ಫ್ಲೋರಂತಿನೊ ಅವಳ ಪ್ರೀತಿಯಿಲ್ಲದೆ ಭಗ್ನಗೊಂಡು ಅಸ್ತವ್ಯಸ್ತಗೊಂಡಿರುತ್ತಾನೆ. ಅವನಿಗೆ ಅವನ ಪ್ರೀತಿಯಲ್ಲಿ ಅದ್ಯಾವ ಕೊರತೆಯಿತ್ತು ಎನ್ನುವ ವಿಷಯದ್ದೇ ಚಿಂತೆಯಾಗಿರುತ್ತದೆ. ಅವನು ಹಲವಾರು ಕಾರಣಗಳ ಹುಡುಕಾಟದ ನಂತರವೂ ಒಂದಿಷ್ಟು ಲವಲೇಶ ಕಳೆದುಕೊಳ್ಳದೇ ಅವಳನ್ನು ಮೊದಲಿನಷ್ಟೇ ಪ್ರೀತಿಸುತ್ತಾನೆ. ಅವಳ ಬಗ್ಗೆ ಒಂದು ಕ್ಷಣಕ್ಕಾಗುವಷ್ಟೂ ಆತ ಕೆಟ್ಟದನ್ನು ಯೋಚಿಸುವುದಿಲ್ಲ. ಅಷ್ಟೇ ಅಲ್ಲ ಅವಳ ಬಗ್ಗೆ ಮೊದಲಿನ ಪ್ರೀತಿಯನ್ನೇ ಉಳಿಸಿಕೊಳ್ಳುತ್ತಾ ಒಂದು ಗಟ್ಟಿ ನಿರ್ಧಾರಕ್ಕೆ ಬರುತ್ತಾನೆ. ಅದು ಎಷ್ಟೇ ವರ್ಷಗಳಾಗಲಿ ನಾನು ಅವಳಿಗಾಗಿ ಕಾಯುತ್ತೇನೆ ಎನ್ನುವ ಗಟ್ಟಿ ನಿರ್ಧಾರ ಮಾಡುತ್ತಾನೆ. ಅವನ ಆ ಅವಸ್ಥೆ ನೋಡಿ ಅವನ ತಾಯಿ ಅವನ ಬಳಿಗೆ ವಯಸ್ಸಿನಲ್ಲಿ ಅವನಿಗಿಂತ ಹಿರಿಯಳಾದವಳೊಬ್ಬಳನ್ನು ಕಳುಹಿಸಿಕೊಡುತ್ತಾಳೆ.
ಮೆಹಬೂಬ ಮುಲ್ತಾನಿ ಅನುವಾದಿಸಿದ ಗೀತ್ ಚತುರ್ವೇದಿ ಬರೆದ ಲೇಖನ

 

ಇಂದು ಜಗತ್ತು ಕೊರೋನಾದಂತಹ ಮಹಾಮಾರಿಯಿಂದ ತತ್ತರಿಸಿದೆ. ಅತೀ ಕೆಟ್ಟ ದಿನಗಳನ್ನು ನಾವಿಂದು ಕಳೆಯುತ್ತಿದ್ದೇವೆ. ಜನರ ಜೀವನ ಅಸ್ತವ್ಯಸ್ತಗೊಂಡಿದೆ. ಈ ಗಳಿಗೆಯಲ್ಲಿ ಜಗತ್ತಿನ ಶ್ರೇಷ್ಠ ಕೃತಿಗಳಾದ : ‘ಲವ್ ಇನ್ ದ ಟೈಮ್ ಆಫ್ ಕಾಲರಾ’ ಮತ್ತು ‘ಪ್ಲೇಗ್’ ಚರ್ಚೆಗಳು ಮತ್ತೆ ಮುನ್ನೆಲೆಗೆ ಬಂದಿವೆ*

*ಯಾವುದನ್ನು ಪ್ರೀತಿ ಎನ್ನುವುದು?*

ಪ್ರೀತಿ ಎಂದರೇನು? ನಿಜವಾದ ಪ್ರೇಮಿಗಳು ಹೇಗಿರುತ್ತಾರೆ? ಪ್ರತಿಯೊಬ್ಬರಲ್ಲೂ ಈ ಪ್ರಶ್ನೆಗಳಿಗೆ ಅವರದೇಯಾದ ಉತ್ತರಗಳಿರಬಹುದು, ಆದರೆ ಫ್ರೆಂಚ್ ಲೇಖಕ ರೋಲಾ ಬಾರ್ತ್ ನ ಈ ಉತ್ತರ ವಿಶೇಷವೆನಿಸಿಕೊಳ್ಳುತ್ತದೆ.

“ನಾನು ಪ್ರೇಮಿ.
ನಾನು ಪ್ರೇಮಿ ಯಾಕೆಂದರೆ
ನಾನೊಬ್ಬ ಕಾಯುವಿಕೆಯಲ್ಲಿ ನಿರತ ವ್ಯಕ್ತಿ”

ಪ್ರೀತಿ ಮತ್ತು ಕಾಯುವಿಕೆಯ ನಡುವೆ ಅವಳಿ ಸಂಬಂಧಿಗಳಂತಹ ಸಂಬಂಧವಿದೆ. ಒಂದು ವೇಳೆ ಪ್ರೀತಿ ಒಂದು ಪ್ರಶ್ನೆಯಾದರೆ ಕಾಯುವಿಕೆ ಅದಕ್ಕೆ ಉತ್ತರ ಹುಡುಕಲು ಸಹಾಯ ಮಾಡುವ ಕೀಲಿಕೈ ಆಗಿದೆ. ಈ ಚಡಪಡಿಕೆಯನ್ನು ಸಾಹೀರ್ ಲುಧಿಯಾನ್ವಿ ಹೀಗೆ ಹೇಳಿದ್ದಾನೆ,

“ನಾನು ನಿನಗಾಗಿ ಪ್ರಳಯದವರೆಗೂ ಕಾಯುವೆ. ದೇವರು ಬಯಸಿದರೆ ಪ್ರಳಯವಾಗಿ ನೀನು ಬಾ”

ಪ್ರಳಯದವರೆಗೆ ಕಾಯಲು ಉತ್ಸಾಹವಿರಬೇಕು. ಪ್ರಳಯ ಮತ್ತು ಸಧ್ಯದ ನಡುವೆಯೊಂದು ದೀರ್ಘ ಸಮಯದ ಅಂತರವಿದೆ. ಆ ಅಂತರ ಕಡಿಮೆ ಆಗುವುದಾದರೂ ಹೇಗೆ? ಹೀಗಾಗಿಯೇ ಎಷ್ಟೋ ಕಾಯುವಿಕೆಗಳು, ಪ್ರತೀಕ್ಷೆಗಳು ಕೊನೆಗಾಣುತ್ತವೆ. ಜೀವನವೊಂದು ವಿಶಾಲವಾದ ವೆಟಿಂಗ್ ರೂಮಿನಂತಿದೆ. ಅದರ ಗೋಡೆಗಳ ಮೇಲೆ ದೊಡ್ಡದಾದ ಒಂದು ಗಡಿಯಾರವಿದೆ. ಅದು ನಮ್ಮ ಹೃದಯ ಬಡಿತದೊಂದಿಗೆ ಜುಗಲ್ ಬಂದಿ ಮಾಡುತ್ತಾ ಟಿಕ್ ಟಿಕ್ ಎನ್ನುತ್ತಾ ನಡೆಯುತ್ತದೆ.

ಫ್ಲಾರಂತಿನೊ ಅರಿಸಾ ಎನ್ನುವ ಹೆಸರಿನವನೊಬ್ಬ ‘ಕಾಯುವಿಕೆ’ಯದೊಂದು ಹೊಸ ವಿಧಾನವನ್ನು ಕಂಡುಹಿಡಿದಿದ್ದ. ಮೇಲ್ನೋಟಕ್ಕೆ ಆ ವಿಧಾನ ಅನೈತಿಕ ಮತ್ತು ಹಾಸ್ಯಾಸ್ಪದ ಎನ್ನಿಸಬಹುದು. ಆದರೆ ಆಳಕ್ಕೆ ಹೋದಂತಾ ನಮಗೆ ಅವನು ಜೀವನೋತ್ಸಾಹ, ಪ್ರೀತಿ ಮತ್ತು ಕಾಯುವಿಕೆಯನ್ನೊಳಗೊಂಡ ಹೊಸದೊಂದು ಪ್ರಶ್ನೆಯನ್ನೇ ನಮ್ಮ ಮುಂದೆ ಇಡುತ್ತಾನೆ. ಅವನ ಆ ವಿಧಾನ, ಆ ರೀತಿಯಾದರೂ ಏನು? ಇದನ್ನು ತಿಳಿಯುವ ಮೊದಲು ನಾವು ಅವನ ಜೀವನ ಕಥನದಲ್ಲಿ ಒಂದು ಸುತ್ತು ಹಾಯಬೇಕಾಗುತ್ತದೆ.

ಫ್ಲಾರಂತಿನೊ ಅರಿಸಾ ಇಪ್ಪತ್ತನೇ ಶತಮಾನದ ಶ್ರೇಷ್ಠ ಕಾದಂಬರಿಗಳಲ್ಲೊಂದಾದ “ಲವ್ ಇನ್ ದ ಟೈಮ್ ಆಫ್ ಕಾಲರಾ”ದ ನಾಯಕ. ಈ ಕಾದಂಬರಿಯನ್ನು ಬರೆದವರು ಗಾಬ್ರಿಯೇಲ್ ಗಾರ್ಸಿಯಾ ಮಾರ್ಕ್ವೇಜ್. ಇವರನ್ನು ದಂತಕಥೆಗಳ ದೇವರು ಎನ್ನಲಾಗುತ್ತದೆ. ದಕ್ಷಿಣ ಅಮೇರಿಕಾದ ಸಣ್ಣ ದೇಶವಾದ ಕೊಲಂಬಿಯಾದ ಮಾರ್ಕ್ವೇಜ್ ಗೆ ೧೯೮೨ ರಲ್ಲಿ ಸಾಹಿತ್ಯಕ್ಕಾಗಿ ನೋಬೆಲ್ ನೀಡಲಾಗಿದೆ.

ನೋಬೆಲ್ ಸಿಗುವುದಕ್ಕಿಂತ ಮುಂಚೆಯೇ ಅವರ ಕೀರ್ತಿ ಜಗತ್ತಿನ ತುಂಬೆಲ್ಲ ಹರಡಿಕೊಂಡಿತ್ತು. ಆಗ ಅವರು ತಮ್ಮದೇ ಇನ್ನೊಂದು ಶ್ರೇಷ್ಠ ಕಾದಂಬರಿಯಾದ ‘ಒನ್ ಹಂಡ್ರೆಡ್ ಇಯರ್ಸ್ ಆಪ್ ಸಾಲಿಟ್ಯೂಡ್’ (೧೯೬೭) ಬರೆದಿದ್ದರು. ನೋಬೆಲ್ ನಂತಹ ಪುರಸ್ಕಾರಗಳ ನಂತರ ಲೇಖಕನೊಬ್ಬನ ಸೃಜನಶೀಲತೆ, ರಚನಾಶಕ್ತಿ ಕಡಿಮೆಯಾಗುತ್ತದೆ ಎನ್ನುವ ಮಾತೊಂದು ಸಾಹಿತ್ಯ ಲೋಕದಲ್ಲಿದೆ. ಒಬ್ಬ ಬರಹಗಾರನಿಗೆ ಸಿಗಬೇಕಾದ ಅತೀ ಉನ್ನತ ಪ್ರಶಸ್ತಿ ಪುರಸ್ಕಾರ ಸಿಕ್ಕರೆ ಅವನು ಇನ್ನೇನು ಬರೆಯಲು ಸಾಧ್ಯ? ಏಕೆಂದರೆ ಅವನಿಗೆ ಸಿಗಬೇಕಾದ ಎಲ್ಲವೂ ಸಿಕ್ಕಾಯಿತಲ್ಲ ಎನ್ನುವ ಮಾತು ಪದೇ ಪದೇ ಕೇಳಿಬರುತ್ತದೆ. ಆದರೆ ಮಾರ್ಕ್ವೇಜ್ ಅದ್ವಿತೀಯನಾಗಿದ್ದ. ಸಾಹಿತ್ಯ ಲೋಕದ ಈ ಮಾತನ್ನೇ ಅವನು ಸವಾಲಾಗಿ ತೆಗೆದುಕೊಂಡು ೧೯೮೫ ರಲ್ಲಿ ಇನ್ನೊಂದು ಶ್ರೇಷ್ಠ ಕಾದಂಬರಿ ಬರೆದ ಅದುವೇ “ಲವ್ ಇನ್ ದ ಟೈಮ್ ಆಫ್ ಕಾಲರಾ”

ಕೆರೇಬಿಯನ್ ಸಮುದ್ರದ ಹತ್ತಿರವಿರುವ ಕೊಲಂಬಿಯಾದ ಉತ್ತರಕ್ಕಿರುವ ಸಣ್ಣದೊಂದು ಪಟ್ಟಣದಲ್ಲಿ ೧೮೮೦ ರಿಂದ ೧೯೩೦ ರವರೆಗೆ ಈ ಕಥೆ ನಡೆಯುತ್ತದೆ. ಇದೇ ಸಮಯದಲ್ಲಿ ಅಲ್ಲಿ ಕಾಲರಾದಂತಹ ಮಹಾಮಾರಿ ಹರಡಿಕೊಂಡಿರುತ್ತದೆ. ಈ ಕಾದಂಬರಿಯ ನಾಯಕ ಫ್ಲೋರಂತಿನೊ ಅರಿಸಾ ಮತ್ತು ನಾಯಕಿ ಫರಮಿನಾ ದಾಸಾ ನಡುವೆ ಕಿಶೋರಾವಸ್ಥೆಯಲ್ಲಿಯೆ ಪ್ರೀತಿಯಾಗಿರುತ್ತದೆ. ರೂಢಿ ಸಂಪ್ರದಾಯಗಳ ಪರಂಪರೆಯ ಸಮಾಜದಲ್ಲಿ ಅವರಿಬ್ಬರು ಪ್ರೀತಿಸತೊಡಗುತ್ತಾರೆ. ಸಮಾಜದ ಕಣ್ಣು ತಪ್ಪಿಸುತ್ತಾ ಅವರಿಬ್ಬರು ಒಲವಿನೋಲೆಗಳನ್ನು ಬದಲಾಯಿಸಿಕೊಳ್ಳುತ್ತಾರೆ.
ಬೇಗನೆ ಫರಮಿನಾಳ ತಂದೆಗೆ ಅವರಿಬ್ಬರ ಪ್ರೀತಿಯ ವಾಸನೆ ಬಡಿಯುತ್ತದೆ. ಅವರು ಫ್ಲೋರಂತಿನೋನನ್ನು ದಬಾಯಿಸುತ್ತಲೆ ಫರಮಿನಾಳನ್ನು ಬೇರೊಂದು ನಗರದಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಕಳುಹಿಸಿಕೊಡುತ್ತಾರೆ. ಈ ಭೌಗೋಳಿಕ ದೂರ ಕೂಡಾ ಅವರ ಪ್ರೀತಿಯನ್ನು ಕಡಿಮೆ ಮಾಡುವುದಿಲ್ಲ. ಆ ಸಮಯದಲ್ಲಿ ಆ ನಗರಗಳಲ್ಲಿ ಟೆಲಿಗ್ರಾಮ್ ಕಛೇರಿಗಳು ಪ್ರಾರಂಭಗೊಂಡಿದ್ದರಿಂದ ಅವರಿಬ್ಬರು ಒಲವಿನೋಲೆಗಳಿಂದ ಕಳಚಿಕೊಂಡರೂ ಟೆಲಿಗ್ರಾಮ ತಂತಿಯಿಂದ ಬೆಸೆದುಕೊಳ್ಳುತ್ತಾರೆ.

(ಗಾಬ್ರಿಯೇಲ್ ಗಾರ್ಸಿಯಾ ಮಾರ್ಕ್ವೇಜ್)

ಇದೇ ಸಮಯದಲ್ಲಿ ಫರಮಿನಾ ಮತ್ತೆ ತನ್ನ ಮನೆಗೆ ವಾಪಸ್ಸಾಗುತ್ತಾಳೆ. ಅವಳ ಮನಸ್ಸು ಸಂಪೂರ್ಣ ಬದಲಾಗಿರುತ್ತದೆ. ಅವಳಿಗೆ ಫ್ಲೋರಂತಿನೊನ ಜೊತೆ ಭವಿಷ್ಯವಿಲ್ಲವೆನ್ನಿಸತೊಡಗುತ್ತದೆ. ತಂದೆಯ ಮಾತಿನಂತೆ ಅವಳು ಡಾ. ಉರ್ಬಿನೊನನ್ನು ಮದುವೆಯಾಗುತ್ತಾಳೆ. ಮೊದಮೊದಲು ಅವಳಿಗೆ ಆಕೆಯ ಗಂಡ ಇಷ್ಟವಾಗುವುದಿಲ್ಲ, ಆದರೆ ಅವನು ಹಣವಂತ, ಸಭ್ಯ, ಮೃದುಭಾಷಿ ಮತ್ತು ಆಧುನಿಕ ಸಮಾಜದ ವ್ಯಕ್ತಿಯಾಗಿದ್ದರಿಂದ ಕಾಲ ಸರಿದಂತೆ ಅವಳು ಅವನ ಜೊತೆ ಉತ್ತಮ ಜೀವನ ನಡೆಸಲು ಪ್ರಾರಂಭಿಸುತ್ತಾಳೆ.

ಇನ್ನೊಂದೆಡೆ ಫ್ಲೋರಂತಿನೊ ಅವಳ ಪ್ರೀತಿಯಿಲ್ಲದೆ ಭಗ್ನಗೊಂಡು ಅಸ್ತವ್ಯಸ್ತಗೊಂಡಿರುತ್ತಾನೆ. ಅವನಿಗೆ ಅವನ ಪ್ರೀತಿಯಲ್ಲಿ ಅದ್ಯಾವ ಕೊರತೆಯಿತ್ತು ಎನ್ನುವ ವಿಷಯದ್ದೇ ಚಿಂತೆಯಾಗಿರುತ್ತದೆ. ಅವನು ಹಲವಾರು ಕಾರಣಗಳ ಹುಡುಕಾಟದ ನಂತರವೂ ಒಂದಿಷ್ಟು ಲವಲೇಶ ಕಳೆದುಕೊಳ್ಳದೇ ಅವಳನ್ನು ಮೊದಲಿನಷ್ಟೇ ಪ್ರೀತಿಸುತ್ತಾನೆ. ಅವಳ ಬಗ್ಗೆ ಒಂದು ಕ್ಷಣಕ್ಕಾಗುವಷ್ಟೂ ಆತ ಕೆಟ್ಟದನ್ನು ಯೋಚಿಸುವುದಿಲ್ಲ. ಅಷ್ಟೇ ಅಲ್ಲ ಅವಳ ಬಗ್ಗೆ ಮೊದಲಿನ ಪ್ರೀತಿಯನ್ನೇ ಉಳಿಸಿಕೊಳ್ಳುತ್ತಾ ಒಂದು ಗಟ್ಟಿ ನಿರ್ಧಾರಕ್ಕೆ ಬರುತ್ತಾನೆ. ಅದು ಎಷ್ಟೇ ವರ್ಷಗಳಾಗಲಿ ನಾನು ಅವಳಿಗಾಗಿ ಕಾಯುತ್ತೇನೆ ಎನ್ನುವ ಗಟ್ಟಿ ನಿರ್ಧಾರ ಮಾಡುತ್ತಾನೆ. ಅವನ ಆ ಅವಸ್ಥೆ ನೋಡಿ ಅವನ ತಾಯಿ ಅವನ ಬಳಿಗೆ ವಯಸ್ಸಿನಲ್ಲಿ ಅವನಿಗಿಂತ ಹಿರಿಯಳಾದವಳೊಬ್ಬಳನ್ನು ಕಳುಹಿಸಿಕೊಡುತ್ತಾಳೆ. ಅವನು ತನ್ನ ನೆನಪುಗಳನ್ನು ಮರೆತು ಇವಳ ಜೊತೆ ಸಂಗಗೊಳ್ಳಲಿ ಎನ್ನುವ ಅವನ ತಾಯಿಯ ಪ್ರಯತ್ನ ಕೈಗೂಡುತ್ತದೆ.

ಅವಳು ನೀಡಿದ ದೈಹಿಕ ಸುಖದಿಂದಾಗಿ ಫ್ಲೋರಂತಿನೊನ ಜೀವನದಲ್ಲಿ ಮತ್ತು ಯೋಚನೆಯಲ್ಲಿ ಒಂದು ಚಮತ್ಕಾರೀಯ ಬದಲಾವಣೆ ಕಾಣುತ್ತದೆ. ಅವನಿಗೆ “ದೈಹಿಕ ಸುಖ ಹೃದಯದ ನೋವನ್ನು ಕಡಿಮೆ ಮಾಡುವಲ್ಲಿ ನೋವು ನಿವಾರಕಗಳಿಗಿಂತ ಉತ್ತಮವಾಗಿ ಕೆಲಸ ಮಾಡುತ್ತದೆ” ಎಂದೆನಿಸಿ ಅವನು ಹೆಚ್ಚಿನ ಸಂಖ್ಯೆಯಲ್ಲಿ ಸ್ತ್ರೀ ಸಂಪರ್ಕವನ್ನು ಹೊಂದತೊಡಗುತ್ತಾನೆ. ಅವನು ದೈಹಿಕ ಸಂಪರ್ಕ ಹೊಂದಿದ ಅಷ್ಟೂ ಸ್ತ್ರೀಯರ ಹೆಸರನ್ನು ತನ್ನ ಡೈರಿಯಲ್ಲಿ ಲೆಕ್ಕ ಸಮೇತ ಬರೆದಿಡುತ್ತಾನೆ.

ಫರಮಿನಾಳ ಮದುವೆಯಾಗಿ ಐವತ್ತು ವರ್ಷ ಕಳೆದು ಹೋಗುತ್ತವೆ. ಈ ಮಧ್ಯೆ ಫ್ಲೋರಂತಿನೊ ಒಬ್ಬ ಯಶಸ್ವಿ ವ್ಯಕ್ತಿಯಾಗಿರುತ್ತಾನೆ. ಸಣ್ಣ ಪಟ್ಟಣದ ಪ್ರತಿಯೊಂದು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಡಾ. ಉರ್ಬಿನೊ ಮತ್ತು ಫರಮಿನಾರನ್ನು ಅವನು ಯಾವಾಗಲೂ ನೋಡುತ್ತಿರುತ್ತಾನೆ. ಅವನು ಇನ್ನೂ ಅವಿವಾಹಿತನಾಗಿದ್ದಾನೆ, ಆದರೆ ಅವನದೇ ಒಂದು ರಾಜ್ಯವಿದೆ. ಇಷ್ಟು ವರ್ಷಗಳಲ್ಲಿ ಅವನು ಒಟ್ಟು ೬೨೨ ಸ್ತ್ರೀಯರ ಜೊತೆ ದೈಹಿಕ ಸಂಪರ್ಕ ಹೊಂದಿದ್ದಾನೆ. ಅದನೆಂದೂ ಆತ ಕೆಟ್ಟದ್ದು, ತಪ್ಪೆಂದು ಭಾವಿಸುವುದಿಲ್ಲ.

ಒಂದು ಶೇರ್ ಹೀಗಿದೆ,
“ಜೀವಿಸಲೊಂದು ಕಾಳಜಿ ಬೇಕು
ನನಗೆ
ನನ್ನೆಲ್ಲ ಪಾಪಗಳಿಗೆ ಅನುಮತಿ ಬೇಕು” (ಅಹಮದ್ ನದೀಮ್ ಕಾಸಮಿ)
ಅವನ ಮನಸ್ಸಿನ ಆಳದಲ್ಲಿ ನಡೆಯುವ ಹಲವಾರು ಯೋಚನೆಗಳ ಆಳ ಅಗಲದ ಹುಡುಕಾಟದ ಎಲ್ಲ ವ್ಯರ್ಥ ಪ್ರಯತ್ನಗಳ ನಂತರ ಒಂದು ಸತ್ಯ ಅವನಿಗೆ ತಿಳಿಯುತ್ತದೆ. ಜೀವನದಲ್ಲಿ ಏಕಕಾಲಕ್ಕೆ ಹಲವರನ್ನು ಪ್ರೀತಿಸಬಹುದು. ಇದೆಲ್ಲದರ ಮಧ್ಯೆ ಅವನ ಮನಸ್ಸಿನಾಳದಲ್ಲಿ ಅವನ ಗಟ್ಟಿ ನಿರ್ಧಾರ ಇನ್ನೂ ಗಟ್ಟಿಯಾಗಿಯೇ ಇರುತ್ತದೆ. ಒಂದಿಲ್ಲ ಒಂದು ದಿನ ಫರಮಿನಾ ದಾಸಾ ನನ್ನ ಪ್ರೀತಿಯನ್ನು ಒಪ್ಪಿಕೊಳ್ಳುವಳೆಂದು.

ಅವಳಿಗೆ ಫ್ಲೋರಂತಿನೊನ ಜೊತೆ ಭವಿಷ್ಯವಿಲ್ಲವೆನ್ನಿಸತೊಡಗುತ್ತದೆ. ತಂದೆಯ ಮಾತಿನಂತೆ ಅವಳು ಡಾ. ಉರ್ಬಿನೊನನ್ನು ಮದುವೆಯಾಗುತ್ತಾಳೆ. ಮೊದಮೊದಲು ಅವಳಿಗೆ ಆಕೆಯ ಗಂಡ ಇಷ್ಟವಾಗುವುದಿಲ್ಲ, ಆದರೆ ಅವನು ಹಣವಂತ, ಸಭ್ಯ, ಮೃದುಭಾಷಿ ಮತ್ತು ಆಧುನಿಕ ಸಮಾಜದ ವ್ಯಕ್ತಿಯಾಗಿದ್ದರಿಂದ ಕಾಲ ಸರಿದಂತೆ ಅವಳು ಅವನ ಜೊತೆ ಉತ್ತಮ ಜೀವನ ನಡೆಸಲು ಪ್ರಾರಂಭಿಸುತ್ತಾಳೆ.

ಕಾಕತಾಳೀಯವೆಂಬಂತೆ ಕೊನೆಗೆ ಆ ದಿನ ಬಂದೇ ಬಿಡುತ್ತದೆ. ಡಾ. ಉರ್ಬಿನೊ ಸಾಯುತ್ತಾನೆ. ಪ್ಲೊರಂತಿನೊ ಇದೇ ವಿಷಯದ ಕಾಯುವಿಕೆಯಲ್ಲಿರುತ್ತಾನೆ. ಇನ್ನೂ ಫರಮಿನಾ ಉರ್ಬಿನೊನ ಸಾವಿನ ದುಃಖದಿಂದ ಹೊರಬಂದಿರುವುದಿಲ್ಲ. ಅಷ್ಟರಲ್ಲೇ ಫ್ಲೋರಂತಿನೊ ಅವಳ ಮನೆಗೆ ಹೋಗುತ್ತಾನೆ. ಐವತ್ತೊಂದು ವರ್ಷ ಒಂಭತ್ತು ತಿಂಗಳು ನಾಲ್ಕುದಿನಗಳ ಕಾಯುವಿಕೆಯ ಬಗ್ಗೆ ತನ್ನ ಪ್ರೀತಿ ಅದೆಷ್ಟು ನಿಷ್ಠೆಯಿಂದ ಕೂಡಿದೆಯೆಂದು ತಿಳಿಸುತ್ತಲೇ ತನ್ನ ಕಾಪಿಟ್ಟುಕೊಂಡ ಪ್ರೀತಿಯನ್ನು ನಿವೇದಿಸುತ್ತಾ ಮದುವೆಯ ಪ್ರಸ್ತಾಪ ಮಾಡುತ್ತಾನೆ. ಈ ಪ್ರಸ್ತಾಪ ಅವಳಿಗೆ ಸರಿ ಕಾಣದೇ ಸಿಟ್ಟುಗೊಂಡು ಅವಳು ಅವನನ್ನು ಮನೆಯಿಂದ ಓಡಿಸುತ್ತಾಳೆ. ಆದರೆ ಸ್ವಲ್ಪ ಸಮಯದ ಅಂತರದಲ್ಲೇ ಅವರಿಬ್ಬರ ಮಧ್ಯೆ ಹೊಸದೊಂದು ಪ್ರೇಮ ಸಂಬಂಧ ಬೆಳೆದು ಆ ವೃದ್ಯಾಪ್ಯದಲ್ಲೂ ಅವರಿಬ್ಬರು ಜೊತೆಯಾಗುತ್ತಾರೆ.

ವಿಡಂಬನೆಯ ಭಾಷೆ, ಮಜಭರಿತ ಆದರೆ ದಾರ್ಶನಿಕ ಅಂದಾಜು, ಕಚಗುಳಿಯಿಡುವ ದೃಶ್ಯಗಳಿಂದ ಕಾದಂಬರಿ ಅವಿಸ್ಮರಣೀಯಗೊಳ್ಳುತ್ತದೆ. ಜೊತೆಯಲ್ಲಿಯೇ ಪ್ರಶ್ನೆಗಳ ಮೂಟೆಯೊಂದನ್ನು ನಮ್ಮ ಮುಂದೆ ತೆರೆದಿಡುತ್ತದೆ. ನಿಜವಾಗಿಯೂ ಫ್ಲೋರಂತಿನೊ ಆರಿಸಾನಲ್ಲಿ ಶಾಶ್ವತವಾದ ನಿಷ್ಠೆ ಮತ್ತು ಅನಂತ ಪ್ರೀತಿ ಇದೆಯೇ? ಎನ್ನುವ ಪ್ರಶ್ನೆ ಎಲ್ಲಕ್ಕಿಂತ ಮುಂದೆ ಬಂದು ನಿಲ್ಲುತ್ತದೆ.

ಓದುಗರಲ್ಲಿ ಅವರ ಯೋಚನೆ, ಕಾಳಜಿ ಮತ್ತು ತಮ್ಮ ಸಂಸ್ಕೃತಿಯ ಹಿನ್ನಲೆಯಲ್ಲಿ ಈ ಪ್ರಶ್ನೆಯ ಉತ್ತರ ಬೇರೆಯೇ ಆಗಿರಬಹುದು. ಕಾದಂಬರಿಯನ್ನು ಓದಿ ಮುಗಿಸಿದ ತಕ್ಷಣ ಅನೇಕರು ಫ್ಲೋರಂತಿನೊ ಆರಿಸಾನ ಪಕ್ಷಕ್ಕೆ ವಾಲಬಹುದು ಇದು ಮಾರ್ಕ್ವೇಜ್ ಪೆನ್ನಿನ ತಾಕತ್ತು.

(ಆಲ್ಬರ್ಟ್ ಕಮೂ)

ಬಹಳ ಸೂಕ್ಷ್ಮವಾಗಿ ಮಾರ್ಕ್ವೇಜ್ ನಮ್ಮ ಮುಂದೆ ಪ್ರೀತಿಯ ಕುರಿತು ಅನೇಕ ಪ್ರಶ್ನೆಗಳನ್ನು ಇಡುತ್ತಾರೆ. ಪ್ರೀತಿಗೆ ಎರಡು ಮುಖಗಳಿವೆಯೇ? ದೈಹಿಕ ಪ್ರೀತಿ ಮತ್ತು ಆತ್ಮ ಪ್ರೀತಿ ಎರಡು ಬೇರೆ ಬೇರೆಯೇ? ದೈಹಿಕವಾಗಿ ೬೨೨ ಸ್ತ್ರೀಯರ ಜೊತೆ ಇದ್ದೂ ಅವನ ಆತ್ಮ ಅವಳೊಬ್ಬಳ ಜೊತೆ ಮಾತ್ರ ಸೇರಿಕೊಂಡಿದೆಯೆಂದರೆ ಅವರೆಲ್ಲರ ಮಧ್ಯೆಯೂ ಅವಳೊಬ್ಬಳನ್ನೇ ನೋಡಬಹುದು, ಅವಳಿಗಾಗಿಯೇ ಕಾಯುತ್ತಿರಬಹುದು. ಹಾಗಾದರೆ ಆ ೬೨೨ ರಲ್ಲಿ ಯಾರಾದರೂ ಫ್ಲೋರಂತಿನೊನನ್ನು ಪ್ರೀತಿಸಿದ್ದರೆ? ಅವರೆಲ್ಲರಲ್ಲಿ ಯಾರದೊಬ್ಬರದ್ದಾದರು ಫ್ಲೋರಂತಿನೊನ ಜವಾಬ್ದಾರಿ ಆಗಿತ್ತೆ?

ಯಾರಿಗೆ ಗೊತ್ತು.
ಒಂದಂತೂ ಸ್ಪಷ್ಟವಿದೆ. ಪ್ಲೊರಂತಿನೊನಿಗೆ ಅವನು ನಿಜವಾಗಿಯೂ ಯಾರನ್ನು ಪ್ರೀತಿಸುತ್ತಾನೆ? ಎನ್ನುವ ಚಿಂತೆಯಂತೂ ಇತ್ತು.

ಪ್ರೀತಿ ತನ್ನ ಮೂಲ ಸ್ವರೂಪದಲ್ಲಿ ಸ್ವಾರ್ಥತೆಯ ಅನುಭೂತಿಯಾಗಿದೆ. ಇದೇ ಮನುಷ್ಯನ ಇಡೀ ಅಸ್ತಿತ್ವವನ್ನು ಉದಾತ್ತಗೊಳಿಸುತ್ತದೆ. ಪ್ರೀತಿ ಸರ್ವಕಲ್ಯಾಣಕಾರಿಯಂತೂ ಆಗುವುದಿಲ್ಲ. ನಾವು ಪ್ರೀತಿಯಲ್ಲಿ ಮುಳುಗಿದಾಗ ಕಾಲರಾದಂತಹ ಮಾಹಾಮಾರಿಯ ಮಧ್ಯೆಯೂ ನಾವು ಎಲ್ಲರ ಚಿಂತೆಗಿಂತ ನಮ್ಮ ಪ್ರೇಮಿಯ ಚಿಂತೆ ಮೊದಲು ಮಾಡುತ್ತೇವೆ. ಒಂದು ಹೃದಯದೊಳಗೆ ಬಹಳಷ್ಟು ಕೋಣೆಗಳಿರಬಹುದು ಆದರೆ ಇಡೀ ಹೃದಯದ ಭಾಗ ಮಾತ್ರ ಒಬ್ಬರಲ್ಲೇ ಇರುತ್ತದೆ.

ನಿಜವಾಗಿಯೂ ಹೀಗೆ ಆಗಬಹುದಾ? ಫ್ಲೋರಂತಿನೊ (ಅಥವ ಯಾವುದೇ ಮನುಷ್ಯ) ದೈಹಿಕ ಸುಖಕ್ಕಾಗಿ ಬೇರೆ ಸ್ತ್ರೀಯರ ಹತ್ತಿರ ಹೋಗುತ್ತಾನೆಯೇ? ಅಥವಾ ಅವರ ಹತ್ತಿರ ನಿಷ್ಠೆಯಿಂದ ಕೂಡಿದ ಕಾಯುವಿಕೆಯಿಲ್ಲವೇ? ದೈಹಿಕ ಸುಖದ ಮುಂದೆ ಮನುಷ್ಯ ಇಷ್ಟು ದುರ್ಬಲನೆ? ದೇಹ ಮತ್ತು ಆತ್ಮದ ಕದನದಲ್ಲಿ ಹೆಚ್ಚಾಗಿ ದೇಹವೇ ಗೆಲ್ಲುತ್ತದೆಯೇ? ಇದೆಲ್ಲದರಿಂದ ನಮಗೆ ಒಂದಂತೂ ಸ್ಪಷ್ಟವಾಗಿ ಕಾಣುತ್ತದೆ. ಪ್ರೀತಿಸುವುದು ಅಷ್ಟು ಸುಲಭದ ಕೆಲಸವಲ್ಲ. ನೈತಿಕ ಮತ್ತು ಅನೈತಿಕ ಪ್ರೀತಿ ಅಂತೂ ನಮ್ಮ ಯೋಚನೆಯ ಎರಡು ಅಂಶಗಳು.

ಮಹಾಮಾರಿಯನ್ನೇ ಆಧಾರವಾಗಿಸಿಕೊಂಡು ಇಪ್ಪತ್ತನೆಯ ಶತಮಾನದಲ್ಲಿ ಅನೇಕ ಮಹಾನ್ ಕಾದಂಬರಿಗಳು ರಚನೆಗೊಂಡವು. ಅವುಗಳಲ್ಲಿ ಕಮೂನ ಪ್ಲೇಗ್ ಮತ್ತು ಮಾರ್ಕ್ವೇಜ್ ನ ಲವ್ ಇನ್ ದ ಟೈಮ್ ಆಫ್ ಕಾಲರಾ ವಿಶಿಷ್ಟವಾಗಿವೆ. ಕಮೂನ ಪ್ಲೇಗ್ ಜನರ ಜೀವನದ ದುಃಖದ ಸರಮಾಲೆಯ ಪ್ರತೀಕವಾಗಿದೆ. ಇಲಿಯಿಂದ ಹರಡಿದ ಪ್ಲೇಗ್ ಯಾರನ್ನು ಸಾಯಿಸುತ್ತದೆಯೋ ಇಲ್ಲವೋ. ಸ್ವತಃ ಮನುಷ್ಯನೊಳಗಿರುವ ದುಃಖವಂತೂ ಪ್ಲೇಗ್ ರೋಗವಾಗಿ ಅವನನ್ನು ಸಾಯಿಸುತ್ತದೆ. ಇದರ ವಿರುದ್ಧವಾಗಿ ಮಾರ್ಕ್ವೇಜ್ ನ ಕಾದಂಬರಿಯಲ್ಲಿ ಕಾಲರಾ ಪ್ರೇಮರೋಗದ ಸಂಕೇತವಾಗಿದೆ. ನಗರದಲ್ಲಿ ಕಾಲರಾ ಹರಡಿದೆ, ಆದರೆ ಫ್ಲೋರಂತಿನೊನ ಮನಸ್ಸಿನೊಳಗೆ ಬೇರೊಂದು ರೋಗ ಬೇರೂರಿ ಕುಳಿತಿದೆ.

(ಗೀತ್ ಚತುರ್ವೇದಿ)

ನಿಜವಾಗಿಯೂ ಪ್ರೀತಿ, ಪ್ರೇಮ ಒಂದು ರೋಗವೇ? ಇದಕ್ಕಾಗಿಯೇ ಐವತ್ತೊಂದು ವರ್ಷ ಒಂಭತ್ತು ತಿಂಗಳು ನಾಲ್ಕು ದಿನ ಫ್ಲೋರಂತಿನೊ ಒಬ್ಬ ರೋಗಿಯ ಹಾಗೆ ಕಳೆದನೇ? ಇಲ್ಲ, ಪ್ರೀತಿ ಒಂದು ಔಷಧವೆ? ಆ ಎಲ್ಲ ಸ್ತ್ರೀಯರ ಜೊತೆಗಿನ ಸಂಗದಲ್ಲಿ ಫ್ಲೋರಂತಿನೊನ ಜೀವ ಉಳಿದಿದೆ. ಬಾರ್ತನ ಮಾತನ್ನು ನೆನಪಿಸಿಕೊಂಡರೆ ಫ್ಲೋರಂತಿನೊ ನಿಜವಾದ ಪ್ರೇಮಿ ಯಾಕೆಂದರೆ ಆತ ಅವಳಿಗಾಗಿ ಅಷ್ಟು ವರ್ಷ ಕಾದ.

ಈ ಕಾದಂಬರಿ ಮೂಲ ಸ್ಪಾನಿಷ್ ಭಾಷೆಯಲ್ಲಿದೆ. ಆ ಭಾಷೆಯಲ್ಲಿ ಕಾಲರಾ ಶಬ್ಧಕ್ಕೆ ಎರಡು ಅರ್ಥಗಳಿವೆ. ಒಂದು ಮಹಾಮಾರಿ, ಇನ್ನೊಂದು ಉನ್ಮಾದ. ಕಾದಂಬರಿಯ ಒಂದು ದೃಶ್ಯದಲ್ಲಿ ಫ್ಲೋರಂತಿನೊ ಫರಮಿನಾಳ ಸುಗಂಧವನ್ನು ತನ್ನೊಳಗೆ ಫರಮಿನಾಳ ಸುಗಂಧವನ್ನು ತನ್ನೊಳಗೆ ಇರಿಸಿಕೊಳ್ಳಲು ಒಂದು ಸುವಾಸನೆಭರಿತ ಹೂವೊಂದನ್ನು ತಿನ್ನುತ್ತಾನೆ. ಮತ್ತೆ ವಾಂತಿ ಮಾಡುತ್ತಾನೆ. ಮಾರ್ಕ್ವೆಜ್ ಇಲ್ಲಿ ಕಾಲರಾ ಶಬ್ಧದ ಎರಡೂ ಅರ್ಥಗಳನ್ನು ಸಂಕೇತೀಕರಿಸುತ್ತಾರೆ.

ಇದು ಪ್ರೀತಿಯ ಮೇಲೆ ಬರೆದ ಮಹಾನ್ ಕಾದಂಬರಿಯಾಗಿದೆ. ಪ್ರೀತಿ ಮಳೆ ಹನಿಯಂತೆ. ನೀವು ಉಳಿದುಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ಒಂದಿಲ್ಲ ಒಂದು ಸಾರಿ ನೀವು ತೋಯಿಸಿಕೊಳ್ಳುತ್ತಿರಿ. ಪ್ರೀತಿಯೊಂದು ಒಗಟಿನ ಹಾಗೆ ನೀವು ಎಷ್ಟೇ ಬಿಡಿಸುತ್ತಾ ಹೋಗಿ ಒಂದಿಲ್ಲ ಒಂದು ಸಿಕ್ಕು ಉಳಿದೇ ಉಳಿಯುತ್ತದೆ. ನಾವು ಪ್ರೀತಿಯ ಬಗ್ಗೆ ಏನೆಲ್ಲ ಯೋಚಿಸುತ್ತೇವೆಯೋ ಅದನ್ನೆಲ್ಲ ಮಾರ್ಕ್ವೆಜ್ ನ ಈ ಕಾದಂಬರಿ ಬದಲಾಯಿಸಿಬಿಡುತ್ತದೆ. ಕೊನೆಗೆ ನಮಗೇ ಗೊತ್ತಾಗುತ್ತದೆ. ಯಾವ ಮಾತುಗಳನ್ನು ನಾವು ಉತ್ತರವೆಂದುಕೊಂಡಿದ್ದೇವೊ ಅವೇ ನಿಜವಾದ ಪ್ರಶ್ನೆಗಳಾಗಿರುತ್ತವೆ.