ಮಕ್ಕಳನ್ನು ಪ್ರಬುದ್ಧರನ್ನಾಗಿ ಮಾಡುವ ನಮ್ಮ ಆತುರದಲ್ಲಿ ಅವರ ಬಾಲ್ಯದ ಸಂತೋಷಕ್ಕೆ ನಾವು ಅಡ್ಡ ಬರಬಾರದಷ್ಟೇ. ಈ ಎಚ್ಚರ ನನಗೆ ಯಾವಾಗಲೂ ಇತ್ತು. ನನಗೆ ಎಚ್ಚರವಿಲ್ಲದಿದ್ದರೂ ಏನೂ ತೊಂದರೆ ಆಗುತ್ತಿರಲಿಲ್ಲ. ಏಕೆಂದರೆ, ಅವನು ಪುಸ್ತಕಗಳಿಗಿಂತ ಹೆಚ್ಚಾಗಿ ತನ್ನ ವಯಸ್ಸಿನ ಮಕ್ಕಳ ಜೊತೆ ಬೆರೆಯುವುದನ್ನೇ, ಅವರೊಡನೆ ಆಟವಾಡುವುದನ್ನೇ ತುಂಬಾ ಇಷ್ಟಪಡುತ್ತಿದ್ದ. ದಣಿಯುವ ತನಕ ಅಡುತ್ತಿದ್ದ. ಒಂದು ಹಂತದ ನಂತರ ಮಕ್ಕಳು ನಮ್ಮ ಮಾತು ಕೇಳುವುದಿಲ್ಲ, ಕೇಳಬಾರದು. ಧ್ರುವನ ತಂದೆ ನನಗೆ ನೆರವಾಗಲೆಂದು ಸಾರ್ವಜನಿಕ ಗ್ರಂಥಾಲಯದ ಸದಸ್ಯರಾದರು. ಪೋಷಕರು ಸದಸ್ಯರಾದರೆ ಮಕ್ಕಳಿಗೆ ಸದಸ್ಯತ್ವಕ್ಕೆ ಚಂದಾ ಕೊಡಬೇಕಾಗಿಲ್ಲ.
ಕೆ. ಸತ್ಯನಾರಾಯಣ ಬರೆಯುವ ಪ್ರವಾಸ ಪ್ರಬಂಧಗಳ “ನೆದರ್‌ಲ್ಯಾಂಡ್ಸ್ ಬಾಣಂತನ” ಸರಣಿಯ ಹತ್ತನೆಯ ಬರಹ

ಪುಟ್ಟ ಮಕ್ಕಳು ನೀಡುವ ನಲಿವು ಸಂತೋಷಗಳನ್ನು ಕುರಿತೇ ನಾವು ಯಾವಾಗಲೂ ಹೇಳುತ್ತೇವೆ. ಮಕ್ಕಳ ಸಹಜತೆ, ಮುಗ್ಧತೆಯ ಬಗ್ಗೆಯೇ ಮಾತನಾಡುತ್ತೇವೆ. ಇದೆಲ್ಲ ನಿಜವೇ. ನಿಮ್ಮ ಮನೆಯಲ್ಲೂ, ನಮ್ಮ ಮನೆಯಲ್ಲೂ. ಆದರೆ ಮಕ್ಕಳಿಂದಲೂ ನಾವು ಕಲಿಯುತ್ತೇವೆ. ಆದರೆ ಈ ಕಲಿಯುವಿಕೆ, ಮಕ್ಕಳ ಕಲಿಸುವಿಕೆಯ ರೀತಿಯಲ್ಲೇ ಇರುತ್ತದೆ. ಸ್ನೇಹಿತರಿಂದ, ಹಿರಿಯರಿಂದ ಕಲಿಯುವುದಕ್ಕಿಂತ ಭಿನ್ನವಾಗಿರುತ್ತದೆ. ಹಾಗಾಗಿ ಇದರ ಬಗ್ಗೆ ನಮಗೆ ಹೇಳಿಕೊಳ್ಳಲೂ ಕೂಡ ಗೊತ್ತಾಗುವುದಿಲ್ಲ. ಹೇಳಿಕೊಳ್ಳಲು ನಮ್ಮ ಸ್ವಪ್ರಜ್ಞೆ, ಅಹಂಕಾರ ಕೂಡ ಅಡ್ಡಿ ಬರಬಹುದು.

ನನ್ನ ಮೊಮ್ಮಗ ಧ್ರುವ, ಮೊದಲ ನಾಲ್ಕು ವರ್ಷ ನಮ್ಮ ಜೊತೆಯಲ್ಲೇ ಬೆಂಗಳೂರಿನಲ್ಲೇ ಇದ್ದ. ಲೆಕ್ಕಾಚಾರಕ್ಕೆ ಮಗಳು ಬೇರೆ ಮನೆ ಮಾಡಿದ್ದರೂ, ಮೊಮ್ಮಗ ಭಾವನಾತ್ಮಕವಾಗಿ ಹೆಚ್ಚು ಸಮಯವನ್ನು ನಮ್ಮ ಮನೆಯಲ್ಲೇ ಕಳೆಯುತ್ತಿದ್ದ. ಇಲ್ಲ ನಾವೇ ಮಗಳ ಮನೆಯಲ್ಲಿರುವಂತಹ ಸನ್ನಿವೇಶಗಳನ್ನು ಸೃಷ್ಟಿಸುತ್ತಿದ್ದ. ಹೀಗೆ ಸೃಷ್ಟಿಸುವುದರಲ್ಲಿ ಮುಗ್ಧತೆಯೇನೂ ಇರುತ್ತಿರಲಿಲ್ಲ, ಸಾಕಷ್ಟು ಕಿಲಾಡಿತನವೂ ಇರುತ್ತಿತ್ತು. ಈ ಕಿಲಾಡಿತನ, ನಮಗೂ ಇಷ್ಟವಾಗುತ್ತಿತ್ತು.

ಮಕ್ಕಳು ಸಮಯವನ್ನು ಕಳೆಯುವ ರೀತಿಯಲ್ಲೇ ಒಂದು ರೀತಿಯ ಅರಾಜಕತೆ, ನಿರುದ್ದಿಶ್ಯ ಇರುತ್ತದೆ. ಸಮಯವನ್ನು ಪೋಲು ಮಾಡಬಾರದು, ಸದ್ವಿನಿಯೋಗ ಪಡಿಸಿಕೊಳ್ಳಬೇಕು ಎಂಬ “ಪ್ರಬುದ್ಧ” ನಿಲುವಿಗೆ ವಿರುದ್ಧವಾದದ್ದು. ಮಕ್ಕಳ ಈ ರೀತಿ, ವ್ಯವಸ್ಥಿತವಾಗಿ ಸಮಯ ಕಳೆಯಬೇಕೆಂಬ, ಪ್ರತಿ ಕ್ಷಣವೂ ಉಪಯೋಗಕ್ಕೆ ಬರಬೇಕು ಎಂಬ ಧೋರಣೆಯೇ ತಪ್ಪು. ಹಾಗೆ ಪ್ರತಿ ಕ್ಷಣವೂ ನಾವು ತೊಡಗಿಕೊಳ್ಳಬೇಕಾದಂತದ್ದು ಈ ಜಗತ್ತಿನಲ್ಲಿ, ಈ ಬದುಕಿನಲ್ಲಿ ಏನೂ ಇರುವುದಿಲ್ಲ. ದಿನದ, ಬದುಕಿನ ಚಲನೆಯ ನಿಯಮವೂ ಕೂಡ ಹಾಗೇನಿಲ್ಲ. ಹಾಗೆ ಇದೆಯೆಂದು ನಾವು ಭ್ರಮಿಸಿರುತ್ತೇವೆ. ನಮ್ಮ ಧೋರಣೆ ಬಾಲಿಶವಾದದ್ದು ಎಂಬುದು ಗೊತ್ತಾಗುವುದು ಮಕ್ಕಳಿಂದಲೇ.

ಯಾತಕ್ಕೂ ಅಂಟಿಕೊಳ್ಳದೆ, ಸಮಯ, ಘಟನೆ ಎದುರಾದ ರೀತಿಯಲ್ಲೇ ಸ್ವೀಕರಿಸುವುದು, ಹಾಗಾಗಿ ತಮ್ಮ ಸ್ಪಂದನವನ್ನು ಮುಕ್ತವಾಗಿ ಇಟ್ಟುಕೊಂಡಿರುವುದು ಕೂಡ ಮಕ್ಕಳ ಸ್ವಭಾವ. ಮಕ್ಕಳೊಡನೆ ಒಡನಾಡುವಾಗ ಸಿದ್ಧ ರೂಢಿಗತ ಪ್ರತಿಕ್ರಿಯೆ, ಸ್ಪಂದನದ ಮಾದರಿಯಿಂದ ಹೊರ ಬರಬೇಕು, ಹೊರ ಬರುತ್ತೇವೆ. ಸಹಜ ಸ್ಪಂದನದ ಸ್ವಭಾವವನ್ನೇ ನಾವು ಕಳೆದುಕೊಂಡುಬಿಟ್ಟಿದ್ದೇವಲ್ಲ ಎಂಬುದು ನಮ್ಮ ಅರಿವಿಗೆ ಬರುವುದು ಮಕ್ಕಳಿಂದಲೇ!

ಈಗಾಗಲೇ ನಮ್ಮ ಮನೆಯಲ್ಲಿರುವ ಪದಾರ್ಥ ಪ್ರಪಂಚ, ಸ್ಥಳ ಕೂಡ ಎಷ್ಟಿರಬಹುದು, ಯಾವ ಸ್ವರೂಪದ್ದಿರಬಹುದು ಎಂಬುದು ಕೂಡ ನಮ್ಮ ಅರಿವಿಗೆ ಬರುವುದು ಮಕ್ಕಳಿಂದಲೇ. ನಮ್ಮ ನೆರೆಹೊರೆಯಲ್ಲಿ ಯಾರ‍್ಯಾರಿದ್ದಾರೆ, ಎಷ್ಟು ಜನರಿದ್ದಾರೆ ಎಂಬ ಲೆಕ್ಕ ನಮಗೆ ಸಿಗುವುದು ಕೂಡ ಮಕ್ಕಳಿಂದಲೇ.

ನಾವು ಓದುವ, ಗ್ರಹಿಸುವ ರೀತಿಯನ್ನು ಕೂಡ ಮಕ್ಕಳು ಬದಲಾಯಿಸುತ್ತಾರೆ. ಒಂದು ಕತೆಯನ್ನೋ, ಬರಹವನ್ನೋ ನಮಗಾಗಿ ಓದಿಕೊಳ್ಳುವ ರೀತಿಗೂ, ಮಕ್ಕಳಿಗೆ ಅದನ್ನು ತಿಳಿಸಿ ಹೇಳುವ ಅಗತ್ಯಕ್ಕಾಗಿ ಓದುವ ರೀತಿಗೂ ತುಂಬಾ ವ್ಯತ್ಯಾಸವಿರುತ್ತದೆ. ನಮ್ಮ ಓದು, ಗ್ರಹಿಕೆ ಎರಡೂ ಖಚಿತವಾಗಿರಬೇಕು, ಸ್ಪಷ್ಟವಾಗಿರಬೇಕು. ಹೇಳುವ, ತಿಳಿಸುವ ರೀತಿ ಕೂಡ ಭಿನ್ನವಾಗಿರಬೇಕು. ಒಂದೇ ಮನೆಯಲ್ಲಿ ಮೂರು ಮಕ್ಕಳಿದ್ದರೆ, ಪ್ರತಿಯೊಂದು ಮಗುವಿನ ಜೊತೆ ಮಾತನಾಡುವ ರೀತಿ, ಕತೆ ಹೇಳುವ ರೀತಿ ಭಿನ್ನವಾಗಿರುತ್ತದೆ, ಭಿನ್ನವಾಗಿರಲೇಬೇಕು.

ಇದೆಲ್ಲ ನನ್ನ ಅರಿವಿಗೆ ಬಂದದ್ದು ನನ್ನ ಮೊಮ್ಮಗ ತಂದೆ ತಾಯಿಯ ಜೊತೆ ಇರಲು ನೆದರ್‌ಲ್ಯಾಂಡ್ಸ್‌ಗೆ ಹೊರಟುಹೋದಾಗ. ನಮಗೆ ಗೊತ್ತಿಲ್ಲದಂತೆಯೇ ಅವನು ನಮ್ಮನ್ನು ಬದಲಾಯಿಸಿದ್ದ.

*****

ನೆದರ್‌ಲ್ಯಾಂಡ್ಸ್‌ಗೆ ನಾವು ಮೊದಲ ಸಲ ಹೋಗುವ ಹೊತ್ತಿಗೆ ಅವನು ಅಲ್ಲಿಯ ಶಿಕ್ಷಣ ವ್ಯವಸ್ಥೆ, ಕಲಿಕೆಯ ರೀತಿಗೆ ಸಾಕಷ್ಟು ಒಗ್ಗಿಕೊಂಡುಬಿಟ್ಟಿದ್ದ. ಮಕ್ಕಳು ತಾಯಿ ತಂದೆಗಳಿಂದ, ಕುಟುಂಬದ ಹಿರಿಯರಿಂದ ಯಾವ ರೀತಿಯ ವರ್ತನೆ, ಪ್ರೀತಿಯನ್ನು ನಿರೀಕ್ಷಿಸಬೇಕು ಎಂಬ ಸೂಕ್ಷ್ಮವನ್ನು ಕೂಡ ಅಲ್ಲಿ ಸೂಚ್ಯವಾಗಿ, ಆದರೆ ನಿರಂತರವಾಗಿ ಹೇಳಿಕೊಡುತ್ತಲೇ ಇರುತ್ತಾರೆ. ಮಕ್ಕಳಿಗೂ ಕೂಡ ಕೆಲವು ಹಕ್ಕುಗಳಿರುತ್ತವೆ. ಈ ಹಕ್ಕುಗಳ ಪಾಲನೆ ಪ್ರತಿ ಕುಟುಂಬದಲ್ಲಿ, ಶಾಲೆಯಲ್ಲಿ, ಮೈದಾನದಲ್ಲಿ, ರೈಲ್ವೆ ನಿಲ್ದಾಣದಲ್ಲಿ ಆಗುತ್ತಿದೆಯೇ ಎಂಬುದನ್ನು ಕೂಡ ಸಮಾಜ, ಸರ್ಕಾರ ಗಮನಿಸುತ್ತಿರುತ್ತದೆ. ಸ್ವಲ್ಪವೇ ವ್ಯತ್ಯಯ ಬಂದರೂ ಮಕ್ಕಳನ್ನು ಸರ್ಕಾರ ತನ್ನ ರಕ್ಷಣೆಗೆ ತೆಗೆದುಕೊಂಡುಬಿಡುತ್ತದೆ. ನನ್ನ ಮೊಮ್ಮಗ ತಂದೆ-ತಾಯಿಗಳ ಜೊತೆ, ನಮ್ಮ ಜೊತೆ ಮಾತನಾಡುವ ರೀತಿಯಲ್ಲೇ ತುಂಬಾ ಬದಲಾವಣೆ ಕೆಲವೇ ತಿಂಗಳುಗಳಲ್ಲಿ ಕಂಡಿತು. ಇದರಿಂದ ನಮಗೆ ಸಂತೋಷ, ಆಶ್ಚರ್ಯ ಉಂಟಾದರೂ, ಬದಲಾವಣೆಯನ್ನು ಒಪ್ಪಿಕೊಳ್ಳಲು ನಮ್ಮ ಮನಸ್ಸಿಗೆ ಕಷ್ಟವಾಗುತ್ತಿತ್ತು.

ಬರೆಯುವುದು, ದುಂಡಗೆ ಬರೆಯುವುದು, ಅಕ್ಷರ ತಿದ್ದುವುದು, ಈ ಚಟುವಟಿಕೆಗಳ ಬಗ್ಗೆ ಭಾರತದಲ್ಲಿ ವಿಪರೀತವೆನ್ನುವಷ್ಟು ಗಮನ. ಈ ಕುರಿತು ನಾವು ಮಕ್ಕಳಿಗೆ ಒತ್ತಾಯ ಮಾಡುತ್ತೇವೆ. ಕೆಲ ಸಂದರ್ಭಗಳಲ್ಲಿ ನಮ್ಮ ಮಕ್ಕಳನ್ನು ನಾವೇ ಹಿಂಸಿಸುತ್ತೇವೆ. ವಿಷಯ ಗ್ರಹಣ ಮುಖ್ಯ. ನಂತರ ಬರವಣಿಗೆ, ಅಭಿವ್ಯಕ್ತಿ ತಾನೇ ತಾನಾಗಿ ಮೂಡಿ ಬರುತ್ತದೆ. ಭಾರತದ ಎರಡು ಉತ್ತಮರ ಶಾಲೆಗಳಲ್ಲಿ ಓದಿದ್ದ ನನ್ನ ಮೊಮ್ಮಗನಿಗೆ ಬರವಣಿಗೆಯ ಬಗ್ಗೆ ಅಷ್ಟಾಗಿ ಒಲವಿರಲಿಲ್ಲ. ನಮ್ಮ ಮತ್ತು ಶಾಲೆಯ ಬಲವಂತಕ್ಕೆ ಕಟ್ಟುಬಿದ್ದು ಬರವಣಿಗೆಯ ಶಿಸ್ತಿಗೆ ಒಗ್ಗಿಕೊಳ್ಳುತ್ತಿದ್ದ. ನೆದರ್‌ಲ್ಯಾಂಡ್ಸ್‌ಗೆ ಹೋದ ಮೇಲೆ ಈ ಶಿಕ್ಷೆ ಅವನಿಗೆ ತಪ್ಪಿಹೋಯಿತು. ಗಮನ ವಿಷಯ ಗ್ರಹಣದ ಕಡೆಗೆ ಹೋಯಿತು. ನಂತರ ಬರವಣಿಗೆಯ ಬಗ್ಗೆ ಒಲವು, ಗಮನ. ಬರೆಯುವ ರೀತಿ, ವಾಕ್ಯ ರಚನೆ, ಎಲ್ಲವೂ ಸುಧಾರಿಸಿತು. ನಾವು ಮಕ್ಕಳ ಬಗ್ಗೆ ಯಾವಾಗಲೂ ತೆರೆದ ಮನಸ್ಸಿನವರಾಗಿರಬೇಕು ಎಂಬುದನ್ನು ಕೂಡ ನಮ್ಮ ಮಕ್ಕಳು ಕಲಿಸುತ್ತಾರೆ, ನಾವು ಕಲಿಯಲು ಸಿದ್ಧರಿದ್ದರೆ.

ಮೊಮ್ಮಗ ಇಲ್ಲಿ ಸಂಪೂರ್ಣ ಕನ್ನಡ ವಾತಾವರಣದಲ್ಲಿ ಬೆಳೆದವನು. ಡಚ್ ಮತ್ತು ಇಂಗ್ಲಿಷ್ ಭಾಷೆಗೆ, ವಾತಾವರಣಕ್ಕೆ ಹೊಂದಿಕೊಳ್ಳುತ್ತಾನೆಯೇ ಎಂಬ ಆತಂಕ ನಮಗೆ. ವಯಸ್ಸಾದ ನಾವು ಸ್ಪಂದಿಸುವುದು ನಮ್ಮ ಆತಂಕಕ್ಕೆ, ಅಭದ್ರತೆಗೆ. ಮಕ್ಕಳು ಸ್ಪಂದಿಸುವುದು ವಾತಾವರಣಕ್ಕೆ, ಸನ್ನಿವೇಶಗಳಿಗೆ. ನನ್ನ ಮೊಮ್ಮಗ ಮಾತ್ರವಲ್ಲ, ಓದಲು ಶಾಲೆಗೆ ಬಂದಿದ್ದ ಬೇರೆ ಬೇರೆ ಮಕ್ಕಳು ಕೂಡ ಹೊಸ ವಾತಾವರಣ, ಹೊಸ ಭಾಷೆಗಳಿಗೆ ಸಹಜವಾಗಿಯೇ ಸ್ಪಂದಿಸುತ್ತಿದ್ದರು. ಈ ಸ್ಪಂದನದಿಂದಲೇ ಅವರ ಜೀವಂತಿಕೆ ಕೂಡ ಮೂಡಿ ಬರುತ್ತಿತ್ತು. ಬೆಳೆಯುತ್ತಾ ಬೆಳೆಯುತ್ತಾ ನಾವೇಕೆ ಗೊಡ್ಡುಗಳಾಗುತ್ತೇವೆ, ಜೀವಂತಿಕೆ ಕಳೆದುಕೊಳ್ಳುತ್ತೇವೆ ಎಂಬುದನ್ನು ಕೂಡ ನಮ್ಮ ಮಕ್ಕಳೇ ಕಲಿಸುತ್ತಾರೆ.

ಓದುವುದನ್ನು ಮಕ್ಕಳು ಹೇಗೆ ಕಲಿಯುತ್ತಾರೆ. ಯಾವ ಸಂಗತಿಗಳು ಅವರ ಮೇಲೆ ಪ್ರಭಾವ ಬೀರುತ್ತವೆ ಎಂಬುದು ಮಗುವಿನಿಂದ ಮಗುವಿಗೆ ಭಿನ್ನಾಗಿರುತ್ತವೆ. ಈ ಕಾರಣಕ್ಕೇ ಪ್ರತಿಯೊಂದು ಮಗುವೂ ವಿಶಿಷ್ಟ. ಈ ವಿಶಿಷ್ಟತೆಯನ್ನು ನಾವು ನಮ್ಮ ಮನೆಯ ಮಕ್ಕಳ ವಿಷಯದಲ್ಲೂ ಕೂಡ ಪರಿಗಣಿಸುವುದಿಲ್ಲ. ಎಲ್ಲ ಮಕ್ಕಳಂತೆಯೇ ನಮ್ಮ ಮಕ್ಕಳೂ ಇರಬೇಕು ಎಂದೇ ಆಸೆ ಪಡುತ್ತೇವೆ. ಶಾಲೆಯ ಗ್ರಂಥಾಲಯದಿಂದ ತಂದ ಪುಸ್ತಕಗಳ ನೆರವಿನಿಂದ, ಅಲ್ಲಿ ಭಾಷೆಯನ್ನು ಕಲಿಸುವ ರೀತಿಯಿಂದ ಮೊಮ್ಮಗ ನಮಗೆ ಗೊತ್ತಿಲ್ಲದ ಹಾಗೆ ನಮ್ಮೆದುರಿಗೆ ಓದುವ ರೀತಿಯನ್ನು ರೂಢಿಸಿಕೊಂಡಿದ್ದ. ಟಿಪಿಕಲ್ ಬಾಲಸಾಹಿತ್ಯ, ಜಾನಪದ ಕತೆಗಳನ್ನು ಓದುವುದರ ಜೊತೆಗೆ ಸುಧಾ ಮೂರ್ತಿಯವರ ಎಲ್ಲ ಪುಸ್ತಕಗಳನ್ನು ಕೂಡ ಓದುತ್ತಿದ್ದ. ಕಿಪ್ಲಿಂಗ್, ಮಾರ್ಕ್ ಟ್ವೈನ್, ಇವರೆಲ್ಲ ಬರಹಗಳಲ್ಲಿ ಮಕ್ಕಳಿಗೆ ಸಹಜವಾಗಿ ಒದಗಿ ಬರುವಂತೆ ವಾತಾವರಣವಿರುತ್ತದೆ. ಸುಧಾ ಮೂರ್ತಿಯವರ ಬಗ್ಗೆ ನನಗಿರುವ ಪೂರ್ವಗ್ರಹದಿಂದಾಗಿ ಮಕ್ಕಳು ಅವರ ಬರವಣಿಗೆ ಕಡೆಗೆ ಹೇಗೆ, ಏಕೆ ಆಕರ್ಷಿತರಾಗುತ್ತಾರೆ ಎಂಬುದನ್ನು ಗಮನಿಸಲು ಹೋಗೇ ಇರಲಿಲ್ಲ. ಸರಳ ಭಾಷೆ, ನೇರ ನಿರೂಪಣೆ, ಎಲ್ಲರಿಗೂ ಪರಿಚಿತವಿರುವ ಸನ್ನಿವೇಶ, ಘಟನೆಗಳ ಮೂಲಕ ಅವರು ನಿರೂಪಿಸುತ್ತಾರೆ. ಮಕ್ಕಳಿಗೆ ಪ್ರಿಯವಾಗಬಲ್ಲ ಒಳ್ಳೆಯತನ, ಮುಗ್ಧತೆ ಕೂಡ ಅವರ ಬರವಣಿಗೆಯಲ್ಲಿರುತ್ತದೆ. ಸ್ಥಳ ನಿರ್ದಿಷ್ಟತೆಯಿಲ್ಲದೆ ಇರುವುದರಿಂದ ಯಾವುದೇ ದೇಶದ, ಯಾವುದೇ ಭಾಷೆಯ ಮಕ್ಕಳು, ವಿಶೇಷವಾಗಿ ಭಾರತದ ಬೇರೆ ಬೇರೆ ಭಾಗಗಳಿಂದ ಬಂದ ಮಕ್ಕಳು ಅವರ ಬರವಣಿಗೆಯ ಜೊತೆಗೆ ಬಹು ಬೇಗ ಭಾವನಾತ್ಮಕ ಸಂಬಂಧವನ್ನು ರೂಢಿಸಿಕೊಳ್ಳುತ್ತಾರೆ. ನಾನು ಆರ್.ಕೆ. ನಾರಾಯಣ್‌ರ ಪುಸ್ತಕಗಳನ್ನು ಓದಿಸಲು ಪ್ರಯತ್ನಿಸಿದೆ. ಮೊಮ್ಮಗನೂ ಓದಲು ಪ್ರಯತ್ನಪಟ್ಟ. ಆದರೆ ಅವರ ಬರವಣಿಗೆಯಲ್ಲಿರುವ ಭಾರತೀಯ ಸಣ್ಣ ಪಟ್ಟಣಗಳ ವಾತಾವರಣದ ಜೊತೆ ಅವನಿಗೆ ಗುರುತಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಯಾವ ಪುಸ್ತಕಗಳಿಗೆ, ಯಾವ ಲೇಖಕರಿಗೆ, ಯಾವ ಕತೆಗಳಿಗೆ ಮಕ್ಕಳು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದರಿಂದಲೇ ನಾವು ಓದುವಿಕೆಯನ್ನು ಕುರಿತು ಅನೇಕ ಸೂಕ್ಷ್ಮಗಳನ್ನು ತಿಳಿಯಬಹುದು. ಪುರಾಣ, ಇತಿಹಾಸ, ಧಾರ್ಮಿಕ ಕತೆ-ಪ್ರಸಂಗಗಳನ್ನು ಕೂಡ ಮಕ್ಕಳು ತಮ್ಮೆದುರಿಗಿನ ವಾಸ್ತವದ ಕತೆಯೆಂದೇ ಸ್ವೀಕರಿಸುತ್ತಾರೆ. ನಾವು ಯಾವುದನ್ನು fantasy ಅಥವಾ ಅತಿವಾಸ್ತವ, ಉತ್‌ಪ್ರೇಕ್ಷಿತ ಎಂದು ಭಾವಿಸುತ್ತೇವೋ ಅದು ಮಕ್ಕಳಿಗೆ ಸಾಧಾರಣವಾದ, ಸಾಮಾನ್ಯವಾದ ಕಣ್ಣೆದುರಿಗಿನ ಸತ್ಯವಾಗಿ ಕಾಣುತ್ತದೆ. ಓದುವುದನ್ನೆಲ್ಲ ಮಕ್ಕಳು ನಂಬುವುದರಿಂದ, ತೆರೆದ ಮನಸ್ಸಿನಿಂದ ಸ್ವೀಕರಿಸುವುದರಿಂದ, ಹೀಗಾಗುತ್ತದೆ ಎಂದು ಕಾಣುತ್ತದೆ. ಮಹಾಭಾರತ, ರಾಮಾಯಣದ ಕತೆಗಳಿಗೆ ಧ್ರುವ ಪರಿಚಿತನಾದದ್ದು ಕಾಮಿಕ್ಸ್‌ಗಳ ಮೂಲಕ. ಆ ಸಂಪುಟಗಳನ್ನೇ ಅವನು ಶ್ರದ್ಧೆಯಿಂದ ಓದಿದ. ಕಾಮಿಕ್ಸ್‌ನಿಂದ ಅವನು ಏನನ್ನೂ ವಿಶೇಷವಾಗಿ, ಆಳವಾಗಿ ತಿಳಿಯಲಾರ ಎಂಬುದು ನನ್ನ ನಿಲುವಾಗಿತ್ತು. ಈ ಮಧ್ಯೆ ಕೋವಿಡ್ ಒಕ್ಕರಿಸಿತು. ಮಕ್ಕಳು ಶಾಲೆಗೆ ಬಿಟ್ಟರೆ ಇನ್ನೆಲ್ಲಿಗೂ ಹೋಗುವ ಹಾಗಿಲ್ಲ. ಕಾಮಿಕ್ಸ್ ಓದುವ ಮೂಲಕವೇ ರಾಮಾಯಣ-ಮಹಾಭಾರತವನ್ನು ವಿವರವಾಗಿ, ಆಳವಾಗಿ ಪರಿಚಯ ಮಾಡಿಕೊಂಡು, ಪ್ರಶ್ನೆಗಳನ್ನು ರೂಪಿಸಿ, ವೀಡಿಯೋ ಸಂಭಾಷಣೆ ಮಾಡಿ, ನಮಗೆ quiz ಪ್ರಶ್ನೆಗಳನ್ನು ಕೇಳುತ್ತಿದ್ದ. ಅವನ ವಿಷಯ ಸಂಗ್ರಹಣೆಯ ರೀತಿ, ರೂಪಿಸಿದ ಪ್ರಶ್ನೆಗಳು, ಎರಡೂ ಸೂಕ್ಷ್ಮವಾಗಿದ್ದವು.

ನಿರೂಪಣೆಯಿಂದ ಯಾವ ಭಾಗವನ್ನು ನಾಟಕವಾಗಿ ದೃಶ್ಯರೂಪಕ್ಕೆ ಪರಿವರ್ತಿಸಬಹುದು ಎಂಬ ಸಮಸ್ಯೆಯನ್ನು ಅವನೇ ರೂಪಿಸಿಕೊಂಡ. ಏಕೆಂದರೆ, ಯಾವಾಗಲೂ ಮನೆಯೊಳಗೇ ಇರಬೇಕಾಗಿದ್ದರಿಂದ, ಈ ರೀತಿಯ ಚಟುವಟಿಕೆಗಳು ಅವನಿಗೆ ಅನಿವಾರ್ಯವಾಗಿದ್ದವು. ಯಕ್ಷ ಪ್ರಶ್ನೆಯ ಪ್ರಸಂಗ, ದುರ್ಯೋಧನ ಮತ್ತು ಅರ್ಜುನರು ಕೃಷ್ಣನ ಬಳಿಗೆ ಹೋಗಿ, ತಲೆ ಮತ್ತು ಪಾದದ ಬಳಿ ಕುಳಿತು ಯುದ್ಧಕ್ಕೆ ನೆರವನ್ನು ಕೋರುವ ಪ್ರಸಂಗ, ಈ ಎರಡೂ ಪ್ರಸಂಗಗಳನ್ನು ಆಯ್ದು, ವಾರಗಟ್ಟಲೆ ರಿಹರ್ಸಲ್ ಮಾಡಿ, ನಾನು-ಅವನೇ ಮೂರು ನಾಲ್ಕು ಪಾತ್ರಗಳಲ್ಲಿ ಅಭಿನಯಿಸಿ, ನನ್ನ ಹೆಂಡತಿ, ಮಗಳು, ಅಳಿಯ ಇವರನ್ನೇ ಪ್ರೇಕ್ಷಕರನ್ನಾಗಿ ಮಾಡಿಕೊಂಡು, ಮತ್ತೆ ಮತ್ತೆ ಅಭಿನಯಿಸುತ್ತಿದ್ದೆವು. ಇದನ್ನು ಈಗ ವೀಡಿಯೋದಲ್ಲಿ ಮತ್ತೆ ನೋಡುವಾಗ ನನಗೇ ತುಂಬಾ ಸಂತೋಷವಾಯಿತು.

ಮೂರನೆಯ ಸಲ ನೆದರ್‌ಲ್ಯಾಂಡ್ಸ್‌ಗೆ ಬಂದಾಗ, ಮಹಾಭಾರತ ಮತ್ತು ರಾಮಾಯಣ ಎರಡನ್ನೂ ಪ್ರತಿ ನಿತ್ಯದ ಕಂತಿನಲ್ಲಿ ಓದಲು ನಾನು ಮತ್ತು ಧ್ರುವ ನಿರ್ಧರಿಸಿದೆವು. ಈಗಾಗಲೇ ಕಾಮಿಕ್ಸ್‌ಗಳ ಮೂಲಕ ಕಥಾಸಾರವನ್ನು ಗ್ರಹಿಸಿರುವುದರಿಂದ ಧ್ರುವ ಆಸಕ್ತಿ ತೋರದೇ ಹೋಗಬಹುದೇನೋ ಎಂಬ ಅನುಮಾನ ನನಗಿತ್ತು. ಇಲ್ಲ, ವಿವರವಾದ ದೀರ್ಘ ನಿರೂಪಣೆ ಅವನಿಗೆ ತುಂಬಾ ಇಷ್ಟವಾಯಿತು. ಪ್ರತಿ ದಿನವೂ ಹೊಸ ಅಧ್ಯಾಯವನ್ನು ಓದಲು ಶುರು ಮಾಡುವ ಮುನ್ನ, ಅವನೇ ಸ್ವಲ್ಪ ಹೊತ್ತು ಹಿಂದಿನ ದಿನ ಓದಿದ್ದನ್ನು ಕೆಲ ನಿಮಿಷಗಳ ಕಾಲ ಸಮೀಕ್ಷಿಸುತ್ತಿದ್ದ, ವೇಗವಾಗಿ ಓದಿ ಮನನ ಮಾಡಿಕೊಳ್ಳುತ್ತಿದ್ದ. ದೀರ್ಘ ಕಥಾನಕವನ್ನು ಓದಿದಾಗ ಎಲ್ಲ ಹಂತದಲ್ಲೂ ಏಕಾಗ್ರತೆಯಿಂದ ಕೇಳಿಸಿಕೊಳ್ಳುವುದು ಕಷ್ಟ. ನಾನು ಓದುತ್ತಿರುವಾಗ ಮಧ್ಯೆ ಮಧ್ಯೆ ನಿಲ್ಲಿಸಿ ಈ ಭಾಗವನ್ನು ಮತ್ತೆ ಓದು, ಆದರೆ ಈ ಭಾಗವನ್ನು ಮತ್ತೆ ಓದಬೇಡ. ನಿನ್ನ ಮಾತುಗಳಲ್ಲಿ ಸಂಗ್ರಹಿಸಿ ಹೇಳಿ ಮುಂದೆ ಓದು ಎಂದು ಸೂಚಿಸುತ್ತಿದ್ದೆ. ಸುಮ್ಮನೆ ಓದಿಕೊಂಡು ಹೋಗುವುದು ನನಗೂ ಸುಲಭವಾಗಿತ್ತು. ಆದರೆ ಮಧ್ಯೆ ಮಧ್ಯೆ ಸಂಗ್ರಹಿಸಿ ನನ್ನ ಮಾತುಗಳಲ್ಲಿ ಆ ತಕ್ಷಣದಲ್ಲೇ ಹೇಳುವುದಕ್ಕೆ ತುಂಬಾ ಕಷ್ಟವಾಗುತ್ತಿತ್ತು. ಆದರೆ ಈ ಅಭ್ಯಾಸವನ್ನು ನಾನು ರೂಢಿಸಿಕೊಳ್ಳಲೇ ಬೇಕಾಯಿತು.

ಒಂದು ಪುಸ್ತಕವನ್ನು ಓದುವಾಗ ನಮ್ಮ ಹಿಂದಿನ, ಇದುವರೆಗಿನ ಓದು ತುಂಬಾ ಪ್ರಭಾವ ಬೀರುತ್ತದೆ. ಈಗಿನ ಕಾಲದ ಎಲ್ಲ ಮಕ್ಕಳಂತೆಯೇ ನನ್ನ ಮೊಮ್ಮಗನೂ ಹ್ಯಾರಿ ಪಾಟರ್ ಸಂಪುಟಗಳನ್ನು ಓದಿದವನು, ಅದರ ಸಿನಿಮಾ ನೋಡಿದವನು. ಸಾಹಸಮಯ ಕತೆ, ಕಾದಂಬರಿಗಳನ್ನು ಓದಿದವನು. ಜೊತೆಗೆ ವಯಸ್ಸಿಗೆ ಸಹಜವಾದ ತುಂಟುಬುದ್ಧಿ ಬೇರೆ. ಹಾಗಾಗಿ, ನಾವು ಓದುವಾಗ ಅವನು ಕೇಳುತ್ತಿದ್ದ ಪ್ರಶ್ನೆಗಳು, ಮಂಡಿಸುತ್ತಿದ್ದ ಅಭಿಪ್ರಾಯಗಳು ತುಂಬಾ ಕುತೂಹಲಕರವಾಗಿರುತ್ತಿದ್ದವು. ರಾಮಾಯಣ-ಮಹಾಭಾರತ ಎರಡರಲ್ಲೂ ಏಕೆ ವನವಾಸ ಬರುತ್ತದೆ, ರಾಮ ಯಾಕೆ ಜೀವನದುದ್ದಕ್ಕೂ ಯುದ್ಧದಲ್ಲಿ, ಕೊಲೆ ಮಾಡುವುದರಲ್ಲಿ ತೊಡಗಿರುತ್ತಾನೆ? ಮಹಾಭಾರತದ ಕತೆಯುದ್ದಕ್ಕೂ ವ್ಯಾಸ ಅಷ್ಟೊಂದು ಸಲ ಮಧ್ಯೆ ಮಧ್ಯೆ ಬಂದು ಹೋಗುತ್ತಾನಲ್ಲ, ಅದರಿಂದೆಲ್ಲ ಒಂದು ಚೂರೂ ಪ್ರಯೋಜನವಾಗುವುದಿಲ್ಲ. ಆದರೂ ಏಕೆ ಮತ್ತೆ ಮತ್ತೆ ಮಧ್ಯೆ ಪ್ರವೇಶ ಮಾಡುತ್ತಲೇ ಇರುತ್ತಾನೆ, ರಾಜನಿಗೂ (ದಶರಥನಿಗೂ) ಹೆಂಡತಿಯ ಮೇಲೆ ನಿಯಂತ್ರಣವಿರುವುದಿಲ್ಲವೇ (ಕೈಕೇಯಿ)? ಧೃತರಾಷ್ಟ್ರ ಅಷ್ಟು ಕೆಟ್ಟವನು ಎಂದು ಗೊತ್ತಿದ್ದರೂ, ಏಕೆ ವ್ಯಾಸ ಅವನನ್ನು ಮೊದಲೇ ಸಾಯಿಸುವುದಿಲ್ಲ? ಅದೊಂದು ಪಾತ್ರವನ್ನು ಸಾಯಿಸಿಬಿಟ್ಟಿದ್ದರೆ, ಎಷ್ಟೋ ತೊಂದರೆಗಳು ತಪ್ಪುತ್ತಿರಲಿಲ್ಲವೇ? ಈ ರೀತಿಯ ಪ್ರಶ್ನೆಗಳು, ಅನುಮಾನಗಳು ತಮಾಷೆಯಾಗಿರುತ್ತಿದ್ದವು. ನನಗೂ ಅವನಿಗೆ ಸಮಾಧಾನ ಹೇಳುವುದು, ತೃಪ್ತಿ ಪಡಿಸುವುದು ಕಷ್ಟವಾಗುತ್ತಿತ್ತು.

ನಾವು ಎರಡೂ ಪಠ್ಯಗಳನ್ನು ಚಕ್ರವರ್ತಿ ರಾಜಗೋಪಾಲಚಾರಿಯವರ ಸರಳ ಸುಂದರ, ಪಾರದರ್ಶಿಕ ಇಂಗ್ಲಿಷ್ ಮರು ನಿರೂಪಣೆಯಲ್ಲಿ ಓದಿದೆವು. ರಾಮಾಯಣ-ಮಹಾಭಾರತದ ಆಯ್ದ, ಪ್ರಿಯವಾದ ಭಾಗಗಳನ್ನು ನಾನು ನನಗೆ ಬೇಕಾದಾಗ ಓದುವುದುಂಟು. ಆದರೆ ನನ್ನ ಮೊಮ್ಮಗನ ದೆಸೆಯಿಂದಾಗಿ ಎರಡೂ ಪಠ್ಯಗಳನ್ನು ಮತ್ತೆ ಒಟ್ಟಿಗೇ ಓದುವಂತಾಯಿತು.

ಅವನಿಗೆ ತುಂಬಾ ಇಷ್ಟವಾದದ್ದು ಹನುಮಂತನ ಪಾತ್ರ. ಅವನ ಸಾಹಸ, ಕೌಶಲ್ಯ, ಎಲ್ಲವನ್ನೂ ಸಂಭಾಳಿಸುವ ರೀತಿ, ಭಕ್ತಿ, ಸ್ನೇಹಪರತೆ, ಎಲ್ಲವೂ ತುಂಬಾ ಪರಿಣಾಮ ಬೀರಿತು. ನೇರವಾಗಿ ಹೇಳದಿದ್ದರೂ ರಾಮಾಯಣದಲ್ಲಿ ನಾಯಕ ಪಾತ್ರವೆಂದರೆ, ಅದು ಹನುಮಂತನದೇ ಹೊರತು ರಾಮನದಲ್ಲ ಎಂಬುದು ಅವನು ರೂಢಿಸಿಕೊಳ್ಳುತ್ತಿದ್ದ ಅಭಿಪ್ರಾಯವಾಗಿತ್ತು. ಹನುಮಂತ ದಿವ್ಯಸ್ವರೂಪಿ, ವಾನರ. ಪಾತ್ರ ವಿನ್ಯಾಸದಿಂದಾಗಿ ಹಾಗೆಲ್ಲ ಕಾಣಿಸಿಕೊಳ್ಳುತ್ತಾನೆ ಎಂಬುದರ ಬಗ್ಗೆ ಅವನು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಅವನು ಎಲ್ಲರ ಹಾಗೇ ಮನುಷ್ಯ. ಆ ಕಾರಣದಿಂದಲೇ ಅಸಾಧಾರಣನಾದವನು ಎಂಬುದು ಅವನ ತಿಳುವಳಿಕೆ.

ಈ ರೀತಿಯ ಸಾಹಸಮಯ ರೋಚಕ ಕಥನ ಓದುವ ಈ ಮಗುವಿಗೆ ಓದಿನಲ್ಲಿ ಬೇರೆ ಏನೇನು ಇಷ್ಟವಾಗಬಹುದು ಎಂಬುದು ನನ್ನ ಕುತೂಹಲವಾಗಿತ್ತು. ನನ್ನ ಮಗಳು ಅವಳ ಪುಸ್ತಕ ಸಂಗ್ರಹದಲ್ಲಿ ಜವಹಾರ್‌ಲಾಲ್ ನೆಹರೂರವರ Letters of a Father to His Daughter ಪುಸ್ತಕವನ್ನು ಇಟ್ಟುಕೊಂಡಿದ್ದಳು. ನೆಹರೂ ಇಂದಿರಾಗೆ ಆ ಪತ್ರಗಳನ್ನು ಬರೆದದ್ದು ಆಕೆಗೆ ಹತ್ತು ವರ್ಷ ವಯಸ್ಸಾಗಿದ್ದಾಗ. ನನ್ನ ಮೊಮ್ಮಗ ಇನ್ನೇನು ಹತ್ತನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದ. ಹಾಗಾಗಿ, ಇದನ್ನು ಏಕೆ ಅವನಿಗೆ ಓದಿ ಹೇಳಬಾರದು ಎಂಬ ಅನುಮಾನದಿಂದಲೇ ಓದಲು ಪ್ರಾರಂಭಿಸಿದೆ. ನಾಗರಿಕತೆಯ ಇತಿಹಾಸವನ್ನು ವೈಜ್ಞಾನಿಕ ದೃಷ್ಟಿಕೋನದಿಂದ ವಿವರಿಸುವ ಪುಸ್ತಕವದು. ಕಥನ ಕುತೂಹಲವನ್ನು ಬೆಳೆಸುತ್ತಾ ಇತಿಹಾಸವನ್ನು ಹೇಳುವ ರೀತಿ, ಮೂರು ನಾಲ್ಕು ಪುಟಗಳ ಪುಟ್ಟಪುಟ್ಟ ಅಧ್ಯಾಯಗಳು, ಮಕ್ಕಳೇ ತಾವೇ ಸ್ವತಂತ್ರವಾಗಿ ಓದಿಕೊಳ್ಳಬಹುದಾದ ಸರಳ ಬರವಣಿಗೆ, ನಿಘಂಟಿನ ನೆರವು ಬೇಡ, ಮೊಮ್ಮಗನಿಗೆ ಇಷ್ಟವಾಯಿತು. ಅದನ್ನು ಓದುವಾಗ ಅವನು ಕೇಳುತ್ತಿದ್ದ ಪೂರಕ ಮಾಹಿತಿಗಳನ್ನು ಒದಗಿಸಲು ನನಗೇ ಕಷ್ಟವಾಗುತ್ತಿತ್ತು. ಅಲ್ಲಿಯ ಶಾಲೆಗಳಲ್ಲಿ ಪ್ರಾತ್ಯಕ್ಷಿಕೆ, ಪ್ರಶ್ನೋತ್ತರಗಳ ಮೂಲಕ ಸ್ವ-ಅಧ್ಯಯನವನ್ನು ಪ್ರೇರೇಪಿಸುತ್ತಾರೆ. ಈ ಪುಸ್ತಕದ ಬರವಣಿಗೆಯ ಕ್ರಮ ಆ ಕಲಿಕೆಯ ಕ್ರಮಕ್ಕೆ ಪೂರಕವಾಗಿತ್ತು. ನಂತರ ಅವನು ಸಂಗ್ರಹಿಸಿದ್ದ ಇತರ ಪುಸ್ತಕಗಳನ್ನು ಕೂಡ ಪರಿಶೀಲಿಸಿದೆ. ಅವನ ವಯಸ್ಸಿನ ಮಕ್ಕಳೇ ಪಾತ್ರಧಾರಿಗಳಾಗಿರುವ, ಕತೆ ನಿರೂಪಿಸುವ ಪುಸ್ತಕಗಳೇ ಹೆಚ್ಚಾಗಿದ್ದವು.

ಮಕ್ಕಳನ್ನು ಪ್ರಬುದ್ಧರನ್ನಾಗಿ ಮಾಡುವ ನಮ್ಮ ಆತುರದಲ್ಲಿ ಅವರ ಬಾಲ್ಯದ ಸಂತೋಷಕ್ಕೆ ನಾವು ಅಡ್ಡ ಬರಬಾರದಷ್ಟೇ. ಈ ಎಚ್ಚರ ನನಗೆ ಯಾವಾಗಲೂ ಇತ್ತು. ನನಗೆ ಎಚ್ಚರವಿಲ್ಲದಿದ್ದರೂ ಏನೂ ತೊಂದರೆ ಆಗುತ್ತಿರಲಿಲ್ಲ. ಏಕೆಂದರೆ, ಅವನು ಪುಸ್ತಕಗಳಿಗಿಂತ ಹೆಚ್ಚಾಗಿ ತನ್ನ ವಯಸ್ಸಿನ ಮಕ್ಕಳ ಜೊತೆ ಬೆರೆಯುವುದನ್ನೇ, ಅವರೊಡನೆ ಆಟವಾಡುವುದನ್ನೇ ತುಂಬಾ ಇಷ್ಟಪಡುತ್ತಿದ್ದ. ದಣಿಯುವ ತನಕ ಅಡುತ್ತಿದ್ದ. ಒಂದು ಹಂತದ ನಂತರ ಮಕ್ಕಳು ನಮ್ಮ ಮಾತು ಕೇಳುವುದಿಲ್ಲ, ಕೇಳಬಾರದು. ಧ್ರುವನ ತಂದೆ ನನಗೆ ನೆರವಾಗಲೆಂದು ಸಾರ್ವಜನಿಕ ಗ್ರಂಥಾಲಯದ ಸದಸ್ಯರಾದರು. ಪೋಷಕರು ಸದಸ್ಯರಾದರೆ ಮಕ್ಕಳಿಗೆ ಸದಸ್ಯತ್ವಕ್ಕೆ ಚಂದಾ ಕೊಡಬೇಕಾಗಿಲ್ಲ. ನಮ್ಮ ಜೊತೆ ಅವನೂ ಕೂಡ ಗ್ರಂಥಾಲಯಕ್ಕೆ ಬರುತ್ತಿದ್ದ. ಪುಸ್ತಕಗಳ ಆಯ್ಕೆಯನ್ನು ಅವನಿಗೇ ಬಿಟ್ಟೆವು. ಎಂದಿನಂತೆ ಅವನು ಸಾಹಸಮಯ ಪುಸ್ತಕಗಳನ್ನು, ಅವನ ವಯಸ್ಸಿನ ಮಕ್ಕಳೇ ಪಾತ್ರವಾಗಿರುವ ಪುಸ್ತಕಗಳನ್ನು ಆಯ್ದುಕೊಳ್ಳುತ್ತಿದ್ದ.

ಮಕ್ಕಳು ಯಾವ ಭಾಷೆ ಕಲಿಯಬೇಕು, ಹೇಗೆ ಕಲಿಯಬೇಕು, ಎಷ್ಟು ಕಲಿಯಬೇಕು ಎಂಬುದರ ಬಗ್ಗೆ ಕುಟುಂಬದ ಹಿರಿಯರಿಗೆ ಆತಂಕವಿದ್ದೇ ಇರುತ್ತದೆ. ನಾನು-ನಮ್ಮ ಕುಟುಂಬ ಕೂಡ ಇದಕ್ಕೆ ಹೊರತಲ್ಲ. ಧ್ರುವ ಬೆಂಗಳೂರನ್ನು ಬಿಟ್ಟಾಗ ನಾಲ್ಕು ವರ್ಷ ಮಾತ್ರವಾಗಿತ್ತು. ಕನ್ನಡ ಚೆನ್ನಾಗಿ ಮಾತನಾಡಲು ಬರುತ್ತಿತ್ತು. ಕತೆಗಳನ್ನು ಕೂಡ ನಾವು ಕನ್ನಡದಲ್ಲೇ ಹೇಳುತ್ತಿದ್ದೆವು. ನೆದರ್‌ಲ್ಯಾಂಡ್ಸ್‌ಗೆ ಹೋದ ಮೇಲೆ ಸಹಜವಾಗಿಯೇ ಕನ್ನಡದ ಬಳಕೆ ಕಡಿಮೆಯಾಯಿತು. ನಮ್ಮ ಮಕ್ಕಳು, ಮೊಮ್ಮಕ್ಕಳು ಸಕಲ ಕಲಾವಲ್ಲಭನ್ ಆಗಬೇಕೆಂಬ ನಮ್ಮ ಆತಂಕದಲ್ಲಿ ನಾವು ಮಗಳು ಅಳಿಯಂದಿರನ್ನು ಮನೆಯಲ್ಲಿ ಕನ್ನಡ ವಾತಾವರಣ ಸೃಷ್ಟಿಸಲು ಒತ್ತಾಯಿಸುತ್ತಲೇ ಇದ್ದೆವು. Work from home ನೀತಿಗನುಗುಣವಾಗಿ ಇಬ್ಬರೂ ಮನೆಯಿಂದಲೇ ಕೆಲಸ ಮಾಡುತ್ತಿದ್ದರು. ಎಲ್ಲ ಮೀಟಿಂಗ್, ಮಾತುಕತೆ ಇಂಗ್ಲಿಷಿನಲ್ಲೇ. ಬರೇ ಮಕ್ಕಳ ಜೊತೆ ಮಾತನಾಡಿದರೆ ಕನ್ನಡ ವಾತಾವರಣ ನಿರ್ಮಾಣವಾಗುತ್ತದೆಯೇ? ಆದರೆ ನಾವು ಹೋದಾಗ ಮಾತ್ರ ಹತ್ತು ವರ್ಷದ ಮೊಮ್ಮಗ, ಒಂದೂ ಮುಕ್ಕಾಲು ವರ್ಷದ ಮೊಮ್ಮಗಳು ಇಬ್ಬರೂ ಕನ್ನಡದಲ್ಲೇ ಮಾತನಾಡುತ್ತಿದ್ದರು. ಮೊಮ್ಮಗಳು ಅಷ್ಟು ಚಿಕ್ಕ ವಯಸ್ಸಿನಲ್ಲೇ ಮೂರು ಭಾಷೆಗಳ ವಾತಾವರಣದಲ್ಲಿ ಮಾತನಾಡಬೇಕಾಗುತ್ತಿತ್ತು ಮತ್ತು ಮಾತನಾಡುತ್ತಿದ್ದಳು. ಮೊಮ್ಮಗ ಕನ್ನಡ ಮರೆತಿದ್ದಾನೆ, ಕನ್ನಡದ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದಾನೆ ಎಂಬುದು ನಮ್ಮ ಕಲ್ಪಿತ ಭಯವಾಗಿತ್ತು. ಮೊಮ್ಮಗ ಒಂದೂವರೆ ತಿಂಗಳಲ್ಲೇ ಕನ್ನಡ ವರ್ಣಮಾಲೆ, ಒತ್ತಕ್ಷರ, ಉಚ್ಛಾರ ಎಲ್ಲವನ್ನೂ ತುಂಬಾ ಸಲೀಸಾಗಿ ಕಲಿತ. ನಮ್ಮ ಸಾಂಸ್ಕೃತಿಕ ಕಾಳಜಿಗಳಲ್ಲೇ ಎಲ್ಲೋ ತಪ್ಪಿರಬೇಕು, ಇಲ್ಲ ನಮ್ಮ ಆತಂಕಕ್ಕೆ ವಾಸ್ತವದ ತಳಹದಿಯಿಲ್ಲದೆ ಇರಬಹುದು; ನಮ್ಮ ಭಯ, ಆತಂಕವನ್ನು ಮಾತ್ರ ಸೂಚಿಸುತ್ತಿರಬಹುದು. ಇದೆಲ್ಲ ನಮ್ಮ ಮನಸ್ಸಿಗೆ ನಾಟುವಂತೆ ಕಲಿಸುವವರು ಮಕ್ಕಳು, ಸದ್ಯಕ್ಕೆ ಮೊಮ್ಮಕ್ಕಳು.

ಒಂದು ಮಗುವೇ ಇನ್ನೊಂದು ಮಗುವಿಗೆ ಹೇಗೆ ಕತೆ ಹೇಳುತ್ತದೆ? ಇದರ ಬಗ್ಗೆ ನನಗೆ ಏನೂ ತಿಳುವಳಿಕೆ ಇರಲಿಲ್ಲ. ಮೊಮ್ಮಗನೇ ತನ್ನ ಪುಟ್ಟ ತಂಗಿಗೆ ಕನ್ನಡದಲ್ಲಿ ಕತೆ ಹೇಳುವ ರೀತಿ ನನ್ನಲ್ಲಿ ಬೆರಗು ಮೂಡಿಸಿತು. ನಾವು ಅವನಿಗೆ ಕತೆ ಹೇಳುವ ರೀತಿಯಲ್ಲೇ ನಿಧಾನವಾಗಿ, ಸಮಾಧಾನವಾಗಿ, ಅಭಿನಯಪೂರ್ವಕವಾಗಿ, ಭಾವಶ್ರೀಮಂತಿಕೆಯಿಂದ ಕತೆ ಹೇಳುತ್ತಿದ್ದ, ತಂಗಿಯನ್ನು ಒಲಿಸಿಕೊಳ್ಳುತ್ತಿದ್ದ. ಈ ರೀತಿಯ ವರ್ತನೆ ಕತೆ ಹೇಳುವಾಗ ಮಾತ್ರ. ಉಳಿದಂತೆ ಅವರಿಬ್ಬರ ನಡುವೆ ಯಾವಾಗಲೂ ಪೈಪೋಟಿ, ಕಿತ್ತಾಟ.

ಮಕ್ಕಳ ಮನಸ್ಸಿನ ಚಂಚಲತೆ, ಹಠಮಾರಿತನದ ಬಗ್ಗೆ ನಮಗೆಲ್ಲಾ ಗೊತ್ತು. ಒಂದು ಚಟುವಟಿಕೆಯಿಂದ ಇನ್ನೊಂದು ಚಟುವಟಿಕೆಗೆ ಸುಲಭವಾಗಿ ಅವರು ಹೊರಳಿಕೊಳ್ಳಬಲ್ಲರು. ಆದರೆ ಓದಿನಿಂದ ಆಟಕ್ಕೆ, ಆಟದಿಂದ ಕೀಟಲೆಗೆ, ಕೀಟಲೆಯಿಂದ ನಿದ್ದೆಗೆ, ಒಬ್ಬರೇ ಕೂತು ಅಳುವುದಕ್ಕೆ, ತಕ್ಷಣವೇ ಗುಂಪಿನಲ್ಲಿ ಬೆರೆತು ನಲಿದಾಡುವುದಕ್ಕೆ, ಹೊರಳಿಕೊಳ್ಳುತ್ತಲೇ ಇರುತ್ತಾರೆ. ಎಲ್ಲ ಚಟುವಟಿಕೆಗಳಿಗೂ ಸಮಾನವಾದ ಆದ್ಯತೆ ಮತ್ತು ಒಂದೇ ರೀತಿಯ ಏಕಾಗ್ರತೆ, ತೀವ್ರತೆಯಲ್ಲಿ ತೊಡಗಿಸಿಕೊಳ್ಳಬಲ್ಲರು. ಇದು ನಮಗೆ ಸಾಧ್ಯವಾಗುವುದಿಲ್ಲ.

ನನ್ನ ಮೊಮ್ಮಕ್ಕಳಲ್ಲಿ ನನಗೆ ವಿಶೇಷವೆಂದು ಕಾಣಿಸಿದ ಸಂಗತಿಗಳು, ಆ ವಯಸ್ಸಿನ ಉಳಿದ ಮಕ್ಕಳಲ್ಲೂ ಇರುವುದನ್ನು ನಾನು ಶಾಲೆಯ ಆವರಣದಲ್ಲಿ, ಹುಟ್ಟು ಹಬ್ಬದ ಪಾರ್ಟಿಗಳಲ್ಲಿ, ಪಾರ್ಕ್‌ಗಳಲ್ಲಿ ಅವರವರೇ ಆಡಿಕೊಳ್ಳುವಾಗಲೂ ಕಂಡಿದ್ದೇನೆ. ಅವರ ಚಟುವಟಿಕೆ, ಮನೋಧರ್ಮ, ಆಟ, ಪಾಠ, ಎಲ್ಲದರ ಮೇಲೂ ಅಲ್ಲಿಯ ಶಾಲೆಗಳು ಕಲಿಸುವ ರೀತಿ ಮತ್ತು ಶಿಕ್ಷಕರು ಮಕ್ಕಳನ್ನು ನೋಡುವ, ನೋಡಿಕೊಳ್ಳುವ ರೀತಿಯ ಪ್ರಭಾವವಿದೆ. ನೀನು ವಿಶಿಷ್ಟ, ನೀನು ಸ್ವತಂತ್ರ, ನಿನ್ನ ಸ್ವಂತಿಕೆ ರೂಢಿಸಿಕೊಂಡು ಜೀವನದಲ್ಲಿ ಸಂತೋಷದಿಂದಿರುವುದೇ ಮುಖ್ಯ ಎಂದು ಮಕ್ಕಳಿಗೆ ಶಾಲೆಯಲ್ಲಿ ಪ್ರತಿ ಕ್ಷಣವೂ ಹೇಳಿಕೊಟ್ಟಾಗ, ಮಕ್ಕಳು ವರ್ತಿಸುವ ರೀತಿಯಲ್ಲಿ ಭಿನ್ನತೆಯಿದ್ದೇ ಇರುತ್ತದೆ. ಮಕ್ಕಳ ಬೆಳವಣಿಗೆಯಲ್ಲಿ ಪೋಷಕರು ತುಂಬಾ ತಲೆತೂರಿಸಬಾರದು, ಹಿರಿಯರ ಒತ್ತಡ, ಪೂರ್ವಗ್ರಹವನ್ನು ಹೇರಬಾರದು, ಎಂಬುದು ಅಲ್ಲಿನ ಶಿಕ್ಷಣ ವ್ಯವಸ್ಥೆಯ, ಜೀವನಶೈಲಿಯ ನಿರೀಕ್ಷೆ. ಭಾರತದ ವಾತಾವರಣದಲ್ಲಿ ಮಕ್ಕಳಿಗೆ ಅಷ್ಟು ಸ್ವಾತಂತ್ರ‍್ಯವನ್ನು ನೀಡಲು ಪೋಷಕರಾಗಿ ನಾವು ಸಿದ್ಧರಿಲ್ಲ. Child is the father of man ಎಂಬುದು ಹಳೆಯ ಗಾದೆಯ ಮಾತು. ಆದರೆ ಇದು ಪ್ರತಿ ಸಂಸ್ಕೃತಿಯಲ್ಲೂ, ಪ್ರತಿ ಮನೆಯಲ್ಲೂ ಭಿನ್ನವಾಗಿರುತ್ತದೆ. ನಮ್ಮ ಮಕ್ಕಳು, ಮೊಮ್ಮಕ್ಕಳು ಹೇಗೆ ಎಂದು ಹೇಳಲು ಹೊರಟರೆ ಅದು ನಮ್ಮ ಬಗ್ಗೆಯೇ ಆಗುತ್ತದಷ್ಟೇ.