ಚೌತಿಹಬ್ಬ ಮುಗಿಯಿತು ಎಂದರೆ ಮಳೆಗೆ ತುಸು ಬಿಡುಗಟ್ಟು. ಎಲ್ಲಕಡೆ ಬಣ್ಣಬಣ್ಣದ ಚಿಟ್ಟೆಗಳ ಮೇಳ. ನಮ್ಮೊಳಗೆ ಅವುಗಳನ್ನು ಹಿಡಿಯುವ ಸ್ಪರ್ಧೆ. ಇನ್ನೇನು ಕೈಗೆ ಸಿಕ್ಕೇಬಿಟ್ಟಿತು ಎನ್ನುವಷ್ಟರಲ್ಲಿ ಮಾಯ. ಆಗ ಮರಳಿ ಯತ್ನವ ಮಾಡು. ಅವು ಅಷ್ಟು ಸುಲಭವಾಗಿ ನಮ್ಮ ಕೈಗೆ ಸಿಗುತ್ತಿರಲಿಲ್ಲ. ಇನ್ನೊಂದು ಬಗೆಯ ಚಿಟ್ಟೆಗಳು ಹಾರಾಡುತ್ತಿದ್ದವು. ಅವು ನಮಗೆ ಆಕರ್ಷಕವಾಗಿ ಕಾಣಿಸುತ್ತಿರಲಿಲ್ಲ. ನಾವು ಅವನ್ನು ಕರೆಯುತ್ತಿದ್ದದು ವಿಮಾನ ಎಂದು. ಪಾಪ! ಅವು ಸುಲಭವಾಗಿ ಹಿಡಿಯಲು ಸಿಕ್ಕುತ್ತಿದ್ದವು. ಆದರೆ ನಮಗೆ ಅವನ್ನು ಹಿಡಿಯುವುದರಲ್ಲಿ ಆಸಕ್ತಿ ಇರುತ್ತಿರಲಿಲ್ಲ.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಐದನೆಯ ಕಂತಿನಲ್ಲಿ ಆಗಿನ ಮಳೆ ದಿನಗಳ ಕುರಿತ ಬರಹ
ಬಹಳ ದಿನಗಳ ನಂತರ ಚಿಕ್ಕಪ್ಪನ ಮಗಳು ದೂರವಾಣಿಯಲ್ಲಿ ಮಾತನಾಡಲು ಸಿಕ್ಕಿದ್ದಳು. ʻಈ ವರ್ಷ ಅಷ್ಟೊಂದು ಮಳೆನೆ ಇಲ್ಲ ಅಂತ ಹೇಳ್ತಿದ್ರು. ಈಗ್ಲಾದ್ರೂ ಊರಲ್ಲಿ ಮಳೆ ಬರ್ತಿದೆಯಾ?ʼ ಎಂದು ಕೇಳಿದೆ. ʻಅಬ್ಬಾ! ಎಂಥ ಮಳೆ ಅಂತೀಯ, ಊರು ತೊಳೆದು ಹೋಗಷ್ಟುʼ ಅಂದಳು. ʻಹೌದಾ? ಈಗೀಗ ಮೊದ್ಲಿನ ಥರ ಅಷ್ಟೊಂದು ಮಳೆ ಹೊಯ್ಯಲ್ಲ ಅಂತಾರೆ. ನಾವು ಸಣ್ಣವರಿರುವಾಗ ಯಾವ ಥರ ಮಳೆ ಸುರಿತಿತ್ತು ಅಲ್ವಾ?ʼ ಅಂದೆ. ʻಅದ್ಹೌದು, ಏನೇ ಆದ್ರೂ ಆವಾಗಿನಷ್ಟಲ್ಲ ಬಿಡುʼ ಅಂದಳು.
ನಾವು ಚಿಕ್ಕವರಿರುವಾಗಿನ ಮಳೆಗಾಲ ನೆನಪಾಯಿತು. ಪ್ರತಿವರ್ಷ ʻಅಲ್ಲಿ ಕೆರೆಕೋಡಿ ಒಡೆದು ಹೋಯಿತುʼ, ʻಇಲ್ಲಿ ತೋಟಕ್ಕೆ ನೀರು ನುಗ್ಗಿತುʼ, ʻತೋಟಕ್ಕೆ ಹಾಕಿದ್ದ ಸೊಪ್ಪು ಗೊಬ್ಬರ ಎಲ್ಲ ತೊಳೆದು ಹೋಯ್ತುʼ ಎನ್ನುವ ಮಾತು ಮಳೆಗಾಲದಲ್ಲಿ ಸಾಮಾನ್ಯವಾಗಿತ್ತು. ಪ್ರಾಯಶಃ ೧೯೬೧ನೆಯ ಇಸವಿ ಇರಬೇಕು. ವಾರದಿಂದ ಹೊಯ್ಯುತ್ತಿದ್ದ ಮಳೆಗೆ ಬಿಡುವೇ ಇರಲಿಲ್ಲ. ಕೆರೆ ತುಂಬಿ ತೋಟಕ್ಕೆ ನೀರು ನುಗ್ಗುವ ಹಾಗಿತ್ತು. ಎಲ್ಲರ ಮುಖದಲ್ಲಿಯೂ ಆತಂಕದ ಛಾಯೆ. ಗಳಿಗೆ ಗಳಿಗೆಗೊಮ್ಮೆ ಅಪ್ಪ ಅಥವಾ ಅಣ್ಣಂದಿರು ಕೆರೆಯ ಹತ್ತಿರ ಹೋಗಿ ನೋಡುತ್ತಿದ್ದರು. ಬಾವಿ ತುಂಬಿ ಮೊಗೆಯುವ ಹಂತಕ್ಕೆ ಬರುವುದು ಮಾಮೂಲು. ಶ್ರಾವಣ ತಿಂಗಳಿನಲ್ಲಿ ಬಾವಿಯ ನೀರು ತುಂಬಿ ಉಕ್ಕುತ್ತಿತ್ತು. ಕೆರೆಯೂ ಹಾಗೆ ಆದರೆ? ಎನ್ನುವ ಸ್ಥಿತಿ. ಅಂದಿನ ಮಧ್ಯಾಹ್ನ ಯಾರಿಗೂ ಊಟಮಾಡುವ ಮನಸ್ಸೇ ಇರಲಿಲ್ಲ. ಅಂತೂ ಸಂಜೆಯ ಹೊತ್ತಿಗೆ ಮಳೆ ನಿಂತಿತ್ತು. ಎರಡು ದಿನ ಸಂಪೂರ್ಣ ಬಿಡುವು ಮಳೆಗೆ. ಆದರೆ ಕೆರೆಮೂಲೆಯ ತೋಟದ ಬಳಿ ಒಂದು ಜಲಪಾತ ಸೃಸ್ಟಿಯಾಗಿತ್ತು.
ಮಲೆನಾಡಿನಲ್ಲಿ ಮಳೆಯ ಅವಾಂತರ ಇಲ್ಲದ ವರ್ಷವೇ ಇರಲಿಲ್ಲ. ಈಗಿನಂತೆ ಅದರ ವರದಿ ಸಿಗುತ್ತಿರಲಿಲ್ಲ. ನಮ್ಮ ಊರಿನ ಸುತ್ತ ನಾಲ್ಕಾರು ಕೆರೆಗಳು. ಒಂದು ಕೆರೆ ತುಂಬಿ ಕೋಡಿ ಬಿತ್ತು ಅಂದ್ರೆ ಅದರ ನೀರು ಮುಂದಿನ ಕೆರೆಗೆ. ಹೀಗೆ ಎಲ್ಲ ಕೆರೆಗಳು ಒಂದೆರಡು ದಿನಗಳಲ್ಲಿ ತುಂಬಿ ಉಕ್ಕುತ್ತಿದ್ದವು. ವರದಾನದಿಗೆ ನೆರೆ ಬಂದು ಸಾವಿರಾರು ಎಕರೆ ಗದ್ದೆ ಹಾಳಾಯಿತಂತೆ ಎನ್ನುವುದು ಸಾಮಾನ್ಯ ಸಂಗತಿ. ನಮಗೆಲ್ಲ ಮಳೆ ಹೊಯ್ಯುತ್ತಿದ್ದರೆ ಆಡಲು ಆಗುವುದಿಲ್ಲ ಎನ್ನುವುದಷ್ಟೆ ಮುಖ್ಯವಾಗಿತ್ತು. ತೊಳೆದ ಬಟ್ಟೆ ಒಣಗದೆ ಅಮ್ಮಂದಿರಿಗೆ ಒಲೆ ಬೆಂಕಿಗೆ ಹಿಡಿದು ಬಟ್ಟೆ ಒಣಗಿಸಿ ಕೊಡುವ ಕೆಲಸ. ಆಗ ನಮ್ಮ ಬಳಿ ಇರುತ್ತಿದ್ದುದೇ ಎರಡ್ಮೂರು ಜೊತೆ ಬಟ್ಟೆಗಳು. ಕೆಲವೊಮ್ಮೆ ಶಾಲೆಯಿಂದ ಬರುವಾಗ ಜಾರಿ ಬಿದ್ದೋ ಮಳೆಯಲ್ಲಿ ನೆನೆದೋ ಬಂದರೆ ಅರೆ ಒದ್ದೆ ಬಟ್ಟೆಯೇ ಗತಿಯಾಗಿತ್ತು. ದೂರದ ಶಾಲೆಗೆ ಹೋಗುವ ಮಕ್ಕಳು ಕೆಸರಿನಲ್ಲಿ ಕಾಲಿಟ್ಟು ಹೋಗಲೇಬೇಕಿತ್ತು. ನಮ್ಮೂರ ಶಾಲೆ ಊರಬಾಗಿಲಲ್ಲೇ ಇತ್ತು. ಆದರೂ ಕೆಸರಲ್ಲಿ ಕಾಲಿಡುವುದು ತಪ್ಪುತ್ತಿರಲಿಲ್ಲ. ದನಕರುಗಳು ಓಡಾಡುತ್ತಿದ್ದುದು ಅದೇ ರಸ್ತೆಯಲ್ಲಿ. ಹಾಗಾಗಿ, ರಸ್ತೆಯೆಲ್ಲ ಕೆಸರುಗದ್ದೆಯಂತಾಗುತ್ತಿತ್ತು. ಬರಿಗಾಲಿನಲ್ಲಿ ನಡೆದು ಹೋಗಬೇಕಿತ್ತು. ಆ ಕಾಲಕ್ಕೆ ಮಕ್ಕಳಿಗೆ ಚಪ್ಪಲಿಯ ಬಳಕೆ ಇರಲೂ ಇಲ್ಲ, ನಮಗೆ ಅದರ ಬಗ್ಗೆ ಗಮನವೂ ಇರುತ್ತಿರಲಿಲ್ಲ.
ಮಳೆ ಹೊಯ್ಯುತ್ತಿದ್ದರೆ ನಾವೆಲ್ಲ ಒಂದೆಡೆ ಕುಳಿತು ʻಮಳೆರಾಯ ಬಂದ ಮಲ್ಲೆ ಹೂವು ತಂದ ಕಪ್ಪೆರಾಯ ಬಂದ ವಟವಟ ಅಂದʼ ಅಂತಲೋ ಅಥವಾ ʻಮಳೆಬಂತು ಮಾರಾಯ ಕೊಡೆ ಹಿಡಿಯೋ ಸುಬ್ರಾಯʼ ಅಂತಲೊ ಒಂದೇ ರಾಗದಲ್ಲಿ ಕಿರಚುತ್ತಿದ್ದೆವು. ಕೆಲವೊಮ್ಮೆ ಅದು ಮಾದಪ್ಪ ತಿಮ್ಮಪ್ಪನೂ ಆಗುತ್ತಿತ್ತು.
ಒಂದೆರಡು ಮಳೆ ಬೀಳುತ್ತಿದ್ದ ಹಾಗೆ ಬಿತ್ತನೆ ಕೆಲಸ ಶುರುವಾಗುತ್ತಿತ್ತು.
“ಮಳೆ ಬಂತು ಬೆಳೆ ತಂತು ಹೊಲಕ್ಕೆ ಹೋಗು ಮಾದೇವ
ಬೀಜಬಿತ್ತೆ ಮಾದೇವಿ ಸಾಲು ಹೊಡೆಯೊ ಮಾದೇವ”
ಅಂತ ನಮ್ಮ ಸಂಗೀತ ಶುರುವಾಗುತ್ತಿತ್ತು.
ಮಳೆಗಾಲದಲ್ಲಿ ಹೊರಗೆ ಹೋಗಿ ಆಡಲು ಆಗದಿದ್ದರೇನಂತೆ ಮನೆಯಲ್ಲಿ ಆಡುತ್ತಿದ್ದೆವು. ಹೆಣ್ಣು, ಗಂಡು ಅನ್ನೋ ಭೇದವಿಲ್ಲದೆ ಕಲ್ಲಾಟ, ಕವಡೆ, ಪಗಡೆ, ಚನ್ನೆಮಣೆ, ಹುಲಿದನ, ಟೋಪಿಯಾಟ, ಸರಿಯೋಬೆಸವೋ ಅಂತ ಕುಳಿತು ಆಡುವ ಆಟಗಳು ನೆನಪಾಗುತ್ತಿದ್ದವು. ಮನೆ ದೊಡ್ಡದಾಗಿದ್ದರೆ ಅಡಗುವ ಆಟವೂ ಇರುತ್ತಿತ್ತು. ತೀರ ಪುಟ್ಟಮಕ್ಕಳಿದ್ದರೆ ʻಹತ್ತಂಬಾಲೆ ಹಲಗೆ ತಟ್ಟಿʼ ಅಂತ ಪ್ರಾರಂಭಿಸಿ ʻಕುಕ್ಕರ ಬಸವಿ ಕೂರ್‌ಬಸವಿ ಬಾಳೆಕಂಬ ಬೈಟ್‌ಗುಬ್ಬಿʼ ಅಂತ ಮಗುವಿನ ತಲೆತಟ್ಟಿ ನಗಿಸುವ ನಾವು ಅವರೊಂದಿಗೆ ನಕ್ಕು ಖುಶಿಪಡುವುದೂ ಇತ್ತು. ಮಕ್ಕಳ ಜಗತ್ತೇ ಹಾಗಿರುತ್ತಿತ್ತು, ಸಣ್ಣಪುಟ್ಟ ಜಗಳವೂ ಸೇರಿದಂತೆ ಹಲವು ಬಗೆಯ ಆಟಗಳು ಅಲ್ಲಿ ಜಾಗ ಪಡೆಯುತ್ತಿದ್ದವು. ಹೊರಗೆ ಹೋಗಲು ಆಗದ ಕಾರಣಕ್ಕೆ ಏನನ್ನಾದರೂ ತಿನ್ನುವ ಹಂಬಲ. ಸಂಜೆಹೊತ್ತಿನಲ್ಲಿ ಹಲಸಿನಬೇಳೆ, ಗೇರುಬೀಜ, ಹಪ್ಪಳ, ಇವ್ಯಾವುವೂ ಇಲ್ಲದಿದ್ದರೆ ಬಾಳೆಕಾಯಿ ಯಾವುದನ್ನಾದರು ಸುಟ್ಟುಕೊಡುವಂತೆ ಅಮ್ಮಂದಿರ ಬಳಿ ರಗಳೆ ಮಾಡುತ್ತಿದ್ದೆವು. ಅವರು ಅದನ್ನು ಸುಡುವಾಗ ಒಲೆಯ ಹತ್ತಿರ ಬೆಚ್ಚಗೆ ಕುಳಿತುಕೊಳ್ಳುವ ಸೌಖ್ಯವೂ ದೊರೆಯುತ್ತಿತ್ತು.
ಆಷಾಢ ಎಂದರೆ ಧೋ ಎಂದು ಸುರಿಯುತ್ತಿದ್ದ ಮಳೆ. ತರಕಾರಿ ಗಿಡಗಳು ಕೊಳೆಯುತ್ತಿದ್ದುದೇ ಜಾಸ್ತಿ. ಹಾಗಾಗಿ ಉಪ್ಪಿನಲ್ಲಿ ಹಾಕಿಟ್ಟ ಕಳಲೆ ಅಥವಾ ಹಲಸಿನ ಸೊಳೆಗಳೇ ಅಡುಗೆಗೆ ಸಹಾಯಕ. ನಮಗದು ರುಚಿಸುತ್ತಿರಲಿಲ್ಲ. ಕೆಲವೊಮ್ಮೆ ಕೊಡಸ ಎನ್ನುವ ಒಂದು ಜಾತಿಯ ಗಿಡದ ಕಾಯಿಗಳ ಪಲ್ಯ ಮಾಡುತ್ತಿದ್ದರು. ಅದು ಹಾಗಲಕಾಯಿಯಂತೆ ಕಟುವಾದ ಕಹಿ ಇರುವಂಥದು. ಉಪಾಯವಿಲ್ಲದೆ ಒಮ್ಮೊಮ್ಮೆ ನಾವು ಆ ಮೇಲಾರವನ್ನು ಅನ್ನಕ್ಕೆ ಕಲಸಿ ತಿನ್ನಬೇಕಿತ್ತು.
ಆಗ ಪ್ರಾಥಮಿಕ ಶಾಲೆಯಲ್ಲಿ ನಾವು ಪಾಟಿಯಲ್ಲಿ ಬರೆಯಬೇಕಿತ್ತು. ಐದನೆಯ ತರಗತಿಯಿಂದ ಪೆನ್ಸಿಲ್ ಬಳಕೆ. ಪಾಟಿಯಲ್ಲಿ ಬರೆದದ್ದನ್ನು ಮತ್ತೆ ಮತ್ತೆ ಅಳಿಸಿ ಬರೆಯಬೇಕಿತ್ತು. ಅಳಿಸುವುದು ನಮಗೆ ಮಳೆಗಾಲದಲ್ಲಿ ಬಹಳ ಸುಲಭವಾಗಿತ್ತು. ನಮ್ಮ ಪಾಟಿಚೀಲದಲ್ಲಿ ಗೌರಿದಂಟು ಇರುತ್ತಿತ್ತು. ಅದು ಕರ್ಣಕುಂಡಲದಂತಹ ಒಂದು ಹೂವಿನ ಗಿಡ. ಅದರ ದಂಟನ್ನು ಮುರಿದರೆ ನೀರು ಒಸರುತ್ತಿತ್ತು. ನಾವು ಅದನ್ನು ಪಾಟಿಗೆ ಹಾಕಿ ಉಜ್ಜಿ ಬರೆದಿದ್ದನ್ನು ಅಳಿಸುತ್ತಿದ್ದೆವು. ಒಬ್ಬರು ತರುವುದನ್ನು ಮರೆತರೆ ಇನ್ನೊಬ್ಬರ ಹತ್ತಿರ ʻನಂಗೆ ಮರೆತು ಹೋಯ್ತು, ಕೊಡೆ/ಕೊಡೋʼ ಅಂತ ಕೇಳಿ ಪಡೆಯುತ್ತಿದ್ದೆವು. ರಜೆಯ ದಿನಗಳಲ್ಲಿ ಮಾತ್ರ ಮನೆಯಿಂದ ಬರೆದುಕೊಂಡು ಬರಲು ಹೇಳುತ್ತಿದ್ದರು. ಜೋರಾಗಿ ಮಳೆ ಹೊಯ್ಯುತ್ತಿದ್ದರೆ ಆ ಸದ್ದಿನಲ್ಲಿ ನಮ್ಮ ಮೇಷ್ಟ್ರು ಮಾಡುತ್ತಿದ್ದ ಪಾಠ ನಮಗೆ ಸರಿಯಾಗಿ ಕೇಳಿಸುತ್ತಿರಲಿಲ್ಲ. ನಾವು ಇದ್ದುದೇ ಏಳೆಂಟು ಮಕ್ಕಳು. ಏಕೋಪಾಧ್ಯಾಯ ಶಾಲೆ. ನಾವು ಮೇಜಿನ ಸುತ್ತ ನಿಂತು ಪಾಠವನ್ನು ಕೇಳಬೇಕಿತ್ತು.
ನಮಗೆಲ್ಲ ಮಳೆ ಹೊಯ್ಯುತ್ತಿದ್ದರೆ ಆಡಲು ಆಗುವುದಿಲ್ಲ ಎನ್ನುವುದಷ್ಟೆ ಮುಖ್ಯವಾಗಿತ್ತು. ತೊಳೆದ ಬಟ್ಟೆ ಒಣಗದೆ ಅಮ್ಮಂದಿರಿಗೆ ಒಲೆ ಬೆಂಕಿಗೆ ಹಿಡಿದು ಬಟ್ಟೆ ಒಣಗಿಸಿ ಕೊಡುವ ಕೆಲಸ. ಆಗ ನಮ್ಮ ಬಳಿ ಇರುತ್ತಿದ್ದುದೇ ಎರಡ್ಮೂರು ಜೊತೆ ಬಟ್ಟೆಗಳು. ಕೆಲವೊಮ್ಮೆ ಶಾಲೆಯಿಂದ ಬರುವಾಗ ಜಾರಿ ಬಿದ್ದೋ ಮಳೆಯಲ್ಲಿ ನೆನೆದೋ ಬಂದರೆ ಅರೆ ಒದ್ದೆ ಬಟ್ಟೆಯೇ ಗತಿಯಾಗಿತ್ತು. ದೂರದ ಶಾಲೆಗೆ ಹೋಗುವ ಮಕ್ಕಳು ಕೆಸರಿನಲ್ಲಿ ಕಾಲಿಟ್ಟು ಹೋಗಲೇಬೇಕಿತ್ತು.
ಕೆಲವೊಮ್ಮೆ ದಿನಗಟ್ಟಲೆ ಹಿಡಿದ ಮಳೆ ಬಿಡದೆ ಹೊಯ್ಯುವುದಿತ್ತು. ಮನೆಯಿಂದ ಹೊರಗೆ ಹೋಗದೆ ಬೇಜಾರಾಗಿ ಪಕ್ಕದಲ್ಲಿದ್ದ ಚಿಕ್ಕಪ್ಪನ ಮನೆಗೆ ಹೋಗುವುದಿತ್ತು. ಅವರ ಮಗಳಿಗೆ ನನ್ನನ್ನು ಅಳಿಸುವುದೆಂದರೆ ಬಹಳ ಇಷ್ಟ. ʻಸಂಜೆ ಬಂದ ನೆಂಟ್ರು ಸಂಜೆ ಹಿಡಿದ ಮಳೆ ಹೋಗದಿಲ್ಲ. ಈಗ ಮನೆಗೆ ಹ್ಯಾಂಗೆ ಹೋಗ್ತೀಯೆ? ಇವತ್ತು ನಮ್ಮನೆಲ್ಲೇ ಇರ್ಬೇಕಾಗ್ತದೆ. ಅವರ್ಮನೇಲಿ ಯಾಕೆ ಉಳ್ಕಂಡೆ ಅಂತ ನಿಮ್ಮನೇಲಿ ಬೈತಾರೆʼ ಎಂದು ಹೆದರಿಸುತ್ತಿದ್ದಳು. ನನಗೆ ಅಳು ಬರುತ್ತಿತ್ತು. ತುಸು ಮಳೆಯ ಆರ್ಭಟ ಕಡಿಮೆಯಾದರೆ ಸಾಕು ಮನೆಗೆ ಓಡಿಬಿಡುತ್ತಿದ್ದೆ.
ʻಕಪ್ಪೆರಾಯ ಬಂದ ವಟವಟ ಅಂದʼ ಎನ್ನುವುದು ನಮ್ಮೂರಿಗೆ ಸರಿಯಾಗಿ ಅನ್ವಯಿಸುತ್ತಿತ್ತು. ಮಳೆಗಾಲದ ಆರಂಭದಲ್ಲಿ ಸಂಜೆಹೊತ್ತಿಗೆ ಊರಬೀದಿಯ ತುಂಬ ಲಕ್ಷೋಪಲಕ್ಷ ಕಪ್ಪೆಗಳ ಮೆರವಣಿಗೆ. ಮನೆಯ ಕಟ್ಟೆಮೇಲೆ ನಿಂತರೆ ಕೆರೆ ಕಾಣಿಸುತ್ತಿತ್ತು. ಅಲ್ಲಿಂದ ಹೊರಟ ಕಪ್ಪೆಗಳು ಮನೆಯಂಗಳ, ತೋಟ, ಗದ್ದೆಗಳ ತುಂಬ ಕುಪ್ಪಳಿಸುತ್ತಿದ್ದವು. ಗಾತ್ರದಲ್ಲಿ ಚಿಕ್ಕದಾಗಿದ್ದು ಹಣೆಯಲ್ಲಿ ಹಳದಿಯ ನಾಮ. ನಾಮದ ಕಪ್ಪೆಯೆಂದೇ ಕರೆಯುತ್ತಿದ್ದೆವು. ರಾತ್ರಿಯೆಲ್ಲ ಅವುಗಳ ಅರಚುವಿಕೆ. ಸುಮಾರಾಗಿ ಒಂದು ವಾರದ ಕಾಲ ಅವುಗಳ ಆರ್ಭಟ, ಗದ್ದಲ. ಆನಂತರ ಅವೆಲ್ಲ ಎಲ್ಲಿಗೆ ಹೋಗುತ್ತಿದ್ದವೋ? ಪ್ರತಿವರ್ಷವೂ ಇದರ ಪುನರಾವರ್ತನೆ. ಬೇಸಿಗೆ ಕಾಲದಲ್ಲಿ ಕೆರೆಯಲ್ಲಿ ಕಾಣಿಸುವ ಗೊಜಮಂಡೆಗಳೇ ರೂಪಾಂತರವಾಗಿ ಕಪ್ಪೆಗಳಾಗುತ್ತವೆ ಎನ್ನುತ್ತಿದ್ದರು. ಆ ಪ್ರಮಾಣದಲ್ಲಿ ಬೀದಿಯಲ್ಲಿ ಕಾಣುವ ಕಪ್ಪೆಗಳು ಮನೆಯ ಒಳಭಾಗಕ್ಕೆ ಬರುವುದು ಅಪರೂಪವಾಗಿತ್ತು. ಒಮ್ಮೆ ಬಂದರೆ ಅವನ್ನು ಗುಡಿಸಿ ಹೊರಹಾಕಲು ನಮ್ಮ ಕೈಗೆ ಪೊರಕೆ ಬರುತ್ತಿತ್ತು.
ಸಾಧಾರಣವಾಗಿ ಆರಿದ್ರೆ ಮಳೆಯಲ್ಲಿ ನಮ್ಮೂರ ಕೆರೆ ತುಂಬುತ್ತಿತ್ತು. ಅಪರೂಪಕ್ಕೊಮ್ಮೆ ʻಈ ವರ್ಷ ಆರಿದ್ರೆಗೆ ಕೆರೆಕೋಡಿ ಬಿದ್ದಿಲ್ಲ, ಪುನರ್ವಸು ಮಳೆಗಾದರೂ ಬೀಳುತ್ತದೆಯೋ ನೋಡಬೇಕುʼ ಎನ್ನುತ್ತಿದ್ದರು. ಕೆರೆಕೋಡಿ ಊರಿನ ನಾಲ್ಕಾರು ಮನೆಗಳ ಕೇರಿಯನ್ನು ಹಾದು ಹೋಗುವುದರಿಂದ ರಾತ್ರಿಯಾದರೆ ಕೋಡಿಯ ಭೋರ್ಗರೆತ. ಇದು ಪ್ರತಿವರ್ಷದ ಕತೆ. ಮನೆಯವರಿಗೆ ಕೆಲದಿನಗಳಲ್ಲಿ ರೂಢಿಯಾಗುತ್ತಿತ್ತು. ಮನೆಗೆ ಯಾರಾದ್ರೂ ಬಂದರೆ ಮಾತ್ರ ಅವರ ನಿದ್ದೆಗೆ ಭಂಗವೇ. ತೋಟಕ್ಕೆ ಹೋಗುವವರು ಕೆರೆಕೋಡಿಯನ್ನು ದಾಟಿಯೇ ಹೋಗಬೇಕಿತ್ತು. ಕೋಡಿಯನ್ನು ದಾಟುವ ಸಂಕದ ಮೇಲೆ ಹೋಗಲು ಮಕ್ಕಳಿಗೆ ಅನುಮತಿ ಇರಲಿಲ್ಲ. ನಮಗೂ ಆ ಕೆಂಪುನೀರನ್ನು ನೋಡುತ್ತ ಅದನ್ನು ದಾಟುವ ಗುಂಡಿಗೆಯೂ ಇರಲಿಲ್ಲ. ರಸ್ತೆಯ ಪಕ್ಕವೇ ಇದ್ದುದರಿಂದ ಮನೆಯಂಗಳದ ತುದಿಯಲ್ಲೋ ರಸ್ತೆಯಲ್ಲೋ ನಿಂತು ಕೋಡಿ ಎಷ್ಟು ತುಂಬಿ ಹರಿಯುತ್ತಿದೆ ಎಂದು ನೋಡುತ್ತಿದ್ದೆವು.
ಮಳೆಗಾಲದಲ್ಲಿ ಎಷ್ಟೊಂದು ಹುಳುಹುಪ್ಪಟೆಗಳು. ಕೆಲವಕ್ಕೆ ಅಲ್ಪ ಆಯುಷ್ಯವಾದರೆ ಕೆಲವು ಮಳೆಗಾಲ ಪೂರ್ತಿ ತೊಂದರೆ ಕೊಡುತ್ತಿದ್ದವು. ಮಳೆಗಾಲ ಮುಗಿಯುವವರೆಗೂ ಚ್ವಾರಟೆಯ ದಿಬ್ಬಣ. (ಸಹಸ್ರಪದಿ) ಗಂಡುಮಕ್ಕಳು ಅದನ್ನು ಕೈಯಲ್ಲಿ ಹಿಡಿದು (ಮುಟ್ಟಿದರೆ ಚಕ್ಕುಲಿಯಂತೆ ತಾನಾಗಿ ಸುತ್ತಿಕೊಳ್ಳುತ್ತದೆ) ಹುಡುಗಿಯರನ್ನು ಹೆದರಿಸುವುದು ಮಾಮೂಲಾಗಿತ್ತು. ʻಬಿಸಿಲು ಮಳೆ ಮಂಗನ ಮದ್ವೆ ಚೋರಟೆ ಚಕ್ಲಿ ನಂಜುಳ್ಳೆ (ಎರೆಹುಳು) ಪಾಯ್ಸ ಊಟಕ್ಕೆ ಹೋಗ್ತೀಯ ದಕ್ಷಿಣೆಗೆ ಹೋಗ್ತಿಯʼ ಅಂತ ಹಾಡಿ ಮನೆಯ ಹಿರಿಯರಿಂದ ʻಬಾಯ್ಮುಚ್ಚಿ ಎಂಥ ಅಸಹ್ಯದ ಹಾಡುʼ ಅಂತ ಮಂಗಳಾರತಿ ಎತ್ತಿಸಿಕೊಳ್ಳುತ್ತಿದ್ದರು. ಕಂಬಳಿಹುಳು, ಬಸವನಹುಳುಗಳ ಕಾಟ ವಿಪರೀತ. ಬಸವನಹುಳ ನೋಡಲಷ್ಟೆ ಅಸಹ್ಯ. ಆದರೆ ಕಂಬಳಿಹುಳ ನಮ್ಮ ಮೈಗೋ ಬಟ್ಟೆಗೋ ತಾಗಿದರೆ ಮೈಯೆಲ್ಲ ಕೆರೆತ. ʻಇಲ್ಲಿ ಕೆರೆಯುತ್ತದೆ, ಅಲ್ಲಿ ಕೆರೆಯುತ್ತದೆʼ ಎಂದು ಅಮ್ಮಂದಿರಿಗೆ ಸಾಕೋಸಾಕು ಅನ್ನಿಸುತ್ತಿದ್ದೆವು. ಸದ್ಯ, ನಮ್ಮೂರಿನಲ್ಲಿ ಉಂಬಳದ ಕಾಟವಿರಲಿಲ್ಲ. ಮಲೆನಾಡಿನ ಕೆಲವು ಊರುಗಳಲ್ಲಿ ಅಂಗಳ, ತೋಟ ಗದ್ದೆಗಳಿಗೆ ಹೋದರೆ ಕಾಲಿಗೆ ಉಂಬಳ ಹತ್ತಿ ರಕ್ತ ಸುರಿಯುತ್ತದೆ. ಇದು ಅವರಿಗೆ ರೂಢಿಯಾಗಿರುತ್ತದೆ. ʻಯಾರದೋ ಕಾಲಿಗೆ ಉಂಬಳ ಹತ್ತಿದೆ, ನೋಡಿʼ ಎನ್ನುತ್ತಿದ್ದರು. ಎಷ್ಟೋಸರಿ ಅದು ಅವರ ಕಾಲಿಗೇ ಅಂಟಿರುತ್ತಿತ್ತು. ಹೊಗೆಸೊಪ್ಪು ಅಥವಾ ಸುಣ್ಣ ಹಾಕಿದರೆ ಅದು ಕೆಳಗೆ ಉದುರುತ್ತದೆ. ಆಗ ಬೆಂಕಿಗೆ ಆಹುತಿ. ಒಂದೆರಡು ದಿನ ಅದು ಕಚ್ಚಿದ ಭಾಗದಲ್ಲಿ ಸಣ್ಣ ಕೆರೆತ. ಮಲೆನಾಡಿನ ತುಸು ಬಯಲಿರುವ ಊರಿನವರು ಮಗಳನ್ನು ʻಉಂಬಳಸೀಮೆʼಗೆ ಕೊಡಲು ಒಪ್ಪುತ್ತಿರಲಿಲ್ಲ. ಉಂಬಳ ಎಂದರೆ ಕುವೆಂಪು ಅವರ ʻಮಲೆಗಳಲ್ಲಿ ಮದುಮಗಳುʼ ಕಾದಂಬರಿಯ ನಾಯಿಗುತ್ತಿಯ ನೆನಪಾಗುತ್ತದೆ. ಕಾಡಿನಲ್ಲಿ ಬಹುದೂರ ನಡೆದು ಬಂದ ಆತ ತನ್ನ ಮೈಯಿಯ ಸಂದುಮೂಲೆಗಳಿಂದ ಇಂಬಳವನ್ನು ತೆಗೆದು ತೆಗೆದು ಒಲೆಗೆ ಹಾಕುತ್ತಿದ್ದ ಎನ್ನುವ ವಿವರಣೆ ಓದಿದರೆ ಅದನ್ನು ಕಂಡಂತೆ ಆಗುವುದಿಲ್ಲ. ಅನುಭವವೇ ಬೇರೆ. ಯಾರೋ ನೆಂಟರ ಮನೆಗೆ ಹೋದಾಗ ಮೊದಲ ಬಾರಿ ನನ್ನ ಕಾಲಿಗೆ ಉಂಬಳ ಕಚ್ಚಿತ್ತು. ಒಂಥರಾ ಅಸಹ್ಯ, ಹೆದರಿಕೆ, ಆತಂಕ ಎಲ್ಲವನ್ನು ಅನುಭವಿಸಿದ್ದೆ. ಮಳೆ ಹೊಯ್ತಿದ್ದರೆ ಅಂಗಳಕ್ಕೆ ಹೋಗಲು ಹೆದರಿಕೆ. ನಮ್ಮೂರಿನಲ್ಲಿ ಮಳೆಗಾಲದಲ್ಲಿ ಹುಲ್ಲುಸಾರಂಗ, ಚೇಳು ಓಡಾಡುತ್ತಿದ್ದವು. ಅವುಗಳನ್ನು ನೋಡಿ ಹೆದರುವುದಿತ್ತು. ಆದರೂ ಉಂಬಳ ಕಂಡಷ್ಟು ಭಯವಾಗುತ್ತಿರಲಿಲ್ಲ.
ಮಳೆಗಾಲ ಅಂದಮೇಲೆ ಕೃಷಿ ಚಟುವಟಿಕೆಗಳು ಜಾಸ್ತಿಯೇ. ಗದ್ದೆ, ತೋಟಗಳಲ್ಲಿ ಕೆಲಸ ಮಾಡುವವರು ಮಳೆಯಿಂದ ರಕ್ಷಣೆಗೆ ಕಂಬಳಿಕೊಪ್ಪೆ ಹಾಕಿಕೊಳ್ಳಲೇಬೇಕಿತ್ತು. ಮಳೆಯಲ್ಲಿ ತೊಯ್ದು ತೊಪ್ಪೆಯಾದ ಕಂಬಳಿ ಒಣಗಲು ಎರಡ್ಮೂರು ದಿನಗಳಾಗುತ್ತಿತ್ತು. ಅದಕ್ಕೆ ಕಂಡುಕೊಂಡ ಉಪಾಯ ಹೊಡಚಲು. ಅಂದರೆ ಅಟ್ಟಣಿಗೆ ಮಾಡಿ ಕೆಳಗೆ ಸಣ್ಣದಾಗಿ ಉರಿಯನ್ನು ಹಾಕಿ ಅದರ ಮೇಲೆ ಕಂಬಳಿಯನ್ನು ಒಣಹಾಕುತ್ತಿದ್ದರು. ಹೊಡಚಲ ಬೆಂಕಿಯನ್ನು ಕಾಯಿಸಿಕೊಳ್ಳುವ ಸೌಖ್ಯವೇ ಬೇರೆ. ʻಅಮ್ಮ ಚಳಿʼ ಅಂದರೆ ʻಹೋಗು ಹೊಡಚಲ ಹತ್ರ ಕೂತು ಬೆಂಕಿ ಕಾಯಿಸಿಗ್ಯಂಡು ಬಾʼ ಅಂತ ನಮ್ಮನ್ನು ಅಟ್ಟುತ್ತಿದ್ದರು. ಅಲ್ಲಿ ದೊಡ್ಡವರೂ ಇದ್ದರೆ ಹಾಡು, ಕತೆ, ಕೆಲವೊಮ್ಮೆ ಬಂಡಿಪದ (ಅಂತ್ಯಾಕ್ಷರಿ) ಎಲ್ಲವೂ ನಡೆಯುತ್ತಿತ್ತು.
ಚೌತಿಹಬ್ಬ ಮುಗಿಯಿತು ಎಂದರೆ ಮಳೆಗೆ ತುಸು ಬಿಡುಗಟ್ಟು. ಎಲ್ಲಕಡೆ ಬಣ್ಣಬಣ್ಣದ ಚಿಟ್ಟೆಗಳ ಮೇಳ. ನಮ್ಮೊಳಗೆ ಅವುಗಳನ್ನು ಹಿಡಿಯುವ ಸ್ಪರ್ಧೆ. ಇನ್ನೇನು ಕೈಗೆ ಸಿಕ್ಕೇಬಿಟ್ಟಿತು ಎನ್ನುವಷ್ಟರಲ್ಲಿ ಮಾಯ. ಆಗ ಮರಳಿ ಯತ್ನವ ಮಾಡು. ಅವು ಅಷ್ಟು ಸುಲಭವಾಗಿ ನಮ್ಮ ಕೈಗೆ ಸಿಗುತ್ತಿರಲಿಲ್ಲ. ಇನ್ನೊಂದು ಬಗೆಯ ಚಿಟ್ಟೆಗಳು ಹಾರಾಡುತ್ತಿದ್ದವು. ಅವು ನಮಗೆ ಆಕರ್ಷಕವಾಗಿ ಕಾಣಿಸುತ್ತಿರಲಿಲ್ಲ. ನಾವು ಅವನ್ನು ಕರೆಯುತ್ತಿದ್ದದು ವಿಮಾನ ಎಂದು. ಪಾಪ! ಅವು ಸುಲಭವಾಗಿ ಹಿಡಿಯಲು ಸಿಕ್ಕುತ್ತಿದ್ದವು. ಆದರೆ ನಮಗೆ ಅವನ್ನು ಹಿಡಿಯುವುದರಲ್ಲಿ ಆಸಕ್ತಿ ಇರುತ್ತಿರಲಿಲ್ಲ. ಬದುಕು ಅಂದರೆ ಹೀಗೆ ತಾನೆ?
ಡಾ. ಚಂದ್ರಮತಿ ಸೋಂದಾ ಅವರಿಗೆ ಸಾಹಿತ್ಯದಲ್ಲಿ ಆಸಕ್ತಿ. ‘ಮೈಸೂರು ಮಿತ್ರ’ದಲ್ಲಿ ಬರೆದ ಇವರ ಅಂಕಣಗಳು ಆರು ಸಂಕಲನಗಳಲ್ಲಿ ಪ್ರಕಟವಾಗಿವೆ. ಮಹಿಳಾಪರ ಚಿಂತನೆ ಅವರ ಆದ್ಯತೆ.