2042 ಏಪ್ರಿಲ್ ಏಳನೇ ತಾರೀಕು. ಅಮ್ಮನನ್ನು ಕಳಿಸಿ ಒಂದು ವಾರವಾಗಿತ್ತು. ಹಳೆಯ ದೃಶ್ಯದ ಪುನರಾವರ್ತನೆ ಆಯಿತು. ಒಂದು ಬದಲಾವಣೆ ಎಂದರೆ ಅಮ್ಮ ಮನೆಯಲ್ಲಿ ಇರಲಿಲ್ಲ. ಬಂದವರು ಫಾರ್ಮಾಲಿಟಿ ಮುಗಿಸಿ ಚೆಕ್ ಹಾಗೂ ಸೂಟ್ಕೇಸ್‌ನೊಂದಿಗೆ ಅವನಿಯನ್ನು ಕರೆದುಕೊಂಡು ವಾಹನದಲ್ಲಿ ಹೊರಟರು. ಹೊರಡುವ ಮುನ್ನ ಅವನಿ ಕೇಳಿದಳು “ಅಮ್ಮನನ್ನು ಕಳಿಸುವೆ ಎಂದಲ್ಲವೇ ನನ್ನ ಸಹಿ ಪಡೆದದ್ದು… ಈ ಮಸಲತ್ತು ತಿಳಿದಿರಲಿಲ್ಲ, ಅದಕ್ಕೇನಾ ಎರಡು ಪೇಪರ್‌ಗೆ ಸಹಿ ಹಾಕಿಸಿಕೊಂಡದ್ದು. ಸರಿ, ದೇವರು ನಿಮಗೆ ಒಳ್ಳೆಯದು ಮಾಡಲಿ. ಗುಡ್ ಬೈ.” ಎಂದು ಹೊರಟು ಹೋದಳು.
ವಸಂತಕುಮಾರ್‌ ಕಲ್ಯಾಣಿ ಬರೆದ ಕತೆ “ಹಳೆ ಪಾತ್ರೆ… ಹಳೆ ಕಬ್ಬಿಣ…” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

2042 ಏಪ್ರಿಲ್ 1ನೇ ತಾರೀಖು ಸುಸಜ್ಜಿತವಾದ, ಹೊಸ ಮಾದರಿಯ ವ್ಯಾನ್, ಒಂದು ಮನೆಯ ಮುಂದೆ ಬಂದು ನಿಂತಿತು. ಆ ವ್ಯಾನ್ ಇಂದ ಒಬ್ಬರು ಅಡ್ವೋಕೇಟ್, ಒಬ್ಬರು ಡಾಕ್ಟರ್, ಮತ್ತೊಬ್ಬರು ಸಹಾಯಕರು ಇಳಿದು, ಮನೆಯೊಳಗೆ ಪ್ರವೇಶಿಸಿದರು. ಮನೆಯೂ ಸಹ ಅತ್ಯಂತ ಆಧುನಿಕವಾಗಿತ್ತು. ವಿಸ್ತೀರ್ಣ ಹೆಚ್ಚಿಲ್ಲದಿದ್ದರೂ ಎಲ್ಲಾ ಸೌಕರ್ಯಗಳನ್ನು ಒಳಗೊಂಡಿತ್ತು. ಆ ಮನೆಯ ಮಾಲೀಕ ಅಂಶುಮಾಲಿ ಹೊರಗೆ ಬಂದು, ಎಲ್ಲರನ್ನೂ ಸ್ವಾಗತಿಸಿದನು. ಅವರಲ್ಲಿ ಅಡ್ವೋಕೇಟ್, ಕೆಲವು ಕಾಗದ ಪತ್ರಗಳನ್ನು ಅಂಶುಮಾಲಿಯ ಕೈಗಿತ್ತು “ಎಲ್ಲಾ ವೆರಿಫಿಕೇಶನ್ ಮಾಡಿದ್ದೇನೆ ಎಲ್ಲವೂ ಸರಿಯಾಗಿದೆ ಪಾರ್ಟಿ ಎಲ್ಲಿದ್ದಾರೆ, ನಮಗೆ ಹೆಚ್ಚು ಸಮಯವಿಲ್ಲ. ಒಮ್ಮೆ ಡಾಕ್ಟರ್ ‘ಅವರನ್ನು’ ಪರೀಕ್ಷಿಸಬೇಕು. ಹಾಗೆಯೇ… ಚೆಕ್ ರೆಡಿ ಇದೆಯೇ?”

ಅಂಶುಮಾಲಿ ಎಲ್ಲದಕ್ಕೂ ತಲೆಯಾಡಿಸಿದ. ಕೆಲವು ಕ್ಷಣಗಳಲ್ಲಿ ಅವನ ಅಮ್ಮ ‘ಕಾರುಣ್ಯ ಮೂರ್ತಿ’ ಹೊರಗೆ ಬಂದರು. ಮುಖ ಕಳಾಹೀನ, ಭಾವಹೀನವಾಗಿತ್ತು. ಅವರ ಹಿಂದೆಯೇ ಬಂದ ಅಂಶುಮಾಲಿಯ ಹೆಂಡತಿ ‘ಅವನಿ’ ಹತ್ತಿರದಲ್ಲಿದ್ದ ಇನ್ನೊಂದು ಸೋಫಾದಲ್ಲಿ ಕುಳಿತಳು. ವೈದ್ಯರು ಕಾರುಣ್ಯ ಮೂರ್ತಿಯವರನ್ನು ಒಂದು ಸೋಫಾದಲ್ಲಿ ಕೂರಿಸಿ, ಪ್ರಾಥಮಿಕ ಪರೀಕ್ಷೆಗಳನ್ನು ಪೂರೈಸಿ, ತಲೆಯಾಡಿಸಿದರು. ಅಂಶುಮಾಲಿ, ಜೊತೆಯಲ್ಲಿದ್ದ ಸಹಾಯಕನ ಕೈಲಿ, ಚೆಕ್ ಕೊಟ್ಟು ತಲೆತಗ್ಗಿಸಿ ಕುಳಿತಿದ್ದ. ಅವನಿ ಬಿಡುಗಡೆಯ ಭಾವ ಹೊತ್ತ ಮುಖವನ್ನು ಬೇರೊಂದು ದಿಕ್ಕಿಗೆ ತಿರುಗಿಸಿ ಕುಳಿತುಕೊಂಡಿದ್ದಳು. ಕಾರುಣ್ಯ ಮೂರ್ತಿ “ನೀನು ಹೇಳಿದ್ದೇ ಒಂದು ಮಾಡಿದ್ದೇ ಒಂದು, ಇರಲಿ ಸುಖವಾಗಿರಿ. ನಡೀರಿ ಹೊರಡೋಣ” ಎಂದು ಹೊರಟರು. ಅವರ ಸೂಟ್‌ಕೇಸ್ ಒಂದನ್ನು ಸಹಾಯಕ ಹಿಡಿದುಕೊಂಡಿದ್ದ. ವ್ಯಾನ್‌ನಲ್ಲಿ ಬಂದಿದ್ದ ಮೂವರೂ, ಅಂಶುಮಾಲಿಗೆ ವಂದಿಸಿ, ಅಮ್ಮನನ್ನು ಕರೆದುಕೊಂಡು, ವ್ಯಾನ್‌ನಲ್ಲಿ ಹೊರಟು ಹೋದರು.

ಇದು ತೀರಾ ಇತ್ತೀಚೆಗೆ ಭಾರತದ ಮಹಾನಗರಗಳಲ್ಲಿ ಕಾಲಿಟ್ಟ ವ್ಯವಸ್ಥೆ ಆಗಿತ್ತು. ಒಂದು ರೀತಿಯ ಸುಸಜ್ಜಿತ, ವ್ಯವಸ್ಥಿತ, ವೃದ್ಧಾಶ್ರಮ+ ಅನಾಥಾಶ್ರಮ+ಹೋಂ ಸ್ಟೇ ಇದ್ದಹಾಗೆ. ಮನೆಯಲ್ಲಿ ಯಾರನ್ನಾದರೂ ಇಂತಹ ಸಂಸ್ಥೆ ‘WORST’ (Women & Old Rehabilitation Society for Tomorrow) ಗೆ ಸೇರಿಸಬೇಕೆಂದಿದ್ದರೆ ಮನೆಯಲ್ಲಿ ಉಳಿದವರ ಒಪ್ಪಿಗೆ, ಒಂದು ಸೂಚಿತ ಮೊತ್ತಕ್ಕೆ ಚೆಕ್ ಹಾಗೂ ಕೆಲವು ಕಾಗದ ಪತ್ರಗಳಿಗೆ ಸಹಿ ಬೇಕಿತ್ತು. ಹಣವನ್ನು ಒಂದೇ ಗಂಟಿನಲ್ಲಿ ಅಥವಾ ವಾರ್ಷಿಕ ಕಂತಿನಲ್ಲಿ ಕಟ್ಟಬಹುದು. ಸರ್ಕಾರವು, ಸೂಕ್ತ ಕಾಯ್ದೆ ಮಂಡನೆ ಮಾಡಿ, ಈ ಪ್ರಕ್ರಿಯೆಯನ್ನು ಸರಳಗೊಳಿಸಿತ್ತು. ಕೆಲವೊಮ್ಮೆ ಭಾವನೆಗಳು ಮೇಲ್ಮೈ ಸಾಧಿಸಿ ಇಂತಹವರನ್ನು ಪುನಃ ಮನೆಗೆ ಕರೆದೊಯ್ಯಬೇಕಾದರೆ, ಪೆನಾಲ್ಟಿ ಮೊತ್ತ ಸಲ್ಲಿಸಿ, ಕರೆದುಕೊಂಡು ಹೋಗಬಹುದು.


ಅಂಶುಮಾಲಿಗೆ ಮದುವೆಯಾಗುವಾಗ ತಂದೆ ಇರಲಿಲ್ಲ. ತಾಯಿ ಒಬ್ಬರೇ, ಇವನೂ ಒಬ್ಬನೇ- ಹಿಂದಿಲ್ಲ ಮುಂದಿಲ್ಲ- ಎನ್ನುವ ಹಾಗೆ. ನೆಟ್‌ನಲ್ಲಿ ಹುಡುಕಿ, ಭೇಟಿಯಾಗಿ, ಅಮ್ಮನ ಮುಂದೆ ಹಾಜರುಪಡಿಸಿ, ಒಪ್ಪಿಸಿ ಮದುವೆಯಾಗಿದ್ದ ‘ಅವನಿ’ಯನ್ನು. ಯಥಾ ಪ್ರಕಾರ ಇಬ್ಬರೂ, ಅವರವರ ಕಾರಿನಲ್ಲಿ ಕೆಲಸಕ್ಕೆ ಹೋಗುತ್ತಿದ್ದರು. ಮನೆಯಲ್ಲಿ ಕೆಲಸದವರು ಇದ್ದರೂ ಅಮ್ಮ ಕಾರುಣ್ಯ ಮೂರ್ತಿಗೆ ಏನೋ ಬೇಸರ, ಅಸಮಾಧಾನ, ಒಂಟಿತನ. ಎರಡು ವರ್ಷ ಕಳೆದರೂ ಮೊಮ್ಮಕ್ಕಳ ಆಗಮನದ ಸೂಚನೆ ಇಲ್ಲ. ಕೊನೆಗೂ ಒಮ್ಮೆ ಮಗನನ್ನು ಸೊಸೆಯನ್ನು ವಿಚಾರಿಸಿದಾಗ ತಿಳಿದದ್ದೇನೆಂದರೆ, ಇಬ್ಬರಿಗೂ ಸದ್ಯಕ್ಕೆ ಅಥವಾ ಶಾಶ್ವತವಾಗಿ ಮಕ್ಕಳು ಬೇಡ. ಸಮಸ್ಯೆ ಇಬ್ಬರಲ್ಲಿ ಯಾರಿಗಾದರೂ ಇತ್ತೋ? ತಿಳಿಯಲಿಲ್ಲ. ಒಟ್ಟಿನಲ್ಲಿ ಮಕ್ಕಳು ಅನಿವಾರ್ಯವೇನಲ್ಲ ಎಂಬ ಮನಸ್ಥಿತಿ. ಜೊತೆಗೆ, ಬೇಕೆನಿಸಿದಾಗ ‘ದತ್ತು ತಗೊಂಡರೆ ಆಯ್ತು’ ಎನ್ನುವ ಭಾವ. ವಿಷಯ ತಿಳಿದು ಕಾರುಣ್ಯ ಪೆಚ್ಚಾದರು. ಅಸಹನೆ ಹೆಚ್ಚಾಯಿತು, ಸಣ್ಣಪುಟ್ಟ ವಿಷಯಕ್ಕೆ ಕಿರಿಕಿರಿ. ಇವರಿಗೇ ಕೌನ್ಸಿಲಿಂಗ್ ಮಾಡಿಸುವ ಹವಣಿಕೆ ಮಗ ಸೊಸೆಯದು. ಹಾಗೆಯೇ ಅನಾರೋಗ್ಯದ ಕಾರಣ ಅವನಿ ಕೆಲಸ ಬಿಟ್ಟು ಮನೆಯಲ್ಲಿದ್ದಳು.

ಅವಳೂ ಅಂಶುಮಾಲಿಯ ಹಾಗೆ ಸಿಂಗಲ್ ಪೇರೆಂಟ್‌ನ ಮಗಳು. ಅವಳ ತಾಯಿ ಅವಳ ತಂದೆಗೆ, ಡೈವೋರ್ಸ್ ಕೊಟ್ಟು ದೂರವಾಗಿದ್ದರು. ತಂದೆಯೇ ಮಗಳನ್ನು ಓದಿಸಿ, ಬೆಳೆಸಿ ಮದುವೆ ಮಾಡಿ, ಇತ್ತೀಚೆಗೆ ತೀರಿಕೊಂಡಿದ್ದರು. ಅವನಿ ಇತ್ತೀಚೆಗೆ ಅಸಹನೆ ಹೆಚ್ಚಾಗಿ ಗಂಡನ ಮೇಲೂ, ಅತ್ತೆಯ ಮೇಲೂ, ಹರಿಹಾಯಲು ಶುರು ಮಾಡಿದಳು. ಅಂಶುಮಾಲಿಯ ಸ್ಥಿತಿ ಅಡಕತ್ತರಿಯಲ್ಲಿ ಸಿಕ್ಕಿಕೊಂಡ ಹಾಗಾಯಿತು.

ಅಂಶುಮಾಲಿಗೆ ಆಫೀಸ್‌ನಲ್ಲಿಯೂ ಒತ್ತಡ. ಮನೆಯಲ್ಲೂ ಕಿರಿಕಿರಿ. ಇದು ಅತಿಯಾದಾಗ ಅವನ ಗೆಳೆಯನೊಬ್ಬ ಸೂಚಿಸಿದ್ದೆ ಈ ವ್ಯವಸ್ಥೆ. ಅಮ್ಮನನ್ನು ಕಳಿಸಿದ ಮೇಲಾದರೂ ಹೆಂಡತಿ ಸರಿ ಹೋಗಬಹುದೇ. ಇತ್ತೀಚೆಗೆ ಅವಳ ಆರೋಗ್ಯವೂ ಬಿಗಡಾಯಿಸಿದೆ. ಅವಳಿಗೆ ಡೈವೋರ್ಸ್ ಕೊಡುವುದು ಮನುಷ್ಯತ್ವವಲ್ಲ. ಏನು ಮಾಡಲಿ…. ಎಂದು ದಿನಗಟ್ಟಲೆ ಯೋಚಿಸಿ, ತಲೆಕೆಡಿಸಿಕೊಂಡಿದ್ದಾಗ ಅವನಿಗೆ ಹೊಳೆದದ್ದೇ ಈ ಉಪಾಯ.

2042 ಏಪ್ರಿಲ್ ಏಳನೇ ತಾರೀಕು. ಅಮ್ಮನನ್ನು ಕಳಿಸಿ ಒಂದು ವಾರವಾಗಿತ್ತು. ಹಳೆಯ ದೃಶ್ಯದ ಪುನರಾವರ್ತನೆ ಆಯಿತು. ಒಂದು ಬದಲಾವಣೆ ಎಂದರೆ ಅಮ್ಮ ಮನೆಯಲ್ಲಿ ಇರಲಿಲ್ಲ. ಬಂದವರು ಫಾರ್ಮಾಲಿಟಿ ಮುಗಿಸಿ ಚೆಕ್ ಹಾಗೂ ಸೂಟ್ಕೇಸ್‌ನೊಂದಿಗೆ ಅವನಿಯನ್ನು ಕರೆದುಕೊಂಡು ವಾಹನದಲ್ಲಿ ಹೊರಟರು. ಹೊರಡುವ ಮುನ್ನ ಅವನಿ ಕೇಳಿದಳು “ಅಮ್ಮನನ್ನು ಕಳಿಸುವೆ ಎಂದಲ್ಲವೇ ನನ್ನ ಸಹಿ ಪಡೆದದ್ದು… ಈ ಮಸಲತ್ತು ತಿಳಿದಿರಲಿಲ್ಲ, ಅದಕ್ಕೇನಾ ಎರಡು ಪೇಪರ್‌ಗೆ ಸಹಿ ಹಾಕಿಸಿಕೊಂಡದ್ದು. ಸರಿ, ದೇವರು ನಿಮಗೆ ಒಳ್ಳೆಯದು ಮಾಡಲಿ. ಗುಡ್ ಬೈ. ಒಂಟಿ ಗೂಬೆ ತರಹ ಸುಖವಾಗಿರಿ..” ಎಂದು ಹೊರಟು ಹೋದಳು.

ಹೌದು! ಅಮ್ಮನನ್ನು ಕಳಿಸೋಣ ಎಂದು ಹೆಂಡತಿಯ ಬಳಿಯೂ, ಹೆಂಡತಿಯನ್ನು ಕಳಿಸುವೆ ಎಂದು ಅಮ್ಮನ ಬಳಿಯೂ, ಹೇಳಿ ಅಂಶುಮಾಲಿ ಎರಡೆರಡು ಪತ್ರಕ್ಕೆ ಇಬ್ಬರ ಬಳಿಯೂ ‘ಸ್ವಯಿಚ್ಛೆಯಿಂದ ಹೊರಡುತ್ತಿರುವುದಾಗಿ’ ಸಹಿ ಹಾಕಿಸಿಕೊಂಡಿದ್ದ.

ಧಡಾರ್ ಎಂದು ಪಾತ್ರೆ ಬಿದ್ದ ಸಪ್ಪಳಕ್ಕೆ ಅಂಶುಮಾಲಿಗೆ ಎಚ್ಚರವಾಯಿತು.

ರಜಾ ದಿನದ ಊಟ… ತುಸು ಹೆಚ್ಚೇ ಮುಗಿಸಿ, ನಿದ್ದೆಗೆ ಹೊರಳುವಾಗ, ಹೊರಗೆ…. ಹಳೆ ಪಾತ್ರೆಯವ “ಹಳೇ ಟಿವಿ ಇರಲಿ….. ಫ್ರಿಜ್ ಇರಲಿ…. ವಾಷಿಂಗ್ ಮೆಷಿನ್ ಇರಲಿ…. ಸೋಫಾ ಇರಲಿ….” ಎಂದು ರಾಗವಾಗಿ ಕೂಗುತ್ತಾ ಹೋಗಿದ್ದ. ಅವನು ಚಿಕ್ಕವನಾಗಿದ್ದಾಗ “ಹಳೆ ಪಾತ್ರೆ.. ಹಳೆ ಕಬ್ಬಿಣ…” ಎಂದು ಕೂಗುವಂತೆ. ಗಾಢವಾದ ನಿದ್ರೆಯಲ್ಲಿ … ಹಗಲುಗನಸೊಂದರಲ್ಲಿ…. ಈ ಎಲ್ಲಾ ಘಟನೆಗಳು ನಡೆದು ಹೋಗಿದ್ದವು!!!

ಇದಿನ್ನೂ 2022 ಎಂದು ನೆನಪಾಗಿ ನಗು ಬಂತು. ಇಂತಹ ವ್ಯವಸ್ಥೆ ಬೇಗ ಬರಬಹುದೇ ಎಂದುಕೊಂಡವನು, ‘ಛೇ, ಛೇ, ನಾನೇಕೆ ಹಾಗೆ ಯೋಚನೆ ಮಾಡಲಿ… ಅವರವರ ಕರ್ಮ ಅವರಿಗೆ..’ ಎಂದುಕೊಂಡ.

ಹೊರಗೆ ಅಮ್ಮ ಯಾರಿಗೋ ಬಯ್ಯುವಂತೆ ಸೊಸೆಗೆ ಶಾಪ ಹಾಕುತ್ತಿದ್ದರೆ, ಒಳಗೆ ಸೊಸೆ “ಯಾರ್ಯಾರಿಗೆ ಏನೋ ಬರುತ್ತದೆ ಇದಕ್ಕೇನು ದೊಡ್ಡ ರೋಗ ಬಂದು ನೆಗೆದು ಹೋಗುವುದಿಲ್ಲವೇ” ಎಂದು ಬೀದಿ ನಾಯಿಯನ್ನು ತೋರಿಸಿಕೊಂಡು ವಟಗುಟ್ಟುತ್ತಿದ್ದಳು. ಇದು ಪ್ರತಿದಿನದ ಸಮಾಚಾರವೇ ಆದರೂ ತನಗೆ ಭಾದಿಸುತ್ತಿದ್ದುದು ರಜೆಯ ದಿನಗಳಲ್ಲಿ ಮಾತ್ರ. ‘ಇದು ಮಾಮೂಲಿ ತಾನೇ.. ಇದು ಇನ್ನಷ್ಟು ಹೆಚ್ಚಾದರೆ, ಯಥಾಪ್ರಕಾರ ಸಂಜೆ ನೈಂಟಿಯ ಬದಲು ಒಂದು ಕ್ವಾರ್ಟರ್ ಹಾಕಿದರೆ ಆಯ್ತು…’ ಎಂದುಕೊಂಡು ನಗುತ್ತಾ ಮಗ್ಗುಲು ಬದಲಿಸಿದ ಅಂಶುಮಾಲಿ.