1.ಹೊಸದಾಗಿ ತಂದಿದ್ದ ಡೋರ್ ಬೆಲ್ಲು –
ಅವಳು ಡೋರ್ ಬೆಲ್ಲು

ಅದೇ ಎತ್ತರ ಅದೇ ಕಾಯ
ಬಣ್ಣದೊಂದಿಗೆ ಯಾವ ರಾಜಿಯೂ ಇಲ್ಲ
ಅತ್ತ ಇತ್ತ ಸುತ್ತ ಮುತ್ತ ತಿರುಗಾಡಿ,
ತಂದಿದ್ದರು ಡೋರ್ ಬೆಲ್ಲು

ಎಲ್ಲರಿಗೂ ಸಂತಸ
ಪದೇ ಪದೇ ಒತ್ತಲು,
ಮಕ್ಕಳಿಗೆ ಕೊಂಚ ಮುಜುಗರ
ಹಿರಿಯರಿಗೆ ಅದ್ಯಾವ ಲೆಕ್ಕಾಚಾರ!??

ಒಂದೋ ಎರಡೋ ಅದೆಷ್ಟು ಸಾರಿಯೋ
ಬೇಕಿದ್ದರೂ ಬಳಸುವರು
ಬೇಡವಾಗಿದ್ದರೂ ಬಾರಿಸುವರು ಏಕೆಂದರೆ
ಅದು ಹೊಸದಾಗಿ‌ ತಂದಿದ್ದ ಡೋರ್ ಬೆಲ್ಲು!!

ಮರೆತು ತಮ್ಮೊಳಗಿನ ಕರ್ಕಶ ಕಲ್ಮಶ
ಎಲ್ಲೆಡೆ ಡೋರ್ಬೆಲ್ಲಿನದೇ ಚರ್ಚೆ
ಗುಣ ವರ್ಣ ಸ್ವರ ಸಾಮರ್ಥ್ಯ
ತುಲನೆ ಮಾಡುವ ಹರಸಾಹಸ!

ಬಾಯಿ ಇದ್ದರೆ ಏನಂತೆ?
ಒತ್ತಿದಷ್ಟೇ ಬರಬೇಕು ಸೌಂಡು!
ಇಷ್ಟ ಇದ್ದರೂ ಇಲ್ಲದಿದ್ದರೂ
ಮನರಂಜನೆ ಮಾಡಲೇ ಬೇಕು ಡೋರ್ ಬೆಲ್ಲು!

ಸಹನೆಗೂ ಒಂದು ಮಿತಿ ಇತ್ತು
ಡೋರ್ಬೆಲ್ಲು ಸುಸ್ತಾಗಿಬಿಟ್ಟಿತ್ತು,
ಧ್ವನಿ ಕೆಟ್ಟು ಹೋಗಿತ್ತು,
ಅದು ಅನುಭವಿಯಾಗಿತ್ತು, ಹಳೆಯದಾಗಿತ್ತು,

ಆದರೆ! ಅದೇ ಗೋಳು ಮನೆಯವರದು
ಮನರಂಜನೆಯೇ ಅವರಿಗೆ ಬೇಕಿತ್ತು,
ಎಲ್ಲಿಂದ ತರಬೇಕು ಡೋರ್ಬೆಲ್ಲು
ಮತ್ತೇ ಆ ಹೊಸತನದ ಹುಮ್ಮಸ್ಸು???

ಬಳಸಿ ಬಳಸಿ ಕೆಡವಿದವರೂ
ನೀವೇ ಅಲ್ಲವೇ?
ಹಳೆಯದಾದರೂ ಹೀಯಾಳಿಸುವುದು
ಬಿಡುವುದಿಲ್ಲವೇ?…

ಏನೂ ಮಾಡಲು ಒಪ್ಪದು ಮನಸ್ಸು,
ಚಿಂತೆಯಲ್ಲಿ ಮುಳುಗಿತು ಡೋರ್ಬೆಲ್ಲು
ಮತ್ತೇ ಯಾರೋ ಒತ್ತಿಯೇ ಬಿಟ್ಟರು!
ಸಿಟ್ಟಿನಿಂದ ವೈರಾದವು ಅದಲು ಬದಲು!!

ಹೊಡೆಯಿತು ಕರೆಂಟು,
ಮನೆಯಲ್ಲಿ ಆವರಿಸಿತು ಕತ್ತಲು,
ಮಾತಾಡಿತು ಡೋರ್ಬೆಲ್ಲು!
ಹೆದರಿ ಓಡಿದರು ಮನೆ ಬಿಟ್ಟು ಮನೆಯವರು!

ಅನುಭವದಿಂದ ಬಂತಲ್ಲವೇ ಹೊಸ ಅರಿವು
ತನ್ನಲ್ಲೇ ಇತ್ತು ವೈರು,
ಸುಮ್ಮನೇ ಸಹಿಸಿತು ಅಷ್ಟೊಂದು ನೋವು,
ಈಗ ಯಾರ ತೊಂದಿರೆ ಇಲ್ಲದೇ
ನೆಮ್ಮದಿಯಾಗಿ ಬಾಳ ತೊಡಗಿತು ಡೋರ್ಬೆಲ್ಲು ….

*****

2. ನನ್ನಿಷ್ಟದೈವ

ನಾನಿಂದು ನನ್ನ ಇಷ್ಟದೈವವನ್ನು ಆರಿಸಿಕೊಳ್ಳುತ್ತೇನೆ
ನಿರಾಕಾಯ ನಿರ್ವರ್ಣ ನಿರಾತಂಕವಾಗಿ ಇದ್ದು ಬಿಡುತ್ತೇನೆ
ದೈವವೆಂದರೆ ಅಮೂರ್ತನೇ, ಅವನ ಇಷ್ಟದ ಭಕ್ತನಾಗಿ ನಾನೂ ಮಾಯವಾಗಿಬಿಡುತ್ತೇನೆ,
ಎಲ್ಲಿದ್ದೇನೆ ಹೇಗಿದ್ದೇನೆ ಯಾಕಿದ್ದೇನೆ ಎಂಬಿತ್ಯಾದಿಗಳಿಗೆ ಉತ್ತರವಿಲ್ಲದ ಪ್ರಶ್ನೆಯಾಗಿಬಿಡುತ್ತೇನೆ,

ಕಂಡರೇನೇ ಕಷ್ಟ ಈ ಜಗದೊಳಗೆ
ಹಳ್ಳಿ ಪಟ್ಟಣ ನಗರ ಪಾಲಿಕೆಗಳಲ್ಲಿ
ಬದುಕು ಭಯಾನಕ ಜೋಪಾನ!
ಅಡವಿಯಲ್ಲೊಂದು ಅಡಗಿ, ದಟ್ಟಾರಣ್ಯದ ದಿಟ್ಟ ದಿಂಬುಗಳ ನಡುವೆ ದುಂಬಿಯಾಗಿಬಿಡುತ್ತೇನೆ

ಸಿಕ್ಕ ಸೊಪ್ಪು ತಿಂದು ಸುತ್ತ ಹುತ್ತ ಕಟ್ಟುವ ಹಾಗೆ
ಗಾಢ ತಪಸ್ಸಿನೊಳಗೆ ತಲ್ಲೀನನಾಗಿಬಿಡುತ್ತೇನೆ
ಆದರೂ ಆಗಲಿ ಬಿಡಿ ಜ್ಞಾನೋದಯ,
ಪ್ರಾಣಿ ಪಕ್ಷಿಗಳ ಒಳಿತಿಗಾಗಿ ಪ್ರಾರ್ಥಿಸುತ್ತೇನೆ!!

ಹೋಮೋಗಳೆಂದರೇನೆ ಹೊಲಸು,
ಹೂವಾಗಿ ಕಂಡರೂ ಕೊಳಕು,
ಆಸ್ತಿಕರು ನಾಸ್ತಿಕರು ಎಡದವರು
ಬಲದವರು ಮಧ್ಯಮರು,
ಜಾತಿ, ಧರ್ಮ, ಕುಲ,ಗೋತ್ರ, ಲಿಂಗದವರು,
ವರ್ಣ ಬಣ್ಣ ಗಾತ್ರ ಎತ್ತರ, ಆಸ್ತಿ ಅಂತಸ್ತಿನ ಗುಲಾಮರು,

ಬದುಕಲೆಂದೇ ಸಾಯುವರು, ಸತ್ತು ಸತ್ತು ಬದುಕುತಿಹರು, ಬೇಡ ಬೇಡ ಎನಗೆ ಈ ಸಂಘದ ಸಹವಾಸ, ನಾ ಜಂಗಮನಾಗಿಯೇ ಉಳಿದುಬಿಡುತ್ತೇನೆ
ಎನ್ನ ಇಷ್ಟ ದೈವವನ್ನು ಇಂದೇ ಆರಿಸಿಕೊಂಡು
ನಿರಾಕಾಯ ನಿರ್ವರ್ಣ ನಿರಾತಂಕವಾಗಿ ಇದ್ದು ಬಿಡುತ್ತೇನೆ!!!

*****

3. ಈ ಕತ್ತಲೆ ಏನೋ ಹೇಳುತ್ತಿದೆ

ಈ ಕತ್ತಲೆ ಏನೋ ಹೇಳುತಿದೆ…
ಎಲ್ಲಾ ಎಲ್ಲೆಗಳನ್ನೂ ಮೀರಿ ಬೆಳೆಯುತಿದೆ
ಇರುವವರೂ ಇಲ್ಲದವರೂ ಒಂದಾಗಿ
ಇರುಳ ಆವರಣದಲಿ ಎಲ್ಲರನೂ ಸೇರಿಸುವಂತಿದೆ!

ಈ ಕತ್ತಲೆ ಏನೋ ಹೇಳುತಿದೆ…
ಆಕಾಶ ಭೂಮಿಗಳೆರಡನ್ನೂ ಕೂಡಿಸುತಿದೆ
ಅಂತರಂಗದ ಅನುಮಾನವನ್ನು ಅಳಿಸುತಿದೆ
ಏಳು ಬಣ್ಣಗಳಲ್ಲಿನ ಕಲಬೆರಕೆಯನ್ನೂ ಕಳೆಯುವಂತಿದೆ.

ಈ ಕತ್ತಲೆ ಏನೋ ಹೇಳುತಿದೆ!!!
ಗುರುತಿನ ಗೋಡೆಗಳನ್ನೆಲ್ಲಾ ಒಡೆಯುತಿದೆ
ಗೆರೆಗಳ ರಭಸ ಗತಿಯೂ ಮಿತಿಕೊಳ್ಳುತಿದೆ
ಬರೆದಿಟ್ಟ ಭೇದದ ಬಂಧನಗಳು ಬಿಡುಗಡೆಗೊಳ್ಳುವಂತಿದೆ!

ಈ ಕತ್ತಲೆ ಏನೋ ಹೇಳುತಿದೆ!!!
ಪಕ್ಷಪಾತತೆಯ ಪರಿಧಿ ದೂರಸರಿಯುತಿದೆ
ಕೂಡು ಬಾಳುವ ಭರವಸೆ ಬೆಸೆಯುತಿದೆ!!
ಸಮಾನತೆ ಈಗೀಗ ಅರ್ಥ ಗರ್ಭಿತವಾಗುವಂತಿದೆ!
ಈ ಕತ್ತಲೆ ಏನೋ ಹೇಳುತಿದೆ….

ಫರ್ಹಾನಾಜ್ ಮಸ್ಕಿ ಅವರು ಮೂಲತಃ ರಾಯಚೂರು ಜಿಲ್ಲೆಯ ಮಸ್ಕಿಯವರು.
ಪ್ರಸ್ತುತ ಹುಳಿಯಾರಿನ ಬಿಎಂಎಸ್ ಸರ್ಕಾರಿ ಪದವಿ ಕಾಲೇಜಿನಲ್ಲಿ ಅರ್ಥಶಾಸ್ತ್ರದ ಸಹಾಯಕ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
‘ಮೌನ ಮನದ ಮಾತುಗಳು’ ಅವರ ಪ್ರಕಟಿತ ಕವನ ಸಂಕಲನ