ಪ್ರಥಮ ಬಾರಿ ಹೀಗೊಂದು ಅಲಾರಂ ನಮ್ಮನ್ನು ಧೃತಿಗೆಡಿಸಿತ್ತು. ಏನಾಗುತ್ತೋ ಅಂತ ಭಯದ ಜೊತೆಗೆ ಒಂದೇನೋ ಕುತೂಹಲವೂ ಇತ್ತು. ಆದರೆ ಅದೃಷ್ಟವಶಾತ್ ಆ ಸುಂಟರಗಾಳಿ ನೆಲಕ್ಕೆ ಮುಟ್ಟದೆ ಬೇರೆ ಎಲ್ಲೋ ಹೆದರಿಸಲು ಹೋಗಿತ್ತು. ಇಷ್ಟಕ್ಕೆ ಯಾಕೆ ಇಷ್ಟು ಭಯ ಬೀಳಿಸಿದರು ಅಂತ ಯೋಚಿಸಿದೆ. ಅಲ್ಲಿನ ಜನರು ಸುರಕ್ಷತೆಯ ಬಗ್ಗೆ ಅತಿ ಜಾಗರೂಕರು. ನಾವು ಸುರಕ್ಷತೆಯ ವಿಷಯದಲ್ಲಿ 1 ಅಂದರೆ ಅವರು 10! ಹೀಗಾಗಿ ಯಾವುದೇ ಪ್ರಕೃತಿ ವಿಕೋಪಗಳ ಸಣ್ಣ ಸುಳಿವು ಸಿಕ್ಕರೂ ಅದನ್ನೇ ದೊಡ್ಡ ಎಚ್ಚರಿಕೆಯ ಗಂಟೆಯಾಗಿ ಮೊಳಗಿಸುತ್ತಾರಂತೆ.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯ ಹದಿಮೂರನೆಯ ಬರಹ
ನಾನು ಕನ್ನಡ ಸಂಘದ ಸಾಂಸ್ಕೃತಿಕ ತಂಡದ ಜವಾಬ್ದಾರಿ ವಹಿಸಿಕೊಂಡ ಬಳಿಕ ಸ್ವಲ್ಪ ಗೆಲುವಾಗಿ ಇದ್ದಿದ್ದನ್ನು ಕಂಡು ಆಶಾ ಸ್ವಲ್ಪ ನಿರಂಬಳ ಆಗಿದ್ದಳೆಂದು ಕಾಣುತ್ತದೆ. ಮಾತೆತ್ತಿದರೆ ಭಾರತಕ್ಕೆ ವಾಪಸ್ಸು ಯಾವಾಗ ಹೋಗೋದು ಅಂತ ತುದಿಗಾಲಲ್ಲಿ ನಿಂತಿದ್ದ ಗಂಡ ಇನ್ನೊಂದಿಷ್ಟು ತಿಂಗಳಾದರೂ ಅಲ್ಲಿರುವವರೆಗೆ ನೆಮ್ಮದಿಯಿಂದ ಇದ್ದಾನು ಅಂತ ಅಂದುಕೊಂಡಳೇನೋ.
ನಾಟಕದ ಹುಚ್ಚು ನನಗೆ ಮೊದಲಿನಿಂದಲೂ ಇತ್ತು. ಬೆಂಗಳೂರಿನಲ್ಲಿ ಇರುವಾಗ ಶ್ರೀ. ಆ. ನಾ. ರಾವ್ ಜಾದವ ಗುರುಗಳ ಬಳಿ ವಾರಾಂತ್ಯದ ರಂಗ ತರಬೇತಿಗೆ ಅಂತ ಹೋಗುತ್ತಿದ್ದೆ. ಈಗದು ನಿಂತು ಹೋಗಿತ್ತಾದರೂ ತುಡಿತ ಹಾಗೇ ಇತ್ತಲ್ಲ! ಹೀಗಾಗಿ ಯುಗಾದಿ ಸಮಾರಂಭಕ್ಕೆ ಅಂತ ಒಂದು ನಾಟಕ ಮಾಡಿಬಿಡೋಣ ಅಂತ ಅಂದುಕೊಂಡೆ. ನನ್ನ ಬಳಿ ಹಲವಾರು idea ಗಳು ಇದ್ದವು. ಅಲ್ಲಿನ ಕೆಲವು ನಾಟಕದ ಹುಚ್ಚು ಇರುವವರನ್ನು ಕರೆಸಿ ಒಂದು ಮೀಟಿಂಗ್ ಮಾಡಿದೆ. ಹೊಸ ಸ್ಕ್ರಿಪ್ಟ್ ಕೂಡ ಬರೆದಿದ್ದೆ. ಆದರೆ ಹೊಸದಾಗಿ ಮಾಡಲು ಅಲ್ಲಿನ ರಂಗಕರ್ಮಿಗಳು ಅಷ್ಟು ಉತ್ಸಾಹ ತೋರಲಿಲ್ಲ. ಅವರೆಲ್ಲ ಈಗಾಗಲೇ youtube ನಲ್ಲಿ ಇದ್ದ ಒಂದಿಷ್ಟು skit ಗಳನ್ನು ಮಾಡೋಣ ಅಂದರು. ಅದೇನೋ ಗೊತ್ತಿಲ್ಲ ನಮ್ಮ ಜನರಿಗೆ ರಿಮೇಕ್ ಮಾಡುವುದಕ್ಕೇ ತುಂಬಾ ಒಲವು! ನನಗೆ ಬೇರೆ ಯಾರೋ ಮಾಡಿದ್ದನ್ನು ಕಾಪಿ ಮಾಡುವುದು ಇಷ್ಟವಿಲ್ಲದ ಕೆಲಸ. ಆದರೂ ಹೊಸಬ ಆಗಿದ್ದರಿಂದ ಅಷ್ಟು ನಿಷ್ಟುರ ಆಗುವುದು ಕೂಡ ಬೇಡ ಅನಿಸಿತು. ಹೀಗಾಗಿ ನಾನೊಂದು ಉಪಾಯ ಕಂಡುಕೊಂಡೆ. ಅವರೆಲ್ಲ ಸೇರಿ ಇಷ್ಟ ಪಟ್ಟ ಒಂದು ಲಘು ನಾಟಕದಲ್ಲಿ ಯಾವುದೇ ಪಾತ್ರಗಳೂ ಮಾತಾಡೋದು ಇರಲಿಲ್ಲ. ಒಬ್ಬರು ಹಿನ್ನೆಲೆ ದನಿ ಕೊಡಬೇಕಿತ್ತು. ಆ ದನಿಗೆ ಅನುಗುಣವಾಗಿ ಕಲಾವಿದರು stage ಮೇಲೆ ಅಭಿನಯಿಸಬೇಕಿತ್ತು. ಹಿನ್ನೆಲೆ ದನಿ ಕೊಡುವ ಕೆಲಸ ನಾನು ಮಾಡುವೆ ಅಂತ ಹೇಳಿದೆ. ಎಲ್ಲರೂ ಒಪ್ಪಿದರು. ಆ skit ನಲ್ಲಿ ಡಾ. ರಾಜಕುಮಾರ್ ಕೂಡ ಒಂದು ಪಾತ್ರವಾಗಿ ಬಂದು ಹೋಗುತ್ತಿದ್ದರು. ಅವರ ದನಿಯನ್ನು ಅನುಕರಣೆ ಮಾಡುವುದು ನನಗೆ ತುಂಬಾ ಇಷ್ಟದ ಕೆಲಸ, ಹಾಗೂ ತಕ್ಕಮಟ್ಟಿಗೆ ಚೆನ್ನಾಗಿಯೇ ಮಾಡುತ್ತಿದ್ದೆ. ನಾನು ಹಿನ್ನೆಲೆ ದನಿ ಕೊಡಲು ಅದು ಇನ್ನೊಂದು ಪ್ರಮುಖ ಕಾರಣ ಆಗಿತ್ತು. ಈ ಒಂದು ಲಘು ನಾಟಕವನ್ನು ಅಭ್ಯಾಸ ಮಾಡಲು ಆಗಾಗ ಒಂದೊಂದು ಕಡೆ ಸೇರುವುದು ಅಂತ ನಿಶ್ಚಯ ಆಯ್ತು. ಪ್ರಥಮ ಬಾರಿಗೆ ಅಂತ ನಮ್ಮ apartment ನ club house ನಲ್ಲಿಯೇ ಸೇರೋಣ ಅಂತ ನಿರ್ಧಾರ ಆಯ್ತು.
ಅಲ್ಲಿ ಪ್ರತಿ apartment ಕಟ್ಟಡಗಳ ಸಮುಚ್ಚಯದಲ್ಲಿ ಒಂದು ಕ್ಲಬ್ ಹೌಸ್ ಇರುತ್ತೆ. ಅದರಲ್ಲಿ ಒಂದಿಷ್ಟು ಒಳಾಂಗಣ ಆಟಗಳಾದ billiards, table tennis ಇತ್ಯಾದಿ ಆಡುವ ವ್ಯವಸ್ಥೆ ಇರುತ್ತದೆ. ಜಿಮ್ ಕೂಡ ಇರುತ್ತದೆ. ಜೊತೆಗೆ ಒಂದು ಈಜುಕೊಳ, ಇದ್ದೂ ಇಲ್ಲದಂತೆ ಇರುತ್ತದೆ. ಯಾಕೆಂದರೆ ಅಲ್ಲಿ ಹೆಚ್ಚುಕಡಿಮೆ 8 ತಿಂಗಳು ಚಳಿಯೇ ಇರುವುದರಿಂದ ಅದು ಯಾವಾಗಲೂ ಮುಚ್ಚಿಕೊಂಡು ಇರುತ್ತಿದ್ದುದೆ ಜಾಸ್ತಿ. ಇವೆಲ್ಲದ್ದರ ಜೊತೆಗೆ ಆ ಕ್ಲಬ್ ಹೌಸ್‌ನ ಇನ್ನೊಂದು ಮಹತ್ವದ ಉಪಯೋಗ ಅಂದರೆ ರಕ್ಕಸ ಗಾತ್ರದ ಸುಂಟರ ಗಾಳಿಗಳು (tornado) ಬಂದಾಗ ಅದೊಂದು ಸುರಕ್ಷಿತ ತಾಣ. ಬಯಲು ಸೀಮೆಯಲ್ಲಿ ಹುಟ್ಟಿ ಬೆಳೆದ ನನಗೆ ಸುಂಟರಗಾಳಿಗಳು ಹೊಸದೇನಲ್ಲ. ಆದರೆ ಓಮಾಹಾದಲ್ಲಿ ಬರುತ್ತಿದ್ದ ಸುಂಟರ ಗಾಳಿಗಳ ಎದುರು ಅವು ಬಚ್ಚಾಗಳು. ಅವು ತರಗೆಲೆಗಳು, ಹಾಳೆಗಳನ್ನೂ ಎತ್ತಿ ಹಾರಿಸಿಕೊಂಡು ಹೋದರೆ ಇವು ಇಡೀ ಕಟ್ಟಡಗಳನ್ನೇ ಹಾರಿಸಿಕೊಂಡು ಹೋಗುವಷ್ಟು ತಾಕತ್ತು ಹೊಂದಿದ್ದವು. ನಾವು ಅಲ್ಲಿ ಹೋಗಿ ಕೆಲವೇ ತಿಂಗಳು ಆಗಿದ್ದಾಗಲೇ ಒಂದು ಅಂತಹ tornado ಬಂದಿತ್ತು. ಅದು ಬರುವ ತುಂಬಾ ಮೊದಲೇ ಸೈರನ್ ಮೊಳಗಲು ಶುರು ಆಗುತ್ತೆ. ಹಾಗೆ ಅದು ಹೊಡೆದುಕೊಳ್ಳತೊಡಗಿದ ಕೂಡಲೇ ಎಲ್ಲರೂ ಸುರಕ್ಷಿತವಾದ ಕ್ಲಬ್ ಹೌಸಿಗೋ ಅಥವಾ ನೆಲಮಾಳಿಗೆಗೋ ಧಾವಿಸಬೇಕು.
ನಾನು ಅಂತಹ ಒಂದು ಸಂದರ್ಭದಲ್ಲಿ ಆಫೀಸ್‌ನಲ್ಲಿ ಇದ್ದೆ, ಮಗಳು ಶಾಲೆಯಲ್ಲಿ ಇದ್ದಳು, ಆಶಾ ಮನೆಯಲ್ಲಿ ಒಬ್ಬಳೇ ಇದ್ದಳು. ಪ್ರಥಮ ಬಾರಿ ಹೀಗೊಂದು ಅಲಾರಂ ನಮ್ಮನ್ನು ಧೃತಿಗೆಡಿಸಿತ್ತು. ಏನಾಗುತ್ತೋ ಅಂತ ಭಯದ ಜೊತೆಗೆ ಒಂದೇನೋ ಕುತೂಹಲವೂ ಇತ್ತು. ಆದರೆ ಅದೃಷ್ಟವಶಾತ್ ಆ ಸುಂಟರಗಾಳಿ ನೆಲಕ್ಕೆ ಮುಟ್ಟದೆ ಬೇರೆ ಎಲ್ಲೋ ಹೆದರಿಸಲು ಹೋಗಿತ್ತು. ಇಷ್ಟಕ್ಕೆ ಯಾಕೆ ಇಷ್ಟು ಭಯ ಬೀಳಿಸಿದರು ಅಂತ ಯೋಚಿಸಿದೆ. ಅಲ್ಲಿನ ಜನರು ಸುರಕ್ಷತೆಯ ಬಗ್ಗೆ ಅತಿ ಜಾಗರೂಕರು. ನಾವು ಸುರಕ್ಷತೆಯ ವಿಷಯದಲ್ಲಿ 1 ಅಂದರೆ ಅವರು 10! ಹೀಗಾಗಿ ಯಾವುದೇ ಪ್ರಕೃತಿ ವಿಕೋಪಗಳ ಸಣ್ಣ ಸುಳಿವು ಸಿಕ್ಕರೂ ಅದನ್ನೇ ದೊಡ್ಡ ಎಚ್ಚರಿಕೆಯ ಗಂಟೆಯಾಗಿ ಮೊಳಗಿಸುತ್ತಾರಂತೆ. ಹಿಮ ಬೀಳುವಾಗಲೂ ಅಷ್ಟೇ, ಒಂದು ಇಂಚ್ ಬೀಳುತ್ತೆ ಎಂಬ ಅನುಮಾನ ಇದ್ದರೆ ಒಂದು feet ಬೀಳುತ್ತೇ ಅಂತ ಹೇಳುತ್ತಿದ್ದರು ಹವಾಮಾನ ಇಲಾಖೆಯವರು! ಥೇಟ್, ನಮ್ಮವರು ಹೇಳುವ “ಸಾಧಾರಣದಿಂದ ಭಾರಿ ಮಳೆ” ಹಾಗೇನೇ! ಅಂತೂ ಎಲ್ಲ ನಮೂನೆಯ ವಿಕೋಪಗಳಿಂದ ರಕ್ಷಿಸುವ ಕ್ಲಬ್ ಹೌಸ್‌ನ ಮಹತ್ವ ಅವತ್ತು ತಿಳಿಯಿತು. ಅಂತಹ ಒಂದು ಜಾಗವನ್ನು, ಬೇರೆ ಸಮಯದಲ್ಲಿ ಬಳಸುತ್ತಿದ್ದವರು ಕಡಿಮೆಯೇ. ಯಾವಾಗಲೂ ಖಾಲಿಯೇ ಇರುತ್ತಿದ್ದ ಅದರಲ್ಲಿ ನಾವು ನಾಟಕದ ತಯಾರಿ ಮಾಡುವುದು ಸಮಂಜಸ ಅನಿಸಿತ್ತು. ಆದರೆ ಅಲ್ಲಿ ಸೇರಿದ ನಾವು ಹರಟೆ ಹೊಡೆಯುವುದರಲ್ಲಿ, ಚಾ ಕುಡಿಯುವುದರಲ್ಲೇ ಸಮಯ ಹರಣ ಮಾಡುತ್ತಿದ್ದೆವೆ ಹೊರತು ನಮ್ಮ ನಾಟಕಾಭ್ಯಾಸ ಮಾತ್ರ ಕುಂಟುತ್ತಾ ಸಾಗಿತ್ತು.
ಅಮೆರಿಕೆಯ ಕನ್ನಡಿಗರ ಸಮಾರಂಭಗಳಿಗೆ ಎಷ್ಟೋ ಸಲ ಭಾರತದಿಂದ ಪ್ರಖ್ಯಾತ ಸೆಲಿಬ್ರಿಟಿಗಳನ್ನು ಕರೆಸುವುದು ವಾಡಿಕೆ. ನಮ್ಮ ಸಂಘದ ಅಧ್ಯಕ್ಷ ಗಣೇಶ ನನಗೆ ಕರೆ ಮಾಡಿ, ತಾವು ಶ್ರೀಮತಿ. ಬಿ. ಆರ್. ಛಾಯಾ ಅವರನ್ನು ಕರೆಸುವ ಬಗ್ಗೆ ಯೋಚಿಸುತ್ತಿರುವೆ ಅಂದರು. ಕೋಗಿಲೆ ಕಂಠದ ಛಾಯಾ ಅವರ ಹಾಡುಗಳನ್ನು ಕೇಳಿದ್ದೆನಾದರೂ ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕಿರಲಿಲ್ಲ. ನಾನಂತೂ ತುಂಬಾ ಪುಳಕಿತನಾದೆ. ಅಂತೂ ಕನ್ನಡದ ಕೋಗಿಲೆಯನ್ನು ವಿದೇಶದಲ್ಲಿ ಭೇಟಿಯಾಗುವ ಅವಕಾಶ ನನಗೆ ಸಿಗುವುದಿತ್ತು. ಮಾಮರವೆಲ್ಲೋ ಕೋಗಿಲೆ ಎಲ್ಲೋ ಎಂಬಂತೆ!
ಅವರು ಈಗಾಗಲೇ ಅಮೆರಿಕೆಯ ಪ್ರವಾಸದಲ್ಲೇ ಇದ್ದ ಕಾರಣ ನಮಗೆ ಅವರನ್ನು ಕರಿಸುವುದು ಅಷ್ಟೊಂದು ಕಷ್ಟದ ವಿಷಯ ಆಗಿರಲಿಲ್ಲ. ಅವರ ಒಪ್ಪಿಗೆಯೊಂದು ಸಾಕಾಗಿತ್ತು. ಅವರು ಒಪ್ಪಿಯೂ ಬಿಟ್ಟರು ಅಂತ ತಿಳಿದಾಗ ನಾವೆಲ್ಲ ತುಂಬಾ ಖುಷಿ ಪಟ್ಟೆವು. ಅವರು ನಮ್ಮ ಸಮಾರಂಭಕ್ಕೆ ಅಂತ ಬಂದು ಓಮಾಹಾದಲ್ಲಿ ಒಂದಿಷ್ಟು ದಿನಗಳು ಉಳಿಯುತ್ತಾರೆ ಎಂಬ ವಿಷಯವೂ ತಿಳಿಯಿತು. ಹಾಗೆ ಉಳಿದರೆ ಒಂದು ದಿನ ನಮ್ಮ ಮನೆಗೆ ಊಟಕ್ಕೆ ಕರೆಯುವೆ ಅಂತ ಗಣೇಶ ಅವರಲ್ಲಿ ಮೊದಲೇ ತಿಳಿಸಿದ್ದೆ. ಈ ಸಲದ ಯುಗಾದಿ ಹಬ್ಬ ತುಂಬಾ ಅದ್ಭುತವಾಗಿ ಮಾಡಬೇಕು ಅಂತ ಅಂದುಕೊಂಡೆ. ಅದು ನನ್ನ ಜವಾಬ್ದಾರಿ ಕೂಡ ಆಗಿತ್ತು. ಛಾಯಕ್ಕ ಅವರ ಕಾರ್ಯಕ್ರಮವೇ ಮುಖ್ಯ ಆಕರ್ಷಣೆ ಆಗಿತ್ತು. ಇತರ ಕಾರ್ಯಕ್ರಮಗಳಲ್ಲಿ ಮಕ್ಕಳ ನೃತ್ಯಗಳು ಇದ್ದವು. ಅವರ “ಯಾರಿವನು ಈ ಮನ್ಮಥನು..” ಹಾಡಿಗೆ ಎಲ್ಲ ಗಂಡಸರು stage ಮೇಲೆ ಅಭಿನಯಿಸಬೇಕು, ಹಾಗೂ “ಮೂಡಲ್ ಕುಣಿಗಲ್ ಕೆರೆ” ಹಾಡಿಗೆ ಹೆಂಗಸರು ನೃತ್ಯ ಮಾಡಬೇಕು ಅಂತ ಮೊದಲೇ ತಿಳಿಸಿದ್ದರು. ಇವೆಲ್ಲ ಕಾರ್ಯಕ್ರಮಗಳ ಜೊತೆಗೆ ನಮ್ಮ ಲಘು ನಾಟಕವೂ ಇತ್ತು. ನಾಟಕ ಅಭ್ಯಾಸವನ್ನು ತುಂಬಾ ನಿರ್ಲಕ್ಷಿಸುತ್ತಿದ್ದ ನಮ್ಮ ಘಟಾನುಘಟಿ ಕಲಾವಿದರನ್ನು ಇಟ್ಟುಕೊಂಡು ಅದನ್ನು ನಾಟಕವಾಡುವ ಅವಶ್ಯಕತೆ ಇದೆಯೇ ಅಂತ ನಮಗೆಲ್ಲ ಅನಿಸಲು ಶುರು ಆಯ್ತು. Stage ಮೇಲೆ ಹೋಗಿ ಎಲ್ಲರೆದುರು ನಗೆಪಾಟಲು ಆಗುವುದು ಯಾರಿಗೆ ತಾನೇ ಇಷ್ಟ? ಅದೂ ಅಲ್ಲದೆ ಅಲ್ಲಿ ಇತರರ ಅಭಿನಯದ ಸರಿಸಮನಾಗಿ ನನ್ನ ದನಿ ಏರಿಳಿತ ಕೂಡ ತುಂಬಾ ಮುಖ್ಯವಾಗಿತ್ತು. ನಾನು ಯಾರಿಗೂ ಕಾಣದಂತೆ ನಿಂತು ಬರಿ mic ಹಿಡಿದುಕೊಂಡು ಮಾತನಾಡಿ ಪೂರ್ತಿ ನಾಟಕವನ್ನು ನಿಭಾಯಿಸಬೇಕಿತ್ತು. ಅವತ್ತಿನ ದಿನ ನೋಡೋಣ ಅಂತ ಆದಷ್ಟು practice ಮಾಡಿಕೊಂಡಿದ್ದೆವು.
ಛಾಯಕ್ಕ, ಪದ್ಮಪಾಣಿ ದಂಪತಿಗಳು ಹಿಂದಿನ ದಿನ ಬಂದೆ ಬಿಟ್ಟರು! ಸಮಾರಂಭದ ದಿನ ದೇವಸ್ಥಾನದ ಹಾಲ್ ಅಲಂಕಾರಗಳಿಂದ ಕಳೆಗಟ್ಟಿತ್ತು. ನಮ್ಮೆಲ್ಲರ ಸಂಭ್ರಮವೂ ಮುಗಿಲು ಮುಟ್ಟಿತ್ತು. ನಮಗೆಲ್ಲ celebrity ದಂಪತಿಗಳನ್ನು ಪರಿಚಯ ಮಾಡಿಸಿದರು. ಛಾಯಕ್ಕ mic test ಮಾಡುವ ಸಲುವಾಗಿ stage ಮೇಲೆ ಹೋಗಿ ಒಂದು tune ಹಾಡಿದರು ನೋಡಿ, ಅವರ ಇಂಪಾದ ದನಿಯನ್ನು ಕೇಳಿ ರೋಮಾಂಚನ ಆಯ್ತು. ನನ್ನ ಪಕ್ಕಕ್ಕೆ ನಿಂತಿದ್ದ ಮಗಳು ನನ್ನ ಕಡೆಗೆ ಸರಕ್ಕ ಅಂತ ತಿರುಗಿ ಆಶ್ಚರ್ಯದಿಂದ ಯಾರಪ್ಪಾ ಇವರು ಅಂದಳು! “ಹಿಂದೂಸ್ತಾನವು ಎಂದು ಮರೆಯಾದ ಭಾರತ ರತ್ನದ” ಪ್ರಶ್ನೆಗೆ, ಅವರ ಬಗ್ಗೆ ಹೇಳಿದೆ! ಪಾಪ ಎಂಟು ವರ್ಷದ ನನ್ನ ಮಗಳು ಅವರ ಹಾಡನ್ನು ಕೇಳಿರುವ ಸಾಧ್ಯತೆಗಳು ತುಂಬಾ ಕಡಿಮೆ ಇತ್ತು. ನಮ್ಮ ಮುಂದಿನ ಪೀಳಿಗೆಗೂ ಛಾಯಕ್ಕ ಅವರನ್ನು ಪರಿಚಯಿಸಿದ ನೆಬ್ರಾಸ್ಕ ಕನ್ನಡ ಸಂಘದ ಬಗ್ಗೆ ಅವತ್ತು ಹೆಮ್ಮೆ ಅನಿಸಿತು.
ಒಂದಾದ ಮೇಲೆ ಒಂದರಂತೆ ಸುಮಧುರ ಗಾನದ ಭೂರಿ ಭೋಜನವನ್ನು ಅವರು ಮನ ತೃಪ್ತಿಯಾಗುವಂತೆ ಉಣಿಸಿದರು. ಅವರ ಕಾರ್ಯಕ್ರಮವನ್ನು ಶ್ರೀ. ಪದ್ಮಪಾಣಿಯವರೆ ನಡೆಸಿಕೊಡುತ್ತಾರೆ. ಅವರ ಹಾಸ್ಯಪ್ರಜ್ಞೆಯಂತೂ ಅದ್ಭುತ. ಪ್ರತಿ ಹಾಡಿಗೆ ಮೊದಲು ನಂತರ ಮಾತಾಡಿ ನಮ್ಮನ್ನು ನಗೆಸುತ್ತಿದ್ದರು, ಮುಂದಿನ ಹಾಡು ಯಾವುದು ಎಂಬ hint ಕೊಡುತ್ತಿದ್ದರು . ‘ಯಾರಿವನು ಈ ಮನ್ಮಥನು..” ಎಂಬ ಹಾಡಿಗೆ ನಾವೆಲ್ಲ ಗಂಡಸರು ಪ್ರೇಕ್ಷಕರನ್ನು ನೋಡುತ್ತ ಅಭಿನಯಿಸುತ್ತಿರುವಾಗ, ಪದ್ಮಪಾಣಿಯವರು ನಮ್ಮನ್ನು ಉದ್ದೇಶಿಸಿ, “ದಯವಿಟ್ಟು ಎಲ್ಲ ಗಂಡಸರು ತಂತಮ್ಮ ಪತ್ನಿಯರನ್ನೇ ನೋಡಬೇಕಾಗಿ ವಿನಂತಿ” ಎಂಬ ಮಾತಿಗೆ ಬಿದ್ದು ಬಿದ್ದು ನಕ್ಕಿದ್ದೆವು.
ಎಲ್ಲ ಕಾರ್ಯಕ್ರಮಗಳ ಮಧ್ಯ ನಮ್ಮ ನಾಟಕವನ್ನೂ ಮಾಡೆಬಿಡೋಣ ಎಂಬ ಹುರುಪು ಬಂದು ಅದನ್ನೂ ಪ್ರದರ್ಶಿಸಿಯೇ ಬಿಟ್ಟೆವು. ಅದು ನಮ್ಮೆಲ್ಲರ ನಿರೀಕ್ಷೆಗೆ ಮೀರಿ ಪ್ರೇಕ್ಷಕರ ಮನ ಸೆಳೆಯಿತು. ನನ್ನ ಹಿನ್ನೆಲೆ ದನಿಯ ಏರಿಳಿತವನ್ನು ಕೂಡ ಹಲವರು ಪ್ರಶಂಸಿದರು. ಅಂತೂ ಅಮೆರಿಕೆಯಲ್ಲಿ ನಮ್ಮನ್ನು ನಾವು ಸಂಪೂರ್ಣವಾಗಿ ತೊಡಗಿಸಿಕೊಂಡ ಮೊಟ್ಟ ಮೊದಲ ಸಮಾರಂಭ ಯಶಸ್ವಿಯಾಗಿ ಮುಗಿದಿತ್ತು. ಇನ್ನೂ ಎಷ್ಟೋ ಜನ ಕನ್ನಡಿಗರಿಗೆ ಅವತ್ತು ನಾವು ಪರಿಚಯ ಆಗಿದ್ದೆವು. ನಮ್ಮ ಬಳಗ ಇನ್ನೂ ಬೆಳೆದಿತ್ತು!
*****
ಛಾಯಕ್ಕ ಅಲ್ಲಿ ಇರುವಷ್ಟು ದಿನಗಳು, ಮೂಲ-ಅನಿವಾಸಿ ತುಳಸಿ ಅವರ ಮನೆಯಲ್ಲಿಯೇ ವಾಸವಾಗಿದ್ದರು. ಯಾರೆ ಅತಿಥಿಗಳು ಬಂದರೂ ಅವರ ಮನೆಯಲ್ಲಿಯೇ ವಾಸ್ತವ್ಯ ಇರುತ್ತಿತ್ತು. ಅದೇ ಕಾರಣಕ್ಕೆ ಅಲ್ಲಿನ ಎಲ್ಲರೂ ತುಳಸಿ ಅವರಿಗೆ ಅನ್ನಪೂರ್ಣೆಶ್ವರಿ ಅಂತಲೇ ಕರೆಯುತ್ತಿದ್ದರು. ಅವರನ್ನು ಕರೆತರಲು ಅವತ್ತು ತುಳಸಿ ಅವರ ಮನೆಗೆ ತೆರಳಿದೆ. ಜೊತೆಗೆ ಗಜನಿ ಮಂಜು ಅನ್ನೂ ಕರೆದುಕೊಂಡು ಹೋಗಿದ್ದೆ. ನಾವು ಅಲ್ಲಿಗೆ ಹೋದಾಗ ಅವರು ನಮ್ಮ ಜೊತೆಗೆ ಬರಲು ತಯಾರಾಗುತ್ತಿದ್ದರು. ಸ್ವಲ್ಪ ಸಮಯ ಇತ್ತು. ತುಳಸಿ ಹೇಳುತ್ತಿದ್ದರು, “ಗುರು, ಛಾಯಕ್ಕ ಕೂತಲ್ಲಿ, ನಿಂತಲ್ಲಿ ಹಾಡು ಹೇಳುತ್ತಲೇ ಇರುತ್ತಾರೆ. ಎಷ್ಟು passion, dedication ಇದೆ ರಿ ಅವರಿಗೆ” ಅಂತ ಅಚ್ಚರಿಯಿಂದ ಹೇಳುತ್ತಿದ್ದರು. ಕೆಲವು ದಿನಗಳು ಇಂತಹ ಸಾಧಕರ ಜೊತೆಗೆ ಇರುವ ಅವಕಾಶ ಸಿಕ್ಕಿದ್ದು ತುಳಸಿಯವರ ಪುಣ್ಯವೇ ಸರಿ!
ಅವರ ಮನೆಯಿಂದ ಛಾಯಕ್ಕ ದಂಪತಿಗಳನ್ನು ಕರೆದುಕೊಂಡು ಬಂದೆವು. ಅವರಿಬ್ಬರೂ ಎಷ್ಟೋ ದಿನಗಳ ಪರಿಚಯವೇನೋ ಎಂಬಂತೆ ನಮ್ಮ ಜೊತೆಗೆ ಯಾವುದೇ ಬಿಗುವು ಬಿನ್ನಾಣ ಇಲ್ಲದಂತೆ ಹರಟೆ ಹೊಡೆದರು. ಪದ್ಮಪಾಣಿಯವರಂತೂ ತಮ್ಮದೇ ಮನೆಯಲ್ಲಿ ಕುಳಿತಂತೆ ನಮ್ಮ ಫ್ಲಾಟ್‌ನ ಮೆತ್ತನೆಯ ನೆಲದ ಮೇಲೆಯೇ ನಮ್ಮ ಜೊತೆಗೆ ಕುಳಿತು ಹರಟೆ ಹೊಡೆದು, ನಕ್ಕು ನಗಿಸಿದ ಕ್ಷಣಗಳು ಇನ್ನೂ ಕಣ್ಣ ಮುಂದೆಯೇ ಇವೆ! ಹಲವಾರು ಸಾಹಿತಿಗಳ ಬಗ್ಗೆ, ನಾಟಕ, ಸಿನೆಮಾಗಳ ಬಗ್ಗೆ ಕೊನೆಯೇ ಇಲ್ಲವೇನೋ ಎಂಬಂತೆ ಮಾತಾಡುತ್ತಲೆ ಸಮಯ ಹೋದದ್ದೇ ತಿಳಿಯಲಿಲ್ಲ. ಮರೆಯಲಾಗದ ಕ್ಷಣಗಳವು. ಮುಂದೊಮ್ಮೆ ಭಾರತಕ್ಕೆ ಬಂದ ನಂತರ ಛಾಯಕ್ಕ ಕಳಿಸಿದ್ದ ಇಂಪಾದ voice message ನ್ನು ಜೋಪಾನವಾಗಿ ಇನ್ನೂ ಇಟ್ಟುಕೊಂಡಿದ್ದೇನೆ!
(ಮುಂದುವರಿಯುವುದು..)
(ಹಿಂದಿನ ಕಂತು:ಟೈಂ ಪಾಸ್ ಫ್ರೆಂಡೊಬ್ಬನ ಕತೆ..)
ಗುರುಪ್ರಸಾದ ಕುರ್ತಕೋಟಿ ಇಪ್ಪತ್ತು ವರ್ಷಗಳ ಕಾಲ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿ ಕೃಷಿಗಿಳಿದ ಉತ್ಸಾಹಿ ರೈತರು. “ಬೆಳೆಸಿರಿ” ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. “ಕೇಶಕ್ಷಾಮ” (ಹಾಸ್ಯ ಬರಹಗಳ ಸಂಕಲನ), ಗ್ರಾಮ “ಡ್ರಾಮಾಯಣ” ಸೇರಿ ಇವರ ನಾಲ್ಕು ಕೃತಿಗಳು ಪ್ರಕಟಗೊಂಡಿವೆ.