ಆ ಗ್ವಾಡಿಗಳನ್ನ ಮೇಲಿಂದ ಕೆಳಗ ನೋಡುವಾಗ್ಲೆ ಗೊತ್ತಾದದ್ದು, ಆ ಗ್ವಾಡಿ ನಡಕ ಅವ್ವ, ಅತ್ತಿನೂ ಒದ್ದಾಡತಿದ್ರು. ಆ ಗ್ವಾಡಿಯನ್ನ ನೋಡ್ತಾ ನೋಡ್ತೂ ಅದೆಷ್ಟೊ ಹೆಣ್ಮಕ್ಕಳು ಇದ್ರಲ್ಲೆ ಇರೋದು ನೋಡಿ, ಅವರ ಬಾಯಿಗೆ ಕಟ್ಟಿದ ಹೂವಿನಿಂದ ಸಿಂಗರಿಸಿದ್ದ ಹಗ್ಗ, ದಿನದಿಂದ ದಿನಕ್ಕೂ ಬೆಳಿಯೋದನ್ನ ನೋಡಿ, ಹಗ್ಗದ ಗಂಟು ದಿನ ದಿನಕ್ಕೂ ಬಿಗಿಯಾಗೋದನ್ನ ನೋಡಿ, ಇದ್ಯಾಕೆ ಇದನ್ನ ಯಾರೂ ಬಿಳಸೊಕೆ ಆಗ್ತಿಲ್ಲ? ಯಾರಿದನ್ನ ಹೊರಗಿಂದ ಕಟ್ತಿರೊದು? ಅನ್ನೊ ಪ್ರಶ್ನೆಗಳೆಲ್ಲಾ ತಲೆ ತುಂಬಿದ್ವು. ಆದ್ರ ಇವಾಗ ಸಾಲಿಗೆ ಹೋಗಬಹುದು ಅನ್ನೊದು ನೆನಸ್ಕೊಂಡು ಒಂಥರಾ ಖುಷಿ ಆಯ್ತು.
ಸುವರ್ಣ ಚೆಳ್ಳೂರು ಬರೆಯುವ “ಆಕಿ” ಸರಣಿಯ ಆರನೆಯ ಬರಹ
ಮೈನೆರೆದ ಮ್ಯಾಗ ಎಲ್ಲಾರೂ ನನ್ನ ಮಾತಾಡಿಸಿದ ರೀತಿ, ನನಗೆ ನನ್ನಲ್ಲಾದ ಬದಲಾವಣೆ, ಇಲ್ಲಿವರೆಗೂ ಇದ್ದ ಶಿವಮ್ಮ ಈಗಿರೊ ಶಿವಮ್ಮ ಬೇರೆನಾ? ಅಂತನ್ನಿಸಿ, ಒಮ್ಮೆಲೆ ನಾಕು ದಿಕ್ಕಿಂದಾನೂ ಒಂದೊಂದಾಗಿ ಇಟ್ಟಿಗೆ ಇಟ್ಟು ಅದ್ಯಾವುದೊ ಗೋಡೆ ನಿಧಾನವಾಗಿ ಕಟ್ಟಾಕತಾರ ಅಂಬಂಗಾತು, ಕಾಣದೆ ಇರೊ ಹಗ್ಗಾನ ನಿಧಾನವಾಗಿ ಹೂವಿಂದ ಸುತ್ತಿ, ಬಾಯಿಗೆ ಬೆನ್ನಿಗೆ ಕೈ ಕಾಲಿಗೆ ಗಟ್ಟಿಯಾಗಿ ಬಿಗದು, ಅದರ ಮ್ಯಾಲೆಲ್ಲ ‘ನೀ ಹೆಣ್ಣು, ನೀ ದೊಡ್ಡಾಕಿ, ನೀ ಹೆಣ್ಣು, ನೀ ಹಿಂಗಿರಬೇಕು, ನೀ ದೊಡ್ಡಾಕಿ’ ಅಂತ ಸೂಕ್ಷ್ಮ ಕುಸುರಿ ಕಲೆ ಮಾಡಿ, ಆ ನಾಲ್ಕು ಗ್ವಾಡಿಯೊಳಗ ಬಂಧಿಸಿದಂಗಾತು.
ಆ ಗ್ವಾಡಿಗಳನ್ನ ಮೇಲಿಂದ ಕೆಳಗ ನೋಡುವಾಗ್ಲೆ ಗೊತ್ತಾದದ್ದು, ಆ ಗ್ವಾಡಿ ನಡಕ ಅವ್ವ, ಅತ್ತಿನೂ ಒದ್ದಾಡತಿದ್ರು. ಆ ಗ್ವಾಡಿಯನ್ನ ನೋಡ್ತಾ ನೋಡ್ತೂ ಅದೆಷ್ಟೊ ಹೆಣ್ಮಕ್ಕಳು ಇದ್ರಲ್ಲೆ ಇರೋದು ನೋಡಿ, ಅವರ ಬಾಯಿಗೆ ಕಟ್ಟಿದ ಹೂವಿನಿಂದ ಸಿಂಗರಿಸಿದ್ದ ಹಗ್ಗ, ದಿನದಿಂದ ದಿನಕ್ಕೂ ಬೆಳಿಯೋದನ್ನ ನೋಡಿ, ಹಗ್ಗದ ಗಂಟು ದಿನ ದಿನಕ್ಕೂ ಬಿಗಿಯಾಗೋದನ್ನ ನೋಡಿ, ಇದ್ಯಾಕೆ ಇದನ್ನ ಯಾರೂ ಬಿಳಸೊಕೆ ಆಗ್ತಿಲ್ಲ? ಯಾರಿದನ್ನ ಹೊರಗಿಂದ ಕಟ್ತಿರೊದು? ಅನ್ನೊ ಪ್ರಶ್ನೆಗಳೆಲ್ಲಾ ತಲೆ ತುಂಬಿದ್ವು. ಆದ್ರ ಇವಾಗ ಸಾಲಿಗೆ ಹೋಗಬಹುದು ಅನ್ನೊದು ನೆನಸ್ಕೊಂಡು ಒಂಥರಾ ಖುಷಿ ಆಯ್ತು. ಅವತ್ತು ಸಾಲಿಗೆ ಹೋದಾಗ ಗೆಳತ್ಯಾರೆಲ್ಲ ಖುಷಿಯಿಂದ ಮಾತಾಡಿಸೊದು, ಅವರ ಮುಖದಾಗಿನ ನಗು,ನೋಡಿದವರೆಲ್ಲಾ ನನ್ನ ‘ಅರಾಮದಿಯಾ?’ ಅಂತ ಕೇಳುವಾಗ ನನಗದೊಂತರಾ ಅನ್ನಿಸಿ ಸುಮ್ಮನಾದೆ. ಅದೇ ದಿನ ಸಾಲಿಯೊಳಾಗ ‘ಮಹಿಳಾ ದಿನಾಚರಣೆ’ ಆಚರಿಸಿದ್ರು. ಸಾಲಿಯೊಳಾಗ ಯಾವುದೇ ದಿನಾಚರಣೆ ಇದ್ರೂ ಕೂಡ ಏಳನೇ ಕ್ಲಾಸಲ್ಲಿ ಕಾರ್ಯಕ್ರಮ ಮಾಡ್ತಿದ್ರು, ಎಲ್ಲಾ ಕ್ಲಾಸಿನವರೆಲ್ಲ ಅಲ್ಲೆ ಕೂರ್ಬೆಕಿತ್ತು.

ಅವತ್ತು ಬೊರ್ಡಿನ ಮೇಲೆ ದೊಡ್ಡದಾಗಿ ‘ಮಹಿಳೆಯರ ದಿನಾಚರಣೆ’ ಅಂತ ಬರದು ಅದರ ಸುತ್ತಾನೂ ಹೂಗಳನ್ನ ಬಿಡಿಸಿದ್ರು. ನಮ್ಮ ಹೆಡ್ ಮಾಸ್ಟರ್ ನಿಂತು ಮಹಿಳಾ ದಿನಾಚರಣೆಯ ಬಗ್ಗೆ ಭಾಷಣ ಮಾಡಿದ್ರು, ನಮ್ಮ್ ಸಾಲಿಯೊಳಾಗಿದ್ದ ಎಲ್ಲಾ ಮೇಡಂಗಳು ಒಂದೆ ತರದ ಸೀರೆ ಹಾಕಿ ಚೆಂದ ರೆಡಿಯಾಗಿ, ಅವರೂ ಸಹ ಭಾಷಣ ಮಾಡಿದ್ರು, ಇದೆಲ್ಲಾದನ್ನೂ ನೋಡಿದ ಮೇಲೆ ‘ಮಾರ್ಚ್ ಎಂಟಕ್ಕೆ ಯಾಕೆ ಈ ದಿನಾಚರಣೆ? ಇವತ್ಯಾಕ್ ಎಲ್ಲಾರೂ ಹೆಣ್ಮಕ್ಕಳು ಅಂದ್ರ ಹಂಗ, ಹೆಣ್ಮಕ್ಕಳು ಅಂದ್ರ ಹಿಂಗ, ಹೆಣ್ಣು ಅಂದ್ರ ತಾಳ್ಮೆ, ರೂಪ, ದೇವತೆ, ಸಹನಾಮಯಿ ಅಂತ ಕರಿತಾರ? ಇಷ್ಟು ದಿನ ಇರಲಾರದ ಮೇಡಂಗಳೆಲ್ಲ ಇವತ್ಯಾಕ ಸ್ಟೇಜ್ ಮೇಲೆ ಕುಂತಾರ?’ ಅನ್ನೊ ಪ್ರಶ್ನೆಗಳೆಲ್ಲಾ ತಲಿ ತುಂಬಾ ಒಡ್ಯಾಡಕತಿದ್ವು. ಅಷ್ಟರೊಳಾಗ ನಮ್ಮ್ ಇಂಗ್ಲಿಷ್ ಮೇಡಂ ಕವಿತೆ ವಾಚನ ಮಾಡಕಂತ ಸ್ಟೇಜ್ ಮ್ಯಾಗ ಬಂದು,
“ವೇದಿಕೆಯ ಮೇಲಿರುವ ಎಲ್ಲಾ ಮಹಿಳೆರಿಗೂ ಮಹಿಳಾ ದಿನಾಚರಣೆಯ ಶುಭಾಶಯಗಳು, ಹಾಗೆನೇ ಇವತ್ತು ನಾನು ನನ್ನ ಗೆಳತಿಯರು ಶ್ವೇತಾ ಹಾಗೂ ವರ್ಣ ಬರೆದಿರುವ ಎರಡು ಕವಿತೆಗಳನ್ನ ವಾಚನ ಮಾಡ್ತೆನೆ, ಮೊದಲನೆ ಕವಿತೆಯ ಶೀರ್ಷಿಕೆ,
ಬಡಿಸುವಳು ಬರಿದಾಗದಂತೆ!…
ಅನುಭವದ ಅಡುಗೆಯ
ನೋಡಿ ಸವಿಯಬಂದವರೆಷ್ಟೋ…
ಅರೋಮವ ಆಘ್ರಾಣಿಸಿ
ಪುಳಕಿತಕೊಂಡವರೆಷ್ಟೋ….
ಬಡಸುವಲ್ಲಿ ಯಾವ ತರತಮವಿಲ್ಲ ಅವಳಲ್ಲಿ…
ಇನ್ನಾದರೂ ಹೇಗೆ ಬಿಂಬಿಸಿಯ್ಯಾಳೆ! ನಿಮ್ಮನ್ನ..
ಒಗ್ಗರಣೆಯ ಬದುಕಿಗೆ ಬಾಣಲೆಯೇ ಇಲ್ಲ..
ಅದು ಹೇಗಾದರೂ ಬಡಸಿಯಾಳೋ
ನಿಮಗೆ? ಮೃಷ್ಟಾನ್ನ ಭೋಜನ!…
ಆದರೂ, ನೀವೂ ತಿನ್ನಬಂದಿರಿ
ಕರೆಯದೇ… ಬಂದವರನ್ನೂ ಸತ್ಕರಿಸಿಬೇಕೆಂದು
ಹೇಳಿಲ್ಲವೇ ಸರ್ವಜ್ಞ?!
ಬಹುಶಃ, ಅವನಿಗೂ ತಿಳಿದಿರಬಹುದಿತ್ತೇನೋ…
ಅವರಿಗಾಗಿ ನಮ್ಮನ್ನ ಸೃಷ್ಟಿಕೊಂಡವರೆಂದು!
ಛೇ! ಯಾರು ಬಲ್ಲವರು ಈ ಅಡುಗೆಯ ಆಟ!?…
ಹಸಿವಿನ ಹಂಬಲಕೆ ಹಾತೊರೆದು
ತಿನ್ನಲು ಬಂದ ನಾವುಗಳು,
ರಕ್ಕಸರಿಗಿಂತಲೂ ಕಡಿಮೆ ಏನಲ್ಲ ಎನ್ನಲು
ಆ ಮುಖವಾಡಗಳ ನಗುವೆ! ಸಾಕ್ಷಿ.
ತಿಂದು ತೆಗಿದ ಮೇಲೂ ತೀರದ ದಾಹ…
ಎಷ್ಟಂತಾದರೂ ಬಡಿಸಿಯಾಳೂ
ಬರಿದೆಯಾದ ಪಾತ್ರೆಯಿಂದ!…
ಅಕ್ಷಯ ಪಾತ್ರೆಯೇನು ಅವಳಿಟ್ಟಿಲ್ಲವಲ್ಲ.
ತನ್ನ ಹೊಟ್ಟೆಗಿಲ್ಲದೆ ನಿಮ್ಮ ಖಾಲಿತನದ
ಹಸಿವ ಇಂಗಿಸಲು ಅವಳಿಂದ ಆಗದಾದಾಗ….
ಮೇಲೊಂದು ಮತ್ತೊಂದು ಅಡುಗೆಗೆ ಹುಡುಕಾಟ…
ಅನೂಕೂಲಕ್ಕೆ, ಹಂಗುತನಕ್ಕೆ ಒಂದೊಂದು
ನಾಮಗಳ ಅನಾವರಣ…
ಎಲ್ಲ ಅಡುಗೆಯೂ ಮೃಷ್ಟಾನ್ನವೇ, ಆದರೂ ಇಟ್ಟಿರಿ,
ಉಪ್ಪಿಲ್ಲದ ಅನ್ನ, ಹುಳಿಯಿಲ್ಲದ ತಿಳಿಸಾರು,
ಅಸವಿಯ ಪಾಯಸ, ಕಟುಕುರೊಟ್ಟಿ,
ಒಣಗಿದ ಚಪಾತಿ ಒಂದೇ ಎರಡೇ
ನೀವಿಟ್ಟು ಸನ್ಮಾನಿಸುವ ಹೆಸರು….
ನಿಮ್ಮ ಹುಂಬತನವ ತಿಳಿದು ಹೊರಬಂದು,
ಎಲ್ಲ ಹೆಸರ ಕಳೆದು, ದೇಹವೆಂಬ
ಅಂಕುಶ ಹಿಡಿದೆ ಬಡಿಸುತ್ತಾಳೆ. ಬನ್ನಿ ತಿನ್ನಬನ್ನಿ!
ಅದೂ ಉಪ್ಪು ಹುಳಿ ಸಹಿತ!
ಆದರೇ, ನೀವಿಟ್ಟ ಹೆಸರಿಂದಲ್ಲ,
ಅವಳಾಗಿಯೇ ‘ನೀಡುವ’ ತನ್ನ ಕೆಂಡದಂತಹ ಕಾಯದಿಂದ
ಬನ್ನಿ ಮತ್ತೆ ಮತ್ತೆ ಬಡಿಸುವಳು ಬರಿದಾಗದಂತೆ
ಇನ್ನೂ ನಿಮ್ಮ ಹೊಟ್ಟೆ ಬಿರಿಯುವಂತೆ.
– ಧವಳ
ಎರಡನೇ ಕವಿತೆ
ಹೌದು, ಇದು ಅವಳದ್ದೇ ದಿನ!
ಒಂದಷ್ಟು ಭಾಷಣ, ಮತ್ತಷ್ಟು ಶುಭಾಶಯ
ಇನ್ನಷ್ಟು ರಿಯಾಯಿತಿ
ಅರೇ!
ಇವತ್ತೇ ವೇದಿಕೆಯ ತುಂಬಾ
ಮಹಿಳೆಯರಿಗೆ ಸ್ಥಾನ!
ಅದ್ಯಾವುದೊ
ಬೇಲಿಯ ಸಂದಿಯಲ್ಲಿ
ಹರಿದ ಬಟ್ಟೆ!
ಸೀರೆಯೊ, ಲಂಗವೋ
ಅರ್ಧ ಉಸಿರಾಟ,
ಅದೇ ಬಟ್ಟೆಗೆ ಸಿಕ್ಕಿಕೊಂಡ
ಮಹಿಳಾ ಸಬಲೀಕರಣದ ಪ್ಯಾಂಪ್ಲೆಟ್
ಒಳಗಿನದೆಷ್ಟೊ ಯುದ್ಧಗಳನ್ನ
ಸದ್ದಿಲ್ಲದೆ ನುಂಗುವ ಅವಳಿಗೆ
ಯಾವ ಅಸ್ತ್ರಗಳೂ ಬೇಕಿಲ್ಲ!
ಒಲೆ, ಒಗ್ಗರಣೆ, ದಾರದ ಸೂಜಿ,
ಅರ್ಧಕ್ಕಿರುವ ಕೂದಲು, ಬೂಟು
ಪೆನ್ನು, ಅಕ್ಷರ, ಗೋಡೆ ಮೇಲಿನ
ಸಾವಿತ್ರಿಬಾಯಿಯ ಫೋಟೋ!
ಹೌದು ಇದು ಅವಳದ್ದೇ ದಿನ!
-ವರ್ಣ
ಅವರು ಕವಿತೆ ಓದಿದ ನಂತರ ಎಲ್ಲಾರೂ ಜೋರಾಗಿ ಚಪ್ಪಾಳೆ ತಟ್ಟಿದ್ರು, ಮೇಡಂ ಸ್ಟೇಜ್ ಮೇಲೆ ನಿಂತು ಬಡಿಸುವಳು ಬರಿದಾಗದಂತೆ ಅನುಭವದ ಅಡುಗೆಯ ಅಂದಾಗ, ಅದ್ಯಾವ ಅಡುಗೆ ಅದು ಅಂತ ತಿಳಿದಿದ್ರೂ ಆ ಕವಿತೆ, ಸಮಾಜ ಹೆಣ್ಣನ್ನ ನೋಡೊ ರೀತಿ ಬಗ್ಗೆ ಕವಿತೆ ಇದೆ ಅಂತ ಅವರ ಗಟ್ಟಿ ಧ್ವನಿಯೊಳಾಗ ಗೊತ್ತಾತು, ನನಗ ನನ್ನ ಸುತ್ತ ಇದ್ದ ಗೋಡೆ ನೆನಪಾಯ್ತು, ಅವರು ಎರಡ್ನೆ ಕವಿತೆ ‘ಹೌದು ಇದು ಅವಳದ್ದೇ ದಿನ’ ಅಂತ ಓದುವಾಗ ‘ಆಕಿ’ ನೆನಪಾದ್ಲು! ಆದ್ರ ಯಾರೂ ಅವರತಾಕ ಹೋಗಿ ಕವಿತೆಗಳ ಬಗ್ಗೆ ಮಾತಾಡ್ಲಿಲ್ಲ, ಬುಕ್ಕಿನ್ಯಾಗ ಪದ್ಯ ಓದ್ತಿದ್ದ ನನಗ, ಈ ಕವಿತೆಗಳೊಂತರಾ ಖುಷಿ ಕೊಟ್ಟು. ಕಾರ್ಯಕ್ರಮ ಮುಗಿದಿದ್ದ ತಡ ಓಡಿಕ್ಯಂತ, ಮಿಸ್ ಹತ್ರ ಹೋಗಿ ನಿಂತಗಂಡ್ಯ, ಕವಿತೆಗಳ ಬಗ್ಗೆ ಕೇಳಬೊಕಂತ ಅನ್ಸಿದ್ರೂ, ‘ಮಿಸ್ ಬೈದಾಬುಟ್ರ?’ ಅಂತನ್ನಿಸಿ ಸುಮ್ಮಾದೆ. ನನ್ನ ನೋಡಿದ್ದ ಇಂಗ್ಲಿಷ್ ಮೇಡಂ ‘ಹೇ… ಶಿವು ಹೆಂಗದಿಯೇ? ಅರಿಶಿಣ ಇನ್ನೂ ಆರಿಲ್ಲಲ್ಲ ಮೈ ಮ್ಯಾಗಿಂದು, ಆದ್ರೂ ಸಾಲಿಗೆ ಬಂದಿ ಮರದಿನಾನಾ, ಗುಡ್!’ ಅಂದು ಬೆನ್ನು ತಟ್ಟಿ ನಕ್ರು, ಅವರು ಯಾವಾಗಲೂ ‘ಓದ್ಬೇಕು ನೀವು’ ಅನ್ನೊದು ಒಂಥರಾ ಖುಷಿ ಕೊಡ್ತಿತ್ತು, ನಾನು ಕೈಕಟ್ಟಿ
‘ಮೇಡಂ ನೀವು ಇವತ್ತು ಕವಿತೆ ಓದಿದ್ರಲಾ ಭಾಳ ಚೋಲೊ ಇದ್ವು, ಕವಿತೆ ಅಂತ ಬರದು ಅವನ್ನ ಹಿಂಗೂ ಓದಬಹುದಾ ಅಂತ ಗೊತ್ತಿರ್ಲಿಲ್ಲ್ರಿ ನಮಗ. ಮತ್ತೆ ಈ ಮಹಿಳಾ ದಿನಾಚರಣೆನ ಇವತ್ತಾ ಯಾಕ್ರಿ ಮಾಡ್ತಾರ!’ ಅಂತ ಕೇಳಿದಾಗ, ತಮ್ಮ ಕೈಯ್ಯಲ್ಲಿದ್ದ ಬುಕ್ಕನ್ನ ಎರಡೂ ಕೈಯ್ಯಿಂದ ಹಿಡದು ಮಾತಾಡಾಕ ಶುರು ಮಾಡಿದ್ರು.
‘ನೋಡವಾ ಶಿವಮ್ಮ ಈ ದಿನಾಚರಣೆ ಹಿಂದ ಭಾಳ ದೊಡ್ಡ ಕತಿ ಐತಿ, ಪ್ರತಿ ವರ್ಷ ಮಾರ್ಚ್ ಎಂಟಕ್ಕೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂತ ಮಾಡ್ತಾರ, ಈ ದಿನ ಹೆಣ್ಮಕ್ಕಳ್ ಮಾಡಿರೊ ಸಾಧನೆ, ಹೋರಾಟ ಮತ್ತ ಅವರಿಗೆ ಸಮಾಜದಾಗ ಇರೊ ಸಮಾನ ಅವಕಾಶಗಳ ಬಗ್ಗೆ ಮಾತಾಡ್ತಾರ, ಹಿಂದಿನ ಕಾಲದಾಗ ಮಹಿಳೆಯರಿಗೂ ಸಮಾನತೆ ಬೇಕಂತ ಭಾಳ ಹೋರಾಟಗಳು ನಡದಾವ, 20 ನೇ ಶತಮಾನದಾಗ ಕೆಲಸಾ ಮಾಡೊ ಹೆಣ್ಮಕ್ಕಳಿಗೆ ಕಡಿಮಿ ಕೂಲಿ ಕೊಡ್ತಿದ್ರಂತ ಆದ್ರ, ಅವರು ಹೆಚ್ಚು ಕೆಲಸ ಮಾಡ್ಬೆಕ್ಕಿತ್ತಂತ, ಇದ್ರಿಂದಾಗಿ ಹೆಣ್ಮಕ್ಕಳು ಸಾಕಾಗಿ ಅಸಮಾನತೆ, ಕಡಿಮಿ ಕೂಲಿ, ಹೆಚ್ಚು ಕೆಲಸ ಇದೆಲ್ಲಾದರ ವಿರುದ್ಧ ಹೋರಾಟ ಮಾಡಿದ್ರಂತ. ಹಿಂಗ್ ಹೋರಾಟ ಮಾಡಿ ನಮಗೂ ಒಳ್ಳೆ ಕೆಲಸ, ರೊಕ್ಕ, ಸಮಾನ ಅವಕಾಶ, ಮತದಾನದ ಹಕ್ಕು ಕೊಡ್ಬೇಕು ಅಂತ ಬೀದಿ ಬೀದಿಯೊಳಾಗ ಹೋರಾಟ ಮಾಡ್ಯಾರ, ಹಿಂಗೆಲ್ಲಾ ಹೋರಾಟಗಳು ನಡಿಯುವಾಗ, 1910ರಲ್ಲಿ ಜರ್ಮನ್ ಸಮಾಜವಾದಿ ನಾಯಕಿ ಕ್ಲಾರಾ ಜೆಟ್ಕಿನ್ ಅವರು ಡೆನ್ಮಾರ್ಕ್ನ ಕೋಪನ್ಹೇಗನ್ನಲ್ಲಿ ನಡೆದ International Socialist Women’s Conference ನೊಳಾಗ, ಮಹಿಳೆಯರ ಹಕ್ಕಿಗಳಿಗಾಗಿ ಒಂದು ವಿಶೇಷ ದಿನ ಬೇಕು ಅಂತ ಕೇಳಿದಾಗ ಅದಕ್ಕ ಬೇರೆ ಬೇರೆ ದೇಶದ ಪ್ರತಿನಿಧಿಗಳು ಕೂಡ ಸಾಥ್ ಕೊಟ್ಟು ಈಗ ಮಹಿಳಾ ದಿನಾಚರಣೆನ ಆಚರಸ್ತಾರ’
ಮೇಡಂ ಇದನ್ನೆಲ್ಲಾ ಹೇಳುವಾಗ ಅವರ ಸುತ್ತ ನಿಂತಿದ್ದ ನಾನು ನಿಂಗಿ, ಪಾತಿ, ಗಂಗಾ ಬಿಟ್ಟ ಬಾಯಿ ಬಿಟ್ಟಂಗ ಕೇಳಿದ್ವಿ, ಇದರಿಂದ ಎಷ್ಟೆಲ್ಲಾ ಐತ್ಯಲಾ ಅಂತನ್ನಿಸ್ತು. ಅಷ್ಟರೊಳಾಗ ಸಾಲಿ ಬೆಲ್ ಬಾರಿಸ್ತು, ಎಲ್ಲಾರೂ ಬ್ಯಾಗ್ ತಗಂಡು ಮನಿ ಕಡೆ ನಡದ್ವಿ. ಆದ್ರ ನನಗ ಮೇಡಂ ಹೇಳಿದ್ದ ತಲಿಯೊಳಾಗ ಕೊರಿತಿತ್ತು,
“ಆಗಿನ ಕಾಲದಾಗ ಕೂಲಿ ಕಡಿಮಿ ಹೆಚ್ಚು ಕೆಲಸ ಇತ್ತಂತ, ಈಗ ನಮ್ಮವ್ವ ಅತ್ತಿನೂ ಹೊಲದಾಗ, ಹೊಲಕ್ಕ ಸಸಿಮಡಿ ಹಚ್ಚಾಕ, ಕಸ ತೆಗ್ಯಾಕ, ಒಡ್ಡು ಸವರಾಕ, ತೌಡಿ ಮಾಡಾಕ, ನೆಲ್ಲು ಕೊಯ್ಯಾಕ, ರಾಶಿ ಮಾಡಾಕ, ನೆಲ್ಲು ತೂರಾಕ ಹೋಗ್ತಾರ, ಹಂಗ ಗಣಮಕ್ಕಳೂ ಇವಾ ದಗದಾ ಮಾಡ್ತಾರ, ಹೊಲಕ್ಕ ಎಣ್ಣಿ ಓಡಿತ್ಯಾರ, ಗೊಬ್ಬರ ಚೆಲ್ತಾರ, ಗಂಡು ಮಕ್ಕಳೂ ದಗದಾ ಮಾಡ್ತಾರ, ಹೆಣ್ಮಕ್ಕಳೂ ದಗದಾ ಮಾಡ್ತಾರ, ಆದ್ರೆ ಇಲ್ಲಿನೂ ಹೆಣ್ಮಕ್ಕಳಿಗೆ ಕಡಿಮಿ ಕೂಲಿ ಯಾಕೈತಿ? ಇದು ಈಗಿನ ಕಾಲದಾಗೂ ಐತಲಾ, ಹೊಲ ಮನಿ ಅಂತ ದುಡಿಯೊರಿಗೆ ಹಿಂಗ್ಯಾಕ್ ಮಾಡ್ತಾರ?” ಇದನ್ನೆಲ್ಲ ನಾಳೆ ಮೇಡಂಗೆ ಕೇಳೇ ಬಿಡೋಣ ಅಂತ ಅನ್ಕೊಂಡು ಬರ್ತಿರುವಾಗ, ಹೊಲದಿಂದ ಮೇವು ಹೊತ್ಕೊಂಡು ಬರ್ತಿದ್ದ ಅತ್ತಿ, ನೋಡಿ ನಗ್ತಾ ‘ಅಲಲೇ ಹಂಗ್ಯಾಕ ಯೋಚನಿ ಮಾಡಕತಿ?’ ಅಂತ ಕೇಳಿದ್ದೆ ತಡ,

‘ಯತ್ತಿಬೇ… ನೀನು ಹೊಲದಾಗ ಮುಂಜಾನಿ ಸಂಜಿ ಅಂಬದಂಗ ದುಡೀತಿ, ಆ ಮ್ಯಾಗಡೆ ಓಣಿ ಸಾಮಣ್ಣಾನೂ ದುಡಿತಾನ ಆದ್ರ, ನಿನಗ್ಯಾಕ ಕಡಿಮಿ ಸಂಬಳ, ಆತಗ್ಯಾಕ ಹೆಚ್ಚು?’ ಅಂದದ್ದೆ. ತಲೆಮ್ಯಾಗಿದ್ದ ಮೇವಿನ ಗಂಟು ಕೇಳಾಗಿಟ್ಟು, ಜೋರಾಗಿ ನಗ್ತಾ ‘ಕಡಿಮಿ ಕೂಲಿ ಯಾಕಂದ್ರ ನಾನು ಹೆಣಮಗಳದಿನಿ ಅದಕ್ಕಾ’ ಅಂದು ಮತ್ತೆ ನಗತೊಡಗಿದ್ಲು, ಅವಳ ಸುತ್ತ ಇದ್ದ ಗೋಡೆ ಮತ್ತಷ್ಟು ಎತ್ತರ ಆಯ್ತು!

ಸುವರ್ಣ ಚೆಳ್ಳೂರು ಕೊಪ್ಪಳ ಜಿಲ್ಲೆ ಕಾರಟಗಿ ತಾಲ್ಲೂಕಿನ ಚಳ್ಳೂರಿನವರು. ಈಗ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ವಿಭಾಗದ ಸಂಶೋಧನಾ ವಿದ್ಯಾರ್ಥಿ. ಕಲೆ ಸಾಹಿತ್ಯ ಫೋಟೊಗ್ರಫಿ ಮುಖ್ಯ ಆಸಕ್ತಿಗಳು. ಇವರ ‘ಕಂಬದ ಹಕ್ಕಿ’ ಕಥೆಗೆ ‘ಸಂಗಾತ ಕಥಾ ಪುರಸ್ಕಾರ ‘ (2021), ‘ಕನಕಾಂಬರ’ ಕಥೆಗೆ ಧಾರವಾಡದ ವಿದ್ಯಾವರ್ಧಕ ಸಂಘದಿಂದ ‘ಶ್ರೀಮತಿ ಶಾಂತಾದೇವಿ ಕಣವಿ ಕಥಾ ಪುರಸ್ಕಾರ’ ದೊರಕಿದೆ (2022). ‘ಕನಕಾಂಬರ’ ಹಾಗೂ ‘ಮಾರ್ನಾಮಿ’ ಸಣ್ಣ ಕಥೆಗಳು ToTo Funds the Arts’ India ಅವರು ಕೊಡುವ ಕನ್ನಡ ಸೃಜನಶೀಲ ಬರವಣಿಗೆ (Kannada Creative writing) ವಿಭಾಗದಲ್ಲಿ 2023 ಮತ್ತು 2025 ರಲ್ಲಿ ಅಂತಿಮ ಹಂತಕ್ಕೆ (Short List) ಆಯ್ಕೆ ಆಗಿದೆ. ಇವರ ಬರಹಗಳು ಕೆಲವು ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ.
