ಜಯದ್ವಾರದಿಂದ ಒಳಹೊಕ್ಕು ಲೋಹದ್ವಾರದಿಂದ ಹೊರಬರುವ ವ್ಯವಸ್ಥೆಯಿರುವ ಈ ಕೋಟೆ ಅನ್ನೋ ಮತ್ತೊಂದು ಜಗತ್ತನ್ನು ಅನುಭವಿಸೋದಕ್ಕೆ ಅದೆಷ್ಟು ಪುನರ್ಭೇಟಿಗಳು ಬೇಕೋ ಅಂದುಕೊಳ್ಳುತ್ತಾ, ಇತಿಹಾಸದೊಳಗಿನ ಯಾನದಾನಂದದಿಂದ ಹಗುರವಾಗಿದ್ದ ಮೈಮನಸು ಹೊತ್ತು ಕಲ್ಲು ಹಾಸಿನ ಗುಂಟ ಹೆಜ್ಜೆಯಿಡುತ್ತಾ ಹೊರ ಬರುತ್ತಿದ್ದೆ. ತಕ್ಷಣ ನನ್ನ ಬಲಗೈ ತುದಿಗಣ್ಣಿಗೆ ಕಂಡದ್ದು ಅಚ್ಚಕೆಂಪಿನ ಹದಿನೈದು ಜೊತೆ ಹಸ್ತಗಳ ಗುರುತು ಗೋಡೆಯ ಮೇಲೆ!
‘ಕಂಡಷ್ಟೂ ಪ್ರಪಂಚ’ ಪ್ರವಾಸ ಅಂಕಣದಲ್ಲಿ ಜೋಧ್‌ಪುರ ಪ್ರವಾಸದ ಕುರಿತು ಬರೆದಿದ್ದಾರೆ ಅಂಜಲಿ ರಾಮಣ್ಣ

“ಬದಲಾವಣೆ ಜಗದ ನಿಯಮ” ಹಾಗೇ ಹೀಗೆ ಅಂತ ಪ್ರವಚನ ನಡೀತಾ ಇತ್ತು. “ಹೌದಲ್ಲಾ, ಅಂದಿನಿಂದಿನವರೆಗೂ ಏನೆಲ್ಲಾ ಬಂತು, ಹೋಯ್ತು, ಬದಲಾಯ್ತು” ಅಂತ ಯೋಚಿಸುತ್ತಿದ್ದವಳಿಗೆ ಒಳಗಿನೊಳಗು ಚೀರಿ ಹೇಳ್ತು “ಇಲ್ಲಾ ಇಲ್ಲಾ ಒಂದಷ್ಟು ವರ್ಷಗಳಿಂದ ಬದಲಾಗದೆ ಉಳಿದಿರೋದು ಒಂದಿದೆ ಮತ್ತು ಅದೊಂದೇ ಉಳಿದಿದೆ” ನಿಜ, ನನಗೆ ನೆನಪಿದೆ ಆ ದಿನ ಆ ಕ್ಷಣ ಮನಸ್ಸು ಮಥಿಸಿ ಮಥಿಸಿ ಗಡಿಗೆ ತುಂಬಿದರೂ ತುಳುಕಲಾರದೆ ಪಲ್ಲಟಿಸುತ್ತಿದ್ದದ್ದು.

ಅಂದು ನಾನಿದ್ದ ಜಾಗ ನೆಲದಿಂದ 400 ಅಡಿ ಎತ್ತರದಲ್ಲಿರೋ ಕೋಟೆ. ಒಂದು ಕಾಲದಲ್ಲಿ ವೈಭವೋಪೇತ ಭವ್ಯತೆಯೇ ಮೈವೆತ್ತಂತೆ. ಹೆಗ್ಗಳಿಕೆ ಅಂದರೆ ಬಾಬರನಿಂದ ಬ್ರಿಟೀಷರವರೆಗೂ ಯಾರಿಂದಲೂ ದಾಳಿಗೊಳಗಾಗದ, ಅವರ್ಯಾರ ವಾಸ್ತವ್ಯಕ್ಕೂ ಎಡೆ ಮಾಡಿಕೊಡದ ಕೋಟೆ. 1458ರಲ್ಲಿ ಆ ಊರಿನ ರಾಜಾಧಿರಾಜರು ಕಟ್ಟಿಸಿದ ಕೋಟೆಯ ಮೇಲಿಂದ ಸೂರ್ಯಾಸ್ತ ನೋಡೋದೇ ಒಂದು ಸೊಬಗು. ರುಡ್ಯಾರ್ಡ್ ಕಿಪ್ಲಿಂಗ್ ನಿಂದ “…the work of angels and giants!” ಅನ್ನೋ ಉಪಮೆ ಹೊತ್ತ ಈ ಕೋಟೆಯ ಸೌಂದರ್ಯದ ಸಂರಕ್ಷಣೆಗೆ ಒಟ್ಟು ಎಂಟು ದ್ವಾರಗಳು. ಒಂದೊಂದು ಹೆಬ್ಬಾಗಿಲಿಗೂ ಅಪ್ರತಿಮ ಕುಸುರಿ. ಮಾತಿನ ಹಂದರಕ್ಕೆ ಸಿಲುಕದೆ ಕರಣಕ್ಕೆ ಅತೀತವಾಗಿಯೇ ನೋಟದಿಂದ ಮಾತ್ರ ಸೀದಾ ಮನಸ್ಸಿನ ಅಂಗಳದಲ್ಲಿ ಗಲ್ಲವರಳಿಸಿ ಕೆನೆಯುಬ್ಬಿಸುವ ಚೆಲುವಿನ ಕೋಟೆಯೊಳಗೆ ಈಗ ರಾಜ ಮನೆತನದವರ ಅಧೀನಕ್ಕೆ ಒಳಪಟ್ಟ ಮ್ಯೂಸಿಯಂ ಇದೆ.

ಗುಟ್ಟುಗಳಿಗೆ ಕಣ್ಣಾದ ಅಂತಃಪುರದವರ ಬಗೆಬಗೆಯ ಪರದೆಗಳು, ಮಹಾರಾಜರುಗಳ ರಾತ್ರಿ ದರ್ಬಾರುಗಳಿಗೆ ಸಜ್ಜಾದ ಕೋಣೆಗಳು, ಒಳಗಿನದ್ದರ ಸುಳಿವು ಕೊಡದ ಅಲಂಕಾರ ಪದಕಗಳು, ಇರದ ನಶೆಯನ್ನೂ ಏರಿಸುವ ಅತ್ತರಿನ ಘಮಲು, ಯುದ್ಧಕ್ಕೆ ಬಳಸುತ್ತಿದ್ದ ಪುರುಷ ಲಕ್ಷಣವೇ ಆದ ಕತ್ತಿ, ಗುರಾಣಿ, ಚಾಕು, ಛಬುಕುಗಳು, ದಿಕ್ಕಿದ್ದರೂ ದೆಸೆ ಹುಡುಕುವ ಸವಾರಿಗಳಿಗಾಗಿ ಬಳಸಿದ್ದ ಪಲ್ಲಕ್ಕಿಗಳು, ಕಥೆ ಹೇಳೋ ಕನ್ನಡಿಗಳು, ಮಾತನಾಡೊ ಕಿಟಕಿಗಳು, ಕೋಶಗಳಿಗೆ ಶ್ವಾಸತುಂಬಲು ಪೈಪೋಟಿ ನಡೆಸಿದ್ದ ಹುಕ್ಕಾಗಳು, ಗೆಲ್ಲಿದವರ ಮನೆಯಲ್ಲಿ ಉಸಿರು ಕಟ್ಟಿದ್ದ ಆನೆ ದಂತಗಳು, ಹುಲಿ ಮುಖಗಳು, ಅಟ್ಟಹಾಸಗಳಿಗೆ ಧ್ವನಿಯಾಗಿದ್ದ ದೇಶ-ವಿದೇಶೀ ಕಪ್ಪ ಕಾಣಿಕೆಗಳು, ಕಲ್ಲರಳಿ ಹೂವಾದ ಮುತ್ತು, ರತ್ನ, ಪಚ್ಚೆ ವಜ್ರ ವೈಢೂರ್ಯಗಳ ಪೆಟಾರಿಗಳು, ಸುರಾಪಾನದ ಹಂಡೆ ಪೀಪಾಯಿಗಳು, ಹಿರಣ್ಯ ಬೆಳ್ಳಿ ರೇಕುಗಳನ್ನು ಹೊತ್ತು ಹೊಟ್ಟೆ ತುಂಬಿಸುತ್ತಿದ್ದ ಪಾತ್ರೆ ಪಗಡೆಗಳು, ಇಟಲಿಯಿಂದ ತಂಜಾವೂರಿನವರೆಗೂ ಬಣ್ಣಗಳನ್ನು ಮೇಳೈಸಿಗೊಂಡು ಮತ್ತೇನೋ ಹೇಳ ಹೊರಟಿದ್ದ ನೂರೆಂಟು ಕಲಾಕೃತಿಗಳು.

ಉಳಿಯದಿದ್ದರೊ ಅಳಿಯಲಾರೆವು ನಾವು ಎಂದು ಸಾರಿ ಹೇಳುವಂತಿದ್ದ ವಂಶವೃಕ್ಷದ ಪಟ, ಕೆತ್ತನೆಯಲ್ಲಿ ಕತ್ತರಳಿಸಿ ಬಲಿಪಶುವಂತೆ ಫಳಫಳಿಸುತ್ತಿದ್ದ ಮರದ ಪೀಠೋಪಕರಣಗಳು, ಚರಿತ್ರೆ ಎಂದು ನಾಮಕರಣಗೊಂಡ ಹೊತ್ತಿಗೆಗಳು, ಪಾಕ ರುಚಿಗಳು, ಹಬ್ಬಗಳು, ಸಂಭ್ರಮಗಳು, ಪದಗಳು, ಕಲರವಗಳು, ಬಸಿರು ಬಾಣಂತನಗಳು, ಓಹ್, ನೋಡುವ ಹೃದಯಕ್ಕೆ ಏನುಂಟು ಏನಿಲ್ಲ ಅಲ್ಲಿ? ಅದಕ್ಕೇ ಇರಬೇಕು ಒಂದೊಮ್ಮೆ ಈ ಮ್ಯೂಸಿಯಂ‍ಗೆ ಏಷ್ಯಾದ ಅತ್ಯುತ್ತಮ ಸಂಗ್ರಹಾಲಯ ಎನ್ನುವ ಬಿರುದು ಬಾವಲಿ ಸಿಕ್ಕಿದ್ದದ್ದು. ಸುತ್ತೀ ಸುತ್ತಿಯೂ ಸುಸ್ತು ಅನ್ನೋ ಸಂಕಟಕ್ಕೆ ಒಳಗಾಗದ ನನ್ನ ಸಡಗರ ಮುಗಿಯ ತೀರದ್ದು. 1600ನೇ ಇಸವಿಯ ಮಹಾರಾಣಿಯ ರಚನೆ ಎನ್ನಲಾದ “ಹಾಥ್ಫೂ್ಲಿ”ಯೊಂದನ್ನು ಕೊಂಡುಕೊಂಡು ಹೆಮ್ಮೆಯಿಂದ ಬೀಗುತ್ತಿದ್ದೆ.

ಜಯದ್ವಾರದಿಂದ ಒಳಹೊಕ್ಕು ಲೋಹದ್ವಾರದಿಂದ ಹೊರಬರುವ ವ್ಯವಸ್ಥೆಯಿರುವ ಈ ಕೋಟೆ ಅನ್ನೋ ಮತ್ತೊಂದು ಜಗತ್ತನ್ನು ಅನುಭವಿಸೋದಕ್ಕೆ ಅದೆಷ್ಟು ಪುನರ್ಭೇಟಿಗಳು ಬೇಕೋ ಅಂದುಕೊಳ್ಳುತ್ತಾ, ಇತಿಹಾಸದೊಳಗಿನ ಯಾನದಾನಂದದಿಂದ ಹಗುರವಾಗಿದ್ದ ಮೈಮನಸು ಹೊತ್ತು ಕಲ್ಲು ಹಾಸಿನ ಗುಂಟ ಹೆಜ್ಜೆಯಿಡುತ್ತಾ ಹೊರ ಬರುತ್ತಿದ್ದೆ. ತಕ್ಷಣ ನನ್ನ ಬಲಗೈ ತುದಿಗಣ್ಣಿಗೆ ಕಂಡದ್ದು ಅಚ್ಚಕೆಂಪಿನ ಹದಿನೈದು ಜೊತೆ ಹಸ್ತಗಳ ಗುರುತು ಗೋಡೆಯ ಮೇಲೆ!

ಕುತೂಹಲ ಅನ್ನೋ ಸರಹದ್ದಿನಲ್ಲಿ ಕೋಲಾಹಲ. ದುಡ್ಡುಕೊಟ್ಟು ದೊಡ್ಡ ಥ್ಯಾಂಕ್ಸ್ ಹೇಳಿ ಕಳುಹಿಸಿಬಿಟ್ಟಿದ್ದ ಗೈಡ್‌ನನ್ನು ಕದನಕ್ಕೆ ಆಹ್ವಾನಿಸುವಂತೆಯೇ ಕೂಗಿ ಕರೆದೆ. “ಅಯ್ಯಾ, ಇದು ಏನು?” ನನ್ನ ಪ್ರಶ್ನೆ. “ದೀದಿ ಇದು ರಾಣಿಯರು ಸತಿ ಹೋಗೋ ಮೊದಲು ತಮ್ಮ ಹಸ್ತಗಳಿಂದ ಗೋಡೆಯ ಮೇಲೆ ಹೀಗೆ ಕಲೆ ಮಾಡಿ ಹೋಗುತ್ತಿದ್ದರು. ಮುಂದಿನ ರಾಣಿಯರಿಗೆ ಮಾದರಿಯಾಗಿ ಇದನ್ನು ಉಳಿಸಿಕೊಂಡು ನಿತ್ಯವೂ ಇದಕ್ಕೆ ಪೂಜೆ ಮಾಡಲಾಗುತ್ತಿತ್ತು.” ಇಷ್ಟೇ ಅವನುತ್ತರವಾಗಿತ್ತು. ನನ್ನ ತಲೆ ಸುತ್ತುತ್ತಿತ್ತಾ? ಮನಸ್ಸು ಗಿರಕಿಹೊಡೆಯುತ್ತಿತ್ತಾ? ಗೊತ್ತಿಲ್ಲ. ಸಂಪೂರ್ಣ ಸೋತ ಭಾವ. ರಾಣಿಯರು ರಚನೆ ಮಾಡಿದ್ದು ಅನ್ನೋ “brand” ಗತ್ತಿನಲ್ಲಿ ಕೊಂಡಿದ್ದ ಆಭರಣಗಳೆಲ್ಲಾ ನನ್ನ ಕೈಯಿಂದ ಕಳಚಿಬಿದ್ದವು. ಮೌನ ಮೊದಲ ಬಾರಿಗೆ ನೋವಿನ ಪ್ರತೀಕವಾಗಿತ್ತು ನನ್ನೊಳಗೆ. ಆ ಘಳಿಗೆ ಎಲ್ಲವೂ ಸ್ತಬ್ಧ.

ಸತಿಯಾದವಳ ಜೊತೆ ಸತಿಯಾಗಲೊಪ್ಪದೆ ಕನವರಿಸುತ್ತಾ, ಕಳವಳಿಸುತ್ತಾ, ಸತಿಗಾಗಿ ಮಮ್ಮಲ ಮರುಗುತ್ತಾ, ಆ ಹೆಬ್ಬಾಗಿಲ ಕಬ್ಬಿಣದ ಸಲಾಕೆಗಳ ಶಾಖಕ್ಕೆ ಇಂಚಿಂಚೇ ಕರಗುತ್ತಿದ್ದೆ ನಾ ಸತಿಯಾಗಿ. ಹೌದು, ಅಂದಿನಿಂದ ಈ ಘಳಿಗೆಯವರೆಗೂ ಅದೇ ಭಾವದಲ್ಲಿ ಸ್ಥಿರವಾಗಿಬಿಟ್ಟಿದ್ದೇನೆ. ಬದಲು ಮಾಡಲು ಬಾರದ ಎಂದಿನದೋ ಸೋಲಿಗೆ ಅಂದು ನಾ ಹೀಗೆ ಸಂಪೂರ್ಣ ಶರಣಾಗಿದ್ದು ರಜಪೂತ ರಾಜ ಜೋಧಾನಿಂದ ನಿರ್ಮಾಣವಾದ ರಾಜಸ್ತಾನದ ಜೋಧ್‌ಪುರದಲ್ಲಿರುವ ಮೆಹರಾಂಗರ್ ಕೋಟೆಯಲ್ಲಿ.