ಆಸ್ಟ್ರೇಲಿಯಾದಲ್ಲಿ ಬಿಳಿ ಆಸ್ಟ್ರೇಲಿಯನ್ನರು ರಾಜಕಾರಣಿಗಳನ್ನು ಕರೆದು ಕುರ್ಚಿ ಹಾಕುವುದಿಲ್ಲ. ‘ನಮ್ಮಂತೆಯೇ ನೀವು,’ ಎನ್ನುವ ಮನೋಭಾವ. ಅದಕ್ಕೂ ಮಿಗಿಲಾಗಿ, ಯಾವುದೇ ಹಿಂಜರಿಕೆಯಿಲ್ಲದೆ, ‘ನಾವು ಆರಿಸಿದ್ದರಿಂದ ನೀನು ಆ ಸ್ಥಾನಲ್ಲಿದ್ದೀಯ, ಕೊಟ್ಟಿರುವ ಕೆಲಸ ಸರಿಯಾಗಿ ಮಾಡು,’ ಅನ್ನುವುದನ್ನು ಮನದಟ್ಟು ಮಾಡಿಸುತ್ತಾರೆ. ಏನಾದರೂ ದೋಷಾರೋಪಗಳಿದ್ದರೆ ಜನರು ಪ್ರಧಾನಮಂತ್ರಿಯಿಂದ ಹಿಡಿದು ಸಣ್ಣಪುಟ್ಟ ಮಂತ್ರಿಗಳವರೆಗೂ ಅವರನ್ನ ನೇರವಾಗಿ ಪ್ರಶ್ನಿಸುತ್ತಾರೆ. ಅವಶ್ಯವಿದ್ದರೆ ಖಂಡಿಸುತ್ತಾರೆ. ಆಸ್ಟ್ರೇಲಿಯಾದ ಮೂಲನಿವಾಸಿಗಳ ಧಾಟಿ ಸ್ವಲ್ಪ ಬೇರೆ ತರಹ. ಮುಖ್ಯವಾಗಿ ಇವರು ತಮ್ಮ ನೆಲವನ್ನು ಆಕ್ರಮಿಸಿಕೊಂಡು ಆಳುತ್ತಿರುವ ಬಿಳಿಯರನ್ನು ನಂಬುವುದಿಲ್ಲ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”
ಪ್ರಿಯ ಓದುಗರೆ,
ಹೀಗೆಂದೂ ಆಗಿರಲಿಲ್ಲ. ಎರಡು ವಾರಗಳಿಗೂ ಕಡಿಮೆ ಅಂತರದಲ್ಲಿ ರಾಜ್ಯದ ಹೊಚ್ಚಹೊಸ ಮುಖ್ಯಮಂತ್ರಿಗಳ ಮುಖದರ್ಶನವಾಯ್ತು. ಇದೇನು ಅಬ್ಬಬ್ಬಾ ಅನ್ನೋ ಸುದ್ದಿಯಾ ಎಂದೆನಿಸಬಹುದು. ಭಾರತದಿಂದ ಬಂದ ನಮ್ಮಂಥ ವಲಸಿಗರಿಗೆ ಇಂಥಾ ಅನುಭವಗಳು ಸ್ವಲ್ಪ ರೋಚಕವಾಗಿ ಕಾಣಿಸುತ್ತದೆ, ನೋಡಿ. ಯಾಕೆಂದರೆ, ಭಾರತದಲ್ಲಿ ಒಂದು ಸಂದರ್ಭಕ್ಕೋ ಇಲ್ಲಾ ಸಮಾರಂಭಕ್ಕೋ ಒಬ್ಬ ರಾಜಕಾರಣಿ, ಸರ್ಕಾರದ ಉನ್ನತ ಹುದ್ದೆಯಲ್ಲಿರುವ ಅಧಿಕಾರಿ, ಮಂತ್ರಿಗಳು ಬರುತ್ತಾರೆಂದರೆ ಅದಕ್ಕೆಷ್ಟು ಗಮನ ಕೊಡುತ್ತಾರೆಂದರೆ ಪ್ರೇಕ್ಷಕರಾಗಿರುವ ಸಾಮಾನ್ಯ ನಾಗರಿಕರನ್ನು ಅಕ್ಷರಶಃ ದೂರವಿಟ್ಟು ಹಿಂದೆ ತಳ್ಳುತ್ತಾರೆ. ಮುಂಚೆಯೇ ಇದ್ದ ಅಂತರ ಇನ್ನಷ್ಟು ಹಿಗ್ಗುತ್ತದೆ. ಅಸಹನೀಯ ಅಬ್ಬರ, ಗಲಾಟೆ, ಪುಢಾರಿಗಳ ಕಿತಾಪತಿ.
ಹಾಗಾಗಿ, ನಾನು ಹೊಸದಾಗಿ ಪಟ್ಟವೇರಿದ ನಮ್ಮ ರಾಣಿರಾಜ್ಯದ ಮುಖ್ಯಮಂತ್ರಿ ಡೇವಿಡ್ ಕ್ರಿಸಫುಲಿ ಅವರನ್ನು ಹತ್ತಿರದಿಂದ ನೋಡಿದ್ದು ರೋಚಕವಾಗಿಯೆ ಇತ್ತು. ಮೊದಲ ಬಾರಿ ಕಂಡಿದ್ದು ಅವರು ದೀಪಾವಳಿ ಹಬ್ಬದ ಸಮಾರಂಭಕ್ಕೆ ವಿಶೇಷ ಅತಿಥಿಯಾಗಿ ಬಂದು ಸ್ಟೇಜ್ ಏರಿ ಭಾರತೀಯರಿಗೆ ಹಬ್ಬದ ಶುಭಾಶಯಗಳನ್ನು ಹೇಳಿದಾಗ. ಇದೇನೂ ಅಷ್ಟೊಂದು ವಿಶೇಷ ಅನ್ನಿಸಲಿಲ್ಲ. ಅಂದು ಹಲವಾರು ರಾಜಕಾರಣಿಗಳು, ಮಂತ್ರಿಗಳು ಎಂಬಂತೆ ಅವರುಗಳ ಚಿಕ್ಕದೊಂದು ಸಂತೆಯೇ ಅಲ್ಲಿತ್ತು. ಆದರೆ ಹೇಳಿಕೊಳ್ಳುವಂಥಾ ರೀತಿಯಲ್ಲಿ ಪೊಲೀಸರು, ಭದ್ರತಾ ಸಿಬ್ಬಂದಿ ಬಂದು ನಾಗರಿಕರನ್ನು ದೂರವಿಡಲಿಲ್ಲ. ವಂದಿಮಾಗಧರೂ ಇರಲಿಲ್ಲ. ಇಂಗ್ಲೆಂಡ್ ಅಲ್ಲಿ ವಾಸಿಸುತ್ತಿದ್ದಾಗ ಹೀಗೊಂದು ಪ್ರಸಂಗ ನಡೆದಿತ್ತು. ನಾವೊಂದಿಷ್ಟು ಪೋಷಕರು ಈಜುಕೊಳದ ನಿಗದಿತ ಸ್ಥಳದಲ್ಲಿ ಕೂತು ಈಜು ತರಬೇತಿ ಪಡೆಯುತ್ತಿದ್ದ ನಮ್ಮ ಮಕ್ಕಳನ್ನು ನೋಡುತ್ತಿದ್ದೆವು. ಇದ್ದಕ್ಕಿದ್ದಂತೆ ಈಜುಕೊಳದ ಸಿಬ್ಬಂದಿ ಮತ್ತು ಸ್ಥಳೀಯ ಎಂಪಿ ಬಂದರು. ಸಿಬ್ಬಂದಿಯವರು ನಮಗೆ ತೊಂದರೆಯುಂಟು ಮಾಡಿದ್ದಕ್ಕೆ ಕ್ಷಮಾಪಣೆ ಕೇಳುತ್ತಾ ತಾವು ಈಜುಕೊಳದ ಸುಧಾರಣೆಗೆ ಅರ್ಜಿ ಹಾಕಿದ್ದು ಎಂಪಿ ಕಚೇರಿಯಿಂದ ಸ್ವಲ್ಪ ಹಣ ಸಹಾಯ ಸಿಗಲಿದೆ, ಅದಕ್ಕೇ ಈಗ ಎಂಪಿಯವರು ಒಂದು ಸಣ್ಣ ಇನ್ಸ್ಪೆಕ್ಷನ್‌ಗೆ ಬಂದಿದ್ದಾರೆ, ಎಂದು ವಿವರಿಸಿದರು. ಜೊತೆಗೆ ಯಾರೂ ಬಂದಿರಲಿಲ್ಲ. ಎಂಪಿ ಹಲೋ ಹೇಳಿ ಮುಂದುವರೆದು ಹೋದರು. ಒಂದಿಷ್ಟೂ ಅನಾವಶ್ಯಕ ಮಾತಿಲ್ಲ.
ಎರಡನೇ ಬಾರಿ ಮುಖ್ಯಮಂತ್ರಿ ಡೇವಿಡ್ ಕ್ರಿಸಫುಲಿ ಕಂಡಿದ್ದು ಇದೇ ವಾರ ನಡೆದ ನನ್ನ ಕಿರಿಮಗನ ಗ್ರಾಜುಯೇಷನ್ ಸಂದರ್ಭದಲ್ಲಿ. ನಾವೆಲ್ಲಾ ಪೋಷಕರು, ಕುಟುಂಬ ಸದಸ್ಯರು ಅಲ್ಲಿ ನೆರೆದು, ಮಾತನಾಡುತ್ತಾ ಗ್ರಾಜುಯೇಷನ್ ಗೌನ್ ಧರಿಸಿ ಓಡಾಡುತ್ತಿದ್ದ ನಮ್ಮ ಮಕ್ಕಳ ಸಂಭ್ರಮವನ್ನು ಆಸ್ವಾದಿಸುತ್ತಾ ಖುಷಿ ಪಡುತ್ತಾ ಇದ್ದೆವು. ಬಂದು ಸೇರಿಕೊಂಡ ಇನ್ನೊಬ್ಬ ಪೋಷಕರು, “ಕ್ರಿಸಫುಲಿ ಬಂದಿದ್ದಾರೆ. ಜೊತೆಗೆ ಇಬ್ಬರು ಬಾಡಿಗಾರ್ಡ್ ಇದ್ದಾರೆ. ಇಟ್ ಈಸ್ ಸೊ ಫನ್ನಿ ಟು ಸೀ ಸೆಕ್ಯೂರಿಟಿ ಯುನಿಫಾರ್ಮ್ ಹಿಯರ್ ಅಟ್ ಗ್ರಾಜುಯೇಷನ್,” ಅಂದರು. ಮತ್ತೊಬ್ಬರು “ದಟ್ ಈಸ್ ridiculous,” ಎನ್ನುತ್ತಾ ‘ಯಾಕೆ, ಅವರು ಒಬ್ಬ ಸಾಮಾನ್ಯ ತಂದೆಯಾಗಿ ಬರಲು ಏನಾಗಿತ್ತು. ನಾವು ತಂದೆತಾಯಂದಿರು ನಮ್ಮ ಮಕ್ಕಳನ್ನು ನೋಡಲು ಬಂದಿದ್ದೀವಿ, ಇಲ್ಲಿ ಭದ್ರತಾ ಸಿಬ್ಬಂದಿ ಬೇಕಿಲ್ಲ,” ಅನ್ನುತ್ತಾ ಅಸಮಾಧಾನ ಕಕ್ಕಿದರು. ಮುಖ್ಯಮಂತ್ರಿಯ ಕಿರಿಮಗಳು ಮತ್ತು ನನ್ನ ಕಿರಿಮಗ ಸಹಪಾಠಿಗಳು. ಮಗಳ ಗ್ರಾಜುಯೇಷನ್ ಸಮಾರಂಭಕ್ಕೆ ಅವರ ಕುಟುಂಬ ಬಂದಿತ್ತು.
ಈ ಸಂಭಾಷಣೆ ನನಗೆ ಕುತೂಹಲ ಹುಟ್ಟಿಸಿತು. ಆಸ್ಟ್ರೇಲಿಯಾದಲ್ಲಿ ಬಿಳಿ ಆಸ್ಟ್ರೇಲಿಯನ್ನರು ರಾಜಕಾರಣಿಗಳನ್ನು ಕರೆದು ಕುರ್ಚಿ ಹಾಕುವುದಿಲ್ಲ. ‘ನಮ್ಮಂತೆಯೇ ನೀವು,’ ಎನ್ನುವ ಮನೋಭಾವ. ಅದಕ್ಕೂ ಮಿಗಿಲಾಗಿ, ಯಾವುದೇ ಹಿಂಜರಿಕೆಯಿಲ್ಲದೆ, ‘ನಾವು ಆರಿಸಿದ್ದರಿಂದ ನೀನು ಆ ಸ್ಥಾನಲ್ಲಿದ್ದೀಯ, ಕೊಟ್ಟಿರುವ ಕೆಲಸ ಸರಿಯಾಗಿ ಮಾಡು,’ ಅನ್ನುವುದನ್ನು ಮನದಟ್ಟು ಮಾಡಿಸುತ್ತಾರೆ. ಏನಾದರೂ ದೋಷಾರೋಪಗಳಿದ್ದರೆ ಜನರು ಪ್ರಧಾನಮಂತ್ರಿಯಿಂದ ಹಿಡಿದು ಸಣ್ಣಪುಟ್ಟ ಮಂತ್ರಿಗಳವರೆಗೂ ಅವರನ್ನ ನೇರವಾಗಿ ಪ್ರಶ್ನಿಸುತ್ತಾರೆ. ಅವಶ್ಯವಿದ್ದರೆ ಖಂಡಿಸುತ್ತಾರೆ. ಆಸ್ಟ್ರೇಲಿಯಾದ ಮೂಲನಿವಾಸಿಗಳ ಧಾಟಿ ಸ್ವಲ್ಪ ಬೇರೆ ತರಹ. ಮುಖ್ಯವಾಗಿ ಇವರು ತಮ್ಮ ನೆಲವನ್ನು ಆಕ್ರಮಿಸಿಕೊಂಡು ಆಳುತ್ತಿರುವ ಬಿಳಿಯರನ್ನು ನಂಬುವುದಿಲ್ಲ. ತಮ್ಮನ್ನು ಹೀನಾಯವಾಗಿ ನೋಡುವ ರಾಜಕಾರಣಿಗೆ ‘ನೀವು ನಮ್ಮಲ್ಲಿಗೆ ಬರಬೇಡಿ’ ಎಂದು ಸ್ಪಷ್ಟವಾಗಿ ಹೇಳುತ್ತಾರೆ. ಇನ್ನು ಇವರಿಬ್ಬರ ಜಗಳದಲ್ಲಿ ಮೂರನೆಯವರಾಗಿ ಇರುವ ವಲಸಿಗರಿಗೆ ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳು ಅವಶ್ಯವಾಗಿ ಬೇಕು. ಸಮಾಜದಲ್ಲಿ ವಲಸಿಗರು ಪ್ರಗತಿ ಹೊಂದಿ ಮುನ್ನೆಲೆಗೆ ಬರಬೇಕಾದರೆ ಅವರುಗಳ ಆಶ್ರಯ, ಕೃಪಾಕಟಾಕ್ಷ ಬೇಕೇಬೇಕು. ವಲಸಿಗರು ನಡೆಸುವ ತಂತಮ್ಮ ಸಾಂಸ್ಕೃತಿಕ ಸಮಾರಂಭಗಳಿಗೆ ಆಹ್ವಾನಿತರಾಗಿ ಬರುವ ಅಧಿಕಾರಿಗಳು, ರಾಜಕಾರಣಿಗಳಿಗೆ ಸೊಗಸಾದ ಉಪಚಾರ ನಡೆಯುತ್ತದೆ. ಅದನ್ನು ‘ನಮ್ಮ ಸಂಸ್ಕೃತಿಯ ಹಿರಿಮೆ’ ಎಂದು ಹೇಳಿಕೊಳ್ಳುತ್ತಾ ವಲಸಿಗ ಸಮುದಾಯಗಳ ನಾಯಕ/ನಾಯಕಿಯರು ಪ್ರತಿಷ್ಠಿತ ವ್ಯಕ್ತಿಗಳ ವರ್ಗಕ್ಕೆ ಸೇರಿಕೊಂಡು ‘ಹೈ ಸೊಸೈಟಿ’ ಸದಸ್ಯರಾಗುತ್ತಾರೆ. ಮುಂದೆ ಹೈ ಸೊಸೈಟಿ ಹಣೆಪಟ್ಟಿ ಜೊತೆ ಹೆಣಗಾಡುವ ಇವರು ಅದನ್ನು ಉಳಿಸಿ ಬೆಳೆಸಿಕೊಳ್ಳಲು ಬೇಕಿರುವ ಜಾಣ್ಮೆ, ಚಾತುರ್ಯ, ಕೌಶಲಗಳನ್ನು ಕಲಿಯಬೇಕಾಗುತ್ತದೆ. ಕ್ರಮೇಣ ಇವರೂ ಕೂಡ ರಾಜಕೀಯಕ್ಕೆ ಕಾಲಿಟ್ಟು ತಮ್ಮ ಮುಂದಿನ ಪೀಳಿಗೆಯವರು ರಾಜಕೀಯ ಸೂತ್ರ ಹಿಡಿಯಲು ಅನುವು ಮಾಡಿಕೊಡುತ್ತಾರೆ.
ಇದನ್ನು ಕುರಿತು ಆಲೋಚಿಸುವಾಗ ಅಮೆರಿಕೆಯ ಭಾರತೀಯ ಮೂಲದ ವಿವೇಕ್ ರಾಮಸ್ವಾಮಿ ಗೋಚರಕ್ಕೆ ಬರುತ್ತಾರೆ. ಹೊಸದಾಗಿ ಚುನಾಯಿತರಾಗಿರುವ ಟ್ರಂಪ್ ತಂಡವು ಬರುವ ಜನವರಿ ೨೦೨೫ರಲ್ಲಿ ತಮ್ಮ ಆಡಳಿತವನ್ನು ಸ್ಥಾಪಿಸಲಿದೆ. ಈ ವಾರವಷ್ಟೇ ವಿವೇಕ್ ರಾಮಸ್ವಾಮಿ ಮತ್ತು ಇಲೋನ್ ಮಸ್ಕ್ ಟ್ರಂಪ್ ಸರಕಾರದ ಆಡಳಿತ ಗುಣಮಟ್ಟವನ್ನು ನಿಭಾಯಿಸುವ ಮುಖ್ಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ವಿವೇಕ್ ರಾಮಸ್ವಾಮಿಯ ಹೆತ್ತವರು ಭಾರತೀಯ ವಲಸಿಗರು. ಇಲೋನ್ ಮಸ್ಕ್ ದಕ್ಷಿಣ ಆಫ್ರಿಕಾದಲ್ಲಿ ಹುಟ್ಟಿ ಬೆಳೆದು ನಂತರ ಕೆನಡಾ ಸೇರಿ ಅಲ್ಲಿಂದ ಅಮೆರಿಕೆಗೆ ವಲಸೆ ಹೋದವರು. ಕುತೂಹಲವೆಂದರೆ ಇವರಿಬ್ಬರು ವಲಸಿಗ-ವಿರೋಧಿಯಾದ ಟ್ರಂಪ್ ಜೊತೆ ಕೈ ಜೋಡಿಸಿದ್ದಾರೆ. ರಾಜಕೀಯ ದಾಳಗಳು ಹೇಗೆಲ್ಲಾ ಉರುಳುತ್ತವೆ ಎನ್ನುವುದು ಶಕುನಿಗೆ ಮಾತ್ರ ಗೊತ್ತು.
ಇರಲಿ. ಮತ್ತೆ ನನ್ನ ಕಿರಿಮಗ ಮತ್ತು ಮುಖ್ಯಮಂತ್ರಿಗಳ ಕಿರಿಮಗಳ ಗ್ರಾಜುಯೇಷನ್ ಸಮಾರಂಭಕ್ಕೆ ಬರುತ್ತೀನಿ. ವಿದ್ಯಾರ್ಥಿಗಳ ಸಮಾರಂಭದಲ್ಲಿ ಬಾಡಿಗಾರ್ಡ್‌ಗಳ ಹಾಜರಿ ಇರಿಸುಮುರಿಸು ತರುತ್ತದೆ ಎನ್ನುವ ಸೂಕ್ಷ್ಮ ಪೋಷಕರ ಮುಖಗಳಲ್ಲಿ ಎದ್ದು ಕಾಣಿಸುತ್ತಿತ್ತು. ಕೆಲವರು ವ್ಯಂಗ್ಯದ ನಗೆ ಸೂಚಿಸಿದರೆ ಇತರರು ಮೂಲೆಯಲ್ಲಿ ನಿಂತಿದ್ದ ಮುಖ್ಯಮಂತ್ರಿಗಳ ಕುಟುಂಬವನ್ನು ನೋಡಿ ಮುಖ ತಿರುಗಿಸಿಕೊಳ್ಳುತ್ತಿದ್ದರು. ಬಾಡಿಗಾರ್ಡ್‌ಗಳು ಬಾಗಿಲ ಹೊರಗೇ ಇದ್ದರು. ಪಾಪ, ಅವರು ತಮ್ಮ ಪಾಡಿಗೆ ತಮ್ಮ ಕರ್ತವ್ಯ ಮಾಡುತ್ತಿದ್ದರು. ನಾವೆಲ್ಲರೂ ಗ್ರಾಜುಯೇಷನ್ ಹಾಲ್ ಒಳಗೆ ಹೋಗಿ ಕುಳಿತಾದ ಮೇಲೆ ಈ ಇಬ್ಬರು ಬಾಡಿಗಾರ್ಡ್‌ಗಳು ಒಳಗೆ ಬಂದು ಮುಖ್ಯದ್ವಾರದ ಪಕ್ಕದಲ್ಲೇ ಕೂತು, ಸಮಾರಂಭಕ್ಕೆ ತಮ್ಮಿಂದ ಯಾವುದೇ ರೀತಿಯ ಅಡಚಣೆ/ತೊಂದರೆಯಾಗದಂತೆ ನಿಶ್ಯಬ್ದವಾಗಿ ಕರ್ತವ್ಯ ನಿರ್ವಹಿಸಿದರು.
ನಾನು ಕುಳಿತಿದ್ದ ಮೊದಲ ಕುರ್ಚಿಯಿಂದ ನೋಡಿದರೆ ಪಕ್ಕದ ಐದು ಸಾಲುಗಳ ಮೇಲೆ ಮೊದಲ ಕುರ್ಚಿಯಲ್ಲಿ ಮುಖ್ಯಮಂತ್ರಿಗಳು ಕೂತಿದ್ದರು. ಆ ಕಡೆ ಪಕ್ಕ ಹೆಂಡತಿ, ಹಿರಿಮಗಳು. ಎಲ್ಲರಂತೆಯೆ ಸಮಯೋಚಿತವಾಗಿ ಚಪ್ಪಾಳೆ ಹೊಡೆದು, ಮಗಳು ತನ್ನ ಪ್ರಮಾಣಪತ್ರವನ್ನು ಸ್ವೀಕರಿಸಿದಾಗ ಸ್ವಲ್ಪ ಜೋರಾಗೇ ಚಪ್ಪಾಳೆ ಹೊಡೆದರು. ಸಮಾರಂಭ ಮುಗಿದ ತಕ್ಷಣ ದಾಪುಗಾಲಿನಲ್ಲಿ ಹೊರನಡೆದರು. ನನ್ನ ಗಂಡ, ‘ಹಿ ಜಸ್ಟ್ bolted ಔಟ್,’ ಅಂದರು. ತನ್ನನ್ನು ಯಾರೂ ಪ್ರಶ್ನಿಸುವುದು ಬೇಡ ಎಂದುಕೊಂಡು ಹೊರ ಧಾವಿಸಿರಬೇಕು. ಹೋದ ತಿಂಗಳಷ್ಟೇ ಈತ ಚುನಾವಣೆಯಲ್ಲಿ ಗೆದ್ದು ಸರಕಾರ ರಚಿಸಿದ್ದು. ಚುನಾವಣಾ ಪ್ರಚಾರದಲ್ಲಿ ಖಡಾಖಂಡಿತವಾಗಿ ‘ವಯಸ್ಕರಂತೆ ಅಪರಾಧ ಮಾಡಿದರೆ ವಯಸ್ಕರಂತೆ ಶಿಕ್ಷೆ’ ಎಂದು ಪದೇಪದೇ ಹೇಳುತ್ತಿದ್ದರು. ಅಂದು ಗ್ರಾಜುಯೇಷನ್ ಸಂದರ್ಭದಲ್ಲಿ ನೆರೆದಿದ್ದ ನೂರಾರು ಕುಟುಂಬಗಳ ಮಕ್ಕಳು, ಯುವಜನರನ್ನು ನೋಡಿದಾಗ ಚಿಂತೆಯಾಯಿತು. ಇವರಲ್ಲಿ ಯಾರಾದರೂ ಸಣ್ಣಪುಟ್ಟ ಅಪರಾಧಗಳನ್ನು ಮಾಡಿದರೆ ಹೋದ ತಿಂಗಳು ಈತ ಹೇಳಿದ್ದಂತೆ ಅವರ ಸರಕಾರವು ಈ ಕಿರಿಯರನ್ನು ಅದೇ ಕಠಿಣತೆಯಿಂದ ಶಿಕ್ಷೆಗೊಳಪಡಿಸಿದರೆ ಏನಾಗುತ್ತದೋ ಎಂದೆನಿಸಿತು. ಮಕ್ಕಳನ್ನು ಶಿಕ್ಷಿಸುವ ಮಾತು ಕೊನೆಯಾಗಲಿ, ಈತ ಒಬ್ಬ ತಂದೆಯಾಗಿ ನಂತರ ರಾಜ್ಯದ ಮುಖ್ಯಮಂತ್ರಿಯಾಗಲಿ, ಮಕ್ಕಳ-ಪರ ಮಾದರಿ ಆಡಳಿತ ನಡೆಸಲಿ, ಎಂದು ಆಶಿಸಿದೆ.
ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.