ಬೆಟ್ಟದ ದಾರಿ. ಸಂಜೆಯಾಗುವ ಮೊದಲೇ ಮೇಲೇರಬೇಕು ಎನ್ನುವ ಧಾವಂತದಲ್ಲೇ ಹೊರಟೆ. ಇಕ್ಕೆಲಗಳಲ್ಲೂ ಅರಾವಳಿ ಪರ್ವತಶ್ರೇಣಿಯ ಸ್ನಿಗ್ಧ ಸೌಂದರ್ಯಾಸ್ವಾದನೆ. ಸ್ವಪ್ನಲೋಕದ ದಾರಿಯಲ್ಲಿ ಪಯಣಿಸಿ ಸೂರ್ಯಾಸ್ತದ ವೇಳೆಗೆ ತಲುಪಿದ್ದು ಸಮುದ್ರಮಟ್ಟದಿಂದ 1200 ಮೀಟರುಗಳಷ್ಟು ಮೇಲಿರುವ, ಬೇಸಿಗೆ ಅರಮನೆಗಳ ನಗರ ಮೌಂಟಬುವನ್ನು. ಥಾರ್ ಮರುಭೂಮಿಯ ಈ ನಾಡಿಗೆ ಉಣ್ಣೆ ಬಟ್ಟೆಯನ್ನು ಹೊತ್ತಿ ಹೋಗುವ ಕಲ್ಪನೆಯೂ ನನಗಿರಲ್ಲಿಲ್ಲ. ಆದರೆ ಕಾಲಿಟ್ಟೊಡನೆ ಮೈನಡುಗಿಸಿತ್ತು ಅಲ್ಲಿನ ಹವೆ.
‘ಕಂಡಷ್ಟೂ ಪ್ರಪಂಚʼ ಪ್ರವಾಸ ಅಂಕಣದಲ್ಲಿ ಅಂಜಲಿ ರಾಮಣ್ಣ ಬರಹ

ರಾಜಸ್ಥಾನವೆಂದರೆ ಬಿರುಬಿಸಿಲ ಧಗೆಗೆ ಮತ್ತೊಂದು ಹೆಸರು. ಈ ಜಾಗದಲ್ಲಿ ಓಯಸಿಸ್‌ನಂತೆ ಎದುರಾಗುತ್ತೆ ಮೌಂಟ್‌ಅಬು. ಜೋಧ್ಪುರದಿಂದ 200 ಕಿಲೋಮೀಟರುಗಳ ದಾರಿ ಸವೆಸಿದರೆ ಮೌಂಟಬುವಿನ ತಪ್ಪಲು. ತಿರುವು ರಸ್ತೆಗಳ ದಾರಿ ಹಿಡಿಯುವ ಮೊದಲು ಹೊಟ್ಟೆ ಪಾಡಿಗಾಗಿ ನಾನು ನುಗ್ಗಿದ್ದು ತಪ್ಪಲಿನಲ್ಲೇ ಇರುವ ರಾಮ್‌ದೇವ್ ಬಾಬಾ ಡಾಬಾಕ್ಕೆ. ಕುತೂಹಲ ತಾಳಲಾರದೆ “ಯಾರಿಗೆ ಸೇರಿದ್ದು ಇದು?” ಅಂತ ಕೇಳಿನೋಡಿದೆ. ಬಾಬಾ ರಾಮ್‌ದೇವ್‌ಗೂ ಈ ಢಾಬಾಕ್ಕೂ ಏನು ಸಂಬಂಧವಿಲ್ಲದ ವಿಷಯ ತಿಳಿಯಿತು. ಗುಬ್ಬಚ್ಚಿ ಗುಟುಕಿನ ಗಾತ್ರದ ಆಹಾರಕ್ಕೆ ಒಗ್ಗಿಕೊಂಡಿರುವ ಬೆಂಗಳೂರಿನ ಹೆಣ್ಣಿಗೆ ಆ ಢಾಬದ ಸ್ಪೆಷ್ಯಾಲಿಟಿ ಮೋಟಿ ರೋಟಿ ಎನ್ನುವ ಒಂದು ಬಗೆಯ ರೊಟ್ಟಿ ನಿಜಕ್ಕೂ ಸುಸ್ತು ಮಾಡಿಬಿಟ್ಟಿತು. ರುಚಿಯಂತೂ ನೆನೆದಾಗಲೆಲ್ಲಾ ಬಾಯಲ್ಲಿ ನೀರೂರಿಸುತ್ತೆ. ಒಂದು ವರ್ಷಕ್ಕೆ ಸಾಕಾಗಿ ಮಿಗುವಷ್ಟು ತುಪ್ಪವನ್ನು ಬಾಣಸಿಗನೇ ಬಂದು ಚಟಾಕುವಿನಲ್ಲಿ ಪ್ರೀತಿಯಿಂದ ಬಡಿಸಿದ್ದು ಮರೆಯಲು ಸಾಧ್ಯವೇನು?

ಬೆಟ್ಟದ ದಾರಿ. ಸಂಜೆಯಾಗುವ ಮೊದಲೇ ಮೇಲೇರಬೇಕು ಎನ್ನುವ ಧಾವಂತದಲ್ಲೇ ಹೊರಟೆ. ಇಕ್ಕೆಲಗಳಲ್ಲೂ ಅರಾವಳಿ ಪರ್ವತಶ್ರೇಣಿಯ ಸ್ನಿಗ್ಧ ಸೌಂದರ್ಯಾಸ್ವಾದನೆ. ಸ್ವಪ್ನಲೋಕದ ದಾರಿಯಲ್ಲಿ ಪಯಣಿಸಿ ಸೂರ್ಯಾಸ್ತದ ವೇಳೆಗೆ ತಲುಪಿದ್ದು ಸಮುದ್ರಮಟ್ಟದಿಂದ 1200 ಮೀಟರುಗಳಷ್ಟು ಮೇಲಿರುವ, ಬೇಸಿಗೆ ಅರಮನೆಗಳ ನಗರ ಮೌಂಟ್‌ಅಬುವನ್ನು. ಥಾರ್ ಮರುಭೂಮಿಯ ಈ ನಾಡಿಗೆ ಉಣ್ಣೆ ಬಟ್ಟೆಯನ್ನು ಹೊತ್ತಿ ಹೋಗುವ ಕಲ್ಪನೆಯೂ ನನಗಿರಲ್ಲಿಲ್ಲ. ಆದರೆ ಕಾಲಿಟ್ಟೊಡನೆ ಮೈನಡುಗಿಸಿತ್ತು ಅಲ್ಲಿನ ಹವೆ.

ಪ್ರವಾಸೀ ಆಕರ್ಷಣೆಗೆ ಬೇಕಾದ್ದೆಲ್ಲವೂ ಇದೆ ಈ ಗಿರಿಧಾಮದಲ್ಲಿ. 20-30 ಅಡಿಗಳಷ್ಟು ಆಳವಿದ್ದು ಅರ್ಧ ಕಿಲೋಮೀಟರುಗಳಷ್ಟು ಚಾಚಿಕೊಂಡಿರುವ ನಿರ್ಮಲವಾದ ಕೆರೆ. ಈಶ್ವರ ತನ್ನ ಕೈಬೆರಳಿನ ಉಗುರಿನಿಂದ ರಚಿಸಿದ್ದು ಇದು ಎನ್ನುವ ನಂಬಿಕೆಯಿಂದಲೇ ಇದಕ್ಕೆ “ನಕ್ಕಿ ಲೇಕ್’’ ಎನ್ನುವ ಹೆಸರು. ಅಲ್ಲಿ ದೋಣಿ ವಿಹಾರ ಗಾಳಿಸೇವನೆಗೆ ಅವಕಾಶವಿದೆ. ಅದರೆದುರುಗಿನ ರಸ್ತೆಯುದ್ದಕ್ಕೂ ಮಾರ್ಕೇಟ್. ಹೆಸರಿನಲ್ಲೇನಿದೆ ಎಂದು ಮೂಗು ಮುರಿಯುವವರಿಗೆ ಅದರಲ್ಲೇ ಎಲ್ಲವೂ ಇದೆ ಅಂತ ಹೇಳುವಂತಿದೆ ಇಲ್ಲಿನ ‘ಬಾಲಿವುಡ್-ಹಾಲಿವುಡ್’ ಎನ್ನುವ ರೆಸ್ಟುರಾಂಟ್. ಕನ್ನಡಿಯಂತೆ ಸ್ವಚ್ಛವಿರುವ ಈ ಜಾಗದ ಎಲ್ಲ ಬದಿಯ ಗೋಡೆಗಳಲ್ಲೂ ಬಾಲಿವುಡ್ ಹಾಲಿವುಡ್ ನಟ ನಟಿಯರ ಫಳಫಳ ಹೊಳೆಯುತ್ತಿರುವ ಚಿತ್ರಪಟಗಳು.

726 ಮೆಟ್ಟಿಲುಗಳ ಅಂತರದಲ್ಲಿ ಗೋಮುಖ ದೇವಸ್ಥಾನ. ಅಲ್ಲಿಗೆ ಮಾನಸ ಸರೋವರದ ನೀರು ಬರುತ್ತೆನ್ನುವುದು ಸ್ಥಳೀಯರು ನೀಡುವ ಮಾಹಿತಿ. ದತ್ತಾತ್ರೇಯ ಗುರುಗಳು ಒಂದೊಮ್ಮೆ ತಂಗಿ ವಿಶ್ರಾಂತಿ ಪಡೆದರು ಎನ್ನಲಾದ ‘ಗುರುಶಿಖರ’ವು ಇರುವುದು ಇಲ್ಲೆ. ಸಮುದ್ರ ಮಟ್ಟದಿಂದ 1722 ಮೀಟರುಗಳಷ್ಟು ಮೇಲಿರುವ ಈ ಶಿಖರವು ರಾಜಸ್ಥಾನದ ಅತ್ಯಂತ ಎತ್ತರದ ಸ್ಥಳ. ಐದು ಜೈನತೀರ್ಥಂಕರರ ಸಂಗಮವೆನ್ನಲಾದ ಜೈನ ಯಾತ್ರಾ ಸ್ಥಳವಾದ ದಿಲ್ವಾರ ಅಮೃತಶಿಲೆಯ ದೇವಸ್ಥಾನವೂ ಇಲ್ಲಿದೆ. 11 ರಿಂದ 13ನೇ ಶತಮಾನದಲ್ಲಿ ಸೋಲಂಕಿ ರಾಜರುಗಳಿಂದ ನಿರ್ಮಿಸಲಾಗಿದೆ ಎನ್ನಲಾದ ದಿಲ್ವಾರ ಗುಡಿಯನ್ನು ಕಟ್ಟಲು ಅಮೃತ ಶಿಲೆಯನ್ನು ಆನೆಗಳ ಮೇಲೆ ಮೌಂಟಬುವಿಗೆ ತರಲಾಯ್ತಂತೆ. ಸೌಂದರ್ಯ ಪ್ರಜ್ಞೆಗೆ ಅಪರಿಮಿತ ಸಾಕ್ಷಿಯಂತೆ ಕಾಣುವ ದಿಲ್ವಾರದಲ್ಲಿ ಫೋಟೋ ತೆಗೆಯಲು ಬಿಲ್ಕುಲ್ ಅಪ್ಪಣೆಯಿಲ್ಲ. ಜೀವನದ ಅಮೂಲ್ಯ ಘಳಿಗೆಗಳನ್ನು ಸೆರೆ ಹಿಡಿದು ಅಮರವನ್ನಾಗಿಸಬೇಕೆಂಬ ನನ್ನಂಥವರಿಗೆ ಇದು ಸ್ವಲ್ಪ ನಿರಾಸೆಯೇ ಸರಿ.

ಸ್ವಪ್ನಲೋಕದ ದಾರಿಯಲ್ಲಿ ಪಯಣಿಸಿ ಸೂರ್ಯಾಸ್ತದ ವೇಳೆಗೆ ತಲುಪಿದ್ದು ಸಮುದ್ರಮಟ್ಟದಿಂದ 1200 ಮೀಟರುಗಳಷ್ಟು ಮೇಲಿರುವ, ಬೇಸಿಗೆ ಅರಮನೆಗಳ ನಗರ ಮೌಂಟಬುವನ್ನು. ಥಾರ್ ಮರುಭೂಮಿಯ ಈ ನಾಡಿಗೆ ಉಣ್ಣೆ ಬಟ್ಟೆಯನ್ನು ಹೊತ್ತಿ ಹೋಗುವ ಕಲ್ಪನೆಯೂ ನನಗಿರಲ್ಲಿಲ್ಲ. ಆದರೆ ಕಾಲಿಟ್ಟೊಡನೆ ಮೈನಡುಗಿಸಿತ್ತು ಅಲ್ಲಿನ ಹವೆ.

ಇಷ್ಟೆಲ್ಲಾ ಕಣ್ಣಿಗೆ ರಾಚುವ ಆಕರ್ಷಣೆಗಳ ನಡುವೆಯೂ ನನ್ನನ್ನು ಕೈಬೀಸಿ ಕರೆದದ್ದು ‘ಪ್ರಜಾಪಿತ ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವವಿದ್ಯಾಲಯʼ. ಅದಕ್ಕೆ ಕಾರಣ ಶಾಲಾ ದಿನಗಳಲ್ಲಿಯೇ ಪಪ್ಪ ಬ್ರಹ್ಮಕುಮಾರೀಯವರ ಸಮ್ಮೇಳನವೊಂದಕ್ಕೆ ಮುಖ್ಯ ಅತಿಥಿಗಳಾಗಿ ಮೌಂಟಬುವಿಗೆ ಹೋಗಿದ್ದದ್ದು. ಆಗ ಶಾಲೆಯಲ್ಲಿ ಟೀಚರ್‌ಗಳು ಅದೇನೋ ದೊಡ್ಡ ಗೌರವ ಎನ್ನುವಂತೆ ನನಗೆ ‘ಭಾರೀ ಸ್ಕೋಪ್ ಕೊಟ್ಟಿದ್ದುʼ ನೆನಪಿನಲ್ಲಿ ಅಚ್ಚೊತ್ತಿದೆ. ಜೊತೆಗೆ, ಬ್ರಹ್ಮಕುಮಾರಿ ಸಂಸ್ಥೆಯವರು ಸದುದ್ದೇಶವೊಂದರ ಮುಖೇನ ಪ್ರಪಂಚೋದ್ಧಾರಕ್ಕೆ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದುಕೊಂಡಿದ್ದದ್ದು. ಮೈಸೂರಿನವರೇ ಆದ ಪಪ್ಪನ ಸ್ನೇಹಿತರೂ ಆದ ಶ್ರೀ.ಸತ್ಯನಾರಾಯಣ ಅವರು ಆರಂಭದ ದಿನಗಳಿಂದ ಇಲ್ಲಿ ಸ್ವಯಂಸೇವಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಮೊದಲೇ ಫೋನ್ ಮಾಡಿ ಹೇಳಿದ್ದೆ. ಭೇಟಿಯಾದ ತಕ್ಷಣ ಊಟದ ಮನೆಗೆ ಕರೆದುಕೊಂಡು ಹೋಗಿ ಸ್ವಸಹಾಯದ ಊಟ ಮಾಡಲು ಹೇಳಿದರು. ಸಾತ್ವಿಕ ಅಡುಗೆ ಉಂಡು ತಟ್ಟೆ ತೊಳೆದು ಹೊರ ಬಂದಾಗ ಅಲ್ಲಿನ ಇಂಚಿಂಛನ್ನು ಖುದ್ದು ವಿವರಣೆಯೊಂದಿಗೆ ತೋರಿಸಿದರು ಹಿರಿಯರು.


ಮಧುಬನ ಎನ್ನಲಾಗುವ 28 ಎಕರೆಗಳ ಜಾಗದಲ್ಲಿ ‘ಜ್ಞಾನ ಸರೋವರ’ವೆನ್ನುವ ಹೆಸರಿನ ಸಂಕೀರ್ಣದೊಳಗೆ 1991ರಲ್ಲಿ ಸ್ಥಾಪನೆಯಾಗಿದೆ ‘ಅಕ್ಯಾಡೆಮಿ ಫಾರ್ ಬೆಟರ್ ವರ್ಲ್ಡ್’ ಎನ್ನುವ ಸರ್ಕಾರೇತರ ಪ್ರವಚನ ಸಂಸ್ಥೆ. ಕರ್ಮ, ಆತ್ಮ, ಪರಮಾತ್ಮ, ಪರಬ್ರಹ್ಮ, ಪುನರ್ಜನ್ಮ ಎನ್ನುವ ತತ್ವಗಳ ಪ್ರಚಾರದ ಮೂಲಕ ವಿಶ್ವಶಾಂತಿ ಸ್ಥಾಪಿಸುವುದು ಈ ವಿಶ್ವವಿದ್ಯಾಲಯದ ಮುಖ್ಯೋದ್ದೇಶ. ಸಮಾಜಸೇವಾ ಮುಖಿಯಾದ ಈ ಸಂಸ್ಥೆಗೆ ವಿಶ್ವಸಂಸ್ಥೆಯ ಮಾನ್ಯತೆಯೂ ಇದೆ. ಇದು ಪ್ರವಾಸೀತಾಣವಲ್ಲ ಆದರೆ ಆಸಕ್ತರು ಎಂದೂ ಭೇಟಿ ನೀಡಲು ಒಪ್ಪಿಗೆಯಿದೆ.

ಕಟ್ಟಡದೊಳಗೆ ಕಾಲಿಡುತ್ತಿದ್ದಂತೆ ಶ್ವೇತವಸ್ತ್ರಧಾರಿ ಸ್ವಯಂಸೇವಕರು ಬ್ರಹ್ಮಕುಮಾರಿ ತತ್ವ, ಈಶ್ವರೀಯ ಕಲ್ಪನೆ ಎಲ್ಲದರ ಬಗ್ಗೆ ಚುಟುಕು ಪ್ರವಚನ ನೀಡುತ್ತಾ ಒಂದು ವಿಡಿಯೋ ತೋರಿಸುತ್ತಾರೆ. ಬ್ರಹ್ಮಕುಮಾರಿ ಈಶ್ವರೀಯ ತತ್ವಾರ್ಜನೆಗೆ ವಿದೇಶಗಳಿಂದಲೂ ಸಾವಿರಾರು ಆಸಕ್ತರು ಬಂದು ಇಲ್ಲಿ ದಾಖಲಾಗುತ್ತಾರೆ.

1600 ಸಭಿಕರು ಒಟ್ಟಿಗೆ ಕುಳಿತುಕೊಳ್ಳಬಹುದಾದ ಸುಂದರವಾದ, ಸುಸಜ್ಜಿತವಾದ, ಅತ್ಯಾಧುನಿಕವಾದ ಸಭಾಂಗಣವೊಂದಿದೆ ಇಲ್ಲಿ. ಪ್ರತೀ ಕುರ್ಚಿಯ ಆರಾಮ ಪಟ್ಟಿಯ ಮೇಲೊಂದು ಹೆಡ್ಫೋನ್ ಇರುತ್ತೆ ಮತ್ತು ಹದಿನಾರು ಭಾಷೆಗಳ ನಾಮಫಲಕ ಹೊತ್ತ ಗುಂಡಿಗಳು ಇವೆ. ವೇದಿಕೆಯ ಮೇಲಿನ ಪ್ರವಚನ ಅಥವಾ ಪ್ರಬಂಧ ಮಂಡನೆ ಯಾವುದೇ ಭಾಷೆಯಲ್ಲಿ ಇದ್ದರೂ ಏಕಕಾಲಕ್ಕೆ ಸಭಿಕರು ತಮಗಿಷ್ಟವಾದ ಭಾಷೆಯ ಗುಂಡಿಯನ್ನು ಒತ್ತಿ ಬೇಕಾದ ಭಾಷೆಯಲ್ಲಿಯೇ ಪ್ರವಚನವನ್ನು ಆಲಿಸಬಹುದು. ಸುತ್ತ ಮುತ್ತಲೂ ಇನ್ನೂ 13 ಸೆಮಿನಾರ್ ಸಭಾಂಗಣಗಳಿವೆ. ಪಕ್ಕದಲ್ಲೊಂದು ‘ಧ್ಯಾನ ಪಿರಮಿಡ್ʼ’. ಒಳಗೆ ಹೋದರೆ ಮಂದ ಬೆಳಕಿನಲ್ಲಿ, ಆತ್ಮಿಕ ಮೌನದಲ್ಲಿ ಓಂಕಾರದ ಪಠಣೆ ಕೇಳಿಬರುತ್ತಿರುತ್ತದೆ. ಎಷ್ಟು ಹೊತ್ತು ಬೇಕಾದರೂ ಆಸಕ್ತರು ಧ್ಯಾನ ನಿರತರಾಗಿರಬಹುದು.

ಅದಕ್ಕೆ ಒಂದಷ್ಟು ದೂರದಲ್ಲಿ 1200 ಜನರು ಒಟ್ಟಿಗೆ ಕುಳಿತು ಊಟ ಮಾಡಲು ಸಾಧ್ಯವಿರುವ ಸ್ವಚ್ಛಾತಿಸ್ವಚ್ಛ ಊಟದ ಕೋಣೆ. ಅಲ್ಲಿ ಎಲ್ಲವೂ ಸ್ವಯಂಸೇವೆ ಮತ್ತು ಎಲ್ಲರೂ ಸ್ವಯಂಸೇವಕರು. ಸಾತ್ವಿಕ ಆಹಾರ. ನಿಸ್ಪೃಹ ವಿಚಾರ. ಸಂಕೀರ್ಣದ ತುಂಬೆಲ್ಲಾ ಸಣ್ಣ ಸಣ್ಣ ಕೊಳಗಳು, ಅದರೊಳಗೆ ಮುಳುಗೇಳುವ ಹಂಸಗಳು, ಹೂವು, ಹಸಿರುಗಳು ಬೇರೆಯದೇ ಲೋಕವೊಂದನ್ನು ಕಟ್ಟಿಕೊಡುತ್ತವೆ. ಒಂದಷ್ಟು ಘಳಿಗೆ ಅಂತರಂಗದಲ್ಲಿ ಬ್ರಹ್ಮಕುಮಾರಿಯ ಈಶ್ವರೀಯ ತತ್ತ್ವವನ್ನು ಜಾಗೃತಗೊಳಿಸಿಕೊಳ್ಳಲು ಪ್ರಯತ್ನ ಪಟ್ಟಿದ್ದಷ್ಟೇ ನನ್ನದು. ಮರಳುಗಾಡಿನಲ್ಲಿ ಶೀತಲಮನಸ್ಸಿನ ಅಭೂತಪೂರ್ವ ಅನುಭವದೊಂದಿಗೆ ಹಿಂದಿರುಗಿದವಳಿಗೆ ಬ್ರಹ್ಮ, ಈಶ್ವರ, ತತ್ವ ಓಹ್, ಇನ್ನೂ ಎಷ್ಟು ದೂರ ಈ ಪಯಣ!