ಅವರ ಜೀವನ ಪ್ರೀತಿ ಬಲು ಹಿತವಾಗಿತ್ತು. ಮನೆತುಂಬ ಮಕ್ಕಳಿದ್ದಾಗ ತರಾವರಿ ಅಡುಗೆ ಮಾಡುತ್ತಿದ್ದರು. ಕೊನೆಗೆ ತಾವಿಬ್ಬರೇ ಇರುವಾಗಲೂ ಯಾವೊಂದು ತಿಂಡಿಯನ್ನೂ ಬಿಡದೆ ಮಾಡುತ್ತಿದ್ದರು. ಇಡ್ಲಿ, ದೋಸೆ, ಕಡುಬು, ಒಬ್ಬಟ್ಟು ಊಹೂ ಯಾವುದೂ ಬಿಡುತ್ತಿರಲಿಲ್ಲ. ಸೋಮಾರಿತನ ಇವರನ್ನು ಕದ್ದು ನೋಡಲೂ ಹೆದರಿ ಓಡುತ್ತಿತ್ತು. ಕೊನೆಗೆ ಮಾಮ ಹೋದ ಮೇಲೆ ಸುಮಾರು ವರ್ಷಗಳು ಒಬ್ಬರೇ ಇದ್ದಾಗಲೂ ಅದೇ ಆಹಾರ ಪದ್ಧತಿಯಿತ್ತು. ತಾವೊಬ್ಬರೇ ತಿನ್ನದೆ ಅಕ್ಕಪಕ್ಕದವರಿಗೆ, ಹತ್ತಿರದ ಬಡಮಕ್ಕಳಿಗೆ, ಕೂಲಿ ಕೆಲಸದವರಿಗೆ ಕೊಟ್ಟು ತಿನ್ನುತ್ತಿದ್ದರು. ಹೇಗೇಗೋ ಬದುಕದೆ ಬದುಕಿಗಾಗಿಯೇ ಬದುಕು ನಡೆಸುವ ಜೀವ. ಆಧ್ಯಾತ್ಮದಲ್ಲಿಯೂ ಆಸಕ್ತಿ.
ಸುಮಾ ಸತೀಶ್ “ರಂಗಿನ ರಾಟೆ” ಸರಣಿ ಬರಹ
‘ಏ ಬಿಡಿಬಿಡಿ ನನ್ನ ಸೊಸೆಮುದ್ದು ಬಲು ಬುದ್ಧಿಮಂಕೆ ಕಣ್ರಮ್ಮಾ’ ಅಂತ ಅತ್ತೆ ಹೇಳ್ತಿದ್ರೆ ಕೋಡು ಬಂದಂತಾಗಿ ಕಣ್ಣು ಮಿರಿಮಿರಿ ಮಿಂಚುತ್ತಿದ್ದರೆ, ಅಕ್ಕಪಕ್ಕ ಕುಂತವರು ಕಿಸಿಕಿಸಿ ನಕ್ಕಾಗ ಎಲ್ಲೋ ಯಡವಟ್ಟಾಗಿದೆ ಅಂತ ವಸಿ ಅನುಮಾನ ಬಂದು, ಇನ್ನೊಂದು ದಪ ಅತ್ತೆ ಮಾತು ಮೆಲುಕು ಹಾಕ್ತಿದ್ದಂಗೆ ಟಣ್ಣಂತ ಕೇಳ್ತಿದ್ದ ಪದ ‘ಬುದ್ಧಿಮಂತೆ ಅಲ್ಲ ಅದು ಬುದ್ಧಿಮಂಕೆ’ ಅಂತ. ಈ ರೀತಿ ಪದಗಳನ್ನು ಜಾಣ್ಮೆಯಿಂದ ಬಳಸುವಲ್ಲಿ ನನ್ನ ಸೋದರತ್ತೆಯಂದಿರು ಬಲು ಚುರುಕು. ಮುಖ ಧುಮ್ಮಿಸಿಕೊಂಡು ತೊಡೆ ಬಿಟ್ಟು ದೂರ ಜಿಗಿದೆ. ತಕ್ಷಣ ತಲೆ ಮೇಲೆ ಒಂದು ಮೊಟಕಿ, ಬುದ್ಧಿಮಂಕಾಗದಿದ್ರೆ ಕುಕ್ಕರ್ ತಳಕ್ಕೆ ನೀರು ಹಾಕದೆ ಅನ್ನಕ್ಕೆ ಇಡ್ತಾರೇನೇ? ಅಂದಳು. ‘ಹೋಗತ್ತೆ, ಪಾಪ ಮಾಮ ಹಸ್ಕೊಂಡು ಹೋಗ್ತಾರೆ ಅಂತ ಅನ್ನಕ್ಕಿಟ್ರೆ ಆಡಿಕೊಂತೀಯಾ, ಮಾತಾಡಬೇಡ ನೀನು’ ಅಂದು ಧುಸುಮುಸು ಮಾಡಿದೆ.
ನಾನಾಗ ಐದೋ ಆರೋ ಕ್ಲಾಸಿನಲ್ಲಿದ್ದೆ. ಅಮ್ಮ ಬೇರೆ ಊರಲ್ಲಿರಲಿಲ್ಲ. ನಾನು ಪಕ್ಕದ ಭಾರತಮ್ಮಕ್ಕನ ಮನೇಲಿ ಊಟ ತಿಂಡಿ ತಿಂತಿದ್ದೆ. ಪಾಪ ಮಾಮ ಊರಿಂದ ಬಂದ್ರಲ್ಲ ಅಂತ ಅನ್ನಕ್ಕೆ ಇಡೋ ಪ್ರಯತ್ನ ಮಾಡ್ದೆ. ನಂಗೋ ಏನೂ ಗೊತ್ತಿಲ್ಲ. ಇನ್ನು ಭಾರತಮ್ಮಕ್ಕನ್ ಮನೇಲಿ ಕುಕ್ಕರ್ ಇರಲಿಲ್ಲ. ಅವರಿಗೂ ಗೊತ್ತಿಲ್ಲ. ಪಾಪ ಮಾಮ ಹಸ್ಕಂಡೇ ಹೋದರೂ ಊರಲ್ಲೆಲ್ಲ ನನ್ನ ಸೊಸೆ ಮುದ್ದು ಚೋಟುದ್ದ ಇದಾಳೆ, ಅನ್ನಕ್ಕೆ ಇಟ್ಟಿದ್ಲು ಅಂತ ಮಾತ್ರ ಸಾರ್ಕೋಂಡು ಬಂದಿದ್ರು. ಈ ಅತ್ತೆ ಮಾತ್ರ ಹೀಗೇ ಕೊಂಕು ಮಾತಿನಲ್ಲಿ ಕಾಲೆಳೆಯುತ್ತಿದ್ಲು.
ನಾಕೇ ಅಡಿ ಉದ್ದ ಇದ್ದ ನನ್ನ ದೊಡ್ಡತ್ತೆ ಲಂಬೂ ಲಡಾಕ್ ತರ ಇದ್ದ ನನ್ನ ಕೊಂಕುಳಲ್ಲಿ ಹಾಕಿಕೊಂಡು ತಿರುಗುತ್ತಿದ್ದರೆ ನನ್ನ ಕಾಲು ನೆಲಕ್ಕೆ ಸವರುತ್ತಿತ್ತು. ನೋಡಿದೋರೆಲ್ಲ ‘ಪಾಪ ಎಳೆ ಮಗೀ. ಕಾಲು ಮಾತ್ರ ಸೊಂಟದ ಮ್ಯಾಗಿಲ್ಲ. ನೆಲದ ತಾವೈತೆ’. ಅಂತ ಆಡಿಕೊಂಡು ನಗುತ್ತಿದ್ದರೂ ಕಿವಿಗೆ ಹಾಕಿಕೊಳ್ಳದೆ ನನ್ನ ಎತ್ತಿಕೊಂಡು ಎಳೆದಾಡ್ಕೊಂಡೇ ಓಡಾಡುತ್ತಿದ್ದರು.
ಮಕ್ಕಳನ್ನು ಹೊರದೆಯೇ, ಹೆರದೆಯೇ, ಬಾಳಿನುದ್ದಕ್ಕೂ ಸಾಕಿದ ಮಕ್ಕಳ ಒಡನಾಟವನ್ನೇ ಹಾಸಿ ಹೊದ್ದವರು. ನೂರಾರು ಮಕ್ಕಳ ಪಾಲಿಗೆ ವಿದ್ಯೆ, ಬುದ್ಧಿ, ಸಂಸ್ಕಾರ ಧಾರೆಯೆರೆದ ಮಹಾಮಾತೆ.
ಸುಂದರಮ್ಮ ಹಿರಿಯರ ಪಾಲಿಗೆ, ಓರಗೆಯವರ ಪಾಲಿಗೆ ಸುಂದರ, ಆದರೆ ಊರಿನೆಲ್ಲರ ಪಾಲಿಗೆ ಸುಂದರಮ್ಮ. ಅತ್ತೆ, ದೊಡ್ಡಮ್ಮ, ಚಿಕ್ಕಮ್ಮ, ಅಜ್ಜಿ, ಅಕ್ಕ ಹೀಗೆ ಸಂಬಂಧಗಳ ಬಳಸಿನಲ್ಲಿ ಅರಳಿ ನಿಂತರು. ಅಪ್ಪ ಅಮ್ಮನ ಪಾಲಿಗೆ ವಾತ್ಸಲ್ಯದ ಧಾರೆ ಹರಿಸಿದ ದೊಡ್ಡ ಮಗಳು. ಎಂಟು ಜನ ಅಕ್ಕ ತಂಗಿಯರು ಹಾಗೂ ಒಬ್ಬನೇ ತಮ್ಮ ಇರುವ ದೊಡ್ಡ ಕುಟುಂಬದ ಹಿರಿಯಳಾಗಿ ಯಜಮಾನಿಕೆ ಹುಟ್ಟಿನಿಂದಲೇ ಒಲಿದಿತ್ತು.
ಹತ್ತನೆಯ ವಯಸ್ಸಿಗೇ ಮದುವೆಯಾದರೂ ದೊಡ್ಡವಳಾಗುವವರೆಗೆ ಅಂದರೆ ಹದಿನಾರರವರೆಗೆ ತವರಿನಲ್ಲಿಯೇ ಇದ್ದು ವ್ಯಾಪಾರ ವ್ಯವಹಾರದಲ್ಲಿ ಅಪ್ಪ ಅಮ್ಮನಿಗೆ ಹೆಗಲಾಗಿ ನಿಂತವಳು ಈ ಮಗಳು. ಚಿಲ್ಲರೆ ಅಂಗಡಿಯಲ್ಲಿ ಸಾಮಾನು ಪೊಟ್ಟಣ ಕಟ್ಟೋದು, ಅಪ್ಪ ಸಾಮಾನು ತರಲು ಹೋದರೆ ಅಂಗಡಿ ನೋಡಿಕೊಳ್ಳೋದು, ಜನರು ಕೇಳುತ್ತಿದ್ದ ಹುರಿಗಾಳು ತಾನೇ ಮಾಡಿ ಅಂಗಡಿಯಲ್ಲಿ ದೊಡ್ಡ ಡಬ್ಬಿಯಲ್ಲಿ ತುಂಬಿಡುವುದು ಇದೆಲ್ಲ ಎಡಗೈ ಕೆಲಸವಾಗಿತ್ತು. ಒಂಬತ್ತು ಮಕ್ಕಳ ತಾಯಿಯಾದ ನಮ್ಮಜ್ಜಿ ಮಡಿಲ ತುಂಬ ಮಕ್ಕಳ ಹೊತ್ತು ಸೋತು ಸುಣ್ಣವಾಗಿದ್ದರು. ಮನೆಯ ಕೆಲಸವನ್ನೂ ನಿಸೂರಾಗಿ ಮಾಡುತ್ತಾ, ತಂಗಿಯರಿಗೂ ಕೆಲಸ ಬೊಗಸೆ ಕಲಿಸುತ್ತಿದ್ದಳು.
ಇತ್ತೀಚೆಗೆ ಅಂದರೆ ಐದಾರು ವರ್ಷಗಳ ಹಿಂದೆ ತನ್ನ ತೊಂಬತ್ತೆರಡರ ವಯಸ್ಸಿನಲ್ಲಿ ಭವಬಂಧನ ಕಳಚಿಕೊಂಡವಳು. ಹತ್ತಿರತ್ತಿರ ಒಂದು ಶತಮಾನದ ಹಿಂದೆ ಮೂರುಜನ ಅಣ್ಣತಮ್ಮಂದಿರ ಕೂಡು ಕುಟುಂಬದಲ್ಲಿ ಜನಿಸಿದಾಕೆ. ಅಪ್ಪ ಅಂದರೆ ನಮ್ಮ ತಾತ ಬಲು ಮೆತುವು. ಮನೆಯ ಕಾರುಬಾರು ದೊಡ್ಡತಾತನದು. ಅವರಿಗೆ ಸಾಲಾಗಿ ಗಂಡು ಮಕ್ಕಳು. ನಮ್ಮ ತಾತನಿಗೆ ಸಾಲಾಗಿ ಹೆಣ್ಣುಮಕ್ಕಳು. ಅವರನ್ನು ಶಾಲೆಗೆ ಕಳಿಸಿದರೆ ಸ್ಲೇಟು ಬಳಪಕ್ಕೆ ದುಡ್ಡು ದಂಡ ಎಂಬ ಭಾವ. ಆದರೆ ದೊಡ್ಡಪ್ಪನ ಮಗ ನಾಗೇಶ ಶಾಲೆಗೆ ಹೋಗಲು ಒಂದೇ ಹಠ. ವಾರಿಗೆಯ ಸುಂದರ ಮಾತ್ರ ಮನೆಯಲ್ಲಿ ಆರಾಮಾಗಿರುವಾಗ ತಾನು ಮಾತ್ರ ಶಾಲೆಗೆ ಹೋಗಿ ಮೇಷ್ಟ್ರ ಹತ್ರ ಒದೆ ತಿನ್ನೋದು ಯಾವ ಸೀಮೆ ನ್ಯಾಯ ಅಂತ ಒಂದೇ ಗಲಾಟೆ ಮಾಡ್ತಿದ್ದ. ಸುಂದರ ಬಂದರೇನೇ ತಾನು ಶಾಲೆಗೆ ಹೋಗೋದು ಅಂತ. ಅಂತೂ ಅವನ ದೆಸೆಯಿಂದ ನಮ್ಮತ್ತೆ ಶಾಲೆಗೆ ಹೋದರು. ಅವನು ಸ್ಲೇಟು ಬಳಪ ಇವರ ಕೈಯಲ್ಲಿ ಕೊಟ್ಟು ತಾನು ಗೆಳೆಯರೊಡನೆ ಆಡಲು ಹೋಗುತ್ತಿದ್ದ. ಮೂರನೆ ತರಗತಿಯವರೆಗೆ ಕಲಿತು ಅದನ್ನು ಚೆನ್ನಾಗಿ ರೂಢಿಸಿಕೊಂಡರು. ಸಂಪ್ರದಾಯದ ಹಾಡುಗಳನ್ನು ಬರೆದಿಟ್ಟುಕೊಳ್ಳುವುದು, ಹಾಡುವುದು, ಪುರಾಣ ಪುಣ್ಯಕತೆಗಳನ್ನು ಓದುವುದು, ಅಪ್ಪನ ಚಿಲ್ಲರೆ ಅಂಗಡಿಯಲ್ಲಿ ಲೆಕ್ಕ ಬರೆಯುವುದು ಎಲ್ಲದರಲ್ಲೂ ಮುಂದಾಳತ್ವವೇ.
ಮಧುಗಿರಿ ತಾಲೂಕಿನ ಚಿಕ್ಕಮಾಲೂರಿನ ಈ ಹಿರಿಮಗಳು ಗೌರಿಬಿದನೂರು ತಾಲ್ಲೂಕಿನ ಇಡಗೂರಿಗೆ ಸೊಸೆಯಾಗಿ ಹೋದಳು. ಅಲ್ಲಿ ಅತ್ತೆ ಇಲ್ಲದ ಮನೆಯಾದರೂ ಮಾವ ಮತ್ತು ಮಾವನ ವಿಧವೆ ಅಕ್ಕ ಇದ್ದಳು. ಆಕೆಯ ಮಡಿಹುಡಿ ಒಂದು ಬಿಟ್ಟರೆ ಒಳ್ಳೆಯ ಹೆಣ್ಣುಮಗಳೆ. ಅತ್ತೆಂಬೋ ಕಾಟವಿಲ್ಲ, ಗೋಳೆಂಬೋ ಗೂಟವಿಲ್ಲ. ಮನ್ಯಾಗೆ ಸಂಪತ್ತು ಅಂಬೋದು ಸೂರೆ ಹೋಗದಿದ್ರೂ, ಮೂರು ಹೊತ್ತಿಗೆ ತತ್ವಾರ ಇಲ್ಲದೆ, ಮನೇಗೆ ಬರೋ ಹೋಗೋ ದಂಡನ್ನೂ ಬಲು ಪ್ರೀತಿಯಿಂದ ನೋಡ್ಕೊಳ್ಳೊ ಜೀವ.
ಅವಳಿಗೆ ಮಕ್ಕಳಾಗಲಿಲ್ಲ. ಆದ್ರೆ ಯಾರಂದ್ರೆ ಯಾರೂ ಏನೂ ಅನ್ನಲಿಲ್ಲ. ನಮ್ಮ ಮಾಮ ದೇವ್ರ ತರ ಇದ್ದರು. ಇಬ್ಬರ ಸೇವೆ ಆ ಎರಡೂ ದೊಡ್ಡ ಕುಟುಂಬಗಳನ್ನು ಆತುಕೊಂಡಿದ್ದು ದಿಟವೇ. ಹುಟ್ಟಿದ ಮನೆ, ಮೆಟ್ಟಿದ ಮನೆ ಎರಡೂ ಒಂದೇ ಅಂತ ನಿರ್ವ್ಯಾಜವಾಗಿ ಪ್ರೀತಿಸಿ, ಬದುಕಿರೋ ಗಂಟ ಮೂಗೆತ್ತಿನಂಗೆ ಗಾಣ ಸುತ್ತಿದಳು.
ತಾಯಿಗೇ ತಾಯಾಗಿ ನಿಂತು: ತನಗೆ ಮಕ್ಕಳಾಗದಿದ್ರೂ, ತಾಯಿಗೆ ಹೆರಿಗೆ ಮಾಡಿಸಿ, ಬಾಣಂತನಕ್ಕೂ ಕೈಜೋಡಿಸಿದಳು. ಸಾಲು ಸಾಲು ಮಕ್ಕಳ ಮದುವೆ ಮಾಡಲು ಅಪ್ಪ ಅಮ್ಮ ಹೈರಾಣಾದಾಗ, ಒಂದು ಪತ್ರ ಹಾಕಿದ್ರೆ ಸಾಕು, ಆಗಿನ ಕಾಲದಲ್ಲಿ ಐದು ರೂಪಾಯಿ ಕೊಟ್ಟು ಗಾಡಿ ಕಟ್ಟಿಸಿಕೊಂಡು ತಂಗೀರ ವಧು ಪರೀಕ್ಷೆಗೇ ಹಾಜರಾಗ್ತಿದ್ದಳು. ಮಾತುಕತೆಗೂ ಮುಂದು. ಬಾಯಿಲ್ಲದ ಅಪ್ಪನ ಬಾಯಾಗಿ, ತಂಗಿಯರ ಮದುವೆಗಾಗಿ ದೊಡ್ಡಪ್ಪನೊಂದಿಗೆ ನಾಜೂಕಾಗಿ ಮಾತಾಡಿ ಕುದುರಿಸುವ ತಾಕತ್ತು ಇತ್ತು. ಮದುವೆ ಕೆಲಸಕ್ಕೂ ಸೆರಗು ಬಿಗಿದು ನಿಂತರೆ ಅಪ್ಪ ಅಮ್ಮ ತಲೇನೇ ಕೆಡಿಸಿಕೊಳ್ಳುತ್ತಿರಲಿಲ್ಲ. ಗಂಡು ಮಗುವಿನ ಗತ್ತು ಗೈರತ್ತು. ಅಲ್ಲಿಗೇ ಮುಗೀಲಿಲ್ಲ. ತಂಗೀರ ಬಸಿರು, ಬಾಣಂತನಕ್ಕೂ ತನ್ನದೇ ಮಡಿಲು ನೀಡುತ್ತಿದ್ದಳು. ಮಕ್ಕಳು ಸ್ವಲ್ಪ ಅಮ್ಮನ ಕೈಬಿಡುವವರೆಗೂ ಅಷ್ಟೇ ಅವರ ಬಳಿ. ಅವರನ್ನೆಲ್ಲ ಕರೆದೊಯ್ದು ಶಾಲೆಗೆ ಹಾಕಿ, ದೊಡ್ಡವರಾದ ಮೇಲೆ ಕಳಿಸುತ್ತಿದ್ದುದು. ಯಾವಾಗಲೂ ಮನೆ ತುಂಬಾ ಮಕ್ಕಳೇ. ಕಚ್ಚೆ ಬಿಗಿದು ದುಡಿತ. ಎಲ್ಲರನ್ನೂ ಎಲ್ ಎಸ್ ಓದಿಸುತ್ತಿದ್ದಳು. ಇಷ್ಟೇ ಅಲ್ಲ, ಸುತ್ತ ಮುತ್ತ ಹಳ್ಳಿಗಳಲ್ಲಿದ್ದ ಬಂಧುಗಳು ಅಂದ್ರೆ ಅವಳ ದೊಡ್ಡಪ್ಪ, ಚಿಕ್ಕಪ್ಪ, ಸೋದರಮಾವ ಯಾರ ಮನೇಲೇ ಮದುವೆ ಮುಂಜಿ ಆದ್ರೂ ಮೊದಲ ಕರೆ ಸುಂದ್ರಮ್ಮನಿಗೇ. ಅವಳೊಬ್ಬಳಿದ್ರೆ ಎಲ್ಲ ಸಲೀಸು ಅನ್ನೋ ನಂಬಿಕೆ.
ಗುರುಕುಲ: ಶಿಸ್ತಿನ ಸಿಪಾಯಿ ಅತ್ತೆ ಓದಿದ್ದು ಮೂರೇ ಕ್ಲಾಸು. ಆದ್ರೂ ಸಾಮಾನ್ಯ ಜ್ಞಾನ ಬಲು ಜಾಸ್ತಿ. ಮಕ್ಕಳಿಗೆ ತಾನೇ ಪಾಠ ಹೇಳಿಕೊಡುತ್ತಿದ್ದಳು. ಪ್ರೀತಿ ತೋರ್ಸೋಕೂ ಸೈ, ಬೈದು ವಿದ್ಯೆ ಕಲಿಸೋಕೂ ಜೈ. ಉಕ್ತ ಲೇಖನ ಕೊಡೋದು, ಲೆಕ್ಕ ಹೇಳಿಕೊಡೋದು, ಸರಿಯಾಗಿ ಮಾಡದಿದ್ರೆ ಒದೆಗಿಂತ ಮಾತಿನ ಗದೆ ಬೀಸಿಯೇ ಕಟ್ಟುನಿಟ್ಟಿನ ಹಿಡಿತದಲ್ಲಿಟ್ಟಿದ್ದು ಜಾದೂನೇ ಹೌದು. ಪತ್ರ ಬರೆಯೋಕೆ ಕಲಿಸಿ, ನಂತರ ವಿಷಯ ಮಾತ್ರ ಕೊಟ್ಟು ಬರೆಯುವ ಪರೀಕ್ಷೆ ಇಡುತ್ತಿದ್ದಳು. ಮಕ್ಕಳಿಗೆ ಶಾಲೆ ಪಠ್ಯ ಮಾತ್ರವಲ್ಲ, ರಾಮಾಯಣ ಮಹಾಭಾರತ ಪರೀಕ್ಷೆ ಕಟ್ಟಿಸುತ್ತಿದ್ದಳು. ತಾನೇ ಪಾಠ ಮಾಡಿ, ಹೀಗೀಗೇ ಪ್ರಶ್ನೆ ಬರುತ್ತೆ ಅಂತೆಲ್ಲ ಹೇಳ್ತಿದ್ದದ್ದು ಅವಳ ಬುದ್ಧಿಮತ್ತೆಗೆ ಸಾಕ್ಷಿಯಾಗಿತ್ತು. ಪರೀಕ್ಷೆ ಮುಗಿಸಿ ಬಂದ ಮೇಲೆ ಈ ಪ್ರಶ್ನೆಗೆ ಏನು ಉತ್ತರ ಅಂತ ಕೇಳಿ, ಹೀಗಲ್ಲ, ಹೀಗೆ ಬರೀಬೇಕಿತ್ತೂ ಅಂತ ವಿಶ್ಲೇಷಣೆ ಬೇರೆ ಮಾಡುತ್ತಿದ್ದಳು ನನ್ನತ್ತೆ. ಬದುಕಿನ ಪಾಠದಲ್ಲಿ ಡಿಗ್ರೀ ಮುಗಿಸಿಬಿಟ್ಟಿದ್ದಳು.
ಮಕ್ಕಳಿಗೆ ಶಿಸ್ತುಬದ್ಧ ಜೀವನ ಕಲಿಸಿದ್ದಳು. ಶ್ರಮಜೀವನಕ್ಕೆ ಅಣಿಮಾಡುತ್ತಿದ್ದಳು. ಓದಿನ ಜೊತೆ ಮನೆ ಕೆಲಸವನ್ನೂ ಮಾಡ್ಬೇಕಿತ್ತು. ಸಂಜೆ ಭಾಗವತ ಪುರಾಣ ಕೇಳಲು ಛತ್ರಕ್ಕೆ ಕರೆದೊಯ್ಯುತ್ತಿದ್ದಳು. ಅಲ್ಲಿ ಕೇಳ್ತಾ ಕೇಳ್ತಾ ದೇವರಿಗೆ ಹೂವು ಕಟ್ಟುವ ಕೆಲಸವನ್ನೂ ಮಾಡಿಸುತ್ತಿದ್ದಳು. ಅಕ್ಕಪಕ್ಕದ ಮನೆಗಳಲ್ಲಿ ಹೆಚ್ಚುವರಿ ಕೆಲಸ ಬಿದ್ದಾಗ ಕಡ್ಡಾಯವಾಗಿ ನೆರವು ನೀಡಲು ಕಳಿಸುತ್ತಿದ್ದಳು. ಊರಿಗೆ ಗುರುಗಳು ಬಂದರೆ ನಮ್ಮ ಮಕ್ಕಳು ಅವರಿಗೆ ಹಾಲು – ಹಣ್ಣು ಕೊಂಡೊಯ್ಯುವ, ಬಟ್ಟೆ ಒಗೆಯುವ, ಅವರು ಉಳಿದುಕೊಂಡ ಮನೆ ಗುಡಿಸಿ, ಒರೆಸಿ ಕೊಡುವ ಕೆಲಸ ಮಾಡುತ್ತಾರೆ ಎಂದು ಒಪ್ಪಿಕೊಂಡು ಬರುತ್ತಿದ್ದರು. ರಾಮನವಮಿ ಸಪ್ತಾಹದ ಅಖಂಡ ಭಜನೆಗಿರಲಿ, ಯಾರದೇ ಮನೆ ಕೆಲಸಕ್ಕಾಗಲಿ ನಮ್ಮ ಮನೆಯಿಂದ ಇಬ್ಬರು ಎಂದು ಲೆಕ್ಕ ಕೊಟ್ಟೇ ಮನೆಗೆ ಬಂದು ಹೇಳುತ್ತಿದ್ದುದು. ಅತ್ತೆಯ ಬಳಿ ಸೈ ಎನಿಸಿಕೊಂಡರೆ ಎಂತಹ ಮನೆ ಸೇರಿದ್ರೂ ಸೈ ಎಂಬಂತೆ. ಬದುಕಿನ ಸೂಕ್ಷ್ಮಗಳನ್ನು ಮಕ್ಕಳಿಗೆ ಅರಿವು ಮೂಡಿಸುತ್ತಿದ್ದ ಪರಿ ಅದ್ಭುತ.
ಎಷ್ಟು ಮಕ್ಕಳು ಅವಳ ಈ ಗುರುಕುಲದಲ್ಲಿ ಬೆಳೆದು ವಿದ್ಯೆ, ಬುದ್ಧಿ ಮಾತ್ರವಲ್ಲ ಸಂಸ್ಕಾರವನ್ನೂ ಅರೆದು ಕುಡಿದು ಬಾಳೆಂಬೋ ಕಾನನದಲ್ಲಿ ಕತ್ತಲಲ್ಲಿ ಬಿಟ್ರೂ ಧೈರ್ಯವಾಗಿ ನುಗ್ಗುವ ಛಾತಿ ಪಡೆದುಕೊಂಡಿದ್ರೂ ಅಂದ್ರೆ ಅತ್ತೆಯ ಬೆಳೆಸುವಿಕೆ ಅರ್ಥವಾಗುತ್ತೆ.
ಮೆಟ್ಟಿದ ಮನೆಯ ತುಂಬು ಕುಟುಂಬ ಮೆಚ್ಚಿದ ಸೇವೆ:
ತನ್ನವರಿಗಾಗಿ ಮಾತ್ರ ಅತ್ತೆಯ ಸೇವೆಯಲ್ಲ, ಎಲ್ಲರೂ ತನ್ನವರೇ. ಅದರಲ್ಲೂ ವಾರಗಿತ್ತಿಯರು, ಭಾವಂದಿರು, ನಾದಿನಿಯರು ಅವರ ಮಕ್ಕಳು ಎಂದರೆ ತುಸು ಹೆಚ್ಚೇ ಆದರ. ಅವರೆಲ್ಲ ಪಟ್ಟಣಗಳಲ್ಲಿ ಇದ್ದಿದ್ದರಿಂದ ಅವರ ಮಕ್ಕಳು ಇಲ್ಲಿ ಓದಲು ಬರಲಿಲ್ಲ. ಆದರೆ ಮನೆದೇವರು ರಾಮದೇವರ ಪೂಜೆಗೆ ಅಂತ ಇಡಗೂರಿಗೆ ಬರುತ್ತಿದ್ದುದು ದಂಡು ದಂಡು. ವಾರಗಟ್ಟಲೆ ಉಳಿದುಕೊಂಡು ಹೋಗುತ್ತಿದ್ದರು. ನಾದಿನಿ, ಮಕ್ಕಳು ರಜೆಗೆ ಇಲ್ಲಿಗೇ ಬರುತ್ತಿದ್ದರು. ಸದಾ ಒಬ್ಬಿಲ್ಲೊಬ್ಬರು ಕುಟುಂಬ ಸಹಿತ ಲಗ್ಗೆ ಹಾಕಿಯೇ ಇರುತ್ತಿದ್ದರು. ಅವರ ಉಪಚಾರದಲ್ಲಿ ರಾಜಮರ್ಯಾದೆಯಿರುತ್ತಿತ್ತು.
ಇನ್ನು ಅವರುಗಳ ಮನೆಯಲ್ಲಿ ಮದುವೆ ಮುಂಜಿಗಿರಲಿ, ತಿಥಿಗೂ ಇವರೇ ಇರಬೇಕು. ಅವರ ಮಕ್ಕಳ ಬಸಿರು – ಬಾಣಂತನಕ್ಕೂ ಇವರೇ ಬೇಕು. ಒಮ್ಮೆ ಹೋದರೆ ವರ್ಷಕ್ಕಾಗುವಷ್ಟು ಹೂಬತ್ತಿಗಳು, ತಿಂಗಳಿಗಾಗುವಷ್ಟು ಕಾಯಿತುರಿ, ಡಬರಿಗಳ ತುಂಬ ಕುರುಕು ತಿಂಡಿ ಮಾಡಿಟ್ಟೇ ಬರುತ್ತಿದ್ದುದು. ನಾದಿನಿಗೆ ಮಂಡಿ ಆಪರೇಷನ್ ಆದ್ರೂ ಇವರೇ ಬೇಕು, ವಾರಗಿತ್ತಿಯ ಮಕ್ಕಳಿಗೆ ಅವರ ಮನೆಯಲ್ಲಿ ಮಡಿಲು ತುಂಬಲು ಅನಾನುಕೂಲವಾದಾಗ ತಾವೇ ಕರೆದು ತುಂಬುತ್ತಿದ್ದರು. ರಾಗಿ ಕಾಳಿನಷ್ಟೂ ಭೇದ ಭಾವವಿಲ್ಲದ ಆದರಣೆ. ವಾರಗಿತ್ತಿಯ ಮಗ ಪ್ರಸನ್ನಕುಮಾರ್ ಲೋಕಸಭಾ ಚುನಾವಣೆಗೆ ನಿಂತಾಗ ಖುದ್ದು ಊರಿನ ಎಲ್ಲ ಮನೆಮನೆಗೆ ಹೋಗಿ ಮತ ಯಾಚಿಸುತ್ತಿದ್ದರು. ಊರಿನ ನ್ಯಾಯ ತೀರ್ಮಾನಗಳಲ್ಲಿಯೂ ಪತಿಯೊಂದಿಗೆ ಇವರ ಸಲಹೆಗಳಿಗೂ ಬೆಲೆಯಿತ್ತು. ಎಲ್ಲರ ಮನೆಯ ಕಾರ್ಯಗಳಲ್ಲಿಯೂ ಕೈಸೇರಿಸುತ್ತಿದ್ದುದರಿಂದ ಅಧಿಕಾರಯುತವಾಗಿಯೇ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಳ್ಳುತ್ತಿದ್ದರು. ವಾರಗಿತ್ತಿಯರ ಮಕ್ಕಳು ಸಹಿತ ಏನೇ ಕೇಳಲೂ ಅಮ್ಮನಿಗಿಂತ ಚಿಕ್ಕಮ್ಮನನ್ನೇ ಮೊದಲು ಕೇಳುತ್ತಿದ್ದರು.
ಒಂದು ರೀತಿ ‘ನಾ ಮಾಟೇ ಶಾಸನಂʼ ಎಂಬಂತೆ ಅವರು ಗೀಚಿದ ಗೆರೆ ಯಾರೂ ದಾಟುತ್ತಿರಲಿಲ್ಲ. ಒಂದು ರೀತಿ ಅಲಿಖಿತ ಸಂವಿಧಾನವಾಗಿ ಎರಡೂ ಕಡೆಯ ದೊಡ್ಡ ಕುಟುಂಬಗಳನ್ನು ಮುನ್ನಡೆಸುತ್ತಿದ್ದರು.
ಊರಿನಲ್ಲಿನ ಕೆಲಸಕ್ಕೆ ಪಟ್ಟಣಗಳಿಂದ ಅಥವಾ ಸುತ್ತಲಿನ ಹಳ್ಳಿಗಳಿಂದ ಬರುವವರಿಗೆ ಅವರ ಮನೆಯೇ ತಂಗುದಾಣವಾಗಿತ್ತು. ಅವರೆಲ್ಲರ ಪಾಲಿನ ಅನ್ನಸತ್ರವಾಗಿ, ಮಕ್ಕಳ ಗುರುಕುಲವಾಗಿ, ನೊಂದು ಬಂದವರಿಗೆ ಮಮತೆಯ ಎದೆಯಾಗಿ ಆದರಿಸುವ ಆಶ್ರಯತಾಣ ಅವರ ಮನೆ.
ಪಕ್ಕದ ಮನೆ ಮಕ್ಕಳಿಗೂ ತಾಯಾಗಿ: ಪಕ್ಕದ ಮನೆಯಲ್ಲಿ ಆರೇಳು ಮಕ್ಕಳಿದ್ದ ಕುಟುಂಬವಿತ್ತು. ಆ ಮಕ್ಕಳ ತಾಯಿಗೆ ಬಾಣಂತಿ ಸನ್ನಿಯಾಗಿ ಮತಿವಿಭ್ರಮಣೆಯಾಗಿತ್ತು. ಆ ಮಕ್ಕಳೆಲ್ಲ ಅತ್ತೆಯನ್ನು ಚಿಕ್ಕಮ್ಮ ಎಂದೇ ಕರೆಯುತ್ತಿದ್ದರು. ಚಿಕ್ಕ ಅಮ್ಮನಾಗಿಯೇ ಅವರನ್ನೂ ಪಾಲಿಸುತ್ತಿದ್ದ ಮಮತಾಮಯಿ. ಎಣ್ಣೆ ನೀರು ಹಾಕುವುದರಿಂದ ಹಿಡಿದು, ವಿಶೇಷ ಅಡುಗೆ ಮಾಡಿಕೊಡುವುದರವರೆಗೆ ಎಲ್ಲಕ್ಕೂ ಆಧಾರವಾಗಿದ್ದರು. ಅವರ ಮನೆ ಚಿಕ್ಕದಾಗಿತ್ತು. ಆ ಮಕ್ಕಳು ರವೆ ಒಡೆಯಲು, ಹಿಟ್ಟು ಬೀಸಲು ಇವರ ಮನೆಯ ಪಡಸಾಲೆಗೆ ಬರುತ್ತಿದ್ದರು. ಕಾಯಿ ಬಿಡಿಸಲು, ಹೂವು ಕಟ್ಟಲು, ಕವಡೆ ಆಡಲು, ಬಾವಿಗೆ ನೀರು ಸೇದಲು ಅಷ್ಟೇಕೆ ಇಲ್ಲಿಯೇ ಇದ್ದಿಲು ಒಲೆ ಇಟ್ಟು ಮಸಾಲೆ ಪದಾರ್ಥಗಳನ್ನು ಹುರಿದುಕೊಳ್ಳುವವರೆಗೆ ಇಲ್ಲಿಯೇ ಅವರ ದಿನವೆಲ್ಲ ಕಳೆದು ಹೋಗುತ್ತಿತ್ತು. ತಾಯಾಗಿ ಆ ಮಕ್ಕಳಿಗೆ ವಾತ್ಸಲ್ಯ ತೋರುತ್ತಿದ್ದುದಲ್ಲದೆ ಭಗವದ್ಗೀತೆಯನ್ನೂ ಹೇಳಿಕೊಡುತ್ತಿದ್ದರು. ಅವರ ಮದುವೆ ಮುಂಜಿಗಳಿಗೂ, ಬಸಿರು ಬಾಣಂತನಗಳಿಗೂ ನೆರಳಾಗಿ ನಿಂತ ಮಹಾಮಾತೆ.
ಕನಿಷ್ಠ ಆಹಾರ ಗರಿಷ್ಠ ಕಾಯಕ: ಕೃಶಕಾಯರಾಗಿದ್ದ ಅತ್ತೆಗೆ ದೈತ್ಯ ಶಕ್ತಿ. ಈರುಳ್ಳಿ ಬೆಳ್ಳುಳ್ಳಿ ಮುಟ್ಟುತ್ತಿರಲಿಲ್ಲ. ಬಹಳ ಕಡಿಮೆ ತಿನ್ನುತ್ತಿದ್ದರು. ಆದರೆ ಹೊತ್ತು ಹೊತ್ತಿಗೆ ಪಾಂಗಿತವಾಗಿ, ರುಚಿಕಟ್ಟಾಗಿ ಮಾಡಿ ತಿನ್ನುತ್ತಿದ್ದರು. ಇಷ್ಟೇ ತಿಂದರೂ ಕಷ್ಟಪಟ್ಟು ಮಾಡಿ, ಇಷ್ಟಪಟ್ಟು ತಿನ್ನುವ ತಾಳ್ಮೆಯಿತ್ತು. ಶಿಸ್ತಿನ ಬದುಕು. ಬೆಳಗ್ಗೆ ಒಂಬತ್ತಕ್ಕೆ ತಿಂಡಿ, ಮಧ್ಯಾಹ್ನ 2 ಕ್ಕೆ ಊಟ, ಮತ್ತೆ ರಾತ್ರಿ 8 ಕ್ಕೆ. ಮಧ್ಯೆ ಬೆಳಗ್ಗೆ 11 ಹಾಗೂ ಸಂಜೆ 5 ಕ್ಕೆ ಟೀ ಜೊತೆ ಕುರುಕು ತಿಂಡಿ. ಅದಾದರೂ ಎಷ್ಟು, ಎರಡು ಹಿಡಿ ಕಡಲೆಕಾಯಿ, ಎರಡು ಹಿಡಿ ಕಡಲೆಪುರಿ, ಅರ್ಧ ಚಕ್ಕುಲಿ, ಅರ್ಧ ನಿಪ್ಪಟ್ಟು, ಏಳೆಂಟು ತುಂಡು ಸೌತೆಕಾಯಿ, ಹುರಿಗಾಳು, ಕಬ್ಬು, ಜೋಳ ಹೀಗೆ ಏನೋ ಒಂದು. ಬೆನ್ನಿಗೆ ಅಂಟಿದ್ದ ಹೊಟ್ಟೆಗೆ ಹಿಡಿಸುತ್ತಿದ್ದುದು ರವಷ್ಟೇ. ಪ್ರತಿ ಏಕಾದಶಿ, ರಾಮನವಮಿ, ಗೋಕುಲಾಷ್ಟಮಿಗಳಲ್ಲಿ ನಿಟ್ಟುಪವಾಸ.
ಅವರ ಜೀವನ ಪ್ರೀತಿ ಬಲು ಹಿತವಾಗಿತ್ತು. ಮನೆತುಂಬ ಮಕ್ಕಳಿದ್ದಾಗ ತರಾವರಿ ಅಡುಗೆ ಮಾಡುತ್ತಿದ್ದರು. ಕೊನೆಗೆ ತಾವಿಬ್ಬರೇ ಇರುವಾಗಲೂ ಯಾವೊಂದು ತಿಂಡಿಯನ್ನೂ ಬಿಡದೆ ಮಾಡುತ್ತಿದ್ದರು. ಇಡ್ಲಿ, ದೋಸೆ, ಕಡುಬು, ಒಬ್ಬಟ್ಟು ಊಹೂ ಯಾವುದೂ ಬಿಡುತ್ತಿರಲಿಲ್ಲ. ಸೋಮಾರಿತನ ಇವರನ್ನು ಕದ್ದು ನೋಡಲೂ ಹೆದರಿ ಓಡುತ್ತಿತ್ತು. ಕೊನೆಗೆ ಮಾಮ ಹೋದ ಮೇಲೆ ಸುಮಾರು ವರ್ಷಗಳು ಒಬ್ಬರೇ ಇದ್ದಾಗಲೂ ಅದೇ ಆಹಾರ ಪದ್ಧತಿಯಿತ್ತು. ತಾವೊಬ್ಬರೇ ತಿನ್ನದೆ ಅಕ್ಕಪಕ್ಕದವರಿಗೆ, ಹತ್ತಿರದ ಬಡಮಕ್ಕಳಿಗೆ, ಕೂಲಿ ಕೆಲಸದವರಿಗೆ ಕೊಟ್ಟು ತಿನ್ನುತ್ತಿದ್ದರು. ಹೇಗೇಗೋ ಬದುಕದೆ ಬದುಕಿಗಾಗಿಯೇ ಬದುಕು ನಡೆಸುವ ಜೀವ. ಆಧ್ಯಾತ್ಮದಲ್ಲಿಯೂ ಆಸಕ್ತಿ. ಆತ್ಮ ಪರಮಾತ್ಮ ಚಿಂತನೆಯಲ್ಲಿ ಸಮತೂಕವಿತ್ತು. ಯೋಗದೊಂದಿಗೆ ಭೋಗವನ್ನೂ ನಿರ್ಲಿಪ್ತವಾಗಿ ಸ್ವೀಕರಿಸುವ ಮನಸ್ಥಿತಿ ತಲುಪಿದ್ದರು. ಸದಾ ಕಾಲ ಹೆಂಚಿನ ಮೇಲೆಯೇ ಇರುತ್ತಿದ್ದರೂ, ಮನೆಯ ದೊಡ್ಡ ಇಂಡಾಲಿಯಂ ಡಬ್ಬಿಗಳಲ್ಲಿ ಕೊಳೆಯುತ್ತಿದ್ದರೂ ಅದು ತಿನ್ನುವ ಚಟವಾಗಲಿಲ್ಲ. ಬರೀ ಮಾಡಿಕೊಡುವ, ಹಂಚುವ ಕಾಯಕವಾಗಿ ಮಿಗಿಲಿತ್ತು. ತಿಂದಿದ್ದು ಸಾಸಿವೆಯಾದರೆ ಹಂಚಿದ್ದು ಸಾಗರ.
ನೆತ್ತಿ ಮೇಲೆ ಗಡಿಯಾರ: ಅಬ್ಬಬ್ಬ ಅದೇನು ಸಮಯಪ್ರಜ್ಞೆ ಅವರದ್ದು. ಬೆಳಗ್ಗೆ ನಾಕಕ್ಕೇ ಆರಂಭಿಸುವ ದಿನಚರಿ ರಾತ್ರಿ ಹಾಸಿಗೆಗೆ ಜಾರುವವರೆಗೆ ಓಡುತ್ತಲೇ ಇತ್ತು. ಸಮಯದ ಮುಳ್ಳು ನೆತ್ತಿಯ ಮೇಲೆಯೇ ಇದ್ದಂತೆ ಕತ್ತಲು ಮುಸುಕಿದ ಜಾವ ನಾಕಕ್ಕೇ ಎದ್ದರೂ, ಸುಡು ಸುಡು ಸೂರ್ಯ ನೆತ್ತಿ ಮೇಲೆ ಬಂದರೂ, ಚಂದಿರನ ಲಾಲಿ ಹಾಡು ಕೇಳಿದರೂ ಎತ್ತು ಗಂಜಳ ಹುಯ್ದಂತೆ ಅವರ ಕೆಲಸ.
ಬೆಳಗ್ಗೆ ಮನೆಗೆಲಸ ಮುಗಿಸಿ, ಮನೆಯಲ್ಲಿ ಜಪ, ಪೂಜೆ ಮುಗಿಸಿ, ಛತ್ರಕ್ಕೆ ಹೋಗಿ ಅಲ್ಲಿಯೂ ಹಾಡು ಹೇಳಿ, ಪೂಜೆ ಮಂಗಳಾರತಿ ಮುಗಿಸಿಕೊಂಡು ಬಂದು ತಿಂಡಿ, ಅಡುಗೆ ಎಲ್ಲವನ್ನೂ ಬೆಳಗ್ಗೆ 9 ರ ಆಸುಪಾಸಿಗೇ ಮುಗಿಸಿಬಿಡುತ್ತಿದ್ದರು. ಲೀಲಾಜಾಲವಾಗಿ ಬಟ್ಟೆ, ಪಾತ್ರೆ ಮುಗಿಸುತ್ತಿದ್ದುದ್ದು ಯಾರಿಗೂ ಅರಿವಿಗೇ ಬರುತ್ತಿರಲಿಲ್ಲ.
ಇದರ ಸಂಧಿಯಲ್ಲಿ ಬೆಳಗ್ಗೆ 7 ರಿಂದ 9 ಹಾಗೂ ಸಂಜೆ 4 ರಿಂದ 7 ರವರೆಗೆ ಮಂತ್ರ ಹಾಕಿಸಿಕೊಳ್ಳಲು ಜನ ಬರುತ್ತಿದ್ದರು. ಮೂರು ತಿಂಗಳವರೆಗಿನ ಎಳೆ ಕಂದಮ್ಮಗಳಿಗೆ ಕಿಸುರು ಮಂತ್ರ, ನಂತರ ದೃಷ್ಟಿ ಮಂತ್ರ, ಕಾಮಾಲೆ ಮಂತ್ರ, ಕೆಡುಕು ಮಂತ್ರ, ಉಳುಕು ಮಂತ್ರದ ಜೊತೆ ಊಟ ಸೇರದಿದ್ದರೆ ಉಪ್ಪು ಮಂತ್ರಿಸಿಕೊಂಡು ಹೋಗುವವರು, ದನಕರುಗಳು ಮುಸುರೆ ಕುಡಿಯದಿದ್ದರೆ, ಹಾಲು ಕಡಿಮೆ ಕೊಟ್ಟರೆ ತೌಡು – ಬೂಸಾ ತಂದು ಮಂತ್ರಿಸಿಕೊಂಡು ಹೋಗಿ ಮುಸುರೆಗೆ ಹಾಕಿ ಕುಡಿಸುತ್ತಿದ್ದರು. ಕೆಲವು ಕಾಯಿಲೆಗೆ ನಾಟಿ ಔಷಧಿ ಕೊಡುತ್ತಿದ್ದರು. ಬೆಳಗ್ಗೆ 10 ರಿಂದಲೇ ಒಂದಷ್ಟು ಕಷ್ಟ ಸುಖ ಹಂಚಿಕೊಳ್ಳಲು ಬರುತ್ತಿದ್ದವರು ಸಾಕಷ್ಟು. ಜೈನರ ರಾಜಮ್ಮ, ವಾಲನಮ್ಮ, ಸುಂದರಮ್ಮ, ಲಿಂಗಾಯತರ ಪುಟ್ಟೀರಮ್ಮ, ನಾಯಕರ ಲಕ್ಷ್ಮಮ್ಮ ಹೀಗೆ. ಅತ್ತೆ ಸೊಸೆ ಬಗ್ಗೆ ಹೇಳಲು ಬಂದರೆ, ಸೊಸೆಯೂ ಅತ್ತೆಯ ಬಗ್ಗೆ ಹೇಳಲು ಇವರನ್ನೇ ಹುಡುಕಿ ಬರುತ್ತಿದ್ದಳು. ಇಬ್ಬರಿಗೂ ಹೂಗುಡುತ್ತಾ, ಸಂತೈಸುತ್ತಾ, ಅತ್ತಲದಿತ್ತ ತಾಕದಂತೆ ಎಡಗಿವಿಯಲ್ಲಿ ಕೇಳಿ ಬಲಗಿವಿಯಲ್ಲಿ ಬಿಡುತ್ತಿದ್ದಳು. ಕಿವಿಗೂ ಬಾಯಿಗೂ ನಡುವೆ ಬೇಲಿಯಿತ್ತು. ಅವರೆಲ್ಲ ಮಾತನಾಡುತ್ತಿದ್ದರೆ, ತಾನು ಓಡಾಡಿಕೊಂಡು ಕೆಲಸ ಮಾಡುತ್ತಲೇ ಉತ್ತರಿಸುತ್ತಿದ್ದಳು. ಪುಟ್ಟೀರಮ್ಮ ಚಕ್ಕಾಬಾರಕ್ಕೆ ಕರೆದರೆ, ಸಿದ್ಧ ಮಾಡಲು ಹೇಳುತ್ತಾ, ನೀವು ಆಡುತ್ತಿರಿ ಬಂದೆ ಎನ್ನುತ್ತಾ ಕೆಲಸ ಮುಗಿಸಿಯೇ ಕೂರುತ್ತಿದ್ದುದು. ಆದರೂ ಸಮಯ ಅವರ ಆಳೇನೋ ಎನಿಸುತ್ತಿದ್ದುದು ಸುಳ್ಳಲ್ಲ. ಇದರ ನಡುವೆ ಕಾಯಿ ಸುಲಿಯುವ, ಹೂವು ಕಟ್ಟುವ, ಮಾಮ ಅಂಗಡಿಗೆ ಹಾಕಿದ ಹುಣಿಸೆ ಕಾಯಿ, ಕಡಲೆ ಕಾಯಿಗಳನ್ನು ಹರವುವ ಕೆಲಸ. ಯಾರ ಮನೆಯಲ್ಲಾದರೂ ಹಂಚು ಇಟ್ಟುಕೊಳ್ಳುವ ಕೆಲಸ. ಕೇಳಿಯೇ ಉಸ್ಸಪ್ಪಾ ಎನಿಸದಿರದೇ. ಸಂಧಿಯಲ್ಲಿ ಸಮಾರಾಧನೆಯೆಂಬಂತೆ ಇವೆಲ್ಲದರ ನಡುವೆ ಪಡಸಾಲೆಯ ನೆಲದ ಮೇಲೆ ನೀರು ಚಿಮುಕಿಸಿ ಒರೆಸಿ ಹಾಗೆಯೇ ಅಡ್ಡಾಗುತ್ತಿದ್ದಳು. ಬಂದವರೂ ಅಡ್ಡಾಗಿಯೇ ಮಾತುಕತೆ ನಡೆಯುತ್ತಿತ್ತು. ಎಲ್ಲವೂ ಕ್ಷಣಗಳ ಲೆಕ್ಕದಲ್ಲಿ. ಅವರೆಲ್ಲರ ಚಹಾ, ಕುರುಕು ತಿಂಡಿ ಇಲ್ಲಿಯೇ. ಸಂಜೆ ಮುನಿಯಪ್ಪ ಮೇಷ್ಟ್ರ ರಾಮಾಯಣ ಪಾರಾಯಣವೋ, ಛತ್ರದ ತಾತಯ್ಯನ ಭಾಗವತ ಪಾರಾಯಣಕ್ಕೋ ಹಾಜರ್. ದೇವರದೀಪ ಹಚ್ಚಿ, ಮನೆಯಲ್ಲಿ ಮಕ್ಕಳಿಗೆ ಭಜನೆಯನ್ನೂ ಹೇಳಿಕೊಡುತ್ತಿದ್ದಳು.
ವಿದುರಾಶ್ವತ್ಥದ ವೃದ್ಧಾಶ್ರಮ: ಇಂತಹ ಕಾಯಕಜೀವಿಯ ಬದುಕೂ ಕೊನೆಯಲ್ಲಿ ಏರಿಳಿತ ಕಂಡಿತು. ಮಾಮನ ನಂತರವೂ ಸುಮಾರು ವರ್ಷ ಒಬ್ಬಳೇ ಇದ್ದಳು. ನಂತರ ಬೆಂಗಳೂರಿನ ವಾರಗಿತ್ತಿಯ ಮಗನ ಮನೆಗೆ ಕರೆದೊಯ್ದರು. ಅಲ್ಲಿ ಅವಳ ಪಾಲಿಗೆ ನಗರದ ಜೀವನ ಸೆರೆಮನೆಯಾಗಿ, ಮನೋರೋಗವಾಯಿತು. ಅಂತಹ ದಿನಗಳಲ್ಲಿ ಒಮ್ಮೆ ಅವಳನ್ನು ನೋಡಲು ಹೋದ ಆಶ್ರಮದ ಆಡಳಿತ ವರ್ಗ ಬಲವಂತವಾಗಿ ಅವರ ವಾರಗಿತ್ತಿಯ ಮಗನನ್ನು ಒಪ್ಪಿಸಿ, ನಮ್ಮ ಚಿಕ್ಕಮ್ಮನನ್ನು ನಾವು ಕೊನೆಯವರೆಗೂ ನೋಡಿಕೊಳ್ಳುತ್ತೇವೆ ಅಂದು ಭಾಷೆ ಕೊಟ್ಟು ಕರೆದೊಯ್ದರು. ಇವರೆಲ್ಲ ಇಡಗೂರಿನವರೇ. ಅತ್ತೆಯ ಕೈಯಲ್ಲಿ ತಿಂದುಂಡವರೇ. ಅದರಲ್ಲೂ ಪಕ್ಕದ ಮನೆಯ ಮಗನೂ ಮುಖ್ಯಸ್ಥನಾಗಿದ್ದನು. ತಾಯಿಗಿಂತ ಹೆಚ್ಚಿನ ಅಂತಃಕರಣದ ಚಿಕ್ಕಮ್ಮನನ್ನು ಅಲ್ಲಿಯೇ ಇಟ್ಟು ಮುತುವರ್ಜಿಯಿಂದ ಗಮನಿಸಿದರು. ಅತ್ತೆ ಮನಸು ಒಪ್ಪಲಿಲ್ಲ. ತನ್ನ ಬಳಿಯಿದ್ದ ಚೂರು ಪಾರು ಬಂಗಾರ, ಅಷ್ಟಿಷ್ಟು ಪುಡಿಗಂಟು ಸೇರಿಸಿ, ಇಡಿಗಂಟಾಗಿಸಿ ಬ್ಯಾಂಕಿನಲ್ಲಿರಿಸಿ, ತನ್ನ ದೇಖಿರೇಖಿಗೆ ನೆಲೆ ಮಾಡಿದಳು. ತನ್ನ ನಂತರ ಆ ಹಣದಲ್ಲಿ ಆಶ್ರಮದಲ್ಲಿ ಒಂದು ರೂಮು ಕಟ್ಟಲು ಹೇಳಿದಳು. ತನ್ನಂತಹ ಇನ್ನೊಂದು ಜೀವಕ್ಕೆ ಆಶ್ರಯವಾಗುವ ಮನಸು.
ಆಶ್ರಮಕ್ಕೆ ಬಂದ ಅವಳ ಹುರುಪು ಇಮ್ಮಡಿಗೊಂಡಿತು. ಅಡುಗೆಯವರಿಗೆ ತರಕಾರಿ ಹೆಚ್ಚಿಕೊಡುವ, ಸೊಪ್ಪು ಬಿಡಿಸುವ ಕೆಲಸದಲ್ಲಿ ನೆರವಾಗುತ್ತಿದ್ದರು. ಅಯ್ಯೋ ಆಶ್ರಮದ ಮುಖ್ಯಸ್ಥರು ನೋಡಿದರೆ ಬೈಯ್ಯುತ್ತಾರೆ ಎಂದು ಅವರು ಅಲವತ್ತುಗೊಂಡರೆ, ಸುಮ್ಮನೆ ಕುಳಿತರೆ ನಾನೇನು ಬೆಳೆಯುತ್ತೇನೆಯೇ ಎಂದು ನಗಾಡಿ ಒಪ್ಪಿಸುತ್ತಿದ್ದರು. ಅಲ್ಲಿ ಯಾವುದೇ ಸಭೆಯಾಗಲಿ ಅತ್ತೆಯನ್ನೂ ಕರೆಯುತ್ತಿದ್ದರು. ಮುಖ್ಯ ನಿರ್ಧಾರಗಳಲ್ಲಿ ಅವರ ಸಲಹೆಗೆ ಬೆಲೆಯಿತ್ತು. ಕೊನೆಯವರೆಗೂ ಅವಳ ಯಜಮಾನಿಕೆ ಹಾಗೆಯೇ ಇತ್ತು. ಅವಳ ನಕ್ಷತ್ರ ಚೆನ್ನಾಗಿತ್ತು. ಹುಟ್ಟಿನಿಂದ ಕೊನೆಯವರೆಗೂ ಅವಳ ಮಾತಿಗೆ ಮುತ್ತಿನ ಬೆಲೆಯಿತ್ತು. ಸದಾ ಕಾಲದ ನಿಸ್ವಾರ್ಥದ ದುಡಿತ ಇದಕ್ಕೆ ಇಂಬಾಯಿತು. ಒಡವೆ – ವಸ್ತುಗಳ ಅಂಟಾಗಲಿ, ದುಡ್ಡು ಕಾಸುಗಳ ನಂಟಾಗಲಿ ಅವಳ ಬದುಕಿಗೆ ಒಂಟಲಿಲ್ಲ.
ಕೊನೆಯ ದಿನಗಳಲ್ಲಿ ಬಹಳ ಕಮ್ಮಿ ತಿನ್ನುತ್ತಿದ್ದುದು. ತನ್ನ ಪಾಲಿನ ಸಂಜೆಯ ತಿಂಡಿಯನ್ನು ಬೇರೆಯವರಿಗೆ ಕೊಟ್ಟುಬಿಡುತ್ತಿದ್ದಳು. ಅಲ್ಲಿದ್ದ ಬಡ ಜೀವಗಳು, ಹೂಬತ್ತಿ ಮಾರಿ ಹಣ ಕೂಡಿಡುತ್ತಿದ್ದರು. ಅವರಿಗೆ ಹೂಬತ್ತಿ ಮಾಡಿಕೊಡುತ್ತಿದ್ದಳು.
ನಾನು ಕೊನೆಯ ಬಾರಿ ಹೋದಾಗ ಬಗ್ಗಿ ಹೋಗಿದ್ದಳು. ಬೆರಳುಗಳು ಸೆಟೆದುಕೊಂಡಿದ್ದವು. ಆದರೂ ಬಿಡದೆ ಅವನ್ನು ಬಗ್ಗಿಸಿ, ಜಪಮಾಲೆ ತಿರುಗಿಸುತ್ತಿದ್ದಳು. ಯಾರ ಬಗ್ಗೆಯೂ ಮಾತನಾಡದ, ಉಭಶುಭ ಹೇಳದ, ರಾಮನಾಮ ಜಪವೇ ಸವಿಯೆಂದು ಬದುಕಿದ ಪುಣ್ಯಜೀವಿ. ಇಷ್ಟು ದೊಡ್ಡ ಕುಟುಂಬಕ್ಕೆ ಪ್ರೀತಿ ತೋರಿದವಳನ್ನು ಕಾಣಲು ಸದಾ ಯಾರಾದರೊಬ್ಬರು ಇದ್ದೇ ಇರುತ್ತಿದ್ದರು. ಯಾರಿಗೂ ಹೊರೆಯಾಗದೆ ತಾನು ಮಾತ್ರ ಎಲ್ಲರ ಹೊರೆ ಹೊತ್ತು ಬಾಳು ಮುಗಿಸಿದ ಧ್ರುವ ನಕ್ಷತ್ರ ನನ್ನತ್ತೆ ತಂಗಡಿ ಹೂವಿನಂತೆ. ಅದಿಲ್ಲದೆ ದೀಪಾವಳಿ ಪೂಜೆಯಿಲ್ಲ. ದೇಹದ ಉಷ್ಣತೆ ಹದವಾಗಿರಲೂ ತಂಗಡಿ ಹೂವಿನ ಕಾಫ಼ಿ ಒಳ್ಳೆಯದು. ಯೋಗಭೋಗಗಳೆರಡಕ್ಕೂ ಸೂಕ್ತ. ಮೃದುವಾದ ತಂಗಡಿಯ ಹೊಳೆವ ಹಳದಿಯ ಹೂಗಳಂತೆ ಹೊಳೆಯುತ್ತಲೇ, ಸದಾ ಎದೆಯಲ್ಲಿ ಚಿಗುರುತ್ತಲೇ ಇದ್ದಾಳೆ ದೊಡ್ಡತ್ತೆ.
ಇವಳಲ್ಲವೇ ಗರ್ಭ ಧರಿಸದೆ, ಅಂತಃಕರಣ ಧರಿಸಿ, ನೂರಾರು ಮಕ್ಕಳಿಗೆ ಮಮತೆಯ ತಾಯಾದ ಗಾಂಧಾರಿ. ಜನಪದರಲ್ಲಿ ಒಂದು ಮಾತಿದೆ ‘ಹೆತ್ತರೆ ಒಂದು ಮಗು, ಪಡೆದರೆ ನೂರಾರು ಮಕ್ಕಳು’. ಈ ಮಾತಿಗೆ ಸಾಕಾರರೂಪು ಇಂತಹ ಬದುಕುಗಳು.

ಸುಮಾ ಸತೀಶ್ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಚಿಕ್ಕಮಾಲೂರು ಗ್ರಾಮದವರು. ಬರವಣಿಗೆಯ ಜೊತೆಗೆ ಸಾಹಿತ್ಯ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕಿರುನಾಟಕಗಳ ರಚನೆ, ನಿರ್ದೇಶನ ಮತ್ತು ಅಭಿನಯ ಜೊತೆಗೆ ಏಕಪಾತ್ರಾಭಿನಯ ಇವರ ಹವ್ಯಾಸ. ಮಿರ್ಚಿ ಮಸಾಲೆ ಮತ್ತು ಇತರೆ ನಗೆ ನಾಟಕಗಳು , ಅವನಿ ( ಕವನ ಸಂಕಲನ), ವಚನ ಸಿರಿ (ಆಧುನಿಕ ವಚನಗಳು), ಹಾದಿಯಲ್ಲಿನ ಮುಳ್ಳುಗಳು ( ವೈಚಾರಿಕ ಲೇಖನ ಸಂಕಲನ), ಬಳಗ ಬಳ್ಳಿಯ ಸುತ್ತ (ಸಂ. ಕೃತಿ), ಶೂನ್ಯದಿಂದ ಸಿಂಹಾಸನದವರೆಗೆ ( ವ್ಯಕ್ತಿ ಚಿತ್ರಣ), ಭಾವಯಾನ ( ಸಂ. ಕೃತಿ), ಮನನ – ಮಂಥನ ( ವಿಮರ್ಶಾ ಬರೆಹಗಳು), ವಿಹಾರ (ಆಧುನಿಕ ವಚನಗಳು), ಕರ್ನಾಟಕದ ಅನನ್ಯ ಸಾಧಕಿಯರು ಭಾಗ 6 (ಡಾ. ಎಚ್. ಗಿರಿಜಮ್ಮನವರ ಬದುಕು – ಬರೆಹ) ಇವರ ಪ್ರಕಟಿತ ಕೃತಿಗಳು.