ಅಪ್ಪಯ್ಯ “ಯೇ ಹುಡುಗ್ರೇ ಏಳ್ರೇ. ಆಲೇಮನೀಗೆ ಹೋಗಿ ಹಾಲು ಕುಡೀರೇ.” ಎಂದು ಏಳಿಸುತ್ತಿದ್ದರು. ಹಸಿದ ಹೊಟ್ಟೆಗೆ ಕಬ್ಬಿನ ಹಾಲು ಕುಡಿದರೆ ಅದೆಲ್ಲ ರಕ್ತವೇ ಆಗಿಬಿಡುತ್ತದೆಯಂತೆ ಎಂದು ಅಪ್ಪಯ್ಯ ಯಾವಾಗಲೂ ಹೇಳುತ್ತಿದ್ದರು. ಅಪ್ಪಯ್ಯನ ದನಿಗೆ, ನಾವು ಹೊದಿಕೆ ಕಿತ್ತೊಗೆದು, ಮುಖ ತೊಳೆದ ಶಾಸ್ತ್ರಮಾಡಿ, ಆಲೆಮನೆಯತ್ತ ಓಡುತ್ತಿದ್ದೆವು. ಅಷ್ಟರಲ್ಲಿ ಅಪ್ಪಯ್ಯ ಒಳ್ಳೆಯ ಕಬ್ಬು ಹುಡುಕಿ, ಗಾಣಕ್ಕೆ ಕೊಡಿಸಿ, ನಮಗೆ ಕುಡಿಯಲು ಸವಿಯಾದ ಐಸ್ ಕೋಲ್ಡ್ ಹಾಲು ಹಿಡಿದು ಇಟ್ಟಿರುತ್ತಿದ್ದರು. ಮೊದಲೇ ಮಾಘ ಮಾಸದ ಛಳಿ. ಆ ಥಣ್ಣನೆಯ ಹಾಲು ಹೊಟ್ಟೆಗಿಳಿಯುತ್ತಿದ್ದಂತೆಯೇ, ದಂತ ಪಂಕ್ತಿಗಳು, ಮಸೆದುಕೊಳ್ಳುತ್ತ, ಕಟ ಕಟನೆ ಸಪ್ಪಳ ಮಾಡತೊಡಗುತ್ತಿದ್ದವು.
ರೂಪಾ ರವೀಂದ್ರ ಜೋಶಿ ಬರೆಯುವ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಸರಣಿಯ ಏಳನೆಯ ಕಂತು
ನಮ್ಮೆಲ್ಲರ ಬದುಕಿನ ಸುಂದರ ಕ್ಷಣಗಳ ಪಟ್ಟಿ ಮಾಡಹೊರಟರೆ, ಬಹುಶಃ, ಅದರಲ್ಲಿ ಬಾಲ್ಯದ್ದೇ ಸಿಂಹಪಾಲು. ಆ ಮುಗ್ಧತೆ, ಸರಳತೆ, ಕಪಟವರಿಯದ ಎಳೆತನ ಇವೆಲ್ಲ ಬದುಕನ್ನು ತುಂಬ ಸುಂದರ ಹಾಗೂ ನಿತ್ಯ ನೂತನಗೊಳಿಸುತ್ತವೆ. ಹಾಗೇ ಕೊನೆತನಕ ಆ ಸುಂದರ ನೆನಪುಗಳು ಸ್ಮೃತಿ ಪಟಲದಲ್ಲಿ ಭದ್ರವಾಗಿ ಉಳಿದು ಬಿಡುತ್ತವೆ. ಇದಕ್ಕೆ ನನ್ನ ಬಾಲ್ಯವೂ ಹೊರತಾಗಿಲ್ಲ. ಹಳ್ಳಿಗಾಡಲ್ಲಿ ಬೆಳೆದ ನಮಗೆ, ಪೇಟೆ, ಪಟ್ಟಣ, ಜಾತ್ರೆ, ತೇರು, ಸಂತೆ, ಸಿನಿಮಾ, ನಾಟಕ ಯಾವುದರ ಸಂಪರ್ಕವೂ ಇರಲಿಲ್ಲ. ನಮ್ಮ ಕೃಷಿ ಭೂಮಿಯೇ ನಮ್ಮ ಆಡಂಬೋಲ. ಹಿತ್ತಲು, ಕೊಪ್ಪಲು, ಗುಡ್ಡ, ಬೆಟ್ಟ ಸುತ್ತಿ ಬರುವುದೇ, ನಮ್ಮ ಖುಶಿಯ ಪ್ರವಾಸ. ಗದ್ದೆ ನಟ್ಟಿ, ಗದ್ದೆ ಕೊಯಿಲುಗಳು ಜಾತ್ರೆ, ತೇರಿಗಿಂತ ಸಂಭ್ರಮ ಕೊಡುತ್ತಿದ್ದವು!!
ಇದೇ ಥರಹ ನಾವು ಅತಿ ಸಂಭ್ರಮ ಪಡುವ ಇನ್ನೊಂದು ಸಂದರ್ಭವೆಂದರೆ, ಆಲೆಮನೆ. ಇವತ್ತಿನ ಮಿಷನ್ ಗಾಣದ ವಾಣಿಜ್ಯಿಕ ಉದ್ದೇಶದ ಸಪ್ಪೆ ಆಲೆಮನೆಗೂ ನಮ್ಮ ಕಾಲದ ಸಾಂಪ್ರದಾಯಿಕ ಆಲೆಮನೆಗೂ ಅಜಗಜಾಂತರ ವ್ಯತ್ಯಾಸಗಳಿವೆ. ಅಂಥ ಸಾಂಪ್ರದಾಯಕವಾದ ಆಲೆಮನೆಯ ಕುರಿತ ನನ್ನ ಬಾಲ್ಯದ ನೆನಪನ್ನೇ ಇಂದು ನಿಮ್ಮ ಮುಂದೆ ತೆರೆದಿಡುತ್ತಿರುವೆ.
ದೀಪಾವಳಿಯ ಜೊತೆಗೇ ಕಾಲಿಡುವ ಕಾರ್ತೀಕ ಮಾಸ, ಪ್ರಕೃತಿಯಲ್ಲಿ ಮಹತ್ತರ ಬದಲಾವಣೆಯನ್ನೂ ಹೊತ್ತು ತರುತ್ತದೆ. ಧೋ ಧೋ ಸುರಿವ ಮಳೆ ಗಂಟು ಮೂಟೆ ಕಟ್ಟಿಕೊಂಡು ಪರಾರಿಯಾಗಿ, ಸೂರ್ಯದೇವ ಮೋಡಗಳ ತೆರೆ ಕಿತ್ತೊಗೆದು, ನೀಲಾಕಾಶದಲ್ಲಿ ಜಗಮಗಿಸುತ್ತ ಮತ್ತೆ ತನ್ನ ಬಿಸಿಲ ನೋಟದಿಂದ ಜಗವನ್ನು ನೇವರಿಸತೊಡಗುವ ಕಾಲವದು. ಎಲ್ಲೆಡೆ ಮೂಡು ಗಾಳಿಯೆದ್ದು, ಋತುಮಾನ ಬದಲಾಗುವ ಸೂಚನೆ ಬರುತ್ತಿದ್ದಂತೆಯೇ ಮೆಲ್ಲ ಮೆಲ್ಲನೆ ಕತ್ತಲೆಯ ಕಂಬಳಿ ಹೊದ್ದ ಚಳಿರಾಯ ಕಳ್ಳ ಹೆಜ್ಜೆಯಿಡುತ್ತ ಮುಸುಕಿನೊಳಗೆ ನುಗ್ಗಿ ಥಣ್ಣನೆಯ ಕಚಗುಳಿಯಿಡಲು ಹಾತೊರೆಯ ತೊಡಗುತ್ತಾನೆ.
ತಿಂಗಳೊಪ್ಪತ್ತಲ್ಲಿ ಬಂಗಾರದ ಬಣ್ಣದ ತೆನೆ ಹೊತ್ತ ಭತ್ತದ ಪೈರಿನ ಖಟಾವಿನ ಕಾಲ ಸಮೀಪಿಸಿಯೇ ಬಿಡುತ್ತದೆ. ಗದ್ದೆ ಕೊಯಿಲು ಮುಗಿಸಿ, ಭತ್ತ ಬಡಿದು, ಹುಲ್ಲು ಗೊಣಬೆ (ಬಣವೆ) ಒಟ್ಟಿದ ಮೇಲೆ, ವರ್ಷದ ಬಹುತೇಕ ಕೆಲಸಗಳೂ ಮುಗಿದಂತೇ. ಆಗ ರೈತರೆಲ್ಲರ ಚಿತ್ತ ತಮ್ಮ ತಮ್ಮ ಕಬ್ಬಿನಗದ್ದೆಗಳತ್ತ. ಬೆಳೆದು ನಿಂತ ಕಬ್ಬು ಕಡಿದು, ಗಾಣದೊಳಗಿಟ್ಟು, ಹಾಲು ತೆಗೆದು, ಕುದಿಸಿ ಬೆಲ್ಲಮಾಡುವ ಈ ಪ್ರಕ್ರಿಯೆ, ಅಷ್ಟು ಸುಲಭದ್ದಲ್ಲ. ಕಬ್ಬು ನೆಟ್ಟು, ಗೊಬ್ಬರ, ಮಣ್ಣು ಹಾಕಿ, ನೀರು ಹಾಯಿಸಿ, ರಾತ್ರಿಯೆಲ್ಲ ಕಾಡು ಹಂದಿ, ನರಿಗಳಿಂದ ಕಾಯ್ದುಕೊಳ್ಳುವುದು ಒಂದು ಹಂತವಾದರೆ, ಅದನ್ನು ಬೆಲ್ಲವಾಗಿಸಿ, ಡಬ್ಬಿ ತುಂಬಿಸಿ, ಮನೆಯೊಳಗೆ ಸಾಗಿಸುವುದು ಮುಂದಿನ ಹಂತ. ಈ ಪ್ರಕ್ರಿಯೆಯನ್ನೇ “ಆಲೆಮನೆ” “ಕಬ್ಬಿನಾಲೆ” ಎಂದೆಲ್ಲ ಸೂಚ್ಯವಾಗಿ ಕರೆಯುವುದು.
ರಜೆಯ ದಿನಗಳಲ್ಲಿ ಅಂಗಳದಲ್ಲಿ ಕುಣಿಯುತ್ತ ಆಟವಾಡುತ್ತಿರುವಾಗ, ಅದೆಲ್ಲಿಂದಲೋ ಗಾಳಿಯಲ್ಲಿ ತೇಲಿಬರುವ ಹೊಸ ಬೆಲ್ಲದ ಗಮ್ ಎನ್ನುವ ಪರಿಮಳಕ್ಕೆ ನಾವೆಲ್ಲ ಪರವಶರಾಗಿಬಿಡುತ್ತಿದ್ದೆವು. ಆಹಾ ಸುತ್ತಲೆಲ್ಲೋ ಆಲೆಮನೆ ಶುರುವಾಗಿದೆ. ಮನ ಥಟ್ಟನೆ ಲೆಕ್ಕಹಾಕತೊಡಗುತ್ತಿತ್ತು. ಜಗಲಿಯ ಮೇಲೆ ಕವಳ ಮೆಲ್ಲುತ್ತ ಅಪ್ಪಯ್ಯ ಮತ್ತೂ ನಮ್ಮನೆ ಆಳು ಸಹಾ ಇಂಥದೇ ಸಂಭಾಷಣೆಯಲ್ಲಿ ತೊಡಗಿರುತ್ತಿದ್ದರು. “ಶಿವಳ್ಳಿ ತಿಮ್ಮೇ ಹೆಗಡ್ರದ್ದು ಆಲಿಮನಿ (ಆಲೆಮನೆ) ಶುರುವಾಯೀತಂಬ್ರು. ಆ ದಡ್ ಬ್ಯಾಣದ್ದು (ದೊಡ್ಡ ಬೇಣ) ಕಣಿ (ಆಲೆ ಗಾಣ) ಯಂಬ್ರು”. ಆತ ಅಪ್ಪಯ್ಯನಿಗೆ ಒಪ್ಪಿಸುವ ವರದಿಯನ್ನು ನಾವು ಕಿವಿ ಚೂಪಾಗಿಸಿ ಕೇಳಿ, ಪುಳಕಿತಗೊಳ್ಳುತ್ತಿದ್ದೆವು. “ಮತ್ತೆ ನಮ್ಮನೇ ಆಲೆಮನೆ ಯಾವಾಗಾ?” ನಾವು ಅಕ್ಕ ತಂಗಿಯರು ಒಬ್ಬರಿಗೊಬ್ಬರು ಪ್ರಶ್ನೆ ಕೇಳಿಕೊಳ್ಳುವುದಿತ್ತು. ಉತ್ತರ ಯಾರಿಗೂ ಗೊತ್ತಿರದಿದ್ದರೂ, ‘ಅಂತೂ ತಿಂಗಳೊಪ್ಪತ್ತಿನಲ್ಲಿ ನಮ್ಮನೇಲೂ ಆಲೆಮನೆ ಶುರುವಾಗ್ತದೆ’ ಎಂಬ ಒಟ್ಟಾಭಿಪ್ರಾಯಕ್ಕೆ ಬಂದು ಖುಶಿ ಪಡುತ್ತಿದ್ದೆವು.
ಹಾಗೆ ಹೀಗೇ ದಿನ ಕಳೆಯುವುದರೊಳಗೆ, ನಮ್ಮನೆಗೂ ಗಾಣ ಬರುವ ಸುದ್ದಿ ಸಿಕ್ಕೇ ಬಿಡುತ್ತಿತ್ತು. ನಮ್ಮೂರ ಸಮೀಪಕ್ಕೆ ಅಂದರೆ, ಎರಡು ಮೂರು ಮೈಲಿ ದೂರದಲ್ಲಿ ಆಲೆಮನೆ ಮುಗಿಯುತ್ತಿದ್ದಂತೆಯೇ ನಮ್ಮನೆಯ ಆಲೆಮನೆ ಸಂಭ್ರಮ ಶುರುವಾಗುತ್ತಿತ್ತು.
ವಾರ ಮೊದಲು, ಒಳ್ಳೆಯ ದಿನ ನೋಡಿ, ಆಲೇ ಮನೆಯಾಗುವ ಜಾಗ ಚೊಕ್ಕಮಾಡಿ, ಕೆತ್ತಿ, ಸಮತಟ್ಟಾಗಿಸಿ, ಚಪ್ಪರ ಹಾಕಲಾಗುತ್ತಿತ್ತು. ಈ ಆಲೇ ಚಪ್ಪರದ ಒಂದು ಮೂಲೆಯಲ್ಲಿ ವೃತ್ತಾಕಾರಲ್ಲಿ ತಗ್ಗುತೋಡಿ, ಕಬ್ಬಿನ ಹಾಲು ತುಂಬಿಸಲು ವೃತ್ತಾಕಾರದ ಎತ್ತರವಾದ ತಗಡಿನ ಬಾನಿ (ಡ್ರಮ್ಮು) ಇಡಲಾಗುತ್ತಿತ್ತು. ಅದರ ಹಿಂಭಾಗದಲ್ಲಿ ಒಂದಷ್ಟು ದೂರದ ಎತ್ತರದ ಪ್ರದೇಶದಲ್ಲಿ ಕಬ್ಬಿನ ಗಾಣದ ತಳಭಾಗವನ್ನು ಮಣ್ಣಲ್ಲಿ ಗಟ್ಟಿಯಾಗಿ ಹೂತು ಜೋಡಿಸಿ ನಿಲ್ಲಿಸುತ್ತಿದ್ದರು. ಈ ಗಾಣದಲ್ಲಿ ಮೂರು ಮುಖ್ಯ ಭಾಗಗಳೆಂದರೆ, ಅತಿ ದೊಡ್ಡದು ಗಂಡು ಕಣೆ ಮಧ್ಯಮದ್ದು ಹೆಣ್ಣು ಕಣೆ ಚಿಕ್ಕದು ಮರಿ ಕಣೆ. ಈ ಮೂರರ ಮೇಲ್ಭಾಗವನ್ನೂ ಒಂದು ತಿರುಪಿನ ಮೂಲಕ ಬಂಧಿಸಿ, ಅದಕ್ಕೆ ಲಂಬವಾಗಿ ಒಂದು ಉದ್ದವಾದ ಕಂಭವನ್ನು ಜೋಡಿಸುತ್ತಿದ್ದರು. ಆ ಕಂಭದ ಒಂದು ತುದಿಗೆ ಕೋಣಗಳನ್ನು ಕಟ್ಟುತ್ತಿದ್ದರು. ಒಬ್ಬ ಮನುಷ್ಯ ಕಣೆಯ ಸನಿಹ ಕುಳಿತು ಎರಡು ಕಣೆಗಳ ಇರುಕಿನಲ್ಲಿ ಕಬ್ಬನ್ನು ತೂರಿಸುತ್ತಿದ್ದರೆ, ಕೋಣಗಳು ವೃತ್ತಾಕಾರದಲ್ಲಿ ತಿರುಗುವ ಮೂಲಕ ಕಣೆಗಳೂ ಸುತ್ತು ಹಾಕುತ್ತಲೇ, ಎರಡರ ನಡುವಿನ ಕಬ್ಬು ಅರೆದು, ಗಾಣದ ಬುಡದಿಂದ ಹಾಲು ಹೊರ ಹೊಮ್ಮತೊಡಗುತ್ತಿತ್ತು. ಹಾಗೆ ಹೊರಬಂದ ಕಬ್ಬಿನ ಹಾಲು, ಅದಕ್ಕಡ್ಡವಾಗಿ ಹಾಕಿದ್ದ ಅಡಿಕೆ ಮರದ ಹರಣಿಯಲ್ಲಿ ಬಿದ್ದು ಹರಿಯುತ್ತ, ಅ ಹರಣಿಯ ಇನ್ನೊಂದು ತುದಿಯಲ್ಲಿದ್ದ ಕಬ್ಬಿನ ಹಾಲಿನ ಬಾನಿಯನ್ನು ಸೇರುತ್ತಿತ್ತು.

ಚಪ್ಪರದ ಇನ್ನೊಂದು ಮೂಲೆಯಲ್ಲಿ ಆಯತಾಕಾರದ ತಗ್ಗು ತೆಗೆದು, ಅದರಲ್ಲಿ ಚಪ್ಪಟೆಯ (ಆಯತಾಕಾರದ) ತಗಡಿನ ಬೆಲ್ಲದ ಮರಿಗೆ ಇಡಲಾಗುತ್ತಿತ್ತು. ಚಪ್ಪರದ ಹೊರಭಾಗದಲ್ಲಿ ಮಾದೊಡ್ಡ ಆಲೆಯ ಒಲೆ. ಒಂದು, ಒಂದೂವರೆ ಮಾರಗಲದ ಜಾಗವನ್ನು ಸ್ವಲ್ಪ ತಗ್ಗಾಗಿಸಿ, ಅದರ ಸುತ್ತ, ವೃತ್ತಾಕಾರದಲ್ಲಿ ಎತ್ತರವಾದ ಮಣ್ಣಿನ ಕಟ್ಟೆ ಕಟ್ಟಲಾಗುತ್ತಿತ್ತು. ಅದರ ಮುಂಭಾಗಕ್ಕೆ ದೊಡ್ಡ ದೊಡ್ಡ ಮರದ ಕುಂಟೆ (ದಿಮ್ಮಿ) ಒಟ್ಟಲು ಅನುಕೂಲವಾಗುವಂತೆ, ಇಷ್ಟಗಲದ ಬಾಯಿ. ಅದರ ಮೇಲೆ ವೃತ್ತಾಕಾರದ ದೊಡ್ಡ ಬೆಲ್ಲದ ಕೊಪ್ಪರಿಗೆ. ಒಲೆಯ ಒಳಗೆ ಮರದ ದಿಮ್ಮಿಗಳನ್ನು ತುಂಬಿ ಬೆಂಕಿ ಮಾಡುತ್ತಿದ್ದಂತೆಯೆ, ಕೊಪ್ಪರಿಗೆಯಲ್ಲಿದ್ದ ಕಬ್ಬಿನ ಹಾಲು ಬಿಸಿಯೇರುತ್ತ ಕುದಿಯ ತೊಡಗುತ್ತಿತ್ತು. ಮೂರು ನಾಲ್ಕು ತಾಸುಗಳಲ್ಲಿ ಹಾಲು ಕುದಿದು ಕುದಿದು ಬಂಗಾರದ ಬಣ್ಣದ ನೊರೆಯುಗುಳುತ್ತ ಬೆಲ್ಲವಾಗಿ ಪರಿವರ್ತನೆಗೊಳ್ಳುವ ಆ ಪರಿ ನೋಡುವುದೇ ಒಂದು ಚಂದ. ಈ ಪ್ರಕ್ರಿಯೆ ಪೂರ್ಣಗೊಳ್ಳುವ ತನಕವೂ ಪರಿಣಿತನೊಬ್ಬ ಅದರ ಉಸ್ತುವಾರಿ ವಹಿಸುತ್ತಿದ್ದ. ಒಲೆಯ ಹತ್ತಿರವೇ ಸುಳಿದಾಡುತ್ತ, ಬೆಂಕಿ ಹೆಚ್ಚು ಕಡಿಮೆ ಮಾಡುತ್ತ, ಒಲೆಯ ತಳಭಾಗದ ಒಂದು ಭಾಗದಲ್ಲಿ ಮಾಡಿದ ದೊಡ್ಡ ಕಂಡಿಯಿಂದ ಅನಗತ್ಯ ಕೆಂಡ, ಬೂದಿಯನ್ನು ಹೊರಗೆಳೆದು ಹಾಕುತ್ತ, ಹಾಲಿನ ಮೇಲೆ ಕೆನೆಯಂತೆ ಬರುವ ಜಂಡನ್ನು ಭೀಮಗಾತ್ರದ ಜಾರೆ ಸೌಟಿನಿಂದ ತೆಗೆದು ಪಕ್ಕದ ಕರ್ರನೆಯ ಡಬ್ಬಿಕಡಿಗೆ ಹಾಕುತ್ತ ಇರುತ್ತಿದ್ದ. ಹಾಲು ಕುದಿದು ಹೊಂಬಣ್ಣಕ್ಕೆ ತಿರುಗುತ್ತಲೇ ಬೆಂಕಿಯನ್ನು ಪೂರ್ತಿ ಕಮ್ಮಿ ಮಾಡಿ, ಉಕ್ಕು ಬರದಂತೆ ಅದೇ ಭೀಮ ಸೌಟಿಂದ ತೊಳೆಸುತ್ತ “ಹ್ವಾಯ್ ಕೊಪ್ಪರಿಗೆ ಬಂತ್ರೋ” ಎಂದು ಜೋರಾಗಿ ಕೂಗಿ ಇತರರನ್ನು ಕರೆಯುತ್ತಿದ್ದ. ಈಗ ನಾಲ್ಕು ಜನ ಬಲವಾದ ಆಳುಗಳು ಕೊಪ್ಪರಿಗೆಯ ತಲಾ ಎರಡೆರಡು ಬಳೆಯಾಕಾರದ ತೊಟ್ಟಿಗೆ ಜೋಡಿಸುವಂತೆ ಒಂದೊಂದು ಬಲವಾದ ಕಟ್ಟಿಗೆಯನ್ನು ತೂರಿಸಿ, ನಾಲ್ಕೂ ತುದಿಯಲ್ಲಿ ಒಬ್ಬಬ್ಬರು ನಿಂತು ಮೆಲ್ಲಗೆ ಕೊಪ್ಪರಿಗೆ ಇಳಿಸಿ, ಪಾಕದ ಮರಿಗೆಯ ಅನತಿ ದೂರದಲ್ಲಿಟ್ಟ ದೊಡ್ಡ ಟಾಯರ್ ಮೇಲೆ ಇಡುತ್ತಿದ್ದರು. ಇಲ್ಲೂ ತುಂಬ ನಿಷ್ಣಾತರೇ ಇರಬೇಕಿತ್ತು. ಎಲ್ಲರೂ ಒಂದೇ ಅಳತೆಯಲ್ಲಿ ಎತ್ತಬೇಕು. ಇಲ್ಲವಾದರೆ, ಅದು ಒಂದೆಡೆ ವಾಲಿ ಅವರ ಮೈ ಮೇಲೆಯೆ ಬಿಸಿ ಬೆಲ್ಲ ಸುರಿದು ಹೋಗುವ ಅಪಾಯ ಇರುತ್ತದೆ. ಇಳಿಸಿದ ಬೆಲ್ಲವನ್ನು ಅಂಟಾಗದಂತೇ ಉದ್ದ ಕಟ್ಟಿಗೆಯಿಂದ ಚೆನ್ನಾಗಿ ಕೈಯ್ಯಾಡಿಸಿ, ಪಾಕದ ಮರಿಗೆಗೆ ಬೆಲ್ಲ ಸುರಿದರೆಂದರೆ, ಒಂದು ಹಂತದ ಕೆಲಸ ಮುಗಿದಂತೆ.
ಆಗೆಲ್ಲ ಡಿಸೈಲ್ ಗಾಣ ಇರಲಿಲ್ಲ. (ಕಾಲ ಕ್ರಮೇಣ ಚಿಮಣಿ ಎಣ್ಣೆಯಿಂದ ನಡೆಯುವ ಗಾಣ ಅಲ್ಲೊಂದು ಇಲ್ಲೊಂದು ತಲೆ ಎತ್ತಿತು) ಹಾಗಾಗಿ, ಬಲವಾದ ಕೋಣಗಳ ಜೋಡಿ ಕಟ್ಟಿ ಗಾಣ ಎಳೆಸಲಾಗುತ್ತಿತ್ತು. ಆದ್ದರಿಂದ ದಿನಕ್ಕೆ ಎರಡು ಬಾರಿ ತಂಪು ಹೊತ್ತಿನಲ್ಲಿ ಮಾತ್ರ ಅವುಗಳನ್ನು ದುಡಿಸಿಕೊಳ್ಳಲಾಗುತ್ತಿತ್ತು. ಮೊದಲ ಬಾರಿಯೆಂದರೆ, ಬೆಳಗಿನ ಜಾವ ನಾಲ್ಕು, ನಾಲ್ಕೂವರೆಯಿಂದ ಮುಂದಿನ ಮೂರು ನಾಲ್ಕು ತಾಸುಗಳ ತನಕ. ಮತ್ತೆ ಸಂಜೆ ೫ ಕ್ಕೆ ಹೊತ್ತಿಳಿಯುತ್ತಿದ್ದಂತೆಯೇ ಮತ್ತೆ ಅವುಗಳ ಕೆಲಸ ಶುರುವಾಗುತ್ತಿತ್ತು. ಈ ಕೋಣಗಳ ಉಸ್ತುವಾರಿ ನೋಡಿಕೊಳ್ಳುವವ, ಗಾಣ ಕಟ್ಟುವವ ಹೆಚ್ಚಾಗಿ ಅವುಗಳ ಮಾಲಿಕನೇ ಆಗಿರುತ್ತಿದ್ದರಿಂದ, ತುಂಬ ಕಾಳಜಿಯಿಂದ ಅವುಗಳನ್ನು ಸಲಹುತ್ತಿದ್ದ. ಅಂವನನ್ನು ನಮ್ಮಲ್ಲಿ “ಆಲೇ ಮಾಂವ” ಎಂದೇ ಕರೆಯುತ್ತಿದ್ದರು.
ಈ ಕಬ್ಬಿನ ಹಾಲಿನ ಬಾನಿಯ ಗಾತ್ರಕ್ಕೂ, ಹಾಲಿನ ಕೊಪ್ಪರಿಗೆಗೂ ಹಾಗೇ ಬೆಲ್ಲದ ಮರಿಗೆಯ ಗಾತ್ರಕ್ಕೂ ಒಂದು ಸರಿಯಾದ ಲೆಕ್ಕಾಚಾರವಿತ್ತು. ಆ ಹಾಲಿನ ಬಾನಿ ತುಂಬಿತೆಂದರೆ, ಒಂದು ಕೊಪ್ಪರಿಗೆ ಹಾಲಾಯಿತೆಂದೇ ಲೆಕ್ಕ. ಹಾಗೇ ಎರಡೂ ಹೊತ್ತೂ ಅಷ್ಟು ಹಾಲು ಕುದಿದು ಆಗುವ ಬೆಲ್ಲಕ್ಕೆ ಸಾಕಾಗುವಷ್ಟು ದೊಡ್ಡ ಪಾಕದ ಮರಿಗೆ ಇರುತ್ತಿತ್ತು.

ನಮ್ಮಲ್ಲಿ ಆಲೆಮನೆ ಶುರುವಾಗುತ್ತಿದ್ದಂತೆಯೇ ನಮ್ಮ ಉತ್ಸಾಹ ಮುಗಿಲು ಮುಟ್ಟುತ್ತಿತ್ತು. ಸುಮಾರು ೧೦-೧೨ ದಿನಗಳ ತನಕ ನಮ್ಮ ಆಲೆಮನೆ ನಡೆಯುತ್ತಿತ್ತು. ಆಗೆಲ್ಲ ಶಾಲೆಯಲ್ಲಿದ್ದರೂ, ನಮ್ಮ ಲಕ್ಷ್ಯ ಆಲೆಮನೆಯ ಕಡೆಗೇ ಇರುತ್ತಿತ್ತು. ಬೆಳಕು ಹರಿಯುವ ಮೊದಲೇ ಗಾಣ ಕಟ್ಟಿ, ಆಲೇ ಮಾಂವ ಕೊಂಗೆ ಹೊಡೆಯುತ್ತ ಕೋಣಗಳನ್ನು ಸುತ್ತಿಸುತ್ತಿದ್ದಂತೆಯೆ, ನಮ್ಮ ನಿದ್ದೆ ಓಡಿ ಹೋಗುತ್ತಿತ್ತು. ಅಷ್ಟು ಹೊತ್ತಿಗೆ ಅಪ್ಪಯ್ಯ “ಯೇ ಹುಡುಗ್ರೇ ಏಳ್ರೇ. ಆಲೇಮನೀಗೆ ಹೋಗಿ ಹಾಲು ಕುಡೀರೇ.” ಎಂದು ಏಳಿಸುತ್ತಿದ್ದರು. ಹಸಿದ ಹೊಟ್ಟೆಗೆ ಕಬ್ಬಿನ ಹಾಲು ಕುಡಿದರೆ ಅದೆಲ್ಲ ರಕ್ತವೇ ಆಗಿಬಿಡುತ್ತದೆಯಂತೆ ಎಂದು ಅಪ್ಪಯ್ಯ ಯಾವಾಗಲೂ ಹೇಳುತ್ತಿದ್ದರು. ಅಪ್ಪಯ್ಯನ ದನಿಗೆ, ನಾವು ಹೊದಿಕೆ ಕಿತ್ತೊಗೆದು, ಮುಖ ತೊಳೆದ ಶಾಸ್ತ್ರಮಾಡಿ, ಆಲೆಮನೆಯತ್ತ ಓಡುತ್ತಿದ್ದೆವು. ಅಷ್ಟರಲ್ಲಿ ಅಪ್ಪಯ್ಯ ಒಳ್ಳೆಯ ಕಬ್ಬು ಹುಡುಕಿ, ಗಾಣಕ್ಕೆ ಕೊಡಿಸಿ, ನಮಗೆ ಕುಡಿಯಲು ಸವಿಯಾದ ಐಸ್ ಕೋಲ್ಡ್ ಹಾಲು ಹಿಡಿದು ಇಟ್ಟಿರುತ್ತಿದ್ದರು. ಮೊದಲೇ ಮಾಘ ಮಾಸದ ಛಳಿ. ಆ ಥಣ್ಣನೆಯ ಹಾಲು ಹೊಟ್ಟೆಗಿಳಿಯುತ್ತಿದ್ದಂತೆಯೇ, ದಂತ ಪಂಕ್ತಿಗಳು, ಮಸೆದುಕೊಳ್ಳುತ್ತ, ಕಟ ಕಟನೆ ಸಪ್ಪಳ ಮಾಡತೊಡಗುತ್ತಿದ್ದವು. ಆಗ, ಉರಿಯುತ್ತಿದ್ದ ಆಲೇ ವಲೆ ನಮಗೆ ತುಂಬ ಅಪ್ಯಾಯಮಾನವೆನ್ನಿಸುತ್ತಿತ್ತು. ಅದರ ಬಾಯಿಯೆದುರಲ್ಲಿ ನಿಂತು, ಕೈ ಮುಂದೆ ಮಾಡಿ, ಬಿಸಿ ಮಾಡಿಕೊಳ್ಳುತ್ತ, ಮುಖಕ್ಕೆ ಶಾಖ ಕೊಟ್ಟುಕೊಳ್ಳುತ್ತಿದ್ದೆವು. ತಲೆಯೆತ್ತಿ ಮೇಲೆ ನೋಡಿದರೆ, ನಿರಭ್ರವಾದ ಆಕಾಶದ ತುಂಬ ಬೆಳಕಿನ ಬೀಜ ಬಿತ್ತಿದಂತೇ ಚುಮು ಚುಮು ಹೊಳೆವ ಅಸಂಖ್ಯಾತ ನಕ್ಷತ್ರಗಳು. “ಯೇ ಅಲ್ಲಿ ನೋಡು ಬೆಳ್ಳಿ ಚುಕ್ಕಿ. ಅಲ್ಲಿ ನೋಡೇ ಸಪ್ತರ್ಶಿಮಂಡಲ. ಹಾಂ ಅಲ್ಲೊಂದಿದೆ ನೋಡು ಅದೇ ಧ್ರುವತಾರೆ” ಎಂದು ನಾವುಗಳು ಖಗೋಳ ತಜ್ಞರಂತೇ ಒಬ್ಬರಿಗೊಬ್ಬರು ನಕ್ಷತ್ರಗಳ ಪರಿಚಯ ಮಾಡಿಸಿಕೊಡಲು ಮುಂದಾಗುತ್ತಿದ್ದವು. ನಮ್ಮನೆಯಲ್ಲಿ ಒಬ್ಬ ಹುಡುಗ ಇದ್ದ. ಅವ ನಮ್ಮನೆಯ ದನ ಮೇಯಿಸುವವನಾದರೂ, ನಮ್ಮ ಸಹವರ್ತಿಯಂತೇ ನಮ್ಮ ಜೊತೆ ಓಡಾಡುತ್ತ, ಆಟವಾಡುತ್ತ ನಮ್ಮೊಳಗೊಬ್ಬನಾಗಿದ್ದ. ಆಲೇ ಮನೆಯ ಕಾಲದಲ್ಲಿ ಅವನೂ ನಮ್ಮ ಜೊತೆ ಕಬ್ಬಿನಾಲು ಕುಡಿಯಲು ಬೆಳಗಿನ ಜಾವ ಎದ್ದು ಬರುತ್ತಿದ್ದ. ಒಮ್ಮೆ ನಾವೆಲ್ಲ ಈ ನಕ್ಷತ್ರಗಳ ಪರಿವೀಕ್ಷಣೆಯಲ್ಲಿ ತೊಡಗಿದ್ದಾಗ, ಅವನೂ ಒಂದು ನಕ್ಷತ್ರಗಳ ಗುಂಪಿನತ್ತ ಕೈ ತೋರಿಸಿ, “ಅಲ್ಲಿತ್ತಲಾ ಅದರ ಹೆಸರು ನಂಗೆ ಗೊತ್ತೀತು” ಎಂದು ಗರ್ವದಿಂದ ನುಡಿದ. ನಮ್ಮಕ್ಕ ಸುಮ್ಮನಿರದೇ “ಹಂಗಾದ್ರೆ ಹೇಳು ನೋಡ್ವಾ” ಅಂದಳು. ಆತ “ಅದರ ಹೆಸರು ಆಚಾರಿ ಕೋಲು. ಅಲ್ಲಿ ಸಾಲಾಗಿ ನಾಕು ಇದ್ದೋ ಕಾಣಿ.” ಅಂದ. ನಾವೆಲ್ಲರೂ ಬಿದ್ದು ಬಿದ್ದು ನಗತೊಡಗಿದೆವು. ಜೊತೆಗೆ ಆಲೇ ಮನೆಯಲ್ಲಿದ್ದ ಇತರರೂ ಜೋರಾಗಿ ನಗತೊಡಗಿದರು. ಪಾಪ ಆತ ಅಪಮಾನದಿಂದ ಓಡಿಬಿಟ್ಟ. ಇವತ್ತಿಗೂ ನಾವು ಅಕ್ಕ ತಂಗಿಯರು ಸೇರಿದರೆ, ಆಕಾಶದಲ್ಲಿನ “ಆಚಾರಿ ಕೋಲು” ನಕ್ಷತ್ರ ನೆನೆಸಿ ನಗುವುದಿದೆ.
ಆಲೇಮನೆಯ ಇನ್ನೊಂದು ರಸಘಳಿಗೆಯೆಂದರೆ, ನೊರೆ ಬೆಲ್ಲ ತಿನ್ನುವುದು. ಪಾಕದ ಮರಿಗೆಯಲ್ಲಿ ಹೆರೆದ ಬಂಗಾರ ಬಣ್ಣದ ನೊರೆ ಬೆಲ್ಲವನ್ನು ಬಾಳೇ ಚೂರಿನಲ್ಲಿ ಹಾಕಿ ಹಿಡಿದು, ನಾಲಿಗೆ ಉದ್ದ ಚಾಚಿ, ನೆಕ್ಕಿ ನೆಕ್ಕಿ ತಿನ್ನತೊಡಗಿದರೆ, ಸಾಕು ಅನ್ನಿಸುತ್ತಲೇ ಇರುತ್ತಿರಲಿಲ್ಲ. ಸಂಜೆ ಶಾಲೆ ಬಿಟ್ಟು ಬಂದಕೂಡಲೇ, ಬೆಲ್ಲ ನೆಕ್ಕಿ, ಕಬ್ಬು ತಿನ್ನತೊಡಗುತ್ತಿದ್ದೆವು. ರಜೆ ದಿನಗಳಲ್ಲಿ, ನಮ್ಮ ನಮ್ಮೊಳಗೇ ಕಬ್ಬು ತಿನ್ನುವ ಸ್ಪರ್ಧೆ ನಡೆಯುತ್ತಿತ್ತು. ನಾನು ಎಲ್ಲರಿಗಿಂತ ಚಿಕ್ಕವಳಾಗಿದ್ದರಿಂದ, ಈ ಸ್ಪರ್ಧೆಯಿಂದ ಹೊರಗಿರುತ್ತಿದ್ದೆ. ನಮ್ಮಲ್ಲಿ ಬಹುಮುಖ್ಯವಾಗಿ, ನಮ್ಮ ಸುಕನ್ಯಕ್ಕ ಮತ್ತೂ ಅಣ್ಣಯ್ಯನ ನಡುವೆ ಕಬ್ಬು ತಿನ್ನುವ ಸ್ಪರ್ಧೆ ಏರ್ಪಡುತ್ತಿತ್ತು. ಸುಶಕ್ಕ ಸುಕನ್ಯಕ್ಕನನ್ನು ಬೆಂಬಲಿಸಿದರೆ, ನಾನು ಅಣ್ಣಯ್ಯನ ಬೆಂಬಲಿಗಳಾಗಿರುತ್ತಿದ್ದೆ. ದವಡೆಯಲ್ಲಿ ಕಟ್ಟನೆ ಕಬ್ಬಿನ ಗಣ್ಣನ್ನು ಕಚ್ಚಿ ತುಂಡು ಮಾಡಿ, ಉಗುಳುತ್ತ, ಕ್ಷಣಾರ್ಧದಲ್ಲಿ ಮೂರು ನಾಲ್ಕು ಗಣ್ಣು ಕಬ್ಬು ತಿಂದು ಮುಗಿಸುವ ಅಣ್ಣಯ್ಯ ನನ್ನ ಪಾಲಿಗೆ ದೊಡ್ಡ ಹೀರೋ ಆಗಿದ್ದ. ಅಂವ ಗೆದ್ದಾಗ, ನಾನು ಚಪ್ಪಾಳೆ ತಟ್ಟಿ ನಕ್ಕರೆ, ನಮ್ಮಕ್ಕಂದಿರು ಸಿಟ್ಟು ತಡೆಯಲಾರದೇ ನನಗೆ ಚೂಟಿ ಓಡಿ ಹೋಗುತ್ತಿದ್ದರು. ನಾನು ಅಗತ್ಯಕ್ಕಿಂತಲೂ ದೊಡ್ಡ ಬಾಯಿ ಮಾಡಿ, ಅಣ್ಣಯ್ಯನ ಸಹಾನುಭೂತಿ ಗಿಟ್ಟಿಸಿಕೊಳ್ಳುತ್ತಿದ್ದೆ.
ಆಲೆಮನೆಯೆಂದರೆ, ಮನೆಯಲ್ಲಿ ಶುಭಕಾರ್ಯ ನಡೆದಷ್ಟು ಸಂಭ್ರಮ. ಬಂಧು ಬಳಗದವರು, ಆಪ್ತೇಷ್ಟರು ಎಲ್ಲ ಮನೆಗೆ ಬರುತ್ತಿದ್ದರು. ಅಷ್ಟೇ ಅಲ್ಲ. ಆಲೆಮನೆಯ ವೇಳೆಯಲ್ಲಿ, ಕಬ್ಬಿನ ಹಾಲಿನ ತೊಡದೇವು, ಬಟ್ಟಲ ಬೆಲ್ಲ, ಕಬ್ಬಿನಾಲು ದೋಸೆ ಹೀಗೇ ವೈವಿಧ್ಯಮಯ ತಿಂಡಿಗಳು ಕೂಡಾ ಆಗಲೇಬೇಕಿತ್ತು. ಬಂದ ನೆಂಟರಿಷ್ಟರಿಗೆಲ್ಲಾ ಅದರದ್ದೇ ಸಮಾರಾಧನೆಯಾಗಬೇಕಿತ್ತು. ಆಯಿ ಒಬ್ಬಳೇ ಎಲ್ಲವನ್ನು ಹೇಗೆ ನಿಭಾಯಿಸುತ್ತಿದ್ದಳೋ ಏನೋ ಎಂದು ಈಗ ಅನ್ನಿಸುತ್ತದೆ. ಅದೆಷ್ಟೋ ಸಲ ಆಳುಗಳ ಪಗಾರು ನಿಭಾಯಿಸಲಾರದ್ದಕ್ಕೆ ಆಯಿ ಕೂಡಾ ಗಾಣಕ್ಕೆ ಕಬ್ಬುಕೊಡಲು ಕುಳಿತುಕೊಳ್ಳುತ್ತಿದ್ದಳಂತೆ. ಒಮ್ಮೊಮ್ಮೆ ಬೆಲ್ಲದ ಕೊಪ್ಪರಿಗೆ ಇಳಿಸುವಾಗಲೂ ಕೈ ಜೋಡಿಸಬೇಕಾದ ಅನಿವಾರ್ಯತೆ ಬರುತ್ತಿತ್ತಂತೆ. ಪ್ರತೀ ವರ್ಷ ಕಬ್ಬು ನೆಟ್ಟಮೇಲೆ, ಬೇಸಿಗೆಯಿಡೀ ಆಯಿ ಅಪ್ಪಯ್ಯ ಇಬ್ಬರೇ ನೀರನ್ನು ಸೇದಿ ಸೇದಿ ಕಬ್ಬಿಗೆ ಹರಿಬಿಡುತ್ತಿದ್ದುದು ಇನ್ನೂ ನನ್ನ ಕಣ್ಣಿಗೆ ಕಟ್ಟಿದಂತಿದೆ. ಅಂಥ ಶ್ರಮ ಜೀವಿಗಳು ಇಂದಿನ ಕಾಲದಲ್ಲಿ ಕಣ್ಣಿಗೆ ಕಾಣಲಿಕ್ಕೂ ಸಿಗಲಿಕ್ಕಿಲ್ಲ.
ಇವತ್ತಿನ ಹಳ್ಳಿಗರ ಮನಸ್ಥಿತಿಗೂ ಅಂದಿನವರಿಗೂ ಅಜಗಜಾಂತರ ವ್ಯತ್ಯಾಸವಿದೆ. ಆಗೆಲ್ಲಾ ಈಗಿನಂತೇ ವ್ಯಾಪಾರಿ ಮನೋಭಾವ ಇರಲಿಲ್ಲ. ಆಲೆಮನೆ ಯಾರದ್ದೇ ಆದರೂ, ಎಲ್ಲರೂ ತಮ್ಮದೇ ಅನ್ನುವಷ್ಟು ಸಲಿಗೆಯಿಂದ ಹೋಗಿ, ಹೊಟ್ಟೆ ತುಂಬ ಹಾಲು ಕುಡಿದು, ಬೆಲ್ಲ ತಿಂದಿದ್ದಲ್ಲದೇ ಕೊಡಗಟ್ಟಲೇ ಕಬ್ಬಿನ ಹಾಲನ್ನು ತುಂಬಿಕೊಂಡು, ಜೊತೆಗೆ ಕಬ್ಬಿನ ಜಲ್ಲೆಯನ್ನು ಹೊತ್ತು ಮನೆಗೆ ಒಯ್ಯುತ್ತಿದ್ದರು. ಯಾರೊಬ್ಬರೂ ಅದನ್ನು ತಪ್ಪು ಅಂತ ಭಾವಿಸುತ್ತಲೇ ಇರಲಿಲ್ಲ. ನಾವುಗಳು ಕೂಡಾ ಊರಲ್ಲಿ ಎಲ್ಲೇ ಆಲೆಮನೆ ಆದರೂ ಹಕ್ಕಿನಿಂದಲೇ ಹೋಗುತ್ತಿದ್ದೆವು.

ಕಾಲಕ್ಕೆ ತಕ್ಕಂತೇ ಈಗಿನ ಹಳ್ಳಿಗರೂ ಬದಲಾಗಿದ್ದಾರೆ. ಎಲ್ಲರೂ ಎಲ್ಲವನ್ನೂ ವ್ಯಾಪಾರೀ ದೃಷ್ಟಿಯಿಂದಲೇ ಲೆಕ್ಕ ಹಾಕತೊಡಗಿದ್ದಾರೆ. ಬೆಲ್ಲಕ್ಕೆ ಚಿನ್ನದ ಬೆಲೆ ಬಂದಿರುವಾಗ, ಎಲ್ಲ ಮಾರಿ, ದೊಡ್ಡ ಗಂಟುಮಾಡಿಕೊಳ್ಳುವುದು ಬಿಟ್ಟು, ಮಂದಿಗೆ ಪುಕ್ಕಟೆ ಯಾಕೆ ಹಾಲು, ಬೆಲ್ಲ ಎಲ್ಲ ಕೊಡಬೇಕು? ಎನ್ನುವ ತಾರ್ಕಿಕ ಸಿದ್ಧಾಂತಕ್ಕೆ ಜನ ಬಂದಿರುವ ಹೊತ್ತಿಗೆ ಸರಿಯಾಗಿ, ಮೈತುಂಬ ಖಾಯಿಲೆ ಕಸಾಲೆ ಹತ್ತಿಸಿಕೊಂಡ ಹಳ್ಳಿಗರು, ತೀರ್ಥ ತಗೊಂಡ್ರೆ ಸೀತ, ಆರತಿ ತಗೊಂಡ್ರೆ ಉಷ್ಣ ಅನ್ನುವ ಸ್ಥಿತಿಗೆ ತಲುಪಿಬಿಟ್ಟಿದ್ದಾರೆ. ಅಂಥವರು ಬೆಲ್ಲ ತಿನ್ನುವುದು, ಹಾಲು ಕುಡಿಯುವುದು ಕನಸಿನ ಮಾತೇ ಸರಿ. ಏನು ಮಾಡೋದು? ಕಾಲಾಯ ತಸ್ಮೈ ನಮಃ.

ರೂಪಾ ರವೀಂದ್ರ ಜೋಶಿ ಮೂಲತಃ ಶಿರಸಿ ತಾಲ್ಲೂಕಿನ ದಾನಂದಿ ಗ್ರಾಮದವರು. ಸಧ್ಯ ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ. ವೃತ್ತಿಪರ ಲೆಕ್ಕಪತ್ರ ಬರಹಗಾರರಾಗಿ ಕೆಲಸ ಮಾಡುತ್ತಿರುವ ಇವರಿಗೆ ವಿವಿಧ ಪ್ರಕಾರದ ಸಾಹಿತ್ಯ ಬರವಣಿಗೆ ಹಾಗೂ ಅಧ್ಯಯನದಲ್ಲಿ ಮತ್ತೂ ರಂಗಭೂಮಿಯಲ್ಲೂ ಆಸಕ್ತಿ. ಸಾಗುತ ದೂರಾ ದೂರಾ (ಕಥಾ ಸಂಕಲನ), ಅಜ್ಞಾತೆ (ಸಾಮಾಜಿಕ ಕಾದಂಬರಿ) ೨೦೧೭ (ಲೇಖಿಕಾ ಪ್ರಶಸ್ತಿ ದೊರೆತಿದೆ), ಕಾನುಮನೆ (ಪತ್ತೆದಾರಿ ಕಾದಂಬರಿ) ೨೦೧೯ (ಕ ಸಾ ಪ ದತ್ತಿ ಪ್ರಶಸ್ತಿ ದೊರೆತಿದೆ, ಶೃಂಖಲಾ (ಸಾಮಾಜಿಕ ಕಾದಂಬರಿ) ೨೦೨೦ ( ರತ್ನಮ್ಮ ಹೆಗ್ಗಡೆ ಪ್ರಶಸ್ತಿ ದೊರೆತಿದೆ), ವಾಟ್ಸಪ್ ಕಥೆಗಳು (ಕಿರುಕಥಾ ಸಂಕಲನ), ಹತ್ತರ ಕೂಡ ಹನ್ನೊಂದು (ಪ್ರಬಂಧಗಳ ಸಂಕಲನ), ಚಿಗುರು ಬುತ್ತಿ (ಮಕ್ಕಳ ಕಾದಂಬರಿ) ಇವರ ಪ್ರಕಟಿತ ಕೃತಿಗಳು.
