ಒಂದು ಶಾಂತ ಬಯಲಿನಲ್ಲಿ ಮರಗಳ ನೆರಳಲ್ಲಿ ಪ್ರತಿಷ್ಠಾಪಿಸಿದಂತಿದ್ದ ಆ ಪ್ರದೇಶ ಸೂಫಿ ಅನುಭಾವಕ್ಕೆ ನಮ್ಮನ್ನು ಬರಮಾಡಿಕೊಳ್ಳತೊಡಗಿತು. ಅದು ಹಾಸನದ ಮುಸ್ಲಿಮರ ಪಾಲಿಗೆ ವಿಶೇಷ ಸ್ಥಳ. ಅದೇ ಊರಿನವರಾಗಿದ್ದ ಹಝ್ರತ್ ಖಲಂದರ್ ಶಾ ವಲಿಯುಲ್ಲಾಹಿರವರು ಆಧ್ಯಾತ್ಮಿಕವಾಗಿ ಒಂದು ತಲೆಮಾರನ್ನೇ ಮುನ್ನಡೆಸಿದವರು. ಸೂಫಿ ನೆರಳಿನಂತೆ ಜನರ ಕಷ್ಟ ಕಾರ್ಪಣ್ಯಗಳಿಗೆ ಸಲಹೆ ಸೂಚನೆಗಳನ್ನು ಕೊಟ್ಟು ಅವರಿಗೆ ಮನಶ್ಶಾಂತಿಯನ್ನು ಕರುಣಿಸುತ್ತಿದ್ದವರು. ಅವರ ಶಾಂತ ಚಿತ್ತ ಮಾತುಗಳನ್ನು ಆಲಿಸಲು ಅವರ ಹರಸುವಿಕೆಯ ಅನುಗ್ರಹವನ್ನು ಸ್ವೀಕರಿಸಲು ದೇಶದ ನಾನಾ ಭಾಗಗಳಿಂದ ಜನರು ಬರುವುದುಂಟು. ನಾವು ಬಾಬರು ಕುಳಿತುಕೊಳ್ಳುತ್ತಿದ್ದ ಸ್ಥಳವನ್ನೂ ಅವರ ಬಳಸುತ್ತಿದ್ದ ಅನುಗ್ರಹೀತ ವಸ್ತುಗಳನ್ನು ನೋಡಿ ಕಣ್ತುಂಬಿಕೊಂಡು- ಅಲ್ಲಿ ಯಾತ್ರಾರ್ಥಿಗಳಿಗಾಗಿ ನೀಡುವ ಚಹಾವನ್ನು ಸವಿದೆವು.
ಮುನವ್ವರ್, ಜೋಗಿಬೆಟ್ಟು ಬರೆದ ಪ್ರವಾಸ ಕಥನ ನಿಮ್ಮ ಓದಿಗೆ
ಜೊತೆಯಾಗಿ ಆಡಿ ಕಲಿತು ಬೆಳೆದು ಗೆಳೆಯರ ಬಳಗದಲ್ಲಿ ನೂರು ಇನ್ನೂರು ಗೆಳೆಯರಿದ್ದರೂ ಉಪಕಾರ ಉಪದ್ರವಗಳಲ್ಲಿ ಜೊತೆಯಾಗಿದ್ದ ನಾವು ಐದು ಜನ ಸ್ನೇಹಿತರು ಸೇರಿ “ಎಲ್ಲಾದರೂ ಒಂದು ದಿನದ ಮಟ್ಟಿಗೆ ಪ್ರವಾಸ ಹೊರಡೋಣ” ಎಂದು ತೀರ್ಮಾನಿಸಿ ಎರಡು ವಾರಗಳಷ್ಟೇ ಕಳೆದಿದ್ದವು. ಇಬ್ಬರಿಗೆ ವ್ಯಾಪಾರದ ತಲೆ ಬಿಸಿ, ಒಬ್ಬರಿಗೆ ಅನಿವಾಸಿಯ ಸಹಜ ಸಂಕಟ, ಇನ್ನೊಬ್ಬನಿಗೆ ಸುದ್ದಿಗಳ ಭರಾಟೆ, ನನಗೆ ಲೆಕ್ಕದ ತಲೆ ನೋವು. ಎಲ್ಲವನ್ನೂ ಬಿಟ್ಟು ಒಂದು ದಿನ ಹಗುರವಾಗಲು ಎಲ್ಲಾದರೂ ಹೊರಡಲೇ ಬೇಕಿತ್ತು. ಸಂಕಟಗಳನ್ನು ಕಳೆಯಲು ಪ್ರವಾಸದಷ್ಟು ದೊಡ್ಡ ವರ ಜಗತ್ತಿಗೆ ದೇವನು ಕರುಣಿಸಿಲ್ಲವೇನೋ? ಶನಿವಾರ ಸಂಜೆ ಹೊರಟವರು ರಾತ್ರಿ ಹನ್ನೆರಡರ ಬಳಿ ಮುಳ್ಳುಗಳು ಠಿಕಾಣಿ ಹೂಡುವಷ್ಟರಲ್ಲಿ ನಾವು ತಿರುವಿನ ಮಂಜು ಹೊದ್ದ ಘಾಟಿ ಕಳೆದು ಜಾವಗಲ್ ತಲುಪಿಯಾಗಿತ್ತು.
ಜಾವಗಲ್ ದರ್ಗಾದ ಬಳಿ ರೂಂ ಹೋಗಿ ಕೇಳುವಾಗ ರೂಂ ಬಾಯ್ ಇನ್ನೂ ನಿದ್ದೆ ಕಣ್ಣಿನಲ್ಲಿದ್ದ. ಅವನನ್ನು ನಿದ್ದೆಯಿಂದ ಎಬ್ಬಿಸಿ ರೂಂ ಪಡೆಯುವಷ್ಟರಲ್ಲಿ ನಮಗೆ ಸಾಕು ಸಾಕಾಗಿ ಹೋಗಿತ್ತು. ಹೇಗೋ ಬರುವ ದಾರಿಯಲ್ಲಿ ಪತ್ರಕರ್ತ ಗೆಳೆಯ ಅಚಾನಕ್ಕಾಗಿ ಬರುವುದಿಲ್ಲವೆಂದು ಹೇಳಿ ಕೈಕೊಟ್ಟಿದ್ದ! ಇದ್ದ ನಾಲ್ಕು ಮಂದಿ ಒಂದೇ ರೂಮಿನಲ್ಲಿ ಅಡ್ಡಾದಿಡ್ಡಿಯಾಗಿ ಹಾಸ್ಟೆಲ್‌ನ ನೆನಪು ತಂದುಕೊಂಡು ಒಂದೇ ಬೆಡ್ಡಿನಲ್ಲಿ ಬಿದ್ದುಕೊಂಡೆವು.
ಬೆಳಗ್ಗೆದ್ದಾಗ ಸ್ಟೀಲು ಟ್ಯಾಪಿನಲ್ಲಿ ಹಬೆಯಾಡುತ್ತಾ ಬಿಸಿ ನೀರು ಬರತೊಡಗಿತ್ತು. ಮನಸೋ ಇಚ್ಛೆ ಸುರಿದುಕೊಂಡು ಚಕೌಟ್ ಮಾಡಿ ಜಾವಗಲ್ ಬಾಬ ಹಝ್ರತ್ ಖಲಂದರ್ ಶಾ ವಲಿಯುಲ್ಲಾಹಿಯವರ ದರ್ಗಾದ ಸನ್ನಿಧಾನಕ್ಕೆ ಪ್ರವೇಶಿಸಿದೆವು. ಒಂದು ಶಾಂತ ಬಯಲಿನಲ್ಲಿ ಮರಗಳ ನೆರಳಲ್ಲಿ ಪ್ರತಿಷ್ಠಾಪಿಸಿದಂತಿದ್ದ ಆ ಪ್ರದೇಶ ಸೂಫಿ ಅನುಭಾವಕ್ಕೆ ನಮ್ಮನ್ನು ಬರಮಾಡಿಕೊಳ್ಳತೊಡಗಿತು. ಅದು ಹಾಸನದ ಮುಸ್ಲಿಮರ ಪಾಲಿಗೆ ವಿಶೇಷ ಸ್ಥಳ. ಅದೇ ಊರಿನವರಾಗಿದ್ದ ಹಝ್ರತ್ ಖಲಂದರ್ ಶಾ ವಲಿಯುಲ್ಲಾಹಿರವರು ಆಧ್ಯಾತ್ಮಿಕವಾಗಿ ಒಂದು ತಲೆಮಾರನ್ನೇ ಮುನ್ನಡೆಸಿದವರು. ಸೂಫಿ ನೆರಳಿನಂತೆ ಜನರ ಕಷ್ಟ ಕಾರ್ಪಣ್ಯಗಳಿಗೆ ಸಲಹೆ ಸೂಚನೆಗಳನ್ನು ಕೊಟ್ಟು ಅವರಿಗೆ ಮನಶ್ಶಾಂತಿಯನ್ನು ಕರುಣಿಸುತ್ತಿದ್ದವರು. ಅವರ ಶಾಂತ ಚಿತ್ತ ಮಾತುಗಳನ್ನು ಆಲಿಸಲು ಅವರ ಹರಸುವಿಕೆಯ ಅನುಗ್ರಹವನ್ನು ಸ್ವೀಕರಿಸಲು ದೇಶದ ನಾನಾ ಭಾಗಗಳಿಂದ ಜನರು ಬರುವುದುಂಟು. ನಾವು ಬಾಬರು ಕುಳಿತುಕೊಳ್ಳುತ್ತಿದ್ದ ಸ್ಥಳವನ್ನೂ ಅವರ ಬಳಸುತ್ತಿದ್ದ ಅನುಗ್ರಹೀತ ವಸ್ತುಗಳನ್ನು ನೋಡಿ ಕಣ್ತುಂಬಿಕೊಂಡು- ಅಲ್ಲಿ ಯಾತ್ರಾರ್ಥಿಗಳಿಗಾಗಿ ನೀಡುವ ಚಹಾವನ್ನು ಸವಿದೆವು. ಅಲ್ಲಿದ್ದ ಪ್ರತಿಯೊಬ್ಬರು ಸ್ವಚ್ಛತೆಗೆ ಆದ್ಯತೆಕೊಡುವಂತೆ ಆಗಾಗ ಪೊರಕೆ ಹಿಡಿದು ಆ ವಿಶಾಲ ಬಯಲನ್ನು ಗುಡಿಸುತ್ತಲೇ ಇದ್ದರು. ಅದೊಂದು ರೀತಿಯ ಹರಕೆ. ತಿಂಗಳು ಗಟ್ಟಲೆ ಯಾವುದಾದರೊಂದು ಉದ್ದೇಶವಿಟ್ಟು ಜನರು ಅಲ್ಲಿ ಬಂದು ಪ್ರತಿಫಲಪೇಕ್ಷಿಸದೆ ಕುಳಿತು ಬಾಬರಿಂದ ಪರಿಹಾರ ಪಡೆದುಕೊಳ್ಳುವುದು ವಾಡಿಕೆ. ತಿಂಗಳುಗಳ ಕಾಲ ಅಲ್ಲಿದ್ದವರು ಯಾವುದಾದರೊಂದು ಗಳಿಗೆಯಲ್ಲಿ ಪವಾಡ ಗತಿಸಿ ಸಮಸ್ಯೆಗೆ ಪರಿಹಾರ ಸಿಕ್ಕಿ ಹಿಂತಿರುಗಿ ಹೋಗುವುದಿದೆ. ನಾವು ದರ್ಗಾ ಪ್ರವೇಶಿಸುವಾಗ ನಾವೇ ಅರಿಯದ ಆಹ್ಲಾದವೊಂದು ನಮ್ಮೊಳಗೆ ಮನೆ ಮಾಡಿತು. ಬಾಬರ ಬದುಕಿನ ದಿನದಲ್ಲೇ ಇದ್ದಂತಹ ಒಂದು ಗಂಭೀರ ಶಾಂತತೆ ಅಲ್ಲಿ ನೆಲೆಸಿತ್ತು. ನಾವು ಶಾಂತ ಚಿತ್ತರಾಗಿ ದುಆ ನಡೆಸಿ ಹೊರಡುವಷ್ಟರಲ್ಲಿ ಇಬ್ಬರು ಸ್ಥಳೀಯ ಯುವಕರು ಬಾಬರ ಹೆಸರಿನಲ್ಲಿ ಉರ್ದು ಶಾಯರಿ ಹಾಡಲಾರಂಭಿಸಿದ್ದರು. ಅವರ ಕೊರಳಿಗೆ ಮನಸೋತು ನಮಗೆ ತಕ್ಷಣಕ್ಕೆ ನೆನಪಿಡಬಹುದಾದ ಪಲ್ಲವಿಗಳನ್ನು ನೆನಪಿಸಿಕೊಂಡು ಜೊತೆಗೂಡಿ ಹಾಡಿದೆವು.
“ಸರಕಾರ್ ಕಿ ಕದ್ ಮೊ ಮೇ ಜಗಾ ಮಾಂಗ್ ರಹೇ ಹೈ” ಸುಶ್ರಾವ್ಯ ಹಾಡಿನ ಸಾಲುಗಳು ಕಿವಿಯಲ್ಲೀಗಲೂ ಅನುರಣಿಸುತ್ತಲೇ ಇದೆ. ಅಲ್ಲಿಂದ ವಿದಾಯ ಹೇಳಿ ಬೆಳಗಿನ ಉಪಹಾರ ಮುಗಿಸಿ ನಾವು ಹೊರಟಿದ್ದು ಮುಳ್ಳಯ್ಯನ ಗಿರಿ ಬೆಟ್ಟಕ್ಕೆ.
ಕರ್ನಾಟಕದ ಅತ್ಯಂತ ಎತ್ತರದ ಪರ್ವತವಿದು. ಸಮುದ್ರ ಮಟ್ಟದಿಂದ ಸುಮಾರು ಸಾವಿರದ ಮುನ್ನೂರು ಚಿಲ್ಲರೆ ಅಡಿ ಎತ್ತರದಲ್ಲಿದ್ದ ಆ ಬೃಹತ್ ಮಂಜು ಹೊದ್ದು ಮಲಗಿರುವ ಬೆಟ್ಟ ನೋಡಿದಾಗಲೇ ನಾವು ಅಪರಿಮಿತ ಆನಂದದಲ್ಲಿದ್ದೆವು. ಆದಿತ್ಯವಾರವಾದ್ದರಿಂದ ವಿಪರೀತ ಟ್ರಾಫಿಕ್. ಹನುಮಂತನ ಬಾಲದಂತೆ ನಿಂತಲ್ಲಿಂದ ಹಂದಾಡಲಾಗದೆ ಪ್ಲಾಸ್ಟಿಕ್ ಚೆಕ್ ಅಪ್ ಗಾಗಿ ಸುಮಾರು ಹೊತ್ತು ಕಾಯಬೇಕಾಗಿ ಬಂತು. ಅಷ್ಟು ಹೊತ್ತು ಕಾದರೆ ಬಿಸಿಲೇರಿ ಎಲ್ಲಿ ಮಂಜನ್ನು ಆಸ್ವಾದಿಸುವ ಅವಕಾಶ ಕಳೆದುಕೊಳ್ಳುತ್ತೇವೇನೋ? ಎಂಬ ಆಶಂಕೆ ನಮ್ಮನ್ನು ಕಾಡದಿರಲಿಲ್ಲ. ಸುಮಾರು ಹೊತ್ತಿನ ಕಾಯುವಿಕೆಯ ನಂತರ ಮುಳ್ಳಯ್ಯನ ಗಿರಿ ಹೋಗುವ ದಾರಿ ಸಲೀಸಾಗಿ ತೆರೆದುಕೊಂಡಾಗ ನಮಗೆ ಎಲ್ಲಿಲ್ಲದ ಖುಷಿ. ಬೆಟ್ಟ ಇನ್ನಷ್ಟು ಹತ್ತಿರವಾಗತೊಡಗಿತು. ಆದರೆ ಕಿಕ್ಕಿರಿದ ವಾಹನಗಳು. ಹೇಗೋ ಕಷ್ಟಪಟ್ಟು ತೆವಳಿ ತೆವಳಿ ಸಾಗಿ ಯಶಸ್ವಿಯಾಗಿ ಕಾರನ್ನು ಪಾರ್ಕ್ ಮಾಡಿದೆವು. ಅಷ್ಟಾದಾಗ ನಮ್ಮನ್ನು ಇನ್ನಷ್ಟು ಎತ್ತರಕ್ಕೆ ಕರೆದುಕೊಂಡು ಹೋಗುವ ಜೀಪ್‌ಳಿಗೆ ಪೋಲಿಸರು ನಿರ್ಬಂಧ ಹೇರಿಬಿಟ್ಟಿದ್ದರು. ಯಾರೋ ಒಬ್ಬ ಅಜಾಗರೂಕ ಡ್ರೈವಿಂಗ್ ನಡೆಸುತ್ತಿದ್ದುದರಿಂದ ಈ ಕ್ರಮ ಕೈಗೊಂಡಿದ್ದರು. ಈ ನಿಟ್ಟಿನಲ್ಲಿ ಹೆಚ್ಚು ನಷ್ಟ ಅನುಭವಿಸಿದವರು ನಾವೇ. ಹೇಗೂ ಹತ್ತಲೇ ಬೇಕಿತ್ತು. ಸುಮಾರು ಆರು ಕಿಮೀಟರ್ ಆದರೂ ನಡೆಯುವ ಛಲಕ್ಕೆ ಬಿದ್ದೆವು. ನಮ್ಮ ನಡಿಗೆ ಪ್ರಾರಂಭವಾಯಿತು. ಒಂದಾದ ಮೇಲೊಂದು ತಿರುವುಗಳ ಮೇಲೆ ತಿರುವು ದಾಟಿ ನಾವು ಮೇಲೇರುತ್ತಲೇ ಹೋದೆವು. ಇನ್ನೆಷ್ಟಿದೆಯೆಂದು ಯಾರಲ್ಲಿ ಕೇಳಿದರೂ ಅವರು ಇರುವುದಕ್ಕಿಂತ ಒಂದೆರಡು ಕೀ.ಮೀ ಹೆಚ್ಚೇ ಹೇಳಿ ನಮ್ಮನ್ನು ದಿಗಿಲಿಕ್ಕಿಸುತ್ತಿದ್ದರು.
ಕೊನೆಗೂ ನಾವು ಕೊನೆಯ ಹೋರಾಟಕ್ಕೆ ತಯಾರಾದೆವು. ಈಗ ಮೆಟ್ಟಿಲುಗಳು ಹತ್ತಬೇಕಿತ್ತು. ಅಷ್ಟರಲ್ಲೇ ವಿಪರೀತ ಮಂಜು ಮಳೆ. ಇಡೀ ವಾತಾವರಣ ತಂಪೇರಿ ವಿಪರೀತ ಗಾಳಿ ಮಳೆಗೆ ನಮ್ಮನ್ನು ಅಪಾಯಕಾರಿಯಾಗಿ ಹೊಯ್ದಾಡಿಸುತ್ತಿತ್ತು. ನಮ್ಮ ಜೊತೆಗಿದ್ದ ಗೆಳೆಯರೊಬ್ಬರಿಗೆ ಸಾಕೋ ಸಾಕೆನಿಸಿ, “ನಾನಿನ್ನು ನಿಮ್ಮ ಜೊತೆ ಬರುವುದೇ ಇಲ್ಲ” ಎಂದು ಹಠ ಹಿಡಿದು ಅರ್ಧ ಎತ್ತರಕ್ಕೆ ಕುಳಿತುಕೊಂಡು ಬಿಟ್ಟಿದ್ದರು. ಹೇಗೋ ಅವರನ್ನು ಪುಸಲಾಯಿಸಿ ಕರೆದುಕೊಂಡು ನಾವು ಗುರಿ ಮುಟ್ಟಿದೆವು. ಬೀಸುವ ಗಾಳಿಯೊಂದಿಗೆ ಹೊಯ್ಯುತ್ತಿದ್ದ ಮಳೆ, ಮಂಜೋ- ಮಳೆಯೋ ಎಂಬ ಸೂಚನೆಯನ್ನೇ ಕೊಡದಂತೆ ನಮ್ಮನ್ನು ತೋಯಿಸುತ್ತಲೇ ಇತ್ತು. ಸುತ್ತಲ ವಿಹಂಗಮ ನೋಟ ನಮ್ಮನ್ನು ಪರವಶತೆಗೆ ಒಯ್ಯುತ್ತಿದ್ದವು. ಅದ್ಭುತ ಕಾಣ್ಕೆಯನ್ನು ನೀಡಿದ ಮುಳ್ಳಯ್ಯನಗಿರಿ ಶಿಖಿರಕ್ಕೆ ನಾವು ಧನ್ಯರಾಗಿದ್ದೆವು. ಹೊಟ್ಟೆ ಚುರುಗುಡುತ್ತಿರುವುದು ನೆನಪಾದಾಗ ನಾವು ಘೀಳಿಡುವ ಗಾಳಿಯನ್ನು ಸೀಳಿಕೊಂಡು ಖುಷಿ ಖುಷಿಯಿಂದಲೇ ಕೆಳಗಿಳಿಯುತ್ತಾ ಬಂದೆವು.

ಊರು ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ಜೋಗಿಬೆಟ್ಟು. . “ಮೊಗ್ಗು” ಇವರ ಪ್ರಕಟಿತ ಕವನ ಸಂಕಲನ. ಪರಿಸರ, ವಿಜ್ಞಾನ, ಪ್ರಾಣಿ ಪ್ರಪಂಚದ ಬಗ್ಗೆ ಕಾಳಜಿ ಮತ್ತು ಆಸಕ್ತಿ. ಬೆಂಗಳೂರಲ್ಲಿ ಉದ್ಯೋಗ. ಇತ್ತೀಚೆಗಷ್ಟೇ “ಇಶ್ಕಿನ ಒರತೆಗಳು” ಎಂಬ ಎರಡನೇ ಕವನಸಂಕಲನ ಲೋಕಾರ್ಪಣೆಗೊಂಡಿದೆ..
ಓದುವ ಖುಷಿ ಕೊಟ್ಟ ಪ್ರವಾಸ ಅನುಭವ.