ಋತುದೊಲುಮೆ…

ಅವನಿಲ್ಲ ಇಲ್ಲಿ ಎಲ್ಲೂ
ಪಡಸಾಲೆ ಹಜಾರ ಮತ್ತು ಅಂಗಳದಲ್ಲೂ
ಬರಬಹುದು ನಾಳೆ ಕಳೆದು
ನಾಡಿದ್ದು ಸರಿಯುವ ಮುನ್ನವೇ!

ಸೋಲಬೇಕಾದ ಕಾಲು ಸೋತಿಲ್ಲ
ಕಾಡಬೇಕಾದ ಕಿಬ್ಬೊಟ್ಟೆ
ಕಾಡಿಲ್ಲ
ಬೆನ್ನಿನ ಚಳಕು ಬಾಯಿಬಿಟ್ಟಿಲ್ಲ.
ಒಳಗೆ ಕೆಂಪು ಮಳೆ ಸುರಿದು ದಿನವಾದರೂ
ಇಲ್ಲಿ ಯಾವ ಗುರುತೂ ಉಳಿದಿಲ್ಲ..

ಹಂಡೆಯೊಳಗೆ ಕುದಿಸಿಟ್ಟುಹೋದ
ನೀರು ಆರಿಲ್ಲ
ಸೀಗೆ ಸಾಬೂನು ಟವಲು ಅವನ
ಮಾತು ಮೀರಿ ಕದಲಿಲ್ಲ
ಅಂವ ದೇವರ ಮುಂದೆ ಹಚ್ಚಿಟ್ಟು
ಹೋದ ಹಣತೆ ಇನ್ನೂ ಆರಿಲ್ಲ..
ಬಿಡಿಸಿ ದೇವರಿಗೆ ಮುಡಿಸಿ ಹೋದ
ಹೂವೂ ಬಾಡಿಲ್ಲ..

ಬಿಡೊ.. ಒಮ್ಮೆಯಾದರೂ
ನುಂಗುವೆ
ಹಿಂಡುವ ಹೊಟ್ಟೆಯ ನೋವನ್ನು
ಬೆನ್ನ ಎಳೆತವನ್ನ
ರೆಪ್ಪೆ ಮೇಲೆ ಕೂರುವ ದಣಿವನ್ನ
ಅಂದರೂ..
ಬಿಡುವುದಿಲ್ಲ ಅವನ ತಾಕೀತುಗಳು!
ಅವನಿಲ್ಲದೆಯೂ ಮನೆ ಹಬ್ಬವಾಗುತ್ತದೆ
ಮತ್ತು ನನ್ನ ಮುಟ್ಟೂ
ಅವನ ತಾಕೀತುಗಳೇ ಹಾಗೆ!
ರೂಢಿಯಾಗಿ ಬಿಡುತ್ತವೆ..

ನಾಡಿದ್ದು ಅಂವ ಬಂದಾಗ
ಬಾಗಿಲು ತೆರೆದ ತಕ್ಷಣ ಅವನ ಮುಖ
ನೋಡುತ್ತೇನೆ
ನೋವು ಉಂಡ ಕುರುಹು ಕಾಣುತ್ತದೆ
ನಿಜಕ್ಕೂ,
ನನ್ನ ನೋವನ್ನು ಅವ ಅಲ್ಲೇ ಉಣ್ಣುತ್ತಾನೆ;
ಅವನ ಖುಷಿಯನ್ನು ನಾನಿಲ್ಲಿ!
ಅದು ನೋವಲ್ಲ‌ ಒಲುಮೆ
ಅನ್ನುತ್ತಾನೆ, ಪಾಪ ಮುಗ್ಧ..!
ಹಾಂ, ನೆನಪಾಯ್ತು
ಋತುಸ್ರಾವ ಎಂದರೆ ಬೈಯುತ್ತಾನೆ
ಅದು ಋತುಸ್ರಾವ ಅಲ್ಲ ‘ಋತುದೊಲುಮೆ’
ಎಂದು ತಪ್ಪು ಅಕ್ಷರ ಬರೆದ ಮಗುವನ್ನು
ತಿದ್ದುವಂತೆ ತಿದ್ದಿ
ಒಂದು ಮುತ್ತಿಡುತ್ತಾನೆ…