ಹಾಗೇ ನಿಂತು ಹೋಗಬಹುದು

ಕವಿತೆ ಬರೆಯುವ
ದಿನಚರಿಯ ಪುಸ್ತಕ ಕಾಣುತ್ತಿಲ್ಲ
ಹಳೆಯ ಡೈರಿ ಅದು
ಅವಳು ಕೊಟ್ಟಿದ್ದಳು
ಬರೆಯಿರಿ ಇದರ ತುಂಬ
ಎಂದು.

ಈ ಮಳೆಗಾಲ ಮಜಾ ಇದೆ
ಮೋಡ ಕವಿದು ಇನ್ನೇನು
ದಿನವಿಡಿ ಭರಭರ ಹೊಯ್ಯುತ್ತದೆ
ಎಂದುಕೊಂಡರೆ
ಛಕ್ಕನೆ ಮಾಯವಾಗಿ
ಬಿಸಿಲು
ಗಿಡಮರಗಳು ಉಸಿರಾಡತೊಡಗಿದಾಗ
ಮತ್ತೆ ಮೋಡ.

ನನ್ನ ಕವಿತೆಗೂ ಅದಕ್ಕೂ
ಯಾವ ಸಂಬಂಧವಿಲ್ಲ, ಬಿಡಿ!

ವಯಸ್ಸಾದವರಂತೆ ಆಡುತ್ತಿದ್ದೀರಿ
ಎಂದು ನನ್ನ ಆತ್ಮೀಯ ವಿರೋಧಿ ಹೇಳುತ್ತಿದ್ದಾನೆ
ಚಿರಶಾಂತಿ ಕೋರುತ್ತೇನೆ
ಅವನ ಆತ್ಮಕ್ಕೆ.

ಇಂದು ನಾನು ಹುಟ್ಟಿದ ದಿವಸ
ಅಂದು ಜೋರಾಗಿ ಮಳೆ ಹೊಯ್ದು
ಅಂಗಳದವರೆಗೆ ನೆಗಸು ಬಂದಿತ್ತಂತೆ
ದೋಣಿಯ ಮೇಲೆ ಬಂದಿಳಿದನಂತೆ
ಅಪ್ಪಯ್ಯ ಭಟ್ಟರ ಜೊತೆಗೆ.

ಈಗ ಜಿಮಿರು ಮಳೆ
ಹಾಗೇ ನಿಂತು ಹೋಗಬಹುದು