳುತ್ತಿದ್ದಾಗ ಅದೇನು ಶರತ್ಕಾಲವೋ ಏನೋ ಎಂದು ಗೊಣಗುವುದಿದೆ!
ಕೈತೋಟಿಗರಂತೂ ಬರಲಿರುವ ಚಳಿಗಾಲದ ಸಮಯಕ್ಕೆ ಸಿದ್ಧವಾಗುವ ತರಕಾರಿಗಳ ಬೀಜಗಳನ್ನು ನೆಡುವುದು, ಪರಸ್ಪರ ಹಂಚಿಕೊಳ್ಳುವುದು ಮಾಡುತ್ತಿದ್ದಾರೆ. ಇವರ ಪ್ರಕಾರ ಏಪ್ರಿಲ್ ತಿಂಗಳು ಪ್ರಶಸ್ತವಾದದ್ದು. ನೆಡುವ ತರಕಾರಿಗಳಲ್ಲಿ ಗಮನಾರ್ಹವಾದವು ಬೆಳ್ಳುಳ್ಳಿ, ಈರುಳ್ಳಿ, ಕ್ಯಾರೆಟ್, ಕೋಸು ಬಳಗಕ್ಕೆ ಸೇರಿದ ತರಕಾರಿಗಳು, ಹಸಿರುಸೊಪ್ಪು ವಿಧಗಳು, ಟೊಮ್ಯಾಟೊ, ಹುರಳಿಕಾಯಿ ಬಳಗಕ್ಕೆ ಸೇರಿದ ಪೈಕಿಗಳು, ಬದನೇಕಾಯಿ, ಬೀಟ್ರೂಟ್, ಸೌತೆಕಾಯಿ, ಗೆಣಸು, ಮೂಲಂಗಿ ವಿಧಗಳು… ಇಷ್ಟೆಲ್ಲಾ ತರಕಾರಿಗಳು ಜುಲೈ ತಿಂಗಳಿಂದ ಅಕ್ಟೋಬರ್, ನವೆಂಬರ್ ತನಕ ಸಿಗುತ್ತವೆ. ಒಳ್ಳೆ ಮಳೆ ಬಿದ್ದು ಇವೆಲ್ಲಾ ಬೆಳೆದರೆ ತರಕಾರಿ ಬೆಲೆ ದುಬಾರಿಯಾಗುವುದಿಲ್ಲ. ಕೈತೋಟಿಗರಂತೂ ತಾವು ಬೆಳೆದ ಬೆಳೆಯನ್ನು ಪರಸ್ಪರರೊಡನೆ ಹಂಚಿಕೊಳ್ಳುವುದರಿಂದ ಸಮುದಾಯದಲ್ಲಿ ಸಂತೋಷವಿರುತ್ತದೆ.
ಮಳೆ ಬಿದ್ದ ವಾರಾಂತ್ಯ ಸೂಪರ್ ಮಾರ್ಕೆಟ್ಟುಗಳ ತೋಟಗಾರಿಕೆ ವಿಭಾಗಕ್ಕೆ ಜನರ ಲಗ್ಗೆ. ಎಲ್ಲರ ಮುಖದಲ್ಲೂ ಉತ್ಸಾಹ ತುಂಬಿತುಳುಕುತ್ತಿತ್ತು. ಹೆಚ್ಚಿನವರ ಮನೆಗಳಲ್ಲಿ ಮಳೆನೀರು ಕೊಯ್ಲು ಟ್ಯಾಂಕ್ ಇರುತ್ತದೆ. ಈಗಂತೂ ಅದು ತುಂಬಿಕೊಂಡು ಹೇರಳವಾಗಿ ನೀರು ಲಭ್ಯವಿರುವಾಗ, ಮಳೆ ಬಿದ್ದು ಮೃದುವಾದ ಭೂಮಿ ಮತ್ತು ತಂಪುಹವೆ ಅವರನ್ನು ತೋಟಗಾರಿಕೆ ವಿಭಾಗಕ್ಕೆ ಕೊಂಡೊಯ್ದಿತ್ತು. ಡಾಫೋಡಿಲ್ ಹೂ ಮುಂತಾದ ಬಲ್ಬ್‌ಗಳು, ಡೇರಾ ಹೂ, ಇನ್ನೂ ಅನೇಕ ಹೂ ವಿಧಗಳು, ಮೊಳಕೆಯೊಡೆದು ತಯಾರಾಗಿದ್ದ ತರಕಾರಿ ಗಿಡಗಳು, ಅಥವಾ ಅವುಗಳ ಬೀಜಗಳು, ವಿವಿಧ ಹರ್ಬ್ಸ್ ಮೊಳಕೆಗಳು ಹೇರಳವಾಗಿದ್ದವು. ಜೇಬು ಖಾಲಿಯಾದರೂ ಪ್ರತಿಯೊಬ್ಬರ ಟ್ರಾಲಿಯೂ ಭರ್ತಿಯಾಗಿತ್ತು.
ಪ್ರತಿ ಶುಕ್ರವಾರ ಸಂಜೆ ದೂರದರ್ಶನದಲ್ಲಿ ಪ್ರಸಾರವಾಗುವ Gardening Australia ಕಾರ್ಯಕ್ರಮದವರು ತೋಟಗಾರಿಕೆ ಬಗ್ಗೆ ದೇಶದ ರಾಜ್ಯಗಳಲ್ಲಿರುವ ವಿಶೇಷ ಸಂಗತಿಗಳನ್ನು ಪತ್ತೆ ಹಚ್ಚಿ ಆಯಾ ಸ್ಥಳಗಳಿಗೆ ಹೋಗಿ ಬಗೆಬಗೆಯ ತೋಟಗಳನ್ನು, ಬೆಳೆಯುವ ವಿಧಾನಗಳನ್ನು ತೋರಿಸಿ, ತೋಟಗಾರಿಕೆಗೆ ಸಂಬಂಧಪಟ್ಟ ತಂತ್ರಗಳನ್ನು ಚರ್ಚಿಸುತ್ತಾರೆ. ಜೊತೆಗೆ ರಾಜ್ಯಗಳ ಹವಾಮಾನಗಳಿಗೆ ತಕ್ಕಂತೆ ನಾವು ಸದ್ಯಕ್ಕೆ ಬೆಳೆಯಬೇಕಾದ ತರಕಾರಿ, ಹರ್ಬ್ಸ್, ಹಣ್ಣುಗಳ ಬಗ್ಗೆ ಹೇಳುತ್ತಾರೆ. ಕೈತೋಟಿಗರು ಸಂಧಿಸಿದಾಗ ಈ ಕಾರ್ಯಕ್ರಮವನ್ನು ನೆನೆಸಿಕೊಂಡು ಸಂತೋಷಿಸುವುದು ಸಾಮಾನ್ಯ. ಒಂದು ವಿಶೇಷವೆಂದರೆ Gardening Australia ತಂಡದವರು ಕೋವಿಡ್ ವರ್ಷ ೨೦೨೦-೨೧ ರ ಲಾಕ್ ಡೌನ್ ಸ್ಥಿತಿಯಿದ್ದಾಗ ತಮ್ಮತಮ್ಮ ಮನೆಗಳಲ್ಲಿ ಕೈತೋಟಿಗರು ಕೈಗೊಂಡ ಚಟುವಟಿಕೆಗಳನ್ನು ಪ್ರಸಾರ ಮಾಡಿದ್ದರು. ಅವುಗಳಲ್ಲಿ ಬಹಳ ಗಮನ ಸೆಳೆದಿದ್ದು ಹದಿನಾಲ್ಕು ವರ್ಷದ ಹುಡುಗನೊಬ್ಬ ಸ್ವಪ್ರೇರಣೆಯಿಂದ ಅವನ ಮನೆಯಂಗಳದಲ್ಲಿ ತರಕಾರಿ ತೋಟ ಮಾಡಿದ್ದು. ಅವನ ಪ್ರಯತ್ನವನ್ನು ಬಹಳ ಜನರು ಮೆಚ್ಚಿದರಂತೆ. ಇದರಿಂದ ಪ್ರೇರಿತರಾಗಿ ಈ ವರ್ಷ Gardening Australia Juniors ಕಾರ್ಯಕ್ರಮವು ಆರಂಭವಾಗಲಿದೆ. ಇದರಲ್ಲಿ ಭಾಗವಹಿಸಲು, ತಾವು ಸ್ವತಃ ಮಾಡಿರುವ ಕೈತೋಟವನ್ನು ಸಾರ್ವಜನಿಕರಿಗೆ ತೋರಿಸಿ ಅದರ ಬಗ್ಗೆ ಮಾತನಾಡಲು ಮಕ್ಕಳಿಗೆ ಮುಕ್ತ ಆಹ್ವಾನವಿತ್ತಿದ್ದಾರೆ.
ಆಗಾಗ ನಾನೂ ಕೂಡ ಆ ಕಾರ್ಯಕ್ರಮವನ್ನು ನೋಡಿ ಹೌದಲ್ಲಾ, ಅವರು ಹೇಳಿಕೊಡುವ ವಿಧಾನಗಳನ್ನು, ತಂತ್ರಗಳನ್ನು ಕಲಿತು ಅಳವಡಿಸಿಕೊಳ್ಳಬೇಕು ಎಂದೆಲ್ಲ ಆಲೋಚಿಸುತ್ತೀನಿ. ಅವರು ತೋರಿಸುವ ತೋಟಗಳ ಅಂದಚೆಂದಗಳನ್ನು ನೋಡಿ ಮನ ಸೋಲುತ್ತದೆ. ಅದೆಷ್ಟು ಸೊಗಸಾಗಿ, ಕ್ರಮವಾಗಿ ತೋಟವನ್ನು ಅಚ್ಚುಕಟ್ಟಾಗಿ ಇಟ್ಟುಕೊಳ್ಳುತ್ತಾರೆ, ಅವರಿಗೆ ಸಿಗುವ ಸಮಯ, ಇರುವ ವ್ಯವಧಾನ ಮತ್ತು ಆಸಕ್ತಿಗಳ ಬಗ್ಗೆ ಅಸೂಯೆಯಾಗುತ್ತದೆ. ಅದರಲ್ಲಿ ಒಂದಂಶವನ್ನಾದರೂ ಪಾಲಿಸಬೇಕು ಎಂದು ಹಠತೊಟ್ಟು ಹೋದ ವಾರ ಕಳೆ ಕೀಳಿ, ಒತ್ತರಿಸಿದ್ದ ಪೊದೆಗಳನ್ನು ಚೊಕ್ಕವಾಗಿಸಿ, ಒಣಗಿದ್ದ ರೆಂಬೆಗಳನ್ನು ಕತ್ತರಿಸಿ, ಎಲ್ಲೆಲ್ಲೋ ಮೈ ವಾಲಿಸಿಕೊಂಡಿದ್ದ ಗಿಡಗಳಿಗೆ ಮೂಗುದಾರ ಹಾಕಿ ಅಂಗಳವನ್ನು ಗುಡಿಸಿ ಸ್ವಚ್ಛ ಮಾಡಿದಾಗ ಮನಸ್ಸು ಅರಳಿತ್ತು. ಇಷ್ಟು ಮಾಡುವುದಕ್ಕೆ ಅರ್ಧ ದಿನ ಹಿಡಿಸಿತ್ತು. ಒಂದಷ್ಟು ತರಕಾರಿಗಳ ಬೀಜ ನೆಟ್ಟಿದ್ದೆ. ಅವೆಲ್ಲಾ ಬೆಳೆಯುತ್ತವೋ ಬಿಡುತ್ತವೋ ಎನ್ನುವುದು ನೆಲದಲ್ಲಿರುವ ಜೀವಿಗಳ ನಿರ್ಧಾರಕ್ಕೆ ಬಿಟ್ಟದ್ದು.
ರಾಣಿರಾಜ್ಯದಲ್ಲಿ ಮಳೆ ಕೈಕೊಟ್ಟಿತೆಂದು ನಾವೆಲ್ಲ ಹಲುಬುತ್ತಿದ್ದಾಗ ದಕ್ಷಿಣದಲ್ಲಿ ಅಧಿಕ ಮಳೆಯಿಂದ ಆಗಿರುವ ಅವಾಂತರಗಳು ಅಲ್ಲಿನ ಜನತೆಯನ್ನು, ಸರಕಾರಗಳನ್ನು ಕಾಡುತ್ತಿವೆ. ಈ ಪರಿಯ ಮಳೆಯ ಅಭಾವ ಮತ್ತು ಅಧಿಕ ಮಳೆ ತೋರುವುದು ಪ್ರಾಕೃತಿಕ ಹವಾಮಾನದಲ್ಲಿ ವೇಗವಾಗಿ ಜರುಗುತ್ತಿರುವ ಬದಲಾವಣೆಗಳು ಎಂದು ತೋರುತ್ತದೆ. ನಮ್ಮಲ್ಲಿ ಒಂದೇ ಒಂದು ರಾತ್ರಿ ಮಾತ್ರ ದೊಡ್ಡ ಮಳೆಯಾದಾಗ ಸಿಡ್ನಿ ನಗರದಲ್ಲಿ ದಿನಗಟ್ಟಲೆ ಬಿಡದೆ ಮಳೆ ಸುರಿದಿದೆ. ಈಗಲೂ ಸಿಡ್ನಿ ಮತ್ತು ಇನ್ನೂ ದಕ್ಷಿಣದ ಮೆಲ್ಬೋರ್ನ್ ನಗರದಲ್ಲಿ ಮಳೆ ಬೀಳುವ ಸುದ್ದಿ ಬರುತ್ತಲೇ ಇದೆ. ಇಷ್ಟೊಂದು ಮಳೆಯಾದರೆ ಆ ರಾಜ್ಯಗಳ ಬೆಳೆಗಳ ಫಸಲು ಏನಾಗುವುದೋ. ವರ್ಷದ ಉತ್ತರಾರ್ಧದಲ್ಲಿ ಅವರ ಸಂತೋಷ, ನೆಮ್ಮದಿಗಳ ಕಣಜವು ಹೇಗಿರುತ್ತದೋ ಏನೋ. ಇನ್ನು ಇದೇ ವಾರ ದೇಶದ ಪಶ್ಚಿಮದಲ್ಲಿರುವ ರಾಜ್ಯದ ಭಾಗಗಳಲ್ಲಿ ಪ್ರಚಂಡವಾದ ಚಂಡಮಾರುತವೆದ್ದಿದೆ. ಆಸ್ತಿಪಾಸ್ತಿ ನಷ್ಟವಾದರೂ ಜನರಾರೂ ಸತ್ತಿಲ್ಲ. ಹದಿನಾಲ್ಕು ವರ್ಷಗಳ ನಂತರ ಹೀಗಾಗಿರುವುದಂತೆ. ಇದನ್ನೆಲ್ಲಾ ಹವಾಮಾನ ಬದಲಾವಣೆ ಪರಿಣಾಮ ಎನ್ನಬಹುದೇನೋ.
ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.