ನೂತನ ಅವರ ಸುಂದರ ರೋಮಾಂಚನದ ಅನುಭವಗಳ ನಡುವೆಯೇ ಚಾರ್ ಧಾಮ್ ಪ್ರವಾಸದ ಗಿರಿಶಿಖರ ಆಳ ಕಣಿವೆಗಳ ಪ್ರಪಾತದ ರೌದ್ರತೆಯನ್ನೂ ಕಾಣಿಸುತ್ತಾರೆ. ಅವರ ಕನಸುಗಳೊಂದಿಗೆ ಮುಂದೆ ಸಂಭವಿಸಬಹುದಾದ ಘೋರ ಅನುಭವಗಳು ಬೆಸೆದುಕೊಳ್ಳುತ್ತವೆ. ಲಕ್ಷಾಂತರ ಪ್ರವಾಸಿಗರ ಕಾರಣದಿಂದ ಸ್ಥಳದ ನೈರ್ಮಲ್ಯ ಕಾಪಾಡುವ ಜರೂರತ್ತನ್ನು ಮನಗಾಣಿಸುತ್ತಾರೆ. ಅಲ್ಲಿನವರ ಬದುಕು ಅತ್ಯಂತ ದುರ್ಭರವಾದರೂ ಬಹು ಸರಳ. ಆದರೆ ಪ್ರವಾಸಿಗರ ದಟ್ಟಣೆಯಿಂದಾಗಿ ಉಂಟಾಗುವ ಮಾಲಿನ್ಯತೆ ಸ್ಥಳೀಯ ಪರಿಸರದ ಹಾನಿಗೆ ಮಾರಕವಾಗಬಹುದು.
ನೂತನ ದೋಶೆಟ್ಟಿ ಪ್ರವಾಸ ಕಥನ “ಸ್ವರ್ಗದೊಂದಿಗೆ ಅನುಸಂಧಾನ”ದ ಕುರಿತು ಕೆ.ಎನ್.‌ ಲಾವಣ್ಯ ಪ್ರಭಾ ಬರಹ

“8 – 10 ಅಡಿ ಅಗಲದ ಕಾಲು ಹಾದಿಯಲ್ಲಿ ಸಹಸ್ರಾರು ಕುದುರೆಗಳು, ಕಾಲ್ನಡಿಗೆಯವರು, ಡೋಲಿಗಳು, ಬುಟ್ಟಿಗಳು, ಸಾಲುಗಟ್ಟಿರುತ್ತವೆ. ಬೆಟ್ಟದ ಮೇಲಿಂದ ಜಿನುಗಿಸುವ ನೀರಸ್ರೋತಗಳು, ಝರಿ, ಜಲಪಾತ, ಸಸ್ಯ ಸಂಪತ್ತು, ಪಕ್ಕದ ಕಣಿವೆಯಲ್ಲಿ ಹರಿಯುವ ಮಂದಾಕಿನಿ ನದಿ…. ನಡೆದು ಹೋಗುವವರು ಅಲ್ಲಿರುವ ಚೆಲುವನ್ನು ಆ ಬೆಟ್ಟದ ಒಲವನ್ನು ಅದರ ಪಿಸುಮಾತನ್ನು, ಕಿವಿಗೊಟ್ಟು ಮನದಣಿಯೆ ಆಲಿಸಬಹುದು ಆನಂದಿಸಬಹುದು….

ಗಾಳಿಯಲ್ಲಿ ಅದೆಂಥ ಸ್ವಚ್ಛತೆ, ನಿರ್ಮಲತೆ ಮೈಮನಸ್ಸನ್ನು ಹಗುರಾಗಿಸಿ ತನ್ನಂತೆ ತೇಲಿಸುವ ತನ್ಮಯತೆ ದೇಹ ಮನಸ್ಸುಗಳು ತಾದಾತ್ಮ್ಯ ಸಾಧಿಸಲು ನೆರವಾಗುವ ವಾತಾವರಣ ಸ್ವರ್ಗದಂತೆ. ಸತ್ಯಕ್ಕೇನಾದರೂ ರೂಪ ಕೊಡುವಂತಿದ್ದರೆ ಅದು ಹೀಗೇ ಇದ್ದೀತೇನೋ… ಅಷ್ಟು ನಿರ್ಮಲ ಸುಂದರ ರಮಣೀಯ…” (ಪು: 51)

(ನೂತನ ದೋಶೆಟ್ಟಿ)

“ಏನೂ ಇಲ್ಲವಾಗುವ ನಿರ್ವಾತ ಸ್ಥಿತಿಯ ಸಾಧನೆಗಾಗಿಯೇ ಅನೇಕ ಸಾಧುಸಂತರು ಸಾಧನೆಯ ಹಾದಿಯ ಪಯಣಿಗರು ಇಲ್ಲಿಗೆ ಬರುತ್ತಾರೆ…. ಸ್ವಾಮಿ ಯೋಗಾನಂದರ “ಅನ್ ಆಟೋಬಯೋಗ್ರಫಿ ಆಫ್ ಎ ಯೋಗಿ” ಪುಸ್ತಕ ಇಂತಹ ಅನೂಹ್ಯ ಅನೇಕ ಅನುಭವ ತೆರೆದಿಡುತ್ತದೆ. ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಂದು ತನ್ನವರಿಂದಲೇ ಮೋಸ ಹೋದ ದುಃಖವನ್ನು ಸಹಿಸಲಾಗದೇ, ತಾನೇ ಕಟ್ಟಿದ ಕಂಪನಿಯಿಂದ ಹೊರಬಂದು ಆಪಲ್ ಕಂಪನಿ ಸ್ಥಾಪಿಸಿದ ಸ್ಟೀವ್ ಜಾಬ್ ತನಗಾದ ಅವಮಾನಗಳನ್ನು ಮೀರಿ ಬೆಳೆಯಲು ಆಶ್ರಯಿಸಿದ್ದು ಇದೇ ಹಿಮಾಲಯವನ್ನು. ನಟ ರಜನೀಕಾಂತ್ ಪ್ರತಿ ವರ್ಷ ಕೆಲತಿಂಗಳು ಹಿಮಾಲಯದ ಮಡಿಲ ಧ್ಯಾನದಲ್ಲಿ ಕಳೆಯುತ್ತಾರೆ. ಹಿಮಾಲಯದ ಹುಚ್ಚು ಒಮ್ಮೆ ನೋಡಿದರೆ ಮತ್ತೆ ಮತ್ತೆ ನೋಡಬೇಕೆನಿಸುತ್ತದೆ.(ಪು: 51)

ಆಕಾಶವಾಣಿಯಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿ, ಕವಯತ್ರಿ, ಲೇಖಕಿ ಶ್ರೀಮತಿ ನೂತನ ದೋಶೆಟ್ಟಿ ಅವರ ಚಾರ್ ಧಾಮ್ ಪ್ರವಾಸ ಕಥನ “ಸ್ವರ್ಗದೊಂದಿಗೆ ಅನುಸಂಧಾನ” ಓದಿ ಮುಗಿಸುವಷ್ಟರಲ್ಲಿ ಇದು “ಸ್ವರ್ಗದೊಂದಿಗೆ ದಿವ್ಯಾನುಸಂಧಾನ” ಎನಿಸಿದ್ದಂತೂ ನಿಜ.

ಒಟ್ಟು ಹನ್ನೆರಡು ದಿನದ ಈ ಚಾರ್ ಧಾಮ್ ಪ್ರವಾಸಕ್ಕೆ ಹೊರಡುವ ಮುಂಚೆ ಮಳೆ ಹಿಮಪಾತ ಮೊದಲಾದವುಗಳ ಬಗ್ಗೆ ಹವಾಮಾನ ಪರಿಶೀಲನೆ ಕೈಗೊಂಡು ಯೂಟ್ಯೂಬ್‌ಗಳಲ್ಲಿ ಅಲ್ಲಿನ ಸ್ಥಳಗಳ ಬಗ್ಗೆ ಸೂಕ್ತ ಮಾಹಿತಿ, ಧರಿಸುವ ಉಡುಪುಗಳು ತೆಗೆದುಕೊಳ್ಳಬೇಕಾದ ಮುನ್ಸೂಚನೆಗಳನ್ನು ತೆಗೆದುಕೊಂಡು ಲೇಖಕಿ ನೂತನ ಹೊರಟಿದ್ದು ಕುಟುಂಬದ ಅಥವಾ ಸ್ನೇಹಿತರ ಜೊತೆಗಲ್ಲ… ಬದಲಿಗೆ solo trip. ಮಾರ್ಗಮಧ್ಯದಲ್ಲಿ ಯೋಗಗುರು ಮತ್ತವರ ಪತ್ನಿ ಜೊತೆಯಾದರೂ ಸಹಾ ಅವರ ಈ ಪರಿಯ ಧೈರ್ಯಕ್ಕೆ ಸಾಹಸಕ್ಕೆ ಆತ್ಮವಿಶ್ವಾಸಕ್ಕೆ ಅಚ್ಚರಿಯಾಗದಿರಲು ಸಾಧ್ಯವೇ? ಏಕೆಂದರೆ ಎಲ್ಲಾ ಸೌಲಭ್ಯಗಳಿರುವ ಅನುಕೂಲಗಳಿರುವ ದೇಶ ವಿದೇಶಗಳಿಗೆ ಹೋಗಿಬರಲಿಕ್ಕೆ ದುಡ್ಡಿದ್ದು ಒಂದಷ್ಟು ಬುದ್ಧಿವಂತರಾಗಿದ್ದರೆ ಸಾಕು. ಆದರೆ ಹಿಮಪಾತ, ಬೆಟ್ಟಗುಡ್ಡ ಕುಸಿತ, ಅತಿಕಡಿಮೆ ಉಷ್ಣಾಂಶದ ವಾತಾವರಣ, ಗಾಳಿಯಲ್ಲಿ ಆಮ್ಲಜನಕದ ಕೊರತೆ…. ಇಂತಹ ಸವಾಲುಗಳ ನಡುವೆ ಸೌಲಭ್ಯಗಳ ಕೊರತೆಯನ್ನು ಕೆಲವೊಮ್ಮೆ ಅವಘಡಗಳನ್ನು ಎದುರಿಸುತ್ತಾ ಧೈರ್ಯ ಕಳೆದುಕೊಳ್ಳದೇ ಒಬ್ಬರೇ ಹೊರಟ ನೂತನ ಅವರ “ಗಂಗೋತ್ರಿ, ಯಮುನೋತ್ರಿ, ಕೇದಾರನಾಥ ಮತ್ತು ಬದರಿನಾಥ” ಈ ನಾಲ್ಕು ಕ್ಷೇತ್ರಗಳ ಪ್ರವಾಸಕ್ಕೆ ಧೈರ್ಯ ಮತ್ತು ಹಣದ ಜೊತೆ ಭಕ್ತಿ, ಶ್ರದ್ಧೆ ಮತ್ತು ನಂಬಿಕೆ ಜೊತೆಯಾಗಿವೆ ಎನಿಸುತ್ತದೆ.

ಇಡೀ ಪ್ರವಾಸ ಕಥನದುದ್ದಕ್ಕೂ ಲೇಖಕಿಯ ಜೊತೆ ಅವರಿಗಾದ ಸುಂದರ ರೋಮಾಂಚನಕಾರಿ ಅನುಭವಗಳನ್ನು ಓದುಗಳಾಗಿ ನಾನೂ ಅನುಭವಿಸಿದ್ದೇನೆ. ಜ್ವರ ಬಂದು ಮಲಗಿದ್ದ ನಾನು ಓದುತ್ತಾ ಓದುತ್ತಾ ನಿದ್ರೆಯ ಕನಸಿನಲ್ಲೂ ಚಾರ್ ಧಾಮ್ ಪ್ರವಾಸದ ಬೆಟ್ಟ ಗುಡ್ಡ ಕಣಿವೆ ಪ್ರಪಾತಗಳ ಸೌಂದರ್ಯದ ಜೊತೆಗಿನ ರಮಣೀಯತೆ ಜೊತೆ ರೌದ್ರತೆ, ದೇಗುಲಗಳ ವಾತಾವರಣದ ದಿವ್ಯತೆ ಅನುಭವಿಸಿದ್ದೇನೆ.

ಶಿವನ ಆರಾಧಕಿಯಾದ ಲೇಖಕಿ ಬಾಲ್ಯದಿಂದಲೇ ವಚನಗಳನ್ನು ಶ್ಲೋಕಗಳನ್ನು ಮನೆಯಲ್ಲಿ ಹೇಳಿಕೊಂಡು ಮೌಲ್ಯಯುತ ಸಂಸ್ಕಾರ ಬೆಳೆಸಿಕೊಂಡವರು. ಬೇಡರ ಕಣ್ಣಪ್ಪಗೊಲಿದ ಶಿವ ಮಾರ್ಕಂಡೇಯನನ್ನು ಯಮನಿಂದ ಕಾಪಾಡಿದ ಶಿವ ರಾಕ್ಷಸನಾದರೂ ರಾವಣನ ಭಕ್ತಿಗೊಲಿದ ಜೋಗಿಜಂಗಮ ಶಿವನೊಂದಿಗೆ ಗಂಗೆ ಪೂಜೆ, ಗೌರಿಪೂಜೆಯ ಬಾಲ್ಯದ ನೆನಪುಗಳ ಜೊತೆ ಬೆಸೆದುಕೊಂಡು ಬರಹವನ್ನು ಮತ್ತಷ್ಟು ಆಪ್ತವಾಗಿಸುತ್ತಾರೆ. ಆಮ್ಲಜನಕದ ಕೊರತೆಯೋ ವಿಪರೀತ ಚಳಿಯಿಂದಲೋ ಒಂದೆರಡು ಬಾರಿ ತೀವ್ರ ಅಸೌಖ್ಯತೆ ಅನುಭವಿಸುತ್ತಲೇ ಸಂಭವಿಸಿದ ಅವಘಡಗಳ ನಡುವೆ ಮೊದಲೇ ಶಸ್ತ್ರ ಚಿಕಿತ್ಸೆಯಾಗಿದ್ದ ಕಾಲಿನಲ್ಲಿ ನಡೆಯಲಾಗದೆ ಕುದುರೆಯನ್ನೇ ಆಶ್ರಯಿಸಿಕೊಂಡರೂ ಸಹಾ ಅದರಿಂದಲೇ ಬಿದ್ದು ಪಕ್ಕದ ಪ್ರಪಾತದಿಂದ ಕೂದಲೆಳೆಯಲ್ಲಿ ಪಾರಾಗಿ ಪ್ರವಾಸ ಪ್ರಯಾಸವಾದರೂ ಪ್ರೇಮಪೂರ್ವಕವಾಗಿಸಿದ ಸಹಪ್ರಯಾಣಿಕರ “ಹರ ಹರ ಶಂಭೋ” “ಹರ ಹರ ಮಹಾದೇವ್” ” ಜೈ ಬೋಲೆನಾಥ್” ಘೋಷಗಳಿಗೆ ಎಲ್ಲರ ಸಾಥ್ ಸೇರಿ ತಾರಕಕ್ಕೇರಿ ಒಂದು ಧನಾತ್ಮಕ ಶಕ್ತಿ ಇಡೀ ವಾತಾವರಣದಲ್ಲಿ ಉಂಟಾಗಿ ವಿಸ್ಮಯ ವಿಶ್ವವೇ ಚಲಿಸಿಕೊಂಡು ಹೋಗುವಂತೆ ಭಾಸವಾಗುವ ದೃಶ್ಯಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತಾ ಲೆಖಕಿ ನೂತನ ಅವರು ಕೇದಾರನಾಥ ದೇವಾಲಯದ ಒಳಗೆ ಮೊದಲ ಹೆಜ್ಜೆಯಿಡುವಾಗ ಆ ಧನಾತ್ಮಕ ಶಕ್ತಿ ಸಂಚಯನದ ಕಂಪನಗಳಲ್ಲಿ ಭಕ್ತಿ ಶ್ರದ್ಧೆಯ ಭಾವನೆಯ ಔನ್ನತ್ಯಕ್ಕೇರುವಾಗ ಅವರ ಇಡೀ ದೇಹ ಸಣ್ಣಗೆ ನಡುಗಿ ಕಣ್ಣುಗಳು ಒದ್ದೆಯಾಗುವ ಸಂದರ್ಭ ಕಣ್ಣಿಗೆ ಕಟ್ಟುವಂತಿದೆ…. ಈ ವಿವರಗಳನ್ನೆಲ್ಲ ಓದುತ್ತಾ ನಾನೂ ರೋಮಾಂಚನಗೊಂಡಿದ್ದೇನೆ.

ಚಾರ್ ಧಾಮ್ ಪ್ರವಾಸ ಶುರುವಾಗುವುದು ಹೃಷಿಕೇಶದಿಂದ. ಅವರಿಗೆ ದೊರೆತ ವಾಹನದ ಡ್ರೈವರ್ ಸುರೇಶ್ ಎಂಬ ಸಮರ್ಥ ವ್ಯಕ್ತಿಯನ್ನು ಡೆಹ್ರಾಡೂನ್ ಆಕಾಶವಾಣಿ ಸಹಾಯಕ ನಿರ್ದೇಶಕರೇ ಕಳಿಸಿದ್ದರಿಂದ ಪ್ರವಾಸಕ್ಕೆ ಮತ್ತಷ್ಟು ಬಲ ಒದಗಿತೆನ್ನಬಹುದು. ಪ್ರವಾಸದ ಸಮಯದಲ್ಲಿ ಆತನ ಒಬ್ಬನೇ ತಂಗಿಯ ಗಂಡ ಸಾವಿಗೀಡಾದಾಗಲೂ ಪ್ರವಾಸ ಮುಗಿಸುವವರೆಗೂ ತನ್ನ ಕೆಲಸ ಮುಗಿಸಿಯೇ ಹೊರಟ ಅವನ ಬದ್ಧತೆ ಕಾರ್ಯತತ್ಪರತೆಗೆ ನನ್ನಲ್ಲಿ ಮಾತಿಲ್ಲ. ಅಲ್ಲಿಯವರು ಹೇಳುವಂತೆ “ಯೇ ಪಹಾಡಿ ಲೋಗ್ ದಿಲ್ ಸೆ ಬಹುತ್ ಅಚ್ಛೆ ಹೈ” ಎಂಬ ಒಂದೇ ಮಾತು ಸಾಕಲ್ಲವೇ?

ದೇವನಗರಿ ಹೃಷಿಕೇಶದ ಪ್ರಕೃತಿ ಸೌಂದರ್ಯದ ಜೊತೆ ಅದರ ಅಗಾಧತೆ, ಬಾರ್ಕೋಟ್‌ನ ಘೋರ ಚಳಿಗೆ ಉಸಿರುಕಟ್ಟಿ ಮೈಕೈ ಮರಗಟ್ಟಿ ಲೇಖಕಿ ನೂತನ ತೀವ್ರ ಕಷ್ಟವನನ್ನುಭವಿಸಿದ ಆತಂಕದ ಸ್ಥಿತಿ, ಪ್ರವಾಸಿಗರನ್ನು ಹೊತ್ತೊಯ್ಯುವ ಕತ್ತೆ ಮತ್ತು ಕುದುರೆಗಳ ಮಿಶ್ರತಳಿ “ಕಚ್ಛರ್” ಮೇಲೆ ಕೂತರೂ ಅತ್ತಿತ್ತ ನೋಡುತ್ತಾ ಮೈಮರೆಯದೆ ತಮ್ಮ ದೇಹದ ಸಮತೋಲನ ಕಾಯ್ದುಕೊಂಡು ಅವುಗಳಿಗೆ ಸಹಕರಿಸಬೇಕಾದ ಅನಿವಾರ್ಯತೆಯನ್ನೂ ತಿಳಿಸುವ ನೂತನ, ಯಮುನೋತ್ರಿಯ ದೇಗುಲದ ಆವರಣದ ಹಿಂದಿನ ಸೂರ್ಯಕುಂಡದ ಬಿಸಿನೀರಿನ ಬುಗ್ಗೆಯಲ್ಲಿ ಅಕ್ಕಿ ಬೇಯಿಸಿಕೊಂಡು ಪ್ರಸಾದ ರೂಪದಲ್ಲಿ ಸ್ವೀಕರಿಸುವ ಭಕ್ತರೊಂದಿಗೆ ತಾವೂ ಒಂದು ಬಟ್ಟೆಯಲ್ಲಿ ಅಕ್ಕಿಯನ್ನು ಮೊದಲೇ ಕಟ್ಟಿಕೊಂಡು ಬಂದು ಅದರಲ್ಲಿ ಇಳಿಬಿಟ್ಟು ಅದನ್ನು ಮೇಲಕ್ಕೆ ತೆಗೆದುಕೊಂಡು ಅಲ್ಲಿದ್ದವರೊಂದಿಗೆ ಪ್ರಸಾದವನ್ನು ಸ್ವೀಕರಿಸುವ ಲೇಖಕಿಯಲ್ಲಿ ಪುಟ್ಟ ಮಗುವೊಂದು ಜೀವನದ ಅನೇಕ ಅನುಭವಗಳಿಗೆ ತೆರೆದುಕೊಳ್ಳುವ ಉತ್ಸಾಹ ಲವಲವಿಕೆಯ ಬೆರಗು ಕಾಣುತ್ತದೆ.

ಸಮುದ್ರದಿಂದ 10000 ಅಡಿ ಎತ್ತರದ ಪ್ರದೇಶದ ಯಮುನೋತ್ರಿ ಯಮುನಾ ನದಿಯ ಜನ್ಮಸ್ಥಳ. ಯಮುನಾ ನದಿಗೆ ಕಾಳಿಂದಿ ನದಿ ಎಂಬ ಹೆಸರಿದೆ. ದ್ವಾಪರಯುಗದ ಯಮುನಾನದಿಯ ತಟದಲ್ಲಿ ಕೃಷ್ಣನ ರಾಸಲೀಲೆಯ ಸೊಗಸು ಕಣ್ಮುಂದೆ ಹಾದುಹೋಗಿ ಅದೇ ನದಿಯಲ್ಲಿ ಕಂಡ ಕಾಳಿಂಗ ಸರ್ಪದ ಮರ್ದನ ಮಾಡಿ ಆ ನದಿಗೆ ಕಾಳಿಂದಿ ಎಂಬ ಹೆಸರೂ ಬಂದಿರಬಹುದು.

ಗಂಗೋತ್ರಿ ಸಮುದ್ರಮಟ್ಟದಿಂದ 10200 ಅಡಿ ಎತ್ತರವಿದ್ದು ಗಂಗಾಮಾತೆಯ ದೇಗುಲವಿದೆ. ಉತ್ತರ ಕಾಶಿಯಲ್ಲಿ ದೇವನದಿ ಗಂಗೆಯ ಹೆಸರು ಮಂದಾಕಿನಿ. ದೇವ ಪ್ರಯಾಗದಲ್ಲಿ ಮಂದಾಕಿನಿ ನದಿ ಭಾಗೀರಥಿ ನದಿಯ ಜೊತೆ ಕೂಡಿ ಮುಂದೆ ಗಂಗೆಯಾಗಿ ಹರಿಯುತ್ತಾಳೆ. ಇಲ್ಲಿಯೇ “ನೆಹರೂ ಇನ್ಸ್ಟಿಟ್ಯೂಟ್ ಆಫ್ ಮೌಂಟನೇರಿಂಗ್” ಪರ್ವತಾರೋಹಣ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಇದೆ. ಮೌಂಟ್‌ ಎವರೆಸ್ಟ್‌ ಏರಿದ ಭಾರತದ ಪ್ರಥಮ ಮಹಿಳೆ ಬಚೇಂದ್ರಿಪಾಲ್ ಇಲ್ಲಿಯ ವಿದ್ಯಾರ್ಥಿನಿ ಎಂಬ ಅಮೂಲ್ಯ ಮಾಹಿತಿಯನ್ನು ನೂತನ ಹಂಚಿಕೊಂಡಿದ್ದಾರೆ.

“ಶಿವ ನನ್ನನ್ನು ಬೆರಗುಗೊಳಿಸುವಷ್ಟು ಬೇರಾವುದೂ ಬೆರಗುಗೊಳಿಸಿಲ್ಲ. ಹಿಮಾಲಯವನ್ನೇ ತನ್ನ ವಾಸಸ್ಥಾನವಾಗಿಸಿಕೊಂಡ ಆದಿಯೋಗಿ ಅವನು. ಅಂಥವನನ್ನು ಪಾರ್ವತಿ ಮೋಹಿಸಿದ್ದು ನನಗೆ ಅತ್ಯಂತ ಸಹಜ ಹಾಗೂ ಪ್ರಿಯ ವಿಷಯ. ಪುರಾಣಗಳ ಪ್ರಕಾರ ಶಿವಪಾರ್ವತಿಯರ ಮೊದಲ ಭೇಟಿಯಾದದ್ದು ಇದೇ ಕೇದಾರದಲ್ಲಿ” ಲೇಖಕಿಯ ಈ ಅಪರಿಮಿತ ಭಕ್ತಿ ಶ್ರದ್ಧೆಗಳು ಬಾಲ್ಯದಿಂದಲೇ ಬಂದ ಸಂಸ್ಕಾರದ ಫಲ. ಇದರೊಂದಿಗೆ ಕವಿಹೃದಯಿಯೂ ಆದ ನೂತನ ಅವರ ಭಾವ ಸಂವೇದನೆಗಳು ಇತರ ಲೇಖಕರಿಗಿಂತ ವಿಭಿನ್ನ ಎನ್ನುವುದು ಖಂಡಿತಾ ನಿಜ.

ಕೇದಾರನಾಥದ ಗೌರಿಕುಂಡ ಗೌರಿ ತಾನು ಸ್ನಾನ ಮಾಡುವಾಗ ಗಣಪತಿಯನ್ನು ನಿಲ್ಲಿಸಿದ್ದ ಸ್ಥಳ ಮತ್ತು ಮುಂಡಕಟಿಯಾದ ರುಂಡವಿಲ್ಲದ ಗಣೇಶನನ್ನು ಪೂಜಿಸುವ ದೇಗುಲ ನಮ್ಮ ಪುರಾಣದ ಕತೆಗಳನ್ನು ಹೇಳುತ್ತವೆ. ಕೇದಾರನಾಥ ದೇವಾಲಯದ ಶಿವಲಿಂಗ ಆದಿಶಂಕರರಿಂದ ಸ್ಥಾಪಿತವಾದ ಭಾರತದ ಹನ್ನೆರಡು ಜ್ಯೋತಿರ್ಲಿಂಗಗಳಲ್ಲೊಂದು ಶಂಕರರು ದೇಹತ್ಯಾಗ ಮಾಡಿದ್ದೂ ಸಹಾ ಇಲ್ಲೇ. ಈ ದೇಗುಲ ಕಟ್ಟಲು ಬಳಸಿರುವ ಕಲ್ಲು ಆ ಪರಿಸರದಲ್ಲಿ ಸಿಗಲಾರದು ಮತ್ತು ಕಲ್ಲುಗಳ ಜೋಡಣೆಯನ್ನು ಯಾವುದೇ ಗಾರೆ ಬಳಸದೇ ಇಂಟರ್ ಲಾಕಿಂಗ್ ವ್ಯವಸ್ಥೆಯ ಮೂಲಕ ಮಾಡಲಾಗಿದೆಯಂತೆ. ಹಿಮಚ್ಛಾದಿತ ಗಿರಿಶಿಖರದಲ್ಲಿರುವ ಅತ್ಯಂತ ಎತ್ತರದ ದೇಗುಲ ನಿರ್ಮಾಣಕ್ಕೆ ಕಲ್ಲುಗಳನ್ನು ಯಾವ ಸೌಲಭ್ಯವೂ ಇರದ ಆ ಕಾಲದಲ್ಲಿ ಹೇಗೆ ಸಾಗಿಸಲಾಯಿತು? ಇವತ್ತಿನ ಕಟ್ಟಡ ವಿನ್ಯಾಸ ತಂತ್ರಜ್ಞರು ಅಚ್ಚರಿ ಪಡುತ್ತಾರಂತೆ…. ನಿಜಕ್ಕೂ ಸೋಜಿಗವೇ…!

ಕೇದಾರನಾಥ ದರ್ಶನದ ನಂತರ ರಾತ್ರಿ ಕನಸಿನಲ್ಲಿ ಎತ್ತರದ ಕಣಿವೆಯೊಂದರಿಂದ ಲೇಖಕಿಯನ್ನು ಕೆಳಕ್ಕೆ ದೂಡಿದ ಕನಸು ಮುಂದೆ ಲೇಖಕಿ ದೊಡ್ಡದೊಂದು ಅಪಘಾತಕ್ಕೆ ಸಿಲುಕುವ ಮುನ್ಸೂಚನೆ ಕೊಡುವುದು ಸುಪ್ತ ಮನಸ್ಸಿನಲ್ಲಿ ಕಾಣುವ ಕೆಲವು ಕನಸುಗಳಿಗೂ ನಡೆಯುವ ಘಟನೆಗಳಿಗೂ ಒಮ್ಮೊಮ್ಮೆ ಸಂಬಂಧವಿರುವುದೂ ಮನುಷ್ಯನ ಬುದ್ಧಿಮತ್ತೆಗೂ ಪ್ರಜ್ಞೆಗೂ ಮೀರಿದ ಯಾವುದೋ ಶಕ್ತಿಯ ಸಂಚಲನ ಇಡೀ ಭೂಮಂಡಲವನ್ನಾಡಿಸುತ್ತಿರುವ ಸತ್ಯವೊಂದನ್ನು ತೆರೆದಿಡುತ್ತದೆ.

ಕೇದಾರನಾಥದಿಂದ ಬದರೀನಾಥಕ್ಕೆ ಹೋಗುವಾಗ ಸಿಗುವ ಊರು “ಚೋಪ್ತಾ” ಇದನ್ನು ಭಾರತದ ಸ್ವಿಟ್ಜರ್ಲೆಂಡ್‌ ಎನ್ನುತ್ತಾರೆ. ಬದರಿನಾಥ ದೇಗುಲ ಸಹಾ ಆದಿಶಂಕರರಿಂದ ಪ್ರಮುಖ ಯಾತ್ರಾಸ್ಥಳವಾಗಿದ್ದನ್ನು ಉಲ್ಲೇಖಿಸುವ ಲೇಖಕಿ ಮಹಾಭಾರತದಲ್ಲಿ ಈ ಸ್ಥಳದ ಪ್ರಸ್ತಾಪವಿದ್ದು ಇಲ್ಲಿಗೆ 4 ಕಿ.ಮೀ. ದೂರದಲ್ಲಿರುವ “ಮಾನಾ” ಭಾರತದ ಕೊನೆಯ ಹಳ್ಳಿ. ಈ ಊರಿನಲ್ಲಿ ವ್ಯಾಸರು ಮಹಾಭಾರತ ರಚಿಸಿದರು ಎಂದು ಹೇಳಲಾಗುವ ಗುಹೆ ಇದೆ. ಇಲ್ಲಿಂದಲೇ ಪಾಂಡವರು ಯುದ್ಧಾನಂತರ ಸ್ವರ್ಗಾರೋಹಣ ಮಾಡಿದರು ಎಂಬ ಐತಿಹ್ಯ ತಿಳಿಸುತ್ತಾರೆ.

ಇಡೀ ಪ್ರವಾಸ ಕಥನದುದ್ದಕ್ಕೂ ಲೇಖಕಿಯ ಜೊತೆ ಅವರಿಗಾದ ಸುಂದರ ರೋಮಾಂಚನಕಾರಿ ಅನುಭವಗಳನ್ನು ಓದುಗಳಾಗಿ ನಾನೂ ಅನುಭವಿಸಿದ್ದೇನೆ. ಜ್ವರ ಬಂದು ಮಲಗಿದ್ದ ನಾನು ಓದುತ್ತಾ ಓದುತ್ತಾ ನಿದ್ರೆಯ ಕನಸಿನಲ್ಲೂ ಚಾರ್ ಧಾಮ್ ಪ್ರವಾಸದ ಬೆಟ್ಟ ಗುಡ್ಡ ಕಣಿವೆ ಪ್ರಪಾತಗಳ ಸೌಂದರ್ಯದ ಜೊತೆಗಿನ ರಮಣೀಯತೆ ಜೊತೆ ರೌದ್ರತೆ, ದೇಗುಲಗಳ ವಾತಾವರಣದ ದಿವ್ಯತೆ ಅನುಭವಿಸಿದ್ದೇನೆ.

ಕೇದಾರನಾಥ ಗಿರಿಶೃಂಗದ ವರ್ಣನೆ ನಮ್ಮನ್ನು ಮಂತ್ರಮುಗ್ಧರನ್ನಾಗಿಸುತ್ತವೆ. “ಬೆಳಗಿನ ಸೂರ್ಯಕಿರಣಗಳಲ್ಲಿ ಈ ಬೆಳ್ಳಿ ಬೆಟ್ಟಗಳು ಹೊನ್ನ ಕಲಶಗಳಾಗಿ ಹೊಳೆಯುತ್ತವೆ. ದೇಹ ಮನಸ್ಸು ಒಂದುಗೂಡಿಸುವ ಏಕತ್ರವಾಗಿಸುವ ಪವಿತ್ರ ಸ್ಥಳ ಮೋಹ ವಾಂಛೆಗಳುದಿಸದ ನಿರ್ಮಮ ಸ್ಥಳ….. ಕವೆಂಪು ಅವರ ಆನಂದಮಯ ಈ ಜಗಹೃದಯ ಎಂಬಂತೆ ಪಂಜೆ ಮಂಗೇಶರ ಎಲ್ಲಿ ಭೂರಮೆ ದೇವಸನ್ನಿಧಿ ಬಯಸಿ ಬಿಮ್ಮನೆ ಬಂದಳೋ ಎಂಬಂತೆ ಈ ನಿಸರ್ಗವೇ ದೈವ. ಹಿಮಶಿಖರಗಳೇ ಶೃಂಗಾರ- ಸೂರ್ಯರಶ್ಮಿಯೇ ಅಭಿಷೇಕ, ಸಾನಿಧ್ಯವೇ ಪ್ರಸಾದ, ಇದುವೇ ಸ್ವರ್ಗ. ಇಲ್ಲಿಯ ತಂಗಾಳಿ ಅದನ್ನು ಕಿವಿಯಲ್ಲಿ ಪಿಸುಗುಡುತ್ತವೆ ಅದನ್ನು ಕೇಳಿ ಬೆಟ್ಟಗಳು ನಗುತ್ತವೆ, ಇಲ್ಲಿಯ ಪವಿತ್ರ ಗಾಳಿಯನ್ನು ಕೆಲಹೊತ್ತು ಉಸಿರಾಡಿದ ಜೀವನ ಪಾವನ ಎಂದರೆ ಉತ್ಪ್ರೇಕ್ಷೆ ಖಂಡಿತಾ ಅಲ್ಲ.”

ಕೇದಾರನಾಥ ದೇಗುಲದ ದಿವ್ಯತೆಯನ್ನು ಹೀಗೆ ವರ್ಣಿಸುತ್ತಾರೆ-”
“ಒಂದು ಒಳ್ಳೆಯ ಮಾತು, ಒಳ್ಳೆಯ ಸ್ನೇಹ (ಕೆಟ್ಟ ಸ್ನೇಹ ಇರುವುದಿಲ್ಲ) ಒಳ್ಳೆಯ ಕೆಲಸ ಮೊದಲಾದವು ನೀಡುವ ಆತ್ಮಸಂತೃಪ್ತಿಯನ್ನು ಹೇಗೆ ವರ್ಣಿಸಲಾಗುವುದಿಲ್ಲವೋ ಹಾಗೆಯೇ ಇಲ್ಲಿನ ಅನುಭೂತಿ. ಅದು ಪ್ರವಾಸಿಗರಿಗೆ ಭಕ್ತರಿಗೆ ಆಧ್ಯಾತ್ಮ ಚಿಂತಕರಿಗೆ ಸಂತರಿಗೆ ಸನ್ಯಾಸಿಗಳಿಗೆ ಪ್ರಕೃತಿಪ್ರಿಯರಿಗೆ ಕಲಾವಿದರಿಗೆ ಛಾಯಾಗ್ರಾಹಕರಿಗೆ…. ಹೀಗೆ ಪಟ್ಟಿ ಮಾಡುತ್ತಾ ಹೋದರೆ ಎಲ್ಲರಿಗೂ ತುಂಬಿ ತುಂಬಿ ನೀಡಲು ಏನಾದರೊಂದು ವಿಶೇಷ ಇದ್ದೇ ಇದೆ. ಯಾರನ್ನೂ ಇದು ಬರಿಗೈಲಿ ಕಳಿಸುವುದಿಲ್ಲ. ಪಡೆಯುವವರು ಏನು ಬಯಸುತ್ತಾರೋ ಅಷ್ಟೇ ಅವರ ಪ್ರಾಪ್ತಿ”

ಲೇಖಕಿ ನೂತನ ಅವರ ಸುಂದರ ರೋಮಾಂಚನದ ಅನುಭವಗಳ ನಡುವೆಯೇ ಚಾರ್ ಧಾಮ್ ಪ್ರವಾಸದ ಗಿರಿಶಿಖರ ಆಳ ಕಣಿವೆಗಳ ಪ್ರಪಾತದ ರೌದ್ರತೆಯನ್ನೂ ಕಾಣಿಸುತ್ತಾರೆ. ಅವರ ಕನಸುಗಳೊಂದಿಗೆ ಮುಂದೆ ಸಂಭವಿಸಬಹುದಾದ ಘೋರ ಅನುಭವಗಳು ಬೆಸೆದುಕೊಳ್ಳುತ್ತವೆ. ಲಕ್ಷಾಂತರ ಪ್ರವಾಸಿಗರ ಕಾರಣದಿಂದ ಸ್ಥಳದ ನೈರ್ಮಲ್ಯ ಕಾಪಾಡುವ ಜರೂರತ್ತನ್ನು ಮನಗಾಣಿಸುತ್ತಾರೆ. ಅಲ್ಲಿನವರ ಬದುಕು ಅತ್ಯಂತ ದುರ್ಭರವಾದರೂ ಬಹು ಸರಳ. ಆದರೆ ಪ್ರವಾಸಿಗರ ದಟ್ಟಣೆಯಿಂದಾಗಿ ಉಂಟಾಗುವ ಮಾಲಿನ್ಯತೆ ಸ್ಥಳೀಯ ಪರಿಸರದ ಹಾನಿಗೆ ಮಾರಕವಾಗಬಹುದು. ನೀರ್ಗಲ್ಲುಗಳ ಕೊರೆತದಿಂದ ಸ್ಥಳಗಳ ಮುಳುಗಡೆ, ಬಂಡೆಗಳ ಉರುಳುವಿಕೆ ಮತ್ತು ಮಳೆಯ ಕಾರಣದಿಂದ ರಸ್ತೆ ಮುಚ್ಚಿಹೋಗಿ ದುರಸ್ಥಿಯಾಗುವ ತನಕ ವಾಹನ ಮತ್ತು ಜನಸಂಚಾರ ಸಾಧ್ಯವಾಗದ ದುಸ್ಥಿತಿ, ಪ್ರವಾಹಗಳಿಗೆ ಸಿಕ್ಕಿ ಮುಳುಗುವ ದೇಗುಲಗಳು ಊರುಗಳು….. ಇವೆಲ್ಲವುಗಳ ನಡುವೆಯೂ ಪ್ರವಾಸೋದ್ಯಮಕ್ಕೆ ಅನುಕೂಲವಾಗಲೆಂದು ರಸ್ತೆ ಅಗಲೀಕರಣ ಕಾರ್ಯ ಅಭಿವೃದ್ಧಿ ಕಾರ್ಯಗಳಿಗಾಗಿ ಬಂಡೆ ಕೊರೆತಗಳಿಂದ ನೀರ್ಗಲ್ಲುಗಳಿಂದಾಗಬಹುದಾದ ಅಪಾಯವನ್ನು ಪರಿಸರ ತಜ್ಞರು ಹೇಳುವುದನ್ನು ಲೆಕ್ಕಿಸದೇ ಕಟ್ಟಡಾಭಿವೃದ್ಧಿ ಕೆಲಸಗಳು ಪವಿತ್ರ ಸುಂದರ ಈ ಸ್ಥಳಗಳಿಗೆ ಒದಗಬಹುದಾದ ಅಪಾಯದ ಮುನ್ಸೂಚನೆಯ ಬಗ್ಗೆ ಲೇಖಕಿ ತೀವ್ರ ಕಾಳಜಿ ವ್ಯಕ್ತಪಡಿಸುತ್ತಾರೆ.

ಸಂಚರಿಸುವ ಮಾರ್ಗದಲ್ಲಿ ಕಣ್ಣೆದುರೆ ಬಂಡೆಗಳು ಬಿದ್ದು ರಸ್ತೆ ಮುಚ್ಚಿಹೋಗಿ ಸಂಚಾರ ಅಸ್ತವ್ಯಸ್ತವಾದಾಗ ರಸ್ತೆ ತೆರವು ಮಾಡಿಸಲು ಮತ್ತು ಬಂಡೆಯ ಕೆಳಗೆ ವಾಹನಗಳು ಸಿಲುಕಿದ್ದಲ್ಲಿ ಅಲ್ಲಿ ಸಿಕ್ಕಿಕೊಂಡ ಜನರನ್ನು ರಕ್ಷಿಸಲು ಕೇಂದ್ರ ಸರ್ಕಾರದ “ಬಾರ್ಡರ್ ರೋಡ್ಸ್ ಆರ್ಗನೈಸೇಶನ್” ಸುಮಾರು 62 ಸೂಕ್ಷ್ಮ ಜಾಗಗಳನ್ನು ಗುರುತಿಸಿ ಜೆಸಿಬಿಯನ್ನು ನಿಲ್ಲಿಸಿಕೊಂಡು ಹಗಲು ರಾತ್ರಿ ಸಿಬ್ಬಂದಿಗಳು ತಮ್ಮ ಜೀವವನ್ನು ಪಣಕ್ಕಿಟ್ಟು ಪ್ರವಾಸಿಗರಿಗಾಗಿ ಕೆಲಸ ಮಾಡುವ ಸಾಹಸಿಗ ಸಿಬ್ಬಂದಿಗಳು, ಡೋಲಿ ಹೊತ್ತು ನಡೆಯುವ ಕಷ್ಟಸಹಿಷ್ಣು ನೇಪಾಳಿಗಳು, ಪ್ರವಾಸಿಗರನ್ನು ಒಯ್ಯುವ ಕುದುರೆ ಸವಾರರು, ಸಂಚಾರದ ಸವಾಲನ್ನು ಸ್ವೀಕರಿಸಿ ತಮ್ಮ ಕರ್ತವ್ಯಪರತೆ ಮೆರೆಯುವ ವಾಹನದ ಡ್ರೈವರ್‌ಗಳು….. ಎಲ್ಲರೂ ಜೀವನ ನಿರ್ವಹಣೆಗಾಗಿ ದುಡಿದರೂ ತಮ್ಮ ಜೀವವನ್ನು ಪಣಕ್ಕಿಟ್ಟು ದುಡಿದು ತಮ್ಮ ಸಂಸಾರ ನಿರ್ವಹಿಸುವ ಇವರ ಶ್ರದ್ಧೆ ಹಾಗೂ ಧೀರತೆಗೆ ಮತ್ತು….

ಕೇದಾರನಾಥ ತಲುಪಲು ವಯಸ್ಸಿನಲ್ಲಿ ಹಿರಿಯರಾದರೂ ನಡೆದು 22 ಕಿ.ಮೀ ದೂರದ ಸುಮಾರು 12000 ಅಡಿ ಎತ್ತರದ ಈ ದುರ್ಗಮ ಬೆಟ್ಟವನ್ನು ಏರುವವರು, 5-6 ತಿಂಗಳ ಮಗುವನ್ನೆತ್ತಿಕೊಂಡು ಬರುವ ಬಾಣಂತಿಯರು, ಹೀಗೆ ಹರಿದು ಬರುವ ಜನಸಾಗರಕ್ಕೆ ಇಂಥಹ ಸೆಳೆತಕ್ಕೆ ಯಾವ ಪರಿಭಾಷೆಯಿದೆ ಎನ್ನುವ ಲೇಖಕಿ ತಮ್ಮೊಂದಿಗೆ ಚಾರ್ ಧಾಮ್ ರುದ್ರ ರಮಣೀಯ ಪ್ರವಾಸದ ಅನುಭವದ ರಸದೌತಣವನ್ನು ಓದುಗರಿಗೂ ಉಣಿಸುವ ಸರಳ ಸಹಜ ಶೈಲಿ, ಅನುಭವಗಳನ್ನು ಹಂಚಿಕೊಳ್ಳುವ ಆಪ್ತತೆಯಿಂದ ಈ ಕೃತಿ ಇಡೀ ಭಾರತದ ಮಹೋನ್ನತೆಯ ಚೆಲುವನ್ನೂ ಅಧ್ಯಾತ್ಮಿಕತೆಯ ಉತ್ತುಂಗವನ್ನೂ ಕಾವ್ಯದೈಸಿರಿಯನ್ನೂ ಪ್ರಕೃತಿಯ ಅಂತಃಸತ್ವದ ಚೈತನ್ಯವನ್ನು ರುದ್ರ ರಮಣೀಯತೆಯನ್ನು ಚೆಲುವು ಒಲವುಗಳನ್ನೂ ಪ್ರತಿಬಿಂಬಿಸುತ್ತದೆ.

“ಹೇಳುವುದು ಬಹಳಷ್ಟಿದ್ದರೂ ಅನುಭವಿಸಿದಷ್ಟು ಹೇಳಲಾಗುವುದಿಲ್ಲ…. ನಿಜ ಹೇಳಲೇ? ನನ್ನ ಒಂದು ಅಂಶವನ್ನು ಹಿಮಾಲಯದ ಆ ಬೆಟ್ಟಗಳಲ್ಲಿ ಬಿಟ್ಟು ಬಂದಿದ್ದೇನೆ. ಹಾಗಾಗಿ ನಾನೀಗ ಅಪೂರ್ಣಳಾದರೂ ಒಂದರ್ಥದಲ್ಲಿ ಪೂರ್ಣ”
I LOVE SHIVA , PARVATI, THEIR CHILDREN AND OF COURSE THE VETERAN THE HIMALAYA ಎನ್ನುವ ಅವರ ಮಾತುಗಳಲ್ಲಿ ಬದುಕಿನ ನಿಜ ಸಾರ್ಥಕತೆ ಕಂಡುಕೊಂಡಿರುವ ಗೆಳತಿ ನೂತನ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು.

(ಕೃತಿ: ಸ್ವರ್ಗದೊಂದಿಗೆ ಅನುಸಂಧಾನ (ಚಾರ್‌ ಧಾಮ್‌ ಪ್ರವಾಸ ಕಥನ), ಲೇಖಕರು: ನೂತನ ದೋಶೆಟ್ಟಿ, ಪ್ರಕಾಶಕರು: ಸರ್ವಮಂಗಳ ಪ್ರಕಾಶನ, ಬೆಲೆ: 130/-)