ಇಲ್ಲಿ ಯಾವುದೋ ಹಳೆಯ ಅಲ್ಲಲ್ಲಿ ತಿರುವಿರುವ ರಸ್ತೆಗೆ ಬಂದವರಿಗೆಲ್ಲಾ ತೋರ್ಬೆರಳಲ್ಲಿ ದಾರಿ ತೋರಿಸಿ ಕಳಿಸುವಾಸೆ. ಇಲ್ಲೊಂದು ಹೆದ್ದಾರಿಯ ಹೆಮ್ಮರಕೆ ಬನ್ನಿ ಸ್ವಲ್ಪಹೊತ್ತು ಕುಳಿತು ಹೋಗಿ ಎಂದು ಬಿಳಲ ರೆಂಬೆ ಕೊಂಬೆಗಳಿಂದ ಕೈಬೀಸಿ ಕರೆಯುವಾಸೆ. ಹಕ್ಕಿಗಳಿಗೆ ತನ್ನಷ್ಟಕ್ಕೆ ತಾನು ಹಾಡುವಾಸೆ. ಮಂದ ಮಾರುತನಿಗೆ ತೇಲುವ ಕಣ್ಗಳಿಗೆ ಜೋಂಪೇರಿಸುವಾಸೆ.
ಮಹಾಲಕ್ಷ್ಮಿ ಕೆ. ಎನ್.‌ ಬರಹ ನಿಮ್ಮ ಓದಿಗೆ

ಅಂದುಕೊಳ್ಳುತ್ತೇವೆ ನಾವು ಹೀಗಾಗಬೇಕೆಂದು, ನಿರೀಕ್ಷಿಸುತ್ತೇವೆ ಇಚ್ಛಿಸಿದ್ದು ನಮ್ಮೆಡೆಗೆ ಬರಲೆಂದು, ಎದುರುನೋಡುತ್ತೇವೆ ಭವಿಷ್ಯದ ಬೆಳಕಿನ ಕಿರಣ ಒಂದೊಂದಾಗಿ ಆಗಮಿಸಲೆಂದು.

“ನೋವನು ತುಳಿಯುತ ಬಂದಿದೆ ನಲಿವು
ಕಾಣದ ವೀಣೆಯ ನುಡಿಸಿದೆ ಗೆಲುವು;

ಶುಭವನು ಕೋರುವ ನುಡಿಗಳು ಸುಳಿದು
ಬಂದಿದೆ ಬಂದಿದೆ ಹೊಸವರುಷ. “

-ಕೆ.ಎಸ್. ನರಸಿಂಹಸ್ವಾಮಿ

ಈ ಹುಡುಗಿಗೆ ಭಾಷೆ ಎಂದರೆ ಒಲವು. ಯಾಕೆಂದರೆ ಅಕ್ಷರಗಳ ಆಟವೇ ಹಾಗೆ ಹಿತವಾಗಿರುತ್ತೆ. ಬದುಕನ್ನ ಬದುಕಬೇಕು ಬಿಡುವಾದಾಗ ಭಾವದ ಮೆಲುಕು ಭಾವ ಬರಹದಲ್ಲಿ ಅಭಿವ್ಯಕ್ತಿ ಬರಹಕ್ಕೊಂದು ಭಾಷೆ ಬೇಕು ಭಾಷೆಯನ್ನ ಪ್ರೀತಿಸಬೇಕು.

ಕಾವ್ಯ ಎಳೆಯದು, ಭೂಮಿಗೆ ಹರೆಯ,
ನಾನೂ ನೀನೂ ಎಳೆಯರಿನ್ನೂ.
ನಮ್ಮೆದೆಯ ವೀಣೆಯ ತಂತಿ ಇನ್ನೂ ಗರ್ಭದಲ್ಲಿಹುದು.
ಮೀಟುವ ರಾಗ ಸರಿಮಾಡಿಕೊಂಡು
ದಿನತುಂಬಿದಾಗ ಸ್ವರನುಡಿಯುವುದು.

ಭೂಮಿಗೆ ಕನಸು, ತನ್ನೊಡಲು ತುಂಬಿಕೊಳ್ಳುವ ಕನಸು. ಆದಿತ್ಯನಿಗೊಂದು ಆಸೆ; ತನ್ನ ಕಿರಣವ ಅವನಿಯ ಮೇಲೆ ಚೆಲ್ಲಿ ಅವಳನ್ನ ನಿತ್ಯವೂ ಬೆಳಗಿಸುವ ಆಸೆ. ಶಶಾಂಕನಿಗೊಂದು ಆಸೆ ಇಳೆಯನ್ನ ತಂಪಾಗಿಸುವ ಆಸೆ. ತುಂಬು ಚಂದಿರನಾಗಿ ಬಂದು ಅವಳನ್ನ ಕಾಣುವ. ಭೋರ್ಗರೆವ ಕಡಲಿನಲೆಗಳಿಗೊಂದು ಆಸೆ ಚಂದ್ರಿಕೆಯನು ಸ್ಪರ್ಶಿಸುವ ಆಸೆ. ಪೌರ್ಣಮಿಯ ಚಂದ್ರಿಕೆ ಮೈತುಂಬಿಕೊಂಡು ಬಂದಾಗ ಅವಳನ್ನ ತಬ್ಬಿಹಿಡಿಯಲೆಂದೇ ಉಕ್ಕುತ್ತವೆ. ಭೌತಿಕ ಕ್ರಿಯೆಗಳ ಸೃಜನಾತ್ಮಕ ಶಕ್ತಿ ನಮ್ಮ ಕಾರ್ಯಕ್ಕೆ ಶಕ್ತಿಕೊಡುತ್ತ್ವೆ, ಉತ್ಸಾಹವಾಗುತ್ತೆ, ಚೈತನ್ಯವಾಗುತ್ತೆ, ಜೀವಂತವಾಗಿರಿಸುತ್ತೆ.

ಮಾವು ಬೇವಿಗೆ ಚಿಗುರುವಾಸೆ. ಶಿಶಿರಕ್ಕೆ ತಂಪೆರೆಯುವ ಆಸೆ. ಪ್ರತಿ ಋತುವಿಗೂ ತನ್ನದೇ ಆದ ಆಸೆ, ಅದರದೇ ಆದ ಜವಾಬ್ದಾರಿ. ತನ್ನಷ್ಟಕ್ಕೆ ಬಂದು ಸೃಷ್ಟಿಗೆ ಸಹಕರಿಸಿ ಮತ್ತೆ ಬರುವೆನೆಂದು ಹೇಳಿ ಹೋಗಿ ಮುಂದಿನ ವರುಷದ ಅದೇ ದಿನಕ್ಕೆ ಮರುಕಳಿಸುತ್ತೆ.

ಏಳು ಸುತ್ತಿನ ಮಲ್ಲಿಗೆಗೆ ಗಂಧ ಪಸರಿಸುವ ಆಸೆ.
ಬೇವಿಗೆ ವೈದ್ಯನಾಗುವ ಆಸೆ.

ಇಲ್ಲಿ ಯಾವುದೋ ಹಳೆಯ ಅಲ್ಲಲ್ಲಿ ತಿರುವಿರುವ ರಸ್ತೆಗೆ ಬಂದವರಿಗೆಲ್ಲಾ ತೋರ್ಬೆರಳಲ್ಲಿ ದಾರಿ ತೋರಿಸಿ ಕಳಿಸುವಾಸೆ. ಇಲ್ಲೊಂದು ಹೆದ್ದಾರಿಯ ಹೆಮ್ಮರಕೆ ಬನ್ನಿ ಸ್ವಲ್ಪಹೊತ್ತು ಕುಳಿತು ಹೋಗಿ ಎಂದು ಬಿಳಲ ರೆಂಬೆ ಕೊಂಬೆಗಳಿಂದ ಕೈಬೀಸಿ ಕರೆಯುವಾಸೆ. ಹಕ್ಕಿಗಳಿಗೆ ತನ್ನಷ್ಟಕ್ಕೆ ತಾನು ಹಾಡುವಾಸೆ. ಮಂದ ಮಾರುತನಿಗೆ ತೇಲುವ ಕಣ್ಗಳಿಗೆ ಜೋಂಪೇರಿಸುವಾಸೆ.

ಪುಟ್ಟಿಗೆ ಅಜ್ಜಿಯೊಟ್ಟಿಗೆ ತೋಟಕೋಗಿ ಅಲ್ಲಲ್ಲಿ ಕೂಗಿ ಕುಣಿದಾಡುವಾಸೆ. ಅಜ್ಜಿಯ ಹಳೆಯ ದೊಡ್ಡ ಬಾರ್ಡರಿನ ಸೀರೆ ತನ್ನ ಹೊಸ ಲಂಗದ ಮಾರ್ಪಾಡಿಗೆ ಎಂಬ ಖಾತ್ರಿ. ಪುಟ್ಟನಿಗೆ ತನ್ನ ಅಜ್ಜನ ಅತ್ಯುತ್ತಮ ಸ್ನೇಹಿತ ನಾನೇ, ಎಲ್ಲೋದರೂ ಅಜ್ಜನ ಒಂದು ಕೈಗೆ ಉದ್ದನೆಯ ಕೊಡೆ, ಮತ್ತೊಂದಕ್ಕೆ ನನ್ನ ಪುಟ್ಟ ಕೈಯೇ ಬೇಕು ಎಂಬ ಚಂದನೆಯ ಹಮ್ಮು. ಚೌಕಾಬಾರದ ಕವಡೆಗೆ ಅಳಗುಳಿಮನೆ ಹುಣಿಸೆಬೀಜಕ್ಕೆ ರಜೆಯಲ್ಲಿ ಮಕ್ಕಳನ್ನ ದೊಡ್ಡವರನ್ನ ಆಟಕ್ಕೆ ಕೂರಿಸಿಕೊಳ್ಳುವಾಸೆ.

ಹಳೆಮನೆಯ ಹಿತ್ತಲ ಬಾಗಿಲಿಗೆ ಸಂಜೆಯಲಿ ಮನೆ ಹುಡುಗಿಯ ಕೂರಿಸಿಕೊಂಡು ಮೊಗ್ಗುತುಂಬಿದ ನಾಳೆ ಅರಳುವ ಗಿಡಗಳ ತೋರಿಸಿ ಕನಸು ಕಟ್ಟಿಸುವ ಆಸೆ. ಕೋಣೆಯ ಕಿಟಕಿಗೆ ಅಂಬೆಗಾಲಿಡುವ ಚೆಲುವೆ ಕಂಬಿಹಿಡಿದು ಮೇಲೆ ನಿಂತಾಗ ಆಚೆ ಚಟಪಟನೆ ಆಗಷ್ಟೇ ಶುರುವಾದ ಮಳೆಯೊಟ್ಟಿಗೆ ಕಂಬಿಯಾಚೆಗೆ ಕೈ ರಟ್ಟೆ ಹಾಕಲು ಅನುವು ಮಾಡಿಕೊಟ್ಟು ಆಡಿಸುವಾಸೆ. ಈ ಮಳೆಯಾಟದಿಂದ ಕಲಾತ್ಮಕ ಭಾವ ಮುಂದುವರೆಯುತ್ತೆ.

ಇಲ್ಲೊಬ್ಬ ಹುಡುಗನಿಗೆ ಬಸ್ಸಿನಿಂದಿಳಿಯುವಾಗ ಯಾರದರೂ ತನ್ನನ್ನೇ ದಿಟ್ಟಿಸಿ ನೋಡುವುದು ಕಂಡರೆ ಅವರ ಕಡೆ ನೋಡಿ ಚೂರು ಮುಗುಳ್ನಗುವಾಸೆ. ಗವರ್ನಮೆಂಟ್ ಬಸ್ಸಿನ ಸೀಟಿಗೆ, ಒಂದು ತಾಸಿನ ಪ್ರಯಾಣದಲ್ಲಿ ಪಕ್ಕ ಕುಳಿತ ಸಹಪಯಣಿಗರೊಟ್ಟಿಗೆ ಹತ್ತಿರದ ಭಾವ ಕೊಟ್ಟು ನಮ್ಮೂರು ನಿಮ್ಮೂರಿನ ಪರಿಚಯ ಹಾಗೂ ವರ್ತಮಾನದ ಚೂರು ಮಾತಾಡಿಸುವಾಸೆ. ಎಷ್ಟಾದರೂ ಈ ಗವರ್ನಮೆಂಟ್ ಬಸ್ಸುಗಳು, ಸಿಟಿ ಬಸ್ಸುಗಳ ಮೆಟ್ಟಿಲುಗಳಿಗೆ ಗುಂಪಾಗಿ ಕೂಗಿಕೊಂಡು ಬರುವ ಶಾಲೆ, ಕಾಲೇಜು ಮಕ್ಕಳನ್ನ ಹತ್ತಿಸಿಕೊಳ್ಳುವಾಸೆ. ಈ ಚೈತ್ರಮಾಸ ಆಸೆಗಳನ್ನ ಚಿಗುರೊಡೆಸಲಿ.

ಬೇಸಿಗೆಗೆ ಬಿಸಿಯಾದ ಭೂಮಿ ತಂಪಾಗಲಿ, ಮೋಡ ತುಂಬಿಕೊಳ್ಳಲಿ. ಮಳೆ ಬರಲಿ. ಹೂವರಳಲಿ ಮುಗಿಲನ್ನ ನೋಡುತ್ತ ಗಂಧ ಪಸರಿಸಲಿ. ಕೊರಲುಕ್ಕಿ ಹಕ್ಕಿ ಹಾಡಲಿ. ಬರೆಯುವ ಹುಡುಗಿಯ ಕೈ ಬೆರಳು ಮತ್ತೆ ಚುರುಕಾಗಲಿ. ಮಾವು ಬೇವು ಚಿಗುರಲಿ….. ಹೌದು ಈ ವರುಷದ ಮಳೆ ಬರಲಿ, ಮೊದಲ ಮಳೆ ಮೊದಲ ಮಳೆಯಲ್ಲಿ ಮೈ-ಮನ, ಮಣ್ಣು, ಮುಗಿಲನ್ನೇ ನೋಡುವ ಕಣ್ಣು, ಎಲ್ಲವೂ ಹದವಾಗಲಿ.

ವರುಷ ಹೊಸತು, ದಾರಿಯೂ ಹೊಸದಾಗಲಿ.
ಭಾವದಲಿ ಸುಖವಿರಲಿ, ಖುಷಿಯ ಕಾಣುವ ಹಾದಿ ಗೋಚರಿಸಲಿ.