ಇನ್ನೊಬ್ಬ ಸಹೋದ್ಯೋಗಿ ಬ್ರಹ್ಮಚಾರಿ ಸಾಧ್ಯವಾದಷ್ಟು ಕಾರ್ಯಕ್ರಮಗಳಿಗೆ ಕೈ ಕೊಡುತ್ತಿದ್ದ. ನಂತರ ತಡವಾಗಿ ಮದುವೆಯಾದ. ಒಂದು ಮಗುವಾಯಿತು. ಅಷ್ಟೇ ಸಾಕು ಎಂದು ನಿರ್ಧರಿಸಿದ. ಆನಂತರ ಅವನು ಯಾರದಾದರೂ ಮನೆಯಲ್ಲಿ ಇಬ್ಬರು ಮಕ್ಕಳಿದ್ದರೆ ಮೊದಲನೆಯ ಮದುವೆಗೆ ಹೋಗುತ್ತಿದ್ದ. ಉಡುಗೊರೆ ಕೊಡುತ್ತಿದ್ದ. ಎರಡನೆಯದಕ್ಕೆ ತಪ್ಪಿಸಿಕೊಳ್ಳುತ್ತಿದ್ದ. ಅವನ ದೂರ ದೃಷ್ಟಿ ನಂತರ ತಿಳಿಯಿತು ತನಗಿರುವುದು ಒಂದೇ ಮಗು ಹಾಗಾಗಿ ತನಗೆ ಸಿಗುವ ಉಡುಗೊರೆ ಒಂದು ಮಾತ್ರ ಹಾಗಾಗಿ ಅವನು ನೀಡುವುದು ಒಂದೇ!
ವಸಂತಕುಮಾರ್ ಕಲ್ಯಾಣಿ ಬರೆದ ಪ್ರಬಂಧ “ಮುಯ್ಯಿಗೆ ಮುಯ್ಯಿ…!” ನಿಮ್ಮ ಓದಿಗೆ
ನಾನು ಯಾವುದೋ ದ್ವೇಷ ತೀರಿಸಿಕೊಂಡ ಕಥೆಯನ್ನು ಹೇಳಲು ಹೊರಟಿಲ್ಲ. ‘ಮುಯ್ಯಿ’ ಎನ್ನುವ ಹೆಸರಿನ, ಶ್ರೀ ಎಲ್. ಎಸ್. ಶೇಷಗಿರಿರಾಯರ ಸಣ್ಣ ಕಥೆಯೊಂದನ್ನು ಆಧರಿಸಿದ, ಎನ್ ಲಕ್ಷ್ಮೀನಾರಾಯಣರ ನಿರ್ದೇಶನದ ಚಿತ್ರ ಒಂದನ್ನು ನೋಡಿದ್ದೇನೆ. ಎಲ್ಲೂ ಅತಿರೇಕವೆನಿಸದ ನಿರ್ದೇಶನ, ಲೋಕೇಶ್‌ರವರ ವಿವಿಧ ಭಾವನೆಗಳನ್ನು ಸಮರ್ಥವಾಗಿ ಹೊರಹಾಕಿದ ಅಮೋಘ ಅಭಿನಯ ಕಂಡು ಸಂತಸಪಟ್ಟಿದ್ದೇನೆ. ಹಾಗೆಯೇ ಇನ್ನೊಂದು ಚಿತ್ರ ಬಂದಿತ್ತು. ‘ಮುಯ್ಯಿಗೆ ಮುಯ್ಯಿ’. ಮಾಮೂಲಿ ಹೊಡಿ ಬಡಿ, ಪ್ರೀತಿ ಪ್ರೇಮದ ಕಥೆಯ ಸಿನೆಮಾ. ಹಾಗೆ ನೋಡಿದರೆ ನನ್ನ ಅನುಮಾನ ಮುಯ್ಯಿಗೆ ಮುಯ್ಯಿ ಎನ್ನುವ ಪದ ಎಷ್ಟರಮಟ್ಟಿಗೆ ಸರಿ? ಏಕೆಂದರೆ ಮುಯ್ಯಿ ಎಂದರೆ ಹಿಂದೆ ಪಡೆದುಕೊಂಡದ್ದನ್ನು -ಅದು ನೋವೋ ದುಃಖವೋ, ಸಂಕಟವೋ, ಸಂತೋಷವೋ (ಹೆಚ್ಚಿನ ಬಾರಿ ಇದಲ್ಲ) ಅಸಲು ಅಥವಾ ಬಡ್ಡಿ ಸಮೇತ ತೀರಿಸಿ “ಹೆಂಗೆ ನಾವು?!, ಆ ಹೊತ್ತು ನೀನು ಮೆರೆದಿದ್ದೆ ಇಂದು ನನ್ನ ಸರದಿ” ಎಂದು ಬೀಗುವುದೇ ಅದರ ಮೂಲ ಅರ್ಥ ಎಂದು ಭಾವಿಸಿದ್ದೇನೆ. ಗೂಗಲ್ ಅಣ್ಣನಿಗೆ ಮೊರೆ ಹೋದಾಗ ‘ಅಮರಕೋಶದಲ್ಲಿ’ ಯಾರಿಂದಲಾದರೂ, ಯಾವುದರಿಂದಲಾದರೂ, ಆದ ಅನ್ಯಾಯ ಅಥವಾ ಮೋಸಕ್ಕೆ ಪ್ರತಿಯಾಗಿ ಸಮಯ ಕಾದು ಅಂತಹುದೆ ಮೋಸ ಅಥವಾ ಅನ್ಯಾಯವನ್ನು ಈ ಮುಂಚೆ ಮಾಡಿದವರಿಗೆ ಮಾಡುವುದು. ಓಕೆ ಮುಯ್ಯಿ ಸರಿ, ‘ಮುಯ್ಯಿಗೆ ಮುಯ್ಯಿ’ ಎಂದರೆ? ಅದರ ಸರಣಿ ಮುಂದುವರೆಯಿತು ಅಂತಲೇ?!
ಇರಲಿ ಬಿಡಿ, ನನಗದರ ಸಹವಾಸ ಬೇಡ. ನಾನು ಹೇಳಲು ಹೊರಟ ಮುಯ್ಯಿ ಬೇರೆಯೇ ಇದೆ. ಅದು ಈಗ ಹೇಳುವ ‘ಗಿಫ್ಟ್, ಆಯಾರು, ಪ್ರೆಸೆಂಟೇಷನ್, ಉಡುಗೊರೆʼ ಮುಂತಾದ ಅರ್ಥದ ಮೂಲ ಪಳಯುಳಿಕೆಯೇ ಮುಯ್ಯಿ ಎಂಬ ಪದ ಎಂಬುದು ನನ್ನ ಭಾವನೆ. ಅದು ಅರವತ್ತರ ದಶಕ. ತಂದೆಯವರು ಆರ್ಮಿ ಬಿಟ್ಟು ಬಂದು ತುಮಕೂರು ರಸ್ತೆಯಲ್ಲಿದ್ದ ‘ಪ್ಲೈವುಡ್’ ಫ್ಯಾಕ್ಟರಿಯಲ್ಲಿ ದುಡಿಯುತ್ತಿದ್ದರು. ಸಂಬಳ ಕಡಿಮೆ, ಮನೆ ತುಂಬಾ ಮಕ್ಕಳು. ಮನೆ ಖರ್ಚು ಸರಿದೂಗಿಸಿ ಹೇಗೋ ದಿನ ದೂಡುತ್ತಿದ್ದ ಕಾಲ. ನಡುನಡುವೆ ಅಕ್ಕ-ಪಕ್ಕದ ಕುಟುಂಬಗಳಲ್ಲಿ ಏನಾದರೂ ಕಾರ್ಯಕ್ರಮಗಳಿದ್ದರೆ ಹೋಗಬೇಕಿತ್ತು. ‘ಅರಿಸಿನ ಕುಂಕುಮಕ್ಕೆ ಬನ್ನಿ’ ಎಂದು ಕರೆದು ಹೋಗುತ್ತಿದ್ದರು. ನಾಮಕರಣ, ಹೆಣ್ಣು ಮಕ್ಕಳು ಋತುಮತಿಯಾದದ್ದು, ದೂರದ ಹಳ್ಳಿಯಲ್ಲಿ ಮದುವೆ ಮುಗಿಸಿಕೊಂಡು ಬಂದು ಇಲ್ಲಿ ಮನೆಯ ಮುಂದೆ ಆರತಕ್ಷತೆ, ಇಂತಹ ಸಂದರ್ಭಗಳಲ್ಲಿ ಅವರಿಗೆ ಏನಾದರೂ ಮುಯ್ಯಿ ಕೊಡಬೇಕಲ್ಲ. ಅಮ್ಮ ಅಲ್ಲಿ ಇಲ್ಲಿ (ಯಥಾಪ್ರಕಾರ ಸಾಸುವೆ ಡಬ್ಬಿಯಲ್ಲಿ) ಉಳಿಸಿಟ್ಟಿದ್ದ ಹಣ ತೆಗೆದು ಲೆಕ್ಕ ಹಾಕಿ ಏನಾದರೂ ವಸ್ತು ತರಲು ಯೋಚಿಸುತಿದ್ದಳು. ಆ ಸಂದರ್ಭದಲ್ಲಿ ದೊಡ್ಡಕ್ಕ ಮಲ್ಲೇಶ್ವರದ ಸರ್ಕಾರಿ ಮಹಿಳಾ ಪ್ರೌಢಶಾಲೆಯಲ್ಲಿ ಓದುತ್ತಿದ್ದಳು. ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿ ಪ್ರಭಾಕರ್ ಫ್ಯಾನ್ಸಿ ಸ್ಟೋರ್ಸ್ ಎಂಬ ಒಂದು ಅಂಗಡಿ ಬಹುಶಃ ಈ ತರಹದ್ದು ಇಷ್ಟು ವಿಭಿನ್ನವಾಗಿದ್ದದ್ದು ಅದೇ ಮೊದಲು ತೆರೆದಿತ್ತು. ಅಲ್ಲಿಂದ ಮುಯ್ಯಿ ತೆಗೆದುಕೊಳ್ಳುವವರ ಯೋಗ್ಯತೆಗೆ ತಕ್ಕಂತೆ, ಕೈಯಲ್ಲಿದ್ದ ಹಣಕ್ಕೆ ತಕ್ಕಂತೆ ಒಂದು ನೀರು ಕುಡಿಯುವ ಸ್ಟೇನ್ಲೆಸ್ ಸ್ಟೀಲ್ ಲೋಟ ತೆಗೆದುಕೊಂಡು, ಅದರ ಮೇಲೆ ಕೊಡುವವರ (ಇಷ್ಟೆಲ್ಲಾ ಅಪ್ಪನ ಗಮನಕ್ಕೆ ಬರದಿದ್ದರೂ ಅವರದ್ದೆ) ಹೆಸರು ಕೊರೆಯಿಸಿ, ಬಣ್ಣದ ಕಾಗದದಲ್ಲಿ ಸುತ್ತಿಸಿ ತರುತ್ತಿದ್ದಳು. ಸಂಜೆ ಕಾರ್ಯಕ್ರಮದಲ್ಲಿ ಅದನ್ನು ಮುಯ್ಯಿ ಮಾಡಿ, ದೊಡ್ಡವರಿಗೆ ಎಲೆ ಅಡಿಕೆ ಬಾಳೆಹಣ್ಣು- ಕೆಲವೊಮ್ಮೆ ಲಾಡು, ಮೈಸೂರು ಪಾಕ್ – ಹಾಗೂ ನಮ್ಮಂತಹ ಚಿಲ್ಟಾರಿಗಳಿಗೆ ಬೊಗಸೆ ತುಂಬಾ ‘ಕಳ್ಳೇಪುರಿ’ ತೆಗೆದುಕೊಂಡು ಮನೆ ಸೇರುತ್ತಿದ್ದುದು. ಹೀಗೆ ಆಗಾಗ ಕಾಫಿ ಲೋಟ ಆದರೆ ಎರಡು, ತಿಂಡಿ ತಟ್ಟೆಗಳು ಆದರೆ ಎರಡು, ಊಟದ ತಟ್ಟೆ ಆದರೆ ಒಂದು, ನಂತರದ ದಿನಗಳಲ್ಲಿ ತಂಬಿಗೆ, ರೈಲು ಚೊಂಬು (ತಿರುಪಿನ ತಂಬಿಗೆ) ಟಿಫಿನ್ ಬಾಕ್ಸ್‌ಗಳು(ವಿವಿಧ ನಮೂನೆಯವು) ಹೀಗೆ ಕಾಲ ಮುಂದುವರಿದಂತೆ ಬದಲಾಗುತ್ತಾ ಹೋಯಿತು. ಹಾಗೆಯೇ ಹೀಗೆ ಬಂದ ಅನೇಕ ಲೋಟ ತಟ್ಟೆಗಳು ಮನೆಯಲ್ಲಿದ್ದ ಸಿಲವಾರ (ಅಲ್ಯುಮಿನಿಯಂ) ಹಿತ್ತಾಳೆಯ ಜಾಗದಲ್ಲಿ ವಕ್ಕರಿಸಿದವು.
ಇದರ ಜೊತೆಗೆ ಉಡುಗೊರೆ ಕೊಡುವ ಕವರ್‌ಗಳಲ್ಲಿ ಒಂದು ಎರಡರಿಂದ ಶುರುವಾಗಿ ಐದು ಹತ್ತರವರೆಗೆ ನೋಟುಗಳು ತೂರಿಕೊಳ್ಳುವ ಕಾಲ ಬಂತು. ಅದೇ ಸಂದರ್ಭದಲ್ಲಿ ಇನ್ನೊಂದು ಮುಖ್ಯ ಅಂಶ ಮರೆಯುವ ಹಾಗಿಲ್ಲ. ಮದುವೆಯ ಧಾರೆಯ ನಂತರ ಹೀಗೆ ಮುಯ್ಯಿ ಮಾಡುವವರು ಸರತಿಯಲ್ಲಿ ನಿಂತು, ವರನಿಗೋ ವಧುವಿಗೋ, ಮುಯ್ಯಿ ಮಾಡುವಾಗ ಅದನ್ನು ಪುರೋಹಿತರು “ಮತ್ತೀಕೆರೆ ಮರಿಯಪ್ಪನವರಿಂದ ವಧುವಿಗೆ ಎರಡು ವರಹಗಳ ಕಾಣಿಕೆ” ಎಂದು ರಾಗವಾಗಿ ಹೇಳುವಾಗ ಪಕ್ಕದಲ್ಲಿ ವಧುವಿನ ಸೋದರ ಮಾವ ಒಂದು ದೊಡ್ಡ ಹಾಳೆಯಲ್ಲಿ ಅದನ್ನು ಬರೆದುಕೊಳ್ಳುವುದು, ಅವನ ಹೆಂಡತಿ ಕಾಣಿಕೆಯನ್ನು ಒಂದು ಕೈಚೀಲದಲ್ಲಿ ಜೋಪಾನವಾಗಿ ತೆಗೆದಿಟ್ಟುಕೊಳ್ಳುವುದು ನಡೆಯುತ್ತಿತ್ತು. ಹಾಗೆಯೇ ವರಹ ಎನ್ನುವುದನ್ನು ಪುರೋಹಿತರು ರಾಗವಾಗಿ ವರಾಹ ಎನ್ನುತ್ತಿದ್ದುದು ಈಗ ನೆನಪಿಗೆ ಬರುತ್ತಿದೆ. ಆಗೆಲ್ಲ ವರಾಹಗಳು ರಾಜಾ ರೋಷವಾಗಿ ರಸ್ತೆಯ ಬದಿಯ ಮೋರಿಗಳಲ್ಲಿ (ದುರ್) ಜಲಕ್ರೀಡಾಸಕ್ತರಾಗಿರುತ್ತಿದ್ದುದು ನೆನಪಿಗೆ ಬರುತ್ತದೆ. ಹಾಗೆಯೇ ಹೀಗೆ ಪುರೋಹಿತರ ಮೂಲಕ ಹೇಳಿಸುವ ಕಾರಣದಿಂದಲೇ ಬಹುಶಃ ಮುಯ್ಯಿಗೆ ಓದಿಸುವುದು ಎನ್ನುವ ಪದವು ಬಳಕೆಯಲ್ಲಿದ್ದಿರಬಹುದು. ಹೀಗೆ ಓದಿಸುವವರ ಪಟ್ಟಿ ತಯಾರಿಸುವ ಬಗ್ಗೆ ಹೇಳಿದೆನಲ್ಲ ಅದರ ಉದ್ದೇಶ ಇಷ್ಟೇ. ಅವರ ಮನೆಯ ಕಾರ್ಯಕ್ರಮದಲ್ಲಿ ನಾವೆಷ್ಟು ಹಾಕಿದ್ದೆವು, ಈಗ ಅವರೆಷ್ಟು ಹಾಕಿದ್ದಾರೆ, ಹಾಗೆಯೇ ಮುಂದೆ ಅವರ ಮನೆಯ ಕಾರ್ಯಕ್ರಮದಲ್ಲಿ ನಾವೆಷ್ಟು ಹಾಕಬೇಕು! ಹೀಗೆ ಇಂತಹ ಪಟ್ಟಿಗಳು ಕೆಲವರ ಮನೆಯಲ್ಲಿ ಬೀರುವಿನಲ್ಲಿ ಅನೇಕ ವರ್ಷಗಳು ಜತನದಿಂದ ಕಾಪಾಡಿಕೊಂಡಿರುವುದು ಇದೆ.
ನಂತರದ ದಿನಗಳಲ್ಲಿ ನಾವು ಬೆಳೆದು ದೊಡ್ಡವರಾಗಿ ಓದುವ ಆಸಕ್ತಿ (ಪಠ್ಯದಲ್ಲಲ್ಲ ಕಥೆ ಕಾದಂಬರಿಗಳಲ್ಲಿ) ಬೆಳೆಸಿಕೊಂಡು, ನಂತರ ಪುಸ್ತಕಗಳನ್ನೇ ಉಡುಗೊರೆ ಕೊಡುವ ಹವ್ಯಾಸವು ಬೆಳೆಯಿತು, ಹರಡಿತು. ಅದರಲ್ಲೂ ಒಂದು ಗಮ್ಮತ್ತಿತ್ತು; ಯಾರಿಗಾದರೂ ಉಡುಗೊರೆ ಕೊಡುವ ಸಂದರ್ಭ ಮುಂಚಿತವಾಗಿ ತಿಳಿದಾಗ, ಅವರಿಗೆ ಹೊಂದುವ, ಜೊತೆಗೆ ಬಜೆಟ್‌ಗೆ ಸರಿ ಹೋಗುವ -ಎಲ್ಲಕ್ಕಿಂತ ಮುಖ್ಯವಾಗಿ ನಾನು ಓದಲು ಬಯಸಿ ಸಾಧ್ಯವಾಗದೇ ಇದ್ದ- ಪುಸ್ತಕ ಒಂದನ್ನು (ಆಗೆಲ್ಲ ಆನ್ಲೈನ್ ಇರಲಿಲ್ಲ) ಮೆಜೆಸ್ಟಿಕ್ ಸುತ್ತ ಮುತ್ತ ಇದ್ದ ಸಾಹಿತ್ಯ ಭಂಡಾರ, ನವ ಕರ್ನಾಟಕ ಇಂತಹ ಪುಸ್ತಕ ಮಳಿಗೆಗಳಲ್ಲಿ ಕೊಂಡು, ಅದನ್ನು ನ್ಯೂಸ್ ಪೇಪರ್ ಹೊದಿಕೆಯೊಳಗೆ ಮುಚ್ಚಿ ಹಾಳೆಗಳು ಹಾಳಾಗದಂತೆ ಜತನದಿಂದ ಕಾಪಾಡಿಕೊಂಡು, ಓದಿ (ಕಾರ್ಯಕ್ರಮ ಹತ್ತಿರವಿದ್ದರೆ ಬೇಗ ಬೇಗ ಮುಗಿಸಿ) ಮುಯ್ಯಿ ಮಾಡುವುದು. ಹೀಗೆ ನಾನು ಓದಿ ಮುಗಿಸಿದ ಪುಸ್ತಕಗಳು ಅಗಣಿತ. ಹೀಗೆಯೇ ನಮ್ಮ ಮನೆಗೂ ಅನೇಕ ಪುಸ್ತಕಗಳು ಬಂದಿದ್ದವು. ಅದರಲ್ಲಿ ಒಂದರ ಉಲ್ಲೇಖ ಮಾಡಲೇಬೇಕು. ನನ್ನ ಶ್ರೀಮತಿಗೆ, ಅವಳಿಂದ ಕಲಿತು ಪಿಯುಸಿ ಮುಗಿಸಿ ಹೊರಡುವ ವಿದ್ಯಾರ್ಥಿನಿಯರ ಗುಂಪೊಂದು ಅವರ ನೆನಪಿಗಾಗಿ ಅವರೆಲ್ಲರ ಫೋಟೋ ಒಂದನ್ನು ಒಂಟಿಸಿ, ಸ್ವಲ್ಪ ದೊಡ್ಡ ಗಾತ್ರದ ಪುಸ್ತಕ ಒಂದನ್ನು ಕಾಣಿಕೆಯಾಗಿ ಕೊಟ್ಟರು. (ಇಲ್ಲಿ ಮುಯ್ಯಿ ಎಂಬ ಪದ ಬಳಸುವುದು ಹೇಗೆ?!) ಅಥವಾ ಅರ್ಥವಾಗದ ವ್ಯಾಕರಣವನ್ನು ಸರಳಗೊಳಿಸಿ, ತಮಗೆ ಬೇಕೋ ಬೇಡವೋ ತಲೆಗೆ ತುಂಬಿಸಿದ ಟೀಚರ್‌ಗೆ ಹುಸಿಮುನಿಸಿನಿಂದ ಮುಯ್ಯಿ ಮಾಡಿದರು ಎನ್ನಲೇ. ಅಥವಾ ಅದನ್ನು ನೆನಪಿನ ಕಾಣಿಕೆ ಎನ್ನುವುದೇ ಹೆಚ್ಚು ಸರಿ. ಇರಲಿ ಆ ಪುಸ್ತಕ ಟೇಬಲ್ ಮೇಲೆಯೇ ಇತ್ತು. ಆಗಾಗ ಆ ಫೋಟೋ ಹಾಗೂ ಪುಸ್ತಕದ ಶೀರ್ಷಿಕೆ ಕಣ್ಣಿಗೆ ಬೀಳುತ್ತಲೇ ಇತ್ತು. ಗಾತ್ರವೂ ಸ್ವಲ್ಪ ದೊಡ್ಡದಿದ್ದುದರಿಂದ ಇಂದು ನಾಳೆ ಎಂದು ಮುಂದೆ ಹಾಕಿ, ಒಂದು ಅಮೃತಘಳಿಗೆಯಲ್ಲಿ ಕೈಗೆತ್ತಿಕೊಂಡು (ಕಣ್ಣಿಗೂ ಒತ್ತಿಕೊಳ್ಳಬೇಕಿತ್ತು) ಓದಲು ಶುರು ಮಾಡಿದೆ. ಅಬ್ಭಾ ನನಗೆ ತಿಳಿಯದ ಹಾಗೆ ಅದರೊಳಗೆ ಸೇರಿ ಹೋದೆ. ಆ ಮಲೆನಾಡು, ಆ ಮಳೆ ಆ ಕೆಸರು, ಆ ಪಾತ್ರಗಳು, ಆ ಕಾಲಘಟ್ಟದ ಹಳ್ಳಿ, ಕಾಡು, ಆ ಅದ್ಭುತ ಭಾಷೆ, ನಿರೂಪಣೆ! ಊಟ ನಿದ್ರೆಯ ಪರಿವಿಲ್ಲದೆ ಓದಿ ಮುಗಿಸಿದೆ. ಆ ಮಹಾನ್ ಕೃತಿಯೇ ಪೂಜ್ಯ ಕುವೆಂಪುರವರ ‘ಮಲೆಗಳಲ್ಲಿ ಮದುಮಗಳು.!’
ನಾನೊಂದು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದೆ. ನನ್ನ ಹಾಗೆ ಮದುವೆಯ ವಯಸ್ಸಿಗೆ ಬಂದವರು, ಆಗಷ್ಟೇ ಮದುವೆಯಾಗಿದ್ದ ನವ ವಿವಾಹಿತರು ಹೆಚ್ಚಾಗಿದ್ದ ಕಾಲ. ಮದುವೆಯ ಸೀಸನ್- ಅದರಲ್ಲೂ ನಮ್ಮ ವಿಶಾಲ ಭಾರತದಲ್ಲಿ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ದಿನಗಳು- ಬಂತೆಂದರೆ ತಿಂಗಳಿಗೆ ಒಂದು ಎರಡು ಮದುವೆಗಳು ಇರುತ್ತಿದ್ದವು. ವೈಯಕ್ತಿಕವಾಗಿ ‘ಕವರ್’ ಕೊಡುವ ಬದಲು ಎಲ್ಲರ ಹಣ ಸೇರಿಸಿದರೆ ಒಂದು ಒಳ್ಳೆಯ ಗಿಫ್ಟ್ ಕೊಡಬಹುದೆಂದು -ಆಗ ಒಂದು ಸಾವಿರಕ್ಕೆ ಒಂದು ಒಳ್ಳೆಯ ಮಿಕ್ಸರ್ ಗ್ರೈಂಡರ್ ಬರುತ್ತಿತ್ತು- ಒಂದೆರಡು ಬಿಳಿಯ ಹಾಳೆ ತೆಗೆದುಕೊಂಡು, ಅದರಲ್ಲಿ ಮೇಲೆ ಯಾರ ಮದುವೆ ಇತ್ಯಾದಿ ಬರೆದು, ಆ ಹಾಳೆಗಳ ಜೊತೆ ಮದುವೆಯ ಆಮಂತ್ರಣವನ್ನು ಸ್ಟ್ಯಾಪಲ್ ಮಾಡಿ, ಮೊದಲು ಮದುವೆಯ ವರನ ಸೆಕ್ಷನ್‌ನಲ್ಲಿ ಹಣ ಸಂಗ್ರಹಿಸಿ, ನಂತರ ಇತರೆ ಸೆಕ್ಷನ್‌ಗಳಿಗೆ ಎಡತಾಕುವುದು. ಈ ಪದ ಏಕೆಂದರೆ ಅನೇಕ ಬಾರಿ ಹೆಸರು, ಮೊಬಲಗು, ಸಹಿ ಮಾಡಿ ಈಗ ಆಗ ಬಾ ಎನ್ನುತ್ತಿದ್ದರು. ಸಂಬಳದ ಆಜುಬಾಜು ಇದ್ದರೆ ಸಮಸ್ಯೆ ಇಲ್ಲ. ಇಲ್ಲದಿದ್ದರೆ ಕೆಲವರಂತೂ ಕೊನೆಗೂ ಕೊಡದೆ ತಪ್ಪಿಸಿಕೊಂಡದ್ದೂ ಇದೆ!
ಅನೇಕ ಬಾರಿ ಹಣ ಸಂಗ್ರಹಿಸುವ ಕೆಲಸ ನಾನು ಮಾಡಿದ್ದೇನೆ. ಆ ಹಿಂಸೆ ಅನುಭವಿಸಿದ್ದೇನೆ. ಅದರಲ್ಲೂ ಹೆಚ್ಚು ಕೊಡುವವರ ಬಳಿ ಮೊದಲು ಹೋಗುವುದು, ಅದನ್ನು ನೋಡಿ ಉಳಿದವರು ಅಷ್ಟೇ ಅಥವಾ ಅದಕ್ಕಿಂತ ತುಸು ಹೆಚ್ಚು ಕೊಡುತ್ತಿದ್ದರು. ಇನ್ನೂ ಕೆಲವರು “ಮೊದಲು ಜಾಸ್ತಿ ಕೊಡುವವರ ಬಳಿ ಬರಸಿಕೊಂಡು ಬನ್ನಿ, ನಾವೆಲ್ಲ ಅಷ್ಟು ಕೊಡುವವರಲ್ಲ” ಎನ್ನುತ್ತಿದ್ದರು. ಮೊದಲು ಡಿಪಾರ್ಟ್ಮೆಂಟ್‌ನ ಸೂಪರ್ ವೈಸರ್, ಮ್ಯಾನೇಜರ್‌ಗಳ ಬಳಿ ಕಲೆಕ್ಟ್ ಮಾಡಿ ನಂತರ ಉಳಿದವರ ಬಳಿ. ಇನ್ನೂ ಕೆಲವರು “ನಾನು ಪರ್ಸನಲ್ ಆಗಿ ಬೇರೆ ಕೊಡ್ತೀನಿ” ಎಂದು ಹೇಳಿ ಅದರಲ್ಲಿ ಕೆಲವರು ಹಾಗೆಯೇ ಮಾಡುತ್ತಿದ್ದರು. ಅದರಲ್ಲಿಯೂ ಕೆಲವರು ಮಾತ್ರ ತಪ್ಪಿಸಿಕೊಳ್ಳುವುದಕ್ಕಾಗಿ ಈ ನೆಪ ಹೇಳುತ್ತಿದ್ದುದೂ ಇದೆ. ಇನ್ನೂ ಕೆಲವರು “ನೀನು ಹಾಕಿರು ನಾನು ಸಂಬಳ ಬಂದ ಮೇಲೆ ಕೊಡುತ್ತೇನೆ” ಎಂದು, ಅದರಲ್ಲಿ ಕೆಲವರ ಬಳಿ ಅದಕ್ಕಾಗಿ ಅನೇಕ ಸಲ ಜ್ಞಾಪಿಸಿ, ಕೆಲವೊಮ್ಮೆ ಮುಂದಿನ ತಿಂಗಳ ಸಂಬಳದಲ್ಲಿ ಪಡೆದದ್ದು ಇದೆ.
ನಮ್ಮ ಪಕ್ಕದ ಸೆಕ್ಷನಲ್ಲಿ ಒಬ್ಬರು ಇದ್ದರು- ಅವರ ಹೆಸರು ಬೇಡ- ಈ ಪ್ರೆಸೆಂಟೇಷನ್ ಬಗ್ಗೆ ಬರೆಯುವಾಗ ಅವರ ನೆನಪು ಹಾರಲು ಸಾಧ್ಯವೇ ಇಲ್ಲ. ಮದುವೆ ಹಿಂದಿನ ರಾತ್ರಿ ರಿಸೆಪ್ಶನ್ ಇರುತ್ತಿತ್ತು. ನಂತರ ಆತ್ಮೀಯ ಗೆಳೆಯರಿಗೆ ಒಂದೆರಡು ರೂಮಗಳು ಮೀಸಲಿರುತ್ತಿತ್ತು. ಅನಿವಾರ್ಯವೆನಿಸಿದರೆ ಹಾಲಿನಲ್ಲೇ ಒಂದು ಮೂಲೆಯಲ್ಲಿ ಜಮಖಾನ ಹಾಸಿಕೊಂಡು, ಕೈಯಲ್ಲಿ ‘ಹದಿಮೂರು ಎಲೆ’ ಹಿಡಿದು ಕೂರುವ ಒಂದು ಗುಂಪೇ ಇರುತ್ತಿತ್ತು. ಮಧ್ಯದಲ್ಲಿ ಒಮ್ಮೆ ಚಾ ಕಾಫಿ ಸಪ್ಲೈ ಆಗಬೇಕು. ಒಮ್ಮೆಯಂತೂ ಅಡುಗೆಭಟ್ಟರಲ್ಲಿ ಒಬ್ಬ ಈ ಗುಂಪಿನಲ್ಲಿ ಸೇರಿಕೊಂಡು ಸಾಕಷ್ಟು ಕಮಾಯಿಸಿ ಫ್ಯಾಕ್ಟರಿಯ ಗೆಳೆಯರಿಗೆ ಟೋಪಿ ಹಾಕಿದ್ದ. ಕೆಲವರು ಟೈಂಪಾಸ್‌ಗಿಂತ ಹೆಚ್ಚಾಗಿ ಹಣ ಮಾಡುವುದೆ ಗುರಿಯಾದವರು ಅಂದರ್ ಬಾಹರ್ ಅಥವಾ ತ್ರೀ ಕಾರ್ಡ್ಸ್ ಆಡುತ್ತಿದ್ದರು. ನನ್ನ ಸಹೋದ್ಯೋಗಿ ಒಬ್ಬರ ಬಗ್ಗೆ ಹೇಳಿದ್ದೆನಲ್ಲ; ಅವರು ಸಾಮಾನ್ಯವಾಗಿ “ನಾನು ಪರ್ಸನಲ್ ಆಗಿ ಪ್ರೆಸೆಂಟೇಷನ್ ಕೊಡುವ” ಪೈಕಿ. ಅದರಲ್ಲೂ ಅವರದೊಂದು ನಿಯಮ. ರಾತ್ರಿ ಊಟ ಮುಗಿಸಿ ಆಟಕ್ಕೆ ಕೂರುತ್ತಿದ್ದರು. ಬೆಳಗ್ಗೆವರೆಗೂ ಆಡುತ್ತಿದ್ದರು. ಸಾಕಷ್ಟು ಕಮಾಯಿ ಆದರೆ ಯಾರದಾದರೂ ಕೈಯಲ್ಲಿ ಕವರ್ ಕೊಟ್ಟು ಕೆಲಸಕ್ಕೆ ಹಾಜರಾಗಲು ಬೆಳಗ್ಗೆ ಫ್ಯಾಕ್ಟರಿಗೆ ಬರುತ್ತಿದ್ದರು. ಕಮಾಯಿ ಆಗದಿದ್ದರೂ ಫ್ಯಾಕ್ಟರಿಗೆ ಬರುತ್ತಿದ್ದರು ಆದರೆ ಯಾರ ಕೈಗೂ ಯಾವ ಕವರೂ ಕೊಡದೇ!!
ಹೀಗೆಯೇ ಫ್ಯಾಕ್ಟರಿಯ ಗೆಳೆಯರ ಬಗ್ಗೆ ಹೇಳುವಾಗ ಇನ್ನೊಬ್ಬರ ನೆನಪು ಆಗುತ್ತದೆ. ಅವರು ಬಿಜಾಪುರದ ಕಡೆಯವರು ಸಾಕಷ್ಟು ಜಮೀನು ಊರಿನಲ್ಲಿ ಇತ್ತು. ಹೆಂಡತಿಯ ಸ್ವಂತ ಅಣ್ಣ ಅಲ್ಲಿನ ಪ್ರಮುಖ ರಾಜಕಾರಣಿ. ಈ ಮಹಾನುಭಾವ ತನ್ನ ಮೊದಲ ಮಗಳ ಮದುವೆಯ ಆಹ್ವಾನ ಪತ್ರಿಕೆ ಹಂಚಿದಾಗ ನನ್ನ ಕಣ್ಣಿಗೆ ಬಿದ್ದದ್ದು “ಬಟ್ಟೆ ಆಯಾರು ಇರುವುದಿಲ್ಲ” ಎಂಬ ಪದ! ನನಗೆ ಅಚ್ಚರಿಯಾಯಿತು. ಏನಿದು ಎಂದು ಬಲ್ಲವರಲ್ಲಿ ವಿಚಾರಿಸಿದೆ. ಅನುಭವಸ್ಥರಿಂದ ತಿಳಿದದ್ದು- ಕೆಲವರು ತಮಗೆ ಯಾರೋ ಗಿಫ್ಟ್ ಕೊಟ್ಟ ಸೀರೆ ಶರ್ಟ್ ಪೀಸ್‌ಗಳನ್ನು, ಅದನ್ನು ಉಪಯೋಗಿಸದೆ ಹಾಗೆ ಇಟ್ಟುಕೊಂಡು ಬೇರೆ ಯಾರಿಗಾದರೂ ಉಡುಗೊರೆ ರೂಪದಲ್ಲಿ ಕೊಡುತ್ತಾರೆ. ಅಲ್ಲದೆ ಕೆಲವರು ಹೊಸದಾದರು ಬಟ್ಟೆಗಳನ್ನು ಇಂತಹವರಿಗೆ ಕೊಡುವ ಯೋಜನೆ ಹಾಕಿರುತ್ತಾರೆ. ಹಾಗೆ ಮಾಡುವ ಹಾಗಿಲ್ಲ. ಏಕೆಂದರೆ ಕೊಡುವವರೇನೋ ಹಣ ಉಳಿಸಲು ಹೀಗೆ ಮಾಡಬಹುದು. ಆದರೆ ವಧು ವರರ ಮಾತಾಪಿತರಿಗೆ ಹಣ ಸಿಕ್ಕ ಹಾಗೆ ಆಗುವುದಿಲ್ಲ. ಹಾಗಾಗಿ ಇದು ಒಂಥರಾ ಪರೋಕ್ಷವಾಗಿ ಹಣವನ್ನೇ ಉಡುಗೊರೆ ಕೊಡಿ ಎಂದ ಹಾಗೆ! ತಾವು ಮದುವೆಗಾಗಿ ಖರ್ಚು ಮಾಡಿದ ಹಣದಲ್ಲಿ ಸ್ವಲ್ಪವಾದರೂ ಹಿಂದಿರುಗಲಿ ಎಂಬ ಉದ್ದೇಶವಿರಬಹುದು. ನನಗೆ ಅಚ್ಚರಿಯಾಯಿತು. ಕಾರಣ ನಾನು ದಕ್ಷಿಣ ಕನ್ನಡ ಮೂಲವನು. ಆಗಲೇ ಅಲ್ಲಿ ಪ್ರೆಸೆಂಟೇಷನ್ ಸ್ಟ್ರಿಕ್ಟಲಿ ಪ್ರೊಹಿಬಿಟೆಡ್, ನೋ ಪ್ರೆಸೆಂಟ್ಸ್ ಪ್ಲೀಸ್, ಆಶೀರ್ವಾದವೇ ಉಡುಗೊರೆ ಮುಂತಾದ ಶಬ್ದಗಳು ಇರುವ ಇನ್ವಿಟೇಶನ್‌ಗಳನ್ನು ನೋಡುತ್ತಿದ್ದೆ.
ನನ್ನ ಸಹೋದ್ಯೋಗಿ ಒಬ್ಬ ಸಾಮಾನ್ಯವಾಗಿ ಯಾವ ಕಾರ್ಯಕ್ರಮಗಳಿಗೂ ಹೋಗುತ್ತಿರಲಿಲ್ಲ. ತುಂಬಾ ಒತ್ತಾಯ ಮಾಡಿದರೆ ಕೆಲವೊಮ್ಮೆ ಎಂಗೇಜ್ಮೆಂಟ್ ಅಥವಾ ಸತ್ಯನಾರಾಯಣ ಪೂಜೆಗೆ ಮಾತ್ರ ಹೋಗುತ್ತಿದ್ದ. ತುಂಬಾ ಯೋಚಿಸಿದ ನಂತರ ತಿಳಿದ ಸತ್ಯವೇನೆಂದರೆ ಈ ಎರಡು ಕಾರ್ಯಕ್ರಮದಲ್ಲಿ ಉಡುಗೊರೆಯ ಹಾವಳಿ ಇರುವುದಿಲ್ಲ ಎನ್ನುವುದು.
ಇನ್ನೊಬ್ಬ ಸಹೋದ್ಯೋಗಿ ಬ್ರಹ್ಮಚಾರಿ ಸಾಧ್ಯವಾದಷ್ಟು ಕಾರ್ಯಕ್ರಮಗಳಿಗೆ ಕೈ ಕೊಡುತ್ತಿದ್ದ. ನಂತರ ತಡವಾಗಿ ಮದುವೆಯಾದ. ಒಂದು ಮಗುವಾಯಿತು. ಅಷ್ಟೇ ಸಾಕು ಎಂದು ನಿರ್ಧರಿಸಿದ. ಆನಂತರ ಅವನು ಯಾರದಾದರೂ ಮನೆಯಲ್ಲಿ ಇಬ್ಬರು ಮಕ್ಕಳಿದ್ದರೆ ಮೊದಲನೆಯ ಮದುವೆಗೆ ಹೋಗುತ್ತಿದ್ದ. ಉಡುಗೊರೆ ಕೊಡುತ್ತಿದ್ದ. ಎರಡನೆಯದಕ್ಕೆ ತಪ್ಪಿಸಿಕೊಳ್ಳುತ್ತಿದ್ದ. ಅವನ ದೂರ ದೃಷ್ಟಿ ನಂತರ ತಿಳಿಯಿತು ತನಗಿರುವುದು ಒಂದೇ ಮಗು ಹಾಗಾಗಿ ತನಗೆ ಸಿಗುವ ಉಡುಗೊರೆ ಒಂದು ಮಾತ್ರ ಹಾಗಾಗಿ ಅವನು ನೀಡುವುದು ಒಂದೇ!
ಇನ್ನೊಬ್ಬ ಸಹೋದ್ಯೋಗಿಯ ಇನ್ನೊಂದು ಕಥೆ ಹೇಳಿಬಿಡುತ್ತೇನೆ. ಆಗಾಗ ಹೊಸ ಶರಟು, ಸ್ವೆಟರು ಹಾಕಿಕೊಂಡು ಬರುತ್ತಿದ್ದ. ಕೇಳಿದರೆ ನನ್ನ ಶ್ರೀಮತಿಯ ಗಿಫ್ಟ್ ಎನ್ನುತ್ತಿದ್ದ. ಅವನಿಗೆ ನನಗಿಂತ ಕಡಿಮೆ ಸಂಬಳ, ಹೆಂಡತಿಯು ನನ್ನವಳ ಹಾಗೆ ಎಲ್ಲಿಯೂ ಕೆಲಸಕ್ಕೆ ಹೋಗುತ್ತಿರಲಿಲ್ಲ. ಇದು ಹೇಗೆ ಸಾಧ್ಯ? ಒಮ್ಮೆ ಈ ವಿಷಯ ಮನೆಯಲ್ಲಿ ಕೇಳಿದಾಗ ನನ್ನ ಹೆಂಡತಿ ನಕ್ಕು ನನಗೊಂದು ಗುಟ್ಟು ಹೇಳಿದಳು. ಆ ಮಹಿಳೆ ಆಗಾಗ ಗಂಡನ ಜೇಬಿನಿಂದ ನೂರು ಇನ್ನೂರು ಹಾರಿಸುತ್ತಿದ್ದಳು. ಅಲ್ಲದೆ ಮನೆಯ ಖರ್ಚಿಗೆಂದು ಹೆಚ್ಚು ಪಡೆದುಕೊಂಡು ಅದರಲ್ಲೂ ಉಳಿಸುತ್ತಿದ್ದಳು. ಆಗ ನಾನು “ನನಗೆ ನಿನ್ನಿಂದ ಅಂತ ಗಿಫ್ಟ್ ಬೇಡ ಈಗ ಇರುವ ಅರಿವೆಯೇ ಸಾಕಾಗಿದೆ” ಎಂದೆ!
ನಾನು ಮೇಲೆ ಹೇಳಿರುವುದೆಲ್ಲ ಹೆಚ್ಚಾಗಿ ಕೆಳ, ಕೆಳ-ಮಧ್ಯಮ ವರ್ಗದ ಸಮಾಜಗಳಲ್ಲಿ ನಡೆಯುವ ಘಟನೆ. ಏಕೆಂದರೆ ಈಗ ಯೂಟ್ಯೂಬ್‌ಗಳಲ್ಲಿ ಗಮನಿಸುತ್ತೇವಲ್ಲ ಖ್ಯಾತನಾಮಳಾದ ನಟಿ ತನ್ನ ಪತಿಗೆ (ಆತನೂ ಖ್ಯಾತನೇ! ಆಟದಲ್ಲೋ ಮತ್ತೆ ಯಾವುದರಲ್ಲೋ) ಬೆಂಜ್, ಆಡಿ ಇತ್ಯಾದಿ ಇತ್ಯಾದಿ ಕಾರನ್ನು ಅವನ ಜನ್ಮದಿನಕ್ಕೆ ಉಡುಗೊರೆಯಾಗಿ ಕೊಟ್ಟದ್ದು. ಹಾಗೆಯೇ ಈಗೀಗ ಕೆಲವರು ಏನನ್ನು ಯೋಜಿಸದೇ ಸುಂದರವಾದ ಹೆಚ್ಚು ವಿಶಿಷ್ಟವಾದ ಬೊಕೆಗಳನ್ನು ನೀಡುತ್ತಾರೆ. ಆದರೆ ಇವುಗಳ ಬೆಲೆಯೂ ಗಗನಕ್ಕೇರಿ, ಜೇಬಿಗೆ ಕತ್ತರಿ ಹಾಕಿ ಬೋಳು ತಲೆಯ ಮೇಲೆ ಒಂದು ಬೊಕ್ಕೆ ಬೀಳುವುದು ಖಾತರಿ!
ಮೊನ್ನೆ ಮೊನ್ನೆ ಇಲ್ಲೊಂದು ಮದುವೆಯ ಆಮಂತ್ರಣ ಬಂದಿತ್ತು. ಅನಿವಾರ್ಯ ಕಾರಣದಿಂದ ಹೋಗಲಾಗಿರಲಿಲ್ಲ. ಸರಿ ಅವರ ಮನೆಗೇ ಹೋಗಿ ಉಡುಗೊರೆ ಕೊಟ್ಟು ಬರಲು ತಯಾರಾಗಿ ಪಕ್ಕದ ಮನೆಯವರಿಗೆ ವಿಚಾರ ತಿಳಿಸಿದೆ, ಏಕೆಂದರೆ ಅವರೂ ಮದುವೆಗೆ ಹೋಗಿರಲಿಲ್ಲ ಎಂಬುದು ನನಗೆ ತಿಳಿದಿತ್ತು. ಆಗ ಅವರೇನೆಂದರು ಗೊತ್ತೆ! “ನಾನು ಆ ದಿನವೇ ಅವರಿಗೆ ಸಾವಿರ ರೂಪಾಯಿ ಫೋನ್ ಪೇ ಮಾಡಿ ಏನಾದರು ಸೂಕ್ತ ಗಿಫ್ಟ್ ತೆಗೆದುಕೊಳ್ಳಿ ಎಂದು ಮೆಸೇಜ್ ಮಾಡಿದೆ” ಎಂದರು!! ಆಗ, ಕೆಲವು ವರ್ಷಗಳ ಹಿಂದೆ ಬ್ಯಾಂಕ್‌ಗಳಲ್ಲಿ ‘ಗಿಫ್ಟ್ ವೋಚರ್’ ಎಂಬುದು ಸಿಗುತ್ತಿತ್ತು. ನಮಗೆ ಬೇಕಾದ ಮೊತ್ತಕ್ಕೆ ಕೊಂಡು, ಅದನ್ನು ಕೊಡಬೇಕಾದವರಿಗೆ ತಲುಪಿಸಿದರೆ ಅವರು ಅದನ್ನು ತಮ್ಮ ಬ್ಯಾಂಕಿಗೆ ಹಾಕಿಕೊಳ್ಳಬೇಕು. ಹೀಗೊಂದು ವ್ಯವಸ್ಥೆ ಇದ್ದುದು ನೆನಪಾಯಿತು.
ನನ್ನ ಮಗಳು ಸಣ್ಣವಳಿದ್ದಾಗ ಹುಟ್ಟಿದ ಹಬ್ಬ ಸರಳವಾಗಿ ಆಚರಿಸುತ್ತಿದ್ದೆವು. ಶಾಲೆಯಲ್ಲಿ ತನ್ನ ಕ್ಲಾಸಿನ ಮಕ್ಕಳಿಗೆ ಚಾಕಲೇಟ್ ವಿತರಣೆ, ಸಂಜೆ ಓರಗೆಯ ಏಳೆಂಟು ಮಕ್ಕಳೊಂದಿಗೆ ದೀಪ ಬೆಳಗಿ ಆರತಿ ಎತ್ತಿ, ಅವಳ ಖುಷಿಗೆ ಕೇಕ್ ಕತ್ತರಿಸಿ, ಕೇಕ್ ತುಂಡಿನ ಜೊತೆ ಬೇರೆ ಏನಾದರೂ ತಿನ್ನಿಸು ಹಂಚುತ್ತಿದ್ದೆವು. ಉಡುಗೊರೆಗಳನ್ನು ತೆಗೆದುಕೊಳ್ಳುತ್ತಿರಲಿಲ್ಲ. ಆದರೆ ಇತ್ತೀಚೆಗೆ ಮೊಮ್ಮಗನ ಹುಟ್ಟಿದ ಹಬ್ಬಕ್ಕೆ ಹೋಗಿದ್ದಾಗ ‘ಅವರೂ ಸರಳತೆಯನ್ನೇ ಬಯಸಿದರೂ’ ಒಂದಷ್ಟು ಮಕ್ಕಳು ಬಂದಿದ್ದರು. ಕೇಕ್ ಕತ್ತರಿಸಿ, ಕುಣಿದು ಕುಪ್ಪಳಿಸಿ, ಇವರು ಕೊಟ್ಟ ತಿಂಡಿ ತಿಂದು, ಗಿಫ್ಟ್ ಕೊಟ್ಟು ಹೊರಡುವಾಗ ಅವರ ಕೈಯಲ್ಲಿ ಇವರು ಏನನ್ನೋ ಕೊಡುತ್ತಿದ್ದರು. ಏನದು? ಎಂದು ನಾನು ಆಶ್ಚರ್ಯದಿಂದ ವಿಚಾರಿಸಿದೆ. “ಇದು ‘ರಿಟರ್ನ್ ಗಿಫ್ಟ್” ಬಂದ ಮಕ್ಕಳಿಗೆ ನಾವು ಏನಾದರೂ ಕೊಟ್ಟು ಕಳಿಸಬೇಕು, ಇದು ಈಗಿನ ಅಲಿಖಿತ ನಿಯಮ” ಎಂದಾಗ ಬಾಯಿ ಸೊಟ್ಟ ಮಾಡಿಕೊಂಡು ಹುಬ್ಬೇರಿಸಿದೆ. ಒಂಥರಾ ಈಗಿನವರ ಮನಸ್ಥಿತಿ, ಯಾರದ್ದೂ ಯಾವುದನ್ನೂ ಬಾಕಿ ಉಳಿಸಿಕೊಳ್ಳುವುದಿಲ್ಲ. ಅಲ್ಲೇ ಡ್ರಾ ಅಲ್ಲೇ ಬಹುಮಾನ ಎಂದ ಹಾಗೆ.
“ಮುಯ್ಯಿಗೆ ಮುಯ್ಯಿ ಎಂದರೆ ಬಹುಶಃ ಇದೆ ಇರಬಹುದೇನೋಪ್ಪಾ” ಎಂದು ಹಾಸ್ಯ ನಟರಾದ ಉಮೇಶ್, ಕುರಿ ಪ್ರತಾಪ್ ಒಟ್ಟಿಗೇ ಕಿವಿಯಲ್ಲಿ ಹೇಳಿದ ಹಾಗೆ ಭಾಸವಾಯಿತು.!!!
ವಸಂತಕುಮಾರ್ ಕಲ್ಯಾಣಿ ಹವ್ಯಾಸಿ ಬರಹಗಾರರು. ಕಥನ ಇವರ ಇಷ್ಟದ ಪ್ರಕಾರ. ಕನ್ನಡ ಪರ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದವರು, ಗೋಕಾಕ್ ಚಳುವಳಿಯಲ್ಲಿ ಸಕ್ರಿಯರಾಗಿದ್ದರು, ಹಲವು ಕಿರುತೆರೆ, ಚಲನಚಿತ್ರಗಳಲ್ಲಿ ಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರ ಬರಹಗಳು ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ‘ಬಾಲರಾಜನೂ ಕ್ರಿಕೆಟ್ಟಾಟವೂ’ ಕಥೆಗೆ ಮೇವುಂಡಿ ಮಲ್ಲಾರಿ ಕಥಾ ಪುರಸ್ಕಾರ ಪ್ರಶಸ್ತಿ ದೊರಕಿದೆ. ‘ಕಾಂಚನ ಮಿಣಮಿಣ’ (ಸಣ್ಣಕಥಾ ಸಂಕಲನ) ‘ಪರ್ಯಾಪ್ತ’ ಪ್ರಕಟಿತ ಕಥಾ ಸಂಕಲನಗಳು.
‘ಮುಯ್ಯಿ’ ತಲೆಬರಹ ಸಾಕಿತ್ತು ಅನ್ನಿಸುತ್ತದೆ. ಪ್ರಬಂಧ ಚೆನ್ನಾಗಿದೆ.